ನಾನು ಈ ಹುಡುಗಿಗೆ “ನಿನ್ನ ಗುರುತಿನ ಚೀಟಿ ಕೊಡಮ್ಮ” ಅಂದೆ. ಅವಳು ಗಾಬರಿಯಿಂದ “ಅದು ಇಲ್ಲ ಮ್ಯಾಮ್” ಅಂದಳು. ಪಾಪ, ಅದು ಅವಳ ಕುತ್ತಿಗೆಯಲ್ಲೇ ತೂಗುತ್ತಿತ್ತು. ಈ ಘಟನೆಯು ಘಟಿಸುತ್ತಿದ್ದಾಗ ನಮ್ಮ ಕೋಣೆಯಲ್ಲೇ ಕುಳಿತಿದ್ದ ಇಂಗ್ಲಿಷ್ ಅಧ್ಯಾಪಕಿಯೊಬ್ಬರು ಮುಗುಳ್ನಗುತ್ತಾ “ಅದು ನಿನ್ನ ಮೈಮೇಲೇ ಇದೆಯಲ್ಲಮ್ಮ” ಅಂದರು. ಆದರೂ ಆ ಹುಡುಗಿಗೆ ಗುರುತಿನ ಚೀಟಿ ಅಂದರೆ ಏನೆಂದು ಗೊತ್ತಾಗಲಿಲ್ಲ. ಏನು ಒತ್ತಡ ಇತ್ತೋ ಏನೋ ಪಾಪ ಅವಳಿಗೆ! ಗಾಬರಿ ಬಿದ್ದು `ಇಲ್ಲ ಮ್ಯಾಮ್, ಇಲ್ಲ ಮ್ಯಾಮ್’ ಅನ್ನಲು ಶುರು ಮಾಡಿದಳು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತನೆಯ ಬರಹ
ವೃತ್ತಿಯಿಂದ ಕನ್ನಡ ಅಧ್ಯಾಪಕಿಯಾಗಿರುವ ನನ್ನ ಜೀವನದಲ್ಲಿ ಕನ್ನಡ ಕಲಿಸುವ ಸಂದರ್ಭದಲ್ಲಿ ಕೆಲವು ಸ್ವಾರಸ್ಯಕರ ಪ್ರಸಂಗಗಳು ಘಟಿಸುತ್ತವೆ. ಅವುಗಳಲ್ಲಿ ಮೂರನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಯಲ್ಲಮ್ಮನ ಕನ್ನಡ ಪಾಠ ಮತ್ತು ಸಾವಿರ ರೂಪಾಯಿ ಸೀರೆಯ ಕಥೆ
ದಿನವೆಲ್ಲ ಪಾತ್ರೆ ತೊಳಿ, ಬಟ್ಟೆ ಒಗಿ ಕಸ ಗುಡಿಸು, ಮನೆ ಒರೆಸು ಎಂಬಿತ್ಯಾದಿ ಕೆಲಸದಲ್ಲಿ ಮುಳುಗಿರುವ ಯಲ್ಲಮ್ಮನಿಗೆ ಹೆಚ್ಚುಕಮ್ಮಿ ನನ್ನದೇ ವಯಸ್ಸು. ಅನೇಕ ವರ್ಷಗಳಿಂದ ನಮ್ಮ ಮನೆಯ ಕೆಲಸ ದೇಖರೇಖಿಗಳಲ್ಲಿ ಸಹಾಯ ಮಾಡುವ ಪರಿಶ್ರಮೀ ವ್ಯಕ್ತಿ ಅವರು. ಒಂದು ದಿನ (ಸುಮಾರು ಇಪ್ಪತ್ತು ವರ್ಷಗಳ ಹಿಂದೆ) ಹೀಗೇ ಕೇಳಿದೆ “ಯಲ್ಲಮ್ಮ, ನಿಮ್ಗೆ ಓದಕ್ಕೆ, ಬರಿಯಕ್ಕೆ ಬರುತ್ತಾ?”
“ಅಯ್ಯೋ, ಇಲ್ಲ. ಬರಲ್ಲಮ್ಮ ನಂಗೆ. ಚಿಕ್ಕುಡ್ಗಿ ಇದ್ದಾಗ ನಮ್ಮಮ್ಮ ಎರಡ್ನೇ ಕ್ಲಾಸ್ ತಂಕಾನೋ ಏನೋ ಇಸ್ಕೂಲಿಗ್ ಕಳ್ಸಿದ್ರು. ಆಮೇಲೆ, ಮನೆ ಕೆಲ್ಸ, ಹಸು ನೋಡ್ಕೋ, ಸೆಗಣಿ ಬಳಿ, ಹಾಲು ಹಾಕು ಇಂಥವು ಮಾಡ್ಕೊಂಡು ಶಾಲೆಗೆ ಹೋಗಕ್ಕೆ ಆಗ್ಲೇ ಇಲ್ಲ. ಆವಾಗೆಲ್ಲ ಹಳ್ಳಿ ಕಡೆ ಹಂಗೇ ಅಲ್ವರಾ?”
