ಕಿವಿ ಮರೆಯದ ಸದ್ದು
ಕಿವಿ ಎಂದೂ ಮರೆಯದ ಕೆಲ ಸದ್ದುಗಳು
ಆಗಾಗ ಗುಂಯ್ ಗುಡುತ್ತವೆ ಬದುಕಿನಲ್ಲಿ
ಸೋರುತಿರುವ ಹಳೆಮನೆಯಲ್ಲಿ
ಹಾಸಿಗೆಯ ಅಳತೆ ಮೀರಿದ ಕಾಲು
ನೆಲ ತಾಕಿ ತಂಪಿನಲಿ ನಿದಿರೆಯ ಸುಖ ಹೆಚ್ಚಿಸುವಾಗ
ಬಿಡುವೇ ಕೊಡದ ನಡುರಾತ್ರಿಯ ಮಳೆ ಸದ್ದು
ಅಂತರಂಗದ ಆಳದಲ್ಲಿ ಹರಿದಾಡುತ್ತದೆ ಈಗಲೂ
ರಜೆಯ ಖುಷಿಗೆ ರಿಕ್ಷಾ ಹತ್ತಿ
ಕಲ್ಲುಮಣ್ಣ ರಸ್ತೆಗಳಲಿ ಗಡಗಡ ಅಲ್ಲಾಡುತ್ತ
ಕೋಳ್ಯೂರಿನ ಅಜ್ಜಿಮನೆಯ ತೋಟ ತಲುಪಿ
ಹಸಿರ ನಡುವೆ ಕಾಲು ನೆಲಕ್ಕಿಡುವಾಗ
ಝ್…..ಎಂದು ನಡು ನಡುವೆ
ಬಂಡೆ ಏರಿಳಿದು ಝರಿಯಂತೆ
ಹೊಳೆ ಹರಿವ ಸದ್ದು ಎದೆಯೊಳಗನು ತೊಳೆಯುತ್ತಿದೆ
ಒಂದು ಮಳೆಗೆ ಊರಿಡೀ ಮೈ ತೊಳೆಯುತ್ತದೆ
ಕಾಡು ತೋಟ ಹಸಿರೆದ್ದು ಮೈದಳೆಯುತ್ತದೆ
ನಗುವ ಬುದ್ಧನ ಹಾಗೆ ಲೋಕ ತನ್ಮಯಿಸುತ್ತದೆ
ಕಲ್ಲಿನೆಡೆ ಸಿಕ್ಕ ಬಟ್ಟೆ, ಪ್ಲಾಸ್ಟಿಕ್ಕು
ಸವೆದ ಚಪ್ಪಲಿ, ಕಸದ ಚೀಲ
ಎಲ್ಲಿಯೂ ನಿಲ್ಲದಿರೆಂದು ನೀರು
ಸಿಕ್ಕಿಕೊಂಡವುಗಳ ಸಿಕ್ಕು ಬಿಡಿಸಿ
ಸ್ವತಂತ್ರವಾಗಿಸುತ್ತದೆ ಹರಿಯುತ್ತಲೇ ಇರುವಂತೆ
ಮೌನ ಹರಿವಿನ ನೀರಹಾದಿಯಲ್ಲಿ
ದೇವರು ಕಾಣಿಸುತ್ತಾನೆ
ಪಾಪದ ಕೊಡ ಹೊತ್ತು
ಕೊಳೆ ತೊಳೆಯಲು ಹೊಳೆಗೆ ಹೋಗುತ್ತೇವೆ
ನಮ್ಮ ಬದಲಿಗೆ
ಪಾದೆಕಲ್ಲಿಗೆ ಬಟ್ಟೆಗಳ ಬಡಿಬಡಿದು
ನೀರಿನಲಿ ಮುಳುಗಿಸಿ ಮೇಲೆತ್ತಿ
ಮತ್ತೆ ಬಡಿದು ಹಿಂಡಿ ಬಿಡಿಸಿ ತಂದು
ಮರಳ ಮೇಲೆ ಹಾಸಿ ಒಣಗಿಸುತ್ತೇವೆ
ನಾವೂ ಮುಳುಗೆದ್ದು ಬರುತ್ತೇವೆ
