ಹೆಣ್ಣುಮಕ್ಕಳ ವಿದ್ಯೆ, ಉದ್ಯೋಗ, ಸ್ವತಂತ್ರ ಅಸ್ತಿತ್ವ, ಜೀವನದ ಸಾರ್ಥಕತೆಯ ಮುಕ್ತ ಹುಡುಕಾಟಕ್ಕೆ ಬೆಲೆ ಕೊಡದ ಸ್ತ್ರೀದಮನಿಕೆಯ ಮೌಲ್ಯಗಳು ನಮ್ಮ ಸಮಾಜದಲ್ಲಿ ಇನ್ನೂ ಉಸಿರಾಡುತ್ತಿವೆ ಎಂಬ ವಿಷಯಕ್ಕಿಂತ ಹೆಚ್ಚಾಗಿ ನನ್ನಲ್ಲಿ ಆತಂಕ ಮೂಡಿಸುವ ವಿಷಯ ಅಂದರೆ, ಸ್ವತಃ ಅದಕ್ಕೆ ಒಳಗಾಗಿರುವ ನವಪೀಳಿಗೆಗಳ ಯುವತಿಯರಿಗೆ ಈ ಬಗ್ಗೆ ಅರಿವು ಇಲ್ಲದಿರುವುದು. ತಮಗೆ ಸಿಕ್ಕಿರುವ ಒಂದಿಷ್ಟು ಆಸರೆ, ಚಿನ್ನಬೆಳ್ಳಿ, ರೇಷ್ಮೆಸೀರೆಗಳ ಸಮಾಧಾನದಲ್ಲಿ ಅವರು ತಮ್ಮ ಸ್ವಂತಿಕೆಯ ಬಗ್ಗೆ ಆಲೋಚಿಸುವುದನ್ನು ಮರೆತಿದ್ದಾರೆಯೇ ಎಂಬ ಸಂಕಟಕರ ಪ್ರಶ್ನೆಯು ನನಗೆ ಆಗಾಗ ಎದುರಾಗುತ್ತದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ಮೂರನೆಯ ಬರಹ
ಈ ಲೇಖನದ ತಲೆಬರಹವು ಕೇಳುತ್ತಿರುವ ಪ್ರಶ್ನೆಯು ನನ್ನನ್ನು ಈ ನಡುವೆ ಸದಾ ಕಾಡಲಾರಂಭಿಸಿದೆ. ಇಂದಿನ ಮಹಿಳೆಗೆ ಸ್ತ್ರೀವಾದವು ಕಲಿಸಿದ/ಕಲಿಸುವ ಪಾಠಗಳು ಬೇಕಿಲ್ಲವೆ? ಕಳೆದ 250 ವರ್ಷಗಳಿಂದ ಪ್ರಪಂಚದಾದ್ಯಂತ ಹೆಂಗಸರು ಹಾಗೂ ಅವರನ್ನು ಬೆಂಬಲಿಸಿದ ಕೆಲವು ಮುಕ್ತಮನದ ಗಂಡಸರು ಬಹು ಕಷ್ಟಪಟ್ಟು ಗಂಡಾಳಿಕೆಯ ಸಮಾಜದ ಕತ್ತಲುಕಾಡಿನ ದಾರಿಯಲ್ಲಿ ಸ್ತ್ರೀಯರಿಗಾಗಿ ಮಾಡಿದ ಬೆಳಕಿನ ಪಥದಲ್ಲಿ ಚಲಿಸುವವರು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದಾರೆಯೆ?
ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕದ ಬೇರೆ ಬೇರೆ ಪದವಿ ಕಾಲೇಜುಗಳಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಾ ಬಂದಿರುವ ನನಗೆ, ಸುಮಾರು ಹದಿನೆಂಟರಿಂದ – ನಲವತ್ತು ವರ್ಷದ ಯುವತಿಯರ ಬದುಕನ್ನು ಸಾಕಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ. ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರು, ವಿವಿಧ ರೀತಿಯ ಬೋಧಕ ಹಾಗೂ ಬೋಧಕೇತರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ಯುವಉದ್ಯೋಗಿನಿಯರು, ಅನಕ್ಷರಸ್ಥರೋ ಅರೆ ವಿದ್ಯಾವಂತೆಯರೋ ಆಗಿದ್ದು ಬಡತನದ ಉರಿಯಲ್ಲಿ ಬೇಯುತ್ತಾ ಕೈಯಲ್ಲಿ ಕಸಬರಿಕೆ ಹಿಡಿದು ಕಾಲೇಜು-ಕಛೇರಿಗಳ ಅಂಗಳವನ್ನು ಗುಡಿಸುತ್ತಿರುವ ಗುತ್ತಿಗೆ ಕಾರ್ಮಿಕೆಯರು…. ಈ ಎಲ್ಲರೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ನನ್ನ ದೈನಂದಿನ ಒಡನಾಟ ಇರುತ್ತದೆ. ಇನ್ನು ಅಕ್ಕಪಕ್ಕದ ಮನೆಗಳಲ್ಲಿ, ರಸ್ತೆಗಳಲ್ಲಿ, ಬಿಎಂಟಿಸಿ ಬಸ್ಸು-ಮೆಟ್ರೋ ಮುಂತಾದ ಸಾರ್ವಜನಿಕ ಸಾರಿಗೆಯಲ್ಲೂ ಸಮಾಜದ ವಿವಿಧ ಸ್ತರಗಳ ಯುವತಿಯರನ್ನು ನಾನು ಎದುರಾಗುತ್ತಲೇ ಇರುತ್ತೇನೆ.
