ಮಕ್ಕಳಾದ ನಮಗೆ ಇದರಿಂದ ಲಾಭವೂ ಇತ್ತು, ವಿನಾಯಿತಿಯೂ ಇತ್ತು. ನಮ್ಮನ್ನು ಮಾತಿಗೆ ನಿಲ್ಲಿಸಿಕೊಳ್ಳುವವರು ಕೊಬ್ಬರಿ, ಬೆಲ್ಲ, ಪುರಿ ಉಂಡೆ ಕೊಟ್ಟು ಮನೆಯ ಒಳಗೆ ಏನೇನು ಮಾತಕತೆ ನಡೆಯುತ್ತಿದೆ, ಓರಗಿತ್ತಿಯರ ಜಗಳ, ಸಣ್ಣ ವಾಲೆ ಜಜ್ಜಿಸಿ ಇನ್ನೊಬ್ಬ ಓರಗಿತ್ತಿಗೆ ತಿಳಿಯದಂತೆ ದೊಡ್ಡದು ಮಾಡಿಸಿಕೊಳ್ಳುವುದು, ಹೀಗೆ ತಿಳಿದಿರುವುದನ್ನೆಲ್ಲ ನಾವು ಹೇಳುತ್ತಿದ್ದೆವು. ತಿಂಡಿ ಆಸೆ ನಮಗೆ ಗೊತ್ತಿಲ್ಲದಂತೆ, ಗೊತ್ತಿರುವುದಕ್ಕಿಂತ ಜಾಸ್ತಿ ಕತೆ ಹೇಳುತ್ತಿದ್ದೆವು. ಈವತ್ತು ನಾವು ಹಾಗೆ ಹೇಳಿದ ಮಾತು ಮಾರನೇ ದಿವಸವೋ, ಅದರ ಮಾರನೇ ದಿವಸವೋ ಜಗಳದ, ಕದನದ ಪಟ್ಟುಗಳಾಗಿ ಪರಿವರ್ತನೆಯಾಗಿ ಹೊರಬರುತ್ತಿದ್ದವು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ನನ್ನ ತಮ್ಮನ ಮಗ ವಿದೇಶಾಂಗ ಇಲಾಖೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಾಗ ಏಷ್ಯಾ ವಿಭಾಗಕ್ಕೆ ನೇಮಿಸಿದರು. ಎರಡು ಗುಂಪಿನ ದೇಶಗಳ ಘಟಕವನ್ನು ಇವರ ವಿಭಾಗಕ್ಕೆ ನೀಡಿದ್ದರು. ಒಂದು ಗುಂಪಿನಲ್ಲಿ ಪಾಕಿಸ್ಥಾನ, ಬಾಂಗ್ಲಾ, ಬಲೂಚಿಸ್ಥಾನ, ಗಾಂಧಾರ, ಶ್ರೀಲಂಕಾ ಮತ್ತು ಮಾಲ್ಡೀವ್ಸ್; ಇನ್ನೊಂದು ಗುಂಪಿನಲ್ಲಿ ಬರೇ ಮಧ್ಯಪ್ರಾಚ್ಯದ ದೇಶಗಳು, ಸಿರಿಯಾ, ಕತಾರ್, ಇರಾನ್, ಇರಾಕ್, ಇಸ್ರೇಲ್, ಲೆಬಿನಾನ್, ಹೀಗೆ. ಈ ಎರಡೂ ಗುಂಪಿನ ದೇಶಗಳಲ್ಲಿ ಯಾವಾಗಲೂ ಅಂತಃಕಲಹ ಪರಸ್ಪರ ಮತ್ತು ಒಳಗೊಳಗೇ, ಇಲ್ಲ ಸಣ್ಣ ಸಣ್ಣ ಗುಂಪು ಮಾಡಿಕೊಂಡು. ಯಾವ ಕಾರಣಕ್ಕೆಂದು ಯಾರೊಡನೆ, ಯಾರು ಯಾರ ಪರ, ಯಾರು ಯಾರು ವಿರೋಧ, ಯಾವುದೂ ಗೊತ್ತಾಗುತ್ತಿರಲಿಲ್ಲ. ಆ ದೇಶಗಳಲ್ಲಿ ವಾಸಿಸುತ್ತಿದ್ದ ಪ್ರಜೆಗಳಿಗೂ, ಹೊರದೇಶಗಳಿಂದ ಬಂದ ಪ್ರವಾಸಿಗಳಿಗೂ, ಅಂತರರಾಷ್ಟ್ರೀಯ ಬ್ಯಾಂಕ್, ರೆಡ್ಕ್ರಾಸ್, ವಿದ್ಯಾಸಂಸ್ಥೆಗಳಿಗೆ ಸೇರಿದ ಸಿಬ್ಬಂದಿಗಳಿಗೂ ಸಹ.
