ಗಂಟಿಚೋರರ ಸಮುದಾಯ ಸ್ವತಃ ಈ ಹೆಸರನ್ನು ಇಟ್ಟುಕೊಂಡದ್ದಲ್ಲ. ಹೀಗಾಗಿ ಈ ಹೆಸರಿನಿಂದುಂಟಾಗುವ ಸಾಮಾಜಿಕ ಅಪಮಾನದಿಂದ ದೂರಾಗಲು ಈ ಸಮುದಾಯ ತನ್ನ ಹೆಸರನ್ನು ಹೊಸ ವೃತ್ತಿಗನುಗುಣವಾಗಿ ಗಿರಣಿ ವಡ್ಡರ್ ಮುಂತಾಗಿ ಕರೆದುಕೊಂಡಿದ್ದಾರೆ. ಹೀಗಾಗಿ ಡಿನೋಟಿಫೈಡ್ ಸಮುದಾಯ ಅಪರಾಧಿ ಬುಡಕಟ್ಟು ಎನ್ನುವ ಹಣೆಪಟ್ಟಿ ಕಳಚಿದರೂ ಅಪರಾಧದ ಸಂಕೇತವಾದ `ಗಂಟಿಚೋರ್ಸ್’ ಎನ್ನುವ ಹೆಸರಿನಿಂದಲೇ ಈ ಸಮುದಾಯದ ಜನರು ತಮ್ಮ ಇರವನ್ನು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಇಪ್ಪತ್ನಾಲ್ಕನೆಯ ಕಂತು
ನೀವು ಈತನಕ ಓದಿದ ಗಂಟಿಚೋರ್ ಸಮುದಾಯದ ಕಥನಗಳ ಸರಣಿಯು ಸಮುದಾಯ ಅಧ್ಯಯನದ ನನ್ನ ಟಿಪ್ಪಣಿಗಳು. ಈ ಸಂಶೋಧನೆಯು ಒಂದು ಸಮುದಾಯದ ನಾಡಿಮಿಡಿತವನ್ನು ಕೇಳಿಸುವ ನೆಲೆಯಲ್ಲಿ ರಚನೆಯಾಗಿದೆ. ಅಂದರೆ ಕೇವಲ ಮಾಹಿತಿಗಳ ಮಂಡನೆಯಾಗದೆ ಅವುಗಳಲ್ಲಿ ಸಮುದಾಯವನ್ನು ಜೀವಂತಗೊಳಿಸಲು ಪ್ರಯತ್ನಿಸಲಾಗಿದೆ. ಒಂದು ಸಮುದಾಯದ ಚಾರಿತ್ರಿಕ ಪಲ್ಲಟಗಳು ಹೇಗೆ ನಿರಂತರ ರೂಪಾಂತರಕ್ಕೆ ಒಳಗಾಗುತ್ತವೆ, ಹೀಗೆ ಒಳಗಾಗುವಾಗ ಸಮುದಾಯವೊಂದು ಹೇಗೆ ಸದಾ ಸಂಘರ್ಷಕ್ಕೆ ಮುಖಾಮುಖಿಯಾಗುತ್ತದೆ ಎನ್ನುವುದನ್ನು ಗಂಟಿಚೋರ ಸಮುದಾಯದ ಹಿನ್ನೆಲೆಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಒಂದು ಕಾಲಕ್ಕೆ ಅಪರಾಧಿ ಬುಡಕಟ್ಟೆಂದು ಗುರುತಿಸಿಕೊಂಡು ನಂತರದಲ್ಲಿ ಈ ಗುರುತನ್ನು ನಿಧಾನಕ್ಕೆ ಕಳಚುತ್ತಾ ಬಂದಿರುವ ಈ ಸಮುದಾಯದ ಪಯಣವೇ ಕುತೂಹಲಕಾರಿಯಾಗಿದೆ.
ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿರುವ ಗಂಟಿಚೋರ್ ಸಮುದಾಯ ದೇಶವ್ಯಾಪಿ ಹರಡಿಕೊಂಡಿದೆ. ಉಚಲ್ಯಾ, ಭಾಮ್ಟಾ, ಠಕಾರಿ ಭಾಮ್ಟಾ, ಠಕಾರಿ, ಗುನ್ಹೆಗಾರ, ವಡ್ಡರ್, ಗಿರಣಿ ವಡ್ಡರ್, ಕಿಸೆ ಕತ್ರಾಸ್, ಕಳ್ಳವಡ್ಡರ್, ತುಡುಗುವಡ್ಡರ್, ಪಾತ್ರೂಟ್ ಹೀಗೆ ಬಹುರೂಪದಲ್ಲಿ ಸಮಾನಾಂತರ ಹೆಸರುಗಳೊಂದಿಗೆ ಈ ಸಮುದಾಯ ನೆಲೆಸಿದೆ. ಈ ಎಲ್ಲಾ ಹೆಸರುಗಳ ಒಳಗಿರುವ ಎಳೆ `ತುಡುಗು’ ಅಥವಾ `ಕಳ್ಳತನ’ `ಲೂಟಿ’ಯಾಗಿದೆ. ಇದು ಸಂಪತ್ತಿನ ಅಸಮಾನ ಹಂಚಿಕೆಯ ಕೊರತೆಯ ಬಿಂದುವಿನಲ್ಲಿ ಸಮುದಾಯಗಳ ಒಳಗಿಂದ ಹುಟ್ಟಿದ `ಪ್ರತಿರೋಧ’ದ ಒಂದು ಮಾದರಿ.
ಬ್ರಿಟಿಷ್ ಆಡಳಿತದಿಂದಾಗಿ ಸ್ಥಳೀಯ ಸಂಸ್ಥಾನಿಕ ರಾಜರುಗಳ ಸೈನ್ಯದಿಂದ ವಿಸರ್ಜಿತಗೊಂಡ ಸೈನಿಕ ಸಮುದಾಯಗಳು ಬದುಕಲು ಹಲವು ಮಾರ್ಗಗಳನ್ನು ಅನುಸರಿಸಿದವು. ಹಾಗಾಗಿ ಸೈನ್ಯದಲ್ಲಿ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸೈನಿಕರು ಈ ಲೂಟಿಯನ್ನು ಹೊಟ್ಟೆಪಾಡಿಗಾಗಿ ತಮ್ಮೆದುರಿಗಿದ್ದ ಶ್ರೀಮಂತ ಜಮೀನ್ದಾರರ ಮೇಲೆ ಪ್ರಯೋಗಿಸಿದರು. ಇದು ಕಾಲಾನಂತರ `ತುಡುಗು’ `ಕಳ್ಳತನ’ `ಲೂಟಿ’ಯಾಗಿ ಬದಲಾಯಿತು. ಇವರು ಉತ್ತರಭಾರತದಲ್ಲಿ ಹಲವು ಹೆಸರುಗಳುಳ್ಳ ಠಕ್ಕರಾದರೆ, ದಕ್ಷಿಣ ಭಾರತದಲ್ಲಿ ಭಾಮ್ಟಾ, ಠಕಾರಿ ಭಾಮ್ಟಾ, ಉಚಲ್ಯಾ, ಗಂಟಿಚೋರ್ ಆಗಿ ಗುರುತಿಸಿಕೊಂಡರು. ಈ ಎಲ್ಲರನ್ನೂ ದೇಶವ್ಯಾಪಿ ಬೆಸೆಯುವ ಎಳೆಯೆಂದರೆ ಇವರೆಲ್ಲಾ `ಶಾಕ್ತಪಂಥ’ದ ಆರಾಧಕರಾಗಿದ್ದು `ಶಾಕ್ತೇಯ’ ಸಮುದಾಯವಾಗಿರುವುದು.
ಭಾರತದ ಚರಿತ್ರೆಯಲ್ಲಿ 18 ನೇ ಶತಮಾನ ಠಕ್ಕರ ಲೂಟಿ ಕೊಲೆ ಸುಲಿಗೆ ಮುಂತಾದವುಗಳ ಭಯಭೀತ ಅಧ್ಯಾಯವಾಗಿದೆ. ಈ ಹಿನ್ನೆಲೆಯ ಒಂದೆಳೆ ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರರ ಜತೆ ತಳಕು ಹಾಕಿಕೊಂಡಿದೆ. ಆದರೆ ಗಂಟಿಚೋರರ ಹೆಸರಲ್ಲೇ `ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರೂ ಎಂದೂ ಕರೆಯುತ್ತಿದ್ದರು. ಇವರದು ಉತ್ತರಭಾರತದ ಠಕ್ಕರಂತೆ ಬೃಹತ್ ಜಾಲವಾಗಿರದೆ ಸಣ್ಣಪುಟ್ಟ ಕಳ್ಳತನದಲ್ಲಿ ತೊಡಗಿಕೊಂಡ ಹೊಟ್ಟೆಪಾಡಿನ ಕಳ್ಳರಾಗಿದ್ದರು. ಸಂತಕವಿ ಕನಕರು `ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎನ್ನುವಂತೆ ಗಂಟಿಚೋರರು ಕಳ್ಳತನ ಮಾಡಿ ಹೊಟ್ಟೆತುಂಬಿಸಿಕೊಂಡವರು.
ಚಾರಿತ್ರಿಕವಾಗಿ ಗಂಟಿಚೋರರು ಸೈನಿಕ ಸಮುದಾಯವಾಗಿದ್ದರು ಎನ್ನುವ ಬಗ್ಗೆ ಪುರಾವೆಗಳೊಂದಿಗೆ ಸಂಶೋಧನೆಯಲ್ಲಿ ಚರ್ಚಿಸಲಾಗಿದೆ. ಗಂಟಿಚೋರ್ ಸಮುದಾಯದ `ಪಾಪನೋರು’ ಎನ್ನುವ ಕುಲದ ಹಿನ್ನೆಲೆಯ ಬೆನ್ನತ್ತಿದರೆ, ಉತ್ತರ ಕರ್ನಾಟಕದ ಭೌಗೋಳಿಕ ಪರಿಸರದಲ್ಲಿ ಕನಿಷ್ಠ 9-10 ನೇ ಶತಮಾನದಿಂದಲೂ `ಪಾಪನೋರು’ ಕುಲದವರು ನೆಲೆಸಿರಬೇಕು ಅನ್ನಿಸುತ್ತದೆ. ಇದಕ್ಕೆ ವಡ್ಡಾರಾಧನೆ, ಧರ್ಮಾಮೃತ ಕೃತಿಗಳಲ್ಲಿ ಬರುವ ಕಳ್ಳರ ಕಥೆಗಳು ಸಾಕ್ಷಿಯಂತಿವೆ.
ಹಿಂದಿನ ಟಿಪ್ಪಣಿಗಳಲ್ಲಿ ಸಮುದಾಯದ ಬಹುಮುಖಿ ನೆಲೆಗಳನ್ನು ವಿಸ್ತಾರವಾಗಿ ಚರ್ಚೆ ಮಾಡಿರುವ ಕಾರಣ ಈ ಭಾಗದಲ್ಲಿ ಮುಖ್ಯವಾಗಿ ಸಮುದಾಯ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಅಧ್ಯಯನಕಾರನಾಗಿ ಕಂಡುಕೊಂಡ ಪರಿಹಾರದ ಸಾಧ್ಯತೆಯನ್ನು ಇಲ್ಲಿ ಸೂಚಿಸಲಾಗಿದೆ. ಈ ಸಮುದಾಯದ ಬಿಕ್ಕಟ್ಟುಗಳು ಪರಿಹಾರವಾದರೆ, ಇಂತಹ ಪರಿಹಾರಕ್ಕೆ ಈ ಅಧ್ಯಯನ ಒಂದು ಆಕರವಾಗಿ ಬಳಕೆಯಾದರೆ ಅಷ್ಟರಮಟ್ಟಿಗೆ ಈ ಸಂಶೋಧನೆಯು ಸಾರ್ಥಕವಾಗುತ್ತದೆ.
ಸೈನ್ಯದಲ್ಲಿ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸೈನಿಕರು ಈ ಲೂಟಿಯನ್ನು ಹೊಟ್ಟೆಪಾಡಿಗಾಗಿ ತಮ್ಮೆದುರಿಗಿದ್ದ ಶ್ರೀಮಂತ ಜಮೀನ್ದಾರರ ಮೇಲೆ ಪ್ರಯೋಗಿಸಿದರು. ಇದು ಕಾಲಾನಂತರ `ತುಡುಗು’ `ಕಳ್ಳತನ’ `ಲೂಟಿ’ಯಾಗಿ ಬದಲಾಯಿತು.
ಬಿಕ್ಕಟ್ಟು: ಗಂಟಿಚೋರ್ ಹೆಸರೇ ಗಂಟುಕಳ್ಳರು ಎಂದು ಅರ್ಥವನ್ನು ಕೊಡುತ್ತಿದೆ. ಅಂದರೆ ಒಂದು ಕಾಲಕ್ಕೆ ಈ ಸಮುದಾಯದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ ಕಾರಣ, ವಸಾಹತುಶಾಹಿ ಆಡಳಿತ ಮತ್ತು ಸುತ್ತಮುತ್ತಣ ಜನಸಮುದಾಯ ಇಟ್ಟ ಹೆಸರು `ಗಂಟಿಚೋರ್ಸ್. ಈ ಹಿನ್ನೆಲೆಯಲ್ಲಿ ಸಮುದಾಯ ಸ್ವತಃ ಈ ಹೆಸರನ್ನು ಇಟ್ಟುಕೊಂಡದ್ದಲ್ಲ. ಹೀಗಾಗಿ ಈ ಹೆಸರಿನಿಂದುಂಟಾಗುವ ಸಾಮಾಜಿಕ ಅಪಮಾನದಿಂದ ದೂರಾಗಲು ಈ ಸಮುದಾಯ ತನ್ನ ಹೆಸರನ್ನು ಹೊಸ ವೃತ್ತಿಗನುಗುಣವಾಗಿ ಗಿರಣಿ ವಡ್ಡರ್ ಮುಂತಾಗಿ ಕರೆದುಕೊಂಡಿದ್ದಾರೆ. ಹೀಗಾಗಿ ಡಿನೋಟಿಫೈಡ್ (ಡಿ.ಎನ್.ಟಿ) ಸಮುದಾಯ ಅಪರಾಧಿ ಬುಡಕಟ್ಟು ಎನ್ನುವ ಹಣೆಪಟ್ಟಿ ಕಳಚಿದರೂ ಅಪರಾಧದ ಸಂಕೇತವಾದ `ಗಂಟಿಚೋರ್ಸ್’ ಎನ್ನುವ ಹೆಸರಿನಿಂದಲೇ ಈ ಸಮುದಾಯ ತನ್ನ ಇರವನ್ನು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ವೃತ್ತಿಯ ಕಾರಣಕ್ಕೆ ಹಿಂದೆ ತಮ್ಮ ಸಮುದಾಯಗಳ ಹೆಸರುಗಳನ್ನು ಬದಲಿಸಿಕೊಂಡರೂ ಪರಿಶಿಷ್ಠ ಜಾತಿಯ ಸೌಲಭ್ಯಗಳ ಕಾರಣಕ್ಕೆ ಮರಳಿ ಈ ಸಮುದಾಯ `ಗಂಟಿಚೋರ್ಸ್’ ಎಂದೇ ಗುರುತಿಸಿಕೊಳ್ಳಬೇಕಾದ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಪರಿಹಾರ ಸಾಧ್ಯತೆ: ಕರ್ನಾಟಕದ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯು ಕೇಂದ್ರ ಸರಕಾರದ ಸಮಾಜ ಕಲ್ಯಾಣ ಇಲಾಖೆಗೆ ಈ ಅಧ್ಯಯನ ವರದಿಯ ಅಗತ್ಯ ಸಂಗತಿಗಳನ್ನು ಸಲ್ಲಿಸಿ, ಮನವರಿಕೆ ಮಾಡಿ, ಪರಿಶಿಷ್ಠಜಾತಿಯ ಪಟ್ಟಿಯಲ್ಲಿ ನಮೂದಾದ `ಗಂಟಿಚೋರ್ಸ್’ ಎನ್ನುವ ಹೆಸರನ್ನು ಅಪರಾಧಿ ಹಿನ್ನೆಲೆಯ ಕಾರಣದಿಂದಾಗಿ ಬದಲಾಯಿಸಲು ಒತ್ತಡ ತರಬೇಕಿದೆ. ಅಂತೆಯೇ ಆರಂಭದಲ್ಲಿ ಸಮಾನಾಂತರ ಪರಗಳಾಗಿದ್ದ ಹೆಸರುಳ್ಳ ಸಮುದಾಯಗಳನ್ನು ಪರಿಶಿಷ್ಠಜಾತಿಯ ಚೌಕಟ್ಟಿಗೆ ಮಾನ್ಯ ಮಾಡಬೇಕಿದೆ. ಇದು ಸ್ವತಃ ಸಮುದಾಯವೊಂದರ ಅಪೇಕ್ಷೆ ಎನ್ನುವುದನ್ನು ಕಾಣಿಸಬೇಕಿದೆ.
ಬಿಕ್ಕಟ್ಟು: ಗಂಟಿಚೋರ್ಸ್ ಅಪರಾಧಿ ಹೆಸರನ್ನು ಅಮೂಲಾಗ್ರವಾಗಿ ಕೇಂದ್ರ ಸರಕಾರವು ಬದಲಿಸುವ ತನಕ, ವೃತ್ತಿಯನ್ನಾಧರಿಸಿ ತಮ್ಮ ಮೂಲ `ಗಂಟಿಚೋರ್ಸ್’ ಸಮುದಾಯದ ಹೆಸರನ್ನು ಬದಲಿಸಿಕೊಂಡ ಸಮುದಾಯಗಳನ್ನು `ಗಂಟಿಚೋರ್ಸ್’ ಎಂದು ಗುರುತಿಸಬೇಕಾಗಿದೆ. ಈ ಬಗೆಯ ಚಾರಿತ್ರಿಕ ಬದಲಾವಣೆಯನ್ನು ಈ ವರದಿಯಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. 1950 ಬಾಂಬೆ ಸರಕಾರದ ಸಮುದಾಯಗಳ ಪಟ್ಟಿಯಲ್ಲಿ ಗಂಟಿಚೋರ್ಸ್ ಮತ್ತು ಅದರ ಸಮನಾಂತರ ಪದಗಳಾದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಪಾತ್ರೂಟ್‌ಅನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಿತು. 1975 ರಲ್ಲಿ ಕರ್ನಾಟಕ ಸರಕಾರವು ಹಿಂದುಳಿದ ಬುಡಕಟ್ಟುಗಳ ಪಟ್ಟಿಯಲ್ಲಿ ಗಂಟಿಚೋರ್, ಉಚಲ್ಯಾ, ಭಾಮ್ಟಾ, ಟಕಾರಿ, ಗಿರಣಿವಡ್ಡರ್, ತುಡುಗುವಡ್ಡರ್ ಪದಗಳನ್ನು ಒಂದೇ ಗುಂಪಿಗೆ ಸೇರಿಸಿ, ಪಾತ್ರೂಟ್ ಒಂದನ್ನು ಕೈಬಿಡಲಾಯಿತು.
ಹೀಗಿರುವಾಗ ಕರ್ನಾಟಕ ಸರಕಾರವು 1976 ರಲ್ಲಿ ಪರಿಶಿಷ್ಠ ಜಾತಿ, ಪಂಗಡದ ಅಮೆಂಡಮೆಂಟ್‌ಅನ್ನು ಪಾಸು ಮಾಡಿತು. ಈ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ `ಗಂಟಿಚೋರ್ಸ್’ ಸೇರಿಸಿ ಅದರ ಜತೆ ಇದ್ದ ಸಮಾನಂತರ ಪದಗಳನ್ನು ಕೈಬಿಡಲಾಯಿತು. ಕಾರಣ ಒಂದೇ ಸಮನಾಂತರ ಪದಗಳಾದ ಭಾಮ್ಟಾ, ಉಚಲ್ಯ, ವಡ್ಡರ್, ತುಡುಗ ವಡ್ಡರ್, ಗಿರಣಿ ವಡ್ಡರ್, ಟಕಾರಿ, ಪಾತ್ರೂಟ್ ಹೊರಗುಳಿದವು. ಮುಂದೆ ಕರ್ನಾಟಕ ಸರಕಾರವು 1986 ರಲ್ಲಿ ಇಂದುಳಿದ ವರ್ಗಗಳನ್ನು ಎ.ಬಿ.ಸಿ.ಡಿ.ಇ ಎಂದು ವಿಭಾಗಿಸಿ, `ಎ’ ಗುಂಪಿನಲ್ಲಿ ಭಾಮ್ಟಾ, ಟಕಾರಿ, ಉಚಲ್ಯಾ ಒಂದು ಗುಂಪಾಗಿಯೂ, ವಡ್ಡರ್, ಬೋವಿ ಜಾತಿಯ ಸಮಾನಾಂತರ ಪದಗಳಾಗಿ ಗಿರಣಿ ವಡ್ಡರ್, ತುಡುಗು ವಡ್ಡರ್ ಪದಗಳನ್ನು ಸೇರಿಸಿತು. ಇಲ್ಲಿ ಸ್ಪಷ್ಟವಾಗಿ `ಗಂಟಿಚೋರ್ಸ್’ ಹೆಸರನ್ನು ಪ್ರತ್ಯೇಕವಾಗಿಸಿತು. ಪಾತ್ರೂಟ್ ದಾಖಲಾಗಲಿಲ್ಲ.
1994 ರಲ್ಲಿ ಕರ್ನಾಟಕ ಸರಕಾರ ಮಾಡಿದ ಹಿಂದುಳಿದ ವರ್ಗದ ಸುಧಾರಿತ ಪಟ್ಟಿಯಲ್ಲಿ ಭಾಮ್ಟಾ, ಟಕಾರಿ, ಉಚಲ್ಯಗಳನ್ನು ಒಂದು ಗುಂಪಾಗಿಯೂ, ಬೋವಿ ಅಥವಾ ಬೋಯಿಯ ಸಮನಾಂತರ ಗುಂಪಾಗಿ ಗಿರಣಿವಡ್ಡರ್ ತುಡುಗು ವಡ್ಡರ್ ಪದವನ್ನಾಗಿಯೂ ಸೂಚಿಸಲಾಗಿದೆ. ಈ ಎಲ್ಲಾ ಕಾರಣದಿಂದ ಆರಂಭದಲ್ಲಿ ಗಂಟಿಚೋರ್ ಸಮುದಾಯದ ಸಮನಾಂತರ ಪದಗಳಾಗಿದ್ದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಪಾತ್ರೂಟ್ ಇವುಗಳನ್ನು ಹಿಂದುಳಿದ ವರ್ಗಗಳಿಂದ ಬಿಡುಗಡೆ ಮಾಡಿ ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆ ಮಾಡಬೇಕಾದ ಬಿಕ್ಕಟ್ಟು ಗಂಭೀರವಾಗಿದೆ.
