ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಅರವಿಂದ ಬರೆದ ಎರಡು ಕವಿತೆಗಳು .
ಮಳೆಯನ್ನ ಹುಟ್ಟೂ ಎಂದೂ ಕರೆಯಬಹುದು
ಸ್ಥಿತಿ ಎಂಬುದು ಒಂದು ನಿಯಮ
ಸ್ಥಿತಿಯೇ ಬದುಕಿನ ಸಹಜ ಸಾವಧಾನ ಕ್ರಿಯೆ.
ಕಡೆಗೆ ಒಂದು ಧೀನ ನೋಟದಲ್ಲಿ ಎರಡು ದೃಷ್ಟಿಯಾಗಿ ಸೇರಿ ಬೆಳೆದೂ ಬೆಳೆದೂ ಕ್ಷಣಮಾತ್ರಕ್ಕೆ ತಿಳಿಯದಾಗಿ ಕ್ಷಣವೇ ಅಳಿದುಹೋಗಿ ಹುಟ್ಟು ಸಂಭವಿಸಿತು…….
“ಅ
ಛೆ
ಪಾಪ
ಅಯ್ಯೋ
ಮುಂದೇನು
ಪುನರಪಿ ಜನನ
ಮತ್ತೇನೋ ಇದೆ”
… ಮತ್ತದೇನನ್ನೋ ಪಡೆವ ಬಗೆ ಸುಲುಭವಲ್ಲ ಜೀವ ಸುಲಭವಲ್ಲ ಮಾಕಾಹಳ್ಳಿಯ ಬೀದಿಗುಂಟ ನಡೆದಂತಲ್ಲ
ಎಂದಾಗಲೆ….
ಯಃಕಶ್ಚಿತ್ ನೀನು
ಬಯಲಲ್ಲಿ ಮಂಡೆ ಸುಡುವ ಬಂಡೆಯ
ಬಿಸಿಲಲ್ಲಿ ಕುಳಿತು ನಕ್ಷತ್ರಗಳ ಲೆಕ್ಕ
ಧೃವ ಕರೀತಾನೆ
ಬೋಧಿ ಮರ ಪಕ್ಕದಲ್ಲೆ ಶಿಲುಬೆ
ಎದುರಿಗೇ ಕೂತವ ಮಹಾಭೂಪ
ಅಮೃತ ಶಿಲಾ ವಿಕಾಸಕ್ಕೆ
ಮೇಕೊಡೆಯುವ ಚಿಂತೆ
ಗುರುತ್ವಾಕರ್ಷಣೆಯು ಸಹಜ ಇದೆ
ವಿಕರ್ಷಣೆ? ಹತ್ತು ಮೀರಿ ಹನ್ನೊಂ
ದರ ವೇಗ, ನನ್ನದೇ ಕೃತ್ಯ
ಸತ್ಯ ಧೃವ ನನ್ನವನು
….ಆಗ ಅದೇ ಮಾಕಹಲ್ಲಿಯ ದಾರಿಗುಂಟ ನಡೆದಾಗ ದಕ್ಕಿದ್ದಿದು ಪಡೆದಿದ್ದಿದುಇದನ್ನೇ ನಾ ಮಳೆ ಅಂದದ್ದು…..
“ಕಲ್ಲಿನ ರಥ, ಭೂತವನ್ನು ಕಟ್ಟೋ ಶೃಂಗಾರ
ಗೆದ್ದಲು ಎಂದೋ ತಿಂದ ಶವಕ್ಕೆ ಸುಗಂದ ಪೂ
ಸಿ ಕೂರಿಸಿ
ಉಘೇ ಉಘೇ
ಕೂಗುತ್ತಾ ಕೂಗುತ್ತಾ ಕೈ ಕಟ್ಟಿ ಕೂತಾಗ
ನೆರಲನ್ನೆ ಕೆತ್ತೊ ಉಮೇದು ಅದರಿಂದ ಶಿಲಾ
ಬಾಲೆ ಅದರೊಡೆನೆ ಸಂಭೋಗ, ಸ್ವಪ್ನ ಸ್ಖಲನದ
ಸಂತೃಪ್ತಿ”
…….ಆದ್ದರಿಂದ ಇಷ್ಟೆಲ್ಲಾ ಆದಮೇಲೆ…..
“ವೃತ್ತಾಕಾರದ ಚಲನೆ
ಆಸಕ್ತಿ ಅಥವ ಧ್ಯೇಯ?
ಕೇಂದ್ರ ತ್ಯಾಗಿ ಹಾಗು ಕೇಂದ್ರಾಭಿಗಾಮಿಯ ನಡುವೆ
ಹಗ್ಗ ಜಗ್ಗಾಟ
ಕೊನೆ ಶುಭಂ.”
