ಹಾಯ್…. ಹೇಗಿದ್ದಿ?
”ಹಾಯ್, ಹೇಗಿದ್ದಿ?’ ಎಂದೇನೋ ಕೇಳುತ್ತೀಯ
ಕಂಡಾಗಲೆಲ್ಲ ಕಣ್ಣಲ್ಲಿ ಮಿಂಚು ತುಳುಕಿಸಿ
ಕಿರುನಗೆಯ ತುಟಿಯ ಕೊಂಕಿಸಿ
ಹೇಗಿರುವೆನೆಂದು ಹೇಗೆ ಹೇಳಲಿ?
‘ಫೈನ್’ ಎನ್ನುತ್ತೇನೆ ನಿನ್ನೆ ಕಂಡ ಕನಸುಗಳ ನೆನೆಸಿ
ಬಿಗಿಬಂಧದ ಸಿಹಿಮುತ್ತುಗಳ ಸವಿಯ ಒರೆಸಿ
ಒಡೆದು ಹೋಗಿದೆ ಈಗೀಗ ನನ್ನ ಭಾಷೆ
ಅರ್ಥಗಳು ಮರುಜೋಡನೆಯಾಗಿ ರಮಿಸಿ
ಕನಸು, ಅಪಾಯ ಮತ್ತು ವಾಸ್ತವಕೆ ಅಮಲು ಬೆರೆಸಿ
ಸುಳಿವು ಹಿಡಿಯುತ್ತೀಯ ಕಾಯುತ್ತ ನೀನು
ನನ್ನ ಮರುವಾಕ್ಯಕ್ಕಾಗಿ, ಇಲ್ಲ ಗೆಳೆಯ
ಒಂದಕ್ಷರವೂ ಉಳಿದಿಲ್ಲ
ನನ್ನೆಲ್ಲ ನಿನಗೆ ಅರ್ಪಿಸಿಬಿಟ್ಟೆ ನಿನ್ನೆ ರಾತ್ರಿ
ಮನಸೆಂಬ ಮಾಯದ ಕನ್ನಡಿ
ಕನಸೆಂಬ ಬದುಕಿನ ಸೂರಿನಡಿ
ಇಂದು ಹೊಸತು
ಮನದ ನೋವುಗಳ ಹೊರದೂಡಿ
ಸಂತಸದ ಹೊಸ ತಂಪು ಹರಡಿ
ಮೈಯೊಳಗಿನ ಶೃಂಗಾರ
ಎದೆ ತುಳುಕಿ ಹೊರಗಿಣುಕಿರುವಾಗ
ಗೊತ್ತಿದ್ದರೆ ಹೇಳು, ಬಿಡುಗಡೆ ಬೇಡದ
ನನ್ನೀ ನೋವನುಂಡವರೆಷ್ಟು ಮಂದಿ?
ನಮ್ಮೀ ನಡುವಿನ ಮೌನ ನೂಲು
ಹೊಸೆದು ಬೆರೆಯುವ ಕ್ಷಣ
ಮೂಡುತ್ತದೆ ಬಯಕೆಗಳ ಬೆಚ್ಚಗಿನ ಕೌದಿಯೊಂದು
ಬಿಡಬೇಡ, ಹೋಗಗೊಡಬೇಡ
ಕೈ ಹಿಡಿದು ತಬ್ಬಿ ನಿಲ್ಲಿಸು
ಅಡಿಯಿಟ್ಟಿರುವ ಪ್ರೀತಿಗೆ ಬೆರೆಸಿ ರಂಗು
ನನ್ನಂತೆ ನಿನಗೂ ಗೊತ್ತು
ಪ್ರೀತಿ-ಪ್ರೇಮಕ್ಕಿಲ್ಲ ತರ್ಕಗಳ ಹಂಗು
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.