ಜೋ.ದೊಡ್ಡನಗೌಡ ಅವರ ಪೂರ್ಣ ಹೆಸರು ಜೋಳದರಾಶಿ ಕೆ.ದೊಡ್ಡನಗೌಡ. ನಾಟಕಕಾರರಾಗಿ, ಕವಿಗಳಾಗಿ ಗುರುತಿಸಿಕೊಂಡಿದ್ದ ಅವರು ಗಮಕಿಗಳೂ ಆಗಿದ್ದರು. ಬಳ್ಳಾರಿ ಜಿಲ್ಲೆಯ ಜೋಳದ ರಾಶಿ ಎಂಬುದು ಅವರ ಹುಟ್ಟೂರು. ಕೃಷಿಕರಾಗಿದ್ದ ಅವರು ಭೂಸುಧಾರಣೆ ಕಾಯ್ದೆ ಜಾರಿಯಾದಾಗ ಅಪಾರ ಜಮೀನು ಕಳೆದುಕೊಂಡರು. ಸಾಹಿತ್ಯ, ಕಾವ್ಯ ಅವರ ಜೀವಾಳವಾಗಿತ್ತು. ಆಂಧ್ರದ ಗಡಿಭಾಗದ ಜಿಲ್ಲೆಯಾದ್ದರಿಂದ ತೆಲುಗು ಬಲ್ಲವರು. ಜೊತೆಗೆ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದವರು. ರಸವರ್ಷ, ಯಾತ್ರಿಕ, ನಮ್ಮ ಹಂಪೆ, ಗೌಡತಿ ಬರಲಿಲ್ಲ, ರಾಮೇಶನ ವಚನಗಳು ಅವರ ಕೃತಿಗಳು. ಅಭಯ, ಸಾಯದವನ ಸಮಾಧಿ, ನೋಡ್ರವ್ವ ನಾಟಕ, ಕ್ರಾಂತಿ ಪುರುಷ, ಕನಕದಾಸ ಅವರು ಬರೆದ ನಾಟಕಗಳು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರು. ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. ರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಸಂದಿದ್ದು, ಗೌರವ ಡಾಕ್ಟರೇಟ್ ಕೂಡ ದೊರೆತಿದೆ. ಮೂರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಬರೆದ ಜೋಳದ ಝೋಕ್ ಕವನ ಇಂದಿನ ಕನ್ನಡ ಕಾವ್ಯಮಾಲೆಯ ಕುಸುಮಗಳು ಸರಣಿಯಲ್ಲಿ ನಿಮ್ಮ ಓದಿಗಾಗಿ.
ಜೋಳದ ಝೋಕ್
ಯಂಗಂತ ಹೇಳಲಿ ನಿನ್ನ ಪ್ರತಾಪ
ಜಗಜಗಿಸುವ ಜೋಳ ರಾಜ್ಯದ ಭೂಪ
ಯಾರಿಗು ಅಂಜದೆ ನೆಟ್ಟಗೆ ನಿಂತಿ
ಮೋರೆಯಮ್ಯಾಕೆತ್ತಿ ತೂಗುತಲಿದ್ದಿ
ಮಾರುದ್ದ ಕೈಗಳ ಬೀಸುತಲಿದ್ದಿ
ಬೀರನ ತೆರನಂತೆ ಮೆರೆಯುತಲಿದ್ದಿ ॥೧॥
ಒಳ್ಳೆಯ ಮುತ್ತಿನ ಚೆಂಡಂತೆ ಮೋರಿ
ಬೆಳ್ಳಗೆ ಬೆಳಗುವ ಕಾಂತಿಯ ಬೀರಿ
ತೆಳ್ಳಗೆ ಹಸುರಿನ ಮೈಯದು ತೋರಿ
ಚೆಲುವಾದ ಕಳೆಯೇರಿ ವಲಿಯುವೆ ಭಾರಿ ॥೨॥
ನೆಲ್ಲಪ್ಪ ಗೋದೆಪ್ಪ ಮುಂತಾದೊರೆಲ್ಲ
ಬಲ್ಲಂತೆ ನಿನ್ನನು ಬೈದವರೆಲ್ಲ
ಹಲ್ಕಿರಿದಿಂದಿನ ಶರಣೆಂದರಲ್ಲ
ಭಲರೇ ನಿನ್ಸಮ ಲೋಕದೊಳಿಲ್ಲ ॥೩॥
ಒಂದಕ್ಕೆ ಹತ್ತಾಗಿ ನೂರಾಗಿ ಬೆಳೆವೆ
ನಂಬಿದೋರಿಗೆ ನಿನ್ನ ಜೀವವಕೊಡುವೆ
ತಿಂಬುಂಬ ಮನೆಯೆಂದು ಹೆಸರಿಗೆ ತರುವೆ
ನಂಬದ ಜನಕೆಲ್ಲ ಮಣ್ಣುಮುಕ್ಕಿಸುವೆ ॥೪॥
ಬಡವ ಬಲ್ಲಿದರೆಂಬ ಭೇದವನೀಗಿ
ಸಡಗರದೆಲ್ಲರ ಗೆಳೆಯನೀನಾಗಿ
ನಡೆಯಿಂದ ರಾಮೇಶಗೊಪ್ಪುವ ಮಗನಾಗಿ
ನಾಡಬೋನದ ಬೊಮ್ಮನೆನಿಸಿದೆ ತ್ಯಾಗಿ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