ಅವರು ತಂದಿದ್ದ ಮೂಟೆಗಳ ಪೈಕಿ ಒಂದರಲ್ಲಿ ತೆಂಗಿನ ಕಾಯಿ ಉಳಿದವುಗಳಲ್ಲಿ ಧವಸ ಧಾನ್ಯಗಳನ್ನು ತುಂಬಿರುವುದು ಮೇಲು ನೋಟಕ್ಕೇ ಗೊತ್ತಾಗುತ್ತಿತ್ತು. ಬಸ್ಸಿನಲ್ಲಿ ಅಷ್ಟು ಜನವಿರದ ಕಾರಣ ಆ ವ್ಯಕ್ತಿ ಅಷ್ಟೂ ಮೂಟೆಗಳನ್ನು ಹತ್ತುವ ಮತ್ತು ಇಳಿಯುವ ಜನರಿಗೆ ತೊಂದರೆಯಾಗದಂತೆ ಅಲ್ಲಲ್ಲೇ ಸೀಟುಗಳ ಅಡಿಗೆ ತುರುಕಿ ನಂತರ ಕೈಯ್ಯಲ್ಲೊಂದು ಬ್ಯಾಗನ್ನು ಹಿಡಿದು ನನ್ನ ಪಕ್ಕದಲ್ಲಿ ಖಾಲಿಯಿದ್ದ ಸೀಟಿನಲ್ಲಿ ಬಂದು ಕುಳಿತರು. ಹಂಗೇ ಆ ಬ್ಯಾಗಿನತ್ತ ಕಣ್ಣು ಹಾಕಿದ ನನಗೆ ಅದರೊಳಗಿಂದ ಮರದ ಹಿಡಿಯಿದ್ದ ಒಂದೆರಡು ಸಣ್ಣ ಕುಡುಗೋಲಿನಂಥವು, ಕಬ್ಬಿಣವನ್ನು ಕತ್ತರಿಸಲು ಉಪಯೋಗಿಸುವ ಒಂದೆರಡು ಬ್ಲೇಡುಗಳು ಕಂಡವು. ಆ ಹತಾರಗಳನ್ನು ನೋಡುತ್ತಲೇ ನನಗೆ ಅವರು ಮಾಡುತ್ತಿರಬಹುದಾದ ಕಸುಬೂ ಗೊತ್ತಾಗಿ ಹೋಗಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ಮೂರನೆಯ ಕಂತು
ನಾನು ಚಿಕ್ಕವನಾಗಿದ್ದಾಗ ನಮ್ಮ ಸುತ್ತಲ ಹಳ್ಳಿಗಳಲ್ಲಿ ತುಂಬಾ ಹೆಸರು ಮಾಡಿದ್ದ ಡಾಕ್ಟರ್ ಹೆಸರನ್ನು ಸುಮಾರು ನಲವತ್ತು ವರ್ಷಗಳ ನಂತರ ಕೊಂಬು ಹೆರೆಯುವ ರಾಮಣ್ಣನ ಬಾಯಲ್ಲಿ ಕೇಳಿ ನನಗೆ ಅಚ್ಚರಿಯಾಯ್ತು. ಅಚ್ಚರಿ ಯಾಕೆ ಅಂದರೆ ಈ ರಾಮಣ್ಣ ನಮ್ಮ ತಾಲ್ಲೂಕಿನ ಅಥವಾ ಪಕ್ಕದ ತಾಲ್ಲೂಕಿನ ಯಾವುದಾದರೂ ಹಳ್ಳಿಯವರ ಅಂದರೆ ಅಲ್ಲ. ಅವರ ಊರು ಬೇಲೂರು ಹತ್ತಿರದ ಒಂದು ಹಳ್ಳಿಯಾಗಿತ್ತು. ಆದರೂ ಅದೆಂಗೆ ಗೊತ್ತು ಅಂತ ಅವರನ್ನು ವಿಚಾರಿಸಿದಾಗ ಚಿನಾಳ್ಳಿಯ ಸುತ್ತಲ ಹಳ್ಳಿಗಳಲ್ಲಿ ತನ್ನ ಕೊಂಬು ಹೆರೆಯುವ ಕಾಯಕ ಮಾಡುವಾಗ ಅಲ್ಲಿನ ಜನರ ಬಾಯಲ್ಲಿ ಆಗಾಗ ಈ ಡಾಕ್ಟರ್ ಹೆಸರನ್ನು ಕೇಳಿದ್ದೆ ಅಂದರು. ಜತೆಗೆ ಈಗಿನ ಕೆಲ ಯದ್ವಾತದ್ವಾ ಹಣ ಪೀಕುವ ಡಾಕ್ಟರುಗಳಿಗೆ ಹೋಲಿಸಿ ಅವರನ್ನು ಈಗಲೂ ಪುಣ್ಯಾತ್ಮ ಅಂತ ಮಾತನಾಡಿಕೊಳ್ಳುತ್ತಿರುತ್ತಾರೆ. ಹಂಗಾಗಿ ಅದು ಹೆಂಗೋ ಮನಸಲ್ಲಿ ಉಳಿದುಬಿಟ್ಟಿದೆ ಅಂತ ತಮ್ಮ ಕೈಯ್ಯಲ್ಲಿದ್ದ ಒಂದೆರಡು ಮಾತ್ರೆಗಳನ್ನು ತೋರಿಸುತ್ತಾ `ನೋಡಪ್ಪಾ ಇಲ್ಲಿ ಒಂದು ಇಂಜೆಕ್ಷನ್ ಕೊಟ್ಟು ಇವು ಎಂಥವೋ ಮಾತ್ರೆಗಳನ್ನ ಕೈಗಿಟ್ಟು ಇಪ್ಪತೈದು ರೂಪಾಯಿ ಕಿತ್ಕಂಡ್ರು ಅದೂ ಗೌರ್ನಮೆಂಟ್ ಆಸ್ಪತ್ರೇಲಿ’ ಅಂತ ನಿಡುಸುಯ್ದರು. ಅಷ್ಟೊತ್ತಿಗಾಗಲೇ ನಮ್ಮಿಬ್ಬರ ನಡುವೆ ಒಂದಷ್ಟು ಮಾತುಕತೆಗಳಾಗಿದ್ದವು. `ನೀನು ಚಿನಾಳ್ಳಿ ಪಕ್ದ ಊರೋನು ಅಂದ್ಯಲ್ಲ, ಹಂಗಾಗಿ ಅವ್ರು ಆ ಡಾಕ್ಟ್ರು ನೆಪ್ಪಿಗೆ ಬಂದ್ರು ನೋಡಪ್ಪಾ’ ಅಂದರು ಮುಂದುವರೆದು.
ರಾಮಣ್ಣನವರ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯಾಗಲಿ ತೋರಿಕೆಯಾಗಲಿ ಇರಲಿಲ್ಲ. ಈಗಲೂ ಕೂಡಾ ನನ್ನೂರಿನ ಹಳಬರ ಬಾಯಲ್ಲಿ ಈ ಡಾಕ್ಟರ ಹೆಸರು ಆಗಾಗ ಬಂದು ಹೋಗ್ತಾ ಇರುತ್ತೆ. ಅವರ ಹೆಸರು ಶರ್ಮಾ ಅಂತ. ಶರ್ಮಾ ಡಾಕ್ಟರ್ ನೆನಪಿಗೆ ಬಂದರೆ ಅವರು ಹಾಕ್ಕೆಂಡು ಬರುತ್ತಿದ್ದ ಯೆಝ್ಡಿ ಬೈಕ್ನ ಸದ್ದೂ ಕಿವಿಗಳಲ್ಲಿ ಸದ್ದು ಮಾಡುತ್ತೆ. ಯಾಕೆಂದರೆ ಅವರು ಬರುತ್ತಿದ್ದದ್ದೇ ಯೆಝ್ಡಿ ಬೈಕಿನಲ್ಲಿ. ಕುಳ್ಳಗಿನ ದಡೂತಿ ದೇಹ. ದುಂಡು ಮುಖ. ದೊಗಳೆ ಪ್ಯಾಂಟಿಗೆ ದೊಗಳೆ ಅಂಗಿಯ ಇನ್ಶರ್ಟ್. ತಲೆಯ ಮೇಲೆ ಕೌಬಾಯ್ಗಳು ಅಥವಾ ಹಳೆಯ ಕಾಲದ ಹಿಂದಿ ಸಿನೆಮಾ ನಟರುಗಳು ಹಾಕಿಕೊಳ್ಳುತ್ತಿದ್ದಂಥ ದುಂಡನೆಯ ಹ್ಯಾಟು ಸದಾ ಇರುತ್ತಿತ್ತು. ಬೈಕಿನಿಂದ ಇಳಿದರೆಂದರೆ ಇಂಜೆಕ್ಷನ್, ಮಾತ್ರೆಗಳು ಮುಂತಾದವುಗಳಿಂದ ಸದಾ ಊದಿಕೊಂಡಿರುತ್ತಿದ್ದ ಚರ್ಮದ ಕೈ ಬ್ಯಾಗು ಕೈಯ್ಯಲ್ಲಿರುತ್ತಿತ್ತು.
