ಅಪ್ಪನನ್ನು ಚಹಾ ಕುಡಿಯೋಣವೆಂದು ಊರಿನ ಕೆಲವರೆಲ್ಲ ಸೇರಿ ಕರೆದುಕೊಂಡು ಹೋದರು. ಚಹಾ ಕುಡಿಯುವುದರಲ್ಲೇನಿದೆ? ಎಂದು ಅಪ್ಪನಿಗೂ ಅನ್ನಿಸಿ, ಜೊತೆ ನಡೆದರು. ಆ ಚಹಾ ಅಂಗಡಿಯಲ್ಲಿ ಅವರೆಲ್ಲ ಒಟ್ಟು ಸೇರಿ, ಅಪ್ಪನ ಕಾಲಿಗೆರಗಿ ಗೋಗರೆದರು. ‘ಇಲ್ಲಂತ ಹೇಳ್ಬ್ಯಾಡ್ರಿ. ಕಂಪೆನಿ ಕಟ್ಟೋ ಆಸಿನೇ ಇರ್ಲಿಲ್ರಿ. ನಿಮ್ ಮಗ್ಳ ಅಭಿನಯ ಕಂಡ್ಮೇಲೆ ಅನ್ಸ್ತು ಅಜ್ಜಾರ’ ಎಂದು ಅಲವತ್ತುಕೊಂಡರು. ಅವರೆಲ್ಲ ತನ್ನ ಕಾಲಡಿ ಕೂತು ಹೀಗೆ ಕೇಳುವಾಗ ಅಪ್ಪನ ಮನಸ್ಸಿಗೆ ಅದೇನು ಎನಿಸಿತೋ? ಹೂಂಗುಟ್ಟಿದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ನಾಲ್ಕನೆಯ ಕಂತು
ತಂದೆಯವರ ತಾಕೀತಿನ ನಂತರ ನಾವು ಕದವನ್ನು ಹಾಕಿಯೇ ಒಳಗಿರುತ್ತಿದ್ದದ್ದು. ಅಪ್ಪನ ನಿಷ್ಠುರ ಮಾತಿಗೆ ತಾಳಿಕೋಟೆ ಶಿವಣ್ಣನ ಇಬ್ಬರೂ ಹೆಂಡತಿಯರು ಭರಪೂರ ಹೊಗಳಿಕೆಯನ್ನು ಹರಿಸಿದ್ದೇ ಸುರಿಸಿದ್ದು! ‘ಛಲೋ ಮಾಡಿದ್ರಿ ನೋಡ್ರಿ. ನಾವ್ ಎಷ್ಟ್ ಹೇಳಿದ್ರೂ ಕೇಳಾಕೆ ತಯಾರಿಲ್ಲ ಮನ್ಷ. ಹೆಂಗ್ ಮಾತಿಲ್ದಂಗ್ ಈಗ ಹೊಂಟಾನ್ ನೋಡ್ರಿ!’ ಎಂದು ಖುಷಿಯಿಂದ ಹೇಳಿದ್ದರು. ಅತ್ತ ನಮ್ಮ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿತ್ತು. ನನಗೇನೂ ಹೇಳಬಾರದೆಂದೂ ಹೇಳಿದರೆ ಕ್ಷಣವೂ ನಿಲ್ಲದಂತೆ ಹೊರಟು ಬಿಡುತ್ತಾರೆಂದೂ ಆದಷ್ಟು ಜೋಪಾನದಿಂದ ನೋಡಿಕೊಳ್ಳಬೇಕೆಂದೂ ಹೀಗೆ ತರಹೇವಾರಿ ಮಾತುಗಳು ಅದಾಗಲೇ ಪಟ್ಟಾಂಗದ ವಿಷಯವಾಗಿ ಹೋಗಿತ್ತು.
