Advertisement
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶ್ರೀನಾಥ್ ರಾಯಸಂ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶ್ರೀನಾಥ್ ರಾಯಸಂ ಕತೆ

ಹಾಲುಸೇವೆ ಮುಗಿಸಿಕೊಂಡು ಗೋಪಾಲಿ ನಾಗೇನಹಳ್ಳಿಗೆ ಮರಳುತ್ತಾನೆ ಎಂದು ನಂಬಿಕೆಯೇ ಇಟ್ಟುಕೊಂಡಿರದ ಜನಕ್ಕೆ ಆಗಬಾರದಷ್ಟು ನಿರಾಶೆಯಾಯಿತು. ‘ಇಂಥ ಪಾಖಂಡಿಯೊಬ್ಬ ಹಾಲುಸೇವೆ ಮಾಡಿ ಮರಳಿಬರುತ್ತಾನೆ ಅಂದರೆ ಅದರರ್ಥ ಏನು?’ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಏಕಕಾಲಕ್ಕೆ ಮೂಡಿತು. ಸತ್ಯವಂತದೇವರಾದ ನಾಗಲಿಂಗಸ್ವಾಮಿ ಗೋಪಾಲಿಯಂಥ ಅಪವಿತ್ರ ದೇಹಿಯಿಂದ ಸ್ಪರ್ಷಕ್ಕೆ ಒಳಗಾಗಿ ಅದ್ಹೇಗೆ ಪರಿಣಾಮ ತೋರಿಸಲಿಲ್ಲ? ಸಾಯುವ ಘಳಿಗೆಯಲ್ಲಿ ಗುರುಶಾಂತಯ್ಯನವರು ಹಾಗೇಕೆ ಎಚ್ಚರಿಸುವ ದನಿಯಲ್ಲಿ, ಶಾಪ ಹಾಕುವ ರೀತಿಯಲ್ಲಿ ನುಡಿದರು? ಅದೆಲ್ಲ ತಾವು ನಂಬಿಕೊಂಡು ಬಂದಿದ್ದನ್ನು ಜನರ ಮೇಲೆ ಹೇರುವ ಪ್ರಯತ್ನವಿರಬಹುದೇ?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶ್ರೀನಾಥ್ ರಾಯಸಂ ಕತೆ “ಹಾಲುಸೇವೆ” ನಿಮ್ಮ ಓದಿಗೆ

“ಶರಣರ ಮಹಿಮೆ ಮರಣದಾಗೆ ನೋಡು” ಅನ್ನೋ ಹಾಂಗ ಗುರುಶಾಂತಯ್ಯನವರು ಲಕ್ವ ಹೊಡೆದು ಒಂದು ವಾರ ಜೀವ ಹಿಡಕೊಂಡಿದ್ದವರು ನಾಗಲಿಂಗಸ್ವಾಮಿಯನ್ನು ತುಟಿಯ ಮೇಲೆ ಧೇನಿಸುತ್ತ ಕೊನೆಯುಸಿರೆಳೆದರು. ಅವರು ಸಾಯೋಗಂಟ ಅವರ ಸುತ್ತ ನೆರೆಕೊಂಡಿದ್ದ ನಾಗೇನಹಳ್ಳಿಯ ಸಮಸ್ತ ಜನಕೋಟಿ ‘ಹಯ್ಯೋ’ ಅಂತ ಉಸಿರುಬಿಟ್ಟು ಗುರುಶಾಂತಯ್ಯನವರಿಗೆ ವಿದಾಯ ಹೇಳಿದರು. ಅವರ ಹೆಣಕ್ಕೆ ಚಕ್ಕಳಮಕ್ಕಳ ಹಾಕಿ ಕೂಡಿಸಿದ ಕಡೆ ನೋಡಿದರೆ ಅವರಿನ್ನೂ ಸತ್ತೇ ಇಲ್ಲ ಅನ್ನೋ ಹಾಂಗ ಮುಖಭಾವವಿತ್ತು. ಬಂದವರೆಲ್ಲ ಅವರ ಕಾಲು ಮುಟ್ಟಿ ‘ಓಂ ನಮಃ ಶಿವಾಯ’ ಅಂತ ಗೌರವ ಮಾಡಿದವರೆಲ್ಲ ಅಂದ್ಕೊಳ್ತಿದ್ದುದು ಒಂದೇ ಮಾತು “ಸಾತ್ವಿಕ ಜೀವ ಹೋದರೆ ನೇರ ಕೈಲಾಸಕ್ಕೇ ಹೋಗೋದು…. ಅವರು ಸಾಮಾನ್ಯ ಜೀವ ಅಲ್ಲ…. ಶಿವನ ನಂದಿನೇ ಗುರುಶಾಂತಯ್ಯನವರ ರೂಪ ಹೊತ್ತು ಬಂದಾನೆ” ಅಂತ ಜನ ತಮ್ಮತಮ್ಮಲ್ಲೇ ಆಡಿಕೊಳ್ತಿದ್ದರು. ಗುರುಶಾಂತಯ್ಯನವರು ಒಂದು ದಿನ ಶಿವಪೂಜೆ ನಿಲ್ಲಿಸಿದವರಲ್ಲ. ಅವರ ಆರಾಧ್ಯ ದೈವ ನಾಗಲಿಂಗಸ್ವಾಮಿಯ ಏಳು ಹೆಡೆಯಾಟ ಅವರ ಕಣ್ಣುಗಳ ಮುಂದೆ ಸದಾ ಇರುತ್ತಿತ್ತು. ಸಾಯೋ ಘಳಿಗೇಲಿ ಕೂಡ ಅವರ ಕಣ್ಮುಂದೆ ಆಡ್ತಿದ್ದುದು ಸ್ವಾಮಿಯ ಏಳು ಹೆಡೆಯಾಟ! ಮರಣಯಾತನೆ ಮುಖದ ಮ್ಯಾಲೆ ಕಾಣ್ತಾ ಇದ್ದಾಗ್ಯೂ ಅವರು ಅಕ್ಕಪಕ್ಕ ನಿಂತವರನ್ನು ಕೈಸನ್ನೆ ಮಾಡಿ ಹತ್ತಿರಕ್ಕೆ ಕರೆದು ಕಿವಿಯಲ್ಲಿ ಉಸುರಿದ ಮಾತು ಎಲ್ರಿಗೂ ನೆನೆಗುದಿಯಲ್ಲಿ ಬೀಳಿಸಿತ್ತು.

“ನನ್ನ ನಂತರ ನಾಗಲಿಂಗಸ್ವಾಮಿಯ ಹಾಲುಸೇವೆ ನಿಲ್ಲಬಾರದು…….. ಹಾಲುಸೇವೆ ನಿಂತರೆ ದೌಳತನ ಹೋಗಿ ಕರಿದೀಪ ಮನಿಮನಿಯೊಳಗೆ ಹೊತ್ತಿಕೊಂಡು ಮುತ್ತೈಯರು ರಂಡೆಮುಂಡೆಯರಾಗಿ ಊರು ಮಸಂಟಿಕೆಯಾಗಿ ಹೋಗ್ತದೆ”. ಇಷ್ಟು ಮಾತು ಹೇಳೋದಕ್ಕೆ ಅವರು ಇಡೀ ಅರ್ಧ ಗಂಟೆ ತೆಗೆದುಕೊಂಡರು. ಅದೇನು ಎಚ್ಚರಿಕೆಯ ಮಾತೋ ಶಾಪವೋ ಯಾರಿಗೂ ಅರ್ಥವಾಗಲಿಲ್ಲ. ಮಂಡಲ ಪಂಚಾಯ್ತಿ ಅಧ್ಯಕ್ಷ ರಾಮಪ್ಪನವರು ಅವರ ಮಾತು ಕೇಳಿ ಎದೀ ಮ್ಯಾಲೆ ಕೈಯಾಡಿಸಿಕೊಳ್ಳುತ್ತ ಎತ್ತಲಾಗೋ ನೋಡಿದರು. ಅಂಥ ಸಾತ್ವಿಕ ಮನುಷ್ಯ ಆಡಿದ ಮಾತು ಕಳ್ಯಮುಳ್ಯ ಆಡುವ ಮಕ್ಕಳಿಗೂ ದಿಗಿಲು ಹುಟ್ಟಿಸೋ ಹಾಂಗಿತ್ತು. ಊರಾಗಳ ಹಿರಿಮಂದಿಗೆ ಬಡಿಗೆ ತಿರುಗಿಸಿ ತಿರುಗಿಸಿ ಬೆದರಿಸೋ ಹಾಂಗಿತ್ತು. ಎಲ್ರೂ ಗುರುಶಾಂತಯ್ಯನವರ ಹೆಣದ ಕಡೆ ನೋಡಿ ಯಾವುದನ್ನೂ ನಿರ್ಧಾರ ಮಾಡ್ಲಿಕ್ಕೆ ಆಗದೇ ಅವನ ಮುಖ ಇವನು ಇವನ ಮುಖ ಅವನು ನೋಡೋ ಆಟ ಆಡಿ ಕೆಳಮುಖ ಮಾಡಿಕೊಂಡು ನಿಂತರು. ಊರಾಗಳ ಜನ ಎಲ್ಲಾ ಇನ್ನು ಏನು ಮಾಡಿದರೆ ಸರಿ ಹೋದೀತು ಅಂಬೋ ಮಾತನ್ನೇ ಹಿಡಕೊಂಡು ಆಡಿಸಿ ಆಡಿಸಿ ಇನ್ನೊಬ್ಬರಿಗೆ ದಾಟಿಸ್ತಿದ್ದರು.

