ಶರತ್ಕಾಲದ ಪ್ರಾರಂಭದಲ್ಲಿ ಹಿಮಸಾರಂಗಗಳನ್ನು ಮತ್ತೆ ಫಾರ್ಮ್ ಹೌಸ್ ಗೆ ತರಲು ಹೇಗೆ ಪತ್ತೆ ಹಚ್ಚಲಾಗುತ್ತದೆ ಎನ್ನುವುದನ್ನೆಲ್ಲಾ ವಿವರಿಸುತ್ತಾರೆ. ಇದೂ ಒಂದು ಕೌತುಕದ ಸಂಗತಿ. ನಾವು ಸೊಳ್ಳೆ ಕಂಡರೆ ಹೊಡೆದು ಅಥವಾ ಸೊಳ್ಳೆ ಬತ್ತಿ ಹಾಕಿ ಸಾಯಿಸುತ್ತೇವೆ. ಆದರೆ ಬೇಸಿಗೆಯ ಅತಿಯಾದ ಸೊಳ್ಳೆ ಕಾಟ ಇವರಿಗೆ ವರದಾನವಾಗಿದೆ. ಸೊಳ್ಳೆಯ ಕಾಟ ಎಷ್ಟಿರುತ್ತದೆ ಎಂದರೆ, ಸೊಳ್ಳೆಯ ಕಾಟದಿಂದ ತಪ್ಪಿಸಿಕೊಳ್ಳಲು ಹಿಮಸಾರಂಗಗಳು ಹಿಂಡು ಹಿಂಡಾಗಿ ಗುಂಪಿನಲ್ಲಿ ಚಲಿಸುತ್ತವೆ.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್ ಪ್ರವಾಸದ ಮತ್ತಷ್ಟು ಕುತೂಹಲಕರ ವಿವರಗಳನ್ನು ಹಂಚಿಕೊಂಡಿದ್ದಾರೆ ಗುರುದತ್ ಅಮೃತಾಪುರ
ಹಿಂದಿನ ಸಂಚಿಕೆಗಳಲ್ಲಿ ಲ್ಯಾಪ್ಲ್ಯಾಂಡ್ ಉಡುಗೆ-ತೊಡುಗೆ, ಇಲ್ಲಿನ ಹವಾಮಾನ, ಸೂರ್ಯನೇ ಉದಯಿಸದ ದಿನಗಳು, ಆರ್ಕ್ಟಿಕ್ ಸರ್ಕಲ್, ಸಾಂಟಾ ಕ್ಲಾಸ್ ವಿಲೇಜ್ ಬಗ್ಗೆ ವಿವರವಾಗಿ ತಿಳಿಸಿದ್ದೆ. ಪ್ರತಿ ಸಂಚಿಕೆಯಲ್ಲೂ ಲ್ಯಾಪ್ಲ್ಯಾಂಡ್ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಲು ಪ್ರಯತ್ನಿಸುತ್ತಿದ್ದೇನೆ. ಲ್ಯಾಪ್ಲ್ಯಾಂಡ್ ಪ್ರವಾಸೋದ್ಯಮದ ಧ್ಯೇಯ ವಾಕ್ಯ “Above Ordinary!”. ಭೌಗೋಳಿಕವಾಗಿ ಅಕ್ಷಾಂಶದ ದೃಷ್ಟಿಯಿಂದ ಈ ಪ್ರದೇಶ ಇತರೆ ಪ್ರದೇಶಗಳಿಗಿಂತ ಎತ್ತರದಲ್ಲಿರುವುದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು “Above Ordinary!” ಎಂದು ಬಿಂಬಿಸಲಾಗಿದೆ. ಇಲ್ಲಿನ ಪ್ರವಾಸೋದ್ಯಮದ ಪರಿ ಯಾವ ರೀತಿ ಇದೆಯೆಂದರೆ – ಇಲ್ಲಿನ ಜನಸಂಖ್ಯೆಗಿಂತಲೂ ಎರಡು-ಮೂರು ಪಟ್ಟು ಹೆಚ್ಚು ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಹೆಚ್ಚಾಗಿ ಅಮೆರಿಕಾ ಹಾಗೂ ಇಂಗ್ಲೆಂಡ್ ಪ್ರವಾಸಿಗರು ಬರುವ ಕಾರಣ ಇಲ್ಲಿ ಎಲ್ಲರೂ ಇಂಗ್ಲಿಷ್ ಮಾತನಾಡುತ್ತಾರೆ. ಈ ಸಂಚಿಕೆಯಲ್ಲಿ ಲ್ಯಾಪ್ಲ್ಯಾಂಡ್ ಪ್ರದೇಶದ ಪ್ರಮುಖ ಪ್ರಾಣಿಯಾದ ಹಿಮಸಾರಂಗಗಳ ಬಗ್ಗೆ ನೋಡೋಣ.