ಕನ್ನಡ ಭಾಷೆ-ಸಾಹಿತ್ಯಗಳ ಅಧ್ಯಾಪನದ ಜೊತೆಜೊತೆಗೆ, ಸ್ವಂತ ಆಸಕ್ತಿಯಿಂದ ಹಾಗೂ ವಿದ್ಯಾಭ್ಯಾಸದ ಭಾಗವಾಗಿ ನಾನು ಕೈಗೊಂಡ ಪಿ.ಎಚ್‌ಡಿ, ಮತ್ತು ಉತ್ತರ-ಡಾಕ್ಟರೇಟ್ ಸಂಶೋಧನೆಗಳ ಕಾರಣದಿಂದಾಗಿ, ಕಳೆದ ಮೂವತ್ತು ವರ್ಷಗಳಿಂದ `ಸ್ತ್ರೀವಾದಿ ಅಧ್ಯಯನ’ ಎಂಬ ಜ್ಞಾನಶಿಸ್ತಿನ ಆಸಕ್ತ ಆಧ್ಯಾಯಿಯೂ ಹೌದು. ಹೋಟಲಿನಲ್ಲಿ ಒಂದು ಲೋಟ ಕಾಫಿ ಕುಡಿಯುವ ಸಾಮಾನ್ಯ-ಸಾಂದರ್ಭಿಕ ವಿಷಯದಿಂದ ಹಿಡಿದು ಜೀವನೋಪಾಯಕ್ಕಾಗಿ ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸುವ ಗಂಭೀರ ವಿಷಯದ ತನಕ, ಉಡುಪಿನ ಆಯ್ಕೆಯಿಂದ ಹಿಡಿದು ಒಂದು ನಿರ್ದಿಷ್ಟ ಲಿಂಗತ್ವದ ವ್ಯಾಖ್ಯೆಯೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುವ ತನಕ …. `ಸ್ತ್ರೀಬದುಕು ಎತ್ತ ಸಾಗಿದೆ’ ಎಂಬುದನ್ನು ನಾನು ಎಚ್ಚರದಿಂದ ಗಮನಿಸುತ್ತಾ ಇರುತ್ತೇನೆ. ಸ್ತ್ರೀವಾದವು ಕೇವಲ ಆರಾಮಕುರ್ಚಿಯ ಚಿಂತನ-ಮಂಥನವಲ್ಲ, ಅದು ನಿಜಬದುಕಿನ ಅನುಕ್ಷಣದ ಎಚ್ಚರ ಎಂಬುದು ನನ್ನ ನಮ್ರ ತಿಳುವಳಿಕೆ. ಸ್ತ್ರೀಯನ್ನು `ಸ್ವತಂತ್ರ ಚಿಂತನೆಯ ಮಾನುಷಿ’ ಎಂದು ಪರಿಗಣಿಸಲು ಬಯಸುವ ಈ ತತ್ವಜ್ಞಾನವು, ಮೇಲ್ನೋಟಕ್ಕೆ ಕಾಣುವ ಹಾಗೂ ಕಾಣದಿರುವ ವಿಧಾನಗಳಲ್ಲಿ ಅವಳ ಬದುಕನ್ನು ನುಂಗಲು ಆ… ಎಂದು ಬಾಯಿ ತೆರದುಕೊಂಡಿರುವ ಲಿಂಗಭೇದವೆಂಬ ರಾಕ್ಷಸೀಪದ್ಧತಿಯನ್ನು ಅವಳಿಂದ ದೂರವಿಡಲು ಸದಾ ಹೆಣಗುತ್ತದೆ. ಈ ಚಿಂತನಾಕ್ರಮವು ಸ್ತ್ರೀಬದುಕಿಗೆ ಒಂದು ಔಷಧವೂ ಹೌದು, ಜೀವಸತ್ವದಾಯಕವೂ ಹೌದು. ಆದರೆ, ಜಾಗತೀಕರಣಕ್ಕೆ ಮುಂಚೆ ಕರ್ನಾಟಕದಲ್ಲಿ ಸೂರ್ಯನಂತೆ ಸ್ಪಷ್ಟವಾಗಿದ್ದ ಈ ತಿಳುವಳಿಕೆಯು ಇಂದು ಚಂದ್ರನಂತೆ ಆಗೀಗ ಮಾತ್ರ ತೋರಿಬರುತ್ತಿರುವುದೇನು ಎಂಬ ಜಿಜ್ಞಾಸೆ ನನ್ನ ಮನಸ್ಸನ್ನು ಆವರಿಸಿದೆ. ಇದಕ್ಕೆ ಕಾರಣಗಳನ್ನು ಈ ಮುಂದೆ ವಿವರಿಸುತ್ತೇನೆ.
