ವಿಮರ್ಶೆ ಎನ್ನುವ ಪದ ಉಚ್ಚರಿಸಲು ಕಷ್ಟ, ಅದು ಶೋಷಣೆ ಮಾಡಿದವರ ನುಡಿಗಟ್ಟು ಮತ್ತು ಆ ಪದವನ್ನು ಉಪಯೋಗಿಸಿಯೇ ಹಲವರು ಶ್ರೀಮಂತರಾಗಿದ್ದಾರೆ ಎನ್ನುವ ಆರೋಪ ಹುಟ್ಟಿತು. ಆರೋಪ ಒಂದು ಚಳವಳಿ ರೂಪ ತಳೆದು ಕೋಟ್ಯಂತರ ಮಾನವ ಗಂಟೆಗಳು ನಷ್ಟವಾದಮೇಲೆ ಪ್ರಭುತ್ವ ಎಚ್ಚರಗೊಂಡಿತು. ವಿಮರ್ಶೆ ಎನ್ನುವ ಪದ ಶೋಷಣೆಯಿಂದ ಹುಟ್ಟಿದೆ ಅದಕ್ಕೆ ಪರ್ಯಾಯ ಪದ ಬೇಕು ಎಂದು ಇದಕ್ಕಾಗಿ ನೇಮಕಗೊಂಡಿದ್ದ ಸಮಿತಿ ತೀರ್ಮಾನ ಕೊಟ್ಟಿತು. ಅದರಿಂದ ಈ ವ್ಯಾಖ್ಯಾನ ಪದ ಹುಟ್ಟಿದ್ದು. ಈ ಪದ ವಿಮರ್ಶೆ ಎನ್ನುವ ಪದಕ್ಕಿಂತಲೂ ನೂರು ಪಟ್ಟು ಸೌಮ್ಯ, ಸಾವಿರ ಪಟ್ಟು ಸಭ್ಯ ಮತ್ತು ಕೋಟಿ ಪಟ್ಟು ಸಜ್ಜನಿಕೆಯ ದನಿ ಇರುವಂತಹುದು ಎಂದು ಬಿಂಬಿಸಲಾಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೮ನೇ ಬರಹ ನಿಮ್ಮ ಓದಿಗೆ
ಹಿಂದಿನ ಕಂತು ಹೀಗೇ ತಾನೇ ಮುಗಿದದ್ದು…
Magnacarta ಜಾರಿ ಆಗಿ ಕಾನೂನು ರೂಪ ಪಡೆಯಲು ಶಾಸನ ಸಭೆ ಮುಂದೆ ಹೋಗಬೇಕು ತಾನೇ. ಅಲ್ಲಿ ಇದು ಲಿಸ್ಟ್ ಆಯಿತು. ಒಂದು ಆರು ತಿಂಗಳು ಘನ ಘೋರ ಭಾಷಣಗಳು ಆದವು. ಕೆಲವು ತಿದ್ದುಪಡಿಗಳು ಮಂಡಿಸಲ್ಪಟ್ಟವು. ಅದರಲ್ಲಿ ಪ್ರಮುಖ ಅಂದರೆ ಸಾಹಿತ್ಯ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದನ್ನು ಪ್ರಜಾಪ್ರಭುತ್ವದ ತಳಹದಿಯಂತೆ ಮಾಡುವುದು. ಅಂದರೆ ಶ್ರೇಷ್ಠ ಯಾವುದು ಎಂದು ತೀರ್ಮಾನಿಸಲು voting ಇಡುವುದು. ವೋಟಿಂಗ್ ಇಟ್ಟಾಗ voting machine ಗಳನ್ನು hack ಮಾಡಬಹುದು, ಅದರಿಂದ ಬ್ಯಾಲೆಟ್ ಪೇಪರ್ ಇರಲಿ ಎಂದು ಕೆಲವು ಸದಸ್ಯರು ಅನುಮಾನ ಪಟ್ಟರು. ಕೊನೆಗೆ ತಾಡಿ ಪತ್ರ ಇಲ್ಲವೇ ಅಡಕೆ ಪಟ್ಟೆ ಉಪಯೋಗಿಸಿ ಮತದಾನ ಮಾಡುವುದು ಎಂದು ತೀರ್ಮಾನವಾಯಿತು. ಪ್ರತಿವರ್ಷ ಒಬ್ಬ ಶ್ರೇಷ್ಠ ಸಾಹಿತಿಗೆ ನಂಬರ್ ಒನ್ ಪ್ರಶಸ್ತಿ ಕೊಡುವುದರಿಂದ ಅಂತಹ ಸಾಹಿತಿಗಳ ಫೋಟೋ ಒಂದು ಕಾಲಮಿತಿಗೆ ಒಳಪಟ್ಟಿರಲಿ, ಇದು ಒಂದು ವರ್ಷ ಇದ್ದರೆ ಸಾಕು ಎನ್ನುವ ತಿದ್ದುಪಡಿ ಸೇರಿತು. ಮಿಕ್ಕಂತೆ ಬಹುಮಾನದ ಹಣ ಪ್ರತಿವರ್ಷವೂ ಶೇಖಡ ಇಪ್ಪತ್ತು ಹೆಚ್ಚಿರಬೇಕು ಎಂದಾಯಿತು. ಎಲ್ಲವೂ ಹೀಗೆ ಸರಾಗವಾಗಿ ನಡೆದು ಸರ್ವ ಸಮ್ಮತವಾಗಿ ಸಾಹಿತ್ಯ ಪ್ರಶಸ್ತಿಗಳು ಮರು ಆರಂಭಗೊಂಡಿತು. ಅದರ ಚೆನ್ನ ಮತ್ತು ಅದರ ಕತೆ ಮತ್ತೊಂದು ಮೈ ನವಿರೇಳಿಸುವ ಕಥಾನಕ.