‘ಸೂಳೆಯ ಸಂಪತ್ತು’ ನಾಟಕದ ಪ್ರದರ್ಶನಕ್ಕೆ ತಯಾರಿ ನಡೆಯುತ್ತಿತ್ತು ಅಲ್ಲಿ. ಈಗ ಇದೇ ನಾಟಕ ‘ಬಸ್ ಹಮಾಲ’ ಎಂದಾಗಿದೆ. ಸರಿ, ಪ್ರಾಕ್ಟೀಸ್ಗೆಂದು ಕಲಾವಿದರೆಲ್ಲ ಒಂದೆಡೆ ಸೇರಿದ್ದೆವು. ನಾಯಕಿ ಸೂಳೆ ಚಂಚಲಾ ಪಾತ್ರ ನನ್ನದಾಗಿತ್ತು. ಒಂದೇ ಒಂದು ಪ್ರಾಕ್ಟೀಸ್ ಆಗಿದ್ದಷ್ಟೇ; ಕೂತಿದ್ದ ಜನರೆಲ್ಲ ಬೆರಗುಗಣ್ಣಿಂದ ನೋಡುತ್ತಿದ್ದರು. ಅವರ ಕಣ್ಣೆದುರು ಅಭ್ಯಾಸ ಮಾಡುತ್ತಿದ್ದ ನಾನು ಆಕಾಶದಿಂದಿಳಿದ ಅಪ್ಸರೆಯಂತೆ ಇಲ್ಲಾ ಬೇರೊಂದು ಗ್ರಹದಿಂದ ಇಳಿದು ಬಂದ ಜೀವಿಯಂತೆಯೊ ತೋರುತ್ತಿರಬೇಕೆನಿಸಿತು. ಅವಾಕ್ಕಾಗಿ ನನ್ನನ್ನೇ ನೋಡುತ್ತಿದ್ದರು. ಪ್ರಾಕ್ಟೀಸ್ ಮುಗಿದ ನಂತರ ಸಿಕ್ಕ ಜನಪ್ರೀತಿ ಅಗಾಧವಾದದ್ದು. ಒಬ್ಬೊರ ಮನೆಯಿಂದ ಹಾಲು, ಇನ್ನೊಬ್ಬರ ಮನೆಯಿಂದ ಮಜ್ಜಿಗೆ, ಮತ್ತೊಬ್ಬರ ಮನೆಯಿಂದ ತುಪ್ಪ… ಹೀಗೆ ಪ್ರೀತಿಯ ರೂಪದಲ್ಲಿ ವಸ್ತುಗಳನ್ನು ತಂದೊಪ್ಪಿಸುತ್ತಿದ್ದರು. ಆದರೆ ಈ ಸಂಘಟಕರ ಕೈಚಳಕ ಕಂಡರೆ ತಲೆಬಾಗಬೇಕು! ಆ ಎಲ್ಲ ವಸ್ತುಗಳನ್ನು ನೀಡಿ, ಸೂಳೆ ಪಾತ್ರ ಮಾಡಿದರಲ್ಲಾ, ಅವರಿಗೆ ತಲುಪಿಸಿ ಎಂದು ಕೊಟ್ಟರೆ, ಈ ಸಂಘಟಕರು ‘ಅಂತದೇನು ತಿನ್ನದಿಲ್ರಿ. ಅವ್ರನ್ನ ಕರ್ಕಂಡ್ ಬರ್ಬೇಕಾದ್ರೆ ಭಾಳ್ ಕಷ್ಟ ಆತು. ಊಟ ತಿಂಡೀದು ಸೈತ ಅಲ್ಲೇ ಮಾತಾಡ್ಯಾರ್ ಅವ್ರು. ನಮ್ಗೆ ಅಂತದಿಂತಾದ್ ಆಯ್ತಂದ್ರೂ ಹಿಡ್ಸೋದಿಲ್ಲ. ಚೂರ್ ಹೆಚ್ಚುಕಮ್ಮಿ ಆದ್ರೂ ನಾವ್ ಇರಲ್ ನೋಡು, ಮಗ್ಳನ್ ಕರ್ಕೊಂಡ್ ಹೋಗ್ಬಿಡ್ತೀನಿ ಅಂದಿದಾರೆ’ ಅಂತೆಲ್ಲ ಹೇಳಿ ಕಳಿಸುತ್ತಿದ್ದರು.