ಸರ್ಕಾರಿ ಆಸ್ಪತ್ರೆಗಳು ತುಂಬಾ ವಿರಳವಾಗಿದ್ದ ಕಾಲ ಅದು. ಆಗ ಶೆಟ್ಟೀಕೆರೆಯಲ್ಲಿ ಸರ್ಕಾರಿ ಆಸ್ಪತ್ರೆ ಇತ್ತೋ ಇಲ್ಲವೋ ಗೊತ್ತಿಲ್ಲ. ಹಂಗಾಗಿ ಜನ ಕೆಲ ನಾಟಿ ವೈದ್ಯರನ್ನು ಬಿಟ್ಟರೆ ಹೆಚ್ಚಾಗಿ ಈ ಶರ್ಮಾ ಡಾಕ್ಟರನ್ನೇ ನಂಬಿದ್ದರು. ಎಂಥದೇ ಸಂದರ್ಭದಲ್ಲೂ ಯಾರು ಎಷ್ಟೇ ಹೊತ್ತಿನಲ್ಲೂ ಕರೆದರೂ ತಮ್ಮ ಬೈಕ್ ಹಾಕಿಕಂಡು ಬಂದುಬಿಡುತ್ತಿದ್ದರು. ಈ ಸಂಚಾರಿ ಡಾಕ್ಟರ್ ಅಷ್ಟೇ ಸಾವಧಾನದಿಂದ ರೋಗಿಗಳನ್ನು ವಿಚಾರಿಸಿಕಂಡು ಇಷ್ಟೇ ಅಂತ ಕಂಟಿ ಮಾಡದೆ ಕೊಟ್ಟಷ್ಟು ದುಡ್ಡನ್ನು ಇಸುಕೊಳ್ಳುತ್ತಿದ್ದರು. ಈ ಕಾರಣಕ್ಕೆ ಶರ್ಮಾ ಡಾಕ್ಟರ್ ಅಂದರೆ ಹಳ್ಳಿಗಳಲ್ಲಿ ತುಂಬಾ ಅಕ್ಕರೆಯಿತ್ತು. ಆಗ ಸೈಕಲ್ಲುಗಳೇ ಅಪರೂಪದ ಸಂಗತಿಗಳಾಗಿದ್ದವು. ಹಂಗಾಗಿ ಶರ್ಮಾ ಡಾಕ್ಟರ್ ಬರುತ್ತಿದ್ದ ಬೈಕ್ ತುಂಬಾ ವಿಶೇಷ ಆಕರ್ಷಣೆಯ ವಸ್ತುವಾಗಿತ್ತು. ಅದರ ಸದ್ದು ಕಿವಿಗೆ ಬೀಳುತ್ತಲೇ ನಾವು ಮಕ್ಕಳೆಲ್ಲಾ ಅತ್ತ ದೌಡಾಯಿಸುತ್ತಿದ್ದೆವು. ಆ ದಡಿ ಬೈಕಿನ ಒಂದೊಂದು ಅಂಗವನ್ನೂ ತೃಪ್ತಿಯಾಗುವವರೆಗೂ ಕಣ್ತುಂಬಿಕೊಳ್ಳುತ್ತಿದ್ದೆವು. ಈ ಗುಂಪಿನಲ್ಲಿ ಹಲವರು ದೊಡ್ಡವರೂ ಇರುತ್ತಿದ್ದರು. ಅದು ಕಿಕ್ ಹೊಡೆಯುತ್ತಲೇ ಸ್ಟಾರ್ಟ್ ಆಗುವ ಬಗೆ ನಮಗೆಲ್ಲಾ ಬಲು ಅಚ್ಚರಿಯ ಸಂಗತಿಯಾಗಿತ್ತು. ಒಂದೆರಡು ಕಿಕ್ಕಿಗೆ ಸ್ಟಾರ್ಟ್ ಆಗದೆ ಮೂರ್ನಾಲ್ಕು ಕಿಕ್ಕಿಗೆ ಸ್ಟಾರ್ಟ್ ಆಗುತ್ತಲೇ ಗುಡುಗುಡು ಸದ್ದಾಗುತ್ತಾ ಅದರ ಸೈಲೆನ್ಸರ್ ಒಳಗಿಂದ ಬುದುಬುದುನೆ ನುಗ್ಗಿ ಬರುತ್ತಿದ್ದ ಹೊಗೆ ನಮಗೆ ತುಂಬಾ ವಿಸ್ಮಯದ ಸಂಗತಿಯಾಗಿ ಕಾಣುತ್ತಿತ್ತು. ಮನೆಗಳಲ್ಲಿ ಒಲೆಗಳಿಂದ ಹೊಗೆ ಬರುತ್ತಿದ್ದದ್ದು ಗೊತ್ತಿತ್ತು. ಅಂಥಾದ್ದರಲ್ಲಿ ಈ ಕೊಳವೆಯೊಳಗೆ ಒಂದು ಕೆಂಡದ ತುಂಡೂ ಕಾಣುತ್ತಿಲ್ಲ, ಸಣ್ಣಗೆ ಒಂಚೂರೂ ಹೊಗೆಯಾಡುತ್ತಿಲ್ಲ ಆದರೂ ಅದೆಂಗೆ ಬಗ್ಗನೆ ಹೊಗೆ ಮಾತ್ರ ಬರುತ್ತೆ ಅನ್ನುವುದು ನಮಗೆ ಬಗೆ ಹರಿಯದ ಸಂಗತಿಯಾಗಿತ್ತು. ಈ ಬಗ್ಗೆ ನನ್ನ ವಾರಿಗೆಯ ಗೆಳೆಯ ಕೃಷ್ಣ ಅನ್ನುವವನು ಅದೊಂದು ದಿನ ದಿನ ಆ ಸೈಲೆನ್ಸರನ್ನೇ ದಿಟ್ಟಿಸುತ್ತಾ `ನಂಗೀಗ ಗೊತ್ತಾತುತು. ಅದೇನೂಂದ್ರೆ ನಾವು ಒಲೆ ಇನ್ನೇನು ತುಂಬೋಗಾಕೆ ಬಂತು ಅಂದಾಗ ಏನ್ಮಾಡ್ತೀವಿ ಹೇಳ್ರಿ? ಹೊಗೆ ಕೊಳ್ವಿಂದ ಇಲ್ಲಾ ಬಾಯಿಂದ ಗಾಳಿ ಊದಿ ಒಲೆ ಹತ್ತುಸ್ತೀವಿ ಅಲ್ವಾ? ಹಂಗೆ ಈ ಕೊಳ್ವೆ ಐತಲ್ಲಾ ಅದ್ರೊಳ್ಗೆ ಒಂದು ಸಣ್ಣ ಕೆಂಡದುಂಡೇನ ಇಕ್ಕರ್ತಾರೆ. ಅವ್ರು ಸ್ಟಾರ್ಟ್ ಮಾಡಾಕೆ ಅದುನ್ನ ತುಳೀತಿದ್ದಂಗೇಯಾ ಅದ್ರೊಳ್ಗಾಸಿ ಗಾಳಿ ಬರುತ್ತೆ. ಆಗ ಆ ಕೆಂಡದುಂಡೆ ಹತ್ಕಂಡು ಉರ್ಯಾಕೆ ಶುರುವಾಗುತ್ತೆ. ಆಮಕಾವ ಹೊಗೆ ಬರುತ್ತೆ’ ಅಂತ ಅಗಾಧವಾಗಿ ಆಲೋಚಿಸುತ್ತಿರುವವನಂತೆ ಒಂದು ಕಣ್ಣನ್ನು ತೇಲುಗಣ್ಣು ಮಾಡಿಕಂಡು ತನ್ನ ದಿವ್ಯ ಜ್ಞಾನವನ್ನು ಪ್ರದರ್ಶಿಸಿದ. ಅವನ ಮಾತುಗಳು ಕೇಳಿದ ನಾವಿತರರು ಇದ್ದರೂ ಇರಬಹುದು ಅಂತ ತಲೆಯಾಡಿಸಿದೆವು. ಆದರೆ ಅದನ್ನು ಖಾತ್ರಿ ಮಾಡಿಕೊಳ್ಳಬೇಕಿತ್ತು. ಹಂಗಾಗಿ ಎಂದಾದರೊಂದು ದಿನ ಅದನ್ನ ಪರೀಕ್ಷೆ ಮಾಡಲೇಬೇಕು ಅನ್ನುವ ತೀರ್ಮಾನಕ್ಕೆ ಬಂದಿದ್ದೆವು. ಇಂಥದ್ದರ ಮೇಲೆ ಬರುತ್ತಿದ್ದ ಶರ್ಮಾ ಡಾಕ್ಟರ್ ನಮಗೆ ವಿಶೇಷ ವ್ಯಕ್ತಿಯಾಗಿ ಕಾಣುತ್ತಿದ್ದರು. ಅಂತೆಯೇ ಅವರು ಇಂಜೆಕ್ಷನ್ ಕೊಡಲು ಬಳಸುತ್ತಿದ್ದ ಉದ್ದನೆಯ ಸೂಜಿಯನ್ನು ನೋಡುತ್ತಲೇ ತಲೆ ಸುತ್ತು ಬರುತ್ತಿತ್ತು. ಈಗಿನಂತೆ ಆಗಿನ ಸೂಜಿಗಳು ನಾಜೂಕಾಗಿರಲಿಲ್ಲ. ಒಮ್ಮೆ ಚುಚ್ಚಿಸಿಕೊಂಡರೆ ಒಂದು ವಾರವಾದರೂ ಆ ಚುಚ್ಚಿಸಿಕೊಂಡ ಜಾಗದಲ್ಲಿ ನೋವಿರುತ್ತಿತ್ತು. ಈ ಕಾರಣಕ್ಕೆ ಶರ್ಮಾ ಡಾಕ್ಟರನ್ನು ಕಂಡರೆ ಮಕ್ಕಳಾದ ನಮಗೆ ಅಗಾಧ ಭಯವಾಗುತ್ತಿತ್ತು. ಯಾಕೆಂದರೆ ನಾವೆಲ್ಲಾ ಅವರ ಸೂಜಿಯ ಸವಿಯನ್ನು ಉಂಡಿದ್ದವರೇ ಆಗಿದ್ದೆವು.