ಸದಾ ನಗುಮೊಗದಿಂದ ಛಕಛಕನೆ ಕೆಲಸ ಮಾಡುವ, ಹೇಳಿದ್ದನ್ನು ಬೇಗನೆ ಅರ್ಥ ಮಾಡಿಕೊಳ್ಳುವ ಯಲ್ಲಮ್ಮನಿಗೆ ಓದಕ್ಕೆ ಬರಲ್ಲ ಅಂತ ನನಗೆ ಬೇಸರವಾಯಿತು. ಆದರೆ ಆಕೆ ತನ್ನ ಮೂವತ್ತೆಂಟನೇ ವಯಸ್ಸಿನಲ್ಲಿ ಓದು ಬರಹ ಕಲಿಯುವುದು ಸಾಧ್ಯವೇ? ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಅಂತಾರೆ. ನಾನೇ ಈಕೆಗೆ ಕನ್ನಡ ಕಲಿಸಿದರೆ ಹೇಗೆ? ಹೇಗೂ ನನಗೆ ಕಾಲೇಜಿನಲ್ಲಿ ಹದಿನೆಂಟು ಹತ್ತೊಂಬತ್ತು ವಯಸ್ಸಿನ ಪದವಿ ಮಕ್ಕಳಿಗೆ, ಅಂದರೆ ಸ್ವಲ್ಪ ದೊಡ್ಡವರಿಗೆ ಪಾಠ ಮಾಡಿ ಅಭ್ಯಾಸ ಇರುವುದರಿಂದ ಇವರಿಗೂ ಹೇಳಿಕೊಡಬಹುದು, ಅಆಇಈಯಿಂದ ಶುರು ಮಾಡ್ಬೇಕು ಅಷ್ಟೆ ಅಂತ ಅನ್ನಿಸ್ತು. ಕೇಳಿದೆ.
“ನಾನು ಕನ್ನಡ ಓದಕ್ಕೆ, ಬರಿಯಕ್ಕೆ ಹೇಳ್ಕೊಡ್ತೀನಿ. ಕಲೀತೀರಾ ಯಲ್ಲಮ್ಮ?”
ಸಾಮಾನ್ಯ ಯಾವುದಕ್ಕೂ ತಕ್ಷಣ ಇಲ್ಲ ಅನ್ನದ ಯಲ್ಲಮ್ಮ “ಆಯ್ತಮ್ಮ, ಕಲೀತೀನಿ” ಅಂದ್ರು.
*****
ಇನ್ನೂರು ಪುಟದ ಒಂದು ಬರೆಯುವ ಗೆರೆಯುತ (ರೂಲ್ಡ್ ಪದಕ್ಕೆ ನಾನು ಬಳಕೆ ಮಾಡಲು ಪ್ರಯತ್ನಿಸಿದ ಕನ್ನಡ ಪದ! ಹೀಗೆ ಇಂಗ್ಲಿಷ್ ಪದಗಳಿಗೆ ಏನೇನೋ ಕಸರತ್ತಿನ ಮೂಲಕ ಹುಡುಕಿದ ಕನ್ನಡ ಸಂವಾದಿ ಪದ ಬಳಸಿ ಮನೆಮಂದಿಯನ್ನು ಸಹೋದ್ಯೋಗಿಗಳನ್ನು `ಇದಾಗುತ್ತಾ ನೋಡಿ, ಬಳಸ್ಬಹುದಾ ನೋಡಿ’ ಎಂದು ಆಗಾಗ ತಲೆ ತಿನ್ನುವುದು ನನ್ನ ಅಭ್ಯಾಸ!) ಪುಸ್ತಕ, `ಮುದ್ದು ಕನ್ನಡ’ ಎಂಬ ಬಾಲಪಾಠದ ಕನ್ನಡ ಪುಸ್ತಕ ತಂದು ನಾನು ಯಲ್ಲಮ್ಮನಿಗೆ ಕೊಡುವುದರಿಂದ ಈ ಕಲಿಕಾ ಪ್ರಸಂಗ ಪ್ರಾರಂಭವಾಯಿತು. ಅ, ಆ, ಎಂದು ಒಂದು ಅಥವಾ ಎರಡು ಅಕ್ಷರ ಬರೆದು ತಿದ್ದಿಸಿ, ತಿದ್ದಿಸಿ ಪಾಠ ಪ್ರಾರಂಭಿಸಿದೆ. ಮೊದಮೊದಲು ಯಲ್ಲಮ್ಮ ಉತ್ಸಾಹದಿಂದಲೇ ಬರೆದರು. ಒಂದು ಹದಿನೈದು ಇಪ್ಪತ್ತು ಅಕ್ಷರ ಆಗುವ ತನಕ ಎಲ್ಲ ಚೆನ್ನಾಗಿ ನಡೆಯುತ್ತಿದೆ ಅನ್ನಿಸ್ತು. ಆದರೆ ಆಮೇಲೆ ಶುರುವಾಯಿತು ನೋಡಿ ಅಡ್ಡಿ, ಆತಂಕ, ವಿವಿಧ ವಿಘ್ನಗಳ ಸರಮಾಲೆ.
