ನಿಮ್ಮ ಸೋದರತ್ತೆ ಒಬ್ಬಳು ಕ್ಷಯದಿಂದ ಬೇಗ ತೀರಿ ಹೋದಳು. ಅವಳಿಗೆ ಮುಂಚೆ ಅವಳ ಗಂಡ ಕೂಡ ಕ್ಷಯದಿಂದಲೇ ತೀರಿ ಹೋಗಿದ್ದ. ಸೋದರತ್ತೆ ಮಗನಿಗೆ ಸರಿಯಾಗಿ ವಿದ್ಯೆ ಹತ್ತಲಿಲ್ಲ. ಅವನಿಗೊಂದು ಮನೆ ಕಟ್ಟಬೇಕು ಅಂತ ನಿಮ್ಮಜ್ಜಿ ಹೊರಟಾಗ, ನೆರವಾಗ್ತೀನಿ ಅಂತ ಮೊದಲು ಗೋಪಿನಾಥರಾಯ, ನಂತರ ಅಚ್ಯುತರಾಯ, ಆಮೇಲೆ ರಂಗಶೆಟ್ಟಿ ಎಲ್ಲರೂ ಮುಂದೆ ಬಂದರು. ಅವನು ಕಳ್ಳ ಅಂತ ಇವನು, ಇವನು ಕಳ್ಳ ಅಂತ ಅವನು. ಒಬ್ಬರ ಮೇಲೆ ಒಬ್ಬರು ಚಾಡಿ ಹೇಳಿ, ಒಟ್ಟಾರೆ ನಿಮ್ಮಜ್ಜಿಗೆ ಟೋಪಿ ಹಾಕುತ್ತಿದ್ದರು. ರಾಮೇಗೌಡ ಇಟ್ಟಿಗೆ ಗೂಡಿನ ವ್ಯಾಪಾರ ಶುರು ಮಾಡಿದ್ದೇ ನಿಮ್ಮಜ್ಜಿ ಹತ್ತಿರ ಹೊಡೆದ ಹಣದಿಂದ ಅನ್ನೋ ಸಾವಯವ ಕಲ್ಪನೆ ಇಡೀ ಗ್ರಾಮಕ್ಕೆ ಗೊತ್ತಿತ್ತು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ನನ್ನ ಕತೆ-ಕಾದಂಬರಿಗಳ ಉಗಮವನ್ನು ವಿವರಿಸುತ್ತಾ ನಾನು ಬಾಲ್ಯದಲ್ಲಿ ಕಂಡುಂಡು ಬೆಳೆದ ಗ್ರಾಮ ಜೀವನದ ಸಮೃದ್ಧ ಅನುಭವಗಳನ್ನು, ಗ್ರಾಮಗಳಲ್ಲಿದ್ದ ಸಮುದಾಯದ ಕಲ್ಪನೆಯನ್ನು, ಇಡೀ ಗ್ರಾಮವೆಲ್ಲ ಒಂದು ಎಂಬ ಒಟ್ಟಂದದ ಕಲ್ಪನೆಯನ್ನು ಮನಸಾರೆ ಹೊಗಳುತ್ತಿದ್ದೆ. ಮತ್ತೆ ಮತ್ತೆ ಪ್ರಸ್ತಾಪಿಸುತ್ತಿದ್ದೆ. ನನ್ನ ಮನಸ್ಸಿನಲ್ಲಿದ್ದುದು ಕೃತಜ್ಞತಾಭಾವವೇ ಹೊರತು ಮತ್ತೆ ಬೇರೆ ಯಾವ ದುರುದ್ದೇಶವೂ ಅಲ್ಲ.
