ಕವಿ ಸಮಾಧಿಯ ಎದುರು ನಿಂತು ಒಮ್ಮೆ ನಮಿಸಿ ಧನ್ಯರಾದೆವು. ಸುತ್ತಲೂ ಹಚ್ಚಹಸಿರು. ದನಕರುಗಳು ಧನ್ಯತೆಯಿಂದ ಮೇಯುತ್ತಿದ್ದವು. ಸುತ್ತಲೂ ನಿಲ್ಲಿಸಿರುವ ಕಲ್ಲುಗಳನ್ನು ನೋಡಿ ದಂಗಾದೆವು. ಸದಾ ಚಲನೆಯನ್ನು ಸಾರುವ ಈ ಕಲ್ಲುಗಳು ಕುವೆಂಪುರ ಅನಿತ್ಯವಾದ, ಆಗು ನೀ ಅನಿಕೇತನವನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದವು. ಧ್ಯಾನಪೀಠ ನೋಡಿ ಬಂಡೆ ಮೇಲೆ ಕುವೆಂಪು ಕುಳಿತುಕೊಂಡು ಸುತ್ತಲೂ ಗಿರಿಸಾಲುಗಳ ನೋಡಿಯೇ ‘ಹಸಿರಿನ ಗಿರಿಗಳ ಸಾಲೇ ನಿನ್ನಯ ಕೊರಳಿನ ಮಾಲೆ’ ಎಂದು ಬರೆದಿದ್ದಾರೆ ಎಂದು ಕಲ್ಪಿಸಿಕೊಂಡೆವು.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ
ಆರಂಭದಲ್ಲಿ ಎಡಭಾಗದಲ್ಲಿರುವ ತೇಜಸ್ವಿ ಸ್ಮಾರಕದ ಎದುರು ನಿಂತ ಕೆಟಿ ಒಮ್ಮೆ ನೋಡಿ ಭಾವುಕರಾದರು. ತಕ್ಷಣವೇ ಡ್ರೈವರ್‌ಗೆ ನಡಿ ಎಂದರು. “ಸಾರ್ ಮೇಲೆ ಕವಿಶೈಲಕ್ಕೆ ಹೋಗೋಣ ನೀವು ಬನ್ನಿ” ಎಂದೆ “ಏ ನಾನು ಬರೊಲ್ಲಾ ನೀವು ಹೋಗಿ ನೋಡ್ಕೊಂಡು ಬನ್ರೋ”, ಎಂದವರೇ ನಾನು ಪರಿಪರಿಯಾಗಿ ಕೇಳಿಕೊಂಡರು ಬಾರದೆ ಕಾರ್ಯಕ್ರಮ ಸಭಾಂಗಣದತ್ತ ನಡಿ ಎಂದು ಡ್ರೈವರ್‌ಗೆ ಹೇಳಿದರು. ಅವರ ಮುಖ ನೋಡಿದ ನಾನು ಯಾಕೋ ಸರಿ ಕಾಣುತ್ತಿಲ್ಲ ಮೂಡ್ ಸರಿ ಇಲ್ಲ. ಯಾಕೆ ಬೈಸಿಕೊಳ್ಳೋದು ಎಂದು “ಸರಿ ಸಾರ್” ಎಂದವರೆ ರಾಷ್ಟ್ರಕವಿ ಕುವೆಂಪು ಸ್ಮಾರಕ ಭವನದತ್ತ ಹೆಜ್ಜೆ ಇಟ್ಟೆವು.
ಅಲ್ಲಿದ್ದ ಗೆಳೆಯ ಹಿಂದೂ ಪತ್ರಿಕೆಯ ಸತೀಶ್ ಶಿಲೆ, ಕವಿ ಅರುಣ್ ಜೋಳದ ಕೂಡ್ಲಿಗಿ. ಕೆ. ಅಕ್ಷತಾ. ಬರಮಾಡಿಕೊಂಡರು. ನಮ್ಮ ತಾಲೂಕಿನ ಪ್ರಸಾದ್ ರಕ್ಷಿದಿ ಕುಟುಂಬ ಆಗಲೆ ಅಲ್ಲಿ ಬಂದಿಳಿದಿತ್ತು.
ಸೂಜಿ ಬಿದ್ದರೂ ಸದ್ದು ಕೇಳುವಂತಿದ್ದ ಕುವೆಂಪು ನೆನಪಿನಲ್ಲಿ ನಿರ್ಮಿಸಿರುವ ಸ್ಮಾರಕ ಭವನ ನಿಜಕ್ಕೂ ನಮ್ಮನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ದಿದ್ದಂತೂ ಸತ್ಯ. ನಿಶ್ಯಬ್ಧ ಜಗತ್ತಿನಲ್ಲಿ ನಾವು ಹೊಸ ಪ್ರಪಂಚವನ್ನೇ ನೋಡಿದಂತೆ ಅಚ್ಚರಿ, ಬೆರಗಿನಿಂದ ನೋಡಿದೆವು.

