Advertisement
ಸೋತು ಗೆದ್ದವರಿಂದ ಕಲಿಯಬೇಕಾದ ಪಾಠಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ

ಸೋತು ಗೆದ್ದವರಿಂದ ಕಲಿಯಬೇಕಾದ ಪಾಠಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ

ಇದನ್ನೇ ಪಾಸಿಟಿವ್ ಆಗಿ ತೆಗೆದುಕೊಂಡ ಸಿಯಾಚಿರೋಗೆ  ಅವನ ಮನೆಯ ಮೂಲೆಯಲ್ಲಿದ್ದ ಒಂದು ಸಣ್ಣ ಜನರೇಟರ್ ಎಂಜಿನ್ ತೆಗೆದುಕೊಂಡು ಅದನ್ನು ತಮ್ಮ ಸೈಕಲ್‌ಗೆ ಜೋಡಿಸಿ, ಟರ್ಪಂಟೈನ್ ಎಣ್ಣೆಯಿಂದ ಓಡುವಂತಹ ಪುಟ್ಟ ಮೋಟಾರ್ ಸೈಕಲ್ ತಯಾರಿಸಿದನು. ಆದರೆ ತಯಾರಿಸಿದ ವಾಹನದ ಗಾತ್ರ ಹಾಗೂ ಭಾರದಿಂದ ಜನ ಕೊಂಡುಕೊಳ್ಳದೇ ಈ ಯೋಜನೆಯೂ ಹಳ್ಳ ಹಿಡಿದಾಗ ಅವನಿಗೆ ಮತ್ತೆ ಸೋಲು!! ಆಗ ಅವನು ಇದನ್ನೇ ಬದಲಾಯಿಸಿ ಜನರ ಅಗತ್ಯತೆಗೆ ತಕ್ಕಂತೆ ಡಿಸೈನ್ ಮಾಡುತ್ತಾನೆ. ಇದಕ್ಕೆ ‘ಹೊಂಡಾ ದಿ ಸೂಪರ್ ಕಬ್’ ಎಂದು ಹೆಸರಿಡುತ್ತಾನೆ. ಅದು ಜನರಿಗೆ ಎಷ್ಟು ಇಷ್ಟವಾಯಿತೆಂದರೆ ಅಂದಿನಿಂದ ಸೊಯಾಚಿರೋ ನಿಜವಾದ ಯಶಸ್ಸಿನ ಕಥೆ ಶುರುವಾಗುತ್ತದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

“ಯಶಸ್ಸು ಎಂಬುದು 99 ಪ್ರತಿಶತ ವೈಫಲ್ಯಗಳ ಫಲಿತಾಂಶವಾಗಿದೆ” — ಸೊಯಿಚಿರೊ ಹೊಂಡಾ

ನನ್ನ ಗೆಳೆಯನೊಬ್ಬ ತನ್ನ ವಾಟ್ಸಾಪ್ ಡಿಪಿಯಲ್ಲಿ “ನಾನು ಸೋಲುವುದಿಲ್ಲ ಸೋತರದು ನಾನಲ್ಲ” ಎಂದು ಹಾಕಿಕೊಂಡಿದ್ದನ್ನು ನೋಡಿ ಅವನ ಬಳಿ ಇದರ ಬಗ್ಗೆ ಕೇಳಿದೆ. ಅವನು ಇದನ್ನು ಸಮರ್ಥಿಸಿಕೊಂಡ. ಆದರೆ ನನಗೆ ಇದರ ಬಗ್ಗೆ ತಕರಾರಿದೆ. ಜಗದಲ್ಲಿ ಕೆಲವೇ ಕೆಲವು ಮಂದಿಗಷ್ಟೇ ಬರೀ ಯಶಸ್ಸು ಸಿಗಬಹುದು. ಆದರೆ ಬಹುತೇಕರು ಸೋತು ಸೋತು ಕೊನೆಗೊಮ್ಮೆ ತಮ್ಮ ಜೀವನದಲ್ಲಿ ಯಶಸ್ಸು ಕಂಡವರು!! ಈಗೀಗ  ಹಲವಾರು ಪೋಷಕರು ಮಕ್ಕಳಲ್ಲಿ ಬರೀ ಯಶಸ್ಸಿನ ಬಗ್ಗೆ ತಲೆಯಲ್ಲಿ ತುಂಬಿರುತ್ತಾರೆ. “ಸೋತರೆ ಕಥೆ ಮುಗೀತು” ಎಂದು ಹೇಳಿರುತ್ತಾರೆ. ಇದಕ್ಕಾಗಿ ಕೆಲ ಮಕ್ಕಳು ಜೀವನದಲ್ಲಿ ಸೋತಾಗ ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳುವುದುಂಟು!! ನಾನು ಹಿಂದೆ ಓದಿದ್ದ ಒಂದು ವರದಿಯಲ್ಲಿ ಒಬ್ಬ ಇಂಜಿನಿಯರಿಂಗ್ ಹುಡುಗಿ ತಾನು ಮೊದಲ ಏಳು ಸೆಮಿಸ್ಟರ್‌ನಲ್ಲಿ ಪ್ರಥಮ ರ್ಯಾಂಕ್ ಪಡೆದು ಎಂಟನೇ ಸೆಮಿಸ್ಟರ್‌ನಲ್ಲಿ‌ ಸೆಕೆಂಡ್ ರ್ಯಾಂಕ್ ಬಂದಳೆಂದು ಆತ್ಮಹತ್ಯೆಗೆ ಶರಣಾಗಿದ್ದಳು!!! ಇಂದಿಗೂ ಕೆಲವರು ಮೆಡಿಕಲ್ ಸಿಗಲಿಲ್ಲವೆಂತಲೋ, ಪ್ರೇಮದಲ್ಲಿ ಯಶಸ್ಸು ಸಿಗಲಿಲ್ಲವೆಂತಲೋ, ಸಾಲ ಸೋಲ ಎಂತಲೋ ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ತಾರೆ.

