ಅನಕೃ ಅವರ ಬರಹದ ಉದ್ದೇಶವು ಇಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಹಿಂದಿನ ಕಾಲದಿಂದ ನಂಬಿಕೊಂಡು ಬಂದ ಮೌಲ್ಯಗಳನ್ನು ಆಧುನಿಕ ಸಂದರ್ಭದಲ್ಲಿ ಅಳವಡಿಸಿಕೊಂಡು ಬಾಳುವ ವ್ಯಕ್ತಿಗಳು ಹೇಗಿರುತ್ತಾರೆ ಎಂಬ ಪ್ರಶ್ನೆಯನ್ನು ಅವರು ಎತ್ತಿಕೊಂಡಿದ್ದಾರೆ. ಅಂತಹ ಬಾಳನ್ನು ಬಾಳುವ ವ್ಯಕ್ತಿಗಳನ್ನು ಮತ್ತು ಅವರಿಗೆ ಎದುರಾಗುವ ಪ್ರತಿಕೂಲ ಸ್ವಭಾವದ ವ್ಯಕ್ತಿಗಳನ್ನು ಪಾತ್ರಗಳಾಗಿ ಇಟ್ಟುಕೊಂಡು, ಪರಸ್ಪರ ವಿರುದ್ಧ ಗುಣಗಳ ಸಂಘರ್ಷವನ್ನು ಚಿತ್ರಿಸಿ ಕೊನೆಗೆ ಒಳ್ಳೆಯದರ ಮುಂದೆ ಕೆಟ್ಟದ್ದು ಸೋಲುತ್ತದೆ ಎಂಬ ಶುಭಸಂದೇಶವನ್ನು ಸಾರುವ ಉಪಸಂಹಾರವನ್ನು ನೀಡಿದ್ದಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೊಂಭತ್ತನೆಯ ಬರಹ
ಅನಕೃ ಎಂಬ ಹೆಸರು ಕೇಳಿದರೆ ಸಾಕು ಕನ್ನಡಿಗರ ಮೈಮನಗಳಲ್ಲಿ ಮಿಂಚಿನ ಸಂಚಾರವಾಗುತ್ತದೆ. ಕನ್ನಡನಾಡಿನಲ್ಲಿ ಕನ್ನಡವು ಮೂಲೆಗುಂಪಾಗಿದ್ದ ಕಾಲದಲ್ಲಿ `ಕನ್ನಡ ಸಂಯುಕ್ತ ರಂಗ’ ಎಂಬ ಕನ್ನಡಪರ ಸಂಘಟನೆಯೊಂದನ್ನು ಕಟ್ಟಿ(1962) ಇಡೀ ನಾಡಿನಲ್ಲಿ ಸಂಚರಿಸಿ ಕನ್ನಡಾಭಿಮಾನ ಜಾಗೃತವಾಗುವಂತೆ ಮಾಡಿದ ಸುಳಿಮಿಂಚಿನಂತಹ ತೇಜಸ್ಸು ಅವರದು. “ಕನ್ನಡ ಪುಸ್ತಕಗಳನ್ನು ಓದೋಣ, ಕನ್ನಡ ಸಿನಿಮಾಗಳನ್ನು ನೋಡೋಣ, ಕನ್ನಡ ಹಾಡುಗಳನ್ನು ಕೇಳೋಣ, ಕನ್ನಡ ಭಾಷೆಯಲ್ಲಿ ಮಾತಾಡೋಣ” ಎಂಬ ಸಂದೇಶವನ್ನು ತಮ್ಮ ಸಿಂಹಕಂಠದಿಂದ ಸಾರಿ, ಮಲಗಿದ್ದ ಕನ್ನಡದ ಚೇತನವನ್ನು ಬಡಿದೆಬ್ಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜನರು ಆಸೆ ಪಟ್ಟು ಓದುವಂತೆ ಕಾದಂಬರಿಗಳನ್ನು ನಿರಂತರವಾಗಿ ಬರೆದು, `ಕಾದಂಬರಿ ಸಾರ್ವಭೌಮ’ ಎಂಬ ಹೆಸರು ಪಡೆದು, ಕನ್ನಡಿಗರಲ್ಲಿ ಓದುವ ಅಭಿರುಚಿ ಹುಟ್ಟಿಸಿದ್ದು ಮಾತ್ರವಲ್ಲದೆ, `ಜನರಿಗೆ ಪ್ರಿಯವಾಗುವಂತೆ ಕಾದಂಬರಿಗಳನ್ನು ಬರೆಯುವುದು ಹೇಗೆ?’ ಎಂಬುದನ್ನು ಕುರಿತು ಕಿರಿಯ ಲೇಖಕರಿಗೆ ಮೇಲ್ಪಂಕ್ತಿ ಹಾಕಿಕೊಟ್ಟ ಅತ್ಯಾಸಕ್ತ(ಪ್ಯಾಷನೇಟ್) ಕನ್ನಡ ಬರಹಗಾರರಿವರು. ಐವತ್ತೈದು ವರ್ಷಗಳ ಹಿಂದೆ ಕನ್ನಡಿಗರನ್ನು ಅವರು ಅಗಲಿ ಹೋದದ್ದು ಇದೇ ಜುಲೈ ತಿಂಗಳಿನಲ್ಲಿ(ಅನಕೃ ಜೀವಿತ ಕಾಲ 09-05-1908 ರಿಂದ 08-07-1971). ಅದಕ್ಕಾಗಿ, ಅವರ `ನರ-ಬಲಿ’ ಎಂಬ ಕಾದಂಬರಿಯ ವಿಮರ್ಶೆಯ ಮೂಲಕ ಅವರ ನೆನಪಿಗೆ ಸಲ್ಲಿಸುತ್ತಿರುವ ಗೌರವವಾಗಿದೆ ಈ ಅಂಕಣ.