ಈ ಮೇಲೆನ ಬಿಕ್ಕಟ್ಟಿನ ಸ್ವರೂಪದ ವರ್ತಮಾನದ ಸಂಘರ್ಷ ಭಿನ್ನವಾಗಿದೆ. ಕೆಲವೆಡೆಗಳಲ್ಲಿ ಗಂಟಿಚೋರ್ ಸಮುದಾಯದ ಇತರೆ ಸಮಾನಾಂತರ ಹೆಸರುಗಳಲ್ಲಿ ಗುರುತಿಸಿಕೊಳ್ಳುವವರಿಗೆ `ಪರಿಶಿಷ್ಟ ಜಾತಿ ಪ್ರಮಾಣ ಪತ್ರ’ ಕೊಡುತ್ತಿಲ್ಲ. ಕಾರಣ ತಹಶೀಲ್ದಾರರಿಗೆ ಈ ಸಮುದಾಯದ ಚಾರಿತ್ರಿಕ ಹಿನ್ನೆಲೆ ತಿಳಿಯದಿರುವುದು ಮತ್ತು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ `ಗಂಟಿಚೋರ್’ ಮಾತ್ರವಿದ್ದು, ಈ ಸಮನಾಂತರ ಪದಗಳು ದಾಖಲಾಗದಿರುವುದು ಕಾರಣವಾಗಿದೆ. ಇದರಿಂದಾಗಿ ಈ ಸಮುದಾಯದ ಕೆಲವು ಮಕ್ಕಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರವಿರದೆ ಶಿಕ್ಷಣವನ್ನು ಮೊಟುಕುಗೊಳಿಸಿದ್ದೂ ಇದೆ. ಈ ಸಮಸ್ಯೆಯಿಂದಾಗಿ ಕೆಲವರು ಉದ್ಯೋಗಕ್ಕೆ ಆಯ್ಕೆಯಾಗಿಯೂ ಉದ್ಯೋಗ ಕಳೆದುಕೊಂಡಿರುವ ಪ್ರಕರಣಗಳಿವೆ.
ಪರಿಹಾರ ಸಾಧ್ಯತೆ: ಬಿಕ್ಕಟ್ಟಿನಲ್ಲಿ ವಿವರಿಸಿದಂತೆ, ಮೂಲ ಗಂಟಿಚೋರ್ಸ್ ಸಮುದಾಯದ ಜನರು ಕಾಲಾನಂತರದಲ್ಲಿ ಬದಲಾದ ಪರ್ಯಾಯ ಪದಗಳಲ್ಲಿ ಗುರುತಿಸಿಕೊಳ್ಳುವ ಕಾರಣದಿಂದ ಆರಂಭದಲ್ಲಿ ಗಂಟಿಚೋರ್ ಸಮುದಾಯದ ಸಮನಾಂತರ ಪದಗಳಾಗಿದ್ದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಕಳ್ಳವಡ್ಡರ್, ವಡ್ಡರ್, ಪಾತ್ರೂಟ್ ಇವುಗಳನ್ನು ಹಿಂದುಳಿದ ವರ್ಗಗಳಿಂದ ಬಿಡುಗಡೆ ಮಾಡಿ ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆ ಮಾಡಬೇಕಾಗಿದೆ. ಈ ಎಲ್ಲಾ ಪದಗಳು ಗಂಟಿಚೋರ್ಸ್ ಸಮನಾಂತರ ಪದಗಳೆಂದು ಗುರುತಿಸಿ ಪರಿಶಿಷ್ಟ ಜಾತಿಯ ಸೌಲಭ್ಯಕ್ಕಾಗಿ ಅರ್ಹತೆಯನ್ನು ಮಾನ್ಯ ಮಾಡಲು ಸಮಾಜ ಕಲ್ಯಾಣ ಇಲಾಖೆಯು ಒಂದು ಏಕರೂಪಿ ಗುರುತಿನ ಕಾಯ್ದೆಯನ್ನು ಪಾಸು ಮಾಡಬೇಕಿದೆ. ಇದಕ್ಕೆ ಪೂರಕವಾಗಿ ಅನುಬಂಧ-3 ರಲ್ಲಿರುವ ಗದಗ ಜಿಲ್ಲೆಯ ಜಿಲ್ಲಾಧಿಕಾರಿ ಅವರ ವರದಿಯಲ್ಲಿ ಗಮನಿಸಬಹುದು.
