ಬೇಟೆ ಕಂಡೊಡನೆ, ಪುಳಕ್ಕನೆ ನೀರಿಗೆ ಧುಮುಕಿ, ಮೀನನ್ನು ಕಚ್ಚಿಕೊಂಡು ಪುಟಿಯುತ್ತದೆ; ನೀರಿನ ಅಡಿಯಲ್ಲಿ ರೆಕ್ಕೆಗಳನ್ನು ತೆರೆದುಕೊಂಡು, ಕಣ್ಣುಗಳನ್ನು ತೆರೆದುಕೊಂಡೇ ಬೇಟೆಯನ್ನು ಹಿಡಿಯುತ್ತವೆ. ಬೇಟೆಯನ್ನು ಹಿಡಿದು ನೇರವಾಗಿ ಕುಳಿತಲ್ಲಿಗೇ ಬಂದು ಮೀನಿನ ಬಾಲವನ್ನು ಹಿಡಿದು, ಅದರ ತಲೆಯನ್ನು ಮರಕ್ಕೆ ಹತ್ತಾರು ಬಾರಿ ಹೊಡೆದು ಕೊಲ್ಲುತ್ತದೆ. ನಂತರ ಮೀನಿನ ತಲೆ ಮುಂದಾಗಿ ನುಂಗುತ್ತದೆ! ಅಲ್ಲದೆ, ಕಪ್ಪೆ, ಅದರ ಗೊದಮೊಟ್ಟೆ, ಇತರ ಜಲಚರ ಕೀಟಗಳಾದ ಡ್ರಾಗನ್ಫ್ಲೈ ಲಾರ್ವಾಗಳು ಮತ್ತು ನೀರಿನ ಜೀರುಂಡೆಗಳು ಮತ್ತು ಚಳಿಗಾಲದಲ್ಲಿ ಏಡಿಗಳನ್ನು ಸಹ ಹಿಡಿದು ತಿನ್ನುತ್ತದೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ನೀಲಿ ಮಿಂಚುಳ್ಳಿ”ಯ ಕುರಿತ ಬರಹ ಇಲ್ಲಿದೆ
ಮಿಂಚಿನಂತೆ ಹೊಳೆಯುವ ಅಂದವಾದ ಬಣ್ಣದ ಮತ್ತು ಮಿಂಚಿನ ವೇಗವುಳ್ಳ ಹಕ್ಕಿಗಳು ಮಿಂಚುಳ್ಳಿಗಳು. ಭೂಮಿ-ಆಕಾಶ-ನೀರು, ಮೂರೂ ವ್ಯಾಪ್ತಿಗಳಲ್ಲಿಯೂ ಲೀಲಾಜಾಲವಾಗಿ ಸಂಚರಿಸಬಲ್ಲ ಹಕ್ಕಿಗಳು. ಇವು ಕೊರಾಸಿಫಾರ್ಮಿಸ್ ಕುಟುಂಬಕ್ಕೆ ಸೇರಿವೆ. ನಾವಿಂದು ನೀಲಿ ಮಿಂಚುಳ್ಳಿಯ ಬಗ್ಗೆ ತಿಳಿದುಕೊಳ್ಳೋಣ. ಇದರ ವೈಜ್ಞಾನಿಕ ಹೆಸರು, Alcedo atthis ಮತ್ತು ಇಂಗ್ಲೀಷಿನಲ್ಲಿ Common Kingfisher ಎಂದು ಕರೆಯುತ್ತಾರೆ.
