Advertisement
ಟು ಡು ಲಿಸ್ಟ್‌ ಹಾಗೂ ರದ್ದಿ ಹಾಳೆಯ ಕತೆಗಳು….: ಎಚ್‌. ಗೋಪಾಲಕೃಷ್ಣ ಸರಣಿ

ಟು ಡು ಲಿಸ್ಟ್‌ ಹಾಗೂ ರದ್ದಿ ಹಾಳೆಯ ಕತೆಗಳು….: ಎಚ್‌. ಗೋಪಾಲಕೃಷ್ಣ ಸರಣಿ

ನನ್ನ ಅನುಭವಗಳನ್ನು ಕೊಂಚ, ಕೊಂಚ ಏನೂ ತುಂಬಾ ಹೆಚ್ಚಾಗಿಯೇ ಉತ್ಪ್ರೇಕ್ಷಿಸಿ ಬುರುಡೆ ಅಂದರೆ ಸಖತ್ ಬುರುಡೆ ಬಿಡುತ್ತಿದ್ದೆ. ಈ ಬುರುಡೆಯಲ್ಲಿ ಬಹಳ ಮುಖ್ಯವಾಗಿ ಬ್ಯಾಂಕ್ ಡೈರೆಕ್ಟರ್ ಜತೆ ಇಂಟರ್ವ್ಯೂ ಮಾಡಿಸಿಕೊಂಡು ಸಾಲವನ್ನು ಮೂವತ್ತು ಸಾವಿರದಿಂದ ಮೂವತ್ತ ಮೂರು ಸಾವಿರ ಹೆಚ್ಚಿಸಿದ್ದು, ಬೇವಿನ ಮರದ ಹಳೇ ಬಾಗಿಲು ಕೊಂಡು ಟೋಪಿ ಬಿದ್ದದ್ದು, ಕುಬೇರಪ್ಪ ಹಳದಿ ಇಂಗಿನ ಬ್ಯಾಗ್‌ನಲ್ಲಿ ಕೇಜಿ ಅಷ್ಟು ಚಿನ್ನ ತುಂಬಿಕೊಂಡು ಯಶವಂತ ಪುರಕ್ಕೆ ನಡೆದುಕೊಂಡು ಹೋಗಿ ಚಿನ್ನ ಮಾರಿದ್ದೂ, ನನ್ನ ಹತ್ತಿರ ಊಹೂಂ ನನ್ನ ಹತ್ತಿರ ಅಲ್ಲ, ನನ್ನಾಕೆ ಹತ್ತಿರ ಮುಕ್ಕಾಲು ಗ್ರಾಮ್‌ನ ತಾಳಿ ಇರೋದು…. ಇವೆಲ್ಲಾ ಸೇರಿರುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ಮೂರನೆಯ ಕಂತು

ಹಿಂದಿನ ಸಂಚಿಕೆಗೆ ಇಂತಹ ಮುಕ್ತಾಯ ಇತ್ತು..
ನನ್ನಾಕೆ ಹತ್ರ ಒಂದು ಮುಕ್ಕಾಲು ಗ್ರಾಮ್‌ನ ತಾಳಿ ಒಂದಿತ್ತು; ಮತ್ತು ಈಗಲೂ ಇದೆ. ಕೈಗೆ ಬಂದದ್ದು ಬಾಯಿಗೆ ಅಂತ ಚಿನ್ನದ ಮೇಲೆ ಆಸೆ ಪಟ್ಟು ಅದರ ಮೇಲೆ ಇನ್ವೆಸ್ಟ್ ಮಾಡಿರಲಿಲ್ಲ. ಅಮ್ಮ ಸೊಸೆಗೆ ಕೊಟ್ಟಿದ್ದ ಒಂದು ಸರ. ಮಾರಿದರೆ ಆಗ ಒಂದೆರೆಡು ಸಾವಿರ ಅಥವಾ ಕೆಲವು ನೂರು ಸಿಗ್ತಾ ಇತ್ತೇನೋ ಅಷ್ಟೇ…! ದುಡ್ಡಿನ ಯೋಚನೆ ಹತ್ತಿದರೆ ಆಕಾಶ ತಲೆಮೇಲೆ ಬಿದ್ದಹಾಗೆ ತಾನೇ? ಈ ಲಾಜಿಕ್ ಮುಂದೆ ಸಂಸಾರ ಬೆಳೆಯುತ್ತಾ ಬೆಳೆಯುತ್ತಾ ಬದಲಾಯಿತು ಮತ್ತು ನಿಧಾನಕ್ಕೆ ಚಿನ್ನ ಸೇರಿಸಿದ ಕತೆ ಮುಂದೆ ಯಾವಾಗಲಾದರೂ ಹೇಳುತ್ತೇನೆ! ಇದು ಅಂದಿನ ಸುಮಾರು ಕೆಳ ಮಧ್ಯಮ ವರ್ಗದವರ (ಅಂದರೆ lower middle class) ಕತೆ ಮತ್ತು ವ್ಯಥೆ.

ಚಾವಣಿ ಹಾಕಿದ ಮೇಲೆ ನಿಜವಾದ ಕಷ್ಟ ಗೊತ್ತಾಗೋದು ಮನೆ ಕಟ್ಟಬೇಕಾದರೆ ಅಂತ ಕೇಳಿದ್ದೆ. ಹಣ ಎಷ್ಟಿದ್ದರೂ ಸಾಲದು ಅಂತಲೂ ಹೇಳೋದು ಕೇಳಿದ್ದೆ. ಕೈಸಾಲ ಅನಿವಾರ್ಯ ಅಂತ ಹೆದರಿಸಿ ಬೇರೆ ಇದ್ದರು.

ಕೂತು ಮುಂದೆ ಆಗಬೇಕಾದ ಕೆಲಸಗಳ ಒಂದು ಪಟ್ಟಿ ತಯಾರಿಸಿದೆ, ಸತ್ಯಣ್ಣನ ಹೆಲ್ಪ್ ತಗೊಂಡು. ಬ್ಯಾಂಕ್‌ನಿಂದಾ ಇನ್ನೂ ಹನ್ನೊಂದು ಸಾವಿರ ಮೂರನೇ ಕಂತು ಬರಬೇಕಿತ್ತು. ಖರ್ಚು ಅದರ ಮೂರು ನಾಲ್ಕು ಪಟ್ಟು! ಕೈಸಾಲ ಅದೂ ಮೂರು ನಾಲ್ಕು ಪರ್ಸೆಂಟ್ ತಿಂಗಳಿಗೆ ಕೊಟ್ಟು ಮಾಡಲೇ ಬಾರದು ಅಂತ ನಿಶ್ಚಯಿಸಿ ಆಗಿತ್ತು. ಆಗಿನ ಕೈ ಸಾಲದ ಬಡ್ಡಿ ರೇಟು ತಿಂಗಳಿಗೆ ನೂರಕ್ಕೆ ಐದು ರುಪಾಯಿವರೆಗೆ ಇತ್ತು. ದುಡ್ಡು ಬೇಕು ಅಂದರೆ ಹುಡುಕಿಕೊಂಡು ಬಂದು ಕೊಡುವ ಜನ ಇದ್ದರು ಮತ್ತು ಅವರು ನನಗೆ ಗೊತ್ತಿತ್ತು ಸಹ. ಹಿಂದೆ ಫೈನಾನ್ಸ್ ಅಂಗಡಿ ಹುಡುಕಿ ಹೋಗಿದ್ದು ಹೇಳಿದ್ದೆ ತಾನೇ? ಒಂದು ರೌಂಡ್ ಹಾಕಿದರೆ ಒಂದು ಐವತ್ತು ಜನ ಸಾಲ ಕೊಡುವ ಜನ ಸಿಕ್ತಾ ಇದ್ದರು!

