ಕುಮಾರ ವ್ಯಾಸನ ರೂಪಕ ಅಲಂಕಾರದಂತೆ ಆಗುಂಬೆ ಸುಂದರ, ಮನೋಹರ. ಅಂತಹ ಒಂದು ಅನನ್ಯ ಅನುಭವ ಪಡೆದುದು ನಾವು ಅಲ್ಲಿನ ಜಲಪಾತಗಳ ದರ್ಶನ ಪಡೆಯಲು ಹೊರಟಾಗ. ಹೆಬ್ರಿಯಿಂದ ಕೆಲವೇ ಕಿಲೋ ಮೀಟರ್ ದೂರವಿದೆ. ಇಲ್ಲಿನ ಜಲಪಾತಗಳನ್ನು ವೀಕ್ಷಿಸಲು ಪೋಲಿಸ್ ಠಾಣೆಯ ಅನುಮತಿ ಪಡೆಯುವುದು ಕಡ್ಡಾಯ! ಇವೆಲ್ಲವೂ ಕಾಡಿನೊಳಗಿನವು. ಕೆಲವು ರಕ್ಷಿತಾರಣ್ಯದಲ್ಲಿವೆ. ಚುಮು ಚುಮು ಮುಂಜಾವಲಿ ಇಲ್ಲಿಗೆ ಬಂದಿಳಿದೆ. ಆಗುಂಬೆಯನ್ನೊಮ್ಮೆ ಒಬ್ಬನೇ ಅಡ್ಡಾಡುವುದು ನನ್ನ ಉದ್ದೇಶ.
ಶ್ರೀಧರ್ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಆಗುಂಬೆಯ ಕುರಿತ ಬರಹ
ಆಗುಂಬೆ ಎಂಬ ಲಾಂಚ್ ಪ್ಯಾಡ್
ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ, ಶೃಂಗೇರಿ ಹೀಗೆ ಹತ್ತು ಹಲವು ಸ್ಥಳಗಳಿಗೆ ಹೋಗಲು ನಮಗೆ ಆಗುಂಬೆಯೇ ಲಾಂಚ್ ಪ್ಯಾಡ್. ಹಾಗಾಗಿ ಆಗುಂಬೆಯೊಂದಿಗೆ ಬಂಧ ಬೆಸೆದುಕೊಂಡು ಬಂದಿದೆ. ಹಾಗಾಗಿ ಆಗುಂಬೆಗೆ ಎಷ್ಟು ಸಲ ಹೋಗಿದ್ದೇವೆಂದು ಕೇಳಿದರೆ ಲೆಕ್ಕ ತಪ್ಪುತ್ತದೆ.
ಆಗುಂಬೆ ಎಂಬ ಆತ್ಮ ಸಖ
ಸೂರ್ಯನಿಗಿಲ್ಲಿ ಯಾವತ್ತೂ ರಜೆ. ಹತ್ತಿ ಮರದ ಅಜ್ಜನ ಗಡ್ಡ ಹಾರಿದಂತೆ ಮುಖಕೆ ಮಂಜಿನ ಸಿಂಚನ. ಮೌನವೇ ಹಾಸು ಹೊದ್ದ ರಸ್ತೆಗಳು. ಮಳೆಗಾಲದ ಅನುದಿನವೂ ಹೂಪಕಳೆಗಳುದುರಿದಂತೆ ಮಳೆ ಸಿಂಚನ. ಗಿರಿ ಶಿಖರವನ್ನೆಲ್ಲಾ ತೊಯಿಸಿ ಇಲ್ಲಿ ಹುಟ್ಟುವ ಜೀವ ನದಿಗಳು ಅನೇಕ.