ನೀಲಿ ಮಿಂಚುಳ್ಳಿ 18 ಸೆಂಮೀ. ಗಾತ್ರದ ಮತ್ತು ಗುಬ್ಬಚ್ಚಿಗಿಂತ ದೊಡ್ಡದಾದ ಹಕ್ಕಿ. ದೇಹದ ಗಾತ್ರಕ್ಕೆ ದೊಡ್ಡದೆನಿಸುವ ಚಟ್ಟೆತಲೆ, ಉದ್ದವಾದ, ದಪ್ಪನಾದ, ಚೂಪಾದ ಕೊಕ್ಕು, ಅವುಗಳ ಮುಖಕ್ಕೆ ಭೂಷಣಪ್ರಾಯವಾಗಿ ಎದ್ದು ಕಾಣುತ್ತದೆ; ನೀಲಿ-ಹಸಿರು ತಲೆ, ಕೆನ್ನೆ, ಮತ್ತು ಬೆನ್ನು; ಇದರೊಂದಿಗೆ ಬಿಳಿಗಲ್ಲ, ಗಂಟಲು ಮತ್ತು ಕೆನ್ನೆ ಮಚ್ಚೆಗಳು. ಕೆಂಪು-ಕಂದು ಕೆಳಮೈ; ಕುಳ್ಳಗಿನ ಕಾಲುಗಳು ಮತ್ತು ಮಂದವಾದ ಮೊಂಡುಬಾಲ. ಈ ಮಿಂಚುಳ್ಳಿಯು ನಿಧಾನವಾಗಿ ಹರಿಯುವ ತೊರೆಗಳು, ನದಿಗಳು ಮತ್ತು ಸರೋವರಗಳ ದಡಗಳಲ್ಲಿ, ಸೊಂಪಾಗಿ ಬೆಳೆದ ಪೊದೆಗಳ ನಡುವೆ ವಾಸಿಸುತ್ತದೆ. ಎಲ್ಲೆಲ್ಲಿ ನೀರಿನ ಹರಿವು ಇರುವುದೋ ಅಲ್ಲಿ, ಮಾನವ ಆವಾಸಸ್ಥಾನಗಳಿಗೆ ಹೊಂದಿಕೊಂಡು, ಮುಖ್ಯವಾಗಿ ಅರಣ್ಯ ಪ್ರದೇಶಗಳ ಬಳಿ, ಸಾಗುವಳಿಮಾಡಿದ ಮತ್ತು ವ್ಯವಸಾಯದ ಪ್ರಾಂತಗಳಲ್ಲಿಯೂ ಹಾಗೂ ನಗರ ಮತ್ತು ಪಟ್ಟಣಗಳ ಉದ್ಯಾನವನಗಳು ಮತ್ತು ತೋಟಗಳಲ್ಲಿಯೂ ನಾವು ನೀಲಿ ಮಿಂಚುಳ್ಳಿಗಳನ್ನು ಕಾಣಬಹುದಾಗಿದೆ. ನೀಲಿ ಮಿಂಚುಳ್ಳಿಯ ಹಾರಾಟವು ಬಿಟ್ಟ ಬಾಣದಂತೆ ವೇಗವಾಗಿ, ನೇರವಾಗಿರುತ್ತದೆ. ಚಿಕ್ಕದಾದ, ದುಂಡಗಿನ ರೆಕ್ಕೆಗಳನ್ನು ವೇಗವಾಗಿ ಬಡಿಯುತ್ತಾ ಹಾರುತ್ತದೆ. ಅಲ್ಲದೆ ನೀರಿನ ಮೇಲೆ ಹಾರುವಾಗ, ಕೆಳ ಮಟ್ಟದಲ್ಲಿ, ನೀರಿಗೆ ಲಂಬವಾಗಿ ಹಾರುತ್ತದೆ. ಕುಳಿತಲ್ಲಿಂದ ದೂರ ಹಾರಿಹೋಗುವ ಹಕ್ಕಿಯ ಬೆನ್ನಿನ ಕೆಳಗೆ ವಿದ್ಯುತ್-ನೀಲಿ ಬಣ್ಣದ ಮಿಂಚು ತೋರುತ್ತದೆ! ನೀಲಿ ಮಿಂಚುಳ್ಳಿಯು ನದೀತೀರದಲ್ಲಿ, ನೀರಿನ ಮೇಲೆ 3-7 ಅಡಿ ಎತ್ತರದ ಬಾಗಿರುವ ಕೊಂಬೆಯ ಮೇಲೋ, ಜೊಂಡಿನ ಮೇಲೋ ಕುಳಿತು ನೀರಿನಲ್ಲಿ ಹರಿದಾಡುವ ಮೀನುಗಳಿಗೆ ಹೊಂಚುಹಾಕುತ್ತದೆ. ಆಗಾಗ ಕುಳಿತಲ್ಲೇ ಕುಪ್ಪಳಿಸಿ, ಮೋಟುಬಾಲವನ್ನು ಕುಣಿಸುತ್ತದೆ. ಇದರ ಜೊತೆಗೆ ಅವು ನೀರಿನಲ್ಲಿ ಬೇಟೆಯಾಡುವಾಗ ನೀರಿನ ವಕ್ರೀಭವನವನ್ನು ಸಮತೂಗಿಸುವ ಮತ್ತು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಅವು ನೀರಿನ ಒಳಗಿನ ಆಳವನ್ನು ನಿಖರವಾಗಿ ತೀರ್ಮಾನಿಸುವ ಸಾಮರ್ಥ್ಯವನ್ನೂ ಹೊಂದಿವೆ.
ಬೇಟೆ ಕಂಡೊಡನೆ, ಪುಳಕ್ಕನೆ ನೀರಿಗೆ ಧುಮುಕಿ, ಮೀನನ್ನು ಕಚ್ಚಿಕೊಂಡು ಪುಟಿಯುತ್ತದೆ; ನೀರಿನ ಅಡಿಯಲ್ಲಿ ರೆಕ್ಕೆಗಳನ್ನು ತೆರೆದುಕೊಂಡು, ಕಣ್ಣುಗಳನ್ನು ತೆರೆದುಕೊಂಡೇ ಬೇಟೆಯನ್ನು ಹಿಡಿಯುತ್ತವೆ. ಬೇಟೆಯನ್ನು ಹಿಡಿದು ನೇರವಾಗಿ ಕುಳಿತಲ್ಲಿಗೇ ಬಂದು ಮೀನಿನ ಬಾಲವನ್ನು ಹಿಡಿದು, ಅದರ ತಲೆಯನ್ನು ಮರಕ್ಕೆ ಹತ್ತಾರು ಬಾರಿ ಹೊಡೆದು ಕೊಲ್ಲುತ್ತದೆ. ನಂತರ ಮೀನಿನ ತಲೆ ಮುಂದಾಗಿ ನುಂಗುತ್ತದೆ! ಅಲ್ಲದೆ, ಕಪ್ಪೆ, ಅದರ ಗೊದಮೊಟ್ಟೆ, ಇತರ ಜಲಚರ ಕೀಟಗಳಾದ ಡ್ರಾಗನ್ಫ್ಲೈ ಲಾರ್ವಾಗಳು ಮತ್ತು ನೀರಿನ ಜೀರುಂಡೆಗಳು ಮತ್ತು ಚಳಿಗಾಲದಲ್ಲಿ ಏಡಿಗಳನ್ನು ಸಹ ಹಿಡಿದು ತಿನ್ನುತ್ತದೆ. ಹಾರಾಡುತ್ತಿರುವಾಗ ಚಿಕ್ಕದಾದ, ತೀಕ್ಷ್ಣ ಶಿಳ್ಳೆ ಚೀ..ಚೀ..ಚೀ.. ಎಂಬ ಕರೆ!

