Advertisement
ಎಲ್ಲ ಕಾಲದ ಮನುಷ್ಯರೂ ಒಂದೇ!: ರೂಪಶ್ರೀ ಕಲ್ಲಿಗನೂರ್‌ ಬರಹ

ಎಲ್ಲ ಕಾಲದ ಮನುಷ್ಯರೂ ಒಂದೇ!: ರೂಪಶ್ರೀ ಕಲ್ಲಿಗನೂರ್‌ ಬರಹ

ಗಣಿತದಲ್ಲಿ ತಪ್ಪು ಲೆಕ್ಕ ಬರೆದ ಮಕ್ಕಳನ್ನು ಕರೆದು ಅಂಗೈ ಮುಂದೆ ಮಾಡಲು ಹೇಳಿ, ಗೆಣ್ಣಿಗೆ ಹೊಡೆಯುತ್ತಿದ್ದ ರೀತಿ ಇನ್ನೂ ಚೆನ್ನಾಗಿ ನೆನಪಿದೆ. ಒಮ್ಮೊಮ್ಮೆ ತೀರಾ ಸಿಟ್ಟಿನಲ್ಲಿ ರಪರಪ ಬಾರಿಸಿದ್ರೆ, ಇನ್ನೂ ಕೆಲವೊಮ್ಮೆ ಏನೋ ಮನಸ್ಸಿಲ್ಲದೇ, ತನ್ನ ಕರ್ತವ್ಯ ಪಾಲಿಸುವುದಕ್ಕಾಗಿ ಇಷ್ಟು ಜೋರಾಗಿ ಹೊಡಿತಿದ್ದೀನಿ ಅನ್ನುವಂತೆ ಮುಖ ಮಾಡಿಕೊಂಡು ಶಿಕ್ಷಿಸುತ್ತಿದ್ದರು. ಹಾಗವರು ಮೃಗೀಯವಾಗಿ ಹೊಡೆಯುವಾಗ, ಅವರ ಮಗು ಅಲ್ಲೇ ಪಕ್ಕದಲ್ಲಿ ತೊಟ್ಟಿಲಲ್ಲಿ ನೆಮ್ಮದಿಯಿಂದ ಮಲಗಿರುತ್ತಿತ್ತು. ಅಷ್ಟು ಚಿಕ್ಕ ಮಗುವಿನ ತಾಯಿಯೊಬ್ಬಳು, ಓದಿನಲ್ಲಿ ತಪ್ಪು ಮಾಡಿದ ಮಕ್ಕಳಿಗೆ ಹೇಗೆ ಅಷ್ಟು ಮನುಷ್ಯತ್ವವಿಲ್ಲದೇ ಶಿಕ್ಷಿಸಲು ಸಾಧ್ಯ?
ರೂಪಶ್ರೀ ಕಲ್ಲಿಗನೂರ್‌ ಬರಹ ನಿಮ್ಮ ಓದಿಗೆ

ಇಲ್ಲಿ ನಾನು ಈ ತಿಂಗಳಲ್ಲಿ ನೋಡಿದ ಎರಡು ವಿಡಿಯೋಗಳ ಕುರಿತು ಬರೆಯಬೇಕಿನ್ನಿಸಿತು. ಬರೆದು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ವಿಡಿಯೋ ೧: ವಾರದ ಹಿಂದೆ ನೋಡಿದ ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ತನ್ನ ತಾಯಿಯ ಬಗ್ಗೆ, ತಾಯಿಯ ಬಗ್ಗೆ ಅನ್ನುವುದಕ್ಕಿಂತ ತಾಯಿಯೊಂದಿಗಿನ ತನ್ನ ಸಂಬಂಧದ ಕುರಿತು ವಿಡಿಯೋವೊಂದನ್ನು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಳು… ಅದರಲ್ಲಿ ಆಕೆ ಹೇಗೆ ತನ್ನ ತಾಯಿ, ಅವರಿಗೆ ಇಷ್ಟಬಂದ ಹಾಗೆ ತಾನು ನಡೆದುಕೊಂಡರೆ ಮಾತ್ರ ಅವಳನ್ನು ತನ್ನ ಮಗಳೆಂದೂ, ಇಲ್ಲದಿದ್ದರೆ ಮಾತುಮಾತಿಗೆ ಸಿಡುಕುತ್ತಿದ್ದ ಬಗ್ಗೆ, ನಿನ್ನಿಷ್ಟ ಬಂದಂತೆ ಆಡಿದರೆ ಆ ಮಗಳು, ತಮಗೆ ಮಗಳೇ ಅಲ್ಲವೆಂಬಂತೆ ವರ್ತಿಸುವುದರ ಕುರಿತು ಹೇಳಿಕೊಂಡವಳು, ಇಂಥ ಅವರ ಬುದ್ಧಿಯ ಕಾರಣಕ್ಕೇ ಆ ಮನೆ ಬಿಟ್ಟು ಬಂದಿದ್ದೇನೆ ಎಂದು ಹೇಳಿಕೊಂಡಿದ್ದಳು.

