Advertisement
ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಕ್ರಮ ತಪ್ಪಿದ ನಗರ”

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಕ್ರಮ ತಪ್ಪಿದ ನಗರ”

“ನೀವು ಎಂದಾದರೂ ಆಕಾಶದ ನಕ್ಷತ್ರಗಳನ್ನು ಗಮನಿಸಿದ್ದೀರಾ?” ಅವನು ಕೇಳಿದ. ಅವನ ಧ್ವನಿ ಹಳೆಯ ರೇಡಿಯೋ ಸ್ಟೇಷನ್‌ನಿಂದ ಬರುವ ಸಿಗ್ನಲ್‌ನಂತೆ ಇತ್ತು. ಅದಕುತ್ತರವಾಗಿ “ಹೌದು, ನೋಡಿದ್ದೇನೆ.” ಎಂದೆ. “ಆಕಾಶದಲ್ಲಿ ನಕ್ಷತ್ರಗಳು ಸುಮ್ಮನೆ ಬಿದ್ದಿಲ್ಲ” ಅವನು ಹೇಳುತ್ತಾ ಒಂದು ನೋಟಿನ ಮೇಲೆ ಒಂದು ನಾಣ್ಯವನ್ನು ಇಟ್ಟ. “ಅವುಗಳಿಗೊಂದು ಕ್ರಮವಿದೆ. ಆ ಕ್ರಮ ತಪ್ಪಿದರೆ ಈ ಜಗತ್ತು ಕುಸಿದು ಬೀಳುತ್ತದೆ. ಈ ಸ್ಕೈವಾಕ್ ಕೆಳಗೆ ಹರಿಯುವ ಸಾವಿರಾರು ಕಾರುಗಳು, ಈ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ನಿಮ್ಮ ಕೈಯಲ್ಲಿರುವ ಈ ಕಾಫಿ ಕಪ್… ಎಲ್ಲವೂ ಒಂದು ನಿಖರವಾದ ಜಾಗದಲ್ಲಿ ಇರಬೇಕು. ಇಲ್ಲದಿದ್ದರೆ ಶೂನ್ಯ ಆವರಿಸುತ್ತದೆ.”
ಕಾರ್ತಿಕ್ ಕೃಷ್ಣ ಬರೆದ ಕತೆ “ಕ್ರಮ ತಪ್ಪಿದ ನಗರ” ನಿಮ್ಮಈ ಭಾನುವಾರದ ಬಿಡುವಿನ ಓದಿಗೆ

ಬೆಂಗಳೂರಿನ ಆ ಸ್ಕೈವಾಕ್ ಮೇಲೆ ಗಾಳಿ ಯಾವಾಗಲೂ ಅನ್ಯ ಲೋಕದ ವಾತಾವರಣವನ್ನು ನೆನಪಿಸುತ್ತಿತ್ತು. ಕೆಳಗೆ ಹರಿಯುವ ಟ್ರಾಫಿಕ್‌ನ ಹೊಗೆ ಮತ್ತು ಎಸಿಗಳ ಬಿಸಿ ಗಾಳಿ ಸೇರಿ ಒಂದು ವಿಚಿತ್ರ ವಾಸನೆ ಅಲ್ಲಿ ನೆಲೆಸಿರುವುದರಿಂದ ಹೀಗಾಗುತ್ತಿತ್ತೋ ಏನೋ. ನಾನು ಪ್ರತಿದಿನ ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಆ ಕಬ್ಬಿಣದ ಮೆಟ್ಟಿಲುಗಳನ್ನು ಹತ್ತುತ್ತಿದ್ದೆ. ನನ್ನ ಕೈಯಲ್ಲಿ ಒಂದು ಕಪ್ ಬ್ಲ್ಯಾಕ್ ಕಾಫಿ ಮತ್ತು ಬ್ಯಾಗ್ ಇರುತ್ತಿತ್ತು. ಆ ಸ್ಕೈವಾಕ್ ದಾಟಿದರೆ ಸಾಕು, ಗಾಜಿನ ಗೋಡೆಗಳ ದೊಡ್ಡ ಐಟಿ ಕ್ಯಾಂಪಸ್ ನನ್ನನ್ನು ನುಂಗಿ ಹಾಕುತ್ತಿತ್ತು.