ಈ ಕುರಿತು ಈಚಿನ ನನ್ನ ಸಂದರ್ಶನವನ್ನು ಓದಿದ ನಮ್ಮೂರ ದಲಿತ ಲೇಖಕ ಪುಟ್ಟಸ್ವಾಮಿ ಒಂದು ಸಂಜೆ ನಮ್ಮ ಮನೆಗೆ ಬಂದರು. ಬರುವಾಗಲೇ ನಖಶಿಖಾಂತ ಉರಿಯುತ್ತಿದ್ದರು. ಮೊದಲಿನಿಂದಲೂ ಅವರಿಗೆ ನನ್ನ ಬರವಣಿಗೆಯ ಬಗ್ಗೆ ಅಂತಹ ಒಲವಿರಲಿಲ್ಲ. ನಿನ್ನ ಬರವಣಿಗೆಯಲ್ಲಿ ಅಗ್ರಹಾರದ ಕಂಪು ಜಾಸ್ತಿ ಎಂದು ನನ್ನ ಮೊದಲ ಕತೆ ಪ್ರಕಟವಾದ ದಿನದಿಂದಲೂ ಟೀಕಿಸುತ್ತಿದ್ದರು. ನನಗೂ ಅವರ ಟೀಕೆ-ಟಿಪ್ಪಣಿ ರೂಢಿಯಾಗಿ, ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದೆ. ಇದೇ ಪುಟ್ಟಸ್ವಾಮಿ ಬೇರೆ ಊರಿನವರ ಹತ್ತಿರ ಮಾತ್ರ ನನ್ನ ಬರವಣಿಗೆಯ ನಿರಂತರತೆ ಮತ್ತು ವೈವಿಧ್ಯವನ್ನು ಕುರಿತು ಬಾಯಿತುಂಬಾ ಹೊಗಳಿ ಹೆಮ್ಮೆ ಪಡುತ್ತಿದ್ದರಂತೆ.
ಬಂದವರೇ ಕ್ಯಾತೆ ತೆಗೆಯುವ ರಭಸದಲ್ಲಿದ್ದರು. ಕೂರುವುದಕ್ಕೆ ಕೂಡ ವ್ಯವಧಾನವಿರಲಿಲ್ಲ. ಟೀಪಾಯ್ ಮೇಲಿದ್ದ ಪುಸ್ತಕ-ಪತ್ರಿಗೆಳನ್ನು ಅವರೇ ನೀಟಾಗಿ ಜೋಡಿಸಿದರು.
ಆಹಾ ಗ್ರಾಮವಂತೆ, ಓಹೋ ಸಮುದಾಯವಂತೆ, ಒಟ್ಟಂದದ ಕಲ್ಪನೆಯಂತೆ. ಏನ್ರೀ ಎಲ್ಲ ಘನವಾದ ರೂಪಕಗಳು. ನಿಮ್ಮ ಬಾಲ್ಯ, ನಿಮ್ಮ ಊರು, ನಿಮ್ಮಜ್ಜಿಯ ಕತೆಯೇ ನಿಮಗೆ ಸರಿಯಾಗಿ ಗೊತ್ತಿಲ್ಲವಲ್ಲ. ಗೊತ್ತಿದ್ದರೂ ಸುಳ್ಳು ಹೇಳುತ್ತಿದ್ದೀರಾ. ಎಷ್ಟು ದಿನ ಅಂತ ಸುಳ್ಳು ಹೇಳುತ್ತೀರಾ.
ರೂಢಿಯ ವ್ಯಂಗ್ಯದ ಬದಲಾಗಿ ಅವರ ಧ್ವನಿಯಲ್ಲಿ ಕಳಕಳಿಯಿತ್ತು. ನನ್ನ ಅಭಿಪ್ರಾಯದ ಬಗ್ಗೆ ಅವರಿಗೇ ಹೆಚ್ಚು ಅಸಹಾಯಕತೆ ಇತ್ತು.