*****
`ಗೃಹಲಕ್ಷ್ಮಿ’, `ಸಂಧ್ಯಾರಾಗ’, `ನಟ ಸಾರ್ವಭೌಮ’, `ನಗ್ನಸತ್ಯ’, `ಶನಿಸಂತಾನ’, `ಸಂಜೆಗತ್ತಲು’ … ಮುಂತಾದವು ಅ.ನ.ಕೃಷ್ಣರಾಯರ ಬಹು ಜನಪ್ರಿಯ ಕಾದಂಬರಿಗಳು. `ನರ-ಬಲಿ’ ಹಣವನ್ನು ಕುರಿತು ಮನುಷ್ಯನು ಯಾವ ದೃಷ್ಟಿ ಹೊಂದಿರಬೇಕು ಎಂಬುದನ್ನು ಕುರಿತು ಜಿಜ್ಞಾಸೆ ನಡೆಸುವ ಕಾದಂಬರಿ. ಇದು ಹೆಚ್ಚು ಜನಪ್ರಿಯವಲ್ಲದಿದ್ದರೂ ಇಂದಿಗೆ ಪ್ರಸ್ತುತ ಎಂಬ ದೃಷ್ಟಿಯಿಂದ ಇದನ್ನು ಇಲ್ಲಿ ಆಯ್ದುಕೊಳ್ಳಲಾಗಿದೆ.
*****
ಅ.ನ.ಕೃಷ್ಣರಾಯರ `ನರ-ಬಲಿ’ (ಮರು ಮುದ್ರಣ – 2004, ಸಾಗರ್ ಪ್ರಕಾಶನ, ಬೆಂಗಳೂರು) ಕಾದಂಬರಿ ಮೊದಲು ಪ್ರಕಟಗೊಂಡದ್ದು 1965ರಲ್ಲಿ. 176 ಪುಟಗಳ ಈ ಕೃತಿಯನ್ನು `ಸ್ಟ್ಯಾಂಡರ್ಡ್ ಬುಕ್ ಡಿಪೋ’ ಮಾಲಿಕರಾದ ಹೆಚ್.ಕಮಲನಾಥ್ ಅವರು ಪ್ರಕಟಿಸಿದ್ದರು.
ಆಧುನಿಕ ಕನ್ನಡ ಪ್ರಗತಿಶೀಲ ಸಾಹಿತ್ಯದ ನಿರ್ಮಾಪಕರಲ್ಲಿ ಒಬ್ಬರಾದ ಅನಕೃ `ಸಾಹಿತ್ಯವು ಕ್ರಾಂತಿಯ ಮೂಲಕ ಸಮಾಜವನ್ನು ಒಳಿತಿಗಾಗಿ ಬದಲಾಯಿಸುತ್ತದೆ’ ಎಂದು ಪ್ರಶ್ನಾತೀತವಾಗಿ ನಂಬಿದ್ದರು. ಅವರ ಈ ನಂಬಿಕೆಯ ಶಕ್ತಿಯು ಮನೋರಂಜಕವಾದ ನೆಲೆಯಲ್ಲಿ ಓದಿಸಿಕೊಂಡು ಹೋಗುವ ನೂರಾರು ಕಾದಂಬರಿಗಳನ್ನು ಅವರಿಂದ ಮತ್ತು ಅವರ ಸಹಲೇಖಕರಿಂದ ಬರೆಸಿತು. ಆದರೆ ಇದೇ ನಂಬಿಕೆಯು ತೆಳುವಾದ, ವಾಸ್ತವದ ಭದ್ರ ನೆಲೆಗಟ್ಟಿಲ್ಲದ ಕಪ್ಪು ಬಿಳುಪು ಪಾತ್ರಗಳನ್ನು ಸೃಷ್ಟಿಸಲು, ಹಾಗೂ `ಕೊನೆಗೆ ಎಲ್ಲವೂ ಶುಭವಾಗಿ ಅಂತ್ಯಗೊಳ್ಳುವ’ ಸಿನಿಮೀಯ ಕಥಾವಸ್ತುಗಳನ್ನು ಆಯ್ದುಕೊಳ್ಳಲು ಸಹ ದಾರಿ ಮಾಡಿತು. ಅನಕೃ ಅವರ `ನರ-ಬಲಿ’ ಕಾದಂಬರಿಯೂ ಇದಕ್ಕೆ ಹೊರತಲ್ಲ.
