Advertisement
ಪುಟ್ಟಕ್ಕಜ್ಜಿ ಮತ್ತು ಸಲೀಂ ಅಲಿಗಳು: ಎಸ್. ಗಂಗಾಧರಯ್ಯ ಅನುಭವ ಕಥನ

ಪುಟ್ಟಕ್ಕಜ್ಜಿ ಮತ್ತು ಸಲೀಂ ಅಲಿಗಳು: ಎಸ್. ಗಂಗಾಧರಯ್ಯ ಅನುಭವ ಕಥನ

ಬೆಳಗು ಬೈಗುಗಳಲ್ಲಿ ಥರಂಥರದ ಹಕ್ಕಿ ಹಿಂಡುಗಳು. ತೋಟಾಂತ ತೋಟವನ್ನೆಲ್ಲಾ ಅವುಗಳ ಚಿಲಿಪಿಲಿ ಮುಳುಗೇಳಿಸುತ್ತಿತ್ತು. ಆ ಹೊತ್ತಲ್ಲಿ ಮೂರ್ತಿ ಅನ್ಯಮನಸ್ಕನಾಗಿಬಿಡುತ್ತಿದ್ದ. ತೋಟದ ಬದುಗಳಲ್ಲಿ ಅಡ್ಡಾಡುತ್ತಿದ್ದ. ಆ ಚಿಲಿಪಿಲಿ ಸದ್ದಿಗೆ ರೋಮಾಂಚನಗೊಳ್ಳುತ್ತಿದ್ದ. ಹಂಗೆ ಹಕ್ಕಿಗಳ ಕೂಗನ್ನು ಎದೆಯ ಕೂಗಾಗಿಸಿಕೊಂಡಿದ್ದ ಮೂರ್ತಿ ಹಲವು ಹಕ್ಕಿಗಳು ಕೂಗುವುದನ್ನು ಒಂಚೂರೂ ತಪ್ಪದಂತೆ ಅನುಕರಿಸುತ್ತಿದ್ದ. ಅವುಗಳಲ್ಲಿ ಗಿಳಿಗಳು, ಗುಚ್ಚಕ್ಕಿ ಹಾಗೂ ಗೂಬೆಗಳ ಕೂಗು ಥೇಟ್ ಅವುಗಳಂತೆಯೇ ಇರುತ್ತಿತ್ತು. ಕೋಗಿಲೆ ಕೂಗನ್ನು ಮೊಟ್ಟ ಮೊದಲಿಗೆ ಕೇಳಿಸಿದ್ದು ಹಾಗೂ ಆ ಪುಟ್ಟ ಹಕ್ಕಿಯನ್ನು ತೋರಿಸಿದ್ದು ಈ ಮೂರ್ತಿಯೇ.
ಎಸ್.‌
ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನೇಳನೆಯ ಕಂತು

ಹಳ್ಳಿಯಲ್ಲಿ ನಮ್ಮ ಮನೆತನವನ್ನು `ದೊಡ್ಡಮ್ಮಜ್ಜಿ’ ವಂಶ ಅಂತ ಕರೀತಾರೆ. ಈ ಅಜ್ಜಿಯ ನಿಜವಾದ ಹೆಸರು ಅದೇನಾ ಅಥವಾ ಅವರ ಹಿರಿತನಕ್ಕೆ ಸಿಕ್ಕ ಗೌರವವೋ ಗೊತ್ತಿಲ್ಲ. ಅಥವಾ ಇಡೀ ಮನೆಯ ಜವಾಬ್ದಾರಿಯನ್ನು ಆ ಅಜ್ಜಿಯೇ ನೋಡಿಕೊಳ್ಳುತ್ತಿತ್ತು ಅನಿಸುತ್ತೆ; ಹಂಗಾಗಿ ಆ ಅಜ್ಜಿಯ ಹೆಸರೇ ಮನೆತನಕ್ಕೂ ಬಂದಿದೆ ಅನ್ನೋದು ನನ್ನ ನಂಬಿಕೆ. ಈ ಬಗ್ಗೆ ನನ್ನ ಅಜ್ಜನಿಗೂ ಸರಿಯಾಗಿ ತಿಳಿದಂತಿರಲಿಲ್ಲ. ಆ ಕಾಲಕ್ಕೇ ಇದೊಂದು ಹೆಣ್ಣಾಳ್ವಿಕೆಯ ಮನೆತನವಾಗಿತ್ತು ಅನ್ನುವುದು ನನಗೆ ಖುಷಿಯ ಸಂಗತಿ. ಆ ನಂತರ ಇಡೀ ಮನೆತನ ಮಾಮೂಲಿ ಪೂರಾ ಗಂಡಾಳ್ವಿಕೆಯ ಸುಪರ್ದಿಗೆ ಬಿದ್ದು ಮತ್ತೆ ಅಂಥ ಅಜ್ಜಿ ಮತ್ತೆ ಈ ಮನೆತನಕ್ಕೆ ಸಿಕ್ಕಲಿಲ್ಲ. ಎಷ್ಟರ ಮಟ್ಟಿಗೆ ಅಂದರೆ ಅಜ್ಜ ನಂಜಪ್ಪನವರದ್ದೂ ಏನೂ ನಡೆಯುತ್ತಿರಲಿಲ್ಲ. ಅಜ್ಜ ತುಂಬಾ ಸೌಮ್ಯ ಸ್ವಭಾವದವರು. ಕೊಂಚ ಪಿಸುಗ್ಲು. ಮಕ್ಕಳ ಗದರಿಕೆಗೆ ಗಪ್ಪಾಗುತ್ತಿದ್ದವರು. ಅವರು ಯಾರನ್ನೂ ಗದರಿಸಿಕೊಂಡದ್ದನ್ನು ನಾನು ನೋಡಿರಲೇ ಇಲ್ಲ. ಬೆಳಗೆದ್ದು ಕೈ ಕಾಲು ಮುಖ ತೊಳೆದು ಮೂಡಲ ದಿಕ್ಕಿನಲ್ಲಿ ಮೂಡುತ್ತಿರುವ ಸೂರ್ಯನಿಗೊಂದು ನಮಸ್ಕಾರ ಹಾಕುತ್ತಿದ್ದರು. ನಂತರ ಇರುವೆ ಗೂಡುಗಳನ್ನು ಹುಡುಕಿ ನುಚ್ಚಕ್ಕಿಯನ್ನು ಹಾಕುತ್ತಿದ್ದರು. ಇದು ಇಳಿ ವಯಸ್ಸಿನಲ್ಲಿ ಅವರ ದಿನಚರಿಯಾಗಿತ್ತು. ಈ ದೊಡ್ಡಮ್ಮಜ್ಜಿ ನನ್ನ ಅಜ್ಜ ಅವ್ವ ಅಂತ ಮಾತ್ರ ಗೊತ್ತು. ದೊಡ್ಡಮ್ಮಜ್ಜಿ ತುಂಬಾ ದಕ್ಸತ್ತುಗಾತಿ ಅಂತ ಯಾವಾಗಲಾದರೊಮ್ಮೆ ಕೇಳಿದರೆ ಅಜ್ಜ ಹೇಳುತ್ತಿತ್ತು. ಅಯ್ಯ ಆಗಲಿ ಚಿಕ್ಕಪ್ಪಂದಿರಾಗಲಿ ಯಾವತ್ತೂ ಈ ದೊಡ್ಡಮ್ಮಜ್ಜಿಯ ಬಗ್ಗೆ ಪ್ರಸ್ತಾಪ ಮಾಡಿದ್ದು ಕೇಳಿಲ್ಲ. ಅವರದೊಂದು ಪಟವೂ ಮನೆಯಲ್ಲಿ ಇಲ್ಲ. ಇನ್ನು ನನ್ನ ಸ್ವಂತ ಅಜ್ಜಿ ಅಂದರೆ ಅಯ್ಯನ ಅವ್ವನನ್ನೂ ನಾನು ನೋಡಿರಲಿಲ್ಲ. ಅಷ್ಟೇ ಯಾಕೆ ಒಬ್ಬಳು ಹೆಣ್ಣು ಮಗಳೂ ಸೇರಿದಂತೆ ಆರು ಜನ ಮಕ್ಕಳಿದ್ದರೂ ಒಬ್ಬರೂ ಈ ಅಜ್ಜಿಯ ಬಗ್ಗೆ ಮಾತನಾಡಿದ್ದನ್ನೂ ನಾನು ಎಂದೂ ಕೇಳಿಯೂ ಇಲ್ಲ. ಲೇಖಕ ಮಾರ್ಕ್ವೆಜ್‌ನ ಮಾಂತ್ರಿಕ ಲೋಕದಲ್ಲಿ ಬರುವ ಅಜ್ಜ ಅಜ್ಜಿಯರಂಗೆ ಚಿಕ್ಕಂದಿನಿಂದಲೂ ಈ ಅಜ್ಜ ಅಜ್ಜಿಯರ ಬಗ್ಗೆ ನನಗೆ ತುಂಬಾ ಕುತೂಹಲ ಮತ್ತು ಪ್ರೀತಿ. ಆಗ ನನ್ನ ಹಳ್ಳಿಯಲ್ಲಿ ನನಗೆ ಇಷ್ಟವಾದ ಅನೇಕ ಅಜ್ಜಿಯರಿದ್ದರು. ಕಥೆಗಳ ಲೋಕದಲ್ಲಿ ನಡೆದಾಡಿಸುತ್ತಿದ್ದ ಕುಂಟಜ್ಜಿಯ ಹೆಸರು ಬಿಟ್ಟರೆ ಮತ್ತೆಲ್ಲಾ ಹೆಸರುಗಳು ಯಾಕೋ ಗೊತ್ತಿಲ್ಲ ಮರೆವಿಗೆ ಜಾರಿವೆ. ಆದರೆ ಅವರುಗಳ ಆಗಿನ ರೂಪ ಮಾತ್ರ ಇನ್ನೂ ಕಣ್ಣಲ್ಲಿ ಹಂಗೇ ಇದೆ. ಹೆರಿಗೆ ಮಾಡಿಸುವುದರಲ್ಲಿ ಪಳಗಿದ್ದ ಅಜ್ಜಿ, ದನಕರುಗಳಿಗೆ ಕುಂದು ಕೇರಲು ಬರುತ್ತಿದ್ದ ಅಜ್ಜಿ, ಖಾಯಿಲೆ ಕಸಾಲೆಯಾದರೆ ನಾಟಿ ಮದ್ದು ಕೊಡುತ್ತಿದ್ದ ಅಜ್ಜಿ, ಸೋಬಾನೆ ಪದಗಳನ್ನು ಹಾಡುತ್ತಿದ್ದ ಅಜ್ಜಿಯಂದಿರು- ಮುಂತಾದವರ ಒಂದು ಗುಂಪೇ ಇತ್ತು. ಇವರೆಲ್ಲರ ಸಾಮಿಪ್ಯವೂ ನನಗಿತ್ತು.

