“ಧರ್ಮರಾಜನೇ, ಕರಣಿಕರೇ, ಕ್ಷಮಿಸಿ. ನಿಮ್ಮ ದೂತರಾದ ನಮಗೆ ನಿಮ್ಮ ನಿಯಮವೇ ವೇದವಾಕ್ಯ. ಆದರೆ ಕಾಕಮಂಕ ಮಾಡಿದ್ದು ಕೇವಲ ಹಸಿವಿನ ಅಚಾತುರ್ಯವಲ್ಲ, ಅದರ ಹಿಂದೆ ಒಂದು ಭಾವನಾತ್ಮಕ ಸತ್ಯವಿದೆ. ಸತ್ಯಪ್ಪ ಮಾಸ್ತರರು ಬದುಕಿದ್ದಾಗ ಕೇವಲ ಮನುಷ್ಯರಿಗೆ ಮಾತ್ರವಲ್ಲ, ನಮ್ಮಂತ ಪಶು-ಪಕ್ಷಿಗಳಿಗೂ ಅಕ್ಕರೆ ತೋರಿಸಿದವರು. ಅವರು ಪಾಠ ಮಾಡುವಾಗ ಮರದ ಮೇಲೆ ಕುಳಿತು ಪಾಠ ಕೇಳುತ್ತಿದ್ದವರಲ್ಲಿ ಈ ಮಂಕನೂ ಒಬ್ಬ.” ಸಭೆಯಲ್ಲಿದ್ದ ಕಾಗೆಗಳು ಕುತೂಹಲದಿಂದ ಕಿವಿಗೊಟ್ಟವು. ಯಮರಾಜನೂ ಗಂಭೀರವಾಗಿ ಕಾಕಂಬೆಯತ್ತ ನೋಡಿದ.
ಗುರುರಾಜ್ ಕೆ. ಕುಲಕರ್ಣಿ ಬರೆದ ಕತೆ “ಕಾಕಮಂಡಲ ಮಧ್ಯದೊಳಗೆ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಕಾಕಮಂಡಲದ ಸರ್ವಸದಸ್ಯರ ಸಭೆ ಪಿಸುಮಾತುಗಳಿಂದಲೇ ಹೌಸ್ಫುಲ್ ಆಗಿತ್ತು..
‘ಏನಾಯ್ತಂತೆ?’
‘ಯಮರಾಜನ ಆಜ್ಞೆಗೆ ಮೊದಲೇ ಕಾಕಪಿಂಡ ತಿಂದರಂತೆ’
‘ಯಾರು ತಿಂದದ್ದು?’
‘ಕಾಕಮಂಕನದೇ ಕಿತಾಪತಿ ಅಂತೆ’
‘ಅಯ್ಯೋ, ಅದಕ್ಕೇನು ಬಂದಿತ್ತು ಧಾಡಿ..’
‘ಸಣ್ಣ ವಯಸ್ಸು… ಏನೋ ದುಡುಕಿ ಮಾಡಿದೆ ಪಾಪ’
‘ಚಿಕ್ಕವರಿರಲಿ, ದೊಡ್ಡವರಿರಲಿ ಯಮನ ಆಜ್ಞೆ ಮೀರಿದರೆ ಯಮದಂಡ ಖಚಿತ’
‘ಏನು ಶಿಕ್ಷೆ ಕಾದಿದೆಯೋ ಏನೋ…’
‘ಕಾಕಮಂಕನಿಗೆ ಒಬ್ಬನಿಗೆ ಆದರೆ ಪರವಾಗಿಲ್ಲ, ಇಡೀ ಕಾಕಮಂಡಲಕ್ಕೆ ಶಿಕ್ಷೆ ಆದರೆ ಏನ್ಮಾಡೋದು…’
ಅಷ್ಟರಲ್ಲಿ ಕಾಕಮಂಡಲದ ಹಿರಿಯ ಕಾಗೆ ಕಾಕನಾಯಕ ಸಭೆಯನ್ನು ಉದ್ದೇಶಿಸಿ ಮಾತನಾಡತೊಡಗಿದ.