“ಅಮ್ಮ, ಯುಗಾದಿಗೆ ತನಿ ಎರೆಯಕ್ಕೆ ಊರ್ಗೋಗ್ತೀನಿ. ಎರಡು ದಿನ ಬರಕ್ಕಾಗಲ್ಲಮ್ಮ”.
“ಅಮ್ಮ, ಅದೂ ……… ತುಂಬ ತಲೆ ನೋವು ಬಂದ್ಬಿಟ್ಟಿತ್ತು, ಅದಕ್ಕೇ ನೆನ್ನೆ ಬರ್ಲಿಲ್ಲ”.
“ಅಮ್ಮ, ನಮ್ ಚಿಕ್ಕಪ್ಪನ ತಂಗೀ ಮಗ್ಳ್ ನಾದ್ನೀ ಮದ್ವೆ ಇದೆ. ಚಾಮರಾಜನಗರದಲ್ಲಿ. ಹೋಗ್ಬೇಕು. ಮೂರು ದಿನ ಬಿಟ್ಟು ಬರ್ತೀನಿ”.
“ನಮ್ ತಾಯೀಗ್ ಉಷಾರಿಲ್ಲ. ಆಸ್ಪತ್ರೇಗೋಗ್ಬೇಕು. ನಾಡಿದ್ದ್ ಕೆಲ್ಸಕ್ಕ್ ಬರ್ತೀನಿ”.
ಓಹ್, ಇಂತಹ ಚಿಕ್ಕಪುಟ್ಟ(!) ಕಲಿಕಾವಿಘ್ನಗಳು ಸಾಲದು ಎಂಬಂತೆ, ಮಧ್ಯೆ ಮಧ್ಯೆ `ದೊಡ್ಡ ಮಗಳ ಬಾಣಂತನ’, `ಚಿಕ್ಕ ಮಗಳ ಮದ್ವೆ’, `ಅಣ್ಣನ ಸೊಸೆ ಬಾಣಂತನ’, `ಮನೆಯಲ್ಲಿ ಸುಣ್ಣಬಣ್ಣ ಆಗ್ತಿದೆ’– ಇಂತಹ ದೀರ್ಘಾವಧಿ ರಜೆಗಳೂ ಸೇರಿ ನಮ್ಮ ಕನ್ನಡ ಪಾಠದ ಕಥೆ ಶಟ್ಲು ಟ್ರೈನಿಗೂ ಕಡೆ ಅನ್ನಿಸಿಬಿಟ್ಟಿತು. ಏನು ಮಾಡುವುದು, ಹೀಗಾದರೆ ಹೇಗೆ? ಎರಡಕ್ಷರ ಕಲಿಯುವುದು, ನಾಲ್ಕು ದಿನ ರಜೆ ಮೇಲೆ ಹೋಗುವುದು, ಮತ್ತೆ ಒಂದು ಅಕ್ಷರ ಕಲಿ, ಮತ್ತೆ ನಿಲ್ಲಿಸು …… ಹೀಗೆ ಮಾಡುತ್ತಾ ಮಾಡುತ್ತಾ ಕಲಿತದ್ದು ಮರೆತಂತೆ ಬೇರೆ ಆಗುತ್ತಿತ್ತು. ನನಗಂತೂ ಯಾಕೋ ಈ ಪ್ರಯಾಣ ಸರಿಯಾಗಿ ಸಾಗಬಹುದು ಎಂಬ ಧೈರ್ಯವೇ ಬರಲಿಲ್ಲ. `ಏನಪ್ಪಾ ಮಾಡುವುದು?’ ಎಂದು ಬಹಳ ಚಿಂತೆಯಾಯಿತು.
ಹೀಗೇ ತಲೆ ಕೆಡಿಸಿಕೊಂಡಿದ್ದಾಗ ಒಂದು ದಿನ ಒಂದು ವಿಚಾರ ಹೊಳೆಯಿತು. ಯಲ್ಲಮ್ಮನನ್ನು ಒಂದು ಕರಾರಿಗೆ ಸಿಕ್ಕಿಸಿದರೆ ಹೇಗೆ! ಎಂಬ ಯೋಚನೆ ಬಂತು. ಮಾರನೆಯ ದಿನ ವಿಜಯದಶಮಿ ಇತ್ತು.
