ಹೀಗೆ ನೆಲದಿಂದ ಎತ್ತರಿಸಿ ಕಟ್ಟಿದ ಚಿಕ್ಕ ಚಿಕ್ಕ ಗೂಡುಗಳು ಅಲ್ಲಲ್ಲಿ ಚದುರಿಕೊಂಡಂತೆ ಇದ್ದು, ನೀರೇ ಬುಡಕ್ಕೆ ಕೈ ಹಾಕಿ ಎಬ್ಬಿಸಿ ಕೂರಿಸಿದಂತೆ ಕಾಣಿಸುತ್ತವೆ. ಹೆಚ್ಚುಕಮ್ಮಿ ಎಲ್ಲ ತೊಳೆದುಕೊಂಡು ಹೋಗುವಂತೆ ಕಾಣುತ್ತಿದ್ದ ಊರಿನಲ್ಲಿ, ಅಟ್ಟದ ಕೋಣೆಗಳಿಗೆ ಹೊಂದಿಕೊಂಡಂತೆ ಹೂವಿನ ಕುಂಡಗಳನ್ನು ಸುಂದರವಾಗಿ ಜೋಡಿಸಿದ್ದು ನೋಡಿ ಅಚ್ಚರಿಯ ಜೊತೆ ಖುಷಿಯೂ ಆಯಿತು. ಧೊದಿಯಾದಲ್ಲಿ ಒಂದೇ ಒಂದು ಕಿರಾಣಿ ಅಂಗಡಿಯಿದೆ. ಅದರ ಮಾಲೀಕ ನನ್ನನ್ನು ಕರೆದು ತನ್ನ ಮೊಟ್ಟಮೊದಲ ಅಂಗಡಿ ಅದೋ ಅಲ್ಲಿಯೇ ಇತ್ತೆಂದು ದಿಬ್ರು ನದಿಯ ನಡುವೆ ಕಾಣದ ಯಾವುದೋ ಬಿಂದುವಿನತ್ತ ಬೆರಳು ತೋರಿಸಿದ.
ಅಸ್ಸಾಮ್ ರಾಜ್ಯದ ಧೊದಿಯಾ ಹಳ್ಳಿಗೆ ನೀಡಿದ ಭೇಟಿಯ ಕುರಿತು ಹೇಮಾ ನಾಯಕ ಬರಹ
ಅಸ್ಸಾಮ್ ರಾಜ್ಯದ ಮುಂಗಾರಿನ ಸಮಯವಾಗಿದ್ದರಿಂದ ದಿಬ್ರು ನದಿ ಎಂದಿಗಿಂತ ತುಸು ಹೆಚ್ಚೇ ಬಿರುಸಾಗಿ ಹರಿಯುತ್ತಿತ್ತು. ದಿಬ್ರುಗಡ್ ಜಿಲ್ಲೆಯಿಂದ ತಿನ್ಸುಕಿಯಾ ಜಿಲ್ಲೆಯ ತಾರಿಗೆ ಬಂದು ಅಲ್ಲಿಂದ ದಿಬ್ರು ನದಿಯ ಮೇಲೆ ಸುಮಾರು ಒಂದು ತಾಸು ಬೋಟಿಯೊಂದಲ್ಲಿ ಪ್ರಯಾಣಿಸಿ ಧೊದಿಯಾ ಎಂಬ ಹಳ್ಳಿ ತಲುಪಿದೆವು. ಅಲ್ಲಿ ಮೊದಲ ಸಲ ಕೋವಿಡ್ ಲಸಿಕೆಯ ಕಾರ್ಯಕ್ರಮ ನಡೆಯುತ್ತಿದ್ದ ಸಮಯವಾಗಿದ್ದು, ನಮ್ಮನ್ನು ಎದುರುಗೊಂಡವರು ಹಳ್ಳಿಯ ಆಶಾ ಕಾರ್ಯಕರ್ತೆ. ನಮ್ಮನ್ನು ಆರೋಗ್ಯಕೇಂದ್ರಕ್ಕೆ ಕರೆದುಕೊಂಡು ಹೋಗಲು ಕೇಳಿದಾಗ ನಕ್ಕು ಅದ್ಯಾವುದೂ ಇಲ್ಲ, ನನ್ನ ಮನೆಯೇ ಈ ಹಳ್ಳಿಯ ಜನರಿಗೆ ಆಸ್ಪತ್ರೆಯ ಲೆಕ್ಕ ಎಂದು ತನ್ನನ್ನು ಹಿಂಬಾಲಿಸುವಂತೆ ಸನ್ನೆ ಮಾಡಿದಳು.

