Advertisement
ಕೇಳಿದ್ದು ಸುಳ್ಳಾಗಬಹುದು, ರುಚಿಸಿದ್ದೂ ಸುಳ್ಳಾಗಬಹುದೇ?: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಕೇಳಿದ್ದು ಸುಳ್ಳಾಗಬಹುದು, ರುಚಿಸಿದ್ದೂ ಸುಳ್ಳಾಗಬಹುದೇ?: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಗೆಳತಿಯ ಜಾಣ ಪ್ರಶ್ನೆಗೆ ಉತ್ತರಿಸುತ್ತಾ “ಅದು ಹೇಗೆ ಗೊತ್ತಾ? ನಿಂಬೆ, ಹುಣಸೆಯಂತಹ ಹುಳಿ ಅಂಶ ಇರೋ ಆಹಾರಗಳಲ್ಲಿ ‘ಆಸಿಡ್’ ಅಂದ್ರೆ ‘ಆಮ್ಲ’ಗಳಿರತ್ವೆ ಅಲ್ವಾ? ಅಂತಹ ಹುಳಿಯಾದ ಆಹಾರ, ನಾಲಗೆಗೆ ತಗುಲಿದಾಗ, ನಾಲಗೆಯ ಆಮ್ಲೀಯತೆ ಹೆಚ್ಚುತ್ತೆ; ಬದಲಾದ ಸ್ಥಿತಿಯಲ್ಲಿ, ನಮ್ಮ ‘ಮಿರಾಕ್ಯುಲಿನ್’ ಇದ್ಯಲ್ಲ? ಅದು ರಾಸಾಯನಿಕವಾಗಿ ಪ್ರತಿಕ್ರಯಿಸಿ, ಸಿಹಿಯನ್ನು ಗುರುತಿಸುವ ರುಚಿಸಂವೇದಕಗಳನ್ನು ಆಕ್ಟಿವೇಟ್ ಮಾಡತ್ತೆ. ಹಾಗಾಗಿ, ಹುಳಿಯಂಶದ್ದೆಲ್ಲಾ ಸಿಹಿಯೆನಿಸೋಕೆ ಶುರುವಾಗತ್ತೆ. ಆದ್ರೆ ಎಫೆಕ್ಟ್ ಒಂದು ಅರ್ಧ ಘಂಟೆ, ಘಂಟೆ ಇರ್ಬಹುದಷ್ಟೇ. ನಮ್ಮ ಬಾಯಲ್ಲಿನ ಜೊಲ್ಲು ನಾಲಗೆಯ ಮೇಲಿದ್ದ ಈ ‘ಮಿರಾಕ್ಯುಲಿನ್’ ಅನ್ನೋ ‘ಗ್ಲೈಕೋಪ್ರೋಟೀನ್’ನ್ನ ತೊಳೆದು ಹಾಕಿ, ನಮ್ಮ ನಾಲಗೆ ಮೊದಲಿನ ಸ್ಥಿತಿಗೆ ಬರೋ ಹಾಗೆ ಮಾಡತ್ತೆ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಏಳನೆಯ ಕತೆ

ಏಪ್ರಿಲ್ ಬಿರುಬೇಸಿಗೆ ಬಿಸಿಲು ಮೊದಲ ಹಂತದಲ್ಲಿತ್ತು; ಬೆಳಗಿನ ೧೦ರ ನಂತರ ಸಂಜೆ ೫ರವರೆಗೂ ಬಿಸಿಲೋ ಬಿಸಿಲು, ನಂತರವೂ ಧಗೆಯೇ! ಹವಾಮಾನ ಮುನ್ಸೂಚನೆಯ ಪ್ರಕಾರ ಈ ಬಾರಿ ಬಿಸಿಲು ಇನ್ನೂ ಹೆಚ್ಚುತ್ತಾ, ಮಳೆ ತಡವಾಗುವ ಸಾಧ್ಯತೆ ಹೆಚ್ಚಿತ್ತು; ಎಂತಹ ರಾಕ್ಷಸನ ಮನದಲ್ಲೂ ಕೊಂಚವಾದರೂ ಕರುಣೆಯ ಸೆಲೆಯಿದ್ದಂತೆ, ಬಿರುಬಿಸಿಲಿನ ಬೇಸಿಗೆಯಲ್ಲೂ ಬೆಳಗಿನ ಜಾವದ ಹೊತ್ತು ಮಾತ್ರ ತಂಪಾಗಿರುವುದುಂಟು! ಅಂತಹದ್ದೇ ನಸುಕಿನಲ್ಲಿ ಕಾವ್ಯ ಮತ್ತು ಪ್ರಕಾಶ್ ಮಾತಾಡುತ್ತಾ ಅಂಗಳದಲ್ಲಿ ದುಂಡುಮಲ್ಲಿಗೆ ಹೂಬಿಡಿಸುತ್ತಿದ್ದರು. ಹವಾಮಾನ ವೈಪರೀತ್ಯ, ಇರಾನ್-ಅಮೇರಿಕ ಯುದ್ಧ, ಷೇರು ಮಾರುಕಟ್ಟೆಯಿಂದ ಮಾತು ಎಲ್ಲೆಲ್ಲಿಗೋ ಸಾಗಿ, ಮತ್ತೆ ಬೇಸಿಗೆಯ ಕಡೆಗೆ ಹೊರಳಿತು. ಆಗ ಪ್ರಕಾಶ್, “ಬೇಸಿಗೆಯೆಂದರೆ ಏನು ಹೇಳು ಕಾವ್ಯ?” ಎಂದನು. ತಾನೇ ಏನಾದರೂ ಕಾವ್ಯಾತ್ಮಕವಾಗಿ ಹೇಳುವುದಕ್ಕಿಂತಾ, ಪ್ರಕಾಶ್ ಉತ್ತರ ಏನಿರಬಹುದೆಂದು ತಿಳಿಯುವ ಕುತೂಹಲವಾಗಿ, ಕಾವ್ಯ, “ಏನು?” ಎಂದು ಮರುಪ್ರಶ್ನೆ ಎಸೆದಳು. ಆಗ ಪ್ರಕಾಶ್ “ಬೇಸಿಗೆಯೆಂದರೆ, ಮಳೆಗಾಲಕ್ಕಾಗಿ ಇರುವ ವಿಲಂಬಿತ ಕಾಯುವಿಕೆ” ಎಂದನು.  ಆಗ ಈ ಉತ್ತರ ಕೇಳಿದ ‘ಮಳೆಪ್ರಿಯೆ’ ಕಾವ್ಯ “ಹೌದಲ್ವಾ? ಜೀವದ ಸೆಲೆಯೇ – ಮಳೆ! ಸೂಕ್ಷ್ಮಾಣುಜೀವಿ, ಗಿಡ, ಮರ, ಪ್ರಾಣಿ, ಪಕ್ಷಿ, ಅಷ್ಟೇ ಯಾಕೆ, ಮೊಳಕೆ ಒಡೆಯೋಕೆ ತುದಿಗಾಲಲ್ಲಿ ನಿಂತಿರೋ ಬೀಜವೂ ಮಳೆಗೇ ಕಾಯೋದು; ನಿಜಾ ನೀನು ಹೇಳೋದು; ಈ ಋತುಗಳಲ್ಲಿನ ಬದಲಾವಣೆ ನಿಸರ್ಗದ ಪ್ರತಿ ಅಂಶದ ಜೊತೆ ಅದೆಷ್ಟು ಹೊಂದಿಕೊಂಡಿದೆಯಲ್ವಾ?” ಎಂದಳು ಕಾವ್ಯ. ಆಗ ಪ್ರಕಾಶ್, “ಹೌದು, ಮಳೆಯ ಬಗ್ಗೆ ಮಾತಾಡ್ತಾ ನೆನಪಾಯ್ತು, ಬೇಸಿಗೆ ಮುಗಿಯೋ ಮುನ್ನ, ಕೊಡಗಿಗೆ ಹೋಗಿಬರೋಕಿತ್ತಲ್ವಾ? ಯಾವಾಗ ಹೊರಟೆ?” ಎಂದನು. “ನಾಳೆ ಬೆಳಗಿನ ಬಸ್ಸಿಗೆ” ಎಂದಳು ಕಾವ್ಯ ನಗುತ್ತಾ.

ಮರುದಿನದ ಬಸ್ಸಿನಲ್ಲಿ ಕೊಡಗಿಗೆ ಹೊರಟ ಕಾವ್ಯಳಿಗೆ ಅಲ್ಲಿನ ಕಾಡು, ಸ್ನೇಹಿತರ ಎಸ್ಟೇಟು ಮತ್ತು ತನ್ನ ಪ್ರಾಜೆಕ್ಟಿಗೆ ಸಂಬಂಧಿಸಿದ ನೂರಾರು ಕೆಲಸಗಳು, ಆಸಕ್ತಿಕರ ವಿಷಯಗಳು ಇದ್ದರೂ, ಅವಳಿಗೆ ಅವೆಲ್ಲಕ್ಕೂ ಮುಖ್ಯ ತನ್ನ ಪ್ರಿಯ ಗೆಳತಿಯ ಭೇಟಿಯೇ. ಕಾವ್ಯಳ ಆಪ್ತಗೆಳತಿ ಋತುಪರ್ಣ, ಅದ್ಭುತವಾದ ರೇಖಾಚಿತ್ರಗಳನ್ನು ರಚಿಸುವ ಚಿತ್ರಕಲಾವಿದೆ ಮತ್ತು ಕವಯಿತ್ರಿ. ಕೈಯಲ್ಲಿದ್ದ ಪುಸ್ತಕದಲ್ಲಿ ನೂರು ಪುಟ ಓದಿ ಮುಗಿಸುವಷ್ಟರಲ್ಲಿ, ಗೆಳತಿಯ ಮನೆ ತಲುಪಿದ್ದಳು ಕಾವ್ಯ; ಋತುಪರ್ಣಳನ್ನು ಕಂಡಾಕ್ಷಣ ಒಂದು ಅಪ್ಪುಗೆಯೊಂದಿಗೆ ‘ಹಾಯ್’ ಹೇಳಿದ ಕಾವ್ಯಳನ್ನು ಮನೆಯ ಬದಲು ತೋಟದ ಕಡೆಗೆ ಕರೆದುಕೊಂಡು ಹೊರಟಳು ಋತುಪರ್ಣ. “ಇದೇನು ಋತು, ಮನೆಗೆ ಬಂದರೆ, ತಂಪಾಗೇನಾದ್ರೂ ಕೊಟ್ಟು, ಆತಿಥ್ಯ ಮಾಡೋ ಬದ್ಲು, ತೋಟ ಸುತ್ತಾಡೋಕೆ ಬಿಸಿಲಿನಲ್ಲಿ ಕರ್ಕೊಂಡು ಹೋಗ್ತಿದೀಯಾ?” ಎಂದು ಹುಸಿಮುನಿಸು ತೋರಿದಳು ಕಾವ್ಯ. ಆಗ ಋತುಪರ್ಣ “ಹೇ ಕಾವ್ಯ, ನಂಗೊತ್ತು