Advertisement
ದುರ್ಯೋಧನನ ಕೆಟ್ಟಹಠವೇ ಆತನ ಆತ್ಮಬಲವಾದಾಗ…: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ದುರ್ಯೋಧನನ ಕೆಟ್ಟಹಠವೇ ಆತನ ಆತ್ಮಬಲವಾದಾಗ…: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಸರ್ವಸ್ವವನ್ನು ಕಳೆದುಕೊಳ್ಳುವ ಭಯ ಆವರಿಸಿದಾಗಲೂ ತನ್ನ ಆತ್ಮಬಲದ ಮೂಲಸೆಲೆಯಾಗಿದ್ದ ಕೆಟ್ಟಹಠವನ್ನು ಬಿಟ್ಟುಬಿಡಲು ದುರ್ಯೋಧನ ಸಿದ್ಧನಿರಲಿಲ್ಲ. ಕುರುಕ್ಷೇತ್ರ ಯುದ್ಧದ ಕೊನೆಯ ಹಂತದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡ ದುರ್ಯೋಧನ ಏಕಾಂಗಿಯಾಗಿರುತ್ತಾನೆ. ರಣರಂಗದಲ್ಲಿದ್ದ ಪಿಶಾಚಿಗಳು ರಾಜಾಧಿರಾಜನಾಗಿದ್ದ ದುರ್ಯೋಧನನನ್ನು ಅಣಕಿಸತೊಡಗುತ್ತವೆ. ತಮ್ಮೊಡೆಯನ ಹೆಣಕ್ಕೆ ಕಾವಲು ನಿಂತವರೂ ಸಹ ಹೆಣವನ್ನು ತುಳಿಯದೆ ಹೋಗೆಂದು ಹೇಳುತ್ತಾ ಬೈಯ್ಯತೊಡಗುತ್ತಾರೆ. ಇದೊಂದು ಬಗೆಯ ಹೀನಾತಿಹೀನ ಸ್ಥಿತಿ. ದಿನ ಮೊದಲು ರಾಜನಾಗಿದ್ದವನು ಈಗ ಇನ್ನೊಬ್ಬರ ಮಾತನ್ನು ಪಾಲಿಸಬೇಕಾದ ಅನಿವಾರ್ಯತೆ.
ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಮಹಾಭಾರತದ ಕಥೆಯನ್ನು ಧರ್ಮ- ಅಧರ್ಮಗಳ ನಡುವಿನ ಸಂಘರ್ಷದ ಕಥನವಾಗಿ ಅರ್ಥೈಸಿಕೊಳ್ಳುವ ಪರಿಪಾಠವಿದೆ. ಒಳಿತು- ಕೆಡುಕುಗಳ ವ್ಯಾಖ್ಯಾನಗಳನ್ನೇ ಅದಲು ಬದಲು ಮಾಡಬಲ್ಲಂತಹ ಅನೇಕ ನಿದರ್ಶನಗಳನ್ನು ಮಹಾಭಾರತ ತನ್ನೊಡಲೊಳಗೆ ಹುದುಗಿಸಿಕೊಂಡಿದೆ. ಆದರೂ ಪಾಂಡವರನ್ನು ಒಳಿತಿಗೆ ಪ್ರತಿನಿಧಿಗಳಾಗಿಸುವ, ಕೆಡುಕಿನ ಕಿಡಿಗಳಾಗಿ ಕೌರವರನ್ನು ಕಾಣುವ ರೂಢೀಗತ ದರ್ಶನಕ್ರಮವೇ ಹೆಚ್ಚು ಪ್ರಚಲಿತದಲ್ಲಿರುವುದು. ಇಂತಹ ಕೌರವ ವಂಶದ ಕುಡಿಗಳಲ್ಲಿ ಅಗ್ರಜನಾದ ದುರ್ಯೋಧನನ ವ್ಯಕ್ತಿತ್ವ ಎಲ್ಲರ ಗಮನವನ್ನೂ ಸೆಳೆಯುವಂತಹದ್ದು. ವ್ಯಕ್ತಿಯೊಬ್ಬನ ಮೂಲವ್ಯಕ್ತಿತ್ವ ಯಾವುದು? ಎಂದು ತಿಳಿದುಬರಬೇಕಾದರೆ ಆತನ ಇಡೀ ಜೀವನವನ್ನೊಮ್ಮೆ ಅವಲೋಕಿಸಬೇಕು. ಆ ಇಡೀ ಬದುಕಿನಲ್ಲಿ ಬಹುತೇಕ ಸಂದರ್ಭಗಳಲ್ಲಿ ವ್ಯಕ್ತವಾದುದನ್ನು ಅವನ ಮೂಲವ್ಯಕ್ತಿತ್ವ ಎಂದು ಗುರುತಿಸಬಹುದು. ದುರ್ಯೋಧನನ ಪೂರ್ಣಬದುಕು ನಿಂತಿರುವುದು ಕೆಟ್ಟಹಠದ ಬುನಾದಿಯ ಮೇಲೆ. ಅವನು ಕೆಟ್ಟಹಠಕ್ಕೆ ಹೆಸರುವಾಸಿಯಾದವನು. “ನೀನು ಮಾಡುತ್ತಿರುವುದು ತಪ್ಪು. ಅದನ್ನು ಬಿಟ್ಟುಬಿಡು” ಎಂದು ಬೇರೆಯವರು ಹೇಳಿದರೂ ಕೇಳದ ಸ್ವಭಾವ ಆತನದು. ಸಾಯುವ ಕ್ಷಣದಲ್ಲಿಯೂ ಕೆಟ್ಟಹಠವನ್ನು ತ್ಯಜಿಸದ ಮೊಂಡುತನ ಅವನ ಸಹಜ ಬುದ್ಧಿ.

ಆತನ ಬದುಕಿನುದ್ದಕ್ಕೂ ಇರುವುದು ಈ ಕೆಟ್ಟಹಠದ ಅನುರಣನವೇ. ಈ ಬಗೆಯ ಗುಣಸ್ವಭಾವ ಅವನಲ್ಲಿ ಮೂಡಿರುವುದರ ಹಿನ್ನೆಲೆಯಲ್ಲಿ ಬಾಲ್ಯದ ಅನುಭವಗಳ ಪ್ರಭಾವ ಕಂಡುಬರುತ್ತದೆ. ಚಿಕ್ಕವನಿದ್ದಾಗಲೇ ಪಾಂಡವರ ಶಕ್ತಿಯನ್ನು, ಅದರಲ್ಲೂ ಭೀಮನ ದೈಹಿಕ ಸಾಮರ್ಥ್ಯವನ್ನು ಗಮನಿಸಿದ್ದ ಅವನಲ್ಲಿ ಅಭದ್ರತೆಯ ಭಾವವೊಂದು ಆವರಿಸಿರುವ ಸಾಧ್ಯತೆ ಹೆಚ್ಚು. ಎಲ್ಲಾ ಆಟಗಳಲ್ಲಿಯೂ ತಮ್ಮನ್ನು ಮೀರಿನಿಲ್ಲುವ ಭೀಮನ ಕುರಿತಾಗಿ ಆತನಿಗೆ ಮತ್ಸರ ಬೆಳೆಯತೊಡಗಿತ್ತು. ಶತ್ರುವನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಅವನು ಪ್ರಯತ್ನ ಕೈಗೊಳ್ಳತೊಡಗಿದ್ದ. ಇದರ ಕುರಿತಾದ ಸೂಚನೆಗಳು ಮಹಾಭಾರತ ಕಥಾನಕದಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ. ಭೀಮನಿಗೆ ವಿಶಪ್ರಾಶನ ಮಾಡಿಸಿ, ಆತನ ದಢೂತಿ ದೇಹವನ್ನು ಗಂಗಾನದಿಗೆ ತಳ್ಳಿಬಿಟ್ಟದ್ದು ಇಂತಹ ಪ್ರಯತ್ನಗಳಲ್ಲೊಂದು. ದುರ್ಯೋಧನನ ಬಾಲ್ಯದ ಈ ಮನೋಭಾವ ಆತನ ಜೀವಮಾನದುದ್ದಕ್ಕೂ ನಿರಂತರತೆಯನ್ನು ಕಂಡುಕೊಂಡಿತು.