`ನರ-ಬಲಿ’ ಕಾದಂಬರಿಯ ಕಥಾವಸ್ತು ಸುಮಾರು ನೂರು ವರ್ಷ ಹಿಂದಿನದು. ತ್ಯಾಮಗೊಂಡ್ಲಿನಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹಂಪಯ್ಯ ಬರಗಾಲ, ಪ್ಲೇಗುಗಳು ಬಂದಾಗ ಜೀವನೋಪಾಯಕ್ಕಾಗಿ ಹೆಂಡತಿ ಮಕ್ಕಳೊಡನೆ ಬೆಂಗಳೂರಿಗೆ ಬಂದು, `ಹಳೆಯ ತರಗುಪೇಟೆಯಲ್ಲಿ ಒಂದು ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು ಸಣ್ಣ ಪ್ರಮಾಣದಲ್ಲಿ ಅಕ್ಕಿ ಬೇಳೆ ಮಂಡಿ ಪ್ರಾರಂಭಿಸಿದರು(ನರಬಲಿ, ಅನಕೃ, ಸಾಗರ ಪ್ರಕಾಶನ, ಪು.6). ಮುಂದೆ ವ್ಯಾಪಾರ ಕುದುರಿದಾಗ ತಮ್ಮ ಮಗ ಪಾಪಣ್ಣನಿಗೆ ಅಂಗಡಿಯ ಜವಾಬ್ದಾರಿಯನ್ನು ವಹಿಸಿಕೊಟ್ಟರು. ಕೆಲವು ವರ್ಷಗಳ ತರುವಾಯ `ಸಾಹುಕಾರ್ ಧರ್ಮಪ್ರಕಾಶ ಪಾಪಣ್ಣ’ ಎಂದು ಹೆಸರಾದ ಈ ವ್ಯಕ್ತಿಯೇ ಪ್ರಸ್ತುತ ಕಾದಂಬರಿಯ ಮುಖ್ಯ ಪಾತ್ರ.
ತಂದೆಯ ಬಗ್ಗೆ ಗೌರವವನ್ನೂ, ಅವರಂತೆ ಧರ್ಮಶ್ರದ್ಧೆಯನ್ನೂ ಇರಿಸಿಕೊಂಡಿದ್ದ ಪಾಪಣ್ಣನವರು ಉದಾರ ಮನಸ್ಸಿನವರಾಗಿದ್ದು, ತಮ್ಮ ಮಂಡಿಯಲ್ಲಿ ನಡೆಯುತ್ತಿದ್ದ ಯುಗಾದಿ, ಶ್ರೀರಾಮನವಮಿ ಮುಂತಾದ ಹಬ್ಬಗಳ ಸಂದರ್ಭದ ಉತ್ಸವಗಳ ಆಚರಣೆಯಲ್ಲಿ ಮುಂದಾಳತ್ವ ವಹಿಸುತ್ತಿದ್ದರು. ತಾವು ಗೌರವಿಸುತ್ತಿದ್ದ (ತ್ಯಾಮಗೊಂಡ್ಲಿನ) ಶಾಸ್ತ್ರಿಗಳು ಸಲಹೆ ನೀಡಿದಂತೆ ತಮ್ಮ ತಂದೆಯ ಹೆಸರಿನಲ್ಲಿ ಧರ್ಮಛತ್ರವೊಂದನ್ನು ತೆಗೆದರು. ಮುಂದೆ ಅದನ್ನು ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯವನ್ನಾಗಿ ವಿಸ್ತರಿಸಲಾಯಿತು. ಪಾಪಣ್ಣನವರು ತಮ್ಮ ಮಂಡಿಯ ಕೆಲಸಗಾರರನ್ನು ಪ್ರೀತಿಯಿಂದ ನೋಡುತ್ತ ಸದಾ ದಾನಧರ್ಮಗಳನ್ನು ಮಾಡುತ್ತ ಊರಿಗೆಲ್ಲ ಬೇಕಾದವರಾದರು. ಅವರು ತಮ್ಮ ಪತ್ನಿಯಾದ ಆಲಮ್ಮನವರನ್ನು ತಮ್ಮ ಗೃಹಲಕ್ಷ್ಮಿ ಎಂಬ ಭಾವದಿಂದ ಪ್ರೀತಿ ಗೌರವಗಳಿಂದ ನಡೆಸಿಕೊಳ್ಳುತ್ತಿದ್ದರು. ಈ ದಂಪತಿಗಳಿಗೆ ಲಕ್ಷ್ಮಯ್ಯ, ಸಿದ್ಧಯ್ಯ ಎಂಬ ಇಬ್ಬರು ಗಂಡುಮಕ್ಕಳು. ಮುಂದೆ ಪಾಪಣ್ಣನವರಲ್ಲಿ ಡ್ರೈವರಾಗಿ ಕೆಲಸಕ್ಕೆ ಸೇರಿದ ಶ್ರೀನಿವಾಸ ಅಥವಾ ಸೀನಪ್ಪ ಈ ಕಾದಂಬರಿಯಲ್ಲಿ ಬರುವ ವಿಶೇಷ ವ್ಯಕ್ತಿ. ಸ್ಥಿತಿವಂತನಲ್ಲದಿದ್ದರೂ ತನ್ನೂರಿನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ ದೈವಭಕ್ತ. ಸದಾ ಉತ್ತಮ ಗ್ರಂಥಗಳನ್ನು ಓದುವ ಅಭ್ಯಾಸವಿಟ್ಟುಕೊಂಡಿದ್ದ ಇವನು ತನ್ನ ಒಡನಾಡಿಗಳೊಂದಿಗೆ ಬಾಳಿನ ಸಾರ್ಥಕ್ಯದ ಬಗ್ಗೆ ಆಧ್ಯಾತ್ಮಿಕ ನೆಲೆಯಲ್ಲಿ ಚರ್ಚಿಸಬಲ್ಲವನಾಗಿದ್ದವನು.
