Advertisement
ಬೆಳದಿಂಗಳ ಹಾಡಿಗೆ ಭೂಮಿಯ ಲಾಸ್ಯ: ಕ್ಷಮಾ ವಿ ಭಾನುಪ್ರಕಾಶ್ ಕಥಾ ಸರಣಿ

ಬೆಳದಿಂಗಳ ಹಾಡಿಗೆ ಭೂಮಿಯ ಲಾಸ್ಯ: ಕ್ಷಮಾ ವಿ ಭಾನುಪ್ರಕಾಶ್ ಕಥಾ ಸರಣಿ

ಆಗ ಪ್ರಕಾಶ್, “ಹೌದು, ಹೀಗೆ ಭೂಮಿಯ ತಿರುಗುವಿಕೆಯಿಂದ, ಚಂದ್ರ ಸೂರ್ಯರ ಗುರುತ್ವಾಕರ್ಷಣೆಯಿಂದ ನಮ್ಮ ಭೂಮಿ ತಿರುಗುವಾಗ ಒಂದೆಡೆ ಸಮುದ್ರದಲ್ಲಿ ಉಬ್ಬರ, ಅದರ ವಿರುದ್ಧ ದಿಕ್ಕಲ್ಲಿ ಇಳಿತ ಇರತ್ತೆ. ಅದಕ್ಕೇ ನಾವು ಈಗ ಭೂಮಿಯ ಚಿತ್ರ ಬರೆಯೋವಾಗ, ಗುಂಡಗೆ ಗೋಲವಾಗಿ ಬರೆಯೋದಿಲ್ಲ. ಅದನ್ನ ‘ಸ್ಫೆರಾಯ್ಡ್’ ಅಂದ್ರೆ ಗೋಳಾಭವಾಗಿ ಬರೀತೀವಿ. ಅಂದ್ರೆ ಒಂದೆಡೆ ಸಮುದ್ರದ ಉಬ್ಬರದಿಂದ ಉಬ್ಬಿದ, ಮತ್ತೊಂದೆಡೆ ಸಮುದ್ರದ ಇಳಿತದಿಂದ ಸಪಾಟಾದ ಗೋಳಾಭವಾಗಿ ಚಿತ್ರಿಸ್ತೀವಿ.” ಎಂದ.
ಕ್ಷಮಾ
ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನೇಳನೆಯ ಕತೆ

ಕುಳಿರ್ಗಾಳಿ, ಬೆಳದಿಂಗಳು, ಹಿನ್ನೆಲೆಯಲ್ಲಿ ಸಮುದ್ರದ ಅಲೆಗಳ ಸದ್ದು, ಕಾವ್ಯ ಮತ್ತು ಕುಟುಂಬವನ್ನು ಸಂತಸದಲ್ಲಿ ಮಿಂದೇಳಿಸುತ್ತಿತ್ತು ಗೋಕರ್ಣ. ನಾವು ಕಳೆದ ಸಂಚಿಕೆಯಲ್ಲಿ ಓದಿದ ಹಾಗೆ ಸುಂದರ ಸೂರ್ಯಾಸ್ತ ನೋಡಿಬಂದಿದ್ದ ಈ ಐವರೂ, ಹತ್ತಿರದ ರೆಸಾರ್ಟ್ ತಲುಪಿ ಇಡೀ ದಿನದ ಓಡಾಟಕ್ಕೆ ಬ್ರೇಕ್ ನೀಡಿ, ನಿದ್ದೆಗೆ ಜಾರಿದರು. ಮರುದಿನ ಹೊಸ ಸೂರ್ಯೋದಯ, ಹೊಸ ಉತ್ಸಾಹ, ಹೊಸ ಚಟುವಟಿಕೆಗಳ ಸಂಭ್ರಮ.

