ನನಗೆ ನನ್ನ ಹತ್ತಿರ ಅವರು ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಹೊರಗಡೆ ಅಸ್ತಮಿಸಲು ತಯಾರಾಗುತ್ತಿದ್ದ ಸೂರ್ಯನ ದಿನದ ಕೊನೆಯ ಕಿರಣಗಳು ಕಿಟಕಿಯ ಮೂಲಕ ಅವರ ಮುಖವನ್ನು ಕೂಡ ತಲುಪಿ, ಅವರ ಮಾತನಾಡುವ ಪ್ರಯತ್ನ ಎಲ್ಲರಿಗೂ ಗೊತ್ತಾಗುವಂತಾಯಿತು. ಅವರ ನುಣುಪಾದ ಮುಖವನ್ನು ನನ್ನ ಕಿವಿಯ ಹತ್ತಿರವೇ ತರುತ್ತಿದ್ದರು. ಜೊತೆಯಲ್ಲಿ ಕುಳಿತವರಿಗೆ, ಎದುರು ಕುಳಿತು ನಮ್ಮನ್ನು ನೋಡುತ್ತಿದ್ದವರಿಗೆ, ನಾನು ಅವರಿಗೆ ಆಪ್ತ, ದೀರ್ಘ ಕಾಲದಿಂದ ಚೆನ್ನಾಗಿ ಪರಿಚಯವಿರುವವನು ಅನಿಸುತ್ತಿದ್ದುದು ನನಗೆ ಗೊತ್ತಾಯಿತು. ನನಗೆ ಮುಜುಗರವಾಯಿತು, ಪೇಚಿಗಿಟ್ಟುಕೊಂಡಿತು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಏಳೆಂಟು ಸೀಮೆಗಳಲ್ಲಿ, ನೂರಾರು ಒಕ್ಕಲುಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಬಲಿಷ್ಠ ಸಮುದಾಯದ ಮಾಂಡಲೀಕರ ಮನತೆನದವರು ಅವರು. ಅವರ ಮನೆತನದ ಸುಮಾರು ಮೂವತ್ತು ಮೂವತ್ತೈದು ಮಕ್ಕಳು ವಿದೇಶಗಳಲ್ಲಿ ಓದುತ್ತಿವೆ. ಮನತೆನದ ಒಂದು ಕುಡಿ ಕೋಪನ್ ಹೇಗ್ನಲ್ಲಿ ಫ್ಲಾಟ್ ಬಾಡಿಗೆಗೆ ಕೊಟ್ಟೇ ನಲವತ್ತು ವರ್ಷಗಳಾಗಿವೆ. ಸದರಿ ನಾಯಕರ ವಯಸ್ಸು ೯೦ ಮೀರಿದೆ. ಇನ್ನು ಮೀರಲು ಇಷ್ಟವಿಲ್ಲ ಎಂದು ಹೇಳಿದರೂ ಕೇಳಿಸಿಕೊಳ್ಳಲಾರದಷ್ಟು ಸೊಗಸುಗಾರಿಕೆ, ಶ್ರೀಮಂತಿಕೆ, ದಿನನಿತ್ಯ ವ್ಯಾಪಾರದ ಹಾಲಾಹಲ-ಕೋಲಾಹಲ. ಅವರ ಮನೆತನದ ಇತಿಹಾಸವನ್ನು ಕನಿಷ್ಠ ಪಕ್ಷ ಮುಮ್ಮಡಿ ಕೃಷ್ಟರಾಜರ ಒಡೆಯರ ಕಾಲದಿಂದ ಕರಾರುವಾಕ್ಕಾಗಿ ಗಮನಿಸಲು ದಾಖಲಾದ ಸಂಪತ್ತು ಇದೆ. ನಾನೇ ಶಾಲಾ-ಕಾಲೇಜು ಪಠ್ಯಗಳಲ್ಲಿ ಅದನ್ನೆಲ್ಲ ಓದುತ್ತಾ ಬೆಳೆದವನು. ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ಅವರ ಮನೆತನದ ಇತಿಹಾಸ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಈವತ್ತು ಅವರಿಗೆ ಕಿವಿ ಕೇಳಿಸುವುದಿಲ್ಲ. ಆದರೂ ನೀವಾಡಿದ ಮಾತುಗಳಿಗೆ ಅವರು ಉತ್ತರಿಸುತ್ತಾರೆ. ೮ ಮತ್ತು ೧೧ ನಬಂರ್ನ ದಪ್ಪ ಕನ್ನಡಕವನ್ನು ಹಾಕಿಕೊಂಡಿದ್ದರೂ ಕಾಣುವುದಿಲ್ಲ, ಕಣ್ಣಿಗೆ ಕಾಣುತ್ತದೆ ಎದುರಿಗಿರುವುದೆಲ್ಲ. ಎಂದೋ ನೋಡಿದ್ದು, ಅದೆಂದೋ ಕೇಳಿದ್ದು ಕಾಣಿಸುತ್ತದೆ.