ಅಲ್ರೀ ನಿಮ್ಮಜ್ಜಿ ಹದಿನೆಂಟು-ಇಪ್ಪತ್ತು ವರ್ಷದವರಿದ್ದಾಗಲೇ ಗಂಡನನ್ನು ಕಳೆದುಕೊಂಡರು. ಇದ್ದಬದ್ದ ಆಸ್ತಿಯನ್ನೆಲ್ಲ ನಿಮ್ಮ ತಾತ ನೂರಾರು ತರಲೆ ವ್ಯವಹಾರಗಳಲ್ಲಿ ಸಿಕ್ಕಿಹಾಕಿಕೊಂಡು ಕಳೆದಿದ್ದ. ಸ್ಕೂಲ್ ಮೇಷ್ಟರ ಕೆಲಸ ಕೂಡ ಸರಿಯಾಗಿ ಮಾಡದೆ ಪಿಂಚಣಿ ಕೂಡ ಕೈ ಹತ್ತಲಿಲ್ಲ. ಅರವತ್ತು-ಎಪ್ಪತ್ತು ವರ್ಷಗಳ ಕಾಲ ಒಬ್ಬಂಟಿ ವಿಧವೆಯಾಗಿ ಮನೆಗೆಲಸ ಮಾಡಿಕೊಂಡು ಮಕ್ಕಳನ್ನು ಸಾಕಿದಳು. ಹಾಗಿರುವಾಗ, ನಮ್ಮಜ್ಜಿಯನ್ನು ಗ್ರಾಮದ ಸಮಸ್ತರು ನೋಡಿಕೊಂಡರು. ಭಾವನಾತ್ಮಕ ಭದ್ರತೆ ಒದಗಿಸಿದರು. ಗ್ರಾಮದಲ್ಲಿದ್ದ ಸಮುದಾಯದ ಕಲ್ಪನೆಯಿಂದ ನಮ್ಮ ಅಜ್ಜಿಗೆ ಸಹಾಯವಾಯಿತು ಅಂತೆಲ್ಲ ಬರೆದಿದ್ದೀರಲ್ಲ, ಬರೆದು ಬಡಬಡಿಸುತ್ತಿದ್ದೀರಲ್ಲ. ಹಾಗೆಲ್ಲ ಸುಳ್ಳು ಬರೆಯಬಹುದಾ. ಇಲ್ಲ ನಿಮಗೆ ಸಮಾಜಶಾಸ್ತ್ರ ಗೊತ್ತಿಲ್ಲ, ಇಲ್ಲ ನೀವು ಹದಿನಾರಾಣೆ ಜಾತಿವಾದಿ.
ನಾನು ನಿಜ ಹೇಳ್ತೀನಿ ಕೇಳಿ. ನಿಮ್ಮಜ್ಜಿ ಹತ್ತಿರ ಸ್ವಲ್ಪ ಚಿನ್ನ ಬೆಳ್ಳಿ ಇತ್ತು. ನಿಮ್ಮ ತಾತನ ಕಿತಾಪತಿ, ಕಣ್ಣು ತಪ್ಪಿಸಿ ಉಳಿದುಕೊಂಡಿತ್ತು. ನಿಮ್ಮಜ್ಜಿ ಯಾರನ್ನು ನಂಬಬೇಕು? ಗೊತ್ತಾಗದಂತೆ ಒಡವೆ-ವಸ್ತ್ರವನ್ನೆಲ್ಲ ತಗೊಂಡೋಗಿ ಸ್ಮಶಾನದಲ್ಲಿ, ಹಿತ್ತಲಲ್ಲಿ ಗುಂಡಿ ತೋಡಿ ಹೂತಿಟ್ಟಿದ್ದರು. ಯಾರಿಗೂ ಗೊತ್ತಾಗದಂತೆ. ಆಗಾಗ್ಗೆ ಗುಂಡಿ ಅಗೆದು ಒಡವೆ ಅಲ್ಲೇ ಇದೆ ಅಂತ ಗ್ಯಾರಂಟಿ ಮಾಡಿಕೊಳ್ಳುತ್ತಿದ್ದರು. ಎಂಟು ಹತ್ತು ಸಲ ಗುಂಡಿ location ಬದಲಾಯಿಸಿದಳು. ನಿಮ್ಮಜ್ಜಿ ಮನೆಗೆ ಸೌದೆ ಹಾಕಿಸಿಕೊಳ್ಳುತ್ತಿದ್ದಳಲ್ಲ, ಸೌದೆ ಗಾಡಿ ಊರಬೀದಿಗಳನ್ನು ಹಾದು ಬರಬೇಕಲ್ಲ, ಯಾರ ಮನೆಗೋ ಸೌದೆ ಹೋಗ್ತಿರೋದು. ಇಲ್ಲಿ ಒಂದೆರಡು ಕೊಳ್ಳಿ ಇಳಿಸಿ ಹೋಗು ಅಂತ ಎಲ್ಲರೂ ಒಂದು-ಎರಡು ತುಂಡು ಇಳಿಸಿಕೊಳ್ಳುತ್ತಿದ್ದರು. ಆದರೆ ನಿಮ್ಮಜ್ಜಿ ಸೌದೆಗೆ full ಗಾಡಿ ಬಾಬ್ತು ಕೊಡಬೇಕಿತ್ತು. ಪಾಂಡು ಅಂಗಡಿಯಲ್ಲಿ ನಿಮ್ಮ ಅಜ್ಜಿ ಲೆಕ್ಕ ಇತ್ತು. ಬೇಕು ಬೇಕಾದವರೆಲ್ಲ ಸಾಮಾನು ತಗೊಂಡು ನಿಮ್ಮಜ್ಜಿ ಲೆಕ್ಕಕ್ಕೆ ಬರೆಸಿಬಿಡೋರು. ನಿಮ್ಮಜ್ಜಿ ಮನೇಲಿ ಪೂಜೆ ಮಾಡಲು ನಿಮ್ಮದೇ ಒಬ್ಬ ಬಂಧು ಬರುತ್ತಿದ್ದ. ನೋಡೋಕೆ ಬಲು ಆಚಾರವಂತ. ನಿಮ್ಮಜ್ಜಿ ಕಣ್ಣಿಗೆ ಬೀಳದ ಹಾಗೆ ದೇವರ ಸಣ್ಣ ಪುಟ್ಟ ಚಿನ್ನ ಬೆಳ್ಳಿ ವಿಗ್ರಹಗಳನ್ನು ಬದಲಾಯಿಸಿ ಗಿಲೀಟು ಮೂರ್ತಿಗಳನ್ನು ತಂದಿಡ್ತಿದ್ದ. ನಿಮ್ಜಜ್ಜಿಗೆ ಋಷಿ ಪಂಚಮಿ ಹುಚ್ಚು ಹಿಡಿಸಿದ್ದು ಕೂಡ ಇವನೇ. ಆ ಮಹಾತಾಯಿ ಋಷಿ ಪಂಚಮಿ ಮಾಡಿ ಮುಗಿಸುವ ಹೊತ್ತಿಗೆ ಇವನು ಮನೆಯಲ್ಲಿ ಇನ್ನೆರಡು ಕೋಣೆ ಕಟ್ಟಿಸಿದ.
ನಿಮ್ಮಜ್ಜಿಗೆ ಇದೆಲ್ಲ ಗೊತ್ತಾಗುತ್ತಿರಲಿಲ್ಲ ಅಂತಲ್ಲ. ಅವಳು ಕೂಡ ಕಿಲಾಡಿಯೇ. ಚೂರು ಪಾರು ಹಣವನ್ನು ವರ್ಷಕ್ಕೆ, ಎರಡು ವರ್ಷಕ್ಕೆ ಕೈ ಬದಲಾಯಿಸಿ ಬೇರೆಯವರ ಹತ್ತಿರ ಇಡುತ್ತಿದ್ದಳು. ಊರವರು ಇನ್ನೂ ಕಿಲಾಡಿಗಳು. ಗಂಡ ಇಲ್ಲದ ಬ್ರಾಹ್ಮಣ ಮುಂಡೆ ಅಂತ ವಾಪಸ್ ಕೊಡದೆ ಸತಾಯಿಸ್ತಾ ಇದ್ದರು. ಗೋವಿಂದ ಶೆಟ್ಟಿ, ಕರಿ ಪುಟ್ಟಸ್ವಾಮಿ ಎಲ್ಲ ಮುಂದೆ ಬಂದದ್ದು ಹೀಗೇನೇ. ಇವರೆಲ್ಲ ನಿಮ್ಮಜ್ಜಿಯಿಂದಲೇ ಮುಂದೆ ಬಂದರು ಅಂತ ಹೇಳ್ತಾ ಇಲ್ಲ, ನಿಮ್ಮಜ್ಜಿಯಂತಹ ಗಿರಾಕಿಗಳನ್ನೇ ಇಂತವರು ಹುಡುಕುತ್ತಿದ್ದರು. ನೀವು ಹೇಳ್ತೀರಲ್ಲ ಸಮುದಾಯ ಕಲ್ಪನೆ ಅಂತಾ, ಅದಕ್ಕನುಗುಣವಾಗಿ.
