ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಲಿಕೆ, ಜಾನಪದ ಮತ್ತು ಭಾವಗೀತೆಗಳ ಪ್ರಭಾವ ಎಲ್ಲವೂ ಸೇರಿ ತಾನೇ ಮೈಗೂಡಿಸಿಕೊಂಡ ಉಲ್ಲಾಸಭರಿತ ತಾಜಾ ಶೈಲಿ, ಯಾರಂತೆಯೂ ಅಲ್ಲದ ಆದರೆ ಮತ್ತೆ ಮತ್ತೆ ಕೇಳಬೇಕೆನಿಸುವ ಆಕರ್ಷಕ ಧ್ವನಿ ಮತ್ತು ಸ್ವರಸಂಚಾರ, ಸಿನಿಮಾ ಹಾಡುಗಾರಿಕೆಗೆ ಅತಿ ಅಗತ್ಯವಾದ ವಿಶಿಷ್ಟ ಭಾವ ರಸ ಸ್ಪುರಣೆ, ಎಲ್ಲದಕ್ಕಿಂತ ಮುಖ್ಯವಾಗಿ ಚಲನಚಿತ್ರ ಹಿನ್ನೆಲೆ ಗಾಯನದ ಸಾಂಪ್ರದಾಯಿಕ ಜಾಡಿನ ಜೊತೆಗೆ, ತನ್ನದೇ ನಿರ್ಮಾಣದ ಹಾಡುಗಳಲ್ಲಿ ಕಥನ ಮಾದರಿಯ ಸೃಜನಶೀಲ ನಿರೂಪಣೆಯ ಬಗೆಗಿನ ಕಾಳಜಿ ಮತ್ತು ಜಗತ್ತಿನ ಬೇರೆಬೇರೆ ಸಂಗೀತ ಪ್ರಕಾರಗಳ ಸೂಕ್ಷ್ಮ ಗಮನಿಸುವಿಕೆಯಿಂದ ಹುಟ್ಟಿದ ಪ್ರಯೋಗಗಳು ಸಮ್ಮಿಳಿತವಾಗಿ ಸಂಜಿತ್ ಹೆಗ್ಡೆ ಸಂಗೀತವನ್ನು ವೈಶಿಷ್ಟ್ಯಪೂರ್ಣ ನೆಲೆಯಲ್ಲಿ ನಿಲ್ಲಿಸುತ್ತದೆ.
ಲಂಡನ್ನಲ್ಲಿ ನಡೆದ ಗಾಯಕ ಸಂಜಿತ್ ಹೆಗಡೆ ಸಂಗೀತ ಕಾರ್ಯಕ್ರಮದ ಕುರಿತು ಯೋಗೀಂದ್ರ ಮರವಂತೆ ಬರಹ ನಿಮ್ಮ ಓದಿಗೆ
ಭಾರತದ ಮೊದಲ ಮೂಕಿ ಚಿತ್ರ “ರಾಜ ಹರಿಶ್ಚಂದ್ರ ” ೧೯೧೩ರಲ್ಲಿ, ಮುಂಬೈಯ ಕೊರೊನೇಶನ್ ಸಿನೆಮಾ ಮಂದಿರದಲ್ಲಿ ಬಿಡುಗಡೆಯಾಗುವಾಗ ಒಂದು ಹಾಡು ಮತ್ತು ನೃತ್ಯ ಆಯೋಜನೆ ಮಾಡಲಾಗಿತ್ತು. ಚಿತ್ರದಲ್ಲಿ ಮಾತು, ಶಬ್ದ ಇಲ್ಲದಿದ್ದರೂ ಮೊದಲ ಪ್ರದರ್ಶನ ಸಮಾರಂಭದ ಕಳೆ ಏರಿಸಲು ಸಂಗೀತ ಮತ್ತು ನರ್ತನ ಪೂರಕ ಎಂದು ಸಿನಿಮಾ ನಿರ್ಮಿಸಿದ ದಾದಾ ಸಾಹೇಬ್ ಫಾಲ್ಕೆಯವರಿಗೆ ಕಂಡಿರಬೇಕು. ಆ ಸಿನಿಮಾದೊಳಗೆ ಉಪಸ್ಥಿತಿ ಇಲ್ಲದಿದ್ದರೂ ಸಿನಿಮಾದೊಟ್ಟಿಗಿನ ಸಂಗೀತದ ಸಂಬಂಧ ಹೀಗೆ ಆರಂಭ ಆಯಿತು. ಇನ್ನು ೧೯೩೧ರಲ್ಲಿ ಬಿಡುಗಡೆಯಾದ ಮೊದಲ ವಾಕ್ ಚಿತ್ರ “ಆಲಂ ಆರಾ” ದಲ್ಲಿ ಏಳು ಹಾಡುಗಳಿದ್ದವು. ಭಾರತೀಯ ಸಿನಿಮಾ ಮತ್ತು ಸಂಗೀತ ಒಂದು ಇನ್ನೊಂದರ ತೆಕ್ಕೆಗೆ ಬಿದ್ದು ಪ್ರಯಾಣ ಆರಂಭಿಸಿದ ಸ್ಮರಣೀಯ ಕ್ಷಣ ಅದು. ೧೯೩೦ರ ದಶಕದಲ್ಲಿ ಹೆಚ್ಚಿನ ಸಿನಿಮಾ ಸ್ಟುಡಿಯೋಗಳಲ್ಲಿ ಅದರದರ ಸಂಗೀತ ಸಂಯೋಜಕ ಮತ್ತು ಸಾಹಿತಿ ಇರುತ್ತಿದ್ದರು. ಸಂಗೀತ ಕಲಾವಿದ ಮತ್ತು ಸಾಹಿತಿಗಳಿಗೆ ಅದು ವೇತನ ದೊರೆಯುವ ಉದ್ಯೋಗವಾಗಿತ್ತು. ಹಿಂದಿಯಲ್ಲಿ ವಾಕ್ ಚಿತ್ರ ಬಂದ ತುಸು ನಂತರದಲ್ಲಿ ಅಂದರೆ ೧೯೩೪ರಲ್ಲಿ ಕನ್ನಡಲ್ಲಿ “ಸತಿ ಸುಲೋಚನ” ಬಿಡುಗಡೆಯಾಯಿತು. ಯಾವುದೇ ದಾಖಲೆಗಳಿಲ್ಲದೆ ಕಳೆದು ಹೋಗಿರುವ ಆ ಸಿನಿಮಾದಲ್ಲಿ, ೧೮ ಹಾಡುಗಳಿದ್ದವು ಎಂದು ತಿಳಿಯಲಾಗಿತ್ತು. ಹತ್ತು ವರ್ಷಗಳ ಹಿಂದೆ ದೊರೆತ ಒಂದು ಗ್ರಾಮಫೋನ್ ಮುದ್ರಣದಿಂದಾಗಿ ಆ ಸಿನಿಮಾದಲ್ಲಿ ಮೂವತ್ತು ಹಾಡುಗಳಿದ್ದುದು ಗೊತ್ತಾಯ್ತು. ಭಾರತದಲ್ಲಿ ಸಿನಿಮಾದ ಭಾಷೆ ಯಾವುದೇ ಇದ್ದರೂ ಮೊದಲಿಂದಲೇ ಸಂಗೀತ, ಕಥನದೊಟ್ಟಿಗೆ ಹಾಸುಹೊಕ್ಕಾಗಿ ಉಳಿದಿದೆ. ದೃಶ್ಯ ಮಾಧ್ಯಮದಲ್ಲಿ ಕತೆಯೊಳಗೆ ಹಾಡಿರುವುದು, ಹಾಡಿನ ಮೂಲಕ ಕತೆ ಹೇಳುವುದು ಭಾರತೀಯ ಜಾನಪದ ಸಂಸ್ಕೃತಿಯಿಂದ ಪ್ರಭಾವಿತಗೊಂಡು ಬೆಳೆದ ರಂಗ ಪರಂಪರೆಯ ಮೂಲಭೂತ ಗುಣ ಇರಬೇಕು. ಭಾರತೀಯತೆಗೂ ಹಾಡು-ಕುಣಿತಕ್ಕೂ ಗಟ್ಟಿ ಸಂಬಂಧ ಇದೆ.