​”ಗೆಲುವಿಗೆ ನೂರಾರು ಅಪ್ಪಂದಿರು, ಆದರೆ ಸೋಲು ಮಾತ್ರ ಅನಾಥ”, ‘ಎಲ್ಲರೂ ಗೆದ್ದ ಎತ್ತಿನ ಬಾಲ ಹಿಡಿಯುತ್ತಾರೆ’ ಎಂಬ ಮಾತುಗಳನ್ನು ನೀವು ಹಲವರ ಬಾಯಿಂದ ಕೇಳಿಯೇ ಇರುತ್ತೀರಿ. ಯಶಸ್ಸೆಂದರೆ ಯಾರಿಗೆ ಬೇಡ ಹೇಳಿ? ಯಶಸ್ಸಿನ ಬಗ್ಗೆ ಮಾರುಕಟ್ಟೆಯಲ್ಲಿ ಹಲವಾರು ಪುಸ್ತಕಗಳಿವೆ; ಇದರ ಬಗ್ಗೆ ಕಾರ್ಯಾಗಾರಗಳೂ ನಡೆಯುತ್ತಿರುತ್ತವೆ. ಗೆಲುವು ಅಷ್ಟೊಂದು ಅನಿವಾರ್ಯವಾ? ಎಂದು ಕೇಳಿದರೆ, ನನ್ನ ಉತ್ತರ ಹೌದು! ಯಾಕೆಂದರೆ ನಾವು ಹುಟ್ಟಿದ್ದೇವೆ, ಖಂಡಿತಾ ಸಾಯುತ್ತೇವೆ. ‘ಹುಟ್ಟೋದ್ಯಾಕೆ? ಸಾಯೋದ್ಯಾಕೆ? ಏನಾದರೂ ಸಾಧಿಸಿ ಹೋಗೋಕೆ’ ಎಂಬ ಹಾಡು ಹುಟ್ಟು ಮತ್ತು ಸಾಧನೆಯ ಮಹತ್ವವನ್ನು ತಿಳಿಸುತ್ತದೆ. ಇದರಿಂದ ಪ್ರೇರಣೆಗೊಂಡು ಏನಾದರೂ ಸಾಧಿಸಲು ಹೊರಟಾಗ ಕೆಲವರು, ‘ಮಗಾ ಇದು ನಿನ್ನ ಕೈಲಿ ಸಾಧ್ಯನಾ? ಆಗೋಲ್ಲ ಕಣೋ. ಇದು ದುಡ್ಡಿರೋ ದೊಡ್ಡವರ ಮಕ್ಕಳು, ಬ್ಯಾಕ್‌ಗ್ರೌಂಡ್ ಚೆನ್ನಾಗಿರೋರಿಂದ ಮಾತ್ರ ಸಾಧ್ಯ’ ಎಂದು ಹೇಳಿ, ಸಾಧಿಸಲು ಹೆಜ್ಜೆ ಇಡುವವನ ಕಾಲ ಕೆಳಗೆ ನಕಾರಾತ್ಮಕತೆಯ ಮುಳ್ಳನ್ನಿಡುತ್ತಾರೆ. ಹಾಗಾದರೆ ಸಾಧಿಸಿದವರೆಲ್ಲಾ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರಾ? ಎಂದು ತಿಳಿಯಲು ಇತಿಹಾಸ ಕೆದಕಿದರೆ, ಸಾಧನೆಗೆ ದುಡ್ಡು, ಜಾತಿ, ಧರ್ಮ, ಸಿರಿವಂತಿಕೆ, ಹುಟ್ಟಿದ ಸ್ಥಳ, ಕ್ವಾಲಿಫಿಕೇಷನ್ ಇವ್ಯಾವುವೂ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ತಿಳಿಯುತ್ತದೆ. ಸಾಧನೆಗೆ ಮನಸ್ಸು ಮಾಡಬೇಕಷ್ಟೇ!

​ನಾವು ಸಾಧಿಸಲು ಹೊರಟಾಗ ಹೊರಗಿನವರೇ ನಮ್ಮ ಸಾಧನೆಗೆ ಅಡ್ಡಿಯಾಗುತ್ತಾರೆ ಅಂತಲ್ಲ; ನಮ್ಮ ಮನಸ್ಸಿನಲ್ಲಿರುವ ನೆಗೆಟಿವ್ ಆಲೋಚನೆಗಳು, ಪೂರ್ವಗ್ರಹಪೀಡಿತರಾಗಿರುವಿಕೆ, ಸೋಮಾರಿತನ, ಮುಂದೂಡುವ ಮನೋಭಾವ, ಕ್ಷಣಿಕ ಪ್ರಲೋಭನೆಗಳಿಗೆ ಒಳಗಾಗುವಿಕೆ ಮುಂತಾದವು ಅಡ್ಡಿ ಬರುತ್ತವೆ. ಒಳ್ಳೆಯ ಭಾವನೆಗಳನ್ನು ಉಂಟುಮಾಡುವ ಮನಸ್ಸನ್ನು ಪಾಂಡವರಿಗೆ ಹೋಲಿಸಬಹುದಾದರೆ, ಕೆಟ್ಟ ಭಾವನೆಗಳನ್ನು ಉಂಟುಮಾಡುವ ಮನಸ್ಸನ್ನು ಕೌರವರಿಗೆ ಹೋಲಿಸಬಹುದು. ಹೀಗೆ ಕೌರವ-ಪಾಂಡವರ ಮಧ್ಯೆ ಸಿಲುಕಿಕೊಂಡ ಮನುಜನ ಮನಸ್ಸಿನಲ್ಲಿ ಕುರುಕ್ಷೇತ್ರ ಯುದ್ಧ ನಡೆದು, ಅವನು ಯಾರ ಮಾತಿಗೆ ಮನ್ನಣೆ ಕೊಡುತ್ತಾನೆ ಎಂಬುದರ ಮೇಲೆ ಅವನ ಯಶಸ್ಸು ನಿರ್ಧಾರವಾಗುತ್ತದೆ.

