ಕ್ಲೇರೀಸ್‌ಗೆ ಹೊಸ ಸ್ಕೂಲಿನ ಟ್ರೈನ್ ಟೀಚರ್ ರೇನ್‌ಳ ಮಾತು, ವರ್ತನೆಗಳು ಅವಳೊಳಗೆ ಹುದುಗಿರುವ ಸಂಕಟವನ್ನು ತಕ್ಕಷ್ಟು ಉಪಶಮನ ಮಾಡುತ್ತವೆ. ತನಗೊಂದೂ ತಿಳಿಯುವುದಿಲ್ಲ, ಶುದ್ಧ ಅನಕ್ಷರಸ್ಥೆ ಎಂದು ಬೇಡಿಕೊಳ್ಳುವ ರೀತಿ ಅವಳ ವರ್ತನೆ. ಯಾರೂ ನನ್ನನ್ನು ಪ್ರೀತಿಸುವುದಿಲ್ಲ ಎಂದು ಕಣ್ಣೀರಿಡದೆ ಕಠಿಣವಾಗಿ ಹೇಳುತ್ತಾಳೆ. ಯಾರಿಲ್ಲದಿದ್ದರೂ ನಿನ್ನ ಮಕ್ಕಳು ನಿನ್ನನ್ನು ಪ್ರೀತಿಸುತ್ತವೆ ಎನ್ನುತ್ತಾಳೆ ಟೀಚರ್‌ ರೇನ್‌. ಅವಳು ಅತ್ಯಂತ ತಾಳ್ಮೆಯಿಂದ ಮತ್ತೆ ಮತ್ತೆ ಕೇರೀಸಳ ಹಿಂಜರಿಕೆ, ಸಂಕಟಗಳನ್ನು ಅತ್ತ ಸರಿಸಿ, ಓದು ಎಂದು ಒಂದೊಂದೇ ಅಕ್ಷರವನ್ನು ಉಚ್ಚರಿಸುವಂತೆ ಮಾಡುತ್ತಾಳೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಅಮೆರಿಕದ ʻಪ್ರೆಷಸ್ʼ ಸಿನಿಮಾದ ವಿಶ್ಲೇಷಣೆ

ಅದು ಕಳೆದ ಶತಮಾನದ 90ರ ದಶಕದ ದಿನಗಳು. ಅಮೆರಿಕದ ನ್ಯೂಯಾರ್ಕ್ ಬಳಿಯ ಹಾರ್ಲೆಮ್‌ನಲ್ಲಿ ನಡುಪ್ರಾಯದ ಆಫ್ರಿಕನ್ ಮೂಲದ ಮಹಿಳೆಯ ವಾಸ. ಆಕೆಯ ಹೆಸರು ಸಫೈರ್. ಆಕೆ ಅನುಭವಿಸುತ್ತಿದ್ದದ್ದು ಅಂತಿಂಥ ಕುದಿತವಲ್ಲ. ಅದು ಬದುಕಿಗೆ ಬೇಕಾದ ದಾರಿ ಸಿಗದಿದ್ದರಿಂದ ಭುಗಿಲೆದ್ದ ಭಾವನೆಗಳಲ್ಲ. ಅದರ ಬಗ್ಗೆ ಅವಳ ಚಿಂತೆಯಲ್ಲ. ಅದು ಹೇಗೋ ಮುಂದುವರಿಯುವುದೆನ್ನುವ ಭರವಸೆ. ಆದರೆ ಕಣ್ಣು ಬಿಟ್ಟರೂ ಮುಚ್ಚಿದರೂ ಉಪಶಮನಗೊಳ್ಳದ ಭಾವೋದ್ವೇಗಗಳು. ಅವಳ ಅಂತರಂಗದಲ್ಲಿ ನಿರಂತರ ಭುಗಿಲೇಳುತ್ತಿದ್ದ ಭಾವನೆಗಳು. ಅದರಿಂದ ಪಾರಾಗುವುದು ಹೇಗೆ ಎನ್ನುವ ತೀರದ ತಳಮಳ. ಜೊತೆಗೆ ಅವುಗಳನ್ನು ಹೇಗಾದರೂ ಸರಿಯೇ ನಿಯಂತ್ರಿಸುತ್ತೇನೆ ಎಂಬ ಆಸೆ ಹುಸಿ ಪ್ರಯತ್ನ ಆಗಾಗ. ಆದರೆ ಆ ತೀಕ್ಷ್ಣ ಭಾವನೆಗಳೆಲ್ಲ ಇನ್ನಷ್ಟು ಮತ್ತಷ್ಟು ಮುತ್ತಿ ತಮ್ಮನ್ನು ಹೊರಗೆ ಹಾಕು, ಇನ್ನೆಷ್ಟು ದಿನ ನಾವಿಲ್ಲಿ ಬಂಧಿತರಾಗಿರಬೇಕು ಎಂದು ಪಟ್ಟು ಹಿಡಿದ ಒತ್ತಾಯ. ಇದರಿಂದುಂಟಾದ ಪರಿಸ್ಥಿತಿಯಿಂದ ತನ್ನಿಂದ ತಾನೇ ಬಿಡಿಸಿಕೊಳ್ಳಲು ಆ ಪುಟಿದೇಳುವ ಭಾವನೆಗಳನ್ನು ಹೊರಹಾಕಲು ಬೇರೆ ಮಾರ್ಗ ತೋಚದೆ ಮಾಡಿದ ಪ್ರಯತ್ನವೇ ಬರವಣಿಗೆ. ಅದೂ ತಾನು ಈ ತನಕ ಕೈ ಹಾಕದ, ಅನುಭವವಿರದ ಕಾದಂಬರಿ ರಚನೆಯ ರೂಪದಲ್ಲಿ!