ನೀಲಿ ಮಿಂಚುಳ್ಳಿಗಳು ಜೋಡಿಯಾಗಿ ನೀರಿನ ಬಳಿ, ನದಿಯ ದಂಡೆಯಲ್ಲಿ, ಗದ್ದೆಯ ಬದುಗಳಲ್ಲಿ ಗೂಡುಕಟ್ಟುತ್ತವೆ. ಕೊಕ್ಕಿನಿಂದ ಕೊರೆದು, ಕಾಲುಗಳಿಂದ ಮಣ್ಣನ್ನು ಬಗೆದು ತೆಗೆಯುತ್ತವೆ. ಸಾಮಾನ್ಯವಾಗಿ ಎರಡರಿಂದ ನಾಲ್ಕು ಅಡಿ ಉದ್ದದ ಸುರಂಗದ ಒಳಗೆ ದೊಡ್ಡ ಕೋಣೆ ಮತ್ತು ಅದರೊಳಗೆ ತಾನು ತಿಂದುಳಿಸಿದ ಮೀನು ಮೂಳೆಗಳ ಹಾಸಿಗೆಯನ್ನು ಮಾಡುತ್ತವೆ. ನೀಲಿ ಮಿಂಚುಳ್ಳಿಯು ಸಾಮಾನ್ಯವಾಗಿ ಎರಡರಿಂದ ಹತ್ತು ಅಚ್ಚ ಬಿಳಿ ಮೊಟ್ಟೆಗಳನ್ನು ಇಡುತ್ತದೆ. ಗಂಡು-ಹೆಣ್ಣು ಎರಡೂ ಹಗಲಿನಲ್ಲಿ ಕಾವುಕೊಡುತ್ತವೆ, ಆದರೆ ರಾತ್ರಿಯಲ್ಲಿ ಹೆಣ್ಣು ಮಾತ್ರ ಕಾವುಕೊಡುತ್ತದೆ. ಮೊಟ್ಟೆಗಳು 19-20 ದಿನಗಳಲ್ಲಿ ಹೊರಬರುತ್ತವೆ. ಇಡೀ ಗೂಡು ದುರ್ವಾಸನೆಯಿಂದ ಕೂಡಿರುತ್ತದೆ. ಎಲ್ಲ ಪಕ್ಷಿಗಳಂತೆ ನೀಲಿ ಮಿಂಚುಳ್ಳಿಗಳ ಸಂಖ್ಯೆಯೂ ಕಡಿಮೆಯಾಗುತ್ತಿರುವುದನ್ನು ನಾವು ಕಾಣುತ್ತೇವೆ. ಅದರ ಅಳಿವಿಗೆ ಮುಖ್ಯ ಕಾರಣವೆಂದರೆ, ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಂದ ನಿರಂತರವಾಗಿ ನಡೆಯುತ್ತಿರುವ ನದಿಗಳ ಮಾಲಿನ್ಯ. ಇದಲ್ಲದೆ, ಬೆಕ್ಕುಗಳು, ಇಲಿಗಳು, ವಾಹನಗಳು ಮತ್ತು ಕಿಟಕಿಗಳಿಗೆ ಘರ್ಷಣೆ ಮತ್ತು ಭಾರೀ ಯಂತ್ರೋಪಕರಣಗಳೊಂದಿಗೆ ದಡದಲ್ಲಿ ನಡೆಯುವ ಕೆಲಸಗಳು ಸೇರಿದಂತೆ ಮಾನವನ ಅಡಚಣೆಗಳು, ಮತ್ತು ಅವುಗಳ ತ್ಯಾಜ್ಯ ನದಿಗಳನ್ನು ಸೇರುವುದರಿಂದ ಆ ವಿಷಪೂರಿತ ರಾಸಾಯನಿಕಗಳನ್ನು ಸೇವಿಸಿದ ಜಲಚರಗಳು ಅಪಾಯಕ್ಕೆ ಗುರಿಯಾಗುತ್ತವೆ ಮತ್ತು ಅದರ ಪರಿಣಾಮ ನೇರವಾಗಿ ಪಕ್ಷಿಗಳ ಮೇಲೆ ಆಗುತ್ತದೆ.

ಡಾ. ಎಸ್.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ. ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು


