ಬಹುಪಾಲು ಬಡ ತಾಯಂದಿರು ತಮ್ಮ ಮಕ್ಕಳಿಗಾಗಿ ಪಡುತ್ತಿದ್ದ ಕಷ್ಟ ಹೇಳಲಸಾಧ್ಯವಾದುದು. ತಮ್ಮ ಮಗ ಬಹಳಷ್ಟು ಓದಿ ದೊಡ್ಡ ಹುದ್ದೆ ಪಡೆಯಬೇಕು ಎಂಬ ಕನಸನ್ನು ಕೂಡ ಕಾಣಲು ಸಾಧ್ಯವಾಗದಂಥ ದುಃಸ್ಥಿತಿಯಲ್ಲಿ ಅವರಿದ್ದರು. ಮಗ ಬೀಡಿ, ಸಿಗರೇಟ್, ಇಸ್ಪೆಟ್, ಕುಡಿತ ಮುಂತಾದ ದುಶ್ಚಟಗಳಿಗೆ ಬಲಿಯಾಗಬಾರದು ಎಂಬ ಚಿಂತೆ ಅವರನ್ನು ಸದಾ ಕಾಡುತ್ತಿತ್ತು. ಮಗ ಆರೋಗ್ಯ ಕಾಪಾಡಿಕೊಂಡಿರಬೇಕು, ಯಾವುದೋ ಕೂಲಿನಾಲಿ ಮಾಡಿಕೊಂಡು ಮರ್ಯಾದೆವಂತನಾಗಿ ಬದುಕಬೇಕು ಎಂಬುದು ಅವರ ಆಸೆಯಾಗಿತ್ತು. ಇಂಥ ಚಿಕ್ಕ ಆಸೆ ಕೂಡ ಈಡೇರುವಂಥ ಪರಿಸ್ಥಿತಿ ಇರಲಿಲ್ಲ. ವಿಜಾಪುರದಂಥ ನಗರದಲ್ಲಿ ಯಾವುದೇ ಔದ್ಯೋಗಿಕ ವಾತಾವರಣ ಇರಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 34ನೆಯ ಕಂತು ಇಲ್ಲಿದೆ.
ನಮ್ಮ ವಿಜಾಪುರದ ನಾವಿಗಲ್ಲಿ ಮನೆಯಿಂದ ಸ್ವಲ್ಪದೂರದಲ್ಲಿ ರಾಮು ಗೌಳಿಯ ಮನೆ ಇತ್ತು. ಆತ ಹತ್ತಾರು ಎಮ್ಮೆಗಳನ್ನು ಸಾಕಿದ್ದ. ಗಿರಾಕಿಗಳು ಅವನ ಮನೆಗೆ ಹೋಗಿ ಹಾಲು ತರಬೇಕಿತ್ತು. ಆತ ಹಾಲು ಹಿಂಡುವವರೆಗೆ ನಾವು ಕಾಯುತ್ತಿದ್ದೆವು. ಒಂದೊಂದು ಎಮ್ಮೆ ಹಿಂಡಿದ ನಂತರ ಮೊದಲು ಬಂದವರಿಗೆ ಹಾಲು ಕೊಟ್ಟು ಕಳಿಸುತ್ತಿದ್ದ.
ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕೋಣಗಳನ್ನು ಕೃಷಿಕಾರ್ಯಗಳಲ್ಲಿ ಬಳಸುತ್ತಾರೆ. ಅವರಲ್ಲಿ ಕೋಣಗಳು ನಂದಿಗೋಣಗಳಾಗುತ್ತವೆ. ಆದರೆ ಉತ್ತರಕರ್ನಾಟಕದಲ್ಲಿ ಕೋಣಗಳನ್ನು ಉತ್ತಲು ಬಿತ್ತಲು ಉಪಯೋಗಿಸದ ಕಾರಣ ಬೇಡಿಕೆ ಇರುವುದಿಲ್ಲ. ಹೀಗಾಗಿ ಬಹುಪಾಲು ಜನರು ಕೋಣ ಸಾಕಣೆಗೆ ಖರ್ಚು ಮಾಡಲು ಹಿಂಜರಿಯುತ್ತಾರೆ. ಎಮ್ಮೆ ಸಾಕುವ ಗೌಳಿಗರು ಹೆಣ್ಣು ಕರುಗಳನ್ನು ಮಾತ್ರ ಇಟ್ಟುಕೊಳ್ಳುತ್ತಾರೆ. ಭರವಸೆಯ ಎಮ್ಮೆ, ಕೋಣ ಈದಾಗ ಸ್ವಲ್ಪೇ ದಿನಗಳಲ್ಲಿ ಆ ಮರಿಕೋಣವನ್ನು ಎಮ್ಮೆ ಮಾಂಸ ತಿನ್ನುವವರಿಗೆ ಕೊಡುತ್ತಾರೆ. (ಎಮ್ಮೆಗಳು ಬೆದೆಗೆ ಬಂದಾಗ, ಕಟ್ಟಿಸಲು ಸರ್ಕಾರಿ ಪಶು ಆಸ್ಪತ್ರೆಗಳಲ್ಲಿ ಅಥವಾ ಖಾಸಗಿಯವರಲ್ಲಿ ಬೀಜದ ಕೋಣಗಳಂತೂ ಇದ್ದೇ ಇರುತ್ತವೆ.)
ಎಮ್ಮೆ, ಆಕಳು ಮುಂತಾದ ಪ್ರಾಣಿಗಳನ್ನು ಹಿಂಡುವ ಮೊದಲು ಅವುಗಳ ಕರುಗಳನ್ನು ಹಾಲು ಕುಡಿಯಲು ಬಿಡಬೇಕಾಗುತ್ತದೆ. ಅವು ತಮ್ಮ ಮರಿಗಳಿಗೆ ಹಾಲುಣಿಸಲು ತೊರೆ ಬಿಡುತ್ತವೆ. ನಂತರ ಆ ಕರುವನ್ನು ಬಿಡಿಸಿ ಹಾಲು ಹಿಂಡಿಕೊಳ್ಳಬೇಕಾಗುತ್ತದೆ. ಮರಿ ಕೋಣವನ್ನು ಬೇರೆಯವರಿಗೆ ಕೊಟ್ಟವರು ಹಾಲು ಹಿಂಡುವ ವೇಳೆ ಎಮ್ಮ ತೊರೆ ಬಿಡುವುದಕ್ಕಾಗಿ ಅದರ ಕೆಚ್ಚಲ ಬಳಿ ಜೀವಕಳೆ ತುಂಬಿದ ಎಮ್ಮೆ ಕರುವಿನ ಪ್ರತಿಕೃತಿ ಇಡುತ್ತಿದ್ದುದು 60 ವರ್ಷಗಳ ಹಿಂದೆ ಚಾಲ್ತಿಯಲ್ಲಿತ್ತು.