ಇವರಂತೆ ನನಗೆ ತುಂಬಾ ಪ್ರೀತಿಯ ಅಜ್ಜಿಯೊಂದಿತ್ತು. ಆ ಅಜ್ಜಿ ನಮ್ಮ ಮನೆಯಲ್ಲೇ ಇತ್ತು. ಪುಟ್ಟಮ್ಮಜ್ಜಿ ಅಂತ. ಆದರೆ ಅವರು ನನಗೆ ದೊಡ್ಡಜ್ಜಿಯಾಗಿದ್ದರು. ಈ ಅಜ್ಜಿ ನನ್ನ ಅವ್ವನ ಅವ್ವ. ಊರು ತಿಪಟೂರಿನ ಸಮೀಪದ ಕರಡಿ ರೈಲ್ವೇ ನಿಲ್ದಾಣದಕ್ಕೆ ಸಮೀಪವಿರುವ ಮದ್ಲಿಹಳ್ಳಿ. ಬಾಲ್ಯದ ಮುಕ್ಕಾಲು ಭಾಗ ನೆನಪುಗಳು ಈ ಅಜ್ಜಿಯ ಆಸರೆಯಲ್ಲಿವೆ. ನನ್ನನ್ನು ತುಂಬಾ ಚಿಕ್ಕ ಮಗುವಿನಿಂದ ಸಲಹಿರುವುದು ಈ ಅಜ್ಜಿಯೇ. ಅಜ್ಜಿಯ ಗಂಡ ಅಂದರೆ ನನ್ನ ಅಜ್ಜ ತುಂಬಾ ಬೇಗ ತೀರಿಕೊಂಡಿದ್ದರು. ಅವ್ವ ಒಬ್ಬಳೇ ಮಗಳು. ಮದುವೆ ಮಾಡಿಕೊಟ್ಟಿದ್ದು ಮಲ್ಲಾಘಟ್ಟದ ಹತ್ತಿರದ ಹಳ್ಳಿಗೆ. ಗಂಡ ತೀರಿಕೊಂಡ ಮೇಲೆ ಅಜ್ಜಿ ತವರು ಮನೆ ಮದ್ಲಿಹಳ್ಳಿಯಲ್ಲೇ ಬಂದು ನೆಲೆಸಿತ್ತು. ಹಿಂಗಿರುವಾಗ ಅಜ್ಜಿ ಗಂಡನ ಕಡೆಯ ಆಸ್ತಿಯನ್ನೂ ಗಂಡನ ಮನೆಯವರಿಗೆ ಕೊಟ್ಟು ಬಂದಿತ್ತು. ಕಡೆಗೆ ತವರು ಮನೆಯಲ್ಲಿ ಅಜ್ಜಿಗಾಗಿ ಬಿಟ್ಟಿದ್ದ ಆಸ್ತಿಯನ್ನು ಅವರಿಗೇ ಬರೆದು ಕೊಟ್ಟಿತ್ತು. ಹಂಗಾಗಿ ಕಡೆಗೆ ಮಗಳ ಆಸರೆಗಾಗಿ ಅಜ್ಜಿ ನಮ್ಮ ಮನೆಯಲ್ಲಿಯೇ ಬಂದು ಇತ್ತು. ಆಗ ನಾನಿನ್ನೂ ನನ್ನೂರಿನ ಪ್ರೈಮರಿ ಸ್ಕೂಲಿನಲ್ಲಿ ಒಂದು ಅಥವಾ ಎರಡನೇ ಕ್ಲಾಸಿನಲ್ಲಿದ್ದೆ ಅನಿಸುತ್ತೆ.

ಈ ದೊಡ್ಡಜ್ಜಿ ಆಗಾಗ ಹಬ್ಬಕ್ಕೆ ಇಲ್ಲಾ ಜಾತ್ರೆಗೆ ತನ್ನ ತವರಿಗೆ ಹೋಗುತ್ತಿತ್ತು. ಆಗ ನಾನೂ ಗಂಟುಬೀಳುತ್ತಿದ್ದೆ. ನನ್ನನ್ನೂ ಕರಕಂಡು ಹೋಗುತ್ತಿತ್ತು. ಎಲ್ಲೋ ಕೆಲವು ಸಾರ್ತಿ ತಿಪಟೂರಿಗೆ ಹೋಗಿ ಅಲ್ಲಿಂದ ರೈಲಿನಲ್ಲಿ ಕುಪ್ಪಾಳಿನಲ್ಲಿರುವ ಕರಡಿ ಸ್ಟೇಷನ್‌ನಲ್ಲಿ ಇಳಿದು ಮದ್ಲಿಹಳ್ಳಿಗೆ ಹೋಗುತ್ತಿದ್ದೆವು. ಆದರೂ ಆಗಿನ ರೈಲು ಹಾಗೂ ಅದರಲ್ಲಿನ ಪ್ರಯಾಣ ನನ್ನ ಬಾಲ್ಯದ ಇಂದಿಗೂ ಹಲವು ರೋಮಾಂಚಕ ಸಂಗತಿಗಳಲ್ಲಿ ಒಂದಾಗಿದೆ. ಇನ್ನುಳಿದಂತೆ ಬಸ್ಸಿನಲ್ಲಿ ಅಣ್ಣೆಮರ‍್ನಳ್ಳಿಯ ಗೇಟಿನಲ್ಲಿ ಇಳಿದು ನ್ಯಾಕೇನಳ್ಳಿ, ಕರಡಿಯ ಗೇಟಿನ ಮೂಲಕ ಆರೇಳು ಕಿಲೋಮೀಟರ್ ನಡೆಸಿಕಂಡು ಹೋಗುತ್ತಿತ್ತು. ನಾನು ನೋಡುವ ಹೊತ್ತಿಗೆ ಅಜ್ಜಿಯದು ಬೋಡು ಬಾಯಾಗಿತ್ತು. ಆ ಬೋಡುಗಳು ಎಷ್ಟು ಗಡುಸಾಗಿದ್ದವೆಂದರೆ ಗಟ್ಟಿಯಾದ ರೊಟ್ಟಿಯನ್ನೂ ಸಲೀಸಾಗಿ ಅಗಿಯುತ್ತಿತ್ತು. ದುಂಡು ಮುಖವೂ ಅಲ್ಲದ ನೀಳ್ಮುಖವೂ ಅಲ್ಲ. ಮುಖದಗಲಕ್ಕೂ ಮುಪ್ಪಿನ ಸುಕ್ಕುಗಳು. ಸದಾ ಅರಳೆಣ್ಣೆಯನ್ನು ಹಾಕಿ ಒಪ್ಪ ಮಾಡಿಕೊಂಡಿರುತ್ತಿದ್ದ ಬೆಳ್ಳಂಥ ಬೆಳ್ಳನೆಯ ತಲೆಗೂದಲು. ಯಾವಾಗಲೂ ನಗುಮೊಗ. ಈ ಅಜ್ಜಿಗೆ ಎರಡು ಕಿವಿಗಳೂ ಕೇಳಿಸುತ್ತಿರಲಿಲ್ಲ. ಇಂಥ ಅಜ್ಜಿ ಒಂದು ನಿಮಿಷವೂ ಕೂತು ಕಾಲ ಹಾಕುತ್ತಿರಲಿಲ್ಲ. ಅಡಿಗೆ ಕೆಲಸದಿಂದ ಹಿಡಿದು ದನಕರುಗಳನ್ನು ನಿಗಾಮಾಡುವುದು, ಕೊಟ್ಟಿಗೆ ಗುಡಿಸುವುದು, ಹೊಲಗೆಲಸದವರೆಗೆ ಯಣಗುತ್ತಿತ್ತು. ಬಿತ್ತನೆ ಮಾಡುವಾಗ ಕೂರಿಗೆಯಲ್ಲಿ ರಾಗಿ ಮುಂತಾದ ಧಾನ್ಯಗಳನ್ನು ಒಂದೇ ಸಮಕ್ಕೆ ಬಿಡುವ ಪರಿಗೆ ಹಲವರು ಬಿತ್ತನೆ ಸಮಯದಲ್ಲಿ ಅಜ್ಜಿಗೆ ದುಂಬಾಲು ಬೀಳುತ್ತಿದ್ದರು. ಹಿಂಗೆ ನಮ್ಮ ಮನೆಯ ಸಕಲ ಕೆಲಸವನ್ನೂ ಮೈ ಮೇಲೆ ಎಳೆದುಕೊಂಡು ಮಾಡುತ್ತಿದ್ದ ಅಜ್ಜಿಯನ್ನು ನನ್ನ ಮನೆಯಲ್ಲಿ ಪ್ರೀತಿಯಿಂದ ನೋಡಿಕೊಂಡಿದ್ದ ದಿನಗಳು ನೆನಪಾಗುತ್ತಿಲ್ಲ. ತನ್ನದೇ ಮನೆ ಅಂತ ಜೀವ ತೇಯುತ್ತಿದ್ದರೂ ಯಾಕೋ ಇವರಿಗೆ ಅಜ್ಜಿಯ ಬಗ್ಗೆ ಅಪಾರ ತಾತ್ಸಾರವಿತ್ತು. ಆಗ ಅದು ತಪ್ಪು ಅಂತ ಹೇಳುವ ಇಲ್ಲವೇ ಪ್ರತಿಭಟಿಸುವ ಅರಿವು ನನಗಿರಲಿಲ್ಲ. ನಿತ್ಯ ಸಿಗುತ್ತಿದ್ದ ಬೈಗುಳಗಳು ಅಜ್ಜಿಗೆ ರೂಢಿಯಾಗಿ ಹೋಗಿದ್ದವು. ಇದು ನನ್ನ ಅಜ್ಜ ನಂಜಪ್ಪನವರ ವಿಚಾರದಲ್ಲೂ ಸತ್ಯದ ಸಂಗತಿಯಾಗಿತ್ತು. ಅಜ್ಜ ತುಂಬಾ ಲವಲವಿಕೆಯ ಮನುಷ್ಯ. ನಾನು ಮೈಸೂರಿನಲ್ಲಿ ಓದುವ ಹೊತ್ತಲ್ಲಿ ಒಮ್ಮೆ ಮೈಸೂರಿಗೆ ಬಂದಿದ್ದರು. ಆಗ ಅಜ್ಜ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮುಖೇನಾ ಸಲೀಸಾಗಿ ಹತ್ತಿದ್ದ ದೃಶ್ಯ ಈಗಲೂ ಕಣ್ಮುಂದಿದೆ.

ಅಜ್ಜಿ ಅಂದರೆ ನನಗೆ ಜೀವ. ಮನೆಯಲ್ಲಿದ್ದ ಒಂದು ಚಣವೂ ಅಜ್ಜಿಯಿಂದ ದೂರ ಇರುತ್ತಿರಲಿಲ್ಲ. ಅಜ್ಜಿಗೆ ನೋವಾದರೆ ನನಗೂ ನೋವಾಗುತ್ತಿತ್ತು. ಅಜ್ಜಿ ಅತ್ತರೆ ನನಗೂ ಅಳು ಬರುತ್ತಿತ್ತು. ನಕ್ಕರೆ ನಗುತ್ತಿದ್ದೆ. ನಾನು ಹೈಸ್ಕೂಲ್ ಮುಗಿಯುವವರೆಗೂ ನಾನು ಮಲಗುತ್ತಿದ್ದದ್ದು ಅಜ್ಜಿಯ ಪಕ್ಕದಲ್ಲೆ. ಈ ಅಜ್ಜಿಯಂಥ ಕರುಣಾಮಯಿ ಮನಸ್ಸುಳ್ಳವರನ್ನು ನನ್ನ ಬದುಕಿನಲ್ಲಿ ನಾನು ಕಂಡಿರುವುದು ತುಂಬಾ ಅಪರೂಪ. ಅಜ್ಜಿಗೆ ನನ್ನ ಅಣ್ಣ ಅಂದರೆ ಪ್ರಾಣ. ಅಣ್ಣನಿಗೂ ಅಷ್ಟೇ. ಅಣ್ಣ ನನ್ನ ದೊಡ್ಡಮ್ಮನ ಮಗ. ಅಂದರೆ ನನ್ನ ಅಯ್ಯನ ಮೊದಲ ಹೆಂಡತಿಯ ಮಗ. `ಅಯ್ಯೋ ತಾಯಿ ಇಲ್ದ ತಬ್ಲಿ’ಅಂತ ಅಜ್ಜಿ ಅಣ್ಣನ ಮೇಲೆ ಜೀವ ಇಟ್ಟುಕಂಡಿತ್ತು. ನಾನು ಮೈಸೂರಿನಿಂದ ಊರಿಗೆ ಬಂದು ಕೆಲಸಕ್ಕೆ ಸೇರಿಕೊಂಡ ಕೆಲ ವರ್ಷ ಅಜ್ಜಿ ಬದುಕಿತ್ತು. ವಯಸ್ಸು ಜಪ್ಪಿ ಹಾಕಿದ್ದರೂ ಬಿಟ್ಟಿ ಕೂಳು ತಿನ್ನಬಾರದು ಅನ್ನುವ ಛಲಕ್ಕೆ ಬಿದ್ದು ಶಕ್ತಿ ಮೀರಿ ಕೆಲಸಮಾಡುತ್ತಿತ್ತು. ತೀರಿಕೊಳ್ಳಲು ಒಂದೆರಡು ತಿಂಗಳು ಇದೆ ಅನ್ನುವಾಗ ಒಂದಷ್ಟು ದಿನ ನನ್ನ ತಿಪಟೂರಿನ ಮನೆಯಲ್ಲಿ ಇರಿಸಿಕೊಂಡಿದ್ದೆ. ಅಜ್ಜಿ ತೊಂಭತ್ತರ ಆಸುಪಾಸಿನಲ್ಲಿ ತೀರಿಕೊಂಡಿತು. ಅವತ್ತು ಅಂಥ ಸಾವಿಗೂ ಗೌರವ ಕೊಡದಂತೆ ಅಯ್ಯ ನಡೆದುಕೊಂಡಿತ್ತು. ಅದು ಅವರ ಮಿಕ್ಕ ಒಳ್ಳೆಯ ಗುಣಗಳನ್ನು ಗೌಣವಾಗಿಸಿತ್ತು. ಅಜ್ಜಿಗೆ ಮಗಳು ಅಂದರೆ ತುಂಬಾನೇ ಇಷ್ಟ. ಅಜ್ಜಿಯ ಸಾವಿನ ಕೊನೆಯ ಚಣಗಳು-ಇನ್ನೇನು ಕೆಲವೇ ಚಣಗಳಲ್ಲಿ ಪ್ರಾಣ ಹೋಗುತ್ತೆ ಅನ್ನುವಾಗ ನಾನು ಸೇರಿದಂತೆ ಹಲವರು ಅಲ್ಲಿದ್ದೆವು. ಆದರೆ ಅಜ್ಜಿ ತನ್ನ ಬಾಳೆಕಾಯಿಯಲ್ಲಿ ಸುತ್ತಿಟ್ಟುಕೊಂಡಿದ್ದ ಪುಟ್ಟದೊಂದು ಚೀಲವನ್ನು ಯಾರಿಗೂ ಕೊಡೆದೆ ಮಗಳ ಕೈಗಿಟ್ಟಿತ್ತು. ಆ ಪುಟಾಣಿ ಚೀಲದ ತುಂಬಾ ದುಂಡಗೆ ಮಡಿಚಿಟ್ಟಿದ್ದ ನೋಟುಗಳಿದ್ದವು. ಅಜ್ಜಿ ತೀರಿಕೊಳ್ಳುವ ವರ್ಷ ತೆಂಗಿನ ಸಸಿಗಳ ದೊಡ್ಡದೊಂದು ಒಟ್ಟಲು ಮಾಡಿತ್ತು. ಆ ಒಟ್ಟಲಿನಿಂದ ನಾನೇ ಖುದ್ದು ಸಸಿಯೊಂದನ್ನು ಕೀಳಿಸಿ ತಂದು ಅಜ್ಜಿಯ ಗುಡ್ಡೆಯ ಮೇಲೆ ಇಡಿಸಿದ್ದೆ. ಅಜ್ಜಿಯ ನೆನಪಿಗಾಗಿ. ಆ ಸಸಿ ಹತ್ತು ವರ್ಷದೊತ್ತಿಗೆ ಚೆನ್ನಾಗಿ ಪೈರಾಗತೊಡಗಿತ್ತು. ಆ ವೇಳೆಗೆ ಮಳೆ ಕೈ ಕೊಟ್ಟು, ಬರ‍್ವೆಲ್ಲು ಬರಿದಾಗಿ ತೋಟದಲ್ಲಿ ಸಾವಿರಾರು ಅಡಕೆ ಮರಗಳು ಒಣಗಿಹೋಗಿದ್ದವು. ಆಗ ಅಜ್ಜಿಯ ಗುಡ್ಡೆಯ ಮೇಲಿನ ಆ ಸಸಿಯೂ ಅವುಗಳ ಪೈಕಿಯಲ್ಲಿತ್ತು. ಈಗಲ್ಲಿ ಗುಡ್ಡೆಯ ಮೇಲೆ ಪುಟ್ಟ ಸಸಿಯನ್ನು ಇಡುವಾಗ ಅದರ ಆಸರೆಗೆಂದು ನೆಟ್ಟಿದ್ದ ಅಮಟೆಯ ನೆಡುಗಡ್ಡಿ ಗಿಡವಾಗಿ ಬೆಳೆದಿದೆ. ವರ್ಷಕ್ಕೊಮ್ಮೆ ನಮ್ಮ ಮನೆಯ ಉಪ್ಪಿನಕಾಯಿಗಾಗುವಷ್ಟು ಕಾಯಿ ಬಿಡುತ್ತೆ.

ನಾನು ಹೈಸ್ಕೂಲ್ ಓದುವಾಗ ಅಜ್ಜಿಯ ಊರಿಂದ ನನದೇ ವಯಸ್ಸಿನ ಮೂರ್ತಿ ನಮ್ಮ ಮನೆಯಲ್ಲೇ ಇದ್ದುಕಂಡು ನನ್ನ ಜತೆ ಹೈಸ್ಕೂಲ್‌ಗೆ ಬರುತ್ತಿದ್ದ. ಇವನು ದೊಡ್ಡಜ್ಜಿಯ ಮನೆಯವನು. ಮೂರ್ತಿಯ ಅಪ್ಪ ನಿಂಗಪ್ಪ ನನಗೆ ದೊಡ್ಡಪ್ಪನಾಗಬೇಕಿತ್ತು. ಈಗ ಕುಪ್ಪಾಳಿನಲ್ಲಿ ಹೈಸ್ಕೂಲ್ ಇದೆ. ಆಗ ಇತ್ತೋ ಇಲ್ಲವೋ ಗೊತ್ತಿಲ್ಲ. ಕೋಲು ಮುಖದವನು. ಗಿಣಿ ಮೂಗಿನವನು. ತುಂಬಾ ಖುಷಿ ಮತ್ತು ದುಃಖವಾದಾಗ ಅವನ ಯಾವೊಂದು ಮಾತುಗಳೂ ನನಗೆ ಇರಲಿ ಯಾರಿಗೂ ತಿಳಿಯುತ್ತಿರಲಿಲ್ಲ. ಆಗ ಅವನ ಮಾತುಗಳೆಲ್ಲ ಬಾಯಿಗಿಂತ ಮೂಗಿನಿಂದಲೇ ಬರುತ್ತಿದ್ದವು. ಚಿಕ್ಕಂದಿನಲ್ಲಿ ಮಕ್ಕಳ ಮನಸ್ಸಿನಲ್ಲಿ ಎಷ್ಟೊಂದು ಕ್ರೌರ್ಯವಿರುತ್ತೆ ಅನ್ನುವುದು ನಾನು ಇವನಿಗೆ ಕೊಡುತ್ತಿದ್ದ ಹಿಂಸೆಯನ್ನು ನೆನೆದರೆ ಈಗ ನೋವಾಗುತ್ತದೆ. ತುಂಬಾ ಮುಗ್ಧ ಮನಸ್ಸಿನ ಮೂರ್ತಿಯನ್ನು ಕಂಡರೆ ಇಷ್ಟವಿತ್ತು. ಆದರೆ ಕೆಲವೊಮ್ಮೆ ಅವನಿಗೆ ತಾನಿರುವ ತಾವಿನಲ್ಲಿ ಒಂಚೂರೂ ಭದ್ರತೆ ಇಲ್ಲವೇನೋ ಎಂಬಂತೆ ನಾನು ನಡೆದುಕೊಂಡುಬಿಡುತ್ತಿದ್ದೆ. ಆಗ ದೊಡ್ಡಜ್ಜಿ ತುಂಬಾ ಬೇಸರ ಮಾಡಿಕೊಳ್ಳುತ್ತಿತ್ತು. ಹೈಸ್ಕೂಲ್ ಮುಗಿಸುವುದರೊಳಗೆ ಇವನಿಗೆ ನನ್ನ ಊರು ಅದರಲ್ಲೂ ನನ್ನ ಕಾಟ ಸಾಕಾಗಿಹೋಗಿತ್ತು. ಹಂಗಾಗಿ ಹತ್ತನೆಯ ಕ್ಲಾಸು ಪರೀಕ್ಷೆ ಬರೆದು ಹೋದವನು ಮತ್ತೆ ನಮ್ಮ ಊರಿಗೆ ಬರಲಿಲ್ಲ. ಜತೆಗೆ ಅಷ್ಟಕ್ಕೇ ಅವನ ಓದು ಕೂಡಾ ನಿಂತುಹೋಗಿತ್ತು. ನಾನು ಓದು ಮುಗಿಸಿ ಬಂದು ಕೆಲಸಕ್ಕೆ ಸೇರಿಕೊಂಡ ನಂತರ ಆಗಾಗ ಮದ್ಲಿಹಳ್ಳಿಗೆ ಹೋಗುತ್ತಿದ್ದೆ. ಅಲ್ಲಿ ಅವನನ್ನು ಕಾಣುತ್ತಲೇ ನಾನು ಪಾಪಪ್ರಜ್ಞೆಗೆ ಒಳಗಾಗುತ್ತಿದ್ದೆ. ಆದರೆ ಅವನು ಮಾತ್ರ ಅದೇ ನಗುವಿನೊಂದಿಗೆ `ಏನ್ಲಾ ಸಮಾಚಾರ’ ಅಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದ. ಊರಿನಲ್ಲಿ ಬದುಕು ಕಷ್ಟವಾದಾಗ ಒಂದಷ್ಟು ದಿನ ಬೆಂಗಳೂರಿಗೆ ಹೋಗಿ ಅದೂ ಇದೂ ಕೆಲಸ ಮಾಡಿಕಂಡು ಇದ್ದ. ಅಲ್ಲಿ ಒಗ್ಗದೆ ತಿರುಗಿ ಊರಿಗೆ ಬಂದಿದ್ದ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಖಾಯಿಲೆಯಿಂದ ತೀರಿಕೊಂಡ. ಅವನ ನೆನಪಾದಾಗಲೆಲ್ಲಾ ಬೇರೆಯವರ ಮನೆಯಲ್ಲಿ ಅವರ ಹಂಗಿನಲ್ಲಿ ಇದ್ದುಕಂಡು ಓದುತ್ತಿರುವ ಮಕ್ಕಳೂ ನೆನಪಾಗುತ್ತಾರೆ. ಇದರ ಜತೆಗೆ ನನ್ನ ಕೇಡಿ ಬುದ್ಧಿ ಕೂಡಾ.