ಈ ಬಗೆಯ ಕೆಟ್ಟಹಠ ದುರ್ಯೋಧನನ ಆತ್ಮಬಲವಾಗಿ ಮಾರ್ಪಟ್ಟದ್ದು ಆತ ಹಸ್ತಿನಾವತಿಯ ರಾಜನಾದ ಮೇಲೆ. ದುರ್ಯೋಧನನ ಬದುಕಿನಲ್ಲಿ ಆತ ಗಳಿಸಿಕೊಂಡ ಬಹುತೇಕ ಸಂಗತಿಗಳು ಆತನ ಈ ಕೆಟ್ಟಹಠದ ಪ್ರತಿಫಲಗಳು. ಪಾಂಡವರೆದುರು ಗೆಲುವನ್ನು ಪಡೆಯಲು ಸರಿಯಾದ ಆಯುಧವೊಂದಕ್ಕಾಗಿ ತಡಕಾಡುತ್ತಿದ್ದ ಆತನಿಗೆ ಕರ್ಣನೆಂಬ ಗೆಳೆಯನ ರೂಪದಲ್ಲಿ ಅದು ದೊರಕುವಂತಾದುದಕ್ಕೆ ಕಾರಣ ಆತನ ಕೆಟ್ಟಹಠವೇ. ಹಿರಿಯರಿಂದ ಬಂದ ಸಂಪತ್ತು, ಅಧಿಕಾರವನ್ನು ಆತ ಕಳೆದುಕೊಂಡದ್ದೂ ಅದರಿಂದಲೇ. ಆದರೆ ಈ ಬಗೆಯ ಸ್ವಭಾವವೊಂದು ಇಡೀ ಕುರುಕುಲದ ನಾಶಕ್ಕೆ ಕಾರಣವಾಗಿ ದುರ್ಯೋಧನನ ಸರ್ವಸ್ವವನ್ನೂ ನಶಿಸಿಹಾಕಿತು ಎನ್ನುವುದೂ ನಿಜ.

*****

ಸರ್ವಸ್ವವನ್ನು ಕಳೆದುಕೊಳ್ಳುವ ಭಯ ಆವರಿಸಿದಾಗಲೂ ತನ್ನ ಆತ್ಮಬಲದ ಮೂಲಸೆಲೆಯಾಗಿದ್ದ ಕೆಟ್ಟಹಠವನ್ನು ಬಿಟ್ಟುಬಿಡಲು ದುರ್ಯೋಧನ ಸಿದ್ಧನಿರಲಿಲ್ಲ. ಕುರುಕ್ಷೇತ್ರ ಯುದ್ಧದ ಕೊನೆಯ ಹಂತದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡ ದುರ್ಯೋಧನ ಏಕಾಂಗಿಯಾಗಿರುತ್ತಾನೆ. ರಣರಂಗದಲ್ಲಿದ್ದ ಪಿಶಾಚಿಗಳು ರಾಜಾಧಿರಾಜನಾಗಿದ್ದ ದುರ್ಯೋಧನನನ್ನು ಅಣಕಿಸತೊಡಗುತ್ತವೆ. ತಮ್ಮೊಡೆಯನ ಹೆಣಕ್ಕೆ ಕಾವಲು ನಿಂತವರೂ ಸಹ ಹೆಣವನ್ನು ತುಳಿಯದೆ ಹೋಗೆಂದು ಹೇಳುತ್ತಾ ಬೈಯ್ಯತೊಡಗುತ್ತಾರೆ. ಇದೊಂದು ಬಗೆಯ ಹೀನಾತಿಹೀನ ಸ್ಥಿತಿ. ದಿನ ಮೊದಲು ರಾಜನಾಗಿದ್ದವನು ಈಗ ಇನ್ನೊಬ್ಬರ ಮಾತನ್ನು ಪಾಲಿಸಬೇಕಾದ ಅನಿವಾರ್ಯತೆ.

