Advertisement
ಆಸ್ಟ್ರೇಲಿಯಾದ ಮತ್ತು ಬೆಂಗಳೂರ ಸಂತೆಗಳು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದ ಮತ್ತು ಬೆಂಗಳೂರ ಸಂತೆಗಳು: ವಿನತೆ ಶರ್ಮ ಅಂಕಣ

ಜೀಬೀ ಮತ್ತು ನಾನು ಆಹಾರಖಾದ್ಯಗಳನ್ನು ಸವಿದು ಖುಷಿಪಟ್ಟೆವು. ಕಬ್ಬಿನ  ಹಾಲು, ಕರಬೂಜ ಹಣ್ಣಿನ ಪಾನಕ, ನೀರು ಮಜ್ಜಿಗೆ, ಕೋಸಂಬರಿ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ, ಒಬ್ಬಟ್ಟು, ಎಲ್ಲವೂ ರುಚಿಯಾಗಿತ್ತು. ನಾನು ಆಸೆಪಟ್ಟ ಹಲಸಿನ ಹಣ್ಣು ಸಿಗಲಿಲ್ಲ. ಹಲಸಿನ ತೊಳೆಗಳನ್ನು ಕೊಳ್ಳಲು ಉದ್ದಾನುದ್ದ ಕ್ಯೂ ಇತ್ತು. ನನ್ನ ಸರದಿ ಬರುವಷ್ಟರಲ್ಲಿ ಹಣ್ಣು ಖಾಲಿ. ಮನಸ್ಸಿಗೆ ನಿರಾಸೆಯಾದರೂ, ಅಷ್ಟರಲ್ಲಿ ತುಂಬಿದ್ದ ಹೊಟ್ಟೆಗೇನೂ ನಿರಾಸೆಯಾಗಲಿಲ್ಲ. ಬಹುಕಾಲದ ಬಳಿಕ ತವರಿನಲ್ಲಿ ಸಂತೆಗೆ ಬಂದಿದ್ದು ಖುಷಿಯಾಗಿತ್ತು. ಚಿಕ್ಕದಾದರೂ ರಾಗಿ ಕಣ ಸಂತೆ ಚೊಕ್ಕವಾಗಿತ್ತು.
ಡಾ.
ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಅದೊಂದು ಸುಂದರ ಸಂಜೆ. ಟಾಸ್ಮೆನಿಯಾ ರಾಜ್ಯದ ರಾಜಧಾನಿ ಹೋಬಾರ್ಟ್ ನಗರದ ಹೃದಯಭಾಗವಾದ ಹಾರ್ಬರ್. ಅಲ್ಲಿನ ಪಾದಚಾರಿಗಳ ಮಾರ್ಗದಲ್ಲಿ ಅಂದು ಹರಡಿತ್ತು twilight markets. ಖುರ್ಚಿ ಮೇಜುಗಳು, ತರಾವರಿ ಮಳಿಗೆಗಳು, ತಿಂಡಿತಿನಿಸು, ಪಾನೀಯಗಳ ವ್ಯಾನ್‌ಗಳು. ಗಿಟಾರ್ ಹಿಡಿದಿದ್ದ ಹಾಡುಗಾರನೊಬ್ಬ. ಸಂತೆಯುದ್ದಕ್ಕೂ ಮಕ್ಕಳು, ತಾಯಿ-ತಂದೆಯರು, ಅಜ್ಜಿ-ಅಜ್ಜಂದಿರು, ಯುವಕ-ಯುವತಿಯರು ಹರಡಿದ್ದರು. ಉಲ್ಲಾಸದ ಕಲಾಪಗಳು ನಡೆಯುತ್ತಿದ್ದವು.