(ಲೀ ಡೇನಿಯಲ್‌)

ಪದದೊಂದಿಗೆ ಕೈ ಹಿಡಿದ ಪದ, ವಾಕ್ಯದೊಂದಿಗೆ ಜೊತೆಗೂಡಿದ ವಾಕ್ಯ. ಪ್ರಕರಣಗಳ ರಿಲೆಗಾಗಿ ಓಟಕ್ಕೆ ಕಾದಿದ್ದ ಪ್ರಕರಣಗಳು. ಎಲ್ಲಕ್ಕೂ ಎಲ್ಲದಕ್ಕೂ ತನ್ನದೇ ಅನುಭವದ ಸಮರ್ಪಣೆ. ಜೊತೆಗೆ ಕಲ್ಪನೆ ಎಳೆಗಳು ಹಲವಾರು. ಇವೆಲ್ಲವೂ ಸೇರಿ ನಿರೂಪಣೆಯ ಗತಿ. ಕಾದಂಬರಿ ಪೂರ್ಣಗೊಂಡ ಮೇಲಷ್ಟೇ ಆಕೆಗೆ ಸಹಜ ಉಸಿರಾಟ. ಯಾವುದೋ ಬಿಗಿದ ಬಂಧನದಿಂದ ಆಚೆ ಬಂದ ಭಾವನೆ. ಇದಾದ ನಂತರ ಬರೆದ ಅದರ ಪ್ರಕಟಣೆಯ ಆಲೋಚನೆ ಬಗೆಹರಿದ್ದು ಬೇಗ. ಅದೇ ಸಾವಿರದ ಒಂಬೈನೂರ 1996ರಲ್ಲಿ ಪ್ರಕಟವಾದ ಆಕೆಯ ಕಾದಂಬರಿ ʻಪುಶ್ʼ. ಇಷ್ಟಾದರೂ ತನ್ನಿಂದ ಬಿಡುಗಡೆ ಪಡೆದ ಸಮಾಧಾನದ ಬೆಳದಿಂಗಳಿನಲ್ಲಿ ಅವಳ ಮನಸ್ಸು. ಆದರೆ ಅದರ ಇನ್ನೊಂದು ಮೂಲೆಯಲ್ಲಿ ಕಾದಂಬರಿ ಜನಸಮುದಾಯದಲ್ಲಿ ಸ್ವೀಕಾರವಾಗುವ ರೀತಿಯ ಬಗ್ಗೆ ಕುತೂಹಲ, ಭಯ. ಕಾದಂಬರಿ ಪ್ರಕಟವಾದ ಸ್ವಲ್ಪ ಕಾಲದಲ್ಲಿಯೇ ಅವಳ ಅನುಮಾನಗಳೆಲ್ಲ ಧ್ವಂಸ. ಕಾದಂಬರಿಗೆ ಭರಪೂರ ಸ್ವಾಗತ, ಪ್ರತಿಕ್ರಿಯೆ ಓದುಗರಿಂದ. ಇದರಿಂದ ಅವಳಿಗೆ ಸಂತೋಷವಾಗುತ್ತಿದ್ದ ಹಾಗೆಯೇ ಕಾದಂಬರಿಯನ್ನು ಆಧರಿಸಿ ಮಾಡುವುದಾಗಿ ನಿರ್ಮಾಪಕರಿಂದ ಸೂಚನೆ. ಈ ಸುದ್ದಿ ಜನಮನದಲ್ಲಿ ಮಿಳಿತವಾಗುತ್ತಿದ್ದ ಹಾಗೆಯೇ ಕಾದಂಬರಿಗೆ ಬೆಸ್ಟ್‌ ಸೆಲರ್ ಪಟ್ಟ. ಇದೆಲ್ಲಕ್ಕೂ ಕಾರಣ ಕಾದಂಬರಿ ಒಳಗೊಂಡಿದ್ದ ಹೂರಣ. ಓದುಗರ ಕಣ್ಣ ರೆಪ್ಪೆಯನ್ನು ಹಾಗೆಯೇ ಹಿಡಿದಿಡುವಂಥ ಕಥನದ ಸ್ವರೂಪ. ಸೆಫೈರ್ ತಾನು ಜೀವನದುದ್ದಕ್ಕೂ ಅನುಭವಿಸಿದ ಅತ್ಯಂತ ಘೋರ ಪಡಿಪಾಟಲನ್ನು ಕಾದಂಬರಿಯಲ್ಲಿ ನಿರೂಪಿಸಿದ್ದಳು. ಈ ಕಾದಂಬರಿಯನ್ನು ಆಧರಿಸಿ ಅವಳಂತೆಯೇ ಆಫ್ರಿಕನ್‌ ಅಮೆರಿಕನ್‌ ಸಮುದಾಯದ ಲೀ ಡೇನಿಯಲ್‌ ನಿರ್ದೇಶಿಸಿದ ಚಿತ್ರವೇ 2009ರ ʻಪ್ರೆಷಸ್ʼ.

