ಎಪ್ಪತ್ತೈದು ದಾಟಿ ಎಂಭತ್ತರ ಸನಿಹ ತಲುಪಿದ ಯುಮುನಜ್ಜಿ ಇಂದು ಮುಂಜಾನೆಯಿಂದ ಈ ಮನೆಯಲ್ಲಿ ತನ್ನ ಹಕ್ಕನ್ನು ದಿನಕ್ಕಿಂತ ಹೆಚ್ಚಿನ ಪ್ರಮಾಣದಲ್ಲೇ ಚಲಾಯಿಸುವ ಆವೇಶ ತುಂಬಿಕೊಂಡವಳಂತೆ ಕಾಣುತ್ತಿದ್ದಳು. ಹೊರ ಥೆಣೆಯಲ್ಲಿ ಎಡಬದಿಗೆ ಉತ್ತರಾಭಿಮುಖವಾಗಿ ಕೂತು ದೊಡ್ಡಮ್ಮನ ತಿಥಿಗೆಂದು ಶ್ರದ್ಧೆಯಿಂದ ತಯಾರಿ ನಡೆಸುತ್ತಿದ್ದ ಮಗ ಸದಾನಂದನ ಬಳಿ ಹೋಗಿ ನಿಂತವಳೇ ‘ನಿನ್ನ ದೊಡ್ಡಮ್ಮನಿಗೆ ಕೆಸುವಿನ ಪತ್ರೊಡೆ ಎಂದರೆ ಪಂಚ ಪ್ರಾಣವಾಗಿತ್ತು. ಎಷ್ಟು ಹೇಳಿದರೂ ನಿನ್ನ ಹೆಂಡತಿ ಕೆಸುವಿನ ಓಳಿಯ ಬದಿಗೆ ಹೋದಂತೆಯೇ ಕಾಣಲಿಲ್ಲ, ನೀನಾದರೂ ಸ್ವಲ್ಪ ಹೇಳೋ’ ಎಂದಿದ್ದಾಳೆ. ‘ಯಾಕಷ್ಟು ಅವಸರ? ಮಾಡುತ್ತಾಳೆ ಬಿಡು’ ಅಂತ ಸದಾನಂದ ತನ್ನ ಎಂದಿನದೇ ಆದ ತಣ್ಣಗಿನ ದನಿಯಲ್ಲಿ ಉಸುರಿದ.

ಬೆಳಿಗ್ಗೆ ಎದ್ದಾಗಿನಿಂದ ಒಂದೇ ಸಮ ಒಲೆಯ ಮುಂದೆ ಗುದ್ದಾಡಿ ಹೈರಾಣಾಗಿ ಹೋದ ನಲ್ವತ್ತೈದರ ಶಾಲಿನಿ, ಒಳ ಬಂದ ಗಂಡನ ಹತ್ತಿರ, ‘ಪತ್ರೊಡೆ ಮಾಡಲು ಇವತ್ತು ಸಾಧ್ಯವೇ ಇಲ್ಲ, ಅದೇನದು ಯಾವ ವರ್ಷವೂ ಇಲ್ಲದ್ದು, ಈ ವರ್ಷ ಮಾತ್ರ ನಿಮ್ಮ ಅಮ್ಮನಿಗೆ ಜ್ಞಾಪಕಕ್ಕೆ ಬಂದದ್ದು?’ ಎಂದು ಗುನುಗುನಿಸಿ, ರವೆ ಪಾಯಸಕ್ಕೆಂದು ಎಳೆಯ ತೆಂಗಿನ ಕಾಯಿ ಹೆಕ್ಕಿ ಒಡೆಯತೊಡಗಿದಳು. ‘ಅವಶ್ಯವಿದ್ದಷ್ಟೇ ಆಗಲಿ ಈಗ, ಸುಮ್ಮನೆ ಒಂದೂ ಮತ್ತೊಂದು ಅಂತ ಕೆಲಸ ಬೆಳೆಸಿಕೊಂಡರೆ, ಅಲ್ಲಿ ಭಟ್ಟರು ಬಂದರೂ ಇಲ್ಲಿ ಅಡುಗೆ ಮುಗಿಯುವುದಿಲ್ಲ` ಎಂದು ದನಿಯೆತ್ತರಿಸಿ ಹೇಳುತ್ತ, ಶಾಲಿನಿ ಉದ್ದಿನ ಅಂಬೊಡೆಗೆ ಅರೆಯುವುದಿನ್ನೂ ಬಾಕಿ ಉಳಿದಿದೆಯೆಂದು ನೆನಪು ಮಾಡಿಕೊಂಡು ಗಡಿಬಿಡಿಗೆ ಬಿದ್ದಳು.

‘ಪುರೋಹಿತರು ಬರುವುದು ಒಂದೋ ಒಂದೂವರೆಯೋ ಆದೀತು, ಅಷ್ಟರೊಳಗೆ ಬೇಳೆಯ ತೊವ್ವೆಗೊಂದು ಒಣಮೆಣಸಿನ ವಗ್ರಣೆ ಹಾಕಿಬಿಡು, ವಗ್ಗರಣೆಯ ಮೆಣಸು ತುಸು ಕರ್ರಗೆ ಹುರಿಯಲಿ, ಅದನ್ನೇ ಅನ್ನದಲ್ಲಿ ನುರಿದೂ ನುರಿದೂ ಉಣ್ಣುತ್ತಿತ್ತದು’ ಎಂದು ಅಡಿಗೆ ಖೋಲಿಯ ಮೆಟ್ಟಿಲಲ್ಲೇ ಕೂತು ಯಮುನಜ್ಜಿ ಆಜ್ಞಾಪಿಸುತ್ತಿದ್ದಾಗ ಆಗಲೇ ಹನ್ನೆರಡು ಹೊಡೆದಿತ್ತು. ಪಡುವಲಕಾಯಿಯ ಗೊಜ್ಜಿಗೆ ಅರೆಯಲು ಹಿಡಿದು ಕೂತ ಶಾಲಿನಿಗೆ ರೇಗಿ ಹೋಯಿತು.