ಒಂದು ನಾಟಕ ಮುಗಿಯಿತು. ಮತ್ತೆ ಎರಡು ದಿನಗಳ ವಿರಾಮ. ‘ಅರೇ! ಒಂದೇ ಸಲ ಮೂರು ನಾಟಕ ಅಂತ ಹೇಳಿ, ಇದೇನಿದು ಗ್ಯಾಪ್ ಬಿಟ್ಟು ನಾಟಕ ಮಾಡೋದು?’ ಎಂದು ಅಪ್ಪ ಕೇಳಿದ ಪ್ರಶ್ನೆಯಾಗಿತ್ತು. ಪರಿಸ್ಥಿತಿಯನ್ನು ಶೇಕ್ ಚಾಂದ್ ಅವರೇ ವಿವರಿಸಬೇಕಾಯಿತು. ನಾಟಕ ಬಿಟ್ಟು ಒಮ್ಮಿಂದೊಮ್ಮೆಲೆ ಹೊರಡುವುದು ನನಗೂ ಸರಿ ಕಾಣಲಿಲ್ಲ. ಬದುಕು ಕೊಟ್ಟ ತಾಯಿಯನ್ನು ತೊರೆಯುವುದಕ್ಕೆ ಮನಃಸಾಕ್ಷಿ ಒಪ್ಪುತ್ತಿರಲಿಲ್ಲ. ಅಪ್ಪ ಕೇಳಬೇಕಲ್ಲಾ! ಅವರ ಯೋಚನೆಯೇ ಬೇರಿತ್ತು. ‘ಗ್ಯಾಪ್ ಬಿಟ್ಟೀರಲ್ಲಾ ಅವಕ್ಕೂ ಪೇಮೆಂಟ್ ಕೋಡ್ಬೇಕು ಮತ್ತೆ’ ಎಂಬ ಷರತ್ತು ವಿಧಿಸಿದರು. ಒಂದು ದಿನಕ್ಕೆ ಮುನ್ನೂರು ರೂಪಾಯಿ ಕೊಡಲು ಒದ್ದಾಡುತ್ತಿರುವಾಗ ಅದ್ಹೇಗೆ ನಾಟಕ ಮಾಡದ ದಿನವೂ ಅಷ್ಟೇ ಸಂಬಳ ಕೊಡಬೇಕೆಂಬುದು ನ್ಯಾಯ ಸಮ್ಮತವಲ್ಲ ಎಂಬುದು ಶೇಕ್ ಚಾಂದ್ ಅವರಿಗೆ ಅನಿಸಿತ್ತು. ಇಂತಹ ವಿಷಯಗಳಲ್ಲಿ ಕಠೋರವೂ ನಿರ್ಭಾವುಕರೂ ಆದ ತಂದೆಯನ್ನು ಒಪ್ಪಿಸಲು ವಿನಮ್ರ ಮಾತುಗಳೇ ಬೇಕಿತ್ತು. ‘ಏನಾರ ರಿಯಾಯಿತಿ ಕೊಡ್ರಿ ಅಜ್ಜಾರ. ನೀವೇ ಹಿಂಗ್ ಮಾಡಿದ್ರ ಹೆಂಗ? ಎಂದೆಲ್ಲ ಕೇಳಿದರೂ ಅಪ್ಪ ಹಿಡಿದ ಪಟ್ಟು ಬಿಡುವಂತೆ ಕಾಣಲಿಲ್ಲ. ದಿನದ ಪೇಮೆಂಟ್ ಆ ದಿನವೇ ಕೊಡಬೇಕೆಂದು ಕಟುವಾಗಿಯೇ ಹೇಳಿದರು.
ಆ ಹೊತ್ತಿಗೆ ಅಲ್ಲಿಗೆ ಕಲ್ಯಾಣೇಶ್ವರರು ಬಂದರು. ಅವರನ್ನು ‘ಐನೋರು’, ‘ಕಲ್ಯಾಣದಯ್ಯ’ ಎಂದೆಲ್ಲ ಕರೆಯುತ್ತಿದ್ದರು. ಅವರ ಮೊಮ್ಮಗ ಈಗ ಮೈಸೂರಿನಲ್ಲೇ ಅಧ್ಯಯನ ನಡೆಸುತ್ತಿದ್ದಾರೆ. ಕಲ್ಯಾಣೇಶ್ವರರ ಬಾಯಿಂದ ಬಂದ ಮಾತು ಹುಸಿ ಹೋಗುತ್ತಿರಲಿಲ್ಲವಂತೆ. ಅಂದಹಾಗೆ, ಬಂದವರಿಗೆ ಪ್ರಸಾದವೇ ಸಾರಾಯಿ. ದೊಡ್ಡ ದೊಡ್ಡ ಮನೆಯವರೆಲ್ಲ ಬಂದರೂ ಅವರಿಗೂ ಅದೇ ಪ್ರಸಾದ. ಬಾಯಿಗೆ ಸಾರಾಯಿಯನ್ನು ತಾಕಿಸಿ, ಎದುರಿದ್ದವರ ಕೈಗೆ ನೀಡುತ್ತಿದ್ದರು. ಯಾರೊಬ್ಬರೂ ಮುಖ ಹಿಂಜುವಂತಿರಲಿಲ್ಲ. ಹೆಣ್ಣು ಗಂಡೆಂಬ ಭೇದವಿಲ್ಲದೆ ಕೊಟ್ಟ ಪ್ರಸಾದವನ್ನು ಸ್ವೀಕರಿಸಿಯೇ ತೆರಳಬೇಕಿತ್ತು. ಪ್ರಸಾದವಾಗಿ ಹಣ್ಣೋ ಪಂಚಕಜ್ಜಾಯವನ್ನೋ ನೀಡುವುದು ಬಿಟ್ಟು ಇದೇನಿದು ಸಾರಾಯಿ ಕೊಡುತ್ತಾರಲ್ಲಾ! ನಾನೂ ಮೊದಲಬಾರಿಗೆ ಅಸಹ್ಯಪಟ್ಟಿದ್ದೆ. ಹಾಗೇನಾದರೂ ಮಾಡಿದರೆ ಕೆಟ್ಟದ್ದಾಗಬಹುದು, ಐನೋರಿಗೆ ತಿಳಿವಳಿಕೆ ಬಂದಾಗಿನಿಂದ ಅದೇ ಪ್ರಸಾದವನ್ನು ನೀಡುತ್ತಿದ್ದರೆಂದು ಎಚ್ಚರಿಸಿದರು. ಭಯ ಹುಟ್ಟಿಸಿಯೇ ನಮ್ಮ ಸಮಾಜ ಭಕ್ತಿಯ ಬೀಜ ಬಿತ್ತುವುದು ತಾನೆ?