ಕೊಳೆ ತೊಳೆವ ಹೊಳೆ ನೀರ ಕೆಂಪಾಗಿಸಿದ್ದೇವೆ
ತೊಳೆದಷ್ಟು ತೊಳೆದಷ್ಟು ನೆತ್ತರ ಕಮಟು
ದೇವರುಗಳಿಗೆ ದ್ವೇಷ ಕಲಿಸಿದ್ದೇವೆ
ಪ್ರತಿಮೆಯೇರಿಸಿ ಪ್ರೀತಿಯಾತ್ಮವ ಬಿಸುಟು
ಫಕೀರನೊಬ್ಬನ ಕಣ್ಣೊಳಗಿನ ಕಾವ್ಯದಂತೆ
ನನ್ನೊಳಗೆ ತಣ್ಣಗೆ ಹರಿಯುತ್ತದೆ ನೀರು
ಮತ್ತೆ ಮತ್ತೆ ಮನುಷ್ಯನಾಗಿಸುತ್ತ
ಊರು ನೀರು ಬದಲಾಗಬಹುದು
ಕಿವಿ ಮರೆಯದ ಸದ್ದು ಮಾತ್ರ ಹಾಗೆಯೇ…ಸದಾ
ತೋರ್ ಬೆರಳ ನೀಲಿ ಶಾಯಿ
ತೋರ್ ಬೆರಳ ನೀಲಿ ಶಾಯಿ
ಮೆಲ್ಲಗೆ ಇಳಿದು ಉಗುರು ತಲುಪುವಾಗ
ಒಳಗೊಳಗೇ ಖುಷಿಹೊತ್ತ ನಗು, ಕಚಗುಳಿ
ಅದೇ ಶಾಲೆಯಲ್ಲಿ
ಪುಟ್ಟ ಬೆರಳ ನಡುವೆ
ಮಾಂಟೆಕ್ಸ್ ಪೆನ್ನಿನಲಿ ಗೀಚಿ ಗೀಚಿ
ಬರೆದ ಅಕ್ಷರಗಳೆಲ್ಲ ಒಟ್ಟಾಗಿ
ಬೆರಳ ಮೇಲೆಯೇ ಶಾಯಿ ಕಕ್ಕಿದ ಹಾಗೆ
ಸಮವಸ್ತ್ರದ ಕಿಸೆಯಲ್ಲಿ
ನೀಲಿ ಹರಡಿದ ಹಾಗೆ
ನೆನಪುಗಳೆ ನಗುತ್ತವೆ
ವೋಟು ಮುಗಿದ ಮರುದಿನ
ಚೂರು ತೆಂಗಿನೆಣ್ಣೆ ಬೆರಳಿಗೆ ಹಚ್ಚಿ
ಗೀರು ಬೆಂಕಿಕಡ್ಡಿಯಲಿ ಉಜ್ಜಿ
ಶಾಯಿ ಅಳಿಸುತ್ತಿದ್ದೆ ನಿಧಾನಕ್ಕೆ
ಅದೇ ಶಾಲೆಯ ಗೇಟು
ತೆರೆಯುವುದಿಲ್ಲವಂತೆ
ನೀಲಿ ಶಾಯಿಯ ಗೀಟು
ಎಳೆಯುವುದಿಲ್ಲವಂತೆ
ತೋರುಬೆರಳಿಗೇಕೆ ಶಾಯಿ
ಎಂದು ಯೋಚಿಸುತ್ತಿದ್ದೆ
ಇದೇ ತೋರುಬೆರಳಿನಲಿ
ನಿನ್ನ ಗದ್ದುಗೆಗೇರಿಸಿರುವೆ
ನಡೆ ನುಡಿ ಎಡವಿದರೆ
ಇದೇ ಬೆರಳ ತೋರುವೆ
ನಿನ್ನ ಕಡೆಗೆ ಬೆಟ್ಟು ಮಾಡಿ
ಈಗ, ಶಾಯಿ ಬೆರಳಿಗೆ ಇಳಿಸುವುದಿಲ್ಲ
ಶಾಯಿ ಅಳಿಸುವ ಕೆಲಸವೂ ಇಲ್ಲ
ಹೆಸರೇ ಅಳಿಸಿದ ಮೇಲೆ