“ಕಾಕಬಂಧುಗಳೇ, ನಿಮಗೆ ಗೊತ್ತಿರುವಂತೆ ಯುಗ ಯುಗಗಳಿಂದ ನಾವು ಯಮಧರ್ಮನ ದೂತರಾಗಿ ಜನರಿಂದ ಅವರ ಪಿತೃಗಳಿಗೆ ಆಹಾರವನ್ನು ಕೊಂಡೊಯ್ಯುತ್ತಿದ್ದೇವೆ. ಜನರು ಕೂಡ ನಾವು ಪಿಂಡವನ್ನು ಸ್ವೀಕರಿಸಿದರೆ, ಪಿತೃಗಳ ಆಸೆಗಳು ಪೂರೈಸಿ, ಸಂತೃಪ್ತರಾದರು ಎಂದು ನಂಬಿದ್ದಾರೆ. ಆದರೆ ನೆನಪಿರಲಿ, ನಾವು ಪಿಂಡವನ್ನು ಸ್ವೀಕರಿಸುವುದು ಯಮನ ಆಜ್ಞೆಯಾದ ಮೇಲೆ ಮಾತ್ರ. ದೂತರಾದ ನಮಗೆ ಯಮನ ಆಜ್ಞೆ ಇಲ್ಲದೇ ಕೆಲಸ ಮಾಡುವ ಸ್ವಾತಂತ್ರ್ಯವಿಲ್ಲ.” ಎಂದು ಒಂದು ಕ್ಷಣ ಸುಮ್ಮನಾಯಿತು.
ಮೊದಲೇ ಆತಂಕಗೊಂಡಿದ್ದ ಕಾಕಗಣ, ನಾಯಕನ ಮಾತಿನಿಂದ ಇನ್ನೂ ವಿಹ್ವಲಗೊಂಡಿತು.

ಕಾಕನಾಯಕ ಮುಂದುವರಿಸುತ್ತ “ಯುಗಗಳಿಂದ ಬಂದ ಈ ನಿಯಮ ಇವತ್ತು ಮುರಿದಿದೆ. ನಮ್ಮ ದೊರೆಯಾದ ಯಮರಾಜ ಇದರಿಂದ ತುಂಬಾ ಕೋಪಗೊಂಡಿದ್ದಾನೆ. ಈ ವಿಷಯದ ವಿಚಾರಣೆಗೆ ಸ್ವತಃ ಆತನೇ ಮಹಿಷವಾಹನ ಏರಿ ಇಲ್ಲಿಗೆ ಬರುವವನಿದ್ದಾನೆ”.
ಯಮನಿಗಾಗಿ ಕಾದು ಕುಳಿತ ಕಾಗೆಗಳಿಗೆ ಕ್ಷಣಗಳು ಯುಗಗಳಂತೆ ಭಾಸವಾಗತೊಡಗಿದವು. ಅವು ನಿಧಾನಕ್ಕೆ ಪಿಸುಮಾತು ಶುರುಮಾಡಿದವು.
“ಅದು ಯಾರ ಪಿಂಡ ಆಗಿತ್ತಂತೆ?”
“ಅದು ಸತ್ಯಪ್ಪ ಮಾಸ್ತರರ ತಿಥಿಯ ಪಿಂಡ ಅಂತೆ.”
“ಹೌದಾ? ಮಾಸ್ತರರು ತೀರಿಕೊಂಡರಾ? ಪಾಪ.. ಬಹಳ ಒಳ್ಳೆಯ ಮನುಷ್ಯ”
“ಹೌದು… ಅವರು ಆಗಾಗ ಮಕ್ಕಳನ್ನು ಮರದ ಕೆಳಗಳಡೆ ಕರೆದುಕೊಂಡು ಬಂದು ಪಾಠ ಮಾಡೋವಾಗ ನಾನೂ ಮರದಲ್ಲಿ ಕೂತು ಕೇಳಿದ್ದೆ. ಬಹಳ ಒಳ್ಳೆಯ ಮನುಷ್ಯ”
“ಸಾಯಲು ಏನಾಗಿತ್ತಂತೆ?”