ಗುರುಶಾಂತಯ್ಯನವರಿಗೆ ಹೆಂಡತಿ ಸತ್ತು ಇಪ್ಪತ್ತು ವರ್ಷಗಳಾಗಿದ್ದವು. ಅವರ ಅಣ್ಣನ ಮಕ್ಕಳು ತಮ್ಮನ ಮಕ್ಕಳು ಅಗಾಗ್ಗೆ ಬಂದು ಖಾರಪುಡಿ, ಉಪ್ಪಿನಕಾಯಿ, ಅಕ್ಕಿಬ್ಯಾಳಿ ಕೊಟ್ಟು ಯೋಗಕ್ಷೇಮ ವಿಚಾರಿಸಿ ಹೋಗ್ತಿದ್ದರು. ತಮ್ಮ ಕೈನಾಗೇ ಅಡಿಗೆ ಬೇಯಿಸಿಕೊಳ್ಳೋದು ರೂಢಿಯಾಗಿಬಿಟ್ಟಿದ್ದರಿಂದ ಯಾರ ಮನೀಗೂ ಅವರು ಊಟಕ್ಕೆ ಹೋಗ್ತಿರಲಿಲ್ಲ. ಬೆಳಿಗ್ಗೆ ಎದ್ದೊಡನೆ ಬಾವಿಯಿಂದ ನೀರು ಸೇದಿಕೊಂಡು ಧಬಧಬ ತಲೀ ಮ್ಯಾಲೆ ಸುರಕೊಂಡು ಸ್ನಾನ ಮಾಡಿಕೊಂಡು ಹಸಿ ಮೈನಾಗೇ ಶಿವನ ಪೂಜೆಗೆ ಕೂಡ್ತಿದ್ದರು. ಪೂಜೆ ಮುಗಿಯೋ ಹೊತ್ತಿಗೆ ಹನ್ನೆರಡು ಗಂಟೆ……… ನಂತರ ಒಲೆಗೆ ಬೆಂಕಿ ಬಿದ್ದು ಅನ್ನ ಬೇಯಬೇಕು. ಅನ್ನಕ್ಕೆ ನಂಜಿಕೊಳ್ಳಲಿಕ್ಕೆ ಚಟ್ನಿ ಉಪ್ಪಿನಕಾಯಿ ಮೊಸರು ಇದ್ದರೆ ಆಯ್ತು. ಊಟ ಮುಗಿದ ನಂತರ ಒಂದು ಜೊಂಪು ನಿದ್ದೆ ತೆಗೆದು ಶಿವಪುರಾಣದ ಕಡತ ತೆಕ್ಕೊಂಡು ಕುಂತರೆ ಸಂಜೀ ಸೂರ್ಯ ಕೈಮಾಡೋವರೆಗೂ ನಿಲ್ತಿರಲಿಲ್ಲ. ಅವರು ಪಂಚಾಂಗ ಶ್ರವಣ ವಾರ ತಿಥಿ ನಕ್ಷತ್ರ ಲೆಕ್ಕ ಹಾಕಿ ಹೇಳಿದ ಮ್ಯಾಲೆ ಪ್ರತಿ ವರ್ಷ ಗರುಡಪಂಚಮಿಯ ಗುಳ್ಳಪ್ಪನ ಪೂಜೆಗೆ ಹೆಣ್ಮಕ್ಕಳು ತಯಾರಾಗಲು ಆಣತಿ ಸಿಕ್ಕಂತೆ. ಊರಾಗೆ ಯಾರ ಮನೀಲಾದರು ಹುಟ್ಟು ಸಾವು ಮುಂಜಿ ಮದ್ವಿ ಏನಾರ ಕಾರ್ಯ ನಡೀಲಿ ಗುರುಶಾಂತಯ್ಯನವರ ಕೃಪಾಶೀರ್ವಾದ ಇರಲೇಬೇಕು. ಸಂತಾನಪ್ರಾಪ್ತಿ ದೇವತೆಯಾದ ನಾಗಲಿಂಗಸ್ವಾಮಿಯ ಆರಾಧನೆ, ಹಾಲುಸೇವೆಗಂತೂ ಅವರಿಲ್ಲದೆ ಯಾರೂ ಒಂದು ಹೆಜ್ಜೆ ಮುಂದಿಡ್ತಿರಲಿಲ್ಲ.

ಪ್ರತಿವರ್ಷ ನಾಗಪಂಚಮಿಯ ದಿನ ನೆರವೇರುವ ನಾಗಲಿಂಗಸ್ವಾಮಿಯ ಆರಾಧನೆ ನಾಗೇನಹಳ್ಳಿಯ ಸುತ್ತಲಿನ ಹತ್ತುಮತ್ತಿನ್ನಾರು ಗ್ರಾಮಗಳಲ್ಲಿ ಪ್ರಸಿದ್ಧವಾಗಿತ್ತು. ಎಲ್ಲ ಊರುಗಳಿಂದ ಜನ ಬಂಡಿ ಕಟ್ಟಿಕೊಂಡು ಬರುವುದನ್ನು ನೋಡೋದೇ ಒಂದು ಸೊಗಸು. ಆರಾಧನೆಗೆ ಹತ್ತು ದಿನ ಮುಂಚೆ ಸ್ವಾಮಿಗೆ ಹಾಲುಸೇವೆಯಾಗಬೇಕು. ಇಪ್ಪತ್ತು ವರ್ಷಗಳಿಂದ ಹಾಲುಸೇವೆ ಮಾಡ್ತಿದ್ದವರು ಗುರುಶಾಂತಯ್ಯನವರೇ. ನಾಗೇನಹಳ್ಳಿ ಮತ್ತು ಹಾರೋಹಳ್ಳಿ ನಡುವೆ ಮೈಚಾಚಿಕೊಂಡಿದ್ದ ಅಟ್ಟಂಬಟ್ಟಮರಣ್ಯದಾಗೆ ನಾಗಲಿಂಗಸ್ವಾಮಿಯ ಸನ್ನಿಧಿ. ಸನ್ನಿಧಿಗೆ ಹೋಗಲು ಇದ್ದ ಕಾಲು ಹಾದಿ ಮಳೀ ಬಿದ್ದು ಗಿಡಗಂಟಿ ಬೆಳೆದು ಮುಚ್ಚಿಹೋಗಿರುತ್ತಿತ್ತು. ಹಾದಿಯುದ್ದಕ್ಕು ಸರಭರ ಆಡೋ ಭುಸುಗುಟ್ಟುವ ಘಟಸರ್ಪಗಳು. ಸಾತ್ವಿಕ ಮನುಷ್ಯ ಹೋದರೆ ಅವು ಮೈಮುಟ್ಟಲ್ಲ ಅಂಬೋ ಮಾತು ಪ್ರತೀತಿ. ಅದಕ್ಕೆ ಗುರುಶಾಂತಯ್ಯನವರಂಥ ಸಾತ್ವಿಕ ಮನುಷ್ಯ ನಡೆಸಿಕೊಂಡು ಬಂದಿದ್ದ ಹಾಲುಸೇವೆ ಕಾರ್ಯವೇ ದೃಷ್ಟಾಂತವಾಗಿತ್ತು. ಹಾಲುಸೇವೆಗಂತ ಬ್ಯಾರೆ ಯಾರೂ ಧೈರ್ಯ ಮಾಡಿರಲಿಲ್ಲ. ಗುರುಶಾಂತಯ್ಯನವರು ಮಾತ್ರ ಹಾವೇನು ಚೇಳೇನು ಹುಲಿ ಬಂದರೂ ಏನೂ ಆಗಲ್ಲ ಅನ್ನೋ ಹಾಂಗ ಸೇವೆ ನಡೆಸಿಕೊಂಡು ಬಂದಿದ್ದರು. ನರಸಿಂಹದಂಡನಾಯಕ ಕಟ್ಟಿಸಿದ ನಾಗಲಿಂಗಸ್ವಾಮಿಯ ದೇವಸ್ಥಾನ ಕಾಲದ ತುಳಿತಕ್ಕೆ ಸಿಕ್ಕು ಶಿಥಿಲಗೊಂಡಿದ್ದರೂ ಆರಾಧನೆಯ ಸಮಯಕ್ಕೆ ಸಿಂಗರಗೊಳ್ಳುತ್ತಿತ್ತು.

ಚೂರುಪಾರು ರಿಪೇರಿಯಿದ್ದರೆ ಆ ಸಮಯದಲ್ಲೇ ಮಾಡಿ ಮುಗಿಸ್ತಿದ್ದರು. ಆರಾಧನೆಯ ನಂತರ ಯಾರೂ ಆ ಕಡೀ ತಲೀ ಹಾಕ್ತಿರಲಿಲ್ಲ. ಸ್ವಾಮಿಯ ಸನ್ನಿಧಿ ಘಟಸರ್ಪಗಳಾಡುವ ತಾಣ ಎಂಬುದು ಜನ ಆಡಿಕೊಳ್ಳೋ ಮಾತಾಗಿತ್ತು. ಹಾಂಗಾಗಿ ವರ್ಷಕ್ಕೊಮ್ಮೆ ಮಾತ್ರ ಸಾಮಾನ್ಯ ಭಕ್ತಕೋಟಿಗೆ ಸ್ವಾಮಿಯ ದರ್ಶನ ಪ್ರಾಪ್ತವಾಗುತ್ತಿತ್ತು. ಏಳು ಹೆಡೆಗಳ ಸ್ವಾಮಿಯ ಸನ್ನಿಧಿಯ ಆಸುಪಾಸಿನ ಬಿಲಗಳಲ್ಲಿ ಭಾರಿ ಸರ್ಪಗಳೇ ಮನೀ ಮಾಡಿಕೊಂಡಿದ್ದವು. ಗುರುಶಾಂತಯ್ಯನವರು ಕಾಡಿನಲ್ಲಿ ಕಾಲು ಹಾದಿ ಸೃಷ್ಟಿಸಿಕೊಂಡು ಸನ್ನಿಧಿಗೆ ಹೋಗುತ್ತಿದ್ದರು. ತಲೀಮ್ಯಾಲೆ ಹೊತ್ತು ತಂದ ಹಾಲಿನ ಚಟಿಗೆಯನ್ನು ಸ್ವಾಮಿಯ ಮುಂದಿಟ್ಟು ಒಂದು ಉದ್ಧಂಡ ನಮಸ್ಕಾರ ಹಾಕುತ್ತಿದ್ದರು. ಅವರ ಸುತ್ತ ಸರಭರ ಹರಿದಾಡುವ ನಾಗಸರ್ಪಗಳು ‘ಟುಸ್ ಭುಸ್’ ಅನ್ನುತ್ತ ಸರಿದು ಹೋಗುತ್ತಿದ್ದವು. ಹುಟ್ಟು ಆಕಸ್ಮಿಕ ಸಾವು ನಿಶ್ಚಿತವೆಂಬ ಅಚಲ ನಂಬಿಕೆಯಿಂದ ಅವರು ಗುಡಿಯ ಪ್ರಾಕಾರವನ್ನೆಲ್ಲ ಶುದ್ಧಗೊಳಿಸುತ್ತಿದ್ದರು. ಕಾಡೋ ಕಾಲಕ್ಕೆ ಆನೆ ಮ್ಯಾಲೆ ಹೋಗೋನಿಗೂ ನಾಯಿ ಕಚ್ತದೆ. ಹಾಂಗಿರುವಾಗ ದೈವಸನ್ನಿಧಿಯಲ್ಲಿ ಹಾವು ಕಡಿದು ಸತ್ತರೆ ಅದರಂಥ ಮುಕ್ತಿಯೇ ಸಿಗಲಿ ಅಂತ ಗುರುಶಾಂತಯ್ಯನವರು ಎಲ್ಲ ಕಾರ್ಯಗಳನ್ನು ಸರಳ ಶುದ್ಧ ಪ್ರಾಮಾಣಿಕತೆಯಿಂದ ಮಾಡಿ ಮುಗಿಸುತ್ತಿದ್ದರು. ಕಾಲಕೂಟ ವಿಷವನ್ನು ಹಲ್ಲಿನ ತುದಿಯಲ್ಲಿಟ್ಟುಕೊಂಡಿದ್ದ ಈ ನಾಗಸರ್ಪಗಳು ಎಂದೂ ಅವರ ತಂಟೆಗೆ ಬಂದಿರಲಿಲ್ಲ. ಗುಡಿಯ ಪ್ರಾಕಾರವೆಲ್ಲ ಶುದ್ಧವಾದ ಮ್ಯಾಲೆ ಅವರು ಅಲ್ಲಲ್ಲಿ ಬಿಟ್ಟುಹೋಗಿದ್ದ ಹಾವಿನ ಪೊರೆಗಳನ್ನು ಕುಪ್ಪೆ ಮಾಡಿ ಇಡುತ್ತಿದ್ದರು. ಅವೆಲ್ಲ ಸನ್ನಿಧಿಯ ಪ್ರಸಾದ ಎಂಬುದು ಊರ ಜನರ ನಂಬಿಕೆಯಾಗಿತ್ತು. ಮನೆಮನೆಗೂ ಹಾವಿನ ಪೊರೆಯ ಒಂದು ಚೂರು ಹಂಚಿ ಹೋಗಿ ಪೂಜೆಗೊಳ್ಳುತ್ತಿತ್ತು. ನಂತರ ಹಾಲಿನ ಚಟಿಗೆ ಎತ್ತಿ ನಿಧನಿಧಾನವಾಗಿ ಸ್ವಾಮಿಯ ಹೆಡೆಯ ಮ್ಯಾಲೆ ಸುರಿಯುತ್ತಿದ್ದರು. ಹರಿದು ಹೋಗುತ್ತಿದ್ದ ಹಾಲನ್ನು ಕುಡಿಯಲು ಸರ್ಪಗಳು ಹೊರ ಬಂದು ಗುಂಪು ಸೇರುತ್ತವೆ ಎಂಬ ಮಾತಿತ್ತು. ಆದರೆ ಕಂಡವರಿರಲಿಲ್ಲ. ಗುರುಶಾಂತಯ್ಯನವರು ಹೇಳುತ್ತಿದ್ದ ಆ ಮಾತನ್ನು ಎಲ್ರೂ ನಂಬ್ತಾ ಬಂದಿದ್ದರು.