ಕದನ ನೆಲದಲ್ಲಿ ನಡೆಯತೊಡಗಿದ ಅವನಿಗೆ ಯುದ್ಧದ ಭೀಕರತೆ ಅರಿವಾಗತೊಡಗುತ್ತದೆ. ಹೊಳೆಯಂತಾಗಿದ್ದ ಕೆನ್ನೆತ್ತರ ಧಾರೆ, ಕಣ್ಣು ಹಾಯಿಸಿದಲ್ಲೆಲ್ಲ ಶವಗಳು, ಪ್ರಾಣ ಕಳೆದುಕೊಂಡು ಉರುಳಿಬಿದ್ದ ಪರ್ವತಗಳಂತಾಗಿದ್ದ ಗಜಸಮೂಹ, ಅವಸಾನದ ಅಂಚಿನಲ್ಲಿರುವ ಕುರುಕುಲ- ಇಂತಹ ಅಪಾರ ಸಾವುನೋವಿಗೆ ತಾನೇ ಕಾರಣನಾದೆ ಎಂಬ ಪಶ್ಚಾತ್ತಾಪದ ಭಾವನೆ ಅವನಲ್ಲಿ ಮೂಡುತ್ತದೆ. ಆದರೆ ಇಂತಹ ಸ್ಥಿತಿಯಲ್ಲಿಯೂ ಆತನ ಮೂಲವ್ಯಕ್ತಿತ್ವ ಆತನಲ್ಲಿಯೇ ಉಳಿದಿರುತ್ತದೆ. ಕರ್ಣ- ದುಶ್ಯಾಸನರ ಸಾವಿಗೆ ಪ್ರತಿಕಾರ ತೆಗೆದುಕೊಳ್ಳುವ ಮಾತುಗಳನ್ನಾಡುತ್ತಾನೆ. ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ಪಾಂಡವರೊಡನೆ ಈಗಲಾದರೂ ಸಂಧಿ ಮಾಡಿಕೋ ಎನ್ನುವ ಸಲಹೆ ನೀಡುತ್ತಾರೆ. ಆದರೆ ದುರ್ಯೋಧನ ಅದಕ್ಕೆ ಒಪ್ಪುವುದಿಲ್ಲ. ‘ನೆಲಕಿರಿವೆನೆಂದು ಬಗೆದಿರೆ ಛಲಕಿರಿವೆಂ’ ಎನ್ನುವ ಮೂಲಕ ಹಠವನ್ನು ಏನೆಂದರೂ ಬಿಡದ ಉದಾತ್ತ ಮನೋಭಾವವೊಂದನ್ನು ಪ್ರದರ್ಶಿಸುತ್ತಾನೆ.

ನಮ್ಮ ವ್ಯಕ್ತಿತ್ವವೇ ನಮ್ಮ ಅಸ್ಮಿತೆಯ ಹೆಗ್ಗುರುತು ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ ದುರ್ಯೋಧನನಲ್ಲಿದ್ದ ಕೆಟ್ಟಹಠವೇ ಆತನ ಅಸ್ತಿತ್ವದ ಮೂಲವಾಗಿತ್ತು ಎನ್ನುವುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ, ನೀವು ಸಿನಿಮಾ ನೋಡುವುದಕ್ಕೆಂದು ಟಾಕೀಸಿಗೆ ಹೋಗಿ ಕುಳಿತಿದ್ದೀರಿ. ಟಾಕೀಸಿನ ತುಂಬ ಕತ್ತಲು ಆವರಿಸುತ್ತದೆ. ಸಿನಿಮಾ ಶುರುವಾಗುತ್ತದೆ. ನಾಯಕಿಯ ಇಂಟ್ರಡಕ್ಷನ್ ಆಗಿದೆ. ಹೀರೋನ ಇಂಟ್ರಡಕ್ಷನ್ ಸಹ ಮುಗಿದಿದೆ. ಇನ್ನಾಗಬೇಕಿರುವುದು ಖಳನಾಯಕನ ಪ್ರವೇಶಿಕೆ ಮಾತ್ರ. ಆಗ ನಿಮಗೆ ತಿಳಿಯುತ್ತದೆ, ಸಿನಿಮಾದಲ್ಲಿ ಖಳನಾಯಕನೇ ಇಲ್ಲ. ಅಲ್ಲಿಗೆ ನಿಮ್ಮಲ್ಲಿದ್ದ ಫೈಟ್, ಮಾಸ್ ಡೈಲಾಗ್‌ನ ನಿರೀಕ್ಷೆಗಳೆಲ್ಲ ಮಣ್ಣು ಸೇರಿರುತ್ತವೆ. ಇರುವುದು ನಾಯಕ- ನಾಯಕಿಯ ಡ್ಯುಯೆಟ್ ಮಾತ್ರ. ಅವರನ್ನು ಬೇರ್ಪಡಿಸುವವರಿಲ್ಲದ್ದರಿಂದ ಒಂದಾಗಬೇಕೆಂಬ ಭಾವವೂ ಅವರಲ್ಲಿರುವುದಿಲ್ಲ. ನಾಯಕನ ಒಳ್ಳೆಯತನ ಪ್ರಧಾನ ಭೂಮಿಕೆಗೆ ಬರುವುದೇ ಇಲ್ಲ. ಖಳನಾಯಕನಿಲ್ಲದ ಸಿನಿಮಾ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ.