ನಾನು ಎದುರಿಗೆ ಶಾಂತವಾಗಿ ಹರಡಿದ್ದ ಅಚ್ಚ ನೀಲಿ ಸ್ಪಟಿಕ ಬಣ್ಣದ ಟ್ಯಾಸ್ಮನ್ ಸಮುದ್ರವನ್ನು ನೋಡುತ್ತಾ ಕೂತಿದ್ದೆ. ಗಿಟಾರ್ ನಾದಕ್ಕೆ ಆಗಾಗ ತಲೆ ದೂಗಿತ್ತು. ಸಾಗರದ ಮೇಲಿಂದ ಹಿತವಾದ ಬೆಚ್ಚಗಿನ ಗಾಳಿ ಬೀಸುತ್ತಿತ್ತು. ಬೆನ್ನ ಹಿಂದೆ ಪಶ್ಚಿಮದಲ್ಲಿ ರಸ್ತೆ, ಕಟ್ಟಡಗಳು ಆವರಿಸಿದ್ದರೂ ತಲೆ ಎತ್ತಿ ಗಂಭೀರವಾಗಿ ಸಮುದ್ರವನ್ನು ದಿಟ್ಟಿಸುತ್ತಾ ನಿಂತಿದ್ದು Kunanyi ಬೆಟ್ಟ (Mount Wellington). ಬೆಟ್ಟದ ಹಿಂದೆ ಸೂರ್ಯ ಇಳಿಯುತ್ತಿದ್ದ. ಕೈಯಲ್ಲಿ ಹಿಡಿದಿದ್ದ ಗ್ಲಾಸಿನಲ್ಲಿ ಲೆಮೊನೇಡ್ ಮಿಶ್ರಿತ ಸ್ಥಳೀಯ Tasmanian ರಮ್. ಪಕ್ಕದಲ್ಲಿದ್ದ ಜೀಬೀ ಮೇಡ್ ಇನ್ ಟಾಸ್ಮೆನಿಯಾ ಬಿಯರ್ ಹೀರುತ್ತಿದ್ದರು. ಆ ಕಡೆ ಕೂತಿದ್ದ ಮಹಿಳೆ ಮುಗುಳ್ನಗುತ್ತಾ ಹಾಡುಗಳಿಗೆ ಮೈ ಅಲ್ಲಾಡಿಸುತ್ತಿದ್ದರು. ಆಹ್ಲಾದ ವಾತಾವರಣದಲ್ಲಿ ಶಾಂತಿ ಭಾವವಿತ್ತು. ಆಕಾಶದಲ್ಲಿ ಕಪ್ಪು ಮೋಡಗಳು ಇಣುಕುತ್ತಾ, ರಸಭಂಗ ಮಾಡಲು ಹಿಂದೇಟು ಹೊಡೆಯುತ್ತಿದ್ದವು. ಆ ಸಂಜೆ ನಮ್ಮದಾಗಿತ್ತು.

ಆ ದಿನ ಹಾರ್ಬರ್ ಪ್ರದೇಶದಲ್ಲಿ twilight markets-ಸಂಜೆ ಸಂತೆ ಜರುಗುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ವರ್ಷಪೂರ್ತಿ ನಗರದ ಬೇರೆಬೇರೆ ಜಾಗಗಳಲ್ಲಿ ಶುಕ್ರವಾರದಂದು ನಡೆಯುವ ಸಂತೆ ಅಂದು ಅಲ್ಲಿದ್ದಿದ್ದು ನಮಗೊಂದು ವಿಶೇಷ ಅವಕಾಶವಾಗಿತ್ತು. ಆಸ್ಟ್ರೇಲಿಯಾದ ಪೂರ್ವತೀರದ ನಗರಗಳಲ್ಲಿ, ಪಟ್ಟಣಗಳಲ್ಲಿ ಯಾವಾಗಲೂ ಸಂತೆ ನಡೆಯುತ್ತದೆ. ಹೆಚ್ಚಾಗಿ ವಾರಾಂತ್ಯದಲ್ಲಿ. ಕೆಲವು ಕಡೆ ವಾರದ ಮಧ್ಯೆಯೂ, ವೊಲೊಂಗೊಂಗ್ ಪಟ್ಟಣ, ಸಿಡ್ನಿ, ಮೆಲ್ಬೋರ್ನ್ ಮತ್ತು ಬ್ರಿಸ್ಬೇನ್ ನಗರಗಳಲ್ಲಿ ನಾವು ಹಲವಾರು ಸಂತೆಗಳಿಗೆ ಹೋಗಿದ್ದೀವಿ. ಅವಲ್ಲದೆ, ನಾವು ಪ್ರವಾಸ ಹೋದೆಡೆಯೆಲ್ಲಾ ಸಂತೆ ನೋಡುವ ಅವಕಾಶ ಸಿಕ್ಕಿದರೆ ಅದನ್ನು ತಪ್ಪಿಸಿಕೊಳ್ಳುವುದಿಲ್ಲ. ಒಂದೊಂದು ಸಂತೆಯೂ ಆಯಾ ಸ್ಥಳದ, ಅಲ್ಲಿನ ಜನರ, ಜನಜೀವನದ ಕನ್ನಡಿಯಂತೆ ಕಾಣುತ್ತದೆ.