ಪೂಜೆ ಮುಗಿದ ಮ್ಯಾಲೆ ಗುಡಿಯ ಪ್ರಾಕಾರದಲ್ಲಿ ಕುಳಿತು ಗುರುಶಾಂತಯ್ಯನವರು ಬೆಟ್ಟಯ್ಯ ದೊರೆಗಳನ್ನು ನೆನೆಸಿಕೊಳ್ಳುತ್ತಿದ್ದರು. ಎರಡೂ ಕಣ್ಣಿಲ್ಲದ ಬೆಟ್ಟಯ್ಯ ದೊರೆಗಳಿಗೆ ಮಕ್ಕಳಿರಲಿಲ್ಲ. ರಾಜರಾಣಿ ದಿನಬೆಳಗಾದರೆ ‘ಮಕ್ಕಳು ಕೊಡು’ ಅಂತ ನಾಗಲಿಂಗಸ್ವಾಮೀನ್ನ ಬೇಡ್ತಾ ಇದ್ದರು. ಆ ಕಾಲಕ್ಕೆ ನಡೆದ ಒಂದು ಘಟನೆ ಒಬ್ಬರಿಂದೊಬ್ಬರಿಗೆ ಹಂಚಿಹೋಗಿ ದೊಡ್ಡ ಪುರಾಣವಾಗಿತ್ತು. ಹಳೇ ಕಾಲದ ಕೆಲಜನ ಬೆಟ್ಟಯ್ಯ ದೊರೆಗಳಿಗೆ ಸ್ವಾಮಿ ಪ್ರತ್ಯಕ್ಷವಾಗಿದ್ದನ್ನು ಕಥೀ ಕಟ್ಟಿ ಹಾಡುತ್ತಿದ್ದರು. ಬೆಟ್ಟಯ್ಯದೊರೆಗಳು ಏಳುಗುಂಡ ಮಿಂದು ಆಯ್ತರಮಾಸಿ ದಿನ ಧೂಪದೀಪ ಹಚಗೊಂಡು ಭಕ್ತಿಭಾವದಿಂದ ಸ್ವಾಮೀನ್ನ ‘ಬಾ’ ಅಂತ ಕರೆದರು. ದೇವರಿಗಿಂತ ಭಕ್ತ ದೊಡ್ಡವನು ಅನ್ನೋ ಮಾತು ಸುಳ್ಳಲ್ಲ. ಸತ್ಯ ಅಂತ ಸಾಬೀತು ಮಾಡೋ ಹಾಂಗ ಸ್ವಾಮಿ ಬಂದೇ ಬಿಟ್ಟ ದೊರೆಗಳ ಹತ್ತಿರ. ಏಳು ಹೆಡೆ ಸುರುಳಿ ಬಿಚ್ಚಿ ಧಿಗ್ಗಧಿಗ್ಗ ಹೊಂಟ ಸ್ವಾಮೀನ್ನ ತಡೆಯೋರು ಯಾರು? ಹಿಡಿಯೋರು ಯಾರು? ಅರಮನೆಯ ಅಂಗಳದಾಗೆ ಸ್ವಾಮಿ ಬಂದು ಹೆಡೆಯಾಡಿಸುವಾಗ ಮಲ್ಲಿಗೆ, ಕ್ಯಾದಿಗಿ ಹೂವಿನ ಸುವಾಸನೆ ಗಾಳಿಯಲ್ಲಿ ಸೇರಿ ಹೋಗ್ತಿತ್ತು. ಏಳು ಸೂರ್ಯರು ಏಳು ಹೆಡೆಗಳಲ್ಲಿ ಕುಂತು ನೋಡೋ ಹಾಂಗ ಸ್ವಾಮಿ ಆಡ್ತಿದ್ದ ಹಾಗೆ ಹುಟ್ಟು ಕುರುಡ ಬೆಟ್ಟಯ್ಯ ದೊರಿಗಳು ಕಣ್ತೆರೆದು ನೋಡಿದರು….

ಕಣ್ಮುಂದೆ ಸ್ವಾಮಿ ಧಗ್ಗಧಗ್ಗ ಕುಣೀತಾ ಇದ್ದಾನೆ. ಮೈಯಿನ ರೋಮರೋಮ ನಿಗುರಿ ನಿಂತು ದೊರಿಗಳು ಭಕ್ತಿಭಾವದ ಒತ್ತಡ ತಡೀಲಾರದೇ ಸ್ವಾಮಿಗೆ ಅಡ್ಡ ಬಿದ್ದರು. ಸ್ವಾಮೀನ್ನ ಕಂಡ ದೊರಿಗಳಿಗೆ ಏನು ಬೇಕು ಏನು ಬ್ಯಾಡ ಯಾವುದೂ ಗೊತ್ತಾಗದೇ ಮಂಕಾಗಿ ಕುಂತರು. ‘ಏನು ಬೇಕು ಕೇಳಯ್ಯ’ ಅಂತ ಸ್ವಾಮಿ ಕೇಳ್ತಾ ಇದ್ದರೆ ದೊರಿಗಳು ಏನು ಕೇಳಿಯಾರು? ಕೊಡೋನು ಅವನೇ ಕಸಗೊಳ್ಳೋನು ಅವನೇ ಅನಿಸಿ ದೊರಿಗಳು ಉದ್ದಕ್ಕೆ ಅಡ್ಡ ಬಿದ್ದು ಹೇಳಿದರು “ನಿನ್ನ ನೋಡಿದ ದರ್ಶನ ಸಾಕು ನಂಗೆ….. ಎಲ್ಲಾ ಬಿಟ್ಟು ಬರ್ತೀನಿ ನಿಂಜೊತೆ ಕರ್ಕೊಂಡು ಹೋಗು ಸಾಕು” ಅಂತ. ದೊರೆಗಳು ಕಾಲವಾದ ಮ್ಯಾಲೆ ಮತ್ತೊಂದು ಕಥಿ ಹುಟ್ಟಿಕೊಂಡಿತ್ತು. ಆಯ್ತರಮಾಸಿ ಬಂತಂದರೆ ಬೆಟ್ಟಯ್ಯದೊರಿಗಳೇ ಹಾವಾಗಿ ಬಂದು ಸ್ವಾಮಿಯ ಮೈಮ್ಯಾಲೆ ಹರಿದಾಡಿ ಭಕ್ತಿ ಮಾಡಿ ಹೋಗ್ತಾರೆ ಅಂತ. ಬೆಟ್ಟಯ್ಯ ದೊರಿಗಳು ಮುಕ್ತಿ ಕಂಡ ಕಥಿ ಧೇನಿಸುತ್ತ “ಅಂಥ ಮುಕ್ತಿ ನಂಗೂ ಸಿಗಲಿ” ಅಂತ ಗುರುಶಾಂತಯ್ಯನವರು ಬೇಡುತ್ತಿದ್ದರು. ವರ್ಷಗಳೇ ಕಳೆದರೂ ಅವರ ಆಸೆ ಹಾಂಗೇ ಉಳಿದುಹೋಗಿತ್ತು. ದೈವ ಸನ್ನಿಧಿಯಲ್ಲಿ ಹಾವು ಕಡಿಸಿಕೊಂಡು ಸತ್ತರೆ ಮುಕ್ತಿಯ ಜೊತೆ ಚಿರಂಜೀವಿ ಅನಿಸ್ಕೊಳ್ಳೋ ಸಂಭವ ಇದ್ದುದರಿಂದ ಅವರು ಒಂದೇ ಸಮ ದೇವರಲ್ಲಿ ಬೇಡ್ತಿದ್ದುದು ಅಂಥ ಸಾವು. ಆದರೆ ದೈವ ನಿರ್ಣಯ ಬ್ಯಾರೆ, ಮನುಷ್ಯ ಪ್ರಯತ್ನ ಬ್ಯಾರೆ ಅಂಬೋದನ್ನು ಸಾಬೀತು ಮಾಡೋವಂತೆ ಲಕ್ವ ಹೊಡೆದು ಒಂದು ವಾರಕ್ಕೇ ಶಿವನ ಪಾದ ಸೇರಿದರು.

ಬೆಟ್ಟಯ್ಯ ದೊರಿಗಳ ನಂತರ ನರಸಿಂಹದಂಡನಾಯಕ ಸ್ವಾಮಿಯ ಸನ್ನಿಧಿಯಲ್ಲಿ ಗುಡಿ ಕಟ್ಟಿಸಿ ಭಕ್ತಿ ಮೆರೆಸಿದ್ದ. ಕಾಲದ ತುಳಿತದಲ್ಲಿ ದೇವಸ್ಥಾನ ಕಾಡಿನಲ್ಲಿ ಸೇರಿಹೋಗಿ ಊರಿನಿಂದ ದೂರವಾಗಿತ್ತು. ನರಸಿಂಹ ದಂಡನಾಯಕನ ಕಾಲದಲ್ಲಿ ಪ್ರಾರಂಭವಾದ ಹಾಲುಸೇವೆ ಗುರುಶಾಂತಯ್ಯನವರ ಮನೀಗೆ ಅನೂಚಾನವಾಗಿ ಬಂದ ಸೇವಾಕಾರ್ಯವಾಗಿತ್ತು. ಅವರ ತಂದೆ ಶಾಂತಮಲ್ಲಯ್ಯನವರು ಇಪ್ಪತ್ತು ವರ್ಷ ‘ಉಧೋ’ ಅಂತ ಹಾಲಿನ ಚಟಿಗೆ ಹೊತ್ತು ಹಾಲುಸೇವೆ ಮಾಡಿದ್ದರು. ಅವರ ನಂತರ ಗುರುಶಾಂತಯ್ಯನವರು ಶ್ರದ್ಧೆ ಭಕ್ತಿ ಭಾವದಿಂದ ಸ್ವಾಮಿ ಸೇವೆ ಮಾಡಿದ್ದರು. ಅವರ ನಂತರ ಹಾಲುಸೇವೆ ಮಾಡೋರು ಯಾರು ಅನ್ನೋದೇ ಮನೀಮನೀಯೊಳಗೆ ಜನ ಪ್ರಶ್ನೆ ಕೇಳಿಕೊಂಡು ಉತ್ತರ ಸಿಗದೇ ಪರದಾಡುತ್ತಿದ್ದರು. ಸ್ವಾಮಿಯ ಸನ್ನಿಧಿಗೆ ಹೋಗೋ ಮನುಷ್ಯ ಸ್ವಚ್ಛ ಮನಸ್ಸು ದೇಹ ಇಟ್ಕೊಂಡಿರುವವನಾಗಿರಬೇಕು. ಊರು ತುಂಬ ಕಚ್ಚೆ ಹರುಕರೇ ತುಂಬಿಕೊಂಡಿದ್ದರಿಂದ ಅಪಚಾರವಾದರೆ ಏಕಕಾಲಕ್ಕೆ ಗುಡುಗುಸಿಡಿಲು ಮಿಂಚುಮಳೆ ಬಂದಂತಾಗಿ ಸ್ವಾಮಿ ರೌದ್ರಾವತಾರ ತಾಳಿಯಾನು ಎಂಬ ಭಯವಿತ್ತು. ನಾಗಲಿಂಗಸ್ವಾಮಿ ಭಾಳ ಸತ್ಯವಂತ ದೇವರು ಅಂಬೋದಕ್ಕೆ ಸಾಕ್ಷಿ ಆತನ ಸುತ್ತ ಹರಿದಾಡುತ್ತಿದ್ದ ಘಟಸರ್ಪಗಳೇ ಆಗಿದ್ದವು.

ಗರ್ಭಗುಡಿಯವರೆಗೆ ಹೋಗೋದಿರಲಿ ಮಡಿ ಮೈಲಿಗಿ ಮಾಡದ ಜನರನ್ನು ಕ್ಯಾದಿಗಿ ಬನದಲ್ಲಿ ಮನೀಮಾಡ್ಕೊಂಡಿದ್ದ ಹಾವು ಚೇಳುಗಳೇ ತಡೆದು ಮರಳಿ ಕಳಿಸ್ತವೆ ಎಂಬ ಮಾತು ಎಲ್ಲರ ಮನಸ್ಸಿನಾಗೆ ಕಟೀತಿತ್ತು. ಪರಿಸ್ಥಿತಿ ಹೀಂಗಿರುವಾಗ ಸತ್ಯವಂತ ದೇವರನ್ನು ಪರೀಕ್ಷಿಸಲು ಹೋದರೆ ಆಪತ್ತು ತಂದುಕೊಂಡ ಹಾಂಗೆ ಅಂತ ಭಾವಿಸಿ ಎಲ್ರೂ ತೇರ್ತೊಟ್ಲು ನಂದಿಕೋಲು ತಯಾರು ಮಾಡಿಕೊಂಡು ಹಾಲುಸೇವೆ ಮಾಡೋ ಬಂಟ ಯಾರಾಗಭೋದು ಅಂಬೋ ಲೆಕ್ಕಾಚಾರದಲ್ಲಿ ತೊಡಗಿದ್ದರು. ಹೋದ ಮಳೀ ಬಂದ ಹಾಂಗ, ಸತ್ತ ಹೆಣ ಎದ್ದು ಗುರುಶಾಂತಯ್ಯನವರೇ ಮತ್ತೆ ಬರಬಾರ್ದೇ ಅಂತ ಜನ ಬೇಡಿಕೊಳ್ಳೋ ಹಾಂಗ ಆಗಿತ್ತು. ಯೋಚನೆ ಮಾಡಿಮಾಡಿ ಆಕಳಿಸಿ ತೂಕಡಿಸಿ ಮಂದಿಗೆ ಬ್ಯಾಸರ ಬಂದು ಹಾಲುಸೇವೆ ಬಿಟ್ಟು ಬಿಡೋಣ ಅನ್ನೋ ಮಟ್ಟಿಗೆ ಬಂದುಬಿಟ್ಟಿದ್ದರು. ಸಾಯೋ ಘಳಿಗೇಲಿ ಗುರುಶಾಂತಯ್ಯನವರು ಆಡಿದ ಮಾತು ಶಾಪಸದೃಶವಾಗಿತ್ತು. ಮಂಡಲ ಪಂಚಾಯ್ತಿ ಅಧ್ಯಕ್ಷ ರಾಮಪ್ಪನವರು ‘ಅಂದ್ಕೊಂಡಿರಲಿಲ್ಲ… ಕನಸು ಕಂಡಿರಲಿಲ್ಲ. ಯಾಕಿಂಥ ಪರಿಸ್ಥಿತಿ ಬಂತಪ್ಪ’ ಅಂತ ಚಿಂತಿಗೆ ಬಿದ್ದಿದ್ದರು. ಅವರಿರುವಾಗ ಬ್ಯಾರೆ ಯಾರೂ ಮುಂದಾಳ್ತನ ಮಾಡ್ಲಿಕ್ಕೆ ಧೈರ್ಯ ಮಾಡಿರಲಿಲ್ಲ. ಏನಾರ ಅಪಚಾರ ಮಾತಾಡಿದರೆ ನಾಗಲಿಂಗಸ್ವಾಮಿ ಸಂಸಾರ ಮಾಡೋ ಊರನ್ನು ಮಸಂಟಿಕೆ ಮಾಡಿಬಿಡ್ತಾನೆಂಬ ಭಯವಿತ್ತು. ರಾತ್ರಿ ಹೋಗಿ ರಾತ್ರಿ ಬಂದು ಆರಾಧನೆ ದಿನಗಳು ಹತ್ತಿರ ಬರ್ತಾ ಇದ್ದರೂ ಗಾಳಿ ಧೂಳು ಮಳೀ ಮಾರೀನ್ನ ದೂರ ಸರಿಸಿ ಸೇವೆ ಮಾಡೋ ಬಂಟ ಯಾವನೂ ಕಾಣಿಸಲಿಲ್ಲ. ಊರಿಗೆ ಊರೇ ಎದೀ ಮ್ಯಾಲೆ ಕೈಯಿಟ್ಟುಗೊಂಡು ಏರೀ ಮ್ಯಾಲಿಂದ ಬೆಳಕು ಕಾಣಿಸ್ತದೇನೋ ಅಂಬೋ ಆಸೆ ಹೊತ್ತುಗೊಂಡು ಕುಂತಿದ್ದರು. ಮನೀ ಋಣ ತೀರಿಸಿಕೊಂಡಿದ್ದರೆ ಯಾವನಾದರೂ ಮುಂದೆ ಬಂದು ಹಾಲುಸೇವೆ ಮಾಡಬಹುದಾಗಿತ್ತು. ಎಲ್ಲಾ ಮಂದಿ ಇನ್ನೂ ಹೆಣ್ಣಿಗೆ ನೆಲಕ್ಕೆ ಕಚ್ಚಿಕೊಂಡೇ ಇದ್ದವರಾದ್ದರಿಂದ ಆಗದ ಹೋಗದ ಮಾತುಗಳನ್ನು ಆಡಿಕೊಂಡು ನೆಲ ಗೀರುತ್ತಾ ಕುಂತಿದ್ದರು.