ಪಾಪಣ್ಣ-ಆಲಮ್ಮರ ಹಿರಿಯ ಮಗ ಲಕ್ಷ್ಮಯ್ಯ ಸಾತ್ವಿಕ ಸ್ವಭಾವದವನಾಗಿದ್ದರೂ ಅವನಿಗೆ ವಿದ್ಯೆ ಹತ್ತಲಿಲ್ಲ. ಮಂಡಿ ವ್ಯಾಪಾರದ ಬಗೆಗೂ ಹೆಚ್ಚು ಆಸಕ್ತಿ ಇರಲಿಲ್ಲ. ಇವನ ತಮ್ಮ ಸಿದ್ಧಯ್ಯ ಶಾಲೆಯಲ್ಲಿ ಓದುತ್ತಿದ್ದನಾದರೂ ತುಂಬ ಅಹಂಕಾರಿ ಮತ್ತು ಒರಟು ಸ್ವಭಾವದವನಾಗಿದ್ದನು. ಬಿರುನುಡಿಗಳನ್ನಾಡಿ ತನ್ನ ಕುಟುಂಬದವರ ಮನಸ್ಸನ್ನು ನೋಯಿಸುತ್ತಿದ್ದನು.
ಸಾಹುಕಾರ್ ಪಾಪಣ್ಣನವರು ತಾವು ಮಾಡಿದ ವಿದ್ಯಾರ್ಥಿನಿಲಯ ನಿರ್ಮಾಣ, ತ್ಯಾಮಗೊಂಡ್ಲಿನ ದೇವಸ್ಥಾನದ ಜೀರ್ಣೋದ್ಧಾರ ಮುಂತಾದ ಧರ್ಮಕಾರ್ಯಗಳಿಂದ ಜನರ ಮನಸ್ಸನ್ನು ಮಾತ್ರವಲ್ಲದೆ, ನಾಡಿನ ದಿವಾನರು ಮತ್ತು ಮಹಾರಾಜರ ಮನಸ್ಸನ್ನು ಗೆಲ್ಲುತ್ತಾರೆ. ಮಹಾರಾಜರಿಂದ `ಧರ್ಮಪ್ರಕಾಶ’ ಎಂಬ ಬಿರುದನ್ನು ಪಡೆಯುತ್ತಾರೆ. ಲಕ್ಷ್ಮಯ್ಯ ಸಿದ್ಧಯ್ಯರಿಗೆ ಭದ್ರಮ್ಮ ಮತ್ತು ಹೊನ್ನಮ್ಮ ಎಂಬ ಹೆಣ್ಣುಮಕ್ಕಳೊಡನೆ ಮದುವೆಯಾಗುತ್ತದೆ. ಮುಂದೆ ಸಾಹುಕಾರ್ ಪಾಪಣ್ಣನವರು ಕಾಲವಾಗುವ ಸಮಯ ಬರುತ್ತದೆ. ತಾವು ಮಾಡುತ್ತಿದ್ದ ಜನಹಿತ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವಂತೆ, ತಮ್ಮ ತಾಯಿಯನ್ನು ಮತ್ತು ಮಂಡಿಯ ಕೆಲಸಗಾರರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಕ್ಕಳಿಗೆ ಹೇಳಿ ಅವರು ಕೊನೆಯುಸಿರೆಳೆಯುತ್ತಾರೆ.