ಹಿಮಸಾರಂಗ(Reindeer) ಸಫಾರಿ
ಲ್ಯಾಪ್ಲ್ಯಾಂಡ್ ಪ್ರವಾಸದ ವೇಳೆ ಲಭ್ಯವಿರುವ ಹಲವಾರು ಚಟುವಟಿಕೆಗಳಲ್ಲಿ ಹಿಮಸಾರಂಗಗಳ ಫಾರ್ಮ್ ಭೇಟಿ ಕೂಡ ಒಂದು. ಮಕ್ಕಳಿಂದ ಹಿಡಿದು ದೊಡ್ಡವರತನಕ ಎಲ್ಲರೂ ಇಷ್ಟಪಡುವ ಆಕರ್ಷಣೆ. ಫಿನ್ಲ್ಯಾಂಡ್ ರಾಷ್ಟ್ರದ ಪ್ರಮುಖ ವನ್ಯಜೀವಿ ಹಿಮಸಾರಂಗ, ಹಲವಾರು ಕೌತುಕಗಳನ್ನೂ ಅಡಗಿಸಿಕೊಂಡಿವೆ. ಫಿನ್ಲ್ಯಾಂಡಿನ ಲ್ಯಾಪ್ಲ್ಯಾಂಡಿನಲ್ಲಿ ಸುಮಾರು ಒಂದು ಸಾವಿರ ವರ್ಷಗಳಿಗೂ ಪುರಾತನವಾದ ಸಾರಿಗೆ ವ್ಯವಸ್ಥೆ ಹಿಮಸಾರಂಗಗಳ ಸಹಾಯದಿಂದ ನಡೆಯುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇದೊಂದು ಪ್ರವಾಸಿ ಆಕರ್ಷಣೆ! ಒಂದು ಫಾರ್ಮ್ ಹೌಸ್ ಭೇಟಿ ನೀಡಲು ಇಂತಿಷ್ಟು ಪ್ರವೇಶ ಶುಲ್ಕ ಪಡೆಯುತ್ತಾರೆ. ಅಲ್ಲಿ ಹಿಮಸಾರಂಗಗಳ ಬಗೆಗಿನ ವೈಶಿಷ್ಟ್ಯಕರ ಮಾಹಿತಿಗಳನ್ನು ನೀಡುತ್ತಾರೆ. ಫಾರ್ಮ್ ಹೌಸ್ ಗೈಡ್ ವಿವರಿಸಿದ ಕೆಳಕಂಡ ಮಾಹಿತಿಗಳು ನಮ್ಮನ್ನು ನಿಬ್ಬೆರಗಾಗಿಸಿದವು.
ಇಲ್ಲಿನ ಹವಾಗುಣಕ್ಕೆ ಒಗ್ಗಿಕೊಂಡಿರುವ ಹಿಮಸಾರಂಗಗಳು ಪ್ರತೀಕೂಲ ಉಷ್ಣಾಂಶವನ್ನೂ, ಅತಿಯಾದ ಚಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಸಸ್ತನಿಗಳ ವರ್ಗದಲ್ಲಿ ಆರ್ಕ್ಟಿಕ್ ಹಿಮಸಾರಂಗಗಳು ಮಾತ್ರ ನೇರಳಾತೀತ ಕಿರಣಗಳನ್ನು(ultraviolet rays) ನೋಡಬಹುದಾದ ಕಣ್ಣುಗಳನ್ನು ಹೊಂದಿವೆ! ಅತಿಯಾದ ಹಿಮವಿರುವಾಗ ಬಿಸಿಲು ಬಿದ್ದರೆ, ಹಿಮ ಬಹುತೇಕ ಬೆಳಕನ್ನು ಪ್ರತಿಫಲಿಸುತ್ತದೆ. ನೇರಳಾತೀತ ಕಿರಣಗಳೂ ಪ್ರತಿಫಲನಗೊಳ್ಳುತ್ತದೆ. ಮನುಷ್ಯನ ಕಣ್ಣುಗಳನ್ನು ಈ ಕಿರಣಗಳಿಗೆ ಒಡ್ಡಿದರೆ ಕಣ್ಣಿನ ಕ್ಯಾನ್ಸರ್‌ನಿಂದ ಹಿಡಿದು ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿಯೇ ಪೊಲಾರೈಜ್ಡ್ ಕನ್ನಡಕ ಇಲ್ಲಿ ಅವಶ್ಯಕ. ಆದರೆ ಆರ್ಕ್ಟಿಕ್ ಹಿಮಸಾರಂಗಗಳಿಗೆ ಇದರ ಅವಶ್ಯಕತೆ ಇಲ್ಲ. ಈ ಅತೀತ ಶಕ್ತಿಯಿಂದ ಹಿಮಸಾರಂಗಗಳಿಗೆ ಆಗುವ ಉಪಯೋಗಗಳು ಅನೇಕ. ಹಿಮದ ಮೇಲಿನ ಮೂತ್ರದ ಗುರುತು ಪತ್ತೆ ಹಚ್ಚುವ ಮೂಲಕ ತನ್ನನ್ನು