ಆಗ ಕಾವ್ಯ, “ವಿದ್ಯುತ್ ವಾಹನಗಳದ್ದೂ ಅದೇ ಕಥೆ ತಾನೇ? ಹೊಗೆ ಹೊರಗೆ ಹಾಕಲ್ಲ, ಪರಿಸರ ಸ್ನೇಹಿ ವಿದ್ಯುತ್ ವಾಹನ ಅಂತೀವಿ! ಅದೇ ವಿದ್ಯುತ್ ವಾಹನ ಉತ್ಪಾದಿಸೋಕೆ ಅದೇ ಪಳೆಯುಳಿಕೆ ಇಂಧನವನ್ನ ಎಗ್ಗುಸಿಗ್ಗಿಲ್ಲದೆ ಬಳಕೆ ಮಾಡ್ತೀವಿ. ವಿದ್ಯುತ್ ವಾಹನದ ‘ಬ್ಯಾಟರಿ’ ತಯಾರಿಸೋಕೆ ನಿಸರ್ಗದ ತೊಟ್ಟಿಲಿಗೇ ಕೈಹಾಕಿ, ಭೂಮಿಯನ್ನ ಬಗೆದು ಬರಡು ಮಾಡಿ, ಲೋಹಗಳನ್ನ ಹೊರತೆಗೀತೀವಿ. ಇನ್ನು ಆ ವಿಷಕಾರಿ ಬ್ಯಾಟರಿಗಳ ವಿಲೇವಾರಿ ಮತ್ತೊಂದು ದೊಡ್ಡ ಸಮಸ್ಯೆ. ಆದ್ರೂ ‘ವಿದ್ಯುತ್ ವಾಹನದಿಂದ ಪರಿಸರದ ಎಲ್ಲಾ ಸಮಸ್ಯೆಗಳೂ ಸರಿಹೋಗತ್ತೆ’ ಅನ್ನೋ ಹಾಗೆ ಪೋಸ್ ಕೊಡ್ತೀವಿ. ಮನುಷ್ಯನಂತಹ ದುಷ್ಟಪ್ರಾಣಿ ಮತ್ತೊಬ್ಬನಿಲ್ಲ!” ಎಂದಳು ಬೇಜಾರಿಂದ.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನಾಲ್ಕನೆಯ ಕತೆ
ಇಳಿ ಮಧ್ಯಾಹ್ನದ ಹೊತ್ತು; ಯಾಣವೆನ್ನೋ ಅದ್ಭುತ ತಾಣವನ್ನು ಕಣ್ದುಂಬಿಸಿಕೊಂಡು ಕಾವ್ಯ ಮತ್ತು ಕುಟುಂಬ ಪ್ರವಾಸ ಮುಂದುವರೆಸಿದ್ದು ನೆನಪಿದೆಯಲ್ವೇ? ಆ ಮಧ್ಯಾಹ್ನ ಯಾಣದಿಂದ ಹೊರಟು ತಮ್ಮ ಕಾರ್ ಏರಿ, ಹಸಿವೆಗೆ ರಾಮಬಾಣವಾಗಬಹುದಾದ ಹೊಟೆಲ್ ಹುಡುಕುತ್ತಾ ಮಾತು ಮುಂದುವರೆಸಿದ್ದರು ಅವರೆಲ್ಲಾ; ಗೂಗಲ್ ಮ್ಯಾಪ್ ಇವರಿಗೆ ಹೊಟ್ಟೆ ತುಂಬಿಸುವ ತಾಣ ತೋರುತ್ತಿದ್ದರೆ, ಪ್ರಕಾಶನ ತಲೆಯಲ್ಲಿ ಕಾರಿನ ಹೊಟ್ಟೆ ತುಂಬಿಸುವ ಯೋಚನೆ ಓಡುತ್ತಿತ್ತು.
ಪುಣ್ಯಕ್ಕೆ ೨೫ ಕಿಲೋಮೀಟರ್ ದೂರದಲ್ಲಿ ಒಂದೊಳ್ಳೆಯ ಹೊಟೆಲ್ ಮತ್ತು ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇರುವುದನ್ನು ತೋರಿಸಿದ ‘ಗೂಗಲಮ್ಮ’, ಎಲ್ಲರ ಮನಸ್ಸಿಗೂ ಸಮಾಧಾನ ತಂದಳು.