ಮೊದಲೇ ಅಹಂಕಾರಿಯಾಗಿದ್ದ ಸಿದ್ಧಯ್ಯ ತನ್ನ ಭಾವ ಶಾಂತಪ್ಪನ ದುರ್ಭೋದೆಯನ್ನು ಕೇಳಿ ಕುಟುಂಬದ ಆಸ್ತಿಯನ್ನು ಪಾಲು ಮಾಡಿಸುತ್ತಾನೆ. ಲಕ್ಷ್ಮಯ್ಯ ತನ್ನ ಪಾಲಿಗೆ ಬಂದ ಆಸ್ತಿಗೆ ಅನುಗುಣವಾಗಿ ತನ್ನ ಕುಟುಂಬದೊಂದಿಗೆ ತ್ಯಾಮಗೊಂಡ್ಲಿಗೆ ಹೋಗಿ ಅಲ್ಲಿನ ಜಮೀನು ಮತ್ತು ದೇವಸ್ಥಾನಗಳನ್ನು ಅಭಿವೃದ್ಧಿ ಮಾಡುವುದರಲ್ಲಿ ನಿರತನಾಗುತ್ತಾನೆ. ತಂದೆಯ ಹೆಸರುಳಿಸುವ ಕಾರ್ಯಗಳನ್ನು ಮಾಡುವ ವ್ಯಕ್ತಿ ಇವನು. ಆದರೆ ಸಿದ್ಧಯ್ಯನು ಇದಕ್ಕೆ ವ್ಯತಿರಿಕ್ತ ವ್ಯಕ್ತಿ. ಅವನು ತಮ್ಮ ಮಂಡಿಯ ನಂಬಿಕಸ್ಥ ಮ್ಯಾನೇಜರ್ ಸೀತಾರಾಮಯ್ಯ, ಡ್ರೈವರ್ ಸೀನಪ್ಪ ಮುಂತಾದವರನ್ನು ಕೆಲಸದಿಂದ ತೆಗೆದುಹಾಕುವುದನ್ನು ಆಲಮ್ಮನವರು ನೋಡಿ ಕಣ್ಣೀರಿಡುವಂತಾಗುತ್ತದೆ.
ಶಾಂತಪ್ಪನೊಂದಿಗೆ ಸೇರಿ ಕುದುರೆಜೂಜು ಮುಂತಾದ ಕೆಟ್ಟ ಚಟಗಳಿಗೆ ಬಿದ್ದ ಸಿದ್ಧಯ್ಯ ಮಂಡಿಯ ವ್ಯಾಪಾರವನ್ನು ಹಾಳು ಮಾಡಿಕೊಂಡು ದಿವಾಳಿಯಾಗುವ ಪರಿಸ್ಥಿತಿ ತಂದುಕೊಳ್ಳುತ್ತಾನೆ. ಕೊನೆಗೆ ನಿರ್ವಾಹವಿಲ್ಲದೆ ತನ್ನ ತಪ್ಪನ್ನು ಅರಿತುಕೊಂಡು ತನ್ನ ತಾಯಿ, ಅಣ್ಣಂದಿರ ಕ್ಷಮೆ ಕೋರುತ್ತಾನೆ. ಮತ್ತೆ ಎಲ್ಲ ಮನಸ್ಸುಗಳೂ ಕೂಡುವುದರೊಂದಿಗೆ ಕಾದಂಬರಿ ಸುಖಾಂತ್ಯವಾಗುತ್ತದೆ.
*****
ಈ ಕಾದಂಬರಿಯನ್ನು ಬರೆಯುವಲ್ಲಿನ ತಮ್ಮ ಆಶಯವನ್ನು ಅನಕೃ ತಮ್ಮ ಮುನ್ನುಡಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ………
“ಒಂದು ಕಾಲದಲ್ಲಿ ನಮ್ಮ ತಂದೆ ತಾತಂದಿರು ಹೇಗೆ ಬಾಳಿದರು, ಅವರ ಆಶಯಗಳೇನು, ಅಭಿರುಚಿ ಎಂಥದು, ಅವರ ಜೀವನಮೌಲ್ಯಗಳು ಯಾವುವು ಎಂಬುದನ್ನರಿಯಲು ನಾವು ಆಶಿಸುತ್ತೇವೆ…… ಹಿರಿಯರ ಜೀವನದಿಂದ ನಮ್ಮ ಜೀವನಕ್ಕೆ ಅತ್ಯವಶ್ಯಕವಾದ ಧೃತಿ, ಬೆಳಕು, ಸತ್ತ್ವ ದೊರೆಯುವುದೇ ಎಂದು ನೋಡಬೇಕು.
………… ಆರ್ಥಿಕ ಭದ್ರತೆಯೇ ನೈತಿಕ ಮೌಲ್ಯಗಳ ಮೂಲಾಧಾರ ಎಂದು ಭಾವಿಸುವುದು ತಪ್ಪು. ಆರ್ಥಿಕ ಸಮೃದ್ಧಿ, ಅಪಗತಿಗಳಿಗಿಂತಲೂ ಹೆಚ್ಚಾಗಿ ಮನೋಧರ್ಮವನ್ನು ಈ ಸಮಸ್ಯೆ ಅವಲಂಬಿಸುತ್ತದೆ.
`ನರ-ಬಲಿ’ ಕಾದಂಬರಿಯಲ್ಲಿ ಆರ್ಥಿಕವಾಗಿ ತೀರ ವಿರುದ್ಧವಾದ ಎರಡು ಪಾತ್ರಗಳನ್ನು ತಂದಿದ್ದೇನೆ. ಸಾಹುಕಾರ್ ಪಾಪಣ್ಣನವರು-ಡ್ರೈವರ್ ಸೀನಪ್ಪ. ಇಬ್ಬರೂ ಒಂದೇ ಗುರಿಯತ್ತ ಸಾಗಿದ್ದಾರೆ; ಇಬ್ಬರೂ ಕಷ್ಟ ಸುಖಗಳನ್ನು ಧೀಮಂತರಂತೆ ಎದುರಿಸುತ್ತಾರೆ; ಅವರ ಸಮಾನಧರ್ಮ, ಅವರ ಸಾಮಾಜಿಕ ಸ್ಥಿತಿಯನ್ನು ಮೆಟ್ಟಿ ತಲೆಯೆತ್ತಿ ನಿಂತಿದೆ.