ವಿಡಿಯೋ ೨. ಈ ವಿಡಿಯೋ ನಿಜಕ್ಕೂ ಇಂಟರೆಸ್ಟಿಂಗ್ ಅನ್ನಿಸಿತು. ಸಾಕಷ್ಟು ಕಾಲದಿಂದ ಅಡ್ರೆಸ್‌ ಮಾಡದ ಒಂದು ವಿಷಯ, ಈಗ ಟ್ರೆಂಡ್‌ ಆಗಿರುವುದರ ಬಗ್ಗೆ ಇದು. ಹುಡುಗಿಯೊಬ್ಬಳು ತಾಯಂದಿರ ದಿನದಂದು ತನ್ನ ದೊಡ್ಡಮ್ಮ ಹಾಗೂ ತನ್ನ ತಾಯಿಯನ್ನು ಅಕ್ಕ-ಪಕ್ಕದಲ್ಲಿ ಕೂರಿಸಿಕೊಂಡು ಪ್ರಶ್ನೆ ಕೇಳುತ್ತಾಳೆ. ನಿಮ್ಮ ಮಕ್ಕಳ ಯಾವ ಹಂತ ನಿಮಗೆ ತುಂಬಾ ಇಷ್ಟ ಅನ್ನೋ ಥರದ ಪ್ರಶ್ನೆ ಅದು. ಅದಕ್ಕೆ ಆ “ತಾಯಂದಿರು” ಇಬ್ಬರೂ ಮಕ್ಕಳು ಕಾಲೇಜಿಗೆ ಹೋಗಲಾರಂಭಿಸಿದ ಹಂತ ಇಷ್ಟವೆನ್ನುತ್ತಾರೆ… ಆ ಥರದ ಉತ್ತರವನ್ನು ಎಂದೂ ನಿರೀಕ್ಷಿಸದಿದ್ದ ಆ ಹುಡುಗಿಗೆ, ಅದು ಒಂಥರಾ ಅಚ್ಚರಿ ಅನ್ನಿಸುತ್ತೆ. ಅವಳ ಇನ್ನೊಂದು ಪ್ರಶ್ನೆ ಆ ಇಬ್ಬರಿಗೂ: ಮಕ್ಕಳು ಚಿಕ್ಕವರಿದ್ದಾಗ ಅವರ ಜೊತೆಗಿನ ಯಾವ ಸಮಯ ನಿಮಗೆ ಖುಷಿ ನೀಡುತ್ತದೆ ಅಂತ ಕೇಳಿದಾಗ “ಅವರು ನಿದ್ದೆ ಮಾಡುತ್ತಿದ್ದ ಸಮಯ..” ಎನ್ನುತ್ತಾರೆ.. ಬಹುತೇಕ ಇಬ್ಬರದೂ ಇದೇ ಉತ್ತರ.. ಆಕೆಗೆ ಅವರಿಬ್ಬರ ಉತ್ತರಗಳನ್ನು ಜೀರ್ಣಿಸಿಕೊಳ್ಳಲೇ ಸಾಧ್ಯವಾಗೋದಿಲ್ಲ. ಆಗ ಆ ಇಬ್ಬರೂ ತಾಯಂದಿರು ಚಿಕ್ಕದಾಗಿ ಮಾತನಾಡಿಕೊಳ್ಳುತ್ತಾರೆ. ಇಬ್ಬರಿಗೂ ಮಕ್ಕಳು ಬೇಕು ಅಂತೇನೂ ಇರಲಿಲ್ಲ. ಆದ್ರೆ ನಮ್ಮ ಮನೆ ಮಕ್ಕಳು ಇಷ್ಟ ಅಷ್ಟೇ. ಬೇರೆ ಮಕ್ಕಳಲ್ಲ… ಎಂದೂ ಹೇಳುತ್ತಾರೆ….