ನಿಂಗೆ ಬಿಸಿಲು ಅಂದ್ರೆ ಅಲರ್ಜಿ; ಆದ್ರೆ ನಮ್ಮ ಮಧ್ಯೆ ಏನು ಈ ಆತಿಥ್ಯ-ಗೀತಿಥ್ಯ ಅಂತ ಫಾರ್ಮಾಲಿಟೀಸ್ ಎಲ್ಲಾ? ಎಲ್ರೂ ಮನೆಗೆ ಗೆಸ್ಟ್ ಬಂದ್ರೆ ಆತಿಥ್ಯ ನೀಡ್ತಾರೆ. ನಾನ್ ನಿಂಗೆ ಇವತ್ತು ಆತಿಥ್ಯಕ್ಕಿಂತಾ ಆಶ್ಚರ್ಯ ಕೊಡ್ತೀನಿ ಬಾ, ನಿಂಗೊಂದು ಸರ್ಪ್ರೈಸ್ ಇದೆ!” ಎಂದಳು. ಅಚ್ಚರಿಯಿಂದ ಹಿಂದೆಯೇ ಹೊರಟ ಕಾವ್ಯಳಿಗೆ ಅಲ್ಲೇ ಗಾಢ ಹಸಿರು ಎಲೆಗಳ, ೬ ಅಡಿ ಎತ್ತರ ಬೆಳೆದಿದ್ದ ಗಿಡವನ್ನು ತೋರಿಸಿದಳು ಋತುಪರ್ಣ. ಪುಟಾಣಿ ಕೆಂಪು ಹಣ್ಣುಗಳಿಂದ ತುಂಬಿದ್ದ ಈ ಗಿಡವನ್ನು ಕಾವ್ಯ ಕುತೂಹಲದಿಂದ ಗಮನಿಸುತ್ತಿರುವುದನ್ನು ಕಂಡು, “ಇದೇನು ಗೊತ್ತಾ?” ಎಂದಳು ಋತುಪರ್ಣ. “ಇಲ್ಲಾ ಋತು, ಫಸ್ಟ್ ಟೈಮ್ ನೋಡ್ತಾ ಇರೋದು. ಉದ್ದುದ್ದ ಚೆರ್ರಿ ಹಣ್ಣಿನ ಥರಾ ಕೆಂಪು ಹಣ್ಣುಗಳಿರೋ ಈ ಗಿಡ ಭಾರೀ ಮುದ್ದಾಗಿದೆ. ಯಾವುದಿದು?” ಎಂದಳು ಕಾವ್ಯ. ಆಗ ಋತುಪರ್ಣ ನಗುತ್ತಾ, “ಹಾಗಿದ್ರೆ ತೊಗೋ, ಒಂದೆರಡು ಹಣ್ಣುಗಳನ್ನ ಬಾಯಿಗೆ ಹಾಕ್ಕೋ!” ಎಂದು ಗಿಡದಿಂದ ಬಿಡಿಸಿಕೊಟ್ಟಳು.

ಯಾವುದೇ ಹಣ್ಣನ್ನೋ, ತರಕಾರಿಯನ್ನೋ ಕೊಂಡು ತಂದರೆ, ಅವುಗಳನ್ನು ಬೆಳೆಸಲು ರಾಶಿ ರಾಶಿ ರಾಸಾಯನಿಕಗಳನ್ನು ಬಳಸಿರುತ್ತಾರಾದ್ದರಿಂದ, ತೊಳೆಯದೇ ತಿನ್ನುವ ಹಾಗಿಲ್ಲ, ತೊಳೆದರೂ, ರಾಸಾಯನಿಕವೆಲ್ಲವೂ ಹೋಯಿತೋ, ಇಲ್ಲವೋ ಎಂಬ ಅಳುಕು ಇದ್ದೇ ಇರುತ್ತದೆ; ಆದರೆ ಇಲ್ಲಿ ಗೆಳತಿಯ ತೋಟವೆಂದರೆ, ಖಂಡಿತವಾಗಿ ರಾಸಾಯನಿಕ ಬಳಸಿರುವುದಿಲ್ಲವೆಂಬುದು ಗೊತ್ತಿರುವ ಸಂಗತಿಯೇ. ಋತುಪರ್ಣ ಹಾಗೂ ಅವಳ ಪತಿ ಇಬ್ಬರೂ ನಿಸರ್ಗ ಸಂರಕ್ಷಣೆಯದ್ದೇ ಧ್ಯಾನ ಮಾಡುವವರು ಎಂದು ತಿಳಿದಿದ್ದ ಕಾವ್ಯ, ಹಣ್ಣನ್ನು ಒರೆಸಿ ಬಾಯಿಗೆಸೆದುಕೊಂಡಳು. ಒಂಚೂರು ಹುಳಿ ಬಹಳಷ್ಟು ಸಿಹಿ – ಹೀಗಿತ್ತು ಆ ಪುಟ್ಟ ಕೆಂಪು ಹಣ್ಣಿನ ರುಚಿ. ಅದನ್ನು ಮೆಲ್ಲುತ್ತಾ, “ಹೂಂ, ಚೆನ್ನಾಗಿದೆ ಈ ಹಣ್ಣು ಒಂಥರಾ. ಯಾವುದಿದು?” ಎಂದು ಋತುಪರ್ಣಳನ್ನು ಮತ್ತೆ ಕೇಳಿದಳು. ಆಗ ಋತು ನಗುತ್ತಾ, “ಈಗ ಬಾ ಮನೆಗೆ, ಇನ್ನೊಂದೆರಡು ಹಣ್ಣು ಬಾಯಿಗೆ ಹಾಕ್ಕೋ, ಮನೆಗೆ ಹೋಗಿ ಮಾತಾಡೋಣ” ಎಂದು ಮನೆಗೆ ಕರೆದುಕೊಂಡು ಹೋದಳು.