ಇದು ಈ ಮೊದಲು ಇಟ್ಟಿದ್ದ ಉದ್ದನೆಯ ಹೆಸರನ್ನು ಮೊಟಕು ಮಾಡಿದ್ದು. ಅನಂತರವೇ ಚಿತ್ರಕ್ಕೊಂದು ಮೆರುಗು. ಚಿತ್ರದಲ್ಲಿನ ಮೇರಿ(ಮೋನೊಕ್‌) ಪಾತ್ರದ ಅಭಿನಯಕ್ಕೆ ಅತ್ಯುತ್ತಮ ಸಹಾಯಕ ನಟಿ ಆಸ್ಕರ್‌ ಪ್ರಶಸ್ತಿ ಗಳಿಕೆ.

ಅವಳು ಕ್ಲಾರಿಸ್ ಜೋನ್ಸ್(ಗಬೊರೆ ಸಿದಿಬೆ) ಎಂಬ 16 ವರ್ಷದ ಆಫ್ರಿಕನ್ ಮೂಲದ ದಢೂತಿ ಆಕೃತಿಯ ಹುಡುಗಿ. ಅವಳಿದ್ದದ್ದು ಇಕ್ಕಟ್ಟಿನ ಮನೆಯಲ್ಲಿ ತಾಯಿ ಮೇರಿಯ ಜೊತೆ ಆಗಲೇ ತನಗಿದ್ದ ಸುಮಾರು ಮೂರು ವರ್ಷದ ಹೆಣ್ಣು ಮಗು ಮೋಂಗೊಳೊಂದಿಗೆ. ಮಗುವನ್ನು ಜೋಪಾನವಾಗಿ ನೋಡಿಕೊಳ್ಳುವುದಷ್ಟೇ ಅವಳ ಜವಾಬ್ದಾರಿಯಲ್ಲ. ಈಗವಳು ಗರ್ಭಿಣಿ ಕೂಡ. ಮನೆಯಲ್ಲಿದ್ದರೆ ಅಮ್ಮ ಮೇರಿಯ ಕೆಂಡದಂತಹ ಮಾತುಗಳು, ಅವಳ ಕಣ್ಣಿನ ದಾವಾಗ್ನಿ, ಬೈಗುಳದಬ್ಬರ. ಇದರಿಂದ ಉಂಟಾದ ಒಳಗಿನ ಗಾಳಿಗೂ ಉಷ್ಣಾಂಶದ ಏರು. ಅವಳಿಗೆ ಸುಮ್ಮನೆ ಕುದಿಯುವ ಪರಿಸ್ಥಿತಿ ಹಗಲಿರುಳು. ಇವುಗಳನ್ನು ತಡೆದುಕೊಳ್ಳಲು ಅಸಾಧ್ಯವಾಗಿ ಹೊರಗೆ ಅರೆಗಣ್ಣು ತೆರೆದು, ಕೊಂಚ ತಲೆ ತಗ್ಗಿಸಿ ಹೊರಗೆ ಹೊರಟರೆ ಅವಳು ನೋಡುತ್ತಿದ್ದದ್ದು ಹೆಚ್ಚಾಗಿ ಹೊರಗಿನ ನೋಟವನ್ನಲ್ಲ; ತನ್ನೊಳಗನ್ನು. ಯಾರಿಗೂ ಎಟುಕದ ತನ್ನೆದೆಯ ಮಿಡುಕಾಟದ ಕಡೆಗೇ ಅವಳ ಗಮನ. ಹೊರಗೆ ಗಲ್ಲಿಯ ಅಪಾಪೋಲಿ ಹುಡುಗರ ಲೇವಡಿ. ಹುಡುಗರು ಮಾತಿನಲ್ಲಷ್ಟೇ ತೃಪ್ತಿಯಾಗದೆ ಅತ್ತ ನೂಕುತ್ತಾರೆ. ಅವಳು ಬೀಳುವುದು ಕಸದ ತಿಪ್ಪೆಯಲ್ಲಿ. ಅದರಲ್ಲಿನ ಕಸಕ್ಕೆ ಮುಖವಿಟ್ಟು ಇನ್ನಷ್ಟು ಕಣ್ಣು ಮುಚ್ಚುತ್ತಾಳೆ; ತಾನು ಬಯಸುವುದನ್ನು ಕಲ್ಪಿಸಿಕೊಳ್ಳುತಾಳೆ. ಅದರಲ್ಲಿ ಅವಳಿಗೆ ಎಲ್ಲವೂ ಸುಖ. ಉಡುಗೆ-ತೊಡುಗೆ, ಒಲುಮೆಯ ಗೆಳತಿಯರ ಸಖ್ಯ, ಅವರೊಡನೆ ಹರ್ಷದಿಂದ ನಲಿದಾಟ.. ಇವೆಲ್ಲವೂ ನಮಗೆ ಅವಳ ದೃಷ್ಟಿಕೋನದಿಂದ ಅವಳ ಮನೆಯೊಳಗಿನ ಟೀವಿಯಲ್ಲಿ ಚಿತ್ರಿಕೆಗಳಾಗಿ ಲಭಿಸುತ್ತವೆ. ಇಷ್ಟಲ್ಲದೆ ಕೆಲವು ಭಾವತೀವ್ರತೆಯ ಸಂದರ್ಭಗಳಲ್ಲಿಯೂ ವಾಸ್ತವ್ಕಕೆ ತೀರ ಭಿನ್ನವಾಗಿ ತಾನು ಬಯಸುತ್ತಿರುವ ಗೆಲುವಿನ ಬದುಕನ್ನು ಮತ್ತು ಅಮ್ಮ ಮೇರಿ ತನ್ನನ್ನು ವಿಶೇಷ ಅಕ್ಕರೆಯಿಂದ ನೋಡಿಕೊಳ್ಳುತ್ತಿರುವಂತೆ ಭ್ರಮಿಸುತ್ತಾಳೆ. ಅವೆಲ್ಲ ಚಿತ್ರಿಕೆಗಳಾಗಿ ನಮಗೆ ಮನೆಯ ಟೀವಿಯಲ್ಲಿ ಗೋಚರಿಸುತ್ತವೆ. ನಿಜಕ್ಕೂ ಅವೆಷ್ಟು ಸುಂದರ! ಚಿತ್ರ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ನಿರ್ದೇಶಕ ಮುಖ್ಯ ಪಾತ್ರಗಳನ್ನು, ಅವರ ಸಂಬಂಧದ ಸ್ವರೂಪವನ್ನು ನಿರೂಪಿಸುತ್ತಾನೆ.

ಕ್ಲೇರೀಸ್ ಹೆಸರಿಗೆ ಮಾತ್ರ ಹೈಸ್ಕೂಲ್ ಹುಡುಗಿ. ಎಲ್ಲ ವಿಧದಲ್ಲಿಯೂ ಅವಳು ಅನಕ್ಷರಸ್ಥೆ. ಹೀಗೆಂದೇ ಸ್ಕೂಲಿನ ಹುಡುಗರು ಅಲಕ್ಷ್ಯದಿಂದ ವರ್ತಿಸುತ್ತಾರೆ, ಬೊಬ್ಬಿಟ್ಟು ರೇಗಿಸುತ್ತಾರೆ. ಅವರೆಲ್ಲರನ್ನೂ ಹುರಿದು ಮುಕ್ಕುವಂತೆ ನೋಡುವುದಷ್ಟೇ ಅಲ್ಲದೆ ಸಿಕ್ಕವರಿಗೆಲ್ಲಾ ತಪರಾಕಿ ಕೊಟ್ಟು ಮತ್ತು ಸಮಾಧಾನ ಕೊಳ್ಳುವುದಕ್ಕೆ ಅವಳಿಗೆ ಸಾಧ್ಯ. ಅವಳ ಸ್ಕೂಲಿನ ಮೇಲ್ವಿಚಾರಕರಿಗೆ ಅವಳು ಗರ್ಭಿಣಿಯಾಗಿರುವ ಸಂಗತಿ ಇಷ್ಟವಾಗುವುದಿಲ್ಲ. ಅವಳ ಬಗ್ಗೆ ತೀವ್ರ ಅನಾದರ. ಅವಳು ತಮ್ಮಲ್ಲಿರುವುದು ಬೇಡವೆಂದು ʻಈಚ್‌ ಒನ್‌ ಟೀಚ್‌ ಒನ್‌ʼ ಎಂಬ ಸ್ಕೂಲಿಗೆ ಕಳಿಸಿಕೊಡಲು ತೀರ್ಮಾನಿಸುತ್ತಾರೆ. ಆಗಲೂ ಅವಳ ಮುಖದಲ್ಲಿ ಎಂದಿನಂತೆಯೇ ಮುಖಚಹರೆ. ಅದೇ ಗಂಟು ಮುಖ, ಮಾತು ಹೊರಡದ ತುಟಿಗಳು. ಹಾಗೆಂದೇ ಅವಳು ಬರಿಗೈಯಲ್ಲಿ ಆ ಸ್ಕೂಲಿಗೆ ಅಂಥದೇ ಮುಖಭಾವದಿಂದ ತನಗೆಲ್ಲಿ ಪ್ರವೇಶ ಸಿಗುತ್ತದೆ ಎಂದು, ಕಿಂಚಿತ್ ಭರವಸೆ ಇಲ್ಲದೆ ಹೋಗುತ್ತಾಳೆ. ಅವಳಿಗೆ ಪ್ರವೇಶ ಸಿಕ್ಕಿದ್ದು ಅವಳಿಗೇ ಆಶ್ಚರ್ಯ. ಈ ಮುಂಚಿನ ಸ್ಕೂಲ್‌ನವರಲ್ಲೊಬ್ಬರು ತೆಗೆದುಕೊಂಡ ಮುತುವರ್ಜಿಯಿಂದ ಅವಳಿಗಲ್ಲಿ ಕಾಲಿಡಲು ಅವಕಾಶ. ಇಷ್ಟಾದರೂ ಅವಳ ತುಟಿಯಲ್ಲಿ ಕೊಂಚವೂ ನಗುವಿನೆಸಳಿಲ್ಲ.

ಪದದೊಂದಿಗೆ ಕೈ ಹಿಡಿದ ಪದ, ವಾಕ್ಯದೊಂದಿಗೆ ಜೊತೆಗೂಡಿದ ವಾಕ್ಯ. ಪ್ರಕರಣಗಳ ರಿಲೆಗಾಗಿ ಓಟಕ್ಕೆ ಕಾದಿದ್ದ ಪ್ರಕರಣಗಳು. ಎಲ್ಲಕ್ಕೂ ಎಲ್ಲದಕ್ಕೂ ತನ್ನದೇ ಅನುಭವದ ಸಮರ್ಪಣೆ. ಜೊತೆಗೆ ಕಲ್ಪನೆ ಎಳೆಗಳು ಹಲವಾರು. ಇವೆಲ್ಲವೂ ಸೇರಿ ನಿರೂಪಣೆಯ ಗತಿ. ಕಾದಂಬರಿ ಪೂರ್ಣಗೊಂಡ ಮೇಲಷ್ಟೇ ಆಕೆಗೆ ಸಹಜ ಉಸಿರಾಟ.

ಕ್ಲೇರೀಸ್‌ಗೆ ಭಾವತೀವ್ರತೆಯ ಪ್ರಸಂಗದಲ್ಲಿ ತಾನೀಗ ಗರ್ಭಿಣಿಯಾಗಲು ಮತ್ತು ಈಗಿರುವ ಅನಾರೋಗ್ಯ ಮಗು ಮೋಂಗೋಗೆ ಕಾರಣ ಮತ್ತೆ ಮತ್ತೆ ಪುಟಿಯುತ್ತದೆ. ಅವಳ ಈ ಹೀನ ಪರಿಸ್ಥಿತಿಗೆ ಅವಳ ಅಪ್ಪ ಕಾರ್ಲ್‌ನ ಲೈಂಗಿಕ ದೌರ್ಜನ್ಯವೇ ಕಾರಣ! ಅವನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಮಿತಿಮೀರಿದ ಉದ್ರೇಕದಿಂದ ಆಕ್ರಮಿಸುವ ಚಿತ್ರಿಕೆಗಳು ನಮ್ಮನ್ನು ಇರಿಯುತ್ತವೆ. ಅವಳಮ್ಮ ಮೇರಿಗೆ ಕ್ಲೇರೀಸ್‌ ಅನುಭವಿಸುತ್ತಿರುವ ಮನಃಕ್ಲೇಷದದ ಬಗ್ಗೆ ಕಿಂಚಿತ್‌ ಅರಿವಿರುವುದಿಲ್ಲ. ಅವಳದು ಒಂಟಿ ನರಕದ ವಾಸ. ಅವಳು ಮೊದಲನೆ ಮಗುವನ್ನು ಮೇರಿಯ ಜೊತೆ ಬಿಟ್ಟು ಹೊಸ ಸ್ಕೂಲಿನಲ್ಲಿ ತನ್ನ ಬಗ್ಗೆ ಕಾಳಜಿ ವಹಿಸುವ ಟೀಚರ್ ರೇನ್ ವಾಸಕ್ಕೆ ವ್ಯವಸ್ಥೆ ಮಾಡಿದ ಕಡೆ ಹೋಗುತ್ತಾಳೆ.

ಕ್ಲೇರೀಸ್ ಅಮ್ಮ ಮೇರಿಗೆ ಯಾವ ಕೆಲಸವೂ ಇರುವುದಿಲ್ಲ. ಅವಳಿಗೆ ಕೆಲಸ ಸಿಗುವ ಯೋಗ್ಯತೆಯ ಬಗ್ಗೆ ಚಿತ್ರದಲ್ಲಿ ಯಾವ ಸೂಚನೆಯೂ ಇಲ್ಲ. ಬಹುಶಃ ಅವಳೂ ಮಗಳಂತೆ ನಿರಕ್ಷರಸ್ಥೆಯೇ. ಬದುಕು ಸಾಗಲು ಸರ್ಕಾರದ ಕಲ್ಯಾಣ ಇಲಾಖೆಯಿಂದ ದೊರಕುವ ವರಮಾನವೇ ಆಧಾರ. ಕ್ಲೇರೀಸ್‌ ಮನೆಯಿಂದ ಹೊರಗೆ ಹೋದರೆ ಕಲ್ಯಾಣ ಸಂಸ್ಥೆಯಿಂದ ದೊರಕುವ ಸವಲತ್ತು ಕಡಿಮೆಯಾಗುವುದೆಂದು ಅವಳ ತಕರಾರು.