​ಹುಟ್ಟುವ ಮಗು ಧನಾತ್ಮಕ ಭಾವನೆಗಳನ್ನು ಹೊಂದಿರುತ್ತದಂತೆ. ಆದರೆ ಮನೋವಿಜ್ಞಾನಿಗಳ ಪ್ರಕಾರ, ಮಗು ತನ್ನ ಸುತ್ತಮುತ್ತಲಿನ ಪರಿಸರದಿಂದ ಹದಿಹರೆಯದ ವಯಸ್ಸಿಗೆ ಬರುವಷ್ಟರಲ್ಲಿ ಲಕ್ಷೋಪಲಕ್ಷ ನೆಗೆಟಿವ್ ಮಾತುಗಳನ್ನು ಕೇಳಿ ಕೇಳಿ ತನ್ನ ಮನಸ್ಸಿನಲ್ಲಿ ಋಣಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುತ್ತದಂತೆ! ಮನುಷ್ಯನ ಹುಟ್ಟೇ ಒಂದು ದೊಡ್ಡ ಹೋರಾಟದ ಗೆಲುವು. ಮನುಷ್ಯರಾಗಿ ನಾವು ಹುಟ್ಟಿದ್ದೇ ಕೋಟ್ಯಾನುಕೋಟಿ ವೀರ್ಯಾಣುಗಳ ವಿರುದ್ಧದ ಹೋರಾಟದ ಯಶಸ್ಸಿನಿಂದ! ನಾವಾಗಿ ಹುಟ್ಟಿದ ವೀರ್ಯಾಣು ಅಂಡಾಣುವನ್ನು ಸೇರುವಲ್ಲಿ ಸಫಲವಾಗಿದ್ದರಿಂದಲೇ ಇಂದು ನಾವು ಜನ್ಮ ತಳೆದಿರುವುದು! ಹುಟ್ಟಿನಲ್ಲೇ ನಮಗೆ ಯಶಸ್ಸು ಸಿಕ್ಕಿದೆ ಎಂದಮೇಲೆ ಇನ್ನು ಸಣ್ಣಪುಟ್ಟ ಸ್ಪರ್ಧೆಗಳಿಗೆ ನಾವ್ಯಾಕೆ ಕುಗ್ಗಿ ಹೆದರಬೇಕು? ತಲೆ ಕೆಡಿಸಿಕೊಳ್ಳದೆ ಜಸ್ಟ್ ಮುಂದೆ ಸಾಗುತ್ತಿರಬೇಕಷ್ಟೇ.

​“ಹಣ ಮಾಡಲು ಹೊರಟರೆ ಹಣ ಮಾತ್ರ ಮಾಡುತ್ತೀಯ; ಹೆಸರು ಮಾಡಲು ಹೊರಟರೆ ಹೆಸರು ಮಾತ್ರ ಮಾಡುತ್ತೀಯ. ಕೆಲಸ ಮಾಡುತ್ತೇನೆ ಅಂತ ಹೊರಡು, ಹಣ ಮತ್ತು ಹೆಸರು ಎರಡೂ ಹಿಂದೆ ಬರುತ್ತವೆ” ಎಂಬ ರವಿ ಬೆಳಗೆರೆಯವರ ಮಾತು ಕೆಲಸದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ನಾವೆಲ್ಲೇ ಇರಲಿ ‘ನಮ್ಮಿಂದ ಬೆಸ್ಟ್’ ಎನ್ನುವಷ್ಟು, ಎಷ್ಟು ಸಾಧ್ಯವಾಗುತ್ತದೋ ಅಷ್ಟನ್ನೂ ಮಾಡಬೇಕು. ಒಂದೊಮ್ಮೆ ಪ್ರತಿಫಲ ಸಿಗದೇ ಹೋದಲ್ಲಿ ಕೆಲಸ ಮಾಡುವ ವಿಧಾನವನ್ನು ಬದಲಾಯಿಸಿಕೊಳ್ಳಬೇಕು, ತಪ್ಪಿನಿಂದ ಪಾಠ ಕಲಿಯಬೇಕು.

ಒಮ್ಮೆ ಥಾಮಸ್ ಅಲ್ವಾ ಎಡಿಸನ್ ಅವರು ಎಲೆಕ್ಟ್ರಿಕ್ ಬಲ್ಬ್ ಕಂಡುಹಿಡಿಯುವಾಗ ಅವರ ಸಹಾಯಕ ಬೇಸರದಿಂದ, “ನಮ್ಮ ಎಲ್ಲ ಪ್ರಯತ್ನಗಳು ನಿಷ್ಫಲಗೊಂಡಿವೆ. ನಾವು ಇದರಿಂದ ಏನೂ ಕಲಿತಿಲ್ಲ” ಎಂದನಂತೆ. ಆಗ ಎಡಿಸನ್ ಅಷ್ಟೇ ಆತ್ಮವಿಶ್ವಾಸದಿಂದ, “ನಾವು ಸಾಕಷ್ಟು ದೂರ ಬಂದಿದ್ದೇವೆ, ಸಾಕಷ್ಟು ಸಂಗತಿಗಳನ್ನು ಕಲಿತಿದ್ದೇವೆ. ಇಷ್ಟಂತೂ ನಮಗೆ ಖಚಿತವಾಗಿ ಗೊತ್ತಿದೆ; ಒಂದು ಉತ್ತಮ ಬಲ್ಬ್ ಮಾಡಬೇಕೆಂದರೆ ಈಗಾಗಲೇ ಬಳಸಲಾಗಿರುವ ಯಾವುದೇ ಲೋಹದ ಫಿಲಮೆಂಟ್ ಅನ್ನು ಉಪಯೋಗಿಸಲು ಸಾಧ್ಯವೇ ಇಲ್ಲ” ಎಂದರು. ಎಡಿಸನ್ನರ ಈ ಮಾತು ಸಹಾಯಕನ ಮನೋಸ್ಥಿತಿಯನ್ನು ಬದಲಾಯಿಸಲು ಪ್ರೇರೇಪಿಸಿತಂತೆ.