ಇದು ನೀರು ಯಾವುದು ನೆಲ ಯಾವುದು ಎಂದು ತಿಳಿಯದಂಥ ಜಾಗ. ಈ ಹಳ್ಳಿಯ ತುದಿಗೆ ಹೋದರೆ ಮೊದಲ ಮನೆಯೇ ತನ್ನದು ಎನ್ನುತ್ತ ಆಶಾ ಬಾಯ್ದು ನಮ್ಮನ್ನು ಅಲ್ಲಿಗೆ ಕರೆದೊಯ್ದಳು. ಧೊದಿಯಾದ ಈ ಮೊದಲ ಮನೆಯಲ್ಲಿ ಇರುವುದು ಅಟ್ಟದ ಮೇಲಿನ ಒಂದೇ ಒಂದು ಕೋಣೆ. ಚಹ ಮಾಡುತ್ತೇನೆಂದು ಹೇಳಿದ ಅವಳು ಕೋಣೆಯಲ್ಲಿದ್ದ ಬಟ್ಟೆಯ ಗಂಟು ಬಿಚ್ಚಿ ಚಹ ಕಾಯಿಸುವ ಪಾತ್ರೆ, ಲೋಟ ಇತ್ಯಾದಿ ತೆಗೆಯತೊಡಗಿದಳು. ನಮ್ಮ ಮುಖದ ಮೇಲಿನ ಅಚ್ಚರಿಯನ್ನು ಗಮನಿಸಿದ ಅವಳ ಗಂಡ ತಮ್ಮ ಮನೆ ಯಾವಾಗ ನೀರಲ್ಲಿ ಮುಳುಗುವುದೋ ಗೊತ್ತಿಲ್ಲ, ಹಾಗಾಗಿ ತಾವು ಪ್ರತಿದಿನ ಹೊರಡುವ ತಯಾರಿಯಲ್ಲಿ ರಾತ್ರಿ ಎಲ್ಲ ಸಾಮಾನು ಗಂಟುಮೂಟೆ ಕಟ್ಟಿಯೇ ಮಲಗುವುದು ಎಂದು ವಿವರಿಸಿದ. ಒಂದು ಕುಟುಂಬದ ಪೂರ್ತಿ ಬದುಕನ್ನು ತುಂಬಿಕೊಂಡು ನಿಂತಿರುವ ಆ ಕೋಣೆಗೆ ಇದ್ದದ್ದು ಎರಡು ಬಾಗಿಲುಗಳು. ಒಂದು ಬಾಗಿಲು ತೆರೆದರೆ ಮುಖಕ್ಕೆ ಹೊಡೆಯುವಂತೆ ಹಾಯುವ ಹರಿಯುವ ದೈತ್ಯ ನದಿ ಬ್ರಹ್ಮಪುತ್ರ, ಇನ್ನೊಂದು ಬಾಗಿಲಿನಾಚೆ ಎಲ್ಲರ ಎಲ್ಲದರ ಬುಡ ಕೊರೆಯುವ ನದಿ ದಿಬ್ರು. ಹೀಗೆ ಎರಡು ಹರಿಯುವ ನದಿಗಳ ನಡುವೆ ತಣ್ಣಗೆ ಕುಳಿತು ಬಿಸಿಯಾದ ಅಸ್ಸಾಮ್ ಚಹ ಕುಡಿದೆವು. ನೆಲ ಕೊರೆದುಕೊಂಡು ಹೋಗುವ ಸದ್ದು ಆಲಿಸುತ್ತ ಕಟ್ಟಿಗೆಯ ನೆಲದ ಸಂದಿಯಲ್ಲಿ ಆವೆ ಮಣ್ಣು ನೋಡುವಾಗೆಲ್ಲ ಬುಡ ಅಲುಗಿದ ಹಾಗೆ ಅನ್ನಿಸುತ್ತಲೇ ಇತ್ತು.