ಕ್ಲೇರೀಸ್‌ಗೆ ಹೊಸ ಸ್ಕೂಲಿನ ಟ್ರೈನ್ ಟೀಚರ್ ರೇನ್‌ಳ ಮಾತು, ವರ್ತನೆಗಳು ಅವಳೊಳಗೆ ಹುದುಗಿರುವ ಸಂಕಟವನ್ನು ತಕ್ಕಷ್ಟು ಉಪಶಮನ ಮಾಡುತ್ತವೆ. ತನಗೊಂದೂ ತಿಳಿಯುವುದಿಲ್ಲ, ಶುದ್ಧ ಅನಕ್ಷರಸ್ಥೆ ಎಂದು ಬೇಡಿಕೊಳ್ಳುವ ರೀತಿ ಅವಳ ವರ್ತನೆ. ಯಾರೂ ನನ್ನನ್ನು ಪ್ರೀತಿಸುವುದಿಲ್ಲ ಎಂದು ಕಣ್ಣೀರಿಡದೆ ಕಠಿಣವಾಗಿ ಹೇಳುತ್ತಾಳೆ. ಯಾರಿಲ್ಲದಿದ್ದರೂ ನಿನ್ನ ಮಕ್ಕಳು ನಿನ್ನನ್ನು ಪ್ರೀತಿಸುತ್ತವೆ ಎನ್ನುತ್ತಾಳೆ ಟೀಚರ್‌ ರೇನ್‌. ಅವಳು ಅತ್ಯಂತ ತಾಳ್ಮೆಯಿಂದ ಮತ್ತೆ ಮತ್ತೆ ಕೇರೀಸಳ ಹಿಂಜರಿಕೆ, ಸಂಕಟಗಳನ್ನು ಅತ್ತ ಸರಿಸಿ, ಓದು ಎಂದು ಒಂದೊಂದೇ ಅಕ್ಷರವನ್ನು ಉಚ್ಚರಿಸುವಂತೆ ಮಾಡುತ್ತಾಳೆ. ಕ್ಲೇರೀಸ್‌ ಗೆ ಒಂದು ವಾಕ್ಯವನ್ನು ಓದುವಂತಾದದ್ದಕ್ಕೆ ರೈನ್ ಖುಷಿಗೊಂಡದ್ದು ಪಾತ್ರಗಳ ಜೊತೆ ನಮ್ಮನ್ನು ತಲುಪುತ್ತದೆ. ಈ ದೃಶ್ಯದ ಸಮೀಪ ಚಿತ್ರಗಳು ಮಾತಿಗಿಂತ ಮಿಗಿಲಾಗಿ ಹೇಳುವುದನ್ನು ನಾವು ಅರಿಯುತ್ತೇವೆ. ಅಲ್ಲಿನ ಸ್ಕೂಲಿನಲ್ಲಿಯೂ ಅಷ್ಟೆ. ಸಹಪಾಠಿಗಳು ಅವಳನ್ನು ಸಾಕಷ್ಟು ರೇಗಿಸುತ್ತಾರೆ. ಆದರೆ ಅವರು ಮಾಡುವ ಚೇಷ್ಟೆಗಳನ್ನು ಟೀಚರ್ ರೇನ್ ತಡೆಯುತ್ತಾಳೆ. ಜೊತೆಗೆ ಕ್ಲೇರೀಸ್‌ ಗೂ ಸಹ ಅವರನ್ನು ಎದುರಿಸುವ ಶಕ್ತಿ, ಭರವಸೆ ಲಭ್ಯವಾಗಿರುತ್ತದೆ. ಅದಕ್ಕೆ ಗಣಿತದಲ್ಲಿ ಅವಳಿಗಿರುವ ಪರಿಣತಿ.

ಸ್ಕೂಲಿನಲ್ಲಿ ಎಲ್ಲರಿಗೂ ಏನಾದರೂ ಬರೆಯುವ ಕೆಲಸವನ್ನು ಕೊಟ್ಟದ್ದು ಕ್ಲೇರೀಸಳಿಗೆ ಬರವಣಿಗೆಗೊಂದು ಅವಕಾಶವನ್ನು ಸೃಷ್ಟಿಸಿದಂತಾಗುತ್ತದೆ. ಅಲ್ಲಿನ ಹುಡುಗಿಯರಿಗೆಲ್ಲ ಅದೊಂದು ಮೋಜಿನ ಕೆಲಸ. ತಮಗೆ ತೋಚಿದಂತೆ ಲೇಖನವನ್ನು ಬರೆಯಲು ಪ್ರಾರಂಭಿಸಿರುತ್ತಾರೆ. ಸಾಕಷ್ಟು ಕಾಲ ಕ್ಲೇರೀಸ್‌ ತನ್ನೊಳಗನ್ನು ಒಂದುಗೂಡಿಸುವ ಕೆಲಸದಲ್ಲಿಯೇ ಇದ್ದದ್ದು ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಅವಳಂತರಂಗದಲ್ಲಿ ಭಾವನೆಗಳು ಸ್ಥಿರವಾದಾಗ ಕ್ಲೇರೀಸ್ ಧೈರ್ಯವಹಿಸುತ್ತಾಳೆ. ತನ್ನ ಸರದಿ ಬಂದಾಗ ಅದು ಬೇರೆ ರೂಪವನ್ನೇ ತೆಗೆದುಕೊಳ್ಳುತ್ತದೆ. ಅದು ಎಲ್ಲರನ್ನೂ ಕಮಕ್‌ ಎನ್ನದೆ ಕುಳಿತುಕೊಳ್ಳುವಂತೆ ಮಾಡುತ್ತದೆ. ರೇನ್‌ಳನ್ನು ಹಿಡಿದು ಎಲ್ಲರಿಗೂ ತಾವು ಇರುವುದೆಲ್ಲಿ ಎನ್ನುವುದನ್ನು ಮರೆಸುವಂತೆ ಆಡುವ ಅವಳ ಮಾತುಗಳು ದಂಗು ಬಡಿಸುತ್ತವೆ. ಅವಳು ತನ್ನ ಅಪ್ಪ ಎನ್ನಿಸಿಕೊಂಡವನು ತನ್ನ ಮೇಲೆ ಮಾಡಿದ ಆಕ್ರಮಣ, ಅತ್ಯಾಚಾರದಿಂದ ಕುಗ್ಗಿ ಹೋಗಿರುವ ತನ್ನ ಮನಸ್ಸು, ಈಗಿರುವ ಇರುವ ಮಗುವಲ್ಲದೆ ಸದ್ಯದ ಗರ್ಭಿಣಿಯಾಗಿರುವ ಸ್ಥಿತಿ ಎಲ್ಲವನ್ನು ಒಂದಿಷ್ಟೂ ಭಾವಾವೇಶಕ್ಕೆ ಒಳಗಾಗದೆ ತೆರೆದಿಡುತ್ತಾಳೆ. ಕೇವಲ ಹುಡುಗಾಟಿಕೆಯ ವರ್ತನೆಗಳಲ್ಲಿ ತೊಡಗಿರುತ್ತಿದ್ದ ಸ್ಕೂಲಿನ ಸಹಪಾಠಿಗಳ ವರ್ತನೆ, ನೋಟ ಬದಲಾಗುತ್ತದೆ. ಈಗವರ ಕಣ್ಣಿನಲ್ಲಿ ಮಾರ್ದವತೆ ಸ್ಫುಟವಾಗಿ ತೋರುತ್ತದೆ. ಎಲ್ಲರನ್ನು ಮೀರಿದ್ದು ಟೀಚರ್ ರೇನ್‌ಳದು. ಈ ಇಡೀ ದೃಶ್ಯದಲ್ಲಿ ಬಹುತೇಕ ಸಮಯ ಹಿನ್ನೆಲೆ ಸಂಗೀತ ಸೊನ್ನೆ. ಕ್ಲೇರೀಸಳ ಮಾತುಗಳ ನಡುವೆ ನಿಶ್ಯಬ್ದದ್ದೇ ಕಾರುಬಾರು.