ಮೊದಲನೆಯ ವಿಡಿಯೋ ನೋಡುವಾಗ ಎರಡು ವಿಷಯಗಳು ನೆನಪಾದವು. ಒಂದು ನಾನು ಪ್ರೈಮರಿ ಶಾಲೆಯಲ್ಲಿ ಓದುವಾಗ, ನನ್ನ ಕ್ಲಾಸ್‌ಮೇಟ್‌ ಒಬ್ಬಳು ಹಂಚಿಕೊಂಡಿದ್ದ ಒಂದು ವಿಷಯ, ಇಂಥ ವಿಷಯಗಳು ಚರ್ಚೆಗೆ ಬಂದಾಗಲೆಲ್ಲ ನೆನಪಾಗುತ್ತದೆ ಥಟ್ಟನೇ. ಒಮ್ಮೆ ಶಾಲೆ ಮುಗಿದ ನಂತರ ಅವಳು ಹಾಗೂ ಅವಳ ಅಕ್ಕನೊಂದಿಗೆ ನಾನೂ ಅವರ ಮನೆಯ ಬಳಿ ಹೋಗಿದ್ದೆ. ಅವರ ಅಪ್ಪ-ಅಮ್ಮ ಇಬ್ಬರೂ ಕೆಲಸದಲ್ಲಿದ್ದವರು. ಅದೇನೋ ವಿಷಯ ಮಾತನಾಡುತ್ತಾ, ಸ್ನೇಹಿತೆ ಹೇಳಿದ್ಲು… “ನಾವೇನಾದ್ರೂ ತಪ್ಪು ಮಾಡ್ದಾಗ, ನಮ್ಮಪ್ಪಾ ಹೊಡೀತಾರಂದ್ರೆ ನಾವು ಬಟ್ಟೆ ಬಿಚ್ಚಿ ನಿಲ್ಬೇಕು…” ಅಂತ… ಅವಳ ಮಾತು ಕೇಳಿ ನನ್ನ ತಲೆ ಚೂರು ಗಿರ್‌ ಅಂದು “ಅಯ್ಯೋ… ಅದ್ಯಾಕೆ? ಹೊಡಿಬೇಕಾದ್ರೆ ಯಾಕೆ ನೀವು ಬಟ್ಟೆ ಬಿಚ್ಚಬೇಕು” ಎಂದು ಕೇಳಿದಾಗ, “ಬಟ್ಟೆ ಹಾಕಿದ್ರೆ ಹೊಡ್ದ ಏಟು ಬಟ್ಟೆಗೆ ತಾಗುತ್ತಲ್ವ… ಆಗ ಪೆಟ್ಟು ಸರ್ಯಾಗಿ ಬೀಳಲ್ಲ… ಅದ್ಕೆ ಅಪ್ಪ ಹೊಡೀಬೇಕಾದಾಗೆಲ್ಲ ನಮ್ಮ ಬಟ್ಟೆ ಬಿಚ್ಚಿ ಹೊಡೀತಾರೆ” ಅಂತ ಹೇಳುವಾಗ ಅವಳ ಅಕ್ಕನೂ ಆ ಮಾತಿಗೆ ತನ್ನ ದನಿಗೂಡಿಸಿದ್ದಳು. ಇದಾಗಿ ಬಹುಶಃ ಇಪ್ಪತ್ತೆರೆಡು ಇಪ್ಪತ್ಮೂರು ವರ್ಷಗಳೇ ಕಳೆದಿವೆಯಾದ್ರೂ ಅದ್ಯಾಕೆ ನನ್ನ ತಲೆಯಲ್ಲಿ ಇನ್ನೂ ಕೂತಿದೆ ನೆನಪಿಲ್ಲ..

