Advertisement
ಕನ್ನಡ ಮನಸ್ಸು ಪ್ರೀತಿಯನ್ನು ಪರಿಭಾವಿಸುವ ರೀತಿ: ಎಲ್.ಜಿ.ಮೀರಾ ಅಂಕಣ

ಕನ್ನಡ ಮನಸ್ಸು ಪ್ರೀತಿಯನ್ನು ಪರಿಭಾವಿಸುವ ರೀತಿ: ಎಲ್.ಜಿ.ಮೀರಾ ಅಂಕಣ

ಆಧುನಿಕ ಕನ್ನಡ ಸಾಹಿತ್ಯದ ಬಹಳ ಮುಖ್ಯ ಘಟ್ಟವಾದ ನವೋದಯದಲ್ಲಿ ಪ್ರೇಮವನ್ನು ದಾಂಪತ್ಯದೊಳಗಿದ್ದಾಗ ಸಂಭ್ರಮಿಸುವ ಹಾಗೂ ಒಂದು ವೇಳೆ ಅದು ದಾಂಪತ್ಯದ ಹೊರಗಿದ್ದಾಗ ಅದನ್ನು ತ್ಯಾಗ ಮಾಡುವ ಮನೋಧರ್ಮ ಕಾಣುತ್ತಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿದ್ದ ನವ ಭಾರತ ನಿರ್ಮಾಣದ ಆಶಯ, ಸುಧಾರಣಾವಾದ, ಬ್ರಿಟಿಷರ ಕಣ್ಣಲ್ಲಿ ಭಾರತದ `ಸಭ್ಯ ಸಂಸ್ಕೃತಿ’ಯನ್ನು ಎತ್ತಿ ಹಿಡಿಯುವ ನೈತಿಕ ತವಕ ಇವು ಕುವೆಂಪು, ಬೇಂದ್ರೆ, ಪುತಿನ ಮುಂದೆ ಕೆ.ಎಸ್.ನರಸಿಂಹಸ್ವಾಮಿ ಇವರೆಲ್ಲರ ಪ್ರೀತಿಯ ಚಿತ್ರಣವನ್ನು ಪ್ರಭಾವಿಸಿದವು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೊಂದನೆಯ ಬರಹ

ಕನ್ನಡದ ಮನಸ್ಸು ಪ್ರೀತಿಯನ್ನು ಪರಿಭಾವಿಸುವ ರೀತಿ ಯಾವುದು ಎಂಬುದು ಒಂದು ಕುತೂಹಲಕರ ಪ್ರಶ್ನೆ. ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗಳಲ್ಲಿ ಪ್ರೀತಿಯ ಚಿತ್ರಣ ಹೇಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡೆವೆಂದರೆ ಕನ್ನಡ ಮನಸ್ಸು ಪ್ರೀತಿಯನ್ನು ಪರಿಭಾವಿಸುವ ರೀತಿ ಯಾವುದು ಎಂದು ಅರ್ಥ ಮಾಡಿಕೊಂಡಂತೆಯೇ ಸರಿ.

ನಮ್ಮ ಸಾಹಿತ್ಯದ ತಾಯಿಬೇರಾದ ಜನಪದ ಸಾಹಿತ್ಯಕ್ಕೆ ಹೋದರೆ ಅಲ್ಲಿನ ಪ್ರೀತಿ ಪ್ರೇಮದ ಚಿತ್ರಣವು ಗರತಿಯ ಹಾಡಿನ ತ್ರಿಪದಿಗಳಲ್ಲಿ ಸಿಗುತ್ತದೆ. “ಹಚ್ಚಡದೊಳಗೆ ಅಚ್ಚ ಮಲ್ಲಿಗೆ ಹೂವ ಬಿಚ್ಚಿ ಎಸೆವಂಥಾ ರಾಯರ… ಬಿಟ್ಯ್ಹಾಂಗೆ ಬರಲೇ ಹಡೆದವ್ವ” ಎಂದು ತನ್ನ ತಾಯಿಗೆ ಮಗಳೊಬ್ಬಳು ಹೇಳುವ ಒಂದು ಪ್ರಸಿದ್ಧ ತ್ರಿಪದಿ ಇದಕ್ಕೆ ಉದಾಹರಣೆ. ಗಂಡ ಹೆಂಡತಿಯ ಪ್ರೀತಿಯ ನವಿರು, ಮನಮೋಹಕತೆ, ಗಾಢತೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ತ್ರಿಪದಿಯಿದು. ಇನ್ನೊಂದು ತ್ರಿಪದಿಯಲ್ಲಿ ತನ್ನ ಮುದ್ದಿನ ಮಡದಿಗೆ `ಹಾಸಿಗೆ ಹಾಸಲು, ಮಲ್ಲಿಗೆ ಮುಡಿಯಲು, ತನ್ನ ಪ್ರೀತಿಯಲ್ಲಿ ತವರನ್ನು ಮರೆಯಲು ಹೇಳುವ ಗಂಡ ಕಂಡುಬರುತ್ತಾನೆ. `ನಿಂಬೇಯ ಹಣ್ಣಂಗೆ ತುಂಬಿದ ಮೈಯೋಳ ಮೇಲೆ ಮನಸ್ಸಾದ’ ಯುವಕ `ಎತ್ತಿಗಂತ ನಾನು ಬರ್ತೀನ್, ಎಮ್ಮೆಗಂತ ನೀನು ಬಾರೆ, ಕುಂತು ನಿಂತು ಮಾತನಾಡೋಣ’ ಎಂದು ಹುಡುಗಿಗೆ ಆಹ್ವಾನ ನೀಡುವ ಪ್ರೀತಿಯ ಸಾಲುಗಳು ಸಿಗುತ್ತವೆ. ಗ್ರಾಮೀಣ ಜೀವನದ ಸರಳ, ಮುಗ್ಧ ಬದುಕಿನಲ್ಲಿರುವಂತಹ ಕುಟುಂಬ ಬಳಗಗಳೊಳಗೆ ಸಲ್ಲುವ ಪ್ರೀತಿ ಇಲ್ಲಿನ ಹೂರಣ ಅನ್ನಬಹುದು.

