ಅವರ ಈ ಎಲ್ಲಾ ನಡೆಗಳಿಂದ ನಾಶವಾಗಿದ್ದು ಆಸ್ಟ್ರೇಲಿಯಾದ ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳ ಜನಪಂಗಡಗಳಲ್ಲಿ ಇದ್ದ ಬಹುಭಾಷೆಗಳು, ಬಹುಸಂಸ್ಕೃತಿಗಳು ಮತ್ತು ಬಹುತ್ವವನ್ನು ಅಪ್ಪಿಕೊಂಡಿದ್ದ ನೆಲ-ನಾಡುಗಳ ಸಂಬಂಧಗಳು, ಅಸ್ಮಿತೆ, ಪ್ರಾಪಂಚಿಕ ದೃಷ್ಟಿಕೋನಗಳು. ಅದೃಷ್ಟಕ್ಕೆ, ಅವು ಸಂಪೂರ್ಣವಾಗಿ ನಿರ್ನಾಮವಾಗದೆ, ನಿಧಾನವಾಗಿ ಮೂಲವಾಸಿಗಳು ಸುಧಾರಿಸಿಕೊಂಡರು. ನ್ಯಾಯಕ್ಕಾಗಿ, ತಮ್ಮ ನೆಲಕ್ಕಾಗಿ, ಅಸ್ತಿತ್ವಕ್ಕೆ, ಅಸ್ಮಿತೆಗೆ ಹೋರಾಡಿದರು. ಇಂದಿಗೂ ಹೋರಾಡುತ್ತಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಇತ್ತೀಚೆಗೆ ನಮ್ಮ ರಾಣಿರಾಜ್ಯದಲ್ಲಿ ಅಂದರೆ ಕ್ವೀನ್ಸ್ಲ್ಯಾಂಡ್ನಲ್ಲಿ ನಡೆದ ಎರಡು ಪ್ರಸಂಗಗಳನ್ನು ಕುರಿತು ಹೇಳಹೊರಟಿದ್ದೀನಿ. ಯಾಕೆಂದರೆ, ಇವು ಆಸ್ಟ್ರೇಲಿಯಾದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಗಮನಾರ್ಹ ವಿಷಯಗಳು. ಅಲ್ಲದೆ, ಅವೆರಡೂ ಒಂದಕ್ಕೊಂದು ತಳಕು ಹಾಕಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವಲ್ಪ ಸದ್ದು ಮಾಡಬೇಕಿದೆ.
ಮೊದಲನೆ ಪ್ರಸಂಗ ಮೊನ್ನೆ ಜೂನ್ ಮೂರನೆ ತಾರೀಕು ನಡೆದ Mabo Day. ಆಸ್ಟ್ರೇಲಿಯಾ ಜನತೆಗೆ, ಅದರಲ್ಲೂ ಆಸ್ಟ್ರೇಲಿಯನ್ ಮೂಲವಾಸಿಗಳಿಗೆ Mabo Day ಅತ್ಯಂತ ಮಹತ್ವದ ದಿನ. ೧೯೯೨ರ ಜೂನ್ ಮೂರರಂದು ದೇಶದ ಅತ್ಯುಚ್ಚ ನ್ಯಾಯಾಲಯವಾದ ಹೈ ಕೋರ್ಟ್ ಆಫ್ ಆಸ್ಟ್ರೇಲಿಯಾ ಒಂದು ತೀರ್ಪನ್ನು ಕೊಟ್ಟಿತು. ಅದೇನೆಂದರೆ, ವಸಾಹತುಶಾಹಿಗಳು ಹೇಳಿದ್ದ – ಈ ನಾಡು ಯಾರಿಗೂ ಸೇರಿದ್ದಿಲ್ಲ, ‘Terra nullis’ – ಅನ್ನುವ ಮಾತು ಸುಳ್ಳು. ಇಲ್ಲಿ ಅನೇಕ ಸ್ಥಳೀಯ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳ ಜನಪಂಗಡಗಳು ವಾಸವಿದ್ದವು, ಎನ್ನುವುದು ನಿಜ. ಆಸ್ಟ್ರೇಲಿಯಾದಲ್ಲಿ ಈ ತೀರ್ಪನ್ನು Mabo Decision ಎಂದು ಗುರುತಿಸುತ್ತಾರೆ. ಈ ಮಹತ್ವಪೂರ್ಣ ತೀರ್ಪಿನಿಂದ ಆಸ್ಟ್ರೇಲಿಯನ್ ಕೇಂದ್ರ ಸರಕಾರವು ಸಂಸತ್ತಿನ ಮೂಲಕ Native Title Act 1993 ಅನ್ನು ಜಾರಿಗೆ ತಂದಿದೆ. ಇಂದು ಇದರ ಬಗ್ಗೆ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪಠ್ಯದ ಮೂಲಕ ಎಲ್ಲರೂ ಕಲಿಯುತ್ತಾರೆ.
ಈ ವಿಷಯದ ಹಿನ್ನೆಲೆ ಹೀಗಿದೆ. ಬ್ರಿಟಿಷ್ ವಸಾಹತುಶಾಹಿಗಳು ಆಸ್ಟ್ರೇಲಿಯಾವನ್ನು ಆಕ್ರಮಿಸಿಕೊಳ್ಳುವ ಹದಿನೆಂಟು ಮತ್ತು ಹತ್ತೊಂಭತ್ತನೆ ಶತಮಾನಗಳಲ್ಲಿ ಈ ನಾಡಿನಲ್ಲಿ ಯಾರೂ ಮಾನವರು ಇಲ್ಲ. ಇದೊಂದು ಖಾಲಿ ನಾಡು, ಯಾರಿಗೂ ಸೇರಿದ್ದಲ್ಲ. ಆದ್ದರಿಂದ ಈ ನಾಡನ್ನು ಬ್ರಿಟಿಷ್ ರಾಜಾಡಳಿತಕ್ಕೆ ಒಳಪಡಿಸಿದ್ದೀವಿ ಎಂದು ಆಜ್ಞೆ ಹೊರಡಿಸಿದ್ದರು. ಅವರ ನಂಬಿಕೆ ಮತ್ತು ವಾದ ಏನೆಂದರೆ ಆಸ್ಟ್ರೇಲಿಯಾದ ಮೂಲವಾಸಿಗಳು ತಮ್ಮಂತೆ, ಯೂರೋಪಿಯನ್ನರಂತೆ ನಾಗರಿಕರಲ್ಲ. ಅವರಿಗೆ ಯಾವುದೇ ಸಂಸ್ಕೃತಿ ಇಲ್ಲ. ತಮ್ಮ ನಾಗರಿಕತೆಯಂತೆ ಶಿಕ್ಷಣ, ವಸತಿ, ನ್ಯಾಯ, ಉದ್ಯೋಗ, ಆರೋಗ್ಯ, ಕುಟುಂಬ, ನಗರೀಕರಣ, ಕೃಷಿ, ವ್ಯಾಪಾರ, ಇತ್ಯಾದಿ ವಿಷಯಗಳಲ್ಲಿ ಒಂದು ವ್ಯವಸ್ಥೆ, ಕ್ರಮಬದ್ಧ ಪದ್ಧತಿಗಳಿಲ್ಲ. ಇಂತಹ ಕಾರಣಗಳಿಂದ ಅವರನ್ನು ಮನುಷ್ಯರು ಎಂದು ಪರಿಗಣಿಸಲು ಆಗುವುದಿಲ್ಲ. ಹಾಗಾಗಿ ಇದೊಂದು ಮಾನವ-ರಹಿತ ನಾಡು. ಹೀಗೆಲ್ಲ ಹೇಳಿಕೊಂಡು, ಬ್ರಿಟಿಷರು ತಮ್ಮ ಆಕ್ರಮಣವನ್ನು ಮುಂದುವರೆಸಿದರು. ಬ್ರಿಟನ್ನಿನ ಸಮಾಜದ ತಮ್ಮ ವ್ಯವಸ್ಥೆಗಳನ್ನು, ಪದ್ಧತಿಗಳನ್ನು ಇಲ್ಲಿಗೆ ತಂದು ಅಳವಡಿಸಿಕೊಂಡು ಹೊಸ ಆಸ್ಟ್ರೇಲಿಯಾವನ್ನು ಹುಟ್ಟುಹಾಕಿದರು.
