Advertisement
ಹೀನ ಸುಳಿ ಹೋರಿಕರ ಮತ್ತು ಸಾಟಿಬುಗುರಿಯವರು: ಎಸ್. ಗಂಗಾಧರಯ್ಯ ಅನುಭವ ಕಥನ

ಹೀನ ಸುಳಿ ಹೋರಿಕರ ಮತ್ತು ಸಾಟಿಬುಗುರಿಯವರು: ಎಸ್. ಗಂಗಾಧರಯ್ಯ ಅನುಭವ ಕಥನ

ಅವತ್ತು ಹೊಲದಲ್ಲಿ ಆ ಪುಣ್ಯಾತ್ಮ ಕರುವಿನ ಮೈಲ್ಲಿ ಹೀನಸುಳಿಯನ್ನು ಪತ್ತೆ ಹಚ್ಚಿದ ಲಾಗಾಯ್ತಿನಿಂದ ಅದನ್ನು ಮಾರಾಟ ಮಾಡುವುದು ಕಷ್ಟವಂತೂ ಆಯ್ತು. ನೋಡಲು ಬಂದವರು `ಹೇಳಂಗಿದ್ರೆ ಈ ಕರ ಐತಲ್ಲ ಇದ್ರ ಯಾಪಾರ ಹೇಳಿ’ ಅಂತ ಇನ್ನೊಂದು ಕರುವನ್ನು ತೋರಿಸುತ್ತಿದ್ದರು. ಯಾರೋ ಅಪರೂಪಕ್ಕೊಬ್ಬ `ಹಣೇಲಿ ಬರ್ದದ್ದು ಆಗ್ಲಿ ತಗಂತೀನಿ. ನೋಡಿ ಸರ್ಯಾಗಿ ಗಿಟ್ಟಂಗೆ ಹೇಳು ಮತ್ತೆ ಯಾಪಾರಾನಾ’ಅಂತ ಆರಕ್ಕೆ ಮೂರರಂಗೆ ಬೇಕಾಬಿಟ್ಟಿ ಕೇಳುತ್ತಾ ರೋಸುತ್ತಿದ್ದರು. ಹಿಂಗೆ ಹೋರಿಗೆ ಹೀನಸುಳಿಯ ಇದೆ ಅಂತ ತಿಳಿಯುತ್ತಲೇ ಯಂಗಾರಾ ಮಾಡಿ ಸಸ್ತಕ್ಕೆ ಅಮಿಕ್ಕಂಡು ಬಿಡಬಹುದು ಅಂತ ಸುಮಾರು ಜನ ಸಾಟಿ ಬುಗುರಿಯವರು ಬಂದು ಬಂದು ನೋಡಿಕೊಂಡು ಹೋಗುತ್ತಿದ್ದರು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಒಂಭತ್ತನೆಯ ಕಂತು

ನಮ್ಮ ಮನೇಲಿ ಬಹುತೇಕ ಒಂದು ಜೊತೆ ಎತ್ತುಗಳು ಮತ್ತು ಒಂದು ಜೊತೆ ಹೋರಿ ಕರುಗಳು ಇರುತ್ತಿದ್ದವು. ಎತ್ತುಗಳಿಗೆ ಉಳುಮೆ, ಗಾಡಿಯ ಕೆಲಸ ಮತ್ತಿತರ ರೈತಾಪಿ ಬದುಕಿನ ಕೆಲಸಗಳು ಇವುಗಳ ಹೆಗಲ ಮೇಲಿರುತ್ತಿದ್ದವು. ಮಳೆಗಾಲದಲ್ಲಿ ತೋಟ ಹೊಲಗಳ ಉಳುಮೆ, ಬಿತ್ತನೆ ಹೊತ್ತಲ್ಲಿ ಕೂರಿಗೆ ಹೊಡೆಯುವುದು, ಹರತೆ, ಬೇಸಿಗೆ ಬಂದರೆ ಹೊಲ ತೋಟಗಳಿಗೆ ಗೊಬ್ಬರ ಹೇರುವುದು, ಕೆರೆ ಕಟ್ಟೆಗಳಿಂದ ಮಣ್ಣು ಹೊಡೆಯುವುದು ಮುಂತಾದ ಕೆಲಸಗಳು. ಬರೀ ನಮ್ಮ ಮನೆಯ ಕೆಲಸಗಳಲ್ಲದೆ ಇವುಗಳು ಮುಯ್ಯಾಳು ಕೆಲಸಗಳಿಗೂ ಕೊರಳು ಕೊಡಬೇಕಿತ್ತು. ಮಳೆಗಾಲದಲ್ಲಿ ಹಸಿ ಮೇವು, ಜೋಳದ ಸಪ್ಪೆಕಡ್ಡಿ, ಬೇಸಿಗೆಯಲ್ಲಿ ಮೆದೆಯ ಒಣ ಹುಲ್ಲನ್ನು ತಿಂದು ದಿಪ್ಪಾಗಿರುತ್ತಿದ್ದವು. ಇನ್ನು ಕೆಲಸ ಮಾಡಿ ಸೊರಗದಿರಲೆಂದು ಹುರುಳಿ ಹಿಂಡಿ ವರ್ಷವಿಡೀ ಇರುತ್ತಿತ್ತು. ವಯಸ್ಸಾಗುವವರೆಗೆ ಇವುಗಳನ್ನು ಬದಲಾಯಿಸುತ್ತಿರಲಿಲ್ಲ. ರೈತಾಪಿ ಬದುಕು ಮಾಡಲು ಆಗಲ್ಲ ಅನ್ನುವುದು ಅರಿವಿಗೆ ಬರುತ್ತಲೇ ದನಗಳ ಜಾತ್ರೆ ಅಥವಾ ಸಂತೆಗಳಿಗೆ ಹೊಡೆದೋ ಇಲ್ಲಾ ಮನೆಯ ಮುಂದೆ ಕೇಳಿಕೊಂಡು ಬಂದವರಿಗೋ ವ್ಯಾಪಾರದಲ್ಲಿ ಕಂಟಿ ಮಾಡದೆ ಮಾರಲಾಗುತ್ತಿತ್ತು. ಇವುಗಳ ಜೊತೆಗೆ ಇರುತ್ತಿದ್ದ ಹೋರಿ ಕರುಗಳನ್ನು ಯಾವುದೇ ರೈತಾಪಿ ಬದುಕಿಗೆ ಅಷ್ಟಾಗಿ ಬಳಸುತ್ತಿರಲಿಲ್ಲ. ಕೇವಲ ಹೆಗಲು ಮಾಡುವುದಕ್ಕಾಗಿ, ಕೆಲಸ ಕಲಿತಿವೆ ಅನ್ನುವುದನ್ನು ಮಾರಾಟ ಮಾಡುವಾಗ ಹೇಳುವುದಕ್ಕೋಸ್ಕರ ಅದೂ ಅವುಗಳ ಹೆಗಲಿಗೆ ಗಾಯವಾಗದಂತೆ ಯಾವಾಗಲಾದರೊಮ್ಮೆ ಬೇಸಾಯಕ್ಕೆ ಹೂಡಲಾಗುತ್ತಿತ್ತು. ಇಲ್ಲಾ ಗಾಡಿಗಳಿಗೆ ಹೂಡಿ ಗಾಡಿ ಕಲಿಸಲಾಗುತ್ತಿತ್ತು. ಆದರೆ ಇವುಗಳ ಬಗ್ಗೆ ತುಂಬಾ ನಿಗಾ ಮಾಡಲಾಗುತ್ತಿತ್ತು.