 *****

 ಇನ್ನು ನಮ್ಮ ಪ್ರಾಚೀನ ಸಾಹಿತ್ಯವಾದ ಹಳಗನ್ನಡ ಸಾಹಿತ್ಯಕ್ಕೆ ಬಂದರೆ ಅಲ್ಲಿ ನಮಗೆ, ಪಂಪನ ಆದಿಪುರಾಣದ ಶ್ರೀಮತಿ-ವಜ್ರಜಂಘರ ಪ್ರೇಮದ ಪ್ರಸಂಗ, ಲಲಿತಾಂಗ – ಸ್ವಯಂಪ್ರಬೆಯರ ಪ್ರೇಮದ ಪ್ರಸಂಗ, ನಾಗವರ್ಮನ ಕರ್ಣಾಟಕ ಕಾದಂಬರಿಯಲ್ಲಿ ಪುಂಡಲೀಕ-ಮಹಾಶ್ವೇತೆಯರ ಜನ್ಮಾಂತರಗಳ ಪ್ರೀತಿಯ ಪ್ರಸಂಗಗಳು ಸಿಗುತ್ತದೆ. ಪ್ರೇಮ ವಿವಾಹವಾದ ನಳ – ದಮಯಂತಿ, ಗಾಂಧರ್ವ ವಿವಾಹವಾದ ದುಷ್ಯಂತ – ಶಕುಂತಲೆ, ಸ್ವಯಂವರಕ್ಕೆ ಒಳಗಾದ ಸೀತೆ – ರಾಮ, ಹಾಗೂ ದ್ರೌಪದಿ-ಪಂಚಪಾಂಡವರು, ವಿವಾಹವಾಗದೆ ಪ್ರೀತಿಸಿದ ರಾಧೆ-ಕೃಷ್ಣ…. ಹೀಗೆ ವಿವಿಧ ಬಗೆಯ ಪೌರಾಣಿಕ ಪ್ರೇಮಕಥೆಗಳನ್ನು ನಾವು ನೋಡಬಹುದು.