“ಸೋಲು ಅಂತಿಮವಲ್ಲ; ಗೆಲುವು ಶಾಶ್ವತವಲ್ಲ” ಎಂಬಂತೆ ಕೆಲವರಿಗೆ ಯಶಸ್ಸು ಒಂದೊಂದೇ ಪ್ರಯತ್ನಕ್ಕೆ ಸಿಗಬಹುದು, ಕೆಲವರಿಗೆ ಸಿಗದಿರಬಹುದು. ಇಲ್ಲಿ ಯಶಸ್ಸು ಸಿಗದವರಿಗೆ ಯಾರೂ ಕಿಮ್ಮತ್ತು ಕೊಡುವುದಿಲ್ಲ. ಅಷ್ಟಕ್ಕೇ ಸುಮ್ಮನಿರದೆ ನಿಮ್ಮ ಮೇಲೆ ಟೀಕೆಗಳ ಅಸ್ತ್ರಗಳನ್ನೂ ಬಿಡಬಹುದು. ಇಂತಹ ಟೀಕಾಚಾರ್ಯರ ಮಾತಿಗೆ ಕಿವುಡರಾಗಬೇಕು. ಸಾಧನೆಯೇ ನಿಮ್ಮ ಉತ್ತರವಾಗಬೇಕೇ ಹೊರತು ಪ್ರತಿಟೀಕೆಗಳು ಉತ್ತರವಾಗಬಾರದು. ಈ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ ನಮಗೆ ಆದರ್ಶವಾಗಬೇಕು. ಯಾರಾದರೂ ಅವರನ್ನು ಕೆಣಕಿದರೆ ಅವರು ಬ್ಯಾಟಿನಿಂದ ಉತ್ತರಿಸುತ್ತಿದ್ದರೇ ಹೊರತು ಮಾತಿನಿಂದಲ್ಲ!! ‘ತಾಳಿದವನು ಬಾಳಿಯಾನು’ ಎಂಬಂತೆ ತಾಳ್ಮೆಯಿಂದ ಮುನ್ನಡೆಯಬೇಕು. ‘ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎಂಬ ಸ್ವಾಮಿ ವಿವೇಕಾನಂದರ ಮಾತು ನಮ್ಮ ಸಾಧನೆಗೆ ಸ್ಫೂರ್ತಿಯಾಗಬೇಕು; ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡಬಾರದು. ಕೆಲವರಂತೂ ಒಂದು ಕೆಲಸವನ್ನು ಪೂರ್ಣ ಮಾಡದೆ ಮತ್ತೊಂದಕ್ಕೆ ಅಣಿಯಾಗಿರುತ್ತಾರೆ. ಇಂತಹವರು ಈ ಸಾಲುಗಳನ್ನು ಅರಿಯಬೇಕು:

​”ಹತ್ತೆಡೆಯೊಳು ತೋಡಿ ಒಂದಡಿಯಷ್ಟನು
ಬರಲಿಲ್ಲ ನೀರೆನಬೇಡ |
ಒಂದೆಡೆಯೊಳು ತೋಡು ಹತ್ತಡಿಯಷ್ಟನು
ಚಿಮ್ಮುವುದುದಕವು ನೋಡಾ ||”

ಹಾಗೆಯೇ,

ಅಲ್ಲಮಪ್ರಭುಗಳು
‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ, ಧೀರರೂ ಅಲ್ಲ’  ಎಂದು ಹೇಳಿದ್ದಾರೆ. ಆದ್ದರಿಂದ ನಾವು ಸಿಕ್ಕ ಅವಕಾಶಗಳನ್ನು ಬಿಡದೆ ಸಾಧಿಸಿ ತೋರಿಸಬೇಕು.