ನಿಮ್ಮ ಸೋದರತ್ತೆ ಒಬ್ಬಳು ಕ್ಷಯದಿಂದ ಬೇಗ ತೀರಿ ಹೋದಳು. ಅವಳಿಗೆ ಮುಂಚೆ ಅವಳ ಗಂಡ ಕೂಡ ಕ್ಷಯದಿಂದಲೇ ತೀರಿ ಹೋಗಿದ್ದ. ಸೋದರತ್ತೆ ಮಗನಿಗೆ ಸರಿಯಾಗಿ ವಿದ್ಯೆ ಹತ್ತಲಿಲ್ಲ. ಅವನಿಗೊಂದು ಮನೆ ಕಟ್ಟಬೇಕು ಅಂತ ನಿಮ್ಮಜ್ಜಿ ಹೊರಟಾಗ, ನೆರವಾಗ್ತೀನಿ ಅಂತ ಮೊದಲು ಗೋಪಿನಾಥರಾಯ, ನಂತರ ಅಚ್ಯುತರಾಯ, ಆಮೇಲೆ ರಂಗಶೆಟ್ಟಿ ಎಲ್ಲರೂ ಮುಂದೆ ಬಂದರು. ಅವನು ಕಳ್ಳ ಅಂತ ಇವನು, ಇವನು ಕಳ್ಳ ಅಂತ ಅವನು. ಒಬ್ಬರ ಮೇಲೆ ಒಬ್ಬರು ಚಾಡಿ ಹೇಳಿ, ಒಟ್ಟಾರೆ ನಿಮ್ಮಜ್ಜಿಗೆ ಟೋಪಿ ಹಾಕುತ್ತಿದ್ದರು. ರಾಮೇಗೌಡ ಇಟ್ಟಿಗೆ ಗೂಡಿನ ವ್ಯಾಪಾರ ಶುರು ಮಾಡಿದ್ದೇ ನಿಮ್ಮಜ್ಜಿ ಹತ್ತಿರ ಹೊಡೆದ ಹಣದಿಂದ ಅನ್ನೋ ಸಾವಯವ ಕಲ್ಪನೆ ಇಡೀ ಗ್ರಾಮಕ್ಕೆ ಗೊತ್ತಿತ್ತು.
ಇದೆಲ್ಲ ನಿನಗೆ ಗೊತ್ತಿಲ್ಲವಾ? ಖಂಡಿತ ಗೊತ್ತಿದೆ. ಆದರೆ ಬರೆಯೋಲ್ಲ. ನಿಮ್ಮ ಜಾತಿಯವರು, ಬಂಧುಗಳು, ನೆರೆಹೊರೆಯವರ ಗುಟ್ಟೆಲ್ಲ ಹೊರ ಬರುತ್ತೆ ಅಂತ. ಹೀಗೆಲ್ಲ ಬರೆದರೆ ನಿಮ್ಮ ಬರವಣಿಗೆಯ ಲಲಿತ ಸ್ವಭಾವ, ಸುಳ್ಳು ರೊಮ್ಯಾಂಟಿಕ್ ಸಮಾಜಶಾಸ್ತ್ರ ಎಲ್ಲವೂ ಕಿತ್ತುಕೊಂಡು ಹೋಗುತ್ತಲ್ಲ.