ಕಥಾನಕಕ್ಕೆ ಹಾರುವ ಮೊದಲು ಈ ಕೆಳಗಿನ ಪ್ರಶಸ್ತಿ ವಿಜೇತ ಸಾಹಿತ್ಯ ಕೃತಿಗಳು ತಮ್ಮ ಮನಸ್ಸಿನಲ್ಲಿರಲಿ. ಕತೆಗೊಂದು ಕೊನೆ ಕಾಣಿಸುವ ಸಮಯ ಬಂದಿದೆ. ಅದರಿಂದ ನಾನು ಕೊಂಚ ಫಾಷ್ಟು. ಈಗ ಇದು ನಿಮ್ಮ ಮನದಲ್ಲಿರಲಿ…
“ಅವಳು ನಿದ್ರೆಯಿಂದ ಎದ್ದಾಗ ಎದುರಿತ್ತು ಅನ್ನದ ತಟ್ಟೆ…
“ಭಾರತದ ಹೆಮ್ಮೆ ನಮ್ಮೂರ ಎಮ್ಮೆ…..
“ಸೀರೆಉಟ್ಟ ಹೆಂಗಸು ಭಾರತದ ಸೊಗಸು…
“ಮಗು ನಕ್ಕಿತು ಆಕಾಶ ಉಕ್ಕಿತು
ಚೆಡ್ಡಿ ಇಲ್ಲವಾದರೆ ಬಡ್ಡಿ ಬಿಡಲಾದೀತೇ
ಪರ್ವತದ ತುದಿಯಲ್ಲಿ ದೇವರು
ಪಾತಾಳದಲ್ಲಿ ನಾವು
ಕೈತುತ್ತು ಇಕ್ಕಿದ ಅಮ್ಮ ಕಣಕ್ಕಿಳಿಸಿದ ತಮ್ಮ
ಗಾಳಿಗೆ ಹೊಯ್ದಾಡಿದ ಮರ ಭೂಮಿ ತಬ್ಬಿದ ಹಣ್ಣು..”
ಇವುಗಳ ಹಿನ್ನೆಲೆ ಮುನ್ನೆಲೆ ಮತ್ತು ಪ್ರಶಸ್ತಿ ಪುರಾಣ ಮುಂದಿನ ಸಂಚಿಕೆಯಲ್ಲಿ…
ಇನ್ನೂ ಇದೆ ಅಂತ ಹೇಳಿ ಸಂಚಿಕೆ ಮುಗಿಸಿದ್ದೆ. ಒನ್ ಲೈನರ್ ಕಾದಂಬರಿಗಳ ಬಗ್ಗೆ ಬರೆಯದೇ ಹೋದರೆ ಅದು ಸಾರಸ್ವತ ಲೋಕಕ್ಕೆ ಹಾಗೂ ತಮಗೆ ಮಾಡುತ್ತಿರುವ ವಂಚನೆ ಎಂದು ನನಗೆ ತಿಳಿದಿದೆ ಅದರಿಂದ ಅದರ ಬಗ್ಗೆ ಮೊದಲು ಗೀಚಿ ಬಿಡುತ್ತೇನೆ.
ಹಿಂದೆ ಸಾವಿರ ಸಾವಿರ ಪುಟಗಳ ನೂರಾರು ಪುಸ್ತಕಗಳನ್ನು ಒಂದೇ ವ್ಯಕ್ತಿ ಬರೆಯಲು ಸಾಧ್ಯವೇ ಇಲ್ಲ ಎನ್ನುವ ನಿರ್ಧಾರವಾಗಿತ್ತು. ಒಂದೇ ವ್ಯಕ್ತಿ ಎನ್ನುವ ಪದ ಇದು ಈ ಪದ ಸುಸಂಸ್ಕೃತ ಅಲ್ಲ ಅಂತ ನನಗೆ ಗೊತ್ತು. ಒಂದೇ ವ್ಯಕ್ತಿ ಬದಲಿಗೆ ಒಬ್ಬರೇ ಅಂತ ಬರೆದಿದ್ದರೆ ಅದು ಕೊಂಚ ಸಭ್ಯ ಅನಿಸುತ್ತಿತ್ತು. ಆದರೆ ಅಂದಿನ ಯೋಚನಾ ಧಾಟಿ ಹೇಗಿತ್ತು ಅಂದರೆ ಯಾವ ನೇ ಆಗಲಿ ಅವನು ಶೋಷಿಸಿದವನು, ನಮ್ಮ ರಾಜಕೀಯ ವಿರೋಧಿ, ನಮಗಿಂತ ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲಿರುವವನು ಎನ್ನುವ ಗುಂಪಿಗೆ ಸೇರಿದ್ದರೆ ಅವನಿಗೆ ಮರ್ಯಾದೆ ಗೌರವ ನೀಡತಕ್ಕದ್ದಲ್ಲ ಎನ್ನುವ ಮೈಂಡ್ ಸೆಟ್ ಎಲ್ಲರಲ್ಲಿಯೂ ಶೋಷಿತರು ಶೋಷಣೆ ಮಾಡಿದವರು ಎನ್ನುವ ಬೇಧ ಭಾವ ಇಲ್ಲದೆ ಎಲ್ಲರಲ್ಲಿಯೂ ಆಳವಾಗಿ ಹೂತು ಹೋಗಿತ್ತು! ಇದನ್ನು ಈ ದಾಖಲೆ ಮಾಡುವ ಎಳೆoಟು ಶತಮಾನಗಳ ಮೊದಲಿದ್ದ ರಾಜಕೀಯ ದುಃರಿನಾ (ಧು ರೀ ಣ… ಎಂದು ಓದಿರಿ )ಜಾರಿ ಮಾಡಿದ್ದ. ಅವನ ಪ್ರಕಾರ ಸಮಾಜಕ್ಕೆ ಯಾರು ಏನೇ ದಾನ ಗೀನ ಮಾಡಿದರೂ ಅದು ಅವರು ಕೊಳ್ಳೆ ಹೊಡೆದ ಬಡವರ ಕಾಸು ಅಷ್ಟೇ! ದರೋಡೆಕಾರನಿಗೆ ಬಹುವಚನ ಸಲ್ಲದು ಎಂದು ಹೇಳಿದ್ದ ಅವನ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದ ಭಕ್ತ ಮಹಾಶಯರು ಇದ್ದರು. ಅವನ ಸಂತತಿ, ಅವನ ಹಿಂಬಾಲಕರು ಕೊನೆಗೆ ಅವನ ಹೆಸರು ಗೊತ್ತಿದ್ದವರೂ ಸಹ ಈ ಏಕವಚನ ಪಿತಾಮಹರಾಗಿದ್ದರು. ಇದರ ಪರಿಣಾಮ ಎಂದರೆ ನಮ್ಮ ಭುವನೇಶ್ವರಿ ಬಾಯಿನಿಂದ ಬಹುವಚನ ಪೂರ್ಣವಾಗಿ ಮರೆಯಾಗಿ ಹೋಗಿದ್ದು!

