Advertisement
ಮಹಾ ಕುಂಭ 2025: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಮಹಾ ಕುಂಭ 2025: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಸಾವಿರ ಸಾವಿರ ಸಂಖ್ಯೆಯಲ್ಲಿ ಮಹಾ ಕುಂಭಕ್ಕಾಗಿ ತಮ್ಮ ತಮ್ಮ ಗುರುಗಳ ಆಣತಿಯಂತೆ ಎಲ್ಲಿಂದೆಲ್ಲಾ ಹೊರಟು ಬರೋ ನಾಗಾಗಳು. ಕೆಲವರು ಮೌನಿ, ಕೆಲವರು ವಾಚಾಳಿಗಳು. ಕೆಲವರು ವಿಚಿತ್ರ ನಡವಳಿಕೆಯವರು. ಕೆಲವರು ಕಲ್ಲಂತೆ ಕಠಿಣ ಕೆಲವರು ಸಾಧು, ಸೌಮ್ಯ. ಇಂತಿಪ್ಪ ನಾಗಗಳ ದರುಶನಕ್ಕಾಗಿ ಹೊರಟಿತ್ತು ನಮ್ಮ ದಂಡು. ನಾಗಾಗಳೆಂಬ ವಿಚಿತ್ರ ಸನ್ಯಾಸಿಗಳು ಬೇರೆ ಬೇರೆ ಅಖಾಡಗಳಿಗೆ ಸೇರಿದವರು. ಪೂರ್ಣ ಸಾಧನೆ ಮಾಡಿದವರೆಷ್ಟೋ, ಕೇವಲ ತಾಂತ್ರಿಕ ಸಾಧನೆ ಮಾಡಿದವರೆಷ್ಟೋ. ಯಾವ ಆಲೋಚನೆಗೂ ಕೊನೆ ಮೊದಲಿಲ್ಲ. ಎಲ್ಲಿಂದ ಬಂದವರೋ ಎಲ್ಲಿಗೆ ಹೋಗುವವರೋ.
ಶ್ರೀಧರ್‌ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಮಹಾ ಕುಂಭಕ್ಕೆ ಭೇಟಿ ನೀದಿದ್ದರ ಕುರಿತ ಬರಹ ಇಲ್ಲಿದೆ

ಜನವರಿ ತಿಂಗಳ ಮಾಘ ಮಾಸದ ಚಳಿಗೆ ನಿಧಾನಕ್ಕೆ ಗರಿಗೆದರಿದ ಕುಂಭ ಕಾಣುವ ಕನಸು ರೆಕ್ಕೆ ಬಿಚ್ಚಿ ಹಕ್ಕಿಯಾಗಿತ್ತು. ವಿಮಾನದ ದರವೂ ಆಕಾಶ ಮಾರ್ಗವಾಗಿತ್ತು. ಆದರೂ ತಿಣುಕಾಡಿ ಲಕ್ನೋ ವಿಮಾನದ ಟಿಕೀಟನ್ನು 9 ಸಾವಿರದೊಳಗೆ ಪಡೆಯಲು ಯಶಸ್ವಿಯಾದೆ. ಒಂದೇ ಕಲ್ಲಿಗೆ ಹಲವು ಹಕ್ಕಿ ಹೊಡೆಯುವ ಹಲವರ ಕನಸನ್ನು ಬದಿಗಿಟ್ಟು ಕೇವಲ ಕುಂಭ ಕಾಣುವ ಯೋಜನೆ ಯೋಚನೆಯೊಂದಿಗೆ ಹೊರಟು ನಿಂತೆ. ಒಂದೆರಡು ದಿನಗಳಲ್ಲಿ ವಿಮಾನ ದರವೂ ಗಗನಮುಖಿಯಾದುದು ಸೋಜಿಗ. ಪ್ರಯಾಗಕ್ಕೆ ತಲುಪಿದ್ದೆ ಒಂದು ಸೋಜಿಗ. ಲಕ್ನೋದಿಂದ ರೈಲು ಹಿಡಿದು ಪ್ರಯಾಗ್‌ ರಾಜ್‌ ಕಡೆಗೆ ಹೊರಟೆ.

ಒಂದೇ ಚೀಲದಲ್ಲಿ ಎಲ್ಲವನ್ನು ಹಿಡಿಸುವಂತೆ ತುಂಬಿಕೊಂಡು ಹೊರಟೆ. ನನ್ನ ಜೀವಮಾನದ ಅತ್ಯಂತ ಕಡಿಮೆ ಅವಧಿಯ ಪಯಣ. ಹೊರಟರೆ 10 ದಿನಕ್ಕೆ ಕಡಿಮೆ ಇಲ್ಲದಂತೆ ಹೋಗುವ ನಾನು ಇದೊಂದು ಹೃಸ್ವ ಪ್ರವಾಸ. ನೀವೂ ಬ್ಯಾಗಿಲ್ಲದೇ ಉತ್ತರ ಪ್ರದೇಶಕ್ಕೆ ಹೋಗಿಬರಬಹುದು ಬನ್ನಿ. ಹೆಸರೇ ಎಷ್ಟೊಂದು ಆಕರ್ಷಕ ಹೆಸರು ಪ್ರಯಾಗ್‌ ರಾಜ್.

 
ಇಲ್ಲೇ
ಏಕೆ ಕುಂಭ

ಉಜ್ಜಯಿನಿ, ನಾಸಿಕ್‌, ಪ್ರಯಾಗ, ಹರಿದ್ವಾರದ ನಾಲ್ಕು ಕಡೆ ಸಮುದ್ರ ಮಥನ ಕಾಲದಲ್ಲಿ ಅಮೃತ ಬಿಂದುಗಳು ಬಿದ್ದ ಜಾಗಗಳಂತೆ. ಆ ಪ್ರಯುಕ್ತ ಇಲ್ಲಿ ಕುಂಭ ಆಚರಿಸಲಾಗುತ್ತದೆ!

ಊರ್ಮಿಳೆಯ ಕನಸು

ಹಲವು ವರ್ಷಗಳಿಂದ ಕುಂಭ ಮೇಳಕ್ಕೆ ಸಾಕ್ಷಿಯಾಗಬೇಕೆಂದು ಬಯಕೆಯೊಂದು ಕುಡಿಯೊಡೆದಿತ್ತು. ಹಲವು ಕಾರಣಗಳಿಂದ ನನಸಾಗದೇ ಹಾಗೇ ಉಳಿದಿತ್ತು. ಇನ್ನೆಷ್ಟು ವರ್ಷಗಳು ಬೇಕೆಂದುಕೊಂಡಿರುವಾಗಲೇ  ಮಹಾಕುಂಭವೆಂದು ಘೋಷಣೆಯಾಗಿ ಅಚ್ಚರಿಗೊಳಿಸಿತು. ಜೊತೆಗೆ ಗೆಳೆಯನ ಒತ್ತಾಯಕ್ಕೆ ಮಣಿದು ಪ್ರಯಾಗ್‌ ರಾಜ್‌ಗೆ ಹೊರಟು ನಿಂತೆ. ಊರ್ಮಿಳೆಯ ಕನಸೊಂದು ಅಪರೂಪಕ್ಕೆ ನನಸಾಯಿತು.

