ಹಕ್ಕಿ ಗರಿಗಳ ರಮ್ಯಲೋಕವನ್ನು ಚಿತ್ರಿಸುವ ‘ಹಕ್ಕಿಪುಚ್ಚವೆನ್ನುವ ಬೆಚ್ಚಾನೆ ತಾವು’ ಪ್ರಬಂಧ ಹಕ್ಕಿಪುಕ್ಕವೊಂದು ಹಾರಿಬಂದು, ಪ್ರಾರ್ಥನೆಗೆ ನಿಂತಿರುವ ಮಗುವಿನ ಕೈ ಸೇರಿ, ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸುವ ಪ್ರಸನ್ನಚಿತ್ರದೊಂದಿಗೆ ಆರಂಭವಾಗುತ್ತದೆ. ಪುಕ್ಕ ಹಿಡಿದ ನಗುಮುಖದ ಮಗುವಿನ ಚಿತ್ರದೊಂದಿಗೆ ದ.ರಾ. ಬೇಂದ್ರೆ ಅವರ ‘ಗರಿ’ ಕವಿತೆಯನ್ನು ನೆನಪಿಸಿಕೊಳ್ಳಬೇಕು. ‘ಹಾರಲೆಂದು ಹುಟ್ಟಿದ ಹಕ್ಕಿ ಮೈಯ ಬದುಕು’ ಎಂದು ಕವಿ ಉದ್ಗರಿಸುವ, ಪುಕ್ಕದ ಮೂಲಕ ಹಕ್ಕಿಯ ಬದುಕಿನ ಘನತೆಯನ್ನು ಸೂಚಿಸುವ ‘ಗರಿ’ ಬೇಂದ್ರೆಯವರ ಅದ್ಭುತ ಕವಿತೆಗಳಲ್ಲೊಂದು. ಆ ಕವಿತೆ ಕಾಣಿಸುವ ಹಕ್ಕಿಯ ಬದುಕಿನ ಘನತೆ, ಆಶಾ ಅವರ ಪ್ರಬಂಧದಲ್ಲಿ ಹಲವು ರೂಪಗಳಲ್ಲಿ ಚಿತ್ರಣಗೊಳ್ಳುತ್ತದೆ.
ಆಶಾ ಜಗದೀಶ್ ಹೊಸ ಪುಸ್ತಕ “ಕಾಣೆಯಾದವರು” ಪ್ರಬಂಧಗಳ ಸಂಕಲನಕ್ಕೆ ರಘುನಾಥ ಚ.ಹ. ಬರೆದ ಮುನ್ನುಡಿ
ಎಲ್ಲಿಂದಲೋ ತೇಲಿಬಂದ ಸೌಗಂಧಿಕಾ ಪುಷ್ಪದ ಪರಿಮಳಕ್ಕೆ ಸೋತು, ಗಿಡವನ್ನೇ ಹುಡುಕಿ ಹೊರಡುತ್ತಾನೆ ದ್ರೌಪದಿಯ ನಲ್ಲ ಬಲಭೀಮ. ಪ್ರಬಂಧಕಾರನೂ ಅಷ್ಟೇ. ಯಾವುದೋ ಕ್ಷಣದಲ್ಲಿ ಮನಸ್ಸಿಗೆ ತಾಕಿದ ಕಂಪಿನ ಕರೆಗೆ ಓಗೊಟ್ಟು, ಅದರ ಜಾಡು ಹಿಡಿದು ನಡೆಯುತ್ತಾನೆ. ಆ ನಡಿಗೆಯಲ್ಲಿ ಸೌಗಂಧಿಕಾ ಪುಷ್ಪಗಳ ಗೊಂಚಲು ದೊರೆಯಬಹುದು, ತುಂಬೆಗಷ್ಟೇ ತೃಪ್ತಿಪಡಬೇಕಾಗುವುದು, ಇಲ್ಲವೇ ಪರಿಮಳವಿಲ್ಲದ ಕಾಡುಹೂವೊಂದಷ್ಟೇ ಕೈಸೇರಬಹುದು. ಇಲ್ಲಿ ಗಮ್ಯವೆನ್ನುವುದು ಅದೃಷ್ಟ. ನಡಿಗೆಯ ಪ್ರಯತ್ನಕ್ಕೆ ಮಹತ್ವ. ಹೀಗೆ ಹೂಶಿಕಾರಿಗೆ ಹೊರಟು ಹಲವು ಬಗೆಯ ಹೂಗಳನ್ನು ಹೆಕ್ಕಿ ಪೋಣಿಸಿದ ಚಂದದ ಮಾಲೆ ‘ಕಾಣೆಯಾದವರು’.