ಮುಂಜಾನೆಯೇ ಎದ್ದು, ತಿಂಡಿ ತಿಂದು ಮತ್ತೆ ಬೀಚ್ ಕಡೆ ಪ್ರಯಾಣ ಬೆಳೆಸಿದರು ಎಲ್ಲರೂ. ಗೋಕರ್ಣ ಬೀಚ್ ಪಶ್ಚಿಮ ದಿಕ್ಕಿನಲ್ಲಿರುವುದರಿಂದ ಸೂರ್ಯೋದಯವನ್ನು ನೀರ ಮೇಲೆ ನೋಡುವ ಪ್ರಮೇಯವಿಲ್ಲವೆಂದು, ಯಾವುದೇ ಗಡಿಬಿಡಿಯಿಲ್ಲದೇ ಹೊರಟರು. ಬೀಚ್ ತಲುಪಿದ ಪ್ರಕಾಶ್, ಸಮುದ್ರ ಮತ್ತು ವರ್ಣ ಸಮುದ್ರದ ತೀರದಲ್ಲಿ ಬೆಳಗಿನ ವಾಕ್ ಪ್ರಾರಂಭಿಸಿದರು. ತಂಪಾದ ಬೆಳಗಿನಲ್ಲಿ, ಸಮುದ್ರ ತೀರದಲ್ಲಿ ಕುಳಿತ ಅಕ್ಕ-ತಂಗಿ ಕೊಂಚ ಹೊತ್ತು ಮೌನದ ಧ್ಯಾನವನ್ನು ಅನುಭವಿಸುತ್ತಾ ಕೂತರು. ಆಗ ಕಾವ್ಯಳ ಫೋನ್ ರಿಂಗಾಯಿತು. ಗೆಳತಿ ಋತುಪರ್ಣಳ ಕರೆ! ಕಾವ್ಯಳಿಗೆ ಸಮುದ್ರದ ಹುಚ್ಚು, ಋತುಪರ್ಣಳಿಗೆ ಚಂದ್ರನ ಹುಚ್ಚು. ಇಬ್ಬರೂ ಕವಿಹೃದಯಿಗಳು. ಆಪ್ತ ಗೆಳತಿಯರ ಫೋನ್ ಸಂಭಾಷಣೆಯಲ್ಲಿ ಪ್ರವಾಸದ ವಿವರಗಳು ವಿಲೇವಾರಿಯಾದ ನಂತರ, ಋತುಪರ್ಣ ಮತ್ತು ಕಾವ್ಯ, ಸಮುದ್ರದ ಬಗ್ಗೆ, ಬೆಳದಿಂಗಳ ಬಗ್ಗೆ, ಕವಿತೆಗಳ ಬಗ್ಗೆ ಮಾತು ಶುರುವಿಟ್ಟರು.

“ನಿಜಾ ಋತು! ನಾವು ಹಿಂದಿನ ಪ್ಲಾನ್ ಪ್ರಕಾರ, ೧೫ ದಿನದ ಮುಂಚೆ ಬರದೇ ಈಗ ಬಂದದ್ದೇ ಒಳ್ಳೇದಾಯ್ತು. ಈಗ ಹುಣ್ಣಿಮೆಯ ಸಮಯ. ಚಂದ್ರ ಬೆಳೆದ ಹಾಗೇ ಅಲೆಗಳೂ ಬೆಳೀತಾವೆ ಅಂತಾರಲ್ಲ. ಹೀಗೆ ರುದ್ರರಮಣೀಯ ಸಮುದ್ರ ನೋಡೋಕೇ ಒಂದು ವಿಶಿಷ್ಟ ಅನುಭವ” ಎಂದಳು ಕಾವ್ಯ. ಆಗ ಫೋನಿನ ಆಚೆಯಿಂದ ಋತು, “ಹೌದು ಕಾವ್ಯ. ಚಂದ್ರ ನಮ್ಮ ಭೂಮಿಯ ಒಡಲನ್ನೇ ಅಲ್ಲೋಲ ಕಲ್ಲೋಲ ಮಾಡ್ತಾನೆ. ಅಷ್ಟೆತ್ತರ ಅಲೆಗಳನ್ನೆಬ್ಬಿಸುತ್ತಾ, ಹೊಸ ಸಾಧ್ಯತೆಗಳನ್ನು ತೋರ್ತಾನೆ. ಅದೆಂಥಾ ಸೆಳೆತ ಇರ್ಬಹುದು?!” ಎಂದಳು ಕಾವ್ಯಾತ್ಮಕವಾಗಿ. ಕಾವ್ಯಳಿಗೆ ವಿಜ್ಞಾನದ ಬಗ್ಗೆ ಮಾತಾಡದೇ ಇರೋಕಾಗತ್ಯೇ? ಅವಳು ತಕ್ಷಣ “ಹೌದಮ್ಮ ಋತು, ಅದೆಂಥಾ ಸೆಳೆತ ಅಂದ್ರೆ ಗ್ರಾವಿಟೇಶನಲ್ ಸೆಳೆತ. ಗುರುತ್ವಾಕರ್ಷಣ ಶಕ್ತಿಯಷ್ಟೇ!” ಎಂದಳು ನಗುತ್ತಾ. ಹೀಗೇ ಒಂದಷ್ಟು ಮಾತಾಡಿ, ಫೋನ್ ಕಟ್ ಮಾಡಿದ ಕಾವ್ಯ, ವಿಭಾಳ ಕಡೆಗೆ ತಿರುಗಿ, “ಬೋರ್ ಆಯ್ತೇನೋ ವಿಭಚ್ಚು, ಪಾಪ ನಾನು ಫೋನಲ್ಲೇ ಮಾತಾಡ್ತಾ ಬ್ಯುಸಿ ಆಗ್ಬಿಟ್ಟೆ, ನೀನು ಒಬ್ಬಳೇ ಎಷ್ಟು ಹೊತ್ತು ಕೂತ ಹಾಗಾಯ್ತು.” ಎಂದಳು. ಆಗ ವಿಭಾ, “ಇಲ್ಲಾ ಕಾವ್ಯಕ್ಕ, ಸಮುದ್ರವನ್ನ ನೋಡ್ತಾ ಕೂತ್ರೆ ಬೋರ್ ಎಲ್ಲಿ ಸಾಧ್ಯ? ಜೊತೆಗೆ ನಿನ್ನ ಮಾತೂ ಕಿವಿಗೆ ಬೀಳ್ತಿತ್ತು. ನಿಜ್ವಾಗ್ಲೂ ಚಂದ್ರನಿಂದಲೇ ಅಲೆಗಳು ಏಳೋದಾ ಸಮುದ್ರದಲ್ಲಿ?” ಎಂದು ಕೇಳಿದಳು.