ಭಕ್ಷಕಗಳಿಂದ ಹಾಗೂ ಪ್ರತಿಸ್ಪರ್ಧಿಯಿಂದ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ತನ್ನ ನೆಚ್ಚಿನ ಆಹಾರವಾದ ಗಿಡಮರಗಳ ಮೇಲೆ ಬೆಳೆಯುವ ಒಂದು ರೀತಿಯ ಪಾಚಿಯನ್ನು ಗುರುತಿಸಲು ಸಹಾಯವಾಗುತ್ತದೆ. ಅದೇನು ನೋಡಿದರೆ ನಮಗೂ ಕಾಣುತ್ತದೆ ಎಂದು ಯೋಚಿಸುತ್ತಿದ್ದೀರಾ? ಚಳಿಗಾಲದ ಅತಿಯಾದ ಹಿಮದಲ್ಲಿ ಎತ್ತ ನೋಡಿದರೂ ಶುಭ್ರ ಶ್ವೇತ ವರ್ಣದ ಹೊದಿಕೆಯಲ್ಲಿ ಅಡಗಿದ್ದರೂ ಕಂಡುಹಿಡಿಯಲು ಸಹಾಯ ಮಾಡುತ್ತದೆ.
ಫಿನ್ಲ್ಯಾಂಡಿನ ಲ್ಯಾಪ್ಲ್ಯಾಂಡ್ ಪ್ರದೇಶದಲ್ಲಿ ಸುಮಾರು ಎರಡು ಲಕ್ಷ ಸಾರಂಗಗಳು ಇವೆ. ಈ ಪ್ರದೇಶದ ಜನಸಂಖ್ಯೆಗಿಂತ ಇಪ್ಪತ್ತು ಸಾವಿರ ಹೆಚ್ಚು! ಇಲ್ಲಿನ ಪ್ರತಿಕೂಲ ಹವಾಮಾನದ ಉದಾಹರಣೆ ಕೊಡಬೇಕೆಂದರೆ ಹಲವು ಅಂಕಿ ಅಂಶಗಳನ್ನು ನಿಮ್ಮ ಮುಂದಿಡಲೇಬೇಕು. ಇಲ್ಲಿ ದಾಖಲಾಗಿರುವ ಕನಿಷ್ಠ ತಾಪಮಾನ -೫೫.೧ ಡಿಗ್ರಿ ಸೆ! ಅಕ್ಟೋಬರ್ ನಿಂದ ಹಿಡಿದು ಮಾರ್ಚ್ ವರೆಗೆ ಅತಿಯಾಗಿ ಸುರಿಯುವ ಹಿಮ. ಹಗಲು ಬೆಳಕಿನಲ್ಲಿ ಆಗುವ ವ್ಯತ್ಯಾಸ (ಡಿಸೆಂಬರ್ ನಲ್ಲಿ ಸೂರ್ಯ ಉದಯಿಸುವುದಿಲ್ಲ ಹಾಗೂ ಜೂನ್ ನಲ್ಲಿ ಸೂರ್ಯ ಮುಳುಗುವುದಿಲ್ಲ!), ಕನಿಷ್ಠ ಉಷ್ಣಾಂಶವಿರುವಾಗಲೂ ಉತ್ತರ ಧ್ರುವದಿಂದ ಬೀಸುವ ಅತಿಯಾದ ಚಳಿ ಗಾಳಿ. ಹೀಗೆ ಹಲವಾರು ಕಾರಣಗಳು ಇಲ್ಲಿ ಜನಜೀವನ ವಿಸ್ತರಣೆಯಾಗಲು ಅಡ್ಡಿಯಾಗಿವೆ. ಆದರೆ ಹಿಮಸಾರಂಗಗಳಿಗಲ್ಲ. ಪ್ರತಿ ವರ್ಷ ಹಿಮಸಾರಂಗಗಳ ಸಂಖ್ಯೆ ಹೆಚ್ಚುವುದರಿಂದ ಅಸಮತೋಲನ ಉಂಟಾಗುತ್ತದೆ. ಸಮತೋಲನ ಕಾಪಾಡಿಕೊಳ್ಳಲು ಇರುವುದು ಎರಡೇ ಮಾರ್ಗ. ಒಂದೋ ವನ್ಯ ಭಕ್ಷಕಗಳು ಅವುಗಳನ್ನು ಆಹಾರಕ್ಕಾಗಿ ಬೇಟೆಯಾಡುವುದು ಅಥವಾ ಮನುಷ್ಯ ತನ್ನ ನಾಲಿಗೆಯ ಚಪಲಕ್ಕೆ ಬೇಟೆಯಾಡುವುದು. ವನ್ಯ ಭಕ್ಷಕಗಳಾದ ತೋಳಗಳು ಹಾಗೂ ಕರಡಿಗಳ ಸಂಖ್ಯೆಯೂ ಕಡಿಮೆಯಾಗುತ್ತಿರುವುದು ಮನುಷ್ಯನಿಗೆ ವರದಾನವಾಗಿ ಪರಿಣಮಿಸಿದೆ. ಈ ಪ್ರದೇಶದ ವಿಶೇಷ ತಿನಿಸುಗಳಲ್ಲಿ ಹಿಮಸಾರಂಗಗಳ ಮಾಂಸ ಕಡ್ಡಾಯ. ಪ್ರವಾಸಿಗಳೂ ಸಹ ಹಲವು ಸ್ಥಳೀಯ ತಿನಿಸುಗಳನ್ನು ಸವಿಯಲು ಮರೆಯುವುದಿಲ್ಲ.
