Advertisement
ಸಣ್ಣಕತೆಯ ಹಾದಿಯಲ್ಲಿ: ಎಸ್‌ ದಿವಾಕರ್‌ ಕಥಾ ಸಂಕಲನಕ್ಕೆ ಅವರು ಬರೆದ ಮಾತುಗಳು

ಸಣ್ಣಕತೆಯ ಹಾದಿಯಲ್ಲಿ: ಎಸ್‌ ದಿವಾಕರ್‌ ಕಥಾ ಸಂಕಲನಕ್ಕೆ ಅವರು ಬರೆದ ಮಾತುಗಳು

ಈಚೀಚೆಗೆ ನಮ್ಮ ವಿಮರ್ಶಕರು ಕೆಲವರು ಕತೆಗಳಲ್ಲಿರಬಹುದಾದ ಪಾದೇಶಿಕ ಭಾಷೆಯ ಬಗ್ಗೆ, ಒಂದು ಪ್ರದೇಶದ ಸೊಗಡುಳ್ಳ ಭಾಷೆಯ ಬಗ್ಗೆ ಮಾತಾಡುವುದನ್ನು, ಬರೆಯುವುದನ್ನು ನೋಡಿದ್ದೇನೆ. ಇನ್ನು ಕೆಲವರು ಇನ್ನೂ ಮುಂದೆ ಹೋಗಿ ಕೆಲವು ಕತೆಗಳ ‘ಜವಾರಿ ಭಾಷೆ’ಯನ್ನಷ್ಟೆ ಎತ್ತಿ ಹೇಳುತ್ತಾರೆ. ಕತೆಗಳಲ್ಲಿ ಜವಾರಿ ಭಾಷೆಯೆನ್ನುವುದೊಂದು ಇದೆಯೆ? ಒಂದು ಕತೆಯ ಭಾಷೆಯನ್ನು ತೆಗೆದು ಪಕ್ಕಕ್ಕಿಟ್ಟುಬಿಡಿ. ಆಗ ಅಲ್ಲಿ ಪಾತ್ರಗಳಿರುವುದಿಲ್ಲ, ಪಾತ್ರಗಳ ಘರ್ಷಣೆಯಿರುವುದಿಲ್ಲ, ಕ್ರಿಯಾಕ್ಷೇತ್ರವಿರುವುದಿಲ್ಲ, ಜೀವನವನ್ನು ಕುರಿತ ಜಿಜ್ಞಾಸೆಯೋ ದರ್ಶನವೋ ಇರುವುದಿಲ್ಲ, ಅಷ್ಟೇಕೆ ಕತೆಯೇ ಇರುವುದಿಲ್ಲ. ಅಂದರೆ ಭಾಷೆಯಿಲ್ಲದಿದ್ದರೆ ಕತೆಯೇ ಇಲ್ಲ.
ಎಸ್‌. ದಿವಾಕರ್‌ ಹೊಸ ಕಥಾ ಸಂಕಲನ “ಸಂಕ್ಷಿಪ್ತ ಕನ್ನಡ ನಿಘಂಟು ಮತ್ತು ಇತರೆ ಕತೆಗಳು” ಕೃತಿಗೆ ಬರೆದ ಅವರ ಮಾತುಗಳು ನಿಮ್ಮ ಓದಿಗೆ

ಕತೆ ಬರೆಯುತ್ತ, ಅದಕ್ಕಿಂತ ಮಿಗಿಲಾಗಿ ಕತೆಗಳ ಬಗ್ಗೆ ಯೋಚಿಸುತ್ತ ಅರ್ಧ ಶತಮಾನ ಕಳೆದಿರುವ ನಾನು ಈಗಲೂ ಕತೆ ಎಂದರೇನೆಂದು, ಕತೆಯ ಸ್ವರೂಪವೇನೆಂದು, ಏನೇನೆಲ್ಲ ಇದ್ದರೆ ಕತೆಯಾಗುತ್ತದೆಯೆಂದು ನಿಖರವಾಗಿ ಹೇಳಲಾರೆ.

ನಮ್ಮಲ್ಲಿ ಎಷ್ಟೆಲ್ಲ ಕತೆಗಳಿವೆ. ಸಾವಿರಾರು. ಆದರೆ ಅವು ಕತೆಗಳಷ್ಟೆ; ತಮ್ಮಿಂದಾಚೆಗೆ ಏನನ್ನೂ ಹೇಳುವುದಿಲ್ಲ. ಅಂಥವನ್ನು ಓದಿದ ನಾವು ‘ಎಷ್ಟು ಚೆನ್ನಾಗಿದೆ’, ‘ಎಷ್ಟು ತರ್ಕಬದ್ಧವಾಗಿದೆ’, ‘ಕತೆ ನಡೆಯುವುದು ಹೀಗೆಯೇ ಅಲ್ಲವೆ?’ ‘ಕತೆ ಹೀಗೆ ಮುಗಿಯಬಾರದಿತ್ತು’ ಎಂದೆಲ್ಲ ಪ್ರತಿಕ್ರಿಯಿಸುತ್ತೇವೆ. ನನ್ನ ಮಟ್ಟಿಗೆ ಅಂಥ ಕತೆಗಳನ್ನು ಯಾರು ಬೇಕಾದರೂ ಮತ್ತೆ ಹೇಳಬಹುದು (ಅಥವಾ ಬರೆಯಬಹುದು) – ಅವುಗಳ ಎಲ್ಲ ಮುಖ್ಯ ವಿವರಗಳನ್ನೂ ಸರಿಯಾದ ಕ್ರಮದಲ್ಲಿ ನೆನಪಿಟ್ಟುಕೊಂಡರೆ. ಆದರೆ ಇನ್ನು ಕೆಲವು ಕತೆಗಳನ್ನು ನಾವು ಸಮರ್ಪಕವಾಗಿ ಮತ್ತೆ ಹೇಳಲಾಗುವುದೇ ಇಲ್ಲ. ಯಾಕೆಂದರೆ ಆ ಕತೆಗಳಲ್ಲಿ ಪ್ರತಿಯೊಂದು ವಾಕ್ಯವೂ ಪಾತ್ರಗಳು ಕಾಣಿಸುವಂತೆ, ಅವುಗಳ ಧ್ವನಿ ಕೇಳಿಸುವಂತೆ, ಅವುಗಳ ಕ್ರಿಯಾಕ್ಷೇತ್ರವನ್ನು ನಾವು ಸ್ವತಃ ಅನುಭವಿಸುವಂತೆ ಮಾಡಲು ದುಡಿಯುತ್ತಿರುತ್ತದೆ. ಕತೆಗಾರನ ಜಗತ್ತಿಗೊಂದು ಪ್ರವೇಶ ದ್ವಾರವೂ ಆಗಿರುವ ಅದು ಪ್ರತಿಕ್ರಿಯಿಸಬಲ್ಲ ಓದುಗನನ್ನು ಸ್ವತಃ ಕತೆಯ ಭಾಗವಾಗುವಂತೆ, ಲೇಖಕನ ಹಾಗೆಯೇ ಅವನೂ ಪಾತ್ರಗಳನ್ನು, ಸನ್ನಿವೇಶಗಳನ್ನು ರೂಪಿಸುವಂತೆ ಮಾಡುತ್ತಿರುತ್ತದೆ.

ಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲ ನಾನು ಕತೆಗಳ ಬಗ್ಗೆ ಕನ್ನಡದಲ್ಲಿ ಬಂದಿರುವ ಮುಖ್ಯ ವಿಮರ್ಶೆಗಳನ್ನೆಲ್ಲ ಓದಿದೆ. ಕತೆಗಳ ವಸ್ತುಗಳು, ಪಾತ್ರಗಳು, ಪಾತ್ರಗಳ ಸಾಮಾಜಿಕ ಹಿನ್ನೆಲೆ, ಕತೆಗಳ ಸಾಮಾಜಿಕ ರಾಜಕೀಯ ಆಶಯ, ಕತೆಗಾರನ ನಿಲುವು, ಅದು ಸರಿವೋ ಅಲ್ಲವೋ, ಅವನೇನು ಸಮಾಜಮುಖಿಯೋ ಅಲ್ಲವೋ, ಇತ್ಯಾದಿಯನ್ನು ಹೇಗೆ ಹುಡುಕಬೇಕು, ಹಾಗೆ ಹುಡುಕುವುದರಲ್ಲಿ ಏನೇನು ಲಾಭವಿದೆ ಎಂದು ತಿಳಿಯಿತೇ ಹೊರತು ಕತೆ ಎಂದರೇನು, ಅದರ ಶಿಲ್ಪ ಅಥವಾ ಸಂರಚನೆ ಹೇಗೆ ಎಂದು ತಿಳಿಸಿಕೊಡುವ ಒಂದಾದರೂ ವಿಮರ್ಶೆ ನನಗೆ ಸಿಕ್ಕಲಿಲ್ಲ. ಕಡೆಗೆ ಕತೆಗಳನ್ನೇ ಸೂಕ್ಷ್ಮವಾಗಿ ಓದುವ ಅಭ್ಯಾಸ ಮಾಡಿಕೊಂಡರೆ ಏನಾದರೂ ಕಲಿಯಬಹುದೆನ್ನಿಸಿತು. ಕನ್ನಡದಲ್ಲಿ ಮಾಸ್ತಿಯವರಿಂದ ಹಿಡಿದು ಈಚಿನ ದೀಪ್ತಿ ಭದ್ರಾವತಿಯವರ ವರೆಗೆ ಎಲ್ಲ ಪಂಥೀಯರ, ಪಂಥರಹಿತರ ಮುಖ್ಯ ಕತೆಗಳೆಲ್ಲವನ್ನೂ ಓದಿದೆ. ಅದು ಸಾಕಾಗದೆ ಚೆಕಾಫ್, ಕಾಫ್ಕ, ಗೊಗೋಲ್, ಎಡ್ಗರ್ ಆಲೆನ್ ಪೋ, ಮೆಲ್‌ವಿಲ್, ಲಾರೆನ್ಸ್, ಜೇಮ್ಸ್ ಜಾಯ್ಸ್, ಫಾಕ್ನರ್, ಹೆಮಿಂಗ್‌ವೇ, ಪಿರಾಂಡೆಲೊ, ಬರ‍್ಹೆಸ್, ಕಿಪ್ಲಿಂಗ್, ದಿನೊ ಬುತ್ಸಾತಿ, ರ‍್ಯುನೊಸುಕೆ ಅಕುತಗವ, ಹುಲಿಯೊ ಕೋರ್ತಜಾರ್, ಮಾವಿಸ್ ಗಲಾಂಟ್, ಫ್ರಾಂಕ್ ಓಕೋನರ್, ಯೂಡೊರಾ ವೆಲ್ಟಿ, ನಾಡಿನ್ ಗಾರ್ಡಿಮರ್, ಹೀಗೆ ಜಗತ್ತಿನ ಪ್ರಸಿದ್ಧ ಕತೆಗಾರರ ಅನೇಕ ಕತೆಗಳನ್ನೂ ಓದಿದೆ.