ವಾರಾಂತ್ಯದ ಸಂತೆ ಎಂದರೆ ನನಗೆ ಇಷ್ಟ. ನಿಮಗೆ ಗೊತ್ತಿದೆಯಲ್ಲ, ಸಂತೆ ಅಂದರೆ ಅಲ್ಲೊಂದು ಸಣ್ಣ ಪ್ರಪಂಚವೇ ಮೈತಳೆಯುತ್ತದೆ. ಮಾರಾಟಕ್ಕೆ ಇಡುವ, ಸಿಗುವ ಬಗೆಬಗೆ ವಸ್ತುಗಳು, ತರಕಾರಿ-ಹಣ್ಣುಗಳು, ತಿಂಡಿತಿನಿಸು, ಒಂದಷ್ಟು ಮನರಂಜನೆ, ಅದೇನೇನೋ ಇರುತ್ತದೆ. ಸಂತೆಯೆಂದರೆ ಅದೊಂದು ವಿಶಿಷ್ಟ ಪ್ರಪಂಚ. ಅಲ್ಲಿ ಎಲ್ಲವನ್ನೂ ಕಲಿಯಬಹುದು. ಮನೋವಿಜ್ಞಾನದ ಕಲಿಕೆಗೆ ಹೇಳಿಮಾಡಿಸಿದ ಸಂದರ್ಭ. ನನ್ನ ಬಾಲ್ಯದಲ್ಲಿ ಆಗಾಗ ಅಮ್ಮ ಕೃಷ್ಣರಾಜಪುರದಲ್ಲಿ ಪ್ರತಿ ಮಂಗಳವಾರ ನಡೆಯುತ್ತಿದ್ದ ಸಂತೆಗೆ ಕರೆದೊಯ್ಯುತ್ತಿದ್ದರು ಕೆಲವೊಮ್ಮೆ ಶಾಲೆ ಮುಗಿದ ಮೇಲೆ ಸಂಜೆಯಲ್ಲಿ. ಮುಖ್ಯವಾಗಿ ಕೊಳ್ಳುತ್ತಿದ್ದದ್ದು ತರಕಾರಿ, ಹಣ್ಣು. ಹೋಗಲಾರದಿದ್ದಾಗ, ಸಂತೆಯಿಂದ ತಂದು ಮನೆಮನೆಗೆ ಮಾರಾಟ ಮಾಡುತ್ತಿದ್ದವರಿಂದ ಕೊಳ್ಳುತ್ತಿದ್ದೆವು.