*****
ಇಂದಿನ ಯುವತೀಸಮುದಾಯವನ್ನು ಗಮನಿಸಿದರೆ ನನಗೆ ಅದರಲ್ಲಿ ಎರಡು ಧ್ರುವಗಳಿರುವಂತೆ ತೋರುತ್ತಿದೆ. ಒಂದು – ಮಹಾನಗರಗಳಲ್ಲಿ ಸ್ತ್ರೀಸ್ವಾತಂತ್ರ್ಯದ ಪ್ರತೀಕದಂತಿರುವ `ಇಪ್ಪತ್ತೊಂದನೆ ಶತಮಾನದವರೇ’ ಆದ ಹುಡುಗಿಯರು. ಇವರು ಚೆನ್ನಾಗಿ ಓದಿ ಉದ್ಯೋಗಸ್ಥೆಯರಾಗಿರುವ, ತಮಗೆ ಇಷ್ಟವಾದ ಉಡುಪು ಧರಿಸುವ, ಒಂಟಿಯಾಗಿ ಎಲ್ಲಿ ಬೇಕಾದರೂ ಓಡಾಡುವ, ಸ್ಕೂಟರು-ಕಾರು-ಬೈಕು ಇತ್ಯಾದಿ ವಾಹನಗಳ ಚಾಲನೆ ಬಲ್ಲ, ಉದ್ಯೋಗ-ಮದುವೆ-ಮಕ್ಕಳು ….. ಮುಂತಾದ ಜೀವನದ ಮುಖ್ಯ ವಿಷಯಗಳಲ್ಲಿ ತಮ್ಮ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಬಲ್ಲ ಸ್ವಾಯತ್ತ ಸ್ವಯಂಪ್ರಭೆಯರು. ವಿಮಾನ, ಮೆಟ್ರೋ, ದೊಡ್ಡ ದೊಡ್ಡ ಲಾರಿ-ಟ್ರಕ್‌ಗಳನ್ನು ಚಲಾಯಿಸುವವರು, ಸೈನ್ಯದಲ್ಲಿ ಸೇರುವ ಹುಡುಗಿಯರು, ಖಾನಾವಳಿಗಳಲ್ಲಿ ತಿಂಡಿ ಸರಬರಾಜಿನ ಕೆಲಸ ಮಾಡುವವರು, ಪೆಟ್ರೋಲು ಹಾಕುವ ಕೆಲಸ ಮಾಡುವವರು….. ಒಟ್ಟಿನಲ್ಲಿ ಮೊದಲು ಪುರುಷರದು ಎಂದು ಹೇಳಲಾಗುತ್ತಿದ್ದ ಎಲ್ಲ ಬಗೆಯ ಕೆಲಸಗಳನ್ನೂ ಇಂದು ಈ ಹುಡುಗಿಯರು ಮಾಡುತ್ತಿದ್ದಾರೆ. ಒಂದು ದೃಷ್ಟಿಯಿಂದ, ಕಳೆದ ಇನ್ನೂರೈವತ್ತು ವರ್ಷಗಳ ಪ್ರಪಂಚದಾದ್ಯಂತ ನಡೆದ ಸ್ತ್ರೀವಾದಿ ಹೋರಾಟದ ಸಾರ್ಥಕ ಫಲಶ್ರುತಿಗಳೆಂದು ನಾನಿವರನ್ನು ನೋಡಬಯಸುತ್ತೇನೆ. ಆದರೂ ನಮ್ಮ ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಇವರ ಸಂಖ್ಯೆ ಬಹಳವೇನಿಲ್ಲ. ಪ್ರಪಂಚದ ಒಟ್ಟು ಮಹಿಳೆಯರ ಆರ್ಥಿಕ-ಸಾಮಾಜಿಕ ಉನ್ನತಿಗೆ ಹೋಲಿಸಿದರೆ ಭಾರತದ ಮಹಿಳೆಯರು ಇನ್ನೂ ಹಿಂದೆ ಇದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ. ಆದಾಗ್ಯೂ ಸ್ತ್ರೀವಾದದ ದೃಷ್ಟಿಯಿಂದ ನೋಡಿದರೆ ಸಂತೋಷ ಕೊಡುವ ಯುವತೀಸಮುದಾಯವಿದು.