ಕ್ಯಾಂಪಸ್ ನನ್ನನ್ನು ನುಂಗುವುದಕ್ಕೂ ಮೊದಲು ನಾನೊಬ್ಬನನ್ನು ನೋಡುತ್ತಿದ್ದೆ. ಸ್ಕೈವಾಕಿನ ಮೇಲೆ ಕೂತಿರುತ್ತಿದ್ದ ಅವನು ಭಿಕ್ಷುಕನೇ? ನನಗೆ ಗೊತ್ತಿಲ್ಲ. ಅವನು ಯಾರನ್ನೂ ನೋಡಿ ಕೈ ಚಾಚುತ್ತಿರಲಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರಲಿಲ್ಲ. ಅವನ ಮುಂದೆ ಒಂದು ಹಳೆಯ ಗೋಣಿಚೀಲವಿರುತ್ತಿತ್ತು. ಅದರ ಮೇಲೆ ಚಿಲ್ಲರೆ ಕಾಸುಗಳು ಮತ್ತು ಹಳೆಯ ಹತ್ತು ರೂಪಾಯಿಯ ನೋಟುಗಳು ಬಿದ್ದಿರುತ್ತಿದ್ದವು. ಅವನು ಮಾಡುತ್ತಿದ್ದ ಕೆಲಸ ಮಾತ್ರ ನನ್ನ ತಲೆ ಕೆಡಿಸುತ್ತಿತ್ತು. ಅವನು ಆ ಕಾಸುಗಳನ್ನು ಎಷ್ಟು ನಿಖರವಾಗಿ ಜೋಡಿಸುತ್ತಿದ್ದನೆಂದರೆ, ನೋಡುಗರಿಗೆ ಅದೊಂದು ಗಣಿತದ ಸೂತ್ರದಂತೆ ಕಾಣುತ್ತಿತ್ತು. ಒಂದು ರೂಪಾಯಿಯ ಕಾಸುಗಳು ಒಂದು ಸಾಲಿನಲ್ಲಿ, ಎರಡು ರೂಪಾಯಿಯವು ಇನ್ನೊಂದರಲ್ಲಿ. ಪ್ರತಿಯೊಂದು ಕಾಸಿನ ನಡುವೆ ನಿರ್ದಿಷ್ಟವಾದ ಅಂತರವಿರುತ್ತಿತ್ತು. ಆ ಶಿಸ್ತು, ಆ ಸ್ಕೈವಾಕ್ ಮೇಲೆ ಒಂದು ‘ಪ್ಯಾರಲಲ್ ಯೂನಿವರ್ಸ್’ ಸೃಷ್ಟಿಸಿದಂತಿತ್ತು.

ಒಂದು ಮಂಗಳವಾರ ಬೆಳಿಗ್ಗೆ, ಮಳೆ ಸುರಿಯುವ ಮುನ್ಸೂಚನೆ ಇತ್ತು. ಸ್ಕೈವಾಕ್ ಮೇಲೆ ಜನಜಂಗುಳಿ ಇರಲಿಲ್ಲ. ಆತ ಎಂದಿನಂತೆ ತನ್ನ ಕಾಸುಗಳ ಜ್ಯಾಮಿತಿಯಲ್ಲಿ ಮುಳುಗಿದ್ದ. ನಾನು ಆತನ ಮುಂದೆ ನಿಂತೆ. ಅವನು ತಲೆ ಎತ್ತಲಿಲ್ಲ. ಅವನ ಬೆರಳುಗಳು ಒಂದು ಹಳೇ ಪಾವಲಿಯನ್ನು (ಅದು ಈಗ ಚಲಾವಣೆಯಲ್ಲೇ ಇಲ್ಲ!) ಸರಿಸುತ್ತಿತ್ತು. “ಯಾಕೆ ಹೀಗೆ ಜೋಡಿಸುತ್ತೀರಿ?” ನನ್ನ ಧ್ವನಿ ನನಗೇ ವಿಚಿತ್ರವಾಗಿ ಕೇಳಿಸಿತು. ಅವನು ನಿಧಾನವಾಗಿ ಜೋಡಿಸುವುದನ್ನು ನಿಲ್ಲಿಸಿದ. ಅವನ ಉಗುರುಗಳು ಕಪ್ಪಾಗಿದ್ದವು, ಆದರೆ ಬೆರಳುಗಳು ಒಬ್ಬ ಪಿಯಾನೋ ವಾದಕನ ಬೆರಳುಗಳಂತೆ ನಯವಾಗಿದ್ದವು. ಅವನು ತಲೆ ಎತ್ತಿ ನನ್ನನ್ನು ನೋಡಿದ. ಅವನ ಕಣ್ಣುಗಳಲ್ಲಿ ಯಾವುದೇ ಭಾವನೆ ಇರಲಿಲ್ಲ. ಬತ್ತಿ ಹೋದ ಬಾವಿಯಂತೆ ಖಾಲಿ ಇದ್ದರೂ, ಯಾವುದೋ ಅಳೆಯಲಾಗದ ಸೆಳೆತವಿತ್ತು ಅವನ ಕಣ್ಣುಗಳಲ್ಲಿ.

“ನೀವು ಎಂದಾದರೂ ಆಕಾಶದ ನಕ್ಷತ್ರಗಳನ್ನು ಗಮನಿಸಿದ್ದೀರಾ?” ಅವನು ಕೇಳಿದ. ಅವನ ಧ್ವನಿ ಹಳೆಯ ರೇಡಿಯೋ ಸ್ಟೇಷನ್‌ನಿಂದ ಬರುವ ಸಿಗ್ನಲ್‌ನಂತೆ ಇತ್ತು. ಅದಕುತ್ತರವಾಗಿ “ಹೌದು, ನೋಡಿದ್ದೇನೆ.” ಎಂದೆ. “ಆಕಾಶದಲ್ಲಿ ನಕ್ಷತ್ರಗಳು ಸುಮ್ಮನೆ ಬಿದ್ದಿಲ್ಲ” ಅವನು ಹೇಳುತ್ತಾ ಒಂದು ನೋಟಿನ ಮೇಲೆ ಒಂದು ನಾಣ್ಯವನ್ನು ಇಟ್ಟ. “ಅವುಗಳಿಗೊಂದು ಕ್ರಮವಿದೆ. ಆ ಕ್ರಮ ತಪ್ಪಿದರೆ ಈ ಜಗತ್ತು ಕುಸಿದು ಬೀಳುತ್ತದೆ. ಈ ಸ್ಕೈವಾಕ್ ಕೆಳಗೆ ಹರಿಯುವ ಸಾವಿರಾರು ಕಾರುಗಳು, ಈ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ನಿಮ್ಮ ಕೈಯಲ್ಲಿರುವ ಈ ಕಾಫಿ ಕಪ್… ಎಲ್ಲವೂ ಒಂದು ನಿಖರವಾದ ಜಾಗದಲ್ಲಿ ಇರಬೇಕು. ಇಲ್ಲದಿದ್ದರೆ ಶೂನ್ಯ ಆವರಿಸುತ್ತದೆ.”

ನನಗೆ ಬೆನ್ನಿನಲ್ಲಿ ಮುಳ್ಳುಗಳೆದ್ದವು. “ಹಾಗೆಂದರೆ ನೀವು ಈ ಕಾಸುಗಳನ್ನು ಜೋಡಿಸುವುದಕ್ಕೂ, ಜಗತ್ತು ಕುಸಿಯುವುದಕ್ಕೂ ಸಂಬಂಧವಿದೆಯೇ?”, ನಾನು ಕೇಳಿದೆ. ಅವನು ಸಣ್ಣಗೆ ನಕ್ಕ. “ನಾನು ಭಿಕ್ಷುಕನಲ್ಲ ಸಾಹೇಬ್ರೆ. ನಾನು ಈ ನಗರದ ‘ಬ್ಯಾಲೆನ್ಸರ್’. ಜನ ಇಲ್ಲಿಗೆ ಬಂದು ತಮ್ಮ ಜೇಬಿನ ಭಾರವನ್ನು ಇಳಿಸುತ್ತಾರೆ. ಈ ಕಾಸುಗಳ ಜೊತೆಗೆ ಅವರ ಗೊಂದಲಗಳು, ಸಿಟ್ಟು, ನಿರಾಸೆಗಳೂ ಇಲ್ಲಿ ಬೀಳುತ್ತವೆ. ನಾನು ಅವುಗಳನ್ನು ಸಾಲಾಗಿ ಜೋಡಿಸದಿದ್ದರೆ, ಈ ಅಸ್ತವ್ಯಸ್ತವಾದ ಭಾವನೆಗಳು ಸ್ಫೋಟಗೊಂಡು ನಗರವೇ ಉರಿದುಹೋಗಬಹುದು. ನಾನು ಈ ಕಾಸುಗಳನ್ನು ಜೋಡಿಸುವ ಮೂಲಕ ಈ ಕ್ಷಣವನ್ನು ಹಿಡಿದಿಡುತ್ತಿದ್ದೇನೆ.”