೧೯೪೦ರಿಂದ ೧೯೮೦ರ ಕಾಲವನ್ನು ಸಿನಿಮಾ ಸಂಗೀತದ ಚಿನ್ನದ ಯುಗ ಎಂದು ಕರೆದವರಿದ್ದಾರೆ. ಆ ಕಾಲದಲ್ಲಿ ಹಿಂದಿ ಬಂಗಾಳಿ ತಮಿಳು ತೆಲಗು ಕನ್ನಡಗಳಲ್ಲಿ ಸಂಗೀತದ ಕಾರಣಕ್ಕೇ ದೊಡ್ಡ ಜನಸಮೂಹವನ್ನು ಆಕರ್ಷಿಸಿದ ಹಲವು ಸಿನಿಮಾಗಳಿದ್ದವು. ಘಂಟಸಾಲ, ಪಿ ಬಿ ಶ್ರೀನಿವಾಸ್, ಪಿ ಲೀಲ ಧ್ವನಿಯ ಅಂದಿನ ಹಾಡುಗಳು ಈಗಲೂ ಕನ್ನಡದ ಸಾರ್ವಕಾಲಿಕ “ಕ್ಲಾಸಿಕಲ್ಸ್” ಎಂದು ಪರಿಗಣಿಸಲ್ಪಡುತ್ತವೆ. ಭಕ್ತಿ ಪ್ರಧಾನ ಕತೆ ಮತ್ತು ಹಾಡುಗಳ ರಾಜಕುಮಾರ್ ಯುಗದ ಆರಂಭವಾಗಿದ್ದೂ ಅದೇ ಕಾಲದಲ್ಲಿ. ಹಾಗಂತ ಎಲ್ಲ ಕ್ಷೇತ್ರಗಳಲ್ಲೂ ಬಳಸಲ್ಪಡುವ ಈ “ಚಿನ್ನದ ಯುಗ”ದ ಕಲ್ಪನೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ನಾವು ಬಿಟ್ಟು ಬಂದ ಕಾಲದ ಅವಧಿಯ ಘಟನೆಗಳನ್ನು ವ್ಯಕ್ತಿಗಳನ್ನು ಹೇಗೆ ಬೇಕೋ ಹಾಗೆ ಆಯ್ದು ಹೆಕ್ಕಿ ಪೋಣಿಸಿ ಸುವರ್ಣ ಯುಗ ಎಂದು ಕರೆಯುವುದು ಸಾಮಾನ್ಯ. ಒಂದು ವೇಳೆ ಅದೇ ಕಾಲ ಸಂದರ್ಭದೊಳಗೆ ನಾವು ಬದುಕಿದ್ದರೆ ಅಲ್ಲೊಂದು ವಿಶೇಷ ಅನುಭವ ಆಗುತ್ತಿತ್ತೇ ಅಥವಾ ಎಲ್ಲ ಕಾಲಗಳಂತೆ “ಹಿಂದಿನಂತೆ ಇಂದಲ್ಲ” ಎನ್ನುವ ನಾಣ್ನುಡಿಯನ್ನು ಸುವರ್ಣ ಕಾಲದ ಸಂಗೀತಕಲಾ ಆಸಕ್ತರು ಕೂಡ ಹೇಳುತ್ತಿದ್ದರೆ ಎನ್ನುವುದು ಒಂದು ಜಿಜ್ಞಾಸೆಯ ವಿಷಯ. ಇರಲಿ ಅಂತೂ ಆ ಮೂರ್ನಾಲ್ಕು ದಶಕಗಳಲ್ಲಿ ಇಂದೂ ಮೆಲುಕು ಹಾಕುವ ಸಿನಿಮಾ ಸಂಗೀತ ಮತ್ತು ಸಾಹಿತ್ಯ ಬಂದದ್ದಂತೂ ಹೌದು.