ಅವತ್ತೊಂದು ದಿನ ಮಟಮಟ ಮಧ್ಯಾಹ್ನಕ್ಕೇ ರೋಗಿಯೊಬ್ಬರನ್ನು ನೋಡಲೆಂದು ಊರಿಗೆ ಬಂದಿದ್ದರು. ಊರ ನಡುವಿನ ಕರಿಯಮ್ಮನ ಗುಡಿಯ ಎದುರಿಗಿದ್ದ ಬುಗುರಿ ಮರದ ನೆರಳಿನಲ್ಲಿ ತಮ್ಮ ಬೈಕನ್ನು ನಿಲ್ಲಿಸಿ ಬ್ಯಾಗನ್ನು ಹಿಡಿದು ಹೆಬ್ಬಾಗಿಲನ್ನು ದಾಟಿ ಯಾವುದೋ ಮನೆಗೆ ಹೋಗಿದ್ದರು. ಅವತ್ತು ರಜೆ ಇತ್ತೋ ಏನೋ ಗೊತ್ತಿಲ್ಲ. ಅವರು ಅತ್ತ ಹೋಗುತ್ತಲೇ ನಮ್ಮ ಐನಾತಿ ಗೆಳೆಯರ ಗುಂಪು ಆ ಬೈಕಿನತ್ತ ಧಾವಿಸಿತ್ತು. ನಮ್ಮ ಗುಂಪಿನಲ್ಲಿ ಕೃಷ್ಣನೂ ಇದ್ದ. ಮಧ್ಯಾಹ್ನವಾಗಿದ್ದರಿಂದ ಊರೊಳಗೆ ದೊಡ್ಡವರು ಅನಿಸಿಕೊಂಡ ನರಪಿಳ್ಳೆಯ ಸುಳಿವೂ ಇರಲಿಲ್ಲ. ಕೃಷ್ಣನೂ ಸೈಲೆನ್ಸರ್ ಬಗೆಗಿನ ವಿಸ್ಮಯವನ್ನು ಕಂಡು ಮುಗಿಯಲೇಬೇಕು ಅನ್ನುವ ಹುಮ್ಮಸ್ಸಿನಲ್ಲಿದ್ದ. ಹೆಂಗಾದರೂ ಆಗಲಿ ಯಾರಿಗೂ ನಮ್ಮ ಈ ಸಂಶೋಧನೆ ಕಾಣದಿರಲೆಂದು ಕೃಷ್ಣನನ್ನು ಬಿಟ್ಟು ನಾವೆಲ್ಲಾ ಬೈಕಿನ ಸುತ್ತ ನಿಂತೆವು. ಆ ಬೈಕು ಅಲ್ಲಿ ನಿಂತು ಅದೇ ತಾನೆ ಸುಧಾರಿಸಿಕೊಳ್ಳುತ್ತಿತ್ತು. ಅದರ ಸೈಲೆನ್ಸರ್ ಕಡೆಯಿಂದ ಬಿಸಿ ಗಾಳಿ ತಟ್ಟುತ್ತಿತ್ತು. ಯಾವಾಗ ನಾವೆಲ್ಲಾ ಕೃಷ್ಣನ ಹುಮ್ಮಸ್ಸಿಗೆ ಕುಮ್ಮಕ್ಕು ಕೊಟ್ಟೆವೋ ಅವನು ಚಕ್ಲುಬಕ್ಲು ಹಾಕ್ಕಂಡು ಸೈಲೆನ್ಸರಿನ ಪಕ್ಕ ಕೂತು ಒಂದರೆ ಚಣ ವಾರೆಗಣ್ಣಿನ ದಿವ್ಯಾಲೋಚನೆಯಲ್ಲಿ ಅದನ್ನೇ ದಿಟ್ಟಿಸಿದ. ನಂತರ ತನ್ನ ಕೊರಳಿಗೆ ಸುತ್ತಿಕೊಂಡಿದ್ದ ವಲ್ಲಿಯನ್ನು ಬಿಚ್ಚಿ ಕೆಳಕ್ಕಿಟ್ಟ. ಆಮೇಲೆ ಒಮ್ಮೆ ನಮ್ಮತ್ತ ನೋಡಿ ತನ್ನೆರಡೂ ಕೈಗಳಿಂದ ಒಮ್ಮೆಗೇ ಅದನ್ನು ಬಿಗಿಯಾಗಿ ಹಿಡಿದುಕೊಂಡ. ಅವನು ಹಂಗೆ ಹಿಡಿದುಕೊಂಡಿದ್ದೇ ತಡ ಅದೇ ಬಿರುವಿನಲ್ಲಿ `ಅಯ್ಯಯ್ಯಪ್ಪೋ ನನ್ನ ಕೈ ಹೋದ್ವು’ ಅಂತ ಚಂಗನೆ ಮೇಲೆದ್ದು ಕೈಗಳನ್ನು ಗಾಳಿಯಲ್ಲಿ ಆಡಿಸುತ್ತಾ ಬಾಯ್ಬಾಯಿ ಬಡುಕೊಳ್ಳತೊಡಗಿದ. ಆ ಸದ್ದಿಗೆ ಮಧ್ಯಾಹ್ನ ಜೊಂಪು ಹೊಡೆಯುತ್ತಿದ್ದವರು ಸೇರಿದಂತೆ ಒಂದಷ್ಟು ಜನ ಏನೋ ಅನಾಹುತ ಆಗಿದೆ ಎಂಬಂತೆ ರೊಯ್ಯನೇ ಕೂಡಿಕೊಂಡರು. ಅಷ್ಟೊತ್ತಿಗೆ ಕೃಷ್ಣನ ಕೂಗಾಟ ದೊಡ್ಡ ಅಳುವಿಗೆ ತಿರುಗಿತ್ತು. ಅವನ ಅಂಗೈಯ್ಗಳು ಕೆಂಪಂಥ ಕೆಂಪನೆಯ ಬಣ್ಣಕ್ಕೆ ತಿರುಗಿದ್ದವು. ಯಾರೋ ಒಂದು ಚೊಂಬು ನೀರು ತಂದು ಆ ಕೈಗಳ ಮೇಲೆ ಸುರಿದರು. ಮತ್ಯಾರೋ ಅಡಿಕೆ ಸೊಪ್ಪಿನ ಎಲೆಗಳನ್ನು ಬಿಡಿಸಿ ತಂದು ಆ ಎಲೆಗಳ ರಸವನ್ನು ಆ ಕೈಗಳ ಮೇಲೆ ಹಿಂಡಿದರು. ಅಷ್ಟರೊಳಗೆ ಅಂಗೈಗಳಲ್ಲಿ ಬೊಬ್ಬೆಗಳೆದ್ದು ಕೂತಿದ್ದವು. ಕೃಷ್ಣನ ಅಳು ಒಂದು ಮಟ್ಟಿಗೆ ಆಳ್ತಕ್ಕೆ ಬಂದಿತ್ತು. ಆದರೆ ಕಣ್ಣುಗಳಿಂದ ಧಾರಾಕಾರ ಕಣ್ಣೀರು ಸುರಿಯುತ್ತಿತ್ತು. ಆ ಗಾಯ ಮಾಯಲು ತಿಂಗಳುಗಟ್ಟಲೆ ಹಿಡಿಯಿತು. ಅದಕ್ಕಾಗಿ ಶರ್ಮಾ ಡಾಕ್ಟರ ಕೈಯ್ಯಿಂದ ನಾಕೈದು ಇಂಜೆಕ್ಷನ್ಗಳ ನೋವನ್ನೂ ಅವನು ಅನುಭವಿಸಬೇಕಾಗಿ ಬಂದಿತ್ತು. ನಮ್ಮ ಗುಂಪು ಅವರ ಮನೆಯ ಮುಂದಾಸಿ ಹೋಗುವಾಗಲೆಲ್ಲಾ ನಮ್ಮನ್ನು ಕಾಣುತ್ತಲೇ ಅವನ ಅವ್ವ `ಈ ಅಡ್ನಾಡಿಗಳ ಜತ್ಗೆ ಸೇರ್ಬೇಡ ಅಂತ ಎಷ್ಟು ಸಾರ್ತಿ ಬಡ್ಕಂಡ್ರೂ ಕೇಳಲ್ವಲ್ಲ ನೀನು. ಈಗ ಅನ್ಬವ್ಸು, ಈಗ ನೋಡು ನಿನ್ನ ತಿಕಾನೂ ನಾನೇ ತೊಳೀಬೇಕು’ ಅಂತ ಬೈಯ್ಯುವುದು ಕೇಳಿಸುತ್ತಲೇ ನಾವು ಜೋರಾಗಿ ಹೋಗಲು ನಮ್ಮ ಕಾಲುಗಳಿಗೆ ಬುದ್ಧಿ ಹೇಳುತ್ತಿದ್ದೆವು.