ಅಸ್ಸಾಮ್ ರಾಜ್ಯದ ಬ್ರಹ್ಮಪುತ್ರ ಮತ್ತು ಅದರ ಉಪನದಿಗಳಲ್ಲಿರುವ ದ್ವೀಪ ಇಲ್ಲವೇ ನಡುಗಡ್ಡೆ ಹಲವಾರು ವರ್ಷಗಳ ಕೊರೆತಕ್ಕೆ ಒಳಗಾಗಿ ಚಾರ್-ಚಾಪೋರಿ ಪ್ರದೇಶ ಎಂದು ಕರೆಸಿಕೊಳ್ಳುತ್ತದೆ. ನದಿ ನೀರಿನ ನಡುವೆ ಇರುವ ದ್ವೀಪದ ಮೇಲೆ ನದಿಯ ಹರಿವಿನ ದಿಕ್ಕಿನಲ್ಲಿ ಮಣ್ಣು ಉದ್ದಕ್ಕೆ ಶೇಖರಗೊಳ್ಳುತ್ತ, ಜೊತೆಯಲ್ಲಿ ಇನ್ನೊಂದು ದಿಕ್ಕಿನಲ್ಲಿ ಕೊರೆದುಕೊಳ್ಳುತ್ತ ನದಿಯಲ್ಲಿ ಉದ್ದ ನಡುಗಡ್ಡೆಯ ತರ ವಿಭಿನ್ನವಾಗಿ ರೂಪುಗೊಳ್ಳುತ್ತಲೇ ಇರುತ್ತದೆ. ಇಂತಹ ಪ್ರದೇಶಗಳಲ್ಲಿ ಹಲವು ಸಂಸ್ಕೃತಿ, ಧರ್ಮ, ಭಾಷೆ ಮತ್ತು ಜನಾಂಗಗಳ ಜನ ವಾಸವಾಗಿದ್ದಾರೆ. ದಿಬ್ರುಗಡ್ ಮತ್ತು ತಿನ್ಸುಕಿಯಾ ಜಿಲ್ಲೆಗಳ ಗಡಿಯಲ್ಲಿರುವ ಧೊದಿಯಾ ಅಂತಹ ಚಾರ್-ಚಾಪೋರಿ ಪ್ರದೇಶಗಳಲ್ಲಿ ಒಂದು. ಇದು ದಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಬರುವ ಒಂದು ಅರಣ್ಯ ಗ್ರಾಮವಾಗಿದ್ದು ಆಸ್ಪತ್ರೆ, ಶಾಲೆ, ರಸ್ತೆ, ಕುಡಿಯುವ ನೀರು, ಕರೆಂಟು, ನೆಟ್ ವರ್ಕ್ ಮೊದಲಾದ ಮೂಲಭೂತ ಸೌಕರ್ಯಗಳು ಇಲ್ಲಿ ಇನ್ನೂ ಪೂರ್ತಿಯಾಗಿ ಇಲ್ಲ. ರಾಷ್ಟ್ರೀಯ ಉದ್ಯಾನದ ಜಾಗದಲ್ಲಿ ಇದ್ದು, ಜಮೀನಿನ ಕುರಿತು ಯಾವುದೇ ತೀರ್ಮಾನ ಕೈಗೊಳ್ಳದೇ ಹಲವು ಕಷ್ಟಗಳು ಶುರುವಾಗಿ ಯೋಜನೆಗಳು ಇಲ್ಲಿ ಸರಿಯಾಗಿ ಅನುಷ್ಠಾನವಾಗಿಲ್ಲ.