ನನ್ನನ್ನೂ ಅವರಲ್ಲಿಗೆ ಕರೆದುಕೊಂಡು ಹೋದರು. ನಮಸ್ಕರಿಸಿದವಳೇ ದೂರ ಹೋಗಿ ಕೂತೆ. ಕಲ್ಯಾಣೇಶ್ವರರೇ ಸ್ವತಃ, ‘ಸರಸಮ್ಮಾ ಮುಂದ್ ಬಾರವ್ವಾ’ ಎಂದು ಕರೆದರು. ಅಂಜಿಕೆಯಿಂದಲೇ ಮುಂದೆ ಕೂತೆ. ‘ಏನ್ ಭಾಳ್ ಗಲಾಟಿ ಮಾಡ್ತಿಯಂತಲ್ಲವ್ವಾ ನೀನು. ಅವ್ರೇನೋ ಆಸಿ ಇಟ್ಕೊಂಡಾರ ಕಂಪೆನಿ ಮಾಡ್ಬೇಕು ಅಂತ’ ಎಂದಾಗ ಸುಮ್ಮನಿರಲು ಮನ ಒಪ್ಪಲಿಲ್ಲ. ‘ಮಾಡ್ಕೊಳ್ಳಿ ಬಿಡ್ರಿ. ನಾನ್ ಮೂರ್ ದಿನ ಮಾತಾಡ್ಕೊಂಡೇನಿ. ಅಷ್ಟ್ ದಿನ ಮಾಡ್ಕೊಂಡ್ ಹೋಕ್ಕೇನಿ’ ಹೇಳಿಬಿಟ್ಟೆ. ಕಂಪೆನಿ ಕಟ್ಟುವ ಬಗ್ಗೆ, ನಾಟಕ ಮಾಡುತ್ತಾ ಅದನ್ನು ಮುನ್ನಡೆಸಿಕೊಂಡು ಹೋಗುವ ಬಗ್ಗೆ ಎಲ್ಲ ಚರ್ಚೆಗಳಾಗಿತ್ತೆಂದು ನನಗೆ ತಿಳಿದದ್ದು ಕೊನೆಗೆ. ಐನೋರು ನನ್ನನ್ನು ಒಪ್ಪಿಸಲು ಕಷ್ಟವಾಗುತ್ತದೆಂದು ಮೊದಲೇ ಹೇಳಿದ್ದರಂತೆ. ಅಂತೆಯೇ ಈಗೇನು ಕಟ್ತೀರಿ. ಮುಂದೆ ಕಂಪೆನಿ ನಷ್ಟದಲ್ಲೇ ಸಾಗುವ ಪ್ರಸಂಗ ಎದುರಾಗಬಹುದೆಂದು ಎಚ್ಚರಿಸಿದ್ದರು. ಊರಿನವರೆಲ್ಲ ಕೇಳಬೇಕಲ್ಲಾ, ‘ನಿಮ್ಮ ಆಶೀರ್ವಾದ ಇದ್ದರೆ ಎಲ್ಲವೂ ಸುಸೂತ್ರವಾಗಿ ಸಾಗುತ್ತದೆ ಐನೋರೆ’ ಎಂದು ಕೈಮುಗಿದುಬಿಟ್ಟರಂತೆ. ಇಕ್ಕಟ್ಟಿಗೆ ಸಿಲುಕಿಸುವುದು ಎಂದರೆ ಹೀಗೆ!
