ಬರಹ ಬರೆದವನ ತಿಳುವಳಿಕೆಯ, ಅವನ ಅನಿಸಿಕೆಯ, ಅವನ ಬಯಕೆಯ, ಭಾವನೆಯ ಪ್ರತಿಬಿಂಬವಲ್ಲವೇ? ಅವನ ಸಂತಸ, ಅವನ ದುಗುಡ, ಅವನ ನೆಮ್ಮದಿ, ಅವನ ಆತಂಕ, ಅವನ ಎದೆಗಾರಿಕೆ, ಅವನ ಪುಕ್ಕಲುತನ, ಅವನ ಪ್ರೇಮ ಕಾಮಗಳೆಲ್ಲ ಅದರಲ್ಲಿ ಪದಗಳಾಗಿರುವುದಿಲ್ಲವೇ? ಹಾಗಾದರೆ ಕವಿತೆ ಅಥವಾ ಬರಹ ಬರೆದವನಿಂದಲೇ ಅರ್ಥ ಪಡೆಯುವುದು ಎಂದಾಯಿತಲ್ಲವೇ? ಹಾಗೆ ಬರೆದವನಿಂದಲೇ ಪಡೆದುಕೊಂಡ ಅರ್ಥ ಓದುಗನಿಗೆ ಸರಿಯಾಗಿ ಅರ್ಥವಾಗಬೇಕಾದರೆ ಪ್ರತಿ ಬರಹದ ಇಲ್ಲಾ ಕಾವ್ಯದ ಜೊತೆಗೊಂದು ಬರೆದವನ ಹಿನ್ನೆಲೆ ಮತ್ತು ಬರಹದ ಹಿನ್ನೆಲೆಯನ್ನೂ ಬರೆಯಬೇಕಾಯಿತಲ್ಲವೇ?
ಓದಿನ ಕುರಿತು ಕಿಟ್ಟು ಬರಹ ನಿಮ್ಮ ಓದಿಗೆ
ಏರುತ್ತಿರುವ ಬೊಜ್ಜಿನ ಭಯಕ್ಕೆ ಹೊತ್ತರಿನಲ್ಲೇ ಎದ್ದು ಇಬ್ಬಲೂರಿನ ಪಾರ್ಕ್ ಸುತ್ತುವುದು ಬೇಡವಾದರೂ ಮಾಡಲೇಬೇಕಾದ ದಿನಚರಿಗಳಲ್ಲೊಂದು ಅದು. ಹೀಗೊಂದು ಮುಂಜಾನೆ ಪಾರ್ಕ್ ಸುತ್ತುತ್ತಿರುವಾಗ ಯೋಚನೆಯ ಸುಳಿಯೊಂದು ಅನಾಯಾಸವಾಗಿ ಕಾಲೇಜಿನ ದಿನಗಳಲ್ಲಿ ನಾವೇ ಎತ್ತಿ ಆಡಿಸಿದ ಬಳಗದ ಹುಡುಗನೊಬ್ಬನ ಮೊದಲ ಹುಟ್ಟು ಹಬ್ಬದ ಆಚರಣೆಯ ಕಡೆಗೆ ನನ್ನನ್ನು ಎಳೆದೊಯ್ಯಿತು. ಅಪ್ಪ ಅಮ್ಮಂದಿರಿಗೆ ಮಗನ ಹುಟ್ಟುಹಬ್ಬದ ಸಡಗರವಾದರೆ, ಕುಡಿಮೀಸೆ ಹುಡುಗರಿಗೆ ಮನೆಯಲ್ಲಿದ್ದ ಟೇಪ್ ರೆಕಾರ್ಡರ್‌ಗೆ ಸ್ಪೀಕರ್‌ಗಳನ್ನು ಜೋಡಿಸಿ ಹೊಸ ಬಗೆಯ ಹಾಡುಗಳನ್ನು ಹಾಕಿ ತಮ್ಮ ನೈಪುಣ್ಯವನ್ನು