ಬೇರೆ ದಾರಿ ಹುಡುಕ ಬೇಕಿತ್ತು. ಬಡ್ಡಿ ಇಲ್ಲದೇ ಸುಮ್ಮನೆ ಫ್ರೆಂಡ್‌ಶಿಪ್ ಸಾಲ ಯಾರು ಕೊಡಬಹುದು, ನನ್ನ ಹಮ್ಮಿಗೆ (ಇದಕ್ಕೆ ನಾನು ಕೊಬ್ಬು, ತಿಮಿರು ಅಂತ ಅರ್ಥ ಕೊಟ್ಟಿದ್ದೆ) ಧಕ್ಕೆ ಬಾರದ ಹಾಗೆ ಯಾರನ್ನು ಕೇಳಬಹುದು ಅಂತ ಮನಸಿನಲ್ಲೇ ಒಂದು ಅಂದಾಜು ಮಾಡಿದೆ. ಕೆಲವರು ಮೊದಲನೇ ಸ್ಕ್ರೀನಿಂಗ್‌ನಲ್ಲೇ ಪಟ್ಟಿಯಿಂದ ಹೋದರು. ಐದಾರು ಪರಿಷ್ಕರಣೆಯ ನಂತರ ಆರೇಳು ಸ್ನೇಹಿತರ ಹೆಸರು ಉಳಿದವು. ಅದರಲ್ಲಿ ಕಾನ್ಫಿಡೆನ್ಸ್ ಆಗಿ ಯಾರನ್ನ ಕೇಳಬಹುದು ಅಂತ ಇನ್ನೊಂದು ಪಟ್ಟಿ ತಯಾರಿಸಿ ಅವರನ್ನು ಕೇಳಬೇಕಿತ್ತು. ಆದರೆ ಹಾಗೆ ಕೇಳುವ ಪ್ರಸಂಗವೇ ಬರಲಿಲ್ಲ. ಇದು ಹೇಗೆ ಸಾಧ್ಯವಾಯಿತು ಮತ್ತು ಯಾವ ಮ್ಯಾಜಿಕ್ ಇಲ್ಲಿ ಕೆಲಸ ಮಾಡಿತು….

ಇದರ ವಿವರ ಮುಂದೆ ಹೇಳ್ತೀನಿ. ಈ ನೆನಪುಗಳು ಅದೇನೋ ನಿನ್ನೆ ಮೊನ್ನೆ ನಡೆದ ಹಾಗೆ ಮನಸಿನಲ್ಲಿ ಕಲ್ಲಿನ ಮೇಲೆ ಕೆತ್ತಿದ ಅಶೋಕನ ಕಾಲದ ಶಾಸನಗಳಂತೆ ಉಳಿದುಹೋಗಿದೆ. ಅದನ್ನು ಹೆಕ್ಕಿ ಹೆಕ್ಕಿ ಒಂದು ಕಡೆ ಪೇರಿಸಿ ಯಾವುದು ಮೊದಲು ಯಾವುದು ನಂತರ ಅಂತ ಜೋಡಿಸಬೇಕು….

ಈಗ ಮುಂದಕ್ಕೆ….

ಮುಂದೆ ಆಗಬೇಕಾದ ಕೆಲಸಗಳ ಪಟ್ಟಿ ಒಂದು ತಯಾರು ಆಯ್ತು, ಸತ್ಯಣ್ಣ ಹೆಲ್ಪ್ ಮಾಡಿದ ಇದಕ್ಕೆ. ಪಟ್ಟಿ ಪ್ರಕಾರ ಪ್ರಮುಖ ಕೆಲಸಗಳು ಅಂದರೆ ಕಿಟಕಿ, ಬಾಗಿಲು ಕೂಡಿಸುವುದು. ಮನೆಯ ಮುಂಬಾಗಿಲ ವ್ಯವಸ್ಥೆ, ಕಿಟಕಿ ಸಾಲದಿದ್ದರೆ ಮತ್ತೆ ಒಂದೋ ಎರಡೋ ಕಿಟಕಿಗಳು: ನೆಲಕ್ಕೆ ಫ್ಲೋರಿಂಗ್, ಇದಕ್ಕೆ ಸಾಧಾರಣ ಮೊಸಾಯಿಕ್ ತಂದರೆ ಸಾಕು, ಸತ್ಯಣ್ಣ ಒಂದು ಮೊಸಾಯಿಕ್ ಕಾರ್ಖಾನೆ ಸಂಗಡ ಸಂಪರ್ಕ ಇರಿಸಿಕೊಂಡಿದ್ದ. ಅಲ್ಲಿಂದ ಮಾರ್ಕೆಟ್ ರೇಟ್‌ಗಿಂತಲೂ ಕಡಿಮೆಗೆ ಮೊಸಾಯಿಕ್ ಸಪ್ಲೈ ಆಗುತ್ತಿತ್ತು. ನಮ್ಮ ಬಡಾವಣೆಯಲ್ಲಿಯೇ ಸುಮಾರು ಮನೆಗಳಿಗೆ ಇದೇ ಮೊಸಾಯಿಕ್ ಉಪಯೋಗಿಸಿದ್ದರು. ಈ ಮೊಸಾಯಿಕ್ ಅಂಗಡಿ ಸತ್ಯಣ್ಣನದೆ ಅಂಗಡಿ ಎಂದು ಜನ ಹೇಳುತ್ತಿದ್ದರು. ಫ್ಲೊರಿಂಗ್ ನಂತರ ಎಲೆಕ್ಟ್ರಿಕ್ ವೈರ್, ಪ್ಲಗ್ ಅದು ಇದು ತರೋದು. ಇದು ಫುಲ್ ಕಾಂಟ್ರಾಕ್ಟ್ ಅಂದರೆ ಸಖತ್ ಬೋಳಿಸ್ಕೋಬೇಕು ಅದರಿಂದ ನಾನೇ ಅದಕ್ಕೆ ಹೋಗೋದು…. ಹೀಗೆ ಒಂದು ಜೋಡಿ ಹಾಳೆಗಳಲ್ಲಿ (ಸುಮಾರು ಈಗಿನ A 4 ಸೈಜ್ ನ) ಹತ್ತು ಜೋಡಿ ಪುಟಗಳ ಥಿಂಗ್ಸ್ ಟು ಬಿ ಡನ್ ಪಟ್ಟಿ ತಯಾರು ಆಯಿತು. ಆಗ ಫಾರ್ಟಿ ಪ್ಲಸ್ ಯೀಯರ್ಸ್ ಹಿಂದೆ A 4ಸೈಜ್ ಇರಲಿಲ್ಲ! ಅದೇನಿದ್ದರೂ ನಮ್ಮ ದೇಶಕ್ಕೆ ಕಂಪ್ಯೂಟರ್ ಲಗ್ಗೆ ಇಟ್ಟು ಎಂ ಎನ್ ಸಿ ವ್ಯವಹಾರ ಶುರು ಆಯ್ತಲ್ಲಾ 1995/2000ದ ನಡುವೆ ಆಗ ಈ A4, A5, A6 ಸೈಜಿನ ಪೇಪರ್‌ಗಳ ಹೆಸರು ಕೇಳಿದ್ದು! ಆಗ ಫಾರ್ಟಿ ಪ್ಲಸ್ ಯೀಯರ್ಸ್ ಹಿಂದೆ ರಫ್ ಪೇಪರು, ಬಫ್ ಪೇಪರು, ರೂಲ್ಡ್ ಪೇಪರು, ಅನ್‌ರೂಲ್ಡ್‌ ಪೇಪರು… ಹೀಗೆ. ಅದರಲ್ಲೂ ವೈಟ್ ಪೇಪರ್ ಅಂದರೆ ರೂಲು ಹಾಕಿರದ ಪೇಪರು. ನಮ್ಮ ಮೈಸೂರು ಸರ್ಕಾರದ ಸರ್ಕಾರೀ ಪೇಪರ್ ಮಿಲ್ಸ್ ಅಂತ ಭದ್ರಾವತಿಯಲ್ಲಿ ಇತ್ತು. ಅಲ್ಲಿಂದ ಇಡೀ ರಾಜ್ಯಕ್ಕೂ ಮತ್ತು ಹೊರಗೂ ಪೇಪರ್ ಸಪ್ಲೈ ಆಗುತ್ತಿತ್ತು.