ಇನ್ನೊಂದು ಕೌತುಕದ ವಿಷಯ ಏನು ಗೊತ್ತೆ? ಎಷ್ಟು ಹಿಮಸಾರಂಗಗಳನ್ನು ಬೇಟೆಯಾಡಬಹುದು ಎನ್ನವುದನ್ನೂ ಲೆಕ್ಕ ಹಾಕಲು ಒಂದು ವಿಧಾನವಿದೆ! ಎಲ್ಲ ಎರಡು ಲಕ್ಷ ಹಿಮಸಾರಂಗಗಳು ಏಕ ಕಾಲಕ್ಕೆ ವನ್ಯ ಜೀವಿಗಳೂ ಹೌದು ಹಾಗೂ ಪ್ರದೇಶಕ್ಕನುಗುಣವಾಗಿ ಒಂದಿಲ್ಲೊಂದು ಫಾರ್ಮ್ ಹೌಸ್ ಒಡೆತನದ ಅಡಿಯಲ್ಲಿ ಬರುವುದೂ ಹೌದು. ಅರ್ಥೈಸಲು ಸ್ವಲ್ಪ ಗೊಂದಲಮಯವಾಗಿರಬಹುದು. ಮಾರ್ಚಿನಿಂದ ಸೆಪ್ಟೆಂಬರ್ವರೆಗೂ ಬೇಸಿಗೆಯಲ್ಲಿ ವನ್ಯ ಜೀವಿಗಳಾಗಿ ಸ್ವತಂತ್ರ್ಯವಾಗಿ ಕಾಡುಗಳಲ್ಲಿ ಅಡ್ಡಾಡುತ್ತಾ ಸಮಯ ಕಳೆಯುವ ಇವುಗಳು ಚಳಿಗಾಲದ ಸಮಯವನ್ನು ಫಾರ್ಮ್ ಹೌಸ್ ನಲ್ಲಿ ಕಳೆಯುತ್ತವೆ. ಇವುಗಳನ್ನು ಚಳಿಗಾಲದ ಪ್ರಾರಂಭದಲ್ಲಿ ಹುಡುಕಿ ತರುವುದೇ ಫಾರ್ಮ್ ಹೌಸ್ ಒಡೆಯರ ದೊಡ್ಡ ತಲೆ ನೋವು. ತಮ್ಮ ಒಡೆತನದ ಗುರುತಿಗಾಗಿ ಹಿಮಸಾರಂಗಗಳ ಕಿವಿಗಳಲ್ಲಿ ವಿಶ್ಟಿವಾದ ಗುರುತು ಮಾಡಿರುತ್ತಾರೆ. ಬೇಸಿಗೆ ಕಳೆದು ಚಳಿಗಾಲದಲ್ಲಿ ಹಿಂದಿರುಗಿದಾಗ, ತಾಯಿ ಹಿಮಸಾರಂಗಗಳ ಜೊತೆ ಹೊಸ ಪೀಳಿಗೆಗಳು ಹಿಂದಿರುಗುತ್ತವೆ. ಹೀಗೆ ಪ್ರತಿ ವರ್ಷ ಹಿಮಸಾರಂಗಗಳ ಗಣತಿ ಕೂಡ ನಡೆದುಹೋಗುತ್ತದೆ. ಎರಡು ಲಕ್ಷಕ್ಕಿಂತ ಎಷ್ಟು ಹೆಚ್ಚಿದೆಯೋ ಅಷ್ಟು ಹಿಮಸಾರಂಗಗಳು ಮನುಷ್ಯನ ಆಹಾರ, ಬಟ್ಟೆ, ಉಪಕರಣಗಳು ಇತ್ಯಾದಿ ಅಗತ್ಯಗಳಿಗೆ ಬಲಿಯಾಗುತ್ತವೆ.
