Advertisement
ಕ್ಷಮಾ ವಿ. ಭಾನುಪ್ರಕಾಶ್‌ ಹೊಸ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ” ಇಂದಿನಿಂದ

ಕ್ಷಮಾ ವಿ. ಭಾನುಪ್ರಕಾಶ್‌ ಹೊಸ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ” ಇಂದಿನಿಂದ

“ನಮ್ಮ ತೋಟದಲ್ಲಿ ಎಲ್ಲೆಡೆಯೂ ಕಾಣುವ ಹನಿನೀರಾವರಿ ಪೈಪುಗಳಂತೆ ಈ ಜಲವಾಹಕ ಮತ್ತು ಆಹಾರವಾಹಕ ಕೊಳವೆಗಳೂ, ಸಸ್ಯದ ತುಂಬೆಲ್ಲಾ ಇರತ್ವೆ ಅಲ್ವಾ? ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಾ ಗಿಡಮರಗಳನ್ನ ಚೆನ್ನಾಗಿಡತ್ವೆ” ಎಂದಳು ನಗುತ್ತಾ. “ಹೌದು ಕಣೋ, ಹಾಗೇನೇ. ಇಲ್ಲಿ ನೋಡು, ಈ ಎಲೆಯನ್ನ!” ಎಂದು ತನ್ನ ಅಂಗಳದಲ್ಲೇ ಸೊಂಪಾಗಿ ಬೆಳೆದಿದ್ದ ಮಲ್ಲಿಗೆಯ ಬಳ್ಳಿಯಿಂದ ಎಲೆಯೊಂದನ್ನು ತೋರಿಸುತ್ತಾ! “ಈ ಎಲೆಯಲ್ಲಿ ಆಚೀಚೆ ಕಾಣುವ ಗೆರೆಗಳನ್ನ ಗಮನಿಸು; ಅದೇ ರೀತಿ ಇಲ್ಲಿ ಅಂಗಳದಲ್ಲಿರುವ ಎಲ್ಲಾ ಗಿಡಗಳನ್ನೂ ಗಮನಿಸು. ಎಲ್ಲಾ ಎಲೆಗಳಲ್ಲೂ ಹೀಗೆ ಗೆರೆಗಳು ಕಾಣಿಸುತ್ತಲ್ವಾ? ಅದೇ ಈ ಜಲವಾಹಕ-ಆಹಾರವಾಹಕಗಳ ಕಂತೆ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಹೊಸ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಸಸ್ಯಗಳೊಳಗೆ ಒನ್ ವೇ, ಟೂ ವೇ ಟ್ರಾಫಿಕ್!

೨೦೨೫ ಮುಗೀತಾ ಬಂದಿತ್ತು; ಡಿಸೆಂಬರ್ ರಜೆಯಲ್ಲಿ ವಿಭಾ ತನ್ನ ಅಕ್ಕ ಕಾವ್ಯಳ ಮನೆಗೆ ಬಂದಿದ್ದಳು; ಅಲ್ಲಿನ ಮನೆ, ಹೊಲ, ಅಕ್ಕನ ಜೊತೆಗಿನ ಮಾತುಕಥೆ, ಸಂಜೆಗೆ ಮಾಡುವ ಚುರುಮುರಿ – ಇವೆಲ್ಲಾ ವಿಭಾಗೆ ಫೇವರೆಟ್! ಅದು ಒಳ್ಳೆಯ ಅವರೆಕಾಯಿಯ ಕಾಲ; ಸೊಗಡಿನ ಕಾಯಿಯ ಘಮ, ಹೊಲಕ್ಕೆ ಕಾಲಿಟ್ಟ ಕ್ಷಣವೇ ಮೂಗಿಗೆ ಅಡರುತ್ತಿತ್ತು; ಅಂದು ಸಂಜೆಯೂ ಹಾಗೇ! ಹೊಲದಲ್ಲಿ ಸಹಾಯಕ್ಕೆ ಬರುತ್ತಿದ್ದ ಆಳುಗಳು