ಅವರ ಈ ಎಲ್ಲಾ ನಡೆಗಳಿಂದ ನಾಶವಾಗಿದ್ದು ಆಸ್ಟ್ರೇಲಿಯಾದ ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳ ಜನಪಂಗಡಗಳಲ್ಲಿ ಇದ್ದ ಬಹುಭಾಷೆಗಳು, ಬಹುಸಂಸ್ಕೃತಿಗಳು ಮತ್ತು ಬಹುತ್ವವನ್ನು ಅಪ್ಪಿಕೊಂಡಿದ್ದ ನೆಲ-ನಾಡುಗಳ ಸಂಬಂಧಗಳು, ಅಸ್ಮಿತೆ, ಪ್ರಾಪಂಚಿಕ ದೃಷ್ಟಿಕೋನಗಳು. ಅದೃಷ್ಟಕ್ಕೆ, ಅವು ಸಂಪೂರ್ಣವಾಗಿ ನಿರ್ನಾಮವಾಗದೆ, ನಿಧಾನವಾಗಿ ಮೂಲವಾಸಿಗಳು ಸುಧಾರಿಸಿಕೊಂಡರು. ನ್ಯಾಯಕ್ಕಾಗಿ, ತಮ್ಮ ನೆಲಕ್ಕಾಗಿ, ಅಸ್ತಿತ್ವಕ್ಕೆ, ಅಸ್ಮಿತೆಗೆ ಹೋರಾಡಿದರು. ಇಂದಿಗೂ ಹೋರಾಡುತ್ತಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

(Eddie Koiki Mabo ಅವರ ಮಗಳೊಂದಿಗೆ ಲೇಖಕಿ)
ಅವರ ಅನೇಕ ಹೋರಾಟಗಳಲ್ಲಿ ಒಂದು ‘ಈ ನಾಡು ಯಾರಿಗೂ ಸೇರಿದ್ದಿಲ್ಲ, ‘Terra nullis’ ಅನ್ನುವುದು ಸುಳ್ಳು ಎಂದು ಒಪ್ಪಿಕೊಂಡು ಇಲ್ಲಿ ಸಾವಿರಾರು ವರ್ಷಗಳಿಂದ ಮೂಲನಿವಾಸಿಗಳು ಬದುಕಿಬಾಳುತ್ತಿದ್ದರು ಎನ್ನುವುದನ್ನು ಕಾನೂನುಬದ್ಧವಾಗಿ ದಾಖಲಿಸಬೇಕು, ಎನ್ನುವುದು.
ಈ ಹೋರಾಟವನ್ನು ಕೈಗೆತ್ತಿಕೊಂಡು ಮುನ್ನಡೆಸಿದ್ದು Eddie Koiki Mabo ಎನ್ನುವಾತ. ಈತ ಟೊರ್ರೆ ಸ್ಟ್ರೈಟ್ ದ್ವೀಪವಾಸಿ. ಆಸ್ಟ್ರೇಲಿಯಾದ ಪೂರ್ವಭಾಗದ ಕ್ವೀನ್ಸ್ಲ್ಯಾಂಡ್ ರಾಜ್ಯದ ಮೇಲೆ ನೋಡಿದರೆ ಆ ನೆತ್ತಿಯ ಮೇಲೆ ಒಂದು ಕೋಡಿದೆ. ಅದರ ಮೇಲೆ ಇರುವ ಟೊರ್ರೆ ಸ್ಟ್ರೈಟ್ ದ್ವೀಪಗಳ ಸಮೂಹದಲ್ಲಿ ಒಂದು Mer ದ್ವೀಪ. Eddie Mabo ಈ ದ್ವೀಪದ ವಾಸಿ. ಈತ ಮೂಲವಾಸಿಗಳ ಮೂಲಭೂತ ಹಕ್ಕುಗಳು ಮತ್ತು ಅವರನ್ನು ಆಸ್ಟ್ರೇಲಿಯನ್ ಪ್ರಜೆಗಳು ಎಂದು ಮನ್ನಣೆ ಕೊಟ್ಟು ಅವರಿಗೆ ಮತ ಹಾಕುವ ಹಕ್ಕನ್ನು ನೀಡಬೇಕು ಎಂದು ನಡೆದಿದ್ದ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ೧೯೬೭ ನಲ್ಲಿ ಆಸ್ಟ್ರೇಲಿಯನ್ ಪಾರ್ಲಿಮೆಂಟ್ ಮೂಲವಾಸಿಗಳನ್ನು ಪ್ರಜೆಗಳೆಂದು ಗುರುತಿಸಿ ಅವರ ಮತ ಹಾಕುವ ಹಕ್ಕನ್ನು ಒಪ್ಪಿಕೊಂಡಿತು.