ಸರಿ, ವಿಜಯ ದಶಮಿಯ ದಿನ ಯಲ್ಲಮ್ಮನನ್ನು ದೇವರ ಮನೆ ಮುಂದೆ ಕೂರಿಸಿಕೊಂಡು ಹೇಳಿದೆ – “ಯಲ್ಲಮ್ಮ, ಕಳೆದ ಒಂದೂವರೆ ವರ್ಷದಿಂದ ಕನ್ನಡ ಪಾಠ ಶುರು ಮಾಡೋದು, ನಿಲ್ಸೋದು, ಶುರು ಮಾಡೋದು, ನಿಲ್ಸೋದು ಆಗ್ತಾ ಇದೆ. ಹೀಗಾದ್ರೆ ನಾವು ಎಲ್ಲೂ ತಲುಪಲ್ಲ. ಇವತ್ತು ವಿಜಯದಶ್ಮಿ. ವಿದ್ಯಾರಂಭಕ್ಕೆ ಶುಭದಿನ, ಮುಹೂರ್ತ ನೋಡ್ಬೇಕಿಲ್ಲ ಅಂತಾರೆ. ಇವತ್ತಿನ್ ದಿನ ಮತ್ತೆ ಕನ್ನಡ ಪಾಠ ಶುರು ಮಾಡೋಣ. ಹ್ಮ್……. ಅಕ್ಟೋಬರ್ ಹದಿನೇಳು ಅಲ್ವಾ ಇವತ್ತು? ನೋಡಿ, ನಿಮಗೆ ಕನ್ನಡ ಕಲ್ತು ಮುಗಿಸಕ್ಕೆ ಡಿಸೆಂಬರ್ ಮೂವತ್ತೊಂದು ಕೊನೇ ದಿನ. ಜನವರಿ ಒಂದಕ್ಕೆ ಹೊಸ ವರ್ಷ. ಅವತ್ತು ಬೆಳಿಗ್ಗೆ ಬರೋ ಪ್ರಜಾವಾಣಿ ಪೇಪರ್ನ ನೀವು ಗಟ್ಟಿಯಾಗಿ ಓದ್ಬೇಕು. ನೀವು ಓದಿದ್ರೆ ನಾನು ನಿಮ್ಗೆ ಸಾವಿರ ರೂಪಾಯಿ ಬೆಲೇದು ಸೀರೆ ಕೊಡಿಸ್ತೀನಿ. ಓದದೇ ಇದ್ರೆ ನೀವು ನಂಗೆ ಸಾವಿರ ರೂಪಾಯಿ ಕೊಡ್ಬೇಕು, ಸರೀನಾ?’’
ಯಲ್ಲಮ್ಮನ ಮುಖದಲ್ಲಿ ತುಸು ಆಶ್ಚರ್ಯ ಕಾಣಿಸಿತು. ಯಾಕೋ ವಿಷ್ಯ ಸ್ವಲ್ಪ ಗಂಭೀರ ಆಗ್ತಾ ಇದೆ ಅನ್ನಿಸ್ತೇನೋ ಅವರಿಗೆ. ಆದ್ರೆ ಆಕೆ `ಆಯ್ತಮ್ಮ’ ಎಂದು ಒಪ್ಪಿದ್ರು.
ಸರಿ. ಮತ್ತೆ ನಮ್ಮ ರೈಲು ಹೊರಡ್ತು. ಈ ಸಲ ಯಲ್ಲಮ್ಮನಲ್ಲಿ ಹೆಚ್ಚು ಬದ್ಧತೆ ಕಾಣಿಸ್ತು ಅಂತ ನನಗೆ ಅನ್ನಿಸ್ತು. ಪಾಠಪುಸ್ತಕ ಮನೆಗೂ ತಗೊಂಡು ಹೋಗಕ್ಕೆ ಶುರು ಮಾಡಿದ್ರು. ಇವರು ಅಕ್ಷರ ತಿದ್ದುತ್ತಾ ಕೂತರೆ `ನಮ್ಮ್ ಯಲ್ಲಮ್ಮ ಈ ವಯಸ್ಸಲ್ಲಿ ಬರಿಯಕ್ಕೆ, ಓದಕ್ಕೆ ಶುರು ಮಾಡ್ತು, ಮಕ್ಳು, ಮೊಮ್ಮಕ್ಳು ಎಲ್ಲ ಆದ್ಮೇಲೆ’’ ಎಂದು ಅವರ ಮನೆ ಮಂದಿ ನಗೆಯಾಡಿದರಂತೆ.
ಕಾಗುಣಿತ, ಎರಡು ಅಕ್ಷರದ ಪದ, ಮೂರು ಅಕ್ಷರದ ಪದ, ಚಿಕ್ಕ ಚಿಕ್ಕ ವಾಕ್ಯ….. ಹೀಗೆ ಮುಂದುವರಿಯಿತು ಪಾಠ. ಈಗಲೂ ವಿಘ್ನಗಳು ಬರುತ್ತಿದ್ದವು. ಆದರೆ ಅದರ ನಡುವೆಯೂ ಯಲ್ಲಮ್ಮ ಓದು, ಬರಹ ಮುಂದುವರಿಸಿದರು. ಸಾವಿರ ರೂಪಾಯಿ ಕರಾರು ನನಗೂ ತುಸು ಧೈರ್ಯ ಕೊಡುತ್ತಿತ್ತು. ನಾನು ಅಲ್ಪ ಪ್ರಾಣ, ಮಹಾ ಪ್ರಾಣ, ಒತ್ತು, ದೀರ್ಘ, ಉಚ್ಚಾರ, ಉಕ್ತ ಲೇಖನ ಅಂತ ತಲೆ ತಿನ್ನುತ್ತಿದ್ದರೆ. “ಅಯ್ಯೋ, ಈ ಕನ್ನಡ ಮೇಡಂ ಹತ್ರ ಸಿಕ್ಕಿ ಬಿದ್ನಲ್ಲಪ್ಪಾ, ಬೇಕಿತ್ತ ನಂಗೆ ಇದು” ಅಂತ ಯಲ್ಲಮಂಗೆ ಅನ್ನಿಸ್ತಿತ್ತೋ ಏನೋ!