ಎರಡನೇಯ ವಿಷಯ: ಹೈಸ್ಕೂಲಿನಲ್ಲಿ ಓದುವಾಗ ನಮಗೆ ಗಣಿತ ಪಾಠ ಮಾಡಲು ಬರುತ್ತಿದ್ದ ಮೇಷ್ಟ್ರು ಇದ್ದಕ್ಕಿದ್ದಂತೆ ಬರುವುದನ್ನ ನಿಲ್ಲಿಸಿದ್ರು. ಹಾಗಾಗಿ ಶಾಲಾ ಆಡಳಿತದವರು ಒಂದು ವಾರದಲ್ಲಿ ಒಬ್ಬ ಲೇಡಿ ಟೀಚರೊಬ್ಬರನ್ನ ಹುಡುಕಿ ನೇಮಿಸಿಕೊಂಡಿದ್ದರು. ಆಕೆಗೆ ಆಗ ಬಹಳ ಚಿಕ್ಕ ಮಗುವಿತ್ತು. ಬಹುಶಃ ಆರೇಳು ತಿಂಗಳ ಮಗು ಇದ್ದಿರಬಹುದು. ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಆಕೆ ಮಗುವನ್ನ ಕರೆದುಕೊಂಡೇ ಶಾಲೆಗೆ ಬರ್ತಿದ್ರು. ಗಣಿತದಲ್ಲಿ ತಪ್ಪು ಲೆಕ್ಕ ಬರೆದ ಮಕ್ಕಳನ್ನು ಕರೆದು ಅಂಗೈ ಮುಂದೆ ಮಾಡಲು ಹೇಳಿ, ಗೆಣ್ಣಿಗೆ ಹೊಡೆಯುತ್ತಿದ್ದ ರೀತಿ ಇನ್ನೂ ಚೆನ್ನಾಗಿ ನೆನಪಿದೆ. ಒಮ್ಮೊಮ್ಮೆ ತೀರಾ ಸಿಟ್ಟಿನಲ್ಲಿ ರಪರಪ ಬಾರಿಸಿದ್ರೆ, ಇನ್ನೂ ಕೆಲವೊಮ್ಮೆ ಏನೋ ಮನಸ್ಸಿಲ್ಲದೇ, ತನ್ನ ಕರ್ತವ್ಯ ಪಾಲಿಸುವುದಕ್ಕಾಗಿ ಇಷ್ಟು ಜೋರಾಗಿ ಹೊಡಿತಿದ್ದೀನಿ ಅನ್ನುವಂತೆ ಮುಖ ಮಾಡಿಕೊಂಡು ಶಿಕ್ಷಿಸುತ್ತಿದ್ದರು. ಹಾಗವರು ಮೃಗೀಯವಾಗಿ ಹೊಡೆಯುವಾಗ, ಅವರ ಮಗು ಅಲ್ಲೇ ಪಕ್ಕದಲ್ಲಿ ತೊಟ್ಟಿಲಲ್ಲಿ ನೆಮ್ಮದಿಯಿಂದ ಮಲಗಿರುತ್ತಿತ್ತು. ಅಷ್ಟು ಚಿಕ್ಕ ಮಗುವಿನ ತಾಯಿಯೊಬ್ಬಳು, ಓದಿನಲ್ಲಿ ತಪ್ಪು ಮಾಡಿದ ಮಕ್ಕಳಿಗೆ ಹೇಗೆ ಅಷ್ಟು ಮನುಷ್ಯತ್ವವಿಲ್ಲದೇ ಶಿಕ್ಷಿಸಲು ಸಾಧ್ಯ?