ಇದೇ ಚಳವಳಿಯ ಅಲೆಯನ್ನು ಮುಂದುವರೆಸಿ, Eddie Mabo ದೇಶದ ಜನತೆಯ ಮುಂದೆ ಮತ್ತೊಂದು ಅಹವಾಲನ್ನು ಇಟ್ಟರು. ‘Terra nullis’ ಎನ್ನುವ ಸುಳ್ಳನ್ನು ತೆಗೆದುಹಾಕಿ, ಮೂಲನಿವಾಸಿಗಳು ಈ ನಾಡಿನ ಸಾಂಪ್ರದಾಯಿಕ ಮೂಲಜನರು, ಈ ನೆಲದ ಪಾಲಕರು ಎನ್ನುವುದನ್ನು ಕಾನೂನಿನ ಪ್ರಕಾರ ಜಾರಿಗೆ ತರಬೇಕು.
ಈ ಅಹವಾಲು ಮೊದಲಿಗೆ ಕ್ವೀನ್ಸ್ಲ್ಯಾಂಡ್ ರಾಜ್ಯದ ಸುಪ್ರೀಂ ಕೋರ್ಟಿನಲ್ಲಿ ದಾಖಲಾಯಿತು. ಕಾಲಕ್ರಮೇಣ ವಿಷಯವು ಹಿಗ್ಗುತ್ತಾ ಬಂದು, ಅದು ರಾಷ್ಟ್ರೀಯಮಟ್ಟದ ಹೈ ಕೋರ್ಟಿಗೆ ಹೋಯ್ತು. ೧೯೮೦ರ ಆ ದಶಕಗಳಲ್ಲಿ Eddie Mabo ಕ್ವೀನ್ಸ್ಲ್ಯಾಂಡಿನ ಉದ್ದಗಲಕ್ಕೂ ಓಡಾಡುತ್ತಿದ್ದರು. ಕೋರ್ಟ್ ಕೇಸ್ ವಿಚಾರಣೆಗೆಂದು ಬ್ರಿಸ್ಬೇನ್ ನಗರಕ್ಕೆ ಬರುತ್ತಿದ್ದರು. ನ್ಯಾಯಕ್ಕಾಗಿ ತಮ್ಮ ಜನರನ್ನು ಒಗ್ಗೂಡಿಸುತ್ತಾ ಪ್ರಯತ್ನವನ್ನು ಮುಂದುವರೆಸಿದ್ದರು.
ಕಡೆಗೂ ೧೯೯೨ರ ಜೂನ್ ತಿಂಗಳಿನ ಮೂರನೇ ತಾರೀಕು ಹೈ ಕೋರ್ಟಿನ ತೀರ್ಪು ಹೊರಬಂತು. Eddie Mabo ಅವರ ಪ್ರಯತ್ನಕ್ಕೆ, ಹೋರಾಟಕ್ಕೆ ಜಯ ದೊರಕಿತ್ತು. ತೀರ್ಪಿನ ಪ್ರಕಾರ ಮೂಲವಾಸಿಗಳು ತಮ್ಮ ನೆಲದಲ್ಲಿ ವಾಸವಿದ್ದು, ಅದರ ಪಾಲನೆಯನ್ನು, ಜವಾಬ್ದಾರಿಯನ್ನು ಹೊತ್ತಿದ್ದರು. ಈ ತೀರ್ಪಿನ ಹೆಸರು Native Title ಎಂದಾದರೂ, ಅದರ ಮುಂದಿನ ವರ್ಷ ಪಾರ್ಲಿಮೆಂಟಿನಲ್ಲಿ ಜಾರಿಗೆ ಬಂದ ಕಾಯಿದೆಯನ್ನು Native Title ೧೯೯೩ ಎಂದು ಕರೆದರು. ಈ ಕಾಯ್ದೆಯ ಪ್ರಕಾರ ಮೂಲವಾಸಿಗಳ ಸಾಂಪ್ರದಾಯಿಕ ಪಂಗಡಗಳಿಗೆ ಅವರವರ ನೆಲ ಸೇರಿದ್ದು. ಆದರೆ ಯಾವುದೇ ಒಬ್ಬ ವ್ಯಕ್ತಿಗೆ ಖಾಸಗಿಯಾಗಿ ಅದರ ಒಡೆತನ ಸೇರುವುದಿಲ್ಲ. ಉದಾಹರಣೆಗೆ, ಒಂದು ಗಣಿಗಾರಿಕೆ ಕಂಪನಿಗೆ ತಮ್ಮ ಸಾಂಪ್ರದಾಯಿಕ ನೆಲವನ್ನು ಮಾರುವುದು ಎಂದಾದರೆ ಇಡೀ ಜನಪಂಗಡವು ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಬೇಕು.