ಮೆರೆಯುವ ಆತುರ. ಅವರವರ ಅವರದೇ ಆದ ಜವಾಬ್ದಾರಿಗಳನ್ನು ನೆರವೇರಿಸುತ್ತ ಹುಡುಗನ ಹುಟ್ಟುಹಬ್ಬ ಸಾಂಗವಾಗಿ ನಡೆಯುತ್ತಿರುವಾಗ ತನ್ನಷ್ಟಕ್ಕೆ ತಾನೇ ಹಾಡಿಕೊಂಡಿದ್ದ ಟೇಪ್ ರೆಕಾರ್ಡರ್ “ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ” ಎನ್ನುವ ಹಾಡನ್ನು ಭಾವಗೀತೆ ಮತ್ತು ಜಾನಪದ ಗೀತೆಯ ಮಿಶ್ರಣವೇನೋ ಎನ್ನುವ ದಾಟಿಯಲ್ಲಿ ಹಾಡತೊಡಗಿತು. ಅಲ್ಲಿದ್ದವರಲ್ಲಿ ಬಹಳಷ್ಟು ಜನ ಬೇರೆಯ ಹಾಡುಗಳನ್ನು ಹೇಗೆ ಆನಂದಿಸುತ್ತಿದ್ದರೋ ಅಥವಾ ನಿರ್ಲಕ್ಷಿಸಿದ್ದರೋ ಹಾಗೆಯೇ ಇದು ಬಂದಾಗಲೂ ತಮ್ಮ ಅದೇ ಪ್ರತಿಕ್ರಿಯೆಯನ್ನು ಮುಂದುವರಿಸಿದ್ದರೂ ಅದೇಕೋ ನಮ್ಮಪ್ಪ ನನ್ನನ್ನು ಕರೆದು “ತಮ್ಮ, ಹಾಡನ್ನು ಬದಲಿಸು, ಇದು ಈ ಸಂದರ್ಭಕ್ಕಲ್ಲ” ಎಂದು ಸ್ವಲ್ಪ ಕಸಿವಿಸಿಯ ದನಿಯಲ್ಲಿಯೇ ಹೇಳಿಬಿಟ್ಟರು. ಯಾಕೆ ಏನಾಯ್ತು ಎಂದು ಕೇಳಿದ್ದಕ್ಕೆ ಹೋಗಿ ಮೊದಲು ಬದಲಿಸು ಎಂಬ ಉತ್ತರ ಸ್ವಲ್ಪ ಖಡಕ್ಕಾಗಿಯೇ ಬಂತು.
ಗೀತೆ ಚಂದವೆನಿಸುತ್ತಿದ್ದರೂ ಪಿತೃವಾಕ್ಯಪರಿಪಾಲನೆಗಾಗಿ ಹೋಗಿ ಕ್ಯಾಸೆಟ್ಟನ್ನು ತಿರುಗಿಸಿಯೋ ಇಲ್ಲ ಬದಲಿಸಿಯೋ, ಟೇಪ್ ರೆಕಾರ್ಡರ್ ಇದನ್ನು ಬಿಟ್ಟು ಬೇರೆಯದೊಂದನ್ನು ಹಾಡುವ ಹಾಗೆ ಮಾಡಿದರೂ, ಏನಾಗಿದೆ ಈ ಹಾಡಿಗೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಮತ್ತೆ ಹೋಗಿ ಅಪ್ಪನಲ್ಲಿ ಕೇಳುವ ಧೈರ್ಯವನ್ನೂ ಮಾಡಲಿಲ್ಲ.
ಇದಾದ ಸುಮಾರು ಎರಡು ದಶಕಗಳ ನಂತರ ಯಾಕೋ ಸಾಹಿತ್ಯಾಸಕ್ತಿ ಚಿಗುರಿ, ಆಕಸ್ಮಿಕವಾಗಿ ಗುರುರಾಜ ಕರಜಗಿಯವರ “ಬೇಂದ್ರೆಯವರ ಬದುಕು-ಬರಹ” ಎಂಬ ಉಪನ್ಯಾಸ ಮಾಲಿಕೆಯನ್ನು ಯು-ಟ್ಯೂಬ್ ನಲ್ಲಿ ನೋಡಿದಾಗಲೇ, ಬೇಂದ್ರೆ ಮಗನನ್ನು ಕಳಕೊಂಡ ನೋವಿನಲ್ಲಿ ಹೆಂಡತಿಯನ್ನುದ್ದೇಶಿಸಿ ಬರೆದ ಪದವಿದು ಎಂದು ತಿಳಿದದ್ದು. ಹಾಗೂ ಮಗನ ವಿಯೋಗದಲ್ಲಿ ಅಪ್ಪ ಬರೆದ ಪದವನ್ನು ಅಪ್ಪ-ಅಮ್ಮ ಸೇರಿ ಸಂಭ್ರಮಿಸುತ್ತಿದ್ದ ಮಗನ ಹುಟ್ಟು ಹಬ್ಬದ ಸಮಯದಲ್ಲಿ ಹಾಡುವುದು ಸಮಂಜಸವಲ್ಲ ಎಂದು ನಮ್ಮಪ್ಪ ಆಗ ಹೇಳಿದುದರ ಒಳಾರ್ಥ ಅರ್ಥವಾದದ್ದು.
ಬೆಳಗ್ಗಿನ ನಡಿಗೆ ಮುಂದುವರೆದಂತೆ ಯೋಚನೆಯ ಎಳೆಯೊಂದು ಹಾಡಿನ ಅರ್ಥಗಳ ಕಡೆಗೆ ತನ್ನ ನಡಿಗೆಯನ್ನು ಮುಂದುವರಿಸಿತು. ಕವಿತೆಯ ಅಥವಾ ಬರಹದ ಅರ್ಥ ಎಂದರೇನು? ಕವಿತೆಗೆ ಅಥವಾ ಬರಹಕ್ಕೆಅರ್ಥ ಬರೆದವನಿಂದ ಸಿಗುತ್ತದೆಯೋ ಇಲ್ಲ ಓದಿದವನಿಂದ ಸಿಗುತ್ತದೆಯೋ? ಒಂದು ಬರಹವನ್ನೋ ಇಲ್ಲ ಕವಿತೆಯನ್ನೋ ಅರ್ಥಮಾಡಿಕೊಳ್ಳಲು ಬರೆದವನ ಬಗ್ಗೆ, ಅವನ ಹಿನ್ನೆಲೆಯ ಬಗ್ಗೆ ಮತ್ತು ಅವನು ಅದನ್ನು ಬರೆದ ಹಿನ್ನೆಲೆಯ ಬಗ್ಗೆ ತಿಳಿಯುವುದು ಮುಖ್ಯವೇ? ಬರೆದವನು ಏನನ್ನು ಯೋಚಿಸಿ ಹಾಗೆ ಬರೆದ ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಹೊರತು ಬರವಣಿಗೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇ? ಬರಹ ಬರೆದವನ ತಿಳುವಳಿಕೆಯ, ಅವನ ಅನಿಸಿಕೆಯ, ಅವನ ಬಯಕೆಯ, ಭಾವನೆಯ ಪ್ರತಿಬಿಂಬವಲ್ಲವೇ? ಅವನ ಸಂತಸ, ಅವನ ದುಗುಡ, ಅವನ ನೆಮ್ಮದಿ, ಅವನ ಆತಂಕ, ಅವನ ಎದೆಗಾರಿಕೆ, ಅವನ ಪುಕ್ಕಲುತನ, ಅವನ ಪ್ರೇಮ ಕಾಮಗಳೆಲ್ಲ ಅದರಲ್ಲಿ ಪದಗಳಾಗಿರುವುದಿಲ್ಲವೇ? ಹಾಗಾದರೆ ಕವಿತೆ ಅಥವಾ ಬರಹ ಬರೆದವನಿಂದಲೇ ಅರ್ಥ ಪಡೆಯುವುದು ಎಂದಾಯಿತಲ್ಲವೇ? ಹಾಗೆ ಬರೆದವನಿಂದಲೇ ಪಡೆದುಕೊಂಡ ಅರ್ಥ ಓದುಗನಿಗೆ ಸರಿಯಾಗಿ ಅರ್ಥವಾಗಬೇಕಾದರೆ ಪ್ರತಿ ಬರಹದ ಇಲ್ಲಾ ಕಾವ್ಯದ ಜೊತೆಗೊಂದು ಬರೆದವನ ಹಿನ್ನೆಲೆ ಮತ್ತು ಬರಹದ ಹಿನ್ನೆಲೆಯನ್ನೂ ಬರೆಯಬೇಕಾಯಿತಲ್ಲವೇ? ಇಲ್ಲವಾದರೆ ಮೇಲೆ ಹೇಳಿದ ಬೇಂದ್ರೆಯ ಪದದ ಹಿಂದಿನ ನೋವನ್ನು ಪ್ರೀತಿಯೆಂದು ಗ್ರಹಿಸಿದಂತ ಅಚಾತುರ್ಯಗಳು ನಡೆಯುತ್ತಲೇ ಇರಬಹುದಲ್ಲವೇ? ಗುರುರಾಜ ಕರಜಗಿಯವರ ಅದೇ ಉಪನ್ಯಾಸದಲ್ಲಿ, ಬೇಂದ್ರೆಯವರು ಹೋದ ಯಾವುದೋ ಒಂದು ಶಾಲೆಯ ವಾರ್ಷಿಕೋತ್ಸವದಲ್ಲೊ ಇಲ್ಲ ಒಂದು ಸಮಾರಂಭದಲ್ಲೊ ಅವರ ಈ ಗೀತೆಯನ್ನು ಮಕ್ಕಳು ಕೋಲಾಟವನ್ನಾಗಿಸಿ ಹಾಡಿ ಕುಣಿದದ್ದನ್ನು ನೋಡಿ ಬೇಸರದಿಂದ ಎದ್ದು ಹೋದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಬೇಂದ್ರೆಯವರಿಗೆ ತಾನು ನೋವಿನಿಂದ ಬರೆದ ಪದ್ಯವನ್ನು ಕೇಕೆ ಹಾಕುತ್ತಾ ಹಾಡಿ ಕುಣಿದದ್ದನ್ನು ನೋಡಿ ನೋವಾಗಿರುವುದು ಎಷ್ಟು ಸಹಜವೋ ಅಷ್ಟೇ ಸಹಜ ಹಾಡಿನ ಹಿನ್ನೆಲೆ ತಿಳಿಯದೆ, ಆ ಹಾಡಿಗೊಂದು ತನ್ನದೇ ಆದ ಅರ್ಥವನ್ನು ಕೊಟ್ಟು ಹಾಡಿ ಕುಣಿದ ಮಕ್ಕಳ ಅಥವಾ ಕುಣಿಸಿದ ಮಾಸ್ತರರ ನಡೆಯಲ್ಲವೇ? ಹಾಡಿನ ಹಿನ್ನೆಲೆ ತಿಳಿದೇ ಹಾಡನ್ನು ಅರ್ಥೈಸಬೇಕೆಂದಾದರೆ ಆ ಹಾಡಿಗೆ ಸಾಧ್ಯವಾಗಬಹುದಾದ ವಿವಿಧ ಸಾಧ್ಯತೆಗಳನನ್ನೆಲ್ಲ ಇಲ್ಲವಾಗಿಸಿದಂತಾಗುವುದಿಲ್ಲವೇ? ಓದುಗ ತನ್ನ ಹಿನ್ನೆಲೆ, ತಾನು ನೋಡಿದ ಸಮಾಜ, ತಾನು ನೋಡಬೇಕೆಂದಿರುವ ಸಮಾಜ, ತನ್ನ ನೋವು ತನ್ನ ನಲಿವು, ತನ್ನ ನಂಬಿಕೆಗಳು, ಓದುವಾಗಿದ್ದ ತನ್ನ ಮನಸ್ಥಿತಿಗಳೆಲ್ಲದರ ಪರಿಣಾಮವಾಗಿ ತಾನು ಓದಿದ ಹಾಡಿಗೋ ಬರವಣಿಗೆಗೂ ತನ್ನದೇ ಆದ ಅರ್ಥವನ್ನು ಕಲ್ಪಿಸಿದಲ್ಲಿ ಅದು ಅಸಮಂಜಸ ಎನ್ನಬಹುದೇ ಅಥವಾ ಹೀಗೆ ಅನೇಕ ಜನ ಅನೇಕ ಸಂದರ್ಭಗಳಲ್ಲಿ ಅದೇ ಬರಹವನ್ನು ಓದಿ ಅದರ ಅನೇಕ ಸಾಧ್ಯತೆಗಳನ್ನು ಸಾಧ್ಯವಾಗಿಸಿದಾಗಲೇ ಅದೊಂದು ಉತ್ಕೃಷ್ಟ ಬರಹವಾಗುವುದಲ್ಲವೇ. ಅಂತಾದರೆ ಒಂದು ಬರಹವನ್ನು ಸಂಪೂರ್ಣವಾಗಿ ಆಸ್ವಾದಿಸಲು ಬರೆದ ಹಿನ್ನೆಲೆ ತಿಳಿದು ಓದಬೇಕೇ ಇಲ್ಲ ತಿಳಿಯದೆ ಓದಬೇಕೇ? ಬರಹದ ಇತರ ಸಾಧ್ಯತೆಗಳಿಗೆ ಧಕ್ಕೆ ಆಗದಂತೆ ಮೊದಲು ಹಿನ್ನೆಲೆ ತಿಳಿಯದೇ ಓದಿ, ಆಮೇಲೆ ಬರೆದವನ ಬರೆದ ಉದ್ದೇಶವನ್ನು ಅರಿತು ಓದಿದರೆ ಅದನ್ನು ಸಂಪೂರ್ಣ ಓದೆಂದು ಕರೆಯಬಹುದೇ? ಎಂದಲ್ಲ ಯೋಚಿಸುತ್ತಿರುವಾಗ ರಿಂಗ್ ರೋಡ್ ನಲ್ಲಿ ಏರುತ್ತಿರುವ ವಾಹನ ದಟ್ಟಣೆಯ ಕಂಪನವನ್ನು ಗ್ರಹಿಸಿದ ಕಾಲುಗಳು ಸಮಯವಾಯಿತು ಎಂದು ತಿಳಿದು ಬೆಳಗಿನ ನಡಿಗೆಯ ದಿಕ್ಕನ್ನು ಮನೆಯ ಕಡೆ ತಿರುಗಿಸಿದೆವು. ಬರಹದ ಭಾವನೆಗಳ ಬಗ್ಗೆ ಯೋಚಿಸುತ್ತಿದ್ದ ಮನಸ್ಸು ಸ್ವಲ್ಪ ಹೊತ್ತಿನಲ್ಲೇ ಬರೆಯಬೇಕಾದ ಇ-ಮೇಲ್ ಗಳ ಬಗ್ಗೆ ಯೋಚಿಸಲಾರಂಭಿಸಿತು. ಯೋಚನೆ ಮುಂದುವರೆಯಿತು.

ಕಿಟ್ಟು (ಕೃಷ್ಣಪ್ರಸಾದ ಗಾಂವಕರ) ಮೂಲತಃ ಉತ್ತರ ಕನ್ನಡದ ಅಂಕೋಲೆಯವರು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ IT ಕಂಪನಿಯಲ್ಲಿ ಉದ್ಯೋಗ. ಉದ್ಯೋಗದ ಏಕತಾನತೆಯನ್ನು ಹೋಗಲಾಡಿಸಲು ಕಂಡುಕೊಂಡ ಕನ್ನಡ ಸಾಹಿತ್ಯ, ಛಾಯಾಗ್ರಹಣ, ಮೋಟಾರ್ಸೈಕಲ್‌ನಲ್ಲಿ ದೂರದ ಪ್ರವಾಸ ಇತ್ಯಾದಿ ಹವ್ಯಾಸಗಳು.