ಹಳೆಯ ಕಾಲದ ನಿಷ್ಕ್ರಮಣ, ಹೊಸ ಕಾಲದ ಉದಯಗಳ ಸಂಧಿಕಾಲದ ಸಾಮಾಜಿಕ ಚರಿತ್ರೆಯನ್ನು ನಾನು ಈ ಕಾದಂಬರಿಯ ವಸ್ತುವನ್ನಾಗಿ ಆರಿಸಿಕೊಂಡಿದ್ದೇನೆ. ಎತ್ತಿನ ಗಾಡಿ, ಅಜ್ಜಿಯ ಹಾಡು, ಕರೀ ನಿಲುವಂಗಿಗಳು ಮೋಟಾರುಕಾರು, ರೇಡಿಯೋ, ಸೂಟ್ಗಳಾಗಿ ಪರಿವರ್ತಿತವಾಗಿವೆ. ಆದರೆ ಇದೇ ಪ್ರಮಾಣದಲ್ಲಿ ನಮ್ಮ ಋಜುತ್ವ, ಔದಾರ್ಯ, ಸತ್ಯಾನುಸಂಧಾನ ಪ್ರಗತಿ ಹೊಂದಿವೆಯೇ?
ಇದರ ಮೂಲಕಾರಣ ಆಧುನಿಕ ಜೀವನ ವ್ಯಕ್ತಿಯನ್ನು ವ್ಯಕ್ತಿಯನ್ನಾಗಿಯೇ ಉಳಿಸುತ್ತದೆ. ಅವನು ತನ್ನ ಸುಖಕ್ಕೆ ಎಷ್ಟು ಜನ ಬೇಕೋ ಅಷ್ಟು ಜನರನ್ನು ಮಾತ್ರ ಸಂಗ್ರಹಿಸಿಕೊಳ್ಳುತ್ತಾನೆ. ಆದರೆ ಕೆಲವು ದಶಕಗಳ ಹಿಂದೆ ವ್ಯಕ್ತಿ ಸಮಷ್ಠಿಯ ಅಂಗವಾಗಿದ್ದ, ಅವನ ಊರು, ಅವನ ಹಳ್ಳಿ, ಅವನು ವಾಸಿಸುತ್ತಿದ್ದ ಬೀದಿ ಅವನ ಸಂಸಾರವಾಗಿತ್ತು. ತಮ್ಮ ಸುತ್ತಮುತ್ತಲಿನ, ಆಶ್ರಿತರ ಕಷ್ಟಸುಖ ತನ್ನದೆನ್ನುವ ಸಂಪ್ರದಾಯದಲ್ಲಿ ಹಿರಿಯರು ಬೆಳೆದಿದ್ದರು. ಈ ಮೌಲಿಕ ಜೀವನವನ್ನು ಇಂದು ಯಾವುದಾದರೊಂದು ಸ್ವರೂಪದಲ್ಲಿ ಪುನರುಜ್ಜೀವನಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಈ ಕಾದಂಬರಿಯಲ್ಲಿ ನಾನು ಎತ್ತಿದ್ದೇನೆ……”
ಅನಕೃ ಅವರ ಬರಹದ ಉದ್ದೇಶವು ಇಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಹಿಂದಿನ ಕಾಲದಿಂದ ನಂಬಿಕೊಂಡು ಬಂದ ಮೌಲ್ಯಗಳನ್ನು ಆಧುನಿಕ ಸಂದರ್ಭದಲ್ಲಿ ಅಳವಡಿಸಿಕೊಂಡು ಬಾಳುವ ವ್ಯಕ್ತಿಗಳು ಹೇಗಿರುತ್ತಾರೆ ಎಂಬ ಪ್ರಶ್ನೆಯನ್ನು ಅವರು ಎತ್ತಿಕೊಂಡಿದ್ದಾರೆ. ಅಂತಹ ಬಾಳನ್ನು ಬಾಳುವ ವ್ಯಕ್ತಿಗಳನ್ನು ಮತ್ತು ಅವರಿಗೆ ಎದುರಾಗುವ ಪ್ರತಿಕೂಲ ಸ್ವಭಾವದ ವ್ಯಕ್ತಿಗಳನ್ನು ಪಾತ್ರಗಳಾಗಿ ಇಟ್ಟುಕೊಂಡು, ಪರಸ್ಪರ ವಿರುದ್ಧ ಗುಣಗಳ ಸಂಘರ್ಷವನ್ನು ಚಿತ್ರಿಸಿ ಕೊನೆಗೆ ಒಳ್ಳೆಯದರ ಮುಂದೆ ಕೆಟ್ಟದ್ದು ಸೋಲುತ್ತದೆ ಎಂಬ ಶುಭಸಂದೇಶವನ್ನು ಸಾರುವ ಉಪಸಂಹಾರವನ್ನು ನೀಡಿದ್ದಾರೆ.