​ನಾವೇನೇ ಸಾಧಿಸಬೇಕು ಎಂದು ಬಯಸಿದಲ್ಲಿ ಮೊದಲು ಕನಸು ಕಾಣಬೇಕು. “ಕನಸೆಂದರೆ ಮಲಗಿದಾಗ ಬರುವುದಲ್ಲ, ಯಾವ ಕನಸು ನಮಗೆ ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು” ಎಂಬ ಅಬ್ದುಲ್ ಕಲಾಂ ಅವರ ಮಾತು ಪ್ರೇರಣೆ ನೀಡಬೇಕು. ಚಿಕ್ಕ ಕನಸನ್ನು ಕಾಣುವುದು ಪಾಪವಂತೆ. ಆದ್ದರಿಂದ ಯಾವತ್ತೂ ದೊಡ್ಡ ಕನಸುಗಳನ್ನು ಕಂಡು ಅದರ ಬೆನ್ನತ್ತಬೇಕು.

ತೇನ್‌ಸಿಂಗ್ ನೋರ್ಗೆ ಅವರು  39 ನೇ ವಯಸ್ಸಿನಲ್ಲಿ ಎವರೆಸ್ಟ್ ಪರ್ವತ ಹತ್ತಿದಾಗ ಪತ್ರಕರ್ತರು ಬಂದು, ‘ಈ ವಯಸ್ಸಿನಲ್ಲಿ ನೀವು ಪರ್ವತ ಹತ್ತಿದ್ದು ಹೇಗೆ?’ ಎಂದು ಕೇಳಿದಾಗ ಅವರು, ‘ನಾನು ಹತ್ತಿದ್ದು ಹತ್ತನೇ ವಯಸ್ಸಿನಲ್ಲಿ’ ಎಂದರಂತೆ. ಪತ್ರಕರ್ತರು ‘ಅದು ಹೇಗೆ, ನೀವು ಹತ್ತಿದ್ದೇ ಈಗಲ್ಲವಾ?’ ಎಂದು ಕೇಳಿದಾಗ, ‘ನನ್ನ ತಾಯಿ ನನಗೆ ಹತ್ತನೇ ವಯಸ್ಸಿನಲ್ಲಿ ಪರ್ವತ ಹತ್ತಲು ಹೇಳಿದ್ದರು. ಅವತ್ತು ಹತ್ತಿದಂತೆ ಕನಸು ಕಂಡು ಅಂದೇ ಮಾನಸಿಕವಾಗಿ ಹತ್ತಿದ್ದೆ; ಇಂದು ದೈಹಿಕವಾಗಿ ಹತ್ತಿದ್ದೇನೆ’ ಎಂದರಂತೆ!

ಗೆಲ್ಲಲೇಬೇಕೆಂದು ಪಣ ತೊಟ್ಟವರು ‘ಸೊಯಿಚಿರೋ ಹೊಂಡಾ’ ರವರ ಹೋರಾಟದ ಹಾದಿಯನ್ನು ತಿಳಿಯಲೇಬೇಕು.ಈ ಮೂಲಕ‌ ತಮಗೆ ತಾವೇ ಪ್ರೇರಣೆ ಪಡೆದುಕೊಳ್ಳಬೇಕು. ಅವರ ಸಾಧನೆಯ ಕಥೆ ಹೀಗಿದೆ:

ಸೊಯಿಚಿರೋ ಹೊಂಡಾರ  ತಂದೆ ಒಂದು ಸೈಕಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದರು. ತಮ್ಮ ತಂದೆಯೊಂದಿಗೆ ಕೆಲಸ ಮಾಡುತ್ತಾ  ನಿಧಾನವಾಗಿ ಅವನಿಗೆ ಆಟೋಮೊಬೈಲ್ ಕ್ಷೇತ್ರದ‌ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಪುಸ್ತಕ ಹಿಡಿಯಬೇಕಾದ ಕೈಗಳು ಸ್ಪಾನರ್ ಕಡೆಗೆ ಆಕರ್ಷಿತವಾಗುತ್ತವೆ. ತಮ್ಮ ಜೀವನ‌ ರೂಪಿಸಿಕೊಳ್ಳಲು 15ನೇ ವಯಸ್ಸಿನಲ್ಲಿ ತಂದೆ ತಾಯಿಯನ್ನು ಬಿಟ್ಟು ಟೋಕಿಯೊಗೆ ತೆರಳಿ, ಆಟೋಮೊಬೈಲ್ ಗ್ಯಾರೇಜ್ ಒಂದರಲ್ಲಿ ಕಾರ್ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ಕೆಲಸ ಮಾಡಿ ಅನುಭವ ಪಡೆದು ತನ್ನದೇ ಆದ ಡಿಸೈನ್ ನಲ್ಲಿ ‘ಪಿಸ್ಟನ್ ರಿಂಗ್’ ತಯಾರಿಸಿ ಇದನ್ನು ಟೊಯಾಟೊ ಕಂಪೆನಿಗೆ ಮಾರಲು ಯೋಚಿಸಿ, ತನ್ನ ಹೆಂಡತಿಯ ಒಡವೆಗಳನ್ನು ಮಾರಿ ‘ಪಿಸ್ಟನ್ ರಿಂಗ್’ ತಯಾರಿಸುತ್ತಾನೆ. ಆದರೆ ಈ‌ ‘ಪಿಸ್ಟನ್ ರಿಂಗ’ನ್ನು ಆ ಕಂಪೆನಿ ತಿರಸ್ಕರಿಸುತ್ತದೆ. ಆಗ ಎಲ್ಲರೂ ಹೀಯಾಳಿಸಿದರೂ ಅವನು ತಲೆಕೆಡಿಸಿಕೊಳ್ಳಲಿಲ್ಲ.