ಆಗ ಪ್ರಕಾಶ್ “ಪೆಟ್ರೋಲ್ ಬಂಕೇನೋ ಇದೆ; ಎಕ್ಸ್-ಪಿ ೯೫ ಇದ್ರೆ ಸಾಕು” ಎಂದ; ಆಗ ವಿಭಾ “ಅದೇನು ಬಾವ? ಎಕ್ಸ್-ಪಿ ೯೫?” ಎಂದು ಪ್ರಶ್ನಿಸಿದಳು. ಆಗ ಪ್ರಕಾಶ್ “ನಾವು ಕಾರಿಗೆ ಹಾಕಿಸುವ ಪೆಟ್ರೋಲ್ ೧೦೦% ಪೆಟ್ರೋಲ್ ಆಗಿ ಉಳಿದಿಲ್ಲ ವಿಭಾ; ೨೦೨೨ ಏಪ್ರಿಲ್ ವರೆಗೂ ಸಾಮಾನ್ಯ ಪೆಟ್ರೋಲ್ ಬಂಕುಗಳಲ್ಲಿ ಸಿಗುತ್ತಿದ್ದ ಪೆಟ್ರೋಲ್ ೧೦೦% ಪೆಟ್ರೋಲೇ ಆಗಿ ಉಳಿದಿತ್ತು; ನಂತರ ಈಗ ಅದರಲ್ಲಿ ೨೦% ಎಥನಾಲ್ ಮಿಕ್ಸ್ ಮಾಡಿದ್ದಾರೆ. ಆದ್ರೆ, ಆ ೨೦% ಎಥನಾಲ್ ಮಿಕ್ಸ್ ಆಗಿರೋ ಪೆಟ್ರೋಲ್ ಇದ್ಯಲ್ಲಾ? ಅದು ಎಲ್ಲಾ ಇಂಜಿನ್ನುಗಳಿಗೂ ಸೂಕ್ತ ಅಲ್ಲ! ಅದಕ್ಕೇ ನಾನು ನನ್ನ ಪ್ರೀತಿಯ ಕಾರಿನ ಇಂಜಿನ್ ಸ್ವಲ್ಪ ಆದ್ರೂ ಚೆನ್ನಾಗಿರ್ಲಿ ಅಂತ ಎಕ್ಸ್-ಪಿ ೯೫ ಫ್ಯುಯೆಲ್ ಸಿಗತ್ತಾ ಅಂತ ಹುಡುಕ್ತಾ ಇದೀನಿ” ಎಂದು ವಿವರಿಸಿದ.
ಆಗ ವರ್ಣ, “ಅದೆಲ್ಲಾ ಸರಿ ಬಾವ, ನೀವಿನ್ನೂ ಎಕ್ಸ್-ಪಿ ೯೫ ಅಂದ್ರೇನು ಅಂತ ಹೇಳ್ಲೇ ಇಲ್ಲ” ಎಂದಳು ನಗುತ್ತಾ. ಆಗ “ಈಗ ಅದೇನು ಅಂತ ತಿಳ್ಕೊಳಕ್ಕೆ ಸ್ವಲ್ಪ ಪೆಟ್ರೋಲ್ ಅಂದ್ರೇನು, ಎಥನಾಲ್ ಅಂದ್ರೇನು ತಿಳ್ಕೊಳಣ ಮೊದ್ಲು.” ಎಂದು ತನ್ನ ಪಾಠ ಪ್ರಾರಂಭಿಸಿದಳು ಕಾವ್ಯ.
ಆಗ ಸಮುದ್ರ “ಅಮ್ಮನಿಗೆ ಪಾಠ ಮಾಡೋಕೊಂದು ಕಾರಣ ಬೇಕು ಅಷ್ಟೇ ಅಲ್ವಾ? ಅದು ಕಾಡಾದ್ರೂ ಸರಿ, ಕಾರಾದ್ರೂ ಸರಿ, ಬರೆಯೋಕೆ ಬೋರ್ಡ್ ಇಲ್ಲದೇ ಇದ್ರೂ, ಪಾಠ ಮಾತ್ರ ಮುಂದೋಡತ್ತೆ” ಎಂದ ಅಮ್ಮನ ಕಾಲೆಳೆಯುತ್ತಾ. ಆಗ ಕಾವ್ಯ “ಹೂಂ, ಹೌದೌದು! ನಮ್ದು ಬೋರ್ಡ್ ಇಲ್ಲದೇ ಪಾಠ ಮುಂದೋಡುತ್ತೆ, ನಿಂದು ಕಂಬಿ ಇಲ್ಲದೇ ರೈಲು ಮುಂದೋಡುತ್ತೆ, ಅಲ್ವೇನೋ ತರ್ಲೇ?” ಎಂದಳು ಸಮುದ್ರನಿಗೆ ಟಾಂಗ್ ಕೊಡುತ್ತಾ.