ಈ ಮಹತ್ವಪೂರ್ಣ ತೀರ್ಪು ಹೊರಬರುವ ಮೊದಲು, ಕೇವಲ ಐದು ತಿಂಗಳ ಮುಂಚೆ Eddie Mabo ತೀರಿಕೊಂಡರು. ಮುಂದೆ, ಅವರನ್ನು ಮತ್ತು ಅವರ ಜೊತೆ Native Title ನ್ಯಾಯಕ್ಕಾಗಿ ಹೋರಾಡಿದ ಕೆಲ ಸಂಗಡಿಗರನ್ನು ಗೌರವಿಸಿ, ಅವರಿಗೆ ಮರಣಾನಂತರದಲ್ಲಿ ಆಸ್ಟ್ರೇಲಿಯನ್ ಮಾನವಹಕ್ಕುಗಳ ಪುರಸ್ಕಾರವನ್ನು ಕೊಟ್ಟರು. Sydney Observatory ಇತ್ತೀಚೆಗೆ, ೨೦೧೫ ರಲ್ಲಿ Eddie Mabo ಅವರ ಸಾಧನೆಯನ್ನು ಗೌರವಿಸಿ ತನ್ನ Sydney Southern Star ಪಟ್ಟಿಯಲ್ಲಿ ಒಂದನ್ನು Mabo Star ಎಂದು ಹೆಸರಿಸಿದೆ.
ಮೊನ್ನೆ ಜೂನ್ ೩ರಂದು Eddie Mabo ಅವರ ಮಗಳು Gail Mabo ನಮ್ಮ ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ತಮ್ಮ ತಂದೆಯವರು ನಡೆಸಿದ ಹೋರಾಟವನ್ನು ಕುರಿತು ಮಾತನಾಡಿ, ಅದನ್ನು ಮುಂದುವರೆಸುವ ಪ್ರಯತ್ನಗಳ ಬಗ್ಗೆ ಹೇಳಿದರು.
ನಾನು ಹೇಳಹೊರಟಿದ್ದ ಎರಡನೆ ಪ್ರಸಂಗ ನಾಡು-ನೆಲಕ್ಕೆ ಸೇರಿದ್ದು. ನಮ್ಮ ರಾಣಿರಾಜ್ಯದ ರಾಜಧಾನಿಯಾದ ಬ್ರಿಸ್ಬೇನ್ ನಗರದ ಹೃದಯಭಾಗದ ಅಂಚಿನಲ್ಲಿ ವಿಕ್ಟೋರಿಯಾ ಪಾರ್ಕ್ ಇದೆ. ನಗರಕೇಂದ್ರಕ್ಕೂ ಇದಕ್ಕೂ ಇರುವ ಅಂತರ ಕೇವಲ ಎರಡು ಕಿಲೋಮೀಟರ್. ಇದರ ಮೂಲ ಹೆಸರು ಬಾರಾಂಬಿನ್ ಎಂದು. ಈ ಪಾರ್ಕಿನ ಉತ್ತರಭಾಗದಲ್ಲಿರುವ ಬಡಾವಣೆಗಳ ಜನ ಪಾರ್ಕಿನ ಮೂಲಕ ನಡೆದುಕೊಂಡು ಇಲ್ಲವೇ ಸೈಕಲ್ ಪೆಡಲ್ ತುಳಿಯುತ್ತಾ ನಗರಮಧ್ಯಕ್ಕೆ ಹೋಗುತ್ತಾರೆ. ಇರುವ ಒಂದು ಗಾಲ್ಫ್ ತಾಣಕ್ಕೆ ಅನೇಕರು ಬಂದು ಗಾಲ್ಫ್ ಆಡುತ್ತಾರೆ. ಮಕ್ಕಳಿರುವ ಕುಟುಂಬಗಳು ಬಂದು ನೆಮ್ಮದಿಯಾಗಿ ಓಡಾಡುತ್ತಾ, ಆಡಾಡುತ್ತಾರೆ. ಪ್ರತಿ ವಾರಾಂತ್ಯ ಒಂದಲ್ಲ ಒಂದು ಇವೆಂಟ್ ನಡೆಯುತ್ತದೆ. ಪಾರ್ಕಿನಲ್ಲಿರುವ ಚಿಕ್ಕಪುಟ್ಟ ಕೊಳಗಳು, ನೂರಾರು ವರ್ಷ ವಯಸ್ಸಿನ ಮರಗಳು, ಹಸಿರುಹುಲ್ಲು ಹೊದ್ದ ಜಾಗಗಳು, ಅಲ್ಲಲ್ಲಿರುವ ಆಹಾರಗಿಡಗಳ ವನ, ಹೂವನ ಇತ್ಯಾದಿಗಳು ಬಹಳ ಸುಂದರವಾಗಿವೆ.