ಇದ್ಯಾವ ಸೀಮೆಯ ವಿದೇಶಾಂಗ ಸೇವೆ. ಇದರ ಬದಲು ಇಲ್ಲೇ ಮುದ್ದೇಬಿಹಾಳದಲ್ಲೋ, ಮಳವಳ್ಳಿಯಲ್ಲೋ, ನೆಲಮಂಗಲದಲ್ಲೋ ಶಿರಸ್ತೇದಾರ್, ಅಮಲ್ದಾರ್ ಆಗಿದ್ದರೆ ಎಷ್ಟೋ ಚೆನ್ನಾಗಿತ್ತು. ವರ್ಗವಾದ ಕಡೆಯೆಲ್ಲ ಒಂದೆರಡು ಸೈಟ್ ಮಾಡಿಕೊಂಡಿದ್ದರೂ ನೆಮ್ಮದಿಯಿಂದ ಜೀವನ ನಡೆಸಬಹುದಿತ್ತು. ಒಳ್ಳೆಯ ಕಡೆ ಮದುವೆ ಸಂಬಂಧ ಸಿಗುತ್ತಿತ್ತು.
ನಾವು ಹಿರಿಯರು ಹೀಗೆಲ್ಲ ಬೇಜಾರು ಮಾಡಿಕೊಂಡು ಚಿಂತಾಕ್ರಾಂತರಾಗಿದ್ದರೆ, ನಮ್ಮ ಹುಡುಗ ಸಂತೋಷವಾಗಿದ್ದ. ವಿಭಾಗದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದ. ಇನ್ನೂ ನಾಲ್ಕಾರು ವರ್ಷ ನಾನು ಇದೇ ವಿಭಾಗದಲ್ಲಿ ಮುಂದುವರೆಯುತ್ತೇನೆ. I feel at home. ಹುಟ್ಟಿದ ಊರಲ್ಲಿ, ಹುಟ್ಟಿದ ಬೀದಿಯಲ್ಲೇ ಯಾವಾಗಲೂ ಇರುವ ಅನುಭವವಾಗುತ್ತೆ ಅಂತ ನಮಗೆಲ್ಲ ಗೊತ್ತಿದ್ದ ಕತೆಯನ್ನು ಇನ್ನೊಮ್ಮೆ ಬಿಡಿಸಿ ಹೇಳಿದ.
*****
ನಮ್ಮ ತಂದೆಯ ಪುರಾತನ ಮನೆ ಕೇರಿಯ ಕೊನೆಯಲ್ಲಿತ್ತು. ಪಕ್ಕದ ಮನೆಯಲ್ಲಿದ್ದುದು ನಮ್ಮಜ್ಜಿಯ ಅಣ್ಣ. ಅಣ್ಣನಿಗೆ ಮನೆಯೇ ಅಲ್ಲದೆ ಎದುರುಗಡೆ ಎರಡಂತಸ್ತಿನ ಒಂದು ಬಂಗಲೆಯೂ ಇತ್ತು. ಆ ಬಂಗಲೆಯ ತುಂಬಾ ಮಂಚಗಳಿದ್ದವು. ಎಲ್ಲ ಮಂಚಗಳಿಗೂ ಹೊಳೆಯುವ ಬಿಳಿ ಬಣ್ಣದ ಸೊಳ್ಳೆ ಪರದೆಗಳನ್ನು ಕಟ್ಟಿ ಇಳಿಬಿಟ್ಟಿದ್ದರು. ಅಜ್ಜಿಯ ಅಣ್ಣ ಮಹಡಿ ಮೆಟ್ಟಿಲುಗಳನ್ನು ಹತ್ತುತ್ತಿರಲಿಲ್ಲ, ಜಿಗಿಯುತ್ತಿದ್ದರು. ಜಿಗಿದಾಗ ಅವರ ಕಾಲಿನ ಮೀನುಖಂಡಗಳ ಗಾತ್ರ ಕೊಬ್ಬನ್ನು ನೋಡಿದರೇ ಹೆದರಿಕೆಯಾಗುತ್ತಿತ್ತು.