ಎಲ್ಲರೂ ನಗಾಡುತ್ತಾ, ತಮ್ಮ ಪ್ರಯಾಣ ಮುಂದುವರೆಸಿದರು. ಮತ್ತೆ ಹಳಿಗೆ ಬಂದ ಮಾತಿನ ರೈಲಿನ ಇಂಜಿನ್, ಇದ್ದದ್ದು ಕಾವ್ಯಳ ಕೈಯಲ್ಲಿ. “ನಮ್ಮ ಭೂಮಿಯ ಒಳಗಿನ ಬಂಡೆಗಳ ಬಗ್ಗೆ, ಟೆಕ್ಟಾನಿಕ್ ಫಲಕಗಳ ಬಗ್ಗೆ ಯಾಣದಲ್ಲಿ ಮಾತಾಡಿದ್ವಲ್ಲ? ನಮ್ಮ ಭೂಮಿಯ ವಿಶಿಷ್ಟ ಬಂಡೆಗಳ ಅಡಿಯಲ್ಲಿ ಸಿಗುವ ಪಳೆಯುಳಿಕೆ ಇಂಧನವೇ ಪೆಟ್ರೋಲಿಯಂ ಅಥ್ವಾ ಕ್ರೂಡ್ ಆಯಿಲ್. ಇದನ್ನ ಪಳೆಯುಳಿಕೆ ಇಂಧನ ಅಂತ ಯಾಕೆ ಕರೀತಾರೆ ಗೊತ್ತಾ?” ಎಂದು ಪ್ರಯಾಣದಲ್ಲಿ ಪಾಠದ ಜೊತೆಗೆ ರಸಪ್ರಶ್ನೆ ಕಾರ್ಯಕ್ರಮವನ್ನೂ ಪ್ರಾರಂಭಿಸಿದಳು ಕಾವ್ಯ
ಆಗ ವರ್ಣಾ, “ಹೂಂ ಕಾವ್ಯಕ್ಕ, ನಂಗೊತ್ತು. ಲಕ್ಷಾಂತರ ವರ್ಷಗಳ ಹಿಂದೆ ಇದ್ದ ಗಿಡಗಳು ಮರಗಳು ಪ್ರಾಣಿಗಳು ಸತ್ತು ಭೂಮಿಯ ಭಾಗವಾದಾಗ, ಅವುಗಳ ಮೇಲೆ ಮಣ್ಣಿನ, ಮರಳಿನ, ಅನೇಕ ಖನಿಜಗಳ ಅನೇಕ ಪದರಗಳು ಒಂದೊಂದಾಗಿ ಸೇರಿಕೊಳ್ಳುತ್ತಾ, ಅಪಾರವಾದ ಒತ್ತಡ ಹಾಕಿದ್ವು; ಅಲ್ಲಿ ಪ್ರೆಶರ್ ಎಷ್ಟಿದೆ, ಟೆಂಪರೇಚರ್ ಎಷ್ಟಿದೆ, ಜೊತೆಗೆ ಎಂತಹ ಪ್ರಾಣಿಪಕ್ಷಿಗಳ, ಗಿಡಮರಗಳ ದೇಹಗಳಿವೆ ಅನ್ನೋದರ ಆಧಾರದ ಮೇಲೆ ಅದು ಕಲ್ಲಿದ್ಲು, ಪೆಟ್ರೋಲಿಯಂ – ಹೀಗೆ ಬೇರೆ ಬೇರೆ ರೂಪದ ಪಳೆಯುಳಿಕೆ ಇಂಧನವಾಗಿ ರೂಪುಗೊಂಡ್ವು. ಯಾವುದೇ ಒಂದು ಜೀವಿಯ ದೇಹ ಅಥ್ವಾ ದೇಹದ ಭಾಗ ಅನೇಕ ವರ್ಷಗಳಿಂದ ಭೂಮಿಯ ಭಾಗವಾಗಿ ಬಂಡೆಯಲ್ಲೋ, ಮರಳಿನಲ್ಲೋ, ಮಂಜುಗಡ್ಡೆಯಲ್ಲೋ, ಮರದ ಅಂಟಿನಲ್ಲೋ ಉಳ್ಕೊಂಡಿದ್ರೆ ಅದನ್ನ ಪಳೆಯುಳಿಕೆ ಅಂತೀವಿ” ಎಂದು ಜಾಣ ವಿದ್ಯಾರ್ಥಿನಿಯ ಹಾಗೆ ಉತ್ತರಿಸಿದಳು.