ಈಗ ಎರಡನೆಯ ಗುಂಪಿನ ಕಡೆ ಬರೋಣ. ಈ ಬಹುಸಂಖ್ಯಾತ ಯುವತಿಯರ ಗುಂಪು ಮೇಲೆ ಹೇಳಿದ ಯುವತೀಸಮುದಾಯದ ಗುಣಲಕ್ಷಣಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಗ್ರಾಮೀಣ ಪ್ರದೇಶಗಳು, ಸಣ್ಣ ಪಟ್ಟಣಗಳು, ನಗರಗಳ ಸಾಂಪ್ರದಾಯಿಕ ಮನೆಗಳಲ್ಲಿ ಬೆಳೆದ ಹುಡುಗಿಯರು ಇದರಲ್ಲಿ ಸೇರುತ್ತಾರೆ. ಇವರು ಇಪ್ಪತ್ತೊಂದನೆಯ ಶತಮಾನದಲ್ಲಿದ್ದರೂ ಹದಿನೆಂಟು-ಹತ್ತೊಂಬತ್ತನೆಯ ಶತಮಾನದ ಮೌಲ್ಯಗಳಲ್ಲಿ ಸ್ಥಗಿತಗೊಂಡಂತೆ ಭಾಸವಾಗುತ್ತಾರೆ, ಅನಂತಮೂರ್ತಿಯವರ `ಭಾರತದಲ್ಲಿ ಶತಮಾನಗಳು ಒಟ್ಟಿಗೆ ಬದುಕುತ್ತವೆ’ ಎಂಬ ಮಾತನ್ನು ನೆನಪಿಸುವಂತೆ ಇರುತ್ತದೆ ಇವರ ಜೀವನಶೈಲಿ. ಇವರು ಅಪ್ಪ ಅಮ್ಮ ಹೇಳಿದಂತೆ ಕೇಳುವ. ಸಮಾಜದ ಬಾಯಿಗೆ ಬೀಳದಂತೆ ತಗ್ಗಿ ಬಗ್ಗಿ ನಡೆಯುವ `ಒಳ್ಳೆಯ ಹುಡುಗಿಯರು’! ನಿಜ ಹೇಳಬೇಕೆಂದರೆ ಈ ಭಾರತ ಉಪಖಂಡದ ಹೆಲಕೆಲವು ಪ್ರದೇಶಗಳಲ್ಲಿ ಈ ಕಾಲದಲ್ಲೂ ಪ್ರಬಲವಾಗಿ ನೆಲೆಯಾಗಿರುವ ಗಂಡಾಳಿಕೆಯ ಮೌಲ್ಯಗಳ ಪ್ರತ್ಯಕ್ಷ-ಪರೋಕ್ಷ ಮೌಲ್ಯಗಳ ಭಾರದಲ್ಲಿ ಕುಸಿದವರಿವರು. ಇಂತಹ ಚಿನ್ನದ ಪಂಜರದ ಗಿಳಿಗಳನ್ನು ನೋಡಿದಾಗ “ಯುವಮಿತ್ರೆ ….. ನಿನ್ನ ನೀನು ಮರೆತರೇನು ಸುಖವಿದೆ, ತನ್ನತನವ ತೊರೆದರೇನು ಸೊಗಸಿದೆ ………!?” ಎಂದು ಕೇಳಬೇಕು ಅನ್ನಿಸುತ್ತೆ (1975ರಲ್ಲಿ ಬಿಡುಗಡೆಯಾದ ದೇವರ ಕಣ್ಣು ಎಂಬ ಕನ್ನಡ ಸಿನಿಮಾದ ಹಾಡನ್ನು ನೆನಪಿಸಿಕೊಂಡು ಇದನ್ನು ಬರೆದಿದ್ದೇನೆ).