ನನ್ನನ್ನೇನೊ ಒಪ್ಪಿಸಬಹುದು, ನನ್ನ ಹಿಂದೆ ಪ್ರಭಾವಳಿಯಂತೆ ಬೆಂಗಾವಲಾಗಿರುವ ಅಪ್ಪನನ್ನು ಹೇಗೆ ತಾನೆ ಓಲೈಸಿಯಾರು? ಕಂಪೆನಿ ಕಟ್ಟುತ್ತಿರುವ ವಿಷಯ, ಕಲಾವಿದೆಯಾಗಿ ನಿಮ್ಮ ಮಗಳು ನಮ್ಮ ಕಂಪೆನಿಯಲ್ಲಿರಬೇಕೆಂದು ವಿಷಯ ಪ್ರಸ್ತಾಪವಾಯಿತು. ಕೇಳಿದ ತಕ್ಷಣ ಅಪ್ಪನ ನಿರ್ಧಾರ ನನ್ನ ಎಣಿಕೆಯಂತೆಯೇ ಆಯಿತು. ‘ಆಗಲ್ಲರಿ. ನೀವೇನಾರ ಮಾಡಿಕೊಳ್ರಿ, ನಮಗೀಗ ಹೊರಡಾಕ್ ಬಿಡ್ರಿ. ಮಗಳ ಮದ್ವಿ ಮಾಡೋದೈತಿ. ನಾವ್ ಹೊರಡ್ಬೇಕು’ ಎಂದು ಯಾವ ಮುಲಾಜಿಲ್ಲದೆ ಹೇಳಿಬಿಟ್ಟರು. ಇದು ಒಂದು ಭಾಗವಷ್ಟೇ. ಮುಂದುವರೆದ ಕಥೆಯೇ ಬೇರೆ!

ಅಪ್ಪನನ್ನು ಚಹಾ ಕುಡಿಯೋಣವೆಂದು ಊರಿನ ಕೆಲವರೆಲ್ಲ ಸೇರಿ ಕರೆದುಕೊಂಡು ಹೋದರು. ಚಹಾ ಕುಡಿಯುವುದರಲ್ಲೇನಿದೆ? ಎಂದು ಅಪ್ಪನಿಗೂ ಅನ್ನಿಸಿ, ಜೊತೆ ನಡೆದರು. ಆ ಚಹಾ ಅಂಗಡಿಯಲ್ಲಿ ಅವರೆಲ್ಲ ಒಟ್ಟು ಸೇರಿ, ಅಪ್ಪನ ಕಾಲಿಗೆರಗಿ ಗೋಗರೆದರು. ‘ಇಲ್ಲಂತ ಹೇಳ್ಬ್ಯಾಡ್ರಿ. ಕಂಪೆನಿ ಕಟ್ಟೋ ಆಸಿನೇ ಇರ್ಲಿಲ್ರಿ. ನಿಮ್ ಮಗ್ಳ ಅಭಿನಯ ಕಂಡ್ಮೇಲೆ ಅನ್ಸ್ತು ಅಜ್ಜಾರ’ ಎಂದು ಅಲವತ್ತುಕೊಂಡರು. ಅವರೆಲ್ಲ ತನ್ನ ಕಾಲಡಿ ಕೂತು ಹೀಗೆ ಕೇಳುವಾಗ ಅಪ್ಪನ ಮನಸ್ಸಿಗೆ ಅದೇನು ಎನಿಸಿತೋ? ಹೂಂಗುಟ್ಟಿದರು. ಮಾನವೀಯತೆ ಕಲಕಿರಬಹುದೇ? ಅಥವಾ ಕಂಪೆನಿಯಲ್ಲಿ ಮಗಳ ಭವಿಷ್ಯ ಕಂಡಿರಬಹುದೇ? ನಟಿಯಾಗಿ ಮಿಂಚುತ್ತಾಳೆಂದು ಕನಸುಗಟ್ಟಿರಬಹುದೇ? ಅಪ್ಪನೂ ಈ ಬಗ್ಗೆ ಏನೂ ಹೇಳಲಿಲ್ಲ; ನಾನೂ ಕೇಳ ಹೋಗಲಿಲ್ಲ.