ಆಗ ಕಾವ್ಯ, “ವೆರಿಗುಡ್ ವರ್ಣ, ಪರ್ಫೆಕ್ಟ್ ಆನ್ಸರ್! ಪಳೆಯುಳಿಕೆ ಪದವೇ ಹೇಳೋ ಹಾಗೆ, ‘ಪಳೆ’ – ಅಂದ್ರೆ ಹಳೆಯ, ‘ಉಳಿಕೆ’ ಅಂದ್ರೆ ಉಳ್ಕೊಂಡಿರೋದು ಅಂತ ಅರ್ಥ; ಅವತ್ತೆಂದೋ ಸತ್ತ ಸಸ್ಯಗಳು, ಪ್ರಾಣಿಗಳು ಇವತ್ತು ನಮ್ಮ ವಾಹನಗಳನ್ನ, ಫ್ಯಾಕ್ಟರಿಗಳನ್ನ, ಅಷ್ಟೇ ಯಾಕೆ, ವಿದ್ಯುತ್ ರೂಪದಲ್ಲಿ ಮನೆಗಳನ್ನ, ಆಫೀಸುಗಳನ್ನ, ಆಸ್ಪತ್ರೆಗಳನ್ನ ನಡೆಸ್ತಾ ಇವೆ. ಪ್ರಕೃತಿಯಲ್ಲಿ ಎಲ್ಲವೂ ಚಕ್ರವೇ! ಇಂದಿನ ತರಕಾರಿ ಸಿಪ್ಪೆ, ನಾಳೆಯ ಗೊಬ್ಬರ, ನಾಡಿದ್ದು ಮತ್ತೆ ತಿನ್ನುವ ತರಕಾರಿಯೊಳಗಿನ ಸತ್ವ, ಮತ್ತೆ ಗೊಬ್ಬರ; ಅದಕ್ಕೇ ಹೇಳೋದು, ಪ್ರಕೃತಿಯೊಂದಿಗೆ ನಾವು ಅದರದ್ದೇ ವೇಗದಲ್ಲಿ ಸಾಗಿದ್ರೆ, ಅಲ್ಲೊಂದು ಬ್ಯಾಲೆನ್ಸ್ ಇರತ್ತೆ. ಆದ್ರೆ ನಮ್ ವೇಗ, ಪಾಪ, ಪ್ರಕೃತಿಗೆ ತಲೆಬಿಸಿ ಮಾಡಿದೆ. ಅದನ್ನ ಸ್ವಲ್ಪವಾದ್ರೂ ‘ಸ್ಲೋ ಡೌನ್’ ಮಾಡುವ ಇರಾದೆ ನಮ್ಮಂತಹ ಕೆಲವರದ್ದು. ಆದ್ರೆ ಎಲ್ಲರೂ ಪ್ರಕೃತಿಯ ಬಗ್ಗೆ ಗಮನ ಕೊಡದಿದ್ರೆ, ಪ್ರಕೃತಿಯನ್ನು ಉಳಿಸೋದು ಕೊಂಚ ಕಷ್ಟಸಾಧ್ಯವೇ ಅನ್ನೋ ಪರಿಸ್ಥಿತಿ ತಲುಪಿಬಿಟ್ಟಿದೀವಿ” ಎಂದಳು ಖೇದದಿಂದ.
ಆಗ ವಿಭಾ, “ಹೌದು ಕಾವ್ಯಕ್ಕ! ಜನರ ಬೇಡಿಕೆಗಳಿಗೆ, ಆಸೆಗಳಿಗೆ ಕೊನೇನೇ ಇಲ್ವಲ್ಲ; ದಿನಕ್ಕೊಂದು ಹೊಸ ವಸ್ತು ಮನೆಗೆ ಬರ್ಬೇಕು; ಮನಸ್ಸಿಗೆ ಬಂದಾಗೆಲ್ಲಾ ಶಾಪಿಂಗ್ ಮಾಡ್ಬೇಕು. ಒಬ್ರೊಬ್ರೇ ಓಡಾಡೋಕು ಅಷ್ಟು ದೊಡ್ಡ ಕಾರ್ ಬೇಕು; ಹೀಗಿರೋವಾಗ ಒಂದು ದಿನಕ್ಕೆ ಒಂದು ದೇಶ ಖರ್ಚು ಮಾಡೋ ಇಂಧನ ಎಷ್ಟು, ಯೋಚ್ನೆ ಮಾಡು? ಹೊಸ ವಸ್ತುಗಳನ್ನ ತಯಾರಿಸೋಕೆ ಫ್ಯಾಕ್ಟರಿ ಓಡ್ಬೇಕು ಅಂದ್ರೆ ಇದೇ ಪಳೆಯುಳಿಕೆ ಇಂಧನ ಬೇಕಲ್ಲ? ಅದ್ರಲ್ಲೂ ಈಗಿನ ‘ಫಾಸ್ಟ್ ಫ್ಯಾಶನ್’ ಗೊತ್ತಲ್ಲ? ಇವತ್ತು ಬೇಕಿರೋ ಡ್ರೆಸ್ ನಾಳೆಗೆ ಬೇಡ; ಕಳೆದ ತಿಂಗಳು ತೊಗೊಂಡ ಡ್ರೆಸ್ ಮುಂದಿನ ತಿಂಗಳಿಗೆ ‘ಟ್ರೆಂಡಿಂಗ್’ ಇಲ್ಲ ಅಂತ ಪಕ್ಕಕಿಡ್ತಾರೆ. ಅದ್ರಲ್ಲೂ, ಅವೆಲ್ಲಾ ಖಂಡಿತ ‘ನ್ಯಾಚುರಲ್’ ಆಗಿರೋ ಹತ್ತಿ ಬಟ್ಟೆ ಖಂಡಿತಾ ಅಲ್ಲ. ಕೆಮಿಕಲ್ಸ್ ಹಾಕಿ ಸಿಂಥೆಟಿಕ್ ಆಗಿ ಮಾಡಿರೋ ‘ಪಾಲಿಯೆಸ್ಟರ್’ ಬಟ್ಟೆಗಳು. ಪಳೆಯುಳಿಕೆ ಇಂಧನ ಖಾಲಿ ಆಗಿಹೋಗ್ತಾ ಇದೆ. ಆಮೇಲೆ ಏನು ಅನ್ನೋ ಯೋಚ್ನೇನೇ ಇಲ್ಲ ಜನಕ್ಕೆ.” ಎಂದಳು.