ತಮ್ಮ ಅಂದಿನ ಕೆಲಸವನ್ನು ಮುಗಿಸುತ್ತಾ, ಅಪರೂಪಕ್ಕೆ ಊರಿಗೆ ಬಂದ ವಿಭಾಳನ್ನು ಮಾತಾಡಿಸುತ್ತಾ ಮನೆಗೆ ಹೊರಡಲನುವಾಗುತ್ತಿದ್ದರು; ಆಗ ಅಲ್ಲಿ ನೀರಿನ ‘ಸ್ಪ್ರಿಂಕ್ಲರ್’ ಗಳನ್ನು ರಿಪೇರಿ ಮಾಡಿಸುತ್ತಿದ್ದ ಅಕ್ಕ ಕಾವ್ಯ ಕಂಡಳು. “ಏನು ಕಾವ್ಯಕ್ಕಾ? ನನಗೆ ಚುರುಮುರಿ ಮಾಡಿಕೊಡೋದು ಮರೆತು ಇಲ್ಲಿ ಬಂದಿದೀಯಲ್ಲಾ?” ಅಂದಳು ವಿಭಾ. “ಬಂದೆ ಇರೋ; ಇದೊಂಚೂರು ‘ಸ್ಪ್ರಿಂಕ್ಲರ್’ ಹಾಳಾಗಿತ್ತು; ಸರಿಯಾಯ್ತು ಇನ್ನೇನು; ಇದರ ಪಾಡಿಗೆ ಇದು ತನ್ನ ಕೆಲಸ ಮಾಡ್ತಾ ಇದ್ರೆ, ತನ್ನ ಪಾಡಿಗೆ ತಾನು ಹೊಲ ಅರಳತ್ತೆ, ತೋಟ ಏಳತ್ತೆ ಅಲ್ವಾ?” ಅಂದಳು ಕಾವ್ಯ. ಆಗ ವಿಭಾ, “ಹೌದಕ್ಕ, ಆ ಕಡೆ ಬದುವಿನಿಂದ ನೋಡ್ಕೊಂಡೇ ಬಂದೆ, ಹೊಲದ, ತೋಟದ ಉದ್ದಗಲಕ್ಕೂ, ಈ ಪೈಪುಗಳೇ ಇವೆ! ಹೊಸದಾಗಿ ಇಷ್ಟೆಲ್ಲಾ ಮಾಡ್ಸಿದೀಯಾ ಹಾಗಾದ್ರೆ; ಹೌದೂ, ಇಲ್ಲಿ ‘ಸ್ಪ್ರಿಂಕ್ಲರ್’ ಹಾಳಾಗಿರೋದು ಮಾತ್ರವಲ್ಲ, ಆ ಕಡೆ ಪೈಪುಗಳು ಲೀಕ್ ಆಗ್ತಿದ್ವು, ಅದನ್ನೂ ಸರಿ ಮಾಡ್ಸು ಮತ್ತೆ” ಅಂದಳು.  ಆಗ ಕಾವ್ಯ ನಗುತ್ತಾ, “ಇಲ್ಲಾ ಕಣೋ, ಅದು ‘ಡ್ರಿಪ್ ಇರಿಗೇಶನ್’ ಅಂದ್ರೆ ಹನಿ ನೀರಾವರಿ; ಅಲ್ಲಿ ಬೇಕಂತಲೇ ಮಾಡಿದ ರಂಧ್ರಗಳಿಂದ ನಿಯಮಿತವಾಗಿ ನೀರು ಜಿನುಗ್ತಾ, ತೋಟದ ಮಣ್ಣನ್ನ ಒದ್ದೆಯಾಗಿರಿಸತ್ತೆ; ಇದು ಹೆಚ್ಚು ನೀರು ಪೋಲಾಗದಂತೆ, ನೀರಿನ ಮೂಲಕ್ಕೆ ಹೊರೆಯಾಗದಂತೆ ತೋಟ ಮಾಡುವ ಪರಿಸರಸ್ನೇಹಿ ವಿಧಾನ” ಅಂದ್ಲು; ಆಗ ವಿಭಾ, “ಓಹ್ ಹೌದಾ? ಅದರ ಬಗ್ಗೆ ಓದಿ ಗೊತ್ತಿತ್ತು, ನೋಡಿ ಗೊತ್ತಿರ್ಲಿಲ್ಲ” ಅಂದಳು. “ಸರಿ ನಡಿ ಹೊತ್ತಾಯ್ತು, ಇನ್ನು ಈ ಪೈಪ್‌ಗಳ ನಡುವೆ ನಮ್ಮ ಬೆಸ್ಟ್ ಫ್ರೆಂಡ್ಸ್ ಹಾವುಗಳು ಸರಿದಾಡಿದ್ರೆ ಗೊತ್ತಾಗಲ್ಲ ಮತ್ತೆ” ಅಂತ ನಗುತ್ತಾ, ಕಾವ್ಯ ವಿಭಾಳನ್ನು ಹೆದರಿಸುತ್ತಾ, ಮನೆ ಕಡೆಗೆ ಹೊರಟಳು.