ಈ ಲೇಖಕರ ಕತೆಗಳಲ್ಲಿ ತೆರೆದುಕೊಂಡ ವಾಸ್ತವವಿದೆಯಲ್ಲ, ಅದು ಅವರು ತಮ್ಮ ಜೀವನದಲ್ಲಿ ಸ್ವತಃ ಅನುಭವಿಸದಿದ್ದ ವಾಸ್ತವ. ಕತೆ ಎನ್ನುವುದು ಪ್ರಖರ ಸತ್ಯವನ್ನು ಅಡಗಿಸಿಟ್ಟುಕೊಂಡಿರುವ ಜೀವನ. ಅದು ಅಸ್ತಿತ್ವದಲ್ಲಿಲ್ಲದ, ಆದರೆ ನಮಗೆ ಪ್ರಿಯರಾದವರು, ನಾವು ಕಂಡು ಕೇಳಿದವರು ಬಾಳಿ ಅನುಭವಿಸಬಯಸಿದ ವಾಸ್ತವ. ಕತೆಗಾರ ಇಲ್ಲದ ಆ ವಾಸ್ತವವನ್ನು ಆವಿಷ್ಕರಿಸುತ್ತಾನೆ; ಅಂದರೆ ಯಾವುದು ನಡೆಯಲಿಲ್ಲವೋ ಅದನ್ನು ಕಲ್ಪಿಸಿಕೊಳ್ಳುತ್ತಾನೆ. ಹಾಗೆ ಕಲ್ಪಿಸಿಕೊಂಡದ್ದರಲ್ಲಿ ಓದುಗನಾದವನು ತನ್ನ ನಿಜಜೀವನದಲ್ಲಿ ಕೈಗೂಡದೇ ಹೋದ ಆಶೋತ್ತರಗಳನ್ನು ಸ್ವತಃ ಅನುಭವಿಸುವಂತೆ ಮಾಡುತ್ತಾನೆ. ಆದ್ದರಿಂದಲೇ ಪ್ರಸಿದ್ಧ ಲೇಖಕಿ ವರ್ಜೀನಿಯಾ ವೂಲ್ಫ್ “ಉತ್ತೇಜನ ನೀಡುವ ಯಾವುದಾದರೂ ಜೀವನವೊಂದಿದ್ದರೆ ಅದು ಕಲ್ಪಿಸಿಕೊಂಡ ಜೀವನ ಮಾತ್ರ” ಎಂದದ್ದು.

ಓದುಗ ಒಂದು ಕತೆ ಓದುತ್ತಿರುವಾಗ ತೀರ ಖಾಸಗಿಯೂ ಅವಾಸ್ತವಿಕವೂ ಆದ ಜಗತ್ತೊಂದನ್ನು ಪ್ರವೇಶಿಸಲು ತಾತ್ಕಾಲಿಕವಾಗಿ ತನ್ನ ಅಸ್ತಿತ್ವವನ್ನೇ ಕಳಚಿಕೊಂಡಿರುತ್ತಾನೆ. ಹಾಗೆ ಕಳಚಿಕೊಂಡಿದ್ದರೂ ಅವನು ಜಾಗೃತನಾಗಿದ್ದು ತನ್ನ ಕಲ್ಪನಾಶಕ್ತಿಯನ್ನು ಪ್ರಚೋದಿಸುತ್ತಿರುತ್ತಾನೆ. ತಾನು ಓದುತ್ತಿರುವ ಕತೆಯ ಘಟನೆಗಳ ಒಂದು ಭಾಗವಾಗಿದ್ದೂ ಅವನು ನಿಸ್ಸಹಾಯಕ. ಯಾಕೆಂದರೆ ಕತೆಯಲ್ಲಿ ಒಂದು ಅನ್ಯಾಯವೋ ಕೊಲೆಯೋ ನಡೆಯುವಂತಿದ್ದರೂ ಅವನು ಅವುಗಳನ್ನು ತಪ್ಪಿಸಲು ಏನೂ ಮಾಡಲಾರ. ಆದರೂ ಕತೆ ಓದಿದ ಮೇಲೆ ಅವನೇನನ್ನೋ ಹೊಸದಾಗಿ ಅನುಭವಿಸಿರುತ್ತಾನೆ.

ನಮ್ಮ ಜೀವನವನ್ನೇ ನೋಡಿ. ಅದು ಸದಾ ಸಂತೋಷಕರವಾಗಿಯೋ ದುರಂತಮಯವಾಗಿಯೋ ಇರುವುದಿಲ್ಲ. ಜೀವನದಲ್ಲಿ ಸಂವೇದನೆಗಳಿಗೆ, ಕ್ರಿಯೆಗಳಿಗೆ, ವಿಚಾರಗಳಿಗೆ, ಭಾವನೆಗಳಿಗೆ ಅಸ್ತಿತ್ವವಿದೆಯಷ್ಟೆ. ಕತೆಗಾರ ಅವುಗಳಿಗೊಂದು ರೂಪ ಅಥವಾ ವಿನ್ಯಾಸವನ್ನು ಕೊಡಲು, ಅವುಗಳಿಗೊಂದು ಅರ್ಥವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾನೆ. ಕಥನ ಕಲೆ ಪರಿಪೂರ್ಣತೆಯನ್ನು ಸಾಧಿಸಿದಾಗ ಅದು ಅತ್ಯಂತ ಸಂಕೀರ್ಣ ರೀತಿಯಲ್ಲಿ ನಮಗೆ ಸಂತೋಷವನ್ನು ಕೊಡುತ್ತದೆ. ಅನುಭವಕ್ಕೊಂದು ಆಕೃತಿಯನ್ನು ಅಥವಾ ಸುವ್ಯವಸ್ಥೆಯನ್ನು ಒದಗಿಸುವ ಮೂಲಕ, ಸೂಕ್ತ ಸನ್ನಿವೇಶವೊಂದನ್ನು ನಿರ್ಮಿಸುವ ಮೂಲಕ ಕತೆ ನಮ್ಮದೇ ಅಸ್ತಿತ್ವದ ಜಂಜಡಗಳಿಂದ ನಮ್ಮನ್ನು ಕ್ಷಣಕಾಲವಾದರೂ ಪಾರುಮಾಡುತ್ತದೆ. ಅಥವಾ ನಮ್ಮದೇ ಅನುಭವವನ್ನು ಅರ್ಥಮಾಡಿಕೊಳ್ಳಲು ನಮಗೆ ನೆರವಾಗುತ್ತದೆ. ಅಂದರೆ ಕತೆಗಳ ಓದು ಸಾಹಿತ್ಯಾನುಭವದ ಒಂದು ಭಾಗವಾಗುವಂತೆ ನಮ್ಮನ್ನು ಸಿದ್ಧಗೊಳಿಸುತ್ತದೆ.

ಒಂದು ಕತೆ ತನ್ನದೇ ಜಗತ್ತನ್ನು ಸೃಷ್ಟಿಸಿರುತ್ತದೆ. ಅದನ್ನು ಓದುವಾಗ ನಾವು ಆ ಜಗತ್ತನ್ನು ಪ್ರವೇಶಿಸುತ್ತೇವೆ. ಅಲ್ಲಿ ಏನೇನಿವೆಯೋ ಅವೆಲ್ಲವೂ ಕತೆಗಾರ ತಂದಿಟ್ಟದ್ದಲ್ಲವೆಂದೂ ಅಲ್ಲಿಗೇ ಸೇರಿದ್ದೆಂದೂ ನಮಗೆ ಹೊಳೆಯುತ್ತದೆ. ಹಾಗೆ ನೋಡಿದರೆ ನಾವು ಕತೆಗಾರನನ್ನೇ ಮರೆತುಬಿಡುತ್ತೇವೆ. ನಮಗೆ ಆ ಜಗತ್ತು ನಮ್ಮ ಜೀವನದ ಹಾಗೆಯೇ ಇದೆ ಅಥವಾ ನಮ್ಮ ಜೀವನಕ್ಕಿಂತ ಹೆಚ್ಚು ಉತ್ತಮವಾಗಿದೆ ಅನ್ನಿಸುತ್ತದೆ. ಯಾಕೆಂದರೆ ಎಲ್ಲವೂ ನಿರ್ದಿಷ್ಟವಾದೊಂದು ಕಾರಣಕ್ಕಾಗಿಯೆ ಅಲ್ಲಿರುತ್ತವೆ.