ಕಾವ್ಯ, ಇದಕ್ಕೆ ಉತ್ತರಿಸುತ್ತಾ, “ಮೂಲತಃ ಅಲೆಗಳು ಗಾಳಿಯ ಚಲನೆಯ ಕಾರಣಕ್ಕೆ ಹುಟ್ಟುತ್ವೆ. ಇದು ಪ್ರತಿ ಕ್ಷಣವೂ ನಡೀತಾ ಇರತ್ತೆ. ಬೃಹತ್ ಸಾಗರದ ಮೇಲೆ ಗಾಳಿ ಚಲಿಸ್ತಾ ಇದ್ದ ಹಾಗೇ, ಅದರ ಒತ್ತಡ ನೀರಿನ ಅಣುಗಳ ಮೇಲೆ ಬೀಳತ್ತಲ್ವಾ? ಆ ಒತ್ತಡ, ಗಾಳಿಯ ಚಲನೆ, ನೀರನ್ನು ಸೆಳೆಯುತ್ತಾ ಮುಂದೆ ಚಲಿಸೋ ಹಾಗೆ ಮಾಡತ್ತೆ. ಅದೇ ‘ವೇವ್ಸ್’. ಇದು ಸಮುದ್ರದ ನೀರಿನ ಮೇಲ್ಮೈಯಲ್ಲಿ ಕಾಣತ್ತೆ ನೋಡು ಅದೇ! ಇನ್ನು ಚಂದ್ರ, ಸೂರ್ಯನಂತಹ ಬೃಹತ್ ಆಕಾಶಕಾಯಗಳು ಮತ್ತು ಭೂಮಿ ಮಧ್ಯೆ ಗುರುತ್ವಾಕರ್ಷಣ ಶಕ್ತಿ ಇರತ್ತಲ್ಲಾ? ಅದು ಈ ‘ವೇವ್ಸ್’ ಅಂದ್ರೆ ಚಿಕ್ಕ ಅಲೆಗಳನ್ನ ದೊಡ್ಡ ಅಲೆಗಳಾಗಿ ಅಂದ್ರೆ ‘ಟೈಡ್’ ಅಂತಾರೆ ನೋಡು, ಹಾಗೆ ಬದಲಾಯಿಸತ್ತೆ. ಅದು ಒಂದು ಜಾಗದಲ್ಲಿ ನೀರಿನ ಮೇಲ್ಮೈಯಲ್ಲಿ ಕಾಣೋದಲ್ಲ. ಅದು ಒಟ್ಟಾರೆ ನೀರಿನಲ್ಲಿ ಆಗುವ ಏರಿಕೆ ಅಥವಾ ಇಳಿಕೆ. High tide-low tideಗಳನ್ನೇ ಉಬ್ಬರ-ಇಳಿತ ಅಥವಾ ಭರತ-ಇಳಿತ ಅಂತೀವಿ.” ಎಂದಳು.