ನಾನು ಅವನನ್ನೇ ನೋಡುತ್ತಾ ನಿಂತೆ. ಅವನು ಮತ್ತೆ ತನ್ನ ಕೆಲಸಕ್ಕೆ ಮರಳಿದ. ಒಂದು ನೋಟನ್ನು ಮಡಚಿ ಸರಿಯಾಗಿ ಮೈದಾನದ ಆಕಾರದಲ್ಲಿ ಇಟ್ಟ. ಅಷ್ಟರಲ್ಲಿ ನನ್ನ ಫೋನ್ ರಿಂಗ್ ಆಯಿತು. ಆಫೀಸ್‌ನ ಕಾನ್ಫರೆನ್ಸ್ ಕಾಲ್. ಜಗತ್ತಿನ ವಾಸ್ತವ ನನ್ನನ್ನು ಮತ್ತೆ ಎಳೆಯಿತು.

ಅದಾದ ನಂತರ ನಾನು ಪ್ರತಿದಿನ ಅವನನ್ನು ಗಮನಿಸುತ್ತಿದ್ದೆ. ಒಮ್ಮೊಮ್ಮೆ ಅವನು ಕಾಸುಗಳನ್ನು ವೃತ್ತಾಕಾರದಲ್ಲಿ ಜೋಡಿಸುತ್ತಿದ್ದ, ಇನ್ನೊಮ್ಮೆ ತ್ರಿಕೋನಾಕಾರದಲ್ಲಿ. ಅವನನ್ನು ನೋಡಿದಾಗಲೆಲ್ಲಾ ನನಗೆ ಕ್ಲಾಸಿಕಲ್ ಮ್ಯೂಸಿಕ್ ಕೇಳಿಸಿದಂತಾಗುತ್ತಿತ್ತು. ಅಂದು ಸಂಜೆ ನಾನು ಮನೆಗೆ ಹೋಗುವಾಗ ಮೊಜಾರ್ಟ್‌ನ ‘ಸಿಂಫನಿ ನಂ. 40’ ಕೇಳುತ್ತಿದ್ದೆ. ಆ ಸಂಗೀತದ ಲಯಕ್ಕೂ, ಆ ಮನುಷ್ಯ ಕಾಸು ಜೋಡಿಸುವ ಕ್ರಮಕ್ಕೂ ಏನೋ ಸಂಬಂಧವಿದೆ ಅನಿಸತೊಡಗಿತು.

ಒಂದು ವಾರದ ನಂತರ ಆ ಸ್ಕೈವಾಕ್ ಮೇಲೆ ಅವನು ಇರಲಿಲ್ಲ.

ಅವನ ಗೋಣಿಚೀಲವಿಲ್ಲ, ಕಾಸುಗಳಿಲ್ಲ, ಆ ನಿಗೂಢ ಮನುಷ್ಯನೂ ಇರಲಿಲ್ಲ. ಅಲ್ಲಿ ಕೇವಲ ಪಾನ್ ಉಗುಳಿದ ಕಲೆಗಳು ಮತ್ತು ಕೆಲವು ಪ್ಲಾಸ್ಟಿಕ್ ಕಸ ಮಾತ್ರ ಇತ್ತು. ನಾನು ಆತ ಕುಳಿತುಕೊಳ್ಳುತ್ತಿದ್ದ ಜಾಗದ ಹತ್ತಿರ ಹೋದಾಗ, ನೆಲದ ಮೇಲೆ ಒಂದು ಸಣ್ಣ ‘ಪಾವಲಿ’ ಕಾಸು ಮಾತ್ರ ಬಿದ್ದಿತ್ತು. ಅದು ಅಚ್ಚುಕಟ್ಟಾಗಿ ಸ್ಕೈವಾಕಿನ ಒಂದು ಬಿರುಕಿನ ಮಧ್ಯೆ ಸಿಕ್ಕಿಕೊಂಡಿತ್ತು. ನಾನು ಆ ಕಾಸನ್ನು ಎತ್ತಿಕೊಂಡೆ. ಅದು ಕೈಯಲ್ಲಿ ಹಿಡಿದಾಗ ಬೆಚ್ಚಗಿತ್ತು.