ಎಲ್ಲಿಂದ ಬಂದವರೋ

ಸಾವಿರ ಸಾವಿರ ಸಂಖ್ಯೆಯಲ್ಲಿ ಮಹಾ ಕುಂಭಕ್ಕಾಗಿ ತಮ್ಮ ತಮ್ಮ ಗುರುಗಳ ಆಣತಿಯಂತೆ ಎಲ್ಲಿಂದೆಲ್ಲಾ ಹೊರಟು ಬರೋ ನಾಗಾಗಳು.  ಕೆಲವರು ಮೌನಿ, ಕೆಲವರು ವಾಚಾಳಿಗಳು. ಕೆಲವರು ವಿಚಿತ್ರ ನಡವಳಿಕೆಯವರು. ಕೆಲವರು ಕಲ್ಲಂತೆ ಕಠಿಣ ಕೆಲವರು ಸಾಧು, ಸೌಮ್ಯ. ಇಂತಿಪ್ಪ ನಾಗಗಳ ದರುಶನಕ್ಕಾಗಿ ಹೊರಟಿತ್ತು ನಮ್ಮ ದಂಡು.  ನಾಗಾಗಳೆಂಬ ವಿಚಿತ್ರ ಸನ್ಯಾಸಿಗಳು ಬೇರೆ ಬೇರೆ ಅಖಾಡಗಳಿಗೆ ಸೇರಿದವರು. ಪೂರ್ಣ ಸಾಧನೆ ಮಾಡಿದವರೆಷ್ಟೋ, ಕೇವಲ ತಾಂತ್ರಿಕ ಸಾಧನೆ ಮಾಡಿದವರೆಷ್ಟೋ. ಯಾವ ಆಲೋಚನೆಗೂ ಕೊನೆ ಮೊದಲಿಲ್ಲ. ಎಲ್ಲಿಂದ ಬಂದವರೋ ಎಲ್ಲಿಗೆ ಹೋಗುವವರೋ. ಕೆಲವರ ಹಾವ ಭಾವವಂತೋ ಭಯ ಪಡಿಸುವಂತಹದ್ದು.  ಕೆಲವರು ಹೊಡೆಯಲೇ ಬರುತ್ತಾರೆ. ಒಬ್ಬನಂತೂ ಮೈ ಮೇಲೆ ದೆವ್ವ ಬಂದಂತೆ ತನ್ನ ದಂಡದಿಂದ ಒಂದೇಟು ಪಕ್ಕದವನಿಗೇ ಕೊಟ್ಟೇ ಬಿಟ್ಟ. ತಪ್ಪಿಸಿಕೊಂಡ ನಾನೇ ಧನ್ಯ!

ಇವರೇಕೆ ಹೀಗೆ?

ಅಲ್ಲೆಲ್ಲೋ ಕಾಡ ಮೂಲೆಯೋ, ಹಿಮಾಲಯದ ತಪ್ಪಲಿನಿಂದ ತ್ರಿವೇಣಿ ಸಂಗಮಕ್ಕೆ ನಲವತ್ತ ನಾಲ್ಕು ದಿನಕ್ಕಾಗಿ ಜಾತಕ ಪಕ್ಷಿಯಂತೆ ಕಾದು ಬರುವರೋ? ಎಲ್ಲವೂ ನಿಗೂಢ, ಅನೂಹ್ಯ. ಅಪರೂಪ, ಎಲ್ಲೂ ಮಾತನಾಡದೇ ಲುಪ್ತವಾಗಿ ಬದುಕುವ ಇವರುಗಳು ಕುಂಭದಲ್ಲಿ ಪ್ರಕಟಗೊಳ್ಳುವರು.

ಹಲವು ವಿದೇಶಿಯರ ನಂಬಿಕೆ, ಶೃದ್ಧೆಯನ್ನು ಬುಡಮೇಲು ಮಾಡುವ ಏಕೈಕ ಉತ್ಸವವಿದ್ದರೆ ಅದು ಕುಂಭಮೇಳ. “ನನ್ನ ಅಸ್ತಿತ್ವ, ವಾಸ್ತವ, ನಂಬಿಕೆಗಳ ಮೂಲವನ್ನೇ ಅಲ್ಲಾಡಿಸಿದ್ದು ೧೯೯೦ ರ ಕುಂಭಮೇಳ” ಎನ್ನುತ್ತಾರೆ ಸರ್ಫಿಂಗ್‌ ಸ್ವಾಮಿ ಜ್ಯಾಕ್‌ ಹೆಬ್ನರ್‌. ಹೀಗೆ ಅನೇಕರ ನಂಬಿಕೆಗಳನ್ನು ಬುಡ ಮೇಲು ಮಾಡುವ ಕುಂಭಮೇಳ ಜಾಗತಿಕವಾಗಿ ಯಾವುದೇ ಆಹ್ವಾನ ಪತ್ರಿಕೆ ಇಲ್ಲದೆ ನಡೆಯುವ ಏಕೈಕ ಮಹೋತ್ಸವ. ಈ ಉತ್ಸವದ ಕೇಂದ್ರ ಬಿಂದುವೇ ಅಖಾಡಗಳು ಮತ್ತು ನಾಗಾ ಸಾಧುಗಳು ಮತ್ತು ಶಾಹಿ ಸ್ನಾನ.