ಬೈಸನ್ ಬ್ರಾಂಡ್ ಅಥವಾ ಕಾಡುಕೋಣ ಬ್ರಾಂಡ್ ಅಂತ ಅದರ ಹೆಸರು! ಹಾಳೆ ಬೆಳಕಿಗೆ ಹಿಡಿದರೆ ಅದರಲ್ಲಿ ಒಂದು ಕೋಣನ ಮುಖ ಕಾಣುತ್ತಿತ್ತು. 24 ಶೀಟ್‌ಗೆ ಒಂದು ದಸ್ತು ಅಂತ ಹೆಸರು, 24 ಜೋಡಿ ಶೀಟು. ಅದನ್ನ ಮಧ್ಯಕ್ಕೆ ಕತ್ತರಿಸಿದರೆ ನಲವತ್ತೆಂಟು ಆಗ್ತಾ ಇತ್ತಾ? ಅದನ್ನು ಕೆಲವರು ರಿಮ್‌ ಅನ್ನುತ್ತಿದ್ದರು. ಈಗ ಐನೂರು ಸಿಂಗಲ್ ಹಾಳೆಗಳ ಪ್ಯಾಕೆಟ್‌ಗೆ ರಿಮ್ ಎನ್ನುತ್ತಾರೆ.‌ ಮುಂದೆ ಹೀಗೆ A4, A5, A6 ಸೈಜಿನ ಪೇಪರ್‌ಗಳನ್ನು ನಾವೇ ನಮ್ಮ ಕಿವಿಯಾರೆ ಕೇಳುತ್ತೇವೆ ಎನ್ನುವ ಕಲ್ಪನೆ ಸಹ ನಮಗೆ ಇರಲಿಲ್ಲ. ನ್ಯೂಸ್ ಪೇಪರ್ ಪ್ರೆಸ್‌ಗಳಿಗೆ ಬಫ್ ಪೇಪರು ಅಂತ ಖಾಕಿ ಬಣ್ಣದ ಪೇಪರ್ ಬರೋದು. ಅದು ಅಲ್ಲಿ ಯಾತಕ್ಕೆ ಉಪಯೋಗಿಸುತ್ತಿದ್ದರೋ ತಿಳಿಯದು. ಅದನ್ನ ಅಂದರೆ ಈ ಬಫ್ ಪೇಪರುಗಳನ್ನು ಅಲ್ಲಿ ಕೆಲಸ ಮಾಡುವವರು ತಂದು ಅಕ್ಕಪಕ್ಕದ ಹುಡುಗರಿಗೆ ತಗೊಳ್ರೋ ಅಂತ ಕೊಡ್ತಾ ಇದ್ದರು. ಮನೆಯಲ್ಲಿ ಅಪ್ಪನೋ ಅಮ್ಮನೋ ಅಥವಾ ಅಕ್ಕನೊ ಅದನ್ನು ನೋಟ್ ಪುಸ್ತಕದ ಆಕಾರಕ್ಕೆ ಕತ್ತರಿಸಿ ಹೊಲಿದು ಕೊಡುತ್ತಿದ್ದರು. ಹೀಗೆ ನಾವು ಬಫ್ ಪೇಪರು ನೋಡಿದ್ದು, ಉಪ್ಯೋಗಿಸಿದ್ದು. ಬಹುಶಃ ನಮ್ಮ ಪೀಳಿಗೆಯ ಸುಮಾರು ಜನ ಈ ಪೇಪರು ಉಪಯೋಗಿಸಿಯೇ ಬೆಳೆದರು. ಬಫ್ ಪೇಪರ್‌ಗೆ ಕತ್ತೆ ಕಾಗದ ಎನ್ನುವ ಮತ್ತೊಂದು ಹೆಸರೂ ಇತ್ತು. ಈಚೆಗೆ ಅಂತಹ ಪೇಪರ್ ನನ್ನ ಕಣ್ಣಿಗೆ ಬಿದ್ದಿಲ್ಲ. ಆದರೆ ಖಾಕಿ ಕಲರಿನ ಬಣ್ಣದ ಕವರ್‌ಗಳಲ್ಲಿ ಹೋಟೆಲ್‌ನವರೂ ತರಕಾರಿ ಅಂಗಡಿಯವರು ಸಹ ಪದಾರ್ಥ ತುಂಬಿ ಕೊಡುವುದನ್ನು ನೋಡುತ್ತಾ ಇದ್ದೇನೆ. ಈಚೆಗೆ ಈ ಖಾಕಿ ಬಣ್ಣದ ಕವರುಗಳು. ಕೊಂಚ ಹಳದಿ ಬಣ್ಣಕ್ಕೆ ತಿರುಗಿವೆ. ಐದಾರು ವರ್ಷಗಳ ಹಿಂದೆ ಒಂದು ಸುದ್ದಿ ಓದಿದ್ದೆ. ಕಾರ್ಖಾನೆಯ ನಿವೃತ್ತ ಕಾರ್ಮಿಕರೊಬ್ಬರು ಪೇಪರು ವಿಂಗಡಿಸುವ ಸ್ಥಳದಲ್ಲಿ ಎಸೆದು ಹೋಗುವ ಕವರಿಂಗ್ ಪೇಪರ್ ಸಂಗ್ರಹಿಸಿ ಅದನ್ನು ನೋಟ್ ಪುಸ್ತಕ ಮಾಡಿ ಬಡ ವಿದ್ಯಾರ್ಥಿಗಳಿಗೆ ಹಂಚುತ್ತಾರೆ ಎನ್ನುವುದು ಈ ಸುದ್ದಿಯ ಸಾರಾಂಶ. ಸುದ್ದಿ ಓದಿ ಹಲವು ದಿವಸ ಉಬ್ಬಿದ್ದೆ, ಕಾರಣ ನನ್ನ ಹಾಗಿನ ಕಾರ್ಮಿಕರೊಬ್ಬರು ಇಂತಹ ವಿಶಾಲ ಹೃದಯ ಹೊಂದಿದ್ದಾರೆ ಎಂದು! ಇಂತಹ ಬಡವರಿಗೆ ತುಡಿಯುವ ವಿಶಾಲ ಹೃದಯ ಒಬ್ಬ ಕಾರ್ಮಿಕನಲ್ಲಿ ಇದೆ ಅಂದರೆ ಅದು ನನಗೆ ಕಾರ್ಮಿಕನಿಗೆ, ಪ್ರೋಲೇಟೆರಿಯನ್‌ಗೆ, ಕಾರ್ಲ್ ಮಾರ್ಕ್ಸ್‌ನ ಶಿಷ್ಯನಿಗೆ ಕೋಡು ಮೂಡಿಸುವ ಸಂಗತಿ ತಾನೇ?
ಇದು ಪ್ಲಾಸ್ಟಿಕ್ ಕವರ್, ಹಾಳೆ ಬ್ಯಾನ್ ಆದಮೇಲಿನ ಕತೆ!

ದೇಶಕ್ಕೆ ಕಂಪ್ಯೂಟರ್ ಬಂತಲ್ಲಾ ಆಗ ಅದಕ್ಕೆ ಅಂತಲೇ ಸ್ಪೆಶಲ್ ಪೇಪರ್ ಬಂತು. ಮೈಲುಗಟ್ಟಲೆ ಮಡಿಸಿ ಮಡಿಸಿ ಇರುತ್ತಿದ್ದ ಪೇಪರ್ ಅದು. ಇದು ಒಂದು ಕಡೆ ಪ್ರಿಂಟ್ ಆದಮೇಲೆ ಅದರ ಪ್ರಯೋಜನ ಕಂಪ್ಯೂಟರಿಗೆ ಆಗುತ್ತಿರಲಿಲ್ಲ, ಅದರಿಂದ ಅದು ಗುಜರಿಗೆ ಬರ್ತಿತ್ತು. ಗುಜರಿಯಲ್ಲಿ ಐವತ್ತು ನೂರು ಶೀಟು ಸೇರಿಸಿ ಒಂದು ಸುರುಳಿ ಸುತ್ತಿ ಇಡುತ್ತಿದ್ದರು. ಒಂದು ಮಗ್ಗಲು ಖಾಲಿ ಖಾಲಿ ಇರುತ್ತಿತ್ತು. ಅದರಿಂದ ಎಂಜಿನಿಯರಿಂಗ್ ಮತ್ತಿತರ ವಿದ್ಯಾರ್ಥಿಗಳಿಗೆ ರಫ್ ವರ್ಕ್‌ಗೆ ಅಂತಲೇ ಇವುಗಳು ಮಾರಾಟ ಆಗುತ್ತಿತ್ತು. ಬೆಲೆ ಸಾಮಾನ್ಯ ಕಾಗದಕ್ಕೆ ಹೋಲಿಸಿದರೆ ತುಂಬಾ ಕಮ್ಮಿ, ಅರ್ಧಕ್ಕಿಂತಲೂ ಕಡಿಮೆ! ಅವೆನ್ಯೂ ರಸ್ತೆಯ ಎರಡೂ ಬದಿಯ ಎಲ್ಲಾ ಪುಸ್ತಕದ ಅಂಗಡಿಗಳಲ್ಲಿ ಈ ಹಾಳೆಗಳ ಮಾರಾಟ ಇತ್ತು. ನಾನು ಕಾರ್ಖಾನೆ ಸೇರಿದ ಮೇಲೆ ನನ್ನ ಸಾಹಿತ್ಯ ಸೇವೆ ಮತ್ತು ಸರಸ್ವತಿ ಭಜನೆ ಹಾಗೂ ಸುಮಾರು ಬರಹದ ಕಾಯಕ ಈ ಕಂಪ್ಯೂಟರ್ ಹಾಳೆಯಲ್ಲಿ ಆಗುತ್ತಿತ್ತು. ವಿಶೇಷ ಅಂದರೆ ಪತ್ರಿಕೆಗೆ ಹೋಗಬೇಕಿದ್ದ ಲೇಖನಗಳನ್ನು ಸಹ ಕಂಪ್ಯೂಟರ್ ಹಾಳೆಯಿಂದ ಮಾಡಿದ ಪೋಸ್ಟಲ್ ಕವರ್‌ನಲ್ಲಿ ಇಟ್ಟು ಅದಕ್ಕೆ ಸ್ಟಾಂಪ್ ಅಂಟಿಸಿ ಕಳಿಸುತ್ತಿದ್ದೆ!