ಬಹಳ ಮುಖ್ಯವಾಗಿ ಈ ವಿಕ್ಟೋರಿಯಾ ಪಾರ್ಕ್ ಒಂದು ದೊಡ್ಡ ಹಸಿರುವಲಯವಾಗಿದ್ದು ಇಲ್ಲಿ ಸ್ಥಳೀಯ ಸಾಂಪ್ರದಾಯಿಕ ಮೂಲವಾಸಿಗಳು ಟೂರ್ಬಲ್ ಜನರು ((Turrbal ಪೀಪಲ್). ಅವರ ಭಾಷೆಯಲ್ಲಿ ಬರಾಂಬಿನ್ ಎಂದರೆ ರಭಸದ ಗಾಳಿ ಬೀಸುವ ಪ್ರದೇಶ. ಸುತ್ತಮುತ್ತಲೂ ಇರುವ ಕೆಲ ಬಡಾವಣೆಗಳ ಎತ್ತರದ ಜಾಗಗಳಿಗೆ ಹೋದರೆ ಈ ರಭಸ ಗಾಳಿಯ ಅನುಭವವಾಗುತ್ತದೆ. ಬರಾಂಬಿನ್ ಉದ್ಯಾನವನದಲ್ಲಿ ಟೂರ್ಬಲ್ ಜನರ ಹಲವಾರು ಸಾಂಪ್ರದಾಯಿಕ ಆಚರಣೆಗಳ ಜಾಗಗಳಿವೆ. ಈ ಕಾರಣಗಳಿಂದ ಈ ಉದ್ಯಾನವನವು ಕ್ವೀನ್ಸ್ಲ್ಯಾಂಡ್ ಹೆರಿಟೇಜ್ ಪಟ್ಟಿಗೆ ಸೇರಿದೆ.
ಈ ವಾರ ವಿಕ್ಟೋರಿಯಾ ಪಾರ್ಕ್ / ಬರಾಂಬಿನ್ ಉದ್ಯಾನವನವು ರಾಷ್ಟ್ರೀಯ ಸುದ್ದಿಯಾಯ್ತು. ಏಕೆಂದರೆ, ಕ್ವೀನ್ಸ್ಲ್ಯಾಂಡ್ ರಾಜ್ಯಸರ್ಕಾರವು ಈ ಪಾರ್ಕಿನ ಭಾಗಗಳಲ್ಲಿ ಸ್ಟೇಡಿಯಂ ಮತ್ತು ಅಕ್ವಾಟಿಕ್ ಸೆಂಟರ್ ನಿರ್ಮಿಸಲು ಹೊರಟಿದೆ. ಎರಡೂ ನಿರ್ಮಾಣಗಳು ಬ್ರಿಸ್ಬೇನ್ ನಗರದಲ್ಲಿ ೨೦೩೨ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಬೇಕಿವೆ, ಅವಕ್ಕೆ ಈ ಪಾರ್ಕ್ ಬಹಳ ಅನುಕೂಲವಾದ ಸ್ಥಳ ಎಂದು ಸರ್ಕಾರ ಹೇಳಿದೆ. ನಿರ್ಮಾಣದ ಕೆಲಸವನ್ನು ಶುರುಮಾಡಲು ಸರ್ಕಾರವು ಜೂನ್ ೧ ರಂದು ಈ ಜಾಗಗಳನ್ನು ಖಾಸಗಿ ಸಂಸ್ಥೆಗೆ ಒಪ್ಪಿಸಿತು.

