Advertisement
ಅಸ್ತಿತ್ವ ಪ್ರಜ್ಞೆಯ ಆತ್ಮಾವಲೋಕನ-ಮಿಚೆಲ್ ಒಬಾಮ ಅವರ “ಬಿಕಮಿಂಗ್”: ದೇವಿಕಾ ನಾಗೇಶ್‌ ಬರಹ

ಅಸ್ತಿತ್ವ ಪ್ರಜ್ಞೆಯ ಆತ್ಮಾವಲೋಕನ-ಮಿಚೆಲ್ ಒಬಾಮ ಅವರ “ಬಿಕಮಿಂಗ್”: ದೇವಿಕಾ ನಾಗೇಶ್‌ ಬರಹ

ಒಮ್ಮೆ  ಸ್ಪರ್ಧೆಗೆ ನಿಂತಮೇಲೆ ಒಬಾಮ  ದಂಪತಿಗಳು ಗೆಲ್ಲುವ ಪ್ರಕ್ರಿಯೆಗೆ ಬೇಕಾದ ಸಿದ್ಧತೆಯಲ್ಲಿ ಚುನಾವಣೆಯ ಪ್ರಸಾರದಲ್ಲಿ ಸಂಪೂರ್ಣ ಮುಳುಗಿದರು. ಚುನಾವಣೆಯಲ್ಲಿ ಗೆಲ್ಲುವುದು ನಂತರದ ಆಗು ಹೋಗುಗಳಿಗೆ ತಲೆಯೊಡ್ಡುವುದು ಅಂದರೆ  ಅದು  ಒಂದು ಜವಾಬ್ದಾರಿ ಎನ್ನುವ  ಸ್ಪಷ್ಟತೆ ಇದ್ದ ಒಬಾಮ ದಂಪತಿಗಳಿಗೆ ಅಮೇರಿಕಾ  ಕರಿಯನೊಬ್ಬನನ್ನು ಅಧ್ಯಕ್ಷನಾಗಿ ಆಯ್ಕೆ  ಮಾಡಲು ತಯಾರಾಗಿದೆಯೇ  ಎನ್ನುವ ಸಂದೇಹ  ಚುನಾವಣ ಪ್ರಕ್ರಿಯೆಯ ಉದ್ದ ಇದ್ದೇ ಇತ್ತು. ಒಬಾಮ  ಅಮೇರಿಕಾ ಅಧ್ಯಕ್ಷನಾಗುವ  ಕನಸು, ಒಬಾಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ  ಮಾತುಕತೆ  ಆಗುತ್ತಿರುವಾಗ  ಶ್ವೇತ ಭವನದ  ಹಿತ್ತಲಿನಲ್ಲಿ  ಸಾವಯವ ತರಕಾರಿ ಬೆಳೆಸುವ ಮಿಚೆಲ್ ಕನಸು ಈ  ಎಲ್ಲವೂ ಅಮೇರಿಕಾದ ಸೆನೆಟರ್ ಆಗಿ ಒಬಾಮ ಆಯ್ಕೆಯಾದ ನಂತರ ಕಟ್ಟಿದವು!
ಮಿಚೆಲ್ ಒಬಾಮ ಆತ್ಮಕಥನ “ಬಿಕಮಿಂಗ್” ಕುರಿತು ದೇವಿಕಾ ನಾಗೇಶ್‌ ಬರಹ

“ಬಿಕಮಿಂಗ್” ಮಿಚೆಲ್ ಒಬಾಮ ಅಮೇರಿಕಾದ ೪೪ನೇ ಅಧ್ಯಕ್ಷರಾದ ಬರಾಕ್ ಒಬಾಮ ಅವರ ಪತ್ನಿ ಯ ಆತ್ಮಕಥನ. ಅಮೇರಿಕಾದ ಇಲ್ಲಿಯವರೆಗಿನ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಧ್ಯಕ್ಷರಾದ ಬರಾಕ್ ಒಬಾಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದವರು, ತನ್ನ ಸರಳತೆ ಪ್ರಾಮಾಣಿಕತೆಯಿಂದ ಜೀವಂತ ದಂತಕತೆಯಾಗಿ ಜನಮಾನಸದಲ್ಲಿ ಅವಿಸ್ಮರಣೀಯ ನೆನಪುಗಳನ್ನು ಉಳಿಸಿರುವವರು. ಮಿಚೆಲ್ ಒಬಾಮ  ಆತ್ಮ ಕಥನದ ಓದು ನನ್ನೊಳಗನ್ನು ತಟ್ಟಿದ್ದು ಈಕೆ ಬರೀ ಬರಾಕ್ ಒಬಾಮನ ಪತ್ನಿ ಎನ್ನುವ ಕಾರಣಕ್ಕಾಗಿಯಲ್ಲ. ಈ ಕೃತಿ ಆಫ್ರಿಕನ್ ಅಮೇರಿಕನ್ ಗುಲಾಮ ಸಂತತಿಯ ಮರಿ ಮೊಮ್ಮಗನ ಮಗಳಾಗಿ ವರ್ಣ ಬೇಧದ ಹಿಡಿ ಕಿಡಿ ನೆನಪುಗಳನ್ನು ಜೋಪಾನವಾಗಿ ಷೋಷಿಸಿಕೊಂಡು ಕಹಿಯಿಲ್ಲದೆ ಬದುಕು ಅರಳಿಸಬಹುದಾದ ಸಾಧ್ಯತೆಗಳತ್ತ  ಮುಖ ಮಾಡಿದೆ. ಸಾಮಾಜಿಕ ನ್ಯಾಯಕ್ಕಾಗಿ ತುಡಿಯುತ್ತ ಸಾಗಿದ, ಸದಾ ಕ್ರಿಯಾಶೀಲವಾಗಿರುವ ಸಮುದಾಯಮುಖಿ ಬದುಕು  ವಾಚಕರಲ್ಲೂ ಚೈತನ್ಯ ಮೂಡಿಸುತ್ತದೆ.

“ಮಾತಾಡು, ನಿನ್ನ ತುಟಿಗಳಿನ್ನೂ  ಸ್ವತಂತ್ರವಾಗಿವೆ, ಮಾತಾಡು, ಈ ನಾಲಿಗೆ ಇನ್ನೂ ನಿನ್ನದೇ ಆಗಿದೆ! ನಿನ್ನ ಈ ಗಟ್ಟಿ ದೇಹ ನಿನ್ನದೇ, ಮಾತನಾಡು, ನಿನ್ನ ಆತ್ಮ ಇನ್ನೂ ನಿನ್ನೊಳಗೇ ಇದೆ!” ಫೈಜ್ ಅಹ್ಮದ್ ಫೈಜ್ ಅವರ ಕ್ರಾಂತಿಗೀತೆಯ ಸಾಲುಗಳಿವು.

ಬದುಕಿನ ಕಟು ವಾಸ್ತವದ ಅನುಭವಗಳಷ್ಟನ್ನೂ ಮೆಟ್ಟಿಲಾಗಿಸಿಕೊಂಡು ಸೇವೆಯ ಒಳಸುಳಿಗಳನ್ನು ಅರಿತು ಆರಕ್ಕೇರದೆ ಮೂರಕ್ಕಿಳಿಯದೇ ಆತ್ಮಾಭಿಮಾನದ ದೃಡಹೆಜ್ಜೆಗಳನ್ನಿಟ್ಟು ಶ್ವೇತಭವನದ ಮೆಟ್ಟಲೇರಿದ ದಂಪತಿಗಳು ಬರಾಕ್ ಒಬಾಮ ಮತ್ತು ಮಿಚೆಲ್. ಸರಳ ಸಹಜವಾಗಿ  ಬದುಕುತ್ತಿದ್ದ ಮಿಚೆಲ್‌ಗೆ ದೇಶದ ಪ್ರಥಮ ಮಹಿಳೆಯಾಗಿ ಸೆಕ್ಯೂರಿಟಿಗಳ ಸರ್ಪಗಾವಲಿನಲ್ಲಿ ಎಂಟು ವರುಷ ಶ್ವೇತಭವನದಲ್ಲಿದ್ದ ದಿನಗಳು ಪ್ರಾರಂಭದಲ್ಲಿ ಉಸಿರುಗಟ್ಟಿಸುತಿತ್ತು. ಆದರೆ ಪತಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಎರಡು ಅವಧಿಯ ಅಧ್ಯಕ್ಷಗಿರಿಯನ್ನು  ತನ್ನ ನಿಲುವಿಗೂ ಬದ್ಧವಾಗಿದ್ದುಕೊಂಡು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿ ಅಲ್ಲಿಂದ ಹೊರಗೆ ಬರಲು ಸಾಧ್ಯವಾಗಿರುವುದರಲ್ಲಿ ಮಿಚೆಲ್ ದೇಣಿಗೆಯು ಇದೆ. ಕೆರೆಯ ನೀರನು ಕೆರೆಗೆ ಚೆಲ್ಲುವಂತೆ ಇಲ್ಲಿ  ಕಳೆದ ದಿನಗಳು ನಂತರ ಇವರು ಜನಸಾಮಾನ್ಯರಂತೆ ಬದುಕು ಪಾರಂಭಿಸಿದ ನಂತರದ ದಿನಗಳು ಈ ಕಥಾನಕದಲ್ಲಿದೆ. ಹಾಗಾಗಿ ಈ ಓದು ಬದುಕಿನಲ್ಲಿ ಅಧ್ಯಾತ್ಮ ಅಂದರೆ ಇದಲ್ಲದೆ ಇನ್ನೇನು ಎನ್ನುವ ಭಾವ ಮೂಡಿಸಿತು.