ಹಸಿರು ಹೊದ್ದಂತೆ ಮಲಗಿದ್ದ ಸಭಾಂಗಣವನ್ನು ನೋಡಿ ಮೈ ಪುಳಕಗೊಂಡಂತಾಯ್ತು. ಊಟ ಮುಗಿಸಿ ನಮ್ಮತ್ತ ಬಂದ ಕೆಟಿ ‘ಕಾರ್ಯಕ್ರಮ ಶುರುವಾಗಲು ಇನ್ನೂ ಇಪ್ಪತ್ತು ನಿಮಿಷ ಇದೆ. ಹೋಗ್ರೋ ಮೇಲೆ ನೋಡಿಕೊಂಡು ಬನ್ನಿ. ಎಂದು ಕವಿಶೈಲಕ್ಕೆ ಕಳಿಸಿದರು..
ಕುವೆಂಪು, ತೇಜಸ್ವಿ ಅವರನ್ನೇ ನೆನಪಿನಲ್ಲಿಟ್ಟುಕೊಂಡು ಇಲ್ಲಿನ ಪರಿಸರ ನೋಡುತ್ತ ಹೊಸ ಅಚ್ಚರಿಗಳನ್ನು ನೋಡುತ್ತ ಬೆಟ್ಟ ಹತ್ತುತ್ತಿದ್ದಂತೆ ಕಾರ್ ಪಾರ್ಕಿಂಗ್ ಜಾಗದ ಕಲ್ಲುಗಳನ್ನೇ ನೋಡಿ ‘ಸಾರ್ ಸ್ಮಾರಕ ತುಂಬಾ ಚೆನ್ನಾಗಿವೆ ಅಲ್ವಾ’ ಎಂದು ನಮ್ಮ ವಿಜಯ್ ಕುಮಾರ್ ಹೇಳಿದರು.
ಈ ಹಿಂದೆ ಸ್ಮಾರಕ ನೋಡಿದ್ದ ನಮ್ಮ ಟ್ರೈವರ್ ‘ಸಾರ್ ಇವಲ್ಲ ಸ್ಮಾರಕ ಮೇಲಿವೆ’ ಎಂದಾಗ ಇಬ್ಬರಲ್ಲೂ ಕುತೂಹಲ ಇನ್ನೂ ಹೆಚ್ಚಾಯಿತು. ಎಡಭಾಗ ಕವಿಶೈಲಕ್ಕೆ ದಾರಿ ಎಂದು ಕಲ್ಲೊಂದು ದಾರಿ ಸೂಚಿಸುತ್ತಿತ್ತು. ಮೆಟ್ಟಿಲು ಹತ್ತುತ್ತಿದ್ದಂತೆ ಧನ್ಯತಾ ಭಾವ ಜತೆಗೆ ಭಾವನೆಗಳ ಟಿಸಿಲು ಇನ್ನಷ್ಟು ಹೆಚ್ಚುತ್ತಿತ್ತು.
ನಿಜಕ್ಕೂ ಅದ್ಭುತ..!
ಕವಿ ಸಮಾಧಿಯ ಎದುರು ನಿಂತು ಒಮ್ಮೆ ನಮಿಸಿ ಧನ್ಯರಾದೆವು. ಸುತ್ತಲೂ ಹಚ್ಚಹಸಿರು. ದನಕರುಗಳು ಧನ್ಯತೆಯಿಂದ ಮೇಯುತ್ತಿದ್ದವು. ಸುತ್ತಲೂ ನಿಲ್ಲಿಸಿರುವ ಕಲ್ಲುಗಳನ್ನು ನೋಡಿ ದಂಗಾದೆವು. ಸದಾ ಚಲನೆಯನ್ನು ಸಾರುವ ಈ ಕಲ್ಲುಗಳು ಕುವೆಂಪುರ ಅನಿತ್ಯವಾದ, ಆಗು ನೀ ಅನಿಕೇತನವನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದವು. ಧ್ಯಾನಪೀಠ ನೋಡಿ ಬಂಡೆ ಮೇಲೆ ಕುವೆಂಪು ಕುಳಿತುಕೊಂಡು ಸುತ್ತಲೂ ಗಿರಿಸಾಲುಗಳ ನೋಡಿಯೇ ‘ಹಸಿರಿನ ಗಿರಿಗಳ ಸಾಲೇ ನಿನ್ನಯ ಕೊರಳಿನ ಮಾಲೆ’ ಎಂದು ಬರೆದಿದ್ದಾರೆ ಎಂದು ಕಲ್ಪಿಸಿಕೊಂಡೆವು.
ಅದ್ಭುತ ಕಲ್ಪನೆಯ ಸಾಕಾರಗೊಳಿಸಿರುವ ಕೆಟಿಯನ್ನು ನೆನಪಿಸಿಕೊಂಡ ನಾವು ಒಂದಷ್ಟು ಫೋಟೊ ತೆದುಕೊಂಡು ಗಿರಿಯಿಂದ ಇಳಿದೆವು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