ಅಜ್ಜಿ ಅವರಣ್ಣನ ಜೊತೆ ಶತ ಶತಮಾನಗಳಿಂದ ಮಾತು ಬಿಟ್ಟಿದ್ದರು. ಅದಕ್ಕೆ ಕಾರಣ ಅಜ್ಜಿ ಬಾಲವಿಧವೆಯಾಗಿದ್ದುದು ಮಾತ್ರವಲ್ಲ, ಅವರಣ್ಣ First Class ಬಿಳಿಬಣ್ಣದ ಹುಡುಗಿಯನ್ನು ಮೈಸೂರಿನಿಂದ ಮದುವೆ ಮಾಡಿಕೊಂಡು ಬಂದಿದ್ದುದು. ಬೆಳಿಗ್ಗೆ ಒಂದು ಸಲ, ಮಧ್ಯಾಹ್ನ ಇನ್ನೊಂದು ಸಲ, ಸಂಜೆ ಮತ್ತೊಂದು ಸಲ ಅಂತ ಆ ಆತ್ತಿಗೆ ಶೃಂಗಾರ ಮಾಡಿಕೊಂಡು ಜಗುಲಿ ಮೇಲೆ ಕಾಲು ಇಳಿಬಿಟ್ಟು ಕುಳಿತುಕೊಂಡು ಯಾವಾಗಲೂ ಕಾಲು ತೊಡೆಯನ್ನು ಗತ್ತಿನಿಂದ ಅಲ್ಲಾಡಿಸುತ್ತಿದ್ದಳು. ತುಟಿ ಕೂಡ ಮಣ ಮಣ ಅನ್ನುತ್ತಿದ್ದರೂ ಮಂಡಿ, ಇಳಿಬಿಟ್ಟ ಕಾಲು ಅಲ್ಲಾಡುವಷ್ಟು ವೇಗವಾಗಿ ಮಾತುಗಳು ಮೂಡುತ್ತಿರಲಿಲ್ಲ. ಒಂದೊಂದು ಸಲ ಹಲ್ಲು ಕಟಕಟ ಮಾಡಿದ ಶಬ್ದ ಕೇಳುವುದು. ಬೇಸಿಗೆಯಲ್ಲಿ ಗಾಳಿ ಬೀಸದಿದ್ದಾಗ ಇಡೀ ಬೀದಿಗೆ ಈ ಕಟಕಟ ಶಬ್ದ ಕೇಳಿಸುತ್ತಿತ್ತು.
ನಮ್ಮಜ್ಜಿ ಆ ಮನೆ ಎದುರಿಗೆ ಹೋಗುತ್ತಿರಲಿಲ್ಲ. ಸಾಯುವ ತನಕವೂ ಹೋಗಲಿಲ್ಲ. ಅಂದರೆ ಅತ್ತಿಗೆ ಸತ್ತ ಮೇಲೂ ಆ ಮನೆ ಮುಂದಿನ ದಾರಿಯಲ್ಲಿ ಹೋಗುತ್ತಿರಲಿಲ್ಲ. ಮನೆ ಸಿಗುವ ಮುಂಚೆ ಎಡಕ್ಕೆ ತಿರುಗಿ ಕೆಳಗಡೆ ಇಳಿದು ಮತ್ತೆ ಬಲಕ್ಕೆ ತಿರುಗಿ, ಕೊಂಕಣ ಸುತ್ತಿ ಮಲಯಾಳಕ್ಕೆ ಹೋಗುತ್ತಿದ್ದಳು.
ನಮ್ಮಜ್ಜಿಯ ಅಣ್ಣನ ಮಗನಿಗೆ ಮದುವೆ ಆಯಿತು. ಅಲ್ಲಿ ಅತ್ತೆ ಸೊಸೆ ಫೈಟಿಂಗ್ ಶುರುವಾಯಿತು. ಅತ್ತೆ ತಾನು ಸೊಸೆಯ ಜೊತೆ ಇರುವುದಿಲ್ಲವೆಂದು ಹಠ ಹಿಡಿದಳು. ಹಾಗಾಗಿ ಇನ್ನೊಂದು ಮನೆ ಆಯಿತು.