ಶರತ್ಕಾಲದ ಪ್ರಾರಂಭದಲ್ಲಿ ಹಿಮಸಾರಂಗಗಳನ್ನು ಮತ್ತೆ ಫಾರ್ಮ್ ಹೌಸ್ ಗೆ ತರಲು ಹೇಗೆ ಪತ್ತೆ ಹಚ್ಚಲಾಗುತ್ತದೆ ಎನ್ನುವುದನ್ನೆಲ್ಲಾ ವಿವರಿಸುತ್ತಾರೆ. ಇದೂ ಒಂದು ಕೌತುಕದ ಸಂಗತಿ. ನಾವು ಸೊಳ್ಳೆ ಕಂಡರೆ ಹೊಡೆದು ಅಥವಾ ಸೊಳ್ಳೆ ಬತ್ತಿ ಹಾಕಿ ಸಾಯಿಸುತ್ತೇವೆ. ಆದರೆ ಬೇಸಿಗೆಯ ಅತಿಯಾದ ಸೊಳ್ಳೆ ಕಾಟ ಇವರಿಗೆ ವರದಾನವಾಗಿದೆ. ಸೊಳ್ಳೆಯ ಕಾಟ ಎಷ್ಟಿರುತ್ತದೆ ಎಂದರೆ, ಸೊಳ್ಳೆಯ ಕಾಟದಿಂದ ತಪ್ಪಿಸಿಕೊಳ್ಳಲು ಹಿಮಸಾರಂಗಗಳು ಹಿಂಡು ಹಿಂಡಾಗಿ ಗುಂಪಿನಲ್ಲಿ ಚಲಿಸುತ್ತವೆ. ಮೊದಲು ಹೆಲಿಕ್ಯಾಪ್ಟರ್ ಸಹಾಯದಿಂದ ಯಾವ ಗುಂಪುಗಳು ಎಲ್ಲಿವೆ ಎಂದು ಪತ್ತೆ ಹಚ್ಚಿ ಆಮೇಲೆ ವಿಶೇಷ ವಾಹನದೊಂದಿಗೆ ತೆರಳಿ ಹಿಮಸಾರಂಗಗಳನ್ನು ಫಾರ್ಮ್ ಹೌಸ್ ಗೆ ತರಲಾಗುತ್ತದೆ.
ಫಿನ್ಲ್ಯಾಂಡಿನ ಲ್ಯಾಪ್ಲ್ಯಾಂಡಿನಲ್ಲಿ ಸುಮಾರು ಒಂದು ಸಾವಿರ ವರ್ಷಗಳಿಗೂ ಪುರಾತನವಾದ ಸಾರಿಗೆ ವ್ಯವಸ್ಥೆ ಹಿಮಸಾರಂಗಗಳ ಸಹಾಯದಿಂದ ನಡೆಯುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇದೊಂದು ಪ್ರವಾಸಿ ಆಕರ್ಷಣೆ! ಒಂದು ಫಾರ್ಮ್ ಹೌಸ್ ಭೇಟಿ ನೀಡಲು ಇಂತಿಷ್ಟು ಪ್ರವೇಶ ಶುಲ್ಕ ಪಡೆಯುತ್ತಾರೆ.
ಹೀಗೆ ಹುಡುಕಿ ತಂದ ಹಿಮಸಾರಂಗಗಳಲ್ಲಿ ಆರಿಸಿ ಕೆಲವುಗಳಿಗೆ ಮಾತ್ರ ಸಫಾರಿ ತರಬೇತಿಯನ್ನು ನೀಡಲಾಗುತ್ತದೆ. ಪ್ರತಿಯೊಂದು ಹಿಮಸಾರಂಗದ ಹಿಂದೆಯೂ ಇಬ್ಬರನ್ನು ಕೂರಿಸಿಕೊಂಡು ಹಿಮದ ಮೇಲೆ ಎಳೆದುಕೊಂಡು ಹೋಗಬಹುದಾದ ಒಂದು ಮರದ ದಿಬ್ಬವನ್ನು ಕಟ್ಟಲಾಗುತ್ತದೆ. ಹೀಗೆ ತಯಾರಾದುದನ್ನು ನಂತರ ಒಂದರ ಹಿಂದೆ ಮತ್ತೊಂದನ್ನು ರೈಲ್ವೆ ಬೋಗಿಗಳಂತೆ ಕಟ್ಟಲಾಗುತ್ತದೆ. ಒಮ್ಮೆ ಸುಮಾರು ಇಪ್ಪತ್ತು ಜನಗಳು ಸಫಾರಿ ಹೋಗಬಹುದು. ಪ್ರತಿಯೊಬ್ಬರಿಗೂ ಹೊದೆಯಲು ಕಂಬಳಿ ಕೊಡುತ್ತಾರೆ. ಸುಮಾರು ಹದಿನೈದು ನಿಮಿಷಗಳ ಕಾಲದ ಸಫಾರಿ ಮಕ್ಕಳಿಗಂತೂ ಮರೆಯಲಾಗದ ಅನುಭವ!