ಷರತ್ತು ಇಲ್ಲದೆ, ಅವರು ಹೇಳಿದ್ದನ್ನೆಲ್ಲ ಅಪ್ಪ ಎಂದಿಗೂ ಒಪ್ಪಿದವರಲ್ಲ. ಅಂದೂ ವ್ಯವಹಾರದ ಮಾತುಕತೆಯನ್ನೂ ಮುಗಿಸಿದ್ದರು. ‘ಯಾರಿಗೆ, ಹೇಗೆ, ಎಷ್ಟು ಸಂಬಳ ಕೊಡುತ್ತೀರಿ ಎಂಬ ಉಸಾಬರಿ ನಮಗೆ ಬೇಕಿಲ್ಲ. ನನ್ನ ಮಗಳಿಗೆ ದಿನದ ಸಂಬಳ ಕೊಡತಕ್ಕದ್ದು. ಕಂಪೆನಿ ಮಾಡಿದ್ದರಿಂದ ಇನ್ನೂರು ರೂಪಾಯಿ ಸಂಬಳ ಕೊಟ್ಟುಬಿಡಿ’ ಎಂದು ಹೇಳಿಯೇ ಬಂದರು.
ಹಾಂ, ಕಲ್ಯಾಣೇಶ್ವರ ಕೃಪಾಪೋಷಿತ ನಾಟ್ಯ ಸಂಘ ಮಲ್ಲ(ಭಿ), ಶೋರಾಪುರ ತಾಲೂಕು, ಗುಲ್ಬರ್ಗಾ ಜಿಲ್ಲೆ ಕಂಪೆನಿ ಆರಂಭವಾಗೇಬಿಟ್ಟಿತು. ಪೂಜಾರಿ ಎಂಬ ಮಾಲೀಕರು, ಶೇಕ್ ಚಾಂದ್ ಅವರ ಸಹಮಾಲೀಕತ್ವದ ಕಂಪೆನಿಯಾಗಿತ್ತದು. ಯಾದಗಿರಿಯ ನಾಲ್ವಾರ್ನತ್ತ ಹೊಸ ಕಂಪೆನಿಯ ಮೊದಲ ಪ್ರಯಾಣ. ಹತ್ತಿಕುಣಿಯಲ್ಲಿ ಆಗ ಜಾತ್ರೆ ನಡೆಯುತ್ತಿತ್ತು. ಆ ಜಾತ್ರೆಯಲ್ಲಿ ಕಂಪೆನಿಯ ಕ್ಯಾಂಪ್. ಮೊದಲಿಗೆ ಉಳಿಯುವ ವ್ಯವಸ್ಥೆ ಸರಿಹೊಂದಬೇಕು. ಅಲ್ಲಿ ನೀಡಿದ್ದು ಕೇವಲ ಒಂದೇ ಮನೆ. ಮಾಲೀಕರಿಗೆ ಎದುರು ಕೋಣೆಯಲ್ಲಿದ್ದರು. ಹಾಗೆ ನನಗೂ ಪ್ರತ್ಯೇಕ ಕೋಣೆ ಇತ್ತು. ಒಳ ಮನೆಯಲ್ಲಿ ಉಳಿದ ಕಲಾವಿದರೆಲ್ಲ ಉಳಿಯಬೇಕಿತ್ತು. ತಾಳಿಕೋಟೆ ಶಿವಣ್ಣನ ಇಬ್ಬರು ಹೆಂಡತಿಯರು ಆ ಉಳಿದ ಕಲಾವಿದರೊಂದಿಗೇ ಸೇರಿಕೊಂಡರು. ಓಡಾಡುವುದಕ್ಕೂ ಮಲಗುವುದಕ್ಕೂ ಎಲ್ಲರಿಗೂ ಅದೇ ಜಾಗವಾಗಿತ್ತು. ಬೇರೊಂದು ಕಡೆಯಿಂದ ದೊಡ್ಡ ಪಾತ್ರೆಗಳಲ್ಲಿ ಊಟ ಬರುತ್ತಿತ್ತು. ಮೂಲಭೂತ ಸೌಕರ್ಯಗಳು ಮನುಷ್ಯನಿಗೆ ಅಗತ್ಯವೆಂದು ಅರ್ಥವಾಗಿದ್ದ ಕಾಲವದು.