ಅಯ್ಯ ಒಂದಷ್ಟು ದಿನ ದನಕರುಗಳ ವ್ಯಾಪಾರ ಮಾಡುತ್ತಿತ್ತು. ಬಡಕಲು ದನಗಳನ್ನು ತಂದು ಅವುಗಳನ್ನು ಚೆನ್ನಾಗಿ ಸಾಕಿ ಮಾರಾಟ ಮಾಡುತ್ತಿತ್ತು. ಅದರಿಂದ ಮನೆ ನಡೆಸಿಕೊಂಡು ಹೋಗುವಷ್ಟು ಕೈ ಕಾಸೂ ಸಿಕ್ಕುತ್ತಿತ್ತು. ಈ ವ್ಯಾಪಾರ ಒಂಚೂರು ಕುದುರಿ ಅದರ ಒಳ ಹೊರಗುಗಳು ತಿಳಿಯುತ್ತಲೇ ದೊಡ್ಡ ದೊಡ್ಡ ಹಸುಗಳನ್ನೋ ಎಮ್ಮೆಗಳನ್ನೋ ತರುವ ಬದಲು ಎಳೆಯ ಮಳಕಗಳನ್ನು, ಹೋರಿ ಕರುಗಳನ್ನು ತರಲಾರಂಭಿಸಿತು. ತಂದಾಗ ಬಡಕಲು ಬಡಕಲಾಗಿ ಮೂಳೆ ಬಿಟ್ಟುಕೊಂಡಿರುತ್ತಿದ್ದವು. ಹಂಗಾಗಿ ಅವುಗಳು ಸಸ್ತಾಕ್ಕೂ ಸಿಕ್ಕುತ್ತಿದ್ದವು. ಮಳಕಗಳು ಗಬ್ಬ ಆಗುತ್ತಿದ್ದಂತೆ ಮಾರುತ್ತಿದ್ದರು. ಕರೇವಿಗೆ ಅಂತ ಒಂದೆರಡು ಎಮ್ಮೆಗಳು ಇದ್ದೇ ಇರುತ್ತಿದ್ದವು. ಒಂದು ಮಾಲಿಸಿಕೊಂಡರೂ ಇನ್ನೊಂದು ಕರೆಯುತ್ತಿತ್ತು. ಬರಬರುತ್ತಾ ಮಳಕಗಳ ಬದಲಿಗೆ ಹೋರಿಕರುಗಳನ್ನು ಮಾತ್ರ ತರಲಾರಂಭಿಸಿತು. ಆರೇಳು ತಿಂಗಳು ಕಳೆಯುವುದರೊಳಗೆ ಮೈ ಕೈ ತುಂಬಿಕೊಂಡುಬಿಡುತ್ತಿದ್ದವು. ಹಿಂಗೆ ಮೈ ಕೈ ತುಂಬಿಕೊಳ್ಳಲು ಈ ಹೋರಿಕರುಗಳಿಗೆ ಹುರುಳಿ ಹಿಂಡಿ ಹಸಿ ಮೇವಿನ ಜೊತೆಗೆ ಬೆಳಗಾಗುತ್ತಲೇ ಕೊಟ್ಟಿಗೆಯಿಂದ ಆಚೆ ಕಟ್ಟಿ ಅವುಗಳಿಗೆ ಒಂದು ಹೊರೆ ಜೋಳದ ಎಳೆ ಸಪ್ಪೆ ಕಡ್ಡಿಗಳನ್ನು ತಿನ್ನಿಸಲಾಗುತ್ತಿತ್ತು. ಇದಕ್ಕಾಗಿಯೇ ಕೊಟ್ಟಿಗೆಯ ಮುಂದೆ ಒಂದು ಒಪ್ಪಾರನ್ನೂ ಏಳಿಸಲಾಗಿತ್ತು. ಒಂದೊಂದು ದಿನ ಈ ಕೆಲಸ ನನಗೂ ಬೀಳುತ್ತಿತ್ತು. ಒಂದೊಂದೇ ಸಪ್ಪೆ ಕಡ್ಡಿಗಳನ್ನು ಬಾಯಿಗಿಡುತ್ತಾ ಅದು ಇನ್ನೇನು ಮುಗಿಯಾಕೆ ಬಂತು ಅಂದ ಕೂಡಲೇ ಮತ್ತೊಂದನ್ನು ಅವುಗಳ ದವಡೆಗೆ ಕೊಡಬೇಕಿತ್ತು. ಆ ಕರುಗಳು ಆ ಸಪ್ಪೆಕಡ್ಡಿಗಳನ್ನು ಮೆಲ್ಲಗೆ ರಸವಾಡಿಸಿಕೊಂಡು ಅಗಿಯುತ್ತಿದ್ದರೆ ಆ ರಸದ ಘಾಟು ಕಮಗುಡುತ್ತಾ ಹಿತವಾಗುತ್ತಿತ್ತು. ಒಂದರ್ಧ ಹೊರೆಯನ್ನು ಖುಷಿಯಿಂದ ಜಗಿಯುತ್ತಿದ್ದ ಕರುಗಳು ಹೊಟ್ಟೆ ತುಂಬುತ್ತಾ ಬಂದಂತೆ ಅಸಡ್ಡೆ ತೋರಿಸುತ್ತಿದ್ದವು. ಜೊತೆಗೆ ಬೇಕೇ ಇಲ್ಲ ಎಂಬಂತೆ ದವಡೆಯಲ್ಲಿರುತ್ತಿದ್ದ ಸಪ್ಪೆಕಡ್ಡಿಯನ್ನು ಇದ್ದಕ್ಕಿದ್ದಂತೆ ಉಗಿದುಬಿಡುತ್ತಿದ್ದವು. ಇಲ್ಲಾ ಎರಡು ಮೂರು ತಿಂದಾಕಬಹುದಾದ ಸಮಯವನ್ನು ಒಂದರಲ್ಲೇ ಕಳೆದುಬಿಡುತ್ತಿದ್ದವು. ಅವು ಎಂಥ ಐನಾತಿ ಆಟ ಹಾಕಿದರೂ ಅವುಗಳನ್ನು ಗದರಿಸಿ ಹೊರೆ ಪೂರಾ ಖಾಲಿ ಮಾಡಲಾಗುತ್ತಿತ್ತು. ಈ ಕಾಯಕ ಬೆಳಗ್ಗೆಯಿಂದ ಹೆಚ್ಚೂ ಕಡಿಮೆ ತಿಂಡಿಯ ಹೊತ್ತಿನವರೆಗೂ ಹಿಡಿಯುತ್ತಿತ್ತು. ಹೊರೆ ಮುಗಿಯುವ ಹೊತ್ತಿಗೆ ಕರುಗಳು ಅಗಿದೂ ಅಗಿದು ಸುಸ್ತಾಗಿರುತ್ತಿದ್ದವು. ಇನ್ನು ಅವುಗಳನ್ನು ತೋಟದೊಳಗಿನ ಯಾವುದಾದದರೂ ಮರದ ಬುಡಕ್ಕೆ ಕಟ್ಟುತ್ತಲೇ ಮೆಲುಕು ಹಾಕುತ್ತಾ ತೇಲುಗಣ್ಣುಗಳನ್ನು ಬಿಡುತ್ತಾ ಅರಾಮಾಗಿ ಅರೆ ಎಚ್ಚರ ಅರೆ ನಿದ್ದೆಯಲ್ಲಿ ವಿರಮಿಸುತ್ತಿದ್ದವು. ದನಗಳನ್ನು ಬಿಡುವ ಹೊತ್ತಾಗುತ್ತಲೇ ಅವುಗಳನ್ನು ಮರದ ಬುಡದಿಂದ ಬಿಚ್ಚಿಕೊಂಡು ಬಾನಿಯಲ್ಲಿ ಇಡುತ್ತಿದ್ದ ನೀರನ್ನು ತೋರಿಸಿ ಹೊಲದ ಇಲ್ಲವೇ ತೋಟದ ಬದುಗಳಲ್ಲಿ ಮೇಸಲು ಹೋಗಲಾಗುತ್ತಿತ್ತು. ಹಿಂಗೆ ನಿಗಾ ಮಾಡಲ್ಪಟ್ಟ ಕರುಗಳಿಗೆ ವರ್ಷ ಕಳೆಯವುದರೊಳಗೆ ಮತ್ತೊಂದು ಬಣ್ಣವೇ ಬಂದುಬಿಡುತ್ತಿತ್ತು. ಆಗ ಅವುಗಳಿಗೆ ಒಳ್ಳೆಯ ಬೆಲೆ ಕುದುರಿದರೆ ಮಾರಾಟ ಮಾಡಲಾಗುತ್ತಿತ್ತು. ಮತ್ತೆ ಬಡಕಲು ಕರುಗಳು ಮನೆಗೆ ಬರುತ್ತಿದ್ದವು. ಇದು ನಾನು ಮೈಸೂರಿಗೆಂದು ಓದಲು ಹೋಗುವವರೆಗೂ ನಡೆದಿತ್ತು. ಆ ಹೊತ್ತಿಗೆ ತೋಟ ಕೊಂಚ ಕೈ ಹಿಡಿದಿದ್ದರಿಂದ ಹಾಗೂ ಅಯ್ಯನಿಗೂ ಈ ವ್ಯಾಪಾರದಲ್ಲಿ ಆಸಕ್ತಿ ಕಡಿಮೆಯಾಗಿದ್ದರಿಂದ ಈ ಬಾಬ್ತನ್ನು ಕೈಬಿಟ್ಟಿತು.