ಆಗ ವಿಭಾ, “ಅಲ್ಲ ಕಾವ್ಯಕ್ಕಾ, ಈಗ ಬೆಳಗಿನ ಹೊತ್ತಲ್ವಾ? ಈಗಲೂ ಚಂದ್ರನ ಪ್ರಭಾವ ಅಲೆಗಳ ಮೇಲಿರತ್ತಾ?” ಎಂದಳು. ಆಗ ಕಾವ್ಯ, “ಹೌದು ವಿಭಾ, ೨೪ ಘಂಟೆಯೂ ಇರತ್ತೆ. ಚಂದ್ರ ಮಾತ್ರ ಅಲ್ಲ, ಸೂರ್ಯನ ಕಡೆಯಿಂದಲೂ ಗುರುತ್ವಾಕರ್ಷಣ ಶಕ್ತಿ ಭೂಮಿಯನ್ನ ತನ್ನ ಕಡೆ ಸೆಳೀತಾ ಇರತ್ತಲ್ಲ, ಆಗ ತಿರುಗ್ತಾ ಇರೋ ಭೂಮಿಯ ಮೇಲಿನ ನೀರಿನ ಚಲನೆಯಲ್ಲೂ ಬದಲಾಗಲೇಬೇಕಲ್ಲ! ಸೂರ್ಯ ದೊಡ್ಡದಾಗಿದ್ರೂ, ಚಂದ್ರ ಚಿಕ್ಕದಾಗಿದ್ರೂ, ಚಂದ್ರ ನಮಗೆ ಹೆಚ್ಚು ಹತ್ತಿರದಲ್ಲಿ ಇರೋ ಕಾರಣ, ಚಂದ್ರನ ಆಕರ್ಷಣೆ ಹೆಚ್ಚು. ನಾವು ಗಾಡೀಲಿ ಬ್ರೇಕ್ ಹಾಕಿದ್ರೆ, ಗಾಡಿ ಸ್ಲೋ ಆಗತ್ತಲ್ಲ, ಹಾಗೆ ನಮ್ಮ ಭೂಮಿ ಮೇಲೆ ಚಂದ್ರ ಬ್ರೇಕ್ ಹಾಕ್ತಾ ಇರ್ತಾನೆ” ಎಂದಳು ನಗುತ್ತಾ.

ಅಷ್ಟರಲ್ಲಿ ಸಮುದ್ರದ ತೀರದಲ್ಲಿ ಓಡಿ, ಆಡಿ ಬಂದ ವರ್ಣ, ಸಮುದ್ರ ಮತ್ತು ಪ್ರಕಾಶ್ ಕೂಡ ಇವರ ಜೊತೆ ಕುಳಿತರು. “ಯಾವ ಗಾಡಿ ಬ್ರೇಕ್ ಬಗ್ಗೆ ಹೇಳ್ತಾ ಇದ್ಯಾ ಕಾವ್ಯ?” ಎಂದ ಬೈಕ್-ಪ್ರಿಯ ಪ್ರಕಾಶ್. ಆಗ ಕಾವ್ಯ, “ಸಾಮಾನ್ಯ ಗಾಡಿ ಅಲ್ಲಪ್ಪ! ಚಂದ್ರ ಭೂಮಿಯ ಚಲನೆಗೆ ಹೇಗೆ ಬ್ರೇಕ್ ಹಾಕ್ತಾನೆ ಅಂತ ವಿವರಿಸ್ತಾ ಇದ್ದೆ. ಅಷ್ಟ್ರಲ್ಲಿ ನೀವೆಲ್ಲ ಬಂದ್ರಿ ನೋಡು.” ಎಂದಳು.

ಆಗ ಪ್ರಕಾಶ್ ನಗುತ್ತಾ, “ಓಹ್ ಹಾಗೆ! ಸರಿ ಸರಿ! ಇಲ್ಲಿ ಏನಾಗತ್ತೆ ಗೊತ್ತಾ ವಿಭಾ? ಭೂಮಿ ಮತ್ತು ಚಂದ್ರ ಒಂದೇ ಸ್ಪೀಡಲ್ಲಿ ಸುತ್ತಲ್ಲ. ಭೂಮಿ ಸ್ವಲ್ಪ ಫಾಸ್ಟಾಗಿ ಚಲಿಸ್ತಾ ಇರತ್ತೆ. ಹಾಗಾಗಿ ಜೊತೆಗೆ ಭೂಮಿಯ ಮೇಲಿನ ಸಮುದ್ರ ಕೂಡ ಮುಂದಕ್ಕೆ ಚಲಿಸೋಕೆ ಹಿಗ್ಗಿರತ್ತೆ. ಆದ್ರೆ ಅಷ್ಟ್ರಲ್ಲಿ ಸ್ವಲ್ಪ ಸ್ಲೋ ಇರುವ ಚಂದ್ರ, ‘ಹೇ.. ನಾನೂ ಬಂದೆ… ನಾನೂ ಬಂದೆ.. ಇರು ಭೂಮಿ’ ಅಂತ ತನ್ನ ಗುರುತ್ವಾಕರ್ಷಣ ಶಕ್ತಿ ಹಾಕಿ, ಬ್ರೇಕ್ ಹಾಕೋ ಪ್ರಯತ್ನ ಮಾಡ್ತಾನೆ. ಆಗ ಅಲೆಗಳನ್ನು ಕೊಂಚ ತಡೆದ ಹಾಗಾಗಿ, ಫ್ರಿಕ್ಷನ್ ಫೋರ್ಸ್ ಇಂದ, ಮುಂದಕ್ಕೆ ಹೋಗೋಕಿದ್ದ ಅಲೆಗಳು ಇದ್ದಲ್ಲೇ ಇರಬೇಕಾದ ಹಾಗಾಗಿ, ಮೇಲಕ್ಕೇಳುತ್ವೆ, ಉಬ್ಬರ ಕಾಣ್ಸತ್ತೆ. ಹಾಗೆ ಮೇಲೆ ಎದ್ದ ನೀರು, ಕೆಳಗೆ ಬರದೇ ಇರಕ್ಕಾಗತ್ತಾ?” ಎಂದ.