ಸಂತೆಗೆ ಹೋಗಲು ನಾನು ಹಾತೊರೆಯುತ್ತಿದ್ದೆ. ಅಲ್ಲಿನ ವೈವಿಧ್ಯತೆಗಳು, ಜನರು, ವಸ್ತುಗಳು, ಪ್ರಾಣಿಗಳು, ಎಲ್ಲವೂ ನನ್ನಲ್ಲಿ ಕುತೂಹಲ ಉಂಟು ಮಾಡುತ್ತಿತ್ತು. ಬೆಂಗಳೂರಿನ ಕೆ ಆರ್ ಮಾರ್ಕೆಟ್, ಅವೆನ್ಯೂ ರಸ್ತೆ, ಶಿವಾಜಿನಗರದ ಮಾರುಕಟ್ಟೆಗಳು, ಅಲ್ಲಿನ ಗುಜರಿ ಮಳಿಗೆಗಳು, ಮೈಸೂರಿನ ಚಿಕ್ಕ ಮಾರ್ಕೆಟ್, ದೊಡ್ಡ ಮಾರ್ಕೆಟ್‌ಗಳು ಅನೇಕ ಚಿತ್ರ-ಕಥನಗಳನ್ನು ಹೇಳಿವೆ. ಅದನ್ನೆಲ್ಲಾ ನೆನೆಸಿಕೊಂಡರೆ ಸಂತೆಗೆ ಜೈಕಾರ, ಸಂತೆಗಳ ಸಂಖ್ಯೆ ವೃದ್ಧಿಸಲಿ. ಅವು ಅಜರಾಮರವಾಗಿರಲಿ.

ಇತ್ತೀಚೆಗೆ ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ ಇರುವ ಗೊಟ್ಟಿಗೆರೆಯಲ್ಲಿ ನಡೆಯುವ ‘ರಾಗಿ ಕಣ’ ಸಂತೆಗೆ ಹೋಗಿದ್ದೆ. ಫೇಸ್ಬುಕ್ ಮೂಲಕ ಇದರ ಬಗ್ಗೆ ತಿಳಿದಿತ್ತು. ಎಲ್ಲವೂ ಸಾವಯವ ವಸ್ತುಗಳು, ರೈತರಿಂದ ನೇರ ಮಾರಾಟ, ಸಾವಯವ ಊಟತಿಂಡಿಗಳು ಸಿಗುತ್ತವೆ ಎಂದೆಲ್ಲಾ ಮಾಹಿತಿಯಿತ್ತು. ಸಹಜವಾಗಿಯೇ ನನಗೆ ಕುತೂಹಲವಿತ್ತು. ಅದೇನೋ, ಈ ಬಾರಿ ನನ್ನ ಬೆಂಗಳೂರಿನ ಭೇಟಿಯ ಸಮಯದಲ್ಲಿ ಲಭ್ಯವಿದ್ದ ಒಂದೇ ಒಂದು ಭಾನುವಾರದ ಬೆಳಗ್ಗೆ ಖುದ್ದು ಹೋಗಿ ನೋಡಲು ಆಗಿತ್ತು. ವಿಶೇಷವೆಂದರೆ ರಾಗಿಕಣ ಸಂತೆಗೆ ಈಗ ಹತ್ತನೇ ವರ್ಷದ ಹುಟ್ಟುಹಬ್ಬ.

ಪ್ರತಿ ಭಾನುವಾರ ರಾಗಿಕಣ ಸಂತೆ ನಡೆಯುವುದು ಗೊಟ್ಟಿಗೆರೆಯ ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಹಸಿರುಜಾಗದಲ್ಲಿ. ಕಾರು, ವಾಹನ ನಿಲ್ದಾಣ ಪ್ರದೇಶದಿಂದ ಬಲಕ್ಕೆ ತಿರುಗಿದರೆ ಅಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಬಗೆಗಿನ ಒಂದು ಸಾಂಸ್ಕೃತಿಕ ಅಧ್ಯಯನ ಕೇಂದ್ರವಿದೆ. ಕಳೆದ ವರ್ಷ ೨೦೨೫ ಏಪ್ರಿಲ್ ತಿಂಗಳಲ್ಲಿ ಇದರ ಉದ್ಘಾಟನೆಯಾಯ್ತು. ತೇಜಸ್ವಿಯವರ ಪುಸ್ತಕಗಳು, ಅವರ ಖಾಸಗಿ ವಸ್ತುಗಳು, ಫೋಟೊಗಳು, ಪೇಂಟಿಂಗ್ ಚಿತ್ರಗಳು, ಇನ್ನೂ ಏನೇನೋ ಇವೆ. ಕೇಂದ್ರದ ಹೊರಗಡೆ ಅವರ ಕಾರು ಸ್ಥಾಪನೆಯಾಗಿದೆ.

