ಆತುರಗಾಳಿ ಶಂಕರ ತನ್ನ ಜೇಬುಗಳು ಆಗಲೇ ತುಂಬಿರುವುದಾಗಿಯೂ ಕೆಳಗಿಳಿದು ಹೋಗಿ ರಸ್ತೆಯಲ್ಲಿ ನಮಗಾಗಿ ಕಾಯುತ್ತಿರುವುದಾಗಿಯೂ ಪಿಸುಗುಟ್ಟಿದ. ಹಂಗೆ ಪಿಸುಗುಟ್ಟಿದವನು ನಮ್ಮಿಬ್ಬರ ಮಾತಿಗೂ ಕಾಯದೆ ಕೊಂಬೆಯ ಮೇಲಿಂದ ಕೆಳಗೆ ನೆಗೆಯಲು ಮುಂದಾದ. ಆಗ ಅವನ ಚೆಡ್ಡಿ ಅವನು ಕೂತಿದ್ದ ಕೊಂಬೆಯ ಗೂಟದಂಥ ಮೋಟಿಗೆ ಸಿಕ್ಕಿಕೊಂಡುಬಿಟ್ಟಿತ್ತು. ಯಾವಾಗ ಅವನು ದಬುಕ್ಕಂತ ನೆಗೆದನೋ ಅವನ ಚೆಡ್ಡಿ ಪರಪರನೆ ಹರಿದು ಹೋದದ್ದಲ್ಲದೆ ಆಯ ತಪ್ಪಿ ಕೆಳಗೆ ಮಲಗಿದ್ದ ಕಿವುಡಜ್ಜನ ಮೇಲೆ ದೊಪ್ಪನೆ ಬಿದ್ದು ಬಿಟ್ಟ. ಹಾಗೆ ಬಿದ್ದವನು ಕ್ಷಣಾರ್ಧದಲ್ಲಿ ಎದ್ದು ನಮಗಾಗಿ ಕಾಯದೆ ತಪ್ಪಿಸಿಕೊಂಡು ಮಂಗಮಾಯವಾಗಿ ಬಿಟ್ಟ. ಆದರೆ ಆ ಹೊತ್ತಿಗಾಗಲೇ ಒಮ್ಮೆಗೇ ಗಾಬರಿ ಬಿದ್ದಿದ್ದ ಅಜ್ಜ ಬೊಬ್ಬಿರಿದು ಕೂಗಿಕೊಂಡದ್ದರ ಪರಿಣಾಮವಾಗಿ ಮನೆಯೊಳಗಿಂದ ಒಂದಿಬ್ಬರು ಕೈಯಲ್ಲಿ ಕುರುಡು ಲಾಟೀನೊಂದನ್ನು ಹಿಡಿದು ಮರದತ್ತ ಓಡಿ ಬಂದರು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ನಾಲ್ಕನೆಯ ಕಂತು
ನಮ್ಮದು ಕೂಡು ಕುಟುಂಬವಾಗಿದ್ದಾಗ ಕಟ್ಟಿಸಿದ್ದ ಕಂಬಸಾಲಿನ ಮನೆಯೊಂದು ಊರೊಳಗೆ ಇದೆ. ಅದೀಗ ನನ್ನ ಮೂವರು ಚಿಕ್ಕಪ್ಪಂದಿರುಗಳ ಪಾಲಿಗೆ ಸೇರಿದೆ. ಮೊದಲು ಆ ಮನೆಯ ಕಾಂಪೌಂಡನ್ನು ಹೊಕ್ಕ ಕೂಡಲೇ ಉದ್ದನೆಯ ಚಂದ ಪಡಸಾಲೆ ಸಿಗುತ್ತಿತ್ತು. ಪಡಸಾಲೆಯನ್ನು ದಾಟಿದರೆ ಅಷ್ಟೇ ದೊಡ್ಡ ನಡುಮನೆ. ಆ ನಡುಮನೆಯ ಉದ್ದಕ್ಕೂ ಆ ಕಾಲದ ಗಟ್ಟಿ ಮರದ ಹಲಗೆಗಳಿಂದ ಮಾಡಿದ್ದ ಅಟ್ಟ. ನಡುಮನೆ ಒಂದೇ ಆಗಿದ್ದರೂ ಆ ಮನೆಗೆ ಕೆತ್ತನೆಯ ಬಾಗಿಲನಿಲಗಳಿಂದ ಮಾಡಿದ ಎರಡು ತಲೆಬಾಗಿಲುಗಳು. ಪಾಲಾದ ಮೇಲೆ ಅವರಾಳ್ತಕ್ಕೆ ಅವರು ಗೋಡೆಗಳನ್ನು ಏಳಿಸಿಕೊಂಡರು. ಅವರವರ ಭಾಗಕ್ಕೆ ಸೇರಿದ ಪಡಸಾಲೆ ಹಾಗೂ ನಡುಮನೆ ಹಾಗೂ ಅಟ್ಟದಲ್ಲಿಯೂ ಗೋಡೆಗಳೆದ್ದವು. ಇನ್ನು ಪಡಸಾಲೆಗಳಿಗೂ ತುಂಡು ಗೋಡೆಗಳು ಬಂದವು. ಅವುಗಳ ಮೇಲೆ ಕಬ್ಬಿಣದ ಫ್ರೇಮ್ ಕೂರಿಸಿ ತಲೆ ಬಾಗಿಲುಗಳ ಜೊತೆಗೆ ಮರಿ ಬಾಗಿಲುಗಳನ್ನಿಟ್ಟುಕೊಂಡರು. ಪಡಸಾಲೆ ಪಕ್ಕಕ್ಕೆ ಸರಿಯಿತು. ಒಟ್ಟು ಒಂದು ಚಂದದ ಮನೆಯ ಅಂದವನ್ನು ಹಿಂಗೆ ಗೋಡೆಗಳು ನುಂಗಾಕಿಕೊಂಡವು.
