ಅದೆಷ್ಟೋ ಆಸ್ಟ್ರೇಲಿಯನ್ನರಿಗೆ ಮೇ ಮೂರರ ಶನಿವಾರ ರಾತ್ರಿ ಜಾಗರಣೆ ಆಯ್ತೆಂದು ಕಾಣುತ್ತದೆ. ಚುನಾವಣಾ ಫಲಿತಾಂಶದ ಮುಖ್ಯ ಅಂಶಗಳು ಗೊತ್ತಾಗಿತ್ತು. ಲೇಬರ್ ಪಕ್ಷ ಮುನ್ನಡೆ ಸಾಧಿಸಿತ್ತು. ವಿಜಯೋತ್ಸಾಹದ ಮುಖ ಹೊತ್ತು ಬೀಗುತ್ತಾ ಪ್ರಧಾನಿ ಆಲ್ಬಾನೀಸಿ ಮಾಧ್ಯಮಗಳ ಮುಂದೆ ಎದೆಯುಬ್ಬಿಸಿಕೊಂಡು ನಿಂತು ಆಸ್ಟ್ರೇಲಿಯನ್ನರಿಗೆ ಧನ್ಯವಾದ ಹೇಳಿದರು. ಅವರ ಮುಖದಲ್ಲಿ, ನಡೆ-ನುಡಿಗಳಲ್ಲಿ ಆತ್ಮವಿಶ್ವಾಸ ಮತ್ತು ತುಂಬು ಧೈರ್ಯ ಎದ್ದು ಕಾಣುತ್ತಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಎರಡು ಶನಿವಾರಗಳ ಹಿಂದೆ, ಮೇ ಮೂರನೇ ತಾರೀಕು ‘ಆಸ್ಟ್ರೇಲಿಯಾ ಪತ್ರ’ದಲ್ಲಿ ಅಂದು ನಡೆಯುತ್ತಿದ್ದ ಚುನಾವಣೆಯ ಬಗ್ಗೆ ಬರೆದಿದ್ದೆ. ನಾನೂ ಕೂಡ ಪ್ರಪ್ರಥಮ ಬಾರಿ ಫೆಡೆರಲ್ ಚುನಾವಣೆಯಲ್ಲಿ ಭಾಗವಹಿಸಿ, ಮತ ಹಾಕಿ, ಫೋಟೋಗಳನ್ನು ತೆಗೆದುಕೊಂಡು ಅವು ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದ್ದವು. ಅಂದು ರಾತ್ರಿಯೇ ಮತಗಳ ಎಣಿಕೆ ನಡೆಯುತ್ತಿದ್ದಾಗ ಆಸ್ಟ್ರೇಲಿಯನ್ ಪ್ರಜೆಗಳ ನಿರ್ಣಯವು ನಿಚ್ಚಳವಾಗಿತ್ತು. ಪ್ರಜೆಗಳು ಅಂತೋನಿ ಆಲ್ಬಾನೀಸಿ ನೇತೃತ್ವದ ಸರಕಾರದ ಮೇಲೆ ಇನ್ನೂ ಹೆಚ್ಚಿನ ನಂಬಿಕೆಯಿಟ್ಟು ಅವರನ್ನು ಎರಡನೇ ಬಾರಿ ಆರಿಸಿದ್ದರು. ಲೇಬರ್ ಪಕ್ಷಕ್ಕೆ ಭರ್ಜರಿ ವಿಜಯ ಒಲಿದಿತ್ತು. ಜನರ ಆಯ್ಕೆಯಲ್ಲಿ ಸಂಶಯದ ವಾಸನೆಯೇ ಇರಲಿಲ್ಲ. ಅದಕ್ಕೆ ಪುರಾವೆ ಇರುವುದು ಈ ಸ್ಥಾನ ಎಣಿಕೆಯಲ್ಲಿ – ಲೇಬರ್ ಪಕ್ಷವು ೯೩ ಸಂಸತ್ ಸ್ಥಾನಗಳನ್ನು (ಎಂಪಿ) ಗೆದ್ದಿದೆ. ಇವರ ಎದುರಾಳಿಯಾಗಿದ್ದ ಲಿಬರಲ್ ಪಕ್ಷಕ್ಕೆ ೪೪ ಸ್ಥಾನಗಳು ಸಿಕ್ಕಿವೆ. ಈ ಬಾರಿ ಇಂಡಿಪೆಂಡೆಂಟ್/ ಸ್ವತಂತ್ರ ಅಭ್ಯರ್ಥಿಗಳು ಗಮನ ಸೆಳೆದಿದ್ದು, ೯ ಸ್ಥಾನಗಳನ್ನು ಪಡೆದು ಪಾರ್ಲಿಮೆಂಟ್ ಪ್ರವೇಶಿಸಿದ್ದಾರೆ. ಗ್ರೀನ್ಸ್ ಪಕ್ಷ ಒಂದೇ ಒಂದು ಸ್ಥಾನ ಗಳಿಸಿ ಬಹು ಚರ್ಚೆಗೀಡಾಗಿದೆ.
ಅದೆಷ್ಟೋ ಆಸ್ಟ್ರೇಲಿಯನ್ನರಿಗೆ ಮೇ ಮೂರರ ಶನಿವಾರ ರಾತ್ರಿ ಜಾಗರಣೆ ಆಯ್ತೆಂದು ಕಾಣುತ್ತದೆ. ಚುನಾವಣಾ ಫಲಿತಾಂಶದ ಮುಖ್ಯ ಅಂಶಗಳು ಗೊತ್ತಾಗಿತ್ತು. ಲೇಬರ್ ಪಕ್ಷ ಮುನ್ನಡೆ ಸಾಧಿಸಿತ್ತು. ವಿಜಯೋತ್ಸಾಹದ ಮುಖ ಹೊತ್ತು ಬೀಗುತ್ತಾ ಪ್ರಧಾನಿ ಆಲ್ಬಾನೀಸಿ ಮಾಧ್ಯಮಗಳ ಮುಂದೆ ಎದೆಯುಬ್ಬಿಸಿಕೊಂಡು ನಿಂತು ಆಸ್ಟ್ರೇಲಿಯನ್ನರಿಗೆ ಧನ್ಯವಾದ ಹೇಳಿದರು. ಅವರ ಮುಖದಲ್ಲಿ, ನಡೆ-ನುಡಿಗಳಲ್ಲಿ ಆತ್ಮವಿಶ್ವಾಸ ಮತ್ತು ತುಂಬು ಧೈರ್ಯ ಎದ್ದು ಕಾಣುತ್ತಿತ್ತು. ೨೦೨೨ರ ಮೇ ತಿಂಗಳಲ್ಲಿ ಲೇಬರ್ ಪಕ್ಷ ಗೆದ್ದು ಅವರು ಮೊದಲ ಬಾರಿ ಪ್ರಧಾನಿಯಾದಾಗ ಅಳುಕು, ಚಿಂತೆ ಕಂಡಿತ್ತು. ತಮ್ಮ ಪಕ್ಷ ಮತ್ತು ತಾನು ಕೊಟ್ಟಿದ್ದ ಆಶ್ವಾಸನೆಗಳನ್ನು, ಭರವಸೆಗಳನ್ನು ಈಡೇರಿಸುವ ದೊಡ್ಡ ಜವಾಬ್ದಾರಿ ಹೊತ್ತು ಸರಕಾರವನ್ನು ಮುನ್ನಡೆಸುವ ಚಾಲೆಂಜ್ ಅವರ ಮುಂದಿತ್ತು.