ಇಲ್ಲಿ ವಾಸಿಸುತ್ತಿರುವ ಮಿಸಿಂಗ್ ಆದಿವಾಸಿ ಸಮುದಾಯ ಹಿಮಾಲಯದಿಂದ ಸಿಯಾಂಗ್ ಹಾಗೂ ಬ್ರಹ್ಮಪುತ್ರ ನದಿಯ ತಟಕ್ಕೆ ವಲಸೆ ಬಂದಿರುವುದಾಗಿ ಹೇಳಲಾಗುತ್ತದೆ. ಭಾರತದಲ್ಲಿ ಮುಖ್ಯವಾಗಿ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಈ ಸಮುದಾಯ ನೆಲೆಸಿದೆ. ೫೦ರ ದಶಕದ ಭಾರೀ ಭೂಕಂಪ ಮತ್ತು ಸತತ ಪ್ರವಾಹದಿಂದ ಬ್ರಹ್ಮಪುತ್ರ ತಟದ ಹಲವಾರು ಮಿಸಿಂಗ್ ಸಮುದಾಯದ ಗುಂಪುಗಳು ಅನೇಕ ಬಾರಿ ನಿರಾಶ್ರಿತರಾಗಿದ್ದಾರೆ. ಅವರಿಗೆ ತಾತ್ಕಾಲಿಕವಾಗಿ ಲೈಕಾ-ಧೊದಿಯಾ ಚಾರ್-ಚಾಪೋರಿಗಳಲ್ಲಿ ಬಂದು ನೆಲೆಸಲು ಅವಕಾಶ ಕೊಡಲಾಗಿದ್ದು, ಈಗ ಎಪ್ಪತ್ತು ವರ್ಷಗಳು ಕಳೆದರೂ ಅವರ ಹತ್ತಿರ ಯಾವುದೇ ಜಮೀನಿನ ದಾಖಲೆಗಳು ಇಲ್ಲ. ಅವರ ಬದುಕು ಬ್ರಹ್ಮಪುತ್ರ ನದಿಯ ಹರಿವಿನ ಹಾಗೆ; ಹೋದಲ್ಲಿ ಹೋಗಿ, ಬಂದಲ್ಲಿ ಬಂದು, ನಿಂತಲ್ಲಿ ನಿಂತು ನಡೆಸಿಕೊಂಡು ಹೋಗುವಂಥದ್ದು. ನದಿ ತೀರದ, ನದಿ ಕೊರೆತದ ಇಲ್ಲವೇ ಪ್ರವಾಹ ಪೀಡಿತ ಜಾಗಗಳಲ್ಲಿಯೇ ನೆಲೆ ನಿಂತು ಬದುಕು ಕಟ್ಟಿಕೊಂಡಿರುವ ಈ ಸಮುದಾಯ “ನೀರಿನ ಸಮುದಾಯ” ಇಲ್ಲವೇ “ನದಿಯ ಸಮುದಾಯ” ಎಂದೇ ಕರೆಸಿಕೊಳ್ಳುತ್ತದೆ. ನೂರಕ್ಕಿಂತ ಹೆಚ್ಚು ಕುಟುಂಬಗಳು ವಾಸವಿರುವ ಧೊದಿಯಾದ ನೆಲ ಎಲ್ಲ ಕಡೆಯಿಂದಲೂ ಸುತ್ತುವರಿದ ನದಿ ನೀರಿನಿಂದಾಗಿ ಎಂದಿಗೂ ಹಸಿಯಾಗಿಯೇ ಉಳಿದು ಜವುಗು ಪ್ರದೇಶದ ಹಾಗೆ ಇರುತ್ತದೆ. ಮಿಸಿಂಗ್ ಸಮುದಾಯದವರು ನೆಲದ ಮೇಲೆ ಕಂಬಗಳನ್ನು ಎಬ್ಬಿಸಿ ಅಟ್ಟದ ಮಾದರಿಯಲ್ಲಿ ಬಿದಿರಿನಿಂದ ವಿಶಿಷ್ಟವಾಗಿ ‘ಸಾಂಗ್ ಘರ್’ ಎಂದು ಕರೆಯುವ ಚಿಕ್ಕ ಮನೆಗಳನ್ನು ನಿರ್ಮಿಸುತ್ತಾರೆ.