ನಾಲ್ವಡಿಯವರ ಶತಮಾನೋತ್ಸವಕ್ಕೆ ನಾವೇನು ಅವರನ್ನು ಕರೆದಿರಲಿಲ್ಲ. ವಯಸ್ಸು ಮತ್ತು ಅನಾರೋಗ್ಯಕ್ಕೆ ಗೌರವ ಕೊಟ್ಟು, ಪತ್ರಿಕೆಯಲ್ಲಿ ಸಮಾರಂಭದ ವಿವರ ಗಮನಿಸಿ, ಅವರೇ ದೂರವಾಣಿ ಕರೆ ಮಾಡಿಸಿ ಸಭಿಕರಾಗಿ ಭಾಗವಹಿಸುವೆ ಎಂದು ಒಂದು ambulance ಮಾಡಿಕೊಂಡು, ಮೂರು ಖಾಸಗಿ ಸೆಕ್ಯೂರಿಟಿ ಸಿಬ್ಬಂದಿಯೊಂದಿಗೆ ಬಂದರು. ಸಭಿಕನಾಗಿ ಕೂರುವೆ ಎಂದು ಲಲ್ಲೆ ಹಿಡಿದರು. ಅಷ್ಟು ಹಿರಿಯರು, ಗಣ್ಯರು ಎಂದು ನಾವೇ ಒತ್ತಾಯಿಸಿ ವೇದಿಕೆಯ ಮೇಲೆ ಕೂರಿಸಬೇಕಾಯಿತು. ನಾನು ಕೂಡ ಒಬ್ಬ ಭಾಷಣಕಾರನಾದ್ದರಿಂದ ಅವರ ಪಕ್ಕದಲ್ಲೇ ಕೂರಬೇಕಾಯಿತು. ಮೈಯಿಂದ ಸುಗಂಧದ ವಾಸನೆ, ವಿಗ್ಗೆ ಆವತ್ತೇ shampoo ಹಾಕಿ ಸ್ನಾನ ಮಾಡಿಸಿದ್ದರೆಂದು ಕಾಣುತ್ತದೆ, ಚೆನ್ನಾಗಿಯೇ ಮಿಂಚುತ್ತಿತ್ತು. ಅದೇಕೋ ತಮ್ಮ ಅಂಗೈಗಳನ್ನು ತಾವೇ ಪದೇ ಪದೇ ಉಜ್ಜಿಕೊಳ್ಳುತ್ತಿದ್ದರು. ಎದುರಿಗೆ ಕುಳಿತಿದ್ದ ಸಭಿಕರಲ್ಲಿ ಪ್ರತಿಯೊಬ್ಬರೂ ಅವರಿಗೆ ಗೊತ್ತಿರುವವರೇ. ಆದರೂ ಎಲ್ಲರನ್ನೂ ದೃಷ್ಟಿಸಿ, ದೃಷ್ಟಿಸಿ ನೋಡುತ್ತಲೇ ಇದ್ದರು. ನೋಡಲಿ ಪಾಪ, ಯಾರು ಯಾರೆಂದು, ಯಾರೊಬ್ಬರೆಂದು ಖಂಡಿತ ಗೊತ್ತಾಗುತ್ತಿರಲಿಲ್ಲ.
ಶಾಲಾ ಕಾಲೇಜು ದಿನಗಳಲ್ಲಿ ಅವರ ಹಿಂಬಾಲಕನಾಗಿದ್ದೆ. ಕೆಲಸಕ್ಕೆ ಸೇರಿದ ಮೇಲೆ ನಮ್ಮ ಇಲಾಖೆಗೇ ಮಂತ್ರಿಯಾದರು. ಅವರ ಕಿವಿ, ಕಣ್ಣು ಎಲ್ಲ ಚೆನ್ನಾಗಿದ್ದಾಗ ಒಂದೆರಡು ಸಮಾರಂಭಗಳಲ್ಲಿ ಅವರ ಜೊತೆ ಭಾಗವಹಿಸಿದ್ದೆ. ಪಕ್ಕದಲ್ಲೇ ಕುಳಿತಿದ್ದೆ. ಇಷ್ಟಾದರೂ ವೈಯಕ್ತಿಕವಾಗಿ ಗೊತ್ತು ಅನ್ನುವುದಕ್ಕಿಂತ, ಊರು, ಮನೆ, ಜಾತಿ, ಬೀದಿ, ಉದ್ಯೋಗದ ಪ್ರವರ ಹೇಳಿಕೊಂಡರೆ ಆಗಾಗ ಗೊತ್ತಾಗುತ್ತಿತ್ತು. ಇಲ್ಲ ಗೊತ್ತಾಗದಂತೆ ನಟಿಸುತ್ತಿದ್ದರು. ಆದರೆ ಅವರ ಸಂಬಂಧಿಕರು, ಸಹಾಯಕರು, ನೆಂಟರಿಷ್ಟರೆಲ್ಲ ನನಗೆ ಚೆನ್ನಾಗಿ ಪರಿಚಯವಿದ್ದರು. ಅವರೆಲ್ಲರ ಹೊಕ್ಕು ಬಳಕೆ ಚೆನ್ನಾಗಿತ್ತು.
