ಈಗ ಬದುಕಿನ ಈ ಹಂತದಲ್ಲಿ ಅವರ ಕಾಳಜಿ ಒಂದೇ. ಬದುಕಿನುದ್ದಕ್ಕೂ ತಮ್ಮ ತಂಗಿಯರ ಬದುಕನ್ನು ದಡ ಹತ್ತಿಸಲು ಕಳೆದಾಗಿದೆ. ಅವರೆಲ್ಲ ತನ್ನನ್ನು ಪ್ರೀತಿಯಿಂದ ನೋಡಿಕೊಂಡರೂ ಸಹ ಈಗ ತನ್ನದೇ ಒಂದು ನೆಲೆ ಬೇಕೆನ್ನಿಸಿದೆ. ತನಗೆ ನಾಲ್ಕು ಗೋಡೆ, ಒಂದು ತಾರಸಿಯಾದರೂ ಇರುವ ಮನೆ ಕಟ್ಟಿಕೊಂಡು ಉಳಿದ ಬದುಕನ್ನು ಒಬ್ಬಳೇ ಕಳೆಯಲು ಒಂದು ಸೈಟು ಬೇಕು, ಅಷ್ಟೇ. ಅಸಂಖ್ಯಾತ ವಿದ್ಯಾರ್ಥಿಗಳು, ಸಾಹಿತ್ಯ ವಲಯದ ಹಲವಾರು ಆಪ್ತರು, ಭೋಪರಾಕ್ ಹೇಳುತ್ತಿರುವ ಅಪಾರವಾದ ಸ್ನೇಹಿತರ ಬಳಗ… ಇಷ್ಟೆಲ್ಲ ಇದ್ದು ಸುಮಾರು ಎಪ್ಪತ್ತರ ದಶಕದ ವಯಸ್ಸಿನ ಆಕೆ ಹೀಗೆ ಬಹಿರಂಗವಾಗಿ ಹೇಳಿಕೊಳ್ಳಬೇಕಾಯಿತೆ? ಕಣ್ಣೀರು ತಡೆಯಲಾಗದೆ ಎದ್ದು ಓಡಿಯೇ ಬಿಟ್ಟೆ!
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೊಂಭತ್ತನೆಯ ಬರಹ
ಓದಲು ಹೊರಗೆ ಹೋದ ಮೇಲೆ, ಸ್ವಲ್ಪ ಮಟ್ಟಿದಾದರೂ ಇಂಗ್ಲಿಷ್ ಕಲಿತ ಮೇಲೆ, ನನಗೆ ಮೆಲೋಡ್ರಾಮ ಎಂಬ ಪದ ಸಿಕ್ಕಾಪಟ್ಟೆ ಇಷ್ಟವಾಗಿತ್ತು.
ಬದುಕಿನುದ್ದಕ್ಕೂ ‘ನೀನು ಹೆಣ್ಣು’ ಎಂಬ ವಾಕ್ಯವನ್ನು ದಿನಕ್ಕೆ ಇಪ್ಪತ್ತೈದು ಸಲವಾದರೂ ಕೇಳಿ ಕೇಳಿ ರೋಸಿಹೋಗಿತ್ತು. ‘ನಿಕ್ಕರ್ ಹಾಕ್ಬೇಡ, ಕೂತಾಗ ಕಾಲು ಜೋಡಿಸಿರಲಿ, ನಿಂತ್ಕೊಂಡು ಸುಸು ಮಾಡ್ಬೇಡ, ಬುಗುರಿ, ಚಿಣ್ಣಿದಾಂಡು ಆಡ್ಬೇಡ… ನೀನು ಹೆಣ್ಣು ಹುಡುಗಿ’ ಎಂದು ಪ್ರಾರಂಭವಾಗಿದ್ದು ‘ಈಗ ಹೆಣ್ಣಾಗಿದೀಯ, ದಾವಣಿ ಉಟ್ಕೋ, ಸೆರಗಿನ ಮೇಲೆ ಗಮನವಿರಲಿ, ಅಡಿಗೆ ಮಾಡೋದನ್ನ ಕಲಿ, ತಲೆ ತಗ್ಗಿಸಿ ನಡೆಯೋದನ್ನ ಕಲಿ, …’
ಅಯ್ಯೋ, ಅಯ್ಯೋ, ಕರ್ಮವೇ!
ಮಾತೆತ್ತಿದರೆ ಉಪದೇಶ ಮಾಡುತ್ತಿದ್ದ ಮನೆಯಲ್ಲಿದ್ದ ಎಲ್ಲ ಹಿರಿಯ ಹೆಂಗಸರ ಮೇಲೆ ‘ಅದೇನು ಗೋಳು ನಿಮ್ದು! ಮನೆಯಲ್ಲಾಗಲಿ, ಬೀದಿಯಲ್ಲಾಗಲಿ, ಅರೆಗಳಿಗೆಗೂ ನನ್ನ ದೇಹವನ್ನ ಮರೆತು ಇರಲು ಸಾಧ್ಯವೇ ಇಲ್ಲವಲ್ಲ!’ ಎಂದು ದಬಾಯಿಸಬೇಕು ಅಂತನ್ನಿಸುತ್ತಿತ್ತು. ‘ಅಯ್ಯೋ, ಹೆಣ್ಣಿನ ಜನ್ಮ ನಿಂಗೆ ಗೊತ್ತಿಲ್ಲ. ಮುಳ್ಳೇ ಸೀರೆಯ ಮೇಲೆ ಬಿದ್ರೂ ಹರಿಯೋದು ಸೀರೇನೇ ತಾನೇ?’ ಎಂದು ಇನ್ನಷ್ಟು ಗೋಳ್ಗರೆಯುತ್ತಿದ್ರು.
ಗೋಳ್ರಾಣಿ -1, ಗೋಳ್ರಾಣಿ -2, ಗೋಳ್ರಾಣಿ-3… ಹೀಗೆ ಅವರಿಗೆಲ್ಲ ಹೆಸರಿಟ್ಟು, ಬೈದಾಗೆಲ್ಲ ಆ ಹೆಸರಿಡಿದು ಗೊಣಗಿಕೊಳ್ಳುತ್ತಿದ್ದೆ. ಬಸಕ್ಕಯ್ಯನಿಗೆ ಹೀಗೊಮ್ಮೆ ಗೊಣಗಿದಾದ ‘ಏನಂದೆ? ಏನೋ ರಾಣಿ ಅಂದ್ಯಲ್ಲ?’ ಎಂದು ಇಷ್ಟಗಲ ಕಣ್ಣು ಬಿಟ್ಟು ಕೇಳಿದ್ದರು. ‘ನಾನೇನಂದೆ? ಅಲ್ಲೊಂದು ಹಾವರಾಣಿ ಕಾಣಿಸ್ತು ಅಂದೆ!’ ಅಂತ ಹಿತ್ತಲಿನ ಕಡೆಗೆ ಕೈ ತೋರಿಸಿ ಯಾಮಾರಿಸಿದಾಗ, ನಂಬಬೇಕಾ ಎಂದು ಅವರ ಕಣ್ಣುಗಳು ಕೇಳಿದಂತಿದ್ದವು.
ಮೌಖಿಕ ಸಂಸ್ಕೃತಿಯಲ್ಲಿ ಕಥನಿಸುವ ಕಲೆಗೆ ಭಾವಾತಿರೇಕ ಒಂದು ಪ್ರಧಾನ ಗುಣವಾಗಿಬಿಡುತ್ತದೆ. ದನಿಯ ಏರಿಳಿತ, ಅಭಿನಯ, ಅತಿರೇಕ ಎಲ್ಲವೂ ಬದುಕನ್ನು ನೋಡುವ ದೃಷ್ಟಿಯಾಗಿಬಿಡುತ್ತವೆ. ಮೊದಮೊದಲು ಹರಿಕಥೆ ದಾಸರ ಅಭಿನಯ ನೋಡಿ ನೋಡಿ ಆಮೇಲೆ ಟೆಂಟ್ ಸಿನಿಮಾದಲ್ಲಿ ಸಹ ಅದೇ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಂಡಿತ್ತು ಅಷ್ಟೆ. ಅದು ಆಗ ಹೊಳೆದಿರಲಿಲ್ಲ. ನಂತರದ ವಿದ್ಯಾಭ್ಯಾಸದ ವರ್ಷಗಳಲ್ಲಿ ಹೊಳೆದ ಸತ್ಯ. ಆ ಕಾರಣಕ್ಕೆಯೇ ನಮ್ಮ ಚಲನಚಿತ್ರಗಳು ಸುತಾರಾಂ ಬೇರೆಯೇ! ಇವತ್ತಿಗೂ! ತಂತ್ರ ಪಾಶ್ಚಾತ್ಯವಿರಬಹುದು. ಕಥನಿಸುವ ರೀತಿ ಮಾತ್ರ ಅಪ್ಪರಾಣೆ ನಮ್ಮದೇ!