*****

ಸುಖ ದೇಹಕ್ಕೆ ಸಂಬಂಧಿಸಿದ್ದು, ಸಂತೋಷ ಮನಸ್ಸಿಗೆ ಸಂಬಂಧಿಸಿದ್ದು, ಆನಂದ ಆತ್ಮಕ್ಕೆ ಸಂಬಂಧಿಸಿದ್ದು ಅಂಬೋ ತತ್ತ್ವ ಇಟ್ಕೊಂಡು ಹಚ್ಚಗಿದ್ದಲ್ಲಿ ಮೇಯುತ್ತಾ, ಬೆಚ್ಚಗಿದ್ದಲ್ಲಿ ಮಲಗುತ್ತ, ಸೆರಗು ಹಾಸಿದವಳ ಜೊತೆ ಸ್ವರ್ಗ ಕಾಣುತ್ತ ತನ್ನ ಸುಖ ಲೋಕಸುಖ ಅಂತ ಬಾಳ್ತಾ ಇದ್ದ ಗೋಪಾಲಿ ಪಂಚಾಯ್ತಿ ಅಧ್ಯಕ್ಷ ರಾಮಪ್ಪನವರ ಹತ್ತಿರ ಬಂದು “ಹಾಲುಸೇವೆ ನಾನು ಮಾಡ್ತೀನಿ” ಅಂತ ಹೇಳಿದಾಗ ಅವರ ಸುತ್ತಮುತ್ತ ನಿಂತು ಕುಂತು ಮಾತಾಡ್ತಿದ್ದವರೆಲ್ಲ ಗೊಳ್ಳಂತ ನಕ್ಕುಬಿಟ್ಟರು. “ಹೋಗೋ, ಹೋಗೋ ತಮಾಶೆ ಮಾಡ್ಲಿಕ್ಕೆ ಬಂದೀಯೇನು?” ಅಂತ ರಾಮಪ್ಪನವರು ಗೋಪಾಲಿಯನ್ನು ಗದರಿಸಿಬಿಟ್ಟರು. ‘ಪ್ರಪಂಚ ಹಿಡ್ಕೊಂಡು ಪರಮಾರ್ಥ ಮಾಡ್ತಿರುವಂಥ ಎಷ್ಟೋ ಜನರೇ ಸುಮ್ಮನೆ ಕುಂತಿರುವಾಗ ಕಂಡಕಡೆ ಬೀಜನೆಡೋ ಈ ಹಡಬೇಮಗ ಗೋಪಾಲಿ ಹಾಲುಸೇವೆ ಮಾಡೋದೇ’- ಈ ಪ್ರಶ್ನೆ ಎಲ್ರನ್ನೂ ಹಿಗ್ಗಾಮುಗ್ಗಿ ಎಳೆದು ಕಾಡಿತು. ಈ ಕಡಿ ಹಳ್ಳಿಯವನಲ್ಲ ಆ ಕಡಿ ಪಟ್ಟಣದವನಲ್ಲ ಅನ್ನೋ ಹಾಂಗ ದಿನಕ್ಕೊಂದು ವೇಷ ತೊಟ್ಟುಗೊಂಡು ಊರಾಗಳ ಹೆಣ್ಮಕ್ಕಳಿಗೆ ಸೀಟಿ ಹೊಡಕೊಳ್ತಾ ಓಡಾಡಿಕೊಂಡಿರುವ ಈ ಬಡ್ಡೀಮಗನಿಗೆ ಅದೇನು ಬಂತು ಕೇಡುಗಾಲ ಅಂತ ಎಲ್ರೂ ಶಾಪ ಹಾಕಿದರು. ರಾಮಪ್ಪನವರು ಗದರಿಸಿದ್ದನ್ನು ಗಮನಕ್ಕೆ ತೆಗೆದುಕೊಳ್ಳದೇ ಗೋಪಾಲಿ “ಯಜಮಾನರು ದೊಡ್ಡೋರು ……. ಒಂದು ಮಾತು ಅಂದಿರಿ ಬೈದಿರಿ …… ಅದನ್ನೆಲ್ಲಾ ನಾ ಮನಸ್ಸಿಗೆ ಹಚ್ಚಿಕೊಳ್ಳೋನಲ್ಲ…… ನಿಮಗೆ ಹ್ಯಾಂಗೋ ನಂಗೂ ನಾಗಲಿಂಗಸ್ವಾಮಿ ದೈವ … ನಂಗೂ ಸೇವೆ ಮಾಡೋ ಅವಕಾಶ ಕೊಡಿರಿ… ಒಂದಪ ನೋಡಿಬಿಡ್ರಿ…….ಸ್ವಾಮಿ ಸತ್ಯವಂತನಾಗಿದ್ದರೆ ಸನ್ನಿಧಿಯಲ್ಲೇ ನಂಗೆ ಶಾಸ್ತಿಯಾಗ್ತದೆ. ……….. ಹಾಂಗಿರುವಾಗ ನಿಮಗಾದರೂ ಯಾಕ ಈ ನೆನೆಗುದಿ?

ಗುರುಶಾಂತಯ್ಯನವರು ಹಿರಿಮನುಷ್ಯಾರು….. ಅವರ ಹಾಂಗ ಬಾಳಲಿಕ್ಕೆ ಯಾರಿಗೂ ಆಗಿಲ್ಲ… ಹಾಂಗಂತ ಸ್ವಾಮಿ ಪೂಜೆ ನಿಂತು ಹೋದರೆ ಯಾರಿಗೆ ಏನಾಗ್ತದೆ ಅಂತ ಗುರುಶಾಂತಯ್ಯನವರೇ ಕೊನೆ ಮಾತು ಹೇಳಿ ಹೋಗ್ಯಾರೆ……. ಅದರ ಮ್ಯಾಲೆ ನಿಮಗೆ ತಿಳಿದ್ಹಾಂಗ ಮಾಡ್ರಿ……” ಎಂದು ಎಲ್ಲರ ಮುಖ ನೋಡಿದ. ರಾಮಪ್ಪನವರು ಗೋಪಾಲಿಯ ಮಾತನ್ನು ಮನಸ್ಸಿನಲ್ಲಿಯೇ ತೂಗಿದರು. ತಮ್ಮ ನಿರ್ಧಾರದಿಂದ ಊರ ಜನ ಎದುರಾಗಬಾರದು ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಎಲ್ಲರ ಮುಖ ನೋಡಿ, ಯಾರಾರ ಮನಸ್ಸು ಏನೇನು ಲೆಕ್ಕ ಹಾಕ್ತಿದ್ದದೆ ಅಂತ ತೂಕಮಾಡಿ “ನೋಡ್ರೆಪಾ, ಗೋಪಾಲಿ ಹೇಳೋ ಮಾತಿನಾಗೆ ಅರ್ಥ ಅದೆ… ನಂಗೇನು ಇದರಾಗಿ ತಪ್ಪು ಕಾಣಿಸಲ್ಲ….. ನೀವೆಲ್ಲಾ ಒಪ್ಪಿದರೆ ಗೋಪಾಲಿ ಯಾಕ ಹಾಲುಸೇವೆ ಮಾಡಬಾರದು? ನಾವು ಕೈಕಟ್ಟಿಕೊಂಡು ಸುಮ್ಮನೆ ಕುಂತರೆ ಇನ್ನೂ ಮಾಡಬೇಕಾದ ಕಾರ್ಯಗಳು ಭಾಳ ಅವೆ. ಹೆಣ್ಮಕ್ಕಳು ಗುಳ್ಳವ್ವನ ಪೂಜೆಗೆ ಅಣಿ ಮಾಡಿಕೊಂಡು ಕುಂತುಗೊಂಡಾರೆ….. ಹಾಲುಸೇವೆ ನಿರ್ಧಾರ ತಗೊಂಡ ಮ್ಯಾಲೆ ಅದೆಲ್ಲ ಮಾಡ್ಲಿಕ್ಕೆ ಆಗ್ತದೆ” ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿದರು.

ಅಲ್ಲಿ ಕುಂತಿದ್ದವರೆಲ್ಲ ಮುಖ ಮುಖ ನೋಡಿಕೊಂಡು ನೆಲ ನೋಡಿ ಆಕಾಶ ನೋಡಿ ಆದದ್ದಾಗಲಿ ಬಂದದ್ದು ಬರಲಿ ಅಂತ ಸ್ವಾಮಿಯ ಮೇಲೆ ಭಾರ ಹಾಕಿ ಗೋಪಾಲಿ ಹಾಲುಸೇವೆ ಮಾಡೋದು ಅಂತ ನಿರ್ಧಾರವಾಯಿತು. ರಾಮಪ್ಪನವರು “ಈ ಸಂಗತಿ ಊರಿಗೆಲ್ಲಾ ತಿಳೀಲಿ ……. ನಾವು ನಾವೇ ಮಾಡಿಕೊಂಡದ್ದು ಅಂತ ಜನ ತಪ್ಪು ತಿಳೀಬಾರದು” ಅಂತ ತಮಟೆ ಹೊಡೆದುಕೊಂಡು ಸಾರಿಕೊಂಡು ಬರಲು ಅಪ್ಪಣೆ ಕೊಟ್ಟರು. ನೀರಿಗಂತ ಬಂದ ಹುಡುಗೀರನ್ನ ಸೆರಗು ಹಿಡಿದು ಹೆಸರು ಕೇಳಿ ಹೈರಾಣ ಮಾಡ್ತಿದ್ದ ಗೋಪಾಲಿ, ಆಗಾಗ್ಗೆ ಯಾವುಯಾವುದೋ ಹೆಣ್ಣುಗಳನ್ನು ಮನೀಗೆ ಕರಕೊಂಡು ಬಂದು ದುರ್ವ್ಯವಹಾರ ಮಾಡ್ತಿದ್ದ ಗೋಪಾಲಿ, ಹೆಂಡ ಸರಾಯಿ ವಿಸ್ಕಿ ಬ್ರಾಂದಿ ಮೈ ತುಂಬ ತುಂಬಿಸಿಕೊಂಡು ಗಟಾರಗಳಲ್ಲಿ ಗ್ಯಾನ ತಪ್ಪಿ ಬಿದ್ದಿರುತ್ತಿದ್ದ ಗೋಪಾಲಿ, ಊರಾಗಳ ರಂಡೆ ಮುಂಡೆಯರಿಗೆ ಅನುಕೂಲವಾಗಿದ್ದ ಗೋಪಾಲಿ, ಜೋಕುಮಾರನ ಹಾಂಗ ನಿಗುರಿಸಿಕೊಂಡು ಓಡಾಡೋ ಗೋಪಾಲಿ ಹಾಲುಸೇವೆ ಮಾಡ್ತಾನೆ ಅಂಬೋದನ್ನು ಯಾರಿಗೂ ನಂಬಲಿಕ್ಕೇ ಸಾಧ್ಯವಾಗಲಿಲ್ಲ. ಊರಿಗೆ ಊರೇ ಹೌಹಾರಿ ಕುಂತುಕೊಳ್ಳೋ ಹಂಗಾಯ್ತು ಸುದ್ದಿ. ಸತ್ಯವಂತ ದೇವರಾದ ನಾಗಲಿಂಗಸ್ವಾಮಿಗೆ ಇದಕ್ಕಿಂತ ದೊಡ್ಡ ಅಪಚಾರ ಯಾವುದು ಆಗಬೇಕು ಅಂತ ಆಡಿಕೊಳ್ಳೋರು ಆಡಿಕೊಂಡರು. “ಶಿವ ಶಿವ ಈಗ ಹ್ಯಾಂಗ ಮಾಡೋಣ” ಅಂತ ಕೈಕೈ ಹಿಂಡಿಕೊಂಡರು.