ಕೃಷ್ಣನ ಅಂಗೈಗಳ ಗಾಯ ಹುಷಾರಾಗಲು ತಿಂಗಳುಗಳೇ ಹಿಡಿದವು. ಬೊಬ್ಬೆಗಳೆಲ್ಲಾ ಇಂಗಿ ಹೋಗಿ ಆ ಸುಟ್ಟ ಚರ್ಮವೆಲ್ಲಾ ಸುಲಿದು ಹೋಗಿ ಅಲ್ಲಿ ಹೊಸಾ ಚರ್ಮ ಬೆಳೆದಿತ್ತು. ಆ ಕಾರಣಕ್ಕೆ ಹಾಗೂ ಅಷ್ಟೂ ದಿನ ಏನೂ ಕೆಲಸ ಮಾಡದ್ದರಿಂದ ಅವನ ಅಂಗೈಗಳು ಬೆಳ್ಳಗಾಗಿಬಿಟ್ಟಿದ್ದವು. ಅದನ್ನು ನೋಡಿದ ತಪಲನಿಗೆ ಜೀವ ಮಿಳ್ಳೆಂದಿತ್ತು. ದಿನವೂ ಸಗಣಿ ಬಾಚಿ, ಗಂಜಲ ಎತ್ತಿ ಅವನ ಅಂಗೈಗಳು ಅದೇ ಬಣ್ಣಕ್ಕೆ ಬಂದದ್ದರಿಂದ ತನ್ನ ಅಂಗೈಗಳೂ ಹಂಗೇ ಆಗಬೇಕು ಅಂತ ಒಂದಿನ ಕೊಚ್ಚನ ಹತ್ತಿರ ಹೇಳುತ್ತಿದ್ದ. `ಹಂಗಾರೆ ನೀನು ಹೋಗು ಕೈಯ್ಯಿಕ್ಕು ಒಂದಿಸ. ಕೆಲ್ಸಾನೂ ತಪ್ಪುತ್ತೆ ಅಂಗೈಗಳೂ ಬೆಳ್ಳಗಾಗ್ತವೆ’ ಅಂತ ಅರೆ ತಮಾಷೆ ಅರೆ ಕುತೂಹಲದಲ್ಲಿ ಅಂದಿದ್ದ. ಆದರೆ ಅದಾವುದಕ್ಕೂ ಆಸ್ಪದವೀಯದಂತೆ ಶರ್ಮಾ ಡಾಕ್ಟರ್ ಮುಂದಿನ ದಿನಗಳಲ್ಲಿ ತಾವು ಯಾವ ಮನೆಯ ರೋಗಿಯನ್ನು ನೋಡಲು ಬರುತ್ತಿದ್ದರೋ ಆ ಮನೆಯ ಎದುರಿಗೆ ಕಣ್ಣಿಗೆ ಕಾಣುವಂತೆ ತಮ್ಮ ಬೈಕನ್ನು ನಿಲ್ಲಿಸಿಕೊಳ್ಳತೊಡಗಿದ್ದರು. ಒಂದೊಂದು ದಿನ ಯಾರಿಗಾದರೂ ರಾತ್ರಿ ಹೊತ್ತಲ್ಲಿ ಹುಷಾರು ತಪ್ಪಿದರೆ ಅವರನ್ನು ಕರೆತರಲು ಊರಿಂದ ಮೂರ್ನಾಲ್ಕು ಮಂದಿ ನಡೆದೇ ಚಿನಾಳ್ಳಿಗೆ ಹೋಗುತ್ತಿದ್ದರು. ಖಾಯಿಲೆಯ ವಾಸಿ ಹಿಂದೆ ಡಾಕ್ಟರ ಕೈಗುಣವಿದೆ ಅಂತ ತುಂಬಾ ಜನ ನಂಬಿದ್ದರು. ಅಂಥವರನ್ನು ಯಾರಿಗೆ ತೋರಿಸಿದರೂ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಅದಕ್ಕೆ ಶರ್ಮಾ ಡಾಕ್ಟರೇ ಬರಬೇಕಿತ್ತು. ಹಿಂಗೇ ಬರುತ್ತಿದ್ದ ಡಾಕ್ಟರಿಗೆ ಕೆಲವರು ಸಾಲ ಹೇಳುತ್ತಿದ್ದರು. ಕೆಲವರು ಒಟ್ಟಿಗೆ ಕೊಡ್ತೇವೆ ಅಂತ ಸಾಲದ ಲೆಕ್ಕ ಬರೆದುಕೊಳ್ಳುತ್ತಿದ್ದರು. ಲೆಕ್ಕ ಕೆಲವೊಮ್ಮೆ ವರ್ಷದವರೆಗೂ ಹೋಗುತ್ತಿತ್ತು. ಆದರೆ ಡಾಕ್ಟರು ಮಾತ್ರ ಅವರಾರಿಗೂ ಇಲ್ಲ ಅನ್ನುತ್ತಿರಲಿಲ್ಲ. ಅಂತೆಯೇ ಸಾಲ ನಿಲ್ಲಿಸಿಕೊಂಡವರು ಯಾರೂ ಯಾವತ್ತೂ ಮಾತಿಗೆ ತಪ್ಪುತ್ತಿರಲಿಲ್ಲ. ಕೆಲವರು ಆ ಸಾಲ ತೀರಿಸುವ ಸಲುವಾಗಿ ಕುರಿ ಮೇಕೆಗಳನ್ನು ಮಾರಿ ಋಣ ಮುಕ್ತರಾಗುತ್ತಿದ್ದದ್ದೂ ಉಂಟು.