ಹೆಣ್ಣುಮಕ್ಕಳ ವಿದ್ಯೆ, ಉದ್ಯೋಗ, ಸ್ವತಂತ್ರ ಅಸ್ತಿತ್ವ, ಜೀವನದ ಸಾರ್ಥಕತೆಯ ಮುಕ್ತ ಹುಡುಕಾಟಕ್ಕೆ ಬೆಲೆ ಕೊಡದ ಸ್ತ್ರೀದಮನಿಕೆಯ ಮೌಲ್ಯಗಳು ನಮ್ಮ ಸಮಾಜದಲ್ಲಿ ಇನ್ನೂ ಉಸಿರಾಡುತ್ತಿವೆ ಎಂಬ ವಿಷಯಕ್ಕಿಂತ ಹೆಚ್ಚಾಗಿ ನನ್ನಲ್ಲಿ ಆತಂಕ ಮೂಡಿಸುವ ವಿಷಯ ಅಂದರೆ, ಸ್ವತಃ ಅದಕ್ಕೆ ಒಳಗಾಗಿರುವ ನವಪೀಳಿಗೆಗಳ ಯುವತಿಯರಿಗೆ ಈ ಬಗ್ಗೆ ಅರಿವು ಇಲ್ಲದಿರುವುದು. ತಮಗೆ ಸಿಕ್ಕಿರುವ ಒಂದಿಷ್ಟು ಆಸರೆ, ಚಿನ್ನಬೆಳ್ಳಿ, ರೇಷ್ಮೆಸೀರೆಗಳ ಸಮಾಧಾನದಲ್ಲಿ ಅವರು ತಮ್ಮ ಸ್ವಂತಿಕೆಯ ಬಗ್ಗೆ ಆಲೋಚಿಸುವುದನ್ನು ಮರೆತಿದ್ದಾರೆಯೇ ಎಂಬ ಸಂಕಟಕರ ಪ್ರಶ್ನೆಯು ನನಗೆ ಆಗಾಗ ಎದುರಾಗುತ್ತದೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೊಮ್ಮೆ, ನನಗೆ ನಿಡುಗಾಲದಿಂದ ಪರಿಚಿತರಾದ ಒಬ್ಬ ಕನ್ನಡ ಆಧ್ಯಾಪಕರು-ವಿಮರ್ಶಕರು-ಚಿಂತಕರ ಮನೆಗೆ ಹೋಗಿದ್ದೆ ನಾನು. ಸಾಹಿತ್ಯ, ಸಂಗೀತ ಹಾಗೂ ನೃತ್ಯ ಮೂರೂ ಕ್ಷೇತ್ರಗಳಲ್ಲಿ ಆಸಕ್ತಿ ಹಾಗೂ ಪ್ರವೇಶ ಇದ್ದ ನನಗೆ ಈ ಮೂರು ಕ್ಷೇತ್ರಗಳಲ್ಲಿ `ಯಾವುದನ್ನು ನನ್ನ ಮುಂದಿನ ಮುಖ್ಯ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಳ್ಳುವುದು’ ಎಂಬ ಗೊಂದಲವು ಬಹುವಾಗಿ ಕಾಡುತ್ತಿದ್ದ ನನ್ನ ಬದುಕಿನ ಕಾಲ ಅದು. ಈ ಕುರಿತು ಆ ಹಿರಿಯರೊಡನೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವುದು ನನ್ನ ಉದ್ದೇಶವಾಗಿತ್ತು. ಅವರೊಂದಿಗಿನ ಮಾತುಕತೆಯಿಂದ ನಾನು `ಕೆಲವು ವ್ಯಕ್ತಿಗಳು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸಮರ್ಥವಾಗಿಯೇ ಕೆಲಸ ಮಾಡುವುದು ಅಪರೂಪವೇನಲ್ಲ, ರವೀಂದ್ರನಾಥ ಠ್ಯಾಗೋರ್, ಶಿವರಾಮ ಕಾರಂತರಂತಹವರು ಹೀಗೆ ಮಾಡಿದ್ದಾರೆ. ಹಾಗೂ ಒಂದೇ ವ್ಯಕ್ತಿ ತನ್ನ ಬದುಕಿನ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಸಹ ಅಪರೂಪವಲ್ಲ. ಏನೇ ಆದರೂ ಒಂದು ವಿಷಯ ಮರೆಯಬಾರದು, ಅದೇನೆಂದರೆ ಅಕ್ಷರಕ್ಕೆ ಸಾವಿಲ್ಲ, ಕೊನೆಗೂ ಉಳಿಯುವುದು ಅಕ್ಷರ’ ಎಂಬ ಗ್ರಹಿಕೆಯನ್ನು ಪಡೆದುಕೊಂಡೆ.