ಗೋಪಾಲಿ ಎಂದೂ ಯಾರಿಗೂ ಮಣಿದವನಲ್ಲ. ತನಗೆ ಸರಿ ಅನಿಸಿದಂತೆ ಬದುಕಿದವನು. ಈ ಸಮಾಜದಲ್ಲಿ ಇದ್ದರೆ ಹುಲಿಯಂತಿರಬೇಕು ಇಲ್ಲವೆ ನಾಯಿಯಂತೆ ಬೊಗಳುತ್ತಿರಬೇಕು. ಆವಾಗಲೇ ಯಾವನೂ ಹತ್ತಿರ ಬಂದು ದೌರ್ಜನ್ಯ ಮಾಡಲ್ಲ ಅಂಬೋ ಫಿಲಾಸಫಿ ಇಟ್ಕೊಂಡಿರೋನು. ಹಾಂಗಿರುವಾಗ ಹಾಲುಸೇವೆ ಸಂದರ್ಭದಲ್ಲಿ ಊರಾಗಳ ಜನ ಬಾಯಿಗೆ ಬಂದ ಹಾಂಗ ಆಡಿಕೊಳ್ತಿದ್ದರೆ ಜೀವ ರೋಸಿಗೊಂಡು ‘ಊರು ಬಿಟ್ಟು ಓಡಿ ಹೋಗಲೇ’ ಅಂತ ಎಷ್ಟೋ ಬಾರಿ ಅಂದುಕೊಂಡಿದ್ದುಂಟು. ಹಂಗೇನಾದರೂ ಮಾಡಿದರೆ ಊರ ಜನ ಹೇಡಿ ಅಂದಾರು ಎಂಬ ವಿಚಾರ ಅವನನ್ನು ತಡೆಯುತ್ತಿತ್ತು. ಮೈತುಂಬ ವಿಷ ತುಂಬಿಕೊಂಡಿರೋ ಈ ಜನಕ್ಕಿಂತ ಸ್ವಾಮಿ ಸನ್ನಿಧಿಯ ವಿಷ ಸರ್ಪಗಳೇ ವಾಸಿ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ತಿದ್ದ.

*****

ಹಾಲುಸೇವೆಯ ದಿನ ಇದೋ ಬಂದೆ ಅಂತ ಬಂದೇಬಿಟ್ಟಿತು. ರಾಮಪ್ಪನವರ ಮನೆ ಆಳುಗಳು ಹೋಗಿ ಎಬ್ಬಿಸಿದ ಮ್ಯಾಲೆ ಗೋಪಾಲಿ ಮನಸ್ಸಿನ ತುಂಬ ಉಲ್ಲಾಸ ತುಂಬಿಕೊಂಡು ಎದ್ದು ಕುಳಿತ. ನಾಗಲಿಂಗಸ್ವಾಮಿ ಸನ್ನಿಧಿಯ ದಿಕ್ಕಿನ ಕಡೆ ಕೈ ಮುಗಿದು ಬಾವಿಗೆ ಹೋಗಿ ತಲೀ ಮ್ಯಾಲೆ ನೀರು ಸುರಿದುಕೊಂಡು ಶುದ್ಧವಾದ. ಹೊಸ ಪಂಚೆ ಉಟ್ಟುಕೊಂಡು ಹಾಲು ದಿಬ್ಬಣ ಹೋಗೋ ಸ್ಥಳಕ್ಕೆ ಬಂದು ಊರಿನ ಸಮಸ್ತ ಜನಕ್ಕೆ ಕೈ ಮುಗಿದು ನಿಂತ. ಮೈತುಂಬ ವಿಭೂತಿ ಬಳಕೊಂಡು ನಿಂತಿದ್ದ ಗೋಪಾಲಿ ಸರ್ಕಸ್ಸಿನ ಜೋಕರ್‌ನಂತೆ ಕಾಣುತ್ತಿದ್ದ. ಅವನ ಕಡೆ ನೋಡುತ್ತಿದ್ದ ಹೆಣ್ಮಕ್ಕಳು ಅವನ ಸಧೃಡ ದೇಹ ನೋಡಿ ಕಣ್ಣಲ್ಲೇ ಹಾದರ ಮಾಡುತ್ತಿದ್ದರು. ಊರಾಗಳ ಹಿರಿಯರು ‘ಹ್ಯಾಂಗೋ ಹಾಲುಸೇವೆ ಸುಸೂತ್ರವಾಗಿ ನಡೆದರೆ ಸಾಕು’ ಅಂತ ಬೇಡಿಕೊಳ್ತಿದ್ದರೆ ಎಲ್ಲದರಲ್ಲೂ ಕೊಂಕು ಹುಡುಕುವ ಕೆಲಮಂದಿ “ಹೆಹೆಹೆ … ಗೋಪಾಲಿನೇ ಬೇಕಾಗಿತ್ತಾ… ಬ್ಯಾರೆ ಯಾರೂ ಸಿಗಲಿಲ್ಲವಾ?” ಎಂದು ಗೇಲಿ ಮಾಡಿ ನಗಾಡುತ್ತಿದ್ದರು. ಮುಂದೆ ತಮ್ಮಟೆ ಬಾರಿಸುತ್ತ ಪಡ್ಡೆ ಹುಡುಗರು ಕುಣಿಯುತ್ತಿದ್ದರೆ ಅವರ ಹಿಂದೆ ಕ್ಷೌರಿಕ ವೆಂಕಟೇಶುಲು ಅಂಡ್ ಪಾರ್ಟಿಯವರಿಂದ ಬ್ಯಾಂಡುಬಾಜಾ ನಡೆದಿತ್ತು. ಅದರ ಹಿಂದೆ ಗೋಪಾಲಿ ತಲೀಮ್ಯಾಲೆ ಹಾಲಿನ ಚಟಿಗೆ ಹೊತ್ತು ನಿಂತಿದ್ದ. ಅವನ ಹಿಂದೆ ಇಡೀ ಊರಿನ ಹೆಂಗಳೆಯರೆಲ್ಲ ತಲೀ ಮ್ಯಾಲೆ ಹಾಲಿನ ಗಿಂಡಿ ಇಟ್ಟುಗೊಂಡು ವೈಯ್ಯಾರ ಮಾಡುತ್ತ ನಡೆದಿದ್ದರು. ಊರಂಚಿನವರೆಗೂ ಮೆರವಣಿಗೆ ಸಾಗಿದ ಮ್ಯಾಲೆ ಗೋಪಾಲಿ ಹೊತ್ತಿದ್ದ ಚಟಿಗೆಯಲ್ಲಿ ಊರ ಹೆಣ್ಮಕ್ಕಳು ಗಿಂಡಿಯಲ್ಲಿ ತಂದಿದ್ದ ಹಾಲನ್ನು ಸುರಿದರು. ಅಲ್ಲಿಂದ ಮುಂದೆ ಗೋಪಾಲಿ ಒಬ್ಬನೇ ಹೋಗಬೇಕು. ಹುಲಿ ಬರಲಿ ಹಾವು ಬರಲಿ ಅವನನ್ನು ಅವನೇ ಕಾಯ್ಕೋಬೇಕು ಎಂದು ಎಲ್ಲರೂ ಊರಿಗೆ ಮರಳಿದರು. ಎಲ್ಲರ ಕಣ್ಮುಂದೆ ಗೋಪಾಲಿ ಛಿದ್ರವಿಛಿದ್ರವಾಗಿ ಹೋಗುವ ಚಿತ್ರವೇ ಕುಣಿಯುತ್ತಿತ್ತು. ಅವನಿಂದ ಅಪಚಾರವಾಗಿ ನಾಗಲಿಂಗಸ್ವಾಮಿ ಹೆಡೆಯೆತ್ತಿ ಬಂದರೆ ನಾಳಿನ ಉದಯಕ್ಕೆ ಸೂರ್ಯನ ಗತಿ ಏನಾದೀತೋ ಅನ್ನುವಂಥ ಮನಸ್ಥಿತಿಯಲ್ಲಿ ಎಲ್ಲರೂ ಚಡಪಡಿಸುತ್ತಿದ್ದರು.

ತಲೆಯ ಮ್ಯಾಲೆ ಹಾಲಿನ ಚಟಿಗೆಯನ್ನು ಹೊತ್ತು ನಡೆದಿದ್ದ ಗೋಪಾಲಿಯ ಕಣ್ಗಳ ಮುಂದೆ ಗುರುಶಾಂತಯ್ಯನವರ, ಅವರ ತಂದೆ ಶಾಂತಮಲ್ಲಯ್ಯನವರ, ಬೆಟ್ಟಯ್ಯದೊರೆಗಳ ಚಿತ್ರ ತೇಲಿ ಬಂದಿತು. ಅವರಂಥ ಹಿರಿತಲೆಗಳು ಮಾಡಿದಂಥ ಕಾರ್ಯ ತಾನು ಮಾಡಬೇಕಾಗಿ ಬಂದಿತಲ್ಲ ಅಂಬೋ ವಿಚಾರ ಮನಸ್ಸಿನಲ್ಲಿ ಮೂಡಿ ಒಂದಿಷ್ಟು ಉಲ್ಲಾಸ ಮೂಡಿತು. ತಾನು ಎಂದೂ ಯಾರಿಗೂ ಎರಡು ಬಗೆದವನಲ್ಲ. ಕಂಡವರ ರೊಟ್ಟಿ ಕಸಗೊಂಡು ತಿಂದವನಲ್ಲ. ಒಲಿದು ಬಂದ ಹೆಣ್ಣು ಮಕ್ಕಳನ್ನಷ್ಟೇ ಭೋಗಿಸಿದವನು. ಹಾಂಗಿರುವಾಗ ನಾನು ಮಾಡಿದ ಕೆಲಸ ಪಾಪ ಅಂತ ಕಂಡವರು ಆಡಿಕೊಂಡರೆ ಮಾಡಿದವರ ಪಾಪ ಆಡಿದವರ ಬಾಯಿಯಲ್ಲಿ ಅನ್ನೋ ಹಾಂಗ ಕದ್ದು ಮುಚ್ಚಿ ಅವರೆಲ್ಲ ಆಡುವ ಆಟಗಳಿಗೆ ಏನನ್ನಬೇಕು? ಮಕ್ಕಳಾಗದ ಹೆಣ್ಮಕ್ಕಳು ನಾಗಪ್ರತಿಷ್ಟೆ ಮಾಡಿ ಅರಳಿ ಮರ ಸುತ್ತುತ್ತಾ ತನ್ನನ್ನು ಕಂಡು ಒಲಿದು ಬಂದು ಮಕ್ಕಳ ತಾಯಂದಿರಾದಾಗ ಈ ಜಗತ್ತಿನ ರೀತಿಗೆ ನಗಬೇಕೋ ಅಳಬೇಕೋ ಅರ್ಥವಾಗದೇ ಇರುವ ರೀತಿಯೇ ಸರಿಯಾಗಿದೆ ಅಂದುಕೊಂಡು ಬಾಳಿದವನು. ಹಾಂಗಿರುವಾಗ ಸ್ವಾಮಿಯ ಸನ್ನಿಧಿಯಲ್ಲಿರುವ ಯಾವ ಘಟಸರ್ಪ ಬಂದು ಏನು ಮಾಡೀತು ಎಂದು ತನಗೆ ತಾನೇ ಧೈರ್ಯ ಹೇಳಿಕೊಂಡ. ಆತ್ಮಾವಲೋಕನದಿಂದ ಮನಸ್ಸು ಒಂದಿಷ್ಟು ಹಗುರವಾಯಿತು. ಕ್ಯಾದಗಿ ಬನ ದಾಟಿಕೊಂಡು ಹೋಗುವಾಗ ಒಂದೆರಡು ಹಾವುಗಳು ‘ಸರಕ್’ ಅಂತ ಅಡ್ಡ ಹಾಯ್ದು ಹೋದವು. ಒಂದರೆಕ್ಷಣ ಜೀವ ಝಲ್ಲೆಂದಿತು.