ಹಾಂ. ಬಂದುಬಿಡ್ತು ನಾವು ಕಾಯುತ್ತಿದ್ದ ದಿನ. ಜನವರಿ 1. ಅವತ್ತು ಬೆಳಿಗ್ಗೆ ಯಲ್ಲಮ್ಮ ನಮ್ಮ ಮನೆಗೆ ಬಂದ ತಕ್ಷಣ ನಾನು ಅವರ ಕೈಲಿ ಪ್ರಜಾವಾಣಿ ಕೊಟ್ಟೆ. ಅಕ್ಷರ ಕೂಡಿಸಿಕೊಂಡು ಅವರು ಓದಿಬಿಟ್ಟರು.
ಹುರ್ರೇ. ನನಗೆ ನಿಜಕ್ಕೂ ಖುಷಿ ಆಯಿತು. ಅವತ್ತು ಸಂಜೆ ನಾನು ನಮ್ಮ ಮನೆ ಹತ್ತಿರದ ಬಾಲಾಜಿ ಅಂಗಡಿಗೆ ಹೋಗಿ ತಿಳಿಹಸಿರು ಒಡಲು, ನೀಲಿ ಬಣ್ಣದ ಅಂಚು ಸೆರಗು ಇದ್ದ ಒಂದು ಗದ್ವಾಲ್ ಸೀರೆ (ಸಾವಿರ ರೂಪಾಯಿ ಬೆಲೆಯದು) ಕೊಡಿಸುವುದರೊಂದಿಗೆ ಈ ಪ್ರಸಂಗ ಸುಖಾಂತ್ಯಗೊಂಡಿತು.
ನಂತರದ ಮಾತು: ನಾನು ಬಯಸಿದ್ದಂತೆ ಗ್ರಂಥಾಲಯದಿಂದ ಕಥೆ, ಕಾದಂಬರಿ ಓದುವಷ್ಟರ ಮಟ್ಟಿಗೆ ಯಲ್ಲಮ್ಮ ಪ್ರವೀಣರಾಗಿಲ್ಲ ಎಂಬುದು ವಾಸ್ತವಾಂಶವಾದರೂ, ಓಡಾಡುವಾಗ ಬಸ್ಸುಗಳ ನಾಮಫಲಕ ಓದುವಷ್ಟರ ಮಟ್ಟಿಗೆ ಸಮರ್ಥರಾಗಿದ್ದಾರೆ ಅನ್ನಿಸಿ ತುಸು ಸಂತೋಷ ಆಗುತ್ತೆ. ಬಿಡುವಾಗಿದ್ದಾಗ ನಮ್ಮ ಮನೆಯ ಮೆಟ್ಟಲಿನಲ್ಲೋ, ಅಂಗಳದ ಬೆಂಚಿನಲ್ಲೋ ಅವರು ಕುಳಿತು ಮಯೂರ, ತರಂಗ ತಿರುವಿ ಹಾಕುವುದನ್ನು ನೋಡಲು ಸಂತೋಷ ಆಗುತ್ತೆ. ಯಾವುದೇ ವಯಸ್ಸಿನಲ್ಲಾಗಲೀ, ಅನಕ್ಷರಸ್ಥ ಸ್ಥಿತಿಯಿಂದ ಅಕ್ಷರಸ್ಥ ಸ್ಥಿತಿಗೆ ಪರಿವರ್ತಿತವಾಗುವುದು ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಅನ್ನಬಹುದು.