ಗಂಡು ಹಾಗೂ ಹೆಣ್ಣು ಎರಡರಲ್ಲೂ ಕೋಡು ಬೆಳೆಯುತ್ತವೆ. ಗಂಡು ಹಿಮಸಾರಂಗಗಳಿಗೆ ಪ್ರತಿಸ್ಪರ್ಧಿಯಾದ ಬೇರೆ ಗಂಡುಗಳೊಂದಿಗೆ ಸೆಣೆಸಾಡಿ ಸಂಗಾತಿಯನ್ನು ತನ್ನೊಟ್ಟಿಗಿಡಲು ಕೋಡು ಬೆಳೆಯುತ್ತದೆ. ಒಮ್ಮೆ ಸಂತಾನೋತ್ಪತ್ತಿಯ ಕಾಲ ಮುಗಿದ ನಂತರ ಕೋಡು ಉದುರಿಹೋಗುತ್ತದೆ. ಮತ್ತೆ ಫೆಬ್ರವರಿಯಿಂದ ಬೆಳೆಯುತ್ತದೆ. ಆದರೆ ಹೆಣ್ಣಿಗೆ ಹಾಗಲ್ಲ. ಹೆಣ್ಣಿಗೆ ತನ್ನ ಮರಿಗಳನ್ನು ಒಂದು ವರ್ಷ ತನ್ನ ಜೊತೆಯೇ ಕಾಪಾಡಿಕೊಳ್ಳಲು ಕೋಡು ಬೇಕಾಗಿರುವುದರಿಂದ, ಅವುಗಳಿಗೆ ಮರಿಗಳು ದೂರಾಗುವವರೆಗೂ ಕೋಡು ಉದುರುವುದಿಲ್ಲ. ಪ್ರಕೃತಿ ಸೃಷ್ಠಿಯ ಲೀಲೆಯ ಮುಂದೆ ನಾವೆಷ್ಟು ಸಣ್ಣವರು ಅಲ್ಲವೇ? ಪ್ರತಿದಿನ ಸರಿ ಸುಮಾರು ಎರಡು ಸೆ. ಮೀ. ನಷ್ಟು ಕೋಡು ಬೆಳೆಯುತ್ತದೆ ಎಂದು ನಮ್ಮ ಗೈಡ್ ಹೇಳಿದ ನೆನಪು.
ಈ ಫಾರ್ಮ್‌ಗಳನ್ನು ನಡೆಸುತ್ತಿರುವ ಜನಗಳನ್ನು ನೋಡಿದರೆ ನಾವೇ ಪುಣ್ಯವಂತರು ಎನ್ನಬೇಕು. ಅಹಿತಕರ ವಾತಾವರಣ, ಬೇಸಿಗೆಯ ಸೊಳ್ಳೆಯ ಕಾಟ, ಎಲ್ಲೆಲ್ಲೋ ಚದುರಿರುವ ಪ್ರಾಣಿಗಳನ್ನು ಹುಡುಕಿ ತರುವುದು ಇತ್ಯಾದಿ. ಒಂದೇ ಎರಡೇ! ದೇಶ ಸುತ್ತುವುದರಿಂದ ಕೋಶ ಓದಿದಂತೆ ಎಂದು ಮಾತ್ರ ತಿಳಿದಿದ್ದ ನನಗೆ ದೇಶ ಸುತ್ತುವುದರಿಂದ ನನ್ನ ನಿತ್ಯ ಜೀವನದ ಜಿಗುಪ್ಸೆ ಕೂಡ ದೂರವಾದ ಅನುಭವ ಲ್ಯಾಪ್ಲ್ಯಾಂಡ್ ಕೊಟ್ಟಿತು.