ಬಿಸಿಲಿನ ಬೇಗೆಗೆ ಫ್ಯಾನ್ ಹಾಕಿ ಕುಳಿತ ಕಾವ್ಯಳಿಗೆ, ಎದುರು ಟೇಬಲ್ ಮೇಲೆ ನಿಂಬೆಹಣ್ಣಿನ ಜ್ಯೂಸ್ ಕಾಯುತ್ತಿತ್ತು. “ಓ ಆತಿಥ್ಯ ಇಲ್ಲಿದೆ! ಜ್ಯೂಸ್ ರೆಡಿ ಇದ್ಯಾ?” ಎಂದು ಜ್ಯೂಸ್ ಗುಟುಕರಿಸಿದ ಕಾವ್ಯ, ಒಂದೇ ಗುಟುಕಿನ ನಂತರ ಕಕ್ಕಾಬಿಕ್ಕಿಯಾಗಿ ಋತುಪರ್ಣಳ ಮುಖ ನೋಡಿದಳು. “ಅಲ್ಲ ಋತು, ನೀನಾಗ್ಲೀ, ನಾನಾಗ್ಲೀ, ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ಮನೆಗೆ ಸಕ್ಕರೇನೇ ತರೋಲ್ಲ; ಹಾಗಿದ್ದಾಗ, ಇದೇನಿದು ಸಕ್ಕರೆಪಾಕದ ಥರಾ ಸ್ವೀಟ್ ಇರೊ ಜ್ಯೂಸು? ಇಷ್ಟೊಂದು ಸಕ್ಕರೆ ಯಾಕೋ ಸುರಿದೆ?” ಎಂದಳು. ಇದನ್ನು ಕಂಡ ಋತುಪರ್ಣ ಗಾಭರಿಯಾಗಲೀ, ಬೇಸರವಾಗಲೀ ತೋರದೇ, ಬಿದ್ದೂ ಬಿದ್ದೂ ನಗಲು ಪ್ರಾರಂಭಿಸಿದಳು. ಇದನ್ನು ಕಂಡ ಕಾವ್ಯಳಿಗೆ ಮತ್ತಷ್ಟು ಅಚ್ಚರಿ! ಮತ್ತೊಂದು ಗುಟುಕು ಜ್ಯೂಸ್ ಕುಡಿದ ಕಾವ್ಯ “ಯಾಕೆ ಋತು, ಏನಾಯ್ತು? ಇದ್ಯಾಕೆ ಹೀಗೆ ನಗ್ತಿದ್ದೀ?” ಎಂದಾಗ, ಋತುಪರ್ಣ “ನಾನು ಒಂದು ಚೂರೂ ಸಕ್ಕರೆ ಹಾಕಿಲ್ಲ ಕಾವ್ಯ, ನಿನಗೆ ನಾನು ಕೊಟ್ಟಿರೋದು, ತಣ್ಣೀರಿಗೆ ನಿಂಬೆಹಣ್ಣು ಹಿಂಡಿದ ಜ್ಯೂಸಷ್ಟೇ!” ಎಂದಳು. ಗೆಳತಿ ಋತು ಹೇಳಿದ ಮಾತು ಕೇಳಿ, ಮತ್ತೊಮ್ಮೆ ನಿಂಬೆಹಣ್ಣಿನ ನೀರನ್ನು ಗುಟುಕರಿಸಿದ ಕಾವ್ಯಳಿಗೆ, ತನ್ನ ನಾಲಗೆಯನ್ನೇ ನಂಬಲಾಗಲಿಲ್ಲ. ನಿಜಕ್ಕೂ ಅದು ಪಾನಕವಾಗಿರಲಿಲ್ಲ, ಸಕ್ಕರೆ ಪಾಕದಂತಿತ್ತು. ಆಗ ಕಾವ್ಯ, “ಹೇ ಋತೂ, ಏನಿದು? ‘ಪ್ರ್ಯಾಂಕ್’ ಮಾಡ್ತಾ ಇದ್ಯಾ ನಂಗೆ? ಇಷ್ಟೊಂದು ಸಿಹಿ ಇದ್ಯಲ್ಲೇ ಇದು? ಸಕ್ಕರೆ ಹಾಕಿರೋ ಹಾಗೆ” ಎಂದಳು. ಆಗ ಋತುಪರ್ಣ “ನೀನು ಜ್ಯೂಸ್ ಕುಡಿಯೋಕೆ ಮುಂಚೆ ತಿಂದ್ಯಲ್ಲಾ, ಆ ಕೆಂಪು ಹಣ್ಣು, ಅದರಿಂದ್ಲೇ ನೋಡು ಹೀಗಾಗಿದ್ದು” ಎಂದಳು ನಗುತ್ತಾ.  ವಿಜ್ಞಾನಾಸಕ್ತೆ ಕಾವ್ಯಳಿಗೆ ಋತುಪರ್ಣ ಹೇಳಿದ ಮಾತು ಕೇಳಿ ಕುತೂಹಲ ಹೆಚ್ಚಾಯ್ತು.