ಮತ್ತೆ ಬೇರೆ ವಿನ್ಯಾಸದ ‘ಪಿಸ್ಟನ್ ರಿಂಗ್’ ತಯಾರಿಕೆಗೆ ಇಳಿಯುತ್ತಾರೆ. ಎರಡು ವರ್ಷದ ನಂತರ ತಯಾರಿಸಿದ ಪಿಸ್ಟನ್ ರಿಂಗನ್ನು ಟೊಯೋಟಾ ಕಂಪೆನಿ ಒಪ್ಪಿ ಅದು ಅವನಿಗೆ  ಫ್ಯಾಕ್ಟರಿ ಕಟ್ಟಲು ಹಣಕಾಸಿನ ನೆರವು ನೀಡುತ್ತದೆ. ವರ್ಷದಲ್ಲೇ ಅವನ ಕನಸಿನ‌ ಫ್ಯಾಕ್ಟರಿ ಸಿದ್ಧವಾಯಿತು. ಆಗ ಆತನ ಖುಷಿಗೆ ಪಾರವೇ ಇರಲಿಲ್ಲ. ಆದರೆ ಅಂದು ಸಂಭವಿಸಿದ ಭೂಕಂಪ‌ ಅವನ‌‌ ಕನಸನ್ನು ನುಚ್ಚು ನೂರು ಮಾಡಿತು. ಆದರೆ ಅವನು  ಹಠ ಬಿಡದೇ ಅದೇ ಜಾಗದಲ್ಲಿ  ಮತ್ತೆ ಫ್ಯಾಕ್ಟರಿ ಕಟ್ಟಲು ಮುಂದಾದಾಗ ಅವನಿಗೆ ಸಿಮೆಂಟ್‌ನ ಅಭಾವವಾಗುತ್ತದೆ. ಆಗ ಸ್ವತಃ ತಾನೇ ಸಿಮೆಂಟ್ ತಯಾರಿಸುವ ವಿಧಾನ ಕಂಡುಹಿಡಿದು ಕಾರ್ಖಾನೆ ಕಟ್ಟಿದ. ಆದರೆ, ಆಗ ಎರಡನೇ ಮಹಾಯುದ್ಧದ ಸಮಯವಾದ್ದರಿಂದ  ಯುದ್ಧದ ಬಾಂಬ್ ದಾಳಿಗೆ ಆ ಕಾರ್ಖಾನೆ ಸುಟ್ಟು ಭಸ್ಮವಾಯಿತು.

ಈ ಸಮಯದಲ್ಲಿ ಜಪಾನ್ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಟೊಯಾಟೋ ಒಳಗೊಂಡಂತೆ ಇತರೆ ಕಾರ್ಖಾನೆಗಳು ತಮ್ಮ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತದೆ. ಆಗ ಇವರ ‘ಪಿಸ್ಟನ್ ರಿಂಗ್ ಉಪಾಯ ನಿಲ್ಲುತ್ತದೆ. ಆಗ ಸಿಯಾಚಿರೋ ತನ್ನ ಕನಸನ್ನು ಬದಲಾಯಿಸುತ್ತಾರೆ.