ಆದರೆ ಈ ಬಾರಿಯ ಭರ್ಜರಿ ಜಯದಿಂದ ಅವರಿಗೆ ತಮ್ಮ ನಾಯಕತ್ವದ ಬಗ್ಗೆ ಹೆಚ್ಚು ಸ್ಪಷ್ಟತೆ ಸಿಕ್ಕಿದೆ. ತಮ್ಮ ವಿಜಯ-ಭಾಷಣದಲ್ಲಿ ಅವರು ಜವಾಬ್ದಾರಿಯಿಂದ ಮಾತನಾಡಿದರು. ತಮ್ಮ ಮುಂದಿರುವ ಗುರಿಗಳ ಬಗ್ಗೆ ಇರುವ ಖಚಿತತೆ, ತಮ್ಮ ಪಕ್ಷದ ಇತರ ಮುಖಂಡರ ಬೆಂಬಲ ಮತ್ತು ಅವರ ಪಳಗಿದ ಅನುಭವದ ಉಪಯೋಗ, ಇನ್ನೂ ಶ್ರಮವಹಿಸಿ ಕೆಲಸ ಮಾಡುವ ಇರಾದೆ, ಯು.ಕೆ. ಮತ್ತು ಯು. ಎಸ್. ಎ ಗಳಿಗೆ ಆತುಕೊಳ್ಳದೆ ಆಸ್ಟ್ರೇಲಿಯಾವನ್ನು ಜಾಗತಿಕ ಮಟ್ಟದಲ್ಲಿ ನಿಲ್ಲಿಸುವ ಇಚ್ಛೆ ಮುಂತಾಗಿ ಹೇಳಿದರು. ಪ್ರಧಾನಿ ಆಲ್ಬಾನೀಸಿ ಅವರು ‘ಆಸ್ಟ್ರೇಲಿಯಾ ಎಂದೆಂದಿಗೂ ಗ್ರೇಟ್ ಕಂಟ್ರಿ. ನಮ್ಮ ದೇಶವನ್ನು ‘ಪುನಃ ‘ ಗ್ರೇಟ್ ಮಾಡುವ ಅಗತ್ಯ ಇಲ್ಲ. ಅದೇನೂ ಹಳಿ ತಪ್ಪಿಲ್ಲ. ಅದನ್ನು ಯಾವ track ನಲ್ಲೂ ಹಿಡಿದಿಡುವ ಸನ್ನಿವೇಶವಿಲ್ಲ. ಹಿಂದೆಯೂ, ಇಂದಿಗೂ, ಮುಂದೆಯೂ ಅದು ಗ್ರೇಟ್ ಆಗಿಯೇ ಇರುತ್ತದೆ’ ಅಂದಾಗ ಬಹುತೇಕರಿಗೆ ಇದು ಸರಿಯಾದ ಮಾತು ಎಂದು ಅನಿಸಿತ್ತು.
ಆಲ್ಬಾನೀಸಿ ಅವರ ಮಾತುಗಳು ವಿರೋಧಪಕ್ಷದ ನಾಯಕರ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಇತ್ತೆಂದು ಎಲ್ಲರಿಗೂ ಗೊತ್ತು. ಪ್ರಚಾರದ ಸಮಯದಲ್ಲಿ ವಿರೋಧಪಕ್ಷದ ನಾಯಕ ಪೀಟರ್ ಡಟ್ಟನ್ ಹೇಳಿದ್ದು ‘ಪುಟ್ ಆಸ್ಟ್ರೇಲಿಯಾ ಬ್ಯಾಕ್ ಆನ್ ಟ್ರ್ಯಾಕ್’ ಎಂದು. ಇದನ್ನು ಹಲವಾರು ವಲಯಗಳಲ್ಲಿ ಪ್ರಶ್ನಿಸಲಾಗಿತ್ತು. ಡಟ್ಟನ್ ತಾವು ಅಮೆರಿಕೆಯ ಟ್ರಂಪ್ ಶೈಲಿಯನ್ನು ಅನುಸರಿಸುವುದಾಗಿ ಹೇಳುತ್ತಾ, ತಾನು ಗೆದ್ದುಬಂದು ಪ್ರಧಾನಿಯಾದರೆ ಅಮೆರಿಕೆಯ ಅಧ್ಯಕ್ಷ ಟ್ರಂಪ್ ತಂದಿರುವ ಕೆಲ ಅತಿರೇಕದ ಕ್ರಮಗಳನ್ನು ತಾವೂ ಕೂಡ ಆಸ್ಟ್ರೇಲಿಯಾದಲ್ಲಿ ತರುತ್ತೀನೀ ಎಂದಿದ್ದರು. ಈ ಮಾತುಗಳು ಅಲ್ಲೋಲಕಲ್ಲೋಲವನ್ನುಂಟು ಮಾಡಿತ್ತು.