ಅರೆಕ್ಷಣ ಸುಮ್ಮನೇ ಯೋಚಿಸಿದ ಕಾವ್ಯಳಿಗೆ, ಏನೋ ಹೊಳೆದಂತಾಗಿ, “ಈ ಹಣ್ಣಿನ ಹೆಸರೇನು?” ಎಂದಳು. ಆಗ ಋತುಪರ್ಣ “ಮಿರಾಕಲ್ ಬೆರ್ರಿ” ಎಂದಳು. ಇದನ್ನು ಕೇಳಿದ ಕಾವ್ಯಳಿಗೆ ಎಲ್ಲೋ ತನ್ನ ಕೆಮಿಸ್ಟ್ರಿ ತರಗತಿಯಲ್ಲಿ ಇದರ ಬಗ್ಗೆ ತನ್ನ ಸೌಪರ್ಣಿಕಾ ಮ್ಯಾಮ್ ಹೇಳಿದ್ದು ನೆನಪಾಯ್ತು. ಯೋಚನೆಯಲ್ಲಿ ಮಗ್ನಳಾದ ಕಾವ್ಯಳನ್ನು ನೋಡಿದ ಋತುಪರ್ಣ “ಇದು ಮೂಲ ಆಫ್ರಿಕಾದ ಗಿಡವಂತೆ ಕಾವ್ಯ. ಈಗ ಇಲ್ಲೂ ಮಾರ್ತಾರೆ ನರ್ಸರಿಗಳಲ್ಲಿ; ನೋಡೋಕೆ ಚೆಂದ ಇದೆ ಗಿಡ ಅಂತ ಜನ ಕೊಂಡು ಬೆಳೆಸ್ತಾರಂತೆ. ಆದ್ರೆ, ಇದು ‘ಮಿರಾಕಲ್ ಬೆರ್ರಿ’ ಅಂತ ಎಲ್ರಿಗೂ ಗೊತ್ತಿರಲ್ಲ. ತಿಂದು ನೋಡಿರಲ್ಲ, ತಿಂದು ನೋಡಿದ್ರೂ, ತಿಂದ ತಕ್ಷಣ ಹೀಗೆ ಹುಳಿಯಾದದ್ದು ಸಿಹಿಯಾಗೋ ಅಚ್ಚರಿಯನ್ನ ಅನುಭವಿಸಿರಲ್ಲ ಅನ್ಸತ್ತೆ!” ಎಂದಳು. ಇದನ್ನು ಕೇಳಿದ ಕಾವ್ಯ, “ನಿಜಾ ಋತು, ಇದೊಂಥರ ಮಿರಾಕಲ್ಲೇ ಹೌದು! ನಿಸರ್ಗದ ಮಾಯಾಬಝಾರ್ ನೋಡು ಹೇಗಿದೆ. ನಮ್ಮ ನಾಲಗೇನೇ ನಮ್ಗೆ ಮೋಸ ಮಾಡಿಬಿಡ್ತಲ್ಲ? ಬಾಯಿಗೆ ಹುಳಿಯಂಶ ಹಾಕಿದ್ರೂ, ಅದು ಸಿಹಿ ಅನ್ಸೋ ಹಾಗೆ ಮಾಡ್ತಲ್ಲ?” ಎನ್ನುತ್ತಾ ಮತ್ತೊಂದು ಗುಟುಕು ನಿಂಬೆರಸವನ್ನು ಹೀರಿ, “ಅಬ್ಬಾ, ಸಕ್ಕರೆ ಪಾಕ!” ಎಂದಳು ನಗುತ್ತಾ.