ಈ ಮೂರ್ತಿ ಅಪ್ಪಟ ಕುತೂಹಲಿ. ಇವನು ಬಂದ ಮೇಲೆ ಮನೆಯಲ್ಲಿ ನನ್ನ ಪಾಲಿನ ಅರ್ಧ ಕೆಲಸ ಅವನಿಗೆ ಹಂಚಿಕೆಯಾಗಿತ್ತು. ಬೆಳಗೆದ್ದು ಹೊಲಗಳಲ್ಲಿ ಹುಲ್ಲು ಕಿತ್ತು ತರುವುದು, ದನಗಳಿಗೆ ಮಗ್ಗಲು ಸೊಪ್ಪು ತರುವುದು, ದನಗಳನ್ನು ಮೇಯಿಸುವುದು, ಬಾರೆಯಿಂದ ಸೌದೆ ತರುವುದು ಹಿಂಗೆ ಎಲ್ಲದರಲ್ಲೂ ನನಗಿಂತ ಒಂದು ಕೈ ಮೇಲಾಗಿಯೇ ಕೆಲಸ ಮಾಡುತ್ತಿದ್ದ. ಜೀರಿಂಬೆಗಳನ್ನು ಹಿಡಿಯುವುದರಲ್ಲಿ, ಬೇಲಿಗಳಲ್ಲಿ ಜೇನು ಹುಡುಕುವುದರಲ್ಲಿ, ಹೊಲ ಕಾಯುವುದರಲ್ಲಿ, ಅಜ್ಜನಕೆರೆಯಲ್ಲಿ ಹಾಕುತ್ತಿದ್ದ ಜೋಳವನ್ನು ಕಾಯುವುದರಲ್ಲಿ ನನಗಿಂತ ತುಂಬಾ ಚುರುಕಿದ್ದ. ಜೋಳ ಕಾಯಲು ಚಂದದ ಮಂಚಿಗೆಯನ್ನು ಕಟ್ಟುತ್ತಿದ್ದ. ಇವೆಲ್ಲವುಗಳ ಜತೆಗೆ ಇವನಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ಅಪಾರ ಕುತೂಹಲವಿತ್ತು. ಆ ವಯಸ್ಸಿನಲ್ಲಿ ನನಗೆ ಅವುಗಳ ಬಗ್ಗೆ ಆಟೋ ಈಟೋ ಪ್ರೀತಿ ಮೂಡಿಸಿದ ಮನಸ್ಸುಗಳಲ್ಲಿ ಅವನೂ ಒಬ್ಬನಾಗಿದ್ದ. ಅವನು ನಮ್ಮ ಮನೆಯಲ್ಲಿ ಇದ್ದಷ್ಟು ದಿನ ತುಂಬಾ ಒಳ್ಳೆಯ ನಾಯಿ ಬೆಕ್ಕುಗಳಿದ್ದವು. ಅವುಗಳ ನಿಗಾ ಅವನೇ ಮಾಡುತ್ತಿದ್ದ. ನಾನೂ ಊರೊಳಗೆ ಸಿಕ್ಕ ಸಿಕ್ಕ ಚಂದ ಕಂಡ ನಾಯಿ ಮರಿಗಳನ್ನೆಲ್ಲಾ ಸಾಕಲೇಂದು ಎತ್ತಿಕಂಡು ಬರುತ್ತಿದ್ದೆ. ಕರಿಯ, ಬಿಳಿಯ, ಅಂಡಾಬಂಡ ಹಿಂಗೆ ಥರಾವರಿ ನಾಯಿಗಳು. ನಾನು ತರುತ್ತಿದ್ದೆನಾದರೂ ಅವುಗಳು ಮನೆಗೆ ಬಂದ ಕೂಡಲೇ ಮೂರ್ತಿಯ ಅನುಯಾಯಿಗಳಾಗಿಬಿಡುತ್ತಿದ್ದವು. `ತಂದ್ರೆ ಸಾಕ, ಅವುಗಳ್ನ ನಿಗಾ ಮಾಡಬಾರ್ದ’ ಅಂತ ಅಜ್ಜಿ ಅನ್ನುತ್ತಿತ್ತು. ಹಂಗೆ ಹಿಡುಕಂಡ ಬರುತ್ತಿದ್ದ ನಾಯಿ ಕುನಿಗಳು ಹಂಗಂಗೇ ಮತ್ತೆ ಊರೊಳಕ್ಕೆ ಸೇರಿಕಂಡುಬಿಡುತ್ತಿದ್ದವು. ಮೂರ್ತಿಯೇ ಇವುಗಳನ್ನು ತಗಂಡು ಹೋಗಿ ಬಿಡುತ್ತಿದ್ದನಾ ಇಲ್ಲಾ ಮನೆಯಲ್ಲಿ ಹಂಗೆ ಮಾಡಲು ಅವನಿಗೆ ಹೇಳುತ್ತಿದ್ದರಾ? ಗೊತ್ತಿಲ್ಲ. ಅವನು ಮನೆಯಲ್ಲಿದ್ದರೆ ಬೆಕ್ಕುಗಳು ಅವನ ಹಿಂದಿಂದೇ ಸುತ್ತುತ್ತಿದ್ದವು. ಇನ್ನು ನಾಯಿಗಳು ಅವನು ಹೋದೆಡೆಯಲ್ಲೆಲ್ಲಾ ಹಾಜರಿ ಹಾಕುತ್ತಿದ್ದವು. ಕಾರೆಕಾಯಿಗಳ ಕಾಲದಲ್ಲಿ ಅವುಗಳ ಕಾಲ ಮುಗಿಯುವವರೆಗೂ ಮೂರ್ತಿ ಎರಡು ಚೆಡ್ಡಿ ಜೇಬುಗಳ ತುಂಬಾ ಕಾರೆ ಕೆಂಗುಗಳನ್ನು ಹುಡುಕಿ ಕಿತ್ತು ತರುತ್ತಿದ್ದ. ನನಗೆ ಸಿಗದಂತೆ ದೊಡ್ಡ ಚಿಪ್ಪುಗಳಲ್ಲಿ ಕುರಿ ಪಿಸಿಗೆಯ ಜತೆ ಹಾಕಿ ಮುಚ್ಚಿಡುತ್ತಿದ್ದ. ಅವುಗಳು ಹಣ್ಣಾಗತೊಡಗಿದಂತೆ ಆಗಾಗ ತಿನ್ನಲು ಕೊಡುತ್ತಿದ್ದ. ಆ ಕೆಂಗುಗಳೆಲ್ಲ ಕಪ್ಪಿಗೆ ತಿರುಗಿ ಹಣ್ಣಾಗಿ ಬಾಯಿಗಿಟ್ಟರೆ ಸಾಕು ಕರಗಿಬಿಡುತ್ತಿದ್ದವು. ಅಬ್ಬಾ ಆ ಸ್ವಾದ ಇಂದಿಗೂ ಕಾರೆ ಗಿಡಗಳನ್ನು ಕಾಣುತ್ತಲೇ ಅವುಗಳಿಗಾಗಿ ತಡಕುವಂತೆ ಮಾಡುತ್ತದೆ.

ಇದರ ಜತೆಗೆ ಇವನಿಗೆ ಹಕ್ಕಿಗಳೆಂದರೆ ಒಂದು ಕೈ ಜಾಸ್ತಿ ಮಮಕಾರ. ಹೇಳಿಕೇಳಿ ನಮ್ಮದು ತೋಟದ ಮನೆ. ಹಲವು ಬಗೆಯ ಗಿಡಮರಗಳ ಹಸಿರು ತಾಣ. ಬೆಳಗು ಬೈಗುಗಳಲ್ಲಿ ಥರಂಥರದ ಹಕ್ಕಿ ಹಿಂಡುಗಳು. ತೋಟಾಂತ ತೋಟವನ್ನೆಲ್ಲಾ ಅವುಗಳ ಚಿಲಿಪಿಲಿ ಮುಳುಗೇಳಿಸುತ್ತಿತ್ತು. ಆ ಹೊತ್ತಲ್ಲಿ ಮೂರ್ತಿ ಅನ್ಯಮನಸ್ಕನಾಗಿಬಿಡುತ್ತಿದ್ದ. ತೋಟದ ಬದುಗಳಲ್ಲಿ ಅಡ್ಡಾಡುತ್ತಿದ್ದ. ಆ ಚಿಲಿಪಿಲಿ ಸದ್ದಿಗೆ ರೋಮಾಂಚನಗೊಳ್ಳುತ್ತಿದ್ದ. ಹಂಗೆ ಹಕ್ಕಿಗಳ ಕೂಗನ್ನು ಎದೆಯ ಕೂಗಾಗಿಸಿಕೊಂಡಿದ್ದ ಮೂರ್ತಿ ಹಲವು ಹಕ್ಕಿಗಳು ಕೂಗುವುದನ್ನು ಒಂಚೂರೂ ತಪ್ಪದಂತೆ ಅನುಕರಿಸುತ್ತಿದ್ದ. ಅವುಗಳಲ್ಲಿ ಗಿಳಿಗಳು, ಗುಚ್ಚಕ್ಕಿ ಹಾಗೂ ಗೂಬೆಗಳ ಕೂಗು ಥೇಟ್ ಅವುಗಳಂತೆಯೇ ಇರುತ್ತಿತ್ತು. ಕೋಗಿಲೆ ಕೂಗನ್ನು ಮೊಟ್ಟ ಮೊದಲಿಗೆ ಕೇಳಿಸಿದ್ದು ಹಾಗೂ ಆ ಪುಟ್ಟ ಹಕ್ಕಿಯನ್ನು ತೋರಿಸಿದ್ದು ಈ ಮೂರ್ತಿಯೇ.