(ಟ್ಯಾಕ್ಸಿಡರ್ಮಿ ಎನುವುದು ಸತ್ತ ಪ್ರಾಣಿಗಳಿಗೆ ಜೀವಕಳೆ ತುಂಬುವ ಕಲೆ. ಇದಕ್ಕೆ ‘ಚರ್ಮಪ್ರಸಾಧನ ಕಲೆ’ ಎಂದು ಕರೆಯುತ್ತಾರೆ. ಟ್ಯಾಕ್ಸಿಡರ್ಮಿಸ್ಟ್ ಎಂದರೆ ಚರ್ಮಪ್ರಸಾಧನ ಕಲಾವಿದ. ಈ ಟ್ಯಾಕ್ಸಿಡರ್ಮಿಸ್ಟ್‌ಗಳು ಸತ್ತ ಪ್ರಾಣಿಯ ತಲೆಬುರುಡೆ ಮಾತ್ರ ಇಟ್ಟುಕೊಂಡು, ಅದರ ದೇಹದೊಳಗಿನ ಎಲ್ಲವನ್ನು ಚರ್ಮ ಹಾಳಗಾದಂತೆ ಎಚ್ಚರಿಕೆ ವಹಿಸಿ ತೆಗೆಯುತ್ತಾರೆ. ಸತ್ತ ಪಕ್ಷಿ ಮತ್ತು ಸರೀಸೃಪಗಳಿಗೂ ಹೀಗೇ ಮಾಡುತ್ತಾರೆ. ನಂತರ ಅವುಗಳ ಚರ್ಮಕ್ಕೆ ಅನುಗುಣವಾಗಿ ರದ್ದಿ ಪೇಪರ್, ಕಟ್ಟಿಗೆ ಪುಡಿ, ಚಿಂದಿಬಟ್ಟೆ, ಹತ್ತಿ, ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಮುಂತಾದವುಗಳನ್ನು ರಾಸಾಯನಿಕದೊಂದಿಗೆ ಉಪಯೋಗಿಸುತ್ತ, ಆಯಾ ಪ್ರಾಣಿ ಪಕ್ಷಿ ಮುಂತಾದವುಗಳ ಶರೀರದ ರಚನೆಯ ರೂಪು ಕೆಡದಂತೆ ತುಂಬುತ್ತಾರೆ. ಕಣ್ಣುಗಳಿರುವ ಜಾಗದಲ್ಲಿ ಗಾಜಿನ ಗೋಲಿಗಳನ್ನು ಕೂಡಿಸಿ ಅವು ನಮ್ಮನ್ನು ನೋಡುತ್ತಿರುವಂತೆ ಕಾಣುವ ಹಾಗೆ ಮಾಡುತ್ತಾರೆ. ಆಗ ಅವು ಜೀವಕಳೆ ತುಂಬಿಕೊಂಡು ಜೀವಂತ ಪ್ರಾಣಿ ಪಕ್ಷಿಗಳ ಹಾಗೆಯೆ ಕಾಣುತ್ತವೆ. ಅವುಗಳಿಗೆ ‘ಸ್ಟಫ್ಡ್ ಎನಿಮಲ್ಸ್’ ಎಂದು ಕರೆಯುತ್ತಾರೆ. ಇವುಗಳಿಗೆ ‘ಜೀವಕಳೆ ತುಂಬಿದ ಪ್ರಾಣಿಗಳು’ ಎನ್ನಬಹುದು. ಇವುಗಳ ಆಯಷ್ಯ ಜೀವಂತ ಪ್ರಾಣಿಗಳ ಆಯುಷ್ಯಕ್ಕಿಂತ ಹೆಚ್ಚಿಗೆ ಇರುತ್ತದೆ. ಇವುಗಳನ್ನು ಸುಮಾರು 300 ವರ್ಷಗಳ ವರೆಗೆ ಕಾಯ್ದಿಡಬಹುದು. ಮಾರಿಷಸ್ ದ್ವೀಪದಲ್ಲಿ ಬಾತುಕೋಳಿಯ ಹಾಗೆ ಕಾಣುವ ಡೊಡೋ ಎಂಬ ದೊಡ್ಡ ಪಕ್ಷಿ ಇತ್ತು. ಅದರ ತೂಕ 22 ಕೆ.ಜಿ.ಗಿಂತ ಹೆಚ್ಚಿಗಿತ್ತು. ಸಮುದ್ರಯಾನದ ವೇಳೆ ನಾವಿಕರು ಈ ಪಕ್ಷಿಗಳನ್ನು ಹಿಡಿದು ಆಹಾರಕ್ಕೆ ಉಪಯೋಗಿಸುತ್ತಿದ್ದರು. ಹೀಗಾಗಿ ಇದರ ಸಂತತಿ ನಾಶವಾಯಿತು. ಕೊನೆಯ ಡೊಡೋ 1781ರಲ್ಲಿ ಸತ್ತಿತು. ಈಗ ಅದರ ಅಸ್ಥಿಪಂಜರ ಮಾತ್ರ ಉಳಿದಿದೆ. ಇದರಿಂದ ಟ್ಯಾಕ್ಸಿಡರ್ಮಿಯ ಮಹತ್ವ ಅರಿವಿಗೆ ಬರುವುದು.)
ರಾಮು ಗೌಳಿಯ ಬಳಿ ಕೂಡ ಎಮ್ಮೆ ಕರುವಿನ ಪ್ರತಿಕೃತಿ ಇತ್ತು. ಅದೇನು ಒಬ್ಬ ನುರಿತ ಟ್ಯಾಕ್ಸಿಡರ್ಮಿಸ್ಟ್‌ನಿಂದ ಮಾಡಿಸಿದ್ದಾಗಿರಲಿಲ್ಲ. ಅದನ್ನು ಆತ ಸ್ಥಳೀಯ ಪ್ರತಿಭೆಯಿಂದ ಮಾಡಿಸಿದ್ದ. ಅದನ್ನು ನೋಡಿ 64 ವರ್ಷಗಳಾದವು. ಅವಾಗಲೆ ಅದು ಹಳೆಯದಾಗಿತ್ತು. ಟ್ಯಾಕ್ಸಿಡರ್ಮಿಗೆ ಬೇಕಾದ ಇಂದಿನ ಪರಿಕರಗಳು ಅಂದು ಇರಲಿಲ್ಲ. ಆದರೂ ಸ್ಥಳೀಯ ನಿರಕ್ಷರಿ ಪ್ರತಿಭಾವಂತರ ಆ ಪ್ರಯತ್ನ ಮೆಚ್ಚುವಂಥದ್ದು. ಆ ಜೀವಕಳೆಯ ಪ್ರತಿಕೃತಿಯೊಳಗೆ ಗೋಧಿಯ ಹುಲ್ಲು ತುಂಬಲಾಗಿತ್ತು. ಒಂದೆಡೆ ಟಿಬ್ಬಿ ಬಿಟ್ಟಿದ್ದ ಜಾಗದಿಂದ ಆ ಹುಲ್ಲು ಕಾಣುತ್ತಿತ್ತು.