ಕ್ಷಮಿಸಿ, ಹೆಸರಿಡಲಾಗದಿದ್ದಕ್ಕೆ
ಆಗ
ನಾ
ಚಿಕ್ಕವನಿರಬೇಕಾಗಿದ್ದಾಗ
ನನಗೆ
ಜೂಟಾಟ ಮತ್ತು ಕಣ್ಣಾಮುಚ್ಛಾಲೆ
ಬಾಳಾ ಇಷ್ಟ
ಕಾರಣ ಒಂದರಲ್ಲಿ
ನಾನು
ಸದಾ ಮತ್ತೊಂದಕ್ಕಾಗಿ ಓಡುತ್ತಲೇ ಇರುತ್ತೇನೆ
ಮತ್ತೊಂದರಲ್ಲಿ ಕಣ್ಣಿಗೆ ಕಟ್ಟಿಕೊಂಡು
ನಾನು
ತಡಕಾಡುತ್ತಿರುತ್ತೇನೆ….
ಈಗ
ನಾ
ದೊಡ್ಡವನಾಗಿರಬೇಕಾಗಿದ್ದಾಗ
ನನಗೆ
ಎರಡು ಸಂಗತಿಗಳು ಅರ್ಥವಾಗಲಿಲ್ಲ
ಒಂದು
ಸ್ನಾತಕೋತ್ತರ ಪದವೀಧರರ ಸ್ವಾಗತ ಸಮಾರಂಭ
ಮತ್ತೊಂದು
ರಕ್ಷಾಬಂಧನ….
ನಾವು
ನಿಮಗಾಗಿ ಏರ್ಪಡಿಸಿದ ಸಮಾರಂಭ ಸ್ವಾಗತ
ಸ್ವಾಗತ ಸಮಾರಂಭಕ್ಕೆ ಆಹ್ವಾನಿಸಲೆಂದು
ನಾ
ಮತ್ತು
ನಾ
ಮಾತ್ರ
ಹೋದದ್ದಕ್ಕೆ, ಆಹ್ವಾನಿಸಲು ಉಳಿದವರನ್ನು
ನಾನು
ಕರೆಯಲಿಲ್ಲೆಂದು ಗೋಳಾಡಿದರು
ಅಂದು ನಾನು
ನಮ್ಮ ಪರಿಚಯ ಮಾಡಿಕೊಂಡೆವು
ನಾನು
ನನ್ನ ಹೆಸರು
ಊರು ಮಾಕಾಹಳ್ಳಿ
ಸಮಾರಂಭ
ಮುಗಿಯಿತು
ತಿಂಡಿ ತಿಂದು ಕಾಫಿ ಕುಡಿದು ಹೋದರು
ಒಂದು ಮುಗಿಯಿತು ಆದ್ದರಿಂದ ಮತ್ತೊಂದು
ನನಗೆ
ಅಕ್ಕಾ ತಂಗಿ ಯಾರೂ ಇಲ್ಲ
ನಾನು
ಸಾಮಾನ್ಯ ಒಂಟಿ
ಆದರೆ ಮೊನ್ನೆ ರಕ್ಷಾಬಂಧನದ ದಿನ
ಅದೆಲ್ಲೋ ದೂರದ ಊರಿಂದ
ಯಾರೋ ಕಾಣದ ಮುಖದಿಂದ
ಬಂದ ಒಂದು
ರಕ್ಷಾಬಂಧನ
ಕೈ ಅನ್ನು ಅಲಂಕರಿಸಿತು…
ನನಗೆ
ಮೋಹ
ಅವಳಿಗೆ
ಒಲವು
ಸದಾ
ಅರ್ಥಗಳ ನಿರರ್ಥಕತೆಯ ಸುಳಿಯಲ್ಲೋ
ಶೋಧದಲ್ಲೋ
ಅಥವ ಸಾರ್ಥಕತೆಯ ಹಂಬಲದಲ್ಲೊ
ಆದ್ದರಿಂದ
ನನಗೆ
ಎರಡೂ
ಅರ್ಥ
ಆಗಲೇ
ಇಲ್ಲ
(ಚಿತ್ರ: ರೂಪಶ್ರೀ)
ಅರವಿಂದ ಮೂಲತಃ ಚಿಕ್ಕಬಳ್ಳಾಪುರದ ಮಾವಿನಕಾಯನಹಳ್ಳಿಯವರು.ಈಗ ಬೆಂಗಳೂರಿನ ರಾಮನ್ ರಿಸರ್ಚ್ ಇನ್ಸ್ಟಿ ಟ್ಯೂಟ್ ನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ತಾರ್ಕಿಕವಾಗಿ ಉತ್ತರಿಸಲಾಗದ ಪ್ರಶ್ನೆಗಳು ಎದುರಾದಾಗ ಕಾವ್ಯದ ಮೊರೆ ಹೋಗುತ್ತಾರೆ