ಮಿಚೆಲ್ ಬರೆದ ಈ ಕಥಾನಕದ ಮೊದಲ ನೂರು ಪುಟಗಳಲ್ಲಿ ಕೆಳ ಮಧ್ಯಮ ವರ್ಗದ ಹುಡುಗಿಯ ಬಾಲ್ಯ, ಯೌವನದ ಲವಲವಿಕೆಯ ಜೀವನದ ಜಿನುಗುಗಳಿವೆ.   ಶಾಲೆ ಕಾಲೇಜು ದಿನಗಳಲ್ಲಿ ಮಕ್ಕಳ ಜೊತೆ, ಯುವಜನರ ಜೊತೆ ಕೆಲಸ ಮಾಡಿದ ಮಿಚೆಲ್  ವಕೀಲೆಯಾಗಿ ವೃತ್ತಿ ಜೀವನ ಪ್ರಾರಂಭಿಸಿ ಒಂದು ಹಂತದಲ್ಲಿ ಇದು ತನ್ನ ಕ್ಷೇತ್ರವಲ್ಲ ಎಂದು ಮನಗಂಡು ಅನುತ್ಪಾದಕ  ವಲಯದಲ್ಲಿ ಸಮಾಜಸೇವಕಿಯಾಗಿ, ಸ್ವಯಂ ಸೇವಾಸಂಸ್ಥೆಯ ನಿರ್ದೇಶಕಿಯಾಗಿ, ಆಸ್ಪತ್ರೆಯೊಂದರ ಉಪಾಧ್ಯಕ್ಷೆಯಾದವಳು.  ಮಿಚೆಲ್ ಒಬಾಮ ಮಾಡುವ ಯಾವ ಕೆಲಸವೇ ಆಗಿರಲಿ “ದಿ ಬೆಸ್ಟ್” ಆಗಿರಬೇಕು ಎನ್ನುವ ತುಡಿತ ಆಕೆಯಲ್ಲಿ ಬಾಲ್ಯದಿಂದಲೂ ಜಾಗ್ರತವಾಗಿತ್ತು.

ರಾಜಕೀಯವಾಗಿ ಸಕ್ರಿಯವಾಗಿರಬೇಕಾದ ಅಗತ್ಯದ ಪಾಠ ಮಿಚೆಲ್ ಕಲಿತದ್ದು ಹೈಸ್ಕೂಲ್‌ನಲ್ಲಿ ಗೆಳತಿ ಸಾನಿಟಿಯಾ ಜ್ಯಾಕ್ಸನ್ ಕುಟುಂಬದ ಸಹಚರ್ಯದಿಂದ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಜೊತೆ ಕೆಲಸ ಮಾಡುತಿದ್ದ ಸಾನಿಟಿಯಾಳ ತಂದೆ ಜೋಸ್ ಜ್ಯಾಕ್ಸನ್ PUSH ಸಂಸ್ಥೆಯನ್ನು ಹುಟ್ಟು ಹಾಕಿದವರು. ಇದು ಚಿಕಾಗೊದಲ್ಲಿ ಅವಕಾಶ ವಂಚಿತರಾಗಿ ಅಂಚಿನಲ್ಲಿರುವ ಆಫ್ರಿಕನ್ ಅಮೇರಿಕನ್ ರ ಹಕ್ಕುಗಳಿಗಾಗಿ ಹೋರಾಟಗಳನ್ನು ಸಂಘಟಿಸುತ್ತ ಸದಾ “ಡೌನ್ ವಿಥ್ ಡೋಪ್ ಅಪ್ ವಿಥ್ ಹೋಪ್” ಮಂತ್ರ  ಪಠಿಸುತ್ತ ಸಕ್ರಿಯವಾಗಿತ್ತು. ಮಿಚೆಲ್  ಮತ್ತು ಸಾನಿಟಿಯಾ ತಮ್ಮ  ಯೌವನವನ್ನು PUSH ನ ಮುಖ್ಯ ಕಛೇರಿ ಹೈಡ್ ಪಾರ್ಕ್‌ನಲ್ಲಿ ಕಳೆಯುತ್ತಿದ್ದರು. ಅಮೇರಿಕಾದಲ್ಲಿ  ಕಪ್ಪು ಜನಾಂಗವಾದ ಆಫ್ರಿಕನ್ ಅಮೇರಿಕನ್‌ರ ಯುವಸಮೂಹದ ಹಕ್ಕುಗಳ ಚಳವಳಿ ಸಕ್ರಿಯವಾಗಿರಲು ಇವರು ಶ್ರಮಿಸುತ್ತಿದ್ದರು.

ಪ್ರಿನ್ಸ್ಟನ್ ಕಾಲೇಜ್‌ನಲ್ಲಿ ಪ್ರವೇಶ ಪಡೆಯಲು 8 ತಿಂಗಳು ಕಾಯುವ  ಸಂದರ್ಭದಲ್ಲಿ ಬುಕ್ ಬೈಂಡಿಂಗ್ ಶಾಪ್‌ನಲ್ಲಿ ಮಿಚೆಲ್ ಕೆಲಸ ಮಾಡಿದಳು. ಈ ಹಂತದಲ್ಲಿ ಮಿಚೆಲ್‌ಗೆ ಅಣ್ಣ ಕ್ಯಾರೀಗ್‌ನ ಗೆಳೆಯ  ಡೇವಿಡ್ ಜೊತೆ ಸ್ನೇಹ ಆತ್ಮೀಯತೆಗೆ ತಿರುಗಿತ್ತು. ಪ್ರಿನ್ಸ್ಟನ್ ಕಾಲೇಜ್‌ಗೆ ಸೇರುವಾಗ ಮಿಚೆಲ್ ತಂದೆಯ ಜೊತೆ ಡೇವಿಡ್ ಕೂಡ ವಿದಾಯ ಹೇಳಲು ಬಂದಿದ್ದ. ಪ್ರಿನ್ಸ್ಟನ್‌ನಲ್ಲಿ ಅವಳಿಗೆ  ಗೆಳತಿಯಾದವಳು ನೈಜೀರಿಯಾ ಹುಡುಗಿ ಸುಝನ್ನೆ ಅಲಿಲಿ, ಈಕೆ ಮಿಚೆಲ್‌ಳ ರೂಂ ಮೇಟ್ ಕೂಡ. ಜೀವನವನ್ನು  ಜಾಲಿ ಆಗಿ ಕಳೆಯುವ ಸುಝನ್ನೆ ಸ್ನೇಹ ಮಿಚೆಲ್‌ಗೆ ದಿನನಿತ್ಯದ ಏಕತಾನತೆಗೆ ಬೇಕಾದ ತುಸು ಬಿಡುಗಡೆಯ ಸವಿ ಉಣಿಸಿತು. ಕುಟುಂಬ ಸ್ನೇಹವಾಗಿ ಮುಂದುವರಿದ ಅನುಬಂಧ ಸುಝನ್ನೆಳ ಕಾನ್ಸರ್ ತಂದ ಅಕಾಲ ಮರಣದೊಂದಿಗೆ ಕೊನೆಯಾಯಿತು. ಪ್ರಿನ್ಸ್ಟನ್ ಕಾಲೇಜಿನಲ್ಲಿ ಕಪ್ಪು, ಬಿಳಿ ಎನ್ನುವ  ಭೇದವಿಲ್ಲದೆ ಪರಸ್ಪರ ಬೆರೆಯುವುದು ಮಿಚೆಲ್‌ಗೆ  ಸಾಧ್ಯವಾಯಿತು. ಈ ಆದರೂ  ಕಪ್ಪು ಸ್ನೇಹಿತರ ಜೊತೆಗಿರುವಾಗ ಸಿಗುವ ನಿರಾಳತೆ ಮತ್ತು ಬೆಂಬಲದ ಭಾವ ಯಾಕೋ ಇತರರ  ಜೊತೆಗಿರುವಾಗ ಸಾಧ್ಯವಾಗುತ್ತಿರಲಿಲ್ಲ.