ಇಂಥ ಈ ಮನೆಯ ಎದುರಿಗೊಂದು ಸೇದುವ ಬಾವಿ. ಸುಮಾರು ಏಳೆಂಟು ಮಟ್ಟಗಳಷ್ಟು ಆಳದ್ದು. ಇಡೀ ಬಾವಿ ಪೋಣಿಸಿದ ಕಲ್ಲುಗಳಿಂದ ಅಚ್ಚುಕಟ್ಟಾಗಿ ಕಟ್ಟಲ್ಪಟ್ಟಿದೆ. ಬಾವಿಯ ಸುತ್ತ ಏಳೆಂಟು ಅಡಿಗಳಷ್ಟು ಕಲ್ಲು ಚಪ್ಪಡಿಗಳನ್ನು ಹಾಸಲಾಗಿದೆ. ಬಾವಿಯ ಇಕ್ಕೆಲಗಳಿಗೂ ಎದುರಾಬದುರು ಎರಡು ಕಲ್ಲು ಕಂಬಗಳನ್ನು ಬಾವಿಯ ಕಟ್ಟೆಗೆ ಇಳಿಜಾರಾಗಿ ನಿಲ್ಲಿಸಿ ಆ ಕಂಬಗಳ ಬಾವಿಯ ಕಡೆಗಿರುವ ತುದಿಗಳಿಗೆ ತೂತ ಹಾಕಿ ಆ ತೂತಿಗೆ ಕಬ್ಬಿಣದ ಸಲಾಕೆಯೊಂದನ್ನು ಹಾಕಿ ಆ ಸಲಾಕೆಗೆ ರಾಟೆಗಳನ್ನು ಜೋಡಿಸಲಾಗಿದೆ. ಆ ರಾಟೆಗಳು ಇವತ್ತಿಗೂ ತಿರುಗಿಸಿದರೆ ಹಂಗೇ ತಿರುಗುತ್ತವೆ. ಊರಿಗೆ ಹೋದಾಗ, ಊರೊಳಕ್ಕೆ ಹೋದಾಗ ಯಾವಾಗಲಾದರೊಮ್ಮೆ ಈ ಗಾಲಿಗಳನ್ನು ತಿರುಗಿಸುತ್ತಾ ಬಾವಿಯನ್ನು ಇಣುಕಾಕುತ್ತೇನೆ. ಎಷ್ಟೋ ಸಾರ್ತಿ ನಮ್ಮಂಥ ಮಕ್ಕಳು ಕೆಲವೊಮ್ಮೆ ಸೇದುವ ಭರದಲ್ಲಿ ಕಣ್ಣಿ ನುಸುಕಂಡು ಬಿಂದಿಗೆಗಳು ಬಾವಿಯೊಳಕ್ಕೆ ಬಿದ್ದುಬಿಡುತ್ತಿದ್ದವು. ಹಾಗೆ ಬಿದ್ದವುಗಳನ್ನು ಮೇಲೆತ್ತಲು ಪಾತಾಳಗರಡಿಯನ್ನು ಬಳಸಲಾಗುತ್ತಿತ್ತು. ಅದಕ್ಕೂ ಸಿಗದಿದ್ದಾಗ ಯಾರಾದರೊಬ್ಬರು ಹಗ್ಗದ ನೆರವಿನಿಂದ ಬಾವಿಯೊಳಕ್ಕೆ ಇಳಿದು ಬಿಂದಿಗೆಯನ್ನು ಮೇಲೆತ್ತಿ ತರುತ್ತಿದ್ದರು. ಅದೇರೀತಿ ರಾಟೆಗಳು ಕೈಗೆ ಎಟಕದಿದ್ದ ವಯಸ್ಸಿನಲ್ಲಿ ಸೇದುವ ಹಗ್ಗದ ಕಣ್ಣಿಯನ್ನು ರಾಟೆಗಳ ಮೇಲಾಸಿ ಎಸೆದು ರಾಟೆಯ ನಡುವಲ್ಲಿದ್ದ ಜಾಡಿಗೆ ಕೂರಿಸಲು ಹೆಣಗುತ್ತಿದ್ದ, ಹಂಗೆ ಕೂರುತ್ತಲೇ ಪುಟಾಣಿ ಬಿಂದಿಗೆಯನ್ನು ಹಗ್ಗದ ಕಣ್ಣಿಗೆ ಕಟ್ಟಿ ನೀರು ಸೇದುತ್ತಿದ್ದ ಆ ದಿನಗಳು ನೆನಪಾಗುತ್ತವೆ.
ಒಂದು ಕಾಲದಲ್ಲಿ ಈ ಬಾವಿ ಊರಂಥ ಊರಿಗೆಲ್ಲಾ ಕುಡಿಯುವ ನೀರಿನ ದಾಹವನ್ನು ಇಂಗಿಸುವ ಸಿಹಿ ನೀರಿನ ತಾಣವಾಗಿತ್ತು. ಇನ್ನು ಮಿಕ್ಕಂತೆ ಮತ್ತೂ ಊರೊಳಗೆ ಕರಿಯಮ್ಮನ ಗುಡಿಯ ಎದುರು ಮತ್ತೊಂದು ಬಾವಿಯಿತ್ತು. ಇತ್ತೀಚೆಗೆ ಅದನ್ನು ನೋಡಿಲ್ಲ. ಅದು ಉಪ್ಪು ನೀರಿನದು. ಅದರ ನೀರು ಸ್ನಾನ, ಪಾತ್ರೆ ತೊಳೆಯಲು ಮುಂತಾದವುಗಳಿಗೆ ಮಾತ್ರ ಬಳಕೆಯಾಗುತ್ತಿತ್ತು. ಕಾಲ ಬದಲಾದಂತೆ, ಮಳೆಗಾಲ ಕಡಿಮೆಯಾದಂತೆ, ಹಳ್ಳ ಕೊಳ್ಳಗಳೆಲ್ಲಾ ಹರಿವನ್ನು ನಿಲ್ಲಿಸಿದಂತೆ, ಬೋರ್ವೆಲ್ ಬಾವಿಗಳ ಹಾವಳಿ ಹೆಚ್ಚಾದಂತೆ ಇದನ್ನು ಯಾರೂ ಕ್ಯಾರೆ ಅನ್ನುತ್ತಿಲ್ಲ. ಆದರೆ ಸುತ್ತಮುತ್ತ ಇರುವ ಮನೆಯವರಿಗೆ ಕಾಳು, ಬೇಳೆ, ಮೆಣಸಿನಕಾಯಿಗಳನ್ನು ಹೊಣಾಕಲು ಇಲ್ಲಾ ಹೊಲಗುಯಿಲಿನ ಸಮಯದಲ್ಲಿ ಮೆದೆ ಒಟ್ಟುವ ತನಕ ಒಂದಷ್ಟು ದಿನ ಹುಲ್ಲಿನ ಹೊರೆಗಳನ್ನು ಪೇರಿಸಲು ಇಲ್ಲಾ ಪುಟ್ಟ ಪುಟ್ಟ ಮಕ್ಕಳ ಥರಾವರಿ ಆಟಗಳಿಗೆ ಬಾವಿಯ ಸುತ್ತಲೂ ಇರುವ ಕಲ್ಲಿನ ಹಾಸು ಬಳಸಲ್ಪಡುತ್ತಿದೆ.