ಆಗುಂಬೆ ಎಂಬುದೊಂದು ಭಾವ. ಸದಾ ನಮ್ಮನ್ನು ಆವರಿಸಿದ ಚರ್ಮದಂತೆ. ನಮ್ಮೊಳಗೆ ಹುಟ್ಟಿ ಬೆಳೆವ ಪುಟಾಣಿ ಹಳ್ಳಿ. ಸದಾ ಮಂಜಿನ ತುಂಬಿ ಆತ್ಮಕ್ಕೊಂದು ಶಾಂತಿ ನೀಡುವ ನಿಲ್ದಾಣ. ನಾ ಯಾವತ್ತೂ ಆಗುಂಬೆಯಲ್ಲಿ ಅನುಭವಿಸುವ ಶಾಂತಿ ಮತ್ತೆಲ್ಲೂ ಸಿಕ್ಕಿಲ್ಲ. ಮನಸ್ಸು ಸದಾ ಆಗುಂಬೆಯತ್ತ ತುಡಿಯುತ್ತಾ ಇರುತ್ತೆ. ಇಲ್ಲಿರುವ ಪರಿಸರದಲ್ಲಿರುವ ಪಾಸಿಟಿವ್ ಶಕ್ತಿಯೇ ಅಂತಹುದು. ಇಲ್ಲಿಗೆ ಹೋಗಿ ಬಂದರೆ ಮುಂದಿನ ಆರೇಳು ತಿಂಗಳು ನಿಮ್ಮ ಎನರ್ಜಿ ಅದ್ಭುತವಾಗಿರುತ್ತದೆ. ನಮ್ಮೂರಿನ ಕೆಮಿಸ್ಟ್ ಒಬ್ಬರು ಪ್ರತೀ ವಾರ ಆಗುಂಬೆಗೆ ಹೋಗಿ ಬರುತ್ತಾರೆ. ನನಗೆ ಕೇಳಿಯೇ ಅಚ್ಚರಿಯಾಯಿತು. ನಿಮಗೂ ಇಂತಹ ಅನುಭೂತಿ ಪಡೆವ ಆಸೆಯೇ? ಇನ್ನೇಕೆ ತಡ ಸದಾ ಕಾಡುವ ಆಗುಂಬೆಗೊಮ್ಮೆ ಈ ಮಳೆಗಾಲದಲ್ಲಾದರೂ ಹೋಗಿ ಬನ್ನಿ.
ಟ್ರೋಜನ್‌ನ ಬೆನ್ನು ಬಿದ್ದು
ಜಗತ್ತಿನ 38 ಜೀವವೈವಿದ್ಯತಾ ತಾಣಗಳಲ್ಲಿ ಆಗುಂಬೆಯೂ ಒಂದು. world heritage ಮಾನ್ಯತೆಯೂ ಇದಕ್ಕಿದೆ. ಇಲ್ಲಿನ ಹಕ್ಕಿಗಳಿಗಾಗಿ ವಿದೇಶಿಯರೂ ಇಲ್ಲಿಗೆ ಭೇಟಿ ಕೊಡುತ್ತಾರೆ. ಟ್ರೋಗನ್ ಇಲ್ಲಿನ ಒಂದು ವಿಶೇಷ ಹಕ್ಕಿ. ಕೆಂಬಣ್ಣ ತುಂಬಿದ ಡಬ್ಬಿಗೆ ಬಿದ್ದು ಬಂದಂತಹ ಬಣ್ಣ. ಗಂಡು ಹಕ್ಕಿಯಂತೂ ಗಾಡ ಕೆಂಪು. ಈ ಹಕ್ಕಿಯ ಸಂಗಕ್ಕೆ ಬಿದ್ದು ಊರೂ ಅಲೆದಿದ್ದೆ. ಕೆಲವಂತೂ ಹಗಲೂ ರಾತ್ರಿ ಸತಾಯಿಸಿದ್ದಿದೆ. ಕೈಯಲ್ಲಿ ಕ್ಯಾಮಾರವಿಲ್ಲದೇ ಇದ್ದಾಗಲ್ಲೊಮ್ಮೆ ೧೦ ಅಡಿ ಅಂತರದಲ್ಲಿ ದರ್ಶನಕೊಟ್ಟು ನನ್ನ ಹೊಟ್ಟೆ ಉರಿಸಿದ್ದಿದೆ. ಹೀಗೆ ಟ್ರೋಜನ್ ಸಂಗಕ್ಕೆ ಬಿದ್ದವರೆಲ್ಲಾ ಅದರ ಅಪರಿಮಿತ ಅಂದಕ್ಕೆ ಮಾರು ಹೋಗದೇ ಇರರು. ಇವುಗಳ ಜೊತೆಗೆ ಲಂಗೂರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮೊದಲೆಲ್ಲಾ ರಸ್ತೆ ಬದಿ ಬರದೇ ನಾಚಿಕೆ ಸ್ವಭಾವದ LTM (Lion tailed Macaque) ಗಳು ಈಗ ಪ್ರವಾಸಿಗರ ತಿಂಡಿಗಳಿಗೆ ಕೈಚಾಚುತ್ತಿರುವುದು ಇವುಗಳ ಸಹಜ ಪರಿಸರದಲ್ಲಿ ಆಹಾರ ಲಭ್ಯತೆಯು ಕಡಿಮೆಯಾಗಿರುವುದರ ದ್ಯೋತಕವಾಗಿದೆ. ನಾನು ಹೋದಾಗ ಇವುಗಳು ಪ್ರವಾಸಿಗರಲ್ಲಿ ಭಿಕ್ಷೆ ಬೇಡುತಲಿತ್ತು. ಮಹೋರಗದಲ್ಲೊಂದಾದ ಕಾಳಿಂಗ ಸರ್ಪ ಸರ್ವೆ ಸಾಮಾನ್ಯ.