ಈ ಕ್ಯಾಂಪ್ ನಡೆಯುತ್ತಿರುವಾಗ ಹತ್ತಿಕುಣಿ ಊಟಕ್ಕೆ ಕರೆದಿದ್ದರು. ಊರಿನ ಜನರು ಮತ್ತೆ ಮಾಲಿ ಪಾಟೀಲ ಗೌಡರು ಕಲಾವಿದರನ್ನು ಹೀಗೆ ಊಟಕ್ಕೆ ಕರೆಯುವುದು ತೀರಾ ಸಾಮಾನ್ಯವಾಗಿತ್ತು. ಆ ಊರಿನ ಗೌಡ ಮಾಬು ಪಟೇಲ, ಮುಸ್ಲೀಮನಾಗಿದ್ದ. ನಾನು ಆ ಊಟಕ್ಕೆ ಹೋಗಿರಲಿಲ್ಲ. ನನ್ನ ಕುರಿತಾಗಿ ವಿಚಾರಿಸಿದ್ದರು. ಆ ಹುಡುಗಿಗೆ ಮದುವೆಯಾಗಿದೆಯಾ? ಎಂದಿದ್ದಕ್ಕೆ ಉಳಿದವರು ಇಲ್ಲ ಎಂದಿದ್ದರು. ಮರುಕ್ಷಣದಲ್ಲೇ ‘ಹಾಗಾದ್ರೆ ನಾನು ಮದುವೆಯಾಗ್ತೇನೆ’ ಎಂದ ಅವರ ಮಾತಿಗೆ ಕಲಾವಿದರೆಲ್ಲ ಬೆರಗಾಗಿದ್ದರು.
ಶೌಚಕ್ಕೆಂದು ಹೊರಟಿದ್ದೆ. ಅಲ್ಲಿ ಐದಾರು ಅಡಿ ಎತ್ತರದ ಗೋಡೆಗಳು ಅಡ್ಡಲಾಗಿ ನಿಂತಿದ್ದವು. ಅದನ್ನು ಸುತ್ತುವರೆದೇ ಹೋಗಬೇಕಿತ್ತು. ಶೇಕ್ ಚಾಂದ್ ಅವರ ದೊಡ್ಡಪ್ಪನ ಮಗ, ಬಂದಗೀಸಾಬ್ ಅವರ ಮಗ ದಾವಲ್ಸಾಬ್ ಇದ್ದಕ್ಕಿದ್ದಂತೆ ‘ಅಕ್ಕವ್ರೆ… ಅಕ್ಕವ್ರೆ…’ ಎಂದು ಒಂದೇ ಸಮನೆ ಕೂಗತೊಡಗಿದ. ರಂಗದ ಮೇಲೆ ಹಾಸ್ಯಪಾತ್ರದಲ್ಲಿ ಮಿಂಚುತ್ತಿದ್ದ ದಾವಲ್ಸಾಬ್ನ ಬಗ್ಗೆ ಮೆಚ್ಚುಗೆಯಿತ್ತು. ಶಿವಣ್ಣನ ಹೆಂಡತಿ ಕನಕ ಮತ್ತಿವನು ಸೇರಿ ಅದೆಷ್ಟು ಚೆನ್ನಾಗಿ ಅಭಿನಯಿಸುತ್ತಿದ್ದರೆಂದರೆ ಜನರನ್ನೆಲ್ಲ ಹುಚ್ಚೆಬ್ಬಿಸುವಂತೆ ನಗಿಸುತ್ತಿದ್ದರು. ‘ಅಕ್ಕವ್ರೆ’ ಪದದ ಆ ‘ಕ’ ಒತ್ತಕ್ಷರವನ್ನು ಒತ್ತಿ ಉಚ್ಛರಿಸುತ್ತಿದ್ದ. ಅದು ಅವನ ರೀತಿಯೆಂದು ತಿದ್ದಹೋಗಲಿಲ್ಲ. ‘ಏನಾತೋ?’ ಎಂದು ಕೇಳಿದೆ. ಇದನ್ನು ಓದಬೇಕೆಂದು ಮುಖದೆದುರು ಒಂದು ಕಾಗದ ಹಿಡಿದ. ‘ಏನಿದು?’ ಎಂದೆ. ‘ಗೊತ್ತಿಲ್ರಿ. ನೀವೊಬ್ರೆ ಓದ್ಬೇಕ್ರಿ’ ಎಂದಿದ್ದೆ ಧುರ್ರೆಂದು ನಡೆದೇಬಿಟ್ಟ ಆಸಾಮಿ!