ಇದೀಗ “ಸುವರ್ಣ ಯುಗ” ಎಂದು ಕೊಂಡಾಡಲ್ಪಡುವ, ಕಲೆ, ಸಿನಿಮಾ, ಸಾಹಿತ್ಯ ಮತ್ತು ಅವೆಲ್ಲ ಸೇರಿ ಆಗುವ ಜೀವನ ಸಂಭವಿಸಿದ ಒಂದಾನೊಂದು ಕಾಲದಿಂದ ನಾವು ದೂರ ಇದ್ದೇವೆ, ಹಿಂದಿನ ಸಮಯವನ್ನು ಗುರುತು ಹಾಕಿ ಅಂದೆಂದೋ ಹುಟ್ಟದೇ ಒಂದು ಪರಿಪೂರ್ಣ ಅನುಭವ ತಪ್ಪಿಹೋಯಿತಲ್ಲ ಎಂದು ಕಸಿವಿಸಿ ಪಡುತ್ತೇವೆ. ಅಂತಹ ಕಾಲವೊಂದು ಹಿಂದೆಂದೋ ಇದ್ದುದು ಸತ್ಯ ಇರಬಹುದು, ಅದು ಮುಂದೆ ಇನ್ನೊಮ್ಮೆ ಘಟಿಸದೆಯೂ ಇರಬಹುದು ಅಥವಾ ನಮಗಿಂತ ಹಲವು ತಲೆಮಾರುಗಳ ಮುಂದೆ ಯಾರೋ ಅಂತಹ ಕಾಲವೊಂದಿತ್ತು ಹಿಂದೆ ಎಂದು ಗುರುತಿಸಲಾಗುವ ಇನ್ನೊಂದು ಮತ್ತೊಂದು ಅವಧಿಯಲ್ಲಿ ನಮಗೆ ತಿಳಿಯದೆ ಇದೀಗ ನಾವು ಬದುಕುತ್ತಿರಬಹುದು. ಕಾಲದ ಮೊಟ್ಟಮೊದಲ ಚಲನೆಯಿಂದಲೇ ನಿತ್ಯ ಬದಲಾಗುವ ದಿನಮಾನದಲ್ಲಿ ಸಿನೆಮಾ ಸಂಗೀತ ಸಾಹಿತ್ಯ ಕೂಡ ಈಗ ಹೊಸ ಹುಟ್ಟನ್ನು ಪಡೆದಿದೆ. ಹೊಸ ಸಂಗೀತ, ಸಂಗೀತಗಾರರು, ಪ್ರದರ್ಶನಗಳು ಕಲಾರಸಿಕರನ್ನು ಸೆಳೆದು ರಂಜಿಸುತ್ತಿದ್ದಾರೆ.

ಭಾರತೀಯ ಸಿನಿಮಾಲೋಕದ ದೂರದ ಆಪ್ತ ಬಂಧುವಿನಂತೆ ಬದುಕುತ್ತಿರುವ ಲಂಡನ್ ನಗರದಲ್ಲಿ ಇತ್ತೀಚಿಗೆ ಅಂತಹ ಆಧುನಿಕ ಸಂಗೀತ, ಸಂಗೀತಗಾರ ಮತ್ತು ಹೊಸ ಶ್ರೋತೃಗಳನ್ನು ಒಗ್ಗೂಡಿಸುವ ರಸಸಂಜೆಯೊಂದು ಆಯೋಜನೆಗೊಂಡಿತ್ತು. ವಿಶೇಷವೆಂದರೆ ಅದು ಕನ್ನಡದ ಸಂಗೀತ ಸಂಜೆ. ಕನ್ನಡದ ಕಲಾವಿದರು ಹಾಡು ಪ್ರೇಕ್ಷಕರು ತಮ್ಮ ತಮ್ಮ ಮನೆ ನೆಲೆಗಳಿಂದ ದೂರ ಕಲೆತ ಅಮೃತ ಘಳಿಗೆ. ಯುದ್ಧಗಳು ಜಗತ್ತನ್ನು ವ್ಯಾಪಿಸಿ, ಸಾಮಾನ್ಯರ ಅಮಾಯಕರ ಜೀವ ಜೀವನವನ್ನು ಘಾಸಿಗೊಳಿಸುತ್ತಿರುವ ಹೊತ್ತಲ್ಲಿ, ಯುದ್ಧದ ನೇರ ಪ್ರಭಾವದಿದ ಸದ್ಯಕ್ಕೆ ದೂರ ಇರುವ ಇಂಗ್ಲಿಷ್ ಪೇಟೆಯಲ್ಲಿ ಜರುಗಿದ ಸಂಗೀತ, ಎರಡು ಘಂಟೆಗಳ ಜೀವನ್ಮುಖಿ ಸೆಲೆಯಾಗಿ ತುಂಬಿ ಹರಿಯಿತು. ಅಪ್ಪಟ ಕನ್ನಡದ ವರತೆಯಾಗಿ ಹುಟ್ಟಿ ಸಮಕಾಲೀನ ಭಾರತೀಯ ಸಿನಿಮಾ ಸಂಗೀತದಲ್ಲಿ ತಾಜಾ ಸೆಲೆ ಮತ್ತು ಅಲೆಯಾಗಿ ಹರಿಯುತ್ತಿರುವ ಹಬ್ಬುತ್ತಿರುವ ಸಂಜಿತ್ ಹೆಗ್ಡೆ ನಿರ್ವಹಿಸಿದ ಅಂದಿನ ಕಾರ್ಯಕ್ರಮ ಲಂಡನ್ ಕನ್ನಡಿಗರು ಆಸ್ವಾದಿಸಿದ ಅವಿಸ್ಮರಣೀಯ ನೇರ ಅಥವಾ ಲೈವ್ ಸಂಗೀತ ಲಹರಿ ಆಗಿರಬಹುದು.
ಹಿಂದಿನ ಐದಾರು ದಶಕಗಳಲ್ಲಿ ಸಿನಿಮಾ ಹಾಡುಗಾರರು ಹಿನ್ನೆಲೆ ಗಾಯನದ ಧ್ವನಿಯಾಗಿ ನಂತರ ಕ್ಯಾಸೆಟ್ ಸಿಡಿ ಟಿವಿಗಳ ಮೂಲಕ ಮನೆ-ಮನಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು; ಅಲ್ಲದಿದ್ದರೆ ವಿಶೇಷವಾಗಿ ಆಯೋಜನೆಗೊಳ್ಳುವ ಸಂಗೀತ ರಸಮಂಜರಿಯ ಮೂಲಕ ನೇರವಾಗಿ ಪ್ರೇಕ್ಷಕರನ್ನು ತಲುಪುತ್ತಿದ್ದರು. ಆದರೆ ಈಗ ಸಂಗೀತದ ಬದಲಾಗಿರುವ ಆಯಾಮ ಮತ್ತು ಅವಕಾಶದಲ್ಲಿ, ಕ್ಯಾಸೆಟ್, ಸಿಡಿಗಳು ಇಲ್ಲವಾಗಿ ಸಿನಿಮಾಗಳ ಹೊರತಾಗಿಯೂ ಯೂಟ್ಯೂಬ್, ಇನ್ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮಗಳು, ಸ್ಪೋಟಿಫೈ ಗಳಂತಹ ಸ್ಟ್ರೀಮಿಂಗ್ ವಾಹಿನಿಗಳ ಮೂಲಕವೂ ದೊಡ್ಡ ಪ್ರೇಕ್ಷಕ ವರ್ಗವನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ತಲುಪುವುದು ದೊಡ್ಡ ಜನಪ್ರಿಯತೆ ಅಪಾರ ಹಿಂಬಾಲಿಸುವಿಕೆ ಪಡೆಯುವುದು ಸಾಮಾನ್ಯ ಆಗಿದೆ. ಸಾಂಪ್ರದಾಯಿಕ ಸಿನಿಮಾರಂಗ ಮತ್ತು ಹೊಸ ಅಲೆಯ ಸಾಮಾಜಿಕ ಮಾಧ್ಯಮಗಳ ವೇದಿಕೆ ಎರಡರಲ್ಲೂ ಹೊಸ ಸಂಚಲನ, ಸೃಷ್ಟಿಯನ್ನು ಮಾಡಿರುವ ಸಂಜಿತ್ ಭಾರತೀಯ ಸಂಗೀತಲೋಕದ ಹೊಸ ವರಸೆ ಮತ್ತು ಭರವಸೆ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಲಿಕೆ, ಜಾನಪದ ಮತ್ತು ಭಾವಗೀತೆಗಳ ಪ್ರಭಾವ ಎಲ್ಲವೂ ಸೇರಿ ತಾನೇ ಮೈಗೂಡಿಸಿಕೊಂಡ ಉಲ್ಲಾಸಭರಿತ ತಾಜಾ ಶೈಲಿ, ಯಾರಂತೆಯೂ ಅಲ್ಲದ ಆದರೆ ಮತ್ತೆ ಮತ್ತೆ ಕೇಳಬೇಕೆನಿಸುವ ಆಕರ್ಷಕ ಧ್ವನಿ ಮತ್ತು ಸ್ವರಸಂಚಾರ, ಸಿನಿಮಾ ಹಾಡುಗಾರಿಕೆಗೆ ಅತಿ ಅಗತ್ಯವಾದ ವಿಶಿಷ್ಟ ಭಾವ ರಸ ಸ್ಪುರಣೆ, ಎಲ್ಲದಕ್ಕಿಂತ ಮುಖ್ಯವಾಗಿ ಚಲನಚಿತ್ರ ಹಿನ್ನೆಲೆ ಗಾಯನದ ಸಾಂಪ್ರದಾಯಿಕ ಜಾಡಿನ ಜೊತೆಗೆ, ತನ್ನದೇ ನಿರ್ಮಾಣದ ಹಾಡುಗಳಲ್ಲಿ ಕಥನ ಮಾದರಿಯ ಸೃಜನಶೀಲ ನಿರೂಪಣೆಯ ಬಗೆಗಿನ ಕಾಳಜಿ ಮತ್ತು ಜಗತ್ತಿನ ಬೇರೆಬೇರೆ ಸಂಗೀತ ಪ್ರಕಾರಗಳ ಸೂಕ್ಷ್ಮ ಗಮನಿಸುವಿಕೆಯಿಂದ ಹುಟ್ಟಿದ ಪ್ರಯೋಗಗಳು ಸಮ್ಮಿಳಿತವಾಗಿ ಸಂಜಿತ್ ಹೆಗ್ಡೆ ಸಂಗೀತವನ್ನು ವೈಶಿಷ್ಟ್ಯಪೂರ್ಣ ನೆಲೆಯಲ್ಲಿ ನಿಲ್ಲಿಸುತ್ತದೆ. ನವನವೀನ ಯುವ ಶ್ರೋತೃಗಳ ನಾಡಿಮಿಡಿತವನ್ನು ಅರಿತು ಪಳಗಿದ ವೈದ್ಯನಂತೆ ಸಂಗೀತವನ್ನು ಹಾಡಿ ನಿರೂಪಿಸಿ ರಂಜಿಸುವ ಸಂಜಿತ್ ಸಿನಿಮಾ ಕ್ಷೇತ್ರವನ್ನು ಮೀರಿ ಭಾರತೀಯ ಆಧುನಿಕ ಸಂಗೀತ ಮಾದರಿಯಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ, ಹಾಡುಗಾರನಾಗಿ, ಸಂಗೀತ ಸಂಯೋಜಕನಾಗಿಯೂ ಕೂಡ. ಇನ್ನು ಸ್ಟುಡಿಯೋದಲ್ಲಿ ಸುಲಲಿತವಾಗಿ ಹಾಡಿ ಹೃದಯ ಮುಟ್ಟುವ ಹಾಡುಗಳ ಜೊತೆಗೆ ನೇರಾನೇರ ಕಾರ್ಯಕ್ರಮದಲ್ಲಿ ಸಾವಿರಾರು ಹುಚ್ಚು ಪ್ರೇಕ್ಷಕರ ಎದುರು ನಿಂತು ಹಾರಿ ಕುಣಿದು ಹಾಡಿ ಕುಣಿಸಿ ಯಶಸ್ವಿ ಎನಿಸುವ ನಟನೂ ಪ್ರದರ್ಶಕನೂ ಆಗಿದ್ದಾರೆ. ನಿಧಾನ ಗತಿಯ ಭಾವಗೀತೆಯಂತಹ ಹಾಡುಗಳು, ಒಂದು ವರ್ಗದ ಪ್ರೇಕ್ಷಕರು ಕುಣಿದು ಕುಪ್ಪಳಿಸುವ ವಾದ್ಯಗಳ ಅಬ್ಬರದ ಸಂಯೋಜನೆಗಳು, ಆಲಾಪನೆಗಳನ್ನು ಬಳಸಿಕೊಂಡ ಶಾಸ್ತ್ರೀಯ ಸಂಗೀತದ ಏರಿಳಿತದ ಕಸರತ್ತುಗಳು, ಪಾಶ್ಚ್ಯಾತ್ಯ ಪ್ರೇರಿತ ರ್ಯಾಪ್ ಮಾದರಿಯ ಸಾಲುಗಳು, ಭಾರತೀಯ ಸಂಗೀತದಿಂದ ಸ್ಪೂರ್ತಿ ಪಡೆದ ಸ್ವರ ಚಲನೆ ಎಲ್ಲವನ್ನೂ ತನ್ನದಾಗಿಸಿಕೊಂಡು, ಹೊಚ್ಚಹೊಸ ಶೈಲಿಯಾಗಿ ನಿರೂಪಿಸುವ ಆಕರ್ಷಿಸುವ ವೈವಿಧ್ಯಪೂರ್ಣ ಸಂಗೀತಗಾರ ಕೂಡ. ಮತ್ತೆ ವೇದಿಕೆಯಲ್ಲಿ ಹಾಡುವಾಗ ಒಮ್ಮೆ ಮೈಕನ್ನು ಆಧರಿಸಿ ನಿಲ್ಲುವ, ಮತ್ತೊಮ್ಮೆ ಹಾಡಿನಲ್ಲಿ ಮೈಮರೆತು ತಣ್ಣಗೆ ಕುಳಿತು ಮೆಲುದನಿಯಲ್ಲಿ ಗುನುಗುವ, ಮತ್ತೆ ರಂಗದ ತುಂಬ ಓಡಾಡುತ್ತ ಹಾಡಿನ ಗತಿಗೆ ತಕ್ಕ ಹಾವಭಾವವನ್ನೂ ಹೊಂದಿಸುವ ಸತ್ವಪೂರ್ಣ ರಂಗಪ್ರದರ್ಶಕ.