ಯಮುನಜ್ಜಿ ಸವತಿ ಗಂಗಜ್ಜಿ ಸತ್ತು ಮೂವತ್ತು ವರ್ಷಗಳೇ ಕಳೆದಿವೆ. ವರ್ಷಂಪ್ರತಿ ಬರುವಂತೆ ವಟಸಾವಿತ್ರಿ ಹುಣ್ಣಿಮೆಯ ಈ ಮಿಥಿಗೇ ಅವಳ ಶ್ರಾದ್ದದ ದಿನ, ತಾನು ಹೋಗುತ್ತಿದ್ದೇನೆ ಅಂತ ಹೇಳಿ ಸತ್ತ ಗಂಗಜ್ಜಿ ಅವಳು. ತನ್ನ ಆ ಅಕ್ಕನಿಗೆ ಯಾವ ಅಡಿಗೆಗೆ ಏನೇನು ಹಾಕಿ ರುಚಿಕಟ್ಟಾಗಿ ಮಾಡಿದರೆ, ಸೇರುತ್ತಿತ್ತು ಎಂಬುದನ್ನೆಲ್ಲ ಯಮುನಜ್ಜಿ ತನ್ನ ಸವತಿಯ ಜೊತೆಗಿನ ಅನೇಕ ವರ್ಷಗಳ ಕೂಡು ಸಂಸಾರದಲ್ಲಿ ಕಂಡುಕೊಂಡ ಅನುಭವವನ್ನು ನೆನಪಿಸುತ್ತ ಕನವರಿಸುತ್ತಿದ್ದಾಳೆ.

ದೊಡ್ಡ ಅರೆಯುವ ಕಲ್ಲಿನಲ್ಲಿ ಇಷ್ಟೇ ಇಷ್ಟು ಪಡುವಲಕಾಯಿ ಗೊಜ್ಜು ಅರೆಯಲು ಹಾಕಿಕೊಂಡು ಕೂತಿದ್ದು, ಅದು ಅತ್ತಿತ್ತ ಸಿಡಿಯುವ ರಭಸಕ್ಕೆ ಅಸಮಾಧಾನಗೊಂಡಿದ್ದ ಶಾಲಿನಿ, ‘ಅವಸರ ಮಾಡಿದರೆ ನನ್ನ ಕೈಲಾಗೊಲ್ಲ, ಹೊರಗೆ ಹೋಗಿ ನೀವು’ ಎಂದು ಅತ್ತೆಯ ಮುಖದ ಮೇಲೆ ಹೊಡೆದಂತೆ ಹೇಳಿಬಿಟ್ಟಳು. ಅದೇ ಅವಮಾನದ ಸೆಡವು ಹೊತ್ತ ಯುಮುನಜ್ಜಿ ‘ಈಗೀಗ ಬಂದು ಹೊಕ್ಕವರಿಗೆಲ್ಲ ಎಂಥ ಅಹಂಕಾರ ನೋಡು’ ಎಂದು ಗೊಣಗುತ್ತ ಹೊರ ನಡೆದಳು. ‘ಪ್ರತಿಸಲದ ತಿಥಿಗೂ ಏನಾದರೊಂದು ಇದ್ದದ್ದೇ ಇವರದು` ಎಂದುಕೊಳ್ಳುತ್ತಲೇ ಶಾಲಿನಿ, ಗೊಜ್ಜನ್ನು ಪಾತ್ರೆಯಲ್ಲಿ ತೆಗೆಯುತ್ತ ಅರೆಯುವ ಕಲ್ಲನ್ನು ಅಗತ್ಯಕ್ಕಿಂತ ಹೆಚ್ಚೇ ಗಡಗಡ ಸದ್ದು ಮಾಡಿ ತೊಳೆದಳು. ಅತ್ತೆ ಸೊಸೆಯ ಮಧ್ಯೆ ತನ್ನದೊಂದು ಯಾಕೆ ರಾಮಾಯಣ ಅಂತ ಯೋಚಿಸುತ್ತ ಸದಾನಂದ ಏನೊಂದೂ ಕೇಳಿಸಿಕೊಳ್ಳದವನಂತೆ, ಗಂಟೆ ಆರತಿಗಳನ್ನು, ಅಗರಬತ್ತಿ ಅರಿಸಿಣಕೊಂಬುಗಳನ್ನು ಹೂವಿನತಟ್ಟೆ ಹಾಗೂ ಮಣೆಗಳನ್ನೂ ಜೋಡಿಸಿಟ್ಟು, ಎಲ್ಲ ಸರಿಯಾಗಿದೆಯೇ ಅಂತ ಇನ್ನೊಮ್ಮೆ ಪರೀಕ್ಷಿಸಿದ. ಏನೋ ನೆನಪಾದವನಂತೆ ಥಟ್ಟನೆ ಎದ್ದು, ‘ಶಾಲೀ, ಸ್ವಲ್ಪ ನವಧಾನ್ಯ ಹಾಕಿ ತಂದಿಡು ಭಟ್ಟರಿಗೆ ಕೊಡಲು’ ಎಂದು ಗೊಗರೆಯುವ ಧಾಟಿಯಲ್ಲಿ ಹೇಳಿದ. ‘ನನ್ನ ಕೈ ಖಾಲಿ ಇಲ್ಲ ಇಲ್ಲಿ, ನೀವೇ ನೋಡಿ ತೆಗೆದಿಡಿ’ ಶಾಲಿನಿ ಒಳಗಿಂದಲೇ ಗುಡುಗು ಹಾಕಿದಳು.