ಪಾರ್ಕಿನಲ್ಲಿ ಸ್ಟೇಡಿಯಂ ನಿರ್ಮಿಸಲು ಹೊರಟ ಸರ್ಕಾರದ ನಡೆಯನ್ನು ವಿರೋಧಿಸಿ ಅನೇಕರು ಹಲವಾರು ತಿಂಗಳುಗಳಿಂದ ಚಳವಳಿ ನಡೆಸುತ್ತಿದ್ದಾರೆ. ಹಸಿರುವಲಯವನ್ನು ನಾಶಪಡಿಸಬಾರದು. ಇದು ಸ್ಥಳೀಯ ಅಬೊರಿಜಿನಲ್ ಟೂರ್ಬಲ್ ಜನರಿಗೆ ಸೇರಿದ್ದು, Native Title ೧೯೯೩ ಉಲ್ಲಂಘನೆ ನಡೆದಿದೆ, ಎಂದೆಲ್ಲಾ ವಾದಗಳು ನಡೆಯುತ್ತಿದ್ದವು. ಯಾವುದಕ್ಕೂ ರಾಜ್ಯಸರ್ಕಾರ ಸೊಪ್ಪು ಹಾಕಲಿಲ್ಲ. ಕಳೆದ ಕೆಲ ವಾರಾಂತ್ಯಗಳಲ್ಲಿ ಚಳವಳಿಯಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸಿ ಪ್ರತಿಭಟನೆ ನಡೆಸಿದರು. ಅನೇಕರ ತಾತ್ಕಾಲಿಕ ಬಂಧನವೂ ಆಯ್ತು. ಪ್ರತಿಭಟನೆಯಲ್ಲಿ ಅಬೊರಿಜಿನಲ್ ಜನರೂ ಸೇರಿದ್ದರು. ರಾಣಿರಾಜ್ಯದ ಮುಖ್ಯಮಂತ್ರಿಗಳ ಮನೋಭಾವ ಹೇಗಿದೆಯೆಂದರೆ ಅವರು ಅಬೊರಿಜಿನಲ್ ಜನಪಂಗಡಗಳ ಹೆಸರನ್ನೂ ಉಚ್ಛರಿಸುವುದಿಲ್ಲ. ‘ಆ ಜನರು’ ಎನ್ನುತ್ತಾರೆ. ವಿಕ್ಟೋರಿಯಾ ಪಾರ್ಕ್ ಬ್ರಿಸ್ಬೇನ್ ನಗರಪಾಲಿಕೆಗೆ ಮತ್ತು ಸರ್ಕಾರಕ್ಕೆ ಸೇರಿದ್ದು, ಸಾರ್ವಜನಿಕರಿಗೆ ಸ್ಟೇಡಿಯಂ ನಿರ್ಮಾಣ ವಿಷಯದ ಉಸಾಬರಿ ಬೇಡ, ಅದೆಲ್ಲಾ ನಮ್ಮ ಸರ್ಕಾರದ ನಿರ್ಧಾರ, ಅನ್ನುತ್ತಾರೆ. ಸಾರ್ವಜನಿಕರ ದನಿಗೆ ಸೋಲಾಗಿದೆ. ಈ ವಿಷಯ ಮುಂದೆ ಎಲ್ಲಿಗೆ ಹೋಗುತ್ತದೋ ಕಾದು ನೋಡಬೇಕು. ವಿಶ್ವ ಪರಿಸರ ದಿನದ ಸಂದೇಶಕ್ಕಂತೂ ಅಕ್ಷರಶಃ ಕೊಡಲಿಪೆಟ್ಟು ಬಿದ್ದಿದೆ. ಮತ್ತೊಬ್ಬ Eddie Mabo ರಂತಹ ಹೋರಾಟಗಾರ ಬೇಕಿದ್ದಾರೆ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