ಇದರಲ್ಲಿ ಅನುಭವವಿದ್ದ ಅಯ್ಯ ಒಂದು ಸಲ ಕರುಗಳನ್ನು ಕೊಂಡು ತರುವಾಗ ಪಿಗ್ಗಿ ಬಿದ್ದಿತ್ತು. ಅವು ತುಂಬಾ ಚಂದದ, ಒಂದೇ ಅಳತೆಯ ಅರೆಗಂದು ಬಣ್ಣದ, ನೀಳ ಕೊಂಬುಗಳ ಕರುಗಳು. ಆ ಕರುಗಳನ್ನು ತಂದು ಐದಾರು ತಿಂಗಳು ಕಳೆದಿತ್ತು. ಎಂದಿನಂತೆ ಅವುಗಳ ಸೌಕರ್ಣೆ ನಡೆಯುತ್ತಿತ್ತು. ಅವುಗಳೂ ದುಂಡಗಾಗತೊಡಗಿದ್ದವು. ದನಕರುಗಳ ಬಗ್ಗೆ ಅಕ್ಕರೆಯಿದ್ದ ಯಾರಿಗೇ ಆಗಲಿ ಅವುಗಳನ್ನು ಒಂದರೆಘಳಿಗೆ ನಿಂತು ನೋಡಬೇಕು ಅನ್ನುವಂತಾಗಿದ್ದವು. ಮೇಸಲೆಂದು ಕೆಲವೊಮ್ಮೆ ಹೊಲದ ಬದುಗಳಿಗೆ ಹೊಡೆದುಕೊಂಡು ಹೋಗಲಾಗುತ್ತಿತ್ತು. ಆಗ ಹೊಲ ತೋಟಗಳೆಂದರೆ ದನಕರುಗಳ ಮೇವಿಗೆ ಸಲುವಾಗಿ ಅಗಲವಾದ ಬದುಗಳಿರುತ್ತಿದ್ದವು. ಒಂದು ಮಳೆ ಬಿದ್ದರೆ ಸಾಕು ಆ ಬದುಗಳಲ್ಲಿನ ಮೇವು ಮೇಲೆದ್ದುಬಿಡುತ್ತಿತ್ತು. ಆಗ ಬದುವಂಥ ಬದುಗಳು ಹೊಲಮಾಳದ ಹಸಿರಿನೊಂದಿಗೆ ಪೈಪೋಟಿಗಿಳಿಯುತ್ತಿದ್ದವು. ಬರಬರುತ್ತಾ ಬದುಗಳು ಕಿರಿದಾಗತೊಡಗಿದವು. ಕಡೆಗೊಂದು ದಿನ ಹೊಲಮಾಳಗಳ ಜತೆಗೇ ಪೂರಾ ಇಲ್ಲವಾಗೇ ಹೋದವು. ಈಗ ನನ್ನ ತೋಟಾಂಥ ತೋಟವೆಲ್ಲಾ ಒಂದು ದೊಡ್ಡ ಬದುವಾಗಿದೆ. ಏಕೆಂದರೆ ನಾನು ಮಾಡುತ್ತಿರುವುದು ಉಳುಮೆಯಿಲ್ಲದ ಕೃಷಿ. ಅಲ್ಲಿ ಅಂದಿನ ಬದುಗಳಲ್ಲಿ ಬೆಳೆದಂತೆ ಹುಲ್ಲು ಇಲ್ಲೂ ಬೆಳೆಯುತ್ತೆ. ಒಂದೇ ವ್ಯತ್ಯಾಸ ಅಂದರೆ ಆ ಬದುಗಳಲ್ಲಿರುತ್ತಿದ್ದ ಥರಾವರಿ ಹುಲ್ಲಿನ ತಳಿಗಳು ಇಲ್ಲಿ ಇಲ್ಲ. ಅಲ್ಲಿ ಅರಳುತ್ತಿದ್ದ ಥರಾವರಿ ಬೇಲಿ ಹೂಗಳಿಲ್ಲ.