ದಪ್ಪ ದಪ್ಪ ಗ್ರಂಥಗಳಿಂದ ಸಿಂಗಲ್ ಲೈನರ್ ಗ್ರಂಥಗಳಿಗೆ ಜನ ಸಾಮಾನ್ಯರು ಹೊಂದಿಕೊಂಡಿದ್ದರು. ದೊಡ್ಡ ದಪ್ಪನೆಯ ಪುಸ್ತಕಗಳು ಕೆಲವರ ಮನೆಯ ದೇವರ ಗೂಡಿನಲ್ಲಿ ಕಿಂಕಾಪಿನ ಬಟ್ಟೆ ಸುತ್ತಿಕೊಂಡು ತಪಸ್ಸು ಗೈಯುತ್ತಿತ್ತು. ಇಂತಹ ಕಸದ ವಿಲೇವಾರಿಗೆ ಆಗಿದ್ದ ಮುಖ್ಯ ಮಂತ್ರಿ ಒಂದು ಯೋಜನೆ ರೂಪಿಸಿದ. ಅದರಂತೆ ಪ್ರತಿ ಊರಿನ ಹೊರವಲಯದಲ್ಲಿ ನೂರು ಇನ್ನೂರು ಅಳತೆಯ ಒಂದು ಆಳವಾದ ಬಾವಿ ಕಂ ಹೊಂಡ ತೋಡಿಸಿದ. ಅದರೊಳಗೆ ಇಂತಹ ಪುಸ್ತಕ ಹಾಕಿ ಎಂದು ಪ್ರಚಾರಿಸಿದ. ಸುಮಾರು ಜನ ಇಂತಹ ದಪ್ಪನೆಯ ಪುಸ್ತಕಗಳು( ಅಂದರೆ ಕಸ) ಇಡಲು ಸ್ಥಳ ಸಾಲದು ಎನ್ನುವ ಕಾರಣಕ್ಕೆ ಅದನ್ನು ಊರ ನಡುವಿನ ಬಾವಿಯಲ್ಲಿ ಕಾಕಿ ಮರೆತಿದ್ದರು. ಅವರ ಮನೆಯವರು ಒಂದು ಪೀಡೆ ತೊಲಗಿತು ಎಂದು ವಡೆ ಪಾಯಿಸ ಉಂಡು ನಿದ್ದೆ ಮಾಡಿದ್ದರು. ಪುಸ್ತಕಗಳ ಬಗ್ಗೆ ಒಂದು ರೀತಿಯ ಅವಿನಾಭಾವ (ಅವಿನಾಭಾವ ಅಂದರೆ ಏನು ಅಂತ ಖಂಡಿತ ನನಗೆ ತಿಳಿಯದು. ಎಲ್ಲರೂ ಉಪಯೋಗಿಸುತ್ತಾರೆ ಎಂದು ನಾನೂ ಬರೆದಿದ್ದೇನೆ, ಅಷ್ಟೇ!)ಸಂಬಂಧ ಹೊಂದಿದ್ದ ಕೆಲವೇ ಕೆಲವರು ತಮ್ಮ ಪೂರ್ವಜರ ನೆನಪಿಗೆ ಎಂದು ಒಂದೋ ಎರಡೋ ಪುಸ್ತಕವನ್ನು ಇರಿಸಿಕೊಂಡಿದ್ದರು. ಅವು ಹಳೆಯ ರೇಷ್ಮೆ ಸೀರೆ ತುಂಡರಿಸಿ ಮಾಡಿದ್ದ ಟವಲಿನಲ್ಲಿ ಸುತ್ತಿಸಿಕೊಂಡು ದೇವರ ಗೂಡಿನಲ್ಲಿ ವಿರಾಜ ಮಾನವಾಗಿದ್ದವು. ಕೆಲವರು ಅವನ್ನು antique ಎಂದು ಮಾರಿ ದುಡ್ಡು ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಒನ್ ಲೈನರ್ ಕಾದಂಬರಿಗಳು ಅತ್ಯಂತ ಜನಪ್ರಿಯವಾಗಿದ್ದವು. ಅದರಲ್ಲಿನ ಕೆಲವು ಸ್ಯಾಂಪಲ್ ಹೇಳಿದೆ ತಾನೇ? ಈಗ ಅವುಗಳ ಬಗ್ಗೆ ಹುಟ್ಟಿದ ವ್ಯಾಖ್ಯಾನ ಗಳ ಬಗ್ಗೆ ಬರೆಯದಿದ್ದರೆ ನಾನು ಕರ್ತವ್ಯ ಲೋಪ ಎಸಗಿದ ಪಾಪಕ್ಕೆ ಹಾಗೂ ಅಂತಹ ಪಾಪ ಪ್ರಜ್ಞೆಗೆ ಒಳಗಾಗುವ ಎಲ್ಲಾ ಸಂಭವಗಳು ಇದೆ. ಅದರಿಂದ ಮೊದಲು ವ್ಯಾಖ್ಯಾನಗಳ ಬಗ್ಗೆ ತುಂಬಾ ಕಿರಿದಾಗಿ ವಿವರಿಸಿ ಬಿಡುತ್ತೇನೆ..