“ಈ ಚಮತ್ಕಾರದ ಹಿಂದಿನ ವಿಜ್ಞಾನ ಏನಿರಬಹುದು ಹೇಳಮ್ಮ ಸೈನ್ಸ್ ಪ್ರಿಯೆ?!” ಎಂದು ಗೆಳತಿಯನ್ನು ಛೇಡಿಸಿದಳು ಋತುಪರ್ಣ. ಆಗ ಅವಳ ನಗುವೊಂದಿಗೆ ತನ್ನ ನಗುವನ್ನೂ ಬೆರೆಸುತ್ತಾ “ಹೊಟ್ಟೆ ಹಸಿವಾಗ್ತಿದೆ. ನೀನು ಬೇಗ ಊಟಕ್ಕೆ ರೆಡಿ ಮಾಡು ಋತು, ನಾನು ಅಷ್ಟರಲ್ಲಿ ಈ ಮ್ಯಾಜಿಕ್ ಹಿಂದಿನ ಲಾಜಿಕ್ ಹೇಳ್ತೀನಿ” ಎಂದಳು ಕಾವ್ಯ. ಕೆಲವೇ ನಿಮಿಷಗಳಲ್ಲಿ ಇಂಟರ್ನೆಟ್ ಮತ್ತು ಋತುಪರ್ಣಳ ಮನೆಯ ಲೈಬ್ರರಿಯನ್ನೇ ಬಳಸಿ, “ಉತ್ತರ ರೆಡಿ, ಊಟ ರೆಡೀನಾ?” ಎಂದಳು ಕಾವ್ಯ. “ಓಹ್ ಯೆಸ್! ಖಂಡಿತಾ! ತೋಗೋ ಎನ್ನುತ್ತಾ ಕಾವ್ಯಳಿಗೆ ಇಷ್ಟವಾದ ‘ಪತ್ತಲ್’, ಕಾಳು ಗಸಿಯ ತಟ್ಟೆ ಕೈಗಿಟ್ಟಳು.

ಗೆಳತಿ ಋತುಪರ್ಣ ಮಾಡಿದ ರುಚಿಯಾದ ‘ಪತ್ತಲ್’ ತಿನ್ನುತ್ತಾ, ಮಿರಾಕಲ್ ಬೆರ್ರಿಯ ವಿಷಯ ಮತ್ತೆ ಚರ್ಚೆಗೆ ಬಂತು; ಪೂರಿಯಂತಹ ‘ಪತ್ತಲ್’ನಲ್ಲಿ ಹುಳಿಯಂಶ ಇಲ್ಲದ್ದರಿಂದ ಅದೇನು ಸಿಹಿಯೆನಿಸುತ್ತಿರಲಿಲ್ಲ; ಆದರೆ ಜೊತೆಗೆ ನೆಂಚಿಕೊಳ್ಳಲು ಮಾಡಿದ ಕಾಳಿನ ಗಸಿಗೆ ಹಾಕಿದ್ದ ಹುಳಿ ಹುಣಸೆಹಣ್ಣಿನ ಅಂಶ, ಈಗ ಸಿಹಿಸಿಹಿಯಾಗಿತ್ತು. ಆಗ ಕಾವ್ಯ “ನಮ್ಮ ನಾಲಗೆಯಲ್ಲಿ ರುಚಿಯನ್ನ ಗುರುತಿಸೋಕೆ ಸಂವೇದಕಗಳು ಇರತ್ವೆ ಋತು. ನಾವು ಸಾಮಾನ್ಯವಾಗಿ ‘ಟೇಸ್ಟ್ ಬಡ್ಸ್’ ಅಂತೀವಲ್ವಾ? ಅವುಗಳಲ್ಲಿ ನಮ್ಮ ನಾಲಗೆಗೂ, ಮೆದುಳಿಗೂ ಕನೆಕ್ಷನ್ ಕೊಡುವ ನರಗಳ ತುದಿಯಲ್ಲಿ ಈ ರುಚಿ ಸಂವೇದಕಗಳು ಇರತ್ವೆ. ಅವು ನಮ್ಮ ನಾಲಗೆಗೆ ಸೋಕಿದ ಆಹಾರ – ಕಹಿಯೋ, ಹುಳಿಯೋ, ಸಿಹಿಯೋ, ಉಪ್ಪೋ ಅಥವಾ ‘ಉಮಾಮಿ’ಯೋ ಅಂತ ನಮ್ಮ ಮೆದುಳಿನೊಂದಿಗೆ ಸಂವಹನ ನಡೆಸಿ, ನಮ್ಮ ಅನುಭವಕ್ಕೆ ತರತ್ವೆ.” ಎಂದಳು. ಆಗ, ಅವಳನ್ನು ಅರ್ಧಕ್ಕೇ ತಡೆದ ಋತುಪರ್ಣ, “ಇದೇನೇ ಇದು ‘ಉಮಾಮಿ’?” ಎಂದಳು. ಆಗ ಕಾವ್ಯ, “ನಾವು ಸಾಮಾನ್ಯವಾಗಿ ಈ ಪದ ಕೇಳಿರಲ್ಲ, ಬಳಸಲ್ಲ ಅಲ್ವಾ ಋತು? ‘ಉಮಾಮಿ’ ಅಂದ್ರೆ ಉಪ್ಪು, ಹುಳಿ, ಸಿಹಿ, ಕಹಿಯಂತೆ ಮೂಲಭೂತವಾದ ಐದನೆಯ ರುಚಿ ಅಂತಾರೆ ವಿಜ್ಞಾನಿಗಳು. ಪನೀರ್, ಮಶ್ರೂಮ್, ಚೀಸ್ ನಂತಹ ಆಹಾರಗಳ ಮೂಲ ರುಚಿ ಇರುತ್ತೆ ನೋಡು; ಅದೇ ‘ಉಮಾಮಿ’” ಎಂದು ವಿವರಿಸಿದಳು. ಆಗ ಋತು, “ಓಹ್ ಹಾಗಾ.. ಹ್ಮ್..