ವಿಭಾಗೆ ಚುರುಮುರಿ ಅಂದ್ರೆ ಅದೆಷ್ಟು ಆಸೆ ಎಂದು ಗೊತ್ತಿದ್ದ ಕಾವ್ಯ, ಮೊದಲೇ ತಯಾರಿಸಿಟ್ಟಿದ್ದ ಎಲ್ಲವನ್ನೂ ಫ್ರೆಶ್ ಆಗಿ ಮಿಶ್ರಣ ಮಾಡಿ, ವಿಭಾಳ ಕೈಗಿಟ್ಟಳು. “ಸೂಪರ್ ಅಕ್ಕಾ!” ಅಂತ ಒಂದೇ ಏಟಿಗೆ ಚುರುಮುರಿಯ ಮೇಲೆ ಅಟ್ಯಾಕ್ ಮಾಡಿದ ವಿಭಾಳನ್ನು ನೋಡಿ ನಗುತ್ತಾ, ದಣಿವಾರಿಸಿಕೊಳ್ಳಲು ಒರಗಿ ಕೂತ ಕಾವ್ಯ, ವಿಭಾಳೆಡೆಗೆ – “ಈಗ ಭೂಮಿಗೆ ನೀರೇನೋ ಈ ಪೈಪುಗಳು ಹಾಯಿಸುತ್ತವಲ್ಲ, ಆ ನೀರು ಗಿಡ-ಮರಗಳ ಒಳಗೆ ಹೇಗೆ ಹೋಗತ್ತೆ ಗೊತ್ತಾ?” ಎಂದು ಪ್ರಶ್ನೆ ಎಸೆದಳು. ಆಗ, ಅರೆಕ್ಷಣ ತನ್ನ ಗಮನವನ್ನು ಚುರುಮುರಿಯ ಕಡೆಯಿಂದ ಈ ಕಡೆ ಶಿಫ್ಟ್ ಮಾಡಿದ ವಿಭಾ, ಯೋಚಿಸುತ್ತಾ, “ಈ ಗಿಡ ಮರಗಳ ಒಳಗೆ, ನಾವು ಜ್ಯೂಸ್, ಎಳನೀರು ಕುಡಿಯುವ ‘ಸ್ಟ್ರಾ’ ಥರ ಏನಾದ್ರೂ ಇರಬಹುದು ಅಲ್ವಾ ಅಕ್ಕಾ?” ಎಂದಳು. “ಕರೆಕ್ಟ್ ವಿಭಾ; ಆದ್ರೆ, ಅವುಗಳ ರಚನೆ ಮತ್ತು ಕೆಲಸ ಮಾಡುವ ವಿಧಾನ ಆ ‘ಸ್ಟ್ರಾ’ಗಿಂತಲೂ ಮತ್ತಷ್ಟು ಕ್ಲಿಷ್ಟ ಮತ್ತು ವಿಶಿಷ್ಟ. ಸಸ್ಯಗಳ ಒಳಗೆ ‘ಕ್ಸೈಲೆಮ್’ ಅಂದ್ರೆ ಜಲವಾಹಕ ಅಂಗಾಂಶ ಮತ್ತು ‘ಫ್ಲೋಯೆಮ್’ ಎಂಬ ಆಹಾರವಾಹಕ ಅಂಗಾಂಶ ಇರತ್ವೆ. ಇವೆರಡೂ ನಾಳಗಳನ್ನು ಒಟ್ಟಿಗೆ ‘ವ್ಯಾಸ್ಕುಲಾರ್ ಬಂಡಲ್’ ಅಂತೀವಿ. ಇವೆರಡರಿಂದಲೇ ಆಹಾರ ಮತ್ತು ನೀರು ಗಿಡದ ಒಳಗೆ ಸಂಚರಿಸುತ್ವೆ.” ಎಂದಳು. ಆಗ ವಿಭಾ, “ಅಕ್ಕ, ಇವುಗಳನ್ನ ಅಂಗಾಂಶ ಅಂದ್ಯಲ್ಲ? ಅದು ಅಂಗಾಂಗ ಅಲ್ವಾ?” ಎಂದಳು. ಆಗ ಕಾವ್ಯ “ಹಲವು ಬಗೆಯ ಸೆಲ್ಸ್ ಅಂದ್ರೆ ಜೀವಕೋಶಗಳು ಸೇರಿ ಟಿಶ್ಯೂ ಅಂದ್ರೆ ಅಂಗಾಂಶ ತಯಾರಾಗತ್ತೆ. ಅನೇಕ ಅಂಗಾಂಶಗಳು ಸೇರಿ ಅಂಗಾಂಗ ತಯಾರಾಗತ್ತೆ. ಇಲ್ಲಿ ಒಂದೇ ಉದ್ದೇಶದಿಂದ ಕಾರ್ಯನಿರ್ವಹಿಸೋ ಹಲವು ಬಗೆಯ ಜೀವಕೋಶಗಳ ಮೊತ್ತವೇ ಈ ‘ಕ್ಸೈಲೆಮ್’ ಮತ್ತು ‘ಫ್ಲೋಯೆಮ್’; ಹಾಗಾಗಿ ಇವು ಅಂಗಾಂಶಗಳೇ ಸರಿ.”