ನಗ್ನ ನಾಗಾ ಸಾಧುಗಳು

ಶವ ಸಾಧನೆ, ಶಿವ ಸಾಧನೆ, ಭಂಗಿ ಸಾಧನೆ, ತ್ರಿವಿಧ ಸಾಧನೆಗಳು ಸತತವಾದ ಶಾಂತಿಗಾಗಿ ಏಕಾಗ್ರತೆಗಾಗಿ ಅಷ್ಟೇ ಹೊರತು ಯಾವುದೇ ಚಟಕ್ಕಾಗಿ ಅಥವಾ ತಮ್ಮ ಆತ್ಮ ಸಂತೋಷಕ್ಕಾಗಿ ಅಲ್ಲ. ಆತ್ಮ ಉದ್ಧಾರಕ್ಕಾಗಿ ಭಂಗಿ ಸೇದುತ್ತಾರೆ.

ನಾಗಾ ಮತ್ತು ಅಘೋರಿಗಳಲ್ಲಿ ಅಂತಹ ವ್ಯತ್ಯಾಸವಿಲ್ಲ ಎನ್ನುತ್ತಾರೆ ಕರ್ನಾಟಕದ ಡಾ. ಅಫೋರಿ ಬಾಬ. ಡಾಕ್ಟರ್‌ ಆಗಿಯೂ ಅಘೋರಿಯಾಗಿ ಸಾಧನೆ ಮಾಡಿದವರು. ಅಘೋರಿಯೊಬ್ಬರನ್ನು ಮದುವೆಯಾಗಿದ್ದಾರೆ. ಸಾಧನೆಯಲ್ಲಿ ತೊಡಗಿದ್ದಾರೆ. ಹೀಗೆ ಮದುವೆಯಾದ ಅನೇಕರು ಸಿಗುತ್ತಾರೆ. ಭೈರವನ ಆರಾಧಕರಾದ ಇವರು ಘೋರ ಪಂತಕ್ಕೆ ಸೇರಿದವರಾಗಿದ್ದಾರೆ. ಅಘೋರಿಗಳು ಮತ್ತು ನಾಗಾ ಸಾಧುಗಳ ಆಚರಣೆಗಳು ಒಂದೇ ತೆರನಾಗಿರುತ್ತದೆ ಎನ್ನುತ್ತಾರೆ ಕರ್ನಾಟಕದ ಮಹಿಳಾ ಅಘೋರಿಯೊಬ್ಬರು. ಮಾತಿನ ಮಲ್ಲರು, ಮಹಾ ಮೌನಿಗಳು, ವಿಪರೀತ ಕ್ರೋಧಿಗಳು, ಬಡಿಗೆ ಹಿಡಿದು ಮಲ್ಲರಂತೆ ನಿಂತವರು. Fair and lovely ಜಾಹಿರಾತಿಗೆ ಮುಖಕೊಟ್ಟು ಕುಳಿತವರಂತೆ ಕುಳಿತವರು, ತರ ತರದ ಸಾಧುಗಳು ಇಲ್ಲಿ ಕಾಣ ಸಿಗುತ್ತಾರೆ. ಎಲ್ಲಿಂದ ಬಂದು ಎಲ್ಲಿಗೆ ಹೊರಟಿದ್ದೇವೆ ಎಂಬುದೆಲ್ಲವೂ ಇಲ್ಲಿ ಗೋಜಲು. ಅಷ್ಟೊಂದು ಅಖಾಡಗಳು! ಅಷ್ಟೊಂದು ಸನ್ಯಾಸಿಗಳು! ಹೆಚ್ಚಿನ ಎಲ್ಲ ಸನ್ಯಾಸಿಗಳು ಮೊದಲ ಶಾಹಿ ಸ್ನಾನ ಅಂದರೆ ಮಕರ ಸಂಕ್ರಾತಿಯಂದು ತಪ್ಪದೇ ಇಲ್ಲಿ ಹಾಜರಾಗುತ್ತಾರೆ. ಅನೇಕ ಮಹಿಳಾ ಸಾಧಕಿಯರನ್ನೂ ಕಂಡೆ. ನಗ್ನ ನಾಗ ಸಾಧಕಿಯರಿಲ್ಲ. ಅವರು ಬಿಳಿ ಉಡುಪು ಧರಿಸಿರುತ್ತಾರೆ. ಸಾಧನೆಯ ಸಮಯದಲ್ಲಿ ನಿಂತು ನೋಡುವವರನ್ನು ಹಾಗೂ ಫೋಟೋಗ್ರಾಫರ್‌ನ್ನು ಓಡಿಸುತ್ತಾರೆ.