ಆ ಊರಿನ ಟೆಂಟಿನಲ್ಲಿ ನೋಡುತ್ತಿದ್ದ ಕನ್ನಡ ಚಿತ್ರಗಳಲ್ಲಿ ಅದೆಂಥ ಪ್ರಚಂಡ ಗೋಳು! ಹೆಂಗಸರ ಸೀರೆ ಸೆರಗಿಗೆ ಬಿಡುವೇ ಇರುತ್ತಿರಲಿಲ್ಲ. ಚಿತ್ರ ಮುಗಿದ ಮೇಲೆ ತುದಿಯನ್ನು ಹಿಂಡಿದರೆ ಒಂದು ಲೋಟವಾದರೂ ಉಪ್ಪುನೀರು ಸಿಕ್ಕುತ್ತದೆ ಅಂತನ್ನಿಸಿ ನಗು ಬರುತ್ತಿತ್ತು. ಅಲ್ಲಿ ನಾಯಕಿ ಗೊಳೋ ಎನ್ನುತ್ತಿದ್ದರೆ ಇತ್ತ ನಾನು ಪರದೆಯಿಂದ ಕಣ್ಣು ಕಿತ್ತು ಸುತ್ತಮುತ್ತಲಿನವರನ್ನ ನೋಡುತ್ತಿದ್ದೆ. ಸಖತ್ ಮಜಾ ಅಂತನ್ನಿಸುತ್ತಿತ್ತು. ಒಮ್ಮೆ ಗಮನಿಸಿದ ವಿಶಾಲಮ್ಮ ತಲೆಯ ಮೇಲೆ ಮೊಟಕಿದ್ದರು.
ಈ ಗೋಳ್-ಕಥೆಗಳು ನಮ್ಮ ಭಾವಶಿಲ್ಪವನ್ನೇ ಕಡೆದುಬಿಟ್ಟವು ಅಂತನ್ನಿಸುತ್ತೆ. ನಮಗೆ ರಾಮಾಯಣ ಕಥೆ ಹೇಳಲು ಮೇಷ್ಟರು ಪ್ರಾರಂಭಿಸಿದ್ದು ಎರಡನೆಯ ತರಗತಿಯಲ್ಲಿ. ವಾರಕ್ಕೊಂದು ದಿನ ಸ್ವಲ್ಪ ಹರವಾದ ಕ್ಲಾಸುರೂಮಿನಲ್ಲಿ ಆ ಕಥೆ ನಡೆಯುತ್ತಿತ್ತು . ದೊಡ್ಡ ತರಗತಿಗಳ ಮಕ್ಕಳು ಸಹ ಬಂದು ನೆರೆಯುತ್ತಿದ್ದರು. ಕಥೆ ಹೇಳ ಹೇಳುತ್ತಾ ಮೇಷ್ಟರ ಕಣ್ಣಿನಲ್ಲಿ ನೀರೂರುತ್ತಿತ್ತು. ಇನ್ನು ಮಕ್ಕಳ ಪಾಡು ಕೇಳಬೇಕೆ? ಹುಡುಗಿಯರು ಲಂಗ, ಸ್ಕರ್ಟುಗಳ ಅಂಚಿನಿಂದ ಕಣ್ಣೊತ್ತಿಕೊಂಡರೆ ಹುಡುಗರು ಹೊಟ್ಟೆ ಕಾಣಿಸುವಂತೆ ಶರಟನ್ನು ಮೇಲಕ್ಕೆತ್ತಿ ಕಣ್ಣೊತ್ತಿಕೊಳ್ಳುತ್ತಿದ್ದರು.
ಅಷ್ಟೊತ್ತಿಗೆ ತ್ರಿವೇಣಿ ಕಾದಂಬರಿಗಳನ್ನು ಓದುತ್ತಿದ್ದ ನನಗೆ ಕೇವಲ ಕುತೂಹಲ. ರಾಮಾಯಣದ ರಾಮಾಯಣ ನನ್ನ ಕಣ್ಣಲ್ಲಿ ನೀರನ್ನೇನೂ ಬರಿಸಲಿಲ್ಲ ಎಂಬ ನೆನಪು. ಅಸ್ಪಷ್ಟವಾಗಿ ಕೋಪ ಬಂದಂತೆ ಅನ್ನಿಸಿತ್ತು.
ಹಾಗಂತ ನಾನು ಅಳುವುದಿಲ್ಲ ಎಂದೇನಲ್ಲ. ಮನಸ್ಸು ತುಂಬಿ ಬಂದರೆ ತನ್ನಿಂತಾನೇ ಕಣ್ಣಲ್ಲಿ ನೀರೂರುತ್ತದೆ. ಸ್ನೇಹಿತರ, ಆತ್ಮೀಯರ, ಹತ್ತಿರದವರ ದುಃಖ ನೋಡಿದಾಗ ಅಳು ಬರುತ್ತದೆ. ಆದರೆ ಯಾವುದೋ ಕಥೆ ಕೇಳಿ ಯಾವತ್ತಿಗೂ ಅತ್ತವಳಲ್ಲ. ಭಾವಾತಿರೇಕದ ಬಗ್ಗೆ ಎಚ್ಚರವಾಗಿರುವುದು ಬದುಕಿನ ಒಂದು ಗುರಿಗಳಲ್ಲಿ ಮುಖ್ಯವಾಗಿತ್ತು. ಬಹುಶಃ ಸಾಹಿತ್ಯ ಕಲಿಸಿದ ಒಂದು ಪಾಠ ಇರಬೇಕು.