ಇದು ಕಾರ್ಖಾನೆಯಲ್ಲಿ ತಯಾರು ಮಾಡುತ್ತಿದ್ದ ಮತ್ತು ಅಂಚೆ ಕಚೇರಿಗೆ ತೆರಬೇಕಿದ್ದ ಕೋಟ್ಯಾಂತರ ರುಪಾಯಿ ಉಳಿಸಿಬಿಟ್ಟಿದ್ದೆ! ಇದು ಗುಟ್ಟು, ನಿಮ್ಮಲ್ಲೇ ಇರಲಿ, ಕಾರ್ಖಾನೆ ಅವರಿಗೆ ತಿಳಿದು ನನ್ನ ಮೇಲೆ ಈಗ, ರಿಟೈರ್ ಆಗಿ ಎಷ್ಟೋ ಶತಮಾನಗಳ ನಂತರ ಕ್ರಮ ತೆಗೆದುಕೊಂಡುಬಿಟ್ಟಾರು ಎಂದು ಈ ಮುನ್ನೆಚ್ಚರಿಕೆ…! ಅಂತಹ ಕವರ್ ನೋಡಿದ ಕೂಡಲೇ ಒಳಗಡೆ ಏನಿದೆ ಎಂದೂ ಸಹ ನೋಡದೆ ಪತ್ರಿಕೆಯವರು ಅದನ್ನು ಕಸದ ಬುಟ್ಟಿಗೆ ಹಾಕುತ್ತಿದ್ದರಂತೆ! ಈ ಕಾರಣದಿಂದ ನನ್ನ ಹಲವು ಸಹಸ್ರ ಉತ್ಕೃಷ್ಟ ಲೇಖನಗಳು, ಚಿಂತನ ಮಂಥನಗಳು ಬೆಳಕು ಕಂಡಿಲ್ಲ ಮತ್ತು ತಾಯಿ ಭುವನೇಶ್ವರಿ ಈ ಕಾರಣದಿಂದ ಸೊರಗಿದ್ದಾಳೆ ಎನ್ನುವುದು ನನ್ನ ಅಚಲ ದೃಢ ನಿಲುವು ಮತ್ತು ನಂಬಿಕೆ! ನಾನು ಬರವಣಿಗೆ ಶುರು ಮಾಡಿ ಅದೆಷ್ಟೋ ಶತಮಾನದ ನಂತರ ಪೇಪರ್ ಆಫೀಸಿನ ಒಬ್ಬರು ತುಂಬಾ ಅಚಾನಕ್ಕಾಗಿ ಸಿಕ್ಕಿದರು ಮತ್ತು ಪರಿಚಯ ಮಾಡಿಕೊಂಡರು. ಅವರು ನನ್ನ ಗುರುತು ಹೇಗೆ ಹಿಡಿದರು ಗೊತ್ತಾ? ಓ ನೀವು ಕಂಪ್ಯೂಟರ್ ಹಾಳೆಯಲ್ಲಿ ಬರೀತಾ ಇದ್ದಿರಿ ಮೊದಮೊದಲು, ನಂತರ ಜೆಲ್ಲಿ ಪೇಪರ್‌ನಲ್ಲಿ ಬರೀತಾ ಇದ್ದಿರಿ ಅಲ್ವಾ?

ಪೇಪರ್ ತೂಕ ಹೆಚ್ಚಾಗುತ್ತದೆ, ಪೋಸ್ಟ್ ಆಫೀಸಿನವರಿಗೆ ಸ್ಟಾಂಪ್ ಲೆಕ್ಕದಲ್ಲಿ ಹೆಚ್ಚು ದುಡ್ಡು ಕಕ್ಕಬೇಕಾಗುತ್ತೆ ಅಂತಾ ಜೆಲ್ಲಿ ಪೇಪರ್‌ನಲ್ಲಿ ಬರೆದು ಕಳಿಸುತ್ತಾ ಇದ್ದೆ! ಜೆಲ್ಲಿ ಪೇಪರು ತುಂಬಾ ಹಗುರ ಮತ್ತು ಫ್ಯಾಕ್ಟರಿಯಲ್ಲಿ ಪ್ಯಾಕೇಜ್ ಕೆಲಸಕ್ಕೆ ಉಪಯೋಗ ಆಗುತ್ತಿತ್ತು. ಒಂದು ಅಂದಾಜು ನೂರು ಲೇಖನ ಹೋದರೆ ಅಬ್ಬಬ್ಬಾ ಅಂದರೆ ಎರಡು ಲೇಖನ ಆದರೂ ಬೆಳಕು ಕಾಣುತ್ತಿತ್ತು…! ಇದು ಹಳೇ ಕತೆ, ತುರುಬು ನೆನೆಸಿಕೊಂಡ ಹಾಗೆ, ಬಿಟ್ಟಾಕಿ..

ಈಚೆಗೆ ನಾನು ಅವೆನ್ಯೂ ರಸ್ತೆಗೆ ಹೋಗಿಲ್ಲ, ಆದರೂ ಆ ಪೇಪರು ಇನ್ನೂ ಮನಸಿನಲ್ಲಿ ಕೂತು ಬಿಟ್ಟಿದೆ! ನನ್ನ ಮೊಮ್ಮಕ್ಕಳು ಇನ್ನೂ ಚಿಕ್ಕೋವು, ಅದರಿಂದ ಅವರು ಈ ಪೇಪರು ಉಪಯೋಗಿಸುತ್ತಿಲ್ಲ ಮತ್ತು ನಾನೋ ಪೇಪರ್‌ನಲ್ಲಿ ಬರೆಯೋದು ಬಿಟ್ಟು ಅದೆಷ್ಟೋ ಶತಮಾನದ ಆಗಿದೆ! ನನ್ನ ಬರವಣಿಗೆ ಏನಿದ್ದರೂ ಎಡಗೈಯಲ್ಲಿ ಮೊಬೈಲ್ ಹಿಡಿದು ಬಲಗೈ ಹೆಬ್ಬೆರಳನ್ನು ಮೊಬೈಲ್ ತಳಕ್ಕೆ ಸಪೋರ್ಟು ಕೊಟ್ಟುಕೊಂಡು ಬಲಗೈ ತರ್ಜುನಿ ಬೆರಳಿನಲ್ಲಿ ಒಂದೊಂದೇ ಅಕ್ಷರ ಕುಟ್ಟಿ ಕುಟ್ಟಿ ಸಾವಿರ ಎರಡು ಸಾವಿರ ಪದ ಹುಟ್ಟು ಹಾಕಿ ನಂತರ ಗೆಳೆಯರ, ಓದುಗ ಬಾಂಧವರ ತಲೆ ತಿನ್ನುವುದು!

ಈಗ ಮತ್ತೆ ಟ್ರ್ಯಾಕ್‌ಗೆ ಬರಲೇ. ಮುಂದೆ ಆಗಬೇಕಾದ ಕೆಲಸಗಳ ಪಟ್ಟಿ ಮಾಡಿದೆವು ಅಂತ ಹೇಳುತ್ತಿದ್ದೆ. ಎಲೆಕ್ಟ್ರಿಕ್ ಸಾಮಾನು ಅಂದರೆ ಸ್ವಿಚ್ಚು, ವೈರ್, ಸ್ವಿಚ್ ಬೋರ್ಡು… ಹೀಗೆ ನೂರು ತರಹ. ಇದನ್ನು ನಮ್ಮ ಪೀಸ್ ವರ್ಕ್ ಎಲೆಕ್ಟ್ರಿಷಿಯನ್ ಜತೆ ಹೋಗೋದು ಅಂತ ನೋಟ್ ಮಾಡಿದೆ. ಮುಂದೆ ಮನೆಗೆ ಶೋ ಕೇಸು, ಶೂ ಕೇಸು ಬೇಕು ತಾನೇ? ಅದಕ್ಕೆ ಗಾಜಿನ ಬಾಗಿಲು ಸಹ ಬೇಕು ತಾನೇ? ಇದನ್ನ ಆದಷ್ಟು ಕಡಿಮೆ ಖರ್ಚಿನಲ್ಲಿ ಮಾಡುವುದು ಇಲ್ಲ ಅಂದರೆ ಪೋಸ್ಟ್ ಪೋಣಿಸುವುದು ಎನ್ನುವ ತೀರ್ಮಾನ ತೆಗೆದುಕೊಂಡೆ. ಇಲ್ಲಿ ಮತ್ತೆ ಕೊಂಚ ಡೀವಿಯೇಷನ್. ಅಂದಹಾಗೆ ಇಂಗ್ಲಿಷ್‌ನಲ್ಲಿ post pone ಎನ್ನುವ ಪದ ಇಲ್ಲವಂತೆ. ನಾವು pre pone ಪದಕ್ಕೆ ವಿರುದ್ಧ ಅರ್ಥ ಬರುತ್ತೆ ಎಂದು ವ್ಯಾಪಕವಾಗಿ ಈ ಪದವನ್ನು ಚಚ್ಚಿ ಗುದ್ದಿ ಫುಟ್ ಬಾಲ್ ತರಹ ಆಡಿ ಬಿಟ್ಟೆವು! ನನಗಂತೂ ಈ post pone ಪದ ತುಂಬಾ ಹತ್ತಿರದ್ದು, ಹೃದಯಕ್ಕೆ. ಎಲ್ಲಾ ಕೆಲಸ ಮುಂದೂಡಲೂ ಈ ಪದ ತುಂಬಾ ಸಲ ನೆರವಾಗಿದೆ. ಈ ಪದ ಇಂಗ್ಲಿಷ್‌ನಲ್ಲಿ ಇಲ್ಲ ಅಂತ ನನಗೆ ಮೊದಲು ತಿಳಿದಾಗ ಯಾರೋ ಹತ್ತಿರದವರು ಬಾರದ ದೂರದ ಲೋಕಕ್ಕೆ ಹೋದ, ಕಾಲವಾದ ದುಃಖ ಅನುಭವಿಸಿದ್ದೆ!