ತನ್ನ ಮುದ್ದಿನ ತಂಗಿ ಆಸಕ್ತಿಯಿಂದ ಕೇಳುತ್ತಿರುವುದನ್ನು ಗಮನಿಸಿ ಮುಂದುವರೆಸುತ್ತಾ “ಈ ಜಲವಾಹಕ ಕೊಳವೆಯಿದೆಯಲ್ಲ, ಅದು ಮುಖ್ಯವಾಗಿ ಸತ್ತಕೋಶಗಳಿಂದ ತಯಾರಾಗಿರತ್ತೆ; ಆ ಜೀವಕೋಶಗಳ ಒಳಭಾಗ ಖಾಲಿಯಾಗಿ, ಹೊರಪದರ ಮಾತ್ರ ಉಳಿದು, ಒಂದು ಸತ್ತ ಜೀವಕೋಶವು ಮತ್ತೊಂದಕ್ಕೆ ಜೋಡಣೆಯಾಗುತ್ತಾ, ಕೊಳವೆಯಾಕಾರ ಪಡೆದುಕೊಳ್ಳುತ್ತೆ. ಈ ಕೊಳವೆಯೊಳಗೆ ನೀರು ಕೇವಲ ಮೇಲ್ಮುಖವಾಗಿ ಚಲಿಸುತ್ತೆ ಅನ್ನೋದು ಮತ್ತೊಂದು ವಿಶೇಷ” ಎಂದಳು. ಆಗ ವಿಭಾ “ಒಹ್! ಒನ್ ವೇ ಟ್ರಾಫಿಕ್ ಹಾಗಾದ್ರೆ” ಅಂದಳು ನಗುತ್ತಾ. “ಕರೆಕ್ಟಾಗಿ ಹೇಳ್ದೆ! ಮಣ್ಣಿನ ಕಣಗಳ ನಡುವೆ ಇರುವ ನೀರು, ಬೇರಿನ ಒಳಗಿರುವ ಈ ಜಲವಾಹಕ ಕೊಳವೆಯ ಮೂಲಕ ಮೇಲ್ಮುಖವಾಗಿ ಸಂಚರಿಸುತ್ತಾ, ಸಸ್ಯದ ಕಾಂಡ ಮತ್ತು ಎಲೆಗಳನ್ನೂ ಒಳಗೊಂಡಂತೆ, ಎಲ್ಲ ಜೀವಕೋಶಗಳಿಗೂ ತಲುಪುತ್ತೆ. ಇಲ್ಲಿ ನೀರು ಮಾತ್ರವಲ್ಲ, ನೀರಿನ ಜೊತೆಯಲ್ಲಿ ಅನೇಕ ಖನಿಜಗಳು ಕೂಡ ಇಲ್ಲೆಲ್ಲ ತಲುಪುತ್ವೆ.” ಎಂದಳು ಕಾವ್ಯ;

ಅಕ್ಕನ ವಿವರಣೆ ಕೇಳುತ್ತಾ ಮೈಮರೆತ ವಿಭಾ, ಅಕಸ್ಮಾತಾಗಿ ತನ್ನ ಕೈಲಿದ್ದ ಚಮಚವನ್ನು ಕೆಳಗೆ ಬೀಳಿಸಿದಳು; ಆಗ ಅವಳಿಗೆ ನೆನಪಾದದ್ದೇ ‘ಗ್ರ್ಯಾವಿಟಿ’ ಅಂದರೆ ಗುರುತ್ವಾಕರ್ಷಣ ಶಕ್ತಿ. ಆಗ ಚಮಚವನ್ನು ಎತ್ತಿಕೊಳ್ಳುತ್ತಾ ಅಕ್ಕನೆಡೆಗೆ ತಿರುಗಿದ ವಿಭಾ “ಅಲ್ಲ ಅಕ್ಕ, ಗ್ರ್ಯಾವಿಟಿಗೆ ವಿರುದ್ಧವಾಗಿ ನೀರು ಮೇಲಕ್ಕೆ ಹೇಗೆ ಏಳುತ್ತೇ? ನೀರು ಬೇರಿನಿಂದ ಸಸ್ಯದ ತುದಿಯೆಡೆಗೆ ಹೇಗೆ ಹೋಗತ್ತೆ?” ಎಂದು ಸವಾಲೆಸೆದಳು. ಇಂತಹ ಪ್ರಶ್ನೆಗಳೆಂದರೆ ಕಾವ್ಯಳಿಗೆ ತುಂಬಾ ಇಷ್ಟ; ವಿಜ್ಞಾನದ ಕಲಿಕೆಗೆ ಬೇಕಿರುವುದು ಇದೇ – ಕುತೂಹಲ ತುಂಬಿದ ಮನಸ್ಸು ಮತ್ತು ಪ್ರಶ್ನೆಗಳನ್ನು ಕೇಳುವ ಧೈರ್ಯ ಎಂಬುದು ಕಾವ್ಯಳನ್ನೂ ಸೇರಿದಂತೆ, ವೈಜ್ಞಾನಿಕ ಮನಸ್ಥಿತಿ ಇರುವ, ಬೆಳೆಸಲಿಚ್ಚಿಸುವ ಎಲ್ಲರ ನಂಬಿಕೆ.