ಪ್ರಿನ್ಸ್ಟನ್ ಕಾಲೇಜ್‌ನಲ್ಲಿ  ಓದಲು ಬರುವ ಆಫ್ರಿಕನ್ ಅಮೇರಿಕನ್ ವಿದ್ಯಾರ್ಥಿಗಳಿಗೆ ತವರಿನ  ಭಾವ ಮೂಡಿಸುವ ಥರ್ಡ್ ವರ್ಲ್ಡ್ ಸೆಂಟರ್ (TWC)ಮಿಚೆಲ್ ಗೆ ಅಣ್ಣನ  ಮೂಲಕ ಪರಿಚಯವಾಯಿತು. ಕಾಲೇಜು ಖರ್ಚು ವೆಚ್ಚ ನಿಭಾಯಿಸಿಕೊಂಡು ಹೋಗಲು ಕೆಲಸಕ್ಕಾಗಿ ಕಾತರಿಸುತ್ತಿದ್ದ  ಮಿಚೆಲ್ ಗೆ TWC ನಿರ್ದೇಶಕರಾಗಿದ್ದ  30ರ ಹರೆಯದ ಚ್ಜ್ರ್ಣೋಯ್ ಬ್ರಸುಲ್‌ಗೆ ಅಸಿಸ್ಟೆಂಟ್ ಆಗಿ ವಾರದಲ್ಲಿ  ಅರವತ್ತು ಘಂಟೆ  ಕೆಲಸ ಮಾಡುವ ಅವಕಾಶ  ಸಿಕ್ಕಿತು.

ಓದು ಮತ್ತು ದುಡಿಮೆ ಜೊತೆ ಜೊತೆಗೆ ಸಲೀಸಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದ ಮಿಚೆಲ್ ಗೆ “ಬೇಬಿ ಸಿಟ್ಟರ್ ಕೆಲಸ ನೀನು  ನಿಭಾಯಿಸಿಕೊಂಡು ಹೋಗಬಲ್ಲೆ… ಪ್ರಿನ್ಸ್ಟನ್ ಕ್ಯಾಂಪಸ್ ಉದ್ಯೋಗಿಗಳ  ಮಕ್ಕಳ ಬಿಡುವಿನ ಬೇಕು  ಬೇಡಗಳನ್ನು ನಿಭಾಯಿಸಲು ನೀನು ಸೂಕ್ತ  ವ್ಯಕ್ತಿ” ಎಂದು ಸೂಚಿಸಿ ಆಗು ಮಾಡಿದವಳು ಚ್ಜ್ರ್ಣೋಯ್. ಪದವಿ  ಮುಗಿಸುತ್ತಿದ್ದಂತೆ ಮಿಚೆಲ್ ಹಾರ್ವರ್ಡ್ ಲಾ ಕಾಲೇಜಿನಲ್ಲಿ ಮೂರು ವರ್ಷದ  ಪದವಿ ಮುಗಿಸಿದಳು. ಆ ಕೂಡಲೇ ಸಿಡ್ಲೆ ಅಂಡ್ ಆಸ್ಟಿನ್ ಎನ್ನುವ ಚಿಕಾಗೋ ಮೂಲದ ಸಂಸ್ಥೆ ಯಲ್ಲಿ ನಿರೀಕ್ಷೆಗೂ ಮೀರಿದ ಸಂಬಳ ಬರುವ ಕೆಲಸವೂ ಕೈಯಲ್ಲಿತ್ತು. ಇಲ್ಲಿ ಆಕೆಯನ್ನು ಆಗಿನ್ನೂ ಹಾರ್ವಾಡ್ ನಲ್ಲಿ ಲಾ ಓದುತ್ತಿದ್ದ ಸಂಸ್ಥೆಗೆ  ಇಂಟರ್ನಾಗಿ ಬರುತ್ತಿದ್ದ   ಬರಾಕ್ ಒಬಾಮನ ವಿಶಿಷ್ಟ ವ್ಯಕ್ತಿತ್ವ ಅದೇಕೋ ಸೆಳೆಯುತ್ತಿತ್ತು. ಹೀಗೆ  ಇಬ್ಬರ  ನಡುವೆ  ಸ್ನೇಹ ಬೆಳೆಯಿತು. ಬಿಡುವಿನ ವೇಳೆಯನ್ನು ಯಾವಾಗಲೂ ವ್ಯರ್ಥವಾಗಿ ಕಳೆಯದ ಸಮುದಾಯ ಕೇಂದ್ರಗಳಲ್ಲಿ ಕಮ್ಯುನಿಟಿ ಕೋ -ವರ್ಕರ್ ಆಗಿ ಸಮುದಾಯದ ಅಭಿವೃದ್ಧಿಗಾಗಿ  ಕೆಲಸಮಾಡುತ್ತಿದ್ದ ಅವನ  ಆಕರ್ಷಕ ವ್ಯಕ್ತಿತ್ವ ಅವನ  ಬಗ್ಗೆ  ಹೆಚ್ಚು  ತಿಳಿದುಕೊಳ್ಳುವ  ಕುತೂಹಲ  ಹುಟ್ಟಿಸಿತ್ತು. “down we settle on the world as it is  or do we work  for the world as it should be”ಎಂಬ ಧ್ಯೇಯ ವಾಕ್ಯದೊಂದಿಗೆ ಒಂದು ಬದ್ಧತೆಯಲ್ಲಿ ಚರ್ಚುಗಳಲ್ಲಿ  ಸಮದಾಯ ಕೇಂದ್ರಗಳಲ್ಲಿ ಮಹಿಳೆಯರ, ಜನಸಾಮಾನ್ಯರ ಜೊತೆ ಕೆಲಸ ಮಾಡುತ್ತ ಸಾಮಾಜಿಕ ನ್ಯಾಯಕ್ಕಾಗಿ ತುಡಿಯುವ ನೇರ ನುಡಿಯ ಬರಾಕ್ ಒಬಾಮನನ್ನು ಮಿಚೆಲ್ ಗುಪ್ತವಾಗಿ ಪ್ರೀತಿಸುತ್ತಿದ್ದಳು. ಆತನಿಗೂ ತನ್ನ ಮೇಲೆ ಅದೇ ಭಾವವಿರುವುದು ತಿಳಿದಾಗ ಅವನ  ಜೊತೆ ಹೆಚ್ಚು ಸಮಯ ಕಳೆಯತೊಡಗಿದಳು. ಆತ ತನ್ನ ಇತರ ಸ್ನೇಹಿತರಿಗಿಂತ ಭಿನ್ನ, ತೂಕದ ವ್ಯಕ್ತಿತ್ವದವ. ಆತನ ಜೊತೆಗಿರುವಾಗ ತನ್ನಲ್ಲಿ ಮೂಡುತ್ತಿದ್ದ ಸೆಕ್ಯೂರ್ ಭಾವ, ಹೆಣ್ಣು ಮಕ್ಕಳನ್ನು ಗೌರವದಿಂದ ನಡೆಸಿಕೊಳ್ಳುವ ಆತನ ನಡೆ ನುಡಿ ಇತನ ಜೊತೆ ಬದುಕು ಕಳೆಯಬಹುದು ಎಂಬ ಧೈರ್ಯ ಮಿಚೆಲ್‌ಗೆ ನೀಡಿತ್ತು. ಇಬ್ಬರೂ ಹೆಚ್ಚು ಹೆಚ್ಚು ಬೆರೆತಂತೆ ಯಾವುದೇ ಸೋಗುಗಳಿಲ್ಲದ ಈ ಸಂಬಂಧದಲ್ಲಿ ಅರಳುವ ಸಾಧ್ಯತೆಗಳ ನಿಕರತೆ ಮೂಡತೊಡಗಿಸಿತು. ತಡ ರಾತ್ರಿಗಳನ್ನು ಓದಿನಲ್ಲಿ ಕಳೆಯುತ್ತಿದ್ದ ಓಬಾಮನ ಚಾಳಿ  ಇವಳಿಗೂ  ಅಂಟಿತು. ಈ ನಡುವೆ ಓದು ಮುಗಿಸಲು ಒಬಾಮ ಹಾರ್ವರ್ಡ್‌ಗೆ ತೆರಳಿದ.