ಒಂದು ದಿನ ನಾನು ಹೊಲದ ಬದುವಿನಲ್ಲಿ ಈ ಕರುಗಳನ್ನು ಮೇಸುತ್ತಿದ್ದೆ. ಆಗಲೇ ಇಳಿಹೊತ್ತಾಗುತ್ತಿತ್ತು. ಹೊಟ್ಟೆ ತುಂಬಿರುವುದರ ಗುರುತಾಗಿ ಕರುಗಳ ಹೊಟ್ಟೆಗಳು ಟುಮುಟುಮು ಆಗಿದ್ದವು. ಇನ್ನೇನು ಮನೆಯ ಕಡೆ ಹೊರಡಬೇಕು ಅನ್ನುವಷ್ಟರಲ್ಲಿ ಯಾರೋ ಒಬ್ಬ ಹೊಲದ ಕಾಲ್ದಾರಿಯಲ್ಲಿ ಹೋಗುತ್ತಿದ್ದವನು ಈ ಕರುಗಳನ್ನು ಕಾಣುತ್ತಲೇ ಇವುಗಳ ಬಳಿಗೆ ಬಂದ. ಬಂದವನೇ `ಪಾಪಾ ಎಷ್ಟು ಚೆನಾಗಿದರ‍್ಲ. ನೊಣ ಕುಂತ್ರೆ ಜಾರಂಗಿದೀರಾ’ ಅನ್ನುತ್ತಾ ಕರುಗಳನ್ನು ಮಾತಾಡಿಸಿದ. ಆಮೇಲೆ ನನ್ನ ಕೈಗಳಿಂದ ಕರುಗಳ ಹಗ್ಗವನ್ನು ಬಿಡಿಸಿಕೊಂಡು ಕರುಗಳನ್ನು ಒಂದೆರಡು ಸಾರ್ತಿ ಹಿಂದಕ್ಕೂ ಮುಂದಕ್ಕೂ ಓಡಾಡಿಸಿದ. ಏನಾದರೂ ಸಿಡಿಗಾಲು ಇರಬಹುದ ಅನ್ನೋದನ್ನ ಖಾತ್ರಿ ಮಾಡ್ಕಣಾಕೆ ಅಂತ ಆಮೇಲೆ ಗೊತ್ತಾಯ್ತು. ಒಂದಷ್ಟೊತ್ತು ಕರುಗಳನ್ನೇ ದಿಟ್ಟಿಸುತ್ತಾ ಬದುವಿನ ದಿಬ್ಬದಲ್ಲಿ ಕೂತು ಬೀಡಿ ಎಳೆಯತೊಡಗಿದ. ಇನ್ನೂ ಬೀಡಿ ಪೂರಾ ಮುಗಿದಿರಲೇ ಇಲ್ಲ ಅದನ್ನು ಹಂಗೆ ನೆಲಕ್ಕೆ ತಿಕ್ಕಿ ಅದರ ಬೆಂಕಿಯನ್ನು ಕಳೆದು ಅಂಗಿಯ ಜೇಬಿಗಿಳಿಕೊಂಡವನೇ ಏನು ನೆನಪಾಯ್ತೋ ಏನೋ ಮತ್ತೆ ಕರುಗಳತ್ತ ಬಂದು ಅವುಗಳ ಮೈದಡವುತ್ತಾ ಇಡೀ ಮೈಯ್ಯನ್ನು ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷೆಗೊಡ್ಡಿದ. ಆಯಪ್ಪನ ನಡೆ ನನಗೆ ತುಂಬಾ ವಿಚಿತ್ರವಾಗಿ ಕಂಡು ಯಾಕೆ ಅಂದೆ. `ತಡಿ ವಸಿಯಾ’ ಅನ್ನುತ್ತಾ ಒಂದು ಕರುವಿನ ಕೆಳ ಹೊಟ್ಟೆಯ ಭಾಗದಲ್ಲಿ ಕೈಯ್ಯಾಡಿಸುತ್ತಾ ಏನೋ ಸಿಕ್ಕವನಂತೆ `ಛೆ ಇಂಥ ಕರೀಗೆ ಎಂಥ ಐಬು’ ಅಂತ ಮೇಲೆದ್ದ. ನನಗೆ ತಳ ಬುಡ ತಿಳಿಯಲಿಲ್ಲ. ಅವನು ಹೋಗಿ ಮತ್ತೆ ಬದುವಿನ ಮೇಲೆ ಕೂತು ಕೆಡಿಸಿದ್ದ ಬೀಡಿಗೆ ಬೆಂಕಿ ತಗುಲಿಸಿ ಎಳೆಯತೊಡಗಿದ. ಆ ಕರು ಬಹುಶಃ ಅವನು ಉಣ್ಣೆಗಳನ್ನು ಕೀಳಲು ಮೈಯ್ಯನ್ನೆಲ್ಲಾ ತಡಕುತ್ತಿದ್ದಾನೆ ಅಂತ ಸಾಧುವಾಗಿ ಸಹಕರಿಸುತ್ತಿತ್ತು. ಅವನು ಅಲ್ಲಿ ಕೂರುತ್ತಲೇ ಅದೂ ಅತ್ತ ತಿರುಗಿ ಅವನನ್ನೇ ದಿಟ್ಟಿಸ ಹತ್ತಿತು. ಈ ಸಾರ್ತಿ ಬೀಡಿ ಪೂರಾ ಸೇದಿ ಅದರ ಮೋಟನ್ನು ನೆಲಕ್ಕೆ ತಿಕ್ಕಿ ಮತ್ತೆ ಎದ್ದು ಬಂದು ಕರುವಿನ ಕೆಳ ಹೊಟ್ಟೆಯ ಭಾಗದಲ್ಲಿ ಮತ್ತೆ ಕೈಯ್ಯಡಿಸುತ್ತಾ ಏನನ್ನೋ ಕೆರೆದಂತೆ ಮಾಡಿದ. ಕಡೆಗೆ `ಇದು ಅದೇಯಾ ಇದ್ರ ನಸೀಬು ಇಷ್ಟೇಯಾ’ ಅಂತ ಮೇಲೆದ್ದ. ನಂಗೆ ಅಷ್ಟು ಚಂದದ ಹೋರಿಯನ್ನು ಹಿಂಗೆ ಜರಿಯುತ್ತಿರುವ ಅವನ ಮೇಲೆ ಸಣ್ಣಗೆ ಕೋಪ ಬಂದು `ಯಾಕೆ ಏನಾಗೈತೆ’ ಅಂದೆ. `ನಿಂಗೆ ಅದು ತಿಳ್ಯಾಕಿಲ್ಲ ಬಿಡು. ಹೀನ ಸುಳಿ ಐತೆ. ಇದುನ್ನ ಯಾರೂ ಕ್ಯಾರೆ ಅನ್ನಲ್ಲ’ ಅಂದ. ಹೀನಸುಳಿ ಅನ್ನುವ ಪದವನ್ನು ನಾನು ಮೊಟ್ಟ ಮೊದಲ ಬಾರಿಗೆ ಕೇಳಿದ್ದು ಆಗಲೇ. `ಹಂಗಂದ್ರೆ ಏನು?’ ಅಂದೆ. `ಹೇಳಿದ್ರೆ ತಿಳ್ಯಲ್ಲ ಬಾ ಇತತಾವಾ ತೋರುಸ್ತೀನಿ’ ಅಂತ ಕರೆದ. ಹೋದೆ. ಅವನು ನಮ್ಮ ತಲೆಗಳಲ್ಲಿ ಇರುವಂಥ ಸುಳಿಯೊಂದನ್ನು ತೋರಿಸುತ್ತಾ`ಇದೇ ನೋಡು ಹೀನ ಸುಳಿ. ಇದು ಇದ್ರೆ ಮುಗೀತು’ ಅಂದವನೇ ಅಲ್ಲಿಂದ ಹೊರಟ. ಅವನೊಬ್ಬ ಸಾಟಿ ಬುಗುರಿ ಮಾಡುತ್ತಿದ್ದ ಕಸುಬಿನವನು. ನಂತರ ತಿಳಿದುಕೊಂಡೆ-ಎತ್ತು ಅಥವಾ ಹೋರಿಗಳಲ್ಲಿ ಈ ಹೀನಸುಳಿ ಇದ್ದರೆ ಅದನ್ನು ಅಪಶಕುನದಂತೆ ನೋಡಲಾಗುತ್ತೆ. ಅದು ಎಷ್ಟೇ ಚಂದ ಇದ್ದರೂ ಅದನ್ನು ಕೊಳ್ಳುವವರು ಹಿಂದೂ ಮುಂದೂ ನೋಡುತ್ತಾರೆ. ಅಂತೆಯೇ ಕೊಳ್ಳಲು ಮನಸ್ಸು ಮಾಡಿದವರೂ ಅದನ್ನು ತುಂಬಾ ನಿಕೃಷ್ಟ ಬೆಲೆಗೆ ಗಿಟ್ಟಿಸಿಕೊಳ್ಳಲು ನೋಡುತ್ತಾರೆ. ಆಗಲೇ ನನಗಿದು ತುಂಬಾ ವಿಚಿತ್ರ ಅಂತ ಅನಿಸಿತ್ತು. ಮೈಮೇಲಿರುವ ಎಂಥದೇ ಸುಳಿಯಾಗಲಿ ಅದು ಕೊಳ್ಳುವವರಿಗೆ ಏನು ಮಾಡುತ್ತೆ. ಇಂಥ ಹೀನಸುಳಿಯ ಯಪ್ಪೆ ಅಥವಾ ಮೋಸದ ಆಟ ಎಮ್ಮೆ, ಕುರಿ, ಮೇಕೆ ಮುಂತಾದವುಗಳಿಗೆ ಯಾಕಿಲ್ಲ. ಹಂಗಂತ ನಮ್ಮೂರಿನ ಅನೇಕ ಹಿರಿ ತಲೆಗಳನ್ನು ಕೇಳಿದ್ದೆ. ಆದರೆ ಅವರೆಲ್ಲರೂ `ಅದೇನೋಪ್ಪ, ಒಳ್ಳೇದಾಗಲ್ವಂತೆ’ ಅಂತ ತಮ್ಮ ಅಜ್ಞಾನವನ್ನು ತೋರಿಸಿಕೊಂಡಿದ್ದರು.

ಈ ಕರುಗಳನ್ನು ಖರೀದಿಸುವಾಗ ಅಯ್ಯ ಅವುಗಳ ಮೈಯ್ಯನ್ನು ಸರಿಯಾಗಿ ಗಮನಿಸಿರಲಿಲ್ಲ. ಅಥವಾ ಅವುಗಳು ಮೂಳೆ ಬಿಟ್ಟುಕೊಂಡು ಬಡಕಲಾಗಿದ್ದರಿಂದ ಆ ಸುಳಿ ಇದ್ದರೂ ಸರಿಯಗಿ ಇನ್ನೂ ಮೂಡಿರಲಿಲ್ಲ ಅಂತ ಅನಿಸುತ್ತೆ. ಅವತ್ತು ಹೊಲದಲ್ಲಿ ಆ ಪುಣ್ಯಾತ್ಮ ಕರುವಿನ ಮೈಲ್ಲಿ ಹೀನಸುಳಿಯನ್ನು ಪತ್ತೆ ಹಚ್ಚಿದ ಲಾಗಾಯ್ತಿನಿಂದ ಅದನ್ನು ಮಾರಾಟ ಮಾಡುವುದು ಕಷ್ಟವಂತೂ ಆಯ್ತು. ನೋಡಲು ಬಂದವರು `ಹೇಳಂಗಿದ್ರೆ ಈ ಕರ ಐತಲ್ಲ ಇದ್ರ ಯಾಪಾರ ಹೇಳಿ’ ಅಂತ ಇನ್ನೊಂದು ಕರುವನ್ನು ತೋರಿಸುತ್ತಿದ್ದರು. ಯಾರೋ ಅಪರೂಪಕ್ಕೊಬ್ಬ `ಹಣೇಲಿ ಬರ್ದದ್ದು ಆಗ್ಲಿ ತಗಂತೀನಿ. ನೋಡಿ ಸರ್ಯಾಗಿ ಗಿಟ್ಟಂಗೆ ಹೇಳು ಮತ್ತೆ ಯಾಪಾರಾನಾ’ಅಂತ ಆರಕ್ಕೆ ಮೂರರಂಗೆ ಬೇಕಾಬಿಟ್ಟಿ ಕೇಳುತ್ತಾ ರೋಸುತ್ತಿದ್ದರು. ಹಿಂಗೆ ಹೋರಿಗೆ ಹೀನಸುಳಿಯ ಇದೆ ಅಂತ ತಿಳಿಯುತ್ತಲೇ ಯಂಗಾರಾ ಮಾಡಿ ಸಸ್ತಕ್ಕೆ ಅಮಿಕ್ಕಂಡು ಬಿಡಬಹುದು ಅಂತ ಸುಮಾರು ಜನ ಸಾಟಿ ಬುಗುರಿಯವರು ಬಂದು ಬಂದು ನೋಡಿಕೊಂಡು ಹೋಗುತ್ತಿದ್ದರು. ಆದರೆ ಅವರ‍್ಯಾರೂ ಅದರ ನಿಜವಾದ ಬೆಲೆಗೆ ಕೊಳ್ಳಲು ತಯಾರಿರಲಿಲ್ಲ. ಹಂಗೇ ಖಾಯಸ್ಸಿನಿಂದ ಕೊಳ್ಳಲು ಬಂದವರ ತಲೆಗೂ ಹುಳ ಬಿಡುತ್ತಿದ್ದರು.

ಹಂಗೆ ವಿಷಯ ತಿಳಿಯುತ್ತಲೇ ಒಂದು ದಿನ ನಿಂಗಪ್ಪ ಅನ್ನುವ ಸಾಟಿಬುಗುರಿ ವ್ಯಾಪಾರ ಮಾಡುವವರು ಬಂದರು. ಅಯ್ಯ ಮತ್ತು ಇವರಿಗೆ ತುಂಬಾ ದಿನದಿಂದಲೂ ಗೆಳೆತನವಿತ್ತು. ತಿಂಗಳಿಗೆ ಎರಡು ತಿಂಗಳಿಗೆ ನಮ್ಮ ಮನೆಯತ್ತ ಬರುತ್ತಿದ್ದ ನಿಂಗಪ್ಪ ನಮ್ಮ ಮನೆಯ ಪೂರ್ತಕ್ಕೆ ಇತರೆ ಸಾಟಿ ಬುಗುರಿಯಂಥವರಾಗಿರಲಿಲ್ಲ.

ಈ ನಿಂಗಪ್ಪ. `ಹೇ ಶಿವಪ್ಪ ಇದ್ಕೆ ಯಾಕೆ ಈನಾಡಿ ತಲೆ ಕೆಡಿಸ್ಕಂತೀಯಾ ಅಂತೀನಿ? ಯಾವನ್ಗರಾವಾ ಹೆಂಗಾರಾ ಮಾಡಿ ಮೆತ್ತಿದ್ರೆ ಆತು ಬಿಡು’ ಅನ್ನುತ್ತಾ ಹೋರಿಕರುವನ್ನು ಒಂದು ಸುತ್ತು ಹಾಕಿ ಮನೆಯ ಮುಂದಲ ಜಗಲಿಯಲ್ಲಿ ಕೂತು ಬೀಡಿ ಹಚ್ಚಿಕೊಂಡು ಕರುವನ್ನೇ ದಿಟ್ಟಿಸುತ್ತಾ ಗಹನವಾದ ಆಲೋಚನೆಯಲ್ಲಿ ಮುಳುಗಿದರು. ಅಯ್ಯನಿಗೆ ಈಗಾಗಲೇ ಇಂಥ ದಲ್ಲಾಳಿಗಳ ಪ್ರಸಂಗಗಳು ಹಲವು ನಡೆದು ಹೋಗಿದ್ದರಿಂದ ತೀರಾ ಉತ್ಸಾಹ ತೋರಿಸದೆ ಮತ್ತೊಂದು ಜಗಲಿಯಲ್ಲಿ ಕೂತು ತಾನೂ ಬಿಡಿ ಹಚ್ಚಿಕೊಂಡಿತು. `ಅಲ್ಲ ಹಿಂಗೆ ಮಾಡಿದ್ರೆ ಹೆಂಗೆ’ ಅಂತ ಸೇದುತ್ತಿದ್ದ ಬೀಡಿಗೆ ತುಸು ವಿರಾಮ ಕೊಟ್ಟು ಅಯ್ಯನತ್ತ ನೋಡಿದರು ನಿಂಗಪ್ಪ. ಹೆಂಗೆ ಅನ್ನುವಂತೆ ಅಯ್ಯ ನಿಂಗಪ್ಪನನ್ನೇ ನೋಡಿದರು. `ಯಾವನು ಎಷ್ಟುಕ್ಕಾರಾ ಕೇಳ್ಲಿ ನಾವು ಒಂದು ಕೆಲ್ಸ ಮಾಡಾನಾ. ಈ ದನದ ಜಾತ್ರೆ ಇಲ್ಲ ಸಂತ್ಗೆ ಹೊಡ್ಯಾನಾ. ಅಲ್ಲಿ ಯಾವನಿಗೆ ಗೊತ್ತಾಗುತ್ತೆ ಹೀನಸುಳಿ ಇರಾದು. ನೋಡಾಕೆ ಒಳ್ಳೆ ಗುಜ್ಜಾನೆ ಮರಿ ಇದ್ದಂಗೆ ಐತೆ’ ಅಂತ ಅಂದರು. ಅದೂ ಒಂದಷ್ಟು ದಿನ ನಡೆಯಿತು. ಹತ್ತಿರದ ಜಾತ್ರೆ, ಸಂತೆಗಳಿಗೆ ಕರುಗಳನ್ನು ಹೊಡೆದರು. ಈಗಾಗಲೇ ಕರುವನ್ನು ನೋಡಿಕೊಂಡು ಹೋಗಿದ್ದ ದಲ್ಲಾಳಿಗಳು ಕರುಗಳನ್ನು ನೋಡುತ್ತಲೇ ಕೊಳ್ಳಲು ಬಂದವರಿಗೆ ಕಿವಿ ಊದುತ್ತಿದ್ದರು. ಇಲ್ಲಾ ಅವರೇ ಮತ್ಮತ್ತೆ ಬಂದು ತುಂಬಾ ಕಡಿಮೆ ಬೆಲೆಗೆ ಗಿಟ್ಟಿಸಿಕೊಳ್ಳುವ ಕರಾಮತ್ತು ನಡೆಸುತ್ತಿದ್ದರು. ಅಲ್ಲೂ ಹೀನಸುಳಿಯ ಕರುವನ್ನು ಬಿಟ್ಟು ಮತ್ತೊಂದರ ಮೇಲೆ ಎಲ್ಲರೂ ಕಣ್ಣಾಕುತ್ತಿದ್ದರು. ಒಂದನ್ನೇ ಯಾವ ಕಾರಣಕ್ಕೂ ಮಾರಕೂಡದು ಅಂತ ತೀರ್ಮಾನ ಮಾಡಿಕೊಂಡಿದ್ದ ಅಯ್ಯ ತಿರುಗಿ ಊರಿಗೆ ಹೊಡೆದುಕೊಂಡು ಬರುತ್ತಿತ್ತು. `ಹೆಂಗೆ ಒಳ್ಳೆ ಮುತ್ತಿದ್ದಂಗೆ ಐತೆ. ಇಂಥಾದಕ್ಕೆ ಅದೆಲ್ಲಿ ವಕ್ರಿಸ್ಕಂಡು ಬಿಡ್ತೋ ಈ ಶನಿ ಹೀನಸುಳಿ’ ಅಂತ ಹೋರಿ ಕರುವನ್ನು ಕಂಡ ಕೆಲವರು ಉದ್ಗಾರ ತೆಗೆಯುತ್ತಿದ್ದರು. ಅಯ್ಯನಿಗೆ ಹಿಂಗೆ ಹೀನಸುಳಿಯ ಬಗ್ಗೆ ಧೈರ್ಯ ಹೇಳುತ್ತಿದ್ದ ನಿಸ್ಸೀಮ ನಿಂಗಪ್ಪನೇ ಹಲವು ಸಾರ್ತಿ ಮಾರುವವರಿಂದ ಟೋಪಿ ಹಾಕಿಸಿಕೊಂಡಿದ್ದರು. ಒಂದು ದಿನ ನಾನು ಸ್ಕೂಲಿನಿಂದ ಬರುವ ಹೊತ್ತಿಗೆ ನಮ್ಮ ಮನೆಯ ಮುಂದೆ ಸುಮಾರು ಜನ ಸೇರಿದ್ದರು. ಅಲ್ಲದೆ ಜೋರು ದನಿಯಲ್ಲಿ ಮಾತನಾಡುತ್ತಿದ್ದರು. ಯಾವುದೋ ಜಗಳ ಇರಬಹುದೆಂದು ನಾನು ಮನೆಯತ್ತ ಓಡೋಡಿ ಬಂದು ನೋಡಿದರೆ ಅಲ್ಲಿ ಈ ಪಲ್ಟಿ ನಿಂಗಪ್ಪನವರ ಮೇಲೆ ಐದಾರು ಜನ ಕೂಗಾಡುತ್ತಿದ್ದರು. ನಿಂಗಪ್ಪನವರ ಸಮಜಾಯಿಷಿಯ ಮಾತುಗಳನ್ನು ಅವರು ಕಿವಿಯ ಮೇಲೂ ಹಾಕಿಕೊಳ್ಳುತ್ತಿರಲಿಲ್ಲ. ಬದಲಿಗೆ ಅಯ್ಯನಿಗೆ ನ್ಯಾಯ ಒಪ್ಪಿಸುತ್ತಿದ್ದರು. ಈ ಜಗಳಕ್ಕೆ ಕಾರಣವೇನೆಂದು ನಂತರ ತಿಳಿಯಿತು. ಜಗಳ ಮಾಡುತ್ತಿದ್ದವರ ಮನೆಯಲ್ಲಿದ್ದ ಜೋಡಿ ಹೋರಿಗಳಲ್ಲಿ ಒಂದು ಏನೋ ಖಾಯಿಲೆಯಾಗಿ ತೀರಿಕೊಂಡಿತ್ತಂತೆ. ಇನ್ನು ಉಳಿದ ಒಂದು ಎತ್ತಿಗೆ ತಕ್ಕನಾದ ಜೋಡಿಯನ್ನು ಹುಡುಕಿಕೊಡುವಂತೆ ನಿಂಗಪ್ಪನವರಿಗೆ ಕೇಳಿದ್ದಾರೆ. ಅದೇರೀತಿ ಅಲ್ಲಿಗೆ ತಿಂಗಳ ಹಿಂದೆ ನಿಂಗಪ್ಪನೂ ಒಂದು ಹೋರಿಯನ್ನು ಕೊಡಿಸಿದ್ದಾರೆ. ನೋಡಲು ಗಟ್ಟಿಮುಟ್ಟಾಗಿತ್ತು. ಜೊತೆಗೆ ಮನೆಯಲ್ಲಿದ್ದ ಹೋರಿಗೆ ಹೇಳಿ ಮಾಡಿಸಿದ ಹಂಗಿತ್ತು. ಈ ಕಾರಣಕ್ಕೇ ವ್ಯವಹಾರದಲ್ಲಿ ಚೌಕಾಶಿ ಮಾಡದೆ ಅದನ್ನು ತುಂಬಾ ಖುಷಿಯಿಂದ ಕೊಂಡಿದ್ದಾರೆ. ಆದರೆ ಅವರ ಆ ಖುಷಿ ತುಂಬಾ ದಿನ ಉಳಿಯಲಿಲ್ಲ. ಏಕೆಂದರೆ ಅದರ ಹೆಗಲಿಗೆ ನೊಗ ಬೀಳುತ್ತಲೇ ಮುಂದಕ್ಕೆ ಎಳೆಯುವುದರ ಬದಲು ಅದು ನಿಂತಲ್ಲೇ ದೊಪ್ಪಂತ ಮಲಗಿಬಿಡುತ್ತಿತ್ತು. ಹರಸಾಹಸ ಪಟ್ಟರೂ ಅದನ್ನು ಏಳಿಸಲಾಗುತ್ತಿರಲಿಲ್ಲ. ಕೊರಳಲ್ಲಿದ್ದ ನೊಗವನ್ನು ಬಿಚ್ಚಿದರೆ ಸಾಕು ಚಕ್ಕನೆ ಎಂತು ನಿಂತುಬಿಡುತ್ತಿತ್ತು. ಇದರಿಂದ ರೋಸಿ ಹೋದ ಅವರು ಇದು ಕಳ್ಳೆತ್ತು ಅಂತ ಗೊತ್ತಿದ್ದರೂ ದಲ್ಲಾಳಿಕಾಸಿನ ಆಸೆಗೆ ಮಾರುವವರ ಜೊತೆ ಸರೀಕಾಗಿ ನಮಗೆ ಮೋಸ ಮಾಡಿದ್ದಾನೆ ಅಂತ ಅವರು ನಿಂಗಪ್ಪನವರನ್ನು ನಿಲಾಕಿಕೊಂಡಿದ್ದರು. ಅಸಲಿಗೆ ಅದು ನಿಂಗಪ್ಪನಿಗೂ ಗೊತ್ತಿರಲಿಲ್ಲ. ಆ ಹೋರಿಯನ್ನು ಮಾರಿದ ಮನೆಯವರು ಅದನ್ನು ಗುಟ್ಟಾಗಿ ಇಟ್ಟು ಯಾಮಾರಿಸಿದ್ದರು.