ಬೆಳಗ್ಗೆ ಅಚ್ಚಾಗುವುದಕ್ಕೂ ಶುರುವಾಗುತ್ತಿದ್ದ ನೀರು ಸೇದಲೆಂದು ಬಂದವರ, ಈ ಬಾವಿಯ ಗಾಲಿಗಳ ಹಾಗೂ ಬಾವಿಯ ನೀರಿನಲ್ಲಿ ಬಿಂದಿಗೆಗಳು ತುಂಬಾ ತುಂಬಿಕೊಳ್ಳಲೆಂದು ದಪ್ ದಪ್ ಅಂತ ಅವುಗಳನ್ನು ಎತ್ತಿ ಹಾಕುತ್ತಿದ್ದ ಸದ್ದು ಹೆಚ್ಚೂ ಕಡಿಮೆ ತಿಂಡಿಯ ಹೊತ್ತಿನವರೆಗೆ, ಮುಂದುವರೆದು ದನಗಳನ್ನು ಮೇಯಲು ಬಿಟ್ಟುಕಂಡು ಹೋಗುವವರೆಗೂ ಒಂದೇ ಸಮ ಅಗುತ್ತಿತ್ತು. ಹಂಗೇ `ಇಷ್ಟೊಂದು ಬಿಂದಿಗೆಗಳನ್ನು ತಂದರೆ ಹೆಂಗೆ? ಎಷ್ಟೊತ್ತು ಅಂತ ಕಾಯೋದು?’ ಮುಂತಾಗಿ ಬೆಳಬೆಳಗ್ಗೆಯೇ ಜಗಳವೂ ಆಗುತ್ತಿತ್ತು. ಅದು ಕೆಲವೊಮ್ಮೆ ತಾರಕಕ್ಕೂ ಹೋಗುತ್ತಿತ್ತು. ಅಷ್ಟೊತ್ತಿಗಾಗಲೇ ಎದ್ದು ಪಡಸಾಲೆಯಲ್ಲಿ ಪವಡಿಸಿರುತ್ತಿದ್ದ ಅಜ್ಜ `ಲೇ ಅಪ್ಪಣ್ಣಿ ಯಾಕಿಂಗೆ ಆಡ್ತೀರೊ, ವಸಿ ಅನುಸರಿಸ್ಕಂಡು ಹೋಗ್ರಿ’ ಅಂತ ಕೂಗಿ ಹೇಳುತ್ತಿತ್ತು. ಅದು ಮನೆಯೊಳಗೆ ಇನ್ನೂ ಮಲಗಿರುತ್ತಿದ್ದವರಿಗೆ ಏಳುವ ಹೊತ್ತಾಯ್ತು ಅನ್ನುವ ಸಂದೇಶವೂ ಆಗುತ್ತಿತ್ತು.
ಇಂಥ ಬಾವಿಗೆ ಜಾತಿ ಗ್ರಹಣ ಬಡಿದಿತ್ತು. ಈ ಬಾವಿಯನ್ನು ಎಲ್ಲರೂ ಮುಟ್ಟುವಂತಿರಲಿಲ್ಲ. ಅದರಲ್ಲೂ ದಲಿತರು ಹತ್ತಿರವೂ ಸುಳಿಯುವಂತಿರಲಿಲ್ಲ. ಹಂಗಾಗಿ ಯಾರನ್ನೂ ಬಾವಿಯನ್ನು ಮುಟ್ಟಕೂಡದು ಅಂತ ನಿಷೇಧಿಸಿದ್ದರೋ ಅಂಥವರ ಹಿಂಡೇ ಆಟೊತ್ತಿಗೇ ಅಲ್ಲಿ ನೆರೆದಿರುತ್ತಿತ್ತು. ಬಾವಿಯಿಂದ ಒಂದಷ್ಟು ದೂರದಲ್ಲಿ ತಂತಮ್ಮ ಗಡಿಗೆಳನ್ನು ಇಟ್ಟುಕಂಡು ಮಕ್ಕಳು ಮರಿಗಳೊಂದಿಗೆ ಅವರೆಲ್ಲಾ ಕೂತಿರುತ್ತಿದ್ದರು. ಅವರುಗಳೊಳಗೆ ಕೆಲವೊಮ್ಮೆ ನನ್ನ ಗೆಣೆಕಾರ ಶಿವ ಕೂಡಾ ಇರುತ್ತಿದ್ದ. `ನಂಗೊಂದು ಗಡಿಕೆ ಹಾಕ್ರಪ್ಪ’ ಅಂತ ನೀರು ಸೇದಿಕಂಡು ಹೋಗುವವರನ್ನೆಲ್ಲಾ ಅವರು ಕೇಳುತ್ತಿದ್ದರು. ಹತ್ತು ಜನರನ್ನು ಕೇಳಿದರೆ ಯಾರೋ ಒಬ್ಬ ಮಾತ್ರ ಯಾರಿಗೋ ಒಬ್ಬರಿಗೆ ಒಂದು ಬಿಂದಿಗೆಯನ್ನು ಸೇದಿ ಹಾಕಿ ಹೋಗುತ್ತಿದ್ದ. `ಓಹ್ ಇದು ಬ್ಯಾರೆ ಕೇವು ದಿನಾಲೂ ನಮ್ಗೆ’ ಅಂತ ರೇಗಿ ಹಂಗೇ ಹೋಗುತ್ತಿದ್ದವರೇ ಜಾಸ್ತಿ. ಗೋವಿಂದಪ್ಪ ಅನ್ನುವ ಹತ್ತಿರದ ಸಂಬಂಧಿಕರೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ಯಾಕೋ ಏನೋ ತಮ್ಮ ಊರನ್ನು ಬಿಟ್ಟು ನಮ್ಮ ಮನೆಯಲ್ಲಿಯೇ ಬಂದು ಉಳಿದುಕೊಂಡಿದ್ದರು. ಅಂಥ ಹೊತ್ತಲ್ಲಿ ಅವರೇನಾದರೂ ಮನೆಯಲ್ಲಿದ್ದರೆ `ತಾಳ್ರಪ್ಪ ಬಂದೆ’ ಅಂತ ಅನ್ನುತ್ತಾ ಹೋಗಿ ಮೈಯ್ಯಲ್ಲಿ ಸತುವಿಲ್ಲದೇ ಇದ್ದರೂ ಮೆಲ್ಲಗೆ ಒಂದೊಂದೇ ಬಿಂದಿಗೆಯನ್ನು ಸೇದಿ ಹಾಕುತ್ತಿದ್ದರು. ಆಗ ನಾನೋ ಇಲ್ಲಾ ನನ್ನಂಥವರು ಯಾರಾದರೂ ಕಣ್ಣಿಗೆ ಬಿದ್ದರೆ ` ಲೇ ಪಾಪ ಬನ್ರುಲ ಇಲ್ಲಿ ಹಂಗೇ ವಸಿ ಒಂದು ಕೈ ಹಾಕಿ’ ಅಂತ ತುಂಬಿದ ಬಿಂದಿಗೆಯನ್ನು ಎಳೆಯಲು ಹಗ್ಗದಲ್ಲಿ ಜಾಗ ಮಾಡಿಕೊಡುತ್ತಿತ್ತು. ಗೋವಿಂದಪ್ಪನಂಥವರು ಸಿಗದ ದಿನ ಅವರು ತಿಂಡಿಯ ಹೊತ್ತಿನವರೆಗೂ ಕಾದೂ ಕಾದೂ ಖಾಲಿ ಕೊಡಗಳೊಂದಿಗೆ ಬೇಸರದಿಂದ ಹೋಗುತ್ತಿದ್ದ ಚಿತ್ರ ಈ ಚಣಕ್ಕೂ ಕಾಡುತ್ತಿದೆ. ಆ ಕಾಲಕ್ಕೆ ನನ್ನ ಊರಿನಲ್ಲಿ ಪಕ್ಕದ ಊರಾದ ಜೆ.ಸಿ.ಪುರದಲ್ಲಿ ಬಸಿ ಕಾಲುವೆ ಬಸ್ಲಿಂಗಪ್ಪನಂಥ ಒಬ್ಬರಾದರೂ ನನ್ನ ಊರಿನಲ್ಲಿ ಯಾಕಿರಲಿಲ್ಲ ಅಂತ ಈಗಲೂ ಅನಿಸುತ್ತದೆ. ಬಸ್ಲಿಂಗಪ್ಪನವರು ತನ್ನ ಊರಿನಲ್ಲಿ ಇಂಥದೇ ಸಮಸ್ಯೆಗೆ ಅತ್ಯಂತ ಮಾನವೀಯ ಹಾಗೂ ಧೈರ್ಯದ ಪರಿಹಾರ ಕಂಡುಕೊಂಡಿದ್ದರು. ಅದೆಂದರೆ ಊರಿನ ಎಲ್ಲರಿಗೂ ಬಾವಿಯಲ್ಲಿ ನೀರು ಸೇದಿಕೊಳ್ಳಲು ಬಿಡುವಂತೆ ಮೊದಲು ಕೇಳಿಕೊಂಡಿದ್ದರು. ಅತಿ ಜಾತಿಯ ಮನಸ್ಸುಗಳು ಒಪ್ಪದಿದ್ದಾಗ ಅವರು ತನ್ನ ಹೊಲದಲ್ಲಿ ದಲಿತರಿಗಾಗಿಯೇ ಬಾವಿಯೊಂದನ್ನು ತೋಡಿಸಿದ್ದರು.
ಇಂಥದೇ ಒಂದು ಅನುಭವ ನನಗೆ ತುಂಬಾ ಎಳವೆಯಲ್ಲೇ ಆಗಿತ್ತು. ಅದೂ ಪ್ರೈಮರಿ ಸ್ಕೂಲಿನಲ್ಲಿ. ನಾನು ಓದುತ್ತಿದ್ದ ಪ್ರೈಮರಿ ಸ್ಕೂಲಿನ ಮೂಲೆಯೊಂದರಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಲುವಾಗಿ ಗುಡಾಣದಂಥ ಮಡಕೆಯೊಂದಿರುತ್ತಿತ್ತು. ಮೂಲೆಯಲ್ಲಿ ಒಂದಷ್ಟು ಮರಳನ್ನು ಸುರಿದು ಆ ಮರಳಿನ ಮೇಲೆ ಅತ್ತ ಇತ್ತ ಜರುಗಾಡದಂತೆ ಕೂರಿಸಲಾಗಿತ್ತು. ಅದರ ಮುಚ್ಚಳದ ಮೇಲೆ ತಗ್ಗಿ ನುಗ್ಗೇಕಾಯಿಯಾಗಿದ್ದ ಸಿಲವಾರದ ಲೋಟವೊಂದನ್ನು ಇಡಲಾಗಿತ್ತು. ಯಾವಾಗ ಬೇಕಾದರೂ ಮಕ್ಕಳು ಅದರಿಂದ ನೀರನ್ನು ಕುಡಿಯಬಹುದಾಗಿತ್ತು. ಆದರೆ ಗೆಳೆಯ ಶಿವೂನ ಜೊತೆ ಹಟ್ಟಿಯಿಂದ ಬರುತ್ತಿದ್ದ ಮಕ್ಕಳು ಮಾತ್ರ ಯಾವತ್ತೂ ಆ ಮಡಕೆಯತ್ತ ಹೋಗಿದ್ದನ್ನಾಗಲಿ, ಅದರಿಂದ ಮಗೆದು ನೀರು ಕುಡಿದದ್ದನ್ನಾಗಲಿ ನಾನು ನೋಡಿರಲಿಲ್ಲ. ಅತ್ತ ಹೋಗಬಾರದು ಅದನ್ನು ಮುಟ್ಟಬಾರದು ಅಂತ ಯಾರು ಹೇಳಿದ್ದರೋ ಗೊತ್ತಿಲ್ಲ. ಯಾಕೆ ಅಂತ ಕೇಳುವಂಥ ವಿವೇಕದ ವಯಸ್ಸು ನಮ್ಮದಾಗಿರಲಿಲ್ಲ. ಹಂಗಾಗಿ ಆ ಬಗ್ಗೆ ಮಿಕ್ಕ ಉಳಿದ ಮಕ್ಕಳಿಗೆ ಅದೊಂದು ಸಹಜ ಸಂಗತಿಯಾಗಿತ್ತು. ಅದೆಷ್ಟು ಅಮಾನವೀಯ ಸಂಗತಿ ಎನ್ನುವುದು ಬೆಳೆಯುತ್ತಾ ಹೋದಂತೆ ತಿಳಿಯುತ್ತಾ ಹೋಯ್ತು.

ಸ್ಕೂಲು ಶುರುವಾಗುವುದಕ್ಕೆ ಬಲು ಮುನ್ನವೇ ನಾವೆಲ್ಲಾ ಸ್ಕೂಲಿನ ಅಂಗಳವನ್ನು ತಲುಪಿ, ಅಂಗಳದ ಪಕ್ಕದಲ್ಲಿದ್ದ ಅರಳಿಮರದ ಕಟ್ಟೆಯ ಮೇಲೆ ಬ್ಯಾಗುಗಳನ್ನಿಟ್ಟು ಮೇಷ್ಟ್ರು ಬರುವ ಹೊತ್ತಿಗೆ ಕುಣಿದು ಕುಪ್ಪಳಿಸುತ್ತಿದ್ದ ಪ್ರಯುಕ್ತ ದಣಿವಾಗಿಬಿಡುತ್ತಿತ್ತು. ಹಂಗಾಗಿ ಮೇಷ್ಟ್ರು ಬಂದು ಬಾಗಿಲು ತೆಗೆಯುತ್ತಿದ್ದಂತೆಯೇ ದಡಬಡನೆ ಒಳಗೆ ನುಗ್ಗಿದವರೇ ಗುಡಾಣದತ್ತ ಓಡುತ್ತಿದ್ದೆವು. ಒಂದೇ ಉಸುರಿಗೆ ಕುಡಿಯುತ್ತಿದ್ದುದ್ದರಿಂದ ಕಟಬಾಯಿಂದ ಸೋರುತ್ತಿದ್ದ ನೀರಿನಿಂದ ಅಂಗಿಯ ಮುಂಭಾಗ ತೋಯ್ದು ಹೋಗುತ್ತಿತ್ತು. ನಮಗಾಗ ಎಂಜಲಿನ ಕಲ್ಪನೆಯೇ ಇರಲಿಲ್ಲ. ಒಬ್ಬರಾದ ಮೇಲೆ ಒಬ್ಬರು ಕಚ್ಚಿಯೇ ಕುಡಿಯುತ್ತಿದ್ದೆವು.
