‘ಡು ಐ ಹೇಟ್ ಮೈಸೆಲ್ಫ್?’ ಎಂದೆಲ್ಲಾ ಅನ್ನಿಸಲು ಶುರುವಾದರೂ ಬಲವಂತವಾಗಿ ಇಂತಹ ಯೋಚನೆಗಳನ್ನು ಅದುಮಿಟ್ಟೆ. ಇದೆಲ್ಲದರಿಂದ ಹೊರಬರಲು ಸಿನಿಮಾ ನೋಡುವುದೇ ಸೂಕ್ತ ಎಂದುಕೊಂಡು ಅವಳಲ್ಲಿ ಪ್ರಸ್ತಾಪಿಸಿದರೆ ಅವಳು ಒಲ್ಲದ ಮನಸ್ಸಿನಿಂದಲೇ ಸಮ್ಮತಿಸಿದಳು. ಸಿನಿಮಾದಲ್ಲಿ ಪ್ರತಿ ಪಾತ್ರಕ್ಕೆ ಅವಳು ತನ್ನನ್ನು, ರಘು ಮತ್ತು ಪೀಟರನಿಗೆ ಹೋಲಿಸಿಕೊಂಡು ಅದು ತನ್ನದೇ ಕಥೆಯಂತೆ ಭಾವಿಸಿ ಒಂದು ಭ್ರಮಾತ್ಮಕ ಸ್ಥಿತಿಗೆ ತಲುಪಿದಂತೆ ಕಾಣುತ್ತಿದ್ದಳು. ಯಾಕೋ ನನಗೆ ಹಿಂಸೆಯಾಗತೊಡಗಿತು. ನನ್ನ ಮಾನಸಿಕ ಸ್ಥಿಮಿತವನ್ನೇ ತಾನು ಕಳೆದುಕೊಳ್ಳುತ್ತಿದ್ದೇನೆ ಎನ್ನಿಸಲು ಶುರುವಾಯಿತು.
ದಾದಾಪೀರ್‌ ಜೈಮನ್‌ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ

 

‘Emptiness is an illusion’

ಸಂಜೆ ಏಳರ ಹೊತ್ತು ಪೀಜಿಯ ಟೆರೇಸಿನ ಮೇಲೆ ಆಕಾಶವನ್ನು ದಿಟ್ಟಿಸುತ್ತಾ ನಿಂತಿದ್ದೆ. ‘ಖಾಲಿತನ ಕೇವಲ ಭ್ರಮೆ’ ಎಂಬ ಎಲ್ಲೋ ಕೇಳಿದ ಸಾಲು ಕೊರೆಯುತ್ತಿತ್ತು. ಆಕಾಶವನ್ನು ನೋಡುವಾಗ ಎಲ್ಲವೂ ಖಾಲಿ ಖಾಲಿ ಅನಿಸುತ್ತಿತ್ತು.

‘ಐ ಗಿವಪ್ ಆನ್ ಥಿಂಗ್ಸ್, ಪೀಪಲ್ ಅಂಡ್ ಮೈಸೆಲ್ಫ್… ಸೂನ್’
ಇದಕ್ಕೆ ಕೌನ್ಸೆಲರ್ ಏನೆಂದು ಹೇಳಿದ್ದರು ಎಂಬುದೇ ನೆನಪಿಗೆ ಬಾರದಾಗಿತ್ತು. ಯೋಗ? ಧ್ಯಾನ? ಪ್ರಾಣಾಯಾಮ? ಪ್ರವಾಸ? ಭಕ್ತಿ? ಯಾವುದು? ಅದೇ ಸಮಯಕ್ಕೆ ಮೊಬೈಲು ರಿಂಗಣಿಸಿತು. ‘ಕ್ಷಮಾ ಮಂಗಳೂರು’ ಎಂದು ಮೊಬೈಲಿನ ಪರದೆ ಮೇಲೆ ಮೂಡಿದ್ದೆ ತಡ ಕೂಡಲೇ ರಿಸೀವ್ ಮಾಡಿದೆ.

‘ನಾನು ನಾಳೆ ಬೆಂಗಳೂರಿಗೆ ಬರ್ತಾ ಇದೀನಿ. ನೀನು ಸಿಕ್ಕಲೇ ಬೇಕು. ಬೆಳಿಗ್ಗೆ ಹನ್ನೊಂದಕ್ಕೆ ಜಯನಗರ ಬಸ್ಸ್ಟ್ಯಾಂಡ್ ಹತ್ತಿರ ಸಿಗ್ತೀನಿ. ಬರದೇ ಇರಬೇಡ. ಇದೇ ಕೊನೆ ಸಲನೂ ಇರಬಹುದು. ಪ್ಲೀಸ್ ಡು ಕಮ್. ಬೈ’ ಇಷ್ಟು ಹೇಳಿ ಫೋನಿಕ್ಕಿದ್ದಳು. ಎಂ. ಎಸ್ಸಿ ಆದ ಮೇಲಿನ ಮೂರು ವರ್ಷಗಳ ನಂತರದ ಮೊದಲ ಭೇಟಿ ಅದಾದ್ದರಿಂದ ಸಹಜವಾಗಿಯೇ ಖುಷಿಯಾಯಿತು. ಮರುದಿನದಿಂದ ದೀಪಾವಳಿ ಹಬ್ಬದ ರಜೆಗಳು ಶುರು. ನಾನಿದ್ದ ಪೀಜಿಯ ಅಕ್ಕಪಕ್ಕದ ಮನೆಗಳೆಲ್ಲ ಹಬ್ಬದ ತಯಾರಿಯಲ್ಲಿದ್ದವು. ಮುಂದಿನ ಮನೆಯಲ್ಲಿ ಒಬ್ಬಪುಟ್ಟ ಹುಡುಗ ಆಕಾಶಬುಟ್ಟಿ ನೇತುಹಾಕಲು ಕಸರತ್ತು ನಡೆಸುತ್ತಿದ್ದರೆ ಇನ್ನೊಬ್ಬ ಅವನು ಬೀಳದಂತೆ ಗಟ್ಟಿಯಾಗಿ ಖುರ್ಚಿಯನ್ನು ಹಿಡಿದುಕೊಂಡಿದ್ದ. ನಾಳೆ ದೀಪಾವಳಿಗೆ ಇವಳೂ ಬರುತ್ತೀನಿ ಅಂದಿದ್ದರಿಂದ ಚೂರು ಗೆಲುವೆನಿಸಿತಾದರೂ ಎಲ್ಲೋ ಚೂರು ಅಳುಕು ಇದ್ದೇ ಇತ್ತು.
ಅಳುಕಿಗೆ ಕಾರಣವೂ ಇತ್ತು.

ಕೆಲವು ದಿನಗಳ ಹಿಂದಿನ ಕರೆ. ಆ ಕಡೆಯ ದನಿ ಕೇಳಿ ನನಗೆ ಕೊಂಚ ಭಯವಾಗಿತ್ತು.
‘ಇವತ್ತು ಆಫೀಸಿನಿಂದ ಬರ್ತಾ ಇದ್ದೆ. ಕಾಲಲ್ಲಿ ಚಪ್ಪಲಿ ಕಿತ್ತು ಹೋಯ್ತು. ಚಪ್ಪಲಿ ಕಿತ್ತೆಸೆದು ಬರುತ್ತಿರುವಾಗ ದಾರಿಯ ಬೆಣಚು ಕಲ್ಲು ಕಾಲಿಗೆ ಅಂಟಿ ರಕ್ತ ಒಸರಲು ಶುರುವಾದದ್ದು ಗೊತ್ತಾಗುತ್ತಿತ್ತು. ನಿಲ್ಲಬೇಕು ಅನ್ನಿಸಲಿಲ್ಲ. ನಡೆಯುತ್ತಲೇ ಹೋದೆ. ರೂಮಿನ ತನಕ ನಡೆದೆ. ರೂಮಿಗೆ ಬಂದ ಮೇಲೆ ರೂಮ್ಮೇಟ್ ಬೈದು ಆಸ್ಪತ್ರೆಗೆ ಕರ್ಕೊಂಡು ಹೋದಳು’.