ಇಂಥ ಡಾಕ್ಟರ ಬಗ್ಗೆ ರಾಮಣ್ಣ ಹೇಳುತ್ತಲೇ ನನಗೆ ಆ ದಿನಗಳು ಚಕ್ಕನೆ ಹಸಿರಾಗಿದ್ದವು. ಇಪ್ಪತ್ತು ವರ್ಷಗಳ ಹಿಂದಿನ ಸಂಗತಿ. ಈ ರಾಮಣ್ಣ ನನಗೆ ತುಂಬಾ ಆಕಸ್ಮಿಕವಾದದ್ದು. ನಾನು ಕೆಲಸ ಮಾಡುತ್ತಿದ್ದ ಮತಿಘಟ್ಟದಿಂದ ತಿಪಟೂರಿನ ಕಡೆಗೆ ಹೊರಟಿದ್ದ ಬಸ್ಸಿಗೆ ಕೈಮರ ಅನ್ನುವ ಸ್ಟಾಪಿನಲ್ಲಿ ನಾಲ್ಕೈದು ಮೂಟೆಗಳನ್ನು ಎಳೆದುಕೊಂಡು ವ್ಯಕ್ತಿಯೊಬ್ಬರು ಹತ್ತಿದರು. ಹಾಗೆ ಹತ್ತಿದ ಅವರು ತಾವು ಧರಿಸಿದ್ದ ಧಿರಿಸಿನಿಂದಾಗಿ ಇಡೀ ಬಸ್ಸಿನ ಜನರ ಗಮನ ಸೆಳೆದರು. ಮಂಡಿಯುದ್ದದ ಖಾಕಿ ಚೆಡ್ಡಿ, ತಲೆಗೆ ನಮಾಜು ಮಾಡುವಾಗ ಕಟ್ಟುವಂತೆ ಕಟ್ಟಿಕೊಂಡಿದ್ದ ಟವೆಲ್ಲು, ಎರಡೂ ಕಡೆ ಜೇಬುಗಳಿದ್ದ ಬಟ್ಟೆಯ ಬನಿಯನ್, ಕುರುಚಲು ಗಡ್ಡ ಬೆಳೆದಿದ್ದ ಮುಖದ ಮೇಲಾಡುತ್ತಿದ್ದ ಮುಗ್ಧತೆ, ಚುರುಕುತನ ಈ ಎಲ್ಲವೂ ನನಗೆ ತುಂಬಾ ವಿಶೇಷ ಅನ್ನಿಸಿದ್ದರ ಜೊತೆಗೆ ಸುಮಾರು ಮುವ್ವತ್ತು ನಲವತ್ತು ವರ್ಷಗಳ ಹಿಂದಿನ ಹಳ್ಳಿಗಳಲ್ಲಿದ್ದ ಅಪ್ಪಟ ದೇಸೀ ಕಸುಬೊಂದನ್ನು ಆಧರಿಸಿಕೊಂಡು ಬದುಕು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ನೆನಪಿಸುವಂತಿತ್ತು.
ಅವರು ತಂದಿದ್ದ ಮೂಟೆಗಳ ಪೈಕಿ ಒಂದರಲ್ಲಿ ತೆಂಗಿನ ಕಾಯಿ ಉಳಿದವುಗಳಲ್ಲಿ ಧವಸ ಧಾನ್ಯಗಳನ್ನು ತುಂಬಿರುವುದು ಮೇಲು ನೋಟಕ್ಕೇ ಗೊತ್ತಾಗುತ್ತಿತ್ತು. ಬಸ್ಸಿನಲ್ಲಿ ಅಷ್ಟು ಜನವಿರದ ಕಾರಣ ಆ ವ್ಯಕ್ತಿ ಅಷ್ಟೂ ಮೂಟೆಗಳನ್ನು ಹತ್ತುವ ಮತ್ತು ಇಳಿಯುವ ಜನರಿಗೆ ತೊಂದರೆಯಾಗದಂತೆ ಅಲ್ಲಲ್ಲೇ ಸೀಟುಗಳ ಅಡಿಗೆ ತುರುಕಿ ನಂತರ ಕೈಯ್ಯಲ್ಲೊಂದು ಬ್ಯಾಗನ್ನು ಹಿಡಿದು ನನ್ನ ಪಕ್ಕದಲ್ಲಿ ಖಾಲಿಯಿದ್ದ ಸೀಟಿನಲ್ಲಿ ಬಂದು ಕುಳಿತರು. ಹಂಗೇ ಆ ಬ್ಯಾಗಿನತ್ತ ಕಣ್ಣು ಹಾಕಿದ ನನಗೆ ಅದರೊಳಗಿಂದ ಮರದ ಹಿಡಿಯಿದ್ದ ಒಂದೆರಡು ಸಣ್ಣ ಕುಡುಗೋಲಿನಂಥವು, ಕಬ್ಬಿಣವನ್ನು ಕತ್ತರಿಸಲು ಉಪಯೋಗಿಸುವ ಒಂದೆರಡು ಬ್ಲೇಡುಗಳು ಕಂಡವು. ಆ ಹತಾರಗಳನ್ನು ನೋಡುತ್ತಲೇ ನನಗೆ ಅವರು ಮಾಡುತ್ತಿರಬಹುದಾದ ಕಸುಬೂ ಗೊತ್ತಾಗಿ ಹೋಗಿತ್ತು.
ನನ್ನ ಊಹೆ ಸರಿಯಾಗಿತ್ತು. ನಾನಂದುಕೊಂಡಂತೆ ಅವವರದ್ದು ದನಕರುಗಳ ಕೊಂಬುಗಳನ್ನು ಹೆರೆಯುವ ಕಾಯಕ. ಪರಿಚಯ ಮಾಡಿಕೊಳ್ಳುತ್ತಲೇ ನನ್ನ ಊರಿನಿಂದ ಹಿಡಿದು ಸುತ್ತಮುತ್ತಲ ಹಳ್ಳಿಗಳು ಅವುಗಳಲ್ಲಿನ ವ್ಯಕ್ತಿಗಳ ಹೆಸರನ್ನು ಅದೇ ಊರಿನವರೇನೋ ಎಂಬಂತೆ ಪಟಪಟನೆ ಹೇಳುವುದನ್ನು ಕೇಳಿ ನನಗೇ ಅಚ್ಚರಿಯಾಗಿತ್ತು. ಆಗಲೇ ಅವರು ಶರ್ಮಾ ಡಾಕ್ಟರ್ ಸುದ್ದಿಯನ್ನು ಎತ್ತಿದ್ದು. ಕೊಂಬು ಹೆರೆಯುವ ಕೆಲಸ ತುಂಬಾ ಸೂಕ್ಷ್ಮವಾದದ್ದೂ ಹಾಗೂ ಅದಕ್ಕೆ ಅಪಾರ ಅನುಭವ ಬೇಕು ಅನ್ನುವುದನ್ನು ನಾನು ಚಿಕ್ಕವನಿದ್ದಾಗ ನಮ್ಮ ಮನೆಯ ದನಗಳ ಕೊಂಬುಗಳನ್ನು ಹೆರೆಯಲು ಬರುತ್ತಿದ್ದ ನನ್ನ ಹಳ್ಳಿಯ ಪಕ್ಕದ ಪಾಳ್ಯದ ಮೀಸೆ ಚಂದ್ರಪ್ಪ ಮತ್ತು ಮಲ್ಲಯ್ಯ ಎಂಬುವವರ ಕೆಲಸವನ್ನು ನೋಡಿ ತಿಳಿದುಕೊಂಡಿದ್ದೆ. ಒಂಚೂರು ಹೆಚ್ಚು ಕಡಿಮೆಯಾದರೆ ಕೊಂಬುಗಳಿಂದ ರಕ್ತ ಬರುವುದರ ಜೊತೆಗೆ ಇಡೀ ಕೊಂಬೇ ಹಾಳಾಗಿ ಬಿಡುತ್ತಿತ್ತು. ಅದು ಬೆಲೆ ಬಾಳುವ ಹೋರಿಯಾಗಿದ್ದರಂತೂ ಅದರ ಕಿಮ್ಮತ್ತೇ ಕಡಿಮೆಯಾಗಿ ಬಿಡುತ್ತಿತ್ತು. ಹಂಗಾಗಿ ದನಗಳ ಮಾಲೀಕರು ಯಾವುದೇ ಗುರುತು ಪರಿಚಯ ಇರದ ಅಥವಾ ಅಡ್ಡ ಕಸುಬಿಗಳ ಕೈಗೆ ತಮ್ಮ ದನಗಳ ಕೊಂಬುಗಳನ್ನು ಮುಟ್ಟಿಸುತ್ತಿರಲಿಲ್ಲ.