ಇದೆಲ್ಲ ಏನೇ ಇರಲಿ, ಅವತ್ತು ಅವರು ನಾಲ್ವಡಿಯವರ ಬಗ್ಗೆ ಜೋಡಿಸಿಕೊಂಡು, ಜೋಡಿಸಿಕೊಂಡು ಚೆನ್ನಾಗಿಯೇ ಮಾತನಾಡಿದರು. ಹಿರಿತನದಿಂದಾಗಿ, ರಾಜಕಾರಣದಲ್ಲಿ, ಆಡಳಿತದಲ್ಲಿದ್ದ ದೀರ್ಘ ಅನುಭವದಿಂದಾಗಿ ಮಾತಿನಲ್ಲಿ ಒಂದು ತೂಕವಿತ್ತು, ನೋಟಗಳಲ್ಲಿ ಘನತೆಯಿತ್ತು.
ಸಮಾರಂಭಕ್ಕೆ ಅವರು ಬಂದಿದ್ದರೆಂಬುದೇ ಮುಖ್ಯವಾಗಿತ್ತು, ಭಾಷಣದ ತಿರುಳಿಗಿಂತ. ಏಕೆಂದರೆ, ರಾಜಕಾರಣಿಯಾಗಿ ಅವರು ಕೂಡ ಎಲ್ಲ ರಾಜಕಾರಣಿಗಳಂತೆ ಮಾಮೂಲಿಯೇ. ಪಕ್ಷಾಂತರ, ಭ್ರಷ್ಟತೆ, ಸ್ವಜನ ಪಕ್ಷಪಾತ, ಅನುಕೂಲ ಸಿಂಧುತ್ವ, ಎಲ್ಲ ವಿಷಯಗಳಲ್ಲಿ ಫಸ್ಟ್ ಕ್ಲಾಸಿನಲ್ಲಿ ಸದಾ ಪಾಸಾಗುತ್ತಿದ್ದರು.
ಸಮಾರಂಭ ಮುಗಿದ ಮೇಲೆ ಚಹಾಕ್ಕೆ ಕುಳಿತೆವು. ಮತ್ತೆ ನಾನು ಅವರ ಪಕ್ಕವೇ ಕೂರಬೇಕಾಯ್ತು. ಮಾನ್ಯರನ್ನು ಗಮನಿಸಿದೆ. ದಣಿವು ಕಾಣುತ್ತಿತ್ತು. ಸಣ್ಣಗೆ ಬೆವರುತ್ತಿದ್ದರು. ಬೆವರು ಒರೆಸಿಕೊಳ್ಳುವಷ್ಟು ಕೈ-ಬೆರಳುಗಳು ಚುರುಕಾಗಿರಲಿಲ್ಲ. ಎದುರಿಗಿದ್ದ ನೀರಿನ ಲೋಟವನ್ನು ಹಿಡಿದುಕೊಳ್ಳಲು ಕೂಡ ತುಂಬಾ ಕಷ್ಟ ಪಟ್ಟರು. ಕಲಸುತ್ತಿದ್ದ ಮಾತುಗಳಲ್ಲೇ ಎಲ್ಲರನ್ನೂ ಪರಿಚಯ ಮಾಡಿಕೊಂಡು ಏನೇನೋ ಉತ್ತರಿಸುತ್ತಿದ್ದರು.
ಇಲ್ಲ, ನಾವೆಲ್ಲ ತಪ್ಪು ಮಾಡುತ್ತಿದ್ದೇವೆ. ಸಮಾರಂಭಕ್ಕೆ ಅವರು ಬರುತ್ತೇನೆಂದಾಗ ಬೇಡವೆಂದು ಸ್ಪಷ್ಟವಾಗಿ ಹೇಳಿಬಿಡಬೇಕಿತ್ತು. ದಣಿವು, ಮರೆವು, ಅಸಹಾಯಕತೆಯಲ್ಲಿ ಒಬ್ಬರನ್ನು ನೋಡುವುದು ಕೂಡ ಅವರಿಗೆ ಅಗೌರವ ಸಲ್ಲಿಸಿದ ಹಾಗೆ, ಕುಚೇಷ್ಟೆ ಮಾಡಿದ ಹಾಗೆ ಅನಿಸಿತು. ಮಾನ್ಯರನ್ನು ಇನ್ನೂ ಸೌಜನ್ಯದಿಂದ, ಪ್ರೀತಿಯಿಂದ ಕಾಣಬೇಕೆನಿಸಿತು. ಅವರು ಯುವಕರಿಗೆಲ್ಲ ಹೀರೋ ಆಗಿದ್ದ ಒಂದು ಉಪಚುನಾವಣೆಯನ್ನು ನೆನಪಿಸಿದೆ. ಮುಖದಲ್ಲಿ ನಗೆ ಮೂಡಿತು. ಬೊಚ್ಚು ಬಾಯಿಯಿಂದಾಗಿ ನಗು ಹೃತ್ಪೂರ್ವಕವಾಗಿ ಕಂಡಿತು. ಏನೋ ಹೇಳಲು ಪ್ರಯತ್ನಿಸಿದರೇನೋ, ನಾಲಿಗೆ ಹೊರಳಾಡಿತು, ಮಾತು ಈಚೆಗೆ ಬರಲಿಲ್ಲ. ನಗುತ್ತಲೇ ಲೊಚಗುಟ್ಟಿದರು. ಕೇಕ್, ಕಾರಾಸೇವೆ, ಎಳನೀರು, ಚಹಾ ಯಾವುದೂ ಬೇಗ ಬರಲಿಲ್ಲ.