ಈಗಿನ ಜನರೇಷನ್ನಿನ ಮಕ್ಕಳೆಲ್ಲ ನನಗೆ ಮದುವೆ ಬೇಡ ಮಕ್ಕಳು ಬೇಡ ಅಂತೆಲ್ಲ ಹೇಳುತ್ತಿರುವಾಗ ನಮ್ಮ ತಾಯ್ತಂದೆಯ ಜನರೇಷನ್ನಿನವರು ಇದರ ಕುರಿತು, “ಯಾಕೆ ಮದುವೆಯಾಗಬೇಕು, ಮಕ್ಕಳನ್ನು ಯಾಕೆ ಮಾಡಿಕೊಳ್ಳಬೇಕು” ಎಂದು ವಾದ ಮಾಡುವಾಗ ನಗು ಬರುತ್ತದೆ. ಎಷ್ಟೇ ಕಷ್ಟವಿದ್ದರೂ, ತಮಗೆ ಬೇಕೆಂದರೂ ಬೇಡವೆಂದರೂ ಸಮಾಜದ ಕಣ್ಣಲ್ಲಿ ಸಮಾನವಾಗಿ ಕಾಣುವ ಸಲುವಾಗಿ, ಮದುವೆಯನ್ನೂ ಮಕ್ಕಳನ್ನೂ ಮಾಡಿಕೊಂಡವರು ಅವರು. ಮಕ್ಕಳನ್ನು ಬೆಳೆಸಲು ದುಡ್ಡಿನ ಹಿಂದೆ ಓಡೋದು…. ದುಡ್ಡಿನ ಹಿಂದೆ ಓಡುತ್ತ ಮಕ್ಕಳನ್ನು ಹಿಂದೆಲ್ಲೋ ಬಿಡೋದು… ಯಾರೋ ಹೇಳಿದ್ದರು ಒಮ್ಮೆ… “ಕೆಲಸದಲ್ಲಿದ್ರೆ ಏನಂತೆ… ಎರಡು ಮಕ್ಕಳು ಬೇಕೆ ಬೇಕು… ಹೇಗೋ ಬೆಳ್ಕೊಂಡು ಹೋಗುತ್ವೆ…” ಅರೇ ಹೀಗೆ ಹೇಳುವವರಿಗೆ ಮಕ್ಕಳು ತಂದೆ-ತಾಯಿಯಿಲ್ಲದ ಸಮಯದಲ್ಲಿ ಯಾರ್ಯಾರಿಂದ ಏನೆನೆಲ್ಲ ಕಷ್ಟಕ್ಕೆ ಒಳಗಾಗಬಹುದು ಅನ್ನುವ ಅರಿವು ಒಂದು ಚೂರಾದ್ರೂ ಇರುತ್ತದಾ ಅಂತ. ಅಂಥದ್ದೇ ಏನೋ ತೊಂದರೆಗಳಾಗಿ, ಸುಮಾರು ಮಕ್ಕಳು ಅಂತಮುರ್ಖಿಗಳಾಗಿಯೋ, ತಮ್ಮನ್ನು ತಾವೇ ನೋಯಿಸುವಂತಲೋ, ಅಥವಾ ಸುತ್ತಮುತ್ತಲಿನವರಿಗೆ ನೆಮ್ಮದಿಯೇ ಇಲ್ಲದಂತೆ ನಡೆದುಕೊಳ್ಳುತ್ತಿರುತ್ತಾರೆ. ಇಷ್ಟೆಲ್ಲ ಹಿನ್ನೆಲೆ ಸುತ್ತ ಇರುವವರಿಗೆ ಹೇಗೆ ಗೊತ್ತಾಗಬಹುದು?