“ಗುಡ್! ಒಳ್ಳೆ ಪ್ರಶ್ನೆ ಕೇಳಿದೆ. ನೀನು ಆಗಲೇ ಹೇಳಿದೆಯಲ್ಲ, ಜ್ಯೂಸ್ ಕುಡಿಯುವ ‘ಸ್ಟ್ರಾ’ನ ಹಾಗೆ ಅಂತ. ಹಾಗೇ, ಇಲ್ಲಿ ಕೂಡ ಮೇಲಿನಿಂದ ನೀರನ್ನು ಎಳೆದುಕೊಳ್ಳಲಾಗ್ತದೆ. ‘ಸ್ಟ್ರಾ’ ಮೂಲಕ ನಾವು ಜ್ಯೂಸನ್ನು ಕುಡಿಯುವಾಗ, ನಾವು ನಮ್ಮ ಬಾಯಿಂದ ‘ಸ್ಟ್ರಾ’ದೊಳಗಿನ ಗಾಳಿಯನ್ನು ಮೊದಲು ಎಳೆದುಕೊಂಡು, ‘ಸ್ಟ್ರಾ’ದ ಒಳಗೆ ಒತ್ತಡವನ್ನು ಕಡಿಮೆ ಮಾಡಿ, ನಿರ್ವಾತದಂತಹ ಸ್ಥಿತಿ ಸೃಷ್ಟಿಸುತ್ತೇವೆ; ಆಗ, ಹೊರಗಿನ ವಾತಾವರಣದ ಒತ್ತಡವು, ಜ್ಯೂಸನ್ನು ‘ಸ್ಟ್ರಾ’ದ ಒಳಗೆ ತಳ್ಳುತ್ತದೆ. ಇಲ್ಲಿ ಕೂಡ ಹಾಗೇನೆ”. ಆಗ, ವಿಭಾ ಒಂದು ನಿಮಿಷ ಚಿಂತಾಕ್ರಾಂತಳಾದಂತೆ ಕಂಡಳು. “ಏನಾಯ್ತೋ, ಸೈನ್ಸ್ ಪಾಠ ಜಾಸ್ತಿ ಆಯ್ತಾ?” ಎಂದಳು ಕಾವ್ಯ ನಗುತ್ತಾ. ಆಗ ವಿಭಾ “ಹೇ ಇಲ್ಲಕ್ಕಾ, ‘ಸ್ಟ್ರಾ’ ಒಳಗೆ ಜ್ಯೂಸು ಏರೋಕೆ, ನಮ್ಮ ಬಾಯಿಂದ ನಾವು ನಿರ್ವಾತದಂತಹ ಸ್ಥಿತಿ ಸೃಷ್ಟಿಸುತ್ತೇವಲ್ವಾ? ಸಸ್ಯಗಳಲ್ಲಿ ಯಾರು ಆ ಕೆಲ್ಸಾ ಮಾಡೋದು?” ಎಂದು ಮರುಪ್ರಶ್ನೆ ಎಸೆದಳು.

