ವಿರಹದ ತುಣುಕುಗಳು
೧
ಇಳಿ ಸಂಜೆಯ ಆದ್ರ೯ ನಿರ್ವಾತದಲ್ಲಿ
ಎದುರು -ಬದುರು ಕೂತು
ಹೊಗೆ ಕಾರುವ ಕಾಫಿ ಹೀರಿ
ಕೊನೆಯ ಭಾವಪಟ ಕ್ಲಿಕ್ಕಿಸಿ
ಮೌನದಲಿ ನಿರ್ಗಮಿಸುವಷ್ಟರಲ್ಲಿ
ಆಕಾಶ ಅತ್ತು ಹಗುರಾಗದಿರಲಿ
ಅತ್ತರೂ, ಋತುಗಳಿಗೆ ಗೊತ್ತಾಗದಿರಲಿ
೨
ಲೋಕದ ಕಣ್ಣಲ್ಲಿ ಧಪನ್ ಮಾಡುವ
ಆಗಸದ ಹಕ್ಕಿಗೇನು ಗೊತ್ತು
ಸಮುದ್ರ ತಟದಲಿ ಕೂತು
ಮೂಕ ರೋಧನೆಯ ಸ್ವರದಲಿ
ಬಿಕ್ಕಿ-ಕಕ್ಕಿದ ಮರಿ ಹಕ್ಕಿಗಳು ಮುಚ್ಚಿಟ್ಟ
ಎದೆಯಂತರಾಳದ ನಗ್ನ ಸತ್ಯ
೩
ನಟ್ಟ ನಡು ರಾತ್ರಿಯ ಅಂಗಳದಲಿ
ಕಣ್ಣಿಗೆ ಕಣ್ಣಿಟ್ಟು
ಒಲವ ಮಧುವನು ಬಸಿಯುವಾಗ
ಶಹರದ ಬೀದಿ ದೀಪವು
ಗಡಿಯಾರದ ಕೈಗಳನು
ಸರಳಿನಲಿ ಬಂಧಿಸಿ, ಕ್ಷಣ ಹೊತ್ತು
ಕಾಲದ ಹಾದಿಯಲ್ಲಿ ಅಂಗಾತ ಮಲಗಿತ್ತು
೪
ನನ್ನೊಳಗಿನ ಅವಳ ಬಿಂಬ
ಸ್ವಚ್ಛಂದದ ಮಿಣುಕು ದರ್ಪಣ
ವಿಷಾದಿಸುತ್ತೇನೆ;
ಹೊಂದಿಕೆಯು ನಂಬಿಕೆಯಾಗಲಿಲ್ಲ
ಗಡಿಯಾಚೆಗಿನ ಮಂಜಿನ ಹನಿ
ವಸಂತನ ನೆರಳಲಿ ಬೆರೆಯಲಿಲ್ಲ
ಶಿವರಾಜ ಅರಳಿ ಹುಟ್ಟಿದ್ದು ಹಾವೇರಿ ಜಿಲ್ಲೆಯ ಮೇಲ್ಮರಿ ಗ್ರಾಮದಲ್ಲಿ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಪ್ರವೃತ್ತಿಯಲ್ಲಿ ಸಾಹಿತ್ಯದ ವಿದ್ಯಾರ್ಥಿ.
ಬೆವರ ಹನಿಗಳು(೨೦೨೩), ಬರಡಾದ ಬಾನಂಗಳ(೨೦೨೪), ಕಣ್ಣ ಬಾನಲ್ಲಿ ಬೆಂಕಿಯ ಚಿತ್ರ(೨೦೨೫) ಹಾಗೂ ಪೋಲಿ ಚಿಟ್ಟೆಯ ಅಸಲಿ ಕಥೆ(೨೦೨೬) ಎಂಬ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಇವರಿಗೆ ಬೆಟಗೇರಿ ಕೃಷ್ಣಶರ್ಮ ಕಾವ್ಯ ಬಹುಮಾನ, ಡಿ ಎಸ್. ಕಕಿ೯ ಯುವ ಕಾವ್ಯ ಪ್ರಶಸ್ತಿ, ಆಜೂರ ಪುಸ್ತಕ ಪ್ರಶಸ್ತಿ ಹಾಗೂ ಶಿಭಾ ಕಾವ್ಯ ಪುರಸ್ಕಾರ ಲಭಿಸಿದೆ.
ಸದ್ಯ ಇವರು ಕನಾ೯ಟಕ ಸಾಹಿತ್ಯ ಅಕಾಡೆಮಿಯ ಚಕೋರದ ಬೆಳಗಾವಿ ಜಿಲ್ಲಾ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