ನಾವು ಕೇಂದ್ರವನ್ನು ನೋಡಿ ನಂತರ ಅದರ ಮುಂದಕ್ಕೆ ಇರುವ ರಾಗಿಕಣಕ್ಕೆ ಹೋದೆವು. ರಾಗಿಕಣದ ವ್ಯವಸ್ಥಾಪಕರು ಸಾವಯವ ಜೀವನಶೈಲಿ ಮತ್ತು ಸುಸ್ಥಿರ ಅಭಿವೃದ್ಧಿ ಮೌಲ್ಯಗಳಿಗೆ ಒತ್ತು ಕೊಡುತ್ತಿದ್ದಾರೆ. ಪ್ರತಿವಾರವೂ ಒಂದಲ್ಲಾ ಒಂದು ಕಾರ್ಯಕ್ರಮವಿರುತ್ತದೆ. ಹಾಡು, ನಾಟಕ, ಭಾಷಣ, ಅನುಭವ-ಕಲಿಕೆ, ತೋಟಗಾರಿಕೆ, ಕಾಂಪೋಸ್ಟ್ ತಯಾರಿಕೆ, ಮುಂತಾದವು.

ಸ್ಥಳೀಯ ವಸ್ತುಗಳ ಮಾರಾಟ ಎಂದಿದ್ದರೂ, ಚೆನ್ನಪಟ್ಟಣ ಮರ ಆಟಿಕೆಗಳು, ಸಾವಯವ ಸಾಮಗ್ರಿಗಳನ್ನು ಮಾರಲು ದೂರದೂರುಗಳಿಂದ ಬಂದಿದ್ದವರು ಕಂಡರು. ತಾಜಾ ತರಕಾರಿ ಹಣ್ಣು ಸೊಪ್ಪುಗಳು ಇದ್ದವು. ಚೆನ್ನಪಟ್ಟಣ ನನ್ನ ಅಮ್ಮನ ತವರೂರು. ಅಮ್ಮ ನೆಂಟರು-ಇಷ್ಟರ ಕುಟುಂಬಗಳ ಪುಟಾಣಿ ಮಕ್ಕಳಿಗೆ ಚೆನ್ನಪಟ್ಟಣ ಮರಆಟಿಕೆಗಳನ್ನು ಉಡುಗೊರೆಯಾಗಿ ಕೊಡುವ ಸಂಪ್ರದಾಯವನ್ನಿಟ್ಟುಕೊಂಡಿದ್ದರು. ನಾನು, ಅಕ್ಕಂದಿರು ಅದನ್ನು ಮುಂದುವರೆಸಿದ್ದೀವಿ. ಸಿಂಗಾಪುರದಲ್ಲಿ ನೆಲೆಸಿರುವ ತಂಗಿಯೊಬ್ಬಳ ಮಕ್ಕಳಿಗೆ ಮರದ ಆಟಿಕೆಗಳನ್ನು ಕೊಂಡೆ.