ಅಂದು ಸಂಜೆ ಆಫೀಸ್‌ನಿಂದ ಹೊರಬಂದಾಗ ಬೆಂಗಳೂರಿನ ಆ ರಸ್ತೆ ಮೊದಲಿಗಿಂತ ಹೆಚ್ಚು ಗೊಂದಲಮಯವಾಗಿ ಕಂಡಿತು. ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು, ಜನರ ಕಿರುಚಾಟ ಜಾಸ್ತಿಯಾಗಿತ್ತು. ಸ್ಕೈವಾಕ್ ಮೇಲಿನಿಂದ ನೋಡಿದಾಗ ನಗರವೊಂದು ದೊಡ್ಡ ಕಪ್ಪು ಸಮುದ್ರದಂತೆ ಅಲೆಯುತ್ತಿತ್ತು. ನನ್ನ ಜೇಬಿನಲ್ಲಿದ್ದ ಆ ಸಣ್ಣ ಪಾವಲಿಯನ್ನು ಮುಟ್ಟಿದೆ. ಮನಸು ಗೊಂದಲದ ಗೂಡಾಯಿತು. ಯೋಚನೆಗಳು ಲಯ ತಪ್ಪಿದ ಸಂಗೀತದ ಅಲೆಯಂತೆ ಅಪ್ಪಳಿಸತೊಡಗಿದವು. ಆ ಮನುಷ್ಯ ತನ್ನ ಕೆಲಸ ಮುಗಿಸಿ ಎಲ್ಲಿಗೋ ಹೊರಟುಹೋಗಿದ್ದಾನೆ. ಬಹುಶಃ ಇನ್ನೊಂದು ನಗರದ, ಇನ್ನೊಂದು ಸ್ಕೈವಾಕ್ ಮೇಲೆ ಅವನು ಈಗ ನಕ್ಷತ್ರಗಳ ಜ್ಯಾಮಿತಿಯನ್ನು ಸರಿಪಡಿಸುತ್ತಿರಬಹುದು. ಅವನು ಹೋಗಿದ್ದರಿಂದಲೇ ಇಂದು ನಗರದಲ್ಲಿ ಲಯ ತಪ್ಪಿದೆಯೇ?

ನಾನು ಕ್ಯಾಂಪಸ್‌ನ ಗೇಟ್ ದಾಟುವಾಗ ಹಿಂದಿರುಗಿ ನೋಡಿದೆ. ಸ್ಕೈವಾಕ್ ಮೇಲೆ ಲೈಟುಗಳು ಮಿನುಗುತ್ತಿದ್ದವು. ಗಾಳಿಯಲ್ಲಿ ಮೊಜಾರ್ಟ್‌ನ ಸಿಂಫನಿ ಸ್ವರ ಕೇಳಿಸಿದಂತಾಯಿತು. ಬಹುಶಃ ಅದು ನನ್ನ ಭ್ರಮೆಯಿರಬಹುದು. ಅಲ್ಲಿಂದ ಮುಂದೆ, ನಾನು ನನ್ನ ಟೇಬಲ್ ಮೇಲಿನ ಪೆನ್ನುಗಳನ್ನು, ಡೈರಿಯನ್ನು ಮತ್ತು ಲ್ಯಾಪ್‌ಟಾಪ್ ಅನ್ನು ತುಂಬಾ ನಿಖರವಾಗಿ, ಸಾಲಾಗಿ ಜೋಡಿಸಲು ಶುರು ಮಾಡಿದೆ. ಯಾಕೆಂದರೆ, ಯಾವುದೋ ಒಂದು ಮೂಲೆಯಲ್ಲಿ ಯಾರೋ ಒಬ್ಬರು ಈ ಜಗತ್ತನ್ನು ಸರಿಯಾಗಿಡಲು ಇಷ್ಟನ್ನಾದರೂ ಮಾಡಲೇಬೇಕಿತ್ತು.

About The Author

ಕಾರ್ತಿಕ್ ಕೃಷ್ಣ

ಕಾರ್ತಿಕ್ ಕೃಷ್ಣ, ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಹವ್ಯಾಸಿ ಬರಹಗಾರ. ದಿನಪತ್ರಿಕೆಗಳಲ್ಲಿ ಇವರ ಹಲವು ಲಲಿತ ಪ್ರಬಂಧಗಳು ಹಾಗೂ ವಿಜ್ಞಾನ ಬರಹಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