ನನ್ನ ಫೇವರೆಟ್ ‘ಚೀಸ್’ನ ರುಚಿಗೊಂದು ಹೆಸರು ಸಿಕ್ತು ನೋಡು” ಎಂದಳು ನಗುತ್ತಾ. “ಅಲ್ವಾ? ಹೂಂ, ಮತ್ತೆ ಈ ‘ಮಿರಾಕಲ್ ಬೆರ್ರಿ’ ಇದ್ಯಲ್ಲ? ಅದ್ರಲ್ಲಿ ‘ಮಿರಾಕ್ಯುಲಿನ್’ ಅನ್ನೋ ಒಂದು ‘ಗ್ಲೈಕೋ ಪ್ರೋಟೀನ್’ ಇರತ್ತಂತೆ. ಅದೇನು ಮಾಡತ್ತೆ ಗೊತ್ತಾ? ನಾವು ಈ ಹಣ್ಣು ತಿಂದ ತಕ್ಷಣ, ಅದು ಹಣ್ಣಿನಿಂದ ಹೊರಬಂದು ನಮ್ಮ ನಾಲಗೆಯ ಮೇಲಿನ ರುಚಿಸಂವೇದಕಗಳ ಜೊತೆ ಸೇರಿಕೊಳ್ಳತ್ತೆ ಮತ್ತು ಆ ಸಂವೇದಕಗಳು, ಹುಳಿ ಅಂಶವನ್ನ ಗುರುತಿಸದ ಹಾಗೆ ಮಾಡತ್ತೆ.” ಎಂದು ವಿವರ ಬಿಚ್ಚಿಟ್ಟಳು.

ಆಗ ಋತುಪರ್ಣ “ಅಲ್ಲಾ ಕಾವ್ಯ, ಹುಳಿಯಂಶ ಗುರುತಿಸೋಕೆ ಬಿಡಲ್ಲ, ಓಕೆ. ಆದ್ರೆ, ನಾವು ನಿಂಬೆರಸವನ್ನ ಬಾಯಿಗೆ ಹಾಕಿದಾಗ, ಅದು ಹುಳಿ ಅಂತ ಅನ್ನಿಸ್ದೇ, ಏನೂ ರುಚಿ ಇಲ್ದೇ ಇರ್ಬಹುದಿತ್ತು ಅಲ್ವಾ? ಹುಳಿ ಹೋಗಿ ಸಿಹಿ ಹೇಗಾಯ್ತು?” ಅಂತ ಪ್ರಶ್ನೆ ಎಸೆದಳು. ಗೆಳತಿಯ ಜಾಣ ಪ್ರಶ್ನೆಗೆ ಉತ್ತರಿಸುತ್ತಾ “ಅದು ಹೇಗೆ ಗೊತ್ತಾ? ಈ ನಿಂಬೆ, ಹುಣಸೆಯಂತಹ ಹುಳಿ ಅಂಶ ಇರೋ ಆಹಾರಗಳಲ್ಲಿ ‘ಆಸಿಡ್’ ಅಂದ್ರೆ ‘ಆಮ್ಲ’ಗಳಿರತ್ವೆ ಅಲ್ವಾ? ಅಂತಹ ಹುಳಿಯಾದ ಆಹಾರ, ನಾಲಗೆಗೆ ತಗುಲಿದಾಗ, ನಾಲಗೆಯ ಆಮ್ಲೀಯತೆ ಹೆಚ್ಚುತ್ತೆ; ಈ ಬದಲಾದ ಸ್ಥಿತಿಯಲ್ಲಿ, ನಮ್ಮ ‘ಮಿರಾಕ್ಯುಲಿನ್’ ಇದ್ಯಲ್ಲ? ಅದು ರಾಸಾಯನಿಕವಾಗಿ ಪ್ರತಿಕ್ರಯಿಸಿ, ಸಿಹಿಯನ್ನು ಗುರುತಿಸುವ ರುಚಿಸಂವೇದಕಗಳನ್ನು ಆಕ್ಟಿವೇಟ್ ಮಾಡತ್ತೆ. ಹಾಗಾಗಿ, ಹುಳಿಯಂಶದ್ದೆಲ್ಲಾ ಸಿಹಿಯೆನಿಸೋಕೆ ಶುರುವಾಗತ್ತೆ. ಆದ್ರೆ ಈ ಎಫೆಕ್ಟ್ ಒಂದು ಅರ್ಧ ಘಂಟೆ, ೧ ಘಂಟೆ ಇರ್ಬಹುದಷ್ಟೇ. ನಮ್ಮ ಬಾಯಲ್ಲಿನ ಜೊಲ್ಲು ನಾಲಗೆಯ ಮೇಲಿದ್ದ ಈ ‘ಮಿರಾಕ್ಯುಲಿನ್’ ಅನ್ನೋ ‘ಗ್ಲೈಕೋಪ್ರೋಟೀನ್’ನ್ನ ತೊಳೆದು ಹಾಕಿ, ನಮ್ಮ ನಾಲಗೆ ಮೊದಲಿನ ಸ್ಥಿತಿಗೆ ಬರೋ ಹಾಗೆ ಮಾಡತ್ತೆ. ಇದೇ ನೋಡು ಪುಟಾಣಿ ಮಿರಾಕಲ್ ಬೆರ್ರಿಯ ಚಮತ್ಕಾರದ ಹಿಂದಿನ ಬಯೋಕೆಮಿಸ್ಟ್ರಿ! ಇದು ಆಫ್ರಿಕಾ ಮೂಲದ ‘ಸಿನ್ಸೆಫಾಲಮ್ ದುಲ್ಸಿಫಿಕಮ್’ ಅನ್ನೋ ಮಿರಾಕಲ್ ಬೆರ್ರಿಯ ಕಥೆಯಾಯ್ತು. ಅದು ಕೂಡ ನಮ್ಮ ಸಪೋಟಾ ಹಣ್ಣಿನ ಕುಟುಂಬಕ್ಕೇ ಸೇರಿದ ಒಂದು ಸಸ್ಯವಂತೆ! ಮಜಾ ಗೊತ್ತಾ? ಇಂತಹದ್ದೇ ಕೆಲವು ವಿಶೇಷ ಸಸ್ಯಗಳು, ರುಚಿಯ ಗ್ರಹಿಕೆಯಲ್ಲಿ ಬದಲಾವಣೆ ಮಾಡುವ ಗಿಡಗಳು ನಮ್ಮಲ್ಲೇ ಇವೆ; ಅದ್ರ ಬಗ್ಗೆ ಮುಂದೆ ಮಾತಾಡೋಣ ಬಿಡು” ಎಂದಳು ಕಾವ್ಯ.