ಇಲ್ಲಿರುವ 20 ಸೆಕ್ಟರುಗಳಲ್ಲಿ ಅಂಡಲೆದು ಬರಲು ಏನಿಲ್ಲವೆಂದರೂ ಐದು ದಿನಗಳು ಬೇಕು. ಎಲ್ಲಿಂದ ಬಂದು ಎಲ್ಲಿಗೆ ಹೊರಟಿದ್ದೇವೆ ಎಂಬುದೆಲ್ಲವೂ ಇಲ್ಲಿ ಗೋಜಲು ಗೋಜಲು. ಅಷ್ಟೊಂದು ಅಖಾಡಗಳು! ಅಷ್ಟೊಂದು ಸನ್ಯಾಸಿಗಳು. ಹೆಚ್ಚಿನ ಎಲ್ಲಾ ಸನ್ಯಾಸಿಗಳು ಮೊದಲ ಶಾಹಿ ಸ್ನಾನಕ್ಕೆ ಹಾಜರಾಗುತ್ತಾರೆ. ತೆರೆದ ಜೀಪುಗಳ ಮೆರವಣಿಗೆಯಲ್ಲಿ ಹಾಜರಾಗುತ್ತಾರೆ. ಕೆಲವರು ಹೊರಗಿನಿಂದ ಶೋಕಿವಾಲರಂತೆ ಕಂಡರೂ ಅವರ ಕಠೋರ ತಪಸ್ಸು, ಶಕ್ತಿ, ಭೀಕರ ಚಳಿಗೂ ಬೆದರದೇ ಬದುಕುವುದು ಸಾಮಾನ್ಯ ಸಂಗತಿಗಳಲ್ಲ!  ಹಿಂದೂ ಧರ್ಮಕ್ಕೆ ಸಂಬಂಧಿಸಿದ ದೊಡ್ಡ ದೊಡ್ಡ ತೀರ್ಮಾನಗಳು ಅವರೇ ತೆಗೆದುಕೊಳ್ಳುತ್ತಾರೆ. ಅಲೌಕಿಕವಾದ ಪ್ರಪಂಚದಲ್ಲಿದ್ದಂತೆ ಕಂಡರೂ ಪ್ರಚಂಡವಾದ ತೀರ್ಮಾನಗಳಿಂದ ಬೆಚ್ಚಿ ಬೀಳಿಸಿದ್ದೂ ಇದೆ.