ರಾಮು ಹಾಲು ಹಿಂಡಲು ಎಮ್ಮೆಯ ಬಳಿ ಹೋಗುವ ಮೊದಲು ಆ ಎಮ್ಮೆ ಕರುವಿನ ತದ್ರೂಪವನ್ನು ಇಡುತ್ತಿದ್ದ. ಆತ ಹಾಗೆ ಎಮ್ಮೆ ಕೆಚ್ಚಲಬಳಿ ಅದನ್ನು ಇಟ್ಟು ಅದು ತೊರೆ ಬಿಟ್ಟ ನಂತರ ಇದನ್ನು ದೂರ ಸರಿಸಿ ಹಾಲು ಹಿಂಡುತ್ತಿದ್ದ. ಆ ಎಮ್ಮೆಯ ಕರುವಿನ ಜಾಗದಲ್ಲಿ ಪ್ರತಿಕೃತಿ ಇರುವುದು ನೋಡುವಾಗ ಕಸಿವಿಸಿಯಾಗುತ್ತಿತ್ತು.
ಅದು ಸಂಪೂರ್ಣವಾಗಿ ಕರುವಿನ ಹಾಗೆಯ ಕಾಣುವುದರಿಂದ ಆ ಎಮ್ಮೆ ಮೋಸಹೋಗಿ ತೊರೆ ಬಿಡುತ್ತದೆ ಎಂಬುದು ರಾಮು ಗೌಳಿಯ ನಂಬಿಕೆಯಾಗಿತ್ತು. ನನಗೂ ಹಾಗೇ ಅನಿಸಿತ್ತು. ಆದರೆ ಅದು ನಿಜವಲ್ಲ ಎಂಬುದು ಬಹಳ ವರ್ಷಗಳ ನಂತರ ಮನವರಿಕೆಯಾಯಿತು.
ಎಮ್ಮೆಗೆ ಮಾನವನ ಈ ಚಾಣಾಕ್ಷತನ ಗೊತ್ತಾಗುವುದರಲ್ಲಿ ಸಂಶಯವಿಲ್ಲ. ಕರುವಿನ ಪ್ರತಿಕೃತಿಯನ್ನು ನೋಡಿ ಆ ಎಮ್ಮೆ ತೊರೆ ಬಿಡುವುದಿಲ್ಲ. ತನ್ನ ಅಗಲಿದ ಕರುವಿನ ನೆನಪಾಗಿ ತೊರೆ ಬಿಡುತ್ತದೆ. ಆಗ ಆ ಎಮ್ಮೆಯ ಕಣ್ಣುಗಳು ತೇವಗೊಂಡಿರುತ್ತವೆ. ಅದು ತನ್ನ ಕರುವಿನ ಲೋಕದಲ್ಲಿ ತಲ್ಲೀನವಾಗಿರುತ್ತದೆ. ತನ್ನ ತುಂಬಿಕೊಂಡ ಕೆಚ್ಚಲು ಬರಿದಾಗುವ ಹಾಗೆ ತೊರೆ ಬಿಡುತ್ತದೆ. ಹಾಗೆ ತೊರೆ ಬಿಡುವುದರ ಮೂಲಕ ತಾಯ್ತನವನ್ನು ವ್ಯಕ್ತಪಡಿಸುತ್ತದೆ. ಮನುಷ್ಯನ ವ್ಯವಹಾರ ಚತುರತೆಯನ್ನು ಮರೆಯುತ್ತದೆ. ಗೌಳಿ ಖುಷಿಯಿಂದ ಹಾಲು ಹಿಂಡುತ್ತಾನೆ. ತನ್ನ ಕರುವಿನ ನೆನಪಲ್ಲೇ ತಲ್ಲೀನವಾಗುವ ಆ ಎಮ್ಮೆ ಮಾನವನ ಸಣ್ಣತನವನ್ನು ಉದಾತ್ತ ಭಾವದಿಂದ ಕ್ಷಮಿಸುತ್ತದೆ ಎಂಬ ಭಾವ ಮೂಡುವುದು ಸ್ವಾಭಾವಿಕ. ಹೀಗೆಯೆ ಪಶು ಪಕ್ಷಿ ಮತ್ತು ಮಾನವ ಲೋಕದ ಸಂಬಂಧಗಳು ಪ್ರೀತಿ, ದ್ವೇಷ, ಮೋಸ ಮತ್ತು ಜೀವಕಾರುಣ್ಯದೊಂದಿಗೆ ಮುಂದುವರಿಯುತ್ತಲೇ ಇರುತ್ತವೆ.
ಪಶು, ಪಕ್ಷಿ ಮತ್ತು ಮಾನವ ಲೋಕದಲ್ಲಿ ತಾಯ್ತನಕ್ಕೆ ಸಂಬಂಧಿಸಿದಂತೆ ನನ್ನ ಬಾಲ್ಯದಲ್ಲಿ ಕೂಡ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದ್ದೇನೆ. ಏಕ ಕಾಲಕ್ಕೆ ಏಳೆಂಟು ಮರಿಗಳನ್ನು ಹಡೆಯುವ ಬೀದಿ ನಾಯಿ ತನ್ನ ಮರಿಗಳಿಗೆ ಮೊಲೆಯುಣಿಸುವ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿವೆ.
ಬೀದಿ ನಾಯಿಗೆ ಸರಿಯಾದ ಆಹಾರ ಕೂಡ ಸಿಕ್ಕಿರುವುದಿಲ್ಲ. ಆದರೆ ಅದು ತನ್ನ ಮರಿಗಳಿಗೆ ಹಾಲುಣಿಸಲು ಬಿದ್ದುಕೊಂಡಿರುತ್ತದೆ. ಆ ಹಸಿದ ಮರಿಗಳು ಹಪಾಹಪಿಯಿಂದ ಒಂದರ ಮೇಲೊಂದು ಮುಗಿಬಿದ್ದು ಗುದ್ದಿ ಗುದ್ದಿ ಹಾಲು ಕುಡಿಯುತ್ತಿರುತ್ತವೆ. ಮರಿಗಳ ಮೇಲಿನ ಮೋಹದಿಂದಾಗಿ ಆ ನಾಯಿ ನೋವನ್ನು ನೆಮ್ಮದಿಯಿಂದ ಅನುಭವಿಸುತ್ತದೆ. ಇಂಥ ದೃಶ್ಯಗಳನ್ನು ಮರೆಯಲು ಸಾಧ್ಯವೇ ಇಲ್ಲ.
ನಾನು ಹಿಂದೊಮ್ಮೆ ಬರೆದಿದ್ದೆ. ನಮ್ಮ ಬೀದಿಯ ನಾಯಿ ನಾಲ್ಕೈದು ಮರಿ ಹಾಕಿತ್ತು. ನಾಯಿ ಆಹಾರ ಹುಡುಕಿಕೊಂಡು ಹೋದಾಗ ಹಂದಿಯೊಂದು ಬಂದು ರೋಷದಿಂದ ಆ ನಾಯಿಮರಿಗಳನ್ನು ಕೊಂದು ಹಾಕಿತ್ತು. ಆ ಹಂದಿಯ ಮರಿಗಳನ್ನು ಯಾವುದೋ ಬೇರೊಂದು ಬೀದಿ ನಾಯಿ ಕೊಂದು ಹಾಕಿದ್ದೇ ಈ ಸೇಡಿಗೆ ಕಾರಣವಿರಬಹುದು. ವಾಪಸ್ ಬಂದ ನಾಯಿ ಸತ್ತ ಮರಿಗಳನ್ನು ನೋಡಿ ಬಹಳ ನೋವಿನ ಧ್ವನಿ ತೆಗೆಯಿತು. ನಂತರ ಅದು ಏನನ್ನೂ ತಿನ್ನಲಿಲ್ಲ, ಹಾಲು ಕುಡಿಸಲು ಹೋದರೂ ಬಾಯಿ ಗಟ್ಟಿ ಹಿಡಿಯಿತು. ಕೊನೆಗೆ ನಿರಾಹಾರಿಯಾಗಿ ಸತ್ತೇ ಹೋಯಿತು!