ವರ್ಷವಿಡೀ ಇವರುಗಳಿಗೆ ತೆಳ್ಳಗೆ ಬಳ್ಳಗೆ ಕೆಲಸ ಇದ್ದರೂ ಕಾರಬ್ಬದ ಹೊತ್ತಲ್ಲಿ ಬಿಡುವಿಲ್ಲದ ಕೆಲಸವಿರುತ್ತಿತ್ತು. ಕಾರಬ್ಬಕ್ಕೆ ಹೊರಡಿಸಲೆಂದು ದನಕರುಗಳ ಅದರಲ್ಲೂ ಎತ್ತುಗಳು ಮತ್ತು ಹೋರಿಗಳ ಕೊಂಬುಗಳನ್ನು ನಾಜೂಕಾಗಿ ಹೆರೆಸಲಾಗುತ್ತಿತ್ತು. ಆ ನಂತರ ಆ ಕೊಂಬುಗಳಿಗೆ ಹಳ್ಳೆಣ್ಣೆ ಮತ್ತು ಅರಿಸಿನವನ್ನು ಹಚ್ಚಲಾಗುತ್ತಿತ್ತು. ಹಬ್ಬದ ಹೊತ್ತಿಗೆ ಕೊಂಬುಗಳಿಗೆ ಮಿಂಚು ಬರುತ್ತಿತ್ತು. ಹಬ್ಬದ ದಿನ ಆ ಕೊಂಬುಗಳಿಗೆ ಕೆಮ್ಮಣ್ಣಿನ ಬಣ್ಣವನ್ನು ಹಚ್ಚಿ, ಕೊಂಬುಗಳ ತುದಿಗಳಿಗೆ ಕೋಡಣಸುಗಳನ್ನು ಹಾಕಿ, ಕೊಂಬುಗಳ ಸುತ್ತ ಹೂವಿನ ಸರವನ್ನು ಸುತ್ತಿ ಸಿಂಗರಿಸಲಾಗುತ್ತಿತ್ತು. ಆಗ ಊರುಗಳಲ್ಲಿ ಮನೆಗೆ ಕನಿಷ್ಟ ಒಂದು ಜೋಡಿಯಾದರೂ ಹೊರಡುತ್ತಿದ್ದವು. ಇಡೀ ಊರಿನ ಬೀದಿ ಸಿಂಗರಿಸಿದ ದನಕರುಗಳಿಂದ ಅವುಗಳು ಮಾಡುತ್ತಿದ್ದ ಸದ್ದಿನಿಂದ ಮುಲುಗುಡುತ್ತಿತ್ತು. ಊರ ಬೀದಿಯ ತುಂಬಾ ಅವುಗಳನ್ನು ಓಡಾಡಿಸಿಕಂಡು ಕಡೆಗೆ ಕರುವುಗಲ್ಲಿಗೆ ಕಟ್ಟಿದ್ದ ಕರೆಸೊಪ್ಪನ್ನು ಕಿತ್ತು ತರುವವರೆಗೂ ಕಾರಬ್ಬದ ಸಂಭ್ರಮದ ರಂಗಿನಲ್ಲಿ ಇಡೀ ಊರು ಮುಳುಗುತ್ತಿತ್ತು. ಆ ದಿನ ಕೆಲವರು ಕೊಂಬು ಎರೆಯುವವರನ್ನು ಖಾಯಸ್ಸಾಗಿ ಮನೆಗೆ ಕರೆದು ಉಪಚರಿಸುತ್ತಿದ್ದರು.
ಕೊಂಬು ಹೆರೆಯುವ ಕಾಯಕವನ್ನು ಮಾಡುತ್ತಿರುವುದರಿಂದ ತಮ್ಮನ್ನು ಕೊಂಬಿನ ರಾಮಣ್ಣ ಅಂತಲೇ ಕರೆಯುತ್ತಾರೆ ಅಂತ ಮಾತು ಮುಂದುವರೆಸಿದ ರಾಮಣ್ಣನವರು ಹಳೇಬೀಡಿನ ಹತ್ತಿರದ ಹಳ್ಳಿಯವರು. ಆಗವರ ವಯಸ್ಸು ಅರವತ್ತು ದಾಟಿತ್ತು. ಹತ್ತಿರತ್ತಿರ ಆರು ಅಡಿ ಎತ್ತರ. ನೀಳು ಮುಖ. ನಗು ಮೊಗದ ರಾಮಣ್ಣನವರು ಅಲ್ಲಿಂದ ನಮ್ಮ ಸೀಮೆಗೆ ಅದೂ ಕೊಂಬರೆಯುವ ಕೆಲಸಕ್ಕಾಗಿ ಬಂದದ್ದು ನನಗೆ ಕೊಂಚ ವಿಶೇಷ ಅನಿಸಿತ್ತು. `ಸುಮಾರು ಹದಿನೈದು ಇಪ್ಪತ್ತು ವರ್ಷಗಳಿಂದ ನಿಮ್ಮ ಊರಿನ ಸುತ್ತ ಮುತ್ಲೆಲ್ಲಾ ನಾನೇ ಕೊಂಬು ಹೆರೆಯೋನು. ಕೆಲುವ್ರು ನನ್ನ ಬಿಟ್ರೆ ಇನ್ನೊಬ್ರ ಕೈಲಿ ಮುಟ್ಸಲ್ಲ,’ ಅಂತ ಅಂದ ರಾಮಣ್ಣನವರ ಮಾತುಗಳು ನನಗೆ ಉತ್ಪ್ರೇಕ್ಷೆ ಅನಿಸಲಿಲ್ಲ. ಏಕೆಂದರೆ ಅವರ ಚುರುಕುತನ ಆವರೆವಿಗೂ ಕೊಂಬಿನ ಕೆಲಸದ ಬಗ್ಗೆ ಅವರುಗಳು ಆಡಿದ್ದ ಮಾತುಗಳು ಅದಕ್ಕೆ ಸಾಕ್ಷಿ ಕೊಡುವಂತಿದ್ದವು.
ವರ್ಷದಲ್ಲಿ ಎರಡು ತಿಂಗಳು ಇವರು ನಮ್ಮ ಊರುಗಳತ್ತ ಈ ಕಸುಬಿಗಾಗಿ ಬರುತ್ತಿದ್ದರಂತೆ. ಒಮ್ಮೆ ಬಂದರೆ ಕೆಲಸವೆಲ್ಲಾ ಮುಗಿದ ಮೇಲೆಯೇ ತಮ್ಮ ಊರಿಗೆ ಹೋಗುತ್ತಿದ್ದರಂತೆ. `ಈ ಸಾರ್ತಿ ನನ್ನ ಹೆಂಡ್ತೀನೂ ಜೊತೆಗೆ ಬಂದಿದ್ಳು, ಮೊನ್ನೆಯಷ್ಟೇ ಊರಿಗೆ ಹೋದ್ಳು,’ ಅಂದ ರಾಮಣ್ಣನಿಗೆ `ಅದೇನು ಅಷ್ಟೊಂದು ಮೂಟೆಗಳನ್ನು ತಗಂಡು ಹೋಗ್ತಿದೀರಾ? ಅದರಾಗೆಲ್ಲಾ ಏನಿದೆ?’ ಅನ್ನುವ ಒಂದು ಅನಗತ್ಯದ ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕವರು `ಅವುಗಳಲ್ಲಿ ತೆಂಗಿನ ಕಾಯಿಯಿಂದ ಹಿಡಿದು ರಾಗಿ, ಜೋಳ, ಅವರೆಕಾಳು ಇನ್ನೂ ಏನೇನೋ ಇದಾವೆ’ ಅಂದಿದ್ದರು. ಅವನ್ನೆಲ್ಲಾ ಇಲ್ಲಿಂದ ಯಾಕೆ ಹೊತ್ತುಕೊಂಡು ಹೋಗ್ತಿದೀರಾ ಅಂದದ್ದಕ್ಕೆ, `ನಾನು ಮಾಡುವ ಕಸುಬಿಗೆ ಜನ ಸಾಮಾನ್ಯಕ್ಕೆ ದುಡ್ಡು ಅಂತ ಕೊಡಲ್ಲ. ನಾನೂ ಕೊಡ್ರಿ ಅಂತಲೂ ಕೇಳಲ್ಲ. ಅವ್ರು ಏನು ಬೆಳೆದಿರ್ತಾರೋ ಅದನ್ನೆಲ್ಲಾ ಅವರೇ ಕೊಟ್ಟು ಬಿಡ್ತಾರೆ. ಇಲ್ಲಿ ಅವ್ರೂ ಲೆಕ್ಕ ಹಾಕಲ್ಲ. ನಾನೂ ಲೆಕ್ಕ ಹಾಕಲ್ಲ. ಅಷ್ಟೆಯಾ,’ ಅಂದು ನಕ್ಕಿದ್ದರು. `ದುಡ್ಡು ಇಲ್ಲದೆ ಬರೀ ಹಿಂಗೆ ಧವಸ ಇಸ್ಕಂಡು ಹೋದ್ರೆ ನಿಮಗೆ ಲಾಸ್ ಆಗಲ್ವ?’ ಅಂತ ಕೇಳಿದ್ದ ನನಗೆ ಅವರ ಉತ್ತರ, ` ಇದ್ರಲ್ಲಿ ಲಾಸು ಎಲ್ಲಿ ಬಂತು? ನಾವೆಲ್ಲಾ ಒಂಥರಾ ಸಂಬಂಧಿಗಳಿದ್ದಂಗೆ, ಅವ್ರೂ ಕೈ ಸಣ್ಣಗೆ ಮಾಡ್ಕಂಡು ಕೊಡಲ್ಲ. ನಾನೂ ಅವ್ರ ಹಲ್ಲಿಡ್ದು ನೋಡಲ್ಲ. ಹೊಟ್ಟೆ ಹೊರ್ಯಾಕೆ ತೊಂದ್ರೆ ಅಂತೂ ಆಗಿಲ್ಲ. ಇನ್ನೇನು ಬೇಕು ಹೇಳಿ ಬದುಕಾಕೆ.’