ಮುಂದೆ, ಕನ್ನಡದ ವಿಶಿಷ್ಟತೆ ಅನ್ನಿಸಿಕೊಂಡ ವಚನ ಸಾಹಿತ್ಯದಲ್ಲಿ ಶರಣಸತಿ – ಲಿಂಗಪತಿ ಭಾವ, ಸತಿಪತಿಗಳೊಂದಾದ ಪ್ರೀತಿ ಶಿವನಿಗೆ ಸಲ್ಲುವಂಥದ್ದು ಇವು ಒಂದು ಕಡೆಯಾದರೆ, ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು ಎಂದು ಹೇಳಿ ಲೋಕದ ಗಂಡಂದಿರನ್ನು ತಿರಸ್ಕರಿಸಿ, ಆಧ್ಯಾತ್ಮಿಕ ಪ್ರೇಮದಿಂದ ಮಲ್ಲಿಕಾರ್ಜುನ ಲಿಂಗಕ್ಕೆ ಶರಣಾದ ಅಕ್ಕಮಹಾದೇವಿ ನಮಗೆ ಕಾಣಿಸುತ್ತಾಳೆ. ಗಂಡು ಹೆಣ್ಣಿನ ಪ್ರೇಮಕ್ಕೆ ಒಂದು ಅಲೌಕಿಕ ಪರಿವೇಷ ಕೊಟ್ಟ ಬಗೆ ಇದು. ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆ ಬಾವಿಗಳುಂಟು, ಶಯನಕ್ಕೆ ಪಾಳುದೇಗುಲಗಳುಂಟು, ಆತ್ಮಸಂಗಾತಕ್ಕೆ ನೀವೆನಗುಂಟು ಎಂದು ಹೇಳಿದ ಅಕ್ಕ, ಆತ್ಮಸಂಗಾತ ಎಂಬ ಪರಿಕಲ್ಪನೆಯನ್ನು ಕೊಟ್ಟು ಮುಂದೆ ಅನೇಕ ಪೀಳಿಗೆಗಳ ಕಾಲ ಕನ್ನಡ ನಾಡಿನ ಹೆಣ್ಣುಗಳ ಮನಸ್ಸನ್ನು ಪ್ರಭಾವಿಸಿದಳು ಎಂದರೆ ಅದು ಉತ್ಪ್ರೇಕ್ಷೆ ಅಲ್ಲ. ಹೆಂಗಸರು ಹೇಗಿರಬೇಕು ಎಂದು ಬುದ್ಧಿಮಾತು ಹೇಳಿದ ದಾಸರು, ಗಂಡನ ಮನಸ್ಸನ್ನು ಹೆಂಡತಿ ಹೇಗೆ ಗೆಲ್ಲಬೇಕು ಎಂದು ತನ್ನ ಹದಿಬದೆಯ ಧರ್ಮದಲ್ಲಿ ಕಿವಿಮಾತು ಹೇಳಿದ ಸಂಚಿ ಹೊನ್ನಮ್ಮ, ಕಾಮವನ್ನು ಹಾವು ಎಂಬ ಪ್ರತೀಕದಲ್ಲಿ ಹಿಡಿದಿಟ್ಟ ಶಿಶುನಾಶ ಶರೀಫರಂತಹ ತತ್ವಪದಕಾರರು ಕನ್ನಡ ಮನಸ್ಸು ಪ್ರೀತಿಯನ್ನು ಪರಿಭಾವಿಸಿದ ಮಿತಿ, ರೀತಿ ಎರಡಕ್ಕೂ ಸಾಕ್ಷಿ.

ಪ್ರೀತಿಯು ಈ ಲೋಕವನ್ನು ಸುತ್ತುವಂತೆ ಮಾಡುತ್ತದೆ ಎಂಬ ಜನಜನಿತ ನಾಣ್ಣುಡಿ ಇದೆ ಆಂಗ್ಲ ಭಾಷೆಯಲ್ಲಿ. ಜೀವನದ ಯಾತನೆಯನ್ನು ತುಸು ಕಡಿಮೆ ಮಾಡುವ ಹಾಗೂ ಆತ್ಮದ ಒಂಟಿತನವನ್ನು ನೀಗಿಸುವ ಶ್ರೇಷ್ಠ ದರ್ಜೆಯ ಪ್ರೇಮವು ಎಲ್ಲ ವ್ಯಕ್ತಿಗಳಿಗೂ ಸಿಗುವುದಿಲ್ಲ, ಅನ್ನಿಸುತ್ತೆ. ಅದು ಒಂದು ವೇಳೆ ಸಿಕ್ಕಿದರೂ ಜೀವನದ ಎಲ್ಲ ಸಮಸ್ಯೆಗಳೂ ಪರಿಹಾರವಾಗಿಬಿಟ್ಟವು ಎಂದು ಅರ್ಥವಲ್ಲ. ಪ್ರೇಮದ ನಾಣ್ಯವು ಚಲಾವಣೆಯಲ್ಲಿದೆ ಎಂದರೆ ಅದಕ್ಕೆ ಯಾವುದೇ ಚಲಾವಣೆಯಲ್ಲಿರುವ ನಾಣ್ಯಕ್ಕೆ ಇರುವಂತೆ ಎರಡು ಮುಖಗಳಿರುತ್ತವೆ. ಒಂದು ಮೈಮರೆಸುವ, ಬದುಕಿನ ಯಾತನೆ ಮರೆಸುವ ಮಿಲನದ ರಸಘಳಿಗೆಯ ಮುಖ, ಇನ್ನೊಂದು ಯಾತನೆಯ ಮಡುವಿನಲ್ಲಿ ಬೀಳಿಸಿ ಒದ್ದಾಡಿಸುವ ತೀವ್ರ ವಿರಹದ ಮುಖ. ಪ್ರೇಮ ಬೇಕು ಎಂದರೆ ಈ ಎರಡು ಮುಖಗಳನ್ನೂ ಸ್ವೀಕರಿಸಲೇಬೇಕು.