ಇವರದ್ದು ಅರಳಿಮರದ ಪಾಳ್ಯ ಅನ್ನುವ ಹಳ್ಳಿ. ಇದನ್ನ ಅಲ್ಕೂರಯ್ಯನ ಪಾಳ್ಯ ಅಂತಾನೂ ಕರೆಯುವುದು ವಾಡಿಕೆ. ಇದು ನನ್ನ ಹಳ್ಳಿಯಿಂದ ತುಂಬಾ ಹತ್ತಿರದಲ್ಲಿದೆ. ಹಂಗೆ ನೋಡಿದರೆ ಈ ಹಳ್ಳಿಯ ಆಸುಪಾಸಿನಲ್ಲಿ ತಿತ್ತಿಗೊರವನಪಾಳ್ಯ, ನುಚ್ಚುಗಲ್ ಪಾಳ್ಯ, ಕಲ್ಲುಬಾವಿ ಪಾಳ್ಯ, ಕರೆಕಲ್ಲು ಪಾಳ್ಯ, ಗಂಟಿಗನ ಪಾಳ್ಯ ಮುಂತಾದ ವಿಶಿಷ್ಟ ಹೆಸರಿನ ಪುಟ್ಟ ಪುಟ್ಟ ಹಳ್ಳಿಗಳಿವೆ. ಅಂತೆಯೇ ಥರಾವರಿ ಜಾತಿಯ ಜನರು ಈ ಹಳ್ಳಿಗಳಲ್ಲಿದ್ದಾರೆ. ಈ ಹಳ್ಳಿಗರು ವಿಜಯನಗರ ಸಾಮ್ರಾಜ್ಯದ ರಕ್ಕಸತಂಗಡಿ ಯುದ್ಧದ ಸಮಯದಲ್ಲಿ ಇತ್ತ ವಲಸೆ ಬಂದವರು ಅಂತಾನೂ ಹೇಳುತ್ತಾರೆ. ಈ ನಿಂಗಪ್ಪನವರನ್ನು ಪಲ್ಟಿ ನಿಂಗಪ್ಪ ಅನ್ನುವ ಅಡ್ಡೆಸರಿನಿಂದಲೂ ಕರೆಯುತ್ತಿದ್ದರು. ಬಹಶಃ ಅವರ ಕಸುಬಿನಲ್ಲಿನ ನಿಪುಣತೆಯಿಂದಾಗಿ ಅಥವಾ ವ್ಯಾಪಾರದಲ್ಲಿ ಅಂಗೈ ಮುಂಗೈ ಮಾಡುತ್ತಿದ್ದ ಇಲ್ಲವೆ ಮುಂಗೈ ಅಂಗೈ ಮಾಡುತ್ತಿದ್ದ ಕಾರಣಕ್ಕೂ ಆ ಹೆಸರು ಬಂದಿರಬಹುದು. ಇವರು ದನಕರುಗಳ ವ್ಯಾಪಾರದಲ್ಲಿ ಎತ್ತಿದ ಕೈ. ಒಂದು ಒಳ್ಳೆಯ ರಾಸನ್ನು ಜರಿದು ಕಡಿಮೆ ಬೆಲೆಗೆ ಕೊಡಿಸುತ್ತಿದ್ದದ್ದು, ಹಂಗೇನೇ ಸುಮಾರಾದ ರಾಸೊಂದನ್ನು ಹೊಗಳಿ ಒಳ್ಳೆಯ ಬೆಲೆಗೆ ಬಿಕರಿ ಮಾಡಿಸುತ್ತಿದ್ದ ನಿಂಗಪ್ಪನವರದ್ದು ಸದಾ ನಗು ಮೊಗ. ಐದು ಅಡಿಗಿಂತ ಕೊಂಚ ಕಡಿಮೆ ಎತ್ತರದ, ಬಡಕಲು ಮೈಯ್ಯ, ಕುರುಚಲು ಗಡ್ಡ, ಸದಾ ಮಂಡಿಯುದ್ದದ ಪಟಾಪಟಿ ದೊಗಳೆ ಚೆಡ್ಡಿಯ ಈ ನಿಂಗಪ್ಪಗೆ ಪಂಚೆ ಅಥವಾ ಲುಂಗಿ ಇರುವುದು ಉಡುವುದಕ್ಕೆ ಅಂತ ಅನಿಸಿರಲಿಲ್ಲವೋ ಏನೋ. ಅದನ್ನು ಸದಾ ತಲೆಗೆ ರುಮಾಲಿನಂತೆ ಸುತ್ತಿಕೊಂಡಿರುತ್ತಿದ್ದರು. ಹಂಗಾಗಿ ಅದು ಅವರ ಪುಟ್ಟ ತಲೆಯ ಮೇಲೆ ಕೂತ ದಡಿ ಗುಪ್ಪೆಯಂತೆ ಕಾಣುತ್ತಿತ್ತು. ಎಡಗೈನ ಕಿರುಬೆರಳಿಗೆ ಬೀಡಿಯನ್ನು ಸಿಕ್ಕಿಸಿಕೊಂಡು ಭಂಗಿ ಸೊಪ್ಪು ಎಳೆಯುತ್ತಿರುವವರಂತೆ ತುಂಬಾ ನಾಜೂಕಾಗಿ ಬೀಡಿ ಸೇದುತ್ತಿದ್ದ ನಿಂಗಪ್ಪ ತುಟಿಯಲ್ಲಿ ಬೀಡಿ ಇಲ್ಲ ಅಂದರೆ ಬಾಯಲ್ಲಿ ಎಲೆ ಅಡಕೆಯಾದರೂ ಇರಲೇಬೇಕಿತ್ತು. ದೊಗಳೆಯ ಚೆಡ್ಡಿಯ ಎರಡೂ ಕಡೆಯ ಜೇಬುಗಳು ಬೀಡಿ ಕಟ್ಟು, ಬೆಂಕಿ ಪೆಟ್ಟಿಗೆ, ಎಲೆ ಅಡಕೆಗಳ ಚೀಲದಿಂದ ತುಂಬಿಕೊಂಡು ಜೋತು ಬಿದ್ದಿರುತ್ತಿದ್ದವು.