ನನಗೆ ನನ್ನ ಹತ್ತಿರ ಅವರು ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಹೊರಗಡೆ ಅಸ್ತಮಿಸಲು ತಯಾರಾಗುತ್ತಿದ್ದ ಸೂರ್ಯನ ದಿನದ ಕೊನೆಯ ಕಿರಣಗಳು ಕಿಟಕಿಯ ಮೂಲಕ ಅವರ ಮುಖವನ್ನು ಕೂಡ ತಲುಪಿ, ಅವರ ಮಾತನಾಡುವ ಪ್ರಯತ್ನ ಎಲ್ಲರಿಗೂ ಗೊತ್ತಾಗುವಂತಾಯಿತು. ಅವರ ನುಣುಪಾದ ಮುಖವನ್ನು ನನ್ನ ಕಿವಿಯ ಹತ್ತಿರವೇ ತರುತ್ತಿದ್ದರು. ಜೊತೆಯಲ್ಲಿ ಕುಳಿತವರಿಗೆ, ಎದುರು ಕುಳಿತು ನಮ್ಮನ್ನು ನೋಡುತ್ತಿದ್ದವರಿಗೆ, ನಾನು ಅವರಿಗೆ ಆಪ್ತ, ದೀರ್ಘ ಕಾಲದಿಂದ ಚೆನ್ನಾಗಿ ಪರಿಚಯವಿರುವವನು ಅನಿಸುತ್ತಿದ್ದುದು ನನಗೆ ಗೊತ್ತಾಯಿತು. ನನಗೆ ಮುಜುಗರವಾಯಿತು, ಪೇಚಿಗಿಟ್ಟುಕೊಂಡಿತು.
ಹಾಗೆ ಮಾತನಾಡುತ್ತಾ, ಮಾತನಾಡಿಸುವ ಪ್ರಯತ್ನ ಮಾಡುತ್ತಾ ಒಂದು ಕೌಟುಂಬಿಕ ಸಂಗತಿಯನ್ನು ಅವರಿಗೆ ನೆನಪಿಸಿದೆ. ಅವರ ಅಕ್ಕನ ಮಗ ಸಣ್ಣಪರ್ವತಪ್ಪ ನನಗೆ ಚೆನ್ನಾಗಿ ಗೊತ್ತಿದ್ದ. ಆವಾಗ ನಾಯಕರು ನಮ್ಮ ಇಲಾಖೆಯ ಮಂತ್ರಿ ಕೂಡ. ಮಾನ್ಯರಿಗೂ, ಸಣ್ಣಪರ್ವತಪ್ಪನವರ ಅಪ್ಪನಿಗೂ ಆಗಿ ಬರುತ್ತಿರಲಿಲ್ಲ. ಏನೇನೋ ಸಂಗತಿಗಳನ್ನು, ಆಪಾದನೆಗಳನ್ನು ಕಲ್ಪಿಸಿಕೊಂಡು ಹೇಳೋನು. ಆದರೆ ಒಂದು ವಿಷಯದಲ್ಲಿ ಮಾತ್ರ ನಾನು ನಾಯಕರ ಪರವಾಗಿದ್ದೆ. ಶೇಕಡ ನೂರಕ್ಕೆ ನೂರರಷ್ಟು ಹೆಮ್ಮೆ ಪಟ್ಟಿದ್ದೆ.