‘ದಾರೀಲಿ ನಡೆಯುತ್ತಾ ಇರ್ತೀನಿ. ಮನಸ್ಸಲ್ಲಿ ಯಾವುದಾದರೂ ವೆಹಿಕಲ್ ಬಂದು ಗುದ್ದಿಕೊಂಡು ಹೋಗಲಿ ಅನ್ಸತ್ತೆ’.
ಒಮ್ಮೊಮ್ಮೆ ‘ಓದಲಿಕ್ಕೆ ಅಂತ ಮಾಡಿದ್ದ ಸಾಲಗಳಿವೆ ಕಣೋ.. ಹಣದ ಋಣ ಇಟ್ಟುಕೊಂಡು ನನಗೆ ಸಾಯುವುದಕ್ಕೆ ಮನಸ್ಸಿಲ್ಲ. ಅದನ್ನೆಲ್ಲ ತೀರಿಸಿಯೇ ನಾನು ಹೋಗುವುದು’ ಎಂದೆಲ್ಲಾ ಹೇಳಿ ಭಯ ಹುಟ್ಟಿಸುತ್ತಿದ್ದಳು.

ಅದೇ ಖಾಲಿತನ. ಕೆಲವು ದಿನಗಳ ಹಿಂದೆ ಬದುಕಬೇಕು ಅಂತಲೇ ಅನ್ನಿಸುತ್ತಿರಲಿಲ್ಲ. ಬದುಕಿಗೆ ಯಾವ ಗುರಿಯೂ ಇಲ್ಲ, ಯಾವುದೇ ಅರ್ಥವಿಲ್ಲ, ಎಲ್ಲವೂ ಯಾಂತ್ರಿಕ ಅನಿಸುತ್ತಿತ್ತು. ಬೆಳಿಗ್ಗೆ ಏಳು, ತಯಾರಾಗು, ಕೆಲಸಕ್ಕೆ ಹೋಗು, ಮತ್ತೆ ಬಾ, ಟಿವಿ, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಬಳಸು, ಮಲಗು. ಮತ್ತೆ ಅದೇ ದೈನಿಕ. ಬೆರಳ ತುದಿಯಲ್ಲಿಯೇ ನೂರು ಜನರಿದ್ದರೂ ದೂರಕ್ಕೆ ನಿಂತಂತೆ ಭಾಸವಾಗುತ್ತಿತ್ತು. ಜನ ನಾನು ಸೋಲುವುದನ್ನೇ ಕಾಯುತ್ತಿದ್ದಾರೆ ಅನ್ನಿಸಿದಾಗಲೆಲ್ಲ ಗೆಲುವು ಅಂದರೇನೆಂದೇ ಗೊಂದಲವಾಗುತ್ತಿತ್ತು. ಬೆಂಗಳೂರೆಂಬ ಮಹಾನಗರಿಯಲ್ಲಿ ಯಾವುದೋ ಆರೇಳು ಮಂದಿ ಒಟ್ಟಿಗೆ ಒಂದೇ ಹಾಲಿನಲ್ಲಿರುವಂತಹ ಪೀಜಿಯಲ್ಲಿ, ಆರಕ್ಕೇರದ ಮೂರಕ್ಕಿಳಿಯದ ಜೀವನವನ್ನ ತಳ್ಳುತ್ತಿರುವ ನನ್ನನ್ನು ಯಾರೂ ಪ್ರೀತಿಸುತ್ತಲೇ ಇಲ್ಲ. ಗುರುತಿಸುತ್ತಲೇ ಇಲ್ಲ. ನಾನು ಕೇವಲ ಒಂದು ಕ್ರಿಮಿ. ಭೂಮಿಯ ಮೇಲಿನ ಒಂದು ಯಕಶ್ಚಿತ್ ಹುಲ್ಲು. ಇಲ್ಲಿ ನನ್ನ ಅಣತಿಯಂತೆ ಯಾವುದೂ ನಡೆಯುತ್ತಿಲ್ಲ. ಅಸಲಿಗೆ ಬದುಕಿಗೊಂದು ಉದ್ದೇಶವೇ ಇಲ್ಲ… ಎಲ್ಲವೂ ಖಾಲಿ ಖಾಲಿ. ಚಿಕ್ಕವನಿದ್ದಾಗ ವಿಜ್ಞಾನದಲ್ಲಿ ಓದಿದಂತೆ ಅಣುವನ್ನೂ ಒಳಗೊಂಡು ಎಲ್ಲದರ ಬಹುಪಾಲು ಅಂಶ ಖಾಲಿಯೇ ತುಂಬಿಕೊಂಡಿದೆ. ಅಂತೆಯೇ ಬದುಕೂ ಕೂಡ ಎಂದುಕೊಂಡು ಸಮಾಧಾನಗೊಳಿಸಿಕೊಳ್ಳಲು ಯತ್ನಿಸಿದಾಗಲೆಲ್ಲ ನಿರಾಸೆಯೇ ಆವರಿಸುತ್ತಿತ್ತು. ಎಲ್ಲೋ ಎಲ್ಲರೂ ಅವರ ಮನಸ್ಸಿನಾಳದಲ್ಲಿ ನನ್ನನ್ನೊಬ್ಬ ಅಪರಾಧಿಯೆಂದೋ ಅಥವಾ ಒಂದು ಅಸಹ್ಯವೆಂದೋ ಭಾವಿಸುತ್ತಿದ್ದಾರೆ ಎಂದು ಬಹುಕಾಲದಿಂದ ಬೇರೂರಿಬಿಟ್ಟಿತ್ತು. ಕೊನೆಗೂ ಒಬ್ಬ ಕೌನ್ಸೆಲರನ್ನು ಕಾಣುವುದು ಅವಶ್ಯ ಎಂದು ಹೋಗಿಬಂದದ್ದೂ ಆಯಿತು. ನಾನು ಹೋಗುತ್ತಿದ್ದ ಕೌನ್ಸೆಲರ್ ಬಳಿಯೇ ಹೇಗಾದರೂ ಮಾಡಿ ಇವಳನ್ನೂ ಕರೆದುಕೊಂಡು ಹೋಗಲೇಬೇಕು ಎಂದು ನಿಶ್ಚಯಿಸಿಕೊಂಡಿದ್ದ ನಾನು ಅವಕಾಶಕ್ಕಾಗಿ ಕಾಯುತ್ತಿದ್ದೆ. ಆ ಅವಕಾಶ ಈಗ ತಾನಾಗೇ ಬಂದಿದೆ ಎನ್ನಿಸಿತು.

ಬೆಳಿಗ್ಗೆ ಹತ್ತೂವರೆ ಸುಮಾರಿಗೆ ಜಯನಗರದ ಬಸ್ಸ್ಟ್ಯಾಂಡಿನಲ್ಲಿ ಅವಳಿಗಾಗಿ ಕಾಯುತ್ತಾ ಕೂತೆ. ಕನ್ನಡಿಯ ಮುಖ ಹೊತ್ತ ಎಲ್ಲಾ ಬಸ್ಸುಗಳೂ ಹಬ್ಬಕ್ಕಾಗಿ ಕೊರಳಿಗೆ ಸೇವಂತಿ ಹೂವು, ಚೆಂಡು ಹೂವಿನ ಮಾಲೆ ಹಾಕಿಕೊಂಡು ಸಿಂಗಾರಗೊಂಡಿದ್ದವು. ಅಂಗಡಿಗಳು ಲಕ್ಷ್ಮೀ ಪೂಜೆಗೆ ತಯಾರಾಗುತ್ತಿದ್ದವು. ಮಹಾನಗರ ಹಬ್ಬಗಳಲ್ಲಿ ಧರಿಸುವ ಈ ಹೊಸ ಪೋಷಾಕು ಹಬ್ಬದ ಹಿಂದಿನ ದಿನ ಹಾಕಿಕೊಂಡ ಗೋರಂಟಿಯ ಚಿತ್ತಾರದ ರಂಗು ಮತ್ತು ಮೂಸಿ ಜೋರಾಗಿ ಆಘ್ರಣಿಸಿದರೆ ಮಾತ್ರ ಮೂಗಿಗೆ ತಾಗುವ ಗೋರಂಟಿಯ ಘಮ, ತನ್ನ ವೇಗದ ಲಯದೊಂದಿಗೇ ಹೊಂದಿಸಿಕೊಂಡು ಹೊಸತೊಂದು ಆವರಣ ಸೃಷ್ಟಿಸಿಬಿಡುತ್ತಿದ್ದವು. ಈ ಆವರಣದ ಸಂಭ್ರಮದ ಭಾಗವಾಗಿಯೇ ಅವಳನ್ನು ಎದಿರುಗೊಳ್ಳುವುದು ಸೂಕ್ತ ಎನ್ನಿಸಿತು. ಭೇಟಿಯ ಬಗೆಗಿನ ಯಾವುದೇ ಪೂರ್ವಗ್ರಹಗಳೂ ಮನಸ್ಸಿನಲ್ಲಿ ಸುಳಿಯದಂತೆ ನನ್ನನ್ನು ಸಿದ್ಧಗೊಳಿಸುತ್ತಾ ಕೂತೆ.

ಹೇಳಿದ ಸಮಯಕ್ಕೆ ಸರಿಯಾಗಿಯೇ ಪ್ರತ್ಯಕ್ಷವಾದಳು. ಅವಳಿಷ್ಟದ ತಿಳಿ ನೀಲಿ ಬಣ್ಣದ ಚೂಡಿದಾರವನ್ನೇ ಉಟ್ಟಿದ್ದಳು. ಬಟ್ಟಲು ಕಂಗಳ ಸರಳ ಚೆಲುವೆ. ಮುಖದಲ್ಲಿ ಮಾತ್ರ ಜೀವನೋತ್ಸಾಹದ ನೀಲಿ ಕರಗಿ ಹೋಗಿತ್ತು ಅಥವಾ ಆ ಕ್ಷಣಕ್ಕೆ ನನಗೇ ಹಾಗನ್ನಿಸಿತೋ?

‘ಹಾಯ್ … ಹೇಗಿದ್ದಿ? ಹೇಗ್ ನಡೀತಿದೆ ಲೈಫು? ‘

‘ಹಿಂಗಿದೀನಿ ನೋಡಪ್ಪ. ಲೈಫು ಹಿಂಗೇ ನಡೀತಿದೆ’ ಮುಖದಲ್ಲಿ ಬೇಸರ ಮನೆ ಮಾಡಿತ್ತು. ಇವಳನ್ನು ಗೆಲುವಾಗಿಸಲು;
‘ಹೇ…. ಬೈದವೇ ಹ್ಯಾಪಿ ದೀಪಾವಳಿ… ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು’ ಅವಳು ಸುಮ್ಮನೆ ಮುಗುಳ್ನಕ್ಕಳು.

‘ನೀ ಹೇಗಿದ್ದಿ?’

‘ನಿನಗೇ ಎಲ್ಲಾ ಗೊತ್ತಿದ್ಯಲ್ಲ. ಅದೇ ಕೆಲಸ, ಸ್ಟ್ರಗಲ್ ಇತ್ಯಾದಿ ಇತ್ಯಾದಿ. ಸರಿ ಬೈಕ್ ಹತ್ತು. ಎಲ್ಲಿಗ್ ಹೋಗದು ಹೇಳು’.

ಸೀದಾ ನನ್ನನ್ನು ಒಂದು ಟ್ಯಾಟೂ ಅಂಗಡಿಗೆ ಕರೆದುಕೊಂಡು ಹೋದಳು. ಏನೇನೋ ಊಹಿಸಿದ್ದ ನನಗೋ ಪರಮಾಶ್ಚರ್ಯ. ಅಲ್ಲಿ ಎಡಭಾಗದ ಎದೆಯ ಮೇಲೆ ಒಂದಿಷ್ಟು ಪಕ್ಷಿಗಳನ್ನು ಹಾಕಿಸಿಕೊಂಡಳು. ಹಾಕಿಸಿಕೊಳ್ಳುವಾಗ ಚೂರು ಭಯದಿಂದ ನನ್ನ ಎದುರಿಗೇ ಕೂರಿಸಿಕೊಂಡು ನನ್ನ ಕೈಯನ್ನು ಬಲವಾಗಿ ಅದುಮಿ ಹಿಡಿದಿದ್ದಳು. ಅದು ಸ್ನೇಹ ಮರುಕಳಿಸಿದ ಅಪರೂಪದ ಕ್ಷಣ. ಆ ಘಳಿಗೆಯಿಂದ ಚೂರು ಹಿತವೆನ್ನಿಸಿತು. ಅವಳ ಕೈ ಬೆಚ್ಚಗಿತ್ತು. ಅವಳ ಮುಖದಲ್ಲಿದ್ದ ಆ ಭಾವ ಯಾವುದೆಂದು ಊಹಿಸಲು ಪ್ರಯತ್ನಿಸಿ ಸೋತಿದ್ದೆ. ಕೇವಲ ಸ್ಪರ್ಶದಿಂದಲೇ ಒಬ್ಬರ ನೋವು ಮತ್ತೊಬ್ಬರು ಅರ್ಥ ಮಾಡಿಕೊಳ್ಳುವಂತಿದ್ದರೆ? ಎನ್ನಿಸಿತು. ಆ ಹೊತ್ತಿನಲ್ಲಿ ಇದ್ದದ್ದು ಕೇವಲ ಮೌನ ಮತ್ತು ಪುಟ್ಟ ಗರಗಸದ ಕ್ಷೀಣ ಸದ್ದಿನಂತಿದ್ದ ಟ್ಯಾಟೂ ಹಾಕುವ ಸದ್ದು.

ಅವಳ ಹೆಸರು ಕ್ಷಮಾ. ನಾವಿಬ್ಬರು ಸ್ನಾತಕೋತ್ತರ ಪದವಿ ಓದುವಾಗ ಗೆಳೆಯರು. ಒಮ್ಮೆ ಕಾಲೇಜಿನ ಶಿಕ್ಷಕರ ದಿನಾಚರಣೆಯಂದು ನಾನು ಭಾಷಣ ಮಾಡಿದ್ದೆ. ಅವಳೊಂದು ನೃತ್ಯ ಮಾಡಿದ್ದಳು. ಆಮೇಲೆ ಫೇಸ್ಬುಕ್ ನಿಂದ ಶುರುವಾದ ಗೆಳೆತನ ಓದಿದ ಪುಸ್ತಕಗಳ, ನೋಡಿ ಇಷ್ಟವಾದ ಸಿನಿಮಾ ಡಿವಿಡಿಗಳ ವಿನಿಮಯದ ಮೂಲಕ ಬೆಳೆದು ನಾಟಕಗಳನ್ನ ನೋಡುವುದಕ್ಕೆ, ಸಾಹಿತ್ಯ ಉತ್ಸವಗಳಿಗೆ, ಪರಸ್ಪರರ ಶಾಪಿಂಗಿಗೆ ಕೊನೆಗೆ ಗುಂಡು ಪಾರ್ಟಿಗಳವರೆಗೂ ಹತ್ತಿರವಾಗಿದ್ದೆವು. ಇಷ್ಟು ದಿನಗಳ ಕಾಲ ಪರಸ್ಪರರ ನೋವು ನಲಿವು ಗುಟ್ಟುಗಳೆಲ್ಲವನ್ನು ಹಂಚಿಕೊಳ್ಳುತ್ತಿದ್ದ ಇಬ್ಬರು ಅಪ್ಪಟ ಗೆಳೆಯರ ಮಧ್ಯೆ ಓದು ಮುಗಿದ ನಂತರದ ಕೇವಲ ಮೂರೇ ಮೂರು ವರ್ಷಗಳಲ್ಲಿ ಇಷ್ಟೊಂದು ಕಂದರ ಸೃಷ್ಟಿಯಾದದ್ದಾದರೂ ಹೇಗೆ? ಭೌತಿಕ ದೂರ ಮತ್ತು ಪರಸ್ಪರರ ವೈಯಕ್ತಿಕ ಜೀವನ ಅಷ್ಟೊಂದು ದೂರ ನಿಲ್ಲಿಸಿಬಿಡುತ್ತದಾ? ಅಲ್ಲಿಂದ ಮಧ್ಯಾಹ್ನ ಊಟಕ್ಕೆ ಹೋದಾಗ ನಾನೇ, ನಾನು ಭೇಟಿಯಾಗುತ್ತಿದ್ದ ಕೌನ್ಸೆಲರ್ ಬಳಿ ಒತ್ತಾಯ ಮಾಡಿ ಕರೆದುಕೊಂಡು ಹೋದೆ…ಅವಳನ್ನು ಅಲ್ಲಿ ಬಿಟ್ಟು ಹೊರಬಂದೆ. ಅಲ್ಲಿ ಆಪ್ತಸಮಾಲೋಚನೆ ಶುರುವಾಯಿತು.

ಈ ಆವರಣದ ಸಂಭ್ರಮದ ಭಾಗವಾಗಿಯೇ ಅವಳನ್ನು ಎದಿರುಗೊಳ್ಳುವುದು ಸೂಕ್ತ ಎನ್ನಿಸಿತು. ಭೇಟಿಯ ಬಗೆಗಿನ ಯಾವುದೇ ಪೂರ್ವಗ್ರಹಗಳೂ ಮನಸ್ಸಿನಲ್ಲಿ ಸುಳಿಯದಂತೆ ನನ್ನನ್ನು ಸಿದ್ಧಗೊಳಿಸುತ್ತಾ ಕೂತೆ.

ಕ್ಷಮಾ ಮೂಲತಃ ಉತ್ತರ ಕನ್ನಡದವಳು. ಯೂನಿವರ್ಸಿಟಿ ಹಾಸ್ಟೆಲ್ಲಿನಲ್ಲಿದ್ದಳು. ಎಲ್ಲಾ ಸರಿಯಿದ್ದಂತೆ ತೋರಿಸಿಕೊಳ್ಳುತ್ತಿದ್ದ ಅವಳು ಒಳಗೊಳಗೆ ತೀವ್ರ ಒಂಟಿತನ ಅನುಭವಿಸುತ್ತಿದ್ದಂತಿತ್ತು. ಅವಳನ್ನ ಕಂಡರೆ ಅವಳ ಹಾಸ್ಟೆಲ್ಲಿನಲ್ಲಿ ಬಹಳಷ್ಟು ಜನರಿಗೆ ಆಗುತ್ತಿರಲಿಲ್ಲ. ಪ್ರಗತಿಪರಳಾಗಿದ್ದ ಅವಳನ್ನ ಚೂರು ಸಂಪ್ರದಾಯಸ್ಥರಂತೆ ವರ್ತಿಸುತ್ತಿದ್ದ ಅವಳ ಗೆಳತಿಯರು ಜಾಸ್ತಿ ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಇವಳು ರಘು ಎಂಬವನೊಬ್ಬನನ್ನ ಪ್ರೀತಿಸುತ್ತಿದ್ದಳು. ರಘು ಇವಳದೇ ಊರಿನ, ಇವಳದೇ ಜಾತಿಯವನಾಗಿದ್ದರಿಂದ ಇಬ್ಬರ ಮನೆಯಲ್ಲೂ ಇವರ ಪ್ರೀತಿಗೆ ಹಸಿರು ನಿಶಾನೆ ದೊರೆತಿತ್ತು. ಇಷ್ಟನ್ನ ಅವಳೇ ನನ್ನ ಹತ್ತಿರ ಹೇಳಿಕೊಂಡಿದ್ದಳು. ನಮ್ಮ ಪ್ರತಿಬಾರಿಯ ಕರೆಗಳಲ್ಲೂ ರಘುವಿನ ವಿಚಾರ ಬರದೇ ವಿಷಯ ಮುಗಿಯುತ್ತಿರಲಿಲ್ಲ. ರಘು ಸೌದಿಯಲ್ಲಿ ಸಾಫ್ಟ್ವೇರ್ ಎಂಜಿನೀರ್ ಆಗಿ ಕೆಲಸ ಮಾಡುತ್ತಿದ್ದ. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎಂದೆನಿಸುವಾಗಲೇ ಕಟ್ಟಿಕೊಳ್ಳುತ್ತಿದ್ದ ಪ್ರೀತಿಯ ಗೋಡೆಗಳಲ್ಲಿ ಬಿರುಕುಗಳು ಮೂಡಲಾರಂಭಿಸಿದ್ದವು.

ರಘು ಇವಳನ್ನ ಇವನ ವಶವಾದ ಪಂಜರದ ಗಿಳಿಯಂತೆ ನೋಡುತ್ತಿದ್ದ. ಪ್ರೇಮವೇನೋ ಇತ್ತಾದರೂ ರಘುವಿಗೆ ಇವಳು ತನಗಿಂತ ಓದಿನಲ್ಲಿ, ರೂಪದಲ್ಲಿ, ಚುರುಕುತನದಲ್ಲಿ ಚೂರು ಮಂದ ಎಂದು ಅವನ ತಲೆಯಲ್ಲಿ ಒಂದು ಯೋಚನೆಯ ಗೋಡೆ ಕಟ್ಟಿಕೊಂಡಿದ್ದ. ಪ್ರತಿ ಬಾರಿ ಮಾತನಾಡುವಾಗಲೂ ಇವಳನ್ನ ಒಂದು ದರ್ಜೆ ಕಡಿಮೆ ಎಂದೇ ನೋಡುತ್ತಿದ್ದ ಮತ್ತು ಅವನ ಮಾತುಗಳಲ್ಲಿಯೂ ಅದು ವ್ಯಕ್ತವಾಗುತ್ತಿತ್ತು. ಇದು ಇವಳಿಗೆ ಗೊತ್ತಾಗುತ್ತಿದ್ದರೂ ಪ್ರೇಮ ಅವಳನ್ನ ಸಹಿಸುವಂತೆ ಮಾಡಿತ್ತು. ಅವಳಿಗೆ ಸದಾ ರಘು ಸರಿಯಾಗಿ ತನಗೆ ಸಮಯ ಕೊಡುತ್ತಿಲ್ಲವೆಂದೇ ಅನಿಸುತ್ತಿತ್ತು. ಅವನು ಧಾರವಾಡಕ್ಕೆ ಬಂದಾಗಲೆಲ್ಲ, ಹೋಟೆಲ್ಲಿನಲ್ಲಿ ರೂಮು ಮಾಡುತ್ತಿದ್ದ. ಪ್ರೀತಿ ಕ್ಷಣಗಳಲ್ಲಿ ಮುಗಿದು ಹೋಗುತ್ತಿತ್ತು. ಅವಳನ್ನು ಎಂದಿಗೂ ಹೊರಗೆ ಕರೆದುಕೊಂಡು ಹೋಗಲು ಹಿಂಜರಿಯುತ್ತಿದ್ದ. ಅವರ ಭೇಟಿಗಳು ಕೇವಲ ಕರೆಗಳಲ್ಲಿ, ಹೋಟೆಲ್ಲಿನ ಕೋಣೆಯ ಕತ್ತಲಲ್ಲಿ ಕಳೆದುಹೋಗುತ್ತಿತ್ತು. ಇವಳ ಕಲ್ಪನೆಯ ಹುಡುಗನ ಅಚ್ಚಿನಲ್ಲಿ ಅದೇಗೋ ಸೇರಿಕೊಂಡಿದ್ದವನು ಕ್ರಮೇಣ ಅಚ್ಚಿನಿಂದ ಕರಗಿ ಆವಿಯಾಗಹತ್ತಿದ.

ಪದವಿ ಮುಗಿದ ಮೇಲೆ ನಾನು ಬೆಂಗಳೂರಿನಲ್ಲಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಇವಳು ಬ್ಯಾಂಕ್ ಎಕ್ಸಾಮಿನಲ್ಲಿ ಪಾಸ್ ಆಗಿ ಬ್ಯಾಂಕೊಂದರಲ್ಲಿ ಉದ್ಯೋಗ ಪಡೆದು ಮಂಗಳೂರಿಗೆ ಹಾರಿದಳು. ಅವಳು ಸೇರಿಕೊಂಡ ಬ್ಯಾಂಕಿನಲ್ಲಿ ಪರಿಚಯವಾದವನೇ ಪೀಟರ್. ಅತಿ ಚಿಕ್ಕ ವಯಸ್ಸಿಗೇ ಬ್ಯಾಂಕ್ ಮ್ಯಾನೇಜರ್ ಹುದ್ದೆ ಪಡೆದುಕೊಂಡಿದ್ದ ಸ್ಪುರದ್ರೂಪಿ ಹುಡುಗ. ಅವನನ್ನ ನೋಡಿದರೆ ಯಾರಿಗಾದರೂ ಪ್ರೀತಿಯಾಗುತ್ತದೆ. ಅಷ್ಟು ಮುದ್ದಾಗಿದ್ದವನು, ಒಳ್ಳೆಯವನು, ಅಷ್ಟೇ ಚಂಚಲನೂ ಆಗಿದ್ದ. ಪ್ರೀತಿಯೆಂದರೆ ಅವನಿಗೆ ಭಯವಾಗುತ್ತಿತ್ತು. ಆದರೆ ಸ್ತ್ರೀ ಸಂಗ ಅವನಿಗೆ ಪ್ರಿಯವಾಗಿತ್ತು. ಆದರೆ ಇಲ್ಲಿಯವರೆಗೂ ಯಾರಿಗೂ ಮೋಸ ಮಾಡಿದ ಯಾವುದೇ ಉದಾಹರಣೆಗಳೂ ಇರಲಿಲ್ಲ. ಇವಳು ಅಲ್ಲಿಗೆ ಹೋಗುವುದಕ್ಕೂ ಇವರಿಬ್ಬರ ಮಧ್ಯೆ ಸ್ನೇಹವಾಗುವುದಕ್ಕೂ ಬಹಳ ಸಮಯ ಹಿಡಿಯಲಿಲ್ಲ. ಒಮ್ಮೆ ವಾಟ್ಸಪ್ಪ್ ಡಿಪಿಯಲ್ಲಿ ‘ದಿ ಯಂಗೆಸ್ಟ್ ಮ್ಯಾನೇಜರ್ ಇನ್ ಅವರ್ ಬ್ಯಾಂಕ್’ ಎಂಬ ಒಕ್ಕಣಿಕೆಯಿದ್ದ ಸ್ಟೇಟಸ್ ಒಂದನ್ನ, ಅವರಿಬ್ಬರೂ ಮಂಗಳೂರಿನ ಕಡಲತಡಿಯಲ್ಲಿ ತೆಗೆಸಿಕೊಂಡಿದ್ದ ಫೋಟೋ ಜೊತೆಯಲ್ಲಿ ಹಾಕಿದ್ದಳು. ಅಷ್ಟರಲ್ಲಿ ನಮ್ಮ ಕರೆಗಳೂ ನಿಂತಿದ್ದವು. ಆ ಪೋಸ್ಟ್ ನೋಡಿದ್ದ ನನಗೆ ಅವಳು ತೀರಾ ಬಯಸಿದ್ದ ‘ ಕನಸಿನ ಹುಡುಗ’ ಪೀಟರ್ ನಲ್ಲಿ ದಕ್ಕಿದ್ದ ಎನ್ನುವುದು ಅವಳ ಬಗ್ಗೆ ತಿಳಿದಿದ್ದ ನನಗೆ ಹೊಳೆಯುವುದಕ್ಕೂ ಸಮಯವಾಗಲಿಲ್ಲ… ಅವಳು ಪೀಟರನಲ್ಲಿ ತಲ್ಲೀನಳಾಗುತ್ತಾ ಹೋದಂತೆ ನಮ್ಮಿಬ್ಬರ ಸಂವಹನವೂ ನಿಂತಂತೆ ಆಯಿತು. ಅಷ್ಟರ ಮಟ್ಟಿಗೆ ಪೀಟರ್ ಅವಳನ್ನ ಸೆಳೆದಿದ್ದ ಅಥವಾ ಅವಳಿದ್ದದ್ದೇ ಹಾಗೆ! ಯಾವುದಾದರೂ ಒಂದು ಅವಳಿಗೆ ಹಿಡಿಸಿತೆಂದರೆ ಅದರಲ್ಲಿ ತನ್ನೆಲ್ಲಾ ಗಮನವನ್ನ ಕೇಂದ್ರೀಕರಿಸಿಬಿಡುತ್ತಿದ್ದಳು. ಹುಚ್ಚಳಂತೆ ಪ್ರೀತಿಸುತ್ತಿದ್ದಳು. ಎರಡು ಧ್ರುವದ ಅತಿರೇಕಗಳೇ ತಾನಾಗಿಬಿಡುತ್ತಿದ್ದಳು.

ಇದಾದ ಎಷ್ಟೋ ಸಮಯದ ಮೇಲೆ ನನಗೊಂದು ಕರೆ ಬಂದಿತು. ‘ನಾನು ಮೋಸ ಹೋಗಿದ್ದೀನಿ ಕಣೋ…’ ಆದದ್ದೆಲ್ಲವನ್ನೂ ವಿವರಿಸಿದಳು. ಪೀಟರ್ ಬೇರೊಬ್ಬಳ ಹಿಂದೆ ಬಿದ್ದಿದ್ದ. ನಾನೂ ನೇರವಾಗಿಯೇ ಕೇಳಿದೆ. ‘ವರ್ ಯು ಫಿಸಿಕಲ್ ವಿಥ್ ಹಿಮ್? ಡಿಡ್ ಹಿ ಪ್ರಾಮೀಸ್ಡ್ ಯು ನ್ ಚೀಟೆಡ್ ಯು?’ ಅವಳು ಅಷ್ಟೇ ನೇರವಾಗಿ ಉತ್ತರಿಸಿದಳು. ಅವಳು ಅವನೊಂದಿಗೆ ದೇಹ ಸಂಬಂಧ ಬೆಳೆಸಿದ್ದು ಹೌದು. ಆದರೆ ಅವನು ಒತ್ತಾಯ ಮಾಡಿರಲಿಲ್ಲ. ಯಾವುದೇ ಪ್ರೀತಿ, ಪ್ರೇಮದ ಬಲೆ ಹೆಣೆದಿರಲಿಲ್ಲ. ಅವನಿಗೆ ಎಲ್ಲವೂ ಮೊದಲಿನಿಂದಲೂ ಎಲ್ಲವೂ ಸ್ಪಷ್ಟವಿತ್ತು. ಪೀಟರ್ ಇವಳು ಯೋಚಿಸಿದಂತೆಯೇ ಇವಳಿಗೆ ಸಮಯ ಕೊಡುವ, ಗಮನಿಸುವ, ಗುರುತಿಸುವ, ಮುದ್ದಿಸುವ, ಆರೈಕೆ ಮಾಡುವ, ತನಗಾಗಿಯೇ ಸಮಯ ಕೊಡುವ ಕನಸಿನ ಹುಡುಗನಂತೆಯೇ ಇದ್ದ. ರಘುವಿನಲ್ಲಿ ಸಿಗದಿದ್ದದ್ದು ಇವನಲ್ಲಿ ಹುಡುಕಿದ್ದಳು. ಇವಳೇ ಹೇಳಿದಂತೆ ಪೀಟರ್ ಇವಳನ್ನು ಒತ್ತಾಯಿಸಿರಲಿಲ್ಲ. ಇವಳೇ ಅವನನ್ನ ಬಂಧಿಸಿಡಲು ನೋಡಿದ್ದಳು. ಅವನು ಪಡೆಯಬೇಕಾದ್ದನ್ನ ಪಡೆದು ಇವಳ ಮುಷ್ಟಿಯಿಂದ ಜಾರಿಹೋಗಿದ್ದ… ಕುತೂಹಲ ಮುಗಿದಿತ್ತು. ಇದು ಇಷ್ಟೇ ಅಂತ ಗೊತ್ತಾದ ಮೇಲೆ ಯಾವ ಸಂಬಂಧವೂ ಹೆಚ್ಚು ದಿನ ಬಾಳುವುದಿಲ್ಲ. ಇವಳು ಬಯಸಿದ್ದ ಪ್ರೇಮ ಇವಳಿಗೆ ಮತ್ತೆ ಗಗನ ಕುಸುಮವಾಗತೊಡಗಿತು…. ದಿನಬೆಳಗಾದರೆ ಇವಳ ಮುಖ ಅವನು ಮತ್ತು ಅವಳ ಮುಖ ಇವನು ನೋಡಬೇಕಾಗಿ ಬಂದಿದ್ದರಿಂದ ಇವನ ದಿವ್ಯ ನಿರ್ಲಕ್ಷ ಮತ್ತು ಬೇರೊಂದು ಹುಡುಗಿಯೊಬ್ಬಳಲ್ಲಿ ಆಸಕ್ತನಾಗಿರುವುದು ಇವಳಲ್ಲಿ ಹಿಂಸೆಯನ್ನುಂಟು ಮಾಡುತ್ತಿತ್ತು. ಪೀಟರ್ ಮಾತ್ರ ಎಂದಿನಂತೆ. ದುಂಬಿಯಂತೆ…ಈ ಮಧ್ಯೆಯಲ್ಲಿ ಇವಳು ಟ್ರುಲಿ ಮ್ಯಾಡ್ಲಿ, ಟಿಂಡರ್ ಮುಂತಾದ ಡೇಟಿಂಗ್ ಆಪ್ಪುಗಳನ್ನು ಬಳಸಿ ನೋಡಿದ್ದಾಳೆ. ದೈಹಿಕ ಸುಖವೇ ಮುಖ್ಯವಾದ ಇಂತಹ ಸೈಟುಗಳು ಇವಳಿಗೆ ರೇಜಿಗೆ ತರಿಸಿ ಬಿಟ್ಟುಬಿಟ್ಟಿದ್ದಾಳೆ.

ಈ ಮಧ್ಯೆ ತಾಯಿಗೆ ತೀವ್ರ ಅನಾರೋಗ್ಯ ಎಂದು ಮನೆಗೆ ಹೋಗಿ ತಾಯಿಯ ಪಕ್ಕ ನಿಂತು ತಾಯಿಯನ್ನ ಬದುಕಿಸಿಕೊಂಡು ಬಂದಳು. ನನಗೆ ಹೀಗಾದರೂ ಆಗಿ ಹಳೆಯದನ್ನೆಲ್ಲಾ ಮರೆಯುವಂತಾಗಲಿ ಎಂದು ನಿಟ್ಟುಸಿರಿಟ್ಟೆ. ಎಷ್ಟೋ ಕಷ್ಟದ ಸಂದರ್ಭಗಳಲ್ಲಿ, ದಿಕ್ಕೆಟ್ಟ ಸ್ಥಿತಿಗಳಲ್ಲಿ ಆತುಕೊಳ್ಳಲಿಕ್ಕೆ ಅಂತ ಇರುವುದು ಕುಟುಂಬ. ಇದಾದ ಬಹಳ ದಿನಗಳ ನಂತರ ಅವಳ ಎಲ್ಲಾ ಸಮಸ್ಯೆಗಳಿಗೆ ಮೂಲ ತನ್ನ ಕುಟುಂಬವೇ ಎಂಬಂತೆ ಮಾತನಾಡಿದ್ದಳು. ಅವಳ ಮನೆಯಲ್ಲಿದ್ದದ್ದು ಅವಳು, ಅವಳ ತಂಗಿ ಮತ್ತು ತಾಯಿ. ತಂಗಿ ಹುಟ್ಟಿದ ಏಳು ವರ್ಷಕ್ಕೆ ತಂದೆ ತೀರಿ ಹೋಗಿದ್ದರು. ಇವಳ ತಂಗಿ ಇವಳಿಗಿಂತ ಆರು ವರ್ಷ ಚಿಕ್ಕವಳು. ಕ್ಷಮಾ ಹುಟ್ಟಿದ ಮೇಲೆ ಇವರ ಮನೆಗೆ ದರಿದ್ರ ಆವರಿಸಿದ್ದು ಎಂತಲೇ ಅವಳ ತಂದೆ ಮತ್ತು ತಾಯಿ ನಂಬಿದ್ದರು. ಇವಳ ತಂಗಿ ಹುಟ್ಟಿದ ಮೇಲೆಯೇ ಇವರು ಸಿರಿತನವನ್ನು ಕಂಡಿದ್ದು. ಬಾಲ್ಯದಲ್ಲಿ ತನ್ನ ಸ್ವಂತ ತಂದೆಯಿಂದಲೇ ಅನುಭವಿಸಿದ ಮೂದಲಿಕೆ ಇವಳನ್ನು ಒಂಟಿಯಾಗಿ ಮಾಡಿತ್ತು. ತಾಯಿಯದು ಯಾವುದಕ್ಕೂ ಪ್ರತಿಕ್ರಿಯೆ ನೀಡದ ಗೊಂದಲ ಸ್ವಭಾವ. ಇದು ಇವಳನ್ನು ಪ್ರೀತಿಗಾಗಿ ಹಂಬಲಿಸುವುವಂತೆ ಮಾಡಿತ್ತು. ಅಲ್ಲಿಯ ಪ್ರೀತಿಯನ್ನು ರಘುವಿನಲ್ಲಿ ಹುಡುಕಿದಳು, ಅಲ್ಲಿಲ್ಲದ್ದನ್ನು ಪೀಟರನಲ್ಲಿ ಹುಡುಕಿದಳು, ಮತ್ತೆ ಕುಟುಂಬದಲ್ಲೇ ಹುಡುಕೋಣವೆಂದು ತಿರುಗಿಕೊಂಡಾಗ ಅಲ್ಲಿಯೂ ನಿರಾಸೆ ಅನುಭವಿಸಿದ್ದಳು. ಕೊನೆಗೊಮ್ಮೆ ಮದುವೆಯ ಪ್ರಸ್ತಾಪ ಅಂತ ಮನೆಯಲ್ಲಿ ಬಂದಾಗ ತಾಯಿ ಮತ್ತು ತಂಗಿ ಅವಳ ಊರಿನ ಒಬ್ಬ ಅಡಿಕೆ ವ್ಯಾಪಾರಿಯ ವಿಷಯ ಪ್ರಸ್ತಾಪಿಸಿದಾಗ ಅವನು ಓದಿಲ್ಲವೆಂದು ಸಾರಾಸಗಟಾಗಿ ತಿರಸ್ಕರಿಸಿ ಬಂದಿದ್ದಳು. ಅಕ್ಕಪಕ್ಕದ ಮನೆಯವರಿಂದ ‘ಹೆಣ್ಮಕ್ಕಳನ್ನ ಅದಕ್ಕೆ ಈ ಪಾಟಿ ಓದಿಸಬಾರ್ದು’ ಎಂದು ಮೂದಲಿಸಿದ್ದು ಇವಳ ಕಿವಿಗೂ ಬಿದ್ದು, ಕೂಡಲೇ ಊರಿನಿಂದ ಕಾಲ್ಕಿತ್ತಿದ್ದಳು. ಬಂದು ಒಂದಿಷ್ಟು ದಿನ ಡಾನ್ಸ್ ಕ್ಲಾಸ್ ಎಂದು ತಿರುಗಿದಳು. ಜಿಮ್ ಎಂದು ದೇಹ ದಂಡಿಸಿದಳು. ಯೋಗ ಎಂದು ಆಶ್ರಮದ ಕ್ಲಾಸ್ಸಿಗೆ ಸೇರಿಕೊಂಡಳು. ಸೇರಿಕೊಂಡ ಎಲ್ಲವನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೆ ನಿರಾಸೆ ಅನುಭವಿಸುತ್ತಿದ್ದಳು. ಸಮಯ ಕಳೆಯುವುದೇ ದುಸ್ತರವಾಗಿ ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಎಲ್ಲದರ ಸುಮಾರು ವಿಡಿಯೋ ಸರಣಿಗಳನ್ನು ನಿರ್ಭಾವುಕತೆಯಿಂದ ನೋಡಿ ಮುಗಿಸಿದ್ದಳು. ಎಲ್ಲದರಲ್ಲೂ ಹುಡುಕಿದಳು. ಎಲ್ಲದರಲ್ಲೂ ಪ್ರೀತಿಯನ್ನೇ ಹುಡುಕಿದಳು. ಯಾವುದೂ ಇವಳಿಗೆ ಸಮಾಧಾನ ನೀಡುತ್ತಿರಲಿಲ್ಲ. ಇಷ್ಟೆಲ್ಲಾ ಆದ ಮೇಲೆ ಒಂದು ದಿನ ರಘು ಇವಳ ಬದುಕಿನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಆದದ್ದೆಲ್ಲ ಮರೆತುಬಿಡುವಂತೆ ಹೇಳಿ ತಾನು ಇವಳಿಗೆ ಬಾಳು ಕೊಡುತ್ತೀನಿ ಎಂಬ ಮಾತುಗಳನ್ನಾಡಿದ್ದೆ ತಡ ಇವಳು ಅವನನ್ನ ಎಗ್ಗಾಮುಗ್ಗಾ ಬೈದು ತಾನೇ ತನಗೆ ಬಾಳು ಕೊಟ್ಟುಕೊಳ್ಳುವುದು ಗೊತ್ತಿದೆ ಎಂದು ಉಗಿದು ಕಳಿಸಿದ್ದರೂ ಅವನಿಗೆ ಇನ್ನೊಂದು ಚಾನ್ಸ್ ಕೊಟ್ಟರೆ ಎಲ್ಲಾ ಮೊದಲಿನಂತೆ ಇರುತ್ತೇನೋ ಎಂದು ಗೊಂದಲದ ಮಗುವಿನಂತೆ ನನ್ನಲ್ಲಿ ಕೇಳಿದ್ದಳು. ಅದಾದ ಎಷ್ಟೋ ದಿನಗಳ ನಂತರ ರಘು ಬೇರೊಂದು ಮದುವೆಯಾದಾಗ ಸನ್ನಿ ಹಿಡಿದವಳಂತೆ ಎರಡು ವಾರದವರೆಗೂ ಆಫೀಸಿಗೆ ಹೋಗಿರದಿದ್ದ ವಿಷಯ ಕೊನೆಯಲ್ಲಿ ನನಗೆ ಹೇಳಿದ್ದಳು. ಇದಾದ ಎಷ್ಟೋ ದಿನಗಳ ನಂತರ ಒಮ್ಮೆ ಕರೆ ಮಾಡಿ ‘ನಾನು ಪೀಟರನ ಧರ್ಮಕ್ಕೆ ಸೇರ್ಕೋಬೇಕು ಅಂತಿದ್ದೀನಿ… ನೀನೇನಂತಿ?’ ಎಂದು ದಿಗ್ಭ್ರಮೆ ಹುಟ್ಟಿಸಿದ್ದಳು.

ನನಗೆ ಒಂದೊಂದು ಬಾರಿ ಇವಳದು ಅತಿರೇಕ ಅನ್ನಿಸಿ ಹಿಂಸೆ ಅನ್ನಿಸಿದ್ದಿದೆ. ಇವಳು ಹುಡುಕುತ್ತಿರುವುದಾದರೂ ಏನು ಎನ್ನಿಸಿದ್ದಿದೆ? ಅಸ್ಮಿತೆಯ ಹುಡುಕಾಟ ನನ್ನದಾದರೆ ಅವಳದ್ದು ಪ್ರೀತಿಯ ಹುಡುಕಾಟ. ಅವಳೀಗ ಅತಿರೇಕಗಳ ತುದಿಯಲ್ಲಿದ್ದೂ ಆರಾಮಾಗಿದ್ದೇನೆಂದು ಜಗತ್ತಿಗೆ ತೋರಿಸಿಕೊಳ್ಳುವಂತಹ ಸ್ಥಿತಿ ತಲುಪಿದ್ದಾಳೆ. ಇವಳು ಕೆಲಸ ಮಾಡುವ ಸ್ಥಳದಲ್ಲಿ ಇವಳು ಈ ರೀತಿಯ ಖಿನ್ನತೆ ಅನುಭವಿಸುತ್ತಿದ್ದಳೇನೋ ಎಂಬುದರ ಚಿಕ್ಕ ಸುಳಿವೂ ಸಿಕ್ಕದ ಹಾಗೆ ಇದ್ದುಬಿಡುವ ಜಾಣ್ಮೆ ದಕ್ಕಿಸಿಕೊಂಡಿದ್ದಾಳೆ.

*****

‘ಸಮಾಲೋಚನೆ ಹೇಗಿತ್ತು? ಹೌ ವಾಸ್ ದಿ ಕೌನ್ಸೆಲಿಂಗ್?’

‘ಬದುಕನ್ನ ಬ್ರೀಫ್ ಆಗಿ ಹೇಳುವುದು ತುಂಬಾ ಕಷ್ಟ ಕಣೋ… ಅನುಭವಿಸುವುದು ಸುಲಭ ಅನ್ಸತ್ತೆ ಆದರೆ ಹೇಳುವಾಗ ವಿ ಬಿಕಮ್ ಸೆಲೆಕ್ಟಿವ್. ಎಲ್ಲ ಹೇಳಿದ್ದೀನಿ ಅನ್ಸಲ್ಲ’. ತುಂಬಾ ಓದಿಕೊಂಡಿದ್ದ ಇವಳು ತನಗೆ ತಾನು ಮೊದಲು ಸಹಾಯ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿಯೂ ಇಷ್ಟು ಸೂಕ್ಷ್ಮವಾಗಿ ಮಾತನಾಡುತ್ತಿರುವುದು ನನಗೆ ಸರಿಬರಲಿಲ್ಲ.

‘ಅಷ್ಟಾದ್ರೂ ಹೇಳಿದ್ರೆ ಚೂರಾದ್ರೂ ರಿಲೀಫ್ ಆಗ್ತಿತ್ತೇನೋ’

‘ಅಷ್ಟೇ ಆದರು ಅದು ಅನುಭವಗಳನ್ನ ಮತ್ತೆ ಜೀವಿಸುವಂತೆ ಮಾಡತ್ತೆ…ಅದು ತುಂಬಾ ಹಿಂಸೆಯ ಕೆಲಸ… ನನಗೆ ಯಾರಿಂದಲೂ ಯಾವುದೇ ಪರಿಹಾರ ಸಿಗತ್ತೆ ಅಂತ ನನಗನ್ನಿಸ್ತಾ ಇಲ್ಲ. ನನಗೆ ಯಾವುದೇ ಪರಿಹಾರ ಕೂಡ ಬೇಡ. ಆದಷ್ಟು ಬೇಗ ಎಲ್ಲ ಮುಗಿಸಿಬಿಡಬೇಕು’ ಅಂದಳು. ನನಗೆ, ಬದುಕಿನಲ್ಲಿ ಸೂಜಿಮೊನೆಯಷ್ಟೂ ಕೂಡ ನಂಬಿಕೆಯನ್ನೂ ಉಳಿಸಿಕೊಂಡಿರದ ಇವಳಿಗೆ ಏನೆಂದು ಉತ್ತರಿಸಬೇಕೋ ತಿಳಿಯದಂತಾಗಿ ಮೂಕನಾದೆ. ನಾನು ಇವಳಿಗೋಸ್ಕರ ಯಾಕಾಗಿಯಾದರು ಇಷ್ಟೆಲ್ಲಾ ತಲೆಕೆಡಿಸಿ ಕೊಂಡಿದ್ದೇನೆ? ಇವಳು ಜೀವಕ್ಕೇನಾದರೂ ಅಪಾಯ ಮಾಡಿಕೊಂಡು ನನ್ನವರೆಗೂ ಸಮಸ್ಯೆ ಸುತ್ತಿಕೊಂಡು ಬಂದರೆ?
ಮತ್ತೆ ಅದೇ ಮಾತುಗಳು ರಿಂಗಣಿಸಲಾರಂಭಿಸಿದವು.

‘ಐ ಗಿವಪ್ ಆನ್ ಥಿಂಗ್ಸ್, ಪೀಪಲ್ ಅಂಡ್ ಮೈಸೆಲ್ಫ್… ಸೂನ್’ ಮತ್ತೆ ಚಕ್ಕನೆ ನೆನಪಾಗಿ ಹೋಯಿತು.
ಇದನ್ನ ತಪ್ಪು ಎಂದು ನನಗೆ ನಾನು ಸಮರ್ಥಿಸಿಕೊಳ್ಳುವುದರ ನಿಮಿತ್ತವಾಗಿ ಮಾತ್ರವೇ ಇವಳಿಗೆ ಸಹಾಯ ಮಾಡುತ್ತಿರುವುದಾ? ಭಯವಾಗಲು ಶುರುವಾಯಿತು.

‘ಡು ಐ ಹೇಟ್ ಮೈಸೆಲ್ಫ್?’ ಎಂದೆಲ್ಲಾ ಅನ್ನಿಸಲು ಶುರುವಾದರೂ ಬಲವಂತವಾಗಿ ಇಂತಹ ಯೋಚನೆಗಳನ್ನು ಅದುಮಿಟ್ಟೆ. ಇದೆಲ್ಲದರಿಂದ ಹೊರಬರಲು ಸಿನಿಮಾ ನೋಡುವುದೇ ಸೂಕ್ತ ಎಂದುಕೊಂಡು ಅವಳಲ್ಲಿ ಪ್ರಸ್ತಾಪಿಸಿದರೆ ಅವಳು ಒಲ್ಲದ ಮನಸ್ಸಿನಿಂದಲೇ ಸಮ್ಮತಿಸಿದಳು. ಸಿನಿಮಾದಲ್ಲಿ ಪ್ರತಿ ಪಾತ್ರಕ್ಕೆ ಅವಳು ತನ್ನನ್ನು, ರಘು ಮತ್ತು ಪೀಟರನಿಗೆ ಹೋಲಿಸಿಕೊಂಡು ಅದು ತನ್ನದೇ ಕಥೆಯಂತೆ ಭಾವಿಸಿ ಒಂದು ಭ್ರಮಾತ್ಮಕ ಸ್ಥಿತಿಗೆ ತಲುಪಿದಂತೆ ಕಾಣುತ್ತಿದ್ದಳು. ಯಾಕೋ ನನಗೆ ಹಿಂಸೆಯಾಗತೊಡಗಿತು. ನನ್ನ ಮಾನಸಿಕ ಸ್ಥಿಮಿತವನ್ನೇ ತಾನು ಕಳೆದುಕೊಳ್ಳುತ್ತಿದ್ದೇನೆ ಎನ್ನಿಸಲು ಶುರುವಾಯಿತು. ಎರಡು ದಿನ ಇರಲು ಬಂದವಳು ಪೀಟರನ ನೆನಪಾಗುತ್ತಿದೆ ಎಂದು ಕೂಡಲೇ ಹೊರಡುವುದಕ್ಕೆ ಅಣಿಯಾಗಿ ನಿಂತಳು. ನಾನು ಅವಳನ್ನು ಒತ್ತಾಯಿಸುವ ಸ್ಥಿತಿಯಲ್ಲಂತೂ ಇರಲಿಲ್ಲ. ಮಂಗಳೂರಿನ ಬಸ್ ಹತ್ತಿಸಿದೆ. ಕಿಟಕಿ ಬದಿಯ ಸೀಟಿನಲ್ಲಿ ಕುಳಿತ ಅವಳು ನನ್ನನ್ನೇ ನೋಡುತ್ತಾ,
‘ನೀನು ಬೇಸರ ಮಾಡ್ಕೋಬೇಡ. ಥ್ಯಾಂಕ್ಸ್ ಫಾರ್ ಅಕಂಪೆನಿಂಗ್ ಮಿ. ಯು ಟೇಕ್ ಕೇರ್’ ಬಸ್ ಹೊರಟಿತು. ಹೇಳಲಾಗದ ಹಿಂಸೆ ಆವರಿಸಿತ್ತು. ಪಟಾಕಿಗಳ ಸದ್ದು, ದೀಪಾಲಂಕೃತಗೊಂಡಿದ್ದ ಮಹಾನಗರ ಸಪ್ಪೆಯೆನಿಸತೊಡಗಿತ್ತು. ನಾನು ರೂಮಿಗೆ ಮರಳಲು ಬಸ್ ಹಿಡಿದೆ. ಕೂಡಲೇ ಆ ಆಪ್ತಸಮಾಲೋಚಕರಿಗೆ ಕರೆ ಮಾಡಿ ಕೇಳಿದೆ. ಅವರು ಹೇಳಿದ್ದು…

‘ಅವಳು ಆಳದಲ್ಲಿ ಅವಳನ್ನೇ ತುಂಬಾ ದ್ವೇಷಿಸುತ್ತಿದ್ದಾಳೆ ಅಂತ ಅನ್ನಿಸಿತು. ಆದರೆ ಅವಳಿಗೆ ಇದನ್ನ ಹೇಳುವ ಸಮಯವೂ ಇದಲ್ಲ ಅನ್ನಿಸಿ ಸುಮ್ಮನಾದೆ. ಅವಳು ಯಾವುದನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಸಾಧ್ಯ ಆದರೆ ಅವಳನ್ನು ಹೊರಗೆಲ್ಲಾದರೂ ಕರೆದುಕೊಂಡು ಹೋಗಿ ಸುತ್ತಾಡಿಸು. ಮೊದಲು ಅವಳು ಹಗುರಾಗಬೇಕು’ ಎಂದರು.

ಮರುದಿನ ಕರೆ ಮಾಡಲು ಹೋದರೆ ನನ್ನ ನಂಬರನ್ನ ಅವಳು ಬ್ಲಾಕ್ ಮಾಡಿದ್ದಳು. ಫೇಸ್ಬುಕ್, ವಾಟ್ಸಪ್ಪ್ ಎಲ್ಲದರಿಂದಲೂ ಮಾಯವಾಗಿದ್ದಳು. ನನಗೇನು ಮಾಡಬೇಕೋ ತೋಚದೆ ಸುಮ್ಮನಾದೆ. ನನ್ನವರೆಗೂ ಯಾವ ಸಮಸ್ಯೆಗಳೂ ಬರಲಿಲ್ಲವಾದರೂ ಅವಳು ಮಾಯವಾಗಿದ್ದಾದರೂ ಎಲ್ಲಿಗೆ? ಎಂಬುದು ತುಂಬಾ ದಿನದವರೆಗೂ ಕಾಡಿತ್ತು. ಅವರ ಮನೆಯ ಯಾವ ನಂಬರ್ ಕೂಡ ನನ್ನ ಬಳಿ ಇರಲಿಲ್ಲ. ನಾನೂ ಮುಂದೆ ಹುಡುಕುವ ಪ್ರಯತ್ನವನ್ನು ಮಾಡಲಿಲ್ಲ. ಒಬ್ಬರು ಮತ್ತೊಬ್ಬರಿಗೆ ಚಾಚುವ ಸಹಾಯಹಸ್ತದ ಮಿತಿಗೆ ದಂಗಾಗಿ ನನ್ನ ಸಣ್ಣತನಕ್ಕೆ ನನಗೇ ಅವಮಾನವಾದಂತಾಯಿತು.

ಅದಾದ ಮೇಲೆ ನನ್ನ ಮತ್ತು ಕ್ಷಮಾಳ ನಡುವೆ ಯಾವುದೇ ಸಂಪರ್ಕವಿರಲಿಲ್ಲ. ನಾನೂ ಕೂಡ ನನ್ನದೇ ಕೆಲಸಗಳಲ್ಲಿ ಮುಳುಗಿ ಹೋದೆ. ಅದಾದ ಒಂದು ವರ್ಷಕ್ಕೆ ವಾಟ್ಸಪ್ಪಿನಲ್ಲಿ ಮದುವೆಯ ಕಾರ್ಡು ಕಳಿಸಿದ್ದಳು. ‘ಖಂಡಿತಾ ಬರುತ್ತೇನೆ.’ ಎಂದು ಪ್ರತಿಕ್ರಿಯಿಸಿದ್ದರೂ ಹೋಗಲಾಗಿರಲಿಲ್ಲ. ಅದಕ್ಕೆ ಮುನಿಸಿಕೊಂಡು ಮತ್ತೆ ಮಾತು ಬಿಟ್ಟಿದ್ದಳು. ಮತ್ತೆ ಇತ್ತೀಚಿಗೆ ನಾನೇ ‘ಇನ್ನೂ ಕೋಪ ಇದ್ಯಾ? ಕ್ಷಮಿಸಲ್ವಾ ಕ್ಷಮಾ?’ ಎಂದು ಮೆಸೇಜು ಕಳಿಸಿದೆ. ಅದಕ್ಕವಳು ‘ಆಗಿದ್ದಾಯ್ತು. ಇನ್ಮೇಲೆ ನಾನು ಮನೆಯ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬರ್ಬೇಕು. ತಪ್ಪಿಸಿಕೊಳ್ಳೋ ಹಾಗಿಲ್ಲ.’ ಅಂದಳು. ಅದಕ್ಕೆ ನಾನು ‘ಹೂ’ ಅಂದೆ. ಆಗಿನಿಂದ ನಾವಿಬ್ಬರು ಭೇಟಿಯಾಗಲೇಬೇಕು ಅಂದುಕೊಳ್ಳುತ್ತಲೇ ಇದ್ದೇವೆ ಆದರೆ ಆಗುತ್ತಲೇ ಇಲ್ಲ. ಈಗ ಶಹರದ ಬದುಕಿನ ವೇಗದಲ್ಲಿ ಭೇಟಿಯಾಗದೆ ಉಳಿಯುವುದಕ್ಕೆ ಹೇಳಿಕೊಳ್ಳುವ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಇಬ್ಬರೂ ಕಲಿತಿದ್ದೇವೆ ಎನಿಸುತ್ತದೆ. ಹಾಗೆಯೇ ಹಳೆಯದನ್ನ ಮತ್ತು ಮುಖ್ಯವಾಗಿ ನಮ್ಮನ್ನು ನಾವು ಕ್ಷಮಿಸಿಕೊಳ್ಳುವುದನ್ನು ಕೂಡ!