ಪೇಪರ್ ಉಲ್ಟಾ ಓದಿದ ಮಗ, ಗಾಬರಿಗೊಂಡ ತಂದೆ
2016ರ ಜೂನ್ ತಿಂಗಳಿರಬೇಕು. ನಮ್ಮ ಮಹಾರಾಣಿ ಕಾಲೇಜಿನಲ್ಲಿ ಒಂದು ದಿನ, ವಿಜ್ಞಾನ ವಿಭಾಗದ ಸಹೋದ್ಯೋಗಿಯೊಬ್ಬರು ನಮ್ಮ ಕನ್ನಡ ವಿಭಾಗಕ್ಕೆ ಬಂದರು. ಅವರ ಮುಖ ತುಸು ಚಿಂತಾಗ್ರಸ್ತವಾದಂತೆ ಕಂಡಿತು. “ನನ್ನ ಮಗಂಗೆ ಏನಾದ್ರೂ ಮಾಡಿ ಕನ್ನಡ ಹೇಳಿಕೊಡ್ಬೇಕಲ್ಲಾ ಮೇಡಂ. ಅವನು ಈಗ ಒಂಬತ್ತನೇ ತರಗತಿ. ಕೇಂದ್ರೀಯ ವಿದ್ಯಾಲಯದಲ್ಲಿ ಓದ್ತಾನೆ. ಅಲ್ಲಿ ಕನ್ನಡ ಇಲ್ಲ. ಹಿಂದಿ ಓದೋದು. ನಿನ್ನೆ ನಮ್ಮೂರು ಮೈಸೂರಿಗೆ ರೈಲಲ್ಲಿ ಹೋಗಿದ್ವಿ. ಯಾರ ಕೈಯಲ್ಲೋ ಇದ್ದ ಕನ್ನಡ ಪೇಪರ್ನ ನನ್ನ ಮಗ ಕೈಗೆತ್ತಿಕೊಂಡೋನು ಉಲ್ಟಾ ಹಿಡಕೊಂಡು ಓದಕ್ಕೆ ಹೋಗ್ಬಿಟ್ಟ ಮೇಡಂ. ಅವ್ರು `ಪೇಪರ್ ಉಲ್ಟಾ ಹಿಡಕೊಂಡಿದ್ದೀಯಲ್ಲಪ್ಪಾ! ನಿಂಗೆ ಕನ್ನಡ ಓದಕ್ಕೆ ಬರಲ್ವಾ?’ ಅಂದುಬಿಟ್ರು. ನಂಗೆ ತುಂಬ ಗಾಬರಿ ಆಯ್ತು. ಅಯ್ಯೋ, ನಾಳೆ ಈ ಮಗು ಗತಿ ಏನು? ಕನ್ನಡ ನಾಡಿನಲ್ಲಿ ಕನ್ನಡವೇ ಬರದೆ ಇದ್ರೆ ಕಷ್ಟ ಅಲ್ವಾ?’ ಅಂದರು. ಅವರ ಚಿಂತೆ, ತಳಮಳ ನನಗೆ ಅರ್ಥವಾಯಿತು. “ನನ್ನ ಹೆಂಡ್ತಿ ಅವನು ಎರಡನೇ ಕ್ಲಾಸಿನಲ್ಲಿದ್ದಾಗ ಕನ್ನಡ ಕಲಿಸಕ್ಕೆ ಪ್ರಯತ್ನ ಮಾಡಿದ್ಲು ಮೇಡಂ. ಸ್ವಲ್ಪ ಕಲ್ತಿದ್ದ. ಆಮೇಲೆ ಸ್ಕೂಲು ಪಾಠ ಜಾಸ್ತಿ ಇರುತ್ತೆ, ಟೈಮಿಲ್ಲ ಅದೂ ಇದೂ ಅಂತ ಮುಂದುವರಿಸದೆ ಎಲ್ಲ ಮರೆತುಬಿಟ್ಟ ………………”. ಅವರ ಚಿಂತೆ ನನಗೆ ಅರ್ಥವಾಯಿತು. ಈಗಲೂ ಆ ಮಗು ಕನ್ನಡ ಕಲಿಯಬಹುದು ಅನ್ನಿಸಿತು. “ನಿಮ್ಮ ಕಾಳಜಿ ನಂಗೆ ತಿಳೀತು ಸರ್. ಆದ್ರೆ ಈಗ್ಲೂ ಕಾಲ ಮಿಂಚಿಲ್ಲ. ಅವನು ಕನ್ನಡ ಸಾಹಿತ್ಯ ಪರಿಷತ್ನ ಕನ್ನಡ ಪ್ರವೇಶ ಪರೀಕ್ಷೆ ತಗೊಂಡು, ಅ ಆ ಇ ಈ ಯಿಂದ ಶುರು ಮಾಡಿ, ಓದಕ್ಕೆ ಬರಿಯಕ್ಕೆ ಕಲೀಬಹುದು” ಅಂದೆ. ನಾನೇ ಆ ಹುಡುಗನಿಗೆ ಕಲಿಸುವ ಪ್ರಯತ್ನ ಯಾಕೆ ಮಾಡಬಾರದು ಅನ್ನಿಸ್ತು. ಆ ವರ್ಷದ ಜುಲೈ ತಿಂಗಳಿನಿಂದ ಜನವರಿ ತನಕ ಈ ಕೆಲಸ ಮಾಡಿದೆವು. ಆ ಹುಡುಗ, ಅವನ ಅಪ್ಪ, ಅಮ್ಮ ಮತ್ತು ನಾನು. ನಾಲ್ಕು ಜನ. ಪಾಪ ಅವನು ಶಾಲೆ ಪಾಠದ ನಡುವೆ ಕನ್ನಡ ಪಾಠಗಳನ್ನೂ ಕಲಿತು, ಕಲಿತು ಬರೆದೇ ಬರೆದ. ಜನವರಿಯಲ್ಲಿ ಆ ಪರೀಕ್ಷೆ ನಡೆದು ಅವನು ಉತ್ತೀರ್ಣ ಆದಾಗ ನನಗೆ ತುಂಬ ಸಂತೋಷ ಆಯಿತು. ಅವರ ಮನೆಯವರಿಗೂ ಖುಷಿ ಆಯಿತು.