ಇನ್ನೊಂದು ವಿಷಯ ಅಂದರೆ ಪ್ರೇಮ ಸಫಲವಾಗಬೇಕು ಎಂದರೆ ವಿಪರೀತ ಸಹನೆ ಮತ್ತು `ಆಯ್ತು, ಬಿಡಪ್ಪ’ಎಂದು ಬಿಟ್ಟುಕೊಡುವ ಗುಣ ಇರಬೇಕು. ನಿರಾಸೆ, ಗೊಂದಲ, ಹತಾಶ ಕ್ಷಣಗಳು, ಕೊನೆಯಿಲ್ಲದಂತೆ ತೋರುವ ಕಾಯುವಿಕೆ, ಇವನ್ನೆಲ್ಲ ತಾಳಿಕೊಳ್ಳುವಷ್ಟು ನಂಬಿಕೆ, ಸಕಾರಾತ್ಮಕ ಮನೋಭಾವ ಇರಬೇಕು. ಇದು ಇದ್ದರೆ ಪ್ರೇಮ ಗೆಲ್ಲುತ್ತೆ ಅನ್ನಿಸುತ್ತೆ.

ಭಾರತೀಯ ವಿವಾಹಿತೆಯ ಒಂಟಿತನಕ್ಕಿಂತ ಭಯಂಕರವಾದುದು ಬಹುಶಃ ಪ್ರಪಂಚದಲ್ಲಿ ಯಾವುದೂ ಇಲ್ಲ. ಗಂಡ ತನಗೆ ಕೊಡುವ ಪ್ರೀತಿ, ವಿಶ್ವಾಸಗಳು ಸಾಲದು ಎಂಬ ಅತೃಪ್ತಿ ಕಾಡಿಬಿಟ್ಟರೆ ತುಂಬ ಕಷ್ಟ. ಕೆಲವು ಪ್ರಶ್ನೆಗಳು ನನ್ನನ್ನು ಕಾಡುತ್ತವೆ. ಇಡೀ ಜೀವನ ಜೊತೆಯಲ್ಲಿರುವವರ ಬಗ್ಗೆ ಒಂದು ಅಸಡ್ಡೆ ಬರುವುದು ಸಹಜ ಅಲ್ಲವೇ? `ಫೆಮಿಲಿಯಾರಿಟಿ ಬ್ರೀಡ್ಸ್ ಕಂಟೆಂಪ್ಟ್’ ಎಂಬ ಮಾತು ಇದೆ ಅಲ್ಲ? ಜೀವನ ಸಂಗಾತಿಗಳಲ್ಲಿ ಒಬ್ಬರು ಸಾಧಿಸಿದ ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ಎತ್ತರವನ್ನು ಅದೇ ಸಮಯದಲ್ಲಿ ಇನ್ನೊಬ್ಬರೂ ಸಾಧಿಸಿಬಿಡುತ್ತಾರಾ? ನೋಡಿದ ತಕ್ಷಣ ಸಂಭ್ರಮ ಹುಟ್ಟುವ ಭಾವ ವೈವಾಹಿಕ ಜೊತೆಗಾರರಲ್ಲಿ ಸದಾ ಉಳಿಯುತ್ತದೆಯೇ? ವಸ್ತುನಿಷ್ಠವಾಗಿ ಇಂತಹ ಪ್ರಶ್ನೆಗಳನ್ನು ಕೇಳುತ್ತೆ ಮನಸ್ಸು. ಆದರೆ ಉತ್ತರ ಎಲ್ಲಿ? ಇದಕ್ಕೆ ಸಾರ್ವತ್ರಿಕ ಉತ್ತರ ಎಂಬುದು ಇದೆಯೇ? ಮತ್ತೆ ಪ್ರಣಯಭಾವ (ರೊಮ್ಯಾನ್ಸ್) ಎಂಬುದು ಮದುವೆಯಂತಹ ಆರಿದ ಅಡುಗೆಯಲ್ಲಿ ಇರಲು ಸಾಧ್ಯವೇ? ಏಕಸಂಗಾತಿ ವ್ರತ ಎಂಬುದು ಆಸ್ತಿ ಹಂಚಿಕೆ ಮತ್ತು ಮಕ್ಕಳ ರಕ್ಷಣೆಗಾಗಿ ಹೇರಲ್ಪಟ್ಟಿರುವ ಪಿತೃವ್ಯವಸ್ಥೆಯ ಒಂದು ಸಾಮಾಜಿಕ ನಿರ್ಮಿತಿಯೇ? ವಿವಾಹವು ಕೊಡುವ ಭದ್ರತೆ, ಸುರಕ್ಷೆ ಮತ್ತು ಸಾಮಾಜಿಕ ಸ್ಥಾನಮಾನಕ್ಕಾಗಿ ವ್ಯಕ್ತಿಯು ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಬಿಟ್ಟು ಕೊಡುತ್ತಾನೆ ಅಲ್ಲವೇ? ಅಂದರೆ ವಿವಾಹ ಒಂದು ಸಾಮಾಜಿಕ ಒಪ್ಪಂದ ಅಷ್ಟೇ ಎಂದಾಯ್ತು.