ಆದರೂ ಸಿನಿಮಾ ನೋಡಿ ಕೆಲವೊಮ್ಮೆ ಅಳು ಬಂದಿದೆ. ಮಣಿರತ್ನಂ ಅವರ ‘ಬಾಂಬೆ’ ಚಿತ್ರದಲ್ಲಿ ಕೋಮುದ್ವೇಷದ ನೆಪದಲ್ಲಿ ಮಕ್ಕಳ ಮೇಲೆ ಸೀಮೆಣ್ಣೆ ಪೆಟ್ರೋಲ್ ಸುರಿದು ಸುಡಲು ಪ್ರಯತ್ನಿಸುವ ದೃಶ್ಯ ನೋಡಿದಾಗ ಮಾತ್ರ ಹೋ ಎಂದು ಅತ್ತಿದ್ದೆ. ಮತಾಂಧತೆಯ ಆಳ-ಅಗಲಗಳನ್ನು ಒಂದೇ ದೃಶ್ಯದಲ್ಲಿ ಸಮರ್ಥವಾಗಿ ಸೆರೆಹಿಡಿಯಲಾಗಿತ್ತು.
ಒಮ್ಮೆ ನ್ಯೂಜರ್ಸಿಯಲ್ಲಿ ಶಾರುಖ್ ಖಾನನ ‘ಓಂ ಶಾಂತಿ ಓಂ’ ನೋಡಲು ಹೋಗಿದ್ದೆವು. ಮುಗಿಯುವ ಹೊತ್ತಿಗೆ ಆ ಇಡೀ ಥಿಯೇಟರ್ ಕಾಂಪ್ಲೆಕ್ಸಿನ ಸ್ಟಾಫ್ (ಸೆಕ್ಯುರಿಟಿ ಸೇರಿದಂತೆ) ಎಲ್ಲರೂ ಒಳಗೆ ಬಂದು ನಿಂತು ತದೇಕಚಿತ್ತರಾಗಿ ಪರದೆಯತ್ತ ಕಣ್ಣನ್ನು ನೆಟ್ಟಿದ್ದು ಕಂಡಿತ್ತು. ಯಾಕೆ ಬಂದಿದ್ದೀರಿ ಎಂದು ಕುತೂಹಲಕ್ಕೆ ಒಬ್ಬ ಸೆಕ್ಯೂರಿಟಿಯನ್ನು ಕೇಳಿದೆ. ‘ನಿಮ್ಮ ಅಳು, ನಗು, ಹಾಡು, ನೃತ್ಯ ಎಲ್ಲವೂ ಮಜಾ ಕೊಡುತ್ತವೆ,’ ಎಂದಿದ್ದ. ಸರಿಯಾಗಿ ಹೇಳಿದ್ದ. ನಮ್ಮ ಅಳು-ನಗುವಿನ ಭಾವಾತಿರೇಕಕ್ಕೆ ಪ್ರಚಂಡ ನಾಟಕೀಯ ಗುಣವಿದೆ. ಸತ್ತವರಿಗೆ ಮರ್ಯಾದೆ ಸಲ್ಲಿಸುವಾಗ ಸಹ ನಮ್ಮದು ಭಾವಾತಿರೇಕವೇ.

ಇಷ್ಟು ಪುರಾಣ ಹೇಳಿದ ಮೇಲೆ ಮುಖ್ಯ ವಿಷಯಕ್ಕೆ ಬರುತ್ತೇನೆ. ಬದುಕಿರುವಾಗ ಮಾಡಿರುವ ಸಾಧನೆಗೆ ಅಭಿನಂದನೆಯನ್ನು ಯಾರೋ ಒಬ್ಬರು ಬದುಕಿರುವಾಗಲೇ ಸಲ್ಲಿಸುವಾಗ ಭಾವಸಾಂದ್ರತೆ ಎಷ್ಟರ ಮಟ್ಟಿಗಿರಬೇಕು ಎಂಬ ನೈತಿಕ ಪ್ರಶ್ನೆ ನನ್ನನ್ನು ಕಾಡಿದ್ದಿದೆ. ಡಾಕ್ಟರೇಟ್ ಅಧ್ಯಯನದ ಕಾಲದಲ್ಲಿ ಜೆ ಎನ್ ಯು ವಿಶ್ವವಿದ್ಯಾಲಯದಲ್ಲಿ ಯಾರಾದರೂ ನಿವೃತ್ತರಾದರೆ ಒಂದು ಸಮಾರಂಭವಿರುತ್ತಿತ್ತು. ಬೆಳಗ್ಗೆ ಇಬ್ಬರೂ ಮೂವರೋ ಸಹೋದ್ಯೋಗಿಗಳು ಹಿತಮಿತವಾಗಿ ನುಡಿನಮನ ಸಲ್ಲಿಸಿದ ಮೇಲೆ ನಿವೃತ್ತರಾದ ಪ್ರೊಫೆಸರ್ ಮಧ್ಯಾಹ್ನ ಮೂರು ಗಂಟೆಗಳ ಮಟ್ಟಿಗೆ ತಮ್ಮ ವೃತ್ತಿಜೀವನದ ಕೊನೆಯ ಉಪನ್ಯಾಸವನ್ನು ಕೊಡುವ ಅವಕಾಶ. ಸಭಾಂಗಣ ತುಂಬಿ ತುಳುಕಿ ವಿದ್ಯಾರ್ಥಿಗಳೆಲ್ಲ ಮೈಕಿನಲ್ಲಿ ಕೇಳಿಸುವಷ್ಟು ದೂರಕ್ಕೂ ನೆರೆದಿರುತ್ತಿದ್ದರು.