ಯಮುನಜ್ಜಿಯ ಮೈಯೆಲ್ಲ ಉರಿದು ಹೋಯಿತು. ಪತ್ರೊಡೆಯ ಸಂಗತಿಯನ್ನು ಈ ಸೊಸೆಯ ಬಳಿ ಅಂಗಲಾಚುವಂತೆಯೇ ಇಲ್ಲ. ಅಸಹಾಯಕತೆ ಸುತ್ತಿಕೊಳ್ಳತೊಡಗಿದಂತೆ ಯಮುನಜ್ಜಿ, ಬಾವಿಯ ಬದಿಯ ಹೊಂಡದಲ್ಲಿ ಬೆಳೆಸಿದ್ದ ಕೆಸುವಿನ ಓಳಿಯ ಬದಿಗೆ ತಾನೇ ಬಿರ್ರನೆ ನಡೆದಳು. ಐದಾರು ದೊಡ್ಡ ಬಲಿತ ಎಲೆಗಳನ್ನು ಕೈಯಲ್ಲೇ ಮುರಿದುಕೊಂಡು ಎದೆಗವುಚಿ ಹಿಡಿದು ಮನೆ ತಲುಪುವಷ್ಟರಲ್ಲಿ ಮೈ ಕೈಯೆಲ್ಲ ತುರಿಕೆಯೆದ್ದು ಥಖಧಿಮಿ ಕುಣಿದಾಡುವಂತಾಗಿಬಿಟ್ಟಿತು. ‘ನಿನಗೆ ಬೇಡದ ಉಸಾಬರಿ ಯಾಕಾಗಿತ್ತು? ನೋಡೀಗ’ ಎನ್ನುತ್ತ ಸದಾನಂದ ತುರಿಕೆ ಬಂದೆಲ್ಲೆಲ್ಲ ತಿಕ್ಕಿಕೊಳ್ಳುವಂತೆ ಹುಣಸೆ ಉಪ್ಪುಗಳನ್ನು ನೀಡಿದ. ಹುಣಸೆ ಹುಳಿಯಲ್ಲೇ ಮೈ ಕೆರೆದುಕೊಳ್ಳುತ್ತ, ‘ಇಂದು ಪತ್ರೊಡೆ ಮಾಡಿ ಪಿಂಡದ ನೈವೇದ್ಯಕ್ಕೆ ಬಡಿಸದಿದ್ದರೆ ನಾನು ಯಮುನೆಯೇ ಅಲ್ಲ, ಸವತಿಗಾಗಿ ಅಷ್ಟೂ ಮಾಡದಿದ್ದರೆ ನಾನಿದ್ದೇನು ಪ್ರಯೋಜನ?’ ಎಂದು ಪ್ರತಿಜ್ಞೆ ಗೈದಂತೆ ಹೇಳಿ, ಹುಶ್, ಹುಶ್ ಎಂದು ಅಗ್ಗು ತೆಗೆಯುತ್ತಲೇ ಯಮುನಜ್ಜಿ ಸೊಂಟ ಬಗ್ಗಿಸಿ ಒಂದು ಬಕೇಟಿಗೆ ಕೊಡದ ನೀರು ಬಗ್ಗಿಸಿ, ಕೆಸುವಿನ ಎಲೆಗಳನ್ನು ತೊಳೆಯಲು ಮುಂದಾದಳು.

‘ಆ ಪತ್ರೊಡೆಗೆ ಎಂಥದು ಅವಸರ ಈಗ? ನಾನು ಅನ್ನಕ್ಕಿಡಬೇಕು, ಭಟ್ಟರು ಬರುವ ಹೊತ್ತಾಯ್ತು, ಅನ್ನ ಬಿಸಿಯಿದ್ದರೆ ಪಿಂಡ ಕಟ್ಟುವಾಗ ಕೈ ಸುಡ್ತದೆ, ಸ್ವಲ್ಪ ಮುಂಚೇ ಅನ್ನ ಮಾಡಿ ತಣಿಯಲು ಹಾಕಿಡು ಅಂತ ಇವರು ಸಿಟ್ಟು ಮಾಡ್ತಾರೆ` ಎಂದು ಉರಿ ಉರಿ ಮುಖ ಹೊತ್ತು ಪುನಃ ಸಿಡುಕಿದ್ದಾಳೆ ಶಾಲಿನಿ. ಯಮುನಜ್ಜಿಯ ರೋಷ ಎಲ್ಲಿತ್ತೋ, ಎಷ್ಟು ದಿನದ್ದು ಬಾಕಿಯಿತ್ತೋ, ಒಮ್ಮೆಗೆ ಅದು ಏರಿ ಬಂದಂತೆ ‘ಸತ್ತು ಹೋದವಳು ನನ್ನ ಅಕ್ಕ, ಸವತಿಯಾಗಿದ್ದರೂ ಅದು ಒಂದು ದಿನವೂ ನಿನ್ನಂತೆ ಕಾಡಲಿಲ್ಲ, ನಾನು ಮತ್ತು ಅದು ಆಳಿದ ಮನೆ ಇದು, ನೀನು ಈಗ ಬಂದವಳು ಎಲ್ಲವೂ ನನ್ನ ಮಗ ಕೊಟ್ಟ ಸಲಿಗೆ’ ಯಮುನಜ್ಜಿಯ ದನಿ ಏರುತ್ತ ಸಾಗಿದ್ದು ನೋಡಿ, ‘ಎಲ್ಲ ಗೊತ್ತಿದೆ ನಂಗೆ, ಈಗ ದೊಡ್ಡದಾಗಿ ಹೇಳಲು ಬರಬೇಡಿ, ಪಾಪ ಅವರನ್ನು ಕೆಲಸದಾಳಿಗಿಂತ ಕಡೆಯಾಗಿ ಕಂಡಿದ್ದೀರಂತೆ ನೀವು’ ಎಷ್ಟು ಹೇಳಬಾರದೆಂದುಕೊಂಡರೂ ಎಂಥದೋ ಬಾಯಿ ತುರಿಕೆ ಎದ್ದು, ರಾಶಿ ದಿನಗಳಿಂದ ಮನಸ್ಸಿನಲ್ಲಿದ್ದ ಮಾತು ಹೇಳಿಯೇ ಬಿಟ್ಟಿದ್ದಳು ಶಾಲಿನಿ.