ಈ ದೃಷ್ಟಿಯಿಂದ ನೋಡಿದಾಗ ಎರಿಕ್ ಫ್ರಾಂ ಅವರ `ದ ಆರ್ಟ್ ಆಫ್ ಲವಿಂಗ್’ ಪುಸ್ತಕದ `ಪ್ರೀತಿ ಒಂದು ಕಲೆಯೆ?’ ಎಂಬ ಕನ್ನಡಾನುವಾದ ನೆನಪಾಗುತ್ತದೆ. ಇದನ್ನು ಕೆ.ವಿ.ನಾರಾಯಣ ಹಾಗೂ ಎಚ್.ಎಸ್.ರಾಘವೇಂದ್ರರಾವ್ ಅವರು ಕನ್ನಡಕ್ಕೆ ತಂದಿದ್ದಾರೆ. ಇದರಲ್ಲಿ ವೀಣೆ ನುಡಿಸುವಂತೆ, ಚಿತ್ರ ಬರೆಯುವಂತೆ, ಕಲ್ಲು ಮರ ಮುಂತಾದ ವಸ್ತುಗಳಿಂದ ಕಲಾಕೃತಿಯನ್ನು ತಯಾರಿಸುವುದನ್ನು ಮನುಷ್ಯರು ಹೇಗೆ ಕಲಿಯುತ್ತಾರೆಯೋ ಹಾಗೆ ಪ್ರೀತಿಯು ಸಹ ಕಲಿಯಬೇಕಾದ ಒಂದು ಕಲೆ ಎಂಬ ಚಿಂತನೆ ವ್ಯಕ್ತವಾಗಿದೆ. ಪ್ರೀತಿಯನ್ನು ಕುರಿತು ತುಂಬ ಪ್ರಬುದ್ಧವಾಗಿ ಯೋಚಿಸಿ ಬರೆದ ಪುಸ್ತಕ ಇದು.

 ದಾಂಪತ್ಯದೊಳಗಿನ ಪ್ರೇಮ – ಆಧುನಿಕ ಕನ್ನಡ ಸಾಹಿತ್ಯದ ಬಹಳ ಮುಖ್ಯ ಘಟ್ಟವಾದ ನವೋದಯದಲ್ಲಿ ಪ್ರೇಮವನ್ನು ದಾಂಪತ್ಯದೊಳಗಿದ್ದಾಗ ಸಂಭ್ರಮಿಸುವ ಹಾಗೂ ಒಂದು ವೇಳೆ ಅದು ದಾಂಪತ್ಯದ ಹೊರಗಿದ್ದಾಗ ಅದನ್ನು ತ್ಯಾಗ ಮಾಡುವ ಮನೋಧರ್ಮ ಕಾಣುತ್ತಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿದ್ದ ನವ ಭಾರತ ನಿರ್ಮಾಣದ ಆಶಯ, ಸುಧಾರಣಾವಾದ, ಬ್ರಿಟಿಷರ ಕಣ್ಣಲ್ಲಿ ಭಾರತದ `ಸಭ್ಯ ಸಂಸ್ಕೃತಿ’ಯನ್ನು ಎತ್ತಿ ಹಿಡಿಯುವ ನೈತಿಕ ತವಕ ಇವು ಕುವೆಂಪು, ಬೇಂದ್ರೆ, ಪುತಿನ ಮುಂದೆ ಕೆ.ಎಸ್.ನರಸಿಂಹಸ್ವಾಮಿ ಇವರೆಲ್ಲರ ಪ್ರೀತಿಯ ಚಿತ್ರಣವನ್ನು ಪ್ರಭಾವಿಸಿದವು. ಜೇನಾಗುವಾ, ಸಖೀಗೀತ, ಮೈಸೂರು ಮಲ್ಲಿಗೆಗಳ ಸಜ್ಜನಿಕೆಯ, ಕಾಮದ ಚಿತ್ರಣಕ್ಕೆ ಒಂದು ರೀತಿಯಲ್ಲಿ ಕತ್ತರಿ ಪ್ರಯೋಗ ಮಾಡಿದ ರಮ್ಯವಾದ-ಕೋಮಲವಾದ-ಮೃದುವಾದ-ನವಿರಾದ ಪ್ರೇಮಚಿತ್ರಣ ಕಂಡುಬಂತು. ಈ ಚಿತ್ರಣವು ಕನ್ನಡ ನಾಡಿನ ಸಿನಿಮಾದ ಭಾಷೆ, ವಿದ್ಯಾವಂತರು ಪ್ರೀತಿಯನ್ನು ನೋಡುವ ರೀತಿಯನ್ನು ಕೂಡ ಬಹಳವಾಗಿ ಪ್ರಭಾವಿಸಿತು ಎಂದರೆ ಅದು ಉತ್ಪ್ರೇಕ್ಷೆಯಲ್ಲ. ಸ್ವಾತಂತ್ರ್ಯಪೂರ್ವ ಕಾಲದ ಕನ್ನಡ ಭಾವಗೀತೆಗಳು, ಸಿನಿಮಾ ಹಾಡುಗಳು, ಇದಕ್ಕೆ ಸಾಕ್ಷಿ.