ಇಂಥ ರಾಮಣ್ಣನನ್ನು ಜನರೇ ಫೋನು ಮಾಡಿ ವರ್ಷಕ್ಕೊಮ್ಮೆ ಕರೆಸಿಕೊಳ್ಳುತ್ತಿದ್ದರಂತೆ. ಹೀಗೆ ಕರೆಸಿಕೊಂಡವರೇ ತಮ್ಮ ನೆಂಟರಂತೆ ತಮ್ಮ ತಮ್ಮ ಮನೆಗಳಲ್ಲೇ ಉಳಿಸಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದರಂತೆ. ಕೆಲಸವೆಲ್ಲಾ ಮುಗಿದು ಹೊರಡುವಾಗ ಅವರುಗಳೆಲ್ಲಾ ಸೇರಿ ಬಸ್ ಚಾರ್ಜಿನ ಜೊತೆಗೆ ತಮ್ಮ ತಮ್ಮ ಮನೆಯಲ್ಲಿದ್ದುದನ್ನು ಕೊಟ್ಟು ಕಳಿಸುತ್ತಿದ್ದರಂತೆ. ಹಂಗಾಗಿ ರಾಮಣ್ಣನವರಿಗೆ ಯಾರ್ಯಾರ ಮನೆಗಳಲ್ಲಿ ಎಷ್ಟು ದನಗಳಿವೆ, ಒಳ್ಳೆಯ ಹೋರಿಗಳಿವೆ, ಹಾಲು ಕರೆಯುವ ರಾಸುಗಳಿವೆ ಎಂಬುದು ಚೆನ್ನಾಗಿ ಗೊತ್ತಿತ್ತು. ತಮ್ಮ ಊರಿನ ಕಡೆಯವರಿಗೆ ಒಳ್ಳೆಯ ಹೋರಿಗಳು, ಕರೇವಿನ ಹಸು, ಎಮ್ಮೆಗಳು ಬೇಕಾದರೆ ಇಂತಿಂಥವರ ಮನೆಯಲ್ಲೇ ಇದಾವೆ ಅಂತ ಹೇಳಿ ಕಳಿಸಿ ವ್ಯಾಪಾರ ಮಾಡಿಸುತ್ತಿದ್ದರಂತೆ. ಯಾವುದೇ ದಲ್ಲಾಳಿ ದುಡ್ಡಿನ ಆಸೆ ಇಲ್ಲದೆ. ಆದ್ದರಿಂದ ರಾಮಣ್ಣನವರನ್ನು ಕಂಡರೆ ನಮ್ಮೂರಿನ ಸುತ್ತ ಮುತ್ತಲ ಜನರಿಗೆ ಒಂದು ರೀತಿಯ ಪ್ರೀತಿ ಅನ್ನುವುದನ್ನು ಬಸ್ಸಿನಲ್ಲಿ ರಾಮಣ್ಣನವರ ಪರಿಚಯವಾದ ನಂತರ ನಮ್ಮೂರಿನ ಜನರನ್ನು ಕೇಳಿ ತಿಳಿದುಕೊಂಡಿದ್ದೆ. ಈ ರಾಮಣ್ಣ ಕೇವಲ ಕೊಂಬು ಹೆರೆಯುವುದರಲ್ಲಿ ಅಷ್ಟೇ ಅಲ್ಲದೆ ದನಗಳ ಖಾಯಿಲೆಗಳಿಗೆ ನಾಟಿ ಔಷಧಿ ಮಾಡುವುದರಲ್ಲಿ ಎತ್ತಿದ ಕೈ ಅಂತಾನೂ ಜನ ಹೇಳಿದ್ದರು.
ಕೊಂಬುಗಳನ್ನು ಹೆರೆಯುವ ಕೆಲಸದಲ್ಲಿ ಇಷ್ಟು ಪಳಗಿದ್ದರೂ ರಾಮಣ್ಣ ತಮ್ಮ ಊರಿನ ಆಸುಪಾಸಿನಲ್ಲಿ ಈ ಕಾಯಕವನ್ನು ಮಾಡುತ್ತಿರಲಿಲ್ಲವಂತೆ. ಇದರ ಬದಲು ಅಲ್ಲಿ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಇಟ್ಟಿಗೆ ಹಾಕಲು ಹೋಗುತ್ತಿದ್ದರಂತೆ. ಜತೆಗೆ ತಮ್ಮ ಮಕ್ಕಳು ಈ ಕಸುಬಿಗೇ ಜೋತು ಬೀಳುವುದು ಇಷ್ಟವಿರಲಿಲ್ಲ. ಅವರಿಗೆ ಏನು ಬೇಕೋ ಅದನ್ನು ಮಾಡಿಕೊಳ್ಳಲಿ ಅಂದ ರಾಮಣ್ಣನವರಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ಅನ್ನುವ ಆಸೆಯಿತ್ತು.
ಇಂಥ ರಾಮಣ್ಣ ತುಂಬಾ ಕಡೆ ಅಡ್ಡಾಡಿದ್ದಾರೆ. `ಇಗಾ ಈ ಬನಿಯನ್ ಐತಲ್ಲಾ ಇದು ಎಲ್ಲೀದೂ ಅಂತ ತಿಳ್ಕಂಡಿದೀರಾ. ನೇಪಾಳದ್ದು, ಇಂಥದ್ದು ಇಲ್ಲಿ ಸಿಗಲ್ಲ ಬೇಕಾದ್ರೆ ನಿವೇ ಕೇಳಿ ನೋಡಿ’ ಅನ್ನುತ್ತಾ ಆ ಬಿಳಿಯ ಬನಿಯನ್ನಿನ ಎರಡೂ ಕಡೆಗಿದ್ದ ಜೇಬುಗಳನ್ನೂ ಆ ಎರಡೂ ಜೇಬುಗಳ ತುದಿಗೆ ಹಾಕಿದ್ದ ಜಿಪ್ಪುಗಳನ್ನು ಎಳೆದು ತೋರಿಸಿದರು. ತಾವು ತಮ್ಮ ಗೆಳೆಯನೊಂದಿಗೆ ಹಂಗೇ ನೇಪಾಳಕ್ಕೆ ಹೋಗಿ ಬಂದದ್ದರಿಂದ ಹಿಡಿದು ತಮಗಿರುವ ಹಿಂದಿ ಭಾಷೆಯ ಬಗೆಗಿನ ಪಾಂಡಿತ್ಯವನ್ನು ಹೇಳಿಕೊಳ್ಳುವಾಗ ಹಳ್ಳಿಯ ಮನಸ್ಸೊಂದರ ಅಸಾಧ್ಯ ಕುತೂಹಲದ ಭಾವ ರಾಮಣ್ಣನವರ ಮುಖದ ಮೇಲಾಡುತ್ತಿತ್ತು. ಇದು ಇವರ ಮಾತುಗಳಲ್ಲಿ ಯಾವುದೂ ಖೊಟ್ಟಿ ಇಲ್ಲ ಅನ್ನುವುದನ್ನು ಸಾಬೀತು ಪಡಿಸುತ್ತಿತ್ತು.