ನಮ್ಮಜ್ಜಿ ಎದುರು ಮನೆಯನ್ನು ದಾಟಿ ಹೋಗದೆ ಸುತ್ತು ಬಳಸಿ ಮಾಡುತ್ತಿದ್ದರು, ಮಾಡುತ್ತಲೇ ಇದ್ದರು. ಅಜ್ಜಿಗೂ ಹೇಳಬೇಕಾದ, ಕೇಳಬೇಕಾದ ಮಾತುಗಳಿರುತ್ತಿದ್ದವು. ಮಾತಿನ ಒತ್ತಡ ಜಾಸ್ತಿಯಾದಾಗ ಮಾತಾಡುತ್ತಿರಲಿಲ್ಲ. ಜೋರಾಗಿ ಕೆಮ್ಮಿ ಕ್ಯಾಕರಿಸಿ ಉಗಿದು ನಡೆಯುವ ಸ್ಪೀಡನ್ನು ಜಾಸ್ತಿ ಮಾಡಿಕೊಳ್ಳುತ್ತಿದ್ದರು. ಉಗಳು ಸೋಕಿದ ತಕ್ಷಣ ಭೂಮಿ ನಡುಗುತ್ತಿತ್ತು.
ಉಳಿದ ದಾಯಾದಿಗಳು ಕೆಳಗಿನ ಬೀದಿಯಲ್ಲಿ. ಈ ಬೀದಿಯಲ್ಲಿ ಕೂಡ ಮನೆಗಳಿದ್ದವು. ಜಗುಲಿ, ಬಾವಿಕಟ್ಟೆ, ಮೆಟ್ಟಿಲು, ಎಲ್ಲೆಲ್ಲೂ ಜನ. ಜನ ಕುಳಿತಿದ್ದರೆ ಎದುರುಗಡೆ ಓಡಾಡದೆ, ಓಣಿಯೊಳಗೆ ಹೋಗಿ, ಹಿಂದಿನಿಂದ ಹಾಸಿ ಬಂದು ಮುಂದಕ್ಕೆ ಹೋಗಬೇಕು, ಹೋಗುವರು. ಹಾಗೆ ಹೋಗುತ್ತಿರುವವರನ್ನು ಉದ್ದೇಶಿಸಿ ಹಿಂದಿನಿಂದ ಮಾತುಗಳ ಮುತ್ತು ಉದುರುತ್ತಲೇ ಇರೋದು.
ಮಕ್ಕಳಾದ ನಮಗೆ ಇದರಿಂದ ಲಾಭವೂ ಇತ್ತು, ವಿನಾಯಿತಿಯೂ ಇತ್ತು. ನಮ್ಮನ್ನು ಮಾತಿಗೆ ನಿಲ್ಲಿಸಿಕೊಳ್ಳುವವರು ಕೊಬ್ಬರಿ, ಬೆಲ್ಲ, ಪುರಿ ಉಂಡೆ ಕೊಟ್ಟು ಮನೆಯ ಒಳಗೆ ಏನೇನು ಮಾತಕತೆ ನಡೆಯುತ್ತಿದೆ, ಓರಗಿತ್ತಿಯರ ಜಗಳ, ಸಣ್ಣ ವಾಲೆ ಜಜ್ಜಿಸಿ ಇನ್ನೊಬ್ಬ ಓರಗಿತ್ತಿಗೆ ತಿಳಿಯದಂತೆ ದೊಡ್ಡದು ಮಾಡಿಸಿಕೊಳ್ಳುವುದು, ಹೀಗೆ ತಿಳಿದಿರುವುದನ್ನೆಲ್ಲ ನಾವು ಹೇಳುತ್ತಿದ್ದೆವು. ತಿಂಡಿ ಆಸೆ ನಮಗೆ ಗೊತ್ತಿಲ್ಲದಂತೆ, ಗೊತ್ತಿರುವುದಕ್ಕಿಂತ ಜಾಸ್ತಿ ಕತೆ ಹೇಳುತ್ತಿದ್ದೆವು. ಈವತ್ತು ನಾವು ಹಾಗೆ ಹೇಳಿದ ಮಾತು ಮಾರನೇ ದಿವಸವೋ, ಅದರ ಮಾರನೇ ದಿವಸವೋ ಜಗಳದ, ಕದನದ ಪಟ್ಟುಗಳಾಗಿ ಪರಿವರ್ತನೆಯಾಗಿ ಹೊರಬರುತ್ತಿದ್ದವು.