ಹಸ್ಕಿ ಸಫಾರಿ
ಲ್ಯಾಪ್ಲ್ಯಾಂಡ್ ಪ್ರದೇಶದ ಇನ್ನೊಂದು ಆಕರ್ಷಣೆ ಹಸ್ಕಿ ನಾಯಿಗಳ ಸಫಾರಿ. ಇಲ್ಲಿಯೂ ಇಂತಿಷ್ಟು ಪ್ರವೇಶ ಶುಲ್ಕ ಪಡೆಯುತ್ತಾರೆ. ಹಿಮಸಾರಂಗಗಳ ಸಫಾರಿ ಬಲು ನಿಧಾನ. ಆದರೆ ಹಸ್ಕಿಗಳ ಸಫಾರಿ ಬಲು ವೇಗ. ಅವುಗಳಿಗೆ ಓಡುವುದು ನೆಚ್ಚಿನ ಆಟ. ತನ್ನ ಯಜಮಾನ ಸನ್ನೆ ಕೊಟ್ಟ ಕೂಡಲೇ ಓಡುತ್ತಾ ಓಡುತ್ತಾ ತಮ್ಮ ಹಿಂದೆ ಕಟ್ಟಿದ ದಿಬ್ಬಗಳಲ್ಲಿ ಕೂತಿರುವ ಮಾನವರಿಗೂ ಥ್ರಿಲ್ ನೀಡುತ್ತವೆ. ಈ ಜಾತಿಯ ನಾಯಿಗಳು ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡಿವೆ. ಅಲ್ಲಿನ ಗೈಡ್ ಪ್ರಕಾರ ಹಸ್ಕಿಗಳು ಹೆಚ್ಚೆಂದರೆ ಹತ್ತು ಡಿಗ್ರಿವರೆಗೂ ತಾಪಮಾನವನ್ನು ತಡೆದುಕೊಳ್ಳಬಹುದಂತೆ. ಅದಕ್ಕಿಂತ ಉಷ್ಣ ಹೆಚ್ಚಾದರೆ ಅವಕ್ಕೆ ಬೇಸಿಗೆ! ನಮ್ಮ ಬೆಂಗಳೂರಿನಲ್ಲಿ ಹಲವಾರು ಹಸ್ಕಿ ನಾಯಿಗಳನ್ನು ನೋಡಿದ್ದೇನೆ. ಅದೇ ಹೊಂದಿಕೊಂಡಿದೆಯೋ ಅಥವಾ ನಾವು ಅದರ ದೇಹ ಪ್ರಕೃತಿಯ ಗಡಿಯನ್ನು ಪರೀಕ್ಷಿಸುತ್ತಿದ್ದೇವೆಯೋ ಗೊತ್ತಿಲ್ಲ.
ಮುಂದೆ ಕಟ್ಟಿರುವ ಎರಡು ನಾಯಿಗಳಿಗೆ “ಗೈಡರ್ಸ್” ಎಂದು ಕರೆಯುತ್ತಾರೆ. ಅವು ವಾಹನದ ದಿಕ್ಕುಗಳನ್ನು ನಿರ್ಧರಿಸಿ, ನಿಭಾಯಿಸುವ ಪಳಗಿದ ನಾಯಿಗಳು. ಇವುಗಳ ಹಿಂದೆ ಕಟ್ಟಿರುವವು ಗೈಡರ್ಸ್ ದಿಕ್ಕನ್ನು ಹಿಂಬಾಲಿಸುತ್ತಾ ವೇಗ ಹೆಚ್ಚಿಸುವ ನಾಯಿಗಳು. ಒಟ್ಟಾರೆ ಹಸ್ಕಿ ಸಫಾರಿ ಒಂದು ರೋಚಕ ಅನುಭವ. ಇನ್ನೊಂದು ತಮಾಷೆಯ ವಿಷಯವೆಂದರೆ, ಓಡುವಾಗ ಕೆಲವು ಹಸ್ಕಿಗಳು ಹಿಮವನ್ನು ತಿನ್ನುತ್ತಿದ್ದವು. ಆಮೇಲೆ ತಿಳಿದ ಮಾಹಿತಿಯೆಂದರೆ, ಅವಕ್ಕೆ ದೇಹದ ಉಷ್ಣಾಂಶ ಹೆಚ್ಚಾದಾಗ ಹಾಗೆ ಹಿಮವನ್ನು ಹಿಡಿಹಿಡಿಯಾಗಿ ತಿನ್ನುತ್ತವೆಯಂತೆ. ಒಂದು ಸರದಿ ಓಡಿ ಬಂದು ನಿಲ್ಲಿಸಿ ಕೂತಿರುವವರನ್ನು ಇಳಿಸಿ ಮತ್ತೊಬ್ಬರನ್ನು ಹತ್ತಿಸಿಕೊಳ್ಳುವುದು ಸ್ವಲ್ಪ ತಡವಾದರೂ, ಎಲ್ಲ ನಾಯಿಗಳು ಸೇರಿ ಊಳಿಡಲು ಪ್ರಾರಂಭಿಸುತ್ತವೆ. “ಚಳಿ ಆಗುತ್ತಿದೆ, ಓಡಬೇಕು” ಎನ್ನುವುದು ಅದರ ಸಂಕೇತವಂತೆ.
ಲ್ಯಾಪ್ಲ್ಯಾಂಡ್ ಪ್ರವಾಸದ ಕೊನೆಯ ಕಂತು ಮುಂದಿನ ಸಂಚಿಕೆಯಲ್ಲಿ. ಇಲ್ಲಿಯ ಪ್ರಕೃತಿ ವಿಸ್ಮಯ “ಅರೋರಾ” ಬಗ್ಗೆ ತಿಳಿಸುತ್ತೇನೆ. ಅದೊಂದು ಅವಿಸ್ಮರಣೀಯ, ಅತ್ಯಪರೂಪದ ಕ್ಷಣ. ಅಲ್ಲಿಯವರೆಗೂ ಕಾಯುತ್ತೀರಿ ಆಲ್ವಾ?