ಇನ್ನು ಇವನಿಗೆ ಗಿಣಿಗಳ ಹಿಂಡು ಕಂಡರೆ ಸಾಕು ಹಿಗ್ಗಿಬಿಡುತ್ತಿದ್ದ. ಅವುಗಳ ಆ ಮೈಯ್ಯ ಹಸಿರು, ಆ ಕೊಕ್ಕುಗಳ ಕಡು ಕೆಂಪು, ಅವುಗಳು ನುಡಿಸುತ್ತಿದ್ದ ಕೀಚ್, ಕೀಚ್, ಚುಂಯ್ ಚುಂಯ್ ಸದ್ದು ಅವನನ್ನು ಮೈಮರೆಸುತ್ತಿತ್ತು. ಆಗೆಲ್ಲಾ ನಮ್ಮ ತೋಟದ ಹೆಂಚಿನ ಮಟ್ಟಿಗೆ ಅಳ್ಳು ಮರಗಳಲ್ಲಿ, ಕೆಲವು ಸಾರ್ತಿ ಎರಡಾಳೆತ್ತರದ ಮರಗಳಲ್ಲಿ ಮರಕುಟಿಕ ಮಾಡಿದ್ದ ತೂತುಗಳಲ್ಲಿ ಗಿಣಿಗಳು ವಾಸಿಸುತ್ತಿದ್ದವು. ಹಗಲಲ್ಲಿ ಎಲ್ಲಿಗೋ ಹೋಗಿರುತ್ತಿದ್ದ ಗಿಣಿಗಳು ಸಂಜೆಯಾಗುತ್ತಲೇ ತಾವು ನೆಲೆಸಿದ್ದ ಗೂಡುಗಳತ್ತ ತಿರುಗಿ ಬಂದು, ಆ ಗೂಡುಗಳ ಸುತ್ತಲೂ ಪುರುಪುರನೆ ಸುತ್ತು ಹಾಕುತ್ತಾ ಆ ಗೂಡುಗಳಲ್ಲಿರುತ್ತಿದ್ದ ಮರಿಗಳಿಗೆ ತುತ್ತಿಕ್ಕುತ್ತಿದ್ದ ನೋಟ ಈಗಲೂ ಪುಳಕ ಹುಟ್ಟಿಸುತ್ತದೆ. ಹಿಂಗೆ ಸರಿಯಾಗಿ ಹಾರಲು ಬಾರದ ಎಳೆಯ ಮರಿಗಳನ್ನು ಬಿಟ್ಟು ಹೋಗಿದ್ದ ಗಿಣಿಗಳ ಗೂಡಿಂದ ಕೆಳಕ್ಕೆ ಬಿದ್ದಿದ್ದವು ಅಂತ ಮೂರ್ತಿ ಒಂದು ದಿನ ಮೂರು ಮರಿಗಳನ್ನು ತಂದು ಪಡಸಾಲೆಯಲ್ಲಿ ದೊಡ್ಡ ಮಂಕರಿಯಡಿಯಲ್ಲಿ ಅವುಗಳನ್ನು ಕವುಚಿದ್ದ. ಆಗ ನಾವಿಬ್ಬರೂ ಒಂಭತ್ತನೆಯ ಕ್ಲಾಸಿನಲ್ಲಿದ್ದೆವು. ಮೂರ್ತಿ ಮರಗಳನ್ನು ಹತ್ತುವುದರಲ್ಲಿ ನಿಸ್ಸೀಮ. ಹಂಗಾಗಿ ಆ ಮರಿಗಳು ನಿಜಕ್ಕೂ ಕೆಳಕ್ಕೆ ಬಿದ್ದಿದ್ದವೋ ಅಥವಾ ಗಿಣಿಗಳು ಇಲ್ಲದ ಹೋತ್ತಲ್ಲಿ ಇವನೇ ಮರ ಹತ್ತಿ, ಗೂಡಿಗೆ ಕೈ ಹಾಕಿ ತಗಂಡು ಬಂದಿದ್ದನೋ ಗೊತ್ತಿಲ್ಲ. ಗುಚ್ಚಕ್ಕಿ ಮರಿಗಳು ನಮಗೆ ಸಾಮಾನ್ಯವಾಗಿ ಸಿಕ್ಕಿಬಿಡುತ್ತಿದ್ದವು. ಏಕೆಂದರೆ ಅವು ತುಂಬಾ ಎತ್ತರದಲ್ಲಿ ಗೂಡು ಕಟ್ಟುತ್ತಿರಲಿಲ್ಲ. ಆದರೆ ಗಿಣಿ ಮರಿಗಳು ಮಾತ್ರ ಸಿಗುತ್ತಿರಲಿಲ್ಲ. ಈ ಕಾರಣಕ್ಕೆ ಮೂರ್ತಿ ತಂದಿದ್ದ ಗಿಣಿ ಮರಿಗಳು ನನಗೂ ತುಂಬಾ ಇಷ್ಟವಾಗಿದ್ದವು. ಮೂರ್ತಿಗೆ ಆ ಮರಿಗಳಿಗೆ ಬೇಕಾದ ಆಹಾರ ಯಾವುದೆಂದು ಚೆನ್ನಾಗಿ ಗೊತ್ತಿತ್ತು. ದ್ವಾರಗಾಯಿ ಅಥವಾ ಚೆನ್ನಾಗಿ ಹಣ್ಣಾಗಿರುತ್ತಿದ್ದ ಸೀಬೆ, ಎರದೆ ಹಣ್ಣು ಹಾಗೂ ಪರಂಗಿ ಕೆಂಗುಗಳನ್ನು ಸಣ್ಣಗೆ ತುಂಡು ಮಾಡಿ ಮಂಕರಿಯೊಳಕ್ಕೆ ತಂದು ಹಾಕುತ್ತಿದ್ದ. ಹಂಗೇನೇ ಮಡಕೆಯ ಮುಚ್ಚಳವೊಂದರಲ್ಲಿ ಕುಡಿಯಲು ನೀರು ಇಡುತ್ತಿದ್ದ. ಹಿಂಗೇ ತಿಂಗಳೊಪ್ಪತ್ತು ಅನ್ನುವುದರೊಳಗೆ ಆ ಹಕ್ಕಿಗಳು ಮೂರ್ತಿಗೆ ಚೆನ್ನಾಗಿಯೇ ಒಗ್ಗಿಕೊಂಡವು. ಅವನು ಅವುಗಳನ್ನು ಆಗಾಗ ಆಚೆ ತೆಗೆದು ಅಂಗೈಗಳ ಮೇಲೆ ಬಿಟ್ಟುಕಂಡು ಆಟ ಆಡಿಸುತ್ತಿದ್ದ. ಹಂಗೆ ಆಟ ಆಡುವಾಗ ಅವುಗಳು ಪುರ‍್ರಂತ ಒಂಚೂರು ಮೇಲಕ್ಕೆ ಹಾರಿ ಮತ್ತೆ ಅಲ್ಲಿಗೇ ಬಂದು ಕೂರುತ್ತಿದ್ದವು. ಅವುಗಳ ಆ ಕಡು ಹಸಿರನ್ನು ಎಷ್ಟು ನೋಡಿದರೂ ನುಣುಪಾದ ಮೈ ಎಷ್ಟು ಸಾರ್ತಿ ಸವರಿದರೂ ಸಮಾಧಾನವಾಗುತ್ತಿರಲಿಲ್ಲ. ಅಷ್ಟು ಚೆನ್ನಾಗಿ ಮೂರ್ತಿಗೆ ಒಗ್ಗಿಕೊಂಡಿದ್ದ ಅವುಗಳು ನಾನು ಮುಟ್ಟಿದರೆ ಸಾಕು ಎಳೆಯ ಕೊಕ್ಕುಗಳಿಂದ ಕುಕ್ಕಿಬಿಡುತ್ತಿದ್ದವು.

ಈ ಹಕ್ಕಿಗಳು ಬೆಳೆದು ದೊಡ್ಡವಾದವು. ತೋಟದಲ್ಲಿ ಅವುಗಳ ಎದುರಿಗೆ ಗಿಣಿಗಳ ಹಿಂಡೇ ಓಡಾಡಿದರೂ ಅವುಗಳ ಚಿತ್ತ ಅತ್ತ ಇರುತ್ತಿರಲಿಲ್ಲ. ಮಂಕರಿಯೊಳಗಿಂದ ಬಿಡುಗಡೆಯಾದ ಅವುಗಳು ಮನೆಯೊಳಗೆಲ್ಲಾ ಅಡ್ಡಾಡುತ್ತಿದ್ದವು. ಮನೆಯಿಂದ ಆಚೆ ಹೋಗಿ ಮನೆಯ ಎದುರಿಗಿದ್ದ ಪರಂಗಿ, ನಿಂಬೆ ಮತ್ತು ಎಳ್ಳಿ ಗಿಡಗಳ ಮೇಲೆ ಕೂತು ಆಡಿಕೊಳ್ಳುತ್ತಿದ್ದವು. ಸಂಜೆಯಾಗುತ್ತಲೇ ಪಡಸಾಲೆಯಲ್ಲಿ ಚಾಪೆಗಳನ್ನು ಇಡುವ ಸಲುವಾಗಿ ಮಾಡಿದ್ದ ಸ್ಟ್ಯಾಂಡಿನಲ್ಲಿ ಚಾಪೆಗಳ ಮೇಲೆ ಕೂರುತ್ತಿದ್ದವು. ಮೂರ್ತಿ ಮನೆಯಲ್ಲಿದ್ದರೆ ಅವುಗಳೊಂದಿಗೆ ಆಡುತ್ತಿದ್ದ. ಆಗವನು ಅವುಗಳೊಂದಿಗೆ ಏನೇನೋ ಮಾತನಾಡುತ್ತಿರುತ್ತಿದ್ದ. ಆ ಮಾತುಗಳು ಅವುಗಳಿಗೆ ಅರ್ಥವಾದಂತೆ ಅವನ ಭುಜ, ತಲೆಗಳ ಮೇಲೆಲ್ಲಾ ಪುರುಗುಡುತ್ತಿದ್ದವು. ಈ ಕಾರಣಕ್ಕೇ ನನ್ನ ವಾರಿಗೆಯ ಹುಡುಗರು ಅವನಿಗೆ ಗಿಣಿ ಮೂರ್ತಿ ಅಂತ ಅಡ್ಡೆಸರು ಇಟ್ಟಿದ್ದರು. ಅವನು ಹತ್ತನೆಯ ಕ್ಲಾಸು ಮುಗಿಸಿ ಊರಿಗೆ ಹೋಗುವಷ್ಟರ ಹೊತ್ತಿಗೆ ಗಿಣಿಗಳು ಮೈ ಕೈ ತುಂಬಿಕೊಂಡಿದ್ದವು. ಯಾರಿಗೂ ಹೆದರದೆ ಮನೆಯಂಥ ಮನೆಯನ್ನೆಲ್ಲಾ ಪುಳುಗುಡುತ್ತಿದ್ದವು. ಪರೀಕ್ಷೆ ಮುಗಿಸಿ ಊರಿಗೆ ಹೋದ ಮೂರ್ತಿ ಮತ್ತೆ ಮಾಕಳ್ಳಿಗೆ ಬರಲಿಲ್ಲ. ದಿನದಿಂದ ದಿನಕ್ಕೆ ಗಿಣಿಗಳು ಮಂಕಾಗತೊಡಗಿದವು. ನಾನು ಎಷ್ಟೇ ನಿಗಾ ಮಾಡಿದರೂ ಗಿಣಿಗಳು ಗೆಲುವು ಕಾಣಲಿಲ್ಲ. ತಮ್ಮ ಗೆಳೆಯನಿರದ ಮನೆಯಲ್ಲಿ ತಾವು ಯಾಕಿರಬೇಕು ಅನಿಸಿರಬೇಕು ಅವುಗಳಿಗೆ. ಅದೊಂದು ದಿನ ಹಿಂಗೇ ಆಡಿಕಂಡಿದ್ದ ಗಿಣಿಗಳು ಮಂಗಮಾಯವಾದವು. ತಿರುಗಿ ಬರಲೇ ಇಲ್ಲ. ತೋಟದಲ್ಲಿ ಹಾರಾಡುತ್ತಿದ್ದ ಪ್ರತಿ ಗಿಣಿಯಲ್ಲೂ ಸುಮಾರು ದಿನ ಇವುಗಳಿಗಾಗಿ ಕಣ್ಣು ನೆಡುತ್ತಿದ್ದೆ. ಆದರೆ ಅದರಿಂದ ಏನೂ ಉಪಯೋಗವಾಗಲಿಲ್ಲ. ಹೋದವುಗಳು ಹೋಗಿಯೇಬಿಟ್ಟವು. ಈಗ ಹಳ್ಳಿಗಳಲ್ಲಿ ಗುಚ್ಚಕ್ಕಿಗಳು ಇಲ್ಲ. ನಮ್ಮ ತೋಟದಲ್ಲಿ ಎರಡು ಗಿಣಿಮೂತಿ ಮಾವಿನ ಮರಗಳಿವೆ. ಅವುಗಳು ಕಾಯಿ ಬಿಟ್ಟ ಹೊತ್ತಲ್ಲಿ ಕೆಲವೊಮ್ಮೆ ಗಿಣಿಗಳ ಹಿಂಡು ಕಾಣಿಸಿಕೊಳ್ಳುತ್ತದೆ. ಮಿಕ್ಕಂತೆ ಈ ಮರಗಳು ಈಗ ನವಿಲಿನ ಮನೆಗಳಾಗಿವೆ. ನಾನು ತೋಟಕ್ಕೆ ಹೋದಾಗ ಆ ಮಾವಿನ ಮರಗಳನ್ನು ಸಮೀಪಿಸುತ್ತಲೇ ಒಂದೆರಡು ಗಂಡು ನವಿಲುಗಳು ಆ ಮರಗಳ ನಡುವಿಂದ ಪುಕ್ಕಗಳನ್ನೆಲ್ಲಾ ಉಂಡುಗಟ್ಟಿಕಂಡು ಪುರ‍್ರನೆ ಹಾರಿ ಹೋಗುತ್ತವೆ. ಆಗವುಗಳ ಉದ್ದದ ಹಸಿರು ಪುಕ್ಕಗಳನ್ನು ಮತ್ತವುಗಳ ನಡುವಿನ ಕಣ್ಣುಗಳನ್ನು ನೋಡುವುದೇ ಸೊಗಸು.

*****

ನಾನು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದಾಗ ಆ ಕಾಲೇಜಿನ ಲೈಬ್ರಿರಿಯಲ್ಲಿ ಒಂದು ದಿನ ಸಲೀಂ ಅಲಿಯವರ `ದ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಅನ್ನುವ ಪುಸ್ತಕ ಕಣ್ಣಿಗೆ ಬಿದ್ದಿತ್ತು. ಕುತೂಹಲಕ್ಕೆಂದು ತೆಗೆದು ನೋಡಿದ್ದೆ. ಆ ಪುಸ್ತಕದೊಳಗೆ ನೂರಾರು ಬಗೆಯ ಹಕ್ಕಿಗಳ ಬಣ್ಣದ ಪಟಗಳು ಹಾಗೂ ಅವುಗಳ ಬಗೆಗಿನ ವಿವರಗಳಿದ್ದವು. ಅಲ್ಲಿಂದ ಆ ಪುಸ್ತಕ ನನ್ನ ಮೆಚ್ಚಿನ ಪುಸ್ತಕವಾಯ್ತು. ಮುಂದೆ ತೇಜಸ್ವಿಯವರ `ಕನ್ನಡ ನಾಡಿನ ಹಕ್ಕಿಗಳು’ ಸರಣಿಯ `ಮಿಂಚುಳ್ಳಿ’, `ಹೆಜ್ಜೆ ಮೂಡದ ಹಾದಿ’ಗಳು ಆ ಪುಸ್ತಕದ ಜತೆಗೂಡಿದವು. ಈ ಬಗ್ಗೆ ಒಂಚೂರು ಆಸಕ್ತಿ ಜಾಸ್ತಿಯಾದಂತೆ ಆರ್.ಇ.ಹಾಕಿನ್ಸ್ ಎಂಬುವರು ಸಂಪಾದಿಸಿರುವ `ಎನ್‌ಸೈಕ್ಲೋಪೀಡಿಯಾ ಆಫ್ ಇಂಡಿಯನ್ ನ್ಯಾಚುರಲ್ ಹಿಸ್ಟರಿ’, ಲೈಫ್ ಮ್ಯಾಗಝಿನ್ ರವರು ಪ್ರಕಟಿಸಿರುವ ಸರಣಿಯ `ಲೈಫ್ ನೇಚರ್ ಲೈಬ್ರರಿ’ಯ `ಅನಿಮಲ್ ಬಿಹೇವಿಯರ್’ `ರ‍್ಲಿ ಮ್ಯಾನ್’, `ಅನಿಮಲ್ ಬಿಹೇವಿಯರ್’ ಮುಂತಾದವುಗಳು ಪ್ರಾಣಿ ಪಕ್ಷಿ ಲೋಕದ ವಿಸ್ಮಯಗಳ ಬಗ್ಗೆ ಸದಾ ಜತೆಯಲ್ಲಿರಬೇಕಾದ ಹೊತ್ತಿಗೆಗಳು ಅನಿಸಿದವು. ಹಂಗಾಗಿ ಇವು ಖಾಯಮ್ಮಾಗಿ ನನ್ನ ಪುಸ್ತಕ ಸಂಗ್ರಹಕ್ಕೆ ಸೇರಿಕೊಂಡವು.

ಆದರೆ ಚಿಕ್ಕಂದಿನಲ್ಲಿ ನನಗೆ ಹಕ್ಕಿ ಪ್ರೀತಿಯ ಸವಿಯುಣಿಸಿದ್ದ ನಮ್ಮ ಮೂರ್ತಿಯಂಥವರು ಹಲವರಿದ್ದಾರೆ. ಪ್ರಕೃತಿ ವಿಸ್ಮಯಗಳ ಬಗ್ಗೆ ಕುತೂಹಲ ಹುಟ್ಟಿಸಿದ್ದ ಇವರೇ ನನ್ನ ಸಲೀಂ ಅಲಿಗಳು. ಈ ಸಾಲಿನಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದಾರೆ. ಹಂಗೆ ನೋಡಿದರೆ ಮೂರ್ತಿಗಿಂತಲೂ ಓನಂ ಪ್ರಥಮಕ್ಕೆ ಈ ಬಗ್ಗೆ ನನ್ನನ್ನು ಅಚ್ಚರಿಯ ಲೋಕದಲ್ಲಿ ಮುಳುಗಿಸುತ್ತಿದ್ದವರು. ಇವರದೂ ಮೂರ್ತಿ ಊರು ಮದ್ಲಿಹಳ್ಳಿ. ಹೆಸರು ರಾಜು. ನನಗೆ ರಾಜಣ್ಣನಾಗಿದ್ದವರು. ಆ ದಿನಗಳಲ್ಲಿ ಅವರು ತೋರಾಕಿದ ಆ ಹಕ್ಕಿಗಳು ಎಂಥವುಗಳು? ಅವುಗಳ ಹೆಸರೇನು? ಅಂತ ನನಗೆ ಈಗಲೂ ಗೊತ್ತಿಲ್ಲ. ಮೊಟ್ಟ ಮೊದಲ ಬಾರಿಗೆ ಅವರು ಹಸಿರು ಬೇಲಿಯ ಕಡ್ಡಿಯೊಂದರಲ್ಲಿ ಇಟ್ಟಿದ್ದ ಕಡ್ಡಿ ಜೇನನ್ನು ಹುಳುಗಳ ಮುಲುಗುಡುವಿಕೆಯಿಂದಲೇ ಗುರುತಿಸಿ ತೋರಿಸಿದ್ದ ಆ ಚಣದ ಪುಳಕ ಇನ್ನೂ ಮಾಸಿಲ್ಲ.

ಆಗ ಮಿಡ್ಲ್ ಸ್ಕೂಲಿನಲ್ಲಿದ್ದೆ. ಎತ್ತರದ ಆಳು. ಬೆಳ್ಳನೆಯ ಬಣ್ಣ. ದುಂಡು ಮುಖ. ದುಂಡಗೆ ಮೈ ಕೈ ತುಂಬಿಕೊಂಡಿದ್ದರು. ಮದುವೆಯಾಗಿದ್ದರೆ ಅವರಿಗೆ ಆ ಕಾಲಕ್ಕೇ ನನ್ನ ವಯಸ್ಸಿನ ಮಕ್ಕಳಿರುತ್ತಿದ್ದರು. ಇಂಥ ರಾಜಣ್ಣಿಗೆ ಎರಡೂ ಕಣ್ಣೂ ಇರಲಿಲ್ಲ. ಪೂರಾ ಕುರುಡಾಗಿದ್ದರು. ಇದು ಹುಟ್ಟಿನಿಂದ ಬಂದದ್ದಲ್ಲ. ಇವರು ಹೈಸ್ಕೂಲ್ ಓದುವ ಕಾಲದಲ್ಲಿ ಒಮ್ಮೆ ಹಬ್ಬಕ್ಕೆಂದು ನೆಂಟರ ಮನೆಗೆ ಹೋಗಿದ್ದರಂತೆ. ಆ ಮನೆಯ ಮೂಲೆಯೊಂದರಲ್ಲಿ ಮದ್ದು ತುಂಬಿಸಿ ನಿಲ್ಲಿಸಿದ್ದ ಜೋಡಿ ನಳಿಗೆಯ ಬಂದೂಕೊಂದು ಇವನ ಕಣ್ಣಿಗೆ ಬಿದ್ದಿದೆ. ಕುತೂಹಲ ತಡೆಯಲಾರದೆ ಇವರು ಬಂದೂಕಿನ ಹತ್ತಿರಕ್ಕೆ ಹೋಗಿ ಅದರ ಕುದುರೆಯನ್ನು ಮೀಟಿ ಬಿಟ್ಟಿದ್ದಾರೆ. ಆಗ ಸಿಡಿದ ಅದರೊಳಗಿನ ಮದ್ದು ಸೀದಾ ಇವರ ಕಣ್ಣುಗಳನ್ನು ಹೊಕ್ಕು ಅವರ ಕಣ್ಣ ಬೆಳಕನ್ನು ಶಾಶ್ವತವಾಗಿ ಇನ್ನಿಲ್ಲವಾಗಿಸಿಬಿಟ್ಟಿತ್ತು.

ನನಗೆ ಪರಿಚಯವಾಗುವ ಹೊತ್ತಿಗೆ ಈ ಸ್ಥಿತಿಗೆ ಬಂದು ಆಗಲೇ ಸುಮಾರು ವರ್ಷಗಳೇ ಕಳೆದಿದ್ದವು. ಅದಕ್ಕವರು ಪೂರಾ ಹೊಂದಿಕೊಂಡಿದ್ದರು. ನಾನು ಮದ್ಲಿಹಳ್ಳಿಗೆ ಆಗಾಗ ಹಬ್ಬಗಳಿಗೆ, ಜಾತ್ರೆಗಳಿಗೆ ಅಂತ ಹೋಗುತ್ತಿದ್ದರೂ ಬೇಸಿಗೆಯ ರಜಾದಲ್ಲಂತೂ ಕಡ್ಡಾಯವಾಗಿ ಹೋಗುತ್ತಿದ್ದೆ. ಹಳ್ಳಿಯನ್ನು ತಲುಪುತಿದ್ದಂತೆ ಅಜ್ಜಿಯ ಮನೆಯಲ್ಲಿ ಒಂದಷ್ಟು ಹೊತ್ತು ಕಳೆಯುವುದರೊಳಗೆ ಸಾಕಾದಂತೆ ಅನಿಸಿ ಸೀದಾ ರಾಜಣ್ಣನ ಮನೆಗೆ ಓಡಿಬಿಡುತ್ತಿದ್ದೆ. ಅದಕ್ಕೆ ಕಾರಣ ಅವರಾಗಲೇ ನನಗೆ ತೋರಿಸಿಕೊಟ್ಟಿದ್ದ ಹಕ್ಕಿಗಳ ಲೋಕ. ರಾಜಣ್ಣನೂ ಅಷ್ಟೇ ನನ್ನ ದನಿಯನ್ನು ಕೇಳುತ್ತಿದಂತೆಯೇ ಗೆಲುವಾಗಿಬಿಡುತ್ತಿದ್ದರು. ಅದು ಹೊತ್ತು ಯಾವುದೇ ಆಗಿರಲಿ ರಾತ್ರಿಯೊಂದನ್ನು ಬಿಟ್ಟು ತೋಟಕ್ಕೆ ಕರೆದುಕೊಂಡು ಹೋಗುವಂತೆ ರಾಜಣ್ಣನನ್ನು ಪೀಡಿಸುತ್ತಿದ್ದೆ.