ಇದನ್ನು ಕೇಳಿದ ಕಾವ್ಯಳಿಗೆ ತನ್ನ ಜಾಣ ಮತ್ತು ಪ್ರಬುದ್ಧ ತಂಗಿಯರ ಮೇಲೆ ಪ್ರೀತಿ, ವಿವೇಚನೆಯಿಲ್ಲದ ಜನರ ಮೇಲೆ ಕೋಪ – ಎರಡೂ ಒಟ್ಟಿಗೆ ಉಕ್ಕಿ ಬಂತು. ಆಗ ಕಾವ್ಯ – “ಕರೆಕ್ಟಾಗಿ ಹೇಳಿದೆ ವಿಭಚ್ಚು. ಈ ಫಾಸಿಲ್ ಪ್ಯುಯೆಲ್ ಅಂದ್ರೆ ಪಳೆಯುಳಿಕೆ ಇಂಧನ ಒಂದಲ್ಲಾ ಒಂದಿನ ಖಾಲಿ ಆಗಿಬಿಡತ್ತಲ್ಲಾ? ಜೊತೆಗೆ ಇದು ಭೂಮಿಯಲ್ಲಿ ಎಲ್ಲ ಕಡೆ ಸಿಕ್ಕೊಲ್ಲಾ; ಮಿಡಲ್ ಈಸ್ಟ್ ದೇಶಗಳು, ವೆನಿಜುಯೆಲಾದಂತಹ ಕಡೆ ಹೆಚ್ಚಾಗಿ ಕಂಡುಬರೋ ಇಂಧನಗಳ ಮೇಲೆ, ಅವ್ರು ಹಾಕೋ ಟ್ಯಾಕ್ಸ್ – ಇವೆಲ್ಲಾ ಜಗತ್ತಿನಲ್ಲಿ ಈಗ ನಡೀತಾ ಇರೋ ಯುದ್ಧಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣ. ಹೀಗೆ ಪೆಟ್ರೊಲ್, ಎಲ್ಪಿಜಿ, ಡೀಸೆಲ್ – ಇವೆಲ್ಲಾ ಬೇಕು ಅಂತ ಇತರ ದೇಶಗಳ ಮೇಲೆ ಡಿಪೆಂಡ್ ಆಗೋದನ್ನ ಕಡಿಮೆ ಮಾಡ್ಬೇಕು ಅಂತಲೇ ‘ಇ೨೦’ ಅಂತ ಇಂಧನ ರೆಡಿ ಮಾಡಿದೆ ನಮ್ಮ ದೇಶ ಮತ್ತು ಇನ್ನೂ ಅನೇಕ ದೇಶಗಳು.” ಅಂತ ವಿವರಿಸೋಕೆ ಪ್ರಾರಂಭಿಸಿದಳು.
ಆಗ ಸಮುದ್ರ, “ಅಮ್ಮ, ಒಂದ್ನಿಮಿಷ! ಪೆಟ್ರೋಲ್ ಮತ್ತೆ ಪೆಟ್ರೋಲಿಯಂ – ಇವೆರಡೂ ಒಂದೇನಾ?” ಎಂದು ಕೇಳಿದ ಕುತೂಹಲದಿಂದ. ಆಗ ಕಾವ್ಯ, “ಇಲ್ಲ ಕಂದ, ಪೆಟ್ರೋಲಿಯಮ್ ಅಂದ್ರೆ ಭೂಮಿಯ ಒಳಗೆ ಪೈಪ್ ಹಾಕಿ, ಹರ ಸಾಹಸ ಪಟ್ಟು ಹೊರತೆಗೀತಾರಲ್ಲ? ಅನೇಕ ಪಳೆಯುಳಿಕೆ ಇಂಧನಗಳ ‘ಮಿಕ್ಸ್ಚರ್’ ಅಂದ್ರೆ ‘ಮಿಶ್ರಣ’? ಅದು ಪೆಟ್ರೋಲಿಯಂ; ಅದನ್ನೇ ‘ಕ್ರೂಡ್ ಆಯಿಲ್’ ಅಂತಾನೂ ಕರೆಯೋದು. ಆ ಪೆಟ್ರೋಲಿಯಂನಲ್ಲಿ ಅನೇಕ ಇಂಧನಗಳ, ಅನೇಕ ರಾಸಾಯನಿಕಗಳ ಮಿಶ್ರಣ ಇರತ್ತೆ. ಪೆಟ್ರೋಲ್ ಕೂಡ ಆ ಮಿಶ್ರಣದ ಒಂದು ಭಾಗ ಅಷ್ಟೇ. ಪೆಟ್ರೋಲ್ ಜೊತೆಗೆ ‘ಡೀಸೆಲ್’, ‘ಸೀಮೆ ಎಣ್ಣೆ’, ವ್ಯಾಸೆಲೀನ್ ಅಲ್ಲಿ ಬಳಸೋ ‘ಪೆಟ್ರೋಲಿಯಮ್ ಜೆಲ್ಲಿ’, ರೋಡಿಗೆ ಟಾರ್ ಹಾಕೋಕೆ ಬಳಸೋ ‘ಬಿಟ್ಯುಮೆನ್’, ನಮ್ಮ ಮನೆಯ ಸಿಲಿಂಡರ್ ಒಳಗಿರೋ ಗ್ಯಾಸ್ – ಹೀಗೆ ಎಲ್ಲವೂ ಪೆಟ್ರೋಲಿಯಂ ನ ಭಾಗ.” ಎಂದಳು.
