Advertisement
ಅಟ್ಲಾಂಟಾದಲ್ಲಿ ಅಲೆಅಲೆಯುತ್ತಾ….: ದೇವಿಕಾ ನಾಗೇಶ್‌ ಬರಹ

ಅಟ್ಲಾಂಟಾದಲ್ಲಿ ಅಲೆಅಲೆಯುತ್ತಾ….: ದೇವಿಕಾ ನಾಗೇಶ್‌ ಬರಹ

ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಆಧುನಿಕತೆಗೆ ಸಮಾನತೆಗೆ ತಕ್ಷಣ ತೆರೆದುಕೊಳ್ಳುವ ಅಮೆರಿಕವನ್ನು ಕಟ್ಟಿ ಬೆಳೆಸಿದವರು ಅನಾದಿಯಿಂದಲೂ ವಲಸಿಗರು ಎನ್ನುವುದನ್ನು ಮರೆಯುವಂತಿಲ್ಲ. ಈಗ ಇವರಲ್ಲಿ ನಾನು ಮುಂದು ತಾನು ಮುಂದು ಎನ್ನುವ ಪೈಪೋಟಿ ಶುರುವಾಗಿದೆ. ಆ ಕಾರಣಕ್ಕಾಗಿ ಒಬ್ಬರನ್ನು ಒಬ್ಬರು ಹಣೆಯುವ ಸ್ಪರ್ಧೆ. ಈ ಸ್ಪರ್ಧೆಯ  ಕಾರಣದಿಂದಾಗಿಯೇ ಅಮೇರಿಕಾದ ಇತಿಹಾಸ ರಕ್ತದ ಕಲೆಯನ್ನು ಹೊತ್ತು ವಿಜೃಂಬಿಸುತ್ತಿದೆ.  ಹೊಟ್ಟೆ ಪಾಡಿಗಾಗಿ ವಲಸೆ ಬಂದ ಪ್ರತಿಯೊಬ್ಬರದ್ದು ಇವತ್ತು ಈ ಊರು ನಾಳೆ ಇನ್ನೊಂದು ಊರು ಎನ್ನುವಂತಹ ಅತಂತ್ರ ಪರಿಸ್ಥಿತಿ. ಊರು ಬಿಟ್ಟು ಇಲ್ಲಿನ ಸ್ವಾತಂತ್ರ್ಯದ ಸವಿ ಅನುಭವಿಸಿ ಕೆಟ್ಟ  ಇವರು ಯಾವತ್ತೂ ತಮ್ಮ ದೇಶಕ್ಕೆ ಹಿಂತಿರುಗಲು ಇಷ್ಟಪಡುವುದಿಲ್ಲ.
ಅಮೇರಿಕದ ಅಟ್ಲಾಂಟಾದಲ್ಲಿ ಓಡಾಡಿದ ನೆನಪುಗಳ ಕುರಿತ ದೇವಿಕಾ ನಾಗೇಶ್‌ ಬರಹ ನಿಮ್ಮ ಓದಿಗೆ

  ಕೆಲವು ತಿರುಗಾಟಕ್ಕೆ ನೆವಗಳು ಬೇಕಾಗುತ್ತವೆಯಂತೆ. ಅಟ್ಲಾಂಟಾಕ್ಕೆ ಹೋಗಿ ಅಲ್ಲಿ ನಾಲ್ಕು ದಿನವಿದ್ದು  ಬರಲು  ಹೀಗೊಂದು ನೆವ ಸಿಕ್ಕಿತು. ನಾನು  ಭಾರತದಿಂದ  ಅಮೇರಿಕಾಗೆ  ಹೋಗುವ  ಮೊದಲೇ ಮಗ  ಕುಟುಂಬ ಸಮೇತ ಅಟ್ಲಾಂಟಾಕ್ಕೆ  ಹೋಗುವ ಪ್ಲಾನ್  ಹಾಕಿದ್ದ. ಮಂಜರಿಯ ಹೊಸ ಮನೆ ಪ್ರವೇಶಕ್ಕೆ ಆಗಸ್ಟ್ ಕೊನೆಯ ವಾರದಲ್ಲಿ ದಿನ ನಿಗದಿಯಾಗಿತ್ತು. ಬಾಲ್ಯ ಕಾಲದ ಸಖಿಯೊಂದಿಗೆ  ಕಳೆಯುವ ಅವಕಾಶ…. ಅದೂ ವಿದೇಶದಲ್ಲಿ… ಇದು ಭಾಗ್ಯವಲ್ಲದೆ  ಇನ್ನೇನು?

ಸ್ಯಾನ್ ಫ್ರಾನ್ಸಿಸ್ಕೊದಿಂದ ಅಟ್ಲಾಂಟ ಹೋಗಲು ವಿಮಾನದಲ್ಲಿ ನಾಲ್ಕೂವರೇ ಘಂಟೆ. ಇಲ್ಲಿಂದ ಬೆಳಗಾತ ಆರು ಘಂಟೆಗೆ ಮನೆ ಬಿಟ್ಟವರು ನಾವು ಅಲ್ಲಿ ಮುಟ್ಟುವಾಗ ಸಂಜೆಯಾಗಿತ್ತು. ಸೂರ್ಯ ಮುಳುಗಿಲ್ಲವಾದರೂ

ಘಂಟೆ ಆಗಲೇ ಏಳು ಕಳೆದಿತ್ತು. ಅಟ್ಲಾಂಟ ಸ್ಯಾನ್ ಫ್ರಾನ್ಸಿಸ್ಕೊಗಿಂತ ಮೂರು ಘಂಟೆ  ಮುಂದಿತ್ತು.

ಅಮೇರಿಕಾದ  ಮುಖ್ಯ ಭೂ ಭಾಗಗಳಲ್ಲಿ ಒಂದಾದ ಅಟ್ಲಾಂಟಾ(ಜಾರ್ಜಿಯ)ಗೆ ನಾವು ಹೋದಾಗ ಭಾರತದಲ್ಲಿ ಗಣೇಶ ಚತುರ್ಥಿಯ ಅಬ್ಬರ ಜೋರಾಗಿತ್ತು, ಭಾರತದಿಂದ ಆಗಷ್ಟೇ ಬಂದಿದ್ದ  ಗೆಳತಿಯೂ ಮಗಳ ಮನೆ ಅಟ್ಲಾಂಟದಲ್ಲಿ ಇದ್ದಳಾಗಿ  ಊರಿನ ತಾಜಾ ಸುದ್ದಿಯು ಸಿಗುತ್ತದೆ ಎಂಬ ಸಂಭ್ರಮವೂ ಸೇರಿಕೊಂಡು ನಾನು ತವರಿಗೆ ಹೋದ ಉಮೇದಿನಲ್ಲಿದ್ದೆ.

ಅಟ್ಲಾಂಟಾದ  ಬ್ಲೂಕ್ಲಿಪ್ ರಸ್ತೆಯ ಮ್ಯಾರೀಯೆಟ್ಟದ ಹೊಸ ಮನೆಯಲ್ಲಿ ಆಗಷ್ಟೇ ಒಕ್ಕಲಾಗಿದ್ದರು ಮಂಜರಿ ಮತ್ತವಳ ಕುಟುಂಬ. ಗೆಳತಿಯ ಮಗಳು ಮಂಜರಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಾಲ್ಯ ಕಳೆದವಳು. ಗಣೇಶ ಅವಳ ಇಷ್ಟದ ದೇವರು.  ಊರಿನಿಂದ  ತಮ್ಮ  ಕಳುಹಿಸಿದ್ದ ಗಣೇಶೋತ್ಸವದ ವಿಡಿಯೋ ನನಗೆ, ಅವಳ ಅಮ್ಮನಿಗೆ ತೋರಿಸಿ ಅಟ್ಲಾಂಟದಲ್ಲಿ ಲಾಗಯ್ತಿನಿಂದ ಇರುವ ಭಾರತೀಯ   ಸಮುದಾಯದವರು ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುತ್ತಿರುವ ಬಗ್ಗೆ ಹೇಳುತ್ತ ಬರುವ ವರುಷ ಚೌತಿಗೆ ನಮ್ಮ ಮನೆಯಲ್ಲೂ ಒಂದು ಪುಟ್ಟ ಮಣ್ಣಿನ ಗಣಪನನ್ನು ತಂದಿಟ್ಟು ಪೂಜಿಸಿ ವಿಸರ್ಜಿಸಬೇಕು… ಎನ್ನುವ ತನ್ನ ಮನದಿಚ್ಚೆ ಹಂಚಿಕೊಂಡಳು.

ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟಿಗೆ ಒಳಗಾಗಿ ಎರಡು ವರ್ಷಗಳ ಹಿಂದೆ ಮಂಜರಿಯ ಮನೆ  ಸಂಪೂರ್ಣ ಸುಟ್ಟು ಬೂದಿಯಾಗಿತ್ತು. ಉಟ್ಟ ಬಟ್ಟೆ ಹೊರತು ಬೇರೆ ಏನೂ ಇಲ್ಲದ ಪರಿಸ್ಥಿತಿ  ಈ ದಂಪತಿಗಳಾಗಿತ್ತು.  ಆ ಹೊತ್ತು ಮಗು ಸಹಿತ ಇವರು ಬೇರೆ ಕಡೆ ಹೋಗಿದ್ದರಿಂದ ಮೂರು ಜೀವಗಳು ಉಳಿದುಕೊಂಡಿದ್ದವು. ಮಾನವ ಪ್ರೀತಿಯ ಅದ್ಭುತ ಉಡುಗೊರೆಯನ್ನು ಹೊರ ದೇಶದಲ್ಲಿ ಕಂಡು ಉಂಡ ಈ ದಂಪತಿಗಳು ಹೊರದೇಶದಲ್ಲಿದ್ದು  ಜಾತ್ಯತೀತ ಮಾದರಿಯಲ್ಲಿ  ಸಂಬಂಧಗಳನ್ನು ಬೆಸೆದುಕೊಂಡವರು. ಮನೆ ಸುಟ್ಟುಹೋದ ಆ ಸನ್ನಿವೇಶ ನೋವಿನದ್ದೇ ಆದರೂ ಅಟ್ಲಾಂಟದ ದಟ್ಟ ಹಸಿರು ಕಾನನದ ನಡುವೆ ಇಂಡೋ ಅಮೇರಿಕನ್ ಶೈಲಿಯ ಅಪರೂಪದ ಮನೆ  ತಾವೇ  ನಿಂತು ಕಟ್ಟುವುದಕ್ಕೆ ಕಾರಣವಾಗಿತ್ತು.  ಈ ಅನುಭವ ಬೆಲೆ ಕಟ್ಟಲಾಗದ್ದು. ವಿದೇಶದಲ್ಲಿ ಸಾಮಾನ್ಯವಾಗಿ  ಮನೆ ಕಟ್ಟುವ  ಉಸಾಬರಿಗೆ ಯಾರೂ ಹೋಗುವುದಿಲ್ಲ. ಕಟ್ಟಿರುವ  ಮನೆ  ಕೊಳ್ಳುವುದೇ  ಹೆಚ್ಚು. ಅಟ್ಟಾಂಟದ ಸಜಿತ್ ಮಂಜರಿಗೆ ಅವರ ಈ ಕನಸಿನ  ಮನೆ ಕಟ್ಟಿದವರು ಕಂಟ್ರಾಕ್ಟರ್ ಆದರೂ ವಿನ್ಯಾಸದ ಪ್ರತಿ ಹಂತದಲ್ಲೂ ವಸ್ತುಗಳ ಆಯ್ಕೆಯನ್ನೂ ಒಳಗೊಂಡಂತೆ ಹೋಮ್ ವರ್ಕ್ ಮಾಡಿದವರು ಗಂಡಹೆಂಡತಿ. ಹೊಸ ಚಿಗುರು ಹಳೇ ಬೇರು ಎನ್ನುವಂತೆ ಅದ್ಭುತ ಕಲಾತ್ಮಕತೆ ಇರುವ   ದಂಪತಿಗಳು ಇವರು. ಜೊತೆಗೆ ಇಬ್ಬರಲ್ಲೂ ಸುಟ್ಟ  ಮನೆ  ಮರಳಿ ಕಟ್ಟಿ  ಅಲ್ಲಿ ಬದುಕು ನಡೆಸಬೇಕು ಎನ್ನುವ  ಛಲವಿತ್ತು.

ಅಮೇರಿಕಾದ ಮನೆಗಳ ಒಳ ವಿನ್ಯಾಸ ಸರಳವಾಗಿದ್ದು ವಾಸಕ್ಕೆ ಅನುಕೂಲವಾಗಿರುತ್ತದೆ… ಗೋಡೆ, ಮೇಲುಚಾವಣಿ, ನೆಲವೂ ಸೇರಿದಂತೆ ಹೆಚ್ಚಿನ ಸಂದರ್ ಗಳಲ್ಲಿ ಮರಗಳನ್ನು ಉಪಯೋಗಿಸಿ ಮಾಡುವ ಇಲ್ಲಿನ ಮನೆಗಳು ಹೊರಗೆ ನೋಟಕ್ಕೆ ಬಹುತೇಕ ಒಂದೇ ರೀತಿ ಇರುತ್ತದೆ. ಬೆಂಕಿ, ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟಿಗೆ ಮನೆಗಳು ಆಹುತಿಯಾಗುವ ಸನ್ನಿವೇಶ ಹೆಚ್ಚಾಗಿ ಇರುವುದರಿಂದ ಇಲ್ಲಿ ಮನೆಗೆ ಇನ್ಸೂರೆನ್ಸ್ ಕಡ್ಡಾಯವಾಗಿರುತ್ತದೆ. ಇತ್ತೀಚೆಗೆ ಇಂತಹ ಆಘಾತಗಳು ಸರ್ವೇಸಾಮಾನ್ಯ ಆಗಿರುವುದರಿಂದ ಹೊಸ ಮನೆ ಕೊಳ್ಳುವವರಿಗೆ ಲೋನ್ ಕೊಡುವ ಬ್ಯಾಂಕಿನಿಂದ ತೊಡಗಿ ಪ್ರತಿಯೊಂದು ಹಂತದಲ್ಲೂ ಈ ಬಗ್ಗೆ ವಿಚಾರಣೆಗಳಿರುತ್ತವೆ. ಸಿಸಿ ಕ್ಯಾಮೆರಾಗಳು ಕಡ್ಡಾಯವಾಗಿದ್ದು ಮನೆಗೆ ಇನ್ಸೂರೆನ್ಸ್ ನೀಡುವವರು ಗ್ಯಾಸ್, ಎಲೆಕ್ಟ್ರಿಕ್, ನೀರು ಪೂರೈಕೆ ವ್ಯವಸ್ಥೆ ಅವಘಡಗಳು ಸಂಭವಿಸುವ ಸನ್ನಿವೇಶ ಇದ್ದಾಗ ಆಟೋಮ್ಯಾಟಿಕ್ ಆಗಿ ನಿಂತು ಹೋಗುವ ವ್ಯವಸ್ಥೆ ಇದೆಯೇ ಎಂದು ಖಾತರಿಪಡಿಸಿಕೊಂಡು ವಿಮೆ ನೀಡುವರು.   ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವಂತೆ ಈ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಸುತ್ತಿ ಸುತ್ತಿ ಹೈರಾಣವಾಗ ಬೇಕಿದ್ದ ಪರಿಸ್ಥಿತಿಗಳು ಇಂದು ಬದಲಾಗಿವೆ. ಆಧುನಿಕ ಬಳಕೆಗಳಾದ ಇಂಟರ್ನೆಟ್, ಫೋನ್ ಇತ್ಯಾದಿ ಕಾರಣದಿಂದ  ಹೆಚ್ಚಾಗಿ ಕೂತಲ್ಲಿ ಕೆಲಸಗಳಾಗುತ್ತವೆ. ಅಮೆರಿಕಕ್ಕೆ ವಿದೇಶ ದಿಂದ ವಲಸೆ ಬಂದ ಹೆಚ್ಚಿನ ಉದ್ಯೋಗಿ ಕುಟುಂಬಗಳು ಸ್ವಂತ ಮನೆ ಕೊಳ್ಳುತ್ತಾರೆ.  ಇಲ್ಲಿ ಮನೆಗಳಿಗೆ ದುಬಾರಿ ಬಾಡಿಗೆ ಇರುವುದರಿಂದ ಆ ಹಣವನ್ನು ಕಂತು ಕಟ್ಟಿದರೆ ಏಳೆಂಟು ವರ್ಷಗಳಲ್ಲಿ ಮನೆ ತಮ್ಮದೇ ಆಗುತ್ತದೆ  ಎನ್ನುವ ದೂರದ ಆಲೋಚನೆಯೂ ಇವರಲ್ಲಿ ಇರುತ್ತದೆ… ಇಲ್ಲಿ ರಿಯಲ್ಎಸ್ಟೇಟ್ ವ್ಯವಹಾರ ಮಾಡುವ ದೊಡ್ಡ ಕಂಪನಿಗಳೇ ಇರುವುದರಿಂದ ಅವರು ನಿಗದಿ ಪಡಿಸಿದ ಶುಲ್ಕನೀಡಿದರೆ ಜಾಗ, ಮನೆ ಕೊಳ್ಳುವ, ಮಾರುವ ಪ್ರಕ್ರಿಯೆ ಜಗತ್ತಿನ ಯಾವ ಭಾಗದಲ್ಲಿದ್ದರೂ ನಿರ್ವಹಿಸುವುದು ಸುಲಭ.

ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಆಧುನಿಕತೆಗೆ ಸಮಾನತೆಗೆ ತಕ್ಷಣ ತೆರೆದುಕೊಳ್ಳುವ ಅಮೆರಿಕವನ್ನು ಕಟ್ಟಿ ಬೆಳೆಸಿದವರು ಅನಾದಿಯಿಂದಲೂ ವಲಸಿಗರು ಎನ್ನುವುದನ್ನು ಮರೆಯುವಂತಿಲ್ಲ. ಈಗ ಇವರಲ್ಲಿ ನಾನು ಮುಂದು ತಾನು ಮುಂದು ಎನ್ನುವ ಪೈಪೋಟಿ ಶುರುವಾಗಿದೆ. ಆ ಕಾರಣಕ್ಕಾಗಿ ಒಬ್ಬರನ್ನು ಒಬ್ಬರು ಹಣೆಯುವ ಸ್ಪರ್ಧೆ. ಈ ಸ್ಪರ್ಧೆಯ  ಕಾರಣದಿಂದಾಗಿಯೇ ಅಮೇರಿಕಾದ ಇತಿಹಾಸ ರಕ್ತದ ಕಲೆಯನ್ನು ಹೊತ್ತು ವಿಜೃಂಬಿಸುತ್ತಿದೆ.  ಹೊಟ್ಟೆ ಪಾಡಿಗಾಗಿ ವಲಸೆ ಬಂದ ಪ್ರತಿಯೊಬ್ಬರದ್ದು ಇವತ್ತು ಈ ಊರು ನಾಳೆ ಇನ್ನೊಂದು ಊರು ಎನ್ನುವಂತಹ ಅತಂತ್ರ ಪರಿಸ್ಥಿತಿ. ಊರು ಬಿಟ್ಟು ಇಲ್ಲಿನ ಸ್ವಾತಂತ್ರ್ಯದ ಸವಿ ಅನುಭವಿಸಿ ಕೆಟ್ಟ  ಇವರು ಯಾವತ್ತೂ ತಮ್ಮ ದೇಶಕ್ಕೆ ಹಿಂತಿರುಗಲು ಇಷ್ಟಪಡುವುದಿಲ್ಲ. ಮಕ್ಕಳಂತೂ ಬಿಡಿ ಇಲ್ಲಿಯವರೇ ಆಗಿ ಹೋಗಿದ್ದಾರೆ. ಆದರೂ ಇವರನ್ನು ವರ್ಣಭೇದದ ಕರಾಳ ಛಾಯೆ ಒಂದಲ್ಲ ಒಂದು ರೀತಿ ಭಾದಿಸುತ್ತದೆ ಎನ್ನುವುದು ಸುಳ್ಳಲ್ಲ. ಈಗ ಈ ಸರತಿ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುವವರು ಇಲ್ಲಿನ ಶ್ರಮ ಜೀವಿಗಳಾದ ಭಾರತೀಯರು ಮತ್ತು ಚೀನಾದವರು.

ವ್ಯಾಪಾರಕ್ಕಾಗಿ, ವಿಸ್ತಾರ ಕೃಷಿ ಭೂಮಿ ನೋಡಿ ಹೊಟ್ಟೆಪಾಡಿಗಾಗಿ ಉತ್ತಮ ಬದುಕು ಅರಸಿ ಪ್ರಾರಂಭವಾದ ಅಮೇರಿಕಾದ ವಲಸೆಗೆ ದೊಡ್ಡ ಇತಿಹಾಸವೇ ಇದೆ. ಮೊದಲು  ವ್ಯಾಪಾರ, ಧರ್ಮ ಪ್ರಸಾರಕ್ಕಾಗಿ ಯುರೋಪ್‌ನಿಂದ  ಕ್ರೈಸ್ತ ಮಿಷನರಿಗಳು  ಇಲ್ಲಿಗೆ ಬಂದರು.

ಸುದೀರ್ಘ ಇತಿಹಾಸವನ್ನು ಹೊಂದಿರುವ ಅಟ್ಲಾಂಟದ  ಮೂಲ ನಿವಾಸಿಗಳು ಚೆರೋಕಿ (cheroki)ಗಳು, ಮತ್ತು ಕ್ರೀಕ್‌ಗಳು. ಚಟ್ಟಿ ಹೋಚಿ ನದಿಯ ಸುತ್ತ ತಮ್ಮ ನೆಲೆ ವಿಸ್ತರಿಸಿಕೊಂಡ ಈ ಜನರು ಪೀಚ್ ಮರಗಳನ್ನು ಬಳಸಿ ಮನೆಗಳನ್ನು ಕಟ್ಟುತ್ತಿದ್ದರು… ನಂತರ ಕ್ರಿಶ್ಚಿಯನ್ ಮಿಷನರಿಗಳ, ಯುರೋಪಿನ ವ್ಯಾಪಾರಿಗಳ  ನಿರಂತರ ಆಕ್ರಮಣದಿಂದ ಇವರು ಅಂಚಿಗೆ ತಳ್ಳಲ್ಪಟ್ಟರು. ಇಲ್ಲಿನ ವಿಸ್ತಾರವಾದ ಕಾಡು ಮತ್ತು ಭೂಮಿಯನ್ನು ಕೃಷಿ ಮಾಡಲು ಬಳಸಿಕೊಂಡ ವಲಸಿಗರು ಇಲ್ಲಿ ಕೆಲಸ ಮಾಡಲು  ಆಫ್ರಿಕಾದಿಂದ ನೀಗ್ರೋಗಳನ್ನು ತರಿಸಿಕೊಂಡರು. ಗುಲಾಮರಾಗಿ ಬಂದ ಇವರು ಇಲ್ಲಿನ ವ್ಯವಸ್ಥೆಯ ಭಾಗವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಈ ನೆಲದಲ್ಲಿ ಬೇರೂರಲು ಸಂಘಟಿತ ಹೋರಾಟ ನಡೆಸಬೇಕಾಯಿತು. 18ನೆಯ ಶತಮಾನದ ಮಧ್ಯ ಭಾಗದಲ್ಲಿ ಗುಲಾಮಗಿರಿಗೆ ವಿದಾಯ ಹೇಳಲು ಆಫ್ರಿಕನ್ ಅಮೇರಿಕನ್ ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದಲ್ಲಿ ಆಡಳಿತ ಶಾಹಿಯ ವಿರುದ್ಧ ಸಿಡಿದೆದ್ದ ಜನಸಾಮಾನ್ಯರ ಹೋರಾಟವೇ ಅಮೇರಿಕನ್ ಸಿವಿಲ್ ವಾರ್.  ಆಗ ಅಮೆರಿಕಾದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್ ಮುಂದಾಳತ್ವದಲ್ಲಿ  ಗುಲಾಮಗಿರಿಯ ಅಂತ್ಯಕ್ಕಾಗಿ ಶಾಸನ ಸಿದ್ಧವಾಗಿ ಜಾರಿಗೆ ಬಂತು. ನಾಗರಿಕರೆಲ್ಲರಿಗೂ ಮತದಾನದ ಹಕ್ಕು ಲಭಿಸಿತು. ನಿಧಾನವಾಗಿ ಇವರು ರಾಜಕೀಯದ, ವ್ಯಾಪಾರದ ಭಾಗವಾಗಿ ವಿಸ್ತರಿಸಿಕೊಂಡರು.

ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಎನ್ನುವಂತೆ ಪುಟ್ಟ ಪುಟ್ಟ ಉದ್ಯೋಗ ಅರಸಿ ಯಾವುದೇ ದಾಖಲೆ ಇಲ್ಲದೆ ಅನಧಿಕೃತವಾಗಿ  ಬಂದವರ ಅಂಚಿಗೆ  ತಳ್ಳಲ್ಪಟ್ಟವರ ಸಂಖ್ಯೆ ಇಲ್ಲಿ ಸಾಕಷ್ಟು ಇದೆ. ಇತರೇ ಜನಸಾಮಾನ್ಯರ ಪರಿಸ್ಥಿತಿಯೂ ಅಂತಹ ಚೆನ್ನಾಗಿಲ್ಲ. ಇವರು ದಿನನಿತ್ಯದ ಜೀವನಕ್ಕಾಗಿ ಒದ್ದಾಟ ಮಾಡುತ್ತಿರುತ್ತಾರೆ. ಇದು ಯಾವ ಕಾಲಕ್ಕೂ ಎಲ್ಲೆ  ಇದ್ದರೂ ಸಮಾನತೆ ಎನ್ನುವುದು ಯಾವತ್ತೂ ಗಗನ ಕುಸುಮ ಎನ್ನುವುದಕ್ಕೆ ದೃಷ್ಟಾಂತ. ಹೀಗಿದ್ದೂ ಕ್ಯಾಟ್ರಿಂಗ್ ಸರ್ವಿಸ್, ರುಚಿ ಶುಚಿ ಊಟ ತಿಂಡಿ ತಿನಿಸುಗಳನ್ನು ಮಾರುವ ಬೀದಿ ಬದಿ ವ್ಯಾಪಾರಿಗಳಾದ ಈ ಬಹುತೇಕ ವಲಸಿಗರು. ಹೊಸದಾಗಿ ಕಲಿಯಲು ಉದ್ಯೋಗಕ್ಕಾಗಿ ವಲಸೆ ಬಂದ ವಿದ್ಯಾರ್ಥಿಗಳನ್ನು, ವೃತ್ತಿ ನಿರತರನ್ನು ತಣಿಸುವ ಅನ್ನ ದೇವತೆಗಳು ಎನ್ನುವುದನ್ನು ಮರೆಯುವಂತಿಲ್ಲ. ಅಮೇರಿಕಾದ ಪ್ರತಿಯೊಂದು ಮುಖ್ಯ ಪಟ್ಟಣಗಳಲ್ಲಿ  ಇರುವ ಈ ವಲಸಿಗರಲ್ಲಿ   ತುಸು ಹಣವಂತರಾದವರು ನಂತರ ಹೋಟೆಲ್‌ಗಳನ್ನು ತೆರೆದು ತಮ್ಮ ಜನರನ್ನು ಸ್ವಾಗತಿಸುತ್ತಾರೆ. ಹೀಗೆ ಅಟ್ಲಾಂಟಾದಲ್ಲಿ ಇಥಿಯೋಪಿಯಾದ ಇಂತಹದೊಂದು ಹೋಟೆಲಿಗೆ ಹೋದ ಅನುಭವ ವಿಶಿಷ್ಟವಾಗಿತ್ತು. ತಮ್ಮ ಸಂಸ್ಕೃತಿಯನ್ನು ಗೌರವಿಸುವ, ಪೋಷಿಸುವ ವಸ್ತುಗಳನ್ನು ಕಲೆಹಾಕಿ ಒಳ ವಿನ್ಯಾಸವನ್ನು ನಿರ್ಮಿಸಲಾದ ಈ ಹೋಟೆಲಿನ ಗಿರಾಕಿಗಳಲ್ಲಿ ಹೆಚ್ಚಿನವರು ಆಫ್ರಿಕನ್‌ಗಳೇ ಆಗಿದ್ದರೂ ಇತರ ಪ್ರವಾಸಿಗರು ಆಹಾರ ವಿಹಾರದ ಕುತೂಹಲಿಗಳಾಗಿ ಇಲ್ಲಿಗೆ ಬಂದಿದ್ದರು. ಮದುವೆ, ವ್ಯವಹಾರದ ಮಾತುಕತೆ, ಬರ್ತಡೇ ಪಾರ್ಟಿಗಳು ಇಲ್ಲಿ ನಡೆಯುತ್ತದೆ. ಇಲ್ಲಿ ಬರುವ ಗಿರಾಕಿಗಳಿಗೆ ಮೊದಲು ಇಥಿಯೋಪಿಯಾದ ವಿಶೇಷ ಪೇಯ ನೀಡಿ ಸ್ವಾಗತ ನೀಡಿದರು. ಊಟದ ಮೆನು ನೀಡುವ ಇಥಿಯೋಪಿಯಾದ ಹುಡುಗಿಯರೇ ಈ ರೆಸ್ಟೋರೆಂಟ್‌ನಲ್ಲಿ ವ್ಯವಹಾರವನ್ನು ನಡೆಸುತ್ತಿದ್ದರು. ಇಲ್ಲಿ ಆಳು-ಅರಸ ಎನ್ನುವ ವ್ಯತ್ಯಾಸವಿಲ್ಲದೆ ಅವರು ಗ್ರಾಹಕರನ್ನು ಉಪಚರಿಸುತ್ತಿದ್ದ ರೀತಿ ಲವಲವಿಕೆಯಿಂದ ಕೂಡಿತ್ತು. ಅಮೇರಿಕಾದಲ್ಲಿ ಸೆಪ್ಟೆಂಬರ್ ಒಂದು ಕಾರ್ಮಿಕರ ದಿನಾಚರಣೆ. ಈ ಕಾರಣವಾಗಿ  ಅಂದು ಹೋಟೆಲಿನಲ್ಲಿ ಹಸಿಮಾಂಸ ಮತ್ತು ಮೀನಿನ ಹೊರತಾಗಿ ಬೇರೆ ಯಾವುದೇ ಖಾದ್ಯಗಳು ಲಭ್ಯವಿರಲಿಲ್ಲ. ಬೇರೆ ಗಿರಾಕಿಗಳು ಟ್ರಿಮ್ ಮಾಡಿದ ಹಸಿ ಮಾಂಸವನ್ನು ಸಾಸ್‌ನಲ್ಲಿ ಮುಳುಗಿಸಿ ತಿನ್ನುವ  ಚಂದವನ್ನು ನೋಡುತ್ತಾ ರೆಗ್ಯುಲರ್ ಊಟದ ಜೊತೆಗೆ ನಾವು ಮೀನು ತರಿಸಿದೆವು. ಊಟ ತನ್ನಿಚ್ಛೆ ನೋಟ ಪರರ ಇಚ್ಛೆ ಎನ್ನುವ ನಿರಂಬಳತೆಯಲ್ಲಿ ಅತ್ತಿತ್ತ ಕಣ್ಣು ಹಾಯಿಸುತ್ತಾ  ಕೂತಿದ್ದೆವು. ಅಷ್ಟರಲ್ಲಿ ಎರಡು ಹರಿವಾಣಗಳಲ್ಲಿ ಬಂದ ದೊಡ್ಡ ಅರ್ಧ ಟೇಬಲ್ ಗಾತ್ರದ  ಇತಿಯೋಪಿಯದಲ್ಲಿನ ಮುಖ್ಯ ಆಹಾರವಾದ ಟಫ್ ಧಾನ್ಯದ ಇಂಜರಾ ದೋಸೆಯನ್ನು ಅಲ್ಲಿನ  ಕೆಲವು ವಿಶೇಷ ವ್ಯಂಜನಗಳೊಂದಿಗೆ ತಂದಿಟ್ಟರು. ಅದನ್ನು ಸವಿಯುವುದರಲ್ಲಿಯೇ ಸುಸ್ತು ಆದೆವು. ಉಳಿದ ಖಾದ್ಯಗಳನ್ನು ಮನೆಗೂ ಕಟ್ಟಿಕೊಂಡು ಹೋದೆವು. ವಲಸಿಗರ ನಾಡು  ಅಮೇರಿಕಾದ ಯಾವ ಭಾಗಕ್ಕೆ ಹೋದರೂ ಚೀನಾ, ಭಾರತ, ಆಫ್ರಿಕಾ, ಜರ್ಮನ್, ಜಪಾನ್, ಯುರೋಪ್, ಮೆಕ್ಸಿಕೋ ಹೇಗೆ ವಿಶ್ವದ ಯಾವ ಭಾಗದ ಆಹಾರಗಳು ಅದೇ ಸ್ವಾದದೊಂದಿಗೆ ಲಭ್ಯವಿರುತ್ತದೆ ಅನ್ನೋದು  ನನ್ನ ಮೂರು ಸಲದ ಅಮೆರಿಕಾದ ಭೇಟಿಯಲ್ಲಿ ಕಂಡುಕೊಂಡ ಸತ್ಯ.

ನಾವು ಅಟ್ಲಾಂಟಾದಲ್ಲಿದ್ದ ಎರಡನೆಯ ದಿನ  ಮಗು ಕವೀರ್‌ಗೆ ಶಾಲೆಗೆ ರಜೆ ಇತ್ತು. ಅಂದು ಮನೆಗೆ ಒಂದು ಗಂಟೆ ದೂರದಲ್ಲಿರುವ  ಜಾರ್ಜಿಯದ ಕ್ರಾಟ್ರಸ್ ವೆಲ್ಲ ವೆಯಿನ್ಮನ್ ಮಿನಿರಲ್ ಮ್ಯೂಸಿಯಂ ಗೆ ಹೋಗಲು ದಂಪತಿಗಳು ಮೊದಲೇ ಪ್ಲಾನ್ ಮಾಡಿದ್ದರು. 1983ರಲ್ಲಿ ನಿರ್ಮಿಸಲಾದ ಈ ಮ್ಯೂಸಿಯಂ 12000 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿತ್ತು. ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ಬೆಂರ್ಟ್ಲಿ ಪ್ಲಾನಿಟೋರಿಯಂ ಸಪ್ತರ್ಷಿ ಮಂಡಲವನ್ನು ಕಾಲ್ಪನಿಕತೆಯ ಬೆರಗಿನೊಂದಿಗೆ ಇಲ್ಲಿ ಕೂತು ಮಕ್ಕಳು ದೊಡ್ಡವರು ವೀಕ್ಷಿಸಬಹುದು.  ಫಾಸ್ಸಿಲ್ ಮತ್ತು ಮಿನರಲ್‌ಗಳ ಮ್ಯೂಸಿಯಂ  ಹಿರಿಕಿರಿಯರು ಜೊತೆಗೆ ವೀಕ್ಷಿಸಬಹುದಾದ ಇಲ್ಲಿ ಫಾಸ್ಸಿಲ್ ಮತ್ತು  ಮಿನರಲ್‌ಗಳ ಸಂಶೋಧನೆಯ ಹಿನ್ನೆಲೆಯನ್ನೂ  ಒಳಗೊಂಡ ಪೂರ್ಣ ವಿವರಗಳು  ಲಭ್ಯವಿದೆ. ಶತಶತಮಾನಗಳಿಂದ ಭೂಮಿಯ ಅಂತರಂಗದಲ್ಲಿ  ಪಳೆಯುಳಿಕೆಗಳಾಗಿ ಹೋದ ಗಿಡ, ಮರ, ಪ್ರಾಣಿ, ಪಕ್ಷಿ ಲೋಕದ  ವೈವಿಧ್ಯತೆಗಳನ್ನೂ ಅಗಾಧತೆಯನ್ನು  ತೆರೆದಿಡುವ ಲೋಕ ಇದು. ಅನಾದಿ ಕಾಲದಿಂದ ತೊಡಗಿ ಇತ್ತೀಚಿನವರೆಗಿನ ಬೈಸಿಕಲ್‌ನಿಂದ  ತೊಡಗಿ ವಿಮಾನ,  ಕಾರು, ಮೋಟಾರ್‌ಗಳನ್ನೂ ಒಳಗೊಂಡ ವಾಹನಗಳ ಅದ್ಭುತ ಸಂಗ್ರಹಗಳ  ಇನ್ನೊಂದು ಮ್ಯೂಸಿಯಂ ಇಲ್ಲಿದೆ. ಮಕ್ಕಳ ಆಕರ್ಷಣೆಯ ವಿಶೇಷ ತಾಣ  ಫಾಸ್ಸಿಲ್ ಸಂಶೋಧನೆಯ ಪ್ರಾತ್ಯಕ್ಷಿಕೆ, ಸಮುದ್ರದಾಳದ ಮುತ್ತು ರತ್ನಗಳ ವೈವಿಧ್ಯಮಯ ಕಾಗುಣಿತವನ್ನು ತೆರೆದಿಡುವ ಶೋಧಿಸುವ ಸಂಗ್ರಹಿಸುವ  ಸಣ್ಣ ಮಾದರಿಗಳ ಪ್ರಾತ್ಯಕ್ಷಿಕೆ ಇಲ್ಲಿದ್ದು ಮಕ್ಕಳ ರಜಾ ದಿನದ ಕಲಿಕೆಯಾಗಿ ಉಪಯುಕ್ತವಾಗಿದೆ.

ಅಮೇರಿಕಾದಲ್ಲಿ ವಸತಿ ಪ್ರದೇಶಗಳನ್ನು ಕಮ್ಯುನಿಟಿ ಎಂದು ಕರೆಯುತ್ತಾರೆ. ಈ ವಸತಿ ಭಾಗದ ಹೊರಾಂಗಣದ  ಜವಾಬ್ದಾರಿ ಇಲ್ಲಿ ವಾಸ್ತವ್ಯ ಹೊಂದಿದವರದ್ದಾಗಿರುತ್ತದೆ. ಲ್ಯಾಂಡ್ ಸ್ಕೇಪ್, ಗಾರ್ಡನಿಂಗ್, ಕಮ್ಯುನಿಟಿ ಹಾಲ್, ರಿಕ್ರಿಯೇಶನ್ ಕ್ಲಬ್ ಹಿರಿಯರಿಗೆ ಮಕ್ಕಳಿಗೆ ಒಳ-ಹೊರ ಕ್ರೀಡಾಂಗಣ, ಪಿಕ್ನಿಕ್ ಸ್ಪಾಟ್ ಈ ಎಲ್ಲವನ್ನು ನಿಗದಿತ ಶುಲ್ಕ ವಿಧಿಸಿ ಅಲ್ಲಿ ವಾಸ್ತವ್ಯ ಹೊಂದಿದವರಿಗೆ ನೀಡುವ ವ್ಯವಸ್ಥೆ ಅತ್ಯುತ್ತಮವಾಗಿದೆ. ಭಾರತದಲ್ಲಿ ನಮ್ಮ ಫ್ಲಾಟುಗಳಲ್ಲಿರುವ ಸೊಸೈಟಿ ಮಾದರಿಯಲ್ಲಿ ಕಾರ್ಯನಿರ್ವಹಿಸುವ  ಹೋಮ್  ಓನರ್ಸ್ ಎಸೋಸಿಯೇಷನ್  ತಮ್ಮ ತಂಡಗಳನ್ನು ಚುನಾವಣೆಯ ಮೂಲಕ ಪ್ರತಿ ವರ್ಷ ಆಯ್ಕೆ ಮಾಡುತ್ತಾರೆ… ಈ ಕಮ್ಯುನಿಟಿಯಲ್ಲಿ ವಾಸ್ತವ್ಯ ಹೊಂದಿದವರ ಯೋಗಕ್ಷೇಮದ   ಎಲ್ಲಾ ಖರ್ಚು ವೆಚ್ಚಗಳಿಗಾಗಿ ನಿಗದಿತ ಶುಲ್ಕವನ್ನು  ಈ ಕಮ್ಯುನಿಟಿಯ ಸದಸ್ಯರು ನೀಡಬೇಕಾಗಿರುತ್ತದೆ.

ಅಟ್ಲಾಂಟದಲ್ಲಿದ್ದ ನಾಲ್ಕು ದಿನ ಬಾಲ್ಯದ ಗೆಳತಿ ಜೊತೆಗಿರಲಾಗಿ ನನ್ನ ವಾಕಿಂಗ್‌ಗೆ  ಮಜಾ ಇರುತಿತ್ತು. ಇಲ್ಲಿನ ಕಮ್ಯೂನಿಟಿಗಳೆಂದರೆ ಸುತ್ತ ಹಸಿರು ಗಿಡ ಮರ ಗಳಿಂದ ಆವೃತ್ತವಾಗಿರುವ ತೋಟದ  ಮಧ್ಯದಲ್ಲೊಂದು ಮನೆ. ಮಗಳ ಮನೆ ಗುರುತಿಗೆ ಗೆಳತಿ ನೆನಪಿನಲ್ಲಿ ಇಟ್ಟುಕೊಂಡದ್ದು ಇಂತಹದ್ದೇ ಒಂದು ಮರ. ಇಲ್ಲಿ ದಾರಿ ತಪ್ಪುವ ಮಾತಿಲ್ಲ ಬಿಡಿ. ಕಾಡು ನಾಡು ಜೋಡಿಸುವ ರಸ್ತೆಗಳಲ್ಲಿ ಎತ್ತ ಹೋದರೂ ಮುಖ್ಯ ರಸ್ತೆಗೆ ಬಂದು ಕೂಡಲೇ ಬೇಕಲ್ಲ.

ಒಂದು ಮುಂಜಾವು ಇಬ್ಬನಿಯಿನ್ನೂ ಕೆನೆಗಟ್ಟಿರುವ ಹೊತ್ತು ನಮ್ಮ ಸವಾರಿ  ರಸ್ತೆಯುದ್ದ ನಡೆದು ಸೇರಿದ್ದು ಆ ಕಮ್ಯುನಿಟಿ ಯ ರಿಕ್ರಿಯೇಶನ್ ಕ್ಲಬ್‌ಗೆ. ಇಲ್ಲಿ ವಯಸ್ಕರು, ಯುವಕ ಯುವತಿಯರು ಮಕ್ಕಳು ಬೆವರಿಳಿಸಲು ಬಾಸ್ಕೆಟ್ ಬಾಲ್, ಶೆಟ್ಲ್, ಬ್ಯಾಡ್ಮಿಂಟನ್, ಸೈಕ್ಲಿಂಗ್ ಹೀಗೆ ಒಳಾಂಗಣ ಹೊರಾಂಗಣ ಎಂದು ವಿವಿಧ ಕ್ರೀಡೆಗಳಲ್ಲಿ ತೊಡಗಿಕೊಂಡಿರುವುದು ಕಾಣಿಸುತ್ತಿತ್ತು… ಅಲ್ಲಿ ಕಳೆದ ಮೂರು ದಿನಗಳಿಂದ ಗೆಳತಿ ನಿನಗೊಂದು ಜಾಗ ತೋರಿಸಲಿಕ್ಕೆ ಇದೆ ಎಂದು ಧ್ಯಾನಿಸುತಿದ್ದ ಜಾಗ ತಲುಪಲು ಇನ್ನೂ ದೂರವಿತ್ತು.

ಸಮುದ್ರಕ್ಕೆ ಮೂರು ಗಂಟೆ ಅಂತರದಲ್ಲಿರುವ ಅಟ್ಲಾಂಟ ದಟ್ಟವಾದ ಕಾಡುಗಳ ನಾಡು ಎನ್ನುವುದು ಗೊತ್ತಿತ್ತು. ಕಾಡೊಳಗಿನ ಪ್ರಾಕೃತಿಕ ಬೆರಗನ್ನು ಅವುಗಳ ಎಲ್ಲ ವೈವಿಧ್ಯತೆಯೊಂದಿಗೆ ಕಾಪಿಟ್ಟುಕೊಂಡು ಬಂದಿರುವ ಈ ಸೊಬಗನ್ನು ಮೌನ ವಾಗಿ ಕೂತು ವೀಕ್ಷಿಸಲು  ಗೆಳತಿ ಕರೆದೊಯ್ದದ್ದು ಕ್ಲಬ್‌ಗೆ ತಾಗಿಯೇ  ಇದ್ದ ಮರದ ಸೇತುವೆ ದಾಟಿ ಒಂದು ಫರ್ಲಾಂಗ್ ದೂರದಲ್ಲಿದ್ದ  ಕಾಡಿಗೆ. ಬೇಸಿಗೆಯಲ್ಲೂ ಝುಳು ಝುಳು ನೀರು ಹರಿಯುತ್ತಿದ್ದ ಕಿರು ತೊರೆಯಲ್ಲಿ ಇದ್ದ  ಕಲ್ಲಿನಲ್ಲಿ  ಕೂತರೆ ಬಾಲ್ಯದ  ನೆನಪು ಮರುಕಳಿಸದೇ ಇರುತ್ತದೆಯೇ? ಗಿಡ ಮರಗಳ ನಡುವೆ ಅಲ್ಲೊಂದು ಇಲ್ಲೊಂದು ಹಕ್ಕಿಗಳ ಚಿಲಿಪಿಲಿಗೆ ಕಿವಿಯಾಗುತ್ತಾ  ಸೂರ್ಯ ನೆತ್ತಿಗೇರುವವರೆಗೆ ಸುಮ್ಮನೆ  ಕೂತು ಕಳೆದೆವು.

ಆದರೆ ಅಮೆರಿಕದಲ್ಲಿ ಇಂದು ಎಲ್ಲವೂ ಚೆನ್ನಾಗಿದೆ ಎಂದು ಹೇಳುವಂತಿಲ್ಲ. ವಿಶ್ವದ ಇತರ  ದೇಶಗಳಂತೆ ಇಲ್ಲೂ  ಯುದ್ಧ ಭೀತಿಯ ಕಾರ್ಮೋಡ  ಕವಿದಿದೆ. ವರ್ಣಭೇದವಿದೆ. ಬಂಡವಾಳ ಶಾಹಿಗಳಿದ್ದಾರೆ. ಕಾರ್ಮಿಕರಿದ್ದಾರೆ, ಜನಸಾಮಾನ್ಯರಿದ್ದಾರೆ ಅಸಮಾನತೆ ಇದೆ.  ನಾಗರಿಕರಲ್ಲಿ ಯಾವಾಗ ಏನಾಗುತ್ತದೆ ಎಂಬ ಭಯ ಅನಿಶ್ಚಿತತೆ ಯಾವಾಗಲೂ ಇದ್ದೇ ಇದೆ. ಈ ಎಲ್ಲದರ ನಡುವೆ ಬದುಕು ಸಾಗುತ್ತಿರುತ್ತದೆ.

About The Author

ದೇವಿಕಾ ನಾಗೇಶ್

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ  ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ  ಹವ್ಯಾಸಗಳು.  

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