ಮೇಲೆ ಪ್ರಸ್ತಾಪಿಸಿದ ಗ್ರಹಿಕೆಯ ಜೊತೆಗೆ ಇನ್ನೊಂದು ಅನಿರೀಕ್ಷಿತ ಗ್ರಹಿಕೆ ಸಹ ಆ ಮನೆಯಲ್ಲಿ ನನಗೆ ದೊರಕಿತು. ಅದು ಹೀಗಿದೆ. ನಾವು ಚರ್ಚೆಗೆ ಕೂರುವ ಮುನ್ನ, ಆ ವಿದ್ವಾಂಸರ ಪತ್ನಿಯಾದ ಬಹು ಆಪ್ತಭಾವದ, ಸ್ನೇಹಲ ಮನಸ್ಸಿನ, ನಗೆಮೊಗದ ಸುಂದರ ಮಹಿಳೆಯು ನನಗೆ ತುಂಬ ಪ್ರೀತಿಯಿಂದ ಬಿಸಿಬಿಸಿ ದೋಸೆ-ಚಟ್ನಿ, ಕಾಫಿಗಳನ್ನು ಕೊಟ್ಟು ತುಂಬ ಆದರದಿಂದ ಉಪಚರಿಸಿದರು. ಅಂದೇ ಮೊದಲ ಬಾರಿಗೆ ನಾನು ಅವರ ಮನೆಗೆ ಹೋಗಿದ್ದರೂ, ಬಹಳ ಕಾಲದಿಂದ ಅವರ ಇಷ್ಟದ ನೆಂಟಳೇನೋ ಎಂಬಂತೆ ಅವರ ವರ್ತನೆ ಇತ್ತು ನನ್ನ ಬಗೆಗೆ. ಇದರಿಂದ ನನಗೆ ಉಂಟಾದ ಸಂತೋಷ ಹಾಗೂ ತುಸು ಸಂಕೋಚಗಳನ್ನು ಗ್ರಹಿಸಿದ ಆ ಚಿಂತಕರು `ಸಂಕೋಚ ಪಡಬೇಡಿ ಮೀರಾ. ಮೈ ವೈಫ್ ಲವ್ಸ್ ಲವಿಂಗ್. ಶಿ ಲೈಕ್ಸ್ ಟು ಟ್ರೀಟ್ ಪೀಪಲ್ ಟು ಗುಡ್ ಥಿಂಗ್ಸ್. ಶೀ ಈಸ್ ಎ ಹ್ಯಾಪ್ಪಿ ಹೋಂಮೇಕರ್’ ಎಂದರು. ತನ್ನ ಹೆಂಡತಿಗೆ ಆತ ಕೊಡುತ್ತಿದ್ದ ಗೌರವ, ಮನ್ನಣೆ ಹಾಗೂ ಅಂತಹ ತನ್ನ ಗಂಡನ ಇರವು ತರುವ ಬೆಚ್ಚಗಿನ ಸುರಕ್ಷತಾ ಭಾವದ ಛತ್ರಚಾಮರದಲ್ಲಿ ಆ ಮಹಿಳೆಯು ನೆಮ್ಮದಿಯಿಂದ ಇರುವಂತೆ ತೋರಿತು ನನಗೆ. ಕನ್ನಡ ಸಾಹಿತ್ಯ ಲೋಕದಲ್ಲಿನ ಇನ್ನೊಬ್ಬ ಧೀಮಂತ ಲೇಖಕನ ಪತ್ನಿಯೊಬ್ಬರು ತನ್ನ ಉನ್ನತ ವಿದ್ಯಾಭ್ಯಾಸದ ಸಾರ್ಥಕತೆ, ಸ್ವಂತ ವ್ಯಕ್ತಿತ್ವವನ್ನು ಹೊಂದುವ ಹಂಬಲಿಕೆ ಎಲ್ಲವನ್ನೂ ಬಿಟ್ಟುಕೊಟ್ಟು ತಮ್ಮ ಗಂಡನ ಬದುಕಿಗೆ ಸಂಪೂರ್ಣ ಬೆಂಬಲವಾಗಿ ನಿಂತ ಇನ್ನೊಂದು ಉದಾಹರಣೆ ಕೂಡ ಆಗ ನನಗೆ ನೆನಪಾಯಿತು. ಸ್ನಾತಕೋತ್ತರ ಪದವಿ ಓದಿ, ಸಂಗೀತ-ನೃತ್ಯಗಳಲ್ಲಿ ತುಂಬ ಪ್ರತಿಭಾನ್ವಿತರಾಗಿದ್ದರೂ ತನ್ನ ಗಂಡನ ಉದ್ಯೋಗದ ಕಾರಣಕ್ಕಾಗಿ ತೀರಾ ದೂರದ ಊರಿಗೆ ಬಂದು ಮನೆವಾಳ್ತೆ, ಮಕ್ಕಳ ದೇಖರೇಖಿಗೆ ತನ್ನನ್ನು ಸೀಮಿತಗೊಳಿಸಿಕೊಂಡಿದ್ದ ಇನ್ನೊಬ್ಬ ಮಹಿಳೆಯೂ (ನಮ್ಮ ನಾಟ್ಯ ತರಗತಿಗೆ ಮಗಳನ್ನು ಕಳಿಸುತ್ತಿದ್ದವರು) ನೆನಪಾದರು. ಅಂದರೆ ತಮ್ಮ ಗಂಡ-ಮಕ್ಕಳಿಗಾಗಿ ತಮ್ಮ ಪ್ರಪಂಚವನ್ನು ನಾಲ್ಕು ಗೋಡೆಗಳ ಮಟ್ಟಿಗೆ ಕುಗ್ಗಿಸಿಕೊಳ್ಳುವ ಮಹಿಳೆಯರ ಈ ಬಗೆಯನ್ನು ಏನೆನ್ನಬೇಕು? ಗಂಡಾಳಿಕೆಯ ಸಮಾಜವು ಸ್ತ್ರೀಯರಿಂದ ಇಟ್ಟುಕೊಳ್ಳುವ ಸೀಮಿತ ನಿರೀಕ್ಷೆಯ ಫಲವೆನ್ನಬೇಕೋ, ಅಥವಾ ಮಹಾತ್ವಾಕಾಂಕ್ಷೆಯ ವಿಷಯದಲ್ಲಿ ಆ ನಿರ್ದಿಷ್ಟ ಹೆಂಗಸರಲ್ಲಿ ಇದ್ದಂತಹ ಕೊರತೆಯೆನ್ನಬೇಕೋ ಎಂಬ ಗೊಂದಲವುಂಟಾಯಿತು ನನಗೆ.