ಆಗ ವರ್ಣ, ಸಿನೆಮಾ ಸ್ಟಾರ್ ಅಂಬರೀಷ್ ಥರಾ “ನೋ ವೇ! ಚಾನ್ಸೇ ಇಲ್ಲ” ಎಂದಳು. ಅವಳ ಸ್ಟೈಲಿಗೆ ಎಲ್ಲರೂ ನಗುತ್ತಾ, ಮತ್ತೆ ಮಾತಿಗೆ ಶುರುವಿಟ್ಟರು. ಆಗ ವರ್ಣ ಮುಂದುವರೆಸುತ್ತಾ, “ನ್ಯೂಟನ್ ನೀಡಿದ ಮೂರನೇ ನಿಯಮ ಗೊತ್ತಲ್ಲ! Every action has an equal and opposite reaction. ಅದಕ್ಕೇ, ಮೇಲೆ ಏರಿದ ನೀರು, ಕೆಳಗೆ ಬಂದು ಉಬ್ಬರ ಮಾತ್ರ ಅಲ್ಲ, ಇಳಿತ ಕೂಡ ಆಗತ್ತೆ. ಅಲ್ವಾ ಬಾವ?” ಎಂದಳು.

“ಪರ್ಫೆಕ್ಟ್ ವರ್ಣ!” ಎಂದ ಪ್ರಕಾಶ್, “ಇದೊಂದು ‘ಟಗ್ ಆಫ್ ವಾರ್’ ಥರಾ! ಹಗ್ಗಜಗ್ಗಾಟ! ಚಂದ್ರ, ಮತ್ತೆ, ಸೂರ್ಯ ಹೀಗೆ ನಮ್ಮ ಅಲೆಗಳನ್ನ ಮುಂದಕ್ಕೆ ಹೋಗದಂತೆ ಹಿಂದೆ ಎಳೆಯೋದು, ಹಿಂದೆ ಬಂದ ಅಲೆ ಮತ್ತೆ ಉಬ್ಬರವಾಗಿ ಅಬ್ಬರಿಸೋದು ನಡೀತಾನೇ ಇರತ್ತೆ. ಈ ಕಾರಣದಿಂದಾನೇ ನಮ್ಮ ದಿನದ ಅವಧಿ ದೊಡ್ಡದಾಗತ್ತೆ ಗೊತ್ತಾ?” ಎಂದು ಪ್ರಶ್ನಿಸಿದನು.

ಆಗ ಸಮುದ್ರ, “ಅಂದ್ರೆ ೨೪ ಘಂಟೆಗಿಂತಾ ಹೆಚ್ಚಾಗತ್ತಾ ಟೈಮು ಒಂದು ದಿನದಲ್ಲಿ?” ಎಂದು ಕೇಳಿದ. ಅದಕ್ಕೆ ಕಾವ್ಯ ನಗುತ್ತಾ, “ಹೆದರಬೇಡ ಪುಟ್ಟಾ! ಅದೇನು ಅಷ್ಟು ಬೇಗ ಆಗೋ ಬದಲಾವಣೆ ಅಲ್ಲ! ಒಂದು ಸೆಂಚುರಿ ಅಂದ್ರೆ ಒಂದು ಶತಮಾನದಲ್ಲಿ ಒಮ್ಮೆ ೧.೭ – ೨.೪ ಮಿಲಿಸೆಕೆಂಡ್ಸ್ ಹೆಚ್ಚಾಗತ್ತೆ ಅಷ್ಟೇ.” ಎಂದಳು. “ಅಬ್ಬ ಸಧ್ಯ! ಇಲ್ಲದಿದ್ರೆ ಸ್ಕೂಲ್ ಇನ್ನೂ ಜಾಸ್ತಿ ಹೊತ್ತು ಇರ್ತಾ ಇತ್ತೇನೋ ಅಂತ ಭಯ ಆಯ್ತು!” ಎಂದ ಸಮುದ್ರ. ಆಗ ವಿಭಾ, “ಫುಟ್ಬಾಲ್ ಆಡಕ್ಕೆ ಹೆಚ್ಚು ಸಮಯ ಸಿಕ್ತಿತ್ತು ಅಂತಲೂ ಯೋಚಿಸ್ಬಹುದಲ್ವಾ ಮಂಗಣ್ಣ!” ಎಂದಳು. “ಹೌದಲ್ವಾ!” ಎಂದ ಸಮುದ್ರ ಹಲ್ಲುಕಿರಿಯುತ್ತಾ!