ಜೀಬೀ ಮತ್ತು ನಾನು ಆಹಾರಖಾದ್ಯಗಳನ್ನು ಸವಿದು ಖುಷಿಪಟ್ಟೆವು. ಕಬ್ಬಿನ  ಹಾಲು, ಕರಬೂಜ ಹಣ್ಣಿನ ಪಾನಕ, ನೀರು ಮಜ್ಜಿಗೆ, ಕೋಸಂಬರಿ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ, ಒಬ್ಬಟ್ಟು, ಎಲ್ಲವೂ ರುಚಿಯಾಗಿತ್ತು. ನಾನು ಆಸೆಪಟ್ಟ ಹಲಸಿನ ಹಣ್ಣು ಸಿಗಲಿಲ್ಲ. ಹಲಸಿನ ತೊಳೆಗಳನ್ನು ಕೊಳ್ಳಲು ಉದ್ದಾನುದ್ದ ಕ್ಯೂ ಇತ್ತು. ನನ್ನ ಸರದಿ ಬರುವಷ್ಟರಲ್ಲಿ ಹಣ್ಣು ಖಾಲಿ. ಮನಸ್ಸಿಗೆ ನಿರಾಸೆಯಾದರೂ, ಅಷ್ಟರಲ್ಲಿ ತುಂಬಿದ್ದ ಹೊಟ್ಟೆಗೇನೂ ನಿರಾಸೆಯಾಗಲಿಲ್ಲ. ಬಹುಕಾಲದ ಬಳಿಕ ತವರಿನಲ್ಲಿ ಸಂತೆಗೆ ಬಂದಿದ್ದು ಖುಷಿಯಾಗಿತ್ತು. ಚಿಕ್ಕದಾದರೂ ರಾಗಿ ಕಣ ಸಂತೆ ಚೊಕ್ಕವಾಗಿತ್ತು.

ರಾಗಿಕಣ ಸಂತೆಯಲ್ಲಿ ಮಾರುತ್ತಿದ್ದ ಸಾವಯವ ಹತ್ತಿಬಟ್ಟೆಯ ಉಡುಪುಗಳು, ಕೆಲ ವಸ್ತುಗಳು (ಸೋಪು, ಮರದ ಬಾಚಣಿಕೆ, ಸೌಂದರ್ಯವರ್ಧಕಗಳು, ಇತ್ಯಾದಿ) ನನಗೆ ದುಬಾರಿಯೆನಿಸಿದವು. ರಾಗಿಕಣ ಸಂತೆ ಉಳ್ಳವರಿಗೆ ಮಾತ್ರ ಎನ್ನುವುದು ಕಾಣುತ್ತಿತ್ತು. ಇದಕ್ಕೆ ಇಂಬು ಕೊಡುವಂತೆ ಇರುವ ವಿಷಯ ಈ ಪ್ರದೇಶದ ರಿಯಲ್ ಎಸ್ಟೇಟ್ ಬೆಲೆ ಗಗನವನ್ನೂ ಮೀರಿ ಇನ್ನೂ ಮೇಲಕ್ಕೆ ಹೋಗಿದೆ.