ನಾವು ಮಾತನಾಡಬೇಕಾದ್ದು ಇನ್ನೂ ತುಂಬಾ ಇರುವಾಗಲೇ ಬಸ್ಸು ತಿಪಟೂರನ್ನು ತಲುಪಿತ್ತು. ಇನ್ನೇನು ಇಳಿಯಬೇಕು ಅನ್ನುವಾಗ ನಾನು ನನ್ನ ಮೊಬೈಲಿನಿಂದ ರಾಮಣ್ಣನವರ ಒಂದೆರಡು ಫೊಟೋಗಳನ್ನು ತೆಗೆದುಕೊಂಡಿದ್ದೆ. `ಅಯ್ಯೊ ದಡಾ ಬಡಾ ಅನ್ನೋ ಬಸ್ನಾಗೆ ಪೋಟಾ ಹೆಂಗೆ ಬಂದಾತು ತಗಾಳಿ’ ಅನ್ನುತ್ತಾ ರಾಮಣ್ಣ ತಮ್ಮ ಬನಿಯನ್ನಿನ ಜಿಪ್ಪಿನ ಜೇಬಿನಿಂದ ಪುಟ್ಟ ಪ್ಯಾಕೆಟ್ ಕ್ಯಾಲೆಂಡರೊಂದನ್ನು ತೆಗೆದು ಅದರೊಳಗಿಂದ ಪಾಸ್ಪೊರ್ಟ್ ಸೈಜಿನ ತಮ್ಮ ಫೊಟೋವನ್ನು ನನ್ನ ಕೈಗಿತ್ತು `ನಿಮ್ಮದೂ ಒಂದು ಫೋಟೋ ಕೊಡಿ,’ ಅಂದಿದ್ದರು. ನನ್ನ ಹತ್ತಿರ ಫೋಟೋ ಇರಲಿಲ್ಲ. `ನಿಮ್ಮ ಫೋನ್ ನಂಬರ್ ಹೇಳಿ,’ ಅಂದಿದ್ದಕ್ಕೆ `ನಂಗೇಲ್ಲಿ ಹೇಳಾಕೆ ಬಂದಾತು ತಗಳ್ಳಿ ಬರ್ಕಳಿ’ ಅಂತ ಆ ಪುಟ್ಟ ಡೈರಿಯನ್ನು ನನ್ನ ಕೈಗಿತ್ತು ಅದರಲ್ಲಿ ದಪ್ಪಕ್ಷರಗಳಲ್ಲಿ ಬರೆದಿದ್ದ ಅವರ ಫೋನ್ ನಂಬರಿನ ಮೇಲೆ ಬೆರಳಿಟ್ಟು ತೋರಿಸಿದ್ದರು.
ಇದಾದ ಸುಮಾರು ತಿಂಗಳುಗಳ ನಂತರ ರಾಮಣ್ಣನವರಿಗೆ ಫೋನು ಮಾಡಿದ್ದೆ. `ಅರೆ ಎಷ್ಟೋ ಜನ ಫೋನ್ ಮಾಡ್ತೀವಿ ಅಂತ ನಂಬರ್ ತಗಂತಾರೆ ಒಬ್ರೂ ಫೋನ್ ಮಾಡಲ್ಲ. ನೀವು ಮಾಡೇ ಬಿಟ್ರಲ್ಲ,’ ಅಂತ ಏರಿದ ದನಿಯಲ್ಲಿ ಖುಷಿ ತೋದ್ದ ರಾಮಣ್ಣನವರು ಫೋನಿಡುವ ಮೊದಲು, `ನಮ್ಮ ಊರ್ಕಡೀಕೆ ಒಂದಪಾವ ಬನ್ನಿ ಬೇಲೂರು, ಹಳೇಬಿಡು ಎಲ್ಲಾ ನೋಡುವಾ,’ ಅಂದಿದ್ದರು. ಆ ದನಿಯಲ್ಲಿದ್ದ ಆ ಆತ್ಮೀಯ ಭಾವ ಇದನ್ನು ಬರೆಯುತ್ತಿರುವ ಈ ಹೊತ್ತಿನಲ್ಲೂ ನನ್ನೊಳಗಾಡುತ್ತಾ ಹಿತವಾಗುತ್ತಿದೆ. ಇಂಥ ಭಾವಜೀವಿ ರಾಮಣ್ಣನವರ ಜೊತೆಯಲ್ಲಿ ಬೇಲೂರು, ಹಳೇಬೀಡುಗಳನ್ನು ನೋಡಬೇಕು ಅಂತ ಅದೆಷ್ಟೋ ಸಾರ್ತಿ ಅಂದುಕಂಡಿದ್ದೆ. ಆದರೆ ಹೋಗಲಾಗಲಿಲ್ಲ. ಈಗವರ ಬಗ್ಗೆ ಗೊತ್ತಿಲ್ಲ. ಅವರ ನಂಬರು ಕೂಡಾ ನನ್ನ ಬಳಿ ಇಲ್ಲ.
ಸುಮಾರು ವರ್ಷಗಳ ನಂತರ ಈ ಸಲದ ಕಾರಬ್ಬಕ್ಕೆ ಹೋಗಿದ್ದೆ. ಇಡೀ ಊರಿಗೆ ಹೊರಡಿಸಿದ್ದು ಎರಡೇ ಎರಡು ಚಿಕ್ಕ ಹೋರಿ ಕರುಗಳನ್ನು! ಅದೂ ಕಾಟಾಚಾರಕ್ಕೆ ಎಂಬಂತೆ. ಈಗ ಈ ಕೊಂಬುಗಳನ್ನು ಹೆರೆಸುವಂಥ ಎತ್ತುಗಳು ಇಲ್ಲಾ ಹೋರಿಗಳು ನೇಪಥ್ಯಕ್ಕೆ ಸರಿದು ದಶಕಗಳೇ ಆಗಿವೆ. ಹಂಗಾಗಿ ಇತರೇ ದೇಸೀ ಕಸುಬು ಮತ್ತು ಜ್ಞಾನಗಳಂತೆ ಕೊಂಬಿನ ಕಾಯಕವೂ ಕಣ್ಮರೆಯಾಗಿದೆ.

ನನಗೆ ಈ ಶರ್ಮಾ ಡಾಕ್ಟರ್ ಮತ್ತವರ ಯೆಝ್ಡಿ ಮೋಟಾರ್ ಬೈಕ್ ನಾನು ಮೈಸೂರಿನಲ್ಲಿದ್ದಾಗಲೂ ಆಗಾಗ ನೆನಪಿಗೆ ಬರುತ್ತಿತ್ತು. ಆಗ ನಾನು ನನ್ನೂರಿನ ಪಕ್ಕದ ಊರಿನ ಗೆಳೆಯ ಶಾಂತಪ್ಪನ ಜತೆ ತೊಣಚಿಕೊಪ್ಪಲಿನ ಪುಟ್ಟಯ್ಯನಹುಂಡಿಯಲ್ಲಿ ರೂಮು ಮಾಡಿಕಂಡಿದ್ದೆ. ರೂಮಿನ ಪಕ್ಕದ ಮನೆಯಲ್ಲಿ ಒಂದು ತಮಿಳು ಸಂಸಾರವಿತ್ತು. ಅದರ ಯಜಮಾನ ಈ ಮುಂಚೆ ಯೆಝ್ಡಿ ಮೋಟಾರ್ ಸೈಕಲ್ಲುಗಳನ್ನು ತಯಾರು ಮಾಡುತ್ತಿದ್ದ `ಐಡಿಯಲ್ ಜಾವಾ ಕಾರ್ಖಾನೆ’ಯಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೊತ್ತಿಗಾಗಲೇ ಅದು ಮುಚ್ಚಿ ಹೋಗಿತ್ತು. ಇದರಿಂದ ನೂರಾರು ಸಂಸಾರಗಳು ಬೀದಿಗೆ ಬಿದ್ದಿದ್ದವು. ಮುಂದೊಂದು ದಿನ ನನ್ನ ಅಣ್ಣ ಒಂದು ಸೆಕೆಂಡ್ ಹ್ಯಾಂಡ್ ಯೆಝ್ಡಿ ಬೈಕನ್ನು ಕೊಂಡಿದ್ದರು. ಎಂದಾದರೊಂದು ಅಪರೂಪಕ್ಕೆ ಈ ಬೈಕನ್ನು ಓಡಿಸುತ್ತಿದ್ದೆ. ಆಗೆಲ್ಲಾ ಜಾವಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆ ವ್ಯಕ್ತಿಯ ನೋವಿನ ಮಾತುಗಳು ನೆನಪಿಗೆ ಬಂದು ಎದೆ ಭಾರವಾಗಿಬಿಡುತ್ತಿತ್ತು.
(ಹಿಂದಿನ ಕಂತು: ಕಪ್ಪೆಂಚಿನ ಕಲ್ಡಿ ಮನೆ, ಕೆಂದೆತ್ತು ಮತ್ತು ಲಾಳ ಕಟ್ಟೋ ರೆಹಮಾನ್ ಸಾಬರು)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