 ಶಿವ ನನ್ನ ಸುಖಕೆ ಸುಖಿ
ಶಿವೆ ನನ್ನ ಸುಖಕೆ ಸುಖಿ
 ಶಿವಶಿವೆಯರಾ ಸುಖಕೆ
 ಈ ಲೋಕ ಪರಮಸುಖಿ
 ಬಾ ಬಾರ ಬಾರೆ ಸಖಿ
 ನಾ ನಿನಗೆ ಜೇನಾಗುವಾ

ಬೇಂದ್ರೆಯವರ ಸಖೀಗೀತ ಹಾಗೂ ಕೆ.ಎಸ್.ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯ ಕವನಗಳು ಕನ್ನಡ ಮನಸ್ಸು ಪ್ರೀತಿಯನ್ನು ಪರಿಭಾವಿಸುವ ರೀತಿಗೆ ಉತ್ತಮ ಸಂಕೇತ. ಇಲ್ಲಿ ದಾಂಪತ್ಯದೊಳಗಿನ ಹಾಗೂ ಲೋಕ ಕಲ್ಯಾಣಕ್ಕೆ ನೆರವಾಗುವಂತಹ ಪ್ರೇಮಕ್ಕೆ ಮನ್ನಣೆ ಇದೆ.

`ದೂರ ದೂರ ಅಲ್ಲಿ ನಿಲ್ಲಿ ನನ್ನ ದೇವರೆ’ ಎಂಬ 1974 – ಆರ್.ಎನ್.ಜಯಗೋಪಾಲ್ ಅವರು ಬರೆದ ಗೀತೆ ಮತ್ತು ಇಂತಹ ಅನೇಕ ಸಿನಿಮಾ ಗೀತೆಗಳು ದಾಂಪತ್ಯದೊಳಗಿನ ಪ್ರೇಮಕ್ಕೆ ಕನ್ನಡ ಮನಸ್ಸು ನೀಡಿದ ಮಹತ್ವವನ್ನು ಎತ್ತಿ ತೋರಿಸುತ್ತವೆ.

ಹಾಗೆ ನೋಡಿದರೆ ಶಿವರಾಮ ಕಾರಂತರ `ಮೈಮನಗಳ ಸುಳಿಯಲ್ಲಿ’ ಕಾದಂಬರಿ ಮತ್ತು ಚದುರಂಗ ಅವರ ಉಯ್ಯಾಲೆ ಕಾದಂಬರಿಗಳು ದಾಂಪತ್ಯದಾಚೆಯ ಪ್ರೇಮವನ್ನು ಕನ್ನಡ ಮನಸ್ಸು ಪರಿಶೀಲಿಸಿರುವುದಕ್ಕೆ ಇರುವ ಅಪರೂಪದ ಉದಾಹರಣೆಗಳು ಎನ್ನಬಹುದು.