ಸಣ್ಣಪರ್ವತಪ್ಪನವರ ಮಗಳು ಚುರುಕು, ಜಾಣಿ. ಎಲ್ಲ ಪರೀಕ್ಷೆಗಳಲ್ಲೂ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಿದ್ದಳು. ಸ್ಕಾಲರ್ಶಿಪ್ ಮೇಲೆ ಜರ್ಮನಿಯಲ್ಲಿ ಸಂಶೋಧನೆ ಮಾಡುವ ಅವಕಾಶ ಸಿಕ್ಕಿತು. ೫ ವರ್ಷಗಳ ಕೋರ್ಸ್ ಅದು. ಕೋರ್ಸ್ ಮಧ್ಯದಲ್ಲಿದ್ದಾಗ ಅವಳ ತಂಗಿ, ಅಕ್ಕನಿಗಿಂತ ನಾನೇನು ಕಮ್ಮಿ ಅನ್ನುವಂತೆ ಸ್ಕಾಲರ್ಶಿಪ್ ಪಡೆದು ಜರ್ಮನಿಗೇ ಸಂಶೋಧನೆಗೆ ಹೊರಟಳು. ಇಬ್ಬರೂ ಹೆಣ್ಣು ಮಕ್ಕಳು ನಮ್ಮ ಕಾಲೋನಿಯಲ್ಲಿ ಚಿರಪರಿತರೇ. ನೋಡುವುದಕ್ಕೆ ಲಕ್ಷಣವಾಗಿದ್ದರು. ಗಿಟಾರ್ ಕ್ಲಾಸಿಗೆ ನಮ್ಮ ಮಕ್ಕಳು ಹೋಗುವ ಮೇಷ್ಟರ ಹತ್ತಿರವೇ ಹೋಗುತ್ತಿದ್ದರು. ಹಾಗಾಗಿ ನಮ್ಮ ಮನೆಗೂ ಬರುತ್ತಿದ್ದರು. ತಂಗಿ ಹೋಗುವ ಹೊತ್ತಿಗೆ ಅಕ್ಕ ಆಗಲೇ ಒಬ್ಬ ಜರ್ಮನ್ ಯುವಕನನ್ನು ಪ್ರೀತಿಸಿ love-in-relationship ನಲ್ಲಿ ಇದ್ದಳು. ತಂಗಿಯು ವಿದ್ಯೆ, ಸಂಶೋಧನೆಯಲ್ಲಿ ಮಾತ್ರವಲ್ಲ ಪ್ರೀತಿ-ಪ್ರೇಮದ ರೀತಿಯಲ್ಲೂ ಅಕ್ಕನನ್ನೇ ಅನುಕರಿಸಿ ತಾನೂ ಜರ್ಮನ್ ಯುಕನೊಬ್ಬನನ್ನು ಪ್ರೇಮಿಸಿದಳು. ಇಬ್ಬರ ಪ್ರೇಮ ಪ್ರಕರಣ, ಒಡನಾಟ, permanent residency, certification ಎಲ್ಲ ಮುಗಿದ ಮೇಲೆ, ತಾವಿಬ್ಬರೂ ಜರ್ಮನ್ ಯುವಕರನ್ನು ಮದುವೆಯಾಗುವುದಾಗಿ ಘೋಷಿಸಿದರು.
ಇಲ್ಲಿ ಸಣ್ಣಪರ್ವತಪ್ಪನವರ ಕುಟುಂಬ, ಒಕ್ಕಲಿನವರು ಹೌಹಾರಿದರು. ತಲಕಾಡ ಗಂಗರ ಜಾತಿ ಸಂಬಂಧ ಇರುವ ಪುರಾತನ ಮನೆತನ ನಮ್ಮದು. ಒಕ್ಕಲಿಗರ ಸಂಘದ Hall of Fame ನಲ್ಲಿ ಹಾಕಿರುವ ಅರ್ಧ ಫೋಟೋಗಳು ನಮ್ಮ ನೆಂಟರದೇ. ಇದುವರೆಗೆ ಒಂದೇ ಒಂದು ಹೆಣ್ಣು ಮಗು ಕೂಡ ಜಾತಿ-ಧರ್ಮ ದಾಟಿ ಮದುವೆ ಆಗಿಲ್ಲ. ಅಳಿಯಂದಿರ ವರಸೆಯಲ್ಲಿರುವವರೆಲ್ಲ ಎಂಜಿನಿಯರ್ಗಳು, ರಿಜಿಸ್ಟ್ರಾರ್ಗಳು, ಸರ್ಜನ್ಗಳು. ಎಲ್ಲರಿಗೂ ಬೆಂಗಳೂರಿನಲ್ಲಿ ಮನೆಗಳಿವೆ, ರೆವಿನ್ಯೂ ಸೈಟುಗಳಿವೆ. ಪಕ್ಷ ಮಾಸದಲ್ಲಿ ಒಕ್ಕಲಿನವರೆಲ್ಲ ಎಡೆ ಇಡಲು ಸೇರಿದಾಗ ಮೂಲಗ್ರಾಮದಲ್ಲಿ ಮುನ್ನೂರು ಕಾರುಗಳು ಬಂದು ನಿಲ್ಲುತ್ತವೆ. ಹೀಗೆಲ್ಲ ಇರುವಾಗ ಇರುವ ಇಬ್ಬರೇ ಹೆಣ್ಣು ಮಕ್ಕಳು ಹೋಗೀ ಹೋಗಿ ಬಿಳಿ ತೊಗಲಿನವರನ್ನು ಮದುವೆ ಮಾಡಿಕೊಂಡರೆ? ಮದುವೆ ಕೂಡ ಒಕ್ಕಲಿಗರ ಸಂಪ್ರದಾಯದಲ್ಲಿ ಆಗಬೇಕು ಅಂತ ಹಠ ಹಿಡಿದರೆ? ಸಣ್ಣಪರ್ವತಪ್ಪನವರು ಮತ್ತು ಒಕ್ಕಲಿಗರ ಸಮುದಾಯ ಮಾತ್ರವಲ್ಲ, ನಾವೂ ನೀವೂ ಸೇರಿದಂತೆ ಯಾವ ಮನೆತನದವರೂ ಕೂಡ ಒಪ್ಪುವುದಿಲ್ಲ ಅಲ್ಲವೇ?