ಸಿಡ್ಲೆ ಅಂಡ್ ಆಸ್ಟಿನ್ ಸಂಸ್ಥೆಯ ಕೆಲಸದ ನೆಪದಲ್ಲಿ ಚಿಕಾಗೊದಿಂದ ಕೇಂಬ್ರಿಜ್ಡ್ ಗೆ ಆಗಾಗ್ಗೆ ಹೋಗುವ ಅವಕಾಶ ಹಾರ್ವರ್ಡ್‌ನಲ್ಲಿ ಲಾ ಓದುತ್ತಿದ್ದ  ಒಬಾಮನ್ನು ಮತ್ತೆ ಮತ್ತೆ ಭೇಟಿಯಾಗಲು ಆತನನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಮಿಚೆಲ್‌ಗೆ ಅವಕಾಶ ನೀಡಿತು. ಉಳಿದಂತೆ ಫೋನ್ ಕರೆಗಳು ಇಬ್ಬರ ಪ್ರೀತಿಯನ್ನು ತಾಜಾವಾಗಿ ಇರಿಸಲು ಸಹಕರಿಸಿತು.

ಬದುಕಿನ ಯಾವ ಅನುಭವವೂ ಹುಸಿಹೋಗುವುದಿಲ್ಲ. ಒಂದಲ್ಲ ಒಂದು ಸನ್ನಿವೇಶದಲ್ಲಿ ನಮ್ಮ  ಗುರಿ ತಲುಪುವುದಕ್ಕೆ ಅವು  ಮೆಟ್ಟಲಾಗುತ್ತವೆ ಎನ್ನುವುದಕ್ಕೆ ಮಿಚೆಲ್  ಬದುಕು  ಒಂದು ಉದಾಹರಣೆ. ಬಾಲ್ಯದಲ್ಲಿ ಅಜ್ಜಿಯನ್ನು ಅಜ್ಜ ಮಾತಿನ ಚಾಟಿಯಲ್ಲಿ ದಂಡಿಸುವುದನ್ನು ಅಜ್ಜಿಯೂ ಸೇರಿದಂತೆ ಹಿರಿಯರೆಲ್ಲ  ಮೌನವಾಗಿ ಸಹಿಸುತ್ತಿದ್ದರೆ ಸೂಕ್ಷ್ಮ ಮನಸ್ಸಿನ ಸಣ್ಣ ಮಗು ಮಿಚೆಲ್ ಇದನ್ನು ವಿರೋಧಿಸುತ್ತಿದ್ದಳು. ಗಂಡು ಹೆಣ್ಣು ಯಾರಿಗೆ ಯಾರೂ ಕಡಿಮೆಯಲ್ಲ. ಇಬ್ಬರೂ ಸಮಾನ ಗೌರವಕ್ಕೆ ಅರ್ಹರು ಎನ್ನುವ  ನಿಲುವು ಆಕೆಯದು. ಸಂಗಾತಿಯ ಆಯ್ಕೆಯ ಸಂದರ್ಭದಲ್ಲೂ ಬದುಕಿನ ಅತಿ ಮುಖ್ಯ ನಿರ್ಧಾರಗಳಲ್ಲೂ ಮಿಚೆಲ್‌ಗೆ ಈ ಎಚ್ಚರ ಇದ್ದದ್ದು ಕೃತಿಯ  ಓದಿನ ಉದ್ದ ಗಂಭೀರವಾಗಿ ಗಮನಿಸಬೇಕಾದ ಅಂಶ.

ವಿದ್ಯಾರ್ಥಿ ಇರುವಾಗಲೇ “ಹಾರ್ವರ್ಡ್‌ ಲಾ ರಿವ್ಯೂ” ಎನ್ನುವ ಪ್ರಖ್ಯಾತ ಮಾಸಿಕ  ಮ್ಯಾಗಝಿನ್‌ನ ವಿದ್ಯಾರ್ಥಿಸಂಪಾದಕ ಹಾಗೂ, ಅಧ್ಯಕ್ಷನಾಗಿ ಮಹತ್ತರ ಜವಾಬ್ದಾರಿ  ಹೊತ್ತಿದ್ದ ಹಾರ್ವರ್ಡ್‌ ಲಾ ಕಾಲೇಜ್ ಇತಿಹಾಸದಲ್ಲಿ ಆಫ್ರಿಕನ್ ಅಮೇರಿಕನ್ ಆಗಿ ಒಬಾಮ ಮೊದಲನೆಯವನು. ತನ್ನ ಗುರಿಯ ಸ್ಪಷ್ಟತೆ ಇದ್ದ ಒಬಾಮ  ವಿದ್ಯಾರ್ಥಿ ಜೀವನದಲ್ಲಿ ದುಡಿಯುತ್ತಿದ್ದ. ಆದರೂ ಹಣ ಸಂಪಾದನೆಯನ್ನು ಕನಿಷ್ಟ ಎಂದು ಭಾವಿಸಿದ್ದವ. ಸ್ವಾವಲಂಬಿ ಸ್ವತಂತ್ರ ವ್ಯಕ್ತಿತ್ವದವ ಒಬಾಮ, ಅವನ ಜೊತೆಗಿನ ಬದುಕು ಸಂಘರ್ಷದ ಹಾದಿ ಎನ್ನುವ ಕಲ್ಪನೆಯಿದ್ದ ಮಿಚೆಲ್ ಆದರೂ ಅಲ್ಲಿರುವ ಥ್ರಿಲ್‌ಗಾಗಿ ತನ್ನ ತೀರ್ಮಾನದಲ್ಲಿ ಹಿಂಜರಿಯಲಿಲ್ಲ.

೧೭ರ ಹರೆಯದಲ್ಲಿ ಹವಾಯಿಯಲ್ಲಿ ಓದುತ್ತಿರುವಾಗ ಕೀನ್ಯಾ ಮೂಲದ ಹುಸೇನ್‌ನನ್ನು ಮದುವೆಯಾಗಿ ಒಬಾಮನನ್ನು ಹೆತ್ತ ಅನ್ನಾ ಡನ್ನ್ ಹಮ್ ನಂತರ  ಈ ವಿವಾಹದಿಂದ ವಿಚ್ಛೇದನ ಪಡೆದು ಇಂಡೋನೇಷ್ಯಾ ಮೂಲದ ಜಿಯೊಲಜಿಸ್ಟ್ ಲೊಲೊ ಸೋಟೋರೋನನ್ನು  ವಿವಾಹವಾಗಿ ಇಂಡೋನೇಷ್ಯಾಗೆ  ಮಗನ ಜೊತೆ ತೆರಳಿದಳು. ನಂತರ ಒಬಾಮಾಗೆ 10 ವರುಷ ಇರುವಾಗ  ಮಲತಂಗಿ ಮಾಯ ಜೊತೆ ಅಮ್ಮನ ಹೆತ್ತವರಾದ ಅಜ್ಜ, ಅಜ್ಜಿ ಸ್ಟ್ಯಾನಿ  ಮತ್ತು ಮೆಡಲಿನ ಜೊತೆಗಿರಲು ಹೊನೋಲುಲುಗೆ  ಬಂದ. ತನ್ನ ಎರಡು ವರುಷದಿಂದ ಹತ್ತು ವರುಷದವರೆಗೆ ಮಲತಂದೆಯ ಜೊತೆ  ಚೆನ್ನಾಗಿಯೇ  ಇದ್ದ  ಒಬಾಮಗೆ ಅಲ್ಲಿ ಕಲಿತ  ಪಾಠ ಎಂತಹ  ಪ್ರತಿಕೂಲ  ಪರಿಸ್ಥಿತಿಯಲ್ಲೂ ಕುಗ್ಗದೆ  ಚೇತರಿಸಿಕೊಳ್ಳುವ ಗುಣ ಕಲಿಸಿತು.  ಮಲ ತಂದೆ ಕಲಿಸಿದ “ಪಾಠ” ಜಗತ್ತು  ಹೇಗೆ  ಕಾರ್ಯ  ನಿರ್ವಹಿಸುತ್ತದೆ ಎಂಬುದರ ಕುರಿತಾದ ಅತ್ಯಂತ ವಾಸ್ತವಿಕ ಹಾಗೂ ಕಠೋರ ಮೌಲ್ಯಮಾಪನ”. ಒಬಾಮ ಬದುಕಿನ  ಹಿನ್ನೆಲೆ ಮಿಚೆಲ್ ಆತ್ಮಕಥನದಲ್ಲಿ ಯಾಕೆ ಮುಖ್ಯ ಎನ್ನುವ ಪ್ರಶ್ನೆ ಗೆ ಉತ್ತರ ದಂಪತಿಗಳಿಬ್ಬರೂ ಜೊತೆಗೂಡಿ ಕಟ್ಟಿಕೊಂಡ ಬದುಕು ಏರಿದ ಎತ್ತರ. ಅಮೇರಿಕಾದ  ಸಮಾಜಕ್ಕಿರುವ ಈ ಸ್ಥಿತಿಸ್ಥಾಪಕ ಗುಣವೇ ಇದಕ್ಕೆ ಕಾರಣವಿರಬಹುದು. ಯಾವುದೇ ವ್ಯಕ್ತಿತ್ವವೂ ಬದುಕಿನ ಅನುಭವಗಳನ್ನು ಸಕಾರಣವಾಗಿ ಧನಾತ್ಮಕವಾಗಿ ಬಳಸಿಕೊಂಡರೆ ವರ್ತಮಾನದಲ್ಲೂ ಇಂತಹ ಸಾಧ್ಯತೆಗಳಿಗೆ ಕೊರತೆಯಿಲ್ಲ ಎನ್ನುವ ಭರವಸೆ ಈ ಇಡೀ ಕಥಾನಕದ ಮೂಲಧಾತು.