ಈಗ್ಗೆ ಇದೇ ಊರಿನಲ್ಲಿ ಮೂರು ನಾಲ್ಕು ವರ್ಷಗಳ ಹಿಂದೆ ಒಬ್ಬ ಸುಪ್ರಸಿದ್ಧ ಪ್ರಾಧ್ಯಾಪಕಿಗೆ ಅಭಿನಂದನೆ ಇದ್ದದ್ದು ಕೇಳಿ ಹೋದೆ. ಆಕೆಯ ಪಂಪಭಾರತದ ಉಪನ್ಯಾಸಗಳನ್ನು ಇವತ್ತಿಗೂ ವಿದ್ಯಾರ್ಥಿಗಳು ನೆನಪಿಸಿಕೊಳ್ಳುವುದನ್ನು ಕೇಳಿದ್ದೆ. ಆಕೆಯ ವಿಚಾರದ ಹರವಿಗೆ, ಕಾವ್ಯಕ್ಕೆ ಮಾರು ಹೋಗಿದ್ದೆ. ಪ್ರಚಂಡ ವಿಚಾರವಾದಿ, ಮುಲಾಜಿಲ್ಲದೆ ಮಾತಾಡುವ ಒಂದು ಅಪರೂಪದ ಮಾನವೀಯ ಮನಸ್ಸು. ಮುಖತಃ ಯಾವತ್ತೂ ಭೆಟ್ಟಿಯಾಗಿರಲಿಲ್ಲ.
ಕಾರ್ಯಕ್ರಮದ ಪಟ್ಟಿ ನೋಡುತ್ತಿದ್ದಂತೆ ನನ್ನ ಉತ್ಸಾಹವೆಲ್ಲವೂ ಠುಸ್ಸೆಂದಿತ್ತು. ಅದೊಂದು ಮದುವೆ ಸಮಾರಂಭದ ತರಹ ಇತ್ತು. ಗಂಡುಹೆಣ್ಣಿಗೆ ಅಭಿನಂದಿಸಲು ಎಲ್ಲರೂ ಮುಗಿಬೀಳುವವರೇ. ಒಬ್ಬಿಬ್ಬರ ಮಾತುಗಳನ್ನು ಬಿಟ್ಟರೆ ಉಳಿದದ್ದೆಲ್ಲಾ ಬರಿಯ ಭೋಪರಾಕ್!
ಆಕೆಗೆ ಮಾತಾಡಲು ಅವಕಾಶ ಸಿಕ್ಕಿದಾಗ ಹೇಳಿದ ಒಂದೆರಡು ಅಂಶಗಳು ನನ್ನ ಮನಸ್ಸಿನಲ್ಲಿ ಊರಿದವು. ಆಕೆ ಜನ್ಮದಲ್ಲಿ ಅಭಿನಂದನೆ ಇತ್ಯಾದಿಗಳಿಗೆ ಒಪ್ಪಿಕೊಂಡವರಲ್ಲ. ಆದರೂ ಪ್ರಚಂಡ ಒತ್ತಾಯಕ್ಕೆ ಮಣಿಯಬೇಕಾಯಿತು. ಈಗ ಬದುಕಿನ ಈ ಹಂತದಲ್ಲಿ ಅವರ ಕಾಳಜಿ ಒಂದೇ. ಬದುಕಿನುದ್ದಕ್ಕೂ ತಮ್ಮ ತಂಗಿಯರ ಬದುಕನ್ನು ದಡ ಹತ್ತಿಸಲು ಕಳೆದಾಗಿದೆ. ಅವರೆಲ್ಲ ತನ್ನನ್ನು ಪ್ರೀತಿಯಿಂದ ನೋಡಿಕೊಂಡರೂ ಸಹ ಈಗ ತನ್ನದೇ ಒಂದು ನೆಲೆ ಬೇಕೆನ್ನಿಸಿದೆ. ತನಗೆ ನಾಲ್ಕು ಗೋಡೆ, ಒಂದು ತಾರಸಿಯಾದರೂ ಇರುವ ಮನೆ ಕಟ್ಟಿಕೊಂಡು ಉಳಿದ ಬದುಕನ್ನು ಒಬ್ಬಳೇ ಕಳೆಯಲು ಒಂದು ಸೈಟು ಬೇಕು, ಅಷ್ಟೇ.