ಈಚೆಗೆ ನಾವು ಇಂಡಿಯನ್ಸ್ ಈ ಪದವನ್ನು ವ್ಯಾಪಕವಾಗಿ ಉಪಯೋಗಿಸಿ ಉಪಯೋಗಿಸಿ ಉಪಯೋಗಿಸಿ ಇಂಗ್ಲಿಷ್ ನವರ ತಲೆ ಕೆಡಿಸಿದ್ದೇವೆ. oxford ನಿಘಂಟಿನಲ್ಲಿ ಈ ಪದವನ್ನು Indian English ಎಂದು ಗುರುತಿಸಿದ್ದಾರೆ ಎಂದು ನನ್ನ ಇಂಗ್ಲೀಷ್ ಗೆಳೆಯ ವಿವರಿಸಿದ!

ಈಗ ಮತ್ತೆ ಟ್ರ್ಯಾಕ್‌ಗೆ ಬರಲೇ. ಮುಂದೆ ಆಗಬೇಕಾದ ಕೆಲಸಗಳ ಪಟ್ಟಿ ಮಾಡಿದೆವು ಅಂತ ಹೇಳುತ್ತಿದ್ದೆ. ಪೇಂಟಿಂಗ್ ಆಗಬೇಕಲ್ಲಾ ಅದಕ್ಕೆ? ಅದಿನ್ನೂ ಸಮಯ ಇದೆ ಅಂತ ಅದನ್ನು ಮುಂದೆ ತಳ್ಳಿದೆ. ಬಾಗಿಲುಗಳಿಗೆ ಬೇಕಾದ ಚಿಲಕ, ಪಾಡ್ ಲಾಕ್ ಹಿಂಜುಗಳು…. ಇವುಗಳನ್ನು ಎಷ್ಟು ಬೇಕೋ ಅಷ್ಟು ತರುವುದು ಎಂದು ಡಿಸೈಡ್ ಆಯ್ತಾ. ಎಷ್ಟು ಬೇಕೋ ಅಷ್ಟು ಅನ್ನುವ ವಿಚಾರ ಕೈನಲ್ಲಿ ಕಾಸಿಲ್ಲ ಅದರಿಂದ ಹುಟ್ಟಿದ್ದು. ತಮಾಷೆ ಅಂದರೆ ಇದಾಗಿ ಅದೆಷ್ಟೋ ವರ್ಷಗಳ ನಂತರ ನಮ್ಮ ಫ್ಯಾಕ್ಟರಿಯಲ್ಲಿ ಇದೇ ತರಹ ಒಂದು ನೂತನ ಕಾನ್ಸೆಪ್ಟ್ ನುಗ್ಗಿ ಬಂತು ಜಪಾನ್‌ ಕಡೆಯಿಂದ. ಅದಕ್ಕೆ JIT ಎನ್ನುವ ಆಕರ್ಷಕ ಹೆಸರು. J IT ಅಂದರೆ just in time ಅಂತ. ಅಂದರೆ ನಮ್ಮ ಭುವನೇಶ್ವರಿ ಮೂಲಕ ಹೇಳಿಸಬೇಕು ಅಂದರೆ ಎಷ್ಟು ಬೇಕೋ ಅಷ್ಟೇ ಅಂತ. ಎಷ್ಟು ಬೇಕೋ ಅಷ್ಟೇ ತಂದರೆ ಅಪಾರ ಖರ್ಚು ಉಳಿಯುತ್ತದೆ ಎಂದು ಅದ್ಯಾರೋ ಕಂಡು ಹಿಡಿದರಂತೆ. ಅದು ಇಡೀ ದೇಶದಲ್ಲಿ ಸಂಚಲನ ಮೂಡಿಸಿ JIT philosophy ಅಂತ ಹೆಸರು ಮಾಡಿತ್ತು. ಎಲ್ಲಾ ಹೊಸಾ philosophy ಗಳಂತೆ ಇದೂ ಸಹ ಕೆಲವು ಕಾಲ ಚಾಲ್ತಿಯಲ್ಲಿತ್ತು ಮತ್ತು ಈಗ ಕಾಲಗರ್ಭದಲ್ಲಿ ಹುದುಗಿ ಹೋಗಿದೆ!

ಎಲೆಕ್ಟ್ರಿಕ್ ಸಾಮಾನು ಮತ್ತು ಮರಕ್ಕೆ ಸಂಬಂಧಪಟ್ಟ ವಸ್ತುಗಳು ಚಿಕ್ಕಪೇಟೆ ಮತ್ತು ಸಿಟಿ ಮಾರ್ಕೆಟ್ ಅಂಗಡಿಗಳಲ್ಲಿ ವೋಲ್ ಸೇಲ್ ರೇಟಿನಲ್ಲಿ ಸಿಗುತ್ತೆ ಅಂತ ಕೆಲವರಿಂದ ಕೇಳಿ ಕೆಲವಂ ಬಲ್ಲವರಿಂದ ತಿಳಿದು ಜ್ಞಾನ ಪಡೆದಿದ್ದೆ. ಈ ಜ್ಞಾನ ಮುಂದೆ ಹೇಗೆ ನೆರವಿಗೆ ಬಂತು ಅಂದರೆ ನೂರಕ್ಕೆ ಐವತ್ತು ಅರವತ್ತು ಈ ಖರ್ಚಿನಲ್ಲಿ ಉಳಿಯಿತು!

ಒಂದು ಡೀಟೈಲ್ಡ್ ಪಟ್ಟಿ ತಯಾರಾಯ್ತಾ. ಅದನ್ನ ಜೋಪಾನವಾಗಿ ಒಂದು ಫೈಲ್ ತಯಾರಿಸಿ ಇಟ್ಟೆ, ಮುಂದೆ ಇದೇ ತಾನೇ ನನಗೆ ಗೈಡು…!