(ಲಾಪ್ಲ್ಯಾಂಡ್ ಪ್ರವಾಸದ ಹಳೆಯ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ)
(ಮುಂದುವರೆಯುವುದು)
(ಫೋಟೋಗಳು: ಲೇಖಕರವು)
ಮೂಲತಃ ದಾವಣಗೆರೆಯವರಾದ ಗುರುದತ್ ಸಧ್ಯ ಜೆರ್ಮನಿಯ ಕಾನ್‌ಸ್ಟೆನ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೋಟೋಗ್ರಫಿ, ಪ್ರವಾಸ, ಚಾರಣ, ಪುಸ್ತಕಗಳ ಓದು ಇವರ ಹವ್ಯಾಸಗಳು..
ಈ ಹಿಮಮಣಿದರ್ಶನಂ ವಲಂ ಸ್ವರ್ಗಸದೃಶಂ, ವಂದಿಪೆಂ ಗುರುದತ್ತ ಮಹೋದಯಂ.
ಇನ್ನೇನು ಅರೋರ ದರ್ಶನಕ್ಕೆ ಕೊನೆಯ ಬಾಗಿಲು ತೆರಯಬೇಕಿದೆ ಅಷ್ಟೆ, ಅಲ್ಲವೇ? ಕಗ್ಗತ್ತಲಿನಲಿ ತೋರುವ ಪ್ರಕೃತಿಯ ಅದ್ಭುತ ಚಮತ್ಕಾರವ ಎದುರುನೋಡುತ್ತ…
ತುಂಬಾ ಚೆನ್ನಾಗಿದೆ. ವಿಶ್ವದ ಅತ್ಯಂತ ಆಸಕ್ತಿದಾಯಕ ಸ್ಥಳವನ್ನು ನಮಗೆ ಹಂಚಿಕೊಂಡಿದ್ದಕ್ಕಾಗಿ ಗುರುದತ್ ಅವರಿಗೆ ಧನ್ಯವಾದಗಳು. ಎಲ್ಲವನ್ನೂ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಲ್ಯಾಪ್‌ಲ್ಯಾಂಡ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದಿನ ಲೇಖನಕ್ಕಾಗಿ ನಾವು ಕಾಯುತ್ತಿದ್ದೇವೆ.
Mr amrutapur has given a wonderful North pole safari with wonderful minute explanations. It is a real journey over there without actually going there.
ತುಂಬ ವಿವರಣೆ ಸಹಿತವಾಗಿ ಹಿಮಸಾರಂಗ ಹಾಗೂ ಹಸ್ಕಿ ನಾಯಿಗಳ ಬಗ್ಗೆ ಬರೆದಿರುವುದು ವಿಷಯ ತಿಳಿಯಲು ಅನುಕೂಲವಾಯ್ತು.
ಎಂತಹ ವಾತಾವರಣದಲ್ಲೂ ಕೆಲ ಪ್ರಾಣಿಗಳ ಉಳಿವು ವಿಶೇಷ. ಸೊಳ್ಳೆಯಿಂದಾಗುವ ಉಪಯೋಗ ಕೂಡ ಸೋಜಿಗವೆನಿಸಿತು. ಒಟ್ಟಾರೆ ಲೇಖನ ಚನ್ನಾಗಿದೆ. ಧನ್ಯವಾದ ಗುರುದತ್ತ
ಹಿಮಸಾರಂಗ ಹಾಗೂ ಹಸ್ಕಿಯ ಬಗ್ಗೆ ತುಂಬಾ ಅದ್ಬುತವಾದ ಬರವಣಿಗೆ. ಓದುವಾಗ ನಾನೇ ನನ್ನ ಕಣ್ಣೆದುರೇ ನೋಡುತ್ತಿರುವ ಅನುಭವವಾಯಿತು. ಇದುವರೆಗೂ ನಾನು ಈ ಪ್ರಾಣಿಗಳ ಬಗ್ಗೆ ಓದಿದ ಬರವಣಿಗೆಗಳಿಗಿಂತ ಜಾಸ್ತಿ ತಿಳಿದುಕೊಂಡ ಅನುಭವವಾಯಿತು. ಗುರುದತ್ ಅಮೃತಾಪುರ ಅವರಿಗೆ ನನ್ನ ಧನ್ಯವಾದಗಳು.
ಇನ್ನು ಮುಂದಿನ ಸಂಚಿಕೆಯಲ್ಲಿ ಅರೋರ ದರ್ಶನಕ್ಕಾಗಿ ನಾನು ಕಾಯುತ್ತಿದೇನೆ.
Tumbaa chennagide varnane.
Tumbaa chennagi moodibandide