ಮಕ್ಕಳಾದ ನಾವು ಹುಟ್ಟಿರುವುದೇ ಇಂತಹ ಕೆಲಸ ಮಾಡುವುದಕ್ಕೆ ಎಂದು ತಾಯಿ-ತಂದೆಗಳು ನಂಬಿದ್ದರಿಂದ, ಇನ್ನಿಲ್ಲದ ಕಷ್ಟ ಕೊಡುತ್ತಿದ್ದರು. ಮನೆಯದು ದೊಡ್ಡ ಏಣಿ, ಹನ್ನೆರಡು-ಹದಿಮೂರು ಮೆಟ್ಟಿಲುಗಳಿದ್ದವು. ಯಾವಾಗಲೂ ಹಿತ್ತಲ ಗೋಡೆಗೆ ಒರಗಿಸಿಡುವರು. ಗೋಡೆ ಅಷ್ಟೇನು ಎತ್ತರವಾಗಿರಲಿಲ್ಲ. ಏಣಿಯ ಆರೇಳು ಮೆಟ್ಟಿಲುಗಳನ್ನು ಹತ್ತಿದರೆ ಶತ್ರುಪಾಳಯದ ಹಿತ್ತಲು, ಪಾತಿ, ಹುಲ್ಲುಮೆದೆ, ಜಾನುವಾರು, ಎಲ್ಲ ಕಾಣಿಸೋದು. ಮಕ್ಕಳಾದ ನಾವು ಏಣಿ ಹತ್ತಬೇಕು. ಗೋಡೆಯ ಎತ್ತರ ಕಡಿಮೆ ಇದ್ದುದರಿಂದ ಏಣಿ ನಡುಗುವುದು. ನಡುಗುವ ಏಣಿಯನ್ನೇ ಹತ್ತಿ, ಏಣಿ ಕೆಳಗೆ ನಿಂತ ಹಿರಿಯರು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿದ್ದೆವು. ಶತ್ರುಪಾಳಯದ ಯಾರಾದರೂ ಸದಸ್ಯರು ಯಾರಿಗೂ ಗೊತ್ತಾಗದ ಹಾಗೆ ಬಂದು ಏನನ್ನಾದರೂ ಗುಂಡಿ ತೋಡಿ ಹೂತಿಟ್ಟರೆ, ಒಳಗಡೆಯಿಂದ ಕದ್ದು ತಂದ ತಿಂಡಿ ಪದಾರ್ಥವನ್ನು ಬಾವಿಕಟ್ಟೆಯ ಮೇಲೆ ಕುಳಿತು ಗಬಗಬನೆ ತಿನ್ನುತ್ತಿದ್ದರೆ, ಅವರ ಮನೆಯ ಹಿತ್ತಲಿನಿಂದಾಚೆಗೆ ಏನಾದರೂ ಒಡವೆ ವಸ್ತ್ರ ಸಾಗಿಸುತ್ತಿದ್ದರೆ, ಈ ಪ್ರಶ್ನೆಗಳಿಗೆ ನಾವು ಕಂಡದ್ದನ್ನು ಮಾತ್ರ ಉತ್ತರ ಹೇಳುವ ಹಾಗಿರಲಿಲ್ಲ, ಕಾಣದ್ದನ್ನು ಕೂಡ ಊಹಿಸಿಕೊಂಡು ಕೆಳಗೆ ನಿಂತವರು ಬಯಸಿದ ಉತ್ತರಗಳನ್ನು ನೀಡಬೇಕಾಗುತ್ತಿತ್ತು. ಇದನ್ನೇ ಆಗಾಗ್ಗೆ ಮಾಡುತ್ತಾ ಪಳಗಿ, ಪಳಗಿ ನಾವು ಅವರು ಬಯಸುವ ಉತ್ತರಗಳನ್ನೇ ನೀಡುತ್ತಿದ್ದೆವು.
ಇಷ್ಟನ್ನು ನೆನಸಿಕೊಂಡು ಹೇಳಿದ ನನ್ನ ತಮ್ಮನ ಮಗ ಒಂದು ಪ್ರಶ್ನೆ ಕೇಳಿದ.