ಶಾಲಿನಿಯ ಮಾತು ಹರಿತ ಬಾಣದಂತೆ ಎದೆ ಹೊಕ್ಕಿದ್ದೇ ಯಮುನಜ್ಜಿ ಕೈ ಕಾಲು ಸೋತಂತೆ ಬವಳಿ ಬಂದು ಬೀಳುವ ಹಾಗಾಗಿ ಅಲ್ಲೇ ಕುಸಿದು ಕೂತು, ‘ಅಯ್ಯೋ ಅಯ್ಯೋ ಯಾರು ಹೇಳಿದರೇ ಚಾಂಡಾಲಿ ನಿನಗಿದೆಲ್ಲ? ಅಯ್ಯೋ ಅಯ್ಯೋ ಎಂಥೆಂಥ ಕಷ್ಟ ಕಂಡಿದ್ದೇನೆ ಈ ಮನೆಯಲ್ಲಿ, ಏನಿತ್ತು ನಾನಿಲ್ಲಿ ಬಂದಾಗ? ಬರೀ ಮಣ್ಣಿನ ಗುಡಿಸಲು, ನನ್ನ ಮಗ ಗದ್ದೆ ಭಾಗಾಯತ ಅಂತ ಹಗಲೂ ರಾತ್ರಿ ದುಡಿದು ಈ ಹಂಚಿನ ಇಮಾರತು ಕಟ್ಟಿದ್ದು, ಹಾಗಾಗಿ ನಿಂಗೆ ನೆಲವೇ ಕಾಣೋದಿಲ್ಲ. ಅಯ್ಯೋ ಅಯ್ಯೋ ಬಾಯಿ ಮುಚ್ಕೊಂಡು ಪತ್ರೊಡೆಗೆ ಬೇಳೆ ನೆನೆಯಿಡು’ ಹೇಳುತ್ತ ಹೇಳುತ್ತ ಒಳಗೆಲ್ಲೋ ತತ್ತರ ನಡುಗಿ ಹೋದಳು ಯಮುನಜ್ಜಿ. ಏನಕ್ಕೋ ಒಳಬಂದ ಸದಾನಂದ ಹೆಂಡತಿಗಷ್ಟೇ ಕೇಳುವಂತೆ ‘ನಮ್ಮಮ್ಮನ ಬಾಯಲ್ಲಿ ಕೋಲು ಹಾಕಲು ಈ ದಿನವೇ ಆಗಬೇಕಿತ್ತೇ?’ ಎಂದು ಸಣ್ಣಗೆ ಗದರಿದ.

ಈಗ ಮಾತಾಡಿ ಪ್ರಯೋಜನವಿಲ್ಲವೆಂಬಂತೆ ಶಾಲಿನಿ, ಒಲೆಯ ಬೆಂಕಿ ಮುಂದೂಡುತ್ತ, ಮರಳುತ್ತಿದ್ದ ಎಸರಿಗೆ ತೊಳೆದಿಟ್ಟಿದ್ದ ಅಕ್ಕಿ ಹೊಯ್ದಳು. ಹಸಿ ಕಟ್ಟಿಗೆ ಬೇರೆ ಜರಜರ ಬೆಂಕಿಯಾಗದೇ ಹೊಗೆಯಿಂದ ಉಸಿರುಕಟ್ಟಿಸಿದಂತಾಗುತ್ತಿತ್ತು. ಬೆಳಿಗ್ಗೆ ಎದ್ದು ಅರೆದಿಟ್ಟ ಉದ್ದಿನ ಹಿಟ್ಟಿಗೆ ಅರಿಸಿಣ ಬೆರಸಿ, ಉಪ್ಪು ಹಾಕಿ ತಿರುವಿ ಹಂಚನ್ನೆತ್ತಿದ ಶಾಲಿನಿ, ದೋಸೆ ಹೊಯ್ಯುತೊಡಗಿದ್ದೇ, ಯಮುನಜ್ಜಿಗೆ ತನ್ನ ಪತ್ರೊಡೆಯಿಂದು ತಯಾರಾಗುವುದಿಲ್ಲ ಎಂದು ಖಾತ್ರಿಯಾಗಿಬಿಟ್ಟಿತು.

‘ಮಕ್ಕಳಿಲ್ಲದ ಈ ಮನೆಗೆ ಬೆಳಕು ಹಚ್ಚಲು ನನ್ನನ್ನು ತಂದದ್ದು ಅದೇ, ಮಹಾಸತಿ ಅದು, ಅಂಥ ತ್ಯಾಗವಂತಳ ತಿಥಿಗೆ ಎರಡು ಪತ್ರೊಡೆ ಮಾಡಿ ಹಾಕಲು ನನ್ನಿಂದಾಗಿಲ್ಲ ಅಂದರೆ ನಾನು ಯಾಕಿರಬೇಕು ಈ ಭೂಮಿಯಲ್ಲಿ` ಯಮುನಜ್ಜಿಯ ಸರಭರಾಟ ಇನ್ನೂ ಹೆಚ್ಚುತ್ತಲೇ ಇತ್ತು. ಎದ್ದು ಎತ್ತಲಾದರೂ ಓಡಿ ಹೋಗಿಬಿಡಬೇಕು ಎನ್ನುವಷ್ಟು ಒತ್ತಡವಾದದ್ದೇ ಹೊರ ಜಿಗಿದು ಬಂದ ಶಾಲಿನಿ, ‘ಸ್ವಲ್ಪ ಒಳಗೆ ಬನ್ನಿರಿಲ್ಲಿ, ಏನು ನಡೀತಿದೆ ನೋಡಿರಿಲ್ಲಿ, ಪದೇ ಪದೇ ತನ್ನ ಸವತಿಯ ಮಹಾ ತ್ಯಾಗದ ಗುಣಗಾನ ಮಾಡುವುದು ನೋಡಿ ಅವರು, ಅಂಥ ತ್ಯಾಗ ನನ್ನಿಂದಾಗಿಲ್ಲ ಅಂತಲೇ ಅವರು ಹೇಳುತ್ತಿರುವುದು’ ಅನ್ನುತ್ತ ನಡು ನಡುಗಿ ಹೊರಬಂದ ದನಿಯ ಹಿಂದೆಯೇ ಶಾಲಿನಿಗೆ ದುಃಖ ಉಮ್ಮಳಿಸಿ ಬಂತು. ‘ಅದು ವಿಷಯವೇ ಅಲ್ಲ, ಸುಮ್ಮನಿದ್ದು ಬಿಡು, ಇದ್ದುಬಿಡು ಸುಮ್ಮನೆ` ಎಂದು ರಮಿಸುತ್ತ ಸದಾನಂದ ಎಲ್ಲರಿಂದ ಬಿಡಿಸಿಕೊಳ್ಳುವಂತೆ ಆರಾಮ ಖುರ್ಚಿಯಲ್ಲಿ ಕೂತು, ಗಂಟುಬಿದ್ದ ಹೊಸ ಜನಿವಾರದ ಎಳೆಯನ್ನು ಹಿಡಿದು ನಿಧಾನ ಬಿಡಿಸತೊಡಗಿದ.