ಈ ಮಧ್ಯೆ ಇನ್ನೊಂದು ಹೇಳೋದು ಮರೆತಿದ್ದೆ. ಯಾರೇ ಸಿಕ್ಕಿದರೂ ನಾನು ಮನೆ ಕಟ್ಟುತ್ತಿರುವ ವಿಷಯ ಮತ್ತು ಅದರಲ್ಲಿ ನನ್ನ ಒಳಗೊಳ್ಳುವಿಕೆ ಅಂದರೆ involvement ಮತ್ತು ನನ್ನ ಅನುಭವಗಳನ್ನು ಕೊಂಚ, ಕೊಂಚ ಏನೂ ತುಂಬಾ ಹೆಚ್ಚಾಗಿಯೇ ಉತ್ಪ್ರೇಕ್ಷಿಸಿ ಬುರುಡೆ ಅಂದರೆ ಸಖತ್ ಬುರುಡೆ ಬಿಡುತ್ತಿದ್ದೆ. ಈ ಬುರುಡೆಯಲ್ಲಿ ಬಹಳ ಮುಖ್ಯವಾಗಿ ಬ್ಯಾಂಕ್ ಡೈರೆಕ್ಟರ್ ಜತೆ ಇಂಟರ್ವ್ಯೂ ಮಾಡಿಸಿಕೊಂಡು ಸಾಲವನ್ನು ಮೂವತ್ತು ಸಾವಿರದಿಂದ ಮೂವತ್ತ ಮೂರು ಸಾವಿರ ಹೆಚ್ಚಿಸಿದ್ದು, ಬೇವಿನ ಮರದ ಹಳೇ ಬಾಗಿಲು ಕೊಂಡು ಟೋಪಿ ಬಿದ್ದದ್ದು, ಕುಬೇರಪ್ಪ ಹಳದಿ ಇಂಗಿನ ಬ್ಯಾಗ್‌ನಲ್ಲಿ ಕೇಜಿ ಅಷ್ಟು ಚಿನ್ನ ತುಂಬಿಕೊಂಡು ಯಶವಂತ ಪುರಕ್ಕೆ ನಡೆದುಕೊಂಡು ಹೋಗಿ ಚಿನ್ನ ಮಾರಿದ್ದೂ, ನನ್ನ ಹತ್ತಿರ ಊಹೂಂ ನನ್ನ ಹತ್ತಿರ ಅಲ್ಲ, ನನ್ನಾಕೆ ಹತ್ತಿರ ಮುಕ್ಕಾಲು ಗ್ರಾಮ್‌ನ ತಾಳಿ ಇರೋದು…. ಇವೆಲ್ಲಾ ಸೇರಿರುತ್ತಿತ್ತು. ನಂತರ add ಆಗಿದ್ದು ಅಂದರೆ ನಾನು ರೂಫ್‌ನಿಂದಾ ಮುಗಚಿಕೊಂಡಿದ್ದು. ಇವುಗಳ ಮಧ್ಯೆ ನನಗೆ ಗೊತ್ತಿಲ್ಲದ ಹಾಗೆ ನನ್ನ ವಿಷಮ ಆರ್ಥಿಕ ಬಿಕ್ಕಟ್ಟು ಅದೂ ಮನೆ ಕಟ್ಟುವಲ್ಲಿ ಬಂದು ಸೇರುತ್ತಿತ್ತಾ ಅಂತ ಖಂಡಿತ ನನಗೆ ಗೊತ್ತಿರಲಿಲ್ಲ. mostly ಬುರುಡೆ ಬಿಡುವ ಜೋಶ್‌ನಲ್ಲಿ ನನ್ನ ಆರ್ಥಿಕ ಬಿಕ್ಕಟ್ಟು, ಬಡತನ ಇವೆಲ್ಲವನ್ನೂ ಕಣ್ಣಿಗೆ ಕಟ್ಟುವ ಹಾಗೆ, ಕೇಳುವವರ ಹೃದಯ ವೇದನೆ ಪಡುವ ಹಾಗೆ ಕಡೆದು ಕಟ್ಟೆ ಹಾಕುತ್ತಿದ್ದೆ ಅಂತ ಕಾಣುತ್ತೆ. ಇದು ಈಚೆಗೆ ಆಗಿರುವ ಜ್ಞಾನೋದಯ, ಬುರುಡೆ ಬಿಡುವಾಗ ಇಂತಹ ಜ್ಞಾನೋದಯ ಖಂಡಿತ ಆಗುವುದಿಲ್ಲ, ಈಚೆಗೆ ಇದೇ ತರಹ ಒಂದು ಸಖತ್ ಬುರುಡೆ ಲೇಖನ ಬರೆದೆ. ಅದು ಫಸ್ಟ್ ಪರ್ಸನ್ ಲೇಖನ. ಅದರಲ್ಲಿ ನಮ್ಮ ಕಥಾ ನಾಯಕನಿಗೆ ಯಾವ ತಿಂಡಿ ಅವನಿಗೆ ಇಷ್ಟ ಅಂತ ಅವನಿಗೆ ಗೊತ್ತಿರುಲ್ಲ. ಯಾಕೆ ಅಂದರೆ ಅವನಿಗೆ ಅವನು ಹುಟ್ಟಿದಾಗಲಿಂದ ಮಾಡಿ ಹಾಕಿದ್ದು ತಿಂದು ಅಭ್ಯಾಸ. ಎಲ್ಲೋ ಹೋದಾಗ ಅಲ್ಲಿನ ಕೇರ್ ಟೇಕರ್ ಯಜಮಾನರಿಗೆ ಏನು ಇಷ್ಟ, ಏನು ತಿಂಡಿ ಮಾಡಲಿ ಅಂತ ಕೇಳ್ತಾರೆ. ಯಜಮಾನರಿಗೆ ತಮಗೇನು ಇಷ್ಟ ಅಂತ ಗೊತ್ತೇ ಇರಲ್ಲ, ಅವನು ತನ್ನ ಅದುವರೆಗಿನ ಜೀವನ ನೆನೆಸಿಕೊಳ್ಳುತ್ತಾನೆ. ಅವನಿಗೆ ಬೇಕಾದ್ದು ಅಂತ ಯಾರೂ ಸ್ವಂತ ಕಟ್ಟಿಕೊಂಡವಳು ಸಹ ಕೇಳಿರುವುದಿಲ್ಲ! ಕೇಳಿರುವುದಿಲ್ಲ ಅಂದ ಮೇಲೆ ಮಾಡುವುದೆಲ್ಲಿ ಬಂತು……? ಕತೆ ಹೀಗೇ ಬೆಳೆದು ಓದುಗರಲ್ಲಿ ಕಥಾ ನಾಯಕನ ಬಗ್ಗೆ (ಅಂದರೆ ನನ್ನ ಬಗ್ಗೆ) ಅಪಾರ ಕರುಣೆ ಹುಟ್ಟಿ ಬಿಡುತ್ತೆ. ಲೇಖನ ಓದಿದ ನನ್ನ ಬರಹಗಾರ ಮಿತ್ರರೊಬ್ಬರು “ನಿಮ್ಮನ್ನ ಒಂದು ವರ್ಷ ನಮ್ಮ ಮನೇಲಿ ಇಟ್ಟುಕೊಂಡು ನಿಮಗೆ ಬೇಕಾದ ಅಡುಗೆ ಮಾಡಿಸಿ ಹಾಕಬೇಕೂಂತ ಇದೀನಿ. ನಮ್ಮ ಮನೆಗೆ ಯಾವಾಗ ಬರ್ತೀರಿ ಸಾರ್….?” ಅಂತ ಕೇಳಿದ್ದರು!

ಬುರುಡೆ ಬಿಡೋದರ ವಿಷಯ ಹೇಳುತ್ತಿದ್ದೆ. ಬುರುಡೆ ಬಿಡುವಾಗ ಅದರ pros and cons ಅಂದರೆ ಒಂದು ವಿಷಯದ ಆಗು ಹೋಗುಗಳು ಖಂಡಿತ ನಮ್ಮ ತಲೆಯಲ್ಲಿ ಲವಶೇಷವೂ ಬಂದಿರುವುದಿಲ್ಲ! ಇದರ ಸತ್ಯಾಸತ್ಯತೆ ತಿಳಿಯಬೇಕು ಎನ್ನುವ ಹಾಗಿದ್ದರೆ, ಬೇಕಿದ್ದರೆ ನಮ್ಮ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನ್ನೇ ಕೇಳಿ!

ಇಂತಹ ಬುರುಡೆಗಳು ಬಿಟ್ಟ ನಂತರದ ಎಫೆಕ್ಟ್ ಹೇಳಲೇ ಬೇಕು. ಬೇವಿನಮರದ ಕಿಟಕಿ ಬಾಗಿಲ ಕತೆ ಬಾಯಿಂದ ಬಾಯಿಗೆ ಹರಡಿ ಅದರ ಎಫೆಕ್ಟ್ ಹೇಗೆ ನನ್ನನ್ನು ಗುರಿಯಾಗಿರಿಸಿತು ಎನ್ನುವುದನ್ನು ಮೊದಲು ಹೇಳಿಬಿಡುತ್ತೇನೆ.

“ಬೇವಿನ ಮರದ ಬಾಗಿಲು ಕೊಂಡರಂತೆ, ನನಗೆ ಮೊದಲೇ ಹೇಳೋದಕ್ಕಿಲ್ವೇ… ನನ್ನ ಹತ್ತಿರ ಕಿಟಕಿ ಬಾಗಿಲು ವಾಸ್ಕಳ್ಳು ಎಲ್ಲಾ ಇವೆ, ಎಲ್ಲಾ ಟೀಕ್ ನೋವು…” ಅಂತ ನನ್ನ ಕಲಿಗೂ ಪ್ರಕಾಶ್ ಅನ್ನುವವರು ಬಂದು ಎದುರಿನ ಕುರ್ಚಿ ಮೇಲೆ ಕೂತು ಮಾತು ಶುರು ಹಚ್ಚಿದರು.

“ಅಯ್ಯೋ ಹೌದೇ ನಿಮ್ಮ ಹತ್ತಿರ ಇತ್ತೇ? ಗೊತ್ತಾಗಲಿಲ್ಲ. ಮುಂದಿನ ಸಲ ಮನೆ ಕಟ್ಟಬೇಕಾದರೆ ನಿಮ್ಮ ಹತ್ರಾನೆ ತಗೋತೀನಿ….”, ಅಂದೆ, ಮಾತಿನಲ್ಲಿ ನನಗೆ ಗೊತ್ತಿಲ್ಲದ ಹಾಗೆ ವ್ಯoಗ್ಯ ನುಸುಳಿತ್ತು.