ಮೊದಲನೇ one liner ನೊವೆಲ್ ಅಂದರೆ ಅವಳು ನಿದ್ರೆಯಿಂದ ಎದ್ದಾಗ ಎದುರಿತ್ತು ಅನ್ನದ ತಟ್ಟೆ…
ಇದಕ್ಕೆ ಬಂದ ವ್ಯಾಖ್ಯಾನಗಳು ಅದೆಷ್ಟೋ ಸಾವಿರವಂತೆ. ಮುಖ್ಯವಾಗಿ ಜನ ಅಂದರೆ ಓದುಬರಹ ಬಲ್ಲ ಜನ! ಅಂತಹ ಜನ ಸಾಮಾನ್ಯನಿಗೆ ಅರ್ಥಮಾಡಿಸಲು ಎಂದೇ ವ್ಯಾಖ್ಯಾನಗಳು ಹುಟ್ಟುತ್ತಿದ್ದವು. ಅದನ್ನು ಪೂರ್ವದಲ್ಲಿ ವಿಮರ್ಶೆ ಎಂದು ಕರೆಯುತ್ತಿದ್ದರು. ವಿಮರ್ಶೆ ಎನ್ನುವ ಪದ ಉಚ್ಚರಿಸಲು ಕಷ್ಟ, ಅದು ಶೋಷಣೆ ಮಾಡಿದವರ ನುಡಿಗಟ್ಟು ಮತ್ತು ಆ ಪದವನ್ನು ಉಪಯೋಗಿಸಿಯೇ ಹಲವರು ಶ್ರೀಮಂತರಾಗಿದ್ದಾರೆ ಎನ್ನುವ ಆರೋಪ ಹುಟ್ಟಿತು. ಆರೋಪ ಒಂದು ಚಳವಳಿ ರೂಪ ತಳೆದು ಕೋಟ್ಯಂತರ ಮಾನವ ಗಂಟೆಗಳು ನಷ್ಟವಾದಮೇಲೆ ಪ್ರಭುತ್ವ ಎಚ್ಚರಗೊಂಡಿತು. ವಿಮರ್ಶೆ ಎನ್ನುವ ಪದ ಶೋಷಣೆಯಿಂದ ಹುಟ್ಟಿದೆ ಅದಕ್ಕೆ ಪರ್ಯಾಯ ಪದ ಬೇಕು ಎಂದು ಇದಕ್ಕಾಗಿ ನೇಮಕಗೊಂಡಿದ್ದ ಸಮಿತಿ ತೀರ್ಮಾನ ಕೊಟ್ಟಿತು. ಅದರಿಂದ ಈ ವ್ಯಾಖ್ಯಾನ ಪದ ಹುಟ್ಟಿದ್ದು. ಈ ಪದ ವಿಮರ್ಶೆ ಎನ್ನುವ ಪದಕ್ಕಿಂತಲೂ ನೂರು ಪಟ್ಟು ಸೌಮ್ಯ, ಸಾವಿರ ಪಟ್ಟು ಸಭ್ಯ ಮತ್ತು ಕೋಟಿ ಪಟ್ಟು ಸಜ್ಜನಿಕೆಯ ದನಿ ಇರುವಂತಹುದು ಎಂದು ಬಿಂಬಿಸಲಾಯಿತು. ಇದು ಒಂದು ಸಂಸ್ಕೃತ ಮೂಲದ್ದು ಎಂದು ಕೆಲವರು ಮೇಲಿನ ವರ್ಗದವರು ಕೇತೆ ತೆಗೆದರು. ಅದು ಹಾಗಲ್ಲ, ಮೂಲತಃ ಅದು ಕನ್ನಡಮ್ಮನ ಪದವೇ, ಅದನ್ನು ಹಿಂದೆ ಮೇಲಿನ ಜಾತಿ ಅವರು ಕದ್ದು ತಮ್ಮದು ಮಾಡಿಕೊಂಡರು. ಇದಕ್ಕೆ ಪುರಾವೆ ಅಂತ ಸುಮಾರು ಹೊತ್ತಿಗೆ ಅಂದರೆ documents ಪ್ರದರ್ಶನ ಮಾಡಿದರು. ಯಾವ ಭಾಷೆ ಆದರೇನು ಭುವನೇಶ್ವರಿ ಒಪ್ಕೋತಾಳೆ ಅಂತ ಈ ಸಮಸ್ಯೆಗೆ ಒಂದು ಲಾಜಿಕಲ್ ಅಂತ್ಯ ಹಾಡಿದರು.
ಈಗ ವ್ಯಾಖ್ಯಾನದ ಕೆಲವು ತುಣುಕು..