‘ಕಾಣೆಯಾದವರು’ ಆಶಾ ಜಗದೀಶ್ ಅವರ ಹದಿನೈದು ಪ್ರಬಂಧಗಳ ಸಂಕಲನ. ಈಗಾಗಲೇ ಕಥೆ ಮತ್ತು ಕವಿತೆಗಳ ಮೂಲಕ ಸಹೃದಯರಿಗೆ ಪರಿಚಿತರಾದ ಅವರು, ಈಗ ಪ್ರಬಂಧ ಪ್ರಕಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಬಂಧ ಹಾಗೂ ಕಥೆಯ ನಡುವಿನ ಗೆರೆ ತೆಳುವಾದುದು. ಪ್ರಬಂಧವೊಂದರಲ್ಲಿ ಅನೇಕ ಕಥೆಗಳ ಬೀಜಗಳು ಇರಲಿಕ್ಕೆ ಸಾಧ್ಯವಿದೆ. ಕೆಲವೊಮ್ಮೆ ಈ ಕಥನಗಳ ಪೋಣಿಸುವಿಕೆ ಪ್ರಬಂಧದ ಸ್ವರೂಪದಲ್ಲಿ ಅಭಿವ್ಯಕ್ತಗೊಳ್ಳುವುದೂ ಇದೆ. ಆಶಾ ಅವರ ಪ್ರಬಂಧಗಳೂ ಅಷ್ಟೇ. ಲೇಖಕಿಯ ಭಾವಲೋಕದ ಅನೇಕ ಸಂಗತಿಗಳು ಕಿರುಕಥೆಗಳ ರೂಪದಲ್ಲಿ ಅರಳಿ ಹೆಣೆದುಕೊಂಡು, ಆ ಹೆಣಿಗೆಗಳು ಪ್ರಬಂಧದ ಮೊಹರು ಹೊಡೆಸಿಕೊಂಡಿವೆ. ಕವಯಿತ್ರಿಯೂ ಆಗಿರುವುದು ಆಶಾ ಅವರ ಪ್ರಬಂಧಗಳಿಗೆ ಕಾವ್ಯಗಂಧಿ ಗುಣ ದೊರೆಯಲು ಸಾಧ್ಯವಾಗಿದೆ. ಈ ಸಂಕಲನದ ಮತ್ತೊಂದು ವಿಶೇಷ, ಇಲ್ಲಿನ ಬರಹಗಳಲ್ಲಿ ಒಬ್ಬ ವಿದ್ಯಾರ್ಥಿನಿಯಿರುವುದು ಹಾಗೆಯೇ ಆ ಬಾಲಕಿಯೇ ವರ್ತಮಾನದಲ್ಲಿ ಶಿಕ್ಷಕಿಯೂ ಆಗಿರುವುದು. ವಿದ್ಯಾರ್ಥಿನಿಯ ಕುತೂಹಲ ಹಾಗೂ ಮುಗ್ಧತೆಯ ಜೊತೆಗೆ ಶಿಕ್ಷಕಿಯ ಅನುಭವ, ಕಾಳಜಿ, ವಿಚಾರ, ವಿವೇಕಗಳು ಸೇರಿಕೊಂಡು ರೂಪುಗೊಂಡಿರುವ ಬರಹಗಳಿವು. ಗತ-ವರ್ತಮಾನಗಳು ಅರ್ಥಪೂರ್ಣವಾಗಿ ಸಂಧಿಸಲಿಕ್ಕೆ ಈ ದ್ವಿಪಾತ್ರಾಭಿನಯ ಪರಿಣಾಮಕಾರಿಯಾಗಿದೆ.
ಇಲ್ಲಿನ ಎಲ್ಲ ಪ್ರಬಂಧಗಳಿಗೂ ಕಾವ್ಯಸಹಜವಾದ ಒಂದು ಲಯವಿದೆ. ಆ ನಾದಮಯತೆ ಶೀರ್ಷಿಕೆಗಳಲ್ಲೇ ಎದ್ದುಕಾಣುತ್ತದೆ. ‘ಹೂವ ಅರಸುವ ಕಾಲದ ನೆಲ’, ‘ಬಿಟ್ಟು ಹಿಡಿಯುವ ಬಿಡುಗಡೆಯ ನಿರಾಳ’, ‘ಸ್ಮೃತಿ ತಂತುಗಳ ತೂಗು’ – ಇಂಥ ಶೀರ್ಷಿಕೆಗಳು ಕಾವ್ಯದ ಸಾಲುಗಳಂತೆಯೂ ಗಮನಸೆಳೆಯುತ್ತವೆ.