ಕುಮಾರ ವ್ಯಾಸನ ರೂಪಕ ಅಲಂಕಾರದಂತೆ ಆಗುಂಬೆ ಸುಂದರ, ಮನೋಹರ. ಅಂತಹ ಒಂದು ಅನನ್ಯ ಅನುಭವ ಪಡೆದುದು ನಾವು ಅಲ್ಲಿನ ಜಲಪಾತಗಳ ದರ್ಶನ ಪಡೆಯಲು ಹೊರಟಾಗ. ಹೆಬ್ರಿಯಿಂದ ಕೆಲವೇ ಕಿಲೋ ಮೀಟರ್ ದೂರವಿದೆ. ಇಲ್ಲಿನ ಜಲಪಾತಗಳನ್ನು ವೀಕ್ಷಿಸಲು ಪೋಲಿಸ್ ಠಾಣೆಯ ಅನುಮತಿ ಪಡೆಯುವುದು ಕಡ್ಡಾಯ! ಇವೆಲ್ಲವೂ ಕಾಡಿನೊಳಗಿನವು. ಕೆಲವು ರಕ್ಷಿತಾರಣ್ಯದಲ್ಲಿವೆ. ಚುಮು ಚುಮು ಮುಂಜಾವಲಿ ಇಲ್ಲಿಗೆ ಬಂದಿಳಿದೆ. ಆಗುಂಬೆಯನ್ನೊಮ್ಮೆ ಒಬ್ಬನೇ ಅಡ್ಡಾಡುವುದು ನನ್ನ ಉದ್ದೇಶ.
ಕ್ಯಾಮರವೊಂದೇ ನನ್ನ ಸಂಗಾತಿ. ಸಿಕ್ಕ ಸಿಕ್ಕಿದ ಹುಳ ಹುಪ್ಪಟೆಗಳೆಲ್ಲಾ ಕ್ಯಾಮರದಲ್ಲಿ ಬಂಧಿ. ಬೆಳಗಿನ ಚಹ ಮುಗಿಸಿ ಜೋಗಿ ಗುಂಡಿ ನೋಡಲು ತಯಾರಾದೆ. ಸ್ವಲ್ಪ ದೂರವನ್ನು ರಿಕ್ಷಾದಲ್ಲಿ ಪಯಣಿಸಿದೆ. ನಂತರದು ಕಾಲ್ನಡಿಗೆ ಹಾದಿ. ಹಾದಿ ಉದ್ದಕ್ಕೂ ಹತ್ತಿಯಂತೆ ಹಾಸಿತ್ತು ಮಂಜು! ಆಕಾಶಕೆಟುಕಿದ ಮರಗಳು. ಎರಡಡಿ ದೂರವೂ ತೋರದು! ಜೀರುಂಡೆಯ ಜೇಂಕಾರ ಆಸ್ವಾದಿಸುತ್ತಾ ಸಾಗಿತ್ತು ಪಯಣ. ಕೀಟ ಹಕ್ಕಿಗಳಿಗಾಗಿ ಹುಡುಕಾಟ ನಡೆಸಿತ್ತು ಕ್ಯಾಮರ. ಮಂಜಿನ ಪರದೆ ಸರಿಸಿದಾಗ ಕಂಡದ್ದು ಅಮೋಘ, ನಯನಾಸ್ವಾದಕ ದೃಶ್ಯ. ಅಪ್ಸರೆಯರ ಬಚ್ಚಲು ಮನೆಯಂತಿತ್ತು. ಸುತ್ತ ವನಸಿರಿ. ನಡುವೆ 20 ಅಡಿಯಿಂದ ಧುಮುಕುವ ಜಲಧಾರೆ. ಜಲಪಾತ ಕೊರೆದಾದ ಗುಂಡಿ. ಗುಂಡಿ ಸುತ್ತಿ ನೊರೆ ನೊರೆಯಾಗಿ ಹರಿವ ಪನ್ನೀರು. ಆಗಾಗ ಕೇಳಿ ಬರುವ ಮಲಬಾರ ವಿಸ್ಲಿಂಗ್ ಥ್ರಷ್ ಹಕ್ಕಿಯ ಸುಮಧುರ ನಾದ. ಒಟ್ಟಾರೆ ಸ್ವರ್ಗವೇ ಧರೆಗಿಳಿದ ಅನುಭವ. ಅಪರೂಪದ ಕೆಲವು ಸೋಣೆ ಮತ್ತಿತರ ಕಾಡು ಹೂಗಳು. ಕೊನೆಗೂ ಮಲಬಾರ ವಿಸ್ಲಿಂಗ್ ಥ್ರಷ್‌ವೊಂದು ದರುಶನವಿತ್ತು ಕಣ್ಮರೆಯಾಯಿತು. ಕಲ್ಲು ಸಂದಿಯಲ್ಲಿ ಗೂಡು ಕಟ್ಟುತ್ತಿರಬೇಕು. ನೀರಾಟ ಆಡಿ ಹಿಂತಿರುಗುವ ಮನಸ್ಸಿಲ್ಲದ ಮನಸ್ಸಿನಿಂದ ಹೊರಟೆ. ಆಗುಂಬೆ ಎಂದರೆ ಜ್ಞಾಪಕ ಚಿತ್ರ ಶಾಲೆಯ ನೂರಾರು ಹೆಸರುಗಳು.
ದೊಡ್ಡ ಮನೆಯ ದೊಡ್ಡಕ್ಕ
ಆಗುಂಬೆಯ ಅಸ್ಮಿತೆಗಳಲ್ಲಿ ದೊಡ್ಡಮನೆಯ ಕಸ್ತೂರಕ್ಕ ಸಹ ಒಬ್ಬರು. ಆಗುಂಬೆಯ ಆ ದೊಡ್ಡ ಮನೆಗೆ ಬಂದರೆ ಅವರೆಲ್ಲರನ್ನೂ ಚೆನ್ನಾಗಿ ಉಪಚರಿಸಿ ಕಳುಹಿಸುತ್ತಿದ್ದುದು ಅವರೇ. ಅವರನ್ನು ನಾವೆಲ್ಲಾ ದೊಡ್ಡ ಮನೆ ದೊಡ್ಡಕ್ಕ ಎನ್ನುತ್ತಿದ್ದೆವು. ಅದೆಷ್ಟೇ ಜನ ಬಂದರೂ ಅಡುಗೆ ಮಾಡಿ ಬಡಿಸುತ್ತಿದ್ದರು. ಮಾಲ್ಗುಡಿ ಡೇಸ್‌ನ ಚಿತ್ರೀಕರಣ ನಡೆದಿದ್ದು ಇಲ್ಲೇ. ತಿಂಗಳುಗಳ ಕಾಲ ಅವರಿಗೆಲ್ಲಾ ಊಟ ತಿಂಡಿ ಮಾಡಿ ಹಾಕಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟು ತಮ್ಮ ಮನೆಯನ್ನೇ ಬಿಟ್ಟು ಕೊಟ್ಟರು. ‘ಮಾಲ್ಗುಡಿʼ ಪ್ರಖ್ಯಾತವಾಯಿತು ಜೊತೆಗೆ ಇವರ ಮನೆಯೂ. ಕೆಲವರು ಈಗಲೂ ಇದಕ್ಕೆ ಮಾಲ್ಗುಡಿ ಮನೆ ಎಂದೂ ಕರೆಯುತ್ತಾರೆ ಎಂದು ದೊಡ್ಡಕ್ಕ ನೆನಪಿಸಿಕೊಳ್ಳುತ್ತಾರೆ.