ಒಂದು ಕಾಲದಲ್ಲಿ ಬೆಂಗಳೂರಿನ ಆಚೆ ಇದ್ದ ಗೊಟ್ಟಿಗೆರೆ ಮತ್ತು ಸುತ್ತಲಿನ ಹಳ್ಳಿಗಳು ವ್ಯವಸಾಯ, ತೋಟಗಾರಿಕೆ, ಅಲ್ಲೊಂದು-ಇಲ್ಲೊಂದು ಇಂಡಸ್ಟ್ರಿಯಲ್ ಎಸ್ಟೇಟ್ ಇದ್ದಂತ ಪ್ರದೇಶಗಳು. ಹತ್ತಿರದಲ್ಲೆ ಇರುವ ಬನ್ನೇರುಘಟ್ಟ ರಾಷ್ಟ್ರೀಯ ವನ್ಯಜೀವಿ ಕೇಂದ್ರಕ್ಕೆ ಹೋಗುವುದೆಂದರೆ ಇಡೀ ಒಂದು ದಿನದ ದೊಡ್ಡ ಕಾರ್ಯಕ್ರಮ. ತಮ್ಮ ಆದಾಯಕ್ಕೆ ತಕ್ಕಂತೆ ಗೊಟ್ಟಿಗೆರೆ ಹಳ್ಳಿಯಲ್ಲಿ ಜಾಗ ಕೊಂಡು ಅಲ್ಲೊಂದು ಮಣ್ಣಿನ ಮನೆ ಕಟ್ಟಿಸಿಕೊಂಡು ವಾಸಿಸಿದ ನನ್ನ ದೊಡ್ಡಮ್ಮನ ಮನೆಗೆ ಒಮ್ಮೆ ನಾನು, ನನ್ನ ಇನ್ನೊಬ್ಬ ದೊಡ್ಡಮ್ಮನ ಮಗಳು ಹೋಗಿದ್ದೆವು. ಪುಟ್ಟ ಮಣ್ಣಿನ ಮನೆ, ಸುತ್ತಲೂ ಹಣ್ಣು-ತರಕಾರಿ ಬೆಳೆ. ನಾವು ಹುಡುಗಿಯರು, ‘ಅಯ್ಯೋ, ಇದೆಷ್ಟು ದೂರವಿದೆ, ಬಸ್ ಸೌಕರ್ಯ ಸರಿಯಿಲ್ಲ, ಹಾವು-ಹುಳ’, ಎಂದೆಲ್ಲಾ ಹಲುಬಿ ನಾವಿಬ್ಬರು ರಾತ್ರಿ ತಂಗುವುದಿಲ್ಲ ಎಂದು ಹಠ ಮಾಡಿ ವಾಪಸ್ ಬೆಂಗಳೂರಿಗೆ ಬಂದೆವು. ಈಗ ರಾಗಿಕಣದಲ್ಲಿ ಓಡಾಡಿದಾಗ, ಕೂತಿದ್ದಾಗ ಇದೆಲ್ಲಾ ನೆನಪಿಗೆ ಬಂತು.

ಅದೇ ಗೊಟ್ಟಿಗೆರೆ ಜಾಗಗಳಿಗೆ ಈಗ ಕೋಟಿಗಟ್ಟಲೆ ಬೆಲೆ. ಇಲ್ಲಿಗೆ, ಸುತ್ತಮುತ್ತಲಿನ ಬಡಾವಣೆಗಳಿಗೆ ಬಂದಿರುವುದು elite ಜನ – ವಿದ್ಯಾವಂತರು, ಎನ್.ಆರ್.ಐ ಜನರು, ಸ್ಥಿತಿವಂತರು, ಉಳ್ಳವರು, ಕೋಟ್ಯಾಧಿಪತಿಗಳು, ಪ್ರಗತಿಪರ ಜನರು. ಎಲ್ಲವೂ organic ಆಗಿರಬೇಕು, ಪ್ಲಾಸ್ಟಿಕ್ ತೊಲಗಬೇಕು, ಎಂದು ಮಾತನಾಡುವವರು. ಬೆಂಗಳೂರಿನಲ್ಲೀಗ ಎಲ್ಲವೂ ದುಬಾರಿ, ಎಲ್ಲೆಲ್ಲೂ organic ಮಂತ್ರ! ನಾವು ಮನಸ್ಸುಮಾಡಿ ಸಾವಯವ ಜೀವನಶೈಲಿಯನ್ನು ಅನುಸರಿಸಿ, ಜಾಗೃತ-ಜೀವನ ನಡೆಸುವುದು ಇನ್ನೂ ದುಬಾರಿ! ನಗರೀಕರಣ ಮತ್ತು ಜಾಗತೀಕರಣದ ಪರಿಣಾಮಗಳು ಎಲ್ಲರನ್ನೂ ತಾಕಿವೆ, ನಿಜ. ಅದರಿಂದ ತಪ್ಪಿಸಿಕೊಂಡು ಸಾವಯವ ಜೀವನ ನಡೆಸುವುದು ಕೆಲವರಿಗೆ ಮಾತ್ರ ಸಾಧ್ಯ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