ಆಗ ವಿಭಾ, “ಅಬ್ಬಾ ಎಷ್ಟೆಲ್ಲಾ ಉಪಯುಕ್ತ ಕೆಮಿಕಲ್ಸ್ ಇವೆ ಅಲ್ವಾ ಈ ಮಿಶ್ರಣದಲ್ಲಿ? ಅದಕ್ಕೇ ಜನ ಹೀಗೆ ದೇಶಗಳನ್ನೇ ಮಾರಿ, ದೇಶಗಳನ್ನೇ ಲೂಟಿ ಮಾಡಿ ಸಾಮ್ರಾಜ್ಯ ಕಟ್ತಾರೆ, ಸಾಮ್ರಾಜ್ಯ ನಾಶ ಮಾಡ್ತಾರೆ ಈ ಪೆಟ್ರೋಲಿಯಂಗೋಸ್ಕರ! ಈಗ ನಡೀತಾ ಇರೊ ಯುದ್ಧವನ್ನ ‘ತೈಲ ಯುದ್ಧ’ ಅಂತ ಅಷ್ಟಿಲ್ದೇ ಕರೀತಾರಾ?” ಎಂದಳು.
ಇಷ್ಟೆಲ್ಲಾ ಮಾತಾಡ್ತಾ ಪೆಟ್ರೋಲ್ ಬಂಕ್ ಬಂದೇಬಿಡ್ತು! ಆಗ, ಅಲ್ಲಿ ಎಕ್ಸ್.ಪಿ ೯೫ ಇಂಧನ ಲಭ್ಯವಿದ್ದದ್ದು ಕಂಡು ಪ್ರಕಾಶನ ಪುಟ್ಟ ಕಣ್ಣು ದೊಡ್ಡದಾಗಿ ಅರಳಿತು ಖುಷಿಯಿಂದ. ಕಾರುಗಳು, ಇಂಜಿನ್, ಬೈಕು, ಇಂಜಿನಿಯರಿಂಗ್ – ಇವೆಲ್ಲಾ ಪ್ರಕಾಶ್ ಬಾವನ ಜೊತೆಗೆ ವರ್ಣನಿಗೂ ಫೇವರೆಟ್ ವಿಷಯ; ತನಗೆ ೧೮ ಆದ ತಕ್ಷಣ ಬೈಕ್ ತೊಗೊಳ್ಳೊದೇ, ಲೈಸೆನ್ಸ್ ಪಡೆದು ಓಡಿಸೋದೇ ಎಂದು ಕಾಯ್ತಾ ಇರುವ ವರ್ಣ, ಪೆಟ್ರೊಲ್ ತುಂಬಿಸಲು ಕೆಳಗಿಳಿದ ಬಾವನ ಬಾಲದಂತೆ ತಾನೂ ಇಳಿದಳು.
ಆಗ, ಮತ್ತದೇ ಪ್ರಶ್ನೆ ಮುಂದಿಟ್ಟ ವರ್ಣ, “ಯಾಕೆ ಬಾವ, ಎಕ್ಸ್ ಪಿ ೯೫ ಪೆಟ್ರೋಲೇ ಬೇಕಂದ್ರಿ? ಇದಕ್ಕೂ ನಾರ್ಮಲ್ ಪೆಟ್ರೋಲ್ಗೂ ಏನು ವ್ಯತ್ಯಾಸ?” ಎಂದಳು. ಆಗ ಪ್ರಕಾಶ್, “ನಾರ್ಮಲ್ ಪೆಟ್ರೋಲ್ ಅಂದ್ರೆ ೧೦೦% ಪೆಟ್ರೋಲ್ ಆಗಿರ್ಬೇಕು; ಆದ್ರೆ ಈಗ ವಾಯು ಮಾಲಿನ್ಯ ಕಮ್ಮಿ ಮಾಡಕ್ಕೆ, ಜೊತೆಗೆ, ಬೇರೆ ದೇಶದಿಂದ ತರಿಸಿಕೊಳ್ಳೋ ಪೆಟ್ರೋಲ್ ಮೇಲಿನ ಹಣ ಉಳಿಸುವ ಸಲುವಾಗಿ ೨೦% ‘ಎಥನಾಲ್’ ಮಿಕ್ಸ್ ಮಾಡಿ ಪೆಟ್ರೋಲ್ ಮಾರ್ತಾ ಇದಾರೆ. ಮೇಲ್ನೋಟಕ್ಕೆ ಇದು ದೇಶಕ್ಕೆ, ಪರಿಸರಕ್ಕೆ ಒಳ್ಳೇದು ಅನ್ನೋ ಹಾಗೆ ಕಾಣಿಸ್ಬಹುದು. ಆದ್ರೆ ಇದೆಲ್ಲಾ ಅಷ್ಟು ಸರಳವಾಗಿಲ್ಲ.” ಎಂದು ವಿವರಿಸಿದ; ಅಷ್ಟರಲ್ಲಿ, ಪೆಟ್ರೋಲ್ ತುಂಬಿಸಿಕೊಂಡದ್ದು ಮುಗಿದದ್ದರಿಂದ ವಾಪಸ್ ಕಾರ್ ಏರಿದರು.