ನಂತರ ಮುಂದೆ ಹಾವುಗಳು ಕಂಡಾಗ ಏನೂ ಅನಿಸಿಲೇ ಇಲ್ಲ. ತಾನು ಹಾವು ಕಡಿಸಿಕೊಂಡು ಸಾಯಬಹುದು ಎಂದು ಎಷ್ಟು ಜನ ಲೆಕ್ಕ ಹಾಕುತ್ತಿರಬಹುದು ಎಂದು ಯೋಚಿಸಿದಾಗ ವಿಷಾದವಾಯಿತು. ‘ಸಣ್ಣ ಹೃದಯ ದೊಡ್ಡ ಬಾಯಿಯ ಈ ಜನರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?’- ತನಗೆ ತಾನೇ ಸಮಾಧಾನ ಹೇಳಿಕೊಂಡ. ಕೇದಿಗೆ ಬನ ದಾಟಿ ನಾಲ್ಕು ಹೆಜ್ಜೆ ನಡೆದು ಎಡಕ್ಕೆ ತಿರುಗಿದಾಗ ದೂರದಲ್ಲಿ ಗುಡಿಯ ಗೋಪುರ ಕಾಣಿಸಿತು. “ಇನ್ನು ಅರ್ಧ ಮೈಲಿ ಆಗಬೌದು” ಅಂದುಕೊಂಡು ಹೆಜ್ಜೆ ಬದಲಿಸುತ್ತ ನಡೆಯತೊಡಗಿದ. ಗುರುಶಾಂತಯ್ಯನವರು ನಾಗಲಿಂಗಸ್ವಾಮಿಯ ಮೇಲೆ ಹಾಲು ಸುರಿಯುತ್ತಿದ್ದರೆ ಘಟಸರ್ಪಗಳು ಬಂದು ಹಾಲು ಕುಡಿಯುತ್ತವೆ ಎಂಬ ಮಾತು ಎಷ್ಟು ಸತ್ಯ ಎಂಬುದನ್ನು ನೋಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡ. ಹಾವುಗಳು ಬಂದು ಹಾಲು ಕುಡಿಯುತ್ತವೆ ಎಂಬ ಮಾತೇ ಚೋದ್ಯವೆನಿಸಿತು. ‘ಎಲ್ಲಾ ಸುಳ್ಳು ಎಂದು ನಂಬಿಕೊಂಡು ಬಾಳುತ್ತಿರುವ ತನಗೆ ನಾಗಲಿಂಗಸ್ವಾಮಿ ನಿಜಕ್ಕೂ ಸತ್ಯವಂತ ದೇವರಾಗಿದ್ದರೆ ಏನಾಗಬಹುದು’ ಎಂಬ ವಿಚಾರ ಎದೆಯಲ್ಲಿ ಭಯ ತುಂಬಿಸಿತು.

ಗುಡಿಯ ಪ್ರಾಕಾರದಲ್ಲಿ ಎಲ್ಲ ಕಡೆ ಒಣಗಿದ ಎಲೆಗಳು, ರೆಂಬೆಗಳು ಬಿದ್ದಿದ್ದವು. ಅವನ್ನು ತುಳಿದುಕೊಂಡು ಹೋಗುವಾಗ ಹುಟ್ಟುವ ಚರಪರ ಶಬ್ಧವೇ ಸಾಕು ಸ್ವತಂತ್ರವಾಗಿ ಮೆರೆಯುವ ಸರ್ಪಗಳನ್ನು ಓಡಿಸಲು ಅಂದುಕೊಂಡ. ಅದೇ ಕ್ಷಣಕ್ಕೆ ಅವನಿಗೆ ಹತ್ತಿರದಲ್ಲಿಯೇ ಹಾವೊಂದು ಹರಿದು ಹೋದಾಗ ಬೆನ್ನು ಫಳಿಯಲ್ಲಿ ಚಿಳ್ಳೆಂದು ಏರಿದ ಅನುಭವವಾಯಿತು. ಧೈರ್ಯ ಮೂಡಿಸಿಕೊಂಡು ಗುಡಿಯೊಳಗೆ ಕಾಲಿಟ್ಟಾಗ ಜೇಡದ ಬಲೆಗಳು ಮುಖಕ್ಕೆ ಮೆತ್ತಿಕೊಂಡವು. ಒಂದೆಡೆ ನಿಂತು ಗುಡಿಯ ಪರಿಸರವನ್ನೆಲ್ಲ ಗಮನಿಸಿದ. ಕಾಡು……. ಕಾಡಿನ ನಡುವೆ ಈ ದೇವಸ್ಥಾನ … ಸುತ್ತಮುತ್ತ ಬಿದ್ದಿರುವ ಒಣಗಿದ ಎಲೆಗಳು ರೆಂಬೆಗಳು… ಗವ್ವೆನ್ನುವ ಅಸೀಮ ಮೌನ … ಒಂದು ಸಣ್ಣ ಸದ್ದು ಕೂಡ ತನ್ನನ್ನು ಎಚ್ಚರಿಸುವಂಥ ತೀಕ್ಷ್ಣ ಸಂದರ್ಭ… ಯಾವ ದಿಕ್ಕಿನಿಂದಲಾದರೂ ಬಂದು ತನ್ನ ಮೇಲೆ ಆಕ್ರಮಣ ಮಾಡಬಹುದಾದ ಘಟಸರ್ಪಗಳು… ಎಂಥ ತೀವ್ರ ಆಕ್ರಂದನವನ್ನೂ ನುಂಗಿ ಹಾಕಿಬಿಡುವಂಥ ಗಭೀರ ಮೌನ…. ಅವೆಲ್ಲರ ನಡುವೆ ನಿಂತಿರುವ ತಾನು ಏಕಾಂಗಿ- ಗೋಪಾಲಿಯ ಮನಸ್ಸಿನಲ್ಲಿ ಅನನ್ಯ ಭಾವ ಮೂಡಿತು. ಮ್ಲಾನತೆ ಮತ್ತು ಭಯ ಮಿಶ್ರಿತ ಭಾವ ಮನಸ್ಸಿನಲ್ಲಿ ತುಂಬಿಕೊಂಡಿತು. ಗರ್ಭಗುಡಿಯಲ್ಲಿ ಹಣಿಕಿ ನೋಡಿದ. ಹಾವುಗೀವು ಯಾವುದೂ ಕಾಣಿಸಲಿಲ್ಲ. ನಾಗಲಿಂಗಸ್ವಾಮಿಯ ವಿಗ್ರಹವನ್ನು ನೀರು ಸುರಿದು ಬಟ್ಟೆಯಿಂದ ಶುಚಿಗೊಳಿಸಿ ತಲೆಯ ಮೇಲೆ ನಿಧನಿಧಾನವಾಗಿ ಹಾಲು ಸುರಿಯತೊಡಗಿದ. ಯಾವ ದಿಕ್ಕಿನಿಂದಲಾದರೂ ಘಟಸರ್ಪಗಳು ಬಂದು ಹಾಲು ಕುಡಿಯುತ್ತವೇನೋ ಎಂದು ನಿರೀಕ್ಷಿಸಿದ. ಹಾಗೇನೂ ಆಗದೇ ಅದು ಬಹುಶಃ ಗುರುಶಾಂತಯ್ಯನವರು ಸ್ವಾಮಿಯ ಸತ್ಯವಂತಿಕೆಯನ್ನು ಸ್ಥಾಪಿಸಲು, ಮೆರೆಸಲು ಹುಟ್ಟಿಸಿದ ದಂತಕಥೆ ಇರಬೇಕು ಅನಿಸಿತು. ‘ಅಂಥ ಸಾತ್ವಿಕ ಮನುಷ್ಯನ ಮನಸ್ಸಿನಲ್ಲೂ ಜನರನ್ನು ನಂಬಿಸಲು ಇಂಥ ಕಥೆ ಸೃಷ್ಟಿಸುವ ಅಗತ್ಯ ಏನಿತ್ತು?’ ಅಂದುಕೊಂಡ.