ಭಾರತೀಯರಾದ ನಾವು ಹೇಳಬಹುದಾದ ಆದರ್ಶ ಕುಟುಂಬ ಮಿಚೆಲ್ ಹೆತ್ತವರದ್ದು. ಮಕ್ಕಳಮೇಲೆ ಹಣ ಖರ್ಚು ಮಾಡುವುದು ಹೂಡಿಕೆ ಎಂದು ತಿಳಿದು ಮಕ್ಕಳ ಆಯ್ಕೆಗಳನ್ನು ಗೌರವಿಸಿ ಸ್ವತಂತ್ರ ನೀಡಿದ್ದ ಮಿಚೆಲ್ ಹೆತ್ತವರು ಮಗ ಬಾಸ್ಕೆಟ್ ಬಾಲ್‌ನಲ್ಲಿ ಮುಂದುವರಿಯುವುದಕ್ಕೆ ಪ್ರೋತ್ಸಾಹ ನೀಡಿದ್ದರು. ಮಗಳು ಮಿಚೆಲ್‌ಗೆ ಕೂಡ ಅವಳ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಬೆಂಬಲವಾಗಿದ್ದರು.  ಮಿಚೆಲ್‌ಗೆ ಒಬಾಮ ಜೀವನ ಸಂಗಾತಿಯಾಗುವುದಕ್ಕೆ ಹೆತ್ತವರ, ಅಣ್ಣನ ಬೆಂಬಲವಿತ್ತು.

ಕೈತುಂಬಾ ಸಂಬಳ ಬರುತ್ತಿದ್ದ ವಕೀಲ ವೃತ್ತಿಯನ್ನು  ತೊರೆದು ಕಡಿಮೆ ವೇತನ ಬರುವ ಅನುತ್ಪಾದಕ ಕ್ಷೇತ್ರವನ್ನು ತನ್ನ ಖುಷಿಗಾಗಿ ವೃತ್ತಿಯಾಗಿ ಸ್ವೀಕರಿಸುವಾಗ ಮಿಚೆಲ್‌ಗಾದ ತಳಮಳ ಆತಂಕಗಳಿಗೆ ಸಾಂತ್ವನವಾಗಿ ಬೆನ್ನಿಗೆ ನಿಂತವರು ಪತಿ ಒಬಾಮ ಮತ್ತು ಸ್ನೇಹಿತರು.

ಚಿಕಾಗೊದ ಮೇಯರ್ ದಾಲೆಗೆ ಅಸಿಸ್ಟೆಂಟ್ ಆಗಿ ವಲೇರಿಯೆ ಜೊತೆ ಮಿಚೆಲ್ ಕೆಲಸ ಪ್ರಾರಂಭಿಸಿದಳು. ಇಲ್ಲಿ ಆಕೆಗೆ ಅಮೇರಿಕಾ  ಸರಕಾರದ  ಆರೋಗ್ಯ, ಮಾನವ ಸಂಪನ್ಮೂಲಗಳನ್ನು ಒಳಗೊಂಡಂತೆ ಇತರೇ  ಸಾಮಾನ್ಯ ಆಗುಹೋಗುಗಳ ಪರಿಚಯ ಆಯಿತು. ಚಿಕಾಗೋದಲ್ಲಿ ಹುಟ್ಟಿ ಬೆಳೆದ ಮಿಚೆಲ್  ಅರಿಯದ ಚಿಕಾಗೋದ ಇನ್ನೊಂದು ಮುಖ ಈ ಕೆಲಸದ ಅನುಭವ ನೀಡಿತು.

ಜನಸೇವೆಯ ನಾಡಿ ಮಿಡಿತ ಜನಸಾಮಾನ್ಯರ ದಿನನಿತ್ಯದ ಬದುಕಿನ ಆಗು ಹೋಗುಗಳಲ್ಲಿ ಸ್ಪಂದಿಸುವುದರಲ್ಲಿದೆ ಎಂದು ಅರಿಯತೊಡಗಿದಂತೆ ತನ್ನ ಗುರಿಯಲ್ಲಿ ಸ್ಪಷ್ಟತೆಯಿದ್ದರೆ ಈ ಕೆಲಸ ಸಲೀಸಾಗಿ ಸಾಗುವುದೆಂಬ ಧೈರ್ಯ ಬಂತು.

ಹಾರ್ವರ್ಡ್‌ನಲ್ಲಿ ವಕೀಲಿ ಮುಗಿಸಿ ಬಾರ್ ಪರೀಕ್ಷೆಯನ್ನು ಉತ್ತೀರ್ಣನಾದ ಒಬಾಮ ಚಿಕಾಗೋದಲ್ಲಿಯೇ ಮಿಚೆಲ್ ಜೊತೆಗೆ ನೆಲೆಸಲು ನಿರ್ಧಾರ ಮಾಡಿದ್ದ. ಆತನಿಗೆ  ಅವಕಾಶಗಳ ಮಹಾಪೂರವೇ ಹರಿದು ಬಂದರೂ ತನ್ನ ಪ್ರವೃತ್ತಿಗೆ ಹೊಂದಿಕೆಯಾಗುವ ಕೆಲಸದಲ್ಲಿ ತೊಡಗಿ ಕೊಂಡ. “ಓಟರ್” ಸಂಸ್ಥೆಯ ನಿರ್ದೇಶಕನಾದ ನಂತರ ಚುನಾವಣೆಗೆ ಜನ ಮನಸ್ಸುಗಳನ್ನುರೂಪಿಸುವ ಪ್ರಜಾಪ್ರಭುತ್ವದಲ್ಲಿ ಓಟ್ ಗೆ ಇರುವ ಮಹತ್ವ ಮನದಟ್ಟು ಮಾಡುವ ಕೆಲಸದ ಮುಖ್ಯ ಕಾರ್ಯ ನಿರ್ವಾಹಕನಾಗಿ ಟೀಂ ವರ್ಕ್ ಪ್ರಾರಂಭಿಸಿದ. ಓಟರ್ ಲಿಸ್ಟ್‌ನಲ್ಲಿ ಸೇರದೇ ಇರುವ ಒಂದೂವರೆ ಮಿಲಿಯಕ್ಕೂ ಹೆಚ್ಚು ಆಫ್ರಿಕನ್ ಅಮೇರಿಕನ್‌ರನ್ನು ಈ ಪರಿಧಿಯೊಳಗೆ ತರುವ ಸಲುವಾಗಿ ತಳ ಹಂತದ ಸಮುದಾಯ ಮುಖಂಡರ ಜೊತೆ ಅವಕಾಶ ಆದಾಗೆಲ್ಲ ಅಮೇರಿಕಾದ ಮೂಲೆ ಮೂಲೆಗೂ ಹೋಗುವ ಸವಾಲು ಆಗ ಅವರಿಗಿತ್ತು. ಸಾಮಾಜಿಕ ನ್ಯಾಯದ ಪರವಾಗಿದ್ದ ಒಬಾಮ ಈ ಯಾವ ಕೆಲಸವನ್ನು ಬದ್ಧತೆಯಿಂದ ಮಾಡಿದ್ದ. ದೇಶ, ಭಾಷೆ ವರ್ಣ ರಹಿತವಾದ ಆತನ ಜೀವಪರ ಕಾಳಜಿ, ಸಮುದಾಯ ಆ ಮೂಲಕ ಸಮಾಜದ ಭೂಮಿಯಲ್ಲಿರುವ ಪ್ರತಿ ಜೀವ ಚೈತನ್ಯದಾಗಿತ್ತು.