ಪ್ರಜಾಸತ್ತೆಯ ಉಸಿರೂ ಉಳಿಯುವುದಿಲ್ಲ
ಅಂದುಕೊಂಡಂತೆ ಆಗುವುದಾಗಿದ್ದರೆ
ಅಂದುಕೊಂಡಂತೆ ಆಗುವುದಾಗಿದ್ದರೆ
ನಾನೇಕೆ ದುಡಿಯಬೇಕಿತ್ತು
ಚೋಮನೇಕೆ ದುಡಿಯ ಬಡಿಯಬೇಕಿತ್ತು
ಕೆಲಸವಾದರೂ ಏಕೆ ಬೇಕಿತ್ತು
ಚಿಂತೆಯಾದರೂ ಏಕಿರುತ್ತಿತ್ತು
ಅಂದುಕೊಂಡಂತೆ ಆಗುವುದಾಗಿದ್ದರೆ
ನೊಂದುಕೊಂಡೇಕೆ ಅಳಬೇಕಿತ್ತು
ಕೊಂದುಕೊಂಡೇಕೆ ಬಾಳಬೇಕಿತ್ತು
ನಾಳೆಗೆ ಇಂದೇಕೆ ಕಾಯಬೇಕಿತ್ತು
ಇಂದಿಗೆ ನಿನ್ನೆ ಏಕೆ ಬೇಕಿತ್ತು
ಇರುಳಿಗೆ ಭಯವೇಕೆ ಪಡಬೇಕಿತ್ತು
ಕೊರಳಿಗೆ ತಾಯತವೇಕೆ ಬೇಕಿತ್ತು
ಬಡವರು ಹಾಗೇ ಏಕೆ ಸಾಯಬೇಕಿತ್ತು
ಬೆವರೇಕೆ ನೆಲವ ತಾಕಬೇಕಿತ್ತು
ಬಂಗಲೆಯವಗೆ ಬೆಂಗಾವಲೇಕೆ ಬೇಕಿತ್ತು
ಕನಸಿದವರ ಮದುವೆಯಾಗಬೇಕಿತ್ತು
ಅನಿಸದವರ ಮದುವೆ ಮುರಿಯಬೇಕಿತ್ತು
ಹೆಣ್ಣು ರೆಕ್ಕೆ ಕಟ್ಟಿ ಬಾನೆತ್ತರ ಹಾರಬೇಕಿತ್ತು
ಕಾಸು ಮರದಲ್ಲಾಗಬೇಕಿತ್ತು
ಅಪ್ಪನ ಸಾಲ ತೀರಬೇಕಿತ್ತು
ಇಎಂಐ ಇರಲೇಬಾರದಿತ್ತು
ಕಷ್ಟ ಖರೀದಿಗಿರಬೇಕಿತ್ತು
ಅಂದುಕೊಂಡಂತೆ ಆಗುವುದಾಗಿದ್ದರೆ
ಯಾವ ಪ್ರೇಮವೂ ಮುರಿದು ಬೀಳುತ್ತಿರಲಿಲ್ಲ
ಕಾಲ ಹೀಗೆ ಸರಿದು ಹೋಗುತ್ತಿರಲಿಲ್ಲ
ಅಂದುಕೊಂಡಂತೆ ಆಗುತ್ತದೆ ನಿಜ
ಯಾರಂದುಕೊಂಡಂತೆ?

ಶರೀಫ್ ಕಾಡುಮಠ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನವರು. ಪ್ರಸ್ತುತ ಸೌದಿ ಅರೇಬಿಯಾದ ರಿಯಾಧ್ನಲ್ಲಿದ್ದಾರೆ. ಇವರ ಅನೇಕ ಬರಹ, ಕವಿತೆಗಳು ಪತ್ರಿಕೆ, ವೆಬ್ ಸೈಟ್ಗಳಲ್ಲಿ ಪ್ರಕಟವಾಗಿವೆ.