ಈ ಕುರಿತು ನೆಂಟರಿಷ್ಟರ ನಡುವೆ ದಿನವೂ ನಡೆಯುತ್ತಿದ್ದ ವಾದ ವಿವಾದ, ಮಕ್ಕಳ ಹಠ, ಮುಷ್ಕರ ಎಲ್ಲವನ್ನೂ ಪ್ರತಿ ನಿತ್ಯ ನನಗೆ ಸಣ್ಣಪರ್ವತಪ್ಪ ಒಪ್ಪಿಸುತ್ತಿದ್ದರು. ಅವರ ಆರೋಗ್ಯ ಕೂಡ ಏರುಪೇರಾಗುತ್ತಿತ್ತು.
ಆವಾಗ ಈಗ ೯೦ ದಾಟಿರುವ ನಾಯಕರು ೫೦-೫೫ರ ಗಡಿಯಲ್ಲಿದ್ದರು. ಅವರೇ ಜರ್ಮನ್ ಯುವಕರ ಹತ್ತಿರ ಮಾತನಾಡಿದರು. ಪರ್ವತಪ್ಪನವರ ಹೆಣ್ಣು ಮಕ್ಕಳ ಜೊತೆ ಕೂಡ.
ಇಲ್ಲ, ಸಂತೋಷದಿಂದ ಮದುವೆ ಮಾಡಿಕೊಡಿ. ಇಬ್ಬರೂ ಯುವಕರು ಮೃದು ಸ್ವಭಾವದವರು. ಕುಟುಂಬಸ್ಥರಾಗುವ ವಾಂಛಲ್ಯವುಳ್ಳವರು. ಇಬ್ಬರ ಮನೆತನದ ಹಿರಿಯರೂ ಎರಡನೇ ಮಹಾಯುದ್ಧದಲ್ಲಿ ಬಂಧುಗಳನ್ನು ಕಳೆದುಕೊಂಡು ಮಾಗಿದವರು. ಭಾರತೀಯ ಸಂಸ್ಕೃತಿ, ಆಚರಣೆಗಳ ಬಗ್ಗೆ ಚೆನ್ನಾಗಿ ಓದಿ ತಿಳಿದುಕೊಂಡಿದ್ದಾರೆ. ಗೌರವವಿದೆ. ಹೆಣ್ಣು ಮಕ್ಕಳನ್ನು ಚೆನ್ನಾಗಿ ಬಾಳಿಸುತ್ತಾರೆ ಎಂದು ಪದೇ ಪದೇ ಬಿಡಿಸಿ ಹೇಳಿ ಒಪ್ಪಿಸಲು ಪ್ರಯತ್ನಪಟ್ಟರು.