(ಎಸ್‌. ದಿವಾಕರ್‌)

ಈಗ ದಶಕಗಳ ಕಾಲದ ಕಥಾಭ್ಯಾಸದಿಂದ ನಾನು ಕಲಿತ ಕೆಲವು ಪಾಠಗಳನ್ನು ಒಂದೊಂದಾಗಿ ಇಲ್ಲಿ ಉಲ್ಲೇಖಿಸಬಯಸುತ್ತೇನೆ:

  1. ಭಾಷೆ: ನಮಗೆ ಬೇಕೋ ಬೇಡವೋ ಕನ್ನಡ ಕತೆಗಳ ಇತಿಹಾಸದಲ್ಲಿ ಹಲವು ಪಂಥಗಳಿವೆ, ಚಳವಳಿಗಳಿವೆ. ಉದಾಹರಣೆಗೆ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ; ಜೊತೆಗೆ ಸ್ತ್ರೀ ಸಂವೇದನೆ, ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತರ ಸಂವೇದನೆ, ಇತ್ಯಾದಿ. ಈ ಎಲ್ಲ ಪಂಥಗಳ, ಚಳವಳಿಗಳ, ಸಂವೇದನೆಗಳ ಕತೆಗಳಲ್ಲೂ ಮುಖ್ಯವಾಗಿರುವುದು ಅವುಗಳ ಭಾಷೆ. ನನ್ನ ಮಟ್ಟಿಗೆ ಸಣ್ಣಕತೆಯ ಭಾಷೆ ಅನುಭವವನ್ನು ಓದುಗನಿಗೆ ದಾಟಿಸುವುದಷ್ಟೇ ಅಲ್ಲ, ಅನುಭವದ ಬದಲಿ ಅಥವಾ ಪರ್ಯಾಯ ಗ್ರಹಿಕೆಗಳನ್ನು ತೋರಿಸುತ್ತದೆ ಕೂಡ. ಉದ್ದೇಶ ಏನೇ ಇರಲಿ, ಕತೆಗಾರ ಅಸಂಖ್ಯ ವಿಧಾನಗಳ ಮೂಲಕ ಅನುಭವವಿನ್ಯಾಸವೊಂದನ್ನು ಪಡಿಮೂಡಿಸುತ್ತಾನೆ. ಉದಾಹರಣೆಗೆ ವಾಸ್ತವಿಕ ವಿವರಗಳಿಂದ ಅಥವಾ ಪ್ರತಿವಾಸ್ತವದ ಪ್ರತಿಬಿಂಬಗಳಿಂದ ಅಥವಾ ಅದ್ಭುತರಮ್ಯ ವಿಧಾನದಿಂದ.

ಕತೆಗಳನ್ನು ಕುರಿತ ರಹಸ್ಯವೆಂದರೆ ಅವು ಸಂಪೂರ್ಣವಾಗಿ ಭಾಷೆಯಿಂದಾಗಿವೆ ಎನ್ನುವುದು. ಕತೆಗಳೆಂದರೆ ಭಾಷೆ ತಯಾರಿಸಿದ ಭ್ರಮೆಗಳು, ಓದುಗರನ್ನು ನಂಬುವಂತೆ ಮಾಡಬಲ್ಲ ಕಲ್ಪನೆಗಳು. ಇವು ನಿಜ ಅನ್ನಿಸಬೇಕಾದರೆ ಕತೆಗಾರನ ಭಾಷೆ ಓದುಗನ ಇಂದ್ರಿಯಗಳನ್ನು ಬಡಿದೆಬ್ಬಿಸುವಷ್ಟು ಶಕ್ತವಾಗಿರಬೇಕು. ಅಮೆರಿಕನ್ ಕತೆಗಾರ್ತಿ ಫ್ಲಾನೆರಿ ಓಕೋನರ್ ಬರೆದಿರುವಂತೆ ಕತೆ ಕೆಲಸಮಾಡುವುದು ಅದನ್ನು ಓದುವವನ ಇಂದ್ರಿಯಗಳ ಮೂಲಕ. ಕತೆಯ ಪ್ರಮುಖ ಲಕ್ಷಣವೆಂದರೆ ಅದು ನೋಡುವ, ಕೇಳುವ, ಆಘ್ರಾಣಿಸುವ, ರುಚಿ ನೋಡುವ, ಸ್ಪರ್ಶಿಸುವ ಮೂಲಕ ವಾಸ್ತವದ ಜೊತೆ ವ್ಯವಹರಿಸುತ್ತದೆ.

ಈಚೀಚೆಗೆ ನಮ್ಮ ವಿಮರ್ಶಕರು ಕೆಲವರು ಕತೆಗಳಲ್ಲಿರಬಹುದಾದ ಪಾದೇಶಿಕ ಭಾಷೆಯ ಬಗ್ಗೆ, ಒಂದು ಪ್ರದೇಶದ ಸೊಗಡುಳ್ಳ ಭಾಷೆಯ ಬಗ್ಗೆ ಮಾತಾಡುವುದನ್ನು, ಬರೆಯುವುದನ್ನು ನೋಡಿದ್ದೇನೆ. ಇನ್ನು ಕೆಲವರು ಇನ್ನೂ ಮುಂದೆ ಹೋಗಿ ಕೆಲವು ಕತೆಗಳ ‘ಜವಾರಿ ಭಾಷೆ’ಯನ್ನಷ್ಟೆ ಎತ್ತಿ ಹೇಳುತ್ತಾರೆ. ಕತೆಗಳಲ್ಲಿ ಜವಾರಿ ಭಾಷೆಯೆನ್ನುವುದೊಂದು ಇದೆಯೆ? ಒಂದು ಕತೆಯ ಭಾಷೆಯನ್ನು ತೆಗೆದು ಪಕ್ಕಕ್ಕಿಟ್ಟುಬಿಡಿ. ಆಗ ಅಲ್ಲಿ ಪಾತ್ರಗಳಿರುವುದಿಲ್ಲ, ಪಾತ್ರಗಳ ಘರ್ಷಣೆಯಿರುವುದಿಲ್ಲ, ಕ್ರಿಯಾಕ್ಷೇತ್ರವಿರುವುದಿಲ್ಲ, ಜೀವನವನ್ನು ಕುರಿತ ಜಿಜ್ಞಾಸೆಯೋ ದರ್ಶನವೋ ಇರುವುದಿಲ್ಲ, ಅಷ್ಟೇಕೆ ಕತೆಯೇ ಇರುವುದಿಲ್ಲ. ಅಂದರೆ ಭಾಷೆಯಿಲ್ಲದಿದ್ದರೆ ಕತೆಯೇ ಇಲ್ಲ.

ಪಾತ್ರವೆನ್ನುವುದು ಕತೆಗಾರ ತಾನು ಸೃಷ್ಟಿಸಿದ ಜೀವನಕ್ಕೆರೆಯುವ ಭಾಷೆ. ಹಾಗೆಯೇ ಪ್ಲಾಟ್, ಹಾಗೆಯೇ ಕ್ರಿಯಾಕ್ಷೇತ್ರ, ಹಾಗೆಯೇ ಘರ್ಷಣೆ. ಇವೆಲ್ಲವೂ ಭಾಷಾಕ್ರಿಯೆಯೇ ಆಗಿದ್ದು ಕತೆಯ ಧ್ವನಿಯನ್ನು ಕೇಳಿಸುವುದಲ್ಲ, ಕಾಣಿಸುವಂತೆ ಮಾಡುತ್ತವೆ.