ಕರ್ತೃವಿನ ಮೂಗು ತೂರಿಸುವಿಕೆಗೆ ಹೆಚ್ಚು ಅವಕಾಶ ಇರುವ ಸಾಹಿತ್ಯ ಪ್ರಕಾರ ಪ್ರಬಂಧ. ಈ ಅವಕಾಶದ ಕಾರಣದಿಂದಲೇ ಪ್ರಬಂಧಕಾರರ ಆತ್ಮಕಥನದ ತುಣುಕುಗಳು ಕೂಡ ಪ್ರಬಂಧಗಳಲ್ಲಿ ಇಣುಕಿಬಿಡುತ್ತವೆ. ಆಶಾ ಅವರ ಪ್ರಸಕ್ತ ಸಂಕಲನದ ಮೊದಲ ಬರಹ ‘ಹೂವ ಅರಸುವ ಕಾಲದ ನೆಲ’ ಬರಹ ಕೂಡ ಆತ್ಮವೃತ್ತಾಂತದ ರೀತಿಯ ತುಣುಕೇ ಆಗಿದೆ. ಹೂವನ್ನೂ ಅಮ್ಮನನ್ನೂ ಒಟ್ಟಿಗೆ ನೋಡುವುದರೊಂದಿಗೆ ಆರಂಭವಾಗುವ ಈ ಪ್ರಬಂಧ, ಅಮ್ಮನ ವಾತ್ಸಲ್ಯದ ಮಕರಂದವನ್ನು ಕಾಣಿಸಲು ಹಂಬಲಿಸುತ್ತದೆ. ಗುಬ್ಬಚ್ಚಿ ಸಂಸಾರದಂಥ ಕುಟುಂಬದಲ್ಲಿ ಮಕ್ಕಳನ್ನು ಹೂಗಳಂತೆ ಮುಚ್ಚಟೆ ಮಾಡುವವಳು ಅಮ್ಮ. ಹಾಗೆ ಅರಳಿದ ಹೂವೊಂದು ಈಗ ತಾನೇ ಅಮ್ಮನಾಗಿ ರೂಪಾಂತರಗೊಂಡು, ತನ್ನದೇ ಹೂವುಗಳರಳಿಸಿದೆ. ಹೀಗೆ ಎರಡು ತಲೆಮಾರುಗಳನ್ನು – ಹೂದೋಟಗಳನ್ನು – ಮುಖಾಮುಖಿಯಾಗಿಸುವ ಪ್ರಬಂಧ ಕೊನೆಗೊಳ್ಳುವುದು ವಿಷಾದದೊಂದಿಗೆ; ಚೇತನ ಅಚೇತನವಾಗುವ ನೋವಿನೊಂದಿಗೆ. ‘ಹೂವ ಅರಸುವ ಕಾಲದ ನೆಲ’ ಉದ್ಗಾರದಲ್ಲಿನ ‘ಕಾಲ’ ಸಮಯವಷ್ಟೇ ಅಲ್ಲ, ಅದು ಸಾವೂ ಹೌದು. ಹೀಗೆ ರೂಪಕಭಾಷೆಯಲ್ಲಿ ಮಾತನಾಡುವ ಕಾರಣದಿಂದ ಗಮನಸೆಳೆಯುವ ಈ ಪ್ರಬಂಧ, ಸಹೃದಯರ ಬದುಕಿನ ಸುಮತಂತುಗಳನ್ನೂ ಮೀಟುವಷ್ಟು ಸೊಗಸಾಗಿದೆ. ಈ ಹೂಬಂಧದ ಜೊತೆಯಲ್ಲಿಯೇ, ಆತ್ಮಕಥನದ ಇನ್ನೊಂದು ಕಿರು ಅಧ್ಯಾಯದಂತಿರುವ, ಅಮ್ಮನೊಬ್ಬಳು ಮಗಳಿಗೆ ಬರೆದಿರುವ ಪತ್ರದ ರೂಪದಲ್ಲಿರುವ, ವಾತ್ಸಲ್ಯದಲ್ಲಿ ಅದ್ದಿ ತೆಗೆದಂತಿರುವ ‘ಚಿನ್ನಾರಿ ಮಗಳೇ’ ಪ್ರಬಂಧವನ್ನು ಓದಬೇಕು.
‘ಊರೆಂಬ ಪ್ರಾಣಸಖ’ ಪ್ರಬಂಧ ಲಹರಿ ರೂಪದ ರಚನೆ. ಈ ಬರಹದಲ್ಲಿನ ಊರೇ ಹೆಣ್ಣಾಗುವ, ತಾಯಿಯಾಗುವ ಕ್ರಿಯೆ ಸೊಗಸಾಗಿದೆ. ‘ಸ್ಮೃತಿ ತಂತುಗಳ ತೂಗು’ ಬಾಲ್ಯದ ಹಿತವಾದ ನೆನಪಿನೆಳೆಗಳ ನೇಯ್ಗೆ. ಇದು ಕೇವಲ ಸಂದುಹೋದ ಬಾಲ್ಯದ ಚಿತ್ರಗಳ ಮೆರವಣಿಗೆಯಷ್ಟೇ ಅಲ್ಲ; ಆ ಸವಿಬಿಂಬಗಳ ಮೂಲಕ ಜೀವನಪದ್ಧತಿಯೊಂದು ಕಣ್ಮರೆಯಾಗಿರುವುದನ್ನೂ ಪ್ರಬಂಧಕಾರ್ತಿ ಸೂಕ್ಷ್ಮವಾಗಿ ನಮ್ಮ ಗಮನಕ್ಕೆ ತರುತ್ತಿದ್ದಾರೆ. ಹೀಗೆ ಸಾಧಾರಣವಾದ ಸಂಗತಿಯೊಂದನ್ನು ಹೇಳುತ್ತಲೇ ಗಹನವಾದ ಸಂಗತಿಯೊಂದನ್ನು ಅತ್ಯಂತ ಸಹಜವಾಗಿ ದಾಟಿಸಿಬಿಡುವ ಪ್ರಬಂಧಧ್ವನಿ ಇಲ್ಲಿ ಕಾಣಿಸುತ್ತದೆ. ಇಂಥ ಧ್ವನಿಗಳು ಅಲ್ಲಲ್ಲಿ ಮಿಂಚುವ ಮೂಲಕ ಈ ಸಂಕಲನಕ್ಕೆ ಚೇತೋಹಾರಿ ಗುಣ ಲಭ್ಯವಾಗಿದೆ.