ಅಷ್ಟು ಸುಲಭವಾಗಿ ಯಾರು ಒಪ್ಪುತ್ತಾರೆ. ನಾಯಕರಿಗೆ ರೇಗಿತು. ಈ ಇಬ್ಬರೂ ಜರ್ಮನ್ ಯುವಕರಿಗಿಂತ ಇನ್ನೂ ಉತ್ತಮ ಗುಣ ಸ್ವಭಾವದ ಗಂಡುಗಳನ್ನು ಹುಡುಕಿಕೊಂಡು ಬನ್ನಿ, ಎರಡು ತಿಂಗಳು ಟೈಮ್ ಕೊಡ್ತೀನಿ ಅಂತ ಸವಾಲು ಹಾಕಿದರು. ಹೀಗೆಲ್ಲ ಸವಾಲು ಹಾಕುವ ಧೈರ್ಯಮಾಡಲು ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದುದು, ನಾನಾ ರೀತಿಯ ಮದುವೆಗಳು, ಗಂಡು-ಹೆಣ್ಣುಗಳ ಸಂಬಂಧಗಳನ್ನು ನೋಡಿದ್ದು ಕೂಡ ಕಾರಣವಾಗಿರಬಹುದು. ನಮ್ಮ ಸಣ್ಣಪರ್ವತಪ್ಪನವರೂ, ಅವರ ನೆಂಟರಿಷ್ಟರೂ ಹಠಬಿದ್ದು ಸಮರೋಪಾದಿಯಲ್ಲಿ ಹಳೆ ಮೈಸೂರು ಸೀಮೆಯಲ್ಲಿ ಮಾತ್ರವಲ್ಲ, ಸೇಲಂ, ಕೊಯಮತ್ತೂರು, ಉದಕಮಂಡಲ, ಬಾಂಬೆ, ನೆಲ್ಲೂರು, ದೆಲ್ಲಿಯಂತಹ ಕಡೆಯೆಲ್ಲ ಮತ್ತೆ ಮತ್ತೆ ಪ್ರವಾಸ ಮಾಡಿ ತಿಪ್ಪರಲಾಗ ಹಾಕಿದರೂ ಒಂದೇ ಒಂದು ಗಂಡು ಕೂಡ ಕುದರಲಿಲ್ಲ. ಇಷ್ಟು ಹೊತ್ತಿಗೆ ಪರ್ವತಪ್ಪನವರ ಹೆಣ್ಣು ಮಕ್ಕಳ ಪ್ರೇಮದ ವಿವರಗಳು, ಮದುವೆಯ ವಿಧಾನ ಜಗಜ್ಜಾಹೀರಾಗಿ, ಸ್ವಜಾತಿಯ ಗಂಡು ಮಕ್ಕಳೇ ಮದುವೆ ಆಗಲು ಹಿಂದೇಟು ಹಾಕಿದರು.
ಈಗ ೯೦ ವರ್ಷ ದಾಟಿರುವ ನಾಯಕರು ಆವಾಗ ಧೀಮಂತಿಕೆಯಿಂದ ವರ್ತಿಸಿ ಅವರ ಸ್ಥಾನಮಾನಕ್ಕನುಗುಣವಾಗಿ ಕುಮಾರ ಪಾರ್ಕಿನ ಆಶೋಕ ಹೋಟಲಿನಲ್ಲಿ ಶಾಸ್ತ್ರೋಕ್ತವಾಗಿ, ವೇದೋಕ್ತವಾಗಿ, ಕ್ರೈಸ್ತ ಧರ್ಮಕ್ಕನುಗುಣವಾಗಿ, ಕಲ್ಯಾಣ ಮಾಡಿಸಿಕೊಟ್ಟರು. ನಾಯಕರಿಗೆ ಸಂಗೀತದ ಒಲವು ಜಾಸ್ತಿ. ಆ ಒಲವಿಗನುಗುಣವಾಗಿ ಮದ್ರಾಸಿನಿಂದ ಎಂ.ಎಲ್. ವಸಂತ ಕುಮಾರಿಯವರಿಂದ ಕಛೇರಿ. ಆವಾಗ ವಸಂತ ಕುಮಾರಿಯವರ ಮಗಳು ಇನ್ನೂ ಜೂನಿಯರ್ ಕಲಾವಿದೆ. ತಂಬೂರಿಯಲ್ಲಿ ಒಳ್ಳೆಯ ಸಾಥ್ ನೀಡಿದಳು. ಮದುವೆ-ಆರತಕ್ಷತೆ ಎರಡಕ್ಕೂ ನನ್ನನ್ನು, ಕುಟುಂಬವನ್ನು ಆಹ್ವಾನಿಸಿದ್ದುದು ನನಗೆ ಚೆನ್ನಾಗಿ ನೆನಪಿದೆ. ತಾಯಿ ಕನಕಾಂಬರ ಬಣ್ಣದ ಕಾಂಚೀಪುರಂ ರೇಶ್ಮೆ ಸೀರೆ ಉಟ್ಟುಕೊಂಡು ಬಂದಿದ್ದರೆ, ಜೂನಿಯರ್ ಕಲಾವಿದೆ ಮಗಳು, ನವಿಲು ಬಣ್ಣದ ಬಾರ್ಡರ್ ಇರುವ ಮೈಸೂರ್ ಸಿಲ್ಕ್ ಸೀರೆ ಧರಿಸಿದ್ದಳು. ನಾಯಕರು ಅಧಿಕಾರದಲ್ಲಿದ್ದುದರಿಂದ ಮುಖ್ಯ ಮಂತ್ರಿಗಳು, ಸಚಿವರು, ಸಿನೆಮಾದವರು, ಪೋಲಿಸ್, ರೆವಿನ್ಯೂ ಅಧಿಕಾರಿಗಳ ದಂಡೇ ಬಂದಿತ್ತು. ನಾನು ನೋಡಿದ ವಿವಾಹ-ಆರತಕ್ಷತೆಗಳಲ್ಲಿ ಭರ್ಜರಿಯಾಗಿದ್ದದ್ದು ಮತ್ತು cosmopolitan ಕೂಡ ಆದದ್ದು ಈ ಸಮಾರಂಭವೊಂದೇ.