“ಅಯ್ಯೋ ಪರವಾಗಿಲ್ಲ ಸಾರ್. ಕಿಟಕಿ ಇದೆ ನೋಡಿ ಬೇಕಾದರೆ. ಟೀಕ್ ದೂ, ಚೀಪಾಗೆ ಕೊಡ್ತೀನಿ….”

ನಮ್ಮ ಹಾಲ್‌ಗೆ ಕಿಟಕಿ ಬೇಕಿತ್ತು ಮತ್ತು ಅದನ್ನು ಹೊಸದಾಗಿ ಮಾಡಿಸುವ ಯೋಚನೆ ಇತ್ತು. ಇವನ ಹತ್ತಿರ ಕಿಟಕಿ ಸಿಗೋ ಹಾಗಿದ್ದರೆ ಅದರ ಫ್ರೇಮ್ ಮಾತ್ರ ಮಾಡಿಸಿದರೆ ಆಗುತ್ತಲ್ಲಾ ಅಂತ ತಲೆ ಓಡಿತು. ಸರಿ ಅಂತ ವ್ಯಾಪಾರ ಕುದುರಿಸಿದೆ. ಕೊಂಚ ಚೀಪ್ ಆಗೇ ಸಿಕ್ಕಿದವು, ಆರು ಕಿಟಕಿ ಬಾಗಿಲುಗಳು. ಇದರ ವ್ಯಾಪಾರ ಆದಾಗ ನಾನು ಅದು ಹೇಗಿದೆ ಅಂತ ನೋಡಿರಲಿಲ್ಲ ಮತ್ತು ಅದನ್ನು ಸಾಗಿಸೋದು ಹೇಗೆ ಅಂತ ಸಹ ಪ್ಲಾನ್ ಮಾಡಿರಲಿಲ್ಲ! ಒಂದು ಐಡಿಯಾ ಪ್ರಕಾಶನೇ ಕೊಟ್ಟ.

“ಸೋಮವಾರ ನಾನು ಫಸ್ಟ್ ಶಿಫ್ಟು. ನೀವು ಹೇಗಿದ್ದರೂ ಸೆಕೆಂಡ್ ಶಿಫ್ಟು. ಬೆಳಿಗ್ಗೆ ನಾನು ಆಟೋದಲ್ಲಿ ಹಾಕ್ಕೊಂಡು ಬರ್ತೀನಿ, ನೀವು ಅದರಲ್ಲೇ ಮನೆಗೆ ಹೋಗಿ, ಕಿಟಕಿ ಅಲ್ಲೇ ಇಳಿಸಿಕೊಂಡರೆ ಆಯ್ತು….. ಸರಿ ಅಂತ ಒಪ್ಪಿ ಆರು ಕಿಟಕಿಯ ಬಾಗಿಲು ನನ್ನ ಮನೆ ಲೆಕ್ಕಕ್ಕೆ ಸೇರ್ತಾ?

ಸಾವಿರದ ಒಂಬೈನೂರ ಐವತ್ತನಾಲ್ಕರಲ್ಲಿ ಸರ್ಕಾರ ನಿರ್ಗತಿಕರಿಗೆ ಎಂದು ಕಟ್ಟಿದ್ದ ಒಂದು ಮನೆ ನಮ್ಮ ಅಣ್ಣ ಕೊಂಡಿದ್ದ. ಅದರ ರಿಪೇರಿ ಆಗ್ತಾ ಇತ್ತು. ಒಂದು ಹಳೇ ಕಿಟಕಿ ಮಿಕ್ತು, ಹೊಸದು ಬಂದಮೇಲೆ! ಅಲ್ಲಿಂದ ಮತ್ತೊಂದು ಕಿಟಕಿ ಅವರೇ ತಂದು ಇಟ್ಟರು! ಹೀಗೆ ಮನೆ ತುಂಬಾ ಹಳೆಯ, ಸೆಕೆಂಡ್ ಹ್ಯಾಂಡ್ ಮರ ಮುಟ್ಟುಗಳು…! ಬಹುಶಃ ಇಡೀ ಭೂ ಲೋಕದಲ್ಲಿ ಯಾರ ಮನೆಯೂ ಇಂತಹ ವಿಶಿಷ್ಟ ಮತ್ತು ವಿಚಿತ್ರದ್ದು ಅಲ್ಲ ಅಂತ ಹಳೇ ನೆನಪುಗಳು ನುಗ್ಗಿ ಬಂದಾಗ, ಅದೂ ಈಗ ಅನ್ನಿಸುತ್ತಿದೆ!

ಹೀಗೆ ಎಲ್ಲಾ ಕಡೆಯಿಂದ ಸ್ವ ಸಹಾಯಗಳು ಬಂದ್ವಾ… ಹಳೇ ಕಿಟಕಿಗಳಿಗೆ ಫ್ರೇಮ್ ಮಾಡಿದ್ದು, ಬಾಗಿಲು ಉದ್ದ ಮಾಡಿದ್ದು ಎಲ್ಲಾ ನಮ್ಮ ಕಾರ್ಪೆಂಟರ್ ಮಾಡಿದರು ಅಂತ ಹೇಳಿದ್ದೆ ತಾನೇ? ಬಹುಶಃ ಒಂದು ಹತ್ತು ವರ್ಷದ ನಂತರ ಈ ಸಾಹಸ ನಾನು ಮಾಡಿದ್ದರೆ ಯಾವ ಕಾರ್ಪೆಂಟರ್ ಕೂಡ ನನ್ನ ಕೆಲಸ ಮಾಡ್ತಾ ಇರಲಿಲ್ಲ!

ಇನ್ನು ಪಣಮಾ ಪಾಶಮಾ ಸುದ್ದಿ. ಪಣಮಾ ಪಾಶಮಾ ಅಂತ ಒಂದು ತಮಿಳು ಸಿನೆಮಾ ನೋಡಿದ್ದೆ. ಅದರ ನಿಜವಾದ ಅರ್ಥ ಅವತ್ತೂ ಗೊತ್ತಿಲ್ಲ ಇವತ್ತೂ ಗೊತ್ತಿಲ್ಲ. ನಾನು ಅದನ್ನು ಹಣಕ್ಕಾಗಿ ನೇಣು ಹಾಕಿಕೊಳ್ಳುವುದು ಎಂದು ಅರ್ಥ ಮಾಡಿಕೊಂಡಿದ್ದ ಬುದ್ಧಿವಂತ! ಕಾಸಿನ ಮುಗ್ಗಟ್ಟು ಯಾರೇ ವಿವರಿಸಿದರೂ ಅದು ನನಗೆ ಪಣಮಾ ಪಾಶಮಾ ..!

ಈಗ ನನ್ನ ಪಾಡು ಅಂದರೆ ಮುಂದಿನ ಕೆಲಸಕ್ಕೆ ಪಣಮಾ ಪಾಶಮಾ ಯೋಚಿಸುವುದು. ನನ್ನ ಸ್ವಯಂ ಪ್ರೊಜೆಕ್ಷನ್‌ನಲ್ಲಿ ಸಖತ್ ಬುರುಡೆ ಬಿಟ್ಟಿದ್ದೆ ಅಂತ ಹೇಳಿದ್ದೆ ತಾನೇ? ಅಂತಹ ಸ್ವಯಂ ಬುರುಡೆಯಿಂದ ಕೆಲವು ಸ್ನೇಹಿತರೂ ಬಂಧುಗಳೂ ನನ್ನ ಮೇಲೆ ಒಂದು ರೀತಿ ಕನಿಕರ ಮತ್ತು ಭೂತ ಪ್ರೇಮ ಬೆಳೆಸಿಕೊಂಡಿದ್ದರು.

(ಅಂದಹಾಗೆ ಭೂತ ಪ್ರೇಮ ಅಂದರೆ ನೀವು ದೆವ್ವದ ಮೇಲಿರುವ ಪ್ರೀತಿ ಅಂದುಕೊಂಡಿದ್ದರೆ ಅದು ತಪ್ಪು ಮೇಡಂ/ಸರ್…)

“ಭೂತ ಪ್ರೇಮವು ಅಹಿಂಸೆಯ (ಯಾರಿಗೂ ಹಾನಿ ಮಾಡದಿರುವುದು) ತತ್ವಕ್ಕೆ ಆಧಾರವಾಗಿದೆ. ಇತರ ಜೀವಿಗಳಿಗೆ ನೋವುಂಟು ಮಾಡದಿರುವುದು ಮತ್ತು ಅವುಗಳ ಬಗ್ಗೆ ಸಹಾನುಭೂತಿ ಹೊಂದುವುದು ಇದರ ಅವಿಭಾಜ್ಯ ಅಂಗವಾಗಿದೆ.