ಹೇಗೂ ಶೌಚಕ್ಕೆ ಹೊರಟವಳು, ಅಲ್ಲೇ ಓದಿದರಾಯಿತೆಂದು ಕಾಗದ ಹಿಡಿದೇ ಹೊರಟೆ. ಮುತ್ತು ಪೋಣಿಸಿದಂತಿದ್ದ ಅಕ್ಷರಗಳು. ಅದೆಷ್ಟು ಸುಂದರವಾಗಿದ್ದವು! ಅದೇ ಸಂತೋಷದಲ್ಲಿ ಓದಲು ಶುರುಮಾಡಿದರೆ, ‘ಪ್ರೀತಿಯ ಸರಸೂಗೆ…’ ಎಂದಿತ್ತು. ‘ಆಂ!!!’ ಯಾವ ಪ್ರೀತಿ ಸರಸು! ನನಗೇ ಪತ್ರ ಬರೆಯುವಷ್ಟು ಧೈರ್ಯ ಮಾಡಿದ್ದಾರಾ?! ಪ್ರೀತಿಯಂತೆ, ಪ್ರೇಮವಂತೆ, ಪವಿತ್ರ ಬಂಧವಂತೆ…ʼ ಅದು ಇದು ಎಂದು ಏನೇನೊ ತೂಕದ ಪದಗಳನ್ನೆಲ್ಲ ತುಂಬಿಸಿಟ್ಟಿದ್ದರು. ಇಷ್ಟು ಮುಂದುವರೆದವರನ್ನು ಬಿಡುವ ಮಾತೇ ಇಲ್ಲ. ಹೊರಬಂದವಳು, ಚೀಟಿ ಕೊಟ್ಟವನನ್ನು ಕರೆದೆ. ಬಂದು ಎದುರುನಿಂತ. ಸರಿಯಾಗಿ ಝಾಡಿಸಿಬೈದೆ. ‘ಮಾನ ಮರ್ಯಾದೆ ಇಲ್ವಾ? ಅಕ್ಕ – ತಂಗೀರಿದ್ದಾರಾ ನಿನಗೆ? ನಾಚಿಕೆ ಅಂದ್ರೇನು ಅಂತ ಗೊತ್ತಿದ್ಯಾ? ಥೂ… ನನ್ನನ್ ಈ ಸಲುವಾಗಿ ಕರ್ಕೊಂಡ್ ಬಂದ್ರಾ’ ಎಂದು ಮುಜುಗರವಿಲ್ಲದೆ ಉಗಿದೆ. ಆ ಬೈಗುಳಗಳಲ್ಲಿ ಶಾಪವೂ ಸೇರಿತ್ತು. ಯಾರು ಚೀಟಿ ಕೊಟ್ಟರೆಂದು ಅವನಲ್ಲೇ ವಿಚಾರಿಸಿದೆ. ಅದಕ್ಕವನು ‘ಅಣ್ಣ ಕೊಟ್ ಬಾ ಅಂದರೀ. ಅದಕ್ಕೆ ಕೊಟ್ಟೆರೀ’ ಎಂದು ತೊದಲುತ್ತಾ ಮೆತ್ತಗಿನ ದನಿಯಲ್ಲಿ ಹೇಳಿದ. ಗಡಗಡ ನಡುಗುವಾಗ, ಗದ್ಗದಗೊಂಡು ಸ್ವರ ಹೊರಡುವುದಾದರೂ ಹೇಗೆ? ಇನ್ನೊಂದು ಸಲ ಹೀಗೆಲ್ಲ ಮಾಡಿದೆಯೆಂದರೆ ಮೈಮೇಲಿನ ಮೂಳೆಗಳನ್ನು ಪುಡಿಮಾಡಿಬಿಟ್ಟೇನು ಎಂದು ಎಚ್ಚರಿಸಿ ಕಳಿಸಿದೆ.

ನಂತರದ ಸರದಿ, ಚೀಟಿ ಬರೆದವರದ್ದು. ಎದುರು ನಿಂತ ನನ್ನಿಂದ ಹೊರಟಿದ್ದು, ಅದೇ ಬೈಗುಳ, ಅದೇ ಎಚ್ಚರಿಕೆ, ಸಿಟ್ಟು, ಆಕ್ರೋಶದ ನುಡಿಗಳು. ‘ನೋಡ್ರಿ…’ ಶೇಕ್ ಚಾಂದ್ ಅವರು ಇನ್ನೇನೊ ಹೇಳುವ ಧಾವಂತದಲ್ಲಿದ್ದರು. ಕೇಳುವ ವ್ಯವಧಾನ ನನಗಿರಲಿಲ್ಲ. ಗೋರ್ಕಲ್ಲ ಮೇಲೆ ಜಡಿಮಳೆ ಸುರಿದರೇನು ಬಂತು? ಮತ್ತದೇ ಚಾಳಿ ಮುಂದುವರೆಯುತ್ತಿತ್ತು.
(ಹಿಂದಿನ ಕಂತು: ತಿರುವುಮುರುವಿನ ಹಾದಿಯಲ್ಲಿ….)

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