  1. ಪಾತ್ರಗಳು: ಕತೆಯ ಪಾತ್ರಗಳು ನಿಜವಾದ ಮನುಷ್ಯರಂತೆ; ಆದರೆ ನಿಜವಾದ ಮನುಷ್ಯರಲ್ಲ. ವಾಸ್ತವವಾದಿ ಕತೆಗಳ ಲೇಖಕರು ಸಮಕಾಲೀನ ಬದುಕಿನ ವಿವರಗಳೇ ತಮ್ಮ ಪಾತ್ರಗಳನ್ನು ಸುತ್ತುವರಿದಿರುವಂತೆ ನೋಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಅವರು ಸಾಮಾನ್ಯ ಜೀವನದಲ್ಲಿ ನಡೆಯುವ ಘಟನೆಗಳಿಗಷ್ಟೇ ತಮ್ಮ ನಿರೂಪಣೆಯನ್ನು ಸೀಮಿತಗೊಳಿಸುತ್ತಾರೆ. ಹಾಗೆ ನೋಡಿದರೆ ಕತೆಗಾರ ಎರಡು ಬಗೆಯ ಪಾತ್ರಗಳನ್ನು ಸೃಷ್ಟಿಸುತ್ತಾನೆ: ಒಂದು ವ್ಯಕ್ತಿವೈಶಿಷ್ಟ್ಯವುಳ್ಳ ಪಾತ್ರ; ಇನ್ನೊಂದು ಒಂದು ಬಗೆಯ ಮನುಷ್ಯರಿಗೆ ಮಾದರಿಯಾಗಬಲ್ಲ ಪಾತ್ರ. ಕತೆಗಳಲ್ಲಿ ಪಾತ್ರಗಳು ಬದಲಾಗುತ್ತಲೇ ಇರುವುದರಿಂದ ಪ್ರತಿಯೊಂದು ಕತೆಯೂ, ತನ್ನ ಪ್ಲಾಟ್‌ನಲ್ಲಿ ಅಂಥ ವ್ಯತ್ಯಾಸವಿಲ್ಲದಿದ್ದರೂ ಕೂಡ, ವಿಭಿನ್ನವಾಗಿರುತ್ತದೆ. ಕತೆಯ ಕೇಂದ್ರದಲ್ಲಿ ಮಿಡಿಯುವುದು ಪಾತ್ರವೇ. ಪ್ರೀತಿ, ಘನತೆ, ಅನುಕಂಪ, ಹೆಮ್ಮೆ, ಸಹಾನುಭೂತಿ, ತ್ಯಾಗ ಮೊದಲಾದವುಗಳನ್ನು ಕತೆಯ ಜಗತ್ತಿನಿಂದ ನಮ್ಮ ಅನುಭವಕ್ಕೆ ತಂದುಕೊಡುವುದು ಕೂಡ ಅದೇ. ಕತೆಗಾರ ಪಾತ್ರವೊಂದಕ್ಕೆ ಜೀವ ತುಂಬುವುದು ಒಬ್ಬ ವ್ಯಕ್ತಿಯ ಚಹರೆಯಿಂದ, ಅವನದೊಂದು ಮಾತಿನಿಂದ, ಅವನಿಗೇ ವಿಶಿಷ್ಟವಾದ ನಡಾವಳಿಯಿಂದ.

ಪರಿಚಿತ ಜಗತ್ತಿನ ಅಪರಿಚಿತ ಮೂಲೆಗಳಿಂದ ಬರುವ ಪಾತ್ರಗಳು ಓದುಗರಿಗೆ ಬೆರಗುಹುಟ್ಟಿಸುತ್ತವೆ, ಅವರನ್ನು ಬೆಚ್ಚಿಬೀಳಿಸುತ್ತವೆ, ಅವರಿಗೆ ಜ್ಞಾನೋದಯ ಉಂಟುಮಾಡುತ್ತವೆ. ಅದೇ ರೀತಿ ಏನೆಲ್ಲ ಮಾರ್ಪಾಡುಗೊಂಡ ಮೇಲೂ ‘ನಿಜ’ವೇ ಆಗಿರುತ್ತವೆ.

  1. ವಿವರಗಳು: ಕತೆಗೆ ಮಹತ್ವಪೂರ್ಣವಾದ ವಿವರಗಳು ಬೇಕು. ನಾವು ಕತೆಯೊಂದನ್ನು ಓದುತ್ತಿರುವಾಗ ನಮ್ಮದೇ ಅನುಭವವನ್ನು ಪರೀಕ್ಷಿಸುತ್ತಿದ್ದರೆ ಕತೆಯಲ್ಲಿ ಭೌತಿಕ ವಿವರಗಳು ಎಷ್ಟು ಮುಖ್ಯ ಎಂದು ಗೊತ್ತಾಗುತ್ತದೆ. ಭೌತಿಕ ವಿವರಗಳು ನಮ್ಮ ಮನಸ್ಸಿನಲ್ಲಿ ನಮಗಾಗಿಯೆ ಒಂದು ಬಗೆಯ ಸ್ವಪ್ನವನ್ನು ರೂಪಿಸುತ್ತಿರುತ್ತವೆ. ಒಂದು ಕತೆಯನ್ನು ಓದುತ್ತಿರುವಾಗ ನಾವು ಅಲ್ಲಿರುವ ಶಬ್ದಗಳನ್ನಷ್ಟೆ ನೋಡುತ್ತಿರುವುದಿಲ್ಲ, ಒಂದು ಮರವನ್ನೋ ಓಡುತ್ತಿರುವ ರೈಲನ್ನೋ, ತನ್ನ ಮಗುವನ್ನು ವಾತ್ಸಲ್ಯದಿಂದ ನೋಡುತ್ತಿರುವ ಒಬ್ಬ ತಾಯಿಯ ಕಣ್ಣನ್ನೋ, ಧಾರಾಕಾರ ಸುರಿಯುತ್ತಿರುವ ಮಳೆಯನ್ನೋ, ಮುದುಕನೊಬ್ಬ ಕಣ್ಣೀರು ಸುರಿಸುತ್ತಿರುವುದನ್ನೋ ನೋಡುತ್ತಿರುತ್ತೇವೆ. ಅಂದರೆ ನಾವು ನಿಷ್ಕ್ರಿಯವಾಗಿ ಅಲ್ಲ, ಸಕ್ರಿಯವಾಗಿ ಓದುತ್ತ ಅಥವಾ ಕನಸುಕಾಣುತ್ತ, ಪಾತ್ರಗಳ ಸಂಕಷ್ಟಕ್ಕೆ ಮಿಡಿಯುತ್ತ, ಯಾವುದೋ ಬಾಗಿಲು ತೆರೆದದ್ದೇ ಬೆಚ್ಚಿಬೀಳುತ್ತ, ಪಾತ್ರವೊಂದರ ಯಶಸ್ಸನ್ನು ಸಂಭ್ರಮಿಸುತ್ತ ಇರುತ್ತೇವೆ. ನಾನೇ ಕಂಡುಕೊಂಡಿರುವಂತೆ ಅತ್ಯುತ್ತಮ ಕತೆಗಳಲ್ಲಿ ಕನಸೇ ನಮ್ಮನ್ನು ಕಾಯಾವಾಚಾಮನಸಾ ತೊಡಗಿಸಿಕೊಳ್ಳುತ್ತದೆ. ನಾವು ದೃಶ್ಯ, ಶಬ್ದ, ವಾಸನೆ ಮುಂತಾದವು ಕಾಲ್ಪನಿಕವಲ್ಲ, ನಿಜವಾದವು ಎಂದು ಭ್ರಮಿಸುವುದಲ್ಲದೆ ಕತೆಯೊಳಗಿನ ಸಮಸ್ಯೆಗಳನ್ನು ನಿಜವಾದ ಸಮಸ್ಯೆಗಳೇ ಎಂದು ತಿಳಿದು ಆಯಾ ಸನ್ನಿವೇಶಕ್ಕೆ ತಕ್ಕಂತೆ ನೋವನ್ನೋ ಆಘಾತವನ್ನೋ ಸಹಾನುಭೂತಿಯನ್ನೋ ಅನುಭವಿಸುತ್ತೇವೆ. ಸಣ್ಣಕತೆಯ ಬಗ್ಗೆ, ಅಷ್ಟೇಕೆ ಒಂದು ಕವನದ ಅಥವಾ ಕಾದಂಬರಿಯ ಬಗ್ಗೆ ಕೇಳಬಹುದಾದ ಪ್ರಶ್ನೆ ಎಂದರೆ “ಅದು ನಿಜಕ್ಕೂ ಜೀವಂತವಾಗಿದೆಯೆ ಇಲ್ಲವೆ?” ಎಂಬುದು. ಜೀವಂತವಾಗಿರುವುದಾದರೆ ಅದರಲ್ಲಿ ನಮ್ಮ ಜೀವನವನ್ನೇ ಪ್ರತಿನಿಧಿಸುವ ವಿವರಗಳಂತೂ ಇದ್ದೇ ಇರುತ್ತವೆ.
  2. ಪ್ಲಾಟ್ (ಕಥಾಸಂವಿಧಾನ): ಪ್ಲಾಟ್ ಏನು ಎನ್ನುವುದಕ್ಕಿಂತ ಕತೆ ಯಾವುದಕ್ಕಾಗಿ ಪ್ಲಾಟ್ (ಸಂಚು) ಮಾಡುತ್ತಿದೆ, ಓದುಗನೊಳಗೆ ಉಳಿದುಕೊಳ್ಳಲು ಅದು ಹೂಡುವ ಆಟವೇನು? ಎಂಬ ಪ್ರಶ್ನೆಗಳು ಬಹುಮುಖ್ಯ. ಕತೆಯಲ್ಲಿ ಪ್ಲಾಟ್ ಎಂದರೆ ಕಥನಕ್ರಿಯೆಯ ರೂಪರೇಷೆಯುಳ್ಳ ಘಟನೆಗಳ ಒಂದು ಸರಮಾಲೆ, ಹೌದು. ಹಾಗೆಂದು ಅಷ್ಟೇ ಅರ್ಥಪೂರ್ಣವಾದ ಅದರ ಕ್ರಿಯಾಕ್ಷೇತ್ರವನ್ನು ಕಡೆಗಣಿಸುವಂತಿಲ್ಲ. ಈ ದೃಷ್ಟಿಯಿಂದ ಪ್ಲಾಟ್ ಕತೆ ನಡೆಯುವ ಅವಕಾಶ ಅಥವಾ ಕ್ರಿಯಾಕ್ಷೇತ್ರಕ್ಕೆ ಸಂಬಂಧಪಟ್ಟದ್ದು. ಓದುಗರಾಗಿ ನಾವು ಕತೆಗೇನು ತಂದುಕೊಡುತ್ತೇವೆ ಎಂಬುದು ಕೂಡ ಪ್ಲಾಟೇ.