* ನಿಸ್ವಾರ್ಥ ಸೇವೆ: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇತರ ಜೀವಿಗಳಿಗೆ ಸಹಾಯ ಮಾಡುವುದು ಅಥವಾ ಅವುಗಳ ಕಲ್ಯಾಣಕ್ಕಾಗಿ ಶ್ರಮಿಸುವುದು ಭೂತ ಪ್ರೇಮದ ಒಂದು ಅಭಿವ್ಯಕ್ತಿ.

* ಆತ್ಮ ಸಾಕ್ಷಾತ್ಕಾರದ ಹಾದಿ: ಅನೇಕ ಯೋಗ ಮತ್ತು ಆಧ್ಯಾತ್ಮಿಕ ಮಾರ್ಗಗಳಲ್ಲಿ, ಭೂತ ಪ್ರೇಮವು ನಮ್ಮ ಅಹಂಕಾರವನ್ನು ಕಡಿಮೆ ಮಾಡಲು ಮತ್ತು ನಮ್ಮ ನಿಜ ಸ್ವರೂಪವನ್ನು ಅರಿಯಲು ಸಹಾಯ ಮಾಡುವ ಒಂದು ಪ್ರಮುಖ ಸಾಧನವೆಂದು ಪರಿಗಣಿಸಲಾಗಿದೆ.

ಸಂಕ್ಷಿಪ್ತವಾಗಿ, ಆಧ್ಯಾತ್ಮದಲ್ಲಿ ಭೂತ ಪ್ರೇಮ ಎಂದರೆ ಕೇವಲ ಮಾನವರ ಮೇಲೆ ಮಾತ್ರವಲ್ಲದೆ, ಸಮಸ್ತ ಜೀವ ಕುಲದ ಮೇಲೆ ಕರುಣೆ, ದಯೆ ಮತ್ತು ಪ್ರೀತಿಯನ್ನು ಹೊಂದಿರುವುದು. ಇದು ಆಧ್ಯಾತ್ಮಿಕ ಬೆಳವಣಿಗೆಗೆ ಮತ್ತು ವಿಶ್ವದೊಂದಿಗಿನ ಸಾಮರಸ್ಯಕ್ಕೆ ಅತ್ಯಗತ್ಯವಾದ ಗುಣವಾಗಿದೆ.) ಬ್ರಾಕೆಟ್‌ನಲ್ಲಿನ ಅರ್ಥವನ್ನು ನನಗೆ AI (Artificial Intelligence) ಕೊಟ್ಟಿತು ಮತ್ತು ನಾನು ಜೀವ ಕುಲದ ಮೇಲೆ ಕರುಣೆ, ದಯೆ ಮತ್ತು ಪ್ರೀತಿಯನ್ನು ಹೊಂದಿರುವುದು ಎನ್ನುವ ಅರ್ಥದಲ್ಲಿ ಇಲ್ಲಿ ಬಳಸಿದ್ದೇನೆ!

ನನ್ನ ಮೇಲೆ ಭೂತಪ್ರೇಮ ಹೊಂದಿದ್ದ ಗೆಳೆಯರು, ಬಂಧುಗಳು ಅವರಾಗಿ ಅವರೇ ಗೋಪಿ ಕಾಸು ಬೇಕೇನೋ? ತಗೋ ಸಂಕೋಚ ಬೇಡ ಅಂತ ಹಣ ಕೊಟ್ಟರು! ಇದು ಈಗ ಹಿಂದೆ ತಿರುಗಿ ನೋಡಿದಾಗ ನನಗೆ ಅನಿಸಿದ್ದು ನನ್ನ ಮೇಲೆ ಅಪಾರ ಪ್ರೀತಿ ಅವರಿಗೆಲ್ಲ ಅಂತ. ಈಗಲೂ ಅದು ಮುಂದುವರೆದಿದೆ. ಇಷ್ಟೆಲ್ಲಾ ಸಪೋರ್ಟ್ ಸಿಕ್ಕಿದ ನಂತರ ಒಂದು ರೀತಿ ಉತ್ಸಾಹ ಮತ್ತು ಹುಮ್ಮಸ್ಸಿನ ಟಾನಿಕ್ ಅನ್ನು ಒಂದು ಸಾವಿರ ಬಾಟಲ್ ಕುಡಿದ ಹಾಗಾಯಿತು ಅಂತ ಹೇಳಬೇಕಿಲ್ಲ.

ಈ ಟಾನಿಕ್ ಎಫೆಕ್ಟು ಮುಂದೆ ಹೇಗೆ ಎಲ್ಲೆಲ್ಲಿ ಅಡ್ಡಾದಿಡ್ಡಿ ಕೆಲಸ ಮಾಡಿತು ಅಂದರೆ ಇಷ್ಟು ವರ್ಷಗಳ ನಂತರ ನಾನು ಹೀಗೆ ನಡೆದುಕೊಂಡೆನಾ ಅಂತ ನನ್ನ ಬಗ್ಗೆಯೇ ಒಂದು ರೀತಿಯ ಅಭಿಮಾನ ಒಂದುಕಡೆ ಮತ್ತು ಜಿಗುಪ್ಸೆ ಇನ್ನೊಂದು ಕಡೆ ಅದರ ಜತೆಗೇ ಹುಟ್ಟುತ್ತೆ. ಇದನ್ನು ಮುಂದೆ ನಿಮಗೆ ವಿವರವಾಗಿ ಹೇಳ್ತೀನಿ. ಅಂದಿನ ಕಾಲದಲ್ಲಿ ಮನೆ ಕಟ್ಟಬೇಕಾದರೆ ಎಂತಹ ಮಾನಸಿಕ ಒತ್ತಡ ಮತ್ತು ಹೃದಯ ಬೇನೆ ಅನುಭವಿಸಿದೆವು ಅಂದರೆ ಅದು ಬಿಸಿ ಬಿಸಿ ಬಿಸಿ ತುಪ್ಪ, ಹೇಳ್ಕೊಳ್ಳಕ್ಕೆ ಆಗ್ದೇ ಬಿಡಕ್ಕೂ ಆಗ್ದೇ ಇರೋದು….! ಈ ಪ್ರಸಂಗಗಳನ್ನು ಮುಂದೆ ಹೇಳ್ತೇನೆ. ಅಲ್ಲಿಗಂಟ ನಿಮಗೆ ಬೈ ಬೈ…

ಇನ್ನೂ ಇದೆ….

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

4 Comments

  1. ಎಚ್ ಆನಂದರಾಮ ಶಾಸ್ತ್ರೀ ಶಾಸ್ತ್ರಿ

    ನಿಮ್ಮ ತಥಾಕಥಿತ ಬುರುಡೆಯ ಬಿರಡೆ ತೆಗೆದರೆ ಉಕ್ಕಿ ಹರಿಯುವ ಝರಿಗಳು ಒಂದೇ, ಎರಡೇ?
    ಹಾಸ್ಯ, ವಿಡಂಬನೆ, ನೋವು, ನಲಿವು, ಸರಸ-ಸಲ್ಲಾಪ, ಆಲಾಪ, ಪ್ರಲಾಪ, ಲೋಕಾಭಿರಾಮ, ಹರಟೆ,…. ಕೊನೆಗೆ ಅಧ್ಯಾತ್ಮವೂ!
    ನಿಮಗೆ ನೀವೇ ಸಾಟಿ ಗೋಪಾಲಕೃಷ್ಣ ಅವರೇ.

    Reply
    • Jgopalakriahna

      ಶ್ರೀ ಆನಂದರಾಮ ಶಾಸ್ತ್ರೀ ಅವರೇ, ತಮ್ಮ ವಿಶ್ವಾಸಕ್ಕೆ ನಾನು ಏನು ತಾನೇ ಹೇಳಲಿ? ಋಣಿ ಅಂದರೆ ಸಣ್ಣ ಪದ…
      ಗೋಪಾಲಕೃಷ್ಣ

      Reply
  2. Vs karnic

    Great writing Gopala. Had forgotten Bison Brand.

    Reply
  3. ಗೋಪಾಲಕೃಷ್ಣ

    ಕಾರ್ಣಿಕ್, ತುಂಬಾ ಧನ್ಯವಾದಗಳು. ಮೊಬೈಲ್ ಪೋನ್ ನಲ್ಲಿ ನಾನು ಬರೆಯೋದು! ಕುಟ್ಟುತ್ತಾ ಕೂತರೆ ಅದೇನೋ ತಿಳಿಯದು, ಹೋದ ಹಲವು ಜನ್ಮಗಳ ನೆನಪು ಒತ್ತರಿಸಿ ಬರುತ್ತೆ!

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