ಕಾದಂಬರಿಯಲ್ಲಿ ಬರುವ ಸನ್ನಿವೇಶವೊಂದು ಮೇಲಿನ ಮಾತುಗಳಿಗೆ ನಿದರ್ಶನವಾಗಿದೆ. ಈ ಮೊದಲೇ ಪ್ರಸ್ತಾಪಿಸಿದಂತೆ ಡ್ರೈವರ್ ಸೀನಪ್ಪ ಮಾರುತಿಯ ಮಹಾಭಕ್ತ. ಕೆಂಗೇರಿಯ ತನ್ನ ಜಮೀನಿನ ಪಕ್ಕದಲ್ಲಿರುವ ಮಾರುತಿ ದೇವರ ದೇವಸ್ಥಾನದಲ್ಲಿ ಪೋಕರಿಗಳು ಸೇರಿಕೊಂಡು ವಾತಾವರಣವನ್ನು ಕೆಡಿಸುತ್ತಿದ್ದಾಗ ಶ್ರೀನಿವಾಸನು ಆ ಕೆಟ್ಟ ಜನಗಳನ್ನು ಅಲ್ಲಿಂದ ಓಡಿಸಿ, ತನ್ನ ಸಂಪಾದನೆಯ ಬಹುಭಾಗವನ್ನು ವ್ಯಯಿಸಿ ಆ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ್ದನು. ಆ ದೇವರನ್ನು ಅವನು ಸದಾ ಭಕ್ತಿಯಿಂದ ಪೂಜಿಸುತ್ತ ಮನದಲ್ಲಿ ಧ್ಯಾನಿಸುತ್ತಿದ್ದನು. ಸಾಹುಕಾರ್ ಪಾಪಣ್ಣನವರ ಮನೆಯಲ್ಲಿ ಡ್ರೈವರಾಗಿ ಕೆಲಸಕ್ಕೆ ಸೇರಿದ ನಂತರ ಸಾಹುಕಾರರಿಗೆ ಅವರು ಮಾಡಿದ ದಾನಧರ್ಮದ ಕೆಲಸಕ್ಕಾಗಿ ಮೈಸೂರು ಮಹಾರಾಜರು ಧರ್ಮಪ್ರಕಾಶ ಎಂಬ ಬಿರುದು ಕೊಡುವುದಾಗಿ ಪ್ರಕಟಿಸುತ್ತಾರೆ. ಈ ಸಂದರ್ಭದಲ್ಲಿ ಮನೆಯವರೆಲ್ಲರನ್ನೂ ಮೈಸೂರಿಗೆ ಕರೆದುಕೊಂಡು ಹೋಗುವಾಗ ಶ್ರೀನಿವಾಸನು ಅವರನ್ನು ತನ್ನ ಮಾರುತಿ ದೇವಸ್ಥಾನಕ್ಕೂ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವನ ಭಕ್ತಿ ಮತ್ತು ಜನೋಪಕಾರಿ ಗುಣ ಸಾಹುಕಾರರಿಗೆ ಅರ್ಥವಾಗಿ ಶ್ರೀನಿವಾಸನನ್ನು ತುಂಬ ಮೆಚ್ಚಿಕೊಳ್ಳುತ್ತಾರೆ. ಇದೇ ಪ್ರಯಾಣದ ಮುಂದುವರಿದ ಭಾಗವಾಗಿ ಅವರೆಲ್ಲ ಬೇಲೂರಿಗೆ ಹೋದಾಗ ಕೊಂಚ ಬಿಡುವಿನ ಹೊತ್ತಿನಲ್ಲಿ ಶ್ರೀನಿವಾಸ ಮತ್ತು ಲಕ್ಷ್ಮಯ್ಯರ ಆತ್ಮಸಾಕ್ಷಾತ್ಕಾರವನ್ನು ಕುರಿತು ಒಂದು ಜಿಜ್ಞಾಸೆಯಾಗುತ್ತದೆ. “ಆತ್ಮದರ್ಶನ ಪಡೆದವರನ್ನು ಅವರ ನಡೆನುಡಿಯಿಂದ, ಅವರಲ್ಲಿ ಮೂರ್ತೀಭವಿಸಿದ ಶಾಂತಿಯಿಂದ ಗುರುತಿಸಬಹುದು. ಇಂಥವರು ಪ್ರಪಂಚದಲ್ಲಿದ್ದೂ ಅದರಿಂದ ದೂರವಿರತಕ್ಕವರು…… ಸತ್ಯಸಾಧನೆಗಾಗಿ ಪ್ರಪಂಚ ಬಿಟ್ಟು ಹೋಗಬೇಕಿಲ್ಲ, ಶ್ರೀರಾಮ ಶ್ರೀಕೃಷ್ಣ ಪ್ರಪಂಚ ತ್ಯಜಿಸಿ ಸನ್ಯಾಸಿಗಳಾದರೇ?” ಎಂಬ ಮಾತುಗಳನ್ನು ಶ್ರೀನಿವಾಸನ ಬಾಯಿಂದ ಕಾದಂಬರಿಕಾರರು ಆಡಿಸಿದ್ದಾರೆ(ನರಬಲಿ ಕಾದಂಬರಿ, ಅನಕೃ, ಸಾಗರ ಪ್ರಕಾಶನ ಬೆಂಗಳೂರು, ಪು.86-87). ತಾನು ಹೇಳುವ ಆದರ್ಶಗಳಿಗೆ ಸಾಹುಕಾರ್ ಪಾಪಣ್ಣ ಮತ್ತು ಆಲಮ್ಮನವರನ್ನು ಉದಾಹರಣೆಯೆಂದು ಅವನು ಭಾವಿಸುತ್ತಾನೆ. ಕಾದಂಬರಿಕಾರರ ಪ್ರಕಾರ ಸ್ವತಃ ಸೀನಪ್ಪನೂ ಈ ಆದರ್ಶದ ಪ್ರತಿರೂಪವೇ.