ಲೇಖಕಿಯ ಭಾವಲೋಕದ ಅನೇಕ ಸಂಗತಿಗಳು ಕಿರುಕಥೆಗಳ ರೂಪದಲ್ಲಿ ಅರಳಿ ಹೆಣೆದುಕೊಂಡು, ಆ ಹೆಣಿಗೆಗಳು ಪ್ರಬಂಧದ ಮೊಹರು ಹೊಡೆಸಿಕೊಂಡಿವೆ. ಕವಯಿತ್ರಿಯೂ ಆಗಿರುವುದು ಆಶಾ ಅವರ ಪ್ರಬಂಧಗಳಿಗೆ ಕಾವ್ಯಗಂಧಿ ಗುಣ ದೊರೆಯಲು ಸಾಧ್ಯವಾಗಿದೆ.
ಕೂದಲ ಚೆಲುವು ಹಾಗೂ ಆರೋಗ್ಯ ಮಾರುಕಟ್ಟೆಯ ರೂಪ ಪಡೆದಿರುವ ಸಂದರ್ಭವನ್ನು ವಿಡಂಬಿಸುವ ‘ಸುಕೇಶಿನಿಯಾಗಹೊರಟು…’ ಪ್ರಬಂಧ ಕೊನೆಗೊಳ್ಳುವುದು ಜಾಹೀರಾತೊಂದರ ಚಿತ್ರಣದ ಮೂಲಕ. ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿ ತಲೆಬೋಳಾದ ಯುವತಿಯೊಬ್ಬಳು ಕೊಂಚ ಹಿಂಜರಿಕೆಯಿಂದ ಕಚೇರಿಗೆ ಹೊರಟುನಿಂತಿದ್ದಾಳೆ. ಅವಳನ್ನು ಗಂಡ-ಮಗಳು ಹೆಮ್ಮೆಯಿಂದ ಕಳುಹಿಸಿಕೊಟ್ಟರೆ, ಕಚೇರಿಯಲ್ಲಿ ಗೆಳತಿಯೊಬ್ಬಳು ತಲೆಬೋಳಿಗೆ ದೃಷ್ಟಿಬೊಟ್ಟನ್ನಿಟ್ಟು ಬರಮಾಡಿಕೊಳ್ಳುತ್ತಾಳೆ.
ಸಹೋದ್ಯೋಗಿಗಳೆಲ್ಲ ಸಂತಸದಿಂದ ಚಪ್ಪಾಳೆ ತಟ್ಟುತ್ತಾರೆ. ಈ ಪ್ರಸಂಗ ನೋಡಿ ಹನಿಗಣ್ಣಾಗುವ ಪ್ರಬಂಧಕಾರ್ತಿ – ‘ಎಷ್ಟೆಲ್ಲ ಬಾಹ್ಯ ಸೌಂದರ್ಯಕ್ಕೆ ಬೆಲೆ ಕೊಟ್ಟರೂ ಕೊನೆಗೆ ಬೆಲೆ ಕಟ್ಟಲಾಗದ್ದು ಎಂದು ನಮ್ಮೆದುರು ಬೃಹತ್ತಾಗಿ ಎದ್ದು ನಿಂತುಬಿಡುವುದು ಆಂತರಿಕ ಸೌಂದರ್ಯ ಮಾತ್ರವೇ’ ಎಂದು ಉದ್ಗರಿಸುವುದು ಗಮನಸೆಳೆಯುವ ಪ್ರಬಂಧಧ್ವನಿಯ ಜೊತೆಗೇ ಬರಹದ ಘನತೆಯನ್ನು ಹೆಚ್ಚಿಸುವ ವಿಶಿಷ್ಟ ಕ್ಷಣವೂ ಹೌದು.