ಆಗ ವರ್ಣ “ಭೂಮಿ ಸೃಷ್ಟಿಯಾಗಿ ಈಗ ಕೋಟ್ಯಂತರ ವರ್ಷಗಳಾಗಿವೆ ಅಲ್ವಾ! ಅಂದ್ರೆ ಅದೆಷ್ಟೊ ಶತಮಾನಗಳು. ಅಂದ್ರೆ ಪ್ರತಿ ಶತಮಾನಕ್ಕೂ ಹೀಗೆ ಕೆಲವು ಮಿಲಿಸೆಕೆಂಡ್ ಜಾಸ್ತಿ ಆಗ್ತಾ, ಒಂದು ದಿನ ಅಂದ್ರೆ ೨೪ ಘಂಟೆಯಾಗಿದೆ ಈಗ. ಮುಂಚೆ ಒಂದು ದಿನಕ್ಕೆ ಎಷ್ಟು ಘಂಟೆಗಳಿರ್ತಾ ಇತ್ತೋ ಅಲ್ವಾ?” ಎಂದಳು ಅಚ್ಚರಿಯಿಂದ.

ಆಗ ಕಾವ್ಯ, “ಹೌದು ವರ್ಣ, ಭೂಮಿ ಸೃಷ್ಟಿಯಾದ ಮೊದಮೊದಲಲ್ಲಿ ಒಂದು ದಿನಕ್ಕೆ ಕೇವಲ ೬-೧೦ ಘಂಟೆಗಳು ಇರ್ತಾ ಇದ್ವು. ಮತ್ತೆ, ಇನ್ನೊಂದು ವಿಷ್ಯ. ಚಂದ್ರ-ಭೂಮಿಯ ನಡುವಿನ ಈ ಗುರುತ್ವಾಕರ್ಷಣೆಯ ಕಣ್ಣಾಮುಚ್ಚಾಲೆಯಾಟ, ಬರೀ ನಮ್ಮ ದಿನದಲ್ಲಿನ ಘಂಟೆಗಳ ಮೇಲೆ ಪರಿಣಾಮ ಬೀರೋದು ಮಾತ್ರ ಅಲ್ಲ. ಚಂದ್ರನ ಮೇಲೂ ಪ್ರಭಾವ ಬೀರತ್ತೆ. ಭೂಮಿಯ ತಿರುಗುವಿಕೆ ಮೇಲೆ ಚಂದ್ರ ಬ್ರೇಕ್ ಹಾಕಿ ಒಂದಷ್ಟು ಎನರ್ಜಿ ಅಂದ್ರೆ ಶಕ್ತಿ ಕದ್ದನಲ್ಲಾ? ಆ ಎನರ್ಜಿ ಹಂಗೇ ಡಿಸಪಿಯರ್ ಆಗೋಕೆ ಸಾಧ್ಯ ಇಲ್ಲ.” ಎಂದಳು.

ಆಗ ವಿಭಾ, “ಹೌದು ನಮಗೆ ಹೇಳ್ಕೊಟ್ಟಿದ್ದಾರೆ ಸೈನ್ಸ್ ಕ್ಲಾಸಲ್ಲಿ. ‘Energy can neither be created nor destroyed. It can only be transformed from one form to another’ ಒಂದು ಬಗೆಯ ಶಕ್ತಿಯನ್ನ ಮತ್ತೊಂದು ಬಗೆಯ ಶಕ್ತಿಯಾಗಿ ಮಾರ್ಪಾಡು ಮಾಡ್ಬಹುದಷ್ಟೇ! ಸೃಷ್ಟಿಸಕ್ಕೂ ಆಗಲ್ಲ, ನಾಶ ಮಾಡಕ್ಕೂ ಆಗಲ್ಲ. ಅಲ್ವಾ?” ಎಂದಳು.

ಆಗ ಪ್ರಕಾಶ್, “ಪರ್ಫೆಕ್ಟ್ ವಿಭಾ! ಹಾಗಾಗಿ, ಚಂದ್ರ ಭೂಮಿಯಿಂದ ಕದ್ದ ಶಕ್ತಿಯಿದೆಯಲ್ಲಾ? ಅದು ಎಲ್ಲೂ ಹೋಗಿರಲ್ಲ, ಅದೇ ಚಂದ್ರನ್ನ ಭೂಮಿಯಿಂದ ಪ್ರತೀ ವರ್ಷ ೧.೫ ಇಂಚು ದೂರ ತಳ್ತಾ ಹೋಗತ್ತೆ.” ಎಂದು ವಿವರಿಸಿದ.