ನಮ್ಮ ಕೋಳಿಗಳು ಮರಿಗಳನ್ನು ನೋಡಿಕೊಳ್ಳುವ ರೀತಿ ಇಂದಿಗೂ ಆಶ್ಚರ್ಯ ಹುಟ್ಟಿಸುತ್ತದೆ. ತಮ್ಮ ಮರಿಗಳು ದೂರ ಹೋಗದಂತೆ ಕೋಳಿಗಳು ನೋಡಿಕೊಳ್ಳುತ್ತಿದ್ದವು. ಬೀದಿಯಲ್ಲಿ ಬಿದ್ದ ಕಾಳು ಮುಂತಾದ ಆಹಾರ ಹುಡುಕಿ, ಹೆಕ್ಕಿ ತಮ್ಮ ಮರಿಗಳಿಗೆ ತಿನ್ನಲು ಕರೆಯುತ್ತಿದ್ದವು. ಮರಿಗಳನ್ನು ಹಿಡಿಯಲು ಬೆಕ್ಕು ಬಂದರೆ ಜೀವದ ಹಂಗು ಹರಿದು ಅದರ ಮೇಲೆ ದಾಳಿ ಮಾಡುತ್ತಿದ್ದವು. ಹದ್ದು ಬಂದಾಗ ರೆಕ್ಕೆ ಅಗಲಿಸಿ ಗಂಡಾಂತರದ ಧ್ವನಿ ತೆಗೆಯುತ್ತಿದ್ದವು. ಆಗ ಎಲ್ಲ ಮರಿಗಳು ತಿನ್ನುವುದನ್ನು ಬಿಟ್ಟು ಓಡಿ ಬಂದು ರೆಕ್ಕೆಗಳ ಒಳಗೆ ರಕ್ಷಣೆ ಪಡೆಯುತ್ತಿದ್ದವು. ಆ ಎಲ್ಲ ದೃಶ್ಯಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿವೆ.
ಎಲ್ಲ ಪಕ್ಷಿ ಪ್ರಾಣಿಗಳಿಗೂ ಅವುಗಳದೇ ಆದ ಧ್ವನಿವೈವಿಧ್ಯದಿಂದ ಕೂಡಿದ ಭಾಷೆ ಇದೆ. ಆ ಧ್ವನಿ ಪ್ರಕಾರಗಳು ಹಸಿವು, ಮೈಥುನ, ಭಯ, ಎಚ್ಚರಿಕೆ, ಸಿಟ್ಟು ಮುಂತಾದವುಗಳಿಗೆ ಸಂಬಂಧಿಸಿವೆ.
ಟ್ಯಾಕ್ಸಿಡರ್ಮಿಗೆ ಬೇಕಾದ ಇಂದಿನ ಪರಿಕರಗಳು ಅಂದು ಇರಲಿಲ್ಲ. ಆದರೂ ಸ್ಥಳೀಯ ನಿರಕ್ಷರಿ ಪ್ರತಿಭಾವಂತರ ಆ ಪ್ರಯತ್ನ ಮೆಚ್ಚುವಂಥದ್ದು. ಆ ಜೀವಕಳೆಯ ಪ್ರತಿಕೃತಿಯೊಳಗೆ ಗೋಧಿಯ ಹುಲ್ಲು ತುಂಬಲಾಗಿತ್ತು. ಒಂದೆಡೆ ಟಿಬ್ಬಿ ಬಿಟ್ಟಿದ್ದ ಜಾಗದಿಂದ ಆ ಹುಲ್ಲು ಕಾಣುತ್ತಿತ್ತು.
ನಾನು ನೋಡಿದ ಪ್ರಾಣಿ ಪಕ್ಷಿಗಳಲ್ಲಿ ತಾಯಿಯ ಪಾತ್ರವೇ ಪ್ರಮುಖವಾಗಿದೆ. ಹಾಗೆ ನೋಡಿದರೆ ಮಾನವರಲ್ಲಿ ಕೂಡ ಅವಳದೇ ಪ್ರಮುಖ ಪಾತ್ರ. ಮಾನವಲೋಕದ ಕೆಲವು ತಾಯಂದಿರಲ್ಲಿ ಲೋಪ ದೋಷ ಕಾಣಬಹುದು. ಆದರೆ ಪ್ರಾಣಿ ಮತ್ತು ಪಕ್ಷಿ ಲೋಕದಲ್ಲಿ ಕಾಣಲು ಸಾಧ್ಯವಿಲ್ಲ. ಅವು ತಮ್ಮ ಮರಿಗಳನ್ನು ನೋಡಿಕೊಳ್ಳುವ ರೀತಿ ಅನನ್ಯವಾದುದು. ಗುಟುಕು ನೀಡುವುದಷ್ಟೇ ಅಲ್ಲದೆ ಅವು ಸುರಕ್ಷಿತವಾಗಿ ಬದುಕುವಂತಾಗಲು ಬೇಕಾಗುವ ಎಲ್ಲವನ್ನೂ ಕಲಿಸುತ್ತವೆ.
ತನ್ನ ಕರುಳಿನ ಕುಡಿಗಳಿಗಾಗಿ ಪ್ರಾಣಿ ಪಕ್ಷಿಗಳು ಕೂಡ ಎಂಥ ತ್ಯಾಗಕ್ಕೂ ಸಿದ್ಧವಾಗಿರುತ್ತವೆ. ಒಂದು ವಿಡಿಯೋ ಕ್ಲಿಪ್ ನೋಡಿದ್ದೆ. ನದಿಯಲ್ಲಿ ಚಿಗರೆಯ ಮರಿಯೊಂದು ಈಜುತ್ತಿತ್ತು. ಮೊಸಳೆ ಅದನ್ನು ತಿನ್ನಲು ಬರುತ್ತಿತ್ತು. ಅದನ್ನರಿತ ತಾಯಿ ಚಿಗರೆ ನದಿಯಲ್ಲಿ ರಭಸದಿಂದ ಈಜುತ್ತ ಮರಿ ಮತ್ತು ಮೊಸಳೆಯ ಮಧ್ಯೆ ಬಂದಿತು. ಆಗ ಮೊಸಳೆ ತಾಯಿ ಚಿಗರೆಯ ಮೇಲೆ ಆಕ್ರಮಣ ಮಾಡಿತು. ಮರಿ ಚಿಗರೆ ಮುಂದೆ ಸಾಗಿತು. ಆಗ ತಾಯಿ ಚಿಗರೆ ತನ್ನ ಮರಿ ಸುರಕ್ಷಿತವಾಗಿ ನದಿ ದಂಡೆಯ ಕಡೆ ಹೋಗುವುದನ್ನು ನೋಡುತ್ತಿತ್ತು. ಮೊಸಳೆಯ ಬಾಯಲ್ಲಿದ್ದ ಅದರ ಮುಖದ ಮೇಲೆ ಮರಿಯನ್ನು ಉಳಿಸಿದ ಭಾವ ಮೂಡಿತ್ತು.