ಇಂಥ ಮಡಕೆ ಅದೊಂದು ದಿನ ಇದ್ದಕ್ಕಿದ್ದಂತೆ ಒಡೆದು ಹೋಗಿತ್ತು. ಅವತ್ತು ಸ್ಕೂಲನ್ನು ಬಿಡಲು ಸ್ವಲ್ಪ ಹೊತ್ತಿತ್ತು. ಮಕ್ಕಳನ್ನೆಲ್ಲಾ ಆಟ ಆಡಿಕೊಳ್ಳಲು ಆಚೆ ಬಿಟ್ಟು ಮೇಷ್ಟ್ರು ಸ್ಕೂಲಿನ ಕಾರಿಡಾರಿನಲ್ಲಿ ಕೂತು ಮಕ್ಕಳ ಮೇಲೆ ಕಣ್ಣಿಟ್ಟಿದ್ದರು. ಸ್ಕೂಲನ್ನು ಬಿಡುವ ಸಮಯವಾಗುತ್ತಲೇ ಎಲ್ಲರನ್ನೂ ಒಳ ಬರುವಂತೆ ಕರೆದು ಹೋದ ಮೇಷ್ಟ್ರನ್ನು ಒಡೆದ ಮಡಕೆಯ ನೀರು ಎದುರುಗೊಳ್ಳುತ್ತಲೇ ಥಟ್ಟನೆ ಮತ್ತೆ ಆಚೆ ಬಂದು `ಯಾವನು ನೀರಿನ ಮಡಕೇನ ಹೊಡ್ದಾಕಿರಾನು?’ ಅಂತ ಕೋಪದಿಂದ ಗದರಿಸಿದರು. ನಾವ್ಯಾರು ಇನ್ನೂ ಒಳಕ್ಕೆ ಹೋಗಿರಲಿಲ್ಲ. ಹಂಗಾಗಿ ಆಗಿದ್ದು ಏನು ಎಂಬುದು ನಮಗೆ ತಿಳಿದಿರಲಿಲ್ಲ. ಒಳಗೆ ಹೋಗಿ ನೋಡಿದರೆ ಒಡೆದು ಹೋದ ಮಡಕೆಯ ನೀರೆಲ್ಲಾ ನಾವು ಕೂರುತ್ತಿದ್ದ ಹಲಗೆ ಬೆಂಚುಗಳಡಿಗೆ ಬಂದು ನಿಂತಿತ್ತು. ಮಡಕ್ಕೆ ಬಿದ್ದಿರಲಿಲ್ಲ. ಯಾವ ಕಡೆಗೂ ವಾಲಿಕಂಡೂ ಇರಲಿಲ್ಲ. ಆದರೆ ಮಡಕೆಯ ಒಂದು ಭಾಗದಲ್ಲಿ ಕಲ್ಲು ಅಥವಾ ಯಾವುದೋ ಗಟ್ಟಿಯಾದ ವಸ್ತುವಿನಿಂದ ಗುದ್ದಿದಂತೆ ಕೈ ತೂರುವಷ್ಟು ತೂತ ಬಿದ್ದಿತ್ತು. ಅದನ್ನು ನೋಡಿದ ಯಾರಿಗೇ ಆಗಲೆ ಅದು ಬೇಕಂತಲೇ ಮಾಡಿರುವುದು ಅಂತ ಗೊತ್ತಾಗುತ್ತಿತ್ತು. ಯಾವತ್ತೂ ಹಿಂಗಾಗದಿದ್ದದ್ದು ಅವತ್ತು ಹಂಗಾಗಿದ್ದಕ್ಕೆ ಮೇಷ್ಟ್ರು ದಂಗಾಗಿದ್ದರು. ಒಬ್ಬೊಬ್ಬರನ್ನೇ ನಿಲ್ಲಿಸಿ ಕೇಳಿಯೇ ಕೇಳಿದರು. ಎಲ್ಲರೂ ನಾನಲ್ಲ. ನಂಗೊತ್ತಿಲ್ಲ ಅಂದೆವು. ಆದರೆ ನನ್ನ ಪಕ್ಕ ಕೂರುತ್ತಿದ್ದ ಗೆಣೆಕಾರ ಶಂಕರ ಮಾತ್ರ ಆಟಕ್ಕೂ ಬಾರದಂತೆ ನಾಪತ್ತೆಯಾಗಿದ್ದ. ಹಂಗೆ ಹೋಗುವಾಗ ಬ್ಯಾಗನ್ನು ಅಲ್ಲಿಯೇ ಬಿಟ್ಟು ಹೋಗಿದ್ದ. ಅದು ಮೇಷ್ಟ್ರಿಗೆ ಗೊತ್ತಾಗಲೇ ಇಲ್ಲ. ಅವರಿಗೆ ಕಾಣದಂತೆ ಅವನ ಬ್ಯಾಗನ್ನು ನನ್ನದರೊಳಕ್ಕೆ ತೂರಿಸಿಕೊಂಡೆ. ಬೆಳಕರಿದರೆ ಶಿವರಾತ್ರಿ ಹಬ್ಬ. ಎರಡು ದಿನ ರಜಾ. ಮಜಾ. ಅದರ ಗುಂಗಲ್ಲೇ ಮನೆಯ ದಾರಿ ಹಿಡಿದೆವು. ಆದರೆ ಅದೇ ಶಂಕರನ ಮಾತು ಕೇಳಿ ಸ್ಕೂಲಿನಲ್ಲಿ ಹಿಂದಿನ ದಿನ ತಿನ್ನಬೇಕಾದ ಲಾತಾಗಳನ್ನು ಮಾರನೆಯ ದಿನ ಶಿವರಾತ್ರಿ ಹಬ್ಬದಂದು ತಿಂದೆವು.