“ಕ್ಲಾಸಿನಲ್ಲಿ ಪಾಠ ಮಾಡ್ತಾ ಇದ್ದಾಗಲೇ ಹಾರ್ಟ್ ಅಟ್ಯಾಕ್ ಆಯ್ತಂತೆ…”
“ಅಯ್ಯೋ ಪಾಪ… ಅವರು ಸಂತನಂತೆ ಬದುಕಿದ್ದರು. ಅವರಿಗೆ ಯಾವ ಅತೃಪ್ತ ಆಸೆ ಉಳಿದಿರಲಾರದು.. ಕಾಕಮಂಕ ಒಂಚೂರು ಕಾದಿದ್ದರೆ ಯಮನ ಆಜ್ಞೆ ಬಂದೇ ಬಿಟ್ಟಿರೋದು.. ಅವಸರ ಮಾಡಬಾರದಿತ್ತು.”
“ಅದು ಹಾಗಲ್ಲವಂತೆ… ಸತ್ಯಪ್ಪ ಮಾಸ್ತರರದು ದೊಡ್ಡ ಆಸೆ ಪೂರೈಸದೇ ಉಳಿದಿದೆಯಂತೆ. ಅದಕ್ಕೆ ಯಮರಾಜ ಬಹಳ ವಿಚಾರವಿನಿಮಯ ಮಾಡ್ತಾ ಇದ್ನಂತೆ.. ಅಷ್ಟರಲ್ಲಿ ಕಾಕಮಂಕ ಪಿಂಡ ತಿಂದು ಬಿಟ್ಟನಂತೆ.”
ಇಷ್ಟು ಮಾತನಾಡುತ್ತಿದ್ದಾಗಲೇ ಮುಗಿಲು ಯಮನ ವಾಹನ ಮಹಿಷನ ಪಾದದ ಕೆಂಧೂಳಿನಿಂದ ತುಂಬಿ, ಮಹಿಷನ ಕೊರಳಗಂಟೆಯ ದನಿಯನ್ನು ಮಾರ್ದನಿಸಿತು.
ಸಾಕ್ಷಾತ್ ಯಮದೇವನ ಪರಿವಾರವನ್ನು ಕಂಡ ಸಭೆ ಉಸಿರು ಬಿಗಿ ಹಿಡಿದು ಕುಳಿತಿತು. ಯಮರಾಜನ ಕಾರಣಿಕರು ಸಭೆಯ ಕಲಾಪದ ಚುಕ್ಕಾಣಿ ಹಿಡಿದರು. ಕಾಕಪಿಂಡದ ಹಿರಿಮೆಯ ಬಗ್ಗೆ ಕಾಕಪುರಾಣದಲ್ಲಿ, ಕಾಕಸ್ಮೃತಿಯಲ್ಲಿ ಏನೇನು ಹೇಳಿದೆ ಎಂದೆಲ್ಲ ತಿಳಿಸಿ, ಕೊನೆಗೆ ಕಾಕಮಂಕನನ್ನು ವಿಚಾರಣೆಗಾಗಿ ಸಭೆಯ ಮುಂದೆ ಬರಲು ಹೇಳಿದರು.
ಕಾಕಮಂಕ ಮುಂದೆ ಬಂದು ತಲೆತಗ್ಗಿಸಿ ನಿಂತೊಡನೆ ಅವನ ತಾಯಿ ಕಾಕಂಬೆಯೂ ಜೊತೆಗೆ ಬಂದು ಸೇರಿದಳು.
ಕಾರಣಿಕರು “ಏನಯ್ಯ, ಯಮನಿಯಮ ಮೀರಿ ಕಾಕಪಿಂಡ ಮುಟ್ಟಿದ್ದಕ್ಕೆ ಏನು ಶಿಕ್ಷೆ ಕಾದಿದೆ ಗೊತ್ತೋ?” ಎಂದು ಆಢ್ಯತೆಯಿಂದ ಕೇಳಿದರು.