ಲಿಬರಲ್ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಮತ್ತು ಬರೋಬ್ಬರಿ ಇಪ್ಪತ್ತೈದು ವರ್ಷಗಳ ಕಾಲ Dickson ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಪೀಟರ್ ಡಟ್ಟನ್ ಚುನಾವಣೆಯಲ್ಲಿ ಸೋತಿದ್ದು ಇತಿಹಾಸವಾಗಿತ್ತು. ಈ ಇತಿಹಾಸ ಬರೆದ ಘಳಿಗೆ ಎಷ್ಟೊಂದು ಜನರಿಗೆ ಮುಖ್ಯವಾಗಿತ್ತು, ಅದಕ್ಕಾಗಿ ಅವರೆಲ್ಲಾ ಅದೆಷ್ಟು ಕಾತುರದಿಂದ ಕಾದಿದ್ದರು ಎನ್ನುವುದು ಬಹಿರಂಗವಾಗಿ ಜನಜನಿತವಾಗಿತ್ತು. ‘ವೀ ಆರ್ ಪಾರ್ಟ್ ಆಫ್ ದಿಸ್ ಹಿಸ್ಟಾರಿಕ್ ಮೊಮೆಂಟ್’ ಎಂದು ಅನೇಕರು ಬಹಿರಂಗವಾಗಿಯೇ ಹೇಳುತ್ತಾ ವಿಜಯಾಚರಣೆ ಮಾಡಿದ್ದು ಬಹಳ ಗಮನ ಸೆಳೆದಿತ್ತು.
ಇದಕ್ಕೆಲ್ಲಾ ಇನ್ನಷ್ಟು ಮಸಾಲೆ ಸೇರಿಸಿ ಡಟ್ಟನ್ ಸೋಲು ರಂಜನೀಯವಾಗಿದ್ದು ಅಮೆರಿಕೆಯ ಅಧ್ಯಕ್ಷ ಟ್ರಂಪ್ ಹೇಳಿದ ಮಾತು. ಮಾಧ್ಯಮದವರು ಆಸ್ಟ್ರೇಲಿಯನ್ ಚುನಾವಣೆ ಬಗ್ಗೆ ಅವರನ್ನು ಕೇಳಿದಾಗ ಟ್ರಂಪ್ ಹೇಳಿದ್ದು, ‘ಹೌದು, ಈ ಹೊಸ ಆಸ್ಟ್ರೇಲಿಯನ್ ಪ್ರಧಾನಿಯನ್ನು ನಾನು ಹಿಂದೆ ಭೇಟಿಯಾಗಿದ್ದೀನಿ. ಹೀ ಈಸ್ ಎ ನೈಸ್ ಗೈ. ಆ ಇನ್ನೊಬ್ಬ ವ್ಯಕ್ತಿ ಯಾರೋ ನನಗೆ ಗೊತ್ತಿಲ್ಲ. ಐ ಡೋಂಟ್ ನೊ ದಟ್ ಗೈ.’ ಈ ಟ್ರಂಪ್ ಮಾತು ಆಸ್ಟ್ರೇಲಿಯಾದಲ್ಲಿ ನಗೆ ಚೆಲ್ಲಿಸಿ ದೊಡ್ಡ ಜೋಕ್ ಆಗಿದೆ.