ಸಂಕಲನದ ಶೀರ್ಷಿಕೆಯಾದ ‘ಕಾಣೆಯಾದವರು’, ಈ ಸಂಕಲನದ ಒಳ್ಳೆಯ ಪ್ರಬಂಧವೂ ಪ್ರಬಂಧಕಾರ್ತಿಯ ಸಾಧ್ಯತೆಗಳ ಸೊಗಸಾದ ಅಭಿವ್ಯಕ್ತಿಯೂ ಹೌದು. ಬಾಲ್ಯದ ಅಮಾಯಕತೆಯ ಘಟ್ಟದಿಂದ ಋತುಮತಿಯಾದ ಕಾರಣಕ್ಕೆ ಒಮ್ಮೆಗೇ ಪ್ರೌಢತೆಯ ಆವರಣಕ್ಕೆ ಬಾಲಕಿಯೊಬ್ಬಳು ಜಿಗಿಯುವ ಕ್ಷಣದ ಹಲವು ಆಯಾಮಗಳನ್ನು ವಿಶ್ಲೇಷಿಸುವ ‘ಕಾಣೆಯಾದವರು’ ಬರಹ, ತಲೆಮಾರುಗಳು ಬದಲಾದರೂ ಸಮಾಜದ ಮನೋಧರ್ಮ ಬದಲಾಗದಿರುವ ಕಡೆಗೆ ಬೆರಳು ಮಾಡಿ ತೋರಿಸುತ್ತದೆ. ಪುಟ್ಟ ಬಾಲೆಯರ ಗುಂಪಿನಿಂದ ಹುಡುಗಿಯೊಬ್ಬಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿಬಿಡುತ್ತಾಳೆ; ನಂತರದಲ್ಲಿ ಆಕೆ ಶಾಲೆಗೆ-ಗುಂಪಿಗೆ ಮರಳಿದರೂ ಹೊಸ ಹುಡುಗಿಯೇ ಆಗಿರುತ್ತಾಳೆ. ‘ನಿಜಕ್ಕೂ ಕಾಣೆಯಾದ ನಮ್ಮ ಹಿಂದಿನ ಗೆಳತಿಯರು ಮರಳಿಬಾರದಂತೆ ಕಳೆದೇಹೋಗಿರುತ್ತಿದ್ದರು’ ಎನ್ನುವ ಉದ್ಗಾರ ಪ್ರಬಂಧಕಾರ್ತಿಯ ಬಾಲ್ಯದ ದಿನಗಳದ್ದಷ್ಟೇ ಅಲ್ಲ; ಈಗ ಆ ಬಾಲಕಿ ಶಿಕ್ಷಕಿಯಾಗಿರುವ ಸಂದರ್ಭದಲ್ಲೂ ಅಂಥ ಉದ್ಗಾರಗಳಿಗೆ ದನಿಯಾಗಿರುವುದು ಹೆಣ್ಣಿನ ಬದುಕಿಗೆ ಸಂಬಂಧಿಸಿದಂತೆ ನಮ್ಮ ಸಾಮಾಜಿಕ ಚಲನೆಯ ಜಡತೆಯನ್ನು ಸೂಚಿಸುವಂತಿದೆ. ‘ಯಾಕೆ ಅಮ್ಮಂದಿರೆಲ್ಲ ತಮ್ಮ ಹೆಣ್ಣುಮಕ್ಕಳು ಋತುಮತಿಯರಾದಾಗ ಅಳುತ್ತಾರೆ?’ ಎನ್ನುವ ಪ್ರಶ್ನೆಯ ಹಿಂದಿರುವುದು, ಇಡೀ ಪುರುಷಸಮುದಾಯದ ಆತ್ಮವಿಮರ್ಶೆಗೆ ಒತ್ತಾಯಿಸುವಂತಿದೆ. ಹೆಣ್ಣುಮಕ್ಕಳನ್ನು ಸರಕಿನಂತೆ, ಗಂಡಿನ ಭೋಗಕ್ಕಾಗಿ ಇರುವ ಮಿಕಗಳಂತೆ ಭಾವಿಸುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಿರುವುದಕ್ಕೆ ಉದಾಹರಣೆಗಳು ಪ್ರತಿದಿನ ಕಣ್ಣಿಗೆ ರಾಚುತ್ತಿರುವ ಸಂದರ್ಭದಲ್ಲಿ, ಅಮ್ಮಂದಿರ ಅಳುವಿನ ಕುರಿತ ಪ್ರಶ್ನೆಗೆ ಇಡೀ ಸಮಾಜ ಉತ್ತರದಾಯಿಯಾಗಿದೆ. ಈ ಪ್ರಶ್ನೆಯ ಮುಂದುವರಿದ ರೂಪದಲ್ಲಿ – ‘ಹಲವಾರು