ಕ್ಲೇರೀಸಳಿಗೆ ಮತ್ತೊಂದು ಮಗುವಾಗುತ್ತದೆ. ಆ ಸಂದರ್ಭದಲ್ಲಿಯೂ ಅಮ್ಮ ಮೇರಿ ನಾಪತ್ತೆ! ಕ್ಲೇರಿಸ್‌ ಮಗುವನ್ನು ಅಬ್ದುಲ್ ಎಂದು ಹೆಸರಿಸುತ್ತಾಳೆ. ಸ್ವಲ್ಪ ದಿನಗಳಾದ ಮೇಲೆ ಮಗು ನೋಡಲು ಮೇರಿ ಬರುತ್ತಾಳೆ. ಮಗು ನಿಜವಾಗಿಯೂ ಅದರ ಅಪ್ಪನನ್ನು ಹೋಲುತ್ತದೆ ಎಂದು ಗಂಭೀರ ಮುಖದಿಂದ ಹೇಳುತ್ತಾಳೆ. ತನ್ನ ಮಗಳಿಗೆ ಇನ್ನೊಂದು ಮಗುವಾಗುವುದು ಅವಳಿಗೆ ಬೇಡವಾಗಿರುತ್ತದೆ. ಅದನ್ನು ಕಂಡರೆ ಮೊದಲದರಂತೆಯೇ ದ್ವೇಷದ ಭಾವನೆ.

ಮೇರಿ ತನ್ನ ಗಂಡ ಹೆಚ್ಐವಿ ಪಾಸಿಟಿವ್ ನಿಂದಾಗಿ ತೀರಿಕೊಂಡಿದ್ದಾಗಿ ಕ್ಲೇರೀಸಳಿಗೆ ತಿಳಿಸುತ್ತಾಳೆ. ಇಡೀ ಚಿತ್ರದಲ್ಲಿ ನಾವು ಅವನನ್ನು ನೋಡುವುದೇ ಇಲ್ಲ. ಅವನು ಕ್ಲೇರೀಸಳ ಮೇಲೆ ಅತ್ಯಾಚಾರವೆಸಗುತ್ತಿದ್ದ ದೃಶ್ಯದಲ್ಲಿ ಮಾತ್ರ ಕಾಣಿಸಿರುತ್ತಾನೆ. ಕ್ಲೇರೀಸಳಿಗೆ ಕೂಡ ಹೆಚ್ಐವಿಯಾಗಿರುತ್ತದೆ. ಅದು ಅವಳ ಅಪ್ಪನಿಂದ ಬಂದ ಬಳುವಳಿ. ಅದಕ್ಕಾಗಿ ಅವಳು ದುಃಖಿಸುವುದಿಲ್ಲ. ಅತ್ಯಂತ ಸಮಾಧಾನತೆಯ ಸ್ಥಿತಿಯಲ್ಲಿರುತ್ತಾಳೆ. ಮಕ್ಕಳು ಅದರಿಂದ ಮುಕ್ತವಾಗಿರಲಿ ಎನ್ನುವುದು ಮಾತ್ರ ಅವಳ ಅಭಿಲಾಶೆ.