ಅಸಂಖ್ಯಾತ ವಿದ್ಯಾರ್ಥಿಗಳು, ಸಾಹಿತ್ಯ ವಲಯದ ಹಲವಾರು ಆಪ್ತರು, ಭೋಪರಾಕ್ ಹೇಳುತ್ತಿರುವ ಅಪಾರವಾದ ಸ್ನೇಹಿತರ ಬಳಗ… ಇಷ್ಟೆಲ್ಲ ಇದ್ದು ಸುಮಾರು ಎಪ್ಪತ್ತರ ದಶಕದ ವಯಸ್ಸಿನ ಆಕೆ ಹೀಗೆ ಬಹಿರಂಗವಾಗಿ ಹೇಳಿಕೊಳ್ಳಬೇಕಾಯಿತೆ?
ಕಣ್ಣೀರು ತಡೆಯಲಾಗದೆ ಎದ್ದು ಓಡಿಯೇ ಬಿಟ್ಟೆ!
*****
ಇನ್ನೊಂದು, ಕಳೆದ ವಾರ ನನ್ನನ್ನು ದಾರುಣವಾಗಿ ಕಾಡಿದ ಒಂದು ಪ್ರಸಂಗ. ಅದನ್ನು ಮರೆಯುವ ಮುಂಚೆ, ಅಂತಹ ಮರೆವಿನ ಮೂಲಕವೇ ನಾವು ರಾಜಿ ಮಾಡಿಕೊಂಡು ಬದುಕುವ ಹಿಪಾಕ್ರೆಸಿಗೆ ಸಿಲುಕುವ ಮುಂಚೆ ಆತ್ಮದೆಚ್ಚರದ ಸಲುವಾಗಿಯಾದರೂ ಇದನ್ನು ಬರೆದು ದಾಖಲಿಸಬೇಕು ಅಂತನ್ನಿಸಿತು. ಇದು ವೈಯುಕ್ತಿಕವಲ್ಲ. ನಾವು ಬದುಕುತ್ತಿರುವ ಸಮಾಜದ ರೀತಿ ರಿವಾಜುಗಳ ಭಾಗವಾದ್ದರಿಂದ, ನಾವು ಒಪ್ಪಿಕೊಂಡಿರುವ ಸಿದ್ಧಾಂತಗಳಿಗೆ ಸಂಬಂಧಪಟ್ಟಿದ್ದರಿಂದ ಇದನ್ನು ಬರೆಯುವ ತುರ್ತು ಮೂಡಿರಬಹುದು.
ಕನ್ನಡದ ಒಬ್ಬ ಪ್ರಖರ ಸ್ತ್ರೀವಾದಿಯ ಬದುಕು ದುರಂತದಲ್ಲಿ ಕೊನೆಯಾಗಿತ್ತು. ಪ್ರೊಫೆಸರ್ ಹುದ್ದೆ, ಸ್ವಂತ ಮನೆ, ಗಂಡ, ಮಗಳು… ನೋಡುವವರಿಗೆ ಬೆಚ್ಚನೆಯ ಬದುಕು. ಅಪಘಾತದಲ್ಲಿ ಮೆದುಳು ಜಜ್ಜಿ ಹೋಗಿದ್ದಾಗ ಕಣ್ಣೆದುರು ಇದ್ದದ್ದು ಎರಡೇ ಆಯ್ಕೆ. ಸರ್ಜರಿ ಮಾಡಿದರೆ ಪ್ರಾಣ ಉಳಿಯಬಹುದು, ಆದರೆ ಮುಂದಿನ ಬದುಕು ಮಾತ್ರ ವೆಜಿಟೆಬಲ್ ಅಷ್ಟೆ! ವೈದ್ಯರು ಅಡ್ಡಗೋಡೆಯ ಮೇಲೆ ದೀಪವಿಡುವ ಪಾಪ ಮಾಡಿರಲಿಲ್ಲ.
ಗಂಡ ಒಬ್ಬ ವಿದ್ವಾಂಸ, ವಿದೇಶದವ. ಹೇಗೋ ಬದುಕಿಬಿಡಲಿ, ಆಮೇಲೆ ನೋಡಿಕೊಂಡರಾಯಿತು ಎಂಬ ಉಡಾಫೆ ಸಲ್ಲದವ. ಅಥವಾ ಇನ್ನೇನೋ ಕಾರಣವಿತ್ತೇನೋ. ಕೃತಿಯಲ್ಲೇ ಒಂದು ಕಡೆ — ವಿಚ್ಛೇದನದ ತಯಾರಿಗಳು ನಡೆದಿದ್ದಾಗ ಈ ಅಪಘಾತ ಸಂಭವಿಸಿದೆ. ಆಕೆ ಬದುಕಬೇಕೋ ಬೇಡವೋ, ಅಥವಾ ಶವಂದತೆ ಬದುಕಬೇಕೇ ಎಂದು ನಿರ್ಧರಿಸುವ ನೈತಿಕ ಹಕ್ಕು ತನಗೆ ಇರಲು ಹೇಗೆ ಸಾಧ್ಯ? ಅಥವಾ ನಿರ್ಧಾರ ಮಾಡಲೇಬೇಕು ಎಂತಾದರೆ ಪ್ರಚಂಡ ಪ್ರತಿಭೆಯ, ಅದಮ್ಯ ಜೀವನೋತ್ಸಾಹದ ಆಕೆ ಜೀವಶವದಂತೆ ಬದುಕುವುದು ಬೇಡ ಎನ್ನುವುದೇ ತನ್ನ ನಿಲುವು— ಎಂದು ಹೇಳಿದ್ದ ಪ್ರಸ್ತಾಪವೂ ಇದೆ. ಇಷ್ಟೆಲ್ಲಾ ಆದರೂ ನಡೆದ ಸಾಂಸ್ಥಿಕ ಮತ್ತು ಸಾಂಸ್ಕೃತಿಕ ದಬಾವಣೆಯ ಫಲವಾಗಿ ಸಹಿ ಹಾಕಿದ್ದೂ ಆಯ್ತು, ಸರ್ಜರಿ ನಡೆದಿದ್ದೂ ಆಯ್ತು, ಆಕೆ ಮುಂದಿನ ಹತ್ತೊಂಬತ್ತು ವರ್ಷಗಳು ವೆಜಿಟೇಟ್ ಆಗಿದ್ದೂ ಆಯ್ತು.
ಇರಲಿ, ಆಕೆಯ ನೆನಪಿನಲ್ಲಿ ಹೊರಬಂದಿರುವ ಒಂದು ಕೃತಿಯಲ್ಲಿ ಸುಮಾರು ಮೂವತ್ತೈದು ಮಂದಿ ಲೇಖನಗಳನ್ನು ಬರೆದಿದ್ದಾರೆ. ಸಂಪಾದನೆ ಮಾಡಿದವರು ಕೊಟ್ಟದ್ದನ್ನು ಕೊಟ್ಟಹಾಗೆ ಒಟ್ಟುಗೂಡಿಸಿ ಒಂದು ಮುನ್ನುಡಿಯನ್ನು ಬರೆದು ಹೊರತಂದಿದ್ದಾರೆ. ಸತ್ತವರ ಬಗ್ಗೆ, ಸಾಮಾಜಿಕವಾಗಿ ಉನ್ನತ ಸ್ತರವನ್ನು ಏರಿದ್ದ ಒಬ್ಬ ಪ್ರಾಧ್ಯಾಪಕಿಯ ಬಗ್ಗೆ, ಸಾಹಿತ್ಯಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಿದ ಒಂದು ಅದ್ಭುತ ಚಿಂತಶೀಲ ಬದುಕಿನ ಬಗ್ಗೆ ಯಾರು, ಎಷ್ಟು, ಹೇಗೆ ಬರೆಯಬಹುದು ಎನ್ನುವ ಮಾರ್ಗಸೂಚಿಗಳ ಹಂಗೇ ಇಲ್ಲವೇ?
ಇಂತಹ ಕಡೆ ಖಾಸಗಿ ಬದುಕು ಎನ್ನುವುದು ಒಂದು ಮುಟ್ಟಬಾರದ ವಲಯ ಎನ್ನುವ ನೈತಿಕತೆ ನಮಗೆ ಬೇಕು. ಒಬ್ಬರಂತೂ, ತಾನು ಆಕೆಗೆ ಖಾಸಾ ಖಾಸಾ ಗೆಳತಿ ಎಂದು ಹೇಳಿಕೊಳ್ಳುತ್ತಲೇ ಗೆಳತಿಯ ಖಾಸಗಿ ಬದುಕನ್ನು ಹರಾಜು ಹಾಕಿದ್ದಾರೆ. ‘ಮಗಳು ಬರಲಿಲ್ಲ’ (ನಾನು ಮಗಳ ಹೆಸರನ್ನು ಕೈಬಿಟ್ಟಿದ್ದೇನೆ) ಎನ್ನುವ ಲೇಖನದಲ್ಲಿ ಸಹಿ ಹಾಕದೆ ಸರ್ಜರಿ ತಡಮಾಡಿದ ಗಂಡನ ಮೇಲೆ (ಇದೊಂದು ಕೊಲೆ, ಆತನೇ ಆರೋಪಿ ಎಂಬಂತೆ); ನಂತರ ವಿದೇಶಕ್ಕೆ ತೆರಳಿದ ಅಪ್ಪ ಮಗಳ ಮೇಲೆ; ತಾಯಿಯನ್ನು ನೋಡಲು ಬಾರದ ಮಗಳ ಮೇಲೆ (ಆಕೆಯ ಸರಿಯಾದ ಹೆಸರು ಸಹ ಈ ಖಾಸಾ ಗೆಳತಿಗೆ ತಿಳಿದಂತಿಲ್ಲ) ಅಂಕಾಗಿ, ಡೊಂಕಾಗಿ, ಸುತ್ತಿ, ಬಳಸಿ ಆಪಾದನೆಗಳನ್ನು ಮಾಡಿದ್ದೇ ಮಾಡಿದ್ದು. ಅಷ್ಟೇ ಅಲ್ಲ, ಇನ್ನೂ ಬೇಕಾದಷ್ಟು ರೀತಿಯ ಆರೋಪಗಳು. ಇಷ್ಟಕ್ಕೂ ಆಗಿದ್ದು ಅಪಘಾತವೋ? ಕೊಲೆಯೋ?