ದಿನವೂ ಪ್ರೀತಿ ಮಾಡುವಂತದ್ದು ಹೇಗೆ ಎಲ್ಲೂ ಇರುವುದಿಲ್ಲವೋ, ಹಾಗೆ ದಿನವೂ ಜಗಳ ಕಾಯುವುದಕ್ಕೂ ಕಾರಣಗಳು ಮನುಷ್ಯರ ನಡುವೆ ಇರುವುದಿಲ್ಲ, ದೇಶಗಳ ನಡುವೆಯೂ ಇರುವುದಿಲ್ಲ. ಅದೊಂದು ಮನಸ್ಸಿನ ತುರಿಕೆ. ಇಲ್ಲ ಚರ್ಮದ ತುರಿಕೆ. ಬೇಸಿಗೆಯಲ್ಲೂ ತುರಿಕೆ. ಒಟ್ಟಿನಲ್ಲಿ ಯಾವಾಗಲೂ ತುರಿಕೆ. ತುರಿಕೆ ಬಂದಾಗ ಕೆರೆಯಲೇ ಬೇಕು. ಕೆರೆದರೇ ಸುಖ, ನೆಮ್ಮದಿ. ಹಾಗೆ ನಮ್ಮ ಏಷ್ಯಾದ ದೇಶಗಳ ಗಡಿಗಳು, ಗಡಿ ಒಳಗಿನ ಮತಗಳು. ಗಡಿ, ಗಡಿಯಾಚೆಯ ದೇಶಗಳು ಇಲ್ಲದೆ ಹೋದರೆ ನಮಗೆ ಊಟ ಸೇರುವುದಿಲ್ಲ, ನಿದ್ದೆ ಬರುವುದಿಲ್ಲ. ಇದನ್ನೆಲ್ಲ ಬಾಲ್ಯದಿಂದಲೇ ನನಗೆ ನಮ್ಮ ಬೀದಿಯ ವಾತಾವರಣದಲ್ಲೇ ತಿಳಿಯುವ ಅದೃಷ್ಟ ಇತ್ತು. ಇದರಿಂದಾಗಿ ನನಗೆ ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ, ಆತ್ಮತೃಪ್ತಿಯೂ ಆಗುತ್ತದೆ.
ಇಷ್ಟನು ಹೇಳಿ ಗಹಗಹಿಸಿ ನಗಲು ಪ್ರಾರಂಭಿಸಿದ. ನಮಗೂ ಖುಷಿಯಾಯಿತು. ಗಹಗಹಿಸುವುದನ್ನು ನಿಲ್ಲಿಸಿದ. ಬಿಕ್ಕಳಿಕೆ ಪ್ರಾರಂಭವಾಯಿತು. ಮನೆ ಒಳಗೆ ಹೋಗಿ ನೀರು ಕುಡಿದು, ಮುಖ ತೊಳೆದುಕೊಂಡು ಬಂದ. ಮುಖದಲ್ಲಿ ಈಗ ಪ್ರಶಾಂತ ಕಳೆ.
ಆಯ್ತು, ಇದೆಲ್ಲ ಇದ್ದದ್ದೇ. ಈವತ್ತು ಸಂಜೆ ಎಲ್ಲರೂ ಬೆಳದಿಂಗಳಲ್ಲಿ ಹಿತ್ತಲಲ್ಲಿರುವ ದಾಳಿಂಬೆ ಮರದ ಕೆಳಗೆ ಕುಳಿತು ಊಟ ಮಾಡೋಣ. ಮೊಸರನ್ನಕ್ಕೆ ಸ್ವಲ್ಪ ಶುಂಠಿ ಜಾಸ್ತಿ ಹಾಕಿ. ನಾಲಿಗೆಗೆ ಚೆನ್ನಾಗಿ ಹತ್ತುತ್ತೆ ಅಂದ.
*****
ಬೆಳದಿಂಗಳಿನಲ್ಲಿ ದಾಳಿಂಬೆ ಮರದ ಕೆಳಗೆ ಕುಳಿತು ಜಾಸ್ತಿ ಶುಂಠಿ ಹಾಕಿದ್ದ ಮೊಸರನ್ನವನ್ನು ಎರಡೆರು ಸಲ ಕೈ ತುತ್ತು ಹಾಕಿಸಿಕೊಂಡು ಚಪ್ಪರಿಸಿ ತಿಂದು ಮತ್ತೆ ಮತ್ತೆ ಕೈ ನೆಕ್ಕಿ ಬಾಯಿ ಚಪ್ಪರಿಸುತ್ತಾ ನನ್ನ ತಮ್ಮನ ಮಗ ಬೀರೂತ್ಗೆ ಕೆಲಸದ ಮೇಲೆ ವಾಪಸ್ ಹೊರಟು ಹೋದ.