ಮರಿಗಳಿಗೆ ಚೆನ್ನಾಗಿ ಕಲಿಸುವ ಪಶು ಪಕ್ಷಿಗಳು, ಕಲಿಯುವ ವಯಸ್ಸು ಮುಗಿದ ಮೇಲೆ ಸ್ವಂತಂತ್ರವಾಗಿ ಬದುಕಲು ಪ್ರಚೋದಿಸುತ್ತವೆ. ಹುಲ್ಲು ತಿನ್ನುವ ಕರುವಿಗೆ ಹಾಲು ಕುಡಿಸಲು ಆಕಳು ಇಷ್ಟಪಡುವುದಿಲ್ಲ. ಕರು ಕೆಚ್ಚಲಿಗೆ ಬಾಯಿ ಹಾಕಲು ಬಂದರೆ ಒದೆಯುತ್ತದೆ.
ನಮ್ಮ ನಾವಿಗಲ್ಲಿಯಲ್ಲಿನ ಬಹುಪಾಲು ಬಡ ತಾಯಂದಿರು ತಮ್ಮ ಮಕ್ಕಳಿಗಾಗಿ ಪಡುತ್ತಿದ್ದ ಕಷ್ಟ ಹೇಳಲಸಾಧ್ಯವಾದುದು. ತಮ್ಮ ಮಗ ಬಹಳಷ್ಟು ಓದಿ ದೊಡ್ಡ ಹುದ್ದೆ ಪಡೆಯಬೇಕು ಎಂಬ ಕನಸನ್ನು ಕೂಡ ಕಾಣಲು ಸಾಧ್ಯವಾಗದಂಥ ದುಃಸ್ಥಿತಿಯಲ್ಲಿ ಅವರಿದ್ದರು. ಮಗ ಬೀಡಿ, ಸಿಗರೇಟ್, ಇಸ್ಪೆಟ್, ಕುಡಿತ ಮುಂತಾದ ದುಶ್ಚಟಗಳಿಗೆ ಬಲಿಯಾಗಬಾರದು ಎಂಬ ಚಿಂತೆ ಅವರನ್ನು ಸದಾ ಕಾಡುತ್ತಿತ್ತು. ಮಗ ಆರೋಗ್ಯ ಕಾಪಾಡಿಕೊಂಡಿರಬೇಕು, ಯಾವುದೋ ಕೂಲಿನಾಲಿ ಮಾಡಿಕೊಂಡು ಮರ್ಯಾದೆವಂತನಾಗಿ ಬದುಕಬೇಕು ಎಂಬುದು ಅವರ ಆಸೆಯಾಗಿತ್ತು. ಇಂಥ ಚಿಕ್ಕ ಆಸೆ ಕೂಡ ಈಡೇರುವಂಥ ಪರಿಸ್ಥಿತಿ ಇರಲಿಲ್ಲ. ವಿಜಾಪುರದಂಥ ನಗರದಲ್ಲಿ ಯಾವುದೇ ಔದ್ಯೋಗಿಕ ವಾತಾವರಣ ಇರಲಿಲ್ಲ. ಹುಡುಗರು ಶಾಲೆಯಲ್ಲಿ ಚೆನ್ನಾಗಿ ಓದದಿದ್ದರೂ ಮುಂದಿನ ತರಗತಿಗೆ ಹೋಗುತ್ತಿದ್ದರು. ಏಳನೇ ಇಯತ್ತೆ ತಲುಪುವುದರೊಳಗಾಗಿ ಶಾಲೆಯ ಸಂಬಂಧ ಕಡಿಯುತ್ತಿತ್ತು. ಚಹಾದ ಅಂಗಡಿಯಲ್ಲಿ ಸಪ್ಲೈಯರ್, ಸಿನಿಮಾ ಟಾಕೀಜ್ ಗೇಟ್ ಕೀಪರ್, ಗ್ಯಾರೇಜ್ ಕೆಲಸದಲ್ಲಿ ಸಹಾಯಕ, ರೆಡಿಮೇಡ್ ಅಂಗಡಿಗಳಲ್ಲಿ, ಬಜಾರ್‌ನಲ್ಲಿನ ದೊಡ್ಡ ಕಿರಾಣಿ ಅಂಗಡಿ, ಅಡತಿ ಅಂಗಡಿಯಲ್ಲಿ ಹಮಾಲರ ಕೈಕೆಳಗೆ, ಬಿಸ್ಕಿಟ್ ಮತ್ತು ಪೆಪರ್ಮೆಂಟ್ ಕಾರ್ಖಾನೆಗಳಲ್ಲಿ ಕೂಲಿ ಕೆಲಸ, ಗೌಂಡಿಗಳ ಕೈಯಲ್ಲಿ ಮಾಡುವ ಕೆಲಸ, ಬಸ್ ಸ್ಟ್ಯಾಂಡ್‍ಗಳಲ್ಲಿ ಬಿಸ್ಕಿಟ್ ಮುಂತಾದ ವಸ್ತುಗಳನ್ನು ಮಾರುವುದು, ಶಾಲೆಗಳ ಮುಂದೆ ಮಕ್ಕಳಿಗೆ ಬೇಕಾದಿ ತಿಂಡೊ ತಿನಿಸು ಮಾರುವುದು ಮುಂತಾದ ಕೆಲಸಗಳು ಸಿಕ್ಕರೆ ಸಾಕಾಗಿತ್ತು ಎನ್ನುವ ವಾತಾವರಣವಿತ್ತು. ಈ ಕೆಲಸಗಳಿಗೆ ಅತಿ ಹೆಚ್ಚು ಕೂಲಿ ಎಂದರೆ ತಿಂಗಳಿಗೆ 30 ರೂಪಾಯಿ. ಮುಸುರಿ ತಿಕ್ಕುವ, ಬಟ್ಟೆ ಒಗೆಯುವ, ಮನೆಗೆಲಸ ಮಾಡುವ ಹುಡುಗಿಯರಿಗೆ ತಿಂಗಳಿಗೆ ಮೂರು ರೂಪಾಯಿ! ಅವರು ತಿಂಗಳಿಗೆ 15 ರೂಪಾಯಿ ಗಳಿಸಲು ಪ್ರತಿದಿನ ಕನಿಷ್ಠ ಐದು ಮನೆಗಳಲ್ಲಿ ಕೆಲಸ ಮಾಡಬೇಕಿತ್ತು. ಒಂದು ಮನೆಯ ಕೆಲಸಕ್ಕೆ ಕನಿಷ್ಠ ಒಂದು ಗಂಟೆಯಾದರೂ ಬೇಕಿತ್ತು. ಕೆಲಸ ಮಾಡುವ ಮನೆಗಳಲ್ಲಿ ಉಳಿದ ರೊಟ್ಟಿ ಪಲ್ಯ ಮುಂತಾದ ಆಹಾರ ಪದಾರ್ಥಗಳನ್ನು ಪಡೆಯುವುದೇ ಭಾಗ್ಯ ಎನ್ನುವ ಸ್ಥಿತಿ ಇತ್ತು. ಇಂಥ ಕಠಿಣ ಪರಿಸ್ಥಿತಿಯಲ್ಲೂ ಬಡ ತಾಯಂದಿರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದುದು ಹೃದಯಸ್ಪರ್ಶಿಯಾಗಿದೆ. ಅದೆಷ್ಟೋ ತಾಯಂದಿರು ತಮ್ಮ ಮಕ್ಕಳ ಸುರಕ್ಷಿತ ಭವಿಷ್ಯದ ಕನಸು ಕಾಣುತ್ತಲೇ ಭ್ರಮನಿರಸನಗೊಂಡು ದುಃಖಿಸುತ್ತಲೇ ಅಸು ನೀಗಿದ್ದನ್ನು ನೋಡಿರುವೆ.