ಭಾರತೀಯ ವಿವಿಧ ಭಾಷೆಗಳ ಚಲನಚಿತ್ರಗಳಿಗೆ ಹಾಡುವ ಅವಕಾಶ, ಕನ್ನಡನಾಡಿನ ಹೊರಗೂ ಸಂಜಿತ್ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅವರು ಮತ್ತು ತಂಡ ಜೊತೆಗೂಡಿ ತಾವೇ ನಿರ್ಮಿಸುತ್ತಿರುವ ಸೃಜನಶೀಲ ಸಂಗೀತ ನಿರೂಪಣೆಗಳು ಮತ್ತೆ ಪ್ರತಿಷ್ಠಿತ ವಾರ್ನೆರ್ ಸ್ಟುಡಿಯೋ, ಕೋಕ್ ಸ್ಟುಡಿಯೋಗಳಂತಹ ಸಂಸ್ಥೆಗಳಿಗಾಗಿ ನಿರ್ಮಿಸುತ್ತಿರುವ ಸಂಗೀತ ಕಥನ ಮಾದರಿಗಳು ಅವರು ಆಯ್ದುಕೊಂಡಿರುವ ಹೊಸ ಹಾದಿಗೆ ಮೆರುಗು ತರುತ್ತಿವೆ, ಅವರ ತಂಡದ ಬಗ್ಗೆ ಕುತೂಹಲ ನಿರೀಕ್ಷೆ ಹೆಚ್ಚಿಸುತ್ತಿದೆ. ಸಂಗೀತದ ಮಾದರಿ ಹೊಸದಿರಲಿ ಹಳೆಯದಿರಲಿ ವರ್ಣಿಸಲು ಶಬ್ದಗಳು ಸೋಲಬಹುದು ಅಥವಾ ಉತ್ಪ್ರೇಕ್ಷೆ ಆಡಂಬರ ಎಂತಲೂ ಎನಿಸಬಹುದು. ಆದರೆ ಹಾಡುವವರಿಗೂ ಕೇಳುವವರಿಗೂ ದೊರಕುವ ಅನುಭವವೇ ಪ್ರದರ್ಶನ ಕಲೆಗೆ ಆ ಕ್ಷಣಕ್ಕೆ ದೊರಕುವ ಆತ್ಯಂತಿಕ ಸ್ವೀಕೃತಿ ಮತ್ತು ಕೃತಜ್ಞತೆ. ಪ್ರತಿ ಹಾಡಿನಲ್ಲೂ ವಿಶೇಷ ಅಪೂರ್ವ ಅನುಭವ ನೀಡುವ ಸಂಜಿತ್ ಈ ಕಾಲದ ವಿಶಿಷ್ಟ ಸಂಗೀತಗಾರ ಮತ್ತು ಸಂಯೋಜಕ. ಹೊಸ ದಿಕ್ಕು ಮತ್ತು ಗಾಳಿಯನ್ನು ಅನ್ವೇಷಿಸಿ ಸಾಗುತ್ತಿರುವ ಸಮರ್ಥ ಸಾಹಸಿ ನಾವಿಕ. ಇನ್ನು ಲಂಡನ್ ಕಾರ್ಯಕ್ರಮದಲ್ಲಿ ಸೇರಿದ ಪ್ರೇಕ್ಷಕರು ನಾವೆಯಲ್ಲಿ ಕುಳಿತು ವಿಹಾರವೊಂದನ್ನು ಮಾಡಿದ ಸಂಗೀತಯಾತ್ರಿಗಳು.

ಹೊಸ ಹಾದಿಯ ಯಾನದ ನಡುವಿನ ತಾತ್ಕಾಲಿಕ ನಿಲ್ದಾಣದಂತೆ ಲಂಡನ್ನ ಸಮ್ಮೋಹಕ ಹಾಡುಗಳ ಸಂಗೀತ ಸಂಜೆಯೇನೋ ಈಗ ಮುಗಿದಿದೆ. ಎಂದೂ ಮುಗಿಯದೇನೋ ಎಂದೆನಿಸುವ, ನಾವಿಂದು ಬದುಕುತ್ತಿರುವ ಯುದ್ಧಕಾಲದಲ್ಲಿ ಒಂದೆರಡು ತಾಸು ಜಾಗಪಡೆದ ಸ್ವರ ರಾಗ ಲಯ ತಾಳ ನಾದ ಉನ್ಮಾದ ಚಪ್ಪಾಳೆಗಳೂ ಕೇಳದಾಗಿವೆ. ಇಲ್ಲೂ ಎಲ್ಲೂ ನೆಲೆ ನಿಲ್ಲದ ಸಂಗೀತದ ನಾವೆ ದೂರದೂರ ಸಾಗಿ ಮರೆಯಾಗಿದೆ. ಮತ್ತೆಲ್ಲೋ ದನಿಯಾಗಿ ಹಾಡಾಗಿ ಸುಳಿದಿದೆ. ಹಾಡೊಂದು ಮುಗಿದ ಮೇಲಿನ ಗುನುಗುನಿಸುವಿಕೆ ಮಾತ್ರ ಇನ್ನೂ ಮುಂದುವರೆದಿದೆ.

ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ “ಏರ್ ಬಸ್” ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.