*****
ಹೀಗೆ ಅನಕೃ ಅವರು `ನರ-ಬಲಿ’ ಕಾದಂಬರಿಯಲ್ಲಿ ಸ್ವತಃ ತಾನು ಬಡವನಾಗಿರಲಿ, ಶ್ರೀಮಂತನಾಗಿರಲಿ, ಇಡೀ ಸಮುದಾಯವನ್ನೇ ತನ್ನದೆಂದು ಭಾವಿಸಿ ಪರೋಪಕಾರ ಮಾಡುತ್ತ ಬದುಕುವ ಮನುಷ್ಯನನ್ನು ಆದರ್ಶವ್ಯಕ್ತಿಯೆಂದು ತೋರಿದ್ದಾರೆ. ಈ ಆದರ್ಶವನ್ನು ಮರೆತು ಆಧುನಿಕತೆಯ ಥಳುಕಿಗೆ ಮನಸೋತು ಮನುಷ್ಯ ತನ್ನನ್ನು ತಾನು ಸ್ವಾರ್ಥಕ್ಕೆ ಬಲಿಯಾಗಿಸುತ್ತಿದ್ದಾನೆ, ಹೀಗಾಗುವುದನ್ನು ತಪ್ಪಿಸಬೇಕು ಎಂಬ ಆಶಯ ಈ ಕಾದಂಬರಿಯದು. ಸೇವೆಯಲ್ಲಿ ಆತ್ಮಸಾಕ್ಷಾತ್ಕಾರವನ್ನು ಕಾಣುವುದು ಇಲ್ಲಿನ ಮೌಲ್ಯವಾಗಿದೆ.
ಈ ಕಾದಂಬರಿಯ ಅಂತ್ಯದಲ್ಲಿ ತೋರಿಸಿರುವ ಸಿದ್ದಣ್ಣನ ಶೀಘ್ರ ಪರಿವರ್ತನೆಯು ವಾಸ್ತವಿಕವೆನ್ನಿಸುವುದಿಲ್ಲ. ತಾನು ಮಾಡಿಕೊಂಡ ಅಚಾತುರ್ಯಗಳಿಂದ ತಾತ್ಕಾಲಿಕವಾಗಿ ಮೆತ್ತಗಾಗಿ ಅಮ್ಮ, ಅಣ್ಣಂದಿರಿಗೆ ಅವನು ಶರಣಾಗಿರಲಿಕ್ಕೂ ಸಾಕು. ಅವನೊಳಗಿನ ಸ್ವಾರ್ಥದ ಸರ್ಪ ಮತ್ತೆ ಹೆಡೆಯೆತ್ತಬಹುದು. ವ್ಯಕ್ತಿಯೊಳಗಿನ ಅಥವಾ ಬದುಕಿನೊಳಗಿನ ಕೇಡು ಅಷ್ಟು ಸುಲಭವಾಗಿ ಮರೆಯಾಗಿಬಿಡುವುದಿಲ್ಲ. ಈ ವಿಷಯವನ್ನು ಕುರಿತು ಅನಕೃ ಅವರು ಎಚ್ಚರ ವಹಿಸಿದ್ದರೆ ಕಾದಂಬರಿಯಲ್ಲಿನ ಜೀವನಮೌಲ್ಯಗಳ ಶೋಧ ಗಾಢವಾಗುತ್ತಿತ್ತು. ಆದರೆ ತಮ್ಮ ಸಾಹಿತ್ಯ ಚಳುವಳಿಯ ಮಿತಿಗಳು ಈ ಕಾದಂಬರಿಕಾರರನ್ನು ಹೀಗೆ ಮಾಡದಂತೆ ತಡೆದವು.

ಅನಕೃ ಅವರನ್ನು ನೆನಪಿಸಿಕೊಳ್ಳಬೇಕಾದ ಈ ತಿಂಗಳಲ್ಲಿ, ಜೀವನ ಮೌಲ್ಯಗಳನ್ನು ಕುರಿತ ಈ ಕಾದಂಬರಿಯ ಓದು ನಮ್ಮ ಸಮಕಾಲೀನ ಲೋಕವನ್ನೂ ಹೊಸ ಕಣ್ಣುಗಳಿಂದ ನೋಡಲು ಸಾಧ್ಯವಾಗಿಸಲಿ ಎಂಬುದು ಈ ಲೇಖಕಿಯ ಹಾರೈಕೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