ಡಟ್ಟನ್ ವಿರುದ್ಧ ಕಳೆದೆರಡು ಬಾರಿ ಸ್ಪರ್ಧಿಸಿ ಸೋತಿದ್ದ ಅಲಿ ಫ್ರಾನ್ಸ್ ಈ ಬಾರಿ, ಮೂರನೇ ಪ್ರಯತ್ನದಲ್ಲಿ, ಜಯ ಗಳಿಸಿದ್ದು ಅವರಿಗೆ ವೈಯಕ್ತಿಕವಾಗಿ ಭಾರಿ ಸಂತೋಷವಾಗಿದೆ. ತಾನು ಜೀವನದಲ್ಲಿ ಸಾಕಷ್ಟು ಕಷ್ಟವುಂಡಿದ್ದು, ಸಾಮಾನ್ಯ ಜನರ ನೋವುನಲಿವು ತನಗೆ ಚೆನ್ನಾಗಿ ಗೊತ್ತು ಎನ್ನುವ ಅಲಿ ಫ್ರಾನ್ಸ್ ಇತ್ತೀಚೆಗೆ ತಮ್ಮೊಬ್ಬ ಮಗನನ್ನು ಕಳೆದುಕೊಂಡರು. ‘ಎಲ್ಲರೂ ನನಗೆ ಪೀಟರ್ ಡಟ್ಟನ್ ಬಹಳ ಶ್ರೀಮಂತ, ಪ್ರಭಾವಶಾಲಿ ವ್ಯಕ್ತಿ, ದಶಕಗಳಿಂದ ತನ್ನ ಕ್ಷೇತ್ರದ ಅನಭಿಷಕ್ತ ದೊರೆ, ಅವರನ್ನು ಎದುರಿಸುವುದು ಅಸಾಧ್ಯ ಎಂದೆಲ್ಲಾ ಹೇಳುತ್ತಿದ್ದರು. ಆಗೆಲ್ಲಾ ನಾನು ನಮ್ಮದು ಪ್ರಜಾಪ್ರಭುತ್ವವಿರುವ ದೇಶ. ನಾವು ಸಾಮಾನ್ಯ ಜನರು ಈ ದೇಶಕ್ಕಾಗಿ ದುಡಿಯುವವರು. ನಮ್ಮ ದನಿ ಎಲ್ಲರಿಗೂ ಕೇಳಬೇಕು’ ಎಂದುಕೊಂಡು ಧೈರ್ಯ ತಂದುಕೊಳ್ಳುತ್ತಿದ್ದೆ. ಹೋದ ಬಾರಿಯ ಚುನಾವಣೆಯಲ್ಲಿ ಸೋತರೂ ಡಟ್ಟನ್ ಅವರಿಗೆ ಚೆನ್ನಾದ ಪೈಪೋಟಿ ಕೊಟ್ಟಿದ್ದೆ. ಅದೂ ಕೂಡ ಧೈರ್ಯ ತಂದಿತ್ತು. ಈ ಬಾರಿ ನನ್ನದು ಕಡೆಯ ಪ್ರಯತ್ನ, ನನ್ನ ಮಗನಿಗಾಗಿ ಎಂದುಕೊಂಡು ಸ್ಪರ್ಧಿಸಿದೆ. ಗೆದ್ದಿದ್ದು ಅತೀವ ಸಂತೋಷವಾಗಿದೆ’, ಎಂದು ಹೇಳುತ್ತಾ ಅಲಿ ಫ್ರಾನ್ಸ್ ಜನರಿಗೆ ಹತ್ತಿರವಾಗಿದ್ದಾರೆ. ಈಕೆ Dickson ಕ್ಷೇತ್ರವನ್ನು ಹೇಗೆಲ್ಲಾ ಸುಧಾರಿಸುತ್ತಾರೆ ಎನ್ನುವುದು ನಮ್ಮ ಪ್ರಶ್ನೆ. ಎಲ್ಲರಿಗೂ ಸಮನಾದ ನ್ಯಾಯ, ಎಲ್ಲರ ಹಕ್ಕುಗಳನ್ನು ಕಾಪಾಡುವುದು, ಮುಂತಾದ ವಿಷಯಗಳಲ್ಲಿ ಈಕೆ ಎಂತಹ ನಿಲುವು ಹೊಂದಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಬೇಕಿದೆ.