ಹಾಗೆ ಅವನು ಹೋದ ಎರಡು ವಾರದಲ್ಲೇ ಪಾಕಿಸ್ಥಾನ, ಆಫ್ಘಾನಿಸ್ಥಾನದ ಗಡಿಯಲ್ಲಿ ಮಾರಾಮಾರಿ ಶುರುವಾಯಿತು. ಹೊಸ ಕಾರಣವೇನಿರಲಿಲ್ಲ. ಹಳೆ ಕಾರಣಗಳು, ಹೊಸ ತೀವ್ರತೆ. ಇದ್ಯಾವ ಮಹಾ ಅನ್ನುವಂತೆ ಮಧ್ಯಪ್ರಾಚ್ಯದಲ್ಲೂ ಜಗಳ, ಒಳಜಗಳ, ಮಸಲತ್ತು, ಸಮುದ್ರದ ಮಧ್ಯೆಯೇ ದಿಗ್ಭಂಧನ ಹಾಕುವುದು, ವರ್ಣಮಾಲೆಯನ್ನು ಕಾಪಿ ಮಾಡುತ್ತಿದ್ದ ಮಕ್ಕಳ ಸ್ಕೂಲ್ ಮೇಲೆ ಬ್ರಹ್ಮಾಸ್ತ್ರ ಹಾಕುವುದು ಎಲ್ಲ ಶುರುವಾಯಿತು. ಕದನ ವಿರಾಮದ ಮಾತುಕತೆ ನಡೆಯುವಾಗಲೂ ಇವೆಲ್ಲ ಮುಂದುವರೆಯುತ್ತಲೇ ಇತ್ತು. ಕದನ ವಿರಾಮದ ಘೋಷಣೆಯ ನಂತರವೂ ಮುಂದುವರೆಯಿತು. ಮುಂದುವರೆಯುತ್ತಲೇ ಇದೆ, ಮುಂದುವರೆಯುತ್ತಲೂ ಇರುತ್ತದೆ.
*****
ನನ್ನ ತಮ್ಮನ ಮಗ ನೀಡಿ ಹೋದ ಒಳನೋಟಗಳ ಬೆಳಕಿನಲ್ಲಿ ಇದೆಲ್ಲ ನಮಗೆ ಚೆನ್ನಾಗಿ ಅರ್ಥವಾಗಲು ಶುರುವಾಯಿತು.

ಹಾಗೆ ಚೆನ್ನಾಗಿ ಅರ್ಥವಾದಾಗ ಖುಷಿಯಾಗಿ ನನ್ನ ತಮ್ಮ ಮಗನಿಗೆ ಕರೆ ಮಾಡಿದೆ, ಅಭಿನಂದಿಸಿದೆ. ನೀನು ಮತ್ತೆ ಜ್ಞಾಪಿಸಿದ ನಮ್ಮ ಬೀದಿಯ ಮಧ್ಯಪ್ರಾಚ್ಯದ ಸ್ವಭಾವದ ಕತೆ ತುಂಬಾ ಚೆನ್ನಾಗಿತ್ತು. ಯುದ್ಧದ ರೀತಿ ನೀತಿ ಈಗ ತುಂಬಾ ಚೆನ್ನಾಗಿ ಅರ್ಥವಾಗುತ್ತಿದೆ ಎಂದೆ. ನಾವು ದೂರವಾಣಿಯಲ್ಲಿ ಮಾತನಾಡುತ್ತಿರುವುದು ಎಂಬುದನ್ನು ಮರೆತು ಆತ ರೇಗಿದ.