ಅವಳು ನಿದ್ರೆಯಿಂದ ಎದ್ದಾಗ ಎದುರಿತ್ತು ಅನ್ನದ ತಟ್ಟೆ… ಎಂದರೆ ಶೋಷಿತ ಸಮಾಜದ ಕಣ್ಣೀರ ಕತೆ ಇದು. ಅವಳು ಎಂದರೆ ತುಳಿಯಲ್ಪಟ್ಟ ಸಮಾಜದ ಪ್ರತಿನಿಧಿ. ನಿದ್ರೆಯಿಂದ ಎದ್ದಾಗ ಅಂದರೆ ಶೋಷಿತ ಸಮಾಜಕ್ಕೆ ಅದಕ್ಕೆ ಆಗಿರುವ ಅನ್ಯಾಯ ಮೋಸ ತಟ ವಟ ವಂಚನೆ ಮುಂತಾದ ಹಿಂಸೆಗಳನ್ನು ಕೊಡವಿದ ರೂಪ ಅದು. ಎದುರಿಗಿತ್ತು ಅನ್ನದ ತಟ್ಟೆ ಎಂದರೆ ಇಷ್ಟು ಶತಮಾನಗಳ ಕಾಲ ಅವರಿಂದ ಕಿತ್ತು ಕೊಳ್ಳಲಾಗಿದ್ದ ಅವಕಾಶಗಳು ಈಗ ಎದುರಿಗೆ ಪ್ರತ್ಯಕ್ಷವಾಗಿ ಕಣ್ಣಿಗೆ ಕಾಣುವ ಹಾಗೆ ಇವೆ…! ಇದು ಬಹುಮಾನಿತ ವ್ಯಾಖ್ಯಾನದ ಸ್ಯಾಂಪಲ್ಲು. ಬಹುಮಾನಿತ ವ್ಯಾಖ್ಯಾನ ಅಂತ ಯಾಕೆ ಬಂತು ಅಂದರೆ ಈ ಒನ್ ಲೈನ್ ಕಾದಂಬರಿಗಳನ್ನು ಜನ ಹಗುರಾಗಿ ಪರಿಗಣಿಸಬಾರದು ಮತ್ತು ಸಾವಿರ ಪುಟಗಳ ಸಾರವನ್ನು ಕೆಲವೇ ಶಬ್ದಗಳಲ್ಲಿ ಹಿಡಿದಿಟ್ಟಿರುವ ಆತನ ಜಾಣ್ಮೆ ಜಗತ್ತು ಅರಿಯಬೇಕು ಎನ್ನುವ ಉದ್ದೇಶದಿಂದ ವ್ಯಾಖ್ಯಾನ ಬರೆಸಲಾಯಿತು. ಮೊದಮೊದಲು ಮೂಲ ಲೇಖಕ ತನ್ನ ಬರಹದ ಆಳ ಅಗಲ ವಿಸ್ತಾರ ಇವುಗಳನ್ನು ಕುರಿತು ಬರೆಯುವ ರೂಢಿ ಇತ್ತು. ಇದು ಮತ್ತೊಂದು ಸಮಸ್ಯೆ ಹುಟ್ಟುಹಾಕಿತು. ಇದೇನು ಹೊಸಾ ಸಮಸ್ಯೆ ಎಂದಿರಾ? ಒಬ್ಬನಿಗೇ ಮೂಲ ಮತ್ತು ವ್ಯಾಖ್ಯಾನದ ಪ್ರಶಸ್ತಿ ಹಣ ಹೋಗುವುದು ಸಾಮಾಜಿಕ ನ್ಯಾಯ ಅಲ್ಲ ಎನ್ನುವ ಪ್ರಬಲವಾದ ವಾಗ್ವಾದ ಶುರು ಆಯಿತು. ಸರ್ಕಾರ ಈ ಮಾತಿಗೆ ಒಪ್ಪದೇ ಬೇರೆ ದಾರಿ ಇರಲಿಲ್ಲ, ಕಾರಣ ಹಿಂದಿನ ಸರ್ಕಾರಗಳ ವಂಧಿ ಮಾಗಧರು ಈ ನಿಟ್ಟಿನಲ್ಲಿ ಅಪಾರವಾಗಿ ದೋಚಿದ್ದರು, ಮೂರು ನಾಲ್ಕು ತಲೆಮಾರು ಕೂತು ಉಣ್ಣುವಷ್ಟು ಹಣ ಪಣ ಆಸ್ತಿ ಪಾಸ್ತಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವ್ಯಾಖ್ಯಾನ ಎನ್ನುವ ಪದಕ್ಕೆ ಹೊಸಾ ಅರ್ಥ ಮತ್ತು ಪರಿಭಾಷೆ ಹುಟ್ಟಿತು. ವಿಮರ್ಶೆ ಎನ್ನುವ ಪದ ಸಂಪೂರ್ಣ ನಶಿಸಿ obsolete ಆಯಿತು.
ಇನ್ನೊಂದು ಒನ್ ಲೈನರ್ ಕಾದಂಬರಿಯ ಬಗ್ಗೆ ಬರೆದು ಬಿಡುತ್ತೇನೆ..
ಭಾರತದ ಹೆಮ್ಮೆ ನಮ್ಮೂರ ಎಮ್ಮೆ….. ಎನ್ನುವ ಕಾದಂಬರಿ ಕುರಿತ ವ್ಯಾಖ್ಯಾನ. ಇದು ದೇಶ ಮತ್ತು ದೇಶದ ರೈತನ ಬಗ್ಗೆ ರಚಿಸಿರುವ ಅಮೋಘ ಕೃತಿ. ಭಾರತ ಎಂದರೆ ಜಗತ್ತಿನ ಅತಿ ಸುಂದರ ದೇಶ. ಇಂತಹ ದೇಶದಲ್ಲಿ ಹುಟ್ಟಿರುವ ನಾವೆಲ್ಲರೂ ಅದೆಷ್ಟೋ ಜನ್ಮಗಳಲ್ಲಿ ಪುಣ್ಯ ಮಾಡಿ ಮಾಡಿ ಮಾಡಿರುವ ಫಲವೇ ಈ ದೇಶದಲ್ಲಿ ಹುಟ್ಟುವ ಸೌಭಾಗ್ಯ. ಇಲ್ಲಿನ ಕಾಡುಗಳು ಇಲ್ಲಿನ ನದಿಗಳು ಇಲ್ಲಿನ ಬೆಟ್ಟಗಳು ಇಲ್ಲಿನ ಪಶು ಪಕ್ಷಿಗಳು ಇಲ್ಲಿನ ಪ್ರಾಣಿಗಳು… ಹೀಗೆ ಇಲ್ಲಿನ ಎಲ್ಲವೂ ಪ್ರಪಂಚದ ಬೇರೆ ಯಾವುದೇ ಪ್ರದೇಶದಲ್ಲಿ ಕಾಣಲು ಸಿಗದು. ಇಂತಹ ವಿಶಿಷ್ಟವಾದ ದೇಶದಲ್ಲಿರುವ ಎಮ್ಮೆ ಎಂದರೆ ಸಾಮಾನ್ಯವೇ! ಎಮ್ಮೆ ಹಾಲು ಕೊಡುತ್ತದೆ, ಅದರ ಹಾಲು ತುಂಬಾ ಗಟ್ಟಿ ಮತ್ತು ಅದರಲ್ಲಿ ಕಾಫಿ ಮಾಡಿ ಕುಡಿದರೆ ಒಂದು ರೀತಿಯ ಸ್ವರ್ಗ ಸುಖ ಗ್ಯಾರಂಟಿ. ಎಮ್ಮೆಯ ಸಗಣಿ, ಅದರ ಮೂತ್ರ, ಅದರ ಕೊಂಬು, ಅದರ ಬಾಲ, ಅದರ ಸೌoಡು, ಕೊನೆಗೆ ಅದರ ಉಸಿರು…. ನಮ್ಮ ವಿದೇಶಿ ವಿನಿಮಯದಲ್ಲಿ ಅತಿ ಹೆಚ್ಚಿನ ಗಳಿಕೆ ತರುತ್ತಿದೆ. ಇಂತಹ ದೊಡ್ಡ ದೇಶದ ಅಮೂಲ್ಯ ಪ್ರಾಣಿ ಸಹಜವಾಗಿಯೇ ನಮ್ಮ ದೇಶದ ಹೆಮ್ಮೆ.. ಇದು ನಾನು ಎಪಿಟಮಯಿಸ್ (epitomize ಅಂದರೆ ಚಿಕ್ಕದಾಗಿ, ಸಂಗ್ರಹವಾಗಿ )ಮಾಡಿ ಬರೆದಿರೋದು. ಒರಿಜಿನಲ್ ನಲ್ಲಿ ಇವು ದೀರ್ಘ ಪುರಾಣಗಳು. ಇವು ದೀರ್ಘವಾಗಲು ಕಾರಣ ಮೂಲ ಲೇಖಕನಿಗೆ ಸಿಗುವಷ್ಟೇ ಗೌರವಧನ ತಮಗೂ ಬೇಕು ಎಂದು ಈ ವ್ಯಾಖ್ಯಾನ ಕಾರರು ವಶೀಲಿ ಬಾಜಿ ನಡೆಸಿ ಗೆದ್ದದ್ದು. ಹೀಗೆ ಪ್ರತಿ ಒಂದು ಎರಡು ಸಾಲಿನ ಕಾದಂಬರಿಗಳು ಪ್ರಶಸ್ತಿ ಪಡೆಯುತ್ತಾ ಪಡೆಯುತ್ತಾ ಪಡೆಯುತ್ತಾ ಪಡೆಯುತ್ತಾ ಹೋದಂತೆ ವರ್ಷಗಳು ಉರುಳಿದವು ಮತ್ತು ಹೊಸಾ ಚಿಂತನಾ ಗುಂಪುಗಳು ಹುಟ್ಟಿದವು.
ಅದನ್ನು ವಿವರಿಸುವ ಮುನ್ನ ಒಂದು ಸಂಗತಿ ಕಣ್ತಪ್ಪಿನಿಂದ ತಮಗೆ ಹೇಳಲು ಆಗಿಲ್ಲ. ಈಗ ಅದರ ಕುರಿತು ಒಂದು ಅತ್ಯಂತ ಸಣ್ಣ ಅಂದರೆ ಸಣ್ಣ, ಪುಟ್ಟದಾದ ಟಿಪ್ಪಣಿ ಕೊಡಲೇ ಬೇಕು ಎಂದು ದೈವ ಪ್ರೇರಣೆ ಆಗಿದೆ. ನಾನೂ ನಾಸ್ತಿಕ ನಿಮ್ಮ ಹಾಗೇ. ಆದರೂ ದೈವ ಪ್ರೇರಣೆ ಗಳನ್ನು ಮೀರಿ ಮುಂದಕ್ಕೆ ಓಡುವ ಹುಚ್ಚ ನಾನಲ್ಲ, ಇದೂ ಸಹ ನಿಮ್ಮ ಹಾಗೇ. ಅದರಿಂದ ನಿಮಗೆ ಮೊದಲು ಅದನ್ನು ವಿವರಿಸಿ ಬಿಡುತ್ತೇನೆ.
*ಚಡ್ಡಿ ಇಲ್ಲವಾದರೆ ಬಡ್ಡಿ ಬಿಡಲಾದೀತೇ…*
ಚಡ್ಡಿ ಎಂದರೆ ಬರೀ ಒಳ ಉಡುಪಲ್ಲ. ಅದು ರೈತನ ಮರ್ಯಾದೆಯ ಕೊನೆಯ ಕೋಟೆ. ಮೇಲಿನ ಅಂಗಿ ಇಲ್ಲದಿದ್ದರೂ ನಡೆಯುತ್ತದೆ, ಪಂಚೆ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಚಡ್ಡಿ ಇಲ್ಲದೆ ಹೊಲಕ್ಕೆ ಇಳಿಯಲು ಸಾಧ್ಯವಿಲ್ಲ. ಅದರಿಂದ ಚಡ್ಡಿ ಎಂದರೆ ರೈತನ ಉತ್ಪಾದನಾ ಸಾಧನ.