ಒಂದು ಗಿಡಕ್ಕೆ, ತನಗೆ ಬೇಕಾದ ಆಹಾರ ಒಂಚೂರು ಸಿಕ್ಕರೆ ತಂತಾನೇ ಬೆಳೆದು ನಿಲ್ಲುತ್ತದೆ. ಆದರೆ ಗುಣಮಟ್ಟ? ಬೆಳೆ ಹಾಳಾಗಬಾರದೆಂದೋ, ಅಥವಾ ಫಸಲು ಚೆನ್ನಾಗಿ ಬರಲೆಂದೋ ಕ್ರಿಮಿ ನಾಶಕ, ರಾಸಾಯನಿಕಗಳನ್ನು ಹಾಕಿ ಬೆಳೆಸಿದ ಹಣ್ಣು-ಸೊಪ್ಪು-ಕಾಳು ಕಡಿಯನ್ನು ತಿಂದುತಿಂದೇ ಅಲ್ಲವೇ ಸಕಲ ರೋಗಗಳನ್ನು ನಮ್ಮ ಮನೆ ಬಾಗಿಲಿಗೆ ಕರೆದುಕೊಂಡು ಬಂದಿರೋದು?

ಈ ಹುಡುಗರ್ಯಾಕೆ ಹಿಂಗೆ… ನಮ್‌ ಕಾಲ್ದಲ್ಲಿ ಹಿಂಗಿರ್ಲಿಲ್ಲ ಅನ್ನೋರೆಲ್ಲ ಅವರವರ ಕಾಲ್ದಲ್ಲಿ ಹೇಗಿದ್ರು ಅಂತ ನೋಡಿಕೊಳ್ಳಲ್ಲವಷ್ಟೇ. ಕೆಟ್ಟ ಮಕ್ಕಳು, ಕೆಟ್ಟ ತಾಯ್ತಂದೆಯರೂ ಎಲ್ಲಾ ಕಾಲದಲ್ಲೂ ಇರೋರೇ… ಆಗೆಲ್ಲ ಅವೆಲ್ಲ ಬೆಳಕಿಗೆ ಬರ್ತಿರಲಿಲ್ಲ ಹಾಗೂ ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ಹೇಳುವ ಧೈರ್ಯವೂ, ನಿವೇದಿಸಿಕೊಳ್ಳುವ ಮಾಧ್ಯಮವೂ ಇರುತ್ತಿರಲಿಲ್ಲ.. ಈಗ ಎಲ್ಲ ಇದೆ. ಹಾಗಾಗಿ “ಓಹ್… ನಮ್‌ ಕಾಲ್ದಲ್ಲಿ ಹೀಗಿರ್ಲಿಲ್ಲ” ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರಷ್ಟೇ.

ಎಷ್ಟು ಕಾರಣಗಳಿಲ್ಲ ಹೆಣ್ಮಕ್ಕಳಿಗೆ ಮದುವೆ ಬೇಡ ಎನ್ನುವುದಕ್ಕೆ! ಮದುವೆ ವಿಷಯದಲ್ಲಿ, ಹೆಣ್ಣಿನ ಒಪ್ಪಿಗೆಯನ್ನು ಪರಿಗಣಿಸದಿದ್ದದ್ದು, ವರದಕ್ಷಿಣೆ ಕಿರುಕುಳ, ನಿಮ್ಮ ನೆಂಟರು ಮದುವೆಯಲ್ಲಿ ಹಾಗೆ ನಡೆದುಕೊಂಡ್ರು, ಇದು ಕೊಟ್ಟಿಲ್ಲ ಅದೂ ಕೊಟ್ಟಿಲ್ಲ ಎಂಬ ಚುಚ್ಚು ಮಾತುಗಳು… ಯಾವುದೋ ಒಂದು ಪದಾರ್ಥವನ್ನು ಚೂರು ಹೆಚ್ಚೇ ಬಳಸಿದ್ರೆ, ಅಯ್ಯೋ ನಿಮ್ಮಪ್ಪನ ಮನೆಯಿಂದ ತಂದಿದ್ಯ? ಹಾಗೆ ಪೋಲು ಮಾಡೋದಕ್ಕೆ ಅಂತ ಬೈಯೋದು, ಇವರಿಗೇನೋ ಬೀಗರ ಮೇಲೆ ಮುನಿಸು ಬಂದರೆ, ಹುಡುಗಿಯನ್ನು ತಂದೆ-ತಾಯಿ ಮನೆಗಳಿಗೆ ಕಳಿಸೋದನ್ನೇ ನಿಲ್ಲಿಸಿಬಿಡೋದು… ಅಯ್ಯೋ ಒಂದೇ ಎರಡೇ… ಅದಕ್ಕೆ ಇಷ್ಟು ವರ್ಷ ಕಷ್ಟಪಟ್ಟು ಬೆಳೆಸಿದ ಅಪ್ಪ-ಅಮ್ಮನ ಜೊತೆಗಿದ್ದು, ಅವರನ್ನೇ ಚಂದ ನೋಡಿಕೊಂಡು ಹೋದರೆ ಆಯಿತು ಎನ್ನುವ ಅವರ ನಿರ್ಧಾರ ತಪ್ಪು ಎನ್ನಿಸುವುದಿಲ್ಲ…