ನಮ್ಮೂರ ಜಾತ್ರೆಯನ್ನು ಬಿಟ್ಟರೆ ಅದರ ಆಸು ಪಾಸಿನಲ್ಲೇ ಬರುತ್ತಿದ್ದ ಶಿವರಾತ್ರಿ ಹಬ್ಬ ಬರುತ್ತಿತ್ತು. ಇದು ಜಾತ್ರೆಯಷ್ಟೇ ಖುಷಿಕೊಡಲು ಕಾರಣವಿತ್ತು. ಈ ಶಿವರಾತ್ರಿ ಹಬ್ಬದಲ್ಲಿ, ಯುಗಾದಿ, ಮಾರ‍್ನಾಮಿ, ಜಾತ್ರೆಗಳಂತೆ ನನಗೆ ಹೊಸ ಬಟ್ಟೆಗಳು ಸಿಗುತ್ತಿರಲಿಲ್ಲ. ಆದರೂ ಅದಕ್ಕಿಂತ ಮಿಗಿಲಾದ ಲೋಕವೊಂದನ್ನು ಅದು ಒದಗಿಸುತ್ತಿತ್ತು. ಮನೆಯಲ್ಲಿ ದೊಡ್ಡವರಿಗೆ ಈ ಹಬ್ಬ ಯಾವುದೋ ಪರಮ ಭಕ್ತಿಯ ಸಂಕೇತವಾಗಿದ್ದರೆ ನನ್ನಂಥವನಿಗೆ ತಮ್ಟ, ಎಳನೀರುಗಳ ಸೆಳೆತವಿರುತ್ತಿತ್ತು. ಜೊತೆಗೆ ನಮ್ಮ ಐನಾತಿ ಗೆಳೆಯರ ಗುಂಪು ಜೇನು ತುಪ್ಪದ ಇದ್ದಬದ್ದ ಬೇಲಿಬಂಕಗಳನ್ನು ಸುತ್ತುವುದು, ಮನೆಯವರ ಕಣ್ತಪ್ಪಿಸಿ ಎಲ್ಲಾದರೂ ಈಜು ಬೀಳುವುದು, ಹೊಲಮಾಳಗಳಲ್ಲಿ ಜೀರಿಂಬೆಗಳಿಗಾಗಿ ಅಲೆಯುವುದು ಮುಂತಾದ ಯಾವುದಾದರೊಂದು ಲೀಲೆಯಲ್ಲಿ ಮುಳುಗಿರುತ್ತಿದ್ದೆವು. ಆದರೆ ಅವತ್ತು ಅಂಥ ಲೀಲೆಗಳನ್ನು ಬಿಟ್ಟು ಸೀಬಿಕಾಯಿಯ ಆಸೆಗೆ ಬಿದ್ದು ನಗೆಪಾಟಲಿಗೀಡಾಗಿದ್ದೆವು. ಅವತ್ತಿನ ಆ ಚಣ ನನಗೆ ಪ್ರತಿ ಶಿವರಾತ್ರಿಲ್ಲೂ ಬಿಡದೆ ನೆನಪಾಗುತ್ತದೆ.
ಶಿವರಾತ್ರಿಯ ದಿನವಾದ್ದರಿಂದ ಮನೆಯಲ್ಲಿ ಅವತ್ತು ಉಪವಾಸ. ಎಂದಿನಂತೆ ತಿಂಡಿ ಊಟಗಳ ಬದಲು, ತಮ್ಟ, ಎಳನೀರುಗಳು. ಸಂಜೆಯ ಹೊತ್ತಿಗೆ ಪೂಜೆ ಮುಗಿದು ರಾತ್ರಿಯ ಜಾಗರಣೆಯ ಸಲುವಾಗಿ ಅಯ್ಯ ಈಶ್ವರ ದೇವರ ಗುಡಿಗೆ ಹೋಗಿದ್ದರು. ಹೋಗುವಾಗ ಜೊತೆಯಲ್ಲಿ ನನ್ನನ್ನೂ ಕರೆದುಕೊಂಡು ಹೋಗಿದ್ದರು. ಅಲ್ಲಿ ಆ ಹೊತ್ತಿಗಾಗಲೇ ಗುಡಿಯಂಥ ಗುಡಿಯ ತುಂಬಾ ಭಕ್ತರು ನೆರೆದಿದ್ದರು. ಇಡೀ ಗುಡಿ ಯಾವುದೋ ಧ್ಯಾನ ಲೋಕವನ್ನು ಧ್ಯಾನಿಸಲು ತುದಿಗಾಲಲ್ಲಿ ಕೂತಿತ್ತು. ಆದರೆ ನನ್ನ ಮತ್ತು ನನ್ನ ಗೆಳೆಯರ ಮನಸ್ಸುಗಳು ಹೊಸದೊಂದು ಯೇಜೀಪಿನ ಭಾರದಲ್ಲಿ ನಲುಗುತ್ತಿದ್ದವು.
ಆ ಯೇಜೀಪು ಸೀಬೆ ಕಾಯಿಗಳನ್ನು ಕದಿಯುವುದಾಗಿತ್ತು. ಅದಾವ ಕೆಟ್ಟ ಘಳಿಗೆಯಲ್ಲಿ ಗೆಳೆಯ ಶಂಕರ ಸೀಬೀ ಕಾಯಿಗಳನ್ನು ಕದಿಯಲು ಪುಸಲಾಯಿಸಿದನೋ ನಾನು, ತಪಲ ಮೂಗ್ಗುರಿಗಳಂತೆ ತಲೆಯಾಡಿಸಿದ್ದೆವು. ಅದಕ್ಕೆ ಕಾರಣ ಸೀಬಿಹಣ್ಣುಗಳ ಮೇಲಿದ್ದ ಆಸೆ ಒಂದೆಡೆಯಾದರೆ ಮತ್ತೊಂದೆಡೆ ಆ ಮರದ ಮನೆಯವರ ನಿರ್ದಯತೆ ಕಾರಣವಾಗಿತ್ತು. ಗುಡಿಯಲ್ಲಿ ಅಯ್ಯನ ಎದರು ಕೊಂಚ ಹೊತ್ತು ಕೂರುವ ಹಾಗೆ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಬರುವ ಹೊತ್ತಿಗಾಗಲೇ ಪೂರಾ ಕತ್ತಲಾಗಿ ಬಿಟ್ಟಿತ್ತು. ಅಷ್ಟೊತ್ತಿಗಾಗಲೇ ತಪಲ, ಶಂಕರ ಬಾವಿಯ ಕಟ್ಟೆಯಲ್ಲಿ ಕೂತು ನನಗಾಗಿ ಕಾಯುತ್ತಿದ್ದರು.