ಚಡ್ಡಿ ಇಲ್ಲದ ಯಾರನಾದರೂ ನೀವು ಕಲ್ಪಿಸಿ ಕೊಳ್ಳಬಹುದು, ರಾಜಕಾರಣಿ ಯನ್ನು, ಮಂತ್ರಿಯನ್ನು, ಪುಡಾರಿಯನ್ನು, ಕ್ರಿಕೆಟ್ ಆಟಗಾರನನ್ನು… ಹೀಗೆ ಯಾರನಾದರೂ ನೀವು ಕಲ್ಪಿಸಿಕೊಳ್ಳಿ. ಆದರೆ ರೈತನನ್ನು ಹೀಗೆ ಕಾಣಲಾದೀತೇ?
ಚಡ್ಡಿ ಹರಿದರೆ ಏನಾಗುತ್ತದೆ? ಹೊಸ ಚಡ್ಡಿಗೆ ದುಡ್ಡು ಬೇಕು. ರೈತನ ಹತ್ತಿರ ದುಡ್ಡು ಎಲ್ಲಿದೆ? ಅವನು ಹೋಗುವುದು ಸಾಹುಕಾರನ ಹತ್ತಿರ. ಚಡ್ಡಿಗಾಗಿ ಐವತ್ತು ಸಾವಿರ ರೂಪಾಯಿ ಸಾಲ ಪಡೆಯುತ್ತಾನೆ.
ಸಾಹುಕಾರ ಸುಮ್ಮನೆ ಕೊಡುವುದಿಲ್ಲ. ತಿಂಗಳಿಗೆ ಐದು ಸಾವಿರ ರೂಪಾಯಿ ಬಡ್ಡಿ ಎಂದು ಹೇಳುತ್ತಾನೆ. ಚಡ್ಡಿ ಉಳಿಸಲು ಹೋದ ರೈತ, ಬಡ್ಡಿ ಕಟ್ಟುತ್ತಾ ಕಟ್ಟುತ್ತಾ ಕೊನೆಗೆ ಹೊಲವನ್ನೇ ಕಳೆದುಕೊಳ್ಳುತ್ತಾನೆ.
ವ್ಯಾಖ್ಯಾನಕಾರರ ಮಾತಿನಲ್ಲಿ ಹೇಳುವುದಾದರೆ:
ಚಡ್ಡಿಯೇ ಇಲ್ಲದ ರೈತ ಬಡ್ಡಿ ಬಿಡುವುದು ಹೇಗೆ? ಬಡ್ಡಿ ಬಿಡಲು ಅವನಿಗೆ ಚಡ್ಡಿಯೇ ಬಂಡವಾಳ. ಚಡ್ಡಿ ಹೋದರೆ ಮರ್ಯಾದೆ ಹೋಯಿತು, ಮರ್ಯಾದೆ ಹೋದರೆ ಸಾಲ ಹುಟ್ಟಿತು, ಸಾಲ ಹುಟ್ಟಿದರೆ ಬಡ್ಡಿ ಹುಟ್ಟಿತು, ಬಡ್ಡಿ ಹುಟ್ಟಿದರೆ ರೈತ ಸತ್ತ. ಇದು ಶೋಷಿತ ರೈತ ಸಮಾಜದ ಕಣ್ಣೀರ ಕತೆ.
ಒಂದು ಚಡ್ಡಿಯಿಂದ ಇಡೀ ರೈತನ ಬದುಕು, ಸಾಲ, ಬಡ್ಡಿ ಎಲ್ಲವನ್ನೂ ವ್ಯಾಖ್ಯಾನಕಾರರು ಎಳೆದುಬಿಟ್ಟಿದ್ದಾರೆ..
ಮೇಲಿನ ವ್ಯಾಖ್ಯಾನ ಸಮಾಜದಲ್ಲಿ ದೊಡ್ಡ ರಂಪವನ್ನೇ ಹುಟ್ಟಿಸಿತು. ಚೆಡ್ಡಿ ಎಂದರೆ ಒಂದು ಪಕ್ಷವನ್ನು ಹೀನಾಯವಾಗಿ ಲೇವಡಿ ಮಾಡಲಾಗಿದೆ ಎನ್ನುವ ದೊಡ್ಡ ಕೂಗು ಎಲ್ಲೆಡೆ ಹರಡಿ ಹಾರಾಡಿತು. ಅವರು ಚೆಡ್ಡಿಯಿಂದ ಪ್ಯಾಂಟ್ ಗೆ ಪ್ರಮೋಷನ್ ಆಗಿ ಶತಮಾನಗಳು ಕಳೆದಿವೆ, ಹಳೇದು ಕೆದಕ ಬೇಡ ಅಂತ ಚೆಡ್ಡಿ ವ್ಯಾಖ್ಯಾನ ಮಾಡಿದೋನು ಉರಿಗಣ್ಣು ಬಿಟ್ಟ. ಸನಾತನ ವಿಷಯ ನೀನು ಗೇಲಿ ಮಾಡ್ತಾ ಇದ್ದೀಯ, ಭುವನೇಶ್ವರಿ ನಿನಗೆ ಶಾಪ ಕೊಡ್ತಾಳೆ, ಇನ್ಮೇಲೆ ನೀನು ವ್ಯಾಖ್ಯಾನ ಬರೆಯಲು ಸಾಧ್ಯವೇ ಇಲ್ಲ ಹಂಗಾಗ್ತದೆ, ಕೈ ಕಾಲಿಗೆ ಲಕ್ವ ಹೊಡೆಯುತ್ತೆ, ಹೆಂಡಿರು ಮಕ್ಕಳು ಭಿಕ್ಷೆ ಬೇಡುತ್ತಾರೆ……ಅಂತ ಇನ್ನೂನು ಏನೇನೋ ಹೇಳಿ ಇಂವನಿಗೆ ಹೆದರಿಕೆ ಹುಟ್ಟಿಸಿಬಿಟ್ಟರು. ಅದುವರೆಗೆ ಕಟ್ಟಾ ನಾಸ್ತಿಕ ಆಗಿದ್ದ ಈ ಮನುಸ ಹೆದರಿ ಬೆವರಿದ, ನಡುಗಿ ಹೋದ. ಎಚ್ಚರ ದಲ್ಲಿರಲಿ, ನಿದ್ದೆಯಲ್ಲಿರಲಿ ಅವನಿಗೆ ರಸ್ತೆ ಅಂಚಿನಲ್ಲಿ ಕೂತು ಭಿಕ್ಷೆ ಬೇಡುವ ಕನಸು ಬೀಳುತ್ತಿತ್ತು!