ಮದುವೆ ಇಷ್ಟವಿಲ್ಲದಿರೋದು, ಮಕ್ಕಳು ಇಷ್ಟವಿಲ್ಲ ಅನ್ನುವ ತಂದೆಯೋ ತಾಯಿಯೋ ಎಲ್ಲಾ ಕಾಲದಲ್ಲಿಯೂ ಇದ್ದರು. ಅದರಲ್ಲಿ ತಮ್ಮಿಚ್ಚೆಗೆ ವಿರುದ್ಧವಾಗಿ ಮದುವೆಯಾದವರೆಷ್ಟೋ, ಮಕ್ಕಳೇ ಇಷ್ಟವಿಲ್ಲವೆಂದವರು ಬೇಡ ಬೇಡವೆಂದರೂ ಮನೆಯವರಿಗಾಗಿ ಮೂರ್ನಾಲ್ಕು ಮಕ್ಕಳು ಮಾಡಿಕೊಂಡವರೆಷ್ಟೋ ಜನ… ಸಧ್ಯ ಈ ಕಾಲ ಅಂತಾ ಮನಸ್ಸುಗಳಿಗೆ ಒಂಥರಾ ಬಿಡುಗಡೆಯ ಸಂಕ್ರಮಣದ ಕಾಲವೆನ್ನಿಸುತ್ತೆ.. ಹೀಗೇ ಮುಂದುವರಿದರೆ ಭೂಮಿಗೂ ಹಾಯಾಗಿ ಹೆಚ್ಚು ಭಾರವಿಲ್ಲದೇ ಉಸಿರಾಡುವಂಥ ಸಮಯವೂ ಬರಬಹುದು…

About The Author

ರೂಪಶ್ರೀ ಕಲ್ಲಿಗನೂರ್

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

2 Comments

  1. Nagashree Sharma

    ಸತ್ಯಕ್ಕೆ ಹಿಡಿದ ಕನ್ನಡಿ ಈ ಬರಹ. ಬಹಳ ಇಷ್ಟವಾಯಿತು ರೂಪಶ್ರೀ

    Reply
  2. Vasantha kumar

    ಈ ಕಾಲಮಾನದ ಈ ಸಮಾಜಕ್ಕೆ ಖಂಡಿತಾ ಅವಶ್ಯವಿದ್ದ ಲೇಖನ. ಧನ್ಯವಾದಗಳು. ಯಾರಾದರೂ ಮಿತ್ರರು, ಬಂಧುಗಳು ತಮ್ಮ ಮನೆಯಲ್ಲಿನ ಗಂಡು/ಹೆಣ್ಣು ಗಳಿಗೆ ಸಂಬಂಧ ಹುಡುಕಲು ಕೇಳುವಾಗ ನಾನು ನೇರವಾಗಿ ಕೇಳಿಯೇಬಿಡುತ್ತೇನೆ “ಮೊದಲು ಅವರಿಗೆ ಮದುವೆಯಾಗುವ ಇಚ್ಛೆಯಿದೆಯೇ ಕೇಳಿಬಿಡಿ, ನಂತರ ಹುಡುಕೋಣ” ಎಂದು. ಸರಿಯಲ್ಲವೇ?

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