ನಮ್ಮ ಮನೆಯಿಂದ ಕೊಂಚ ದೂರದಲ್ಲಿ ನನ್ನ ವಾರಿಗೆಯವನ ಮನೆಯಿದೆ. ಕೆಲವು ವರ್ಷಗಳ ಹಿಂದೆ ಅವನು ತೀರಿಕೊಂಡ. ಹಂಗೆ ನೋಡಿದರೆ ಅವನೂ ಗೆಳೆಯನೇ. ಆ ಮನೆಯ ಪಕ್ಕದ ಕೊಪ್ಪಲಿನಲ್ಲೊಂದು ಚಂದ್ರ ಸೀಬಿ ಹಣ್ಣಿನ ಮರವಿತ್ತು. ಹಣ್ಣಿನ ಕಾಲದಲ್ಲಂತೂ ಅದು ನಮ್ಮ ಕಣ್ಣು ಕುಕ್ಕುತ್ತಿತ್ತು. ಆಗಲೋ ಈಗಲೋ ಅದರ ಕೊಂಬೆಗಳು ಮುರಿದು ಬೀಳುತ್ತವೆ ಅನ್ನುವಂತೆ ಕಾಯಿ ಬಿಡುತ್ತಿದ್ದ ಆ ಸೀಬೀ ಮರದಿಂದ ಮನುಷ್ಯರಿರಲಿ ಒಂದು ಪಕ್ಷಿಯು ಕೂಡಾ ಅಪ್ಪಿ ತಪ್ಪಿಯೂ ಅದರ ಹಣ್ಣನ್ನು ಮುಟ್ಟಲಾಗುತ್ತಿರಲಿಲ್ಲ. ಹಗಲು ರಾತ್ರಿ ಅಂಥ ಭರ್ಜರಿ ಕಾವಲಿರುತ್ತಿತ್ತು. ಮಕ್ಕಳಾಗಲಿ, ದೊಡ್ಡವರಾಗಲಿ ಕಾಸು ಬಿಚ್ಚಿದರೆ ಮಾತ್ರ, ಹಣ್ಣುಗಳು ಸಿಗುತ್ತಿದ್ದವು. ಕೊಡುವ ಕಾಸಿಗನುಗುಣವಾಗಿ ಸೀಬಿ ಕಾಯಿಗಳನ್ನು ಮಾರುತ್ತಿದ್ದ ಆ ಮನೆಯವರು ಅತ್ಯಂತ ಜಿಪುಣ ಗ್ರಾಸರು ಅಂತ ಆಗ ಅನಿಸುತ್ತಿತ್ತು. ಆ ಮನೆಯಲ್ಲೊಬ್ಬರು ಮುದುಕ ಇದ್ದರು. ಹಗಲು ಅಷ್ಟೋ ಇಷ್ಟೋ ಕಾಣುತ್ತಿದ್ದ ಅವರ ಕಣ್ಣುಗಳು ರಾತ್ರಿ ಪೂರಾ ಬಂದಾಗಿ ಬಿಡುತ್ತಿದ್ದವು. ಸಾಲದೆಂಬಂತೆ ಸುತರಾಂ ಕಿವಿ ಕೇಳುತ್ತಿರಲಿಲ್ಲ. ಆದರೂ ಸಂಜೆಯಾದೊಡನೆ ನಮ್ಮಂಥ ಕಳ್ಳರಿಂದ ಸೀಬಿಕಾಯಿಗಳನ್ನು ಕಾಪಾಡುವ ಸಲುವಾಗಿ ಮನೆಯವರು ಅವರನ್ನು ಆ ಸೀಬಿ ಮರದ ಕಾವಲಿಗೆ ಹಾಕಿ ಬಿಡುತ್ತಿದ್ದರು.
ನಾವು ಕಳ್ಳತನಕ್ಕೆ ಅಣಿಯಾಗಿದ್ದ ಅವತ್ತು ಕೂಡಾ ಆ ಮುದುಕ ಎಂದಿನಂತೆ ಕಾವಲಿಗಾಗಿ ಮರದಡಿ ಮಲಗಿದ್ದರು. ಅಂದುಕೊಂಡಂತೆ ನಾವು ಮೂವರು ಗೆಳೆಯರು ಕತ್ತಲೆಯ ಭಯಕ್ಕೆ ಎದೆಕೊಟ್ಟು ಆ ಕೊಪ್ಪಲಿನ ಬಳಿ ಹೋದೆವು. ಕೊಪ್ಪಲಿನ ತುಂಬಾ ಥರಾವರಿ ಗಿಡಗಳಿದ್ದುದರಿಂದ ಕತ್ತಲಿನ ಕಪ್ಪಿಗೆ ಮತ್ತಷ್ಟು ಕಪ್ಪು ಕೂಡಿಕೊಂಡು ಕೊಪ್ಪಲಂಥ ಕೊಪ್ಪಲೆಲ್ಲಾ ಗವ್ವೆನ್ನುತ್ತಿತ್ತು. ಪಕ್ಕದಲ್ಲೇ ಇದ್ದ ಮನೆಯ ಕಿಟಕಿಯೊಳಗಿನಿಂದ ಕುರುಡು ದೀಪದ ಬೆಳಕು ತಟ್ಟಾಡಿಕೊಂಡು ಆಚಿನ ಕತ್ತಲಿಗೆ ಇಣುಕಾಕುತ್ತಿತ್ತು.
ಬೇಲಿಯನ್ನು ಕೊಂಚ ಕಂಡಿ ಮಾಡಿಕೊಂಡು ಮೆಲ್ಲಗೆ ಒಳ ನುಸುಳಿದೆವು. ನಾವು ಸೀಬಿ ಗಿಡದ ಹತ್ತಿರಕ್ಕೆ ಹೋಗಿ ನಿಂತರೆ ಕಣ್ಣುಯ್ದರೆ ಕಣ್ಣು ಕಾಣುತ್ತಿಲ್ಲ. ಚಣೊತ್ತು ಕತ್ತಲಿಗೆ ಕಣ್ಣುಗಳನ್ನು ಹೊಂದಿಸಿಕೊಂಡೆವು. ಮೈ ಪೂರಾ ಕಂಬಳಿಯನ್ನು ಹೊದ್ದು ಮಲಗಿದ್ದ ಮುದುಕನ ಕಡೆಯಿಂದ ಆಗಲೇ ಗೊರಕೆಗಳು ಎದ್ದಾಡುತ್ತಿದ್ದವು. ಇನ್ನೂ ಹತ್ತಿರಕ್ಕೆ ಹೋಗಿ ಕೈಗೆ ಸಿಕ್ಕಿದ ಸೀಬಿ ಮರದ ಕೊಂಬೆಗಳನ್ನು ಹಿಡಿದುಕೊಂಡು ಸದ್ದಾಗದಂತೆ ತಡಕಿದೆವು. ಕನಿಷ್ಠ ಒಂದು ಪೀಚು ಕಾಯಿಯಂಥದೂ ಕೈಗೆ ಸಿಗಲಿಲ್ಲ. ಕೈಗೆಟಕುವಂಥವನ್ನೆಲ್ಲಾ ಕಿತ್ತು ಮಾರಿ ಬಿಟ್ಟಿದ್ದರು ಆ ಮನೆಯವರು. ನಮಗಾಗ ಉಳಿದದ್ದು ಒಂದೇ ದಾರಿ. ಎಲ್ಲರೂ ಮರ ಹತ್ತಿ ಆಗುವಷ್ಟು ಹಣ್ಣುಗಳನ್ನು ಕಿತ್ತುಕೊಳ್ಳುವುದು. ಆ ಮರ ದಿಪ್ಪಾಗಿತ್ತು. ನಮ್ಮಂಥವರ ಭಾರಕ್ಕೆ ಅದಕ್ಕೆ ಏನೇನೂ ಆಗಿರಲಿಲ್ಲ. ಒಬ್ಬೊಬ್ಬರಾಗಿ ಮರ ಹತ್ತಿ ಒಂದೊಂದು ಕೊಂಬೆಗೆ ಮುಗಿ ಬಿದ್ದೆವು. ಕೈಗೆ ಸಿಕ್ಕವುಗಳನ್ನೆಲ್ಲಾ ಹಣ್ಣು ಕಾಯಿ ಅನ್ನದೆ ಕಿತ್ತು ಕಿತ್ತು ಜೇಬು ತುಂಬಿಸಿಕೊಳ್ಳತೊಡಗಿದೆವು. ಅಷ್ಟರಲ್ಲಿ ಆತುರಗಾಳಿ ಶಂಕರ ತನ್ನ ಜೇಬುಗಳು ಆಗಲೇ ತುಂಬಿರುವುದಾಗಿಯೂ ಕೆಳಗಿಳಿದು ಹೋಗಿ ರಸ್ತೆಯಲ್ಲಿ ನಮಗಾಗಿ ಕಾಯುತ್ತಿರುವುದಾಗಿಯೂ ಪಿಸುಗುಟ್ಟಿದ. ಹಂಗೆ ಪಿಸುಗುಟ್ಟಿದವನು ನಮ್ಮಿಬ್ಬರ ಮಾತಿಗೂ ಕಾಯದೆ ಕೊಂಬೆಯ ಮೇಲಿಂದ ಕೆಳಗೆ ನೆಗೆಯಲು ಮುಂದಾದ. ಆಗ ಅವನ ಚೆಡ್ಡಿ ಅವನು ಕೂತಿದ್ದ ಕೊಂಬೆಯ ಗೂಟದಂಥ ಮೋಟಿಗೆ ಸಿಕ್ಕಿಕೊಂಡುಬಿಟ್ಟಿತ್ತು. ಯಾವಾಗ ಅವನು ದಬುಕ್ಕಂತ ನೆಗೆದನೋ ಅವನ ಚೆಡ್ಡಿ ಪರಪರನೆ ಹರಿದು ಹೋದದ್ದಲ್ಲದೆ ಆಯ ತಪ್ಪಿ ಕೆಳಗೆ ಮಲಗಿದ್ದ ಕಿವುಡಜ್ಜನ ಮೇಲೆ ದೊಪ್ಪನೆ ಬಿದ್ದು ಬಿಟ್ಟ. ಹಾಗೆ ಬಿದ್ದವನು ಕ್ಷಣಾರ್ಧದಲ್ಲಿ ಎದ್ದು ನಮಗಾಗಿ ಕಾಯದೆ ತಪ್ಪಿಸಿಕೊಂಡು ಮಂಗಮಾಯವಾಗಿ ಬಿಟ್ಟ. ಆದರೆ ಆ ಹೊತ್ತಿಗಾಗಲೇ ಒಮ್ಮೆಗೇ ಗಾಬರಿ ಬಿದ್ದಿದ್ದ ಅಜ್ಜ ಬೊಬ್ಬಿರಿದು ಕೂಗಿಕೊಂಡದ್ದರ ಪರಿಣಾಮವಾಗಿ ಮನೆಯೊಳಗಿಂದ ಒಂದಿಬ್ಬರು ಕೈಯಲ್ಲಿ ಕುರುಡು ಲಾಟೀನೊಂದನ್ನು ಹಿಡಿದು ಮರದತ್ತ ಓಡಿ ಬಂದರು. ನಮ್ಮ ಜೀವ ಬಾಯಿಗೆ ಬಂದಂತಾಗಿತ್ತು. ಇದ್ದ ಬದ್ದ ಜೇಬುಗಳಿಗೆಲ್ಲಾ ಸೀಬಿ ಹಣ್ಣುಗಳನ್ನು ತುಂಬಿಕೊಂಡು ಸೀಬಿಮರದದ ಕೊಂಬೆಗಳಿಗೆ ಆತು ಕೂತಿದ್ದ ನಮ್ಮನ್ನು ಆ ಕುರುಡು ಲಾಟೀನಿನ ಬೆಳಕಿನಲ್ಲೂ ಅವರು ಚಕ್ಕನೆ ಪತ್ತೆ ಮಾಡಿದರು. ಅಷ್ಟರೊಳಗಾಗಲೇ ನಮ್ಮೊಳಗೆ ಅಳು ಶುರುವಾಗಿ ಹೊಗಿತ್ತು. ಅಳುವಿನ ರಾಗ ನುಡಿಸುತ್ತಿದ್ದ ನಮ್ಮನ್ನು ಮೆಲ್ಲಗೆ ಕೆಳಗಿಸಿಕೊಂಡರು. ಮತ್ಯಾರಿದ್ದರು ನಿಮ್ಮ ಜತೇಲಿ ಅಂತ ಕೇಳಿದರು. ನಾವು ಅಪ್ಪೀತಪ್ಪಿ ಶಂಕರನ ಹೆಸರು ಹೇಳಲಿಲ್ಲ.

ಅವತ್ತು ಆ ಮನೆಯವರಿಗೆ ನಮ್ಮ ಮೇಲೆ ಅಪಾರ ಸಿಟ್ಟು ಬಂದಿತ್ತು. ಆ ಕಾರಣಕ್ಕೇ ಹಾಗೆ ಸಿಕ್ಕ ನಮ್ಮನ್ನು ಅವರು ಸೀದಾ ಭಜನೆ ನಡೆಯುತ್ತಿದ್ದ ಈಶ್ವರ ದೇವಸ್ಥಾನದ ಹತ್ತಿರಕ್ಕೇ ಎಳೆದೊಯ್ದರು. ಅಷ್ಟು ಹೊತ್ತಿಗೆ ಇಡೀ ಗುಡಿಯನ್ನು ಭಜನೆಯ ಹಾಡುಗಳು ಆಡಿಸುತ್ತಿದ್ದವು. ಅಂಥದ್ದೊಂದು ಧ್ಯಾನದ ಸಂತೆ ಕೂಡಾ ಸೀಬಿಮರದ ಮನೆಯರ ಸಿಟ್ಟನ್ನು ತಮಣೆ ಮಾಡಲಿಲ್ಲ. ನಮ್ಮಿಂದಾಗಿ ಅದೆಷ್ಟೋ ಹೊತ್ತು ಭಜನೆ ನಿಂತು ಆ ಹೊತ್ತಲ್ಲಿ ನನ್ನ ಅಯ್ಯ ಮತ್ತು ತಪಲ ಅಪ್ಪನಿಗೆ ಅವಮಾನವಾದಂತಾಗಿ ಅಷ್ಟೂ ಜನರೆದುರು ಚೆನ್ನಾಗಿ ಬಾರಿಸಿದರು. ಹಬ್ಬ ಕಳೆದು ವಾರವಾದರೂ ಶಂಕರ ಸ್ಕೂಲಿನತ್ತ ಮುಖ ಮಾಡಲಿಲ್ಲ.
(ಹಿಂದಿನ ಕಂತು: ರಾತ್ರಿ ಸ್ಕೂಲು, ಶನಿ ಮಹಾತ್ಮೆ ಮತ್ತು ಚಳ್ಳೆ ಹಣ್ಣಿನ ಮೇಷ್ಟ್ರು)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