*******
ಗುರುತಿನ ಚೀಟಿಯ ಪ್ರಸಂಗ
ನಮ್ಮ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕೆಲಸನಲ್ಲಿ ನಡೆದ ಇನ್ನೊಂದು ಕನ್ನಡ ಪ್ರಸಂಗ ಇದು. ಅದಕ್ಕೊಂದು ಹಿನ್ನೆಲೆ ಇದೆ. ನನ್ನ ವಿದ್ಯಾರ್ಥಿನಿಯರೊಂದಿಗೆ ಆದಷ್ಟೂ ಕನ್ನಡ ಪದಗಳನ್ನು ಬಳಸಿ ಮಾತಾಡುವ ಪ್ರಯತ್ನದಲ್ಲಿ ನಾನು ತೊಡಗಿರುತ್ತೇನೆ. ಬೆಂಗಳೂರಿಗರು ವ್ಯಾಪಕವಾಗಿ ಬಳಸುವ `ಕಂಗ್ಲೀಷನ್ನು’ (ಅಂದರೆ, ಕನ್ನಡ ಇಂಗ್ಲಿಷ್ ಸೇರಿದ ಒಂದು ಭಾಷಾರೂಪವನ್ನು) ಕಡಿಮೆ ಬಳಸಬೇಕು ಎಂಬ ಉದ್ದೇಶವು ಸಹ ಇದರ ಹಿಂದೆ ಇದೆ ಅನ್ನಿ. ಹೀಗಾಗಿ, ಕೆಲಸದ ಸ್ಥಳದ ನನ್ನ ಮಾತುಗಳಲ್ಲಿ `ನಮಸ್ತೆ, ತರಗತಿ, ವೇಳಾಪಟ್ಟಿ, ಸಮಯ, ತುರ್ತು, ನಿಯೋಜಿತ ಕಾರ್ಯ, ಕಿರುಪರೀಕ್ಷೆ, ಗಂಟೆ, ಧನ್ಯವಾದ, ಪ್ರಶ್ನೆ, ಉತ್ತರ’ ಮುಂತಾದ ಕನ್ನಡ ಪದಗಳು ಕೇಳಿಸುತ್ತಿರುತ್ತವೆ. ಪದವಿ ತರಗತಿಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವ ವಿದ್ಯಾರ್ಥಿನಿಯರಿಗೆ ಕನ್ನಡ ಪದಗಳ ಪರಿಚಯ ಹೆಚ್ಚು ಹೆಚ್ಚು ಆಗಲಿ ಎಂಬ ಉದ್ದೇಶ ನನ್ನದು.
ನನ್ನ `ಕನ್ನಡ ಬಳಕೆಯ ಪ್ರಯತ್ನ’ದ ಭಾಗವಾಗಿ ತರಗತಿಯಲ್ಲಿ ಮತ್ತು ಕನ್ನಡ ವಿಭಾಗದಲ್ಲಿ ವಿದ್ಯಾರ್ಥಿನಿಯರು ಕೂಡ ಕನ್ನಡ ಪದ ಬಳಸಿ ಎಂದು ಪ್ರೋತ್ಸಾಹಿಸುತ್ತಾ ಕೆಲವೊಮ್ಮೆ ತುಸು ಬಲವಂತಿಸುತ್ತಾ(!)ಇರುತ್ತೇನೆ. ಕನ್ನಡ ಅಧ್ಯಾಪಕರ ಮಟ್ಟಿಗೆ ಇದು ಅಂತಹ ವಿಶೇಷ ವಿಷಯವೇನೂ ಅಲ್ಲವಾದರೂ ಕೆಲವೊಮ್ಮೆ ನನಗೆ ಇದರಿಂದ ವಿಚಿತ್ರ ಅನುಭವಗಳಾಗಿರುವುದುಂಟು!
ಒಮ್ಮೆ ವಿದ್ಯಾರ್ಥಿನಿಯೊಬ್ಬಳು ಬಸ್ ಪರವಾನಗಿ (ಬಸ್ ಪಾಸ್) ಪಡೆಯುವುದಕ್ಕೋಸ್ಕರ ಅವಳ ದಾಖಲೆಗಳ ದೃಢೀಕರಣಕ್ಕಾಗಿ ನಮ್ಮ ವಿಭಾಗಕ್ಕೆ (ಅಧ್ಯಾಪಕರು ಕುಳಿತುಕೊಳ್ಳುವ ಕೊಠಡಿಗೆ) ಬಂದಿದ್ದಳು. ಆ ದೃಢೀಕರಣ ಮಾಡುವ ಜವಾಬ್ದಾರಿಯನ್ನು ನನಗೆ ವಹಿಸಿದ್ದರಾಗಿ ಆ ಸಂದರ್ಭದಲ್ಲಿ ಅವಳ ಗುರುತಿನ ಚೀಟಿಯ ಸಂಖ್ಯೆಯನ್ನು ದಾಖಲಿಸಿಕೊಳ್ಳವುದಿತ್ತು. ನಮ್ಮಲ್ಲಿ ವಿದ್ಯಾರ್ಥಿನಿಯರು ಗುರುತಿನ ಚೀಟಿಗೆ `ಐಡಿ’(ಇಂಗ್ಲಿಷ್ ಪದ ಐಡೆಂಟಿಟಿ ಕಾರ್ಡ್ನ ಕಿರುರೂಪ) ಎಂದು ಕರೆಯುತ್ತಾರೆ, ಮತ್ತು ಯಾವಾಗಲೂ ಅದನ್ನು ತಮ್ಮ ಕುತ್ತಿಗೆಗೆ ತುಸು ಅಗಲವಾದ ದಾರವೊಂದರಿಂದ ಅದನ್ನು ತೂಗು ಹಾಕಿಕೊಂಡಿರುತ್ತಾರೆ. ನಾನು ಈ ಹುಡುಗಿಗೆ “ನಿನ್ನ ಗುರುತಿನ ಚೀಟಿ ಕೊಡಮ್ಮ” ಅಂದೆ. ಅವಳು ಗಾಬರಿಯಿಂದ “ಅದು ಇಲ್ಲ ಮ್ಯಾಮ್” ಅಂದಳು. ಪಾಪ, ಅದು ಅವಳ ಕುತ್ತಿಗೆಯಲ್ಲೇ ತೂಗುತ್ತಿತ್ತು. ಈ ಘಟನೆಯು ಘಟಿಸುತ್ತಿದ್ದಾಗ ನಮ್ಮ ಕೋಣೆಯಲ್ಲೇ ಕುಳಿತಿದ್ದ ಇಂಗ್ಲಿಷ್ ಅಧ್ಯಾಪಕಿಯೊಬ್ಬರು ಮುಗುಳ್ನಗುತ್ತಾ “ಅದು ನಿನ್ನ ಮೈಮೇಲೇ ಇದೆಯಲ್ಲಮ್ಮ” ಅಂದರು. ಆದರೂ ಆ ಹುಡುಗಿಗೆ ಗುರುತಿನ ಚೀಟಿ ಅಂದರೆ ಏನೆಂದು ಗೊತ್ತಾಗಲಿಲ್ಲ. ಏನು ಒತ್ತಡ ಇತ್ತೋ ಏನೋ ಪಾಪ ಅವಳಿಗೆ! ಗಾಬರಿ ಬಿದ್ದು `ಇಲ್ಲ ಮ್ಯಾಮ್, ಇಲ್ಲ ಮ್ಯಾಮ್’ ಅನ್ನಲು ಶುರು ಮಾಡಿದಳು. ಆಗ ನಾನು ಅವಳ ಫಜೀತಿ ನೋಡಲಾರದೆ `ನಿನ್ನ ಐಡಿ ಕಾರ್ಡ್ ಅಲ್ವಾ ಕೇಳಿದ್ದು? ತೋರಿಸಮ್ಮಾ’ ಅಂದೆ. “ಅಯ್ಯೋ, ಇದಾ ಮ್ಯಾಮ್” ಅಂದಳು. ಅವಳಿಗೂ ತುಸು ನಗು ಬಂತು. ಅವಳ ಕೆಲಸ ಮುಗಿದು ಹೊರಡುವಾಗ ಅವಳನ್ನು “ಈಗ ಹೇಳಮ್ಮ, ಐಡಿಗೆ ಕನ್ನಡದಲ್ಲಿ ಏನಂತಾರೆ?’’ಎಂದು ಕೇಳಿದೆ. ಮ್ ಮ್ ಎಂದು ತುಸು ತಡವರಿಸಿ `ಗು….ಗು….ಗುರುತು…. ಗುರುತಿನ್ ಚೀಟಿ’ಅಂದಳು. ನಮ್ಮ ವಿಭಾಗದಲ್ಲಿ ಒಂದು ನಗೆ ಎಳೆಬಿಸಿಲಿನಂತೆ ಪಸರಿಸಿತು.
ಗುಟ್ಟಿನ ಮಾತು: ನನ್ನ ಇಂತಹ ಅನುಭವಗಳಿಗೆ ಇಂದಿನ ಬೆಂಗಳೂರಿಗರ ಕನ್ನಡ-ಇಂಗ್ಲಿಷ್ ನುಡಿಬೆರಕೆಯ `ಭಾಷಾಭ್ಯಾಸ’ವು ಕಾರಣವಾದಂತೆ, ನನ್ನಲ್ಲಿ `ಕನ್ನಡದ್ದೇ ಪದ ಬಳಕೆ ಮಾಡಬೇಕೆಂಬ’ ಮತ್ತು ಸಾಲದ್ದಕ್ಕೆ ನನ್ನ ವಿದ್ಯಾರ್ಥಿಗಳಿಂದಲೂ ಮಾಡಿಸಬೇಕೆಂಬ `ಜಿಗುಟುತನ’!? ಮೂಡಿರುವುದೂ ಕಾರಣವಿರಬೇಕು ಅಂತ ನನ್ನ ಮನೆಯಲ್ಲಿ ತಮಾಷೆ ಮಾಡುತ್ತಿರುತ್ತಾರೆ. ಅಯ್ಯೋ.

ಅಂತೂ ಈ ಕನ್ನಡ ಕಲಿಕೆಯ ಪ್ರಸಂಗಗಳನ್ನು ಓದಿದವರ ಮುಖದಲ್ಲಿ ಮುಗುಳ್ನಗೆ ಮೂಡಿದರೆ ಈ ಬರಹ ಸಾರ್ಥಕಗೊಳ್ಳುತ್ತೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