*****
ಇಂದಿನ ಮಹಿಳೆಯರನ್ನು ತನ್ನ ಕಬಂಧಬಾಹುಗಳಿಂದ ಕಾಡುತ್ತಿರುವ ಇನ್ನೊಂದು ಗಂಭೀರ ಸಮಸ್ಯೆ ಇದೆ. ಸಬಲೀಕರಣಗೊಂಡ ಮಹಿಳೆಯರು, ಸಬಲೀಕರಣಗೊಳ್ಳದವರು, ವಿದ್ಯಾವಂತರು, ಅವಿದ್ಯಾವಂತರು. ಬಾಲಕಿಯರು ಹಾಗೂ ವೃದ್ಧೆಯರು ಎಲ್ಲರ ಬುದ್ಧಿ-ವಿವೇಕಗಳನ್ನೂ ನುಂಗಿ ನೀರು ಕುಡಿಯುವ ಶಕ್ತಿ ಈ ರಾಕ್ಷಸೀ ಸಾಮಾಜಿಕ ಪ್ರವೃತ್ತಿಗೆ ಇದೆ, ಅದು ಯಾವುದೆಂದರೆ ಕೊಳ್ಳುಬಾಕ ಸಂಸ್ಕೃತಿಯ ಆವುಟ. ತನಗೆ ಬೇಕೋ, ಬೇಡವೋ ಎಂಬ ಪರಿಜ್ಞಾನ ಇಲ್ಲದೆ ತನ್ನ ಹಣ, ತನ್ನ ಮನೆಯವರ ಹಣ, ತಾನಿನ್ನೂ ಗಳಿಸದ ಹಣ ಅಂದರೆ ಸಾಲದ ಹಣದಿಂದ ಸದಾ ಕೊಳ್ಳುವುದನ್ನು ತನ್ನ ಪರಿಪಾಠ ಮಾಡಿಕೊಳ್ಳುವ ಅಭ್ಯಾಸಕ್ಕೆ ಇಂದಿನ ಮಹಿಳೆ ಬಿದ್ದಿದ್ದಾಳೆ. ರಿಯಾಯಿತಿ ಮಾರಾಟಗಳು, ಉಚಿತ ಕೊಡುಗೆಯ ಆಮಿಷಗಳು, ಅಂತರ್ಜಾಲ ಪಾವತಿಯ ಸುಲಭತೆ, ವ್ಯಾಪಾರೀ ಲಾಂಛನ(ಬ್ರ್ಯಾಂಡ್)ಗಳ ಮಾಯಾಪಾಶ ಇಂದಿನ ಮಹಿಳೆಯರನ್ನು ಕೇವಲ ಗ್ರಾಹಕಿಯರನ್ನಾಗಿ ಮಾಡಿವೆ. ಇದರೊಂದಿಗೆ, ಸಾಮಾಜಿಕ ಮಾಧ್ಯಮಗಳು ನಿತ್ಯನಿರಂತರವಾಗಿ ಉತ್ಪಾದಿಸುವ ದೃಶ್ಯವಸ್ತು(ವಿಶುವಲ್ ಕಂಟೆಂಟ್) ಸಹ ಅವಳ ಯೋಚಿಸುವ ಶಕ್ತಿಯನ್ನು ಮೊಂಡಾಗಿಸಿದೆ. ತಾನು ಕಷ್ಟಪಟ್ಟು ಗಳಿಸಿದ ಹಣವು ಬೇಕಾದ ವಸ್ತುಗಳನ್ನು ಕೊಳ್ಳಲು ವಿನಿಯೋಗವಾಗುತ್ತಿದೆಯೋ ಅಥವಾ ಬೇಡದ ವಸ್ತುಗಳ ಮೇಲೆ ಪೋಲಾಗುತ್ತಿದೆಯೋ ಎಂಬುದರ ಪರಿಜ್ಞಾನವನ್ನು ಅವಳು ಕಳೆದುಕೊಳ್ಳುವ ಮಟ್ಟಕ್ಕೆ ಹೋಗಿಬಿಟ್ಟಿದ್ದಾಳೆ!