ರಾಜಣ್ಣನ ತೋಟಕ್ಕೆ ಹೋಗಬೇಕು ಅಂದರೆ ಹಳ್ಳಿಯ ಪಕ್ಕದಲ್ಲಿದ್ದ ರೈಲು ರಸ್ತೆಯನ್ನು ದಾಟಬೇಕಿತ್ತು. ನಾನು ರಾಜಣ್ಣನ ಒಂದು ಕೈ ಹಿಡಿದುಕೊಳ್ಳುತ್ತಿದ್ದೆ. ಅವರು ಮತ್ತೊಂದು ಕೈಯ್ಯನ್ನು ನನ್ನ ಹೆಗಲ ಮೇಲಾಕಿಕೊಂಡು ರೈಲು ರಸ್ತೆಯನ್ನು ದಾಟಿ ತೋಟದತ್ತ ನಡೆಯುತ್ತಿದ್ದರು. ರಾಜಣ್ಣ ತೋಟದೊಳಕ್ಕೆ ಕಾಲಿಟ್ಟರೆ ಸಾಕು ಕೆಲವು ಹಕ್ಕಿಗಳು ಚಿಲಿಪಿಲಿಗಿಟ್ಟುಕೊಳ್ಳುತ್ತಿದ್ದವು. ಆಗವರು ಜೋರಾಗಿ ಒಂದು ಕೂಗು ಹಾಕುತ್ತಿದ್ದರು. ಆ ಕೂಗು ಇಡೀ ತೋಟದೊಳಗೆಲ್ಲಾ ಮರುದನಿಗೈಯ್ಯುತ್ತಿತ್ತು. ಅಂತೆಯೇ ಇವರು ಸಾಕಿದ್ದ ಹಕ್ಕಿಗಳು ಓಗೊಡುತ್ತಿದ್ದವು. ಆಗಿವರು ಅವುಗಳಿಗಾಗಿ ಮನೆಯಿಂದ ತುಂಬಿಕೊಂಡು ಬಂದಿರುತ್ತಿದ್ದ ಥರಾವರಿ ಕಾಳುಗಳನ್ನು ಚೆಡ್ಡಿ ಜೇಬಿನಿಂದ ಹೊರ ತೆಗೆದು ಹತ್ತಿರದಲ್ಲೇ ಎರಚುತ್ತಿದ್ದರು. ಹಕ್ಕಿಗಳು ಮುಗಿಬೀಳುತ್ತಿದ್ದವು. ಆಗ ನನ್ನ ಕುತೂಹಲ ಆ ಹಕ್ಕಿಗಳಿಂದ ಹಿಡಿದು ಎದುರಿಗಿದ್ದ ಮಂಚಿಗೆಯತ್ತ ಹೋಗುತ್ತಿತ್ತು. ಮಂಚಿಗೆಯನ್ನು ಹತ್ತಿ ನೋಡಿದರೆ ಮಂಚಿಗೆಯ ಮೂಲೆಗಳಲ್ಲಿ ಹಲವು ಹಕ್ಕಿ ಗೂಡುಗಳಿರುತ್ತಿದ್ದವು. ಕೆಲವು ಗೂಡುಗಳಲ್ಲಿ ಮೊಟ್ಟೆಗಳಿರುತ್ತಿದ್ದವು. ಮತ್ತೆ ಕೆಲವರಲ್ಲಿ ಹೂ ಮರಿಗಳು. ಯಾವುದೇ ಕಾರಣಕ್ಕೂ ಮೊಟ್ಟೆಗಳನ್ನಾಗಲಿ ಮರಿಗಳನ್ನಾಗಲಿ ಮುಟ್ಟಬಾರದೆಂಬ ರಾಜಣ್ಣನ ಕಟ್ಟಪ್ಪಣೆ ಇರುತ್ತಿತ್ತು. ಆದರೆ ಅದನ್ನು ಕೆಲವೊಮ್ಮೆ ಮುರಿದು ಎಷ್ಟೊ ಸಾರ್ತಿ ಬರೀ ಮುಟ್ಟುವುದಷ್ಟೇ ಅಲ್ಲ ಅವುಗಳನ್ನು ಎತ್ತಿ ಕೊಂಚ ಹೊತ್ತು ಅಂಗೈಯಲ್ಲಿಟ್ಟು ಅವುಗಳ ನುಣ್ಣನೆಯ ಮೈ ಮುಟ್ಟುತ್ತಾ ರೋಮಾಂಚನಗೊಳ್ಳುತ್ತಿದ್ದೆ. ರಾಜಣ್ಣಗೆ ಇದು ಅರಿವಾಗುತ್ತಿತ್ತೋ ಏನೋ `ಬಾ ಕೆಳಗಿಳ್ದು ಬೇಗ’ ಅಂತ ಅವಸರಿಸುತ್ತಿದ್ದರು.

ಪಕ್ಷಿಗಳ ಬಗೆಗಿನ ಇಂಥ ಮೋಹ ಕುರುಡುತನಕ್ಕೂ ಮುಂಚಿನಿಂದಲೂ ಇತ್ತು. ಆಗೆಲ್ಲಾ ಇವರು ತನ್ನ ನಿತ್ಯದ ಆಟ ಪಾಟಗಳ ನಡುವೆ ಬಿಡುವು ಮಾಡಿಕೊಂಡು ತೋಟದಲ್ಲಿ ಗುಡಿಸಲನ್ನು ಕಟ್ಟಿ ಅದರೊಳಗೆ ಥರಾವರಿ ಹಕ್ಕಿಗಳನ್ನು ಸಾಕುತ್ತಿದ್ದರಂತೆ. ಅದೇ ರೀತಿ ಗುಡಿಸಲನ್ನು ಕಾಲ ಕಾಲಕ್ಕೆ ಒಪ್ಪ ಮಾಡುತ್ತಾ ಬಿಡುವು ಸಿಕ್ಕಾಗೆಲ್ಲಾ ಅಲ್ಲೇ ಹೆಚ್ಚು ಹೊತ್ತು ಕಳೆಯುತ್ತಿದ್ದನಂತೆ. ಜತೆಗೆ ತನ್ನಂತೆ ಆಸಕ್ತಿ ಇರುವ ಮಕ್ಕಳನ್ನೆಲ್ಲಾ ಕೂಡಿಸಿಕೊಂಡು ಅಲ್ಲಿಗೆ ಕರೆದುಕೊಂಡು ಹೋಗಿ ಹಕ್ಕಿಗಳ ಸಂಸಾರಗಳನ್ನು ತೋರಿಸುತ್ತಾ ಆ ಎಳೆಯ ಎದೆಗಳೊಳಗೆ ಸಂತಸದ ಅಲೆಗಳೆಬ್ಬಿಸುತ್ತಿದ್ದರಂತೆ. ಇಂಥ ನಿಷ್ಕಲ್ಮಷ ಮನಸ್ಸಿನ ರಾಜಣ್ಣ ಒಂದು ದಿನ ಒಬ್ಬರೇ ತೋಟದಲ್ಲಿ ಹಕ್ಕಿಗಳ ಕಲರವದೊಂದಿಗೆ ಖುಷಿಯಲ್ಲಿ ತೇಲಾಡುವ ಹೊತ್ತಲ್ಲಿ ಅಕಸ್ಮಾತ್ತಾಗಿ ಕಾಲು ಜಾರಿ ತೋಟದಲ್ಲಿದ್ದ ಹಾಳು ಬಾವಿಗೆ ಬಿದ್ದು ಅಸುನೀಗುತ್ತಾರೆ. ಆ ಮೂಲಕ ನನ್ನಂಥ ಅನೇಕ ಮನಸ್ಸುಗಳಲ್ಲಿ ಮರೆಯಲಾಗದ ನೋವಾಗಿ ನಿಂತುಬಿಡುತ್ತಾರೆ. ಅಂತೆಯೇ ತಮ್ಮನ್ನು ಪೊರೆಯುತ್ತಿದ್ದ ಜೀವದ ಗೆಳೆಯನೊಬ್ಬನನ್ನು ಆ ಹಕ್ಕಿಗಳು ಕಳೆದುಕೊಳ್ಳುತ್ತವೆ.

ಈ ರಾಜಣ್ಣ ಮತ್ತು ಮೂರ್ತಿಯಂತೆ ಈ ಪ್ರಾಣಿ ಪಕ್ಷಿಗಳ ವಿಸ್ಮಯ ಲೋಕದಲ್ಲಿ ಒಂದಷ್ಟು ದಿನ ನಡೆದಾಡಿಸಿದ್ದವರಲ್ಲಿ ಅಲೆಮಾರಿ ಗೆಳೆಯ ಮುಂಗುಸಿ ಭದ್ರನೂ ಇದ್ದಾನೆ. ತನ್ನ ಅಲೆಮಾರಿ ಲೋಕದ ಅಪ್ಪಟ ದೇಸೀ ಜ್ಞಾನದೊಂದಿಗೆ ಭದ್ರ ಕುತೂಹಲದ ಕಡಲೇ ಆಗಿದ್ದ. ಇವನಿಗೆ ಕಾಡಿನ ಒಂದೊಂದು ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರ ತಿಳುವಳಿಕೆ ಇರುವುದರ ಜತೆಗೆ ಇಡೀ ಕಾಡ ಬದುಕಿನ ಬಗ್ಗೆ ಇವನಿಗಿದ್ದ ಸೂಕ್ಷ್ಮತೆಗಳು ಅಂದಿಗಿಂತ ಈಗ ನನ್ನನ್ನು ಅಚ್ಚರಿಗೊಳಿಸುತ್ತವೆ. ಕಾಡಿನಲ್ಲಿ ಹತ್ತಾರು ಬಗೆಯ ಹಕ್ಕಿಗಳನ್ನು ಅವುಗಳ ಕೂಗಿನಿಂದಲೇ ಇಂಥದ್ದೇ ಅಂತ ಹೇಳುತ್ತಿದ್ದ. ಅಪ್ಪಟ ಅಲೆಮಾರಿ ಗುಣದ ಈ ಭದ್ರ ಸ್ಕೂಲಿನ ಮುಖ ನೋಡಿದವನಲ್ಲ. ಅಕ್ಷರಗಳ ಮುಖೇನಾ ತನ್ನ ಸುತ್ತಲ ಬದುಕನ್ನು ನಿಲುಕಿಸಿಕೊಂಡವನಲ್ಲ. ಇಂಥ ಭದ್ರ ನನಗೆ ಮೊಲ, ಉಡ, ಹುಲ್ಲೇಕರ, ಕಾಡಂದಿ, ಮುಳ್ಳಂದಿ, ಮುಂಗುಸಿ, ಕಾಡಬೆಕ್ಕು, ಕಾಡುಕೋಳಿ, ಕಾಡು ಈರುಳ್ಳಿ ಮುಂತಾದವುಗಳನ್ನು ತೋರಾಕಿದ್ದ. ಇವನು ವಾಸಿಸುತ್ತಿದ್ದ ಗುಡಾರಗಳು ಅದೊಂದು ದಿನ ಬೆಂಕಿಗೆ ಆಹುತಿಯಾದ ಲಾಗಾಯ್ತಿನಿಂದ ಅವನು ಮತ್ತಿನ್ಯಾವತ್ತೂ ನನಗೆ ಸಿಗಲಿಲ್ಲ. ಆದರೆ ಆ ನಂತರದ ದಿನಗಳಲ್ಲಿ ದನಕರುಗಳನ್ನು ಮೇಸಲು, ಸೌದೆ ತರಲು, ಮಗ್ಗಲು ಸೊಪ್ಪು ತರಲು ನನ್ನೂರಿನ ಪಕ್ಕದ ಪುಟ್ಟ ಕಾಡಿಗೆ ಹೋದಾಗ ಅಂದು ಈ ಭದ್ರ ಹುಟ್ಟಿಸಿದ್ದ ಕುತೂಹಲ ಮತ್ತು ಅಚ್ಚರಿಗಳು ನನಗೆ ಕಾಡನ್ನು ನೋಡುವ ಪರಿಯನ್ನೇ ಬದಲಿಸಿದ್ದವು.