ಇನ್ನು ಜನಪ್ರಿಯ, ರಮ್ಯ ಕಾದಂಬರಿಗಳ ಯುಗಕ್ಕೆ ನಾಂದಿ ಹಾಡಿದ ಪ್ರಗತಿಶೀಲ ಚಳುವಳಿಯ ಕಾಲವು ಕನ್ನಡ ಕಾದಂಬರಿಯು ತನ್ನ ಜನಪ್ರಿಯತೆಯಲ್ಲಿ ತನ್ನ ತುಟ್ಟತುದಿಯನ್ನು ಮುಟ್ಟಿದ ಕಾಲವೂ ಹೌದು. ಕನ್ನಡ ಕಾದಂಬರಿಗಳ ಜನಕ ಎಂದು ಹೆಸರಾದ ಅ.ನ.ಕೃಷ್ಣರಾಯರು ಹಾಕಿಕೊಟ್ಟ ಹೆದ್ದಾರಿಯಲ್ಲಿ ಅನೇಕ ಲೇಖಕ ಲೇಖಕಿಯರು ಕಾದಂಬರಿಗಳನ್ನು ಬರೆಬರೆದು ಜನರು ಅವುಗಳನ್ನು ಓದಿಯೇ ಓದಿದರು. ಭಾರತೀಪ್ರಿಯ, ತರಾಸು, ನಿರಂಜನ, ಅನುಪಮಾ ನಿರಂಜನ, ಎಂ.ಕೆ.ಇಂದಿರಾ ತ್ರಿವೇಣಿ, ಸಾಯಿಸುತೆ, ಉಷಾ ನವರತ್ನರಾವ್, ಸಿ.ಎನ್.ಮುಕ್ತಾ, ವಾಣಿ….. ಇವರ ಹೆಸರುಗಳು ಕನ್ನಡದ ಮನೆಮನಗಳಲ್ಲಿ ನಲಿದಾಡುತ್ತಿದ್ದ ಕಾಲದಲ್ಲಿ ದೂರದರ್ಶನ, ಕೇಬಲ್ ವಾಹಿನಿಗಳು, ಕೈಯಲ್ಲೇ ಸಿನಿಮಾ ತೋರಿಸುವ ಜಾಣವಾಣಿ(ಸ್ಮಾರ್ಟ್ ಫೋನ್) ಇನ್ನೂ ಬಂದಿರಲಿಲ್ಲ. ಈ ಕಾದಂಬರಿಗಳಲ್ಲಿ ಚಿತ್ರಿತವಾಗುತ್ತಿದ್ದ ಪ್ರೀತಿಯನ್ನು ನೋಡಿದರೆ ಸುಂದರಾಂಗನಾದ ನಾಯಕ ಹಾಗೂ ಲತೆಯಂತ ಬಳುಕುವ ಸುಂದರಾಂಗಿಯಾದ ನಾಯಕಿಯ ಮನದಲ್ಲಿ ಮೂಡುವ ಆಕರ್ಷಣೆ, ಅವರು ಅದನ್ನು ಕಣ್ಣಿಂದ ಮಾತ್ರ ಹೇಳಿಕೊಂಡು ಮನಸ್ಸಿನಲ್ಲೇ ಮಂಡಿಗೆ ತಿನ್ನುವ ಸಭ್ಯ ರೀತಿ, ಅವರ ಮದುವೆಗೆ ಬರುವ ಅನೇಕ ವಿಘ್ನಗಳು, ಅವನ್ನು ಹೇಗೋ ಗೆದ್ದು ಮದುವೆಯಾಗಿ ಎಲ್ಲವೂ ಶುಭಕರವಾಗಿ ಕೊನೆಗೊಳ್ಳುವ ರೀತಿ ಇಲ್ಲಿದೆ. ನಮ್ಮ ಅನೇಕ ಸಿನಿಮಾಗಳು ಇಂತಹ ರಮ್ಯ ಪ್ರಣಯವನ್ನೇ ತಮ್ಮ ವಸ್ತು ಮಾಡಿಕೊಂಡಿವೆ. ಕಾದಂಬರಿ ಆಧಾರಿತವಾದ ಪುಟ್ಟಣ್ಣ ಕಣಗಾಲ್ ಅವರ ಚಲನಚಿತ್ರಗಳು ಇದಕ್ಕೆ ಸಾಕ್ಷಿ.

 ******

 ಇಂದು ಕನ್ನಡ ಸಾಹಿತ್ಯದಲ್ಲಿ ಪ್ರೀತಿಯು ಹೇಗೆ ಚಿತ್ರಿತವಾಗುತ್ತಿದೆ ಎಂಬುದನ್ನು ಗಮನಿಸಿದರೆ, ನಮ್ಮ ಸಮಾಜವು ಹೇಗೆ ಇಂದು ಅಂತರ್ಜಾಲಸಂಬಂಧಿ `ಜಾಣ’(ಸ್ಮಾರ್ಟ್) ಉಪಕರಣಭರಿತ ಲೋಕದಲ್ಲಿ ಪ್ರೀತಿ ಬಹಳ ವಿಭಿನ್ನ ಸ್ವರೂಪವನ್ನು ಪಡೆದುಕೊಂಡಿರುವುದನ್ನು ನಾವು ಗಮನಿಸುತ್ತೇವಲ್ಲವೆ? ಪ್ರೇಮಪತ್ರಗಳು ಎಸ್‌ಎಂಎಸ್, ವಾಟ್ಸ್ಯಾಪ್‌ಗಳಿಂದ ಸ್ಥಳಾಂತರಗೊಂಡಿರುವುದು.