ಕಾಕಮಂಕ ಹೆದರಿ ನಡುಗುತ್ತಾ ನಿಂತಿದ್ದರೆ, ಕಾಕಂಬೆ ಧೈರ್ಯ ತಂದುಕೊಂಡು ಸಭೆಯ ಮುಂದೆ ರೆಕ್ಕೆ ಬಿಚ್ಚಿ ವಿನಮ್ರತೆಯಿಂದ ಮಾತು ಆರಂಭಿಸಿದಳು:
“ಧರ್ಮರಾಜನೇ, ಕರಣಿಕರೇ, ಕ್ಷಮಿಸಿ. ನಿಮ್ಮ ದೂತರಾದ ನಮಗೆ ನಿಮ್ಮ ನಿಯಮವೇ ವೇದವಾಕ್ಯ. ಆದರೆ ಕಾಕಮಂಕ ಮಾಡಿದ್ದು ಕೇವಲ ಹಸಿವಿನ ಅಚಾತುರ್ಯವಲ್ಲ, ಅದರ ಹಿಂದೆ ಒಂದು ಭಾವನಾತ್ಮಕ ಸತ್ಯವಿದೆ. ಸತ್ಯಪ್ಪ ಮಾಸ್ತರರು ಬದುಕಿದ್ದಾಗ ಕೇವಲ ಮನುಷ್ಯರಿಗೆ ಮಾತ್ರವಲ್ಲ, ನಮ್ಮಂತ ಪಶು-ಪಕ್ಷಿಗಳಿಗೂ ಅಕ್ಕರೆ ತೋರಿಸಿದವರು. ಅವರು ಪಾಠ ಮಾಡುವಾಗ ಮರದ ಮೇಲೆ ಕುಳಿತು ಪಾಠ ಕೇಳುತ್ತಿದ್ದವರಲ್ಲಿ ಈ ಮಂಕನೂ ಒಬ್ಬ.”
ಸಭೆಯಲ್ಲಿದ್ದ ಕಾಗೆಗಳು ಕುತೂಹಲದಿಂದ ಕಿವಿಗೊಟ್ಟವು. ಯಮರಾಜನೂ ಗಂಭೀರವಾಗಿ ಕಾಕಂಬೆಯತ್ತ ನೋಡಿದ.
“ಮಾಸ್ತರರು ತೀರಿಕೊಂಡಾಗ ಕಾಕಮಂಕನಿಗೂ ದುಃಖವಾಗಿತ್ತು. ಅಂದು ಪಿಂಡದ ಮುಂದೆ ಆತ ನಿಂತಾಗ ಅವನಿಗೆ ಇದ್ದದ್ದು ಗುರುಗಳ ಆತ್ಮ ಅತೃಪ್ತಿಯಿಂದ ಅಲೆಯಬಾರದು ಎಂಬ ಕಾಳಜಿ ಮಾತ್ರ. ಅದಕ್ಕಾಗಿ ಆ ಪಿಂಡವನ್ನು ಸ್ವೀಕರಿಸಿದ್ದಾನೆ ಹೊರತು, ನಿಮ್ಮ ಆಜ್ಞೆಯನ್ನು ಉಲ್ಲಂಘಿಸುವ ಉದ್ದೇಶದಿಂದಲ್ಲ.” ಎಂದು ಕಳಕಳಿಯಿಂದ ವಿವರಿಸಿದಳು.
ಕಾರಣಿಕರು ಮಧ್ಯೆ ಪ್ರವೇಶಿಸಿ, “ಸಮಝಾಯಿಸಿ ಸಾಕುಮಾಡು! ಕಾಲನ ಕರೆ ಬರುವ ಮುನ್ನವೇ ಕರ್ಮದ ಫಲವನ್ನು ಉಣ್ಣುವುದು ಅಪರಾಧ. ಅಪರಾಧಕ್ಕೆ ಶಿಕ್ಷೆ ನಿಶ್ಚಿತ” ಎಂದು ಘರ್ಜಿಸಿದರು.
ಕಾರಣಿಕರ ಗದರಿಕೆಯನ್ನು ಸಂಪೂರ್ಣ ನಿರ್ಲಕ್ಷಿಸಿ, ಯಮನನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಕಾಕಂಬೆ ಮಾತು ಮುಂದುವರಿಸಿದಳು. ಅವಳ ಕಣ್ಣುಗಳಲ್ಲಿ ಈಗ ತಾಯಿಯ ಮಮತೆಯ ಜೊತೆಗೆ ನ್ಯಾಯಕ್ಕಾಗಿ ಹೋರಾಡುವ ವೀರಾಂಗನೆಯ ತೇಜಸ್ಸು ಕಾಣುತ್ತಿತ್ತು.