ಹೀಗೆ ನೆಲದಿಂದ ಎತ್ತರಿಸಿ ಕಟ್ಟಿದ ಚಿಕ್ಕ ಚಿಕ್ಕ ಗೂಡುಗಳು ಅಲ್ಲಲ್ಲಿ ಚದುರಿಕೊಂಡಂತೆ ಇದ್ದು, ನೀರೇ ಬುಡಕ್ಕೆ ಕೈ ಹಾಕಿ ಎಬ್ಬಿಸಿ ಕೂರಿಸಿದಂತೆ ಕಾಣಿಸುತ್ತವೆ. ಹೆಚ್ಚುಕಮ್ಮಿ ಎಲ್ಲ ತೊಳೆದುಕೊಂಡು ಹೋಗುವಂತೆ ಕಾಣುತ್ತಿದ್ದ ಊರಿನಲ್ಲಿ, ಅಟ್ಟದ ಕೋಣೆಗಳಿಗೆ ಹೊಂದಿಕೊಂಡಂತೆ ಹೂವಿನ ಕುಂಡಗಳನ್ನು ಸುಂದರವಾಗಿ ಜೋಡಿಸಿದ್ದು ನೋಡಿ ಅಚ್ಚರಿಯ ಜೊತೆ ಖುಷಿಯೂ ಆಯಿತು. ಧೊದಿಯಾದಲ್ಲಿ ಒಂದೇ ಒಂದು ಕಿರಾಣಿ ಅಂಗಡಿಯಿದೆ. ಅದರ ಮಾಲೀಕ ನನ್ನನ್ನು ಕರೆದು ತನ್ನ ಮೊಟ್ಟಮೊದಲ ಅಂಗಡಿ ಅದೋ ಅಲ್ಲಿಯೇ ಇತ್ತೆಂದು ದಿಬ್ರು ನದಿಯ ನಡುವೆ ಕಾಣದ ಯಾವುದೋ ಬಿಂದುವಿನತ್ತ ಬೆರಳು ತೋರಿಸಿದ. ಪ್ರತಿ ಸಲ ಅಂಗಡಿ ನೀರಲ್ಲಿ ಮುಳುಗಿದಾಗಲೂ ಹೆದರದೇ ಚಾರ್-ಚಾಪೋರಿಯ ಒಳಭಾಗಕ್ಕೆ ಬರುತ್ತ ಬರುತ್ತ ಇದು ಏಳನೆಯ ಅಂಗಡಿಯೆಂದು ತುಸು ಬೇಸರದಲ್ಲಿ ಹೇಳಿದ.
ಈ ಅಂಗಡಿಯಿಂದ ಮುಂದೆ ನಡೆದು ಎಡಕ್ಕೆ ನೋಡಿದರೆ ಬಿಳಿಯ ಸುಣ್ಣ ಬಳಿದ ಸಣ್ಣ ಕಟ್ಟಡವೊಂದು ಕಾಣಿಸುತ್ತದೆ, ಅದು ಧೊದಿಯಾದ ಸರಕಾರಿ ಪ್ರಾಥಮಿಕ ಶಾಲೆ. ಶಾಲೆಯ ಕಡೆಗೆ ಹೋಗುವ ದಾರಿಯೆಲ್ಲ ನೀರಿನಿಂದ ತುಂಬಿಕೊಂಡಿದ್ದರಿಂದ ಶಾಲೆ ಮುಚ್ಚಿದ್ದಾರೆ ಎಂದು ತಿಳಿಯಿತು. ಧೊದಿಯಾದ ಒಂದಷ್ಟು ಮಕ್ಕಳು ಹೊರಗಡೆ ದೂರದ ಹಾಸ್ಟೆಲುಗಳಲ್ಲಿ ಇದ್ದು ಶಾಲೆ ಕಲಿಯುತ್ತಾರೆ. ಹಾಗೆ ಹೋಗಿ ಕಲಿತರೆ ಮಾತ್ರ ವಿದ್ಯೆ, ಇಲ್ಲದಿದ್ದರೆ ಅಲ್ಲಿ ಹೆಚ್ಚಿನ ಶಿಕ್ಷಣ ಸೌಲಭ್ಯಗಳು ಮಕ್ಕಳಿಗೆ ಸಿಗುವುದಿಲ್ಲ. ನಾವು ಹೋಗಿದ್ದು ಕೋವಿಡ್ ಕಾಲವಾಗಿದ್ದರಿಂದ ಮಕ್ಕಳು ಊರಿಗೆ ಬಂದು ಅವರವರ ಮನೆಗಳಲ್ಲಿಯೇ ಇದ್ದರು. ಕರೆಂಟ್ ಹಾಗೂ ನೆಟ್ ವರ್ಕ್ ಏನೂ ಇಲ್ಲದಿರುವುದರಿಂದ ಆನ್ ಲೈನ್ ತರಗತಿ ತೆಗೆದುಕೊಳ್ಳಲು ಆಗದೇ ಸುಮ್ಮನೆ ಮನಸ್ಸಿಗೆ ಬಂದಿದ್ದು ಮಾಡುತ್ತ ಸಮಯ ಕಳೆಯುತ್ತಿದ್ದರು. ಚುರುಕು ಹುಡುಗಿಯೊಬ್ಬಳು ಹಳದಿ ಬಣ್ಣದ ಮಿಸಿಂಗ್ ಚಾದರವನ್ನು ನೇಯ್ಗೆ ಮಾಡುತ್ತಿದ್ದಳು. ಮಿಸಿಂಗ್ ಸಮುದಾಯದ ಜನರ ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಗಾಢವಾದ ಬಣ್ಣಗಳಿಂದ ಹಾಗೂ ನಾಜೂಕಾದ ನೇಯ್ಗೆಯ ಕುಸುರಿ ಕೆಲಸಗಳಿಂದ ನೋಡುವುದಕ್ಕೂ ಉಡುವುದಕ್ಕೂ ವಿಶಿಷ್ಟವೆನಿಸುತ್ತವೆ. ಬಟ್ಟೆಯ ಮೇಲಿನ ಚಿತ್ತಾರಗಳು ನಿಸರ್ಗದಿಂದ, ಪ್ರಾಣಿಪಕ್ಷಿಗಳಿಂದ ಪ್ರಭಾವಿತವಾಗಿರುವುದು ಕಾಣುತ್ತದೆ. ಎಗೆ-ಗೆರೊ ಇತ್ಯಾದಿ ವಸ್ತ್ರಗಳು ಅಸ್ಸಾಮಿನ ಹೆಣ್ಣುಮಕ್ಕಳು ಉಡುವ ಮೇಖಲಾ-ಚಾದರಕ್ಕಿಂತ ತುಸು ಬೇರೆ ಆಗಿದ್ದು ಅದರ ಮೇಲೊಂದು ವಸ್ತ್ರವನ್ನು ಎದೆ ಅಥವಾ ಸೊಂಟದ ಮೇಲೆ ಬಿಗಿದು ಕಟ್ಟುವುದರಿಂದ ಮಿಸಿಂಗ್ ಸಮುದಾಯದ ಉಡುಗೆ ತುಂಬ ಅನನ್ಯವಾದುದು.

(ಫೋಟೋಗಳು: ಲೇಖಕರವು)
ಹೊಸದಾಗಿ ನೇಯ್ದು ಮುಗಿಸಿ ಹಿಡಿದಿದ್ದ ಅಚ್ಚ ಹಳದಿ ಬಣ್ಣದ ಚಾದರವನ್ನು ಸೂರ್ಯನ ಬೆಳಕಿಗೆ ಹಿಡಿದು ಆಸ್ವಾದಿಸುತ್ತಿರುವಾಗಲೇ ಪ್ರಾಂಜಲ್ ಎಂಬ ಹೆಸರಿನ ಹುಡುಗನೊಬ್ಬ ಬಂದು ತಾನು ಧೊದಿಯಾ ಹಳ್ಳಿಯ ಮೊದಲ ಬಿಎ ಪದವೀಧರನೆಂದು ಪರಿಚಯ ಹೇಳಿಕೊಂಡ. ಶಿಕ್ಷಣ ಮುಗಿಸಿ ವಾಪಸು ಹಳ್ಳಿಗೆ ಮರಳಿ ಬಂದಿರುವ ಇವನು ಊರ ಜನರ ಕಷ್ಟಗಳನ್ನು ಕೇಳಿಸಿಕೊಂಡು ಅವುಗಳಿಗೆ ತುಸು ಮಟ್ಟಿಗಿನ ಪರಿಹಾರ ಕಂಡುಕೊಳ್ಳಲು ಹೆಣಗುತ್ತಿರುವವರಲ್ಲಿ ಒಬ್ಬ. ಮಗು ಹೆರಲು ಬಸುರಿ ಹೆಂಗಸು ಆಸ್ಪತ್ರೆಗೆ ಹೋಗಬೇಕೆಂದರೆ ಮೂರು ಸಾವಿರ ರೂಪಾಯಿಯಷ್ಟು ಖರ್ಚು ಮಾಡಿ ಚಿಕ್ಕ ಬೋಟ್ ತರಿಸಿಕೊಂಡು ತಾಸುಗಟ್ಟಲೆ ರಭಸದಿಂದ ಉಕ್ಕಿ ಬರುವ ದಿಬ್ರು ನದಿಯಲ್ಲಿ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತ ದಡ ತಲುಪಿ ತಿನ್ಸುಕಿಯಾದಲ್ಲಿ ಆಸ್ಪತ್ರೆ ಹುಡುಕಿ ಹೋಗಬೇಕು ಎಂದು ವಿವರಿಸಿದ.