ಇರುವೆ ಗೂಡಿಗೆ ಔಷಧಿ ಹಾಕಿದಂತೆ ತುಪು ತುಪನೆ ಹೊರಬರುವ ಸಹಸ್ರ ಸಹಸ್ರ ಜನಸ್ತೋಮ. ತ್ರಿವೇಣಿ ಸಂಗಮಕ್ಕೆ ನುಗ್ಗಿ ಮಿಂದೇಳುವ  ಭಕ್ತ ಗಡಣ. ಸಿಕ್ಕ ಸಿಕ್ಕ ಸಂದಿಗಳಲ್ಲಿ ಬಿಡಾರ ಹೂಡಿ ಅಡುಗೆ ಮಾಡಿಕೊಂಡು ಪ್ರಸಾದ ಸೇವಿಸಿ ಬದುಕುವ ಸ್ಥಳೀಯ ಜನರೊಂದು ದಕ್ಷಿಣ ಭಾರತೀಯರಿಗೊಂದು ಅಚ್ಚರಿ. ಎಲ್ಲಿ ನೋಡಿದರೂ ಜನವೋ ಜನ. ಯಾವ ಅಖಾಡದ ಪ್ರಸಾದ ಹೊರಬರುತ್ತಿದ್ದಂತೆ ಇರುವೆ ಮುತ್ತಿದಂತೆ ಮುತ್ತಿ ಕ್ಷಣ ಮಾತ್ರದಲಿ ಮಂಗ ಮಾಯ! ಹೆಚ್ಚಿನ ಎಲ್ಲಾ ಅಖಾಡಗಳಲ್ಲೂ ಪ್ರಸಾದ ವಿತರಿಸುತ್ತಿದ್ದರು. ಹಂಚುವವರ ತಾಳ್ಮೆ ಅಪಾರ. ನುಗ್ಗುವ ಜನರನ್ನು ಹತೋಟಿಗೆ ತಂದು ಪ್ರಸಾದ ವಿತರಿಸುವರು.

ಸಾಧು ಕುಟೀರಗಳಲ್ಲಿ ಪೂಜೆ, ಹೊಗೆ ಉಗುಳುವ ಹವನ ಇತ್ಯಾದಿ. ಹಾಗಾಗಿ ಗಾಳಿಯಲ್ಲಿ ಸದಾ ಹೊಗೆ ತುಂಬಿರುತ್ತಿತ್ತು. ಎಂತಹ ಚಳಿಗೂ ಅಳುಕದೇ ನಗ್ನವಾಗಿಯೇ ಇರುವ ಅಚಲತೆ ಒಂದು ಮಹಾ ಅಚ್ಚರಿ. ಸರ್ವವನ್ನೂ ತ್ಯಜಿಸುವುದು ಹೇಗೆ? ತ್ಯಜಿಸಬೇಕು ಎಂಬುದೂ ಒಂದು ಆಸೆಯೇ ಅಲ್ಲವೇ? ಇಂತಹ ನೂರಾರು ಗೊಂದಲಕ್ಕೊಂದು ತೆರೆ ಎಳೆಯಲೇ ಬೇಕು ಅಂದುಕೊಂಡಿದ್ದಷ್ಟೇ. ಆದರೆ ನೆಲ ಮಟ್ಟದಲ್ಲಿ ನೆಡದದ್ದೇ ಬೇರೆ.

ಇವರು ನಗ್ನವಾಗಿಯೇ ಯಾಕಿರುತ್ತಾರೆ ಎನ್ನುವ ಕಾಡುವ ಪ್ರಶ್ನೆ ನನ್ನೊಳಗೆ ಉಳಿದುಕೊಂಡಿತು. ಮುಂದಿನ ಕುಂಭದಲ್ಲಾದರೂ ಕೇಳಬೇಕು ಅಂದುಕೊಂಡು ಅಲ್ಲಿಂದ ಹೊರಟೆ!

(ಫೋಟೋಗಳು: ಲೇಖಕರವು)

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