ಆಗ ಕಾವ್ಯ, “ಅದನ್ನ ನಾವು ಅರ್ಥ ಮಾಡಿಕೊಳ್ಳಬೇಕಾದ್ರೆ, ‘ಬಾಷ್ಪ ವಿಸರ್ಜನೆ’ ಬಗ್ಗೆ ತಿಳ್ಕೋಬೇಕು ನೋಡು. ನಾವು ಹೆಚ್ಚೆಚ್ಚು ನೀರು ಸುರಿದ್ರೆ, ಗಿಡದ ಕಥೆ ಏನಾಗತ್ತೆ ಹೇಳು? ಕೊಳೆತುಹೋಗತ್ತೆ ತಾನೆ? ಹಾಗೆ ಆಗಬಾರದು ಅಂತಲೇ, ಬೇರಿನ ಒಳಗಿರುವ ಜಲವಾಹಕ ಅಂಗಾಂಶದ ಮೂಲಕ ಒಳಬಂದ ನೀರು, ತುಸು ಹೆಚ್ಚಾದಂತೆಲ್ಲ, ಬಿಸಿಲಿನ ತಾಪಕ್ಕೆ ಈ ಹೆಚ್ಚಿನ ನೀರಿನಂಶವು ‘ಎವಾಪರೇಟ್’ ಅಂದ್ರೆ ಆವಿಯಾಗುತ್ತಾ ಹೊರಹೋಗತ್ತೆ; ಎಲೆಗಳ ಕೆಳಪದರದಲ್ಲಿರುವ ‘ಸ್ಟೊಮ್ಯಾಟಾ’ ಅಂದ್ರೆ ಪತ್ರರಂಧ್ರಗಳ ಮೂಲಕ, ಬಾಷ್ಪೀಕರಣದ ಮುಖಾಂತರ ಆವಿಯಾಗುತ್ತಾ ಹೊರಹೋಗುವ ಈ ನೀರು, ಅಲ್ಲಿ ‘ನೆಗಟಿವ್ ಪ್ರೆಶರ್’ ಸೃಷ್ತಿಸತ್ತೆ; ನಾವು ‘ಸ್ಟ್ರಾ’ ಅನ್ನು ಬಾಯಲ್ಲಿರಿಸಿ ಜ್ಯೂಸ್ ಎಳೆದುಕೊಳ್ಳೋಕೆ ಮಾಡ್ತೀವಲ್ಲಾ? ಹಾಗೆ. ಆಗ, ಬೇರಿನ ಸುತ್ತಲೂ ಇರುವ ‘ಪಾಸಿಟೀವ್ ಒತ್ತಡ’ವು ನೀರನ್ನು ಮತ್ತೆ ಒಳಕ್ಕೆ ನುಗ್ಗಿಸುತ್ತದೆ ಮತ್ತು ಆ ಒತ್ತಡದ ಕಾರಣದಿಂದ ನೀರು ಕೆಳಗಿನ ಬೇರಿನಿಂದ ಮೇಲಿನ ಎಲೆಗೆ, ಗ್ರ್ಯಾವಿಟಿಯ ವಿರುದ್ಧವಾಗಿ ಮೇಲ್ಮುಖವಾಗಿ ಚಲಿಸುತ್ತದೆ.” ಎಂದಳು.

ಆಸಕ್ತಿಯಿಂದ ಇದೆಲ್ಲವನ್ನೂ ಕೇಳಿ ತಲೆಯಾಡಿಸಿದ ವಿಭಾ, ಖಾಲಿಯಾದ ಪ್ಲೇಟನ್ನು ಒಳಗಿಟ್ಟು ಬರುವಾಗ, ಮತ್ತೊಂದು ಪ್ರಶ್ನೆಯನ್ನು ಹೊತ್ತು ಬಂದಳು. “ಅಕ್ಕಾ, ನೀರೇನೋ ಜಲವಾಹಕ ಅಂದ್ರೆ ‘ಕ್ಸೈಲೆಮ್’ ನ ಮೂಲಕ ಬರತ್ತೆ; ಊಟ ಹೇಗೆ? ತನಗೆ ಬೇಕಾದ ಊಟವನ್ನ, ಬಿಸಿಲಿನ ಸಹಾಯದಿಂದ ಸಸ್ಯ ತಾನೇ ತಯಾರಿಸಿಕೊಳ್ಳತ್ತೆ ಅಲ್ವಾ? ಹಾಗಿದ್ದಾಗ, ಆಹಾರವಾಹಕದ ಕೆಲ್ಸವೇನು?” ಎಂದಳು. “ಹೌದು, ದ್ಯುತಿಸಂಶ್ಲೇಷಣೆಯ ಮೂಲಕ ಇಂಗಾಲದ ಡೈ ಆಕ್ಸೈಡ್ ಮತ್ತು ನೀರನ್ನ ಬಳಸಿ ಆಹಾರ ತಯಾರಿಸುವ ಸಸ್ಯಗಳು, ತಮಗೆ ಬೇಕಾದ ‘ಗ್ಲೂಕೋಸ್’ ನ ಜೊತೆಗೆ ನಮಗೆ ಬೇಕಾದ ಆಮ್ಲಜನಕವನ್ನೂ ತಯಾರಿಸಿ ಕೊಡತ್ತೆ ತಾನೇ? ಈ ಆಹಾರ, ಸಾಮಾನ್ಯವಾಗಿ ‘ಪತ್ರಹರಿತ್ತು’ ಇರುವ ಎಲೆಗಳಲ್ಲಿ ತಯಾರಾಗುತ್ತೆ. ‘ಬೆಳಕಡುಗೆ’ ನಡೆಯುವ ಅಡುಗೆಮನೆಯೇ ಈ ಎಲೆಗಳು! ಆದ್ರೆ, ಕಾಂಡಕ್ಕೂ, ಬೇರಿಗೂ, ಹಣ್ಣಿಗೂ, ಹೂವಿಗೂ ಆಹಾರ ಬೇಕಲ್ಲ? ಹಾಗಾಗಿ ಸಸ್ಯದ ಎಲ್ಲೆಡೆಗೂ ಆಹಾರವನ್ನು ಸಾಗಿಸುವ ಕೆಲ್ಸ ಈ ‘ಫ್ಲೋಯೆಮ್’ ಅಂದ್ರೆ ಆಹಾರವಾಹಕ ಕೊಳವೆಯದ್ದು.” ಎಂದಳು; ಆಗ ವಿಭಾ “ಒಹ್! ಇಲ್ಲಿ ಹಾಗಾದ್ರೆ ಟೂ ವೇ ಟ್ರಾಫಿಕ್ ಅಲ್ವಾ?” ಎಂದಳು; ಅದಕ್ಕೆ ನಗುತ್ತಾ ಹೌದೆಂದು ತಲೆಯಾಡಿಸುತ್ತಾ “ನಿಜ; ಮತ್ತೊಂದು ವ್ಯತ್ಯಾಸವೆಂದ್ರೆ,  ಜಲವಾಹಕದಲ್ಲಿ ಮುಖ್ಯವಾಗಿ ಸತ್ತಕೋಶಗಳೇ ಇದ್ದು, ಹೊರಗೆ ಮಾತ್ರ ಬದುಕಿರುವ ಜೀವಕೋಶಗಳಿದ್ವು; ಆದ್ರೆ, ಆಹಾರವಾಹಕ ಕೊಳವೆಯಲ್ಲಿ ಜೀವಂತ ಜೀವಕೋಶಗಳೇ ಕೊಂಚ ಮಾರ್ಪಾಡಾಗಿ, ಕೊಳವೆಯಾಕಾರ ಪಡೆದಿರುತ್ವೆ. ಇಲ್ಲಿ ‘ಸೂಕ್ಷ್ಮಾಭಿಸರಣ’ ಅಂದ್ರೆ ‘ಆಸ್ಮಾಸಿಸ್’ನ ಮೂಲಕ ಮತ್ತು ಹಲವೆಡೆ ಸಕ್ರಿಯ ಚಲನೆಯ ಮೂಲಕ ಆಹಾರವು ‘ಸುಕ್ರೋಸ್’ನ ರೂಪದಲ್ಲಿ ಎಲ್ಲೆಡೆಗೂ ತಲುಪುತ್ತೆ.” ಎಂದಳು.

ಆಗ ವಿಭಾ “ನಮ್ಮ ತೋಟದಲ್ಲಿ ಎಲ್ಲೆಡೆಯೂ ಕಾಣುವ ಹನಿನೀರಾವರಿ ಪೈಪುಗಳಂತೆ ಈ ಜಲವಾಹಕ ಮತ್ತು ಆಹಾರವಾಹಕ ಕೊಳವೆಗಳೂ, ಸಸ್ಯದ ತುಂಬೆಲ್ಲಾ ಇರತ್ವೆ ಅಲ್ವಾ? ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಾ ಗಿಡಮರಗಳನ್ನ ಚೆನ್ನಾಗಿಡತ್ವೆ” ಎಂದಳು ನಗುತ್ತಾ. “ಹೌದು ಕಣೋ, ಹಾಗೇನೇ. ಇಲ್ಲಿ ನೋಡು, ಈ ಎಲೆಯನ್ನ!” ಎಂದು ತನ್ನ ಅಂಗಳದಲ್ಲೇ ಸೊಂಪಾಗಿ ಬೆಳೆದಿದ್ದ ಮಲ್ಲಿಗೆಯ ಬಳ್ಳಿಯಿಂದ ಎಲೆಯೊಂದನ್ನು ತೋರಿಸುತ್ತಾ! “ಈ ಎಲೆಯಲ್ಲಿ ಆಚೀಚೆ ಕಾಣುವ ಗೆರೆಗಳನ್ನ ಗಮನಿಸು; ಅದೇ ರೀತಿ ಇಲ್ಲಿ ಅಂಗಳದಲ್ಲಿರುವ ಎಲ್ಲಾ ಗಿಡಗಳನ್ನೂ ಗಮನಿಸು. ಎಲ್ಲಾ ಎಲೆಗಳಲ್ಲೂ ಹೀಗೆ ಗೆರೆಗಳು ಕಾಣಿಸುತ್ತಲ್ವಾ? ಅದೇ ಈ ಜಲವಾಹಕ-ಆಹಾರವಾಹಕಗಳ ಕಂತೆ. ಮಲ್ಲಿಗೆಯ ಎಲೆಯಲ್ಲಿ ಇರುವಂತೆ, ಇವುಗಳು ಒಂದು ಮುಖ್ಯ ನಡುಗೆರೆಯಿಂದ ಆಚೀಚೆ ಜಾಲದಂತೆ ಶಾಖೆಗಳಾಗಿ ಕವಲೊಡೆದಿದ್ರೆ, ಅವು ದ್ವಿದಳ ಧಾನ್ಯಗಳ ಸಸ್ಯ ಎಂದರ್ಥ. ಅದರ ಬದಲು, ಒಂದಕ್ಕೊಂದು ಸಮಾನಾಂತರವಾಗಿ, ಅಂದ್ರೆ, ಹುಲ್ಲಿನಲ್ಲಿರುವಂತೆ, ಅಕ್ಕಿ, ಗೋಧಿಯಂತಹ ಸಸ್ಯದ ಎಲೆಗಳಲ್ಲಿರುವಂತೆ ಕಂಡುಬಂದರೆ, ಅದು ಏಕದಳ ಸಸ್ಯ ಎಂದರ್ಥ.” ಎಂದಳು.

ಆಗ ವಿಭಾ, “ನಾವೀಗ ಊಟ ಮಾಡೋಕೆ ಬಳಸೋ ಬಾಳೆಎಲೆಯೂ ಇದರಂತೆಯೇ ಅಲ್ವಾ? ಸಮಾನಾಂತರ ರೇಖೆಗಳಂತೆ ಇವೆ ಗೆರೆಗಳು ಅದರಲ್ಲಿ; ಅಂದ್ರೆ ಬಾಳೆ ಕೂಡ ಏಕದಳ ಸಸ್ಯ” ಎಂದಳು. ತನ್ನ ಜಾಣ ತಂಗಿಯನ್ನು ಮೆಚ್ಚುಗೆಯಿಂದ ನೋಡುತ್ತಾ “ನಿಜಾ ಕಣೋ! ಎಲೆಗಳಲ್ಲಿ ಕಾಣೋ ಈ ಜಲವಾಹಕ-ಆಹಾರವಾಹಕಗಳನ್ನು ‘ವೇನ್ಸ್’ ಅಂತಾರೆ ಇಂಗ್ಲೀಶಲ್ಲಿ; ನಮ್ಮ ದೇಹದಲ್ಲಿರುವ ರಕ್ತವಾಹಕಗಳನ್ನೂ ಹಾಗೇ ಅಲ್ವಾ ಕರೆಯೋದು? ಸಸ್ಯಗಳಲ್ಲಿ ಇರುವಂತೆ ನಮ್ಮ ದೇಹದಲ್ಲೂ ಇರುವ ಇಂತಹ ಕೊಳವೆಗಳ ಬಗ್ಗೆ, ಅವುಗಳ ವ್ಯವಸ್ಥೆಯ ಬಗ್ಗೆ ನಾಳೆ ಮಾತಾಡೋಣ. ಈಗ ಅಡುಗೆ ಮಾಡಿ, ಊಟ ಮಾಡಿ ಬೇಗ ಮಲಗುವ ಬಾ” ಎನ್ನುತ್ತಾ ಅಂಗಳದಿಂದ ಒಳನಡೆದಳು ಕಾವ್ಯ. ಆಕೆಯ ಹಿಂದೆಯೇ, ತಾನು ಆಗ ತಾನೇ ಬಿಡಿಸಿದ ಬಗೆಬಗೆಯ ಎಲೆಗಳನ್ನು, ಅದರಲ್ಲಿರುವ ಗೆರೆಗಳನ್ನೂ ಪರೀಕ್ಷಿಸುತ್ತಾ ಒಳನಡೆದಳು ವಿಭಾ, ನಾಳಿನ ಮಾತುಕತೆಯನ್ನೇ ಎದುರುನೋಡುತ್ತಾ!

About The Author

ಕ್ಷಮಾ ವಿ. ಭಾನುಪ್ರಕಾಶ್

ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