ಈ  ಹಂತದಲ್ಲಿ ಅಮೇರಿಕಾದ ಡೆಮೊಕ್ರಾಟಿಕ್ ಪಕ್ಷದ ಸದಸ್ಯನಾಗಿದ್ದ. ಒಬಾಮ ಪ್ರಾಜೆಕ್ಟ್ ಓಟ್ ನಲ್ಲಿ  ಕೆಲಸ  ಮಾಡುತ್ತಿರುವ  ಸಂದರ್ಭ ದಲ್ಲಿ1996 ರ ಚುನಾವಣೆಯಲ್ಲಿ ಚಿಕಾಗೋದ  ಹೈಡ್ ಪಾರ್ಕ್  ಮತ್ತು ದಕ್ಷಿಣತೀರವನ್ನು ಪ್ರತಿನಿಧಿಸುತ್ತಿದ್ದ ಹೆಸರಾಂತ ಸ್ಟೇಟ್ ಸೆನೆಟರ್ ಆಗಿದ್ದ ಆಲಿಸ್ ಪಾಲ್ಮೆರ್ ಸ್ಪರ್ಧೆಯಿಂದ  ಹಿಂದೆ  ಸರಿಯಲಿದ್ದಾರೆ ಎನ್ನುವ ಸುದ್ದಿಯಿತ್ತು. ಆಗ ಖಾಲಿಯಾಗುವ ಸ್ಥಾನ  ಭರ್ತಿಯಾಗಿಸುವ  ಸಲುವಾಗಿ ಬರಾಕ್ ಒಬಾಮ 1996ರ  ಚುನಾವಣೆ ಯಲ್ಲಿ ಸ್ಪರ್ಧೆಗೆ ನಿಲ್ಲುವ ಮಹತ್ತರ ನಿರ್ಧಾರ ತೆಗೆದುಕೊಂಡ. ರಾಜಕಾರಣದ  ಬಗ್ಗೆ  ಅಂತಹ  ಒಳ್ಳೆಯ  ಅಭಿಪ್ರಾಯ  ಮಿಚೆಲ್‌ಗೆ  ಇರಲಿಲ್ಲ. ಆದರೆ  ಆರು ವರ್ಷದ  ಜೊತೆ  ಜೀವನದಲ್ಲಿ  ವಕೀಲಿ ಬಿಟ್ಟು  ಅನುತ್ಪಾದಕ ಕ್ಷೇತ್ರದಲ್ಲಿ  ತಾನು  ವೃತ್ತಿಗೆ  ಸೇರಿಕೊಂಡಾಗ ತನ್ನ ನಡೆಯನ್ನು ಸಾಮರ್ಥ್ಯವನ್ನು  ಪ್ರೋತ್ಸಾಹಿಸಿದ್ದ  ಒಬಾಮ ಆತನ ಇಚ್ಛೆಯನ್ನು ತಾನು ವಿರೋಧಿಸಬಾರದು ಎಂದು ಈ ನಿರ್ಧಾರಕ್ಕೆ  ಮಿಚೆಲ್ ಒಪ್ಪಿಕೊಂಡಿದ್ದಳು. ಚುನಾವಣೆಯಲ್ಲಿ ಗೆದ್ದ ನಂತರ ಒಬಾಮ ಸಾಮಾಜಿಕ ನ್ಯಾಯದ ಪರವಾಗಿ ತನ್ನ ರಾಜಕೀಯ ಪಟ್ಟುಗಳನ್ನು ಬಳಸಲು ಆಸಕ್ತನಾಗಿದ್ದ. ಅದು  ದಿನದ ಮುಕ್ಕಾಲು ಪಾಲು ಓಬಾಮನ ಸಮಯವನ್ನು ಕಬಳಿಸುತ್ತಿತ್ತು. ಸಮಾಜಸೇವೆ, ಚಿಕಾಗೋ ವಿಶ್ವವಿದ್ಯಾನಿಲಯ ನೀಡಿದ ಫೆಲೋಶಿಪ್‌ಗಾಗಿ ಕೆಲಸ, ವಕಾಲತ್ತು ಇವುಗಳನ್ನು ಜೊತೆ ಜೊತೆಗೆ  ನಿಭಾಯಿಸುತ್ತ ಮುಂದುವರಿಯುತ್ತಿದ್ದ ಒಬಾಮ.

ತಾಯ್ತನಕ್ಕಾಗಿ ಹಂಬಲಿಸುತ್ತಿದ್ದ ಮಿಚೆಲ್‌ಗೆ ಹಲವು ಗರ್ಭಪಾತದ ನಂತರ ಮಕ್ಕಳಿಬ್ಬರು ಜನಿಸಿದರು. ರಾಜಕೀಯದಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದ ಒಬಾಮನಿಗೆ ಕುಟುಂಬ ಅವನಿಂದ ನಿರೀಕ್ಷಿಸುವ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಮ್ಮೆ ಇದು ಮಿಚೆಲ್ ಸಿಟ್ಟಿಗೆ ಕಾರಣವಾಗುತ್ತಿತ್ತು. ತಾಯ್ತನದ ಜವಾಬ್ದಾರಿ ಮೊದಲು ನಂತರ ಕೆಲಸ ಎಂದು ನಿರ್ಧರಿಸಿದ್ದ ಆಕೆ ಇದಕ್ಕೆ ಸೂಕ್ತ ವಾಗುವ ಕೆಲಸವನ್ನೇ ಆಯ್ಕೆ ಮಾಡಿಕೊಂಡಳು. ಅವಳ ವೃತ್ತಿ ಜೀವನದ ಬೇರೆ ಬೇರೆ ಅನುಭವಗಳು ಕುಟುಂಬ ಪ್ರೀತಿ ಸೇರಿದಂತೆ ತಾಯ್ತನದ ಅನುಭವ ಮಿಚೆಲ್‌ಗೆ ಆಸ್ಪತ್ರೆಯ ಅವಳ ಹೊಸ ಕೆಲಸದಲ್ಲಿ  ಸಮಯ ವ್ಯಯವಾಗದಂತೆ ಹೆಚ್ಚು ಕುಶಲತೆಯಿಂದ ತನ್ನ ಟೀಂ ನ್ನು ಸಮುದಾಯ ಮುಖಿಯಾಗಿ ತೊಡಗಿಸಿಕೊಳ್ಳಲು ಪ್ರೇರಕವಾಯಿತು. ಇಲ್ಲಿಯ ಬಾಸ್ ಮಿಚೆಲ್‌ಗೆ ನೀಡಿದ್ದ ಸ್ವತಂತ್ರ ಆರೋಗ್ಯ ಸೇವೆಯಲ್ಲಿ ನೆರೆಹೊರೆಯವರನ್ನು ಜೊತೆಗೂಡಿಸಿಕೊಂಡು ಅತ್ಯುತ್ತಮ ಸಾಧನೆ ಮಾಡಲು ಪ್ರೋತ್ಸಾಹ ನೀಡಿತು. ಕರ್ತವ್ಯನಿಷ್ಟೆ, ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲಬೇಕು ಎನ್ನುವ ದೃಡ ನಿಲುವು ಕುಟುಂಬದ ನೈತಿಕತೆಯನ್ನು ಕಾಯುವ ಶಕ್ತಿಗೆ ಬಲ ತುಂಬಿತು.

ಒಬಾಮ ರಾಜಕೀಯದಲ್ಲಿ ಹೆಚ್ಚು ತೊಡಗಿಕೊಂಡಂತೆ ಮನೆಯಿಂದ ದೂರವಿರುವುದು ಅನಿವಾರ್ಯವಾಗುತ್ತಿತ್ತು. ಆಗೆಲ್ಲ ದಾಂಪತ್ಯದ ಸೂಕ್ಷ್ಮ ಸಂವೇದನೆಯ ಲಯ ಸಡಿಲವಾಗದಂತೆ ಮಿಚೆಲ್ ಮತ್ತು ಒಬಾಮ ಅಗತ್ಯದ ಗೊಂದಲ ನಿವಾರಣೆಗೆ ಆಪ್ತ ಸಮಾಲೋಚಕರ ಸಲಹೆ ಪಡೆಯುತ್ತಿದ್ದರು.

ವೃತ್ತಿಯಲ್ಲಿ ಮಿಚೆಲ್ ಅವಳದೇ ಅಸ್ತಿತ್ವವನ್ನು ಕಂಡುಕೊಂಡಿದ್ದ ಮಹಿಳೆ. ಇಬ್ಬರು ಪುಟ್ಟ ಮಕ್ಕಳ ತಾಯಿ. ಜೊತೆಗೆ ಆಸ್ಪತ್ರೆಯ ಕೆಲಸ.  ಅಮೇರಿಕಾದ ಸೆನೆಟರ್ ಪತ್ನಿ ಅನ್ನುವುದಕ್ಕಿಂತಲೂ ಅವಳು ವೃತ್ತಿಜೀವನ ಮತ್ತು ಮಕ್ಕಳ ತಾಯಿ ಆಗಿರುವುದು ಮೊದಲ ಅವಳ ಪ್ರೀತಿಯ ಆಯ್ಕೆಯಾಗಿದ್ದವು. ಹೀಗಾಗಿ ಚಿಕಾಗೋ ವಾಷಿಂಗ್ ಟನ್ ಡಿ.ಸಿ ನಡುವೆ ಒಬಾಮ ಓಡಾಡುವುದು… ಕುಟುಂಬ, ಮಕ್ಕಳ ಜೊತೆ ವಾರಾಂತ್ಯ ಕಳೆಯುವುದು ದಂಪತಿಗಳಿಬ್ಬರೂ ಜೊತೆಗೂಡಿ ಮಾಡಿದ್ದ ತೀರ್ಮಾನವಾಗಿತ್ತು.

ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಆಶಾವಾದಿಯಾಗಿದ್ದ ಒಬಾಮ ಅಮೇರಿಕಾದ ಅದ್ಯಕ್ಷನಾದ ನಂತರ ಅಮೇರಿಕಾದ ಜನರ ತೀರ್ಮಾನವನ್ನು ಗೌರವಿಸುವುದು ಕುಟುಂಬದಷ್ಟೇ ದೊಡ್ಡ ಜವಾಬ್ದಾರಿ. ಒಬಾಮನ ಕೆಲಸಕ್ಕೆ ಬೆಂಗಾವಲಾಗಿ ನಿಲ್ಲುವುದು ತನ್ನ ಕರ್ತವ್ಯ ಎನ್ನುವ ತೀರ್ಮಾನ ಮಾಡಿ ಮಿಚೆಲ್ ಮಕ್ಕಳ ಸಹಿತ ವಾಷಿಂಗ್ ಟನ್ ಡಿ. ಸಿ. ಯಲ್ಲಿರುವ ಶ್ವೇತ ಭವನಕ್ಕೆ ಬರಾಕ್ ಒಬಾಮ ಜೊತೆಗೆ ಬಂದಳು. ಅಮೇರಿಕಾದ ಎರಡು ಅವಧಿಯ ಅಧ್ಯಕ್ಷನಾಗಿದ್ದ  ಬರಾಕ್ ಒಬಾಮನ  ಸಂಯಮ ವಿಶ್ವದ ಇತಿಹಾಸವನ್ನು  ತುಸು ಮಾನವೀಯಗೊಳಿಸಿದ ಹಿನ್ನೆಲೆಯಲ್ಲಿಯೂ ಮುಖ್ಯ ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಒಬಾಮ  ದಂಪತಿಗಳ ಈ ನಡೆ ಮುಖ್ಯ ಅನ್ನಿಸುತ್ತದೆ. ಒಬಾಮ ಮಿಚೆಲ್ ಕುಟುಂಬಕ್ಕೆ ಒಬಾಮ ಅಧ್ಯಕ್ಷನಾಗುವುದು ಅವರು ಕಟ್ಟಿದ ಕನಸಲ್ಲ. why not possible ಎನ್ನುವ ಸವಾಲು ನೀಡಿದ ಅವಕಾಶ. ಒಮ್ಮೆ  ಸ್ಪರ್ಧೆಗೆ ನಿಂತಮೇಲೆ ಒಬಾಮ  ದಂಪತಿಗಳು ಗೆಲ್ಲುವ ಪ್ರಕ್ರಿಯೆಗೆ ಬೇಕಾದ ಸಿದ್ಧತೆಯಲ್ಲಿ ಚುನಾವಣೆಯ ಪ್ರಸಾರದಲ್ಲಿ ಸಂಪೂರ್ಣ ಮುಳುಗಿದರು. ಚುನಾವಣೆಯಲ್ಲಿ ಗೆಲ್ಲುವುದು ನಂತರದ ಆಗು ಹೋಗುಗಳಿಗೆ ತಲೆಯೊಡ್ಡುವುದು ಅಂದರೆ  ಅದು  ಒಂದು ಜವಾಬ್ದಾರಿ ಎನ್ನುವ  ಸ್ಪಷ್ಟತೆ ಇದ್ದ ಒಬಾಮ ದಂಪತಿಗಳಿಗೆ ಅಮೇರಿಕಾ  ಕರಿಯನೊಬ್ಬನನ್ನು ಅಧ್ಯಕ್ಷನಾಗಿ ಆಯ್ಕೆ  ಮಾಡಲು ತಯಾರಾಗಿದೆಯೇ  ಎನ್ನುವ ಸಂದೇಹ  ಚುನಾವಣ ಪ್ರಕ್ರಿಯೆಯ ಉದ್ದ ಇದ್ದೇ ಇತ್ತು. ಒಬಾಮ  ಅಮೇರಿಕಾ ಅಧ್ಯಕ್ಷನಾಗುವ  ಕನಸು, ಒಬಾಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ  ಮಾತುಕತೆ  ಆಗುತ್ತಿರುವಾಗ  ಶ್ವೇತ ಭವನದ  ಹಿತ್ತಲಿನಲ್ಲಿ  ಸಾವಯವ ತರಕಾರಿ ಬೆಳೆಸುವ ಮಿಚೆಲ್ ಕನಸು ಈ  ಎಲ್ಲವೂ ಅಮೇರಿಕಾದ ಸೆನೆಟರ್ ಆಗಿ ಒಬಾಮ ಆಯ್ಕೆಯಾದ ನಂತರ ಕಟ್ಟಿದವು!

ಬರಾಕ್ ಒಬಾಮ ಅಮೇರಿಕಾ ಅಧ್ಯಕ್ಷನಾದ ನಂತರ ಆತನ ತಂಡ ದೇಶ ವಾಸಿಗಳೆಲ್ಲರಿಗೂ ಆರೋಗ್ಯ ಸೇವೆ  ಲಭ್ಯವಾಗುವ  ಹಿನ್ನೆಲೆಯಲ್ಲಿ ಯೋಜನೆಗಳನ್ನು ಹಾಕಿಕೊಂಡಿತು. ಶ್ವೇತ ಭವನದ ಹಿತ್ತಲಿನಲ್ಲಿ ಸಾವಯವ ತರಕಾರಿ ಬೆಳೆಸುವ ಮಿಚೆಲ್ ಯೋಜನೆಗೆ  ಚಾಲನೆ ಸಿಕ್ಕಿತು. ಈ ಪ್ರಾಯೋಗಿಕ ಅನುಭವ  ಮಕ್ಕಳಿಗೆ ಹೊರಾಂಗಣ  ಪಾಠಶಾಲೆಯಾಗಿ ಲಭ್ಯವಾಯಿತು. ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ನಿರಂತರ ಲಭ್ಯವಾಗಬೇಕು ಎನ್ನುವ ಚಿಂತನೆಯು ಕಾನೂನು ಆದ್ದರಿಂದ ರಾಷ್ಟ್ರವ್ಯಾಪಿ ಚಾಲನೆಗೆ ಬಂತು.