‘ನಿನ್ನ ಬಳಿ ಆಗದಿದ್ದರೆ ಬಾಯ್ಬಿಟ್ಟು ಹೇಳ್ಬಿಡು, ನಾನೇ ಮಾಡುವೆ, ನನ್ನ ಕರ್ಮ ಅದು, ಎಲ್ಲ ನನ್ನ ಮಗ ಕೊಟ್ಟ ಸವಲತ್ತು ಇದು’ ಎಂದ ಯಮುನಜ್ಜಿ, ತೊಗರೀ ಬೇಳೆಯ ಡಬ್ಬ ಹುಡುಕ ತೊಡಗಿದಾಗ ಶಾಲಿನಿ, ಡಬ್ಬ ಇದ್ದ ಜಾಗೆ ಮಾತ್ರ ಹೇಳಲಾರೆನೆಂಬಂತೆ ಬಾಯ್ಮುಚ್ಚಿಕೊಂಡು, ಅತ್ತ ಒಂದು ಕಣ್ಣಿಟ್ಟೇ ಇತ್ತ ಬೆಂದ ಅನ್ನವನ್ನು ಬಾಗಲು ಹಾಕುವಾಗ, ಅದರ ಗಂಜಿ ಚೂರು ಕೈ ತಾಗಿ, ಉರಿವ ಬೆರಳನ್ನು ಸರಸರ ಝಾಡಿಸಿದಳು. ‘ಎಲ್ಲ ಗೊತ್ತಂತೆ, ಗೊತ್ತಿರೋದೇನು ಮಣ್ಣು? ಹೇಳಿಕೆ ಮಾತು ಕೇಳಿ ಕುಣಿತದೆ, ಪತ್ರೊಡೆ ಮಾಡೆಂದರೆ ಎಷ್ಟೆಲ್ಲ ಮಾತು ಅದು’ ಸೊಂಟ ನೆಟ್ಟಗೆ ಮಾಡಿ ನಿಂತು ಡಬ್ಬ ತಡಕಾಡುತ್ತಿದ್ದ, ಯಮುನಜ್ಜಿಯ ಮಿಂದ ತಲೆಯ ಮುಡಿಯಲ್ಲಿರುವ ತೆಳ್ಳಗಿನ ಕೂದಲು, ಗಂಟು ಹಾಕುತ್ತಲೇ ಮತ್ತೆ ಮತ್ತೆ ಬಿಚ್ಚಿಕೊಳ್ಳುತ್ತಿತ್ತು. ಅತ್ತೆ ಮಾಡೆಂದು ಒತ್ತಾಯಿಸುತ್ತಿದ್ದ ಪತ್ರೊಡೆಯನ್ನು ಮಾಡಲೇ ಕೂಡದೆಂದು, ಸೊಸೆ ಮಾಡಲು ಮನಸ್ಸು ಮಾಡದ ಪತ್ರೊಡೆಯನ್ನು ಮಾಡಿಯೇ ತೀರಬೇಕೆಂದು ಶಪಥ ಮಾಡಿದವರಂತೆ ಜಿದ್ದಿಗೆ ಬಿದ್ದಿದ್ದರು.

ಇಬ್ಬರನ್ನೂ ಸುಮ್ಮನುಳಿಸುವ ಏಕೈಕ ಅಸ್ತ್ರವೆಂಬಂತೆ ಸದಾನಂದ ‘ಭಟ್ರು ಬಂದ್ರು ಭಟ್ರು’ ಎನ್ನುತ್ತ ಒಳಹೋಗಿ ‘ಅಮ್ಮನಿಗೆ ಹಸಿವಾಗಿದೆ, ದಿನಾ ಇಷ್ಟೊತ್ತು ಗಂಜಿ ಗಿಂಜಿ ಉಂಡು ಮಲಗಿರುತ್ತಿತ್ತು, ಮೊಸರಿದ್ದರೆ ಅದಕ್ಕೊಂದಿಷ್ಟು ಅವಲಕ್ಕಿ ಬೆರೆಸಿ ಕೊಡು’ ತಣ್ಣಗೆ ಹೆಂಡತಿಯ ಕಿವಿಯಲ್ಲಿ ಅಂದ. ‘ನೀವೇ ಚೂರು ಮಾಡಿ ಕೊಟ್ಟರಾಗದೇ?’ ಗಂಡನ ಮೇಲೆ ಹತ್ತಿಕೊಂಡೇ ಬಂದಳು ಶಾಲಿನಿ. ಸದಾನಂದ ಬಾಯಿ ಮುಚ್ಚಿಕೊಂಡು ಕಪಾಟಿನ ಸಾಲಿನಲ್ಲಿ ಅವಲಕ್ಕಿ ಡಬ್ಬ ತಡಕತೊಡಗಿದ. ಮೊಸರವಲಕ್ಕಿ ಹೊಟ್ಟೆ ಸೇರಿದ್ದೇ ಯಮುನಜ್ಜಿಯ ಕಿಚ್ಚು ಇದ್ದಲ್ಲೇ ತಣ್ಣಗಾಗುತ್ತ ನಡೆಯಿತು.