ಒಂದು ಕತೆಯ ಅರ್ಥವನ್ನು ಅಭಿವ್ಯಕ್ತಿಸುವಲ್ಲಿ ಪ್ಲಾಟ್‌ಗಿರುವ ಪ್ರಾಮುಖ್ಯತೆಯನ್ನು ಕಡೆಗಣಿಸುವಂತಿಲ್ಲ. ಪ್ಲಾಟಿಂಗ್ ಎಂದರೆ ಕ್ರಿಯೆಗಳ, ಘಟನೆಗಳ, ಸನ್ನಿವೇಶಗಳ ಒಂದು ವಿನ್ಯಾಸವನ್ನು ರಚಿಸುವುದು. ಇಂಥ ವಿನ್ಯಾಸಗಳಲ್ಲಿ ಕೆಲವು ಸರಳವಾಗಿದ್ದರೆ ಇನ್ನು ಕೆಲವು ಸಂಕೀರ್ಣವಾಗಿರುತ್ತವೆ. ಕತೆಗಾರ ಓದುಗನ ಮೇಲೆ ಸಸ್ಪೆನ್ಸ್, ವಿನೋದ, ಸಂಭ್ರಮ, ಭೀತಿ, ಹೀಗೆ ಕೆಲವು ಪರಿಣಾಮಗಳನ್ನು ಉಂಟುಮಾಡುವುದು ಅವನು ರಚಿಸಿದ ಅಂಥ ವಿನ್ಯಾಸಗಳಿಂದಲೇ. ಆ ವಿನ್ಯಾಸಗಳು ಪಾತ್ರಗಳ, ಘಟನೆಗಳ, ಸನ್ನಿವೇಶಗಳ ನಡುವಣ ಸಂಬಂಧಗಳನ್ನು ಕೂಡ ಸೂಚಿಸುತ್ತವೆ. ಕತೆಯಲ್ಲಿ ಪಾತ್ರಗಳ ನಿಜವಾದ ಸ್ವಭಾವ ಗೊತ್ತಾಗುವುದು ಅವು ಏನು ಮಾತಾಡುತ್ತವೆ ಎಂಬುದರಿಂದಲ್ಲ, ಏನು ಮಾಡುತ್ತವೆ ಎಂಬುದರಿಂದ.

ನಾವು ಯಾವುದಕ್ಕಾದರೂ ಪ್ಲಾಟ್ (ಒಳಸಂಚು) ಮಾಡಿದರೆ ಅದನ್ನು ರಹಸ್ಯವಾಗಿ ಸಾಧಿಸುತ್ತೇವೆ. ಪ್ಲಾಟ್ ನಿಗೂಢವನ್ನು ಸೂಚಿಸುವ ಶಬ್ದ. ನಿಗೂಢ ಎಂದರೆ ಯಾವುದು ಕತೆಯ ಮೂಲಕ ಪಾತ್ರಗಳನ್ನು ಪ್ರಚೋದಿಸುತ್ತದೋ ಅದು. ಈ ದೃಷ್ಟಿಯಿಂದ ಕತೆಯಲ್ಲಿ ಪ್ಲಾಟ್ ಎಂದರೆ ಅದು ಹೇಳುತ್ತಿರುವದಲ್ಲ, ಹೇಳದೆ ಉಳಿಸಿಕೊಂಡಿರುವಂಥದ್ದು. ಹಾಗೆ ನೋಡಿದರೆ, ಒಂದು ಕತೆಗೆ ಜೀವ ತುಂಬುವ ಸಾಧನವೇ ಪ್ಲಾಟ್. ಮತ್ತೆ ಪ್ಲಾಟುಗಳು ಸ್ಪಷ್ಟವಾದದ್ದೇ ಪ್ಲಾಟುಗಳಾಗಿ ಉಳಿಯುವುದಿಲ್ಲ.

  1. ಸಂಕೇತ: ಕತೆಯಲ್ಲಿ ಯಾವುದು ತನ್ನ ಅಕ್ಷರಶಃ ಅರ್ಥಕ್ಕಿಂತ ಹೆಚ್ಚಿನದನ್ನು ಧ್ವನಿಸುತ್ತದೋ ಅದು ಸಂಕೇತ. ಅದು ಒಂದು ನಿರ್ದಿಷ್ಟ ಅರ್ಥವನ್ನಷ್ಟೇ ಸೂಚಿಸುವುದಿಲ್ಲ ಅಥವಾ ಯಾವುದನ್ನೋ ನಿರ್ದಿಷ್ಟವೆಂದು ಅಥವಾ ಇದಮಿತ್ಥಂ ಎಂದು ಹೇಳುವುದಿಲ್ಲ; ಯಾವುದರ ಕಡೆಗೋ ಬೆರಳು ತೋರಿಸುತ್ತದೆ, ಸಂಜ್ಞೆ ಮಾಡುತ್ತದೆ. ಒಂದು ಸಾಂಕೇತಿಕ ಕತೆಯ ಮುಖ್ಯ ಲಕ್ಷಣವೆಂದರೆ ಅದು ಹೊಮ್ಮಿಸುವ ಬಹುಮುಖೀ ಅರ್ಥ. ಅಂಥ ಅರ್ಥ ಹೊಮ್ಮಿಸುವ ಕತೆ ಅಲಿಗರಿಯಾಗಿರುವುದಿಲ್ಲ, ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಯಾಕೆಂದರೆ ಅಲಿಗರಿಯಲ್ಲಿ ವ್ಯಕ್ತಿಗಳಿಗೆ, ಸ್ಥಳಗಳಿಗೆ, ವಸ್ತುವಿಶೇಷಗಳಿಗೆ ಅಂಥವೇ ಪರ್ಯಾಯಗಳುಂಟು.

ಒಳ್ಳೆಯ ಕತೆಗಳಲ್ಲಿ ಕೆಲವು ವಿವರಗಳು ಕತೆಯ ಕ್ರಿಯೆಯಿಂದಾಗಿ ಎಷ್ಟು ಅರ್ಥಗಳನ್ನು ತುಂಬಿಕೊಳ್ಳುತ್ತವೆಯೆಂದರೆ ಅವು ತಾವು ಕೆಲಸಮಾಡುವ ರೀತಿಯಲ್ಲೇ ಸಾಂಕೇತಿಕವಾಗುತ್ತವೆ.

6. ವ್ಯಂಗ್ಯ ಅಥವಾ ಐರನಿ: ಕತೆಗಳಲ್ಲಿ ಐರನಿಯ ಗುರುತು ಸಿಕ್ಕಿದರೆ ನಮಗೆ ಸಂತೋಷವಾಗುತ್ತದೆ. ಅದು ನಮ್ಮನ್ನು ಎಚ್ಚರಿಸಲು, ಆಶ್ಚರ್ಯಪಡುವಂತೆ ಮಾಡಲು, ನಮ್ಮ ಸಹಾನುಭೂತಿಯನ್ನು ಕೆರಳಿಸಲು ಪ್ರಚೋದಿಸುತ್ತದೆ. ಕತೆಯೊಳಗಿನ ಒಂದು ಹೇಳಿಕೆಯಲ್ಲೋ ಒಂದು ಸನ್ನಿವೇಶದಲ್ಲೋ ಅನಿರೀಕ್ಷಿತ ವಿದ್ಯಮಾನದಲ್ಲೋ ದೃಷ್ಟಿಕೋನದಲ್ಲೋ ಉದ್ಭವಿಸಬಹುದಾದ ಐರನಿ ನಮ್ಮನ್ನು ಅವಾಕ್ಕಾಗಿಸಬಹುದು, ನಮ್ಮ ಮೇಲೆ ವಿಶಿಷ್ಟ ಪರಿಣಾಮ ಬೀರಬಹುದು, ನಾವು ಕತೆಯನ್ನೇ ಬಹುಕಾಲ ಮರೆಯದಂತೆ ಮಾಡಬಹುದು.

  1. ‘ಎಪಿಫನಿ’: ಇಲ್ಲಿ ಜೇಮ್ಸ್ ಜಾಯ್ಸ್ ಹೇಳಿದ ‘ಎಪಿಫನಿ’ ಎಂಬ ಶಬ್ದವನ್ನು ಉಲ್ಲೇಖಿಸಬೇಕು. ಎಪಿಫನಿ ಎಂದರೆ ಅರಿವಿನ ಸ್ಫೋಟ ಅಥವಾ ಆತ್ಮಜ್ಞಾನ ಅಥವಾ ಕತೆಯ ಒಂದು ಮುಖ್ಯ ಹಂತದಲ್ಲಿ ಜಗತ್ತನ್ನು ಕುರಿತು ಪಾತ್ರವೊಂದಕ್ಕೆ ಉಂಟಾಗುವ ಜ್ಞಾನೋದಯ. ಇದು ಸಣ್ಣ ಕತೆಗೆ ಅತ್ಯಗತ್ಯ. ಎಪಿಫನಿ ಉಂಟಾಗುವ ಕ್ಷಣವಿದೆಯಲ್ಲ, ಅದು ಬೌದ್ಧಿಕವಲ್ಲ; ಅದೊಂದು ತತ್‌ಕ್ಷಣದ ಅನುಭವ; ಅದು ಸೂಚಿಸುವ ದರ್ಶನಕ್ಕೆ ಬೇರೆ ಪರ್ಯಾಯಗಳಿರುವುದಿಲ್ಲ. ಒಟ್ಟಿನಲ್ಲಿ ಎಪಿಫನಿ ಎಂದರೆ ಓದುಗನಿಗೆ ಕತೆ ಓದಿದ ಮೇಲೆ ದೊರೆಯುವ ದಿವ್ಯಾನುಭವ.