ಹೀಗೆ ಒಂದು ಏಕರೂಪಿ ಗುರುತಿನ ಕಾಯ್ದೆಯನ್ನು ಪಾಸು ಮಾಡಿ ಈ ಪ್ರತಿಯನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೂ, ತಹಶೀಲ್ದಾರರಿಗೂ ಅನುಷ್ಟಾನಕ್ಕಾಗಿ ಕಳಿಸಿಕೊಡಬೇಕಿದೆ. ಸಧ್ಯಕ್ಕೆ ಇಂತಹ ಬಿಕ್ಕಟ್ಟಿಗೆ ಸಂಶೋಧನೆಯ ಮೂಲಕ ಪರಿಹಾರ ಕಂಡುಕೊಂಡವರು 2014 ರಲ್ಲಿ ಗದಗಿನ ಜಿಲ್ಲಾಧಿಕಾರಿಯಾಗಿದ್ದ ಎನ್.ಎಸ್.ಪ್ರಸನ್ನ ಕುಮಾರ್ ಅವರು. ಶಿರಹಟ್ಟಿ ತಾಲೂಕಿನ ಬಾಲೆಹೊಸೂರಿನ ಗಂಟಿಚೋರರು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಊರಿನ ಸವರ್ಣೀಯರು ದೂರು ಕೊಟ್ಟಿದ್ದರು. ಈ ದೂರನ್ನು ಆಧರಿಸಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಸಮುದಾಯದ ಬಗ್ಗೆ ಒಂದು ವರದಿಯನ್ನು ರೂಪಿಸಿ ಗಂಟಿಚೋರರು ಹಿಂದೆ ಗಿರಣಿವಡ್ಡರ್ ಎಂದು ದಾಖಲಿಸಿಕೊಂಡಿದ್ದರೂ ಅದು ವೃತ್ತಿಯ ಬದಲಾವಣೆಯಿಂದ ಬಂದದ್ದು ಹಾಗಾಗಿ ಇವರು ಮೂಲತಃ ಗಂಟಿಚೋರ್ ಸಮುದಾಯದವರು. ಈ ಹಿನ್ನೆಲೆಯಲ್ಲಿ ಅವರು ಪಡೆದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸರಿಯಾಗಿದೆ ಎಂದು ವರದಿಯನ್ನು ಮಂಡಿಸಿದ್ದಾರೆ. ಇಡೀ ವರದಿಯನ್ನು ಅನುಬಂಧದಲ್ಲಿ ಕೊಡಲಾಗಿದೆ. ಈ ವರದಿಯನ್ನು ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಪರಿಶೀಲಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸರಕಾರ ಆದೇಶಿಸಬೇಕಿದೆ.
(ಚಿತ್ರಗಳು: ಲೇಖಕರವು)
ಅರಣ್ ಜೋಳದಕೂಡ್ಲಿಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಜೋಳದಕೂಡ್ಲಿಗಿಯವರು. ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ಮುಗಿಸಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010), ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017) ಓದು ಒಕ್ಕಾಲು ( ಸಾಹಿತ್ಯ ವಿಮರ್ಶೆ, 2020) ಕೊರೋನಾ ಜಾನಪದ (ನವಜಾನಪದ ಕುರಿತ ಸಂಶೋಧನ ಲೇಖನಗಳ ಸಂಕಲನ, 2020) ನಡುವೆ ಸುಳಿವ ಹೆಣ್ಣು ( ಮಂಜಮ್ಮ ಜೋಗತಿ ಅವರ ಆತ್ಮಕಥನದ ನಿರೂಪಣೆ, 2020)