ಟ್ಯಾಬ್ಲೆಟ್ಟುಗಳು, ಸ್ಯಾನಿಟರಿ ನ್ಯಾಪ್ಕಿನ್ನುಗಳು, ಎಷ್ಟೆಲ್ಲಾ ಬದಲಾವಣೆಯ ಹೊಸಗಾಳಿ. ಆದರೆ ಹೆಣ್ಣೇಕೆ ಈ ಕಾರಣಕ್ಕೇ ನೋಯುತ್ತಾಳೆ? ಕುಟುಂಬ ಮತ್ತು ಸಮಾಜವೆರಡೂ ಯಾಕೆ ಅವಳಿಗೊಂದು ನಿರಾಂತಕ ಭಯಮುಕ್ತ ವಾತಾವರಣವನ್ನು ಕಲ್ಪಿಸಿಕೊಡುವಲ್ಲಿ ಸೋಲುತ್ತಿವೆ?’ ಎನ್ನುವ ಉಪಪ್ರಶ್ನೆಗಳನ್ನೂ ಇಲ್ಲಿನ ಹೆಣ್ಣು ನಮ್ಮ ಮುಂದಿಡುತ್ತಾಳೆ. ಸರಳವಾದ ಉದಾಹರಣೆಗಳ ಮೂಲಕ ಗಹನವಾದ ಸಂಗತಿಗಳನ್ನು ಚರ್ಚಿಸುತ್ತ, ವೈಯಕ್ತಿನ ಅನುಭವಗಳನ್ನು ಸಾರ್ವತ್ರಿಕವೂ ಆಗಿಸುವ ಮೂಲಕ ಸಹೃದಯರನ್ನು ಯೋಚನೆಗೆ ಹಚ್ಚುವ ‘ಕಾಣೆಯಾದವರು’ ಲೇಖಕಿ ಸಾಗಬೇಕಾದ ಪ್ರಬಂಧಮಾರ್ಗವನ್ನು ಸೂಚಿಸುವ ರಚನೆಯಾಗಿದೆ.
ಹಕ್ಕಿ ಗರಿಗಳ ರಮ್ಯಲೋಕವನ್ನು ಚಿತ್ರಿಸುವ ‘ಹಕ್ಕಿಪುಚ್ಚವೆನ್ನುವ ಬೆಚ್ಚಾನೆ ತಾವು’ ಪ್ರಬಂಧ ಹಕ್ಕಿಪುಕ್ಕವೊಂದು ಹಾರಿಬಂದು, ಪ್ರಾರ್ಥನೆಗೆ ನಿಂತಿರುವ ಮಗುವಿನ ಕೈ ಸೇರಿ, ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸುವ ಪ್ರಸನ್ನಚಿತ್ರದೊಂದಿಗೆ ಆರಂಭವಾಗುತ್ತದೆ. ಪುಕ್ಕ ಹಿಡಿದ ನಗುಮುಖದ ಮಗುವಿನ ಚಿತ್ರದೊಂದಿಗೆ ದ.ರಾ. ಬೇಂದ್ರೆ ಅವರ ‘ಗರಿ’ ಕವಿತೆಯನ್ನು ನೆನಪಿಸಿಕೊಳ್ಳಬೇಕು. ‘ಹಾರಲೆಂದು ಹುಟ್ಟಿದ ಹಕ್ಕಿ ಮೈಯ ಬದುಕು’ ಎಂದು ಕವಿ ಉದ್ಗರಿಸುವ, ಪುಕ್ಕದ ಮೂಲಕ ಹಕ್ಕಿಯ ಬದುಕಿನ ಘನತೆಯನ್ನು ಸೂಚಿಸುವ ‘ಗರಿ’ ಬೇಂದ್ರೆಯವರ ಅದ್ಭುತ ಕವಿತೆಗಳಲ್ಲೊಂದು. ಆ ಕವಿತೆ ಕಾಣಿಸುವ ಹಕ್ಕಿಯ ಬದುಕಿನ ಘನತೆ, ಆಶಾ ಅವರ ಪ್ರಬಂಧದಲ್ಲಿ ಹಲವು ರೂಪಗಳಲ್ಲಿ ಚಿತ್ರಣಗೊಳ್ಳುತ್ತದೆ. ‘ಪುಕ್ಕವೆನ್ನುವ ಪುಕ್ಕದಂತಹ ತೃಣ ಮಾತ್ರದ, ಮನುಷ್ಯನ ವ್ಯಾವಹಾರಿಕ ದೃಷ್ಟಿಯಲ್ಲಿ ಯಾವ ಬೆಲೆಯನ್ನೂ ಹೊಂದಿಲ್ಲದ ವಸ್ತುವೊಂದು ಹೀಗೆಲ್ಲಾ ನನ್ನನ್ನು ಕಾಡುವಾಗ ಅದೆಷ್ಟೊ ಭಾರ ಅನಿಸುತ್ತದೆ, ನಮ್ಮ ನಾಣ್ಯ ನೋಟುಗಳನ್ನು ಮೀರಿದ್ದೊಂದು ಜಗತ್ತಿನಲ್ಲಿದೆ, ಮತ್ತದು ಸದಾ ಬದುಕಿನ ನಿಜ ಅರ್ಥವನ್ನು ಕಾಣಿಸಲಿಕ್ಕೆ ತುಡಿಯುತ್ತಿರುತ್ತದೆ’ ಎನ್ನುವ ಮಾತು, ವ್ಯಾವಹಾರಿಕ ಜಗತ್ತಿಗೆ ನಿಲುಕದ ಭಾವನಿಧಿಯ ಪ್ರಾಮುಖ್ಯವನ್ನು ಎತ್ತಿಹಿಡಿಯುತ್ತದೆ. ‘ರಾತ್ರಿಯ ಕತ್ತಲ ಪರದೆಯ ಮೇಲೆ ಆಕಾಶದ ನಕ್ಷತ್ರಗಳಿಗೆಲ್ಲ ರೆಕ್ಕೆ ಮೂಡಿ ಹಾರಲು ಶುರುವಿಟ್ಟುಕೊಂಡರೆ…’ – ಹೀಗೆ ಗರಿವಿಲಾಸವನ್ನು ಕಾಣಿಸುವ ಬರಹ ಪ್ರಬಂಧಕಾರ್ತಿಯ ಕಲ್ಪನಾಶೀಲತೆಗೆ ಕನ್ನಡಿಯಂತಿದೆ. ಈ ಪ್ರಬಂಧದ ಜೊತೆಗೆ, ಓದಿನಸುಖದ ರೂಪದಲ್ಲಿ ‘ಬಿಟ್ಟು ಹಿಡಿಯುವ ಬಿಡುಗಡೆಯ ನಿರಾಳ’ ರಚನೆಯನ್ನು ಓದಿಕೊಳ್ಳಬೇಕು. ಮೂತ್ರ ವಿಸರ್ಜನೆಯ ಹಗುರ ಕ್ಷಣವನ್ನು ಬಿಡುಗಡೆಯ ರೂಪದಲ್ಲಿ ಚಿತ್ರಿಸುವ ಪ್ರಬಂಧ, ಚಿತ್ರಕಶಕ್ತಿಯ ಕಾರಣದಿಂದಲೂ ವಿನೋದದ ಸ್ಪರ್ಶದಿಂದಲೂ ಗಮನಸೆಳೆಯುತ್ತದೆ. ಆಂಜನೇಯನಿಗೆ ಗುಡಿ ಕಟ್ಟಲಿಕ್ಕೆಂದು ತಂದು ಸುರಿದಿದ್ದ ಸೈಜುಗಲ್ಲುಗಳ ಮರೆಯಲ್ಲಿ ಮಹಿಳೆಯೊಬ್ಬಳು ‘ಸುತ್ತ ಮುತ್ತ ಕಳ್ಳ ಕಣ್ಣು ಹಾಯಿಸಿ, ಮಂಡಿಯವರೆಗೆ ಸೀರೆ ಎತ್ತಿ ಕುಳಿತು ನಿರಾಳವಾಗಿಬಿಟ್ಟಳು. ಬ್ರಹ್ಮಚಾರಿ ಆಂಜನೇಯ ಎಂತ ನೋಡಿದನೋ, ಹೇಗೆ ಕಣ್ಣು ಮುಚ್ಚಿಕೊಂಡನೋ ಗೊತ್ತಿಲ್ಲ’ – ಹೀಗೆ ಮಹಿಳೆಯ ಮುಖದ ತುಂಬ ಸುಖದ ಎಳೆಯೊಂದು ಹರಡಿಕೊಂಡ ಕ್ಷಣಗಳನ್ನು ರಸವತ್ತಾಗಿ ಕಟ್ಟಿಕೊಡುವ ಈ ಚಿತ್ರಣ, ಓದುಗರ ಮುಖದ ಮೇಲೂ ನಸುನಗೆಯನ್ನು ಮೂಡಿಸಿಬಿಡುತ್ತದೆ. ಶೌಚಾಲಯದ ಗೋಡೆಬಾಗಿಲುಗಳ ಮೇಲಿನ ಅಜ್ಞಾತ ಲೇಖಕನ ಹಸ್ತಮುದ್ರಿಕೆಗಳನ್ನು, ಆ ಲೇಖಕನ ಮನೋವೈಕಲ್ಯಗಳಿಗೆ ಕನ್ನಡಿಯ ರೂಪದಲ್ಲೂ, ಆ ವೈಕಲ್ಯಗಳ ಬಿಡುಗಡೆಯ ರೂಪದಲ್ಲೂ ಲೇಖಕಿಗೆ ಕಾಣಿಸುತ್ತವೆ. ಲಘು ಅಧ್ಯಾತ್ಮ, ಚಿಂತನ ಶಕ್ತಿ, ಚಿತ್ರಕ ಶಕ್ತಿ, ವೈಚಾರಿಕತೆ – ಹೀಗೆ ಹಲವು ಕಾರಣಗಳಿಂದಾಗಿ ಗಮನಸೆಳೆಯುವ ಪ್ರಬಂಧವಿದು.