ಹಿತ್ತಲ ಹಣ್ಣಿನ ಹೂರಣದ ಬಗ್ಗೆ ವಿಜ್ಞಾನದ ಚೂರಣ ತಿನ್ನಿಸಿದ ಗೆಳತಿಯ ಮಾತಿಗೆ ತಲೆದೂಗುತ್ತಾ, ಋತುಪರ್ಣ “ಎಲ್ಲವೂ ನಮ್ಮ ಅನುಭವಕ್ಕೆ, ದೃಷ್ಟಿಕೋನಕ್ಕೆ ಬಿಟ್ಟ ವಿಚಾರ ಅಲ್ವಾ ಕಾವ್ಯ? ನಿಂಬೆಯಲ್ಲಿರುವ ಹುಳಿಯನ್ನು ಮೂಲಭೂತವಾಗಿ ಬದಲಾಯಿಸದೇ, ಆ ಹುಳಿಯ ಅನುಭವ ನಮಗೆ ಸಿಗದ ಹಾಗೆ ಅದನ್ನೇ ಮಾಸ್ಕ್ ಮಾಡಿದ ಈ ‘ಮಿರಾಕ್ಯುಲಿನ್’, ನಮಗೊಂದು ಹೊಸ ಪಾಠ ಕಲಿಸಿದೆ ಅನ್ಬಹುದು. ಕೇಳಿದ್ದು, ನೋಡಿದ್ದು ಮಾತ್ರ ಅಲ್ಲ, ರುಚಿಯ ಅನುಭವಕ್ಕೆ ಬಂದದ್ದು ಕೂಡ, ನಿಜವಿಲ್ದೇ ಇರ್ಬಹುದು; ಅದು ನಮಗೆ ಗೋಚರಿಸಿರುವ ಆ ಕ್ಷಣದ ಸತ್ಯವಷ್ಟೇ. ಅದೇ ಪರಮಸತ್ಯವಾ? ಅದು ಕೇವಲ ನಮ್ಮ ಅನುಭವವಾ ಅಂತ ಯೋಚಿಸ್ಬೇಕು.” ಎಂದಳು. ಇದನ್ನೇ ಕೇಳುತ್ತಾ ಕಾವ್ಯ, ತನ್ನ ಜಾಣಗೆಳತಿಯ ಮಾತಿಗೆ ಸಹಮತ ಸೂಚಿಸಿ, “ನೀನು ಹೇಳಿದ್ದು ಸರಿಯಾಗಿದೆ ಋತು. ಹೌದೂ… ನಿನ್ನ ಮಾತೇ ಕಾವ್ಯದಂತಿದೆ. ಹೊಸದಾಗಿ ಏನು ಬರೆದೇ? ತೋರಿಸು” ಎನ್ನುತ್ತಾ ಗೆಳತಿಯ ಜೊತೆಗೆ ಅವಳ ಸ್ಟುಡಿಯೊ ಕಡೆಗೆ ಹೆಜ್ಜೆ ಹಾಕಿದಳು. ಆಪ್ತ ಗೆಳತಿಯರ ಮಾತಿಗಿಂತಲೂ ಜೋರಾಗಿ ಸದ್ದು ಮಾಡುತ್ತಾ ಜೋಡಿ ಪಿಕಳಾರಗಳು ಸಪೋಟಾ ಮರದ ಸುತ್ತಲೂ ದರಬಾರು ನಡೆಸಿದ್ದವು.

(ಹಿಂದಿನ ಕಂತು: ದೊಡ್‌’ ಅಮ್ಮ, ಚಿಕ್’ ಅಮ್ಮ!)

About The Author

ಕ್ಷಮಾ ವಿ. ಭಾನುಪ್ರಕಾಶ್

ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