ಯುದ್ಧದ ನಂತರ ಜಪಾನಿನಲ್ಲಿ ಪೆಟ್ರೋಲ್‌ಗೆ ತೀವ್ರ ಅಭಾವವಿತ್ತು, ಜನರಿಗೆ ಓಡಾಡಲು ವಾಹನಗಳಿರಲಿಲ್ಲ. ಅಲ್ಲಿನವರು ಸೈಕಲ್‌ಗಳಲ್ಲಿ ಓಡಾಡಲು ಶುರು ಮಾಡುತ್ತಾರೆ. ಇದನ್ನೇ ಪಾಸಿಟಿವ್ ಆಗಿ ತೆಗೆದುಕೊಂಡ ಸಿಯಾಚಿರೋಗೆ  ಅವನ ಮನೆಯ ಮೂಲೆಯಲ್ಲಿದ್ದ ಒಂದು ಸಣ್ಣ ಜನರೇಟರ್ ಎಂಜಿನ್ ತೆಗೆದುಕೊಂಡು ಅದನ್ನು ತಮ್ಮ ಸೈಕಲ್‌ಗೆ ಜೋಡಿಸಿ, ಟರ್ಪಂಟೈನ್ ಎಣ್ಣೆಯಿಂದ ಓಡುವಂತಹ ಪುಟ್ಟ ಮೋಟಾರ್ ಸೈಕಲ್ ತಯಾರಿಸಿದನು. ಆದರೆ ತಯಾರಿಸಿದ ವಾಹನದ ಗಾತ್ರ ಹಾಗೂ ಭಾರದಿಂದ ಜನ ಕೊಂಡುಕೊಳ್ಳದೇ ಈ ಯೋಜನೆಯೂ ಹಳ್ಳ ಹಿಡಿದಾಗ ಅವನಿಗೆ ಮತ್ತೆ ಸೋಲು!! ಆಗ ಅವನು ಇದನ್ನೇ ಬದಲಾಯಿಸಿ ಜನರ ಅಗತ್ಯತೆಗೆ ತಕ್ಕಂತೆ ಡಿಸೈನ್ ಮಾಡುತ್ತಾನೆ. ಇದಕ್ಕೆ ‘ಹೊಂಡಾ ದಿ ಸೂಪರ್ ಕಬ್’ ಎಂದು ಹೆಸರಿಡುತ್ತಾನೆ. ಅದು ಜನರಿಗೆ ಎಷ್ಟು ಇಷ್ಟವಾಯಿತೆಂದರೆ ಅಂದಿನಿಂದ ಸೊಯಾಚಿರೋ ನಿಜವಾದ ಯಶಸ್ಸಿನ ಕಥೆ ಶುರುವಾಗುತ್ತದೆ.

ಕೇವಲ ಸೈಕಲ್‌ಗೆ ಎಂಜಿನ್ ಜೋಡಿಸುವುದರಿಂದ ಶುರುವಾದ ಅವರ ಪಯಣ, ಮುಂದೆ ಜಗತ್ತಿನ ಅತ್ಯುತ್ತಮ ಬೈಕ್‌ಗಳು, ಕಾರುಗಳು ಮತ್ತು ಜೆಟ್ ವಿಮಾನಗಳನ್ನು ತಯಾರಿಸುವ ಮಟ್ಟಕ್ಕೆ ಬೆಳೆಯಿತು.

​ಡಿಯರ್ ಫ್ರೆಂಡ್ಸ್, ಸಾಧಿಸಲು ಹೊರಟಾಗ ನಿಮಗೂ ನೂರೆಂಟು ವಿಘ್ನಗಳು ಎದುರಾಗಬಹುದು. ಆಗ ನೀವು ಅವಕ್ಕೆ ಹೆದರಿ ‘ಕಳ್ಳನಿಗೊಂದು ಪಿಳ್ಳೆ ನೆವ’ ಎಂಬಂತೆ ಹಿಡಿದ ಕೆಲಸ ಬಿಟ್ಟಿರೆಂದರೆ ನಿಮ್ಮ ಕಥೆ ಮುಗಿಯಿತು.

ಲಾಸ್ಟ್ ಮಾತು: “ಬೆಸ್ಟ್ ಡ್ರೈವರುಗಳು ಸೃಷ್ಟಿಯಾಗುವುದು ಒಳ್ಳೆಯ ರಸ್ತೆಯಲ್ಲಲ್ಲ!” ಎಂಬುದನ್ನು ನೆನಪಿಡಿ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