ನಮ್ಮಜ್ಜಿ ಪಟ್ಟಣ ವಾಸದಲ್ಲೆ ಬದುಕಿದ್ದರೆ ಎಷ್ಟು ಮನೆಯ ಎಂಜಲು ಪಾತ್ರೆಗಳನ್ನು ತೊಳೆಯಬೇಕಾಗಿತ್ತು; ಸ್ವಗ್ರಾಮದಲ್ಲೇ ಇದ್ದುದರಿಂದ ಚೆನ್ನಾಗಿ ಬದುಕಿ ಬಾಳಿದಳು ಅಂತ ಈಚಿನ ಸಂದರ್ಶನದಲ್ಲಿ ಮುಗ್ಧವಾಗಿ ಹೇಳಿದ್ದೀಯಲ್ಲ, ನಿನ್ನ ಓದುಗರು ಕೂಡ ಇದನ್ನೇ ನಂಬಿದ್ದಾರೆ.
ಒಂದು ಮಾತು ಖಂಡಿತವಾಗಿ ತಿಳಿದುಕೋ. ಗ್ರಾಮ ಸಮುದಾಯ, ಒಟ್ಟಂದದ ಕಲ್ಪನೆ ಎಂದೂ ಇರಲಿಲ್ಲ. ಅದನ್ನೆಲ್ಲ ಯಾರೂ ಬಯಸುತ್ತಲೂ ಇರಲಿಲ್ಲ.
ನೀವು ಸುಳ್ಳು ಹೇಳುತ್ತೀರಿ, ಬರೆಯುತ್ತೀರಿ. ನಾವು ನಿಜ ಬರೆದರೆ ದಲಿತರಿಗೆ ಸಮುದಾಯ ಪ್ರಜ್ಞೆಯಿಲ್ಲ, ಎಲ್ಲವನ್ನೂ ದಲಿತ ಸಮಾಜದ ಕಣ್ಣಿನಿಂದಲೇ ನೋಡ್ತಾರೆ ಅಂತ ನಮ್ಮ ಮೇಲೇ ಗೂಬೆ ಕೂರಿಸ್ತೀರಿ.
ಇನ್ನು ಮೇಲಾದರೂ ನಿಜವಾದದ್ದನ್ನು ಬರೀರಿ. ಒಪ್ಕೋತೀನಿ. ನಿಜವನ್ನು ಬರೆಯುವುದು ನಿಮಗೂ ಕಷ್ಟವೇ, ನಮಗೂ ಕಷ್ಟವೇ. ಆದರೆ ಸುಳ್ಳು ಬರೆಯುವುದನ್ನಾದರೂ ನಿಲ್ಲಿಸಬಹುದಲ್ಲ.

ಒಂದೇ ಸಮನೆ ಮಾತನಾಡಿದ ಪುಟ್ಟಸ್ವಾಮಿ ಒಂದು ಲೋಟ ನೀರು ಕೂಡ ಕುಡಿಯದೆ ಎದ್ದು ಹೊರಟು ಹೋದರು. ಅವರ ಈಚಿನ ಕವನ ಸಂಕಲನವನ್ನು ಉಡುಗೊರೆಯಾಗಿ ಕೊಡುವುದಕ್ಕೆ ತಂದಿದ್ದರು ಅಂತಾ ಕಾಣುತ್ತೆ. ಅದು ಟೀಪಾಯ್ ಮೇಲೆ ಅನಾಥವಾಗಿ ಬಿದ್ದಿತ್ತು. ಇಷ್ಟೆಲ್ಲ ಬಡಬಡಿಸಿದ ಈ ಪುಟ್ಟಸ್ವಾಮಿ ತನ್ನ ಕವನಗಳಲ್ಲಿ ಏನು ಬರೆದಿರಬಹುದು, ಎಷ್ಟು ನಿಜಕ್ಕೆ ಹತ್ತಿರವಾಗಿಬರಬಹುದು ಅಂತ ಒಂದೊಂದಾಗಿ ಒಂದೇ ಸಮನೆ ಪದ್ಯಗಳನ್ನು ಓದಲು ಪ್ರಾರಂಭಿಸಿದೆ. ಕವನಗಳು ಬಿಡಿಯಾಗಿ ಇಷ್ಟವಾದರೂ, ಒಟ್ಟಂದದಲ್ಲಿ ಸಂಕಲನ ಏನೂ ಹೇಳ್ತಾ ಇಲ್ಲ ಅನಿಸಿತು.

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