ತೀರ್ಮಾನ ರೂಪವಾಗಿ ಹೀಗೆ ಹೇಳಬಹುದೇನೊ. ಗಂಡು ಹೆಣ್ಣಿನ ನಡುವಿನ ಪ್ರೀತಿ ಎಂಬುದು ಪ್ರಾಕೃತಿಕ ವನ್ಯಗುಣದ ಜೀವಕಾಮ ಹಾಗೂ ಸಾಮಾಜಿಕ ನಿಯಂತ್ರಿತ ಪ್ರೇಮಗಳ ಒಂದು ಸಂಗಮ. ಆ ಪ್ರಾಕೃತಿಕ ಶಕ್ತಿಯು ಪಶುವಾಗಿ ಸ್ವೇಚ್ಛೆಯಿಂದ ವಿಜೃಂಭಿಸಬಾರದು ಎಂಬ ಭಯ ಮತ್ತು ಎಚ್ಚರಿಕೆಗಳಿಂದ ಸಮಾಜಗಳು ವಿವಿಧ ರೀತಿಯ ಮದುವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿಕೊಂಡು ಬಂದಿವೆ. ಕನ್ನಡ ಸಾಹಿತ್ಯವನ್ನು ಗಮನಿಸುವಾಗ ಅದರ ಪ್ರಧಾನ ಧಾರೆಯು ಕಾಮಕ್ಕೆ `ಅಡಿಯಾಳಾಗದ’ ಕಲ್ಯಾಣ ಶಕ್ತಿಯ ಪ್ರೇಮವನ್ನು ಹಾಗೂ ದಾಂಪತ್ಯದ ಚೌಕಟ್ಟಿನೊಳಗಿನ ಪ್ರೇಮವನ್ನು ಮಾನ್ಯವೆಂದು ಭಾವಿಸಿದ ಹಾಗೆ ತೋರುತ್ತದೆ. ಇಂದು ಇಡೀ ಪ್ರಪಂಚದಂತೆ ಕನ್ನಡ ನಾಡು ಸಹ ಮಾಹಿತಿ ತಂತ್ರಜ್ಞಾನ ಯುಗವು ತಂದಿರುವ ಮಹಾಬದಲಾವಣೆಗಳಿಂದ ತತ್ತರಿಸುತ್ತಿದೆ. ಆಗಿರುವಂತಹ ಸಾಮಾಜಿಕ, ಕೌಟುಂಬಿಕ, ತಂತ್ರಜ್ಞಾನೀಯ ಬದಲಾವಣೆಗಳು ನಮ್ಮ ಸಾಹಿತ್ಯದಲ್ಲಿನ ಪ್ರೀತಿಯ ಚಿತ್ರಣದ ಮೇಲೂ ಪ್ರಭಾವ ಬೀರುತ್ತಿವೆ. ಸಹಜೀವನ, ಮೂರನೆಯ ಲಿಂಗಿಗಳು ಮುಕ್ತವಾಗಿ ತಮ್ಮ ಲಿಂಗ ಗುರುತು ಮತ್ತು ಲೈಂಗಿಕತೆಗಳನ್ನು ಪ್ರಕಟಿಸುತ್ತಿರುವ ಸನ್ನಿವೇಶ, ನಗರಗಳಲ್ಲಿನ ರಾತ್ರಿಪಾಳಿ ಕೆಲಸ, ಹೆಣ್ಣುಮಕ್ಕಳು ಹೆಚ್ಚು ಹೆಚ್ಚಾಗಿ ಉದ್ಯೋಗ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದು ಇವೆಲ್ಲವೂ ಪ್ರೀತಿಯನ್ನು ಕುರಿತು ಜನರು ಯೋಚಿಸುವ ರೀತಿಯನ್ನು ಬದಲಾಯಿಸುತ್ತಿವೆ. ಸಿಚುಯೇಷನ್‌ಶಿಪ್ ಎಂಬ ಅಲ್ಪಕಾಲದ ಪರಸ್ಪರ ಒಪ್ಪಿದ ಸಾಂಗತ್ಯದಂತಹ `ಹಾಗೇ ಸುಮ್ಮನೆ ಒಟ್ಟಿಗಿರುವ’ ಪ್ರಯೋಗವೊಂದನ್ನು ನಮ್ಮ ಹೊಸ ಪೀಳಿಗೆಯವರು ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಪ್ರೀತಿ ಎಷ್ಟು ಆಕರ್ಷಕವೋ ಅದರ ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇ ಕಷ್ಟ. ಜಾನಪದ ಜಗತ್ತಿನಿಂದ ಜಾಗತೀಕರಣದ ತನಕ ಕನ್ನಡದ ಮನಸ್ಸು ಇದರ ಅನ್ವೇಷಣೆಯನ್ನು ಮಾಡುತ್ತಲೇ ಇದೆ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