ಹೊರಗೆ ಭಟ್ಟರು ಬಂದ ಸದ್ದು, ‘ಕಾಲಿಗೊಂದು ಚಂಬು ನೀರು ತಾರೇ ಯಜಮಾನತೀ’ ಕೂಗಿದ್ದು ಕೇಳಿತು. ಹಿತ್ತಲಿನ ಬಚ್ಚಲ ಹಿತ್ತಾಳೆ ತಂಬಿಗೆಯಲ್ಲಿ ನೀರು ತುಂಬಿಕೊಂಡು ಹೊರಬಾಗಿಲಿಗೆ ತಂದಿಟ್ಟಳು ಶಾಲಿನಿ. ಅದನ್ನು ಎತ್ತಿಕೊಂಡ ಭಟ್ಟರು ‘ಒಳಗೆ ನಿನ್ನ ಅಡಿಗೆ ಮುಗಿದಿದ್ದರೆ, ಹೊರಗೆ ನನ್ನ ಮಂತ್ರ ಶುರು ಮಾಡ್ತೆ` ಅಂದರು. ಈ ಮಧ್ಯೆ ಮೈಮೇಲೆ ಸಣ್ಣ ಹಲ್ಲಿ ಮರಿಯೊಂದು ಹರಿದು ಬಿತ್ತು ಎಂಬ ಸಂಶಯ ತಾಳಿದ ಯಮುನಜ್ಜಿ ಇನ್ನೊಮ್ಮೆ ಮಿಂದು ಬಂದಳು. ಬಚ್ಚಲಿನಿಂದ ಹೊರಬರುವಾಗಲೇ ಪತ್ರೊಡೆಯನ್ನು ಮರೆತಂತಿತ್ತು. ಹೊರ ಬಂದು ಕೂತ ಯಮುನಜ್ಜಿ ಭಟ್ಟರ ಹತ್ತಿರ ‘ನನ್ನ ಸವತಿ ಗಟ್ಟಿಗಿತ್ತಿ, ಒಂದು ಗಂಡಸಿನ ಹಾಗೆ ದುಡಿತ, ಎಲ್ಲ ಚೊಕ್ಕ ಪಕ್ಕ ವ್ಯವಹಾರ, ಕಳ್ಳ ಕಾಕರನ್ನೆಲ್ಲ ನಡುಗಿಸುತ್ತಿತ್ತು, ಮಾತು ಮಾತಿಗೆ ನಾನು ಮಾಡಿದ್ದು, ನಾನು ಬೆಳಸಿದ್ದು, ನಾನು ಕಷ್ಟಪಟ್ಟಿದ್ದು ಅಂತ ಹೇಳಿ ಹೇಳಿಯೇ ಹೋದಳು….’ ಅಂತೆಲ್ಲ ನೆನಪು ಮಾಡಿಕೊಂಡಳು. ಮಣೆಯ ಮೇಲೆ ಪದ್ಮಾಸನ ಹಾಕಿಕೂತ ಭಟ್ಟರು, ದರ್ಬೆಯನ್ನು ಮಡಚಿ ನೀರಲ್ಲಿ ನೆನೆಸಿ ಕರಿ ಎಳ್ಳಿನಲ್ಲಿ ಅದ್ದುತ್ತ, ‘ ಗಂಡಸಿನ ಹಾಗೆ ಏನು? ಗಂಡಸೇ ಅವಳು, ನಿಮ್ಮ ಕಾಲವೆಂಥದು, ಬಿಲ್ಲಿ ತೂತುಬಿಲ್ಲಿಗಳ ಕಾಲ’ ಎನ್ನುತ್ತ ನಕ್ಕರು. ‘ಯಮುನಜ್ಜಿ, ನಿನ್ನ ಸವತಿಯ ಅಪ್ಪನ ಮನೆ ಗೋತ್ರ ಜ್ಞಾಪಕವಿದೆಯೇ?’ ಭಟ್ಟರು ಮಂತ್ರದ ಮಧ್ಯೆಯೇ ಕೇಳಿದ್ದಕ್ಕೆ ಯಮುನಜ್ಜಿ ‘ಧರಾ ವರ್ಷ ಕೇಳಿ ಧರಾ ವರ್ಷ ಮರೆಯುತ್ತೀರಲ್ಲ, ನನಗೂ ಮರೆತು ಹೋಗಿದೆ` ಎಂದು ತಲೆಕರೆದುಕೊಂಡಳು.

‘ಏ ಯಜಮಾಂತೀ, ಪಿಂಡಕ್ಕೆ ಅನ್ನ ತಂದು ಹುಯ್ಯೇ’ ಒಳ ಇಣುಕಿ ಒದರಿದರು ಭಟ್ಟರು. ತಟ್ಟೆಯಲ್ಲಿ ತಣಿಯಲ್ಲಿಟ್ಟಿದ್ದ ಅನ್ನ ತಂದು ಬಾಳೆಲೆಗೆ ಸುರಿಯಲು ಬಗ್ಗಿದಾಗ ಶಾಲಿನಿಗೆ ಭಟ್ಟರು ಯಾಕೋ ಒಂದು ಥರ ನೋಡಿದಂತೆನಿಸಿತು. ಸೆರಗು ಹೊದ್ದು ಎರಡು ಹೆಜ್ಜೆ ಹಿಂದಕ್ಕೆ ಸರಿದು ಒಳಗೆ ಹೋದಳು. ಇದ್ದಕ್ಕಿದ್ದಂತೆ ಯಮುನಜ್ಜಿಯ ತಲೆಯಲ್ಲಿ ಪತ್ರೊಡೆ ಪುನಃ ಜಾಗ್ರತವಾಗಿ ಬಿಟ್ಟಿತು. ‘ಪತ್ರೊಡೆ ಅಂದರೆ ನನ್ನ ಸವತಿಗೆ ರಾಶಿ ಸೇರುವ ಬದುಕಾಗಿತ್ತು’ ಎಂದೇನೋ ಪಿರ್ಯಾದು ಒಪ್ಪಿಸುವಾಗ ಭಟ್ಟರು, ‘ನಾಕು ಹಸೀ ಬೇಳೆ ತಂದು, ಕೆಸುವಿನ ಎಲೆ ಚೂರಿನಲ್ಲಿ ಸುತ್ತಿ ನೈವೇಧ್ಯಕ್ಕೆ ಹಾಕೇ, ನಿನ್ನ ಸವತಿ ಅಲ್ಲೇ ಬೇಯಿಸಿಕೊಂಡು ತಿನ್ನಲಿ’ ಅಂತ ತಮಾಷೆ ಮಾಡುತ್ತಾ, ಹಾಲು, ಬಾಳೆಹಣ್ಣು ತಂದಿಡುತ್ತಿದ್ದ ಶಾಲಿನಿಯನ್ನೇ ನೋಡುತ್ತಾ, ‘ನಿನ್ನ ಮಾವನ ತಿಥಿಗೆ ಮರೀದೆ ಪತ್ರೊಡೆ ಮಾಡೇ’ ಎಂದು ನಕ್ಕು, ಅಕ್ಕಿ ತೆಂಗಿನಕಾಯಿಯ ಪಡಿಯನ್ನು ಕಟ್ಟಿಕೊಂಡು, ಕೊಟ್ಟ ದಕ್ಷಿಣೆಯನ್ನು ಬಿಚ್ಚಿಯೂ ನೋಡದೇ ಎದ್ದು ಹೋದರು. 