8. ಶೈಲಿ: ಸಣ್ಣಕತೆಯಲ್ಲಿ ಶೈಲಿ ಎನ್ನುವುದು ಕತೆಗಾರನ ಮೊಹರು. ಕತೆಗಾರ ಕೇವಲ ತನ್ನನ್ನು ತಾನೇ ಅಭಿವ್ಯಕ್ತಿಸುವುದಿಲ್ಲ; ತನ್ನ ಮೂಲಕವೇ ಭಾಷೆ ಮತ್ತು ಜಗತ್ತು ಅನುರಣಿಸುವುದಕ್ಕಾಗಿ ತನ್ನನ್ನು ತಾನೇ ತೆರೆದುಕೊಳ್ಳುತ್ತಾನೆ. ನನ್ನ ಮಟ್ಟಿಗೆ ಕತೆಗಾರ ಎಂದರೆ ಸ್ವತಃ ಅನುಭವಿಸಿದವನು, ಅನುಭವಕ್ಕೆ ಸಾಕ್ಷಿಯಾದವನು, ತನ್ನ ಅನುಭವ ಇತರರ ಅನುಭವವಾಗುವಂತೆ ಮಾಡುವವನು. ಹಾಗೆ ನೋಡಿದರೆ ಎಲ್ಲ ಕತೆಗಳೂ ನಡೆಯುವುದು ‘ನಮ್ಮೊಳಗೇ’. ನಾವು ಕತೆಯ ಜಗತ್ತಿನ ಬಗ್ಗೆ ಅಥವಾ ಅದು ನಡೆಯುತ್ತಿರುವ ಕ್ಷೇತ್ರದ ಬಗ್ಗೆ ಮಾತಾಡುತ್ತೇವೆ. ಕತೆ ವಾಸ್ತವ ಎನ್ನುವುದೊಂದು ವಿಚಿತ್ರ ಭ್ರಮೆ. ಯಾಕೆಂದರೆ ಕತೆ ನಿಜವಂತೂ ಅಲ್ಲ.

ಕತೆಗಳು ತಮ್ಮದೇ ಪದ್ಧತಿಗಳನ್ನು, ತಮ್ಮದೇ ತಂತ್ರಗಳನ್ನು ಒಳಗೊಳ್ಳುವ ಮೂಲಕ ಮುಖ್ಯವಾಗುತ್ತವೆ. ಕತೆಗಾರ ತಾನು ಬರೆಯುತ್ತಿರುವುದು ಹೊಸ ಕತೆಯಲ್ಲ, ಹಳೆಯ ಕತೆಗಳನ್ನು ಹೊಸ ರೀತಿಯಲ್ಲಿ ಹೇಳುವ ವಿಧಾನ ಎಂಬುದನ್ನು ಸ್ವತಃ ನಂಬುವುದಲ್ಲದೆ, ಅದನ್ನು ಸಾಬೀತುಗೊಳಿಸಲೂ ಬೇಕು. ಕತೆಗಾರನಿಗೆ ಅವನದೇ ಶೈಲಿ ಬೇಕು. ಇಷ್ಟಕ್ಕೂ ಶೈಲಿ ಎಂದರೇನು? ಕತೆಗಾರನ ಭಾಷೆಯ, ವ್ಯಾಕರಣದ, ವಾಕ್ಯರೂಪಣೆಯ, ವೈಚಾರಿಕತೆಯ, ಲೋಕಾನುಭವದ, ನೈತಿಕ ನಿಲುವಿನ ಒಂದು ವಿಶೇಷ. ಕತೆಗಾರ ಅಂಥ ಶೈಲಿಗಾಗಿ ತನ್ನದೇ ತಂತ್ರವನ್ನು ಕರಗತಗೊಳಿಸಿಕೊಳ್ಳುತ್ತಾನೆ. ಎಷ್ಟೆಂದರೆ ಶೈಲಿ ತನ್ನ ಮೇಲೆ ಸವಾರಿ ಮಾಡದಂತೆ, ತನ್ನನ್ನು ನಿಯಂತ್ರಿಸದಂತೆ ನೋಡಿಕೊಳ್ಳುವುದಷ್ಟೇ ಅಲ್ಲ, ಅದು ತನಗೆ ಬೇಕಾದ ಪರಿಣಾಮವನ್ನು ಸಾಧಿಸುವಂತೆ ಮಾಡುತ್ತಾನೆ. ಶೈಲಿಯೆಂದರೆ ಒಂದಿಡೀ ಜೀವನಾನುಭವದ ಸಾರ. ಅದು ನಿಜವಾದ ಧ್ವನಿಯಲ್ಲದಿದ್ದರೆ ಬೇರೇನೂ ಅಲ್ಲ. ಅದನ್ನು ಕಾಪಿ ಮಾಡಲಾಗದು.

ಕತೆಗಾರನ ಧಾಟಿಗೂ ಅವನ ಶೈಲಿಗೂ ಅವಿನಾಭಾವ ಸಂಬಂಧವುಂಟು. ಅದು ಅವನು ಬರೆಯುವ ಎಲ್ಲದರಲ್ಲೂ ಕಾಣುವ ಅವನದೇ ಮೊಹರು, ಅವನದೇ ಮಾತು ಅಥವಾ ಭಾಷೆ; ಬೇರೆ ಯಾರದೂ ಅಲ್ಲ. ಬಹುಶಃ ಒಬ್ಬ ಲೇಖಕನಿಗೂ ಇನ್ನೊಬ್ಬ ಲೇಖಕನಿಗೂ ಇರುವ ವ್ಯತ್ಯಾಸ ಗೊತ್ತಾಗುವುದೇ ಶೈಲಿಯಿಂದ. ಒಬ್ಬ ಕತೆಗಾರನಿಗೆ ವಸ್ತುವಿಷಯಗಳನ್ನು ನೋಡುವ ಅವನದೇ ಆದ ಕ್ರಮವೊಂದಿದ್ದರೆ, ಆ ಕ್ರಮಕ್ಕೆ ಅವನು ಕಲಾತ್ಮಕ ಅಭಿವ್ಯಕ್ತಿ ನೀಡಬಲ್ಲನಾದರೆ ಅವನ ಕೃತಿಗಳು ಬಹುಕಾಲ ಉಳಿಯುತ್ತವೆ.

ಕತೆ ನಮಗೆ ಮುಖ್ಯವೆನ್ನುವುದಾದರೆ ಕತೆಗಳನ್ನು ಹೇಗೆ ಹೇಳಲಾಗಿದೆ (ಬರೆಯಲಾಗಿದೆ) ಎನ್ನುವುದೂ ಮುಖ್ಯ. ನಾವು ಓದುತ್ತ, ಗಮನಿಸುತ್ತ ಹೋದಂತೆ ಕನ್ನಡ ಭಾಷೆಗೆ ನಮ್ಮ ಕತೆಗಳು ಮುಖ್ಯವಾಗುವಂತೆ ಮಾಡಬಲ್ಲ ಅಸಂಖ್ಯಾತ ವಿಧಾನಗಳಿವೆ ಎಂದು ಗೊತ್ತಾಗುತ್ತದೆ. ಅದೊಂದು ಅಕ್ಷಯ ಭಂಡಾರ.

  1. ವಸ್ತು: ಬಡತನ, ಪ್ರೀತಿ, ದುಃಖ, ಜಾತಿ, ಧರ್ಮ, ಸ್ವಾತಂತ್ರ್ಯ, ಸಂಕೋಲೆ ಇವೆಲ್ಲ ಎಂದಿಗೂ ತೀರಿಹೋಗದ ವಸ್ತುಗಳು. ಕತೆಗಾರ ಹಳೆಯದಾದ ಈ ವಸ್ತುಗಳನ್ನೇ ಇಟ್ಟುಕೊಂಡು ತನ್ನದೇ ಅನುಭವದ ಬೆಳಕಿನಲ್ಲಿ ತನ್ನದೇ ಆದ ಅನನ್ಯ ಶೈಲಿಯಲ್ಲಿ ಕತೆಗಳನ್ನು ಬರೆಯುತ್ತಾನೆ. ಆ ಕತೆಗಳು ಯಶಸ್ವಿಯಾದರೆ ಅವುಗಳಲ್ಲಿ ಹಿಂದೆ ಅಂಥ ವಸ್ತುಗಳನ್ನು ಕುರಿತು ಬರೆದ ಕತೆಗಳಲ್ಲಿ ಕಾಣಿಸದಿದ್ದ ಕಾಣ್ಕೆ ಇರುತ್ತದೆ. ಅವನು ನಿಜಕ್ಕೂ ಪ್ರತಿಭಾವಂತನಾದ ಕತೆಗಾರನಾಗಿದ್ದರೆ ತನ್ನ ಕತೆಗಳಲ್ಲಿ ಕಥಾಪ್ರಕಾರದ ಪರಿಮಿತಿಗಳನ್ನು ಕೂಡ ದಾಟಿ ಒಬ್ಬ ಮಾರ್ಗಪ್ರವರ್ತಕ ಕತೆಗಾರನೆನಿಸಿಕೊಳ್ಳುತ್ತಾನೆ. ಈಗ ನಮ್ಮಲ್ಲಿ ಬಹುರಾಷ್ಟ್ರಿಯ ಕಂಪೆನಿಗಳ ರಾಜಕೀಯದ ಬಗ್ಗೆ, ಅಪಾರ್ಟ್ಮೆಂಟ್ ಜೀವನದ ಬಗ್ಗೆ, ವಿದೇಶದಲ್ಲಿರುವ ಭಾರತೀಯರ ಜೀವನದ ಬಗ್ಗೆ, ಮಾಲ್ ಸಂಸ್ಕೃತಿಯ ಬಗ್ಗೆ ಕತೆ ಬರೆದರೆ ಅದು ಹೊಸ ಕತೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಒಂದು ಕತೆಯ ವಸ್ತು ಹೊಸದಾಗಿರಬಹುದು; ಆ ವಸ್ತುವಿಗೆ ಸಂಬಂಧಪಟ್ಟ ವಿವರಗಳು ಹೊಸವಾಗಿರಬಹುದು. ಒಟ್ಟಿನಲ್ಲಿ ಅದು ಕತೆಯಾಗಿದೆಯೆ ಇಲ್ಲವೆ, ಒಂದು ವೇಳೆ ಕತೆಯಾಗಿದ್ದರೆ ಅದು ಕತೆಯ ಪ್ರಕಾರವನ್ನು ಹಿಗ್ಗಿಸುವಷ್ಟು ತನ್ನ ಸ್ವರೂಪದಲ್ಲೇ ಹೊಸತನ್ನು ಸಾಧಿಸಿದೆಯೆ ಎನ್ನುವುದು ಮುಖ್ಯ.