ಇನ್ನು ಇವನ ಹೆಸರು ಚಿಕ್ಕ. ಪ್ರೈಮರಿ ಸ್ಕೂಲಿನಲ್ಲಿ ಜತೆಗೆ ಓದಿದವನು. ಅಂತೆಯೇ ಅಲ್ಲಿಗೇ ಓದನ್ನು ಬಿಟ್ಟವನು. ಇಂಥ ಚಿಕ್ಕ ಮೂರು ನವಿಲು ಮರಿಗಳನ್ನು ಸಾಕುವುದರೊಂದಿಗೆ ಇಡೀ ಊರಿನಲ್ಲಿ ನವಿಲುಗಳ ಬಗ್ಗೆ ಪ್ರೀತಿ ಹುಟ್ಟಿಸಿದ್ದ. ಆಗ ಈಗಿನಂತೆ ನವಿಲುಗಳು ತುಂಬಾ ಅಪರೂಪದ ಪ್ರಾಣಿಗಳಾಗಿದ್ದವು. ನನಗಂತೂ ಮುಂಚಿನಿಂದಲೂ ಈ ನವಿಲುಗಳ ಬಗ್ಗೆ ಇನ್ನಿಲ್ಲದ ಅಕ್ಕರೆ. ತಿಪಟೂರಿನ ಪಕ್ಕದ ಊರಾದ ರಂಗಾಪುರದ ಮಠದಲ್ಲಿ ಆ ಕಾಲಕ್ಕೆ ಒಂದೇ ಒಂದು ನವಿಲನ್ನು ಸಾಕಿದ್ದರು. ನನಗೆ ಬಸವಣ್ಣ ಅನ್ನುವ ಚಿಕ್ಕಪ್ಪ ಒಬ್ಬರಿದ್ದರು. ತುಂಬಾ ಮೃದು ಸ್ವಭಾವದವರು. ಒಮ್ಮೆ ಅವರನ್ನು ಕಾಡಿಬೇಡಿ ನವಿಲು ನೋಡುವ ಸಲುವಾಗಿ ಈ ಮಠಕ್ಕೆ ಕರಕಂಡು ಹೋಗಿದ್ದೆ. ಇಂಥ ಅಪರೂಪದ ನವಿಲುಗಳು ಚಿಕ್ಕನಿಂದಾಗಿ ನನ್ನೂರಿನ ಬೀದಿಗಳಲ್ಲಿ ನಾಯಿ, ಕೋಳಿ, ಬೆಕ್ಕು ಮುಂತಾದ ಪ್ರಾಣಿಗಳಂತೆ ಅಡ್ಡಾಡುತ್ತಿರುವ ದೃಶ್ಯ ನನ್ನನ್ನು ಅಪಾರ ಖುಷಿಗೆ ತಳ್ಳುತ್ತಿತ್ತು. ಗೆಳೆಯ ಚಿಕ್ಕನಿಗೆ ಅದೊಂದು ದಿನ ಮೇಕೆಗಳನ್ನು ಮೇಸಲು ಹೋದಂಥ ಹೊತ್ತಲ್ಲಿ ಪೊದೆಯೊಂದರಲ್ಲಿ ಮೂರು ನವಿಲಿನ ಮೊಟ್ಟೆಗಳು ಸಿಕ್ಕಿದ್ದವು. ಅವನು ಅವುಗಳನ್ನು ಜೋಪಾನವಾಗಿ ಮನೆಗೆ ತಂದು ಕೋಳಿ ಮೊಟ್ಟೆಗಳ ಜತೆಗಿಟ್ಟು ಕೋಳಿಗಳಿಂದ ಕಾವು ಕೊಡಿಸುತ್ತಾನೆ. ಆ ಮೊಟ್ಟೆಗಳು ಮರಿಯಾದರೂ ಆ ಕೋಳಿಗಳ ಹಿಂಡಿನಲ್ಲೇ ಬಿಡುತ್ತಾನೆ. ಕೋಳಿಗಳೊಂದಿಗೆ ಬೆಳೆದ ನವಲಿಲು ಮರಿಗಳು ಕೊಂಚ ದೊಡ್ಡವಾದ ಮೇಲೆ ಊರಾಡಿಕೊಂಡು ಸಂಜೆಗೆ ತಪ್ಪದೆ ಬರುತ್ತಿದ್ದವು. ಹಿಂಗೆ ಊರೆಲ್ಲಾ ಅಡ್ಡಾಡುತ್ತಿದ್ದ ನವಿಲುಗಳು ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತುಂಬಾ ಇಷ್ಟದ ಪ್ರಾಣಿಗಳಾಗಿಬಿಡುತ್ತವೆ. ಅವು ಮತ್ತಷ್ಟು ಬೆಳೆದು ಅವಕ್ಕೆ ಸಣ್ಣಗೆ ಗರಿಗಳು ಮೂಡತೊಡಗಿ, ಆ ಗರಿಗಳೊಳಗೆ ಹಸಿರು ಕಣ್ಣುಗಳು ಗೋಚರಿಸತೊಡಗಿದಂತೆ ಈ ಮರಿಗಳು ಹಾರುವುದನ್ನು ಕಲಿಯುತ್ತವೆ. ಹಿಂಗೆ ಹಾರಿದ ನವಿಲು ಮರಿಗಳು ಒಂದು ದಿನ ವಿದ್ಯುತ್ ತಂತಿ ಮೇಲೆ ಕೂತಂಥ ಹೊತ್ತಲ್ಲಿ ಮೂರೂ ಅಸುನೀಗುತ್ತವೆ. ಮುಂದೆ ಇದೇ ವಸ್ತು `ಚಿಕ್ಕನ ನವಿಲು ಮರಿಗಳು’ ಅನ್ನುವ ಕಥೆಯಾಗಿ ನನ್ನಿಂದ ಬರೆಸಿಕೊಳ್ಳುತ್ತದೆ. ಇಂಥ ಚಿಕ್ಕ ಇದಕ್ಕೂ ಮುನ್ನ ಮೊಲದ ಮರಿಗಳನ್ನು ತಂದು ಸಾಕಿದ್ದ. ಹಲವು ಬಗೆಯ ಹಕ್ಕಿಗಳ ಮೊಟ್ಟೆಗಳನ್ನು ಹುಡುಕಿ ತರುತ್ತಿದ್ದ. ಮೇಕೆಗಳನ್ನು ಮೇಯಿಸುವ ಹೊತ್ತಲ್ಲಿ ಚಿಕ್ಕನ ಈ ಹುಡುಕಾಟ ನನಗೆ ಇಂದಿಗೂ ಕುತೂಹಲದ ಸಂಗತಿಯಾಗಿದೆ. ಪರಿಸರದ ಅರಿವು ಮೂಡಿಸಿದ ಇವರೆಲ್ಲಾ ನನ್ನ ನಿಜ ಗುರುಗಳು. ಇಂಥ ಅನುಭವಗಳು ಮತ್ತು ಗುರುಗಳು ಆ ಕಾಲದ ಹಳ್ಳಿಯಲ್ಲಿ ಬದುಕುತ್ತಿದ್ದ ಬಹುತೇಕರಿಗೆ ಸಿಕ್ಕಿದ್ದಾರೆ. ಹಂಗಾಗಿ ಹಳ್ಳಿಗಾಡಿನಲ್ಲಿ ಬಾಲ್ಯದ ಸೂಖ ಸಿಕ್ಕವರಿಗೆ ಕೇವಲ ಒಬ್ಬ ಸಲೀಂ ಅಲಿ ಇರುವುದಿಲ್ಲ. ಅನೇಕ ಸಲೀಂ ಅಲಿಗಳು ಇದ್ದಾರೆ. ಹಂಗೇನೇ ಪುಟ್ಟಕ್ಕಜ್ಜಿಯಂಥ ಹಲವು ಅಜ್ಜ ಅಜ್ಜಿಯರೂ ಆ ಬಾಲ್ಯಕಾಲವನ್ನು ಜೀವಂತವಾಗಿಸಿದ್ದಾರೆ.

***

ಸಲೀಂ ಅಲಿ: ಪ್ರಸಿದ್ಧ ಪಕ್ಷಿ ವಿಜ್ಞಾನಿ ಮತ್ತು ಪರಿಸರ ಜ್ಞಾನಿ.
ದಕ್ಸತ್ತುಗಾತಿ: ಗಟ್ಟಿಗಿತ್ತಿ.
ಪಿಸುಗ್ಲು: ಮೆತು ಸ್ವಭಾವ.
ನೆಡುಗಡ್ಡಿ: ಚಿಗುರುಗಡ್ಡಿ.
ಅಳ್ಳು ಮರ: ತುಂಬಾ ಎತ್ತರದ ತೆಂಗಿನ ಮರ.
ಬಾಳೆಕಾಯಿ: ನಿರಿಗೆಗಳನ್ನು ಬಾಳೆ ಕಾಯಿಯ ಆಕಾರದಲ್ಲಿ ಸೊಂಟದಲ್ಲಿ ತಿರುವಿ ಮಡಿಸಿ ಸಿಕ್ಕಿಸುವ ಸೀರೆಯ ಅಂಚು.
ಒಟ್ಟಲು: ಬಲಿತ ತೆಂಗಿನ ಕಾಯಿಗಳನ್ನು ನೆಲದಲ್ಲಿ ಹೂಳಿ ಮಾಡುವ ತೆಂಗಿನ ಸಸಿಗಳ ಗುಂಪು.
(ಹಿಂದಿನ ಕಂತು: ವೈಕಂ, ದೇವರಾಜ ಅರಸು, ಮೇಷ್ಟ್ರು ಅರುಣ್‌ದೇವ್, ಪ್ರೊಫೆಸರ್ ಎಂ.ಡಿ.ಎನ್ ಮತ್ತು `ದ್ಯಾವನೂರು’)

About The Author

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ - 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ - 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