ಆಗ ಕಾವ್ಯ, “ಕರೆಕ್ಟ್. ಜೊತೆಗೆ, ಚಂದ್ರ ನಮ್ಮ ಸಮುದ್ರದ ನೀರನ್ನ ಮಾತ್ರ ಸೆಳೀತಾ ಇರೋದಲ್ಲ, ನಮ್ಮ ಕಾಲ ಕೆಳಗಿನ ನೆಲವನ್ನೂ ಅದೇ ರೀತಿ ಸೆಳೆಯತ್ತೆ. ಆದ್ರೆ, ಈ ಗುರುತ್ವಾಕರ್ಷಣ ಶಕ್ತಿ, ಘನ ಪದಾರ್ಥವಾದ ನೆಲದ ಮೇಲೆ ಮಾಡೋ ಪರಿಣಾಮ ನಮಗೆ ಅನುಭವಕ್ಕೆ ಬರೋಲ್ಲ. ಆದ್ರೆ ದ್ರವ ಪದಾರ್ಥವಾದ ನೀರಿನ ಮೇಲೆ ಮಾಡೋ ಪರಿಣಾಮ ಮಾತ್ರ ಹೀಗೆ ಉಬ್ಬರ-ಇಳಿತದ ರೂಪದಲ್ಲಿ ಕಾಣಸಿಗತ್ತೆ ಅಷ್ಟೇ.” ಎಂದಳು.

ಆಗ ಪ್ರಕಾಶ್, “ಹೌದು, ಹೀಗೆ ಭೂಮಿಯ ತಿರುಗುವಿಕೆಯಿಂದ, ಚಂದ್ರ ಸೂರ್ಯರ ಗುರುತ್ವಾಕರ್ಷಣೆಯಿಂದ ನಮ್ಮ ಭೂಮಿ ತಿರುಗುವಾಗ ಒಂದೆಡೆ ಸಮುದ್ರದಲ್ಲಿ ಉಬ್ಬರ, ಅದರ ವಿರುದ್ಧ ದಿಕ್ಕಲ್ಲಿ ಇಳಿತ ಇರತ್ತೆ. ಅದಕ್ಕೇ ನಾವು ಈಗ ಭೂಮಿಯ ಚಿತ್ರ ಬರೆಯೋವಾಗ, ಗುಂಡಗೆ ಗೋಲವಾಗಿ ಬರೆಯೋದಿಲ್ಲ. ಅದನ್ನ ‘ಸ್ಫೆರಾಯ್ಡ್’ ಅಂದ್ರೆ ಗೋಳಾಭವಾಗಿ ಬರೀತೀವಿ. ಅಂದ್ರೆ ಒಂದೆಡೆ ಸಮುದ್ರದ ಉಬ್ಬರದಿಂದ ಉಬ್ಬಿದ, ಮತ್ತೊಂದೆಡೆ ಸಮುದ್ರದ ಇಳಿತದಿಂದ ಸಪಾಟಾದ ಗೋಳಾಭವಾಗಿ ಚಿತ್ರಿಸ್ತೀವಿ.” ಎಂದ.