10. ನನ್ನ ಕತೆಗಳು: ರಸ್ತೆಯಲ್ಲೋ ಜನಜಂಗುಳಿಯಲ್ಲೋ ಆಫೀಸಿನಲ್ಲೋ ಕಂಡ ಒಂದು ದೃಶ್ಯ, ಪ್ರಕೃತಿಯ ಒಂದು ವಿಶಿಷ್ಟ ಚಿತ್ರ, ಸಿನಿಮಾದಲ್ಲಿನ ಒಂದು ಚಿತ್ರಿಕೆ ನನ್ನ ಕತೆಗೆ ಚಿಮ್ಮುಹಲಗೆಯಾಗುವುದುಂಟು. ಆದರೆ ಕತೆ ಹೇಗೆ ಮುಂದುವರಿದು ಕೊನೆಗೊಳ್ಳುವುದೆಂದು ಒಮ್ಮೆ ಕೂಡ ನನಗೆ ಮೊದಲೇ ಹೊಳೆದದ್ದಿಲ್ಲ. ನನ್ನ ದೃಷ್ಟಿಯಲ್ಲಿ ಕತೆಗಾರ ತಾನು ಬರೆಯುತ್ತಿರುವುದು ಹೇಗೆ ಕತೆಯಾಗುತ್ತದೆ ಹೇಗೆ, ಮುಕ್ತಾಯವಾಗುತ್ತದೆ ಎಂದು ಯೋಚಿಸಲೇ ಬಾರದು. ಹಾಗೆ ಯೋಚಿಸುತ್ತಾ ಹೋದರೆ ಕತೆಯನ್ನು ನಿಯಂತ್ರಿಸುವ ಮೂಲಕ ಅದನ್ನು ಕೊಂದುಹಾಕಿದಂತೆ. ಅದೃಷ್ಟವಿದ್ದರೆ ಕತೆಯೇ ತಾನು ಪ್ರಾರಂಭವಾಗುವ ಸೂಚನೆ ಕೊಡುತ್ತದೆ. ಪಾತ್ರಗಳ ಆತ್ಮ ತುಸುವೇ ಕಾಣಿಸಿಕೊಳ್ಳತೊಡಗುತ್ತದೆ; ಅವುಗಳ ಮುಖ ಕೂಡ. ಅವುಗಳನ್ನು ಎಲ್ಲಿಡಬೇಕು, ಯಾವ ಸಂದರ್ಭದಲ್ಲಿ ಎಂದು ಯೋಚಿಸುತ್ತೇನೆ. ಆಮೇಲೆ ಒಂದು ಭಾವವೋ ವಿಚಾರವೋ ಹೊಳೆಯುತ್ತದೆ. ಕೆಲವೊಮ್ಮೆ ಅದು ಮರೆತೂ ಹೋಗುತ್ತದೆ. ಮರೆತದ್ದೂ ಒಮ್ಮೊಮ್ಮೆ ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ಕಡೆಗೂ ಅದು ಹೇಗೆ ಕತೆಯಾಗುತ್ತದೆ? ಹೇಳುವುದು ಸಾಧ್ಯವಿಲ್ಲ. ನನ್ನ ಕೆಲವು ಕತೆಗಳು ಒಂದೆರಡು ವಾರಗಳಲ್ಲೇ ಮುಗಿದಿದ್ದುಂಟು; ಒಂದೆರಡು ಕತೆಗಳು ವರ್ಷಗಳನ್ನೇ ತೆಗೆದುಕೊಂಡಿವೆ. ಜೆನ್ ಬಿಲ್ಲುಗಾರ ಬಾಣವನ್ನು ಬಿಡುವುದಿಲ್ಲ; ತನ್ನ ಗಮನ ಕೇಂದ್ರೀಕರಿಸುತ್ತಾನೆ, ಆತಂಕದಿಂದ ಉಸಿರಾಡುತ್ತಾನೆ. ಕಡೆಗೆ ಬಾಣ ತನಗೆ ತಾನೇ ಬಿಡುಗಡೆಗೊಂಡು ಗುರಿ ಮುಟ್ಟುತ್ತದೆ. ನನ್ನ ಮಟ್ಟಿಗೆ ಕತೆಗಾರ ಕೂಡ ಜೆನ್ ಬಿಲ್ಲುಗಾರನಂತೆಯೇ.

ನನಗೆ ವಾಸ್ತವದ ಬಗೆಗೇ ತಕರಾರು. ನಾವಿಲ್ಲಿ ಭೌತಿಕವಾಗಿದ್ದರೂ ಮಾನಸಿಕವಾಗಿ ಇನ್ನೆಲ್ಲೋ ಇರುತ್ತೇವೆ; ಬದುಕಿನ ಘೋರ ವಾಸ್ತವದಲ್ಲೂ ಅದಕ್ಕೆ ವಿರುದ್ಧವಾದ ಕನಸು ಕಾಣುತ್ತಿರುತ್ತೇವೆ. ಇವುಗಳಲ್ಲಿ ಯಾವುದು ವಾಸ್ತವ? ವಾಸ್ತವಿಕತೆಯೆನ್ನುವುದು ವ್ಯಕ್ತಿವಸ್ತುವಿಶೇಷವನ್ನು ಅದು ಇರುವ ಹಾಗೆಯೇ ತೋರಿಸುವುದಲ್ಲ ಅಥವಾ ಜೀವನವನ್ನು ಅದು ಇರುವ ಹಾಗೆಯೇ ಚಿತ್ರಿಸುವುದಲ್ಲ. ಅದು ಕತೆಗಾರ ತನ್ನ ಕಲಾನೈಪುಣ್ಯದಿಂದ ನೈಜಜೀವನವನ್ನು ವಿಭಿನ್ನ ಜೀವನವನ್ನಾಗಿ ಪರಿವರ್ತಿಸಿ ಪುಟಗಳ ಮೇಲೆ ಪಡಿಮೂಡಿಸುವ ಕಲೆ. ಹಾಗೆ ಪಡಿಮೂಡಿಸಿದಾಗ ಅದು ವಾಸ್ತವವಾಗಿರುವುದರ ಜೊತೆಜೊತೆಗೇ ಅತಿವಾಸ್ತವಿಕತೆಯೋ ಮಾಂತ್ರಿಕವಾಸ್ತವಿಕತೆಯೋ ಫ್ಯಾಂಟಸಿಯೋ ಭ್ರಾಮಕವೋ, ಏನು ಬೇಕಾದರೂ ಆಗಬಹುದು. ಆದ್ದರಿಂದಲೇ ನನಗೆ ವಾಸ್ತವಿಕ ಕತೆ ಎಷ್ಟು ಮುಖ್ಯವೋ ವಾಸ್ತವಿಕತೆಗೆ ವಿರುದ್ಧವಾದ ದೆವ್ವದ ಕತೆಯೂ ಅಪರಾಧದ ಅಥವಾ ಕೊಲೆಯ ಕಾರಣವನ್ನು ಹುಡುಕುವ ಪತ್ತೆದಾರಿ ಕತೆಯೂ ಜಂಘಾಬಲ ಉಡುಗಿಸುವಂಥ ಥ್ರಿಲ್ಲರ್ ಕತೆಯೂ ಅಷ್ಟೇ ಮುಖ್ಯ. ಇವುಗಳಲ್ಲಿ ಒಂದರಲ್ಲಿರುವ ಜೀವನದರ್ಶನ ಇನ್ನೊಂದರಲ್ಲಿರುವುದಿಲ್ಲ.