ತನ್ನ ಮಾತನ್ನು ಮುಂದುವರೆಸಿದ ಪ್ರಕಾಶ್, “ಪೆಟ್ರೋಲ್ ಗೆ ಮಿಕ್ಸ್ ಮಾಡಿರೋ ‘ಎಥನಾಲ್’ ಅನ್ನೋ ಆಲ್ಕೋಹಾಲ್ ಇದ್ಯಲ್ಲ? ಅದನ್ನ ಮೆಕ್ಕೆಜೋಳದಂಥಾ ಬೆಳೆಗಳಿಂದ, ಕೃಷಿಯಲ್ಲಿ ಉಳಿಯೋ ತ್ಯಾಜ್ಯದಿಂದ ತಯಾರಿಸ್ತಾರೆ. ಅಲ್ಲಿ ಗಿಡ ಬೆಳೆಯೋಕೆ ಹೀರಿಕೊಂಡ ‘ಕಾರ್ಬನ್ ಡಯಾಕ್ಸೈಡ್’ ಇಲ್ಲಿ ಹೊಗೆಯ ರೂಪದಲ್ಲಿ ಹೊರಹೋಗತ್ತೆ; ಆದ್ರಿಂದ ಎಂದೋ ಪಳೆಯುಳಿಕೆ ಇಂಧನದಲ್ಲಿ ಸೆರೆಯಾಗಿದ್ದ ಕಾರ್ಬನ್ ಇಂದು ಹೊರಗೆ ಬಿಡೋಕಿಂತಾ, ಇದು ವಾಸಿ ಅನ್ನೋ ನಂಬಿಕೆ. ಆದರೆ ಇದಷ್ಟೇ ಸತ್ಯ ಅಲ್ಲ; ಇದ್ರಲ್ಲಿ ಪರಿಸರದ ಮತ್ತು ದೇಶದ ವಾಣಿಜ್ಯ ವಹಿವಾಟಿನ ಅನೇಕ ಗುಟ್ಟುಗಳು ಗುಟ್ಟಾಗಿಯೇ ಉಳಿದಿರತ್ವೆ.” ಎಂದು ವಿವರಿಸಿದ.
ಆಗ ಕಾವ್ಯ, “ವಿದ್ಯುತ್ ವಾಹನಗಳದ್ದೂ ಅದೇ ಕಥೆ ತಾನೇ? ಹೊಗೆ ಹೊರಗೆ ಹಾಕಲ್ಲ, ಪರಿಸರ ಸ್ನೇಹಿ ವಿದ್ಯುತ್ ವಾಹನ ಅಂತೀವಿ! ಅದೇ ವಿದ್ಯುತ್ ವಾಹನ ಉತ್ಪಾದಿಸೋಕೆ ಅದೇ ಪಳೆಯುಳಿಕೆ ಇಂಧನವನ್ನ ಎಗ್ಗುಸಿಗ್ಗಿಲ್ಲದೆ ಬಳಕೆ ಮಾಡ್ತೀವಿ. ವಿದ್ಯುತ್ ವಾಹನದ ‘ಬ್ಯಾಟರಿ’ ತಯಾರಿಸೋಕೆ ನಿಸರ್ಗದ ತೊಟ್ಟಿಲಿಗೇ ಕೈಹಾಕಿ, ಭೂಮಿಯನ್ನ ಬಗೆದು ಬರಡು ಮಾಡಿ, ಲೋಹಗಳನ್ನ ಹೊರತೆಗೀತೀವಿ. ಇನ್ನು ಆ ವಿಷಕಾರಿ ಬ್ಯಾಟರಿಗಳ ವಿಲೇವಾರಿ ಮತ್ತೊಂದು ದೊಡ್ಡ ಸಮಸ್ಯೆ. ಆದ್ರೂ ‘ವಿದ್ಯುತ್ ವಾಹನದಿಂದ ಪರಿಸರದ ಎಲ್ಲಾ ಸಮಸ್ಯೆಗಳೂ ಸರಿಹೋಗತ್ತೆ’ ಅನ್ನೋ ಹಾಗೆ ಪೋಸ್ ಕೊಡ್ತೀವಿ. ಮನುಷ್ಯನಂತಹ ದುಷ್ಟಪ್ರಾಣಿ ಮತ್ತೊಬ್ಬನಿಲ್ಲ!” ಎಂದಳು ಬೇಜಾರಿಂದ.