ಯಾರಿಗೂ ಗೊತ್ತಿಲ್ಲದ ಹಾಗೆ ಸಾಗರದ ಕಡೆ ಹೋಗಿ ಮಂತ್ರ ಪಂತ್ರ ಮಾಡಿಸಿಕೊಂಡು ಬಂದ. ಸಾಗರದಲ್ಲಿ ಇದಕ್ಕೆ ಮಂತ್ರ ಪಂತ್ರ ಹಾಕುವವರು ಇದ್ದಾರೆ ಎಂದು ಇವನಿಗೆ ಎಂದೋ ಯಾರೋ ಇವನು ನಾಸ್ತಿಕನ ಮೊದಲ ಹಂತದಲ್ಲಿದ್ದಾಗ ಯಾರೋ ಹೇಳಿದ್ದರು. ಈತ ಮಂತ್ರ ಹಾಕಿಸಿಕೊಂಡ ಸುದ್ದಿ ಕಾಲ್ಗಿಚ್ಚಿನಂತೆ ಎಲ್ಲೆಡೆ ಹಾರಾಡಿತು. ಈ ವಿಷಯ ಎದುರಾಳಿಗೆ ತಿಳೀತಾ? ಅವರೆಲ್ಲರೂ ಹಿಂಡು ಹಿಂಡಾಗಿ ಸಾಗರಕ್ಕೆ ಹೋಗಿ ತಾಯಿತ ಕಟ್ಟಿಸಿ ಕೊಂಡರು. ಅವರ ಮಕ್ಕಳು, ಹೆಂಡಿರು, ಅವರ ಅಕ್ಕ ತಂಗಿಯರು.. ಹೀಗೆ ಎಲ್ಲರೂ ಮೈಯಿ ನ ಎಲ್ಲೆಲ್ಲೋ ಕಡೆ ತಾಯಿತ ಕಟ್ಟಿಸಿಕೊಂಡು ಹೊಸಾ ಫ್ಯಾಷನ್ ಆರಂಭಸಿದರು. ಇದರಿಂದ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಆಯಿತು.ತಾಯಿತ ಸಂಸ್ಕಾರ ಎನ್ನುವ ಹೊಸಾ ಹಬ್ಬ ಹುಟ್ಟಿತು!ಮೇಲ್ವರ್ಗದವರು ನಮ್ಮನ್ನು ಫೂಲ್ ಮಾಡುತ್ತಿದ್ದಾರೆ ಎಂದು ಒಂದು ಗುಂಪು ಆರೋಪಿಸಿದರೆ ಮತ್ತೊಂದು ಗುಂಪು ಇದು ಸನಾತನಕ್ಕೆ ಸಂದ ಜಯ ಎಂದು ಬೀಗಿದರು. ಈ ನಡುವೆ ಇತಿಹಾಸ ದಾಖಲಿಸುತ್ತಿದ್ದ ಒಂದು ಗುಂಪು ಇದೇ ರೀತಿಯ ವಿದ್ಯಮಾನ ಕೆಲವು ಶತಮಾನಗಳ ಹಿಂದೆಯೂ ಹೀಗೇ ನಡೆದಿತ್ತು, ಆಗಿನ ಮುಖ್ಯ ಮಂತ್ರಿ ಹೀಗೇ ಮಾಡಿದ್ದ,ಚರಿತ್ರೆ ಪುನರಾವರ್ತನೆ ಆಗುತ್ತಿದೆ ಎಂದು ಬರೆದರು.

ಮುಂದೆ ಏನಾಯಿತು ಎನ್ನುವ ಕುತೂಹಲ ನನಗೂ ಇದೆ ಮತ್ತು ಸದರಿ ಕಥೆಗೆ ಒಂದು ಕೊನೆ ತೋರಿಸಬೇಕು ಎನ್ನುವ ಅದಮ್ಯ ಬಯಕೆಯೂ ಹುಟ್ಟಿದೆ. ಮುಂದಿನ ಬೆಳವಣಿಗೆ ಏನಾಯಿತು ಹೆಂಗಾಯಿತು ಎಲ್ಲಿಂದ ಆಯಿತು..ಎನ್ನುವ ವಿವರಕ್ಕೆ ನೀವು ಖಂಡಿತ ಕಾಯಲೇ ಬೇಕು. ಇನ್ನೊಂದು ಎರಡೋ ಮೂರೋ ಕಂತುಗಳಷ್ಟು ಪುರಾಣ ಹೇಳಿ ನಂತರ ಇನ್ನೂ ಇದೆ ಎನ್ನುವ ಜೋಡಿಪದ ಕಿತ್ತುಹಾಕುವ ಉಮೇದು ಹುಟ್ಟಿದೆ. ಅಲ್ಲಿಯವರೆಗೂ…. ತಡಕೊಳ್ಳಿ ಸರ, ಮೇಡಂ
ಇನ್ನೂ ಇದೆ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