“ಯಮಧರ್ಮನೇ, ಸತ್ಯಪ್ಪ ಮಾಸ್ತರರಿಗೆ ಈ ನಾಡಿನ ಪ್ರತಿಯೊಬ್ಬ ಮಗುವಿಗೂ ಸರಳವಾಗಿ ತಿಳಿಯುವಂತೆ ತಾಯಿನುಡಿಯಲ್ಲಿ ಕಲಿಕೆ ಸಿಗಬೇಕು ಎನ್ನುವ ಆಸೆ ಇತ್ತು. ತಾಯಿನುಡಿಯಲ್ಲಿ ಕಲಿಸುವ ಶಾಲೆಗಳು ಮುಚ್ಚುತ್ತಿರುವಾಗ, ಇರುವ ಶಾಲೆಗಳಲ್ಲಿ ಕನ್ನಡಿಗರಿಗೇ ತಿಳಿಯಂದತಹ ಕನ್ನಡದಲ್ಲಿ ಪಾಠಗಳು ನಡೆಯುತ್ತಿರುವಾಗ ಅವರ ಆಸೆ ಕೈಗೂಡಿಲ್ಲ ಎನ್ನುವುದು ಎಲ್ಲರಿಗೂ ಹಗಲಿನಷ್ಟೇ ಸ್ಪಷ್ಟ…”

ಕಾಕಂಬೆ ಒಂದು ಕ್ಷಣ ನಿಂತು, ಮುಂದುವರಿಸಿದಳು:
“ಇಂದು ಮಾಸ್ತರರ ಎಷ್ಟೋ ಶಿಷ್ಯರು ಮಂತ್ರಿಗಳಾಗಿದ್ದಾರೆ, ಅಧಿಕಾರಿಗಳಾಗಿದ್ದಾರೆ. ಮಾಸ್ತರರ ಆಸೆಯನ್ನು ಈಡೇರಿಸಲು ಅವರಿಗೇನು ಅಡ್ಡಿ? ಅವರನ್ನು ಬಿಡಿ, ಉಳಿದ ಕನ್ನಡಿಗರಿಗೂ ತಮಗೇನು ಒಳಿತು ಎಂದು ಯೋಚಿಸಿ, ಅದಕ್ಕಾಗಿ ಹಕ್ಕೊತ್ತಾಯ ಮಾಡಲು ಏನು ಧಾಡಿ? ಮನುಷ್ಯರ ದಾರಿದ್ರ್ಯಕ್ಕೆ, ಕೇವಲ ಪ್ರೀತಿಯಿಂದ ತುತ್ತು ತಿಂದ ಈ ಪುಟ್ಟಕಂದಮ್ಮನನ್ನು ಶಿಕ್ಷಿಸುವುದು ಯಾವ ನ್ಯಾಯ?” ಎಂದು ಚೀರಿದಳು.
ಕಾರಣಿಕರು-ಕಾಗೆಗಳನ್ನು ಬಿಡಿ, ಸಾಕ್ಷಾತ್ ಯಮಧರ್ಮನೇ ನಿಬ್ಬೆರಗಾಗಿ, ನಿರುತ್ತರನಾಗಿ ನಿಂತು ಬಿಟ್ಟ…

ಸಧ್ಯ ಬೆಂಗಳೂರಿನಲ್ಲಿ ವಾಸವಿರುವ ಗುರುರಾಜ ಕೆ.ಕುಲಕರ್ಣಿ ಹುಟ್ಟಿದ್ದು ಹಳೆ ಧಾರವಾಡ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ. ಓದಿದ್ದು ಎಲೆಕ್ಟ್ರೋನಿಕ್ಸ್, ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯ ನಂತರ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕೆಲವು ಲಲಿತ ಪ್ರಬಂಧಗಳು ಹಾಗೂ ಸಣ್ಣ ಕಥೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. “ದನಿಪಯಣ” ಎಂಬ ಊರು-ನಾಡಿನ ಇತಿಹಾಸದ ಬಗೆಗಿನ ಪಾಡ್ಕಾಸ್ಟ್ ಮಾಡಿದ್ದಾರೆ.