ಅಸ್ಸಾಮಿನ ಹಿಂದಿನ ಸರಕಾರದ ಸಮಯದಲ್ಲಿ ಧೊದಿಯಾದ ಜನರನ್ನು ಅರಣ್ಯ ಭೂಮಿಯಿಂದ ಎಬ್ಬಿಸಿ ಬೇರೆಡೆಗೆ ಸ್ಥಳಾಂತರ ಮಾಡಿ ಜಮೀನು ಒದಗಿಸುವ ಭರವಸೆ ನೀಡಲಾಗಿತ್ತು. ಅದಕ್ಕೆ ಮಿಸಿಂಗ್ ಸಮುದಾಯದ ಜನ ಒಪ್ಪದೇ ತಾವೇ ಜಮೀನು ಕೊಳ್ಳುವುದಾಗಿಯೂ, ಸರಕಾರ ಪರಿಹಾರ ನೀಡಿದರೆ ಸಾಕೆಂದೂ ಕೇಳಿಕೊಂಡಿದ್ದರು. ಅದರಂತೆ ತಲೆಗೊಂದು ಲಕ್ಷದಂತೆ ಊರಿನಲ್ಲಿ ಹಂಚಿದ್ದನ್ನು ದಿಬ್ರುಗಡದ ಕಂದಾಯ ಇಲಾಖೆಯ ಅಧಿಕಾರಿ ನೆನಪಿಸಿಕೊಂಡರು. ಜನರಿಗೆ ದುಡ್ಡು ಸಿಕ್ಕಿತು, ಮುಂಗಾರು ಮುಗಿಯಿತು, ಯಾರೂ ಊರು ಬಿಡಲಿಲ್ಲ. ಮುಂದಿನ ವರ್ಷ ಮತ್ತೆ ಮುಂಗಾರು ಜೋರಾಗಿ ಊರಿಡೀ ಹಳ್ಳ ಬಂದು ನೆಲ ಕೊರೆತ ಶುರುವಾದಾಗ ಧೊದಿಯಾ ಮತ್ತಿತರ ಚಾರ್-ಚಾಪೋರಿಗಳಲ್ಲಿ ಜನರು ಜಮೀನಿಗೆ, ಪರಿಹಾರಕ್ಕೆ ಮತ್ತೆ ಬೇಡಿಕೆ ಇಡಲು ಶುರು ಮಾಡಿದರು. ಹೀಗೆ ಇದು ನಡೆಯುತ್ತಲೇ ಇದೆ. ಈ ಜನ ನೀರ ಮೇಲೆ ನಡೆಯುತ್ತಲೇ ಇದ್ದಾರೆ.

ಹೇಮಾ ನಾಯಕ ಮೂಲತಃ ಅಂಕೋಲದವರು. ಸದ್ಯ ಕೆಲಸದ ಕಾರಣದಿಂದ ಮೇಘಾಲಯ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ಕವಿತೆ ಬರೆಯುವುದು ಇವರ ಪ್ರಿಯವಾದ ಹವ್ಯಾಸ. ‘ನೋವಿಗೂ ಇದೆ ಚಲನೆ’ ಇವರ ಪ್ರಕಟಿತ ಕವನ ಸಂಕಲನ.


ಎಷ್ಟು ಕಷ್ಟದ ಜೀವನ, ಓದಿ ಬೇಜಾರಾಯಿತು, ನಮ್ಮೂರಿನ ಜನ ತುಂಬಾ ಸುಖೀ.