ಪ್ರತಿ ಅಮವಾಸ್ಯೆಗೆ ಕಾಗೆಗೆ ಅನ್ನ ಹಾಕುವ, ಮುರಿದು ಬಿದ್ದ ಹಳೇ ಕೊಟ್ಟಿಗೆಯ ಆಳೆತ್ತರದ ಗೋಡೆಯಲ್ಲಿ, ಸದಾನಂದ ಆ ಜಾಗೆಗಿಷ್ಟು ನೀರು ಚಿಮುಕಿಸಿ, ಕಾಗೆಗೆ ಬಡಿಸಿದ ಎಲೆಯನ್ನು ಇಟ್ಟು, ಎ..ಎ..ಎ..ಎ.. ಎಂಬ ರಾಗವನ್ನೇ ಮೂರು ಬಾರಿ ಒದರಿದ. ಒಂದೆರಡು ಕಾಗೆಗಳು ಹಾರಾಡುತ್ತ ದೂರವೇ ಕೂತು ಕೂಗಿದವು. ಕಾಗೆಗಳು ಅನ್ನ ತಿನ್ನಲು ಅನುಮಾನಿಸಿದ್ದನ್ನು ನೋಡಿ ಯಮುನಜ್ಜಿ, ಬಾಗಿಲಲ್ಲಿ ನಿಂತೇ ‘ಪತ್ರೊಡೆಯ ಆಸೆ ನೋಡು, ಅದಕ್ಕೆ ಅದು ಅನ್ನ ಮುಟ್ಟುತ್ತಿಲ್ಲ’ ಒಂದೆರಡು ಬಾರಿ ಹೆಚ್ಚೇ ಹಲುಬಿದಳು. ‘ಅಲ್ಲೇ ನಿಂತುಳಿದರೆ ಕಾಗೆ ಹೇಗೆ ಬರ್ತದೆ? ಇತ್ತ ಬನ್ನಿ ನೀವು’ ಎಂದು ಜೋರು ಮಾಡಿ ಕರೆದಳು ಶಾಲಿನಿ. ಸದಾನಂದ ಇತ್ತ ಬೆನ್ನು ತಿರುಗಿಸಿದ್ದೇ ತಡ, ನಾಲ್ಕೈದು ಕಾಗೆಗಳು ಬಂದು ಮುತ್ತಿಗೆ ಹಾಕಿ, ತನ್ನ ಬಳಗವನ್ನೆಲ್ಲ ಕರೆಯತೊಡಗಿದವು. ಯಮುನಜ್ಜಿಗೆ ಖುಷಿಯಾಗಿ ‘ನೋಡು ನೋಡು’ ಎನ್ನುತ್ತ ಅವಳಿಗರಿವಿಲ್ಲದೆಯೇ ಮುಖದಲ್ಲಿ ನಗು ಉಕ್ಕಿತು. ನೀರಲ್ಲಿ ಬಿಡಲೆಂದು ತೆಗೆದಿರಿಸಿದ್ದ ಪಿಂಡದ ಬಾಳೆಎಲೆಯನ್ನು ಒಂದು ಟವಲಿನಲ್ಲಿ ಕಟ್ಟಿಕೊಂಡ ಸದಾನಂದ.

ಅತ್ತೆ ಸೊಸೆ ಕೂಡಿ, ಶ್ರಾದ್ಧ ಮಾಡಿದ ಜಾಗೆಯಲ್ಲಿ ಹರಡಿದ ಅಕ್ಕಿ ಹೂವಿನ ಪ್ರಸಾದ ಒಡೆದ ತೆಂಗಿನಕಾಯಿ ಪೂಜಾ ಸಾಮಾನುಗಳೆನ್ನಲ್ಲ ಒಂದೂ ಮಾತಿಲ್ಲದೇ ಚೊಕ್ಕಗೊಳಿಸಿದರು. ಸದಾನಂದ ಸನಿಹದ ಹಳ್ಳದಲ್ಲಿ ಪಿಂಡಗಳನ್ನು ಬಿಟ್ಟು ಬಂದದ್ದೇ, ಮೂವರೂ ಕೂತು ಉಂಡರು. ಪಾಯಸಕ್ಕೆ ಬೆಲ್ಲ ಹನಿ ಕಮ್ಮಿಯಾಗಿದೆಯೆಂದು ಒಂದೇ ಮಾತು ಆಡಿದ ಯಮುನಜ್ಜಿ, ಎರಡು ಸೌಟು ಹೆಚ್ಚೇ ಬಡಿಸಿಕೊಂಡು ದೋಸೆಯನ್ನು ಅದ್ದಿ ಅದ್ದಿ ತಿಂದದ್ದನ್ನು ಗಮನಿಸುತ್ತ ಸದಾನಂದ ಹೆಂಡತಿಯ ಮುಖ ನೋಡಿ ಹುಬ್ಬೇರಿಸಿ, ಅಮ್ಮನ ಬಲಿ ತೋರಿಸಿದ. ಅವಳು ‘ನಿಮಗೆ ಇನ್ನೊಂದೆರಡು ಅಂಬೊಡೆ ಹಾಕಲೇ?’ ಎಂದು ಗಂಡನನ್ನು ಕೇಳಿದ್ದಕ್ಕೆ ಯಮುನಜ್ಜಿ, ‘ನನಗೂ ಎರಡು ತಾ’ ಅಂದಳು.