ಇದನ್ನೆಲ್ಲ ಹೇಳಲು ಹೋಗದೆ, ನಾಯಕರ ಕಿವಿಯ ಆಳಕ್ಕೆ ಪ್ರವೇಶಿಸಿ, ಅವರ ನಿಲುವು, ದೂರದೃಷ್ಟಿ, ಚಾಣಾಕ್ಷತೆಯನ್ನೆಲ್ಲ ಎರಡು ಮೂರು ವಾಕ್ಯಗಳಲ್ಲಿ ಪ್ರಸ್ತಾಪಿಸಿದೆ. ಕಿವಿ ಕೆಂಪಾಯಿತು. ಮುಖ ಅಗಲವಾಯಿತು. ದೀರ್ಘಕಾಲದ ಬದುಕಿನಿಂದ ಬಳಲಿದ್ದ ಕಣ್ಣುಗಳಲ್ಲಿ ಮಿಂಚು. ನಾಯಕರು ಮೈ ಮರೆತರೆಂದು ಕಾಣುತ್ತದೆ. ತಾನು ಸಾರ್ವಜನಿಕ ಸಮಾರಂಭದಲ್ಲಿದ್ದೇನೆಂಬುದನ್ನೂ ಮರೆತು ವಿಗ್ ತೆಗೆದು ಮತ್ತೆ ಹಾಕಿಕೊಂಡರು. ಈಗ ಎಳನೀರು, ಕೇಕ್, ಕಾರಾಸೇವೆ ಎಲ್ಲ ಬಂತು. ನಾಯಕರ ಮುಖದ ಕಳೆ, ಕಣ್ಣಿನ ಮಿಂಚು ಕಡಿಮೆ ಆಗಲೇ ಇಲ್ಲ. ಅವರು ಈ ಲೋಕದಲ್ಲಿ ಇರಲೇ ಇಲ್ಲ. ನಾಲ್ಕು ತೊಟ್ಟು ಎಳನೀರಿಗೆ ತುಟಿ ಸೋಕಿಸಿದರು. ಒಂದು ಹನಿ ನಾಲಿಗೆ ಒಳಗೆ ಹೋಗದೆ ತುಟಿಯಂಚಿನಲ್ಲೇ ಉಳಿಯಿತು. ಒಂದೆರಡು ಸಲ, ನನ್ನ ಬೆನ್ನನ್ನು ಮಮತೆಯಿಂದ ಸವರಿದರು. ಅವರೊಳಗಿನ ಪುಳಕವನ್ನು ನಾನು ಸ್ಪರ್ಶದಲ್ಲಿ ಅನುಭವಿಸಿದೆ. ನಾನೂ ಪುಳಕಗೊಂಡೆ. ನನ್ನ ಮನಸ್ಸು ಕೂಡ ಹಿಂದೆ ಸರಿದು ಸುಮಾರು ಅರ್ಧ ಶತಮಾನದ ಹಿಂದೆ ನಾಯಕರು ಸಾರ್ವಜನಿಕ ಜೀವನವನ್ನು ಪ್ರವೇಶಿಸಿದಾಗ ಅವರಲ್ಲಿ ಇದ್ದ ಮುಗ್ಧತೆ, ಬದ್ಧತೆ, ಸೇವಾತತ್ಪರತೆಯನ್ನು ನೆನೆಯಿತು. ಸಮಾರಂಭಕ್ಕೆ ನಾಲ್ವಡಿ ಕೃಷ್ಣರಾಜರು ಕಾರಣರಾಗಿದ್ದರೂ ಆ ಕ್ಷಣದ ಮಟ್ಟಿಗೆ ಅವರು ಹಿಂದೆ ಸರಿದರು.

ನಾಯಕರನ್ನು ಕಳಿಸಿಕೊಡಲು ಪೋರ್ಟಿಕೋ ತನಕವೂ ನಾನೂ ಕೂಡ ಜೊತೆಯಲ್ಲಿ ಹೋದೆ. ಕಣ್ಣುಗಳಲ್ಲಿ ಮಿಂಚು ಕಡಿಮೆಯಾಗಲೇ ಇಲ್ಲ. ಸೂರ್ಯನ ದಿನದ ಕೊನೆಯ ಕಿರಣಗಳು ಕೂಡ ನಾಯಕರ ಕಣ್ಣುಗಳ ಮಿಂಚನ್ನು ಮನಸಾರೆ ಮೆಚ್ಚಿ ಪುಳಕಗೊಂಡು ನೇವರಿಸಿದವು.
ನಾಯಕರ ಕಾರಿನ ಚಲನೆಯಲ್ಲಿ ಕೂಡ ನಾನು ಲಾಸ್ಯವನ್ನು ಕಂಡೆ.

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