ಆಗುಂಬೆಗೊಂದು ಅಡಿ ಬರೆಹ
ಆಗುಂಬೆ ಎಂದರೆ ನೂರಾರು ಹೆಸರುಗಳ ನೆನಪಿನ ಚಿತ್ರ ಶಾಲೆ. ಕೆಲವು ಸ್ಮೃತಿಯಲ್ಲಿ ಉಳಿಯುತ್ತದೆ. ಹೇರ್ ಪಿನ್ ತಿರುವು ದಾಟಿ ಗಡಿಗೆ ಅಡಿ ಇಡುತ್ತಿದ್ದಂತೆ ಬಲ ಗಡೆಗೆ ಸದಾ ನಗು ಮುಖ ಹೊತ್ತು ತನ್ನದೇ ಗೂಡಂಗಡಿಯಲಿ ಚಟ್ಟಂಬಡೆ ಕಾಯಿಸುವ ಪ್ರೇಮಾನಂದ ಪಡಿಯಾರ್ ಸಹ ಒಬ್ಬರು! ನಮ್ಮ ನಡುವೆ ಪಡಿಯಾರ್ ಮಾಮ್ ಎಂದೇ ಪ್ರಸಿದ್ಧಿ.
ಪ್ರೇಮಾನಂದ ಪಡಿಯಾರ್ ಯಾನೆ ಪಡಿಯಾರ್ ಮಾಮ ಮತ್ತು ಅವರು ಮಾಡುತ್ತಿದ್ದ ರುಚಿ ರುಚಿ ಅಂಬೋಡೆ.
ಸದಾ ನಗುತ್ತಾ ನಗಿಸುತ್ತಾ, ಕಡಿಮೆ ದರದಲ್ಲಿ ಚಹ, ಚಟ್ಟಂಬಡೆ, ಇಡ್ಲಿಯನ್ನು ತನ್ನ ಸಣ್ಣ ಕ್ಯಾಂಟಿನ್‌ನಲ್ಲಿ ಮಾರುತಲಿದ್ದರು! ಇವರ ಚಟ್ಟಂಬಡೆಯ ರುಚಿ ಬಲ್ಲವರು ಚಟ್ಟಂಬಡೆಯ ಲಕ್ಷ್ಮಣ ರೇಖೆಯನ್ನು ದಾಟುತ್ತಿರಲಿಲ್ಲ. ಜೊತೆಗೊಂದು ಬಿಸಿ ಬಿಸಿ ಮಂಜಿನ ಚಹಾ. ಆಗುಂಬೆ ಎಂದರೆ ಪಡಿಯಾರ್ ಮಾಮ್‌ನ ಚಟ್ಟಂಬಡೆ ಎನ್ನುವಷ್ಟು. ಆಗುಂಬೆಯ ಜಿಯೋ ಟ್ಯಾಗ್!