ಅರ್ಥ ವಿಸ್ತಾರದ ಪ್ರಬಂಧಗಳ ಜೊತೆಗೆ, ಹರಟೆಯ ರೂಪದ ಕೆಲವು ರಚನೆಗಳೂ ಸಂಕಲನದಲ್ಲಿವೆ. ‘ಬಾಲ್ಯದ ಆಟ ಆ ಹುಡುಗಾಟ’, ‘ಶ್ವಾನೋಪಖ್ಯಾನ’ ‘ಮೀಸೆ ಮೀಮಾಂಸೆ’ – ಇವುಗಳೆಲ್ಲ ಹೆಸರೇ ಸೂಚಿಸುವ, ಲಹರಿಯ ಚೌಕಟ್ಟಿನ, ಲಘು ವಿನೋದವನ್ನು ಒಳಗೊಂಡಿರುವ ಬರಹಗಳು. ಸರಾಗವಾಗಿ ಓದಿಸಿಕೊಳ್ಳುವ ಗುಣವಿದ್ದರೂ, ಇವುಗಳಲ್ಲಿನ ಪ್ರಬಂಧಧ್ವನಿ ತೆಳುವಾದುದು ಹಾಗೂ ಪ್ರಬಂಧಕಾರ್ತಿಗೆ ಅಷ್ಟೇನೂ ಕಠಿಣ ಸವಾಲು ಒಡ್ಡದ ರಚನೆಗಳಿವು.
ಒಂದು ಕೃತಿಯ ಯಶಸ್ಸಿನ ಲಕ್ಷಣಗಳಲ್ಲಿ ಆ ಪುಸ್ತಕದ ಕರ್ತೃವಿನ ಮುಂದಿನ ರಚನೆಗಳ ಬಗ್ಗೆ ಓದುಗನಲ್ಲಿ ಹುಟ್ಟುವ ಕುತೂಹಲ ಮುಖ್ಯವಾದುದು. ಆಶಾ ಅವರು ತಮ್ಮ ಚೊಚ್ಚಿಲ ಸಂಕಲನದ ಕೆಲವು ಪ್ರಬಂಧಗಳಲ್ಲಿ ಪಡೆದಿರುವ ಯಶಸ್ಸು, ಅವರಿಂದ ಮತ್ತಷ್ಟು ಸಶಕ್ತ ಪ್ರಬಂಧಗಳ ನಿರೀಕ್ಷೆಯನ್ನು ಹುಟ್ಟಿಸುತ್ತದೆ. ಕಥೆ, ಕಾವ್ಯ, ಕಾದಂಬರಿಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಪ್ರಬಂಧ ಪ್ರಕಾರ ಅಷ್ಟೇನೂ ಸುಪುಷ್ಟವಾದುದಲ್ಲ. ಈ ಹಿನ್ನೆಲೆಯಲ್ಲಿ ಪ್ರಬಂಧಕಾರ್ತಿಯಾಗಿ ಸಾಮು ಮಾಡಲು ಆಶಾ ಅವರೆದುದು ದೊಡ್ಡದೊಂದು ಬಯಲೇ ತೆರೆದುಕೊಂಡಿದೆ. ಆ ಬಯಲಿನಲ್ಲಿ ವಿಹರಿಸುವ ಹಾಗೂ ಸೌಗಂಧಿಕಾ ಪುಷ್ಪಯಾತ್ರೆ ಕೈಗೊಳ್ಳುವ ಸಾಮರ್ಥ್ಯ ಅವರಿಗಿದೆ ಎನ್ನುವುದಕ್ಕೆ ಪ್ರಸಕ್ತ ಸಂಕಲನದ ಬರಹಗಳು ಸಾಕ್ಷ್ಯ ನುಡಿಯುವಂತಿವೆ.
ವೈಯಕ್ತಿಕವಾಗಿ ನನಗೆ ಪರಿಚಿತರಲ್ಲದೆ ಹೋದರೂ, ಬರಹಗಳ ಮೂಲಕ ಪರಿಚಿತರಾಗಿರುವ ಆಶಾ ಅವರು ಈ ಕೃತಿಗೆ ಮುನ್ನುಡಿ ಅಪೇಕ್ಷಿಸುವ ಮೂಲಕ ನನ್ನ ಬಗ್ಗೆ ವ್ಯಕ್ತಪಡಿಸಿರುವ ಸ್ನೇಹ-ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತ, ಈ ಸಂಕಲನ ಓದುಗರಿಗೆ ಪ್ರಿಯವಾಗಲಿ ಎಂದು ಹಾರೈಸುವೆ.
(ಕೃತಿ: ಕಾಣೆಯಾದವರು (ಪ್ರಬಂಧಗಳ ಸಂಕಲನ), ಲೇಖಕರು: ಆಶಾ ಜಗದೀಶ್, ಪ್ರಕಾಶಕರು: ಪಲ್ಲವ ಪ್ರಕಾಶನ, ಬೆಲೆ: 110/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