ಸುಮಾರು ಜನರಿಗೆ ನಿರಾಸೆ ತಂದಿದ್ದು ಗ್ರೀನ್ಸ್ ಪಕ್ಷದ ಹೀನಾಯ ಸೋಲು. ಯಾಕೋ ಈ ಬಾರಿಯ ಚುನಾವಣೆಯ ಸಿದ್ಧತೆಯಲ್ಲಿ, ಪ್ರಚಾರದಲ್ಲಿ ಗ್ರೀನ್ಸ್ ಪಕ್ಷದವರು ಹೆಚ್ಚಿನ ಉತ್ಸಾಹವನ್ನಾಗಲಿ, ಬದ್ಧತೆಯನ್ನಾಗಲಿ ತೋರಿಸಲಿಲ್ಲ. ಹಣದ ಕೊರತೆಯೋ, ಪಕ್ಷದಲ್ಲೇ ಒಳಜಗಳಗಳೋ, ಗ್ರೀನ್ಸ್ ಮೌಲ್ಯಗಳಲ್ಲಿ ತಾರತಮ್ಯವಿತ್ತೋ ಏನೋ – ಯಾವುದೂ ಸ್ಪಷ್ಟವಾಗಿಲ್ಲ.
ಬಹುಮತದಿಂದ ಗೆದ್ದಿರುವ ಲೇಬರ್ ಪಕ್ಷವು ತನ್ನ ಛಾಪನ್ನು, ಕೊಟ್ಟ ಆಶ್ವಾಸನೆಯನ್ನು ಉಳಿಸಿಕೊಳ್ಳುತ್ತದೆಯೇ, ಜಾಗತಿಕಮಟ್ಟದಲ್ಲಿ ಹೇಗೆಲ್ಲಾ ಆಸ್ಟ್ರೇಲಿಯಾದ ಅಸ್ಮಿತೆಯನ್ನು ಮೆರೆಸುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ. ಇದಕ್ಕೆ ಉತ್ತರವಾಗಿದೆ ಮೊನ್ನೆ ಇಂಡೋನೇಷ್ಯಾ ದೇಶಕ್ಕೆ ಭೇಟಿ ಕೊಟ್ಟ ಪ್ರಧಾನಿ ಆಲ್ಬಾನೀಸಿ ಅವರಿಗೆ ಅಲ್ಲಿ ಸಿಕ್ಕ ಅದ್ಧೂರಿ ಸ್ವಾಗತ ಮತ್ತು ಭವ್ಯ ಆತಿಥ್ಯ. ಅಲ್ಲಿಂದ ಮುಂದೆ ಪ್ರಧಾನಿ ಆಲ್ಬಾನೀಸಿ ಇಟಲಿಯ ವ್ಯಾಟಿಕನ್ ನಗರಕ್ಕೆ ಹೋಗಿ ಹೊಸ ಪೋಪ್ ಪಟ್ಟಕ್ಕೇರುವ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿ ಸೇರುವ ವಿಶ್ವನಾಯಕರನ್ನು ಭೇಟಿಯಾಗಿ, ಒಂದಷ್ಟು network ಮಾಡಿ ಆಸ್ಟ್ರೇಲಿಯಾ ಈಸ್ ಗ್ರೇಟ್ ಎನ್ನಲಿದ್ದಾರೆ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.