ಉಂಡು ಮಲಗೆದ್ದು ಸಂಜೆಯ ಸುಮಾರಿಗೆ, ಕೆಸುವಿನ ಎಲೆ ಒಣಗಿ ಹೋಗುವ ಮುಂಚೆ ಪತ್ರೊಡೆ ಮಾಡಿಬಿಡುವಾ ಅಂತ ಕೂತಿದ್ದಳು ಶಾಲಿನಿ. ಆ ಬೇಳೆ ಹುರಿದ ಘಮ ಘಮ ಪರಿಮಳ ಯಮುನಜ್ಜಿಯನ್ನು ಅಡಿಗೆ ಮನೆಗೆ ಸೆಳೆದಿತ್ತು. ‘ಈಗ್ಯಾಕೆ ಮಾಡುತ್ತಿದ್ದೀ ಅದನ್ನು? ನನ್ನ ತಿಥಿಗೇ ಮಾಡಿ ಹಾಕುವಿಯಂತೆ’ ಎಂದು ಬೇಕೆಂದೇ ಸೊಸೆಯನ್ನು ಬೈಯಲು ಹೋದಂತೆ ನಟಿಸಿದಳು ಯಮುನಜ್ಜಿ. ಅತ್ತೆಯ ವ್ಯಂಗ್ಯ ಗಮನಿಸಿದ ಶಾಲಿನಿ, ಒಳಗೊಳಗೇ ನಗುತ್ತಾ, ‘ನಿಮ್ಮ ತಿಥಿಗೆಲ್ಲ ಪತ್ರೊಡೆ ಗಿತ್ರೊಡೆ ಮಾಡಲು ಸಾಧ್ಯವಿಲ್ಲ, ಇದ್ದ ಬದ್ದ ಕೆಲಸವೇ ಒಂದು ಹೊರೆ ಇರ್ತದೆ ಇಲ್ಲಿ, ಸತ್ತ ಮೇಲೆ ಪತ್ರೊಡೆಗೆ ಆಸೆ ಪಡಬೇಡಿ ನೀವು, ಏನಿದ್ದರೂ ಈಗಲೇ ತಿಂದು ಮುಗಿಸಿ’ ಎನ್ನುತ್ತ ಪ್ಲೇಟಿನ ತುಂಬ ಬಿಸಿ ಬಿಸಿ ಪತ್ರೊಡೆ ಹಾಕಿ ಅತ್ತೆಯ ಕೈಯಲ್ಲಿರಿಸಿದಳು. ಅದು ನೋಡ ನೋಡುತ್ತ ಯಮುನಜ್ಜಿಯ ಬಾಯಲ್ಲಿ ನೀರೊಡೆಯಿತು, ಆ ಪ್ಲೇಟಿನೊಂದಿಗೆ ಹಗುರಾಗಿ ಹೊರ ಚಿಟ್ಟಿಗೆ ಹೋಗಿ ಕುಳಿತಳು. ‘ಸ್ವರ್ಗ ಆಹಾ, ಇಲ್ಲೇ ಬಂದಿದೆ ಅದು, ನನ್ನ ಬದಿ ಪ್ಲೇಟಿನಲ್ಲೇ ಬಂದು ಕೂತಿದೆ ಅದು, ಸತ್ತರೆ ಈ ಪತ್ರೊಡೆಗಳನ್ನು ಖಾಲಿ ಮಾಡೇ ಸಾಯಬೇಕು, ನನ್ನ ಸೊಸೆಯ ಹಾಗೆ ಇಷ್ಟು ಹದವಾಗಿ ಪತ್ರೊಡೆ ಮಾಡಲು ಆ ನನ್ನ ಸವತಿಗೂ ತಿಳಿಯುತ್ತಿರಲಿಲ್ಲ’ ಇನ್ನು ತಡ ಮಾಡಿದರೆ, ಪತ್ರೊಡೆಯೆಲ್ಲ ತಣ್ಣಗಾಗಿ ಅದರ ರುಚಿಯೆಲ್ಲ ವಾತಾವರಣದಲ್ಲಿ ಕಲೆಸಿ ಹೋದೀತು ಅನ್ನಿಸಿದ್ದೇ, ಪ್ಲೇಟೆನ್ನೆತ್ತಿ ತೊಡೆಯ ಮೇಲಿಟ್ಟುಕೊಂಡು ಒಂದೊಂದೇ ಮೆಲ್ಲತೊಡಗಿದಳು.

ಎದುರಿನ ಮರದಲ್ಲಿ ಕಾ..ಕಾ…ಕಾ.. ಎಂದು ಕಿರುಚುತ್ತ ಕೂತ ಕಾಗೆಗಳನ್ನು ಎಡಗೈಯಲ್ಲಿ ಹಾಚ್ ಹಾಚ್ ಅಂತ ಹೊಡೆದಳು. ಪತ್ರೊಡೆಯ ಒಗರು ಒಗರು ರುಚಿ ಯಮುನಜ್ಜಿಯ ನಾಲಿಗೆಯಲ್ಲಿ ಮೆಲ್ಲಗೆ ಪಸರಿಸತೊಡಗಿತು.

 

(ಚಿತ್ರಗಳು: ರೂಪಶ್ರೀ ಕಲ್ಲಿಗನೂರ್)