ಅದೊಂದು ಪ್ರಸಂಗದಲ್ಲಿ ಮೇರಿಗೆ ಸರ್ಕಾರದ ಕಲ್ಯಾಣ ಇಲಾಖೆಯ ಅಧಿಕಾರಿಗೆ ತನ್ನೊಳಗೆ ಅಡಗಿದ್ದ ವಿಚಿತ್ರ ತೊಳಲಾಟವನ್ನು ಹೊರಹಾಕುವ ಅವಕಾಶ ಒದಗುತ್ತದೆ. ಮಗಳು ಕ್ಲೇರೀಸಳ ಮೇಲಿರುವ ದ್ವೇಷವನ್ನು ಅತ್ಯಂತ ಮಾರ್ಮಿಕ ಮಾತುಗಳಿಂದ ತಿಳಿಸುತ್ತಾಳೆ. ಮಾತುಗಳಿಗೆ ತಕ್ಕ ಹಾಗೆ ಸಮರ್ಥನೀಯವಾದ ಅವಳ ಭಾವಾಭಿನಯ ಕೂಡ. ತನ್ನ ಗಂಡ ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದದ್ದು ಕಿಂಚಿತ್ ಕಾಡಿರುವುದಿಲ್ಲ. ತದ್ವಿರುದ್ಧವಾಗಿ ಗಂಡನನ್ನು ತನ್ನಿಂದ ದೂರ ಮಾಡಿದಳು ಎಂದು ಮಗಳನ್ನು ದೂರುತ್ತಾಳೆ. ಅವಳ ದೃಷ್ಟಿಯಲ್ಲಿ ಅವಳು ಮಗಳಲ್ಲ ಅನಿಷ್ಟ ಸವತಿ! ಹಲವು ವರ್ಷಗಳಿಂದ ಇದನ್ನು ಸಹಿಸಿಕೊಂಡಿದ್ದೇನೆ ಎನ್ನುತ್ತಾಳೆ. ಒಟ್ಟಾರೆಯಾಗಿ ಅವಳ ಇರುವಿಕೆಯೇ ತನ್ನ ಪಾಲಿಗೆ ಶಾಪ ಎನ್ನುವ ಹಾಗೆ. ಆದರೆ ಮನುಷ್ಯನ ಸಂಕೀರ್ಣ ಮೂಲ ಗುಣದ ಅಂಶವೆನ್ನುವ ರೀತಿ ಮಗಳ ಮೇಲೆ ಮಮತೆ ಕೂಡ. ಇವೆಲ್ಲದರಿಂದ ಅವಳ ಪರಿಸ್ಥಿತಿ ಯಾರೂ ಬಯಸುವಂಥದಲ್ಲ. ಅವಳಾಡಿದ ಮಾತುಗಳನ್ನು ಕೇಳಿಸಿಕೊಂಡ ಕ್ಲೇರೀಸ್, ಅಮ್ಮ ಏನೆಂದು ತನಗೆ ಅರ್ಥವಾಯಿತು. ಇನ್ನು ತನಗೆ ಬೇಕಿಲ್ಲ ಎಂದು ತಿಳಿಸಿ ತನ್ನಿಬ್ಬರು ಮಕ್ಕಳೊಂದಿಗೆ, ಅಮ್ಮನ ಕಡೆ ದೃಷ್ಟಿ ಹಾಕದೆ ತನ್ನ ದಾರಿಯನ್ನು ಹುಡುಕುತ್ತ ಹೊರಗೆ ಹೆಜ್ಜೆ ಹಾಕುತ್ತಾಳೆ. ಈ ವಿಪರೀತ ಪರಿಸ್ಥಿತಿಯಲ್ಲಿ ಹೇಗಾದರೂ ಸರಿಯೇ ಕ್ಲೇರೀಸಳನ್ನು ತನ್ನ ಬಳಿಗೆ ಬರುವಂತೆ ಮಾಡಿ ಎನ್ನುವ ಮೇರಿಯ ಮಿಶ್ರ ಭಾವನೆಯ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ.

ಚಿತ್ರ ಸಾಕಷ್ಟು ತ್ವರಿತಗತಿಯಲ್ಲಿ ತಿರುಗುತ್ತದೆ. ನಿರೂಪಣೆಯಲ್ಲಿ ಅಗತ್ಯವೆನಿಸುವ ರೀತಿಯಲ್ಲಿ ಸಮೀಪ ಚಿತ್ರಿಕೆಗಳೇ ಹೆಚ್ಚು. ಜೊತೆಗೆ ಭಾವಸಾಂದ್ರತೆಯ ಮಾತುಗಳು, ಸೂಕ್ತ ಮುಖಚಹರೆಗಳಿವೆ. ಚಿತ್ರ ʻಸ್ಟ್ಯಾಂಡ್‌ ಅಂಡ್‌ ಡೆಲಿವರ್‌ʼ ಮತ್ತು ʻಟು ಸರ್ ವಿತ್ ಲವ್ʼ ಚಿತ್ರಗಳನ್ನು ಅಲ್ಲಲ್ಲಿ ಹೋಗುವುದಾದರೂ ಭಾವಸಾಂದ್ರತೆ, ವಸ್ತುವಿನ ಸಂಕೀರ್ಣತೆ ಹಾಗೂ ನಿರೂಪಣೆಯಲ್ಲಿನ ಶ್ರೇಷ್ಠತೆಗಾಗಿ ನಿರ್ದೇಶಕ ಲೀ ಡೇನಿಯಲ್ಸ್ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಸಂದೇಹವಿಲ್ಲ.