ಮಹಾಭಾರತದ ಕಥಾನಕವೂ ಹೀಗೆಯೇ. ದುರ್ಯೋಧನನ ಕೆಟ್ಟಹಠ ಅದು ಆತನ ಆತ್ಮಬಲ ಮಾತ್ರವಲ್ಲ; ಎದುರು ಪಕ್ಷದವರ ಪಾಲಿನ ಅಸ್ತಿತ್ವವೂ ಹೌದು. ಧರ್ಮರಾಯನ ಸುಗುಣಕ್ಕೆ ಮಾನ್ಯತೆ ದೊರಕಿರುವುದೇ ದುರ್ಯೋಧನನ ದುರ್ಗುಣದಿಂದಾಗಿ. ಸೂಜಿಮೊನೆಯಷ್ಟು ಭೂಮಿಯನ್ನು ಬಿಟ್ಟುಕೊಡದ ಮೊಂಡುತನ ದುರ್ಯೋಧನನಲ್ಲಿದ್ದ ಕಾರಣದಿಂದಲೇ ಧರ್ಮರಾಯ ಸಂಧಾನಕ್ಕೆ ಪದೇ ಪದೇ ಮನಸ್ಸು ಮಾಡುವಂತಾಯಿತು. ಒಂದು ಕಾಲಕ್ಕೆ ಜೀವನಮೌಲ್ಯವಾಗಿದ್ದ ಯುದ್ಧದಲ್ಲಿನ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ದೊರಕಿದ್ದು ಕೌರವನ ಕೆಟ್ಟಹಠದಿಂದಲೇ. ಯುದಿಷ್ಠಿರನ ಒಳ್ಳೆತನ, ಭೀಮಾರ್ಜುನರ ಪರಾಕ್ರಮ, ಕರ್ಣನ ತ್ಯಾಗ, ಅಭಿಮನ್ಯು- ಘಟೋತ್ಕಚರ ರಣೋತ್ಸಾಹ, ಭೀಷ್ಮ- ದ್ರೋಣರ ಹಿರಿತನ, ಧೃತರಾಷ್ಟ್ರ- ಗಾಂಧಾರಿಯರ ಕುರುಡು ಮಮತೆ, ದ್ರೌಪದಿಯ ಬಿಚ್ಚಿದ ಮುಡಿಯೊಳಗಿದ್ದ ಕಾಳೋರಗದ ಸೇಡು… ಹೀಗೆ ಎಲ್ಲಾ ಬಗೆಯ ಅಸ್ತಿತ್ವಗಳಿಗೂ ಅವಕಾಶ ಒದಗಿಸಿಕೊಟ್ಟವನು ದುರ್ಯೋಧನ, ಆತನಲ್ಲಿದ್ದ ಕೆಟ್ಟಹಠ. ಆದ್ದರಿಂದ ಮಹಾಭಾರತದ ಕಥೆಯೆಂದರೆ ಕೇವಲ ಕುರುಕ್ಷೇತ್ರ ಯುದ್ಧದ ಕಥೆಯಲ್ಲ; ಪಾಂಚಾಲಿಯ ಪ್ರತಿಜ್ಞೆಯ ಕಥೆಯಲ್ಲ; ಕರ್ಣನ ತ್ಯಾಗದ ಕಥೆಯಲ್ಲ; ರಾಜ ಮಹಾರಾಜರುಗಳ ಪೌರುಷದ ಕಥೆಯಲ್ಲ; ದುರ್ಯೋಧನನ ಕೆಟ್ಟಹಠವೇ ಆತನ ಆತ್ಮಬಲವಾಗಿ ರಕ್ತಶಾಸನದಲ್ಲಿ ಬರೆದಿಟ್ಟ ಕಥೆಯೂ ಹೌದು. ಆದ್ದರಿಂದ ದುರ್ಯೋಧನನ ಕೆಟ್ಟಹಠವನ್ನು ಅವನ ಅಸ್ಮಿತೆಯಾಗಿ ಮಾತ್ರವಲ್ಲದೆ ಇಡೀ ಮಹಾಭಾರತ ಕಥಾನಕದ ಅಸ್ಮಿತೆಯಾಗಿಯೂ ಗುರುತಿಸಬಹುದು.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