ಆಗ ವಿಭಾ, “ಅಬ್ಬ, ವಿಜ್ಞಾನ ಅಂದ್ರೇನೇ ಹೀಗಲ್ವಾ? ದಿನದಿನಕ್ಕೂ ಅಪ್ಡೇಟ್ ಆಗ್ತಾ ಇರತ್ತೆ. ಇದರ ಗಂಧ ಗಾಳಿಯಿಲ್ಲದವ್ರು, ಭೂಮಿ ಸಪಾಟಾಗಿದೆ ಅಂತಿದ್ರಂತೆ ಮುಂಚೆ! ನಂತರ ಭೂಮಿ ಗುಂಡಗಿರುವುದಕ್ಕೆ ಸಾಕ್ಷಿ ಸಿಕ್ತು. ಅಲ್ಲಿಗೇ ಮುಗೀತಾ? ಇಲ್ಲ ಈಗ ಗೋಳಾಭ ಅಂತೀವಿ. ನೆಕ್ಸ್ಟ್ ಏನೋ, ಕಾದು ನೋಡ್ಬೇಕು.” ಎಂದಳು. ಆಗ ಕಾವ್ಯ “ನಿಜಾ, ವಿಜ್ಞಾನ ನಮಗೆ ಹೇಳಿಕೊಡೋದು ಇದನ್ನೇ ಅಲ್ವಾ? ಹಳೇ ನಂಬಿಕೆಗಳನ್ನೇ ನೆಚ್ಚಿಕೊಂಡು ಇರ್ಬೇಕಿಲ್ಲ, ಎಲ್ಲವನ್ನೂ ಪ್ರಶ್ನಿಸಿ, ಪರಾಮರ್ಶಿಸಿ, ವಿಮರ್ಶಿಸಿ ನೋಡ್ಬೇಕು ಅಂತ. ಸತ್ಯ ಅಂತ ಸಾಬೀತಾಯ್ತಾ? ನಂಬಬೇಕು; ಆದ್ರೆ, ಮತ್ತೆ ಅದರ ಹೊಸ ರೂಪ ಎದುರು ಬರ್ಬಹುದು, ಯಾವುದೂ ಸಾರ್ವಕಾಲಿಕವಲ್ಲ, ನಿರಂತರ ಬದಲಾಗ್ತಾ ಇರತ್ತೆ ಅನ್ನೋದನ್ನೂ ಒಪ್ಕೋಬೇಕು. ಈಗ ನೋಡು, ಈ ಸೂರ್ಯ, ಈ ಚಂದ್ರ ಇವೆಲ್ಲಾ ಭೂಮಿಯಿಂದ ಇಷ್ಟೇ ದೂರದಲ್ಲಿ ಇರತ್ವಾ? ಇಲ್ಲ. ಆದ್ರೆ, ಭೂಮಿ ಮತ್ತೆ ಚಂದ್ರನ ನಡುವಿನ ನಿರಂತರ ‘ಹ್ಯಾಂಡ್ ಶೇಕ್’ ರೂಪದಲ್ಲಿನ ಈ ಸಮುದ್ರದ ಏರಿಳಿತ ಮಾತ್ರ, ಮುಂದುವರೀತಾನೇ ಇರತ್ತೆ, ಇನ್ನೂ ನೂರಾರು ಶತಮಾನಗಳವರೆಗೂ…” ಎಂದಳು ಕಾವ್ಯ.

ಆಗ ಪ್ರಕಾಶ್, “ಸಮುದ್ರದ ಏರಿಳಿತ ಅಂದ್ರೆ ಚಂದ್ರ ಮತ್ತು ಭೂಮಿಯ ನಡುವಿನ ಹ್ಯಾಂಡ್ ಶೇಕ್? ಎಷ್ಟು ಕಾವ್ಯಾತ್ಮಕವಾಗಿ ಹೇಳ್ದೆ ಕಾವ್ಯ! ನಿಜಕ್ಕೂ ವಿಜ್ಞಾನ, ಕಲೆ, ಕಾವ್ಯ, ಗಣಿತ, ಸಂಗೀತ – ಇವನ್ನೆಲ್ಲಾ ಒಂದರಿಂದ ಒಂದು ಬೇರ್ಪಡಿಸಿ ಕಲಿಯೋಕೆ ಸಾಧ್ಯಾನೇ ಇಲ್ಲ. ಒಂದರೊಳಗೊಂದು ಸದಾ ಮಿಳಿತ!” ಎಂದ. ಅಷ್ಟರಲ್ಲಿ ಬೆಳಗಿನ ೯.೩೦; ಬಿಸಿಲಿನ ತಾಪ ಮೆಲ್ಲನೇ ಏರಲು ಪ್ರಾರಂಭವಾಗಿತ್ತು. “ನಡೀರಿ, ಎಲ್ರೂ ‘ಪ್ಯಾರಾಸೇಲಿಂಗ್’ ಮಾಡೋಣ” ಅಂದ ಸಮುದ್ರ. “ಲೆಟ್ಸ್ ಗೋ!” ಅಂತ ಎಲ್ಲರೂ ಸಮುದ್ರದ ಮೇಲೆ ಹಾರುವ ಅನುಭವ ಪಡೆಯಲು ಎದ್ದು ಹೊರಟರು. ಇವರ ಮಾತು, ಕವಿತೆ, ಆಟ, ಉತ್ಸಾಹವನ್ನು ಏರಿಳಿಯುತ್ತಾ ಒಮ್ಮೆ ತಣ್ಣಗೆ, ಒಮ್ಮೆ ರುದ್ರರಮಣೀಯವಾಗಿ ಗಮನಿಸುತ್ತಿತ್ತು ನಿಚ್ಚಳ ವಿಶಾಲ ಸಮುದ್ರ.

(ಹಿಂದಿನ ಕಂತು: ಬೀಜಾವೃತ ಅಪಘಾತ ವೃತ್ತಾಂತ!)

About The Author

ಕ್ಷಮಾ ವಿ. ಭಾನುಪ್ರಕಾಶ್

ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.  i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ 'ಜೀವಿಜ್ಞಾನ' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