ಆಕಳು, ಎಮ್ಮೆ ಸಾಕಣೆ, ಚಪ್ಪಲಿ ಹೊಲೆಯುವ ಕಾಯಕ, ಕ್ಷೌರಿಕ ವೃತ್ತಿ, ಕಿರಾಣಿ ಅಂಗಡಿ, ಇಸ್ತ್ರಿ ಅಂಗಡಿ, ತರಕಾರಿ ಅಂಗಡಿ ಮುಂತಾದ ಮನೆತನದ ಉದ್ಯೋಗಗಳಿದ್ದವರ ಮಕ್ಕಳು ಅರ್ಧಮರ್ಧ ಶಾಲೆ ಕಲಿತು ಮನೆಯ ಉದ್ಯೋಗದಲ್ಲೇ ಪರಿಣತರಾಗುತ್ತಿದ್ದುದರಿಂದ ಅವರ ಜೀವನ ಹೇಗೋ ಒಂದು ಗತಿಯಲ್ಲಿ ಸಾಗುತ್ತಿತ್ತು. ಹೊಲ, ಮನೆ ಮತ್ತು ಮನೆತನದ ಉದ್ಯೋಗವಿಲ್ಲದ ಬಡವರ ಭವಿಷ್ಯ ಅತ್ಯಂತ ಚಿಂತಾಜನಕವಾಗಿತ್ತು. ಹೆಣ್ಣುಮಕ್ಕಳ ಬದುಕು ಸಹನಶಕ್ತಿಯ ಮೇಲೆಯೆ ನಿಂತಿತ್ತು.
ನಮ್ಮ ನೆರೆಮನೆಯಲ್ಲಿ ಗೌಳಿಗರ ಕುಟುಂಬವಿತ್ತು. ಮೂವರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳಿದ್ದರು. ಸಣ್ಣ ಮಗ ಅಂಗವಿಕಲನಾಗಿದ್ದ. ಎಲ್ಲರೂ ಆ ಹುಡುಗನ ಬಗ್ಗೆ ಕಾಳಜಿ ವಹಿಸುತ್ತಿದ್ದರು. ದೊಡ್ಡ ಮಗಳಿಗೆ ಮದುವೆಯಾಗಿತ್ತು. ಆಕೆಯ ಗಂಡ ಪೈಲವಾನ ಇದ್ದ. ಅವರ ಓಣಿಯ ದೇವಸ್ಥಾನದ ಜಾತ್ರೆಯ ವೇಳೆ ನಡೆಯುವ ಜಂಗೀ ನಿಕಾಲಿ ಕುಸ್ತಿಯಲ್ಲಿ ಆಕೆಯ ಗಂಡ ಗೆಲ್ಲುವುದು ಅವನ ಮನೆಯವರ ಮತ್ತು ಗೆಳೆಯರ ಮರ್ಯಾದೆಯ ಪ್ರಶ್ನೆಯಾಗಿತ್ತು. ಇನ್ನಾವನೋ ಚಾಲೆಂಜ್ ಮಾಡಿದ್ದಕ್ಕಾಗಿ ಇವರೆಲ್ಲ ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಎಲ್ಲರೂ ಸೇರಿ ಕೊನೆಗೊಂದು ನಿರ್ಧಾರಕ್ಕೆ ಬಂದರು. ಅದೇನೆಂದರೆ ಆ ಯುವ ಪೈಲವಾನ ಹೆಂಡತಿಗೆ ಸೋಡಚೀಟಿ (ಡೈವರ್ಸ್) ಕೊಡಬೇಕು. ಒಂದು ವರ್ಷದ ಅವಧಿಯಲ್ಲಿ ಏಕಾಗ್ರಚಿತ್ತದಿಂದ ಚೆನ್ನಾಗಿ ತಾಲೀಮ ಮಾಡುವುದರಲ್ಲಿ ಮಗ್ನನಾಗಬೇಕು. ಜಾತ್ರೆ ವೇಳೆ ನಡೆಯುವ ಜಂಗೀ ನಿಕಾಲಿ ಕುಸ್ತಿಯಲ್ಲಿ ಬೆಳ್ಳಿಯ ಕಡಗ ಮತ್ತು ಹಣ ಗೆದ್ದು ತಮ್ಮ ಓಣಿಗೆ ಕೀರ್ತಿ ತರಬೇಕು ಎಂಬುದು ಅವರ ಆಶಯವಾಗಿತ್ತು. ಇಂಥ ಮರ್ಯಾದೆಯ ಮಾತುಗಳೊಂದಿಗೆ ಆ ಓಣಿಯ ಹಿರಿಯರು ಈ ಬಡ ಗೌಳಿಗರ ಮನೆಗೆ ಬಂದರು. ಆ ಮಹಿಳೆಯ ತಂದೆ ತಾಯಿಗಳಿಗೆ ಒಪ್ಪಿಸಿದರು. ಅಸಹಾಯಕರಾದ ಅವರು ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆ ರೂಪವತಿ ಯುವತಿ ಮೌನವಾಗಿ ಇದನ್ನೆಲ್ಲ ಸಹಿಸಿಕೊಂಡು ತವರು ಮನೆಯಲ್ಲಿ ಉಳಿದಳು. ಅವಳ ಸುಂದರ ತಂಗಿಯನ್ನು ಸೊಂಡಿಹರಕ ಯುವಕನೊಬ್ಬನಿಗೆ ಮದುವೆ ಮಾಡಿ ಕೊಟ್ಟರು. ಆತ ಬೇರೆ ಗೌಳಿಗರ ಎಮ್ಮೆ ಕಾಯುವ ಕೆಲಸ ಮಾಡುತ್ತಿದ್ದ. ಕೊನೆಯ ಮಗಳನ್ನು ಒಬ್ಬ ವಿಧುರನಿಗೆ ಮದುವೆ ಮಾಡಿಕೊಟ್ಟರು. ಆತನ ದೊಡ್ಡ ಮಗಳು ಇವಳ ವಯಸ್ಸಿನವಳಿದ್ದಳು. ಇದೆಲ್ಲವೂ ಮೌನವಾಗೇ ನಡೆಯುತ್ತಿತ್ತು. ಆ ಬಡ ಹೆಣ್ಣುಮಕ್ಕಳು ಶ್ರೀಮಂತರ ಮನೆಯಲ್ಲಿ ಹುಟ್ಟಿದ್ದರೆ ಖಂಡಿತವಾಗಿಯೂ ಯಾವುದೇ ಸಿನಿಮಾ ನಟಿಗಿಂತಲೂ ಕಡಿಮೆ ಸುಂದರಿಯರಾಗಿರುತ್ತಿದ್ದಿಲ್ಲ. ಬಡತನ, ಅರೆಹೊಟ್ಟೆ, ಹಳೆ ಬಟ್ಟೆ ಹೇಗಾದರೂ ಮರ್ಯಾದೆಯಿಂದ ಬದುಕಬೇಕೆಂಬ ಛಲ ಅವರನ್ನು ಎಲ್ಲ ಪರಿಸ್ಥಿತಿಗೆ ಹೊಂದಿಕೊಳ್ಳುವಂಥ ಮನಸ್ಥಿತಿಯನ್ನು ರೂಪಿಸಿತ್ತು. ಎಂಥ ದುಃಸ್ಥಿತಿಯನ್ನೂ ಅವರು ಬಲಿಪಶುವಿನಂತೆ ಸ್ವೀಕರಿಸುತ್ತಿದ್ದರು.