ಕತೆ ಅಂತ ನಾನು ಹೇಳಿದ್ದಕ್ಕೆ, ಕತೆಯೆಂದು ನೀವು ಚಪ್ಪರಿಸುತ್ತಿರುವುದಕ್ಕೆ, ನಾವಿಬ್ಬರೂ ಬಂದು ಇಲ್ಲಿಯ ತೈಲದ ಬಾವಿಯಲ್ಲಿ ಬಿದ್ದು ಸಾಯಬೇಕು ಅಷ್ಟೇ. ಇಲ್ಲಿ ಯಾರು ಎಷ್ಟು ದಿನ ಬದುಕಿರುತ್ತಾರೆ, ಬದುಕಿದ್ದರೂ ಯಾರಿಗೆ ದೇಹದ ಯಾವ ಭಾಗ ಯಾವಾಗ ಮಾಯವಾಗಿಬಿಡಬಹುದು, ಹಾಲು ಮೊಸರು ಎಷ್ಟು ದಿನಕ್ಕೆ ಒಂದು ಸಲ ಸಿಗುತ್ತದೆ ಏನೂ ಗೊತ್ತಾಗುವುದಿಲ್ಲ. ಈವತ್ತಿದ್ದ ಬೀದಿ, ಮನೆ, ನಾಳೆ ಬೆಳಿಗ್ಗೆ ಇರುವುದಿಲ್ಲ. ಆಕಾಶ, ಭೂಮಿ ಕಾಣದಷ್ಟು ದಟ್ಟವಾದ ಹೊಗೆ, ವಿಷಾನಿಲ. ಯಾವುದಾದರೂ ತಂಪಾದ ಯೂರೋಪು ದೇಶಗಳಿಗೆ ವರ್ಗ ಮಾಡಿಸಿಕೊಂಡು ಹೋಗುವೆ.
ದಯವಿಟ್ಟು ನಾನು ಹೇಳಿದ್ದನ್ನು ಕತೆ ಎಂದು ತಿಳಿಯಬೇಡಿ, ಬರೆಯ ಬೇಡಿ, ಯಾರಿಗೂ ಹೇಳಬೇಡಿ. ಮತ್ತೆ ಮತ್ತೆ ಕೋರುವೆ.
ಯುದ್ಧ ಆಟವಾಗಿ ನೋಡುವಾಗ, ಕೇಳುವಾಗ ಚೆನ್ನಾಗಿರುತ್ತದೆ. ಅನುಭವಿಸುವಾಗ ಚೆರಬಿಯೆಲ್ಲ ಹೊರಗೆ ಬರುತ್ತದೆ.

ಈಗ ನಾನು ನೀವೆಲ್ಲ ಊರುಬಿಟ್ಟಿದ್ದೇವೆ. ಎಲ್ಲರೂ ಕೂಡಿ ನಾಲ್ಕು ಕಾಸು ಸೇರಿಸೋಣ. ಹೋಗಿ ಮಧ್ಯಪ್ರಾಚ್ಯದ ಭಾಗಗಳಂತೆ ಕಾಣುತ್ತಿದ್ದ ಬೀದಿ ತುಂಬಾ ಹೂ ಗಿಡಗಳನ್ನು ನೆಟ್ಟು ಬರೋಣ. ಹೂ ಗಿಡಗಳನ್ನು ತುಂಬಾ ಒತ್ತೊತ್ತಾಗಿ ನೆಡೋಣ. ಎಷ್ಟು ಒತ್ತೊತ್ತಾಗಿ ಎಂದರೆ, ಮನುಷ್ಯರಿಗೇ ಅಲ್ಲಿ ವಾಸ ಮಾಡಲು, ಓಡಾಡಲು ಜಾಗವಿರಬಾರದು. ತೀರಿಕೊಂಡ ಹಿರಿಯರು ಆಗಾಗ್ಗೆ ಭೂಮಿಗೆ ವಾಪಸ್ ಬಂದು ತಾವು ವಾಸಿಸುತ್ತಿದ್ದ ಬೀದಿ, ಮನೆಗಳನ್ನೆಲ್ಲ ನೋಡುತ್ತಾರಂತೆ. ಅಜ್ಜಿ, ಅವರಣ್ಣ ಕೂಡ ಬಂದು ಈ ಹೂಗಿಡಗಳನ್ನು ನೋಡಲಿ. ತಮ್ಮ ಜಗಳ, ಮನಸ್ತಾಪದಿಂದ ಭೂಮಿ ಮರುಭೂಮಿಯಾಗಿ ಅಲ್ಲಿ ಒಂದೇ ಒಂದು ಹೂಗಿಡ ತಮ್ಮ ಕಾಲದಲ್ಲಿ ಬೆಳೆಯಲಿಲ್ಲ ಎಂದು ತಿಳಿದುಕೊಳ್ಳಲಿ.

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