ಪುಸ್ತಕಗಳ ಗಂಭೀರ ಓದು ಮತ್ತು ಓದಿದ್ದರ ಬಗೆಗಿನ ಧ್ಯಾನವು ಕಡಿಮೆಯಾಗಿ ಯಾವುದು ತನ್ನ ಕೈಯ ಜಂಗಮವಾಣಿಯ ಪರದೆಯಲ್ಲಿ ಅಥವಾ ತನ್ನೆದುರಿಗಿರುವ ಗಣಕಯಂತ್ರದ ಪರದೆಯಲ್ಲಿ ಅನಾಯಾಸವಾಗಿ ಕಾಣುತ್ತದೋ ಅದನ್ನೇ ಬೆರಳು ಜಾರಿಸುತ್ತಾ ನೋಡುವ ಬದುಕಿನ ವಿಧಾನವು ಇಂದು ಎಲ್ಲ ಕಡೆ ಹಬ್ಬಿದೆಯಲ್ಲವೆ? ಜಾಹೀರಾತು ತುಂಬಿಕೊಂಡ ದೃಶ್ಯವಸ್ತು(ವಿಶುವಲ್ ಕಂಟೆಂಟ್)ವನ್ನು ಕೇವಲ ಗ್ರಾಹಕ-ಗ್ರಾಹಕಿಯರಾಗಿ ಮಾತ್ರ ಒಳಸೇರಿಸಿಕೊಳ್ಳುತ್ತಿರುವ ಜನರಿಗೆ ಸ್ತ್ರೀಯ ಯಾವ ಬಿಂಬ ಗ್ರಹಿಕೆಗೆ ಬರುತ್ತದೆ? ಸ್ತ್ರೀಸ್ವಾಯತ್ತತೆಯ ಅರಿವಿನಿಂದ ಸಬಲೀಕೃತಗೊಂಡ ಸ್ವಂತಬಿಂಬವೋ ಅಥವಾ ಅಡಿಗೆ-ಅಂದಚಂದ-ಅಲಂಕಾರ-ರೂಪಬೆಡಗು-ಮನೆವಾಳ್ತೆಗಳ ಲೋಕಕ್ಕೆ ಸೀಮಿತವಾದ ಮಿತಪ್ರತಿಬಿಂಬವೋ? ಇದಕ್ಕೆ ಉತ್ತರ ಹೇಳುವುದು ಕಷ್ಟವಲ್ಲ. ಇಲ್ಲಿ ಎದ್ದು ಕಾಣುವುದು ಸ್ತ್ರೀಯ ಮಿತಬಿಂಬವೇ ಹೊರತು ಅವಳ ಅಮಿತಸಾಧ್ಯತೆಗಳಲ್ಲ.
*****
ತೀರ್ಮಾನ ರೂಪವಾಗಿ ಬಹುಶಃ ಹೀಗೆ ಹೇಳಬಹುದು. ಸ್ತ್ರೀವಾದ, ಸ್ತ್ರೀಪರ ಚಿಂತನೆ, ಸ್ತ್ರೀಬಿಡುಗಡೆ, ಸ್ತ್ರೀಸ್ವಾಯತ್ತತೆ ಮುಂತಾದವು ಒಂದು ಜ್ಞಾನದ ಮೊತ್ತ, ಒಂದು ಬೆಳಕು, ಒಂದು ಮಹಾ ಅರಿವು. ಎಂಥದ್ದೇ ಬೆಳಕಾದರೇನಂತೆ, ಅದು ಎಷ್ಟೇ ತೀಕ್ಷ್ಣವಾಗಿದ್ದರೇನಂತೆ, ತಮ್ಮ ಮನೆಯ ಕಿಟಕಿ, ಬಾಗಿಲುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡಿರುವವರ ಬಳಿ ಬರಲಾರದು. ತಾನು ಏನು?, ತನ್ನ ಅಸ್ತಿತ್ವದ ಸಾರ್ಥಕತೆ ಯಾವುದರಲ್ಲಿದೆ?, ಹೆಂಡತಿ, ತಾಯಿ, ಸೊಸೆ ಮುಂತಾದ ಸಮಾಜದತ್ತ ಪಾತ್ರಗಳೇ ತಾನೋ ಅಥವಾ ಅಲ್ಲವೋ? ಈ ಕಷ್ಟಕರ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕವೇ ಹುಟ್ಟುವ ಅರಿವು ಹೆಣ್ಣಿಗೆ ಬೇಕು.

ಸ್ತ್ರೀವಾದವೇನೋ ಅರಿವಿನ ಮಹಾಲೋಕವನ್ನೇ ಸ್ತ್ರೀಗಾಗಿ ತೆರೆದಿಟ್ಟಿದೆ. ಅದನ್ನು ಪ್ರವೇಶಿಸಿ ತನ್ನ ಮತ್ತು ತನ್ನ ಸಮುದಾಯದ ಬಾಳನ್ನು ದೀಪ್ತಗೊಳಿಸುವ ಮನಸ್ಸು, ಎಚ್ಚರಗಳು ಅವಳಿಗೆ ಬೇಕು ಅಷ್ಟೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