ಬಾಲ್ಯದಲ್ಲೇ ಬಡವರ ದಿವ್ಯಮೌನದ ಸಾಕ್ಷಾತ್ಕಾರವಾಯಿತು. ಅಸಹಾಯಕ ವಾತಾವರಣದಲ್ಲಿ ಬಂದದ್ದನ್ನು ಸ್ವೀಕರಿಸಲು ಕಲಿಸಿದ ಆ ದಿವ್ಯಮೌನವೇ ಅವರ ಶಕ್ತಿಯಾಗಿತ್ತು.
ನಾನು ನನ್ನ ಓಣಿಯಲ್ಲಿ ಆದರ್ಶ ಹುಡುಗನಾಗಿದ್ದೆ. ನನ್ನ ತಾಯಿ ನನಗೆ ಪಾದಗಳನ್ನು ನೋಡುತ್ತ ನಡೆಯುವುದನ್ನು ಕಲಿಸಿದ್ದಳು. ಹಾಗೆ ನಡೆಯವುದು ಮರ್ಯಾದೆವಂತರ ಲಕ್ಷಣ ಎಂದು ತಿಳಿಸಿದ್ದಳು. ನಾನು ಹಾಗೇ ನಡೆಯುತ್ತಿದ್ದೆ. ಅದುವೇ ನನಗೆ ರೂಢಿಯಾಗಿಬಿಟ್ಟಿತ್ತು. ಈ ನನ್ನ ನಡೆ ಓಣಿಯವರಿಗೆಲ್ಲ ಮೆಚ್ಚುಗೆಯಾಗಿತ್ತು.
ಸಾರ್ವಜನಿಕ ನಲ್ಲಿಯಿಂದ ನೀರು ತುಂಬುವುದು, ಎಮ್ಮೆಗಳು ಮೇಯಲು ಹೋಗುವಾಗ ಅವುಗಳ ಹಿಂದೆ ಬಹಳ ದೂರದವರೆಗೆ ಹೋಗುತ್ತ ಒಂದು ಬುಟ್ಟಿ ಸೆಗಣಿ ತರುವುದು. ಗಡಿಬಿಡಿಯಿಂದ ಶಾಲೆಗೆ ತಡಮಾಡದೆ ಹೋಗುವುದು. ಓದುವುದು. ಹೀಗೆ ಜೀವನ ಸಾಗಿತ್ತು.
ನಾನು ದೊಡ್ಡವನಾದಂತೆಲ್ಲ ಆ ತಾಯಿ ಎಮ್ಮೆ ಮತ್ತು ಅದರ ಟ್ಯಾಕ್ಸಿಡರ್ಮಿ ಕರು ರೂಪಕಗಳಾಗಿ ಮನದಲ್ಲೇ ಬೆಳೆಯತೊಡಗಿದವು. ಬದುಕನ್ನು ಅರ್ಥೈಸಿಕೊಳ್ಳುವಲ್ಲಿ ಹೆಚ್ಚು ಹೆಚ್ಚು ಸಹಾಯಕವಾಗತೊಡಗಿದವು.
ದಿನಗಳೆದಂತೆ ಅಸಹಾಯಕ ಜನರು ಆ ತಾಯಿ ಎಮ್ಮೆಯ ಹಾಗೆ ಕಾಣತೊಡಗಿದರು. ಧರ್ಮಗಳು ಅವರ ಟ್ಯಾಕ್ಸಿಡರ್ಮಿ ಕರುಗಳ ಹಾಗೆ ಅನಿಸತೊಡಗಿದವು. ಧರ್ಮಗಳ ಮೂಲಸ್ವರೂಪಕ್ಕೂ ಅವುಗಳ ಟ್ಯಾಕ್ಸಿಡರ್ಮಿ ಸ್ವರೂಪಕ್ಕೂ ಯಾವುದೇ ಸಂಬಂಧವಿಲ್ಲ. ಧರ್ಮಗಳ ಟ್ಯಾಕ್ಸಿಡರ್ಮಿ ಸ್ವರೂಪವನ್ನು ಅಸಹಾಯಕ ಜನರು ನೋಡಿ ಅರ್ಥ ಮಾಡಿಕೊಂಡರೂ ಆ ಧರ್ಮಗಳ ಮೂಲ ಸ್ವರೂಪದ ಭ್ರಮೆಯಲ್ಲೇ ನೆಮ್ಮದಿ ಕಾಣಬಯಸುತ್ತಾರೆ. ಇದು ವಿಚಿತ್ರವಾದರೂ ಸತ್ಯ.
ಧರ್ಮದ ಟ್ಯಾಕ್ಸಿಡರ್ಮಿ ತದ್ರೂಪದ ಜೊತೆಗಿರುವ ಧರ್ಮಾಧಿಕಾರಿಗಳು, ಧರ್ಮಗುರುಗಳು ಮತ್ತು ಧರ್ಮದ ಕುರಿತು ಅಳ್ಳು ಹುರಿದಂತೆ ಮಾತನಾಡುವ ಧರ್ಮಪಂಡಿತರು ಜನರನ್ನು ಧರ್ಮದ ಹೆಸರಿನಲ್ಲಿ ಮೋಸ ಮಾಡಬಲ್ಲರು. ಜನ ತಮ್ಮ ಹಣವನ್ನು ಭಕ್ತಿಭಾವದೊಂದಿಗೆ ಕೊಡುವಂತೆ ಮಾಡಬಲ್ಲರು. ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ದ್ವೇಷ ಹುಟ್ಟಿಸಿ ಬೀದಿ ಹೆಣ ಮಾಡಬಲ್ಲರು. ತಮ್ಮ ಸಮುದಾಯದ ಜನಶಕ್ತಿಯನ್ನು ತೋರಿಸಿ ರಾಜಕಾರಣಿಗಳಿಂದ ಲಾಭ ಪಡೆಯಬಲ್ಲರು.