‘ಗುರುಶಾಂತಯ್ಯನವರ ಸಾತ್ವಿಕತೆ ಹೊರ ನೋಟದ್ದೆ ಅಥವ….’ ಎಂಬ ಅರ್ಧ ಪ್ರಶ್ನೆ ಮನಸ್ಸಿನಲ್ಲಿ ಮಿಂಚಿ ಮಾಯವಾಯಿತು. ಇಷ್ಟು ದಿನ ಪರೀಕ್ಷೆಗೊಳಪಡದಿದ್ದ ನಂಬಿಕೆಯೊಂದು ತನ್ನಿಂದ ಸ್ಫೋಟವಾಯಿತು ಎಂದು ಜ್ಞಾನೋದಯ ಪಡೆದವನಂತೆ ವಿಜೃಂಭಿಸಿದ. ನಾಗಲಿಂಗಸ್ವಾಮಿಯ ಶಿಲೆಯನ್ನು ಪರೀಕ್ಷಿಸುವಂತೆ ನೋಡಿದ. ಆ ದೇವರ ಸತ್ಯವಂತಿಕೆಯ ಕುರಿತು ಮೊದಲಿನಿಂದ ಇದ್ದ ಕಥೆಗಳ ಕುರಿತು ಅಪನಂಬಿಕೆ ಬಲವಾಯಿತು. ಅಂಥ ನಂಬಿಕೆಗಳನ್ನು ಗುರುಶಾಂತಯ್ಯನವರು ಯಾಕೆ ಪೋಷಿಸಿಕೊಂಡು ಬಂದರೋ ಅರ್ಥವಾಗಲಿಲ್ಲ. ‘ಅದರಲ್ಲಿ ಅವರು ಏನು ಸ್ವಾರ್ಥ ಕಂಡಿರಬಹುದು?’ ಎಂಬ ಪ್ರಶ್ನೆ ಮೂಡಿತು. ದೇವರ ಸತ್ಯವಂತಿಕೆಯನ್ನು ಮುಂದಿಟ್ಟುಕೊಂಡು ಕಥೆಗಳ ಮೂಲಕ ಊರ ಜನರನ್ನು ನಂಬಿಸಿ ಮೆರೆದರು. ಆ ನಂಬಿಕೆಗಳ ಬಲದಿಂದಲೇ ಅಲ್ಲವೆ ಅವರು ಊರಲ್ಲಿ ಗುರುಸ್ಥಾನದಲ್ಲಿದ್ದು ಮೆರೆಯಲು ಸಾಧ್ಯವಾಗಿದ್ದು. ಎಲ್ಲರಿಗಿಂತ ಎತ್ತರದ ಸ್ಥಾನದಲ್ಲಿದ್ದು ಮೆರೆದ ಗುರುಶಾಂತಯ್ಯನವರು ಅತ್ಯಂತ ಕುಬ್ಜರಾಗಿ ತನ್ನ ಮಟ್ಟಕ್ಕೆ ಇಳಿದವರಂತೆ ಕಂಡರು. ಅವರ ಢಂಬಾಚಾರದ ಬದುಕಿನ ಕುರಿತು ಜಿಗುಪ್ಸೆ ಮೂಡಿತು. ಹಾಲುಸೇವೆಯೆಂಬ ಶುಷ್ಕ ಕಾರ್ಯ ಮುಗಿಸಿ ಅಲ್ಲಲ್ಲಿ ಬಿದ್ದಿದ್ದ ಹಾವಿನ ಪೊರೆಗಳನ್ನು ಚಟಿಗೆಯಲ್ಲಿ ತುಂಬಿಕೊಂಡು ಬೀಸುಗಾಲು ಹಾಕುತ್ತ ಊರ ದಾರಿ ಹಿಡಿದ ……

*****

ಹಾಲುಸೇವೆ ಮುಗಿಸಿಕೊಂಡು ಗೋಪಾಲಿ ನಾಗೇನಹಳ್ಳಿಗೆ ಮರಳುತ್ತಾನೆ ಎಂದು ನಂಬಿಕೆಯೇ ಇಟ್ಟುಕೊಂಡಿರದ ಜನಕ್ಕೆ ಆಗಬಾರದಷ್ಟು ನಿರಾಶೆಯಾಯಿತು. ‘ಇಂಥ ಪಾಖಂಡಿಯೊಬ್ಬ ಹಾಲುಸೇವೆ ಮಾಡಿ ಮರಳಿಬರುತ್ತಾನೆ ಅಂದರೆ ಅದರರ್ಥ ಏನು?’ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಏಕಕಾಲಕ್ಕೆ ಮೂಡಿತು. ಸತ್ಯವಂತದೇವರಾದ ನಾಗಲಿಂಗಸ್ವಾಮಿ ಗೋಪಾಲಿಯಂಥ ಅಪವಿತ್ರ ದೇಹಿಯಿಂದ ಸ್ಪರ್ಷಕ್ಕೆ ಒಳಗಾಗಿ ಅದ್ಹೇಗೆ ಪರಿಣಾಮ ತೋರಿಸಲಿಲ್ಲ? ಸಾಯುವ ಘಳಿಗೆಯಲ್ಲಿ ಗುರುಶಾಂತಯ್ಯನವರು ಹಾಗೇಕೆ ಎಚ್ಚರಿಸುವ ದನಿಯಲ್ಲಿ, ಶಾಪ ಹಾಕುವ ರೀತಿಯಲ್ಲಿ ನುಡಿದರು? ಅದೆಲ್ಲ ತಾವು ನಂಬಿಕೊಂಡು ಬಂದಿದ್ದನ್ನು ಜನರ ಮೇಲೆ ಹೇರುವ ಪ್ರಯತ್ನವಿರಬಹುದೇ? ಬೆಟ್ಟಯ್ಯ ದೊರೆಗಳಿಗೆ ಸ್ವಾಮಿ ದರ್ಶನ ಕೊಟ್ಟು ಮುಕ್ತಿ ದಯಪಾಲಿಸಿದ್ದು ಸುಳ್ಳೇ?- ಇವೇ ಮುಂತಾದ ಪ್ರಶ್ನೆಗಳ ಕೊನೆಯಲ್ಲಿ ಊರ ಜನರ ಮನಸ್ಸು ಡೋಲಾಯಮಾನವಾಗಿದೆ…. ಒಂದು ರೀತಿಯ ಅರ್ಥಹೀನ ವಿಷಾದ ಜಿಗುಪ್ಸೆ ಎಲ್ಲರ ಮನದಲ್ಲಿ ತುಂಬಿಕೊಂಡಿದೆ.

ಗೋಪಾಲಿ ಯಥಾ ರೀತಿ ತನ್ನ ಏಳು ಬಣ್ಣದ ಶೃಂಗಾರ ಪ್ರಪಂಚದಲ್ಲಿ ಮುಳುಗಿಹೋಗಿದ್ದಾನೆ.

***

ಹಾಲುಸೇವೆಯ ನಂತರ ಆರಾಧನಾ ಮಹೋತ್ಸವ ಕಳೆದು ಒಂದು ತಿಂಗಳಾಗಿತ್ತು. ಮನಸ್ಸಿನ ತುಂಬ ಕಾಡುಗತ್ತಲು ತುಂಬಿಕೊಂಡು ನಂಬಿಕೆ ಕಳಕೊಂಡು ಬದುಕುತ್ತಿದ್ದ ನಾಗೇನಹಳ್ಳಿಯ ಜನರಿಗೆ ಬರಸಿಡಿಲಿನಂಥ ಸುದ್ದಿಯೊಂದು ತಟ್ಟಿತು. ಗೋಪಾಲಿ ಮಲಗಿದಲ್ಲಿಯೇ ಹಾವು ಕಡಿದು ಸತ್ತುಹೋಗಿದ್ದ!!!

ದುರಿತವನ ಕುಠಾರಿ ದುರ್ಜನ ಕುಲವೈರಿ
ಶರಣಾಗತ ವಜ್ರಪಂಜರ ಕುಂಜರ
ನರಸಂರಕ್ಷಕ ಜನ್ಮಮರಣರಹಿತ ಮಹಿತ
ಪರಮಕರುಣಾಸಿಂಧು ಭಕುತರ ಬಂಧು –
ನಾಗಲಿಂಗಸ್ವಾಮಿ ತನ್ನ ಸತ್ಯವಂತಿಕೆಯನ್ನು ಗೋಪಾಲಿಯ ಸಾವಿನಿಂದ ತೋರಿಸಿದ್ದಾನೆ ಎಂದು ಜನ ಈಗ ಮಾತನಾಡಿಕೊಳ್ಳುತ್ತಿದ್ದಾರೆ… ಎರಡು ಧೃವಗಳ ನಡುವೆ ಬದುಕುತ್ತಿರುವ ಜನರ ನಂಬಿಕೆ ಸ್ಥಿರವಾಗುತ್ತ ಸಾಗಿದೆ…
ಶ್ರೀನಾಥ್ ರಾಯಸಂ

“ಹಾಲುಸೇವೆ” ನನ್ನ ಮೆಚ್ಚಿನ ಕಥೆ ಏಕೆ?
ಕನ್ನಡದಲ್ಲಿ ಸುಮಾರು 150 ಕ್ಕೂ ಹೆಚ್ಚು ಕಥೆಗಳನ್ನು ಪ್ರಕಟಿಸಿರುವ ನನಗೆ ಅತ್ಯಂತ ತೃಪ್ತಿಕೊಟ್ಟ ಕಥೆ “ಹಾಲುಸೇವೆ” ಇದು ಬಿಸಿಲುನಾಡಿನ ಬಳ್ಳಾರಿ ಪ್ರಾಂತದ ಪ್ರದೇಶಿಕ ಭಾಷೆಯಲ್ಲಿ ಸಮರ್ಥವಾಗಿ ಮೂಡಿ ಬಂದಿರುವ ಕಥೆ. ಕಥಾಹಂದರ, ಕಥೆಯ ಮುಖ್ಯ ಪತ್ರಗಳು, ಭಾಷಾವೈಖರಿ, ಸಹಜ ಸನ್ನಿವೇಶಗಳು ಒಂದಕ್ಕೊಂದು ಹೊಯ್ ಕೈಯಾಗಿ ಮೂಡಿಬಂದು ಕಥೆಗೆ ಪರಿಪೂರ್ಣ ರೂಪ ಕೊಟ್ಟಿವೆ. ಒಂದು ಉತ್ತಮ ಕಥೆಯಲ್ಲಿ ನಿರೀಕ್ಷಿಸಬಹುದಾದ ಎಲ್ಲ ಗುಣಗಳೂ ಈ ಕಥೆಯಲ್ಲಿವೆ ಎಂದರೆ ಉತ್ಪ್ರೇಕ್ಷೆಯಾಗಲಾರದು.
ಕಥೆಯ ಮೂಲ ಆಶಯ “ಸಾಮಾನ್ಯ ಜನರ ಬದುಕಿನಲ್ಲಿ ನಂಬಿಕೆ ಬಹು ಮುಖ್ಯವಾದುದು; ಅದು ಕಥಾನಾಯಕನ ಸಾವಿನಿಂದ ಸಾಬೀತಾಗುತ್ತದೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