ಸನಿಹದ ಕಾರ್ಕಳದವರಾದರೂ ೯೦ರ ದಶಕದಲ್ಲಿಯೇ ಇಲ್ಲಿಗೆ ಬಂದವರು. ಸೇವೆ ಎಂಬ ಹೆಸರಿನಲ್ಲಿಯೇ ಚಟ್ಟಂಬಡೆ ಮಾರುತ್ತ ತನ್ನ ಜೀವಮಾನವನ್ನು ಸವೆಸಿದವರು. ಇವರ ಮಕ್ಕಳೆಲ್ಲಾ ಈಗ ಇಂಜಿನಿಯರುಗಳಾಗಿದ್ದರೂ ಸದಾ ಜನರ ನಡುವೆಯೇ ಬದುಕಬೇಕೆಂಬ ಇವರ ಅದಮ್ಯ ಉತ್ಸಾಹವೇ ನನಗೆ ಸ್ಪೂರ್ತಿ. ಆಧ್ಯಾತ್ಮ, ದೇಶಭಕ್ತಿಯ ಅನೇಕ ಪುಸ್ತಕಗಳನ್ನು ಸಹ ತನ್ನ ಪುಟಾಣಿ ಕ್ಯಾಂಟಿನ್ ಒಳಗೆ ಇಟ್ಟುಕೊಂಡು ಸ್ಪೂರ್ತಿ ಪಡೆಯುತ್ತಾ ಬದುಕುತ್ತಿದ್ದರು. ನೂರಾರು ಓಡಾಟದ ನಂತರ ಇವರೊಂದಿಗಾದ ನನ್ನ ಅವಿನಾಭಾವ ಸಂಬಂಧ ಆಗುಂಬೆ ಹಾಗೂ ಇವರನ್ನು ಬೇರ್ಪಡಿಸಲಾಗದಷ್ಟು! ತಾನೂ ನಗುತ್ತಾ ತನ್ನೊಂದಿಗೆ ಇತರರನ್ನೂ ನಗಿಸುತ್ತಾ ಬದುಕುವ ಇತಂಹ ಒಬ್ಬ ಅಧ್ಯಾತ್ಮ ಜೀವಿ ಇಹದ ಬದುಕಲ್ಲಿ ನಾ ಕಂಡಿಲ್ಲ. ಇವರ ಆಶಯ ಮತ್ತು ಜೀವನ ನಮಗೆಲ್ಲಾ ಸ್ಪೂರ್ತಿ. ಕೊನೆಗಾಲದಲ್ಲಿ ಇವರ ಜೊತೆಗೆ ಮಾತನಾಡಲು ಸಾಧ್ಯವಾಗಿಲ್ಲ ಎಂಬುದೊಂದು ಸಣ್ಣ ಕೊರಗು ಸದಾ ನನ್ನ ಕಾಡುತ್ತಲೇ ಇದೆ. ಸೆಲ್ಫಿ ಇಲ್ಲದ ಕಾಲದಲ್ಲಿ ಇವರ ಜೊತೆಗೊಂದು ಫೋಟೊ ಸಾಧ್ಯವಾಗಿಲ್ಲವೆಂಬ ಬೇಸರ ಸದಾ ಕಾಡುತ್ತಿರುತ್ತದೆ.
ಮತ್ತೆಂದೂ ಸಿಗದ ಮಸಾಲೆ ಅಂಬೊಡೆ
ಇಂದು ಬರುವೆನೆಂದು ಅಂದು ಹೊರಟ ಪ್ರೇಮಾನಂದ ಮತ್ತೆ ಆಗುಂಬೆಗೆ ಬರಲೇ ಇಲ್ಲ. ೨೦೧೫ರ ಜುಲೈ ತಿಂಗಳಿನಲ್ಲಿ ಡೆಂಗ್ಯೂವಿನಿಂದ ಮೃತರಾದರು. ಈಗೀಗ ಜಾಗತೀಕರಣ, ವ್ಯಾಪಾರೀಕರಣದ ಭರಾಟೆಯಲ್ಲಿ ಭಾವನೆಗಳು ಬೆಲೆಯೇ ಇಲ್ಲದ ಹಳೆಯ ಚಟ್ಟಂಬಡೆಯಂತಾಗಿದೆ. ನೀವೇನಂತೀರಿ?

ನನ್ನಂತಹವರಿಗೆ ಸದಾ ಕಾಡುವ ಊರು. ಇಲ್ಲಿನ ಟ್ರೋಜನ್ ಹಕ್ಕಿ, ವಿಷಲಿಂಗ್ ಥ್ರಶ್ ನಮ್ಮನ್ನು ಇಲ್ಲಿಗೆಳೆಯುತ್ತವೆ. ಇಲ್ಲಿ ಸರಳವಾಗಿ ಬದುಕುವ ನೂರಾರು ಮಹನೀಯರು ಹೆಜ್ಜೆ ಮೂಡದಂತೆ ಅನಂತದಲಿ ಲೀನವಾಗುವ ಪರಿಗೆ ಬೆರಗಾಗಿದ್ದೇನೆ. ಎಂದು ಬರುವಿರೆಂದು ಮತ್ತೆ ಮತ್ತೆ ಕರೆಯುತ್ತಲೇ ಇದೆ ಅಲೆಮಾರಿಯ ಆಗುಂಬೆ.
(ಫೋಟೋಗಳು: ಲೇಖಕರವು)

ಶ್ರೀಧರ್ ಎಸ್. ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ. “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.