ಧರ್ಮದ ಟ್ಯಾಕ್ಸಿಡರ್ಮಿ ತದ್ರೂಪ, ಜನರನ್ನು ಅವರ ಭಾವಕೋಶದಲ್ಲಿರುವ ಧರ್ಮದ ಕಡೆಗೆ ಒಯ್ಯುತ್ತದೆ. ಹುಟ್ಟು, ಸಾವು. ರೋಗ ರುಜಿನ, ಬದುಕಿನ ಕಷ್ಟನಷ್ಟಗಳ ಜೊತೆಗೇ ಭವಿಷ್ಯದ ಅನಿಶ್ಚಿತತೆ ಮತ್ತು ನಿಗೂಢತೆ ಅವರನ್ನು ಸದಾ ಕಾಡುತ್ತಲೇ ಇರುತ್ತವೆ. ಇವೆಲ್ಲವುಗಳನ್ನು ಮರೆಸಲು ಮತ್ತು ಸಾವಿನ ನಂತರದ ಬದುಕಿನ ಕಲ್ಪನೆ ಮಾಡಿಕೊಳ್ಳಲು ಅವರು ಧರ್ಮದ ಮೊರೆಹೋಗುತ್ತಾರೆ. ಧರ್ಮ ಸಿಗದಿದ್ದರೆ ಧರ್ಮದ ಟ್ಯಾಕ್ಸಿಡರ್ಮಿ ತದ್ರೂಪದ ಮೊರೆಹೋಗುತ್ತಾರೆ. ತಮ್ಮ ಧರ್ಮದ ಬಗೆಗಿನ ಅವರ ಆವೇಶ, ತಮ್ಮ ಧರ್ಮ ಇತರೆ ಧರ್ಮಗಳಿಗಿಂತ ಶ್ರೇಷ್ಠ ಎಂಬ ಭಾವನೆ ಮೂಡಿಸುತ್ತದೆ. ಪ್ರತಿಯೊಬ್ಬ ಧರ್ಮದವರು ಇಂಥ ಭ್ರಮೆಗಳಲ್ಲೇ ಬದುಕುತ್ತಿರುತ್ತಾರೆ. ನೆಮ್ಮದಿಗಾಗಿ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುತ್ತಲೇ ಶ್ರೇಷ್ಠತೆಯ ವ್ಯಸನದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಾರೆ. ಮೂಲಭೂತವಾದ, ಕೋಮುವಾದ ಮತ್ತು ಆತಂಕವಾದ ತಲೆ ಎತ್ತಲು ಕಾರಣರಾಗುತ್ತಾರೆ.
ಈ ಎಲ್ಲ ಧರ್ಮಗಳು ಹತ್ತುಸಾವಿರ ವರ್ಷಗಳಿಂದ ಈಚೆಗೆ ಹುಟ್ಟಿಕೊಂಡಿವೆ. ಧರ್ಮ, ಕುಲ, ಜಾತಿ, ಉಪಜಾತಿಗಳಿಲ್ಲದೆ ಮಾನವ ಲಕ್ಷಾಂತರ ವರ್ಷಗಳಿಂದ ಬದುಕುತ್ತ ಬಂದಿದ್ದಾನೆ. ಮುಂದಿನ ಸಹಸ್ರಾರು ವರ್ಷಗಳವರೆಗೆ ಈ ಧರ್ಮಗಳು ಬದುಕುತ್ತವೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇವು ನಡವಳಿಕೆಯಲ್ಲಿ ಮೂಲ ಪರಿಕಲ್ಪನೆಯ ಪರಿಶುದ್ಧ ಧರ್ಮಗಳೇ ಅಲ್ಲ. ಅಂಥ ಮೂಲ ಧರ್ಮವನ್ನು ಆಚರಿಸುವವರ ಸಂಖ್ಯೆ ಬಹಳ ಕಡಿಮೆ. ಅಂಥವರು ಮಾತ್ರ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತ ತಾವು ನಂಬಿದ ಧರ್ಮವನ್ನು ಆಚರಿಸುವರು. ಅಂಥವರಿಗೆ ದಯವೇ ಧರ್ಮವಾಗಿರುತ್ತದೆ. ಅವರು ಎಲ್ಲ ಧರ್ಮಗಳನ್ನು ತಮ್ಮ ಧರ್ಮವೆಂದೇ ಭಾವಿಸುವರು. ಎಲ್ಲ ಧರ್ಮಗಳ ವಿಧಿ ವಿಧಾನಗಳನ್ನು ಗೌರವಿಸುವರು.
ದೆಹಲಿಯಲ್ಲಿದ್ದ ಸೂಫಿ ಸಂತ ನಿಜಾಮುದ್ದೀನ ಅವರು ಒಂದು ಸಲ ಯಮುನಾ ನದಿಯ ದಂಡೆಯ ಮೇಲೆ ಹೋಗುತ್ತಿರುವಾಗ, ಯಮುನಾ ನದಿಯಲ್ಲಿ ಸ್ನಾನ ಮಾಡಿದ ಮಹಿಳೆಯೊಬ್ಬಳು ಆಕಾಶದೆಡೆಗೆ ಮುಖ ಮಾಡಿ ದೇವರಿಗೆ ಅರ್ಘ್ಯ ಅರ್ಪಿಸುತ್ತಿದ್ದಳು. ಆಗ ಅವರು ಸಂತೋಷಭರಿತರಾಗಿ ಪಕ್ಕದಲ್ಲಿದ್ದ ಮಹಾನ್ ಕವಿಶಿಷ್ಯ ಅಮೀರ್ ಖುಸ್ರೋಗೆ ಹೇಳಿದರು: ನೋಡು ನನ್ನ ದೇವರಿಗೆ ಜನ ಎಷ್ಟೊಂದು ರೀತಿಯಲ್ಲಿ ಆರಾಧಿಸುತ್ತಾರೆ!
ಆದರೆ ಧರ್ಮದ ಟ್ಯಾಕ್ಸಿಡರ್ಮಿಯ ತದ್ರೂಪವನ್ನೇ ನಂಬಿದವರಿಗೆ ಇಂಥ ಮಾತುಗಳು ಅರ್ಥವಾಗುವವೆ?
(ಚಿತ್ರಗಳು: ಸುನೀಲಕುಮಾರ ಸುಧಾಕರ)
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.
ಸರ್ ನಿಮ್ಮ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ.ಬಹಳ ಖುಷಿಯಾಯಿತು,ನಿಮ್ಮ ಲೇಖನದ ಮೂಲಕ ಟ್ಯಾಕ್ಸಿಡಮಿ೯ ಕಲೆಯ ಮಹತ್ವವನ್ನು ತಿಳಿಸಿದ್ದೀರಿ. ಪ್ರತಿಯೊಂದು ಉದಾಹರಣೆಗಳು ಚೆನ್ನಾಗಿವೆ.ನಿಮಗೆ ನನ್ನ ಕಡೆಯಿಂದ ಅಭಿನಂದನೆಗಳು ಸರ್. 💐🙏🌱
ಹಾರೈಸಿವವರು
ಶ್ರೀ.ನವೀನ.ಪ್ಯಾಟಿಮನಿ
ಚಮ೯ಪ್ರಸಾಧನ ಕಲಾ ತಜ್ಞರು,
ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯ,ಪ್ರಾಣಿಶಾಸ್ತ್ರ ವಿಭಾಗ,
ಕನಾ೯ಟಕ ವಿಜ್ಞಾನ ಮಹಾವಿದ್ಯಾಲಯ,ಧಾರವಾಡ.🙏🌱