“ಬಿಕಮಿಂಗ್ ಮೀ” “ಬಿಕಮಿಂಗ್  ಆಸ್”, “ಬಿಕಮಿಂಗ್ ಮೋರ್” ಹೀಗೆ  ಮೂರು  ಹಂತಗಳಲ್ಲಿ  ಮಿಚೆಲ್ ಅವರ ಆತ್ಮ ಕಥನ ಹಂಚಿಕೊಂಡಿದೆ.  438 ಪುಟಗಳಿರುವ ಈ  ಕಥಾನಕದ ಕೊನೆಯ ನೂರ ಐವತ್ತು ಪುಟಗಳಲ್ಲಿ ಅಮೇರಿಕಾದ ಪ್ರಥಮ ಮಹಿಳೆಯಾಗಿ ಕಳೆದ ಎಂಟು ವರುಷಗಳ ಅನುಭವ, ಜಗತ್ತಿನ ಈ   ಶತಮಾನದ ನಾಯಕರ  ಜೊತೆಗಿನ ಒಡನಾಟದ ಫಲಿತ, ಜೊತೆಗೆ ಅಪರೂಪದ  ಭಾವ ಚಿತ್ರಗಳಿವೆ. ಚಿಂದಿ ಚಿತ್ರಾನ್ನ ಆಗಬಹುದಾಗಿದ್ದ ಬರಾಕ್ ಒಬಾಮ ಬದುಕು ಅವಿರತ ಶ್ರಮ ಶಿಸ್ತು ಬದ್ಧ ಜೀವನ ಕ್ರಮದಿಂದ ಪಡೆದ ತಿರುವು…. ಅಮೇರಿಕಾ ಅಧ್ಯಕ್ಷನಾಗಿ ಆತ ಬೆಳೆದು ನಿಂತ ಸಾಧನೆಯ ಕಿರು ಚಿತ್ರಣ ಮಿಚೆಲ್ ಕಣ್ಣಿಗಳ ಬಿಡಿನೋಟವಾಗಿ ಇಲ್ಲಿ  ದಕ್ಕುತ್ತದೆ. ಮಿಚೆಲ್ ಕಥಾನಕ ಸಾಧಾರಣ  ಮಧ್ಯಮ ವರ್ಗದ  ಮಹಿಳೆಯಾಗಿ  ಅನಾಮಧೇಯವಾಗಿ ಸಾಗಬಹುದಿದ್ದ ಮಿಚೆಲ್ ಒಬಾಮ ಬದುಕು ಈ  ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ತೆರೆದ  ಮನಸ್ಸು,  ಹಿಡಿ ಜೀವನ  ಪ್ರೀತಿ, ನೋಡಿ ನಾವಿರುವುದು ಹೀಗೆ ಎನ್ನುವ  ಪ್ರಾಮಾಣಿಕತೆ ಜೊತೆಗೆ ಕೈ ಹಿಡಿದು ನಡೆಯುವ ಸಜ್ಜನಿಕೆ ಇದ್ದರೆ ಸಾಕು, ಇಡೀ ಬದುಕು ಒಂದು ಸುಂದರ ಸಮಾಗಮದ ಜೀವನ ಗಾಥೆ ಆಗುತ್ತದೆ ಎನ್ನುವ ಭರವಸೆ ಹುಟ್ಟಿಸುತ್ತದೆ. ನಮ್ಮದೇ ನೆರೆಹೊರೆಯಲ್ಲಿ ನಡೆಯುತ್ತಿದೆಯೇನೋ ಅನ್ನಿಸುವ ಸರಳತೆ ಆತ್ಮೀಯತೆಯೊಂದಿಗೆ ಓದಿಸಿಕೊಂಡು ಹೋಗುತ್ತದೆ.

ಅಮೇರಿಕಾದ ಅಧ್ಯಕ್ಷರ ಪತ್ನಿ, ಪ್ರಥಮ  ಮಹಿಳೆಯಾಗಿ ಮಿಚೆಲ್  ಒಬಾಮ ವಿಶಿಷ್ಟ ಅನ್ನಿಸುವುದು  ವಾಷಿಂಗ್ಟನ್ ಡಿ..ಸಿಗೆ ಬಂದು ಶ್ವೇತ ಭವನದೊಳಗಿದ್ದ  8 ವರ್ಷಗಳಲ್ಲಿ ಅವರು ಅಲ್ಲಿರುವ ಅವಕಾಶಗಳನ್ನು ಬಹುಬಗೆಯಲ್ಲಿ ಬಳಸಿಕೊಂಡು ತನ್ನತನವನ್ನು  ರೂಪಿಸಿಕೊಂಡ ರೀತಿಯಲ್ಲಿ. ತಾನು ಈ ಸ್ಥಾನಕ್ಕೆ  ಅರ್ಹಳಿದ್ದೇನೆಯೇ? ಇದ್ದೇನೆ ಯಾಕಿಲ್ಲ ಎಂಬ  ಸಂದೇಹ ಆತ್ಮವಿಶ್ವಾಸದೊಂದಿಗೆ  ಶ್ವೇತ ಭವನ ಹೊಕ್ಕ ಮಿಚೆಲ್‌ ಅಲ್ಲಿನ  ದಿನಚರಿಯಲ್ಲಿ ಪಳಗಿದಂತೆ  ತನ್ನದೇ  ಆತ್ಮೀಯ  ಬಳಗ ಕಟ್ಟಿಕೊಂಡಳು. ಸಮಾಜ ಸೇವೆಯ ತನ್ನ ಕೆಲಸದ ಪರಿಧಿಯನ್ನು  ವಿಸ್ತರಿಸಿಕೊಂಡಳು…

ಒಟ್ಟಾರೆಯಾಗಿ  ಇಡೀ  ಆತ್ಮಕಥನ  ಎಲ್ಲೂ ವೈಭವೀಕರಣ  ಇಲ್ಲದೇ ಪ್ರಜಾಪ್ರಭುತ್ವ  ರಾಷ್ಟ್ರದಲ್ಲಿ  ಜನಸಾಮಾನ್ಯರು ಕಟ್ಟಬಹುದಾದ  ಕನಸು ಅದನ್ನು  ಆಗುಮಾಡಬಹುದಾದ ಸಾಧನೆಯ ಮೈಲಿಗಲ್ಲುಗಳನ್ನು ಆತ್ಮರತಿಗೆ  ಎಡೆ ಇಲ್ಲದಂತೆ ಮಾಡಿಕೊಡುತ್ತದೆ. ಹೆಣ್ಣು ಗಂಡು ಜೊತೆಗೆ ಬದುಕುವಾಗ ತಮ್ಮ  ಸಾಮರ್ಥ್ಯಗಳನ್ನು ದುಡಿಸಿಕೊಳ್ಳುವಲ್ಲಿ ಬೇಕಾದ ಸ್ಪೇಸ್ ನೀಡಿಕೊಂಡು ಬದುಕಿದರೆ ಅದೆಷ್ಟು ಸುಂದರ ಸ್ವಪ್ನಗಳು  ಸಾಕಾರಗೊಳ್ಳಬಹುದಲ್ಲವೇ ಎನ್ನುವ  ಜೀವನ ದರ್ಶನ ನೀಡುತ್ತದೆ. ಈ ಒಟ್ಟು ಕಥಾನಕದ ಮೂಲಧಾತು ಅಪಾಯದ ಅಂಚಿನಲ್ಲಿರುವವರನ್ನು, ಅಮಾಯಕರನ್ನು ಹಿರಿಯರನ್ನು ಕೈಹಿಡಿದು ನಡೆಸಬೇಕಾದ ಎಚ್ಚರದ ಜೀವನ ಪ್ರೀತಿ.

ಬರಾಕ್ ಒಬಾಮ ಅಮೇರಿಕಾ ಅಧ್ಯಕ್ಷ ನಾಗಿ 300ಮಿಲಿಯನ್ ಪ್ರಜೆಗಳಿಗೆ ಉತ್ತರದಾಯಿಯಾಗಿ ಆತ್ಮಸಾಕ್ಷಿಯಾಗೆ  ಅನುಗುಣವಾಗಿ ಕೆಲಸ ನಿರ್ವಹಿಸುತ್ತಿದ್ದ ಕ್ರಮದ ಬಗ್ಗೆ ಕೆಲವು ಸಂಕ್ಷಿಪ್ತ  ವಿವರಗಳೂ ಈ ಕೃತಿಯಲ್ಲಿದೆ.

About The Author

ದೇವಿಕಾ ನಾಗೇಶ್

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ  ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ  ಹವ್ಯಾಸಗಳು.  

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