ಕತೆಯ ನಿರೂಪಣೆಯಲ್ಲಿ ಉತ್ತಮ ಪುರುಷ ಮತ್ತು ಪ್ರಥಮ ಪುರುಷ, ಹೀಗೆ ಎರಡೇ ವಿಧಾನಗಳಿವೆಯಷ್ಟೆ. ಆದರೆ ನೀನು/ನೀವು ಎನ್ನುವ ದ್ವಿತೀಯ ಪುರುಷ ನಿರೂಪಣೆ ಯಾಕಿರಬಾರದು? ಅದೂ ದಶಕಗಳಿಗೂ ಹಿಂದಿನ ಕಾಲದ ಒಂದು ಘಟನೆಗೆ ಸಂಬಂಧಪಟ್ಟ ಒಬ್ಬ ವ್ಯಕ್ತಿಯೇ ಕತೆಯ ಕೇಂದ್ರದಲ್ಲಿದ್ದು ತನ್ನನ್ನು ತಾನೇ ನೆನಪುಮಾಡಿಕೊಳ್ಳುವಂತಿದ್ದರೆ? ಅಂಥ ವ್ಯಕ್ತಿ ಅನಾವರಣಗೊಳ್ಳುವುದು ತನ್ನ ಅಖಂಡ ನೆನಪುಗಳಲ್ಲೇ ಅಲ್ಲವೆ? ಬಹುಪಾಲು ಕತೆಗಳಲ್ಲಿ ನಾನು ಎಂಬ ಆತ್ಮನಿವೇದಕ ನಿರೂಪಕನೋ ಎಲ್ಲದಕ್ಕೂ ಸಾಕ್ಷಿಯಾದ ನಿರೂಪಕನೋ ಇರುತ್ತಾನಷ್ಟೆ. ಆದರೆ ಕೆಲವು ಕತೆಗಳಲ್ಲಿ ಒಂದಿಡೀ ಊರು ಅಥವಾ ನಗರ ‘ನಾವು’ ಆಗಿ, ‘ಅವರು’ ಆಗಿ ಮಾತಾಡುವ ಪಾತ್ರಗಳಿರುತ್ತವೆ. ಮತ್ತೆ ಕೆಲವು ಕತೆಗಳಿಗೆ ದಶಕಗಳ ಹಿಂದಿನ ಒಂದು ಅಚ್ಚಳಿಯದ ಸನ್ನಿವೇಶವನ್ನೋ ಆ ಸನ್ನಿವೇಶದಿಂದಾದ ಅನುಭವವನ್ನೋ ವಿವರಿಸಬೇಕಾದಾಗ ಪ್ರಜ್ಞಾಪ್ರವಾಹ ತಂತ್ರವೋ ಎಲ್ಲವನ್ನೂ ಒಂದೇ ಉಸಿರಿಗೆ ಹೇಳಬೇಕಾದ ತುರ್ತಿನಿಂದ ಒಡಮೂಡುವ, ಪುಟಗಟ್ಟಲೆಯ ಬಹುದೀರ್ಘ ವಾಕ್ಯವೋ ಅಗತ್ಯವಾಗುವುದುಂಟು.

ಎಲ್ಲ ಕಲೆಗಳಿಗಿರುವಂತೆ ಸಣ್ಣಕತೆಗೂ ಆಕೃತಿ (ಫಾರ್ಮ್) ಮತ್ತು ಆಶಯ ಅಥವಾ ವಿಷಯ (ಕಂಟೆಂಟ್) ಒಂದಾಗಬೇಕೆಂಬ ಹಂಬಲವುಂಟು. ಸಂಗೀತದಲ್ಲಿ ಇದೊಂದು ಸಮಸ್ಯೆಯೇ ಅಲ್ಲ. ಯಾಕೆಂದರೆ ಅದರಲ್ಲಿ ಇವೆರಡೂ ಬೇರ್ಪಡಿಸಲಾಗದಂತೆ ಒಂದರೊಳಗೊಂದು ಸೇರಿಹೋಗಿರುತ್ತವೆ. ಆದರೆ ಸಣ್ಣಕತೆಯನ್ನೂ ಒಳಗೊಂಡು ಇತರ ಎಲ್ಲ ಕಲೆಗಳಲ್ಲಿ ಇವೆರಡೂ ಎಷ್ಟುಮಟ್ಟಿಗೆ ಪರಸ್ಪರ ಹತ್ತಿರವಾಗುತ್ತವೆ ಎನ್ನುವುದೇ ಅವುಗಳ ಯಶಸ್ಸಿಗೆ ಕಾರಣವಾಗುತ್ತದೆ.

ಬಹಳಷ್ಟು ಜನರು ಕತೆಯಲ್ಲಿ ಅಶಯವೇ ಮುಖ್ಯ, ಅದೇ ಬಹುಕಾಲ ಬಾಳುತ್ತದೆ ಎಂದು ನಂಬುವವರು. ಆದರೆ ಆಶಯ ಬಹುಕಾಲ ಬಾಳುವುದು ಆಕೃತಿಯಿಂದ. ಪ್ರತಿಯೊಂದು ಕಲಾಕೃತಿಯೂ ಆಕೃತಿಯನ್ನು ಕುರಿತ ಒಂದು ಧ್ಯಾನ; ಆಕೃತಿಯನ್ನು ಕುರಿತ ಪ್ರತಿಯೊಂದು ಧ್ಯಾನವೂ ಜೀವನರಹಸ್ಯವನ್ನು ಕುರಿತ ಒಂದು ಧ್ಯಾನ. ಜೀವಂತವಾಗಿರುವ ಪ್ರತಿಯೊಂದಕ್ಕೂ ಅದರದೇ ಆದ ಆಕೃತಿಯಿರುತ್ತದೆ.

ಕಳೆದ ಇಪ್ಪತ್ತು ಇಪ್ಪತ್ತೆರಡು ವರ್ಷಗಳಿಂದ ಬರೆಯುತ್ತಿದ್ದ ಈ ಕತೆಗಳಿಗೆ ಕಡೆಗೂ ಮುಕ್ತಿ ಸಿಕ್ಕುತ್ತಿರುವುದು ನನ್ನ ಸೃಜನಶೀಲತೆಯ ಬಗ್ಗೆ ಅಭಿಮಾನವಿಟ್ಟುಕೊಂಡಿರುವ ಕೆಲವೇ ಕೆಲವು ಮಿತ್ರರಿಂದ. ಅವರಲ್ಲಿ ಮೊಟ್ಟಮೊದಲು ನಾನು ನೆನೆಯಬೇಕಾದ್ದು ಕತೆಗಾರ ರಘುನಾಥ ಚ.ಹ. ಇಲ್ಲಿನ ಬಹುಪಾಲು ಕತೆಗಳ ಹಿಂದೆ ಅವರ ಪ್ರೀತಿಯ ಒತ್ತಾಯವಿದೆ, ಉತ್ತೇಜನವಿದೆ. ಅವರ ಜೊತೆಗೇ ಪದ್ಮನಾಭ ಭಟ್ ಶೇವ್ಕಾರ ಅವರನ್ನೂ ನಾನು ಸ್ಮರಿಸಬೇಕು – ಇಲ್ಲಿನ ಅರ್ಧಕ್ಕೂ ಹೆಚ್ಚು ಕತೆಗಳನ್ನು, ಅವು ರೂಪುಗೊಳ್ಳುತ್ತಿರುವ ಹಂತದಲ್ಲೇ ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ. ಆತ್ಮೀಯರಾದ ಬಸವರಾಜ ಕಲ್ಗುಡಿ, ಎಂ.ಎಸ್. ಶ್ರೀರಾಂ, ವಿವೇಕ ಶಾನಭಾಗ, ಜೋಗಿ, ಎಂ. ಎಸ್. ಆಶಾದೇವಿ, ಜಯಂತ ಕಾಯ್ಕಿಣಿ, ರಾಜೇಂದ್ರ ಚೆನ್ನಿ, ಪ್ರಕಾಶ್ ನಾಯಕ್, ಜ.ನಾ. ತೇಜಶ್ರೀ ಮತ್ತು ಅಬ್ದುಲ್ ರಶೀದ್ ಈ ಸಂಕಲನವನ್ನು ಹಸ್ತಪ್ರತಿಯಲ್ಲೇ ಓದಿ ಪ್ರತಿಸ್ಪಂದಿಸಿದ್ದಾರೆ. ಕನ್ನಡದ ಮುಖ್ಯ ಪತ್ರಿಕೆಗಳು ಇಲ್ಲಿನ ಕೆಲವು ಕತೆಗಳನ್ನು ಪ್ರಕಟಿಸಿವೆ. ಗೆಳೆಯ ಅಪಾರ ಈ ಕೃತಿಯ ಪುಟವಿನ್ಯಾಸ ಮಾಡಿಕೊಟ್ಟಿದ್ದಾರೆ. ಕಲಾವಿದ ಕಿರಣ್ ಮಾಡಾಳು ಸೊಗಸಾದ ರಕ್ಷಾಪುಟವನ್ನು ರಚಿಸಿ ಕೊಟ್ಟಿದ್ದಾರೆ. ನನ್ನ ಹಲವು ಪುಸ್ತಕಗಳನ್ನು ಪ್ರಕಟಿಸಿರುವ ಪ್ರಿಸಂ ಬುಕ್ಸ್‌ನ ಪ್ರಾಣೇಶ ಸಿರಿವರ ಈ ಸಂಕಲನವನ್ನೂ ತುಂಬ ಆಸ್ಥೆಯಿಂದ ಹೊರತರುತ್ತಿದ್ದಾರೆ. ಇವರೆಲ್ಲರ ಪ್ರೀತಿಯ ಋಣಭಾರ ನನ್ನ ಮೇಲಿದೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