ಯಾರದೋ ಸ್ವಂತ ಬದುಕನ್ನು ಹೀಗೆ ಹರಾಜು ಹಾಕುವ ಹಕ್ಕನ್ನು ಕೊಟ್ಟವರು ಯಾರು? ಇದೆಂತಾ ವ್ಯಂಗ್ಯ?
ತಡೆಯದೆ ಸಂಪಾದಕಿಯನ್ನು ಕೇಳಿಯೇಬಿಟ್ಟೆ: ದುರಂತವನ್ನು ಕಂಡ ಆಕೆ ಬದುಕಿದ್ದಾಗ ಒಬ್ಬ ಯೂನಿವರ್ಸಿಟಿ ಪ್ರೊಫೆಸರ್, ಲೇಖಕಿ, ವಿಮರ್ಶಕಿ, ಪ್ರಚಂಡ ಸ್ತ್ರೀವಾದಿ ಕಾರ್ಯಕರ್ತೆ. ಇಂತಹ ಕಡೆ ಸ್ವಂತ ಬದುಕಿನ ಬಗ್ಗೆ ಯಾಕೆ ಬರೆಯಬೇಕು? ಹೇಗೆ ಒಪ್ಪಿ ಪ್ರಕಟಿಸಿದಿರಿ? ಇದು ಅವರಿಗೆ ಮತ್ತು ನಿಮಗೆ ಇಬ್ಬರಿಗೂ ಯಾವ ರೀತಿಯಲ್ಲಿ professional or feminist? ಇಷ್ಟಕ್ಕೂ ಸ್ವಂತ ಸಂಬಂಧಗಳ ಪ್ರಸ್ತಾಪ ಬೇಕೆಂದಿದ್ದರೆ ಅವರ ಗಂಡನಿಂದಲೋ, ಮಗಳಿಂದಲೋ ಒಂದು ಲೇಖನವನ್ನು ಪಡೆದು ಪ್ರಕಟಿಸಬಹುದಿತ್ತಲ್ಲ? ಅವರಿಬ್ಬರೂ ಈ ದೇಶದಲ್ಲಿಯೇ ಇಲ್ಲದಿರುವಾಗ ಅವರ ಗೈರುಹಾಜರಿಯಲ್ಲಿ ಅವರ ಖಾಸಾಬದುಕಿನ ಬಗ್ಗೆ ಬರೆಯಲು ಹೊರಗಿನವರಿಗೆ ಯಾವ ಹಕ್ಕಿದೆ? ಆಕೆಯನ್ನು ನೆನಪಿಸಿಕೊಳ್ಳಬೇಕಾಗಿರುವುದು ಆಕೆಯ ಸಾಮಾಜಿಕ ಕೊಡುಗೆಯ ನೆಲೆಯಲ್ಲಿ ಮಾತ್ರ ತಾನೇ? ಸಂಬಂಧವಿಲ್ಲದ್ದರ ಬಗ್ಗೆ ಷರಾ ಬರೆಯಲು ಇವರು ಯಾರು?

ಸಮರ್ಪಕ ಉತ್ತರವೇನೂ ಬರಲಿಲ್ಲ. ನನ್ನ ತಲ್ಲಣ ತಳಮಳಗಳು ನಿಂತೂ ಇಲ್ಲ. Is this the promised end?
ಇರಲಿ, ಸಣ್ಣ ಊರಿನಲ್ಲಿ ಟೆಂಟಿನಲ್ಲಿ ನೋಡಿದ ಗೋಳು-ಸಿನಿಮಾ ನೆನಪಿಗೆ ಬಂದು ಹಲವಾರು ಕಾರಣಗಳಿಗೆ ಕಾಡುತ್ತಿದೆ!


Liked it very much. ಇಂಥ ಹಲವಾರು ಪ್ರಸಂಗಗಳು ನನ್ನ ಅನುಭವಕ್ಕೂ ದೊರಕಿದೆ. But I also appreciate how the younger generation, both women and men, are challenging the age-old notion that interfering automatically means caring or being involved. So much of what passes for concern is often just curiosity disguised as care, and in many cases, it remains entirely superficial. I’m glad you addressed the issue with such nuance.