ಇಂಥ ನಿಂಗಪ್ಪ ಎಷ್ಟೇ ಪಲ್ಟಿ ಹೊಡೆದರೂ ಹೋರಿ ಕರುಗಳನ್ನು ಮಾರಿಸಲಾಗಲಿಲ್ಲ. ಒಂಟಿ ಹೋರಿಯನ್ನು ಮಾರಲು ಹಾಗೂ ಕೇಳಿದಷ್ಟಕ್ಕೆ ಕೊಡಲು ಅಯ್ಯ ತಯಾರಿರಲಿಲ್ಲ. ಹಂಗಾಗಿ ಅಯ್ಯ ಅವುಗಳನ್ನು ಮಾರುವ ಆಸೆಯನ್ನು ಅಲ್ಲಿಗೇ ಬಿಟ್ಟುಬಿಡ್ತು. ಬದಲಿಗೆ ಮಾಮೂಲಿ ಕೆಲಸಕ್ಕೆಂದೇ ಇದ್ದ ಎತ್ತುಗಳ ಜತೆಗಾಕಿಕೊಂಡು ಕೆಲಸ ಕಲಿಸಲಾರಂಭಿಸಿತು. ಆ ಎತ್ತುಗಳಿಗೆ ವಯಸ್ಸಾಗುತ್ತಲೇ ಅವುಗಳನ್ನು ಮಾರಿದರು. ಈ ಹೋರಿಗಳು ಅವುಗಳ ಸ್ಥಾನದಲ್ಲಿ ನಿಂತವು. ಮುಂದೆ ನಾನು ಎತ್ತಿನ ಗಾಡಿ ಹೊಡೆಯುವುದನ್ನು ಕಲಿತದ್ದು, ಅದರಲ್ಲಿ ಹೊಲಕ್ಕೆ ಮಣ್ಣು ಗೊಬ್ಬರಗಳನ್ನು ಹೊಡೆದದ್ದು ಈ ಜೋಡಿಯಲ್ಲೇ. ನೋಡಲು ಚೂಪು ಕೊಂಬುಗಳಿಂದ ಭಯ ಹುಟ್ಟಿಸುವಂತಿದ್ದರೂ ತುಂಬಾ ಸಾಧು ಪ್ರಾಣಿಗಳಾಗಿದ್ದ ಇವುಗಳನ್ನು ನಾನು ತುಂಬಾ ಹಚ್ಚಿಕೊಂಡಿದ್ದೆ. ಊರಲ್ಲಿ ಇರುವಷ್ಟು ದಿನ ಕಾರಬ್ಬ ಇನ್ನೇನು ಹತ್ತಿರ ಬಂತು ಅನ್ನುವಾಗ ಕೊಂಬು ಎರೆಯುವವನಿಂದ ನುಣ್ಣಗೆ ಕೊಂಬು ಎರೆಸುತ್ತಿದ್ದೆ. ಆ ಕಾಲದಲ್ಲಿ ಊರಿಗೆ ಬರುತ್ತಿದ್ದ ಸಾಬರ ಕೈಯ್ಯಿಂದ ಲಾಳ ಕಟ್ಟಿಸುತ್ತಿದ್ದೆ. ಕಾರಬ್ಬದ ದಿನ ಮಟ್ಟೆಯ ನಾರಿನಲ್ಲಿ ಚೆನ್ನಾಗಿ ಮೈಯ್ಯುಜ್ಜಿ, ಕೊಂಬುಗಳಿಗೆ ಬಣ್ಣ ಬಳಿದು, ಅವುಗಳ ತುದಿಗೆ ಕೋಡಣಸುಗಳನ್ನು ಹಾಕಿ, ಕೊರಳಿಗೆ ಕೊರಳ ಗಂಟೆಗಳನ್ನು ಕಟ್ಟಿ, ಜತೆಗೊಂದು ಹಾರವನ್ನು ಹಾಕಿ `ಹೋರಿ ಹೊರಡಿಸಿ’ಕೊಂಡು ಊರೊಳಕ್ಕೆ ಹೋಗುತ್ತಿದ್ದೆ. ಈ ಜೋಡಿಯೇ ನಮ್ಮ ಮನೆಯ ಕೊನೆಯ ಎತ್ತುಗಳಾದವು. ಮುಂದೆ ಅಯ್ಯ ಇನ್ಯಾವತ್ತು ಹೊಸ ಹೋರಿಗಳನ್ನು ಸಾಕುವ ಗೋಜಿಗೆ ಹೋಗಲಿಲ್ಲ. ಓದಿನ ಸಲುವಾಗಿ ನಾನು ಮೈಸೂರಿನತ್ತ ಹೋದೆ. ಅದೊಂದು ದಿನ ತೋಟದಲ್ಲಿ ಮೇಯಲು ಬಿಟ್ಟಿದ್ದಾಗ ಅದೇ ಹೀನ ಸುಳಿಯ ಎತ್ತಿಗೆ ಎಂಥದ್ದೋ ಹುಳ ಮುಟ್ಟಿ ಅಸುನೀಗಿತ್ತು. ಆಗ ಅಯ್ಯ ಅದನ್ನು ಕಲ್ಬಾವಿಯ ದಾರಿಯ ಪಟ್ಟೆಯ ದಾಯವೊಂದರಲ್ಲಿ ಹೂಳಿ ಅದರ ಗುಡ್ಡೆಯ ಮೇಲೆ ತೆಂಗಿನ ಸಸಿಯೊಂದನ್ನು ಇಟ್ಟಿತ್ತು. ಮತ್ತೊಂದು ಎತ್ತನ್ನು ಇದೇ ಪಲ್ಟಿ ನಿಂಗಪ್ಪ ಯಾರಿಗೋ ಮಾರಿಸಿದ್ದರು. ಹಂಗಂತ ಅಯ್ಯ ಬರೆದಿದ್ದ ಕಾಗದವೊಂದರಲ್ಲಿ ತಿಳಿಸಿತ್ತು. ಆ ಎತ್ತಿನ ಗುಡ್ಡೆಯ ಮೇಲಿಟ್ಟಿದ್ದ ಸಸಿ ಮರವಾಗಿ ಬೆಳೆದು ಹತ್ತಾರು ಗೊನೆಗಳನ್ನು ಹೊತ್ತು ನಿಲ್ಲುತ್ತಿತ್ತು. ಹಂಗಿದ್ದ ಮರ ಇದ್ದಕ್ಕಿದ್ದಂತೆ ಸಪ್ಪೆ ಮಾರೆ ಹಾಕಿಕೊಳ್ಳತೊಡಗಿತು. ಆಮೇಲೆ ಆ ಮರದ ಸುಳಿ ಒಣಗಿತು. ಅಗಾಇಗಾ ಅನ್ನುವುದರೊಳಗೆ ಸೋಗೆಗಳೆಲ್ಲಾ ಇಳಿಬಿದ್ದು ಮರಕ್ಕೆ ಆತುಕೊಂಡವು. ಇದು ಸುಳಿ ತಿನ್ನೋ ಹುಳದ್ದೇ ಕೆಲಸ ಅಂದರು. ಏನು ಮಾಡಿದರೂ ಅದು ಮತ್ತೆ ಚೇತರಿಸಿಕೊಳ್ಳಲಿಲ್ಲ. ನಾಲ್ಕು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಮರ ಗೋಣು ಮುರಿದುಕೊಂಡದ್ದಷ್ಟೇ ಅಲ್ಲ ಮರಕ್ಕೆ ಮರವೇ ಕೆಳಕ್ಕೆ ಬಿತ್ತು. ಕಣ್ಮುಂದೆಯೇ ಎದ್ದ ಮರವೊಂದು ಹಿಂಗೆ ಉಸಿರು ಚೆಲ್ಲಿತ್ತು. ಆ ದಾಯಕ್ಕೆ ಮತ್ತೆ ಯಾವ ಗಿಡವನ್ನೂ ಕಟ್ಟಲು ಮನಸಾಗದೆ ಹಾಗೇ ಬಿಟ್ಟಿದ್ದೇನೆ. ಕಲ್ಬಾವಿಯ ದಾರಿಯಲ್ಲಿ ನಡೆಯುವಾಗಲೆಲ್ಲಾ ಆ ಮರ, ಅದರ ತುಂಬು ಗೊನೆಗಳು, ಆ ಕಂದೆತ್ತು, ಅದರ ಸಾಧು ಸ್ವಭಾವ ಕಣ್ಣ ಮುಂದೆ ಬಂದು ನಿಲ್ಲುತ್ತವೆ.

(ಹಿಂದಿನ ಕಂತು: ಕಣಗಾಲ ಮತ್ತು ಕಳ್ಳರು)

About The Author

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ - 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ - 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