ಆಗ, ವರ್ಣ, “ಅದೆಲ್ಲಾ ಸರಿ, ಇನ್ನೂ ಎಕ್ಸ್.ಪಿ ೯೫ ಏನು ಅಂತ ಹೇಳ್ಲೇ ಇಲ್ಲ ಬಾವ” ಎಂದಳು ಮೂತಿ ಊದಿಸಿಕೊಳ್ತಾ. ಆಗ ಪ್ರಕಾಶ್ ನಗುತ್ತಾ, “ಹೌದಲ್ವಾ ವರ್ಣಾ! ಅದೇ ಈ ಇಂಧನಗಳಲ್ಲಿ ‘ಆಕ್ಟೇನ್ ರೇಟಿಂಗ್’ ಅಂತ ಇರತ್ತೆ. ಉತ್ತಮ ‘ಆಕ್ಟೇನ್ ರೇಟಿಂಗ್’ ಇದ್ರೆ ಇಂಜಿನ್ ಗೆ ಒಳ್ಳೇದು. ಸಾಮಾನ್ಯ ಪೆಟ್ರೋಲಿಗಿಂತಾ ಇದರ ‘ಆಕ್ಟೇನ್ ರೇಟಿಂಗ್’ ಬೆಟರ್ ಆಗಿದೆ. ನನ್ನ ಕಾರಿನ ಪ್ರೀತಿಯ ಇಂಜಿನ್ ೨೦% ಎಥನಾಲ್ ಇರೋ ಪೆಟ್ರೋಲ್ ಇಂದ ರಸ್ಟ್ ಹಿಡೀಬಾರದಲ್ಲಾ? ಅದಕ್ಕೇ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಸ್ಪೆಷಲ್ ಎಕ್ಸ್.ಪಿ ೯೫ ಹಾಕ್ಸೋ ಪ್ರಯತ್ನ; ಇದ್ರಲ್ಲಿ ಕೂಡ ೧೦೦% ಪೆಟ್ರೋಲ್ ಇಲ್ಲ; ಇದ್ರಲ್ಲೂ ಎಥನಾಲ್ ಮಿಕ್ಸ್ ಮಾಡಿರ್ತಾರೆ; ಆದ್ರೆ ಪ್ರಮಾಣ ನಮ್ಮ ಕಾರಿನ ‘ಇಂಜಿನ್’ಗೆ ಸೂಕ್ತವಾಗಿರತ್ತೆ; ಜೊತೆಗೆ ಇಂಜಿನ್ ಕ್ಲೀನ್ ಆಗೋಕೆ, ಅಲ್ಲಿ ಕಾರ್ಬನ್ ಕೂರದೇ ಇರೋಕೆ ಕೆಲವು ವಿಶೇಷ ಕೆಮಿಕಲ್ಸ್ ಮಿಕ್ಸ್ ಮಾಡಿರ್ತಾರೆ.” ಎಂದು ವಿವರಿಸಿದ.
ಆಗ ಸಮುದ್ರ, “ಅಪ್ಪಾ, ನಮ್ ಕಾರಿಗೇನೋ ಹೊಟ್ಟೆ ತುಂಬಿಸಿದ್ರಿ! ನಮ್ಮ ಹೊಟ್ಟೇ ತುಂಬಿಸೋದು ಬೇಡ್ವಾ? ನೀವು ಹೇಳೋದು ಇಂಟರೆಸ್ಟಿಂಗ್ ಆಗಿದೆ. ಆದ್ರೆ ಹೊಟ್ಟೆ ಖಾಲಿ ಇದ್ರೆ, ಬ್ರೈನ್ ಕೆಲ್ಸ ಮಾಡಲ್ಲಪ್ಪ! ಹೊಟೆಲ್ ಬಂತು ನಿಲ್ಸಿ, ನಿಲ್ಸಿ!” ಎಂದ ಹೋಟೆಲ್ ಕಂಡ ಖುಷಿಯಿಂದ ಕೇಕೆ ಹಾಕುತ್ತಾ!

ಸಮುದ್ರನ ಮಾತಿಗೆ ನಗುತ್ತಾ, ಎಲ್ಲರೂ ಹಸಿದ ಹೊಟ್ಟೆ ತುಂಬಿಸೋಕೆ ಏನೇನು ಆರ್ಡರ್ ಮಾಡೋಣ ಅಂತ ಯೋಚಿಸುತ್ತಾ ಕೆಳಗಿಳಿದರು. ಇವರ ಪ್ರಯಾಣ ಮುಂದೆ ಎತ್ತ ಸಾಗಿತು? ಅಲ್ಲೇನಾಯಿತು ಎಂದು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ. ಏನಂತೀರಿ?
(ಹಿಂದಿನ ಕಂತು: ಇದು ಕಲ್ಲು ಕರಗುವ